Monday, May 27, 2013

ಭಾವಕ್ಕೆ ಜೊತೆಯಾಗೋ ಭಾವ.....

ಅದೆಲ್ಲೋ ಇದ್ದು ಮುಖವನ್ನೂ ನೋಡದಿರೋರ ಮಧ್ಯ ಸುಂದರ ಸ್ನೇಹವೊಂದು ಹೆಮ್ಮರವಾಗಿ ಬೆಳೆಯೋದು ಸಾಧ್ಯವೇ ಅನ್ನೋ ಅವಳ ಪ್ರಶ್ನೆಗೆ ನೇರಾ ನೇರಾ ಉತ್ತರ ಸಿಕ್ಕಿತ್ತು ಅವತ್ತು …

"ಗೆಳತಿ, ಆತ್ಮೀಯತೆ ಬೆಳೆಯೋಕೆ ಇಂತದ್ದೆ ಸ್ಥಳ ಬೇಕೆಂದಿಲ್ಲ. ನನ್ನ ನಿನ್ನ ಈ ಸ್ನೇಹ ಎದುರು ಕೂತು ಮುಖ ನೋಡಿ ಮಾತಾಡಿಲ್ಲ ! ಗಂಟೆಗಟ್ಟಲೇ ಹರಟಿಲ್ಲ. ತೋಳಲ್ಲಿ ಮುಖ ಹುದುಗಿಸಿ ಅತ್ತಿಲ್ಲ….ಸಾಹಿತ್ಯವನ್ನು ಬಿಟ್ಟು ಬೇರೆ ಯಾವ ವೈಯಕ್ತಿಕ ಮಾತನ್ನೂ ಆಡಿರದ ಸ್ನೇಹ ಇದು! ಆದರೂ ಎದುರು ಬದುರು ಕೂತು ಮಾತಾಡಿದ,ಒಟ್ಟಿಗೆ ಕೂತು ಹರಟಿದ, ಕಣ್ಣಂಚಿನ ಕಣ್ಣೀರ ಒರೆಸಿದ ನನ್ನ ತುದಿಬೆರಳ ಸ್ನೇಹಕ್ಕಿಂತ ಹತ್ತಿರವಾದ ಭಾವ ಇದು ! ಪರಸ್ಪರ ಗೌರವಿಸೋ ಎರಡು ಸುಂದರ ಮನವಿದ್ದರೆ ಸಾಕು ಕಣೇ ಸ್ನೇಹಿತರಾಗೋಕೆ ಅನ್ನೋ ಅವನ ಮಾತಿಗೆ ನಿಜಕ್ಕೂ ತಲೆಯಾಡಿಸಿದ್ದಳು ಅವಳು.


ಅಲ್ಲೊಂದು ಮಧುರ ಸ್ನೇಹ ಅದಾಗಲೇ ಹೆಮ್ಮರವಾಗಿ ಬೆಳೆದಿತ್ತು. ಮುಖ ನೋಡದೇ ಅವಳವನಿಗೆ ಹತ್ತಿರವಾಗಿದ್ದಳು. ಅದೆಷ್ಟೋ ಭಾವಗಳನ್ನ ಸಂಕೋಚವಿಲ್ಲದೇ ಹಂಚಿಕೊಳ್ಳೋ ಅಷ್ಟು ಸಲುಗೆ ಅವರಿಬ್ಬರ ನಡುವೆ ಇತ್ತು. ಮನದಲ್ಲಿ ನಡೆಯೋ ಕೆಲವೊಂದು ಗೊಂದಲಗಳನ್ನ ಇಬ್ಬರೂ ನೇರಾ ನೇರಾ ಹೇಳಿಕೊಂಡು ಬಗೆಹರಿಸಿಕೊಳ್ಳುತ್ತಿದ್ದರು. ಇಬ್ಬರ ಭಾವದಲ್ಲೂ ಪ್ರಾಮಾಣಿಕ ಉತ್ತರ ಸಿಗುತ್ತಿತ್ತು.


ಮುಖವನ್ನೇ ನೋಡಿರದ ಹುಡುಗನ ಮೇಲೇ ನಿಂಗ್ಯಾಕೆ ಅಷ್ಟೊಂದು ನಂಬಿಕೆ ಗೆಳತಿ ಅನ್ನೋ ಅವನ ಪ್ರಶ್ನೆಗೆ -ಉತ್ತರ ನಂಗೂ ತಿಳಿಯದು ಗೆಳೆಯಾ, ಕೆಲವೊಮ್ಮೆ ನಂಗೂ ಇಂತದ್ದೇ ಅಸಂಬದ್ಧ ಪ್ರಶ್ನೆಗಳು ಕಾಡ್ತಾ ಇರುತ್ವೆ, ನಿನ್ನೊಟ್ಟಿಗೆ ನಾ ಮಾತಾಡಿದ ಈ ಕ್ಷಣ ನಂಗೇನೋ ಖುಷಿ. ಹಂಚಿಕೊಳ್ಳೋ ಪ್ರತಿ ಭಾವಕ್ಕೂ ಹೊಸತನದ ರಂಗು. ನನ್ನೆಲ್ಲಾ ಭಾವಕ್ಕೂ ಪ್ರೀತಿಯಿಂದ ಸ್ಪಂದಿಸೊ ನಿನ್ನ ಮನದೊಂದಿಗೆ ನಾನೇ ಸೇರಿ ಹೋದ ಅನುಭವ. ನಿನ್ನ ಗೆಳತಿಯಾಗಿ, ತಂಗಿಯಾಗಿ, ಆತ್ಮೀಯ ಬಂಧುವಾಗಿ ನಿನ್ನೊಟ್ಟಿಗೆ ನನ್ನೆಲ್ಲಾ ಭಾವಗಳನ್ನ ಹೇಳಿಕೊಳ್ಳೋ ,ಹಂಚಿಕೊಳ್ಳೋ ಖುಷಿ ಮಾತ್ರ ನಂದು ಅಂತಷ್ಟೇ ಹೇಳಬಲ್ಲೆ ಅನ್ನೋದು ಅವಳ ಸಿದ್ಧ ಉತ್ತರ.
 ಇಷ್ಟೊಂದು ನಂಬಿಕೆಗೆ ನಾ ಅರ್ಹನೋ ಅಲ್ವೊ ಅನ್ನೋ ಭಯ ನಂದು ಕಣೇ ಅಂತ ಆ ಭಾವವನ್ನ ಮತ್ತೂ ಗೋಜಲಾಗೇ ಉಳಿಸೋ ಅವನ ಜಾಣತನಕ್ಕೆ ಪದ ಸಿಗದೇ ಅವಳೇ ಸುಮ್ಮನಾಗುತ್ತಿದ್ದಳು.


ಮುಂಜಾನೆಗೊಂದು ಭರವಸೆಯ ಮಾತು, ಮುಸ್ಸಂಜೆಗೊಂದು ತಂಪಾದ ಶುಭಾಶಯ ಅವನ ಪ್ರತಿ ದಿನದ ದಿನಚರಿ. .ಊಟ ಮಾಡೋದನ್ನ ಮರೆತಾನು ಆದರೀ ಶುಭಾಶಯವನ್ನ ಪ್ರತಿ ದಿನವೂ ಉದಯಿಸೋ ಸೂರ್ಯನಷ್ಟೇ ಸತ್ಯವಾಗಿ ಹೇಳುವವ ಅವ. ಪ್ರತಿದಿನದ ಅವನ ಸುಪ್ರಭಾತದ ಶುಭಾಶಯ ಅವಳಿಗೆ ಹೊಸತನ ತರುತ್ತಿತ್ತು .ಏಳೋಕೆ ಸೋಮಾರಿಯಾದ ಗೆಳತಿಯನ್ನ ಅದೆಷ್ಟೋ ದೂರದಿಂದ ಏಳಿಸೋ ಆತ್ಮೀಯತೆಯ ಸಲುಗೆ ಅವನದು…


ಅವಳ ಪ್ರಶ್ನೆಗೆ ಅವನದೊಂದು ಮರು ಪ್ರಶ್ನೆ! ಪ್ರಶ್ನೆಗೆ ಪ್ರಶ್ನೆಯೇ ಉತ್ತರವಾ ಅನ್ನೊದೇ ಅವಳು ತಿಳಿಯದೇ ಕೇಳೋ ಪ್ರಶ್ನೆ :)


ಈ ಆತ್ಮೀಯತೆಯ ಭಾವಕ್ಕೆ ಉತ್ತರ ಹುಡುಕ ಹೊರಟರೆ ತಲುಪೋದು ಗೊಂದಲದ ತುದಿಯನ್ನ ಅನ್ನೋದು ತಿಳಿದ ಮೇಲೆ, ಕೆಲವೊಂದಿಷ್ಟು ಪ್ರಶ್ನೆಗಳನ್ನ ಪ್ರಶ್ನೆಗಳನ್ನಾಗಿಸಿಯೇ ಉಳಿಸೋದು ಸೂಕ್ತ ಅನ್ನೋ ಭಾವ ಇಬ್ಬರದೂ ಕೂಡಾ…
ಮುಸ್ಸಂಜೆಯಲ್ಲಿ ಸುರಿವ ಮಳೆಗೆ ಮುಖವೊಡ್ದಿ ಖುಷಿಸಿ ಬಂದ ಅವಳು ಇವತ್ತಿನ ಮಳೆಗೆ ನಿನ್ನ ನೆನಪಾಯ್ತು ಗೆಳೆಯಾ, ನೆಲ ತಾಕಿದ ಹನಿಯಲ್ಲಿ ನಾ ನಿನ್ನ ಕಂಡೆ ಅಂದಾಗ ಸುಮ್ಮನೆ ಹನಿಗಳಿಗೆ ಕೈಯೊಡ್ಡು ನೀ ನನ್ನ ತಾಕಿದ ಅನುಭವ ನನ್ನದಾದೀತು ಅಂತ ಕಣ್ಣು ಮಿಟುಕಿಸೋ ಅವನು.
 ವಿಷಯವೊಂದು ಸಿಕ್ಕಾಗ ಗಂಟೆಗಟ್ಟಲೇ ವಿಮರ್ಶಿಸೋ ಆ ಎರಡು ಮನವನ್ನ ನೋಡಿದಾಗ ನಿಜಕ್ಕೂ ಒಂದು ಖುಷಿಯ ಅನುಭವ ಆಗೋದು ಸತ್ಯ. ಚಿಕ್ಕ ಚಿಕ್ಕ ಖುಷಿಗಳನ್ನೂ ಪ್ರೀತಿಯಿಂದ ಅನುಭವಿಸೋ ಮನಗಳು ಅವು.

ಅಷ್ಟೊಂದಾಗಿ ಪ್ರಪಂಚ ನೋಡಿರದ ಅವಳಿಗೆ ಅವನ ಜೀವನ ಅನುಭವವೇ ದಿನ ದಿನಕ್ಕೂ ಹೊಸ ಪ್ರಪಂಚ ನೋಡುತ್ತಿರೋ ತರ ಭಾಸ ಮಾಡಿದ ತರಲೆಗಳೆಷ್ಟೋ, ಭಾವುಕರಾಗಿ ಮಾತಾಡಿದ ದಿನಗಳೆಷ್ಟೋ, ಕಾಲೆಳೆದು /ಎಳೆಸಿಕೊಂಡು ತೋರಿರೋ ಹುಸಿ ಮುನಿಸುಗಳೆಷ್ಟೋ…


ಹೇಳಲಾಗದ ಅವೆಷ್ಟೋ ಇಲ್ಲ ಗಳ ನಡುವೆ ಇರೋ ಒಂದೇ ಒಂದು ಭಾವ ಮಾತ್ರ…ಅವನವಳ ಸ್ನೇಹಿತ.

ಬದುಕು ಕರುಣಿಸಿದ ಅಪರೂಪದ ಗೆಳೆತನದ ಖುಷಿ ಅದು.

 ಆಶ್ಚರ್ಯ ಆಗೋದು ಇಲ್ಲೆ
ಯಾರನ್ನೂ ಅಷ್ಟಾಗಿ ಹಚ್ಚಿಕೊಳ್ಳದ ಅವಳು ಅದ್ಯಾವತ್ತೋ ಅವನ ಸ್ವಚ್ಚ ನಗುವಿಗೆ ಸೋತಿದ್ದಳು… ಸ್ನೇಹಕ್ಕೆ ಜೊತೆಯಾಗಿ, ಜವಾಬ್ದಾರಿಗಳಿಗೆ ಬೆನ್ನು ಮಾಡದೆ, ನಿನ್ನೆಲ್ಲಾ ನೋವುಗಳು ನನ್ನವೂ ಕೂಡಾ ಅನ್ನುತ್ತಾ ನೋವಿಗೆ ನಾ ಜೊತೆ ಇರುವೆ ಅನ್ನೋ ಸೂಕ್ಷ್ಮಗಳ ತಿಳಿ ಹೇಳುತ್ತಾ, ಆತ್ಮೀಯತೆಗೆ ಎರಡರಷ್ಟು ಆತ್ಮೀಯತೆ ತೋರುತ್ತಾ, ಭಾವಗಳನ್ನ ಬಿಡಿ ಬಿಡಿಯಾಗಿ ತಿಳಿಸೋ ಅವನನ್ನ ತುಂಬಾನೇ ಹಚ್ಚಿಕೊಟ್ಟ ಭಾವ ಅವಳದು.

ಮೊದಲ ಮಾತಿಗೆ ಅತೀ ಆತ್ಮೀಯ ಅನ್ನಿಸೋ ಅವನಂತದ್ದೇ ಸ್ನೇಹ ಎಲ್ಲರಿಗೂ ಸಿಗಲಿ….

"ಭಾವ ನೀನಾದರೆ ….ಭಾವನೆ ನಾನು "ಅನ್ನೋ ಸಲುಗೆಯ ಆ ಸ್ನೇಹ ಚಿರಾಯುವಾಗಲಿ ಅನ್ನೋ ಆಶಯವನ್ನು ಹೊತ್ತು …

ಆತ್ಮೀಯತೆಯ ಸೋಂಕೂ ಇಲ್ಲದೇ ಬರಿಯ ಹಣ, ಒಣ ಪ್ರತಿಷ್ಟೆಗಳ ಹಿಂದೆ ಬಿದ್ದಿರೋ ಸಮಾಜಕ್ಕೊಂದು ಧಿಕ್ಕಾರವೀಯುತ್ತಾ…

ರಕ್ತ ಸಂಬಂಧವಿಲ್ಲದೇ, ಸ್ನೇಹಿತರಲ್ಲದೇ, ಪರಸ್ಪರ ಪರಿಚಿತರಲ್ಲದೇ, ಅದೆಲ್ಲೋ ಒಂದು ಸಣ್ಣ ಸ್ನೇಹವಾಗಿ, ಸ್ನೇಹ ಸಂಬಂಧವಾಗಿ ,ರಕ್ತ ಸಂಬಂಧಕ್ಕೂ ಮೀರಿದ ಆತ್ಮೀಯತೆ ಮೂಡಿ, ಭಾವಕ್ಕೆ ಭಾವ ಧಾರೆಯೆರೆಯೋ, ಪ್ರೀತಿಗೆ ಸಹಸ್ರ ಪ್ರೀತಿ ನೀಡೋ ಇಂತಹ ಅದೆಷ್ಟೋ ಪಕ್ವ ಸ್ನೇಹಗಳ ಮಾತಾಗಿ,
 ಇಂತದ್ದೇ ಸ್ನೇಹ ಎಲ್ಲರಿಗೂ ಸಿಗಲಿ…
ಎಲ್ಲರದೂ ಆಗಲಿ.\


 [ಪಂಜುವಿನಲ್ಲಿ ಪ್ರಕಟಗೊಂಡ ನನ್ನ  ಭಾವವಿದೆ :)
ಧನ್ಯವಾದ ಪಂಜು ಬಳಗಕ್ಕೆ ....
ಪಂಜು ಲಿಂಕಿಗಾಗಿ ...
http://www.panjumagazine.com/?p=2469 ]

Saturday, May 25, 2013

ಕಲಾಗ್ರಾಮದಲ್ಲಾದ ಅದ್ಭುತ ಭಾವದ ಸುತ್ತಾ....

 
ಬೆಂಗಳೂರಿಗೆ ಬಂದು ಎರಡು ದಿನವಾಗಿತ್ತು ..ಆತ್ಮೀಯರ ಜೊತೆಗಿನ ಮಾತು ಹರಟೆಗಳಲ್ಲಿ ಆ ಎರಡು ರಾತ್ರಿಗಳೇ ಕಾಣೆಯಾಗಿತ್ತು !!

ಮೊದಲೇ ಇಂಟರ್ನಲ್ ಕಾರುಬಾರಲ್ಲಿ ನಿದ್ದೆ ಅನ್ನೋ ನನ್ನ ಅತೀ ಪ್ರೀತಿಯ ಗೆಳೆಯ ಕಳೆದು ಹೋಗಿದ್ದ ....ಆದರೂ ನಂಗವತ್ತು ಏನನ್ನೋ ನೋಡಲೇ ಬೇಕೆಂಬ ಭಾವ ...ಆದರೂ ಮನದಲ್ಲೊಂದು ಸಣ್ಣ ಅಳುಕಿತ್ತು ...೯ ತಾಸುಗಳ ಕಾಲ ಬರಿಯ ಬಯಲು ರಂಗಮಂದಿರದಲ್ಲಿ ಕೂತು ನಂಗಿದನ್ನು ನೋಡೋಕೆ ಸಾಧ್ಯಾನಾ ? ಕಾಡಿ ಬೇಡಿ ಹೊರಡಿಸಿದ್ದ ಗೆಳತಿ ಏನಂದಾಳು ?....ನಂಗೆ ನಾ ಪ್ರಶ್ನಿಸಿದ್ದೆ ...ಆದರೆ ನೋಡಿದ್ದ ಮದುಮಗಳ ಭಾವಚಿತ್ರಗಳು ಸಮಾಧಾನಿಸಿದ್ದವು ನನ್ನ :) ...ಕೊನೆಗೂ ನಿರ್ಧರಿಸಿ ಪಯಣ ಸಾಗಿತ್ತು ಆ ಕಡೆಗೆ ....

ಸಮಯ ಸಂಜೆ ೭:೩೦ .ನಾವವತ್ತು ಬೆಂಗಳೂರು ಹೊರವಲಯದ ಮಲ್ಲತ್ತಹಳ್ಳಿಯ "ಕಲಾಗ್ರಾಮ"ದಲ್ಲಿದ್ದೆವು

ಕಲಾಗ್ರಾಮ-ಹೆಸರೇ ಸೂಚಿಸುತ್ತೆ ಇದೊಂದು ಕಲೆಯ ಗ್ರಾಮ ..ಕಲಾರಸಿಕರ ಊರೆಂದು ...

"ಮಲೆಗಳಲ್ಲಿ ಮದುಮಗಳು" ಅನ್ನೋ ಕನ್ನಡಿಗರ ಹೆಮ್ಮೆಯ ಕಾದಂಬರಿಯೊಂದನ್ನು ಕೂತು ನೋಡೋ ಭಾಗ್ಯ ದಕ್ಕಿತ್ತು ಆ ರಾತ್ರಿ ...


                                                 ನಾಟಕದ ಸಾರ ಹೊತ್ತು
 

ರಂಗವನ್ನೊಮ್ಮೆ ನೋಡಿ ನಾ ಆವಾಕ್ಕಾದದ್ದು ಸುಳ್ಳಲ್ಲ !!! ..ಸುಂದರ ರಂಗಸ್ಥಳ ಕೆರೆ ಅಂಗಳ .ಅದೆಷ್ಟು ಸ್ವಾಭಾವಿಕವಾಗಿತ್ತೆಂದರೆ ನಾ ಎಲ್ಲೊ ಕನಸಲ್ಲಿ ಅದೇ ಊರಿಗೆ ಹೋದಂತನಿಸಿತ್ತು ...ಜೊಗಿಯರು ಹೇಳೋ ಕಥೆಯ ಚಿತ್ರಣವದು ....

          

                                                           ರಂಗ ಪ್ರವೇಶ


.ಮೊದಲ ಪಾತ್ರದಾರಿ ಗುತ್ತಿ ಮತ್ತವನ ನಾಯಿ ಹುಲಿಯ ...ನಾಟಕದಲ್ಲಿ ಮೊದಲಿಂದ ಕೊನೆಯ ತನಕ ಹುಲಿಯ ಹುಲಿಯನಾಗೇ ಮೆರೆದದ್ದು ಮಾತ್ರ ನನಗತೀ ಹತ್ತಿರವಾದದ್ದು

ದುರ್ಗಮ ದಾರಿಯ ವರ್ಣನೆಯಲ್ಲಿ ಬರೋ ಉಂಬಳ ಜೀರುಂಡೆಯನ್ನೂ ಬಿಡದೇ ತೋರಿಸಿರೋ ಪರದೆಯ ಹಿಂದಿನ ಪರದೆಗೆ ನನ್ನದನಂತ ನಮನ .

ಕಿನ್ನರ ಕಿರುಗೆಜ್ಜೆಯ ಸುತ್ತ ಮೂಡಿರೋ ಹೆಜ್ಜೆ ಗುರುತಲ್ಲಿ ನಾಗಕ್ಕ ನಾಗತ್ತೆಯರ ಜೊತೆಗಿನದೊಂದು ಭಾವ ಐತ ಮತ್ತವನ ಮಡದಿ ಪಿಂಚಲುವಿನ ಮಧುರ ಪ್ರೀತಿಯ ಭಾವಕ್ಕೂ ಸೆರೆಯಾಯಿತು!...ನೋಡುತ್ತಿದ್ದರೆ ನಾವೆಲ್ಲಿ ಕುಳಿತಿದ್ದೆವು ಅನ್ನೋದೇ ಮರೆತು ಹೋಗೊ ಭಾವವದು ...


                              ತಲೆಮಾರಿನ ಕಸುಬು ಕೊನೆಯಾಗೋ ಸಮಯದಲ್ಲೊಂದು ಕ್ಲಿಕ್ 
                      
                                                  ಎರಡನೇ ರಂಗದ ಆರಂಭ


ಎರಡನೇ ರಂಗಸ್ಥಳದಲ್ಲಿ ತಿಮ್ಮಿಯ ಪಾತ್ರ .....ತಿಮ್ಮಿ ಕಾಣೆಯಾದುದ್ದಕ್ಕೆ ಬರೋ ದೇವಿಯ ಪಾತ್ರ ಮನ ಮುಟ್ಟಿತ್ತು..ಪ್ರಸ್ತುತ ಜಗತ್ತಿಗನ್ವಯಿಸಿ ಈಗಿರೋ ಮಠ ಮಾನ್ಯರ ಬಗೆಗಿನ ಅಣುಕು ನೋಟದಲ್ಲೊಂದು ಸಾರವಿತ್ತು ....ಸುಬ್ಬಣ್ಣನ ಮಗ ದೊಡ್ಡಣ್ಣ ...ಅವನ ಮಗನಂತೂ ನಾಟಕದ ಕೇಂದ್ರ ....ಆ ಚಿಕ್ಕ ಪೋರನ ಅಭಿನಯವೂ ಮನಮುಟ್ಟಿತ್ತೆಂದರೆ ಪರದೆಯ ಹಿಂದಿನ ತಾಲೀಮಿನ ತಲ್ಲೀನತೆ ಸ್ಪಷ್ಟವಾಗಿತ್ತು ... ಬರುವೆ ಎಂದಿದ್ದ ನಲ್ಲ ಬರದೇ ಹೋದನಲ್ಲ ಅನ್ನೋ ಅವಳ ಸಂಕಟಕ್ಕೆ ಬೆಳಕಿಲ್ಲದ ಹಾದಿಯಲ್ಲಿ ಬೆಳಕ ಹುಡುಕುತ್ತಾ ಹೋಗೋದು ನೋವಿಲ್ಲದ ಬೀದಿಯನ್ನ ಹುಡುಕಿದಂತೆಯೇ ಅಂತ ಸಮಾಧಾನವಿಟ್ಟ ಮನವೊಂದಿತ್ತು!!


                                                                  ಬರುವೆ ಎಂದ ನಲ್ಲಾ
                                                                  ಬರದೇ ಹೋದನಲ್ಲ

                                           ಬೆಳಕಿಲ್ಲದ ಹಾದಿಯಲ್ಲಿ                 
       ನೋವಿಲ್ಲದ ಬೀದಿಯಲ್ಲಿ ...                                               
ಬೆಳಕನ್ನರಸುತ್ತಾ    ...                                            
 


ಸುಬ್ಬಣ್ಣ ಹೆಗ್ಗಡೆ - ಪಾತ್ರ ಮೂರನೇ ರಂಗಸ್ಥಳದ್ದು ...ಜಾತೀಯತೆಯೇ ಬೇರಾದ ಹಳೆಮನೆ ಊರಲ್ಲಿ ಮಗನ ಕಳಕೊಂಡ ನೋವಲ್ಲಿ ಕುಗ್ಗಿ ಹೋಗಿದ್ದ ಗತ್ತಿನ ಸುಬ್ಬಣ್ಣ ..ಬೆಟ್ಟದಂತೆ ಮೆರೆದಿದ್ದ ಇವರು "ಬೆಟ್ಟಕ್ಕೂ ಆಯಾಸವಾಗುತ್ತೆ ಮಾರಾಯ " ಅನ್ನುತ್ತಾ ಅಸಹಾಯಕತೆಯ ,ವ್ಯಾಕುಲತೆಯ ಮನೋಭಾವದ ಗುಟ್ಟೊಂದನ್ನ ನೋಡುಗ ಪ್ರಜೆಗೂ ಸಲೀಸಾಗಿ ವರ್ಗಾಯಿಸಿದ್ದರು ...ಇಲ್ಲಿ ಮಾತ್ರ ಕಣ್ಣಂಚು ಮಾತಾಡಿತ್ತು (ಬಹುಶಃ ಎಲ್ಲರ ಕಣ್ಣೂ ಒದ್ದೆಯಾಗಿತ್ತೇನೋ )

                                          ಬೆಟ್ಟಕ್ಕೂ ಸುಸ್ತಾಗುತ್ತೆ ಮಾರಾಯ ಅನ್ನೋ ವ್ಯಾಕುಲತೆ


                                             ಅಂತಕ್ಕನ ಹೋಟ್ಲಲ್ಲಿ -ಸುಬ್ಬಣ್ಣ ಹೆಗ್ಗಡೆಇಲ್ಲಿಯೆ ಅಂತಕ್ಕನ ಹೋಟೆಲ್ ..ಇಲ್ಲಿಯೇ ಸುಬ್ಬಣ್ಣ ಹೆಗ್ಗಡೆ ದೇವಯ್ಯನ ಮಗನಲ್ಲಿ ತನ್ನ ಮಗನನ್ನ ಹುಡುಕೋದು ....ಇಲ್ಲಿಯೆ ಅಂತಕ್ಕನ ಮಗಳು ಕಾವೇರಿಯ ಬದುಕ ಅಂತ್ಯ ...ಹಾಗೆಯೆ ಇಲ್ಲಿಯೆ ದೊಡ್ಡಯ್ಯನ ಹೆಂಡತಿಯ ಬಾಳೂ ಅಂತ್ಯ !!!

ಇದೊಂದು ಶೋಕದ ಮನೆಯೆಂದರೆ ಸರಿಯಾದೀತೇನೋ ! ....

ಕೊನೆಯ ರಂಗಸ್ಥಳ- ಹೊಂಗೆಯ ಮನೆ ....

ಇಲ್ಲಿಯೇ ಎಲ್ಲಾ ಪಾತ್ರಗಳೂ ಒಂದಾಗೋದು ... "ಇಲ್ಲಿ ಯಾರೂ ಮುಖ್ಯರಲ್ಲ ..ಯಾರೂ ಅಮುಖ್ಯರಲ್ಲ ..ಯಾವುದೂ ಯಃಕಶ್ಚಿತವಲ್ಲ " ಅನ್ನೋ ಮದುಮಗಳ ಆಶಯದ ಕೇಂದ್ರಿಕೃತವಾಗಿರೋದು :)

ಜಾತೀಯತೆಯ ಸೋಂಕು ....ಎಲ್ಲವನ್ನೂ ಮೆಟ್ಟಿ ನಿಂತ ಮಾನವತೆಯ ಲಿಂಕು!

ಬೆಟ್ಟದ ತುದಿಯಲ್ಲಿನ ಗುತ್ತಿ -ತಿಮ್ಮಿಯ ಭಾವಗಳು ..ಬೆಟ್ಟದ ಕೆಳಗಿನ ಹುಲಿಯನ ಭಾವ ...ಕೊನೆಗೂ ಯಜಮಾನನಿಗಾಗಿ ಕೊನೆಯಾಗೋ ಹುಲಿಯ ಹುಲಿಯನಾಗೇ ಮೆರೆದು ಧೀಮಂತನಾಗೇ ಮಣ್ಣಾಗಿ ಹೋದ.. ಅದಕ್ಕೆ ರೋದಿಸೋ ಗುತ್ತಿ ..ಪ್ರವಾಹ,ಮಳೆ .


                                                    ಪರದೆಗಿಲ್ಲಿ ತೆರೆ ಬಿತ್ತು
ಹೌದು......ನಾ ನೋಡಿದ ಮೊದಲ ನಾಟಕವಿದು ....ಮನ ತಟ್ಟಿತ್ತು ...ಮನಸ್ಸು ಮುಟ್ಟಿತ್ತು ...ಮತ್ತೊಮ್ಮೆ ನೋಡಬೇಕೆಂದು ಕಾಡಿತ್ತು ...

ನೀವು ಬರಿಯ ಕಲಾವಿದರಲ್ಲ ....ಕಲೆಯಲ್ಲಿ ದೈವತ್ವವನ್ನ ಕಾಣೋ ,ಕಲೆಯನ್ನ ಉಸಿರಾಗಿಸಿಕೊಂಡು ,ಕಲೆಯನ್ನ ಹಂಚುತ್ತಿರೋ ಕಲಾ ಪೋಷಕರೂ ಕೂಡಾ ....

ಪರದೆಯ ಹಿಂದಿನ ನಿಮ್ಮೀ ಪರಿಧಿಯ ಶ್ರಮಕ್ಕೆ ನನ್ನದೊಂದು ನಮನ ....

ಕಲಾಕ್ಷೇತ್ರದಲ್ಲೊಂದು ಕಲಾರಾಧನೆ ಮಾಡಿದ ಸಾರ್ಥಕ್ಯ ಭಾವವಿವತ್ತು.ಅವತ್ತಿನ ಆ ಖುಷಿಗೆ ಪಾಲುದಾರರಾಗಿ -ಸುಬ್ರಹ್ಮಣ್ಯ ಹೆಗಡೆ (ಭಾವಸ್ರಾವದ ಗೆಳೆಯ ),ಶ್ರೀವತ್ಸ ಕಂಚಿಮನೆ (ಭಾವಗೊಂಚಲಿನ ಆತ್ಮೀಯ) ,ಮೈತ್ರಿ ಹೆಗಡೆ (ಆತ್ಮೀಯ ಗೆಳತಿ)

Thursday, May 23, 2013

ಬಾನ ಮಾಳಿಗೆಯಲ್ಲಿ ಬಾಳ ಚಂದಿರ ಜೊತೆಯಾಗಿ.ಒಂಟಿತನದ, ಕತ್ತಲೆಯ ಭಾವದ ಜೊತೆಗಾರನಾದ ಅವನ ಮೇಲೆ ಅವಳಿಗ್ಯಾಕೋ ಒಲವ ಮೋಹ....ಅವನವಳ ಗೆಳೆಯ ,ಇನಿಯ ,ಪ್ರೀತಿ ,ಸಿಟ್ಟು.ಬೇಸರ.

ಎಲ್ಲಾ ಭಾವಗಳ ಏಕೈಕ ಸಂಗಾತಿ ಎಂದರೆ ಸರಿಯಾದೀತೇನೋ ...

ಅವಳ ಅದೆಷ್ಟೋ ನೀರವ ರಾತ್ರಿಗಳಿಗೆ ಕಿವಿಯಾದವನವನು  .ಅದೆಷ್ಟೋ ಬೇಸರಗಳ ಒಡೆಯ ,ಹಲ ಅತಿಶಯದ ಕನಸುಗಳ ಗೆಳೆಯ ....

ಪ್ರೀತಿ ಕಂಗಳ ಸರದಾರನೀ ಕನಸುಗಾರ :)

ಅವಳ ಕೆಲ ಗುಟ್ಟುಗಳೂ ಅವನ ಜೋಪಡಿಯಲ್ಲಿ ಜೋಪಾನವಾಗಿವೆಯೇನೋ ...!


ಭಾವಕ್ಕೆ ಜೊತೆಯಾಗಿ -

ದೂರಾದ ನೋವ ಭಾವವನ್ನ ಸಂಜೆಯ ಕತ್ತಲಲ್ಲಿ ಮಹಡಿಯಲ್ಲಿ ಕೂತು ಮಾತಾಡೋದು ಅವಳಿಗ್ಯಾಕೋ ಇಷ್ಟ ..ಒಂದರ್ಧ ಗಂಟೆ ಮನದೊಂದಿಗೆ ಮಾತಾಡೋಕೆ ಬೆಳಿಗ್ಗೆ ಇಂದ ಸಂಜೆ ಆಗೋದನ್ನೆ ಕಾಯೋಳು ಅವಳು ...ಕತ್ತಲ ರಾತ್ರಿಗಳಲ್ಲೂ ಮೋಡಗಳ ಮರೆಯಲ್ಲಿ ಅವನನ್ನ ಹುಡುಕುತ್ತಾ ಕೂರೋ ಹುಚ್ಚು ಮನ ಅವಳದ್ದು ..ಅವತ್ತು ಅವನಿಲ್ಲ ಅಂತ ಗೊತ್ತಿದ್ದರೂ ಮತ್ತವನನ್ನೇ ಹುಡುಕೋ ಧಾವಂತದ ಹುಡುಗಿ ಅವಳು ...

 

ಇಂಥದ್ದೇ ಅದೆಷ್ಟೋ ಸಾವಿರ ಭಾವಗಳ ಹಕ್ಕುದಾರ ಅವನು ..ನಗು ಮೊಗದಿ ಎಲ್ಲರನೂ ಮೋಡಿ ಮಾಡೋ ಚೆನ್ನಿಗ..."ನನ್ನ ಹುಡುಗ ನಿನ್ನಂತೇ ಇರಬೇಕು ಕಣೋ " ಅನ್ನೋ ಅದೆಷ್ಟೋ ಹುಡುಗಿಯರ ಮನಸ ಹುಡುಗ ಅವಳ ಈ ಕನಸ ಸುಂದರ :)

ಪುಟ್ಟುವಿಗೆ ಮಾಮ ...ಅವನಮ್ಮನಿಗೆ ಮಗನನ್ನ ಊಟ ಮಾಡಿಸೋಕೇ ಅಂತಾನೇ ಬಂದ ಗೆಳೆಯ .....

ಹುಡುಗರಿಗೆ ಪ್ರೇಮ ಕವಿ ..ಗೆಳತಿಯರಿಗೆ ಮೊದಲ ಗೆಳೆಯ...ಅಜ್ಜ ಅಜ್ಜಿಗೆ ವಾಕಿಂಗ್ ಫ್ರೆಂಡ್  ....ಅದೆಷ್ಟೋ ಬೇಸರಿಸೋ ಮುಸ್ಸಂಜೆಗಳ ನೆಚ್ಚಿನ ಮಿತ್ರ ....
ಬೆಳದಿಂಗಳ ಸಜ್ಜನಿಕ .ಜ಼ಗದೆಲ್ಲ ಮಧುರ ಭಾವಗಳ ಒಡೆಯ ಈ ಕ್ಷಣ ಮನವನ್ನಾಳಿದ ಸೊಬಗು :)


ಕಾರ್ಮೋಡದೊಳಗೂ ನುಸುಳೋ ಪರಿಣಿತ .

ನೋವನ ಮುದುಡಿಸೋ ನಲಿವಿನ ಧೀಮಂತ .

ಅವನೇ ಇವನು ...

ಯಾರಿವನು ?

ಮುನಿಸಿಕೊಂಡ ನಕ್ಷತ್ರ ಬಾನ ಮಾಳಿಗೆಯಲ್ಲಿ ಕುಳಿತುಕೊಂಡರೆ ಅದನ್ನೂ ಸ್ಪರ್ಶಿಸಿ ಕಾಂತಿ ಕೊಡೋ ಅದೇ ಬಾನ ಚಂದಿರನಿವನು ....


                      

                                               ಫೋಟೋ ಕ್ರೆಡಿಟ್ಸ್ :ಬಾಲಣ್ಣ  (ನಿಮ್ಮೊಳಗೊಬ್ಬ ಬಾಲು)
ಅವಳ ಮನಕ್ಕೆ ಅವನು -

ಕಣ್ಣ ಕನಸ ಹೊರಹಾಕದವಳಿಗೆ

ಕಣ್ಣಿನಲೇ ಮಾತು ಕಲಿಸೋನು.

ಭಾವ ಹಂಚಿಕೊಳ ಬರದವಳಿಗೆ

ಭಾವಗಳ ಬದುಕ ತಿಳಿಸೋನು .

ಯಾರಿವನು ?

ನೀನಾ?

ಅವನಾ?                                   

                                             

                                             ಫೋಟೋ ಕ್ರೆಡಿಟ್ಸ್ :ಬಾಲಣ್ಣ(ನಿಮ್ಮೊಳಗೊಬ್ಬ ಬಾಲು)
ಬದುಕ ಪಯಣದಲ್ಲೊಂದು ಖಾಯಂ ಸಹ ಪಯಣಿಗನ ಹುಡುಕಾಟದಲ್ಲಿರೋ ಅವಳಿಗೆ ..
ಕನಸುಗಳಿಗೆ ಜೊತೆಯಾಗೋ ನೀರವ ರಾತ್ರಿಗಳ ಸಮಾಧಾನೀ ಗೆಳೆಯನಾದ ಬಾನ ಚಂದಿರನೇ ಬಾಳ ಚಂದಿರನಾದಂತೆ ಭಾಸವಾಗಿ...
ಅವಳದೇ ಕನಸುಗಳ ಸುತ್ತಾ ನನ್ನದೊಂದು ಸುತ್ತು  :)


(ಬಾಲಣ್ಣ ,ಸುಂದರ ಚಂದಿರನನ್ನು ನಿಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಕ್ಕೆ ಮೊದಲ ಧನ್ಯವಾದ ನಿಮಗೆ .ನಿಮ್ಮ ಸುಂದರ ಚಂದಿರ ಎಂತಹವರನ್ನೂ ಮೋಡಿ ಮಾಡೋ ತರ ಇದೆ :)

ಬಲು ಸುಂದರ ನಿಮ್ಮೂರಿನ ಚಂದಿರನನ್ನು ತಂದು ಕೈಯಲ್ಲಿರಿಸಿದ್ದೀರಿ .ಎಲ್ಲರಿಗೂ ಇಷ್ಟವಾಗೋ ಚಂದಿರ ನಿಮ್ಮಿಂದ ಇನ್ನೂ ಸುಂದರವಾಗಿ ಕಂಡ ಇವತ್ತು ...ಥಾಂಕ್ಸ್ ಜಿ )

Thursday, May 16, 2013

ಮನೋ ವ್ಯಾಪಾರಿ ನಾ ....


ಬಾಳ ಸಂತೆಯಲ್ಲಿ ಜೀವದಾಳದ ಭಾವಗಳು ಹರಾಜಿಗಿವೆ !

ಕೊಂಡುಕೊಳ್ಳೋರಿಲ್ಲದೇ ,ಹಾಗೇ ಬಿಟ್ಟು ಎದ್ದು ಹೋಗಲೂ ಆಗದೇ ,ಕೈ ಬಿಡೋ ಅಸಹಾಯಕತೆಗಾಗಿ ನನ್ನದೇ ಮನವನ್ನ ನಲುಗಿಸುತ್ತಾ ........

ನನ್ನವರ ಮನಸ್ಸುಗಳನ್ನೂ ನಲುಗಿಸ ಬರುತ್ತಿರೋ ಭಾವ ಗಳ ಹರಾಜಿದು .....


                             ತುಂಬಾ ಕಡಿಮೆ ಬೆಲೆಯ ವಸ್ತು ...ಬೆಲೆ ತೆರದೇ ಪಡೆಯಬಹುದಾದದ್ದು ....ಒಂಚೂರು ಸಮಯ ,ಒಂದಿಷ್ಟು ಒಲುಮೆ ,ಸ್ವಲ್ಪ ಆತ್ಮೀಯತೆಗೆ ದಕ್ಕೋ ವಸ್ತು ...

ಆದರೆ ಪಡೆದಾದ ಮೇಲೆ ಮಾತ್ರ ತಕ್ಕ ಬೆಲೆ ತೆರಲೇ ಬೇಕು .ಜೋಪಾನ ಮಾಡೋ ಕೆಲಸ !

ನೋವಿಗೆ ಕಣ್ಣ ಹನಿ ಜೊತೆಯಾದೀತು ಅಥವಾ ಕೈ ಹಸ್ತ ಜೊತೆಯಾದೀತು....ನಲಿವಿಗೆ ಕಿರು ನಗು ಜೊತೆಯಾದೀತು ಅಥವಾ ಅರ್ಥವಾಗದ ದೊಡ್ಡದೊಂದು ನಗುವೇ ಜೊತೆ ಸೇರೀತು ...
ಜೊತೆಯಾಗೋದಂತೂ ನಿಜ !!

ಭಾವವೊಂದೆ...
ಜೊತೆಯಾಗಿ ನಾವೂ ಇದ್ದೀವಿ ..ನಮ್ಮದೂ ಕೂಡಾ ನಿನ್ನದೇ ಹಾದಿ ...ಒಟ್ಟಿಗೇ ನಡೆಯೋಣ ಬಾ ಅಂತ ಕರೆಯೋ ಭಾವ .!

ಇದು ಪ್ರೀತಿಸೋ ಮನಗಳೊಟ್ಟಿಗೆ ,ಆಧರಿಸೋ ಮನಸ್ಸುಗಳೊಟ್ಟಿಗಿನ ನಡುವಣದ ಒಪ್ಪಂದ......
ಸಾಕ್ಷ ಸಹಿ ಹಾಕದೇ ನಡೆಯೋ ಮನಸ ಒಡಂಬಡಿಕೆ ....

ಹೇಳಿಕೊಂಡ ಪ್ರೀತಿಯ ಭಾವ ....ಹಂಚಿಕೊಂಡ ನೋವ ಅನುಭವ...ನೀಡೋ ಸಾಂತ್ವಾನ ...ಕಣ್ಣೀರೊರೆಸೋ ಆತ್ಮೀಯ ಕೈ ...

ನಾವೂ ಇದ್ದೀವಿ ಜೊತೆ ಅನ್ನೋ ಭಾವದ ಭರವಸೆ !

ಕೈ ಚಾಚೋ ಆಮಂತ್ರಣದ ಸಂಕೋಲೆ ....ಆಮಂತ್ರಣವಿಲ್ಲದ ಮನೆ (ಮನ)ಯಲ್ಲಿ ಅತೀ ಆಮಂತ್ರಿತನಂತೆ ,ಇಷ್ಟದ ಬಂಧುವಂತೆ ಸತ್ಕರಿಸೋ ಆ ಪರಿ .....

ಭಾವದಾಚೆಗೂ ಹೊರಳೋ ಬದುಕ ಪ್ರೀತಿ .

ಕಣ್ಣ ಭಾಷೆಯನ್ನೂ ಬಿಡದೇ ಅರ್ಥಮಾಡಿಕೊಳ್ಳೋ ಜಾಣತನ .....

ನಿಮ್ಮಗಳ ಮನದಲ್ಲಿನ ಲಾಲಿಪಾಪ್ ಪುಟ್ಟಿ ಅನ್ನೋ ಪ್ರೀತಿಯ ಪುಟ್ಟ ಭಾವ :)

ಗುರುತಿಸೋ ಸಣ್ಣ ನೋವ ಭಾವ ..ಎದುರು ಏನಾಯ್ತೇ ಗೆಳತಿ ಅಂತ ಕೇಳದಿದ್ದರೂ ಆಮೇಲೊಮ್ಮೆ ಯಾಕೋ ಪುಟ್ಟಾ ಬೆಳಿಗ್ಗೆ ಸಪ್ಪೆಯಾಗಿದ್ದೆ ಅಂತ ವಿಚಾರಿಸೋ ನಿನ್ನೇ ಮೊನ್ನೆ ಮಾತಾಡಿದ್ದ ಅದೇ ಗೆಳೆಯ ....!!

 

ಆತ್ಮೀಯತೆಯಂದ್ರೆ ಇದಾ ?.....ಉತ್ತರ ಹುಡುಕೋಕೆ ಹೊರಟಿಲ್ಲ ನಾ ....ಮಾರಾಟಕ್ಕಿಟ್ಟಿರೋದರ ಬಗ್ಗೆ ಜಾಸ್ತಿ ವ್ಯಾಮೋಹ ಒಳ್ಳೆಯದಲ್ಲ !!

ನನ್ನವರಾಗಿ ಆಧರಿಸೋ ,ಖುಷಿಸೋ ,ದುಃಖಿಸೋ ,ಸ್ನೇಹಿಸೋ ನಿಮ್ಮ ಅಪ್ಪಟ ಪ್ರೀತಿಯ ಭಾವಕ್ಕೊಂದು ನಮನ ....

ಈ ಪ್ರೀತಿ ಸಮ್ಮೋಹವಲ್ಲ ...ವ್ಯಾಮೋಹವೂ ಅಲ್ಲ ...ಮುಖ ನೋಡದೇ ಮೂಡಿದ್ದ ಮನಸ್ಸಿನ ಬಂಧ ...ಹತ್ತಿರದ ಬಂಧುವಾಗಿ ಜೊತೆಯಾಗಿ ಕೊನೆಯತನಕ ಕರೆದೊಯ್ಯೋ ಹೇಳಲಾಗದ ಅನುಭವಕ್ಕೆ ಬಂದಿರೋ ಶಬ್ಧ ಸಿಗದ ಶಬ್ಧ ...
ನೀವೇ ನಾಮಕರಿಸಬಿಡಿ ...

ಕೊನೆಯ ತನಕ ಜತನ ಮಾಡಿಯೇನು ನಾನದನ್ನ !

ಭಾವಗಳನ್ನ ಹರಾಜಿಗಿಡದೇ ಜೋಪಾನ ಮಾಡಿದ್ದರೂ ಅದೆಲ್ಲೋ ಧುತ್ತನೆ ಹಾರಿ ನಿಮ್ಮಲ್ಲಿ ,ನಿಮ್ಮ ತೆಕ್ಕೆಯಲ್ಲಿ ಜೋಪಾನವಾಗಿದೆ !

ಕ್ಷಣವೊಂದಕ್ಕೆ ಮನೋ ವ್ಯಾಪಾರಿ ನಾನು ಎಂತೆನಿಸಿ ...ಮತ್ತೊಂದು ಕ್ಷಣಕ್ಕೆ ಬೇರೆ ಯಾರೊಂದಿಗೋ ವ್ಯವಹರಿಸಿದ್ದಲ್ಲ ,ನನ್ನವರಿಗೇ ವ್ಯಾಪಾರ ಮಾಡಿದ್ದೆಂದು ಸಮಾಧಾನಿಸಿ ...

ಮತ್ತದೇ ಬದುಕಲ್ಲಿ ಹಾಗೆಯೇ ಪಯಣಿಸುತ್ತಾ .....

 

               ಮಧ್ಯ ಬರೋ ದಲ್ಲಾಳಿ ಯಾರೋ ತಿಳಿಯದು....

ಆದರೇ...

ಮನದ ಭಾವಗಳ ವ್ಯಾಪಾರಿ ನಾ......

ಹರಾಜಿನಲ್ಲಿ ಬಾಚಿಕೊಂಡ ಭಾವಕ್ಕೆಲ್ಲಾ ಹಕ್ಕುದಾರರು ನೀವೇ ....

ಹಕ್ಕುಗಳನ್ನ ಕಾಯ್ದಿರಿಸಲಾಗಿದೆ  !!