Thursday, February 14, 2013

ನನ್ನೆದೆಯ ಬೀದಿಯಲೀಗ ನಿನ್ನೊಲವ ಮೆರವಣಿಗೆ ....


ಪ್ರೀತಿಯ ಮುದ್ದು ...
                       'ಒಲವೇ ನೀನೊಲಿದಾ ಕ್ಷಣದಿಂದಲೇ ...'ಇವತ್ಯಾಕೋ ನಾನು ನಾನಾಗಿಲ್ಲ ಗೆಳೆಯ ..ಎಲ್ಲೋ ಇರಬೇಕಿದ್ದ ನೀನು ನನ್ನೊಳಗೆ ಬಂದುಬಿಟ್ಟಿದ್ದೀಯಾ ! ಅದ್ಯಾವ ಪರಿ ಮನದೊಳಗೆ ಇಳಿದ್ಯೋ ನಾ ಕಾಣೆ ..ಆದರೆ ನಾ ಮಾತ್ರ ನಿನ್ನಲ್ಲಿ ಕಳೆದೇ ಹೋಗಿದ್ದೇನೆ ..ಹುಡುಕ ಹೊರಟರೂ ಸಿಗುವುದಿಲ್ಲಾ ಬಿಡು ...
ಹೀಗೊಬ್ಬ ಗೆಳೆಯನ ನಿರೀಕ್ಷೆ ಮಾಡಿರಲಿಲ್ಲ ..ಅನಿರೀಕ್ಷಿತವಾಗಿ ಮಾತನಾಡಿದ್ದೆ ಅವತ್ತಿನ ಸೋನೇ ಮಳೆಯಲ್ಲಿ ..ಬೆಚ್ಚಗಿನ ಕೊಡೆ ಹಿಡಿದಿದ್ದೆ ತೊಯುತ್ತಿದ್ದ ಹುಡುಗಿಗೆ ..ಆತ್ಮೀಯನಾದೆ ..ಕಡೆಗೊಂದು ದಿನ ಮುದ್ದು ಮುದ್ದಾಗಿ propose ನೂ ಮಾಡಿದ್ದೆ ..

'whenever you look into my eyes ,i forgot everything..
you made me to think of you hundred times a day
yes,im here to confess my love
I want to feel the warmth of your hand in the evening breeze
Iwant to feel the rain drop slowly sliding from your face..
Tell me dear ..will you be mine forever?'

 ಕಳೆದ ಇದೇ ದಿನ ಸಮುದ್ರ ದಂಡೆಯಲ್ಲಿ ನಿಂತು ಮಂಡಿಯೂರಿ ಹೀಗೆ ಕೇಳಿದ್ದೆ ...ನನ್ನೊಲವು ,ಪ್ರೀತಿ ಎಲ್ಲವೂ ನೀನಾಗಿದ್ದೆ ...

ಹುಚ್ಚು ಕೋಡಿ  ಮನಸು ಅದು ಹದಿನಾರರ  ವಯಸು ..ಹದಿನಾರು ದಾಟಿ ಬದುಕು ಕಟ್ಟಿಕೊಂಡ ಮೇಲೂ ಹರೆಯದ ಪ್ರೀತಿಯ ಪ್ರವಾಹ ಹೀಗೆಯೇ ಇದೆ ..ಸಾಗರ ಸೇರುವ ನದಿಯಂತೆ ಈ ಮನಸ್ಸಿಗೆ ನಿನ್ನ ಸೇರುವ ತವಕ ..ನಿನ್ನ ಮಡಿಲಲ್ಲಿ ಮಗುವಾಗಿ ಜಗವ ಮರೆವ ಬಯಕೆ ..ಹೀಗೆ ಹತ್ತಾರು ಆಸೆ ..ನೂರೆಂಟು ಕನಸು ಕಣೋ .....ಅದೇನೂ  ಮೋಡಿ  ಮಾಡಿದ್ದೀಯೋ ನಾ ಕಾಣೆ  ..ಮಗಳ ಬಗ್ಗೆ ಕೇಳೋಕೂ ಮುಂಚೆ ನಿನ್ನ ಬಗ್ಗೆ ಕೇಳುತ್ತಾರೆ ಅಪ್ಪ ಅಮ್ಮ ..ಇದೊಂದು ಮಧುರ ಹೊಟ್ಟೆಕಿಚ್ಚು ನಿನ್ನ ಮೇಲೆ


        ಸಮುದ್ರ ತೀರದಲ್ಲಿ ಅಲೆಗಳಿಗೆ ಮುತ್ತಿಕ್ಕುತ್ತಾ ಕಂಡ ಕನಸುಗಳಿಗೆ ಲೆಕ್ಕಾನೆ ಇಲ್ಲ ..ಜೊತೆಯಾಗಿ ನಕ್ಕಿದ್ದೆಷ್ಟೋ ,ಕೂಡಿ  ಹರಟಿದ್ದೆಷ್ಟೋ ...ನನ್ನೀ ಹುಸಿಮುನಿಸಿಗೆ ನಿನ್ನ ಒಲವೇ ಉತ್ತರ .. ಅವತ್ತು ನೀ ಕಣ್ಣಲ್ಲಿ ಕಣ್ಣಿಟ್ಟು 'ಜೀವದ ಗೆಳತಿ ..ಜೀವನದ ಸಂಗಾತಿಯಾಗು ಬಾ ' ಎಂದು ಪ್ರೀತಿಯಿಂದ  ಆಮಂತ್ರಿಸಿದಾಗ ಸಣ್ಣಗೆ ಕಂಪಿಸಿದ್ದೆ .. ಪ್ರೀತಿ ನೀನು ಕಣೋ ..ನಿನ್ನ  ತೋಳಿನಲ್ಲಿ ಮಲಗಿ  ನಕ್ಷತ್ರ ಎಣಿಸುತ್ತಾ ನನ್ನ ಚಂದಿರ ನೀನು ಅಂದಿದ್ದು ..ಮತ್ತೆ  ಈ ರಾತ್ರಿಯ ನೀರವತೆ ನಿನ್ನ ಕನವರಿಕೆಯನ್ನ ಜಾಸ್ತಿ ಮಾಡಿದೆ ..ನನ್ನಿಂದ ಆರೆಂಟು ತಾಸಿನ  ದೂರ ಇರುವ ನಿನ್ನೊಲವಿಗೋ ಹೀಗೆಯೇ ಅನಿಸುತ್ತಿದೆ ಎಂದು ಗೊತ್ತು ಗೆಳೆಯಾ .. ನಿನ್ನೆಡೆಗಿನ ವ್ಯಾಮೋಹ ದಿನೇ ದಿನೇ ಪ್ರೀತಿಯ ಪರವಶೆಯಲ್ಲಿ ತೋಯುತ್ತಿದೆ ..ಮಲಗಬೇಕೆಂದು ಹಾಸಿಗೆ ಸೇರಿದವಳಿಗೆ ನಿದ್ದೆ ಮಾಡೋಕೂ ಬಿಡ್ತಿಲ್ಲಾ ನೀನು ..
ನೆನಪುಗಳ ಬೆಚ್ಚಗಿನ ಹಾಸಿಗೆಯಲ್ಲಿ ಮಲಗಿ ಮಧುರ ಕನಸ್ಸೊಂದನ್ನು ಕಾಣಬೇಕಿದೆ ...
ನಿನ್ನ ಬಿಸಿಯುಸಿರಿಗೆ ನನ್ನೀ ಮುಂಗುರುಳು ನಾಚಿ ನೀರಾದ ಭಾವ ..ಕೆಂಪಾದ ಕೆನ್ನೆಗೇನೋ ಹಿತವಾದ ಭಾವ ..ಗಲ್ಲದಂಚಿನ ಮಚ್ಚೆಯ ಸವರಿ ಮೆಲ್ಲಗೆ ಮುತ್ತಿಟ್ಟ ಭಾವ ...

ಅಂದು ನೀನಾಡಿದ ಈ ಪಿಸು ಮಾತಿಗೆ ಮತ್ತೆ ನಿದ್ದೆಗೆ ಜಾರಬೇಕೆಂದು ಅನಿಸುತ್ತಿದೆ ಗೆಳೆಯ ...

  ' ಕಣ್ಮುಚ್ಚು ನನ ಗೆಳತಿ 
                     ಕನಸಲ್ಲಿ ಬರುವೆ ...
     ನಿದ್ದೆಯಲೂ ನಾಚಿ ಕೆಂಪಾಗುವ ನಿನ ಮೊಗವಾ ಕಂಡು
                                  ನಾ ಜಗವಾ ಮರೆವೆ .....'

ನಿನ್ನ  ಪ್ರೀತಿಯನ್ನ ಪ್ರೀತಿಯಿಂದ  ಜತನ ಮಾಡುತ್ತಾಳೆ ಈ ನಿನ್ನ ಪ್ರೀತಿ ...
                                                        ಪ್ರೀತಿಯ ಭರವಸೆಯೊಂದಿಗೆ ...
                                                                                        ಪ್ರೀತಿಯ ನಿನ್ನವಳು ...