Friday, January 18, 2013

ಮನವೆಂಬ ಗುಜರಿಯಲ್ಲಿ ..ಹಳೇ ಪ್ರೀತಿ

  ಭಾನುವಾರದ ಹತ್ತು ಗಂಟೆ ....ಇನ್ನೂ ಮಲಗೇ ಇದ್ದೆ ..ಅಷ್ಟರಲ್ಲಿ ಹಳೇ  ಪಾತ್ರೆ ,ಹಳೇ ಪ್ಲಾಸ್ಟಿಕ್ ,ಹಳೇ ಪೇಪರ್ ,ಕೇಜಿಗೆ ೫ ರುಪಾಯಿ ಎಂಬ ಖಾದರ್ ಸಾಬನ ಸುಪ್ರಭಾತ  ಎಚ್ಚರಿಸಿತ್ತು ....
'ಮೊಗೆ ಮೊಗೆದು   ಕೊಡೋಕೊಂದಿಷ್ಟು ಪ್ರೀತಿ ಇದೆ  ..ಕೆಜಿಗೆ  ಎಷ್ಟ್ ಕೊಡ್ತೀಯಾ 'ಎಂದು  ಗೊಣಗಿ  ಮುಸುಕೆಳೆದಿದ್ದೆ !!..
 ನೆನಪನ್ನೂ ಕೊಡವಿ ಎದ್ದಿದ್ದೆ....
.ಮರೆತೇ ಹೋಗಿದ್ದ ಪ್ರೀತಿ (!!)

 ಒಲವಿನ ಗೆಳೆಯಾ ...(ಕೆಲ   ವರ್ಷಗಳ ಹಿಂದೆ )
      ಹಲವು ದಿನಗಳ  ನಂತರ  ಬಂದ ನಿನ್ನ ಈ ಪತ್ರ ಮತ್ತೆ ನಿನ್ನ ನೆನಪನ್ನ  ನೆನಪಿಸುತ್ತಿದೆ . ಆಕಸ್ಮಿಕವಾಗಿ ಬಂದೆ ..ಅನಿರೀಕ್ಷಿತವಾಗಿ ಬಿಟ್ಟು ಹೋದೆ !
ಇಂದು ಮತ್ತೆ ಮರಳುತೀನಿ ಎನ್ನುತ್ತಿದ್ದೀಯಾ ..ಆದರೆ ನಿನ್ನೀ ಪ್ರೀತಿಗೆ ನನ್ನಲ್ಲಿ ಅರ್ಥವಿಲ್ಲ .. ಬದಲು ಅಸಹ್ಯವಿದೆ ...ಪ್ರೀತಿಯೆಡೆಗಲ್ಲ ..ನಿನ್ನೆಡೆಗೂ  ಅಲ್ಲ ..ಗೊಂದಲದ ಜಾತ್ರೆ
ಕ್ಯಾಂಪಸ್ ನಲ್ಲಿ ಕೈ ಕೈ ಹಿಡಿದು ಓಡಾಡಿದ್ದು ,ಜೊತೆಯಾಗಿ ಹರಟಿದ್ದು ಒಂದಾಗಿ ನಕ್ಕಿದ್ದು ...ಮಾಡಿದ ಹಟಕ್ಕೆ ಜೊತೆಯಾಗಿ ಕಂಡ ಕನಸುಗಳಿಗೆ ಲೆಕ್ಕಾನೆ ಇರಲಿಲ್ಲ ಅಂದು ..
ಸಮುದ್ರ ತೀರದಲ್ಲಿ ನಿನ್ನ ತೋಳಿನಲ್ಲಿ ತಲೆಯಿರಿಸಿ ಮರೆಯಾಗುವ ಸೂರ್ಯನನ್ನು ನೋಡಿ ಮೈ ಮರೆತಿದ್ದು ..ಆ ಬೆಳಕಿನಲ್ಲಿಯೇ ಅಲ್ವಾ 'ನಿನ್ನ ತೋಳಿನಲ್ಲಿ ಸಾವು ಕೂಡಾ ಸಹನೀಯ ಮುದ್ದು 'ಎಂದಿದ್ದು ..!!
ಇವತ್ತಿಗೂ ಅವತ್ತಿಗೂ ಒಂದೇ ವ್ಯತ್ಯಾಸ
ಅಂದು ನಿನ್ನ ಬೆಚ್ಚಗಿನ ತೋಳಿತ್ತು ..ಇಂದು ನಿನ್ನ ಬೆಚ್ಚಗಿನ ನೆನಪಿದೆ .. ಅಷ್ಟೇ ..ಎಲ್ಲದಕ್ಕೂ ಅಳುವ ,ಹಠ ಮಾಡುವ ನಿನ್ನ ಹಳೆಯ ಮುದ್ದು  ನಾನಲ್ಲ ..ಇಷ್ಟೊಂದು ಗಟ್ಟಿಗಳನ್ನಾಗಿ ಮಾಡಿದ ನಿನ್ನೀ ಉಪಕಾರಕ್ಕೆ  ಧನ್ಯವಾದ ..

ಮನಸ್ಸು ಸಂತೆಯಾಗಿದೆ ..ಬರಿಯ ಗುಜರಿ ವಸ್ತುಗಳೇ ಜಾಸ್ತಿ ..ಬಹುಪಾಲು ನೀನು  ಬಿಟ್ಟು ಹೋದ (ಕೊಟ್ಟು ಹೋದ )ನೆನಪುಗಳು ಗುಜರಿ ಸೇರಿವೆ ..
                                                                  
   
ಕೆಲ ಮಧುರ ನೆನಪುಗಳು , ಕನವರಿಕೆಯ ಕನಸುಗಳನ್ನ ಜತನದಿಂದ ಎತ್ತಿಟ್ಟಿದ್ದೆ ಕೆಲ ದಿನಗಳ ಹಿಂದೆ ...ಬದಲಾದ ಕಾಲದೊಂದಿಗೆ ಅವೂ ಮೂಲೆ ಸೇರಿವೆ ..ಧೂಳಾದ ಮನದ ಗೋದಾಮಿನಲ್ಲಿ ಅವುಗಳನ್ನ ಹುಡುಕಿ ತೆಗೆಯಬೇಕಾದ ಜರೂರತ್ತೂ ಇಲ್ಲ ನಂಗೆ .ಗುಜರಿಯವನೂ ತೆಗೆದು ಹೋಗದಷ್ಟು ಹಾಳಾಗಿ ಹೋಗಿದೆ ಮನವಿಂದು  ..ಧೂಳು ಹಿಡಿದ ಮನ ,ಜಡಗಟ್ಟಿದ ಮನಸ್ಸು ,ಎಲ್ಲಿ ನೋಡಿದರಲ್ಲಿ ಜೇಡ ಬಲೆ ..!!ಬಿಡಿಸಲಾರದಷ್ಟು ಸಿಕ್ಕು ..ಸುಂದರ ಸೌಧವಾಗಬೇಕಿದ್ದ ಮನವಿಂದು ತುಂಬಲಾರದಷ್ಟು ಗುಜರಿ ನೆನಪುಗಳೊಂದಿಗೆ ದೊಡ್ಡ ಗುಜರಿಯಾಗಿದೆ ಈಗಷ್ಟೇ ಮಗುಚಿಬಿದ್ದ ಪ್ರೀತಿ (ಬಹುಷಃ ನಾ ನಾಮಕರಣ ಮಾಡಿದ್ದು !)ಯೊಂದಿಗೆ
ಹರೆಯದ ಪ್ರೀತಿ ನಿಜವಲ್ಲ ಎಂದು ಸಾಬೀತು ಮಾಡಿದ್ದೆ ಅವತ್ತು ..ನಿನಗೀ ಪ್ರೀತಿ ಒಂದು ಆಟ ಆಗಿರಬಹುದು ಗೆಳೆಯಾ ..ಆದರೆ ನನಗಿದೇ ಜೀವ ...ಜೀವನ ..ಬದುಕು ಕೂಡಾ ...ಆ ಹರೆಯದ ಪ್ರೀತಿಯೇ ನನ್ನ ಕನಸು ...ಕಲ್ಪನೆ ...ವಾಸ್ತವ ಕೂಡಾ !!..
ನಿನ್ನ ಹಳೆಯ ಪ್ರೀತಿಯ ನೆನಪಿನೊಟ್ಟಿಗೆ ಇದ್ದು ಬಿಟ್ಟೇನೂ ..ಆದರೆ ಪ್ರೀತಿಯ ಪರಿಶುದ್ದ ಮನಸ್ಸಿಗೆ ತೇಪೆ ಹಚ್ಚಿ ,ಪರಿಸ್ತಿತಿಯ ಅನಿವಾರ್ಯ ಅಂತೆಲ್ಲಾ ಸಬೂಬು ಹೇಳಿ ಹೋದ ನಿನ್ನೊಟ್ಟಿಗೆ ಮತ್ತೆ ಬರಲೊಲ್ಲೆ ನಾನು ..ಒಂದು ಸಲ ಕೊಟ್ಟು ಇನ್ನೊಮ್ಮೆ ವಾಪಾಸ್ ಪಡೆಯೋಕೆ ನನ್ನ ಪ್ರೀತಿ ವ್ಯವಹಾರವಲ್ಲ ..ಮೊಗೆ ಮೊಗೆದು ಕೊಡೊ ಅಷ್ಟು ಒಲವು ಹೊಂದಿದ್ದ ನನ್ನ ಪ್ರೀತಿ ನಿನ್ನ calculated quantity ಯ ಪ್ರೀತಿ (?)ಗೆ ಸಮ್ಮತಿಸಬಾರದಿತ್ತು ಕಣೋ ..
ಬದುಕು ನಡೆಸಲು ನೀ ಕೊಟ್ಟ ಹಳೇ ಪ್ರೀತಿ ಇದೆ ..ಅದರೊಟ್ಟಿಗೆ ಸಾಗಿದೆ ಪಯಣ ..ಭಾವನೆಗಳ ಜೊತೆ ಆಟ ಆಡದಿರು ..ಕಳೆದ ನೆನಪುಗಳು ಬರಿಯ ನನ್ನ ಮತ್ತು ನನ್ನ ಪ್ರೀತಿಯದ್ದು ಮಾತ್ರ ..
                       ನಿನಗಿದು ಸಂಭಂದಿಸಿದ್ದಲ್ಲ ......!!
.ಗುಜರಿಯಾದ ಮನದಲ್ಲಿ ನಿನ್ನ ಗುಜರಿ ಮುಖವಾಡಕ್ಕೆ ಜಾಗವಿಲ್ಲ ...ಮನದ ಬಾಗಿಲು ಮುಚ್ಚಿದೆ ಎಂಬುದು ತಿಳಿದಿರಬಹುದು ..ಹಾಗೆಯೇ ಮುಂದೆ ಸಹ ಹೋಗಬಹುದು ನೀ ...