Friday, September 27, 2013

ಪ್ರೀತಿಯಿಂದ

ಅಜ್ಜಾ ,ಅಜ್ಜಿಯ ಕಣ್ರೆಪ್ಪೆಯ ಪ್ರೀತಿ ...ಅಪ್ಪಾ ಅಮ್ಮನ ಬದುಕ ಕನಸು ...ದೊಡ್ಡಪ್ಪ ದೊಡ್ದಮ್ಮನ ಸ್ವಂತ ಮಗನಂತಿರೋ ಮಗ ...
ಪ್ರೀತಿಯ ಮನೆಯ ಮುದ್ದಿನ ಪುಟ್ಟು ....ಅಜ್ಜನ ಮನೆಯಲ್ಲಿ ಯದ್ವಾ ತದ್ವಾ ಕಿಲಾಡಿ ಮಾಡೋ ಎಲ್ಲರನೂ ಸುಸ್ತಾಗಿಸೋ ,ಆಮೇಲಿನ ಒಂದೇ ಮಾತಿಂದ ಎಲ್ಲರೂ ನಗೋ ತರ ಮಾಡೋ ಮುದ್ದು ಮೊಮ್ಮಗ .

ನಂಗೆ ಈ ಕ್ಷಣಕ್ಕೆ ಪಾಪು ...ಮತ್ತೊಂದು ನಿಮಿಷಕ್ಕೆ ಕಾಟ ಕೊಡೋಕಂತಾನೇ ಇರೋನು .....ಎಲ್ಲಾ ವಿಷಯಗಳನೂ ಬಿಡದೇ ರಿಪೋರ್ಟ್ ಮಾಡ್ತಾ ....ಮುದ್ದು ಜಾಸ್ತಿಯಾದಾಗ ಗುದ್ತಾ ,ನಾ ಬೇಸರಿಸೋವಾಗ ದೊಡ್ಡೋರ ತರ ಸಮಾಧಾನಿಸ್ತಾ,
ತೀರಾ ಅನಿಸೋವಷ್ಟು ತಲೆ ತಿಂದು ಆಮೇಲೊಮ್ಮೆ ನನ್ನ ಸಿಟ್ಟಿಗೆ ಬೈಸಿಕೊಳ್ತಾ ...ಅವಾಗಾವಾಗ ಅಪ್ಪನ ಹತ್ರ ನನ್ನ ಬಗ್ಗೆ ದೂರು ಹೇಳ್ತಾ ...ನನ್ನೆಲ್ಲಾ ಡೈರಿಮಿಲ್ಕ್ ನಲ್ಲೂ ಒಂದೊಂದು ಬೈಟ್ ತಗೋಳ್ತಾ ,ನಿನ್ನ ಸಿಲ್ಕ್ ನಲ್ಲಿ ನಾ ಕೇಳಿದ್ರೂ ಒಂದೂ ಬೈಟ್ ಕೊಡ್ದೇ ಮುಖ ತಿರ್ಗಿಸ್ತಾ.....

ಎಲ್ಲಾ ಭಾವಗಳಿಗೂ ಜೊತೆಯಾಗಿರೋ ಗೆಳೆಯ, ನಗುವಿಗೆ ನಗುವ ಸೇರಿಸಿ ,ಅಳುವಲ್ಲೂ ನಗುವ ತರಿಸೋ ಆತ್ಮೀಯಾ , ಜೊತೆಗೆ ನಾನೂ ಇದ್ದೀನಿ ಅಂತಂದು ಅವಾಗಾವಾಗ ತೀರಾ ಅನ್ನೋ ಅಷ್ಟು ಕಾಲೆಳೆಯೋ ಅಣ್ಣಾ ,

ಒಟ್ನಲ್ಲಿ ನಾನು ನನ್ನಲ್ಲಿದ್ದೀನಾ ಅಥವಾ ನಿನ್ನೊಟ್ಟಿಗೆ ನಾ ಇದ್ದೀನಾ ಅನ್ನೋವಷ್ಟು ಗೊಂದಲ ಮೂಡೋ ತರ ಮಾಡೋ ಮುದ್ದು ತಮ್ಮಾ ...

ನಂಗೆ ಅಣ್ಣ ಬೇಕಿತ್ತಮ್ಮಾ ಅಂತ ಪ್ರತಿ ಬಾರಿ ತಮ್ಮನ ರೇಗಿಸೋ ನಾನು ..ನಂಗೂ ಅಕ್ಕ ಬೇಕಿರ್ಲಿಲ್ಲ ಅಮ್ಮಾ ತುಂಬಾ ಕಾಟ ಕೊಡ್ತಾಳೆ ಇವ್ಳು ಅಂತ ಮತ್ತೆ ನನ್ನನ್ನೇ ಕೆಣಕೋಕೆ ಬರೋ ತಮ್ಮಾ...ಇಬ್ಬರೂ ಜೊತೆಯಾಗಿದ್ದಿದ್ದು ತೀರಾ ಕಡಿಮೆ .
ಜೊತೆಯಿದ್ದಾಗ ಮಾಡಿಕೊಂಡ ಜಗಳಗಳೆಷ್ಟೋ ...ತೋರಿದ ಸಿಟ್ಟುಗಳೆಷ್ಟೋ ..ಇವತ್ತು ಮನೆಯಲ್ಲಿ ಎಲ್ಲರೂ ನಮ್ಮಿಬ್ಬರ ಆ ದಿನಗಳ ಜಗಳಗಳ ಹೇಳೋವಾಗ ತಡೆಯದಷ್ಟು ನಗು ಬರುತ್ತಲ್ಲೋ ಪುಟ್ಟಾ ....

ಅಪ್ಪ ನಂಗೆ ಕೊಡಿಸೋ ಎಲ್ಲದ್ದಕ್ಕೂ ನಿನ್ನಿಂದೊಂದು ಡೈಲಾಗ್ ರೆಡಿ ಆಗಿರುತ್ತೆ ...."ಎಲ್ಲಾನೂ ನನ್ನಪ್ಪನೇ ಕೊಡಿಸ್ಬೇಕು ನಿಂಗೆ ..ಇರು ನಿನ್ನ ಹುಡ್ಗ ಸಿಗ್ಲಿ ಎಲ್ಲಾ ವಸೂಲಿ ಮಾಡ್ತೀನಿ" ಅಂತ ತೀರಾ ಗಂಭೀರವಾಗಿ ಹೇಳೋ ನಿನ್ನ ಮಾತುಗಳಿಗೆ ಇಡಿಯ ಮನೆ ಮಂದಿ ಮನ ಬಿಚ್ಚಿ ನಗ್ತಾರಲ್ಲೋ !...


Live to annoy me, pick on me, drive me nuts, but loves me to the core! Yes..... dats my Bro...!!!
You are my world of love .

ಎಲ್ಲರಲ್ಲೂ ನಗುವ ತರೋ ನೀನಂದ್ರೆ ಮುದ್ದು,ನೀನಂದ್ರೆ ನಗು ,ನೀನಂದ್ರೆ ಪ್ರೀತಿ ,ನೀನಂದ್ರೆ ಇಡೀ ಮನೆಯ ಉತ್ಸಾಹದ ಚಂದಿರನಲ್ಲೋ ಹುಡುಗ .

 

ಮನೆಯಲ್ಲಿ ಜಾಗ ಇಲ್ಲದಷ್ಟು ಪ್ರಶಸ್ತಿಗಳಿವೆ ನಿನಗಿಲ್ಲಿಯ ತನಕ ಸಿಕ್ಕಿರೋದು! ಆದರೂ ನೀ ನಂಗೆ ಸಿಕ್ಕಿದ್ದ ಯಾವುದೋ ಸಣ್ಣದೊಂದನ್ನೇ ಎಲ್ಲರಿಗೂ ತೋರಿಸಿ ಇದು ನನ್ನ ಅಕ್ಕಂದಂತ ಖುಷಿಪಡೋದ ನೋಡಿದ್ರೆ ನಂಗೆ ಹೇಳೋಕೆ ಮಾತೇ ಬರಲ್ಲ .

ನೀ ನನ್ನ ತಮ್ಮ ಅನ್ನೋ ಕಾರಣಕ್ಕೆ ಹೇಳಿದ್ದಲ್ವೋ ಪುಟ್ಟಾ ...ನೀನಂದ್ರೆ ನಿಜಕ್ಕೂ ಹೆಮ್ಮೆ ನಂಗೆ ...

ನಂಗೇ ಗೊತ್ತಿರದ ಅದೆಷ್ಟೋ Apps ಗಳು ನಿಂಗೊತ್ತು..ನಾನರಿಯದ ಅದೆಷ್ಟೋ ಪುಸ್ತಕಗಳ ನೀ ಪಟ ಪಟ ಅಂತಾ ಹೇಳೋವಾಗ ಆಶ್ಚರ್ಯದಿಂದ ನಿನ್ನ ನೋಡೋದು ಮಾತ್ರ ನಂಗೆ ಗೊತ್ತು ...ಇವ ಯಾವಾಗಿದನ್ನೆಲ್ಲಾ ಕಲಿತ ,ಯಾವಾಗ ಇವುಗಳ ಓದಿದ ಅಂತ ತಲೆನಲ್ಲಿ ಹುಳ ಬಿಟ್ಕೊಂಡ್ರೂ ನೀ ಹೇಳಲ್ಲ .
ನಿನ್ನಲ್ಲೊಂದಿಷ್ಟು ಚಂದದ ಕನಸುಗಳಿವೆ ...ಆ ಕನಸುಗಳಿಗೆ ಜೊತೆಯಾಗಿ ನಾವೂ ಇದ್ದೀವಿ .

ನಂಗೆ " ಅಕ್ಕಾ " ಅನ್ನೊ ಪದವಿ ಕೊಟ್ಟಿರೋ, ನಾ ನನಗಿಂತ ಜಾಸ್ತಿ ಪ್ರೀತಿಸೋ ತಮ್ಮನ ಹ್ಯಾಪಿ ಬರ್ತ್ ಡೇ ಇವತ್ತು .....
ಜನುಮ ದಿನದ ಪ್ರೀತಿಯ ಶುಭಾಶಯಗಳು ಪುಟ್ಟಾ ..
ಖುಷಿಗಳಿರಲಿ ಬದುಕ ತುಂಬಾ ...

ಕನಸುಗಳಿಗೆ ಜೀವ ತುಂಬೋಕೆ ,ಕೈ ಹಿಡಿದು ನಡೆಸೋಕೆ ,ನಿನ್ನೊಟ್ಟಿಗೆ ನಾನೂ ನಡೆಯೋಕೆ ,ಪ್ರೀತಿಯ ಜಗಳವಾಡೋಕೆ, ಗೆಳತಿಯಾಗಿ,ಅಕ್ಕನಾಗಿ ಜೊತೆಯಿರ್ತೀನಿ ಯಾವತ್ತೂ :)

ಅಗೈನ್ ,ಹ್ಯಾಪಿ ಹ್ಯಾಪಿ ಬರ್ತ್ ಡೇ ...

ಪ್ರೀತಿಯಿಂದ ,
ಅಕ್ಕಾ.

 


 

Tuesday, September 24, 2013

ಮಂಜು ಸರಿದ ಮನದಿಂದ

ಕನಸ ಒಲವ ಜಾರಗೊಡದೆ ,ಕಣ್ಣ ರೆಪ್ಪೆಯ ಒದ್ದೆಯಾಗಿಸದೇ, ಒಂಟಿ ನಡಿಗೆಯ ಹಾದಿಯಲಿ,ಒಂಟಿ ಬೆಂಚಿನ ಮಧ್ಯದಲಿ ಕುಳಿತು ಮಂಜು ಮುಸುಕಿರೋ ಇದೇ ಜಾಗದಿ ,
ಮಂಜು ಸರಿದ ಮನಸ್ಸಿಂದ ಜೋಪಾನ ಮಾಡಬೇಕಿದೆ ನಾ ನಿನ್ನ....
ಕಟ್ಟಿಕೊಂಡ ಕಣ್ಣೀರ ಕಟ್ಟೆ ಒಡೆಯೋಕೂ ಮುನ್ನ...
ಯಾರದೋ ಬೇಸರಕೆ ಇನ್ಯಾರದೋ ಕಾಣಿಕೆ...
ಬೇಸರಿಸದಿರು ಗೆಳತಿ ಅನ್ನೋ ಅವನ ಕೋರಿಕೆ.!

      


 
ಒಂದೆ ಮನಸ ಒಂದೇ ಕನಸ
        ಪಡೆಯುತಿದೆ ಸಮಯ...
ಒಂದೆ ದಾರಿ ಒಂದೇ ಪ್ರೀತಿ
       ಎಣಿಸುತಿದೆ ನಯನ..

ಒಂಟಿ ನಡೆಗೆ ಜೊತೆಯಾಗಿ
          ಬರುವೆ ಎಂದೆ ನೀ...
ಭಾವಗಳ ತುಸು ಜಗಳದಿ
        ಮರೆತು ಹೋದೆ ನಾ...

ಅಂದು ನಿನ್ನ ಮನವ ಮುರಿದು
      ಕಟ್ಟಿಕೊಂಡೆ ಮನದ ಗೋಡೆ.
ಇಂದೆನ್ನ ಮನದ ಆಕ್ರಂದನಕೆ
      ಬಿಕ್ಕುತಿದೆ ಮೌನ ಕಣಿವೆ!

ಒಂಟಿ ಬೆಂಚೂ ಕಾಯುತಿದೆ
     ಹೃದಯ ಭಾರ ಇಳಿಸಲೆಂದು..
ಕಣ್ಣ ಅಂಚೂ ಮುಷ್ಕರಿಸಿದೆ
     ಭಾವ ಹನಿಯ ಧಿಕ್ಕರಿಸೆಂದು!
ಕಣ್ಣ ರೆಪ್ಪೆ ತೋಯದಿರಲಿ
     ಕನಸ ಒಲವ ಜಾರಗೊಡದೆ.

ಮೌನಿಯಾದೆ ನೀನು...
ಸುಮ್ಮನಾದೆ ನಾನು!.


 
(ಫೋಟೋ ಕ್ರೆಡಿಟ್ಸ್: ಶ್ರೀವತ್ಸ ಕಂಚೀಮನೆ.

ನನ್ನದೇ ಮನದೊಂದಿಗೆ ಸ್ಪರ್ಧೆಗೆ ನಿಂತಂತೆ ಭಾಸವಾಯ್ತು ಈ ಚಿತ್ರವ ನೋಡಿ ...ತುಂಬಾ ಭಾವಗಳ ಹಿಡಿದಿಟ್ಟಿರೋ ಚಿತ್ರಕ್ಕೊಂದು ಶರಣು...ಹಾಗೆಯೇ ಅದ ನನ್ನ ಬ್ಲಾಗಿಗೆ ಕೊಟ್ಟಿದ್ದಕ್ಕೂ ಧನ್ಯವಾದ ಜಿ)

  

Friday, September 13, 2013

ಮಾತು ಮುರಿದೇ.... ಮಾತಾಡಿದೆ ....

ಮತ್ತಷ್ಟು ಗೊಂದಲಗಳನ್ನೇ ಬಿಟ್ಟು ಹೋಗೋ ಅಂತರಂಗವ ಪ್ರತಿನಿಧಿಸೋ ಮನದ ಭಾವಗಳನಾಲಿಸು​ತ್ತಾ...


ಕ್ಯಾಂಪಸ್ಸಿಗೆ ಬರೋಕೂ ಮುಂಚೆ ಫ಼ೇಸ್ಬುಕ್ಕ್ಕಿನ ಸಾವಿರ ಸ್ನೇಹಿತರ ಮಧ್ಯ ನೀನೂ ಒಬ್ಬನಾಗಿದ್ದೆ ನಂಗೆ ಅಷ್ಟೇ ! ಯಾಕೋ ನನ್ನೂರ ಸೀನಿಯರ್ಸ್ ನಾ ಹುಡುಕೋವಾಗ ಸಿಕ್ಕಿದ್ದೆ ನೀ..ಆದರೂ ನಾನಾಗೀ ಯಾವತ್ತೂ ಮಾತಾಡಿಸಿರಲಿಲ್ಲ ನಿನ್ನ .ಅದ್ಯಾವತ್ತೋ  ಮಾತಾಡಿ ಆಮೇಲೆ ದಿನ ಪೂರ್ತಿ ಕಾಲೇಜಿನ ವಿಷಯಗಳ ಹೇಳಿ ,ಕಾಲೇಜಿಗೆ ಬರೋಕೂ ಮುಂಚೆ ಕಾಲೇಜಿನ ಸ್ಪಷ್ಟ ಅರಿವು ನೀಡಿದ್ದೆ...ಕಾಲೇಜಿನ ಜೊತೆಗೆ ನೀನೂ ಆತ್ಮೀಯನಾಗಿದ್ದೆ ಆವಾಗ್ಲೆ !

ಆದರೂ ಗೆಳೆಯ ಎಲ್ಲರೊಟ್ಟಿಗೆ ತೀರಾ ಕಾಲೆಳೆದು ಮಾತಾಡೋ ತರಾನೆ ನಾ ನಿನ್ನೊಟ್ಟಿಗೂ ಮಾತು ಶುರುವಿಡ್ತಿದ್ದಿದ್ದು .ತೀರಾ ಹರವದ ಮನದ ಭಾವಗಳ ಬಗೆಗೆ ಯಾವತ್ತೋ ಒತ್ತಾಯ ಮಾಡಿ ಕೇಳಿದ್ದೆ ನೀನು .ನಾ ನಿನ್ನೆದುರು ಕಣ್ಣಂಚ ಹನಿಯ ಜೊತೆ ಮಾತಾಡಿ ಅಮ್ಮ ಬೇಕೆಂದು ಆ ದಿನಗಳಲ್ಲಿ ಬಿಕ್ಕಿದ್ದು ,ನೀ ತೀರಾ ಆತ್ಮೀಯನಾಗಿ ಸಾಂತ್ವಾನಿಸಿದ್ದು ಎಲ್ಲಾ ಕಳೆದು ವರ್ಷವೊಂದಯ್ತಲ್ಲೋ ಹುಡುಗ .

ಚಂದದ ಗೆಳೆತನವಿತ್ತು ಅಲ್ಲಿ ....

ಸ್ವಲ್ಪವೇ ಆತ್ಮೀಯತೆ ತೋರಿದರೂ ಪೂರ್ತಿಯಾಗಿ ಹಚ್ಚಿಕೊಳೋ ನಾನು ನಿನ್ನ ತೀರಾ ಆತ್ಮೀಯತೆಗೆ,ಎಲ್ಲವನೂ ಅರ್ಥಮಾಡಿಕೊಳೋ ಮನಕ್ಕೆ ಅದ್ಯಾವತ್ತೋ ಸೋತಿದ್ದೆ ಅಲ್ಲಿ.ಎಲ್ಲದ್ದಕ್ಕೂ ರೇಗೋ ,ಸಿಡುಕೋ ಹೊಸ ಪ್ರಪಂಚದಲ್ಲಿ ನಿನ್ನೊಬ್ಬನೇ ಜೊತೆಯಲ್ಲಿದ್ದೆ ನಂಗವತ್ತಲ್ಲಿ...ಉಸಿರುಗಟ್ಟಿಸೋ ಊರಲ್ಲಿ, ಪ್ರೀತಿಯ ಮುಖವಾಡವನೂ ಧರಿಸದವರ ಮಧ್ಯ ನೀ ತೀರಾ ವಿಭಿನ್ನವಾಗಿ ಕಂಡಿದ್ದೆ .ಚಿಕ್ಕ ಚಿಕ್ಕ ಬೇಸರಗಳನೂ ಬಿಡದೇ ಸಾಂತ್ವಾನಿಸೋ ಸರಿ ಸುಮಾರು ನನ್ನದೆ ವಯಸ್ಸಿನ ಈ ಹುಡುಗನ ನೋಡಿ ಅದೆಷ್ಟೋ ಬಾರಿ ಅಂದುಕೊಂಡಿದ್ದೆ ನಂಗೂ ನಿನ್ನರ್ಧದಷ್ಟಾದ್ರೂ ಮ್ಯಾಚುರಿಟಿ ಇರ್ಬೇಕಿತ್ತು ಅಂತಾ .!!

ಅತ್ತರೆ ಸಮಾಧಾನಿಸಿ ,ಮನೆಯ ನೆನಪ ಪೂರ್ತಿಯಾಗಿ ಮರೆಸಿ , ಇಡಿ ದಿನ ಮಾತಾಡಿ,ಮುಖ ಊದಿಸಿಕೊಂಡಿದ್ರೂ ಕೊನೆಗೂ ನಗಿಸಿಯೇ ತೀರೋ ನೀನು ಬರಿಯ ಒಬ್ಬ ಫ಼ೇಸ್ಬುಕ್ ಗೆಳೆಯ ಆಗಿರಲಿಲ್ಲ ನಂಗೆ.ಅದಕ್ಕೂ ಮೀರಿದ ಸ್ನೇಹದ ಭಾವವೊಂದ  ನೀ ನಂಗೆ ನೀಡಿದ್ದೆ ಅನ್ನೋದ ನಾ ಪ್ರಾಮಾಣಿಕವಾಗಿ ಒಪ್ಪಿಕೊಳ್ತೀನಿ.

ಆದರೂ ನಿನ್ನ attitude,ego ಗಳ ಮೇಲೆ ನಾ ಅವತ್ತೂ ಬೈದಿದ್ದೆ ...ಯಾವತ್ತೂ ಬೈತೀನೇನೋ ಬಹುಶಃ.

ಮಾಡಿದ ತರಲೆ,ಕ್ಯಾಂಪಸ್ ನಲ್ಲಿ ತಮಾಷೆಗೆ ಮಾಡಿದ ರಾಗಿಂಗ್ ಗೆ ನಿನ್ನಮ್ಮ ನನ್ನ ಸಾರಿ ಕೇಳಿದ್ದು ,ಅಸೈನ್ಮೆಂಟ್ ,ರೆಕಾರ್ಡ್ ಬರ್ಯೋಕೆ ಸಹಾಯ ಮಾಡಿದ್ದು,ನೀ ಕೊಟ್ಟ ಸಿಲ್ಕ್ ನಾ ನಿರಾಕರಿಸಿ  ಎದ್ದು ಬಂದಿದ್ದು ,ಸ್ವಲ್ಪ ನಕ್ಕಿದ್ದು,ಜಾಸ್ತಿ ಅತ್ತಿದ್ದು.ಎಲ್ಲಾ ಹಳೆ ಕಥೆ ..ಯಾವುದೋ ಹೊಸ ಕಥೆ ಶುರುವಾಗೋದ್ರಲ್ಲಿತ್ತೇನೊ .ಮನವ ಕೇಳ ಬೇಕಂತ ಅಂದುಕೊಂಡಿದ್ದು ಸುಳ್ಳಲ್ಲ ..ಆದರೆ ನೀ ಅದಕ್ಕೂ ಅವಕಾಶವ ಕೊಡದ ರೀತಿ ಮಾಡಿಬಿಟ್ಟೆ ಕಣೋ ...

ಪ್ರೀತಿ ಪ್ರೇಮದ ಬಗೆಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದ ಹುಡುಗಿಗೂ ಒಂದು ಸಣ್ಣ ಒಲವಾಗಿತ್ತು ನಿನ್ನಲ್ಲಿ !ಆದರೆ ತೀರಾ ಕಟ್ಟಿಕೊಂಡಿರೋ ನನ್ನದೇ ಮನದ ಬದುಕಲ್ಲಿ ಅದಕ್ಕೂ ಮೀರಿದ ಬದುಕು ಸಾಧಿಸೋದೊಂದಿತ್ತು .ಹಾಗಾಗಿ ಪ್ರತಿ ಬಾರಿ ಬರೋ ವಯೋಸಹಜ ಯೋಚನೆಗಳ ಬದಿಗೊತ್ತಿ ಕೂರೋವಾಗ ಕಷ್ಟ ಅನ್ನಿಸೋದು ..ಆದರೂ ಮಾಡೋ ಅನಿವಾರ್ಯತೆ ನಂದಿತ್ತು(ಇದೆ ಕೂಡಾ).

ಪೂರ್ತಿಯಾಗಿ ದೂರಾಗಿಸಲಾಗದ ನೀನು ಒಂದಿಷ್ಟು ದಿನ ತೀರಾ ಅನಿಸೋ ಅಷ್ಟು ಕಾಡಿದ್ದೆ ಕೂಡಾ.. ತಲೆದಿಂಬ ಒದ್ದೆಯಾಗಿಸಿ ಅತ್ತಿದ್ದೆ  ಕೂಡಾ ....ತೀರಾ ಆತ್ಮೀಯ ಅನ್ನಿಸೋ ಗೆಳತಿಯ ಬಳಿ ಮನದ ದ್ವಂದ್ವಗಳ ಹೇಳಿಕೊಂಡು ಬಿಕ್ಕಿದ್ದೆ ನಾ ...ಆದ್ರೂ ಅವಳ್ಯಾಕೋ ಭಾವಗಳ ಹೊಡೆದಾಟ ನಿಲ್ಲಿಸೋವಲ್ಲಿ ಸೋತು ಹೋಗಿದ್ಲು... ಅವಳ ಭಾವಗಳನ್ನೇ ಎದುರಿಸಲಾರದೆ ಕಂಗಾಲಾಗಿದ್ದ ಅವಳಿಗೆ ನನ್ನ ದ್ವಂದ್ವಗಳ ಹರವಿ ಮತ್ತೆ ಬೇಸರಿಸಿದ್ದೆ ನಾ  .ಆದರೂ ಎದುರು ತೋರುಕೊಡದೇ ನನ್ನ ಪಾಡಿಗೆ ನಾನಿದ್ದೆ.

ಯಾವತ್ತೋ ಸೂಕ್ಷ್ಮವಾಗಿ ಹರವಿದ್ದ ನಾಜೂಕು ಭಾವಕ್ಕೆ ಇವತ್ತಿಷ್ಟರ ಮಟ್ಟಿನ ಪೆನಾಲ್ಟಿ ಕಟ್ಟಬೇಕೆಂಬ ಸಣ್ಣ ಕಲ್ಪನೆ ಕೂಡಾ ನಂದಿರಲಿಲ್ಲ.ಯಾವುದೋ ಬೇಸರದಲ್ಲಿ ನಿನ್ನ ತೋಳಲ್ಲಿ ಕಣ್ಣೀರಾಗಿದ್ದು ಬರಿಯ ಗೆಳತಿಯಾಗಿ ಮಾತ್ರಾ ಅಂದಾಗ "ಹುಚ್ಚಿ ನಿನ್ನಲ್ಲೂ ಒಲವಿದೆ ಅನ್ನೋದು ಗೊತ್ತು ಕಣೇ ,ಯಾಕೆ ಗೊಂದಲಗಳ ಜೊತೆ ದಿನ ದೂಡ್ತೀಯ"ಅಂತಾ ತೀರಾ ಭಾವುಕನಾಗಿ ಸ್ನೇಹಕ್ಕೊಂದು ನಾಮಕರಣ ಮಾಡಿಬಿಟ್ಟಿದ್ದೆ ನೀ..

ಅವತ್ತಿಂದ ಶುರುವಾದ ಗೊಂದಲಗಳು  ನನ್ನನ್ನಿವತ್ತೂ ಕಾಡ್ತಿವೆ ಕಣೋ ...ಯಾಕೋ ಗೆಳೆಯ ಪ್ರೀತಿಯ ವಿಷಯದಲ್ಲಿ ಇಷ್ಟು ದೊಡ್ದ ಗೋಜಲುಗಳು ಉಳಿದುಬಿಡ್ತು ನನ್ನಲ್ಲಿ .

ನನ್ನಲ್ಲೂ ಪ್ರೀತಿಯಿತ್ತ? ಸ್ನೇಹದ ಒಲವು ಪ್ರೀತಿಯ ಕಡಲಾಗಿ ಹರಿದಿತ್ತಾ ?ನಾನ್ಯಾವತ್ತಾದ್ರೂ ನಿನ್ನಲ್ಲಿ ಪ್ರೀತಿಯಿದೆ ಕಣೋ ಅನ್ನೊ ತರಾ ವರ್ತಿಸಿದ್ನಾ? ಅಥವಾ ನನ್ನರಿವಿಗೂ ಬಾರದೇ ನನ್ನ ಮನ ನಿನ್ನೆಡೆಗೆ ವಾಲಿತ್ತಾ ?
ಉತ್ತರವ ಹುಡುಕ ಹೊರಟೆ ನನ್ನಲ್ಲಿರೋ ನೀನು ಕತ್ತಲಾಗಬಾರದು ಅನ್ನೋ ಕಾರಣಕ್ಕೆ . ಸಿಕ್ಕಿದ್ದು ಮಾತ್ರಾ ನನ್ನನ್ನೇ ಧಿಕ್ಕರಿಸಿ ಎದ್ದು ಹೊರಡಲನುವಾಗಿರೊ ನನ್ನದೇ ಮನ !!.
ನಾ ಮನದ ಮಾತನ್ನ ಕೇಳೋಕೆ ಬೇಸರಿಸೋದೂ ಇದೆ ಕಾರಣಕ್ಕೆ .

ಬರಿಯ ಗೋಜಲುಗಳೇ ಕಣ್ಣ ಮುಂದೆ...

ಆದ್ರೂ ಹೇಳ್ತೀನಿ ಗೆಳೆಯ ,ಪ್ರೀತಿಗಿಂತ ನಂಗೆ ಮಧುರ ಭಾವ ನೀಡೋದು ಸ್ನೇಹವೇ ...ನೀ ನಂಗೆ ಒಳ್ಳೆಯ ಗೆಳೆಯನಾಗಿದ್ದೆ .ಅದಕ್ಕೂ ಮೀರಿದ ಭಾವವ ನಾ ಯಾವುದೋ ಸಂದಿಗ್ಧದಲ್ಲಿ,ನನ್ನರಿವಿಗೆ ಬಾರದ ಮನದ ತೊಳಲಾಟಗಳ ಜೊತೆ ತೋರಿಸಿದ್ದರೆ ಮಂಡಿಯೂರಿ ಕ್ಷಮೆ ಕೇಳ್ತೀನಿ ನಾ ನಿನ್ನ...ನಿನ್ನ ಭಾವಗಳ ಪ್ರೋತ್ಸಾಹಿಸೋಕೆ ನಾ ಇನ್ಯಾವತ್ತೂ ಬರಲ್ಲ .
ಪ್ರೀತಿಯ ಹೆಸರಿಗೆ ಮನ ನೋಯೋ ,ಮನ ನೋಯಿಸೋ ಭಾವವ ಎದುರು ನೋಡೋದು ನನಗ್ಯಾಕೋ ಸರಿ ಬೀಳಲ್ಲ .

ಪ್ರೀತಿ ಅಂದ್ರೆ ನನ್ನಲ್ಲಿ ಒಂದಿಷ್ಟು ಬೇರೆಯದೇ ಭಾವಗಳಿವೆ.ಪ್ರೀತಿ ಅಂದ್ರೆ ಬದುಕ ಪೂರ್ತಿ ಕಣ್ರೆಪ್ಪೆಯಲಿಟ್ಟು ಜೋಪಾನ ಮಾಡೋ ಹುಡುಗ,ನಾ ಹೇಳದ ಭಾವಗಳನ್ನೂ ಅರ್ಥೈಸಿಕೊಂಡು ಸಾಂತ್ವಾನಿಸೋ ಮುದ್ದಿಸೋ ಕನಸ ರಾಜಕುಮಾರನ ಬಗೆಗೆ ನಂದೊಂದಿಷ್ಟು ಕನಸುಗಳಿವೆ ....ನಿನ್ನಲ್ಲಿರೋ ಪ್ರೀತಿಯ ಬಗೆಗಿನ ಭಾವಗಳ ಕೇಳಿ ನಾ ದಂಗುಬಡೆದಿದ್ದೆ ...ಇವತ್ತೂ ನಂಗವುಗಳ ಅರಗಿಸಿಕೊಳ್ಳೋ ಶಕ್ತಿ ಇಲ್ಲ..ಆದ್ರೂ ಹಾಳು ಮನ ಯಾಕೇ ನನ್ನಲ್ಲೂ ಒಂದು ಸಣ್ಣ ಒಲವನ್ನ ಬಿತ್ತಿಹೋಯ್ತೊ ನಾ ಕಾಣೆ.

ನನ್ನ ಪ್ರೀತಿಯ ಬಗೆಗಿನ ಚಂದದ  ಭಾವಗಳ ಕೇಳಿ ನಕ್ಕುಬಿಟ್ಟಿದ್ದೆ ನೀ..ಆದರೂ   ಬೇರೆಯವರ ಭಾವಗಳಿಗೆ ಸ್ವಲ್ಪ ಆದ್ರೂ ಗೌರವಿಸೋ ಮನ ನಿನ್ನದಾಗಲಿ ಅಂತಷ್ಟೇ ನಾ ಹೇಳೋದು.ತಪ್ಪು ನಿಂದಲ್ಲ .ತಪ್ಪು ನನ್ನದೇ ಆದೀತು . ಗೆಳೆತನದ ಆ ದಿನಗಳಲ್ಲಿ ನನ್ನನ್ನಷ್ಟು ಇಷ್ಟ ಪಟ್ಟ ನಿನ್ನ ಮನವನ್ನ ತಪ್ಪು ಅಂತ ಹೇಳೋಕೆ ನಂಗೂ ಕಷ್ಟವಾದೀತು . 

ನಾ ಕಟ್ಟಿಕೊಂಡ ಬದುಕೇ ಹೀಗೆ..ನಿಂಗಾಗಿ ನಾ ಬದಲಾಗಲಾರೆ...ಅವತ್ತು ಬದಲಾಗೋಕೆ ನೀ ನನ್ನ ಗೆಳೆಯನಾಗಿ ಆದ್ರೂ ಉಳಿದಿದ್ದೆ ..ಆದರಿವತ್ತು ಪ್ರೀತಿಯ ಹೆಸರಲ್ಲಿ ಮನ ಹೊಕ್ಕು ಎಲ್ಲರೂ ಇಷ್ಟಪಡೋ ಗೆಳೆತನವನ್ನೂ ಕೊಂದು ಎದ್ದು ಹೋದೆ ಅನ್ನೋದೆ ನನ್ನ ಬೆಸರ.

ಎಲ್ಲಾ ಭಾವಗಳನೂ ಚಂದದಿ ಸಲುಹೊ ನಂಗೂ ನೀ ಎದ್ದು ಹೋದುದ್ದು ನೆಮ್ಮದಿ ಆಯ್ತೆಂದು ಅನ್ನಿಸೋವಾಗ ಅರಿವಿಗೆ ಬರುತ್ತೆ ನೀ ನನ್ನನ್ನೆಷ್ಟು ಬದಲಿಸಿಬಿಟ್ಟಿದ್ದೆ ಅಂತಾ...

ಆದ್ರೂ ಗೆಳೆಯ ....ಗೆಳೆಯನಾಗಿದ್ದಾಗ ಇದ್ದ ಆ ನಿನ್ನ ಮುದ್ದು ಮನವ ನಾ ಇವತ್ತೂ ಹುಡ್ಕ್ತಿದೀನಿ..


 
ನಿನ್ನೊಟ್ಟಿಗೆ ಮಾತಾಡಿದ್ದಕ್ಕಿಂತ ಮಾತು ಮುರಿದು ಎದ್ದು ಬಂದಿದ್ದೆ ಜಾಸ್ತಿ. ಇಲ್ಲಿ ನಾ ನಾನಾಗಿರಲೇ ಇಲ್ಲ..ಪೂರ್ತಿಯಾಗಿ ಮಾತಾಡೋ ನೀ ಮೌನಿಯಾಗಿ ಕೇಳುತ್ತಿದ್ದೆ...ಮೌನಿಯಾಗುಳಿಯಬೇಕಿದ್ದ ನಾ ಅದೇನೋ ಕಾಣದ ಕಾರಣಕ್ಕೆ ಮಾತಾಡಿ ಮನ ನೋಯಿಸಿದ್ದೆ...

ಯಾರೊಟ್ಟಿಗೂ ಜಗಳ ಮಾಡದ ನಾ ಅದ್ಯಾಕೇ ನಿನ್ನ ಪ್ರತಿ ಮಾತಿಗೂ ಕೆಂಡ ಕಾರ್ತಿದ್ನೋ ನಂಗಿವತ್ತೂ ಗೊತ್ತಿಲ್ಲ.

ನಿನ್ನಲ್ಲಿರೋ ಪ್ರೀತಿಯ ಮನವ ಮತ್ತೂ ನೋಯಿಸೋ ಇರಾದೆ ನಂಗಿಲ್ಲ ಕಣೋ .ಭಾವಗಳೇ ಇಲ್ಲದ ಗೆಳತಿಯೂ ನಿನ್ನ ಬಗೆಗೆ ಒಂದಿಷ್ಟು ಸಣ್ಣ ,ಸೂಕ್ಷ್ಮ ಭಾವಗಳ ಇಟ್ಟುಕೊಂಡುಬಿಟ್ಟಿದ್ಲು ನೋಡು.

ಎಲ್ಲರ ಜೊತೆ ಸಲಿಗೆಯಿಂದ ಮಾತಾಡೋ ನನ್ನದೇ ಸ್ವಭಾವಗಳ ಬಗೆಗೆ ಬೇಸರವಾಗೋ ಅಷ್ಟರ ಮಟ್ಟಿಗೆ ಮನ ಮುರಿದೆ ನೀ.ಪ್ರೀತಿ,ಸ್ನೇಹದ ಗೊಂದಲದಲ್ಲಿ ನಾನೂ ಸ್ವಲ್ಪ ನಲುಗಿದ್ದೆ ..ಆದರೂ ಇವತ್ತು ಹೇಳ್ತೀನಿ ..ತೀರಾ ತದ್ವಿರುದ್ದ ಇರೋ ನನ್ನ ನಿನ್ನ ಭಾವಗಳಲ್ಲಿ ಪ್ರೀತಿಯ ಕಲ್ಪನೆಯೂ ವಿಚಿತ್ರ ಅನ್ನಿಸ್ತಿದೆ ನಂಗೆ .ಆದರೂ ನೀ ನನ್ನ ಮೊದಲ ಒಲವು ಅನ್ನೋದು ನನ್ನ ಮನಕ್ಯಾಕೋ ಸಹ್ಯವಾಗ್ತಿಲ್ಲ ಇವತ್ತು.ಸಣ್ಣದಾಗಿದ್ದ ಒಲವ ಚಿವುಟಿ ನಂಗೆ ನಾ ನೋವು ಮಾಡಿಕೊಂಡ್ರೂ ಆ ನೋವ್ಯಾಕೋ ನನ್ನ ಕಾಡ್ತಿಲ್ಲ ಇವತ್ತು...ಮಾಸೋ ಗಾಯದ ತರಹ .

ಭಾವಗಳ ಜೊತೆ ಬದುಕು ಕಟ್ಟಿಕೊಂಡ ಭಾವಗಳೇ ಇಲ್ಲದ ತರಹ ನಿನ್ನ ಧಿಕ್ಕರಿಸಿ ಎದ್ದು ಬಂದ ಗೆಳತಿಯನ್ನೊಮ್ಮೆ ಕ್ಷಮಿಸಿ ಬಿಡು.

ಖುಷಿ ಪಟ್ಟೀತು ನನ್ನೀ ಮನ.

ತೀರಾ ಹರವಲಾಗದ ಖಾಸಗಿ ಭಾವಗಳ ನನ್ನಲ್ಲೇ ಇರಿಸಿಕೊಂಡು ,ನನಗೇ ಅರ್ಥವಾಗದಿರೋ ನನ್ನದೇ ಮನದ ತೊಳಲಾಟಗಳ ಆಶ್ಚರ್ಯದಿಂದ ದಿಟ್ಟಿಸಿ ನಿಟ್ಟುಸಿರಿನೊಂದಿಗೆ ವರ್ಷದ ಹಿಂದಿನ ಅದೇ ಹುಡುಗಿಯಾಗಿ .....



 
ಕಣ್ಣಂಚ ಹನಿಯಲ್ಲಿ ಬೀಳ್ಕೊಟ್ಟಿದ್ದು ವರ್ಷವೊಂದರ ಮಟ್ಟೀಗಾದ್ರೂ ತೀರಾ ಹಚ್ಚಿಕೊಂಡ ಗೆಳೆಯನಾಗಿದ್ದೆ..ಮಧುರ ಪ್ರೀತಿಯಾಚೆಗೂ ಗೆಳೆತನದ ಒಲವ ಹುಡುಗನಾಗಿದ್ದೆ ಅಂತ ಮಾತ್ರ .ಹುಶಾರಿಲ್ಲದಾಗ ಮಾತಾಡಿದ್ದೂ ಇದೇ ಕಾರಣಕ್ಕೆ .ಆದರೂ ತಪ್ಪು ನಂದೆ ,ನಾ ನಿನ್ನಲ್ಲಿ ಪ್ರೀತಿಯಾಗೋ ತರ ನಡಕೊಂಡೆ ಅಂತ ನನ್ನದೇ ಮನ ನನ್ನ ಬೆರಳು ಮಾಡಿ ತೋರೋವಾಗ ಬಿಕ್ಕಿ ಬಿಕ್ಕಿ ಅಳಬೇಕಂದುಕೊಳ್ತೇನೆ..ಆದ್ರೂ ಪಾಪಿ ಕಣ್ಣೀರಿಗೂ ನನ್ನ ಮೇಲೆ ಬೇಸರವಾದಂತಿದೆ..

ಸಲುಹಿಕೊಂಡಿದ್ದ ಗೆಳೆತನಕ್ಕೆ ನನ್ನದೊಂದು ಋಣದ ನಮನ ..

ನೆನಪಾಗಿಯೂ ನಾ ನಿನ್ನ ಪ್ರೀತಿಸಲಾರೆ ಇನ್ನು .


 
ಬದುಕ ಪೂರ್ತಿ ಗೆಳತಿಯಾಗಿ ಪ್ರೀತಿಯ ಮಧುರ ಭಾವಗಳ ಮಾತ್ರ ನಿನ್ನಿಷ್ಟದಂತೆ ಹೊತ್ತು ತರೋ ಹುಡುಗಿ ಸಿಗಲಿ ಅಂತಾ ಮನ ಪೂರ್ತಿ ಹಾರೈಸಿ ಕಣ್ಣಂಚ ಹನಿಗಳ ಜೊತೆ ಬೀಳ್ಕೊಡ್ತಾ...

ನಿಂಗೆ ಬೆನ್ನು ಮಾಡಿ ನಡೆದು ಬಂದಾಗಿದೆ..ಮತ್ಯಾವತ್ತೂ ಬದುಕಿಗೆ ಎದುರಾಗಿ ನಿಂತು ಮತ್ತೇ ಬೇಡದಿರು ನೀ ಎನ್ನ...ನನ್ನ ಬದುಕಲ್ಲೇ ಕೊನೆಯಾದೀತು ಅಥವಾ ನಿನ್ನಿರುವಿಕೆಯ ಪೂರ್ತಿಯಾಗಿ ಅಲಕ್ಷಿಸಿ ನೀ ಇಷ್ಟಪಡದ ಭಾವಗಳೇ ಇಲ್ಲದ ಗೆಳತಿ ಧಿಕ್ಕರಿಸಿ ಹೊರಟಾಳು .

Saturday, September 7, 2013

ಪಾರ್ಟ್ ಟೈಮ್ ಸ್ಟೂಡೆಂಟ್ ...ಫ಼ುಲ್ ಟೈಮ್ ನಿರುದ್ಯೋಗಿಯಾಗಿ ...

ಹಂಗೆ ಸುಮ್ನೆ ....

ಓದೋಕೂ ಮೊದ್ಲೇ ಹೇಳ್ತಿದೀನಿ ..ಓದ್ಕೊಂಡು ತೀರಾ ಕಾಲ್ ಎಳ್ಯೋ ಹಂಗಿಲ್ಲ ...ಕಾಲ್ ಎಳ್ಸ್ಕೊಂಡು ಎಳ್ಸ್ಕೊಂಡು ಉದ್ದ ಆಗ್ಬಿಟ್ಟಿದೆ ಅನ್ನೋ ಸಣ್ಣ ಅನುಮಾನ.

ಹೈಕ್ಲಾಸ್ ನೆಟ್ ಸ್ಪೀಡ್ ಗೊಂದು ಉದ್ದುದ್ದ ನಮಸ್ಕಾರ ಮಾಡಿ ....

ಅರ್ಪಣೆ,

ಯಾಕೆ ಹುಡ್ಗಿ ತುಂಬಾ ಫೀಲಿಂಗ್ ಸ್ಟೋರಿ ಬರೀತಿಯಾ ಅನ್ನೋ ಭಯಂಕರ ತರ್ಲೆಗಳಿಗಾಗಿ....

ಹೆಂಗಿದ್ರೂ ಪಿಟೀಲು ಬಾರ್ಸೋದ್ ಇದ್ದಿದ್ದೆ ಅಲ್ವಾ ?ಮತ್ಯಾಕೇ ಮುನ್ನುಡಿ .

ಮುನ್ನುಡಿ ,ಪೀಠಿಕೆ ಇಲ್ದೇ ಶುರು ಮಾಡೋಣ ..(ಸ್ವಲ್ಪ ಆದ್ರೂ ಕಣ್ಣು ,ಕಿವಿ ಉಳ್ಕೊಳ್ಳಿ ನಿಮ್ದು )

ಫೇಸ್ಬುಕ್,ವಾಟ್ಸ್ ಅಪ್ ,ಚಾಟ್ ಹಿಸ್ಟರಿ,ಕ್ಲಾಸ್ ರೂಮ್ ಸ್ಲೀಪ್, ಕ್ಯಾಂಪಸ್ ಗಾಸಿಪ್ಸ್,ಕಾಫಿ ಡೇ ,ರೈಡ್ಸ್ ಎಲ್ಲಾ ಮುಗ್ದು ಯಾಕೋ ತುಂಬಾ ಪ್ರೀ ಇದೀನಿ ಅನ್ಸೋಕ್ ಶುರುವಾದಾಗ ಮಾತ್ರ ಇಲ್ಲೊಂದು ಅಟೆಂಡೆನ್ಸ್ ಹಾಕೋದು ...ತುಂಬಾ ದಿನ ಆಯ್ತು ಕ್ಲಾಸ್ ಅಟೆಂಡ್ ಮಾಡಿ ಅಂತ ಈಗಷ್ಟೇ ಜೋರು ಮಾಡಿದ ಅಣ್ಣಂಗೆ ಒಂದು ಚಿಕ್ಕ ಗೆಸ್ಟ್ ಅಪಿಯರನ್ಸ್ ಕೊಟ್ಟು ಸಮಾಧಾನ ಮಾಡ್ಬಿಟ್ಟು ಹೋಗೋಕೆ ಬಂದೆ ....ಇಷ್ಟಕ್ಕೆ ನಿಮ್ಗೂ ಸುಸ್ತ್ ಆದ್ರೆ ನನ್ ಪುಣ್ಯ ..ಮತ್ತೆ ರೆಗ್ಯುಲರ್ ಕ್ಲಾಸ್ ಅಟೆಂಡ್ ಮಾಡು ಅನ್ನಲ್ವಲ್ಲಾ :ಫ್

ಪಾರ್ಟ್ ಟೈಮ್ ಸ್ಟುಡೆಂಟ್ (ಫುಲ್ ಟೈಮ್ ನಿರುದ್ಯೋಗಿ) ಆಗಿ ತುಂಬಾ ದಿನ ಆಗಿರೋದ್ರಿಂದಾನೇ ಇರ್ಬೇಕು ಹಿಂಗೆ ಸೋ ಕಾಲ್ಡ್ ಫೀಲಿಂಗ್ ಸ್ಟೋರಿಯ ಹಿಂದಿರೋ ಇನ್ಸ್ಪಿರೇಷನ್ .

ಯಾಕೋ ಜನ ಚೆಂಜ್ ಕೇಳ್ತಿದಾರೆ ...

ಅದ್ಕಾಗಿ ಇದು :ಫ್

ಯಾಕೋ ಗೊತ್ತಿಲ್ಲಪ್ಪ ..ಮೊದಲ್ ನೆನಪಿಗೆ ಬರೋದೆ ಆ ಹುಡ್ಗ (ಯಾವ್ ಹುಡ್ಗ ಅಂತ ಕೇಳೋ ಹಂಗಿಲ್ಲ .....ಹೆವೀ ಕನ್ಪ್ಯೂಷನ್ ಆಗುತ್ತೆ ಈ ಪ್ರಶ್ನೆ)

ಅವನ್ ನೆನ್ಪಾದ್ರೆ ಮುಗೀತು ಬಿಡಿ ...ಸಾಲು ಸಾಲು ಬ್ರೇಕಪ್ ಸ್ಟೋರೀಸ್ ಎದುರು ಬಂದಂಗೆ (ಹುಡ್ಗ ತುಂಬಾ ಬೋರಿಂಗ್ ಅಂದ್ಕೊಂಡ್ರಾ ...ಎಕ್ಸಾಟ್ಲೀ )

ಕಷ್ಟ ಪಟ್ಟು ಅವ್ನಾ ನೆನಪ್ ಮಾಡ್ಕೊಳ್ದೇ ಇದ್ದಾಗ ಹಿಂಗೆ ನಿಮ್ಮ ತಲೆ ತಿನ್ನೋಕೆ ಬರ್ತೀನಿ :ಫ್( ಆ ಹುಡ್ಗಾನೇ ಯಾವಾಗ್ಲೂ ನೆನಪಾಗ್ತಾ ಇರ್ಲಿ ಅಂದ್ರಾ ? ಏನೋ ...ಕೇಳ್ಸಿಲ್ಲಪ್ಪ ನಂಗೆ )

ಬದ್ಕಿದೀಯ ಅಂತ ಕೇಳ್ದ್ರೆ ತಕ್ಷಣಕ್ಕೊಂದು ಮೇಸೇಜ್ ಬರುತ್ತೆ ...ನೀವೇ ಇನ್ನೂ ಬದ್ಕಿರೋವಾಗ ನಾವ್ ಬದ್ಕಿರೋದು ಹೆಚ್ಚಲ್ಲ ಬಿಡಿ ಅಂತ ...!

ತುಂಬಾ ದಿನದಿಂದ ನಾಪತ್ತೆಯಾಗಿದ್ದ ಗೆಳತಿ ಕೂಡಾ ಮಧ್ಯ ರಾತ್ರಿ ಡೈಲಾಗ್ ಹೇಳಿ ಅಂತೂ ತಾನೂ ಬದ್ಕಿದೀನಿ ಅಂತ ತೋರ್ಸ್ತಾಳೆ .ಮಿಸ್ ಕಾಲ್ ಗೂ ದುಡ್ಡು ಹೋಗುತ್ತೆ ಅನ್ನೋ ತರ ಆಡಿ ಆಮೇಲೊಮ್ಮೆ ನಂಗ್ಯಾಕೋ ಮಿಸ್ ಕಾಲ್ ಕೊಡೋಕೂ ಮೂಡ್ ಇರ್ಲಿಲ್ಲ ಅಂತ ಭಯಂಕರ ಡೈಲಾಗ್ ಹೇಳಿ ರಾತ್ರಿ ಪೂರ್ತಿ ಯಾಕಪ್ಪ ಈ ಹುಡ್ಗಿ ಹೀಗೆ ಮಾತಾಡಿದ್ಲು ಅಂತ ಯೋಚ್ನೆ ಮಾಡಿ (ಯಾವ್ ಹುಡ್ಗನ ಜೊತೆ ಬ್ರೇಕ್ ಅಪ್ ಆಯ್ತಪ್ಪ ಇವ್ಳದ್ದು ಅಂತ),ಬೆಳಿಗ್ಗೆ ಕ್ಲಾಸ್ ಅಟೆಂಡ್ ಮಾಡೋದು ಲೇಟ್ ಆಗಿ ...ಉಫ಼್ ...ಯಾರೀಗ್ ಹೇಳೋಣಾ ನಮ್ಮ ಪ್ರಾಬ್ಲಮ್ಮು ....

 

ಅದೇ ಕಿತ್ತೊಗಿರೋ ಲೈಫ಼ು ,ಅದೇ ಕ್ಯಾಂಪಸ್,ತಾವೇ ಹುಡ್ಕಿದ್ದೇನೋ ಸಬ್ಜೆಕ್ಟ್ ಗಳನ್ನ ಅನ್ನೋ ತರ ಪೋಸ್ ಕೊಡೋ ಜುನಿಯರ್ ಲೆಕ್ಚರ್ಸ್ ,೨೪ ಗಂಟೆ ಕಡ್ಮೆ ಆಯ್ತೇನೋ ಅನ್ನೋ ಭಾವ ಕೊಡೋ ಅಸೈನ್ ಮೆಂಟ್ಸ್, ಕ್ಯಾಂಟೀನಿನಲ್ಲಿ ನಾವೇ ಊಹಿಸಿಕೊಳೋ ತಿಳಿಯದ ರೆಸಿಪಿ ,ತೀರಾ ರೆಗ್ಯುಲರ್(?) ಆಗಿ ಅಟೆಂಡ್ ಮಾಡೋ ಕ್ಲಾಸಸ್ ,ಲೇಟ್ ಎಂಟ್ರಿ ಕೊಡೋ ಹುಡುಗಂಗೆ ಗೋಳು ಹೊಯ್ಕೊಳೋ "ಓಊಊ" ಸೌಂಡ್ ,ಡೈಯಾಸ್ ನಲ್ಲಿ ಪೋಸ್ ಕೊಡೋ ಲೆಕ್ಚರ್ಸ್ ಇಂಗ್ಲೀಷ್ ನಲ್ಲಿ ಸರಿಯಾದ ವಾಕ್ಯ ಹುಡುಕೋಕೆ ಹೋಗಿ ಕಂಟ್ರೋಲ್ ಆಗದ ನಗು, ಆಮೇಲಿನ ಅರ್ಧ ಗಂಟೆ heart touching ಕೊರೆತ ಅಬೌಟ್ how to behave in the class,

ಮೊಸ್ಟ್ imp :ಇಂಟರ್ನಲ್ ಹಿಂದಿನ ದಿನ ಎದ್ದು ಬಿದ್ದು ಜೆರಾ಼ಕ್ಸ್ ಹುಡುಕೋ ಗೋಳು.

ಲೈಫ಼್ ನಲ್ಲಿ ನಾವೂ ಬ್ಯುಸಿ ಆಗ್ತೀವಿ ಅಂತ ಗೊತ್ತೇ ಇರ್ಲಿಲ್ಲ !!

feeling proud :P

ಗ್ಯಾಪ್ ನಲ್ಲೇ ಹೆವೀ ಚೇಂಜ್ ಆಗ್ಬಿಡ್ತು ಅಂದ್ರೆ ನಂಬ್ಲೇ ಬೇಕು ....

ಕ್ಲಾಸ್ ಅಂದ್ರೆನೇ ಗೊತ್ತಿರ್ಲಿಲ್ಲ ..ಈಗ ಬಂಕ್ ಅನ್ನೋ ಶಬ್ಧವ ಎಲ್ಲೋ ಕೇಳಿದಂಗೆ ಅನ್ನಿಸ್ತಿದೆ .

ಅಸೈನ್ ಮೆಂಟ್ಸ್, ರೆಗ್ಯುಲಾರಿಟಿ ಗೆ ಇನ್ನೊಂದು ಹೆಸ್ರು ನಾವೇ ಏನೋ ಅಂತನಿಸ್ತಿದೆ .

ಸ್ಪೈಕ್ಸ್, ಲೊ waist ಹುಡ್ಗನ ಎದ್ರು ತೀರಾ ಡೀಸೆಂಟ್ ಆಗಿ ಫ಼ಾರ್ಮಲ್ಸ್ ಹಾಕೋ ಹುಡ್ಗನೇ ಲೈಟ್ ಆಗಿ ಇಷ್ಟ ಆಗ್ತಿದಾನೆ ...

ಪರ್ಫ಼್ಯೂಮ್ ಹಾಕೋ ಹುಡುಗ್ರನ್ನ ನೋಡಿದ್ರೆ ಹೊಟ್ಟೆ ತೊಳ್ಸುತ್ತೆ ಈಗೀಗ !

ಜೂನಿಯರ್ಸ್ ನಾ ಇಂಪ್ರೆಸ್ ಮಾಡೋಕಂತಾ ಬ್ರೇಕ್ ನಲ್ಲಿ ಸರ್ಕಸ್ ನಡೆಸೋ ಡಬ್ಬಾ ಸೀನಿಯರ್ಸ್ ನಾ ನೋಡಿ ಕರುಳು ಹಿಂಡುತ್ತೆ ಕಣ್ರೀ ಅಂದ್ರೇ ಯಾವ್ ರೇಂಜ್ ಗೆ ತಪ್ ತಿಳೀತೀರಾ ....

ತೀರಾ ಸೆಂಟಿಯಾಗಿ ಪ್ರಪೋಸ್ ಮಾಡೋ ಹುಡ್ಗನ್ನ ನೋಡಿ ಜೋರಾಗಿ ನಗ್ಬೇಕು ಅನ್ಸುತ್ತೆ ..ಪಾಪ ಹುಡ್ಗಂಗೆ ಒಳ್ಳೆದಾಗ್ಲಿ ಅಂದ್ರಾ ?

ಇನ್ನು ನಾವಂತೂ ಬಿಡಿ ....fully ಡೀಸೆಂಟ್ ಆಗ್ಬಿಟ್ವಿ ....ಹತ್ತು ಕ್ರಶ್ ಆಗ್ತಿದ್ದ ಜಾಗದಲ್ಲಿ ಒಂದೂ ಕ್ರಶ್ ಆಗ್ತಿಲ್ಲ ..ಯಾವ್ ಹುಡ್ಗನ್ ಮೂತಿನೂ ಸೆಟ್ ಆಗಲ್ಲ ...ಕ್ಯಾಂಪಸ್ಸೇ ನಮ್ದು ಅನ್ನೋ ಭಾವವ ಬಿಟ್ಟು ಯಾರದ್ದೋ ಕ್ಯಾಂಪಸ್ ಅಂತ ಬರೀ ಗೇಟ್ ತನ್ಕ ಮಾತ್ರ ಕೇಳೋ ಅಷ್ಟೇ ದೊಡ್ಡದಾಗಿ ಮಾತಾಡ್ತೀವಿ ....ಕ್ಯಾಂಟೀನ್ ನಡೀತಿರೋದು ನಮ್ದೇ ದುಡ್ದಲ್ಲೇನೋ ಅನ್ನೋ ಸಣ್ಣ ದೌಟ್ ಬೇರೇ ಇದೆ..

ಮನೆಯಲ್ಲೂ ಅಷ್ಟೇ ...ವಾಟ್ಸ್ ಅಪ್ ಬಿಟ್ಟು ಬೇರೇ ಏನನ್ನೂ ಕಣ್ಣೆತ್ತೂ ನೋಡಲ್ಲ(ಇನ್ನೇನ್ ಕೈ ಎತ್ತಿ ನೋಡಕ್ ಆಗುತ್ತಾ)...ತುಂಬಾ ಒಳ್ಳೆವ್ರಾಗಿದೀವಿ ಅನ್ಕೊಂಡ್ರಾ ...ಹಂಗೇನೂ ಇಲ್ಲ ..ವಾಟ್ಸ್ ಅಪ್ ಚಾಟ್ನಲ್ಲೇ ಟೈಮ್ ಮುಗ್ದಿರುತ್ತೆ ಅಷ್ಟೇ !..ಒಂದಿಷ್ಟು ಸೀಕ್ರೆಟ್ ಗ್ರುಪ್ ಗಳಲ್ಲಿ ಬೇಜಾನ್ ಕಾಲ್ ಎಳ್ಕೊಂಡು ,ದೇಶದ ಎಲ್ರದ್ದೂ ಕಾಲ್ ಎಳ್ದು ,ಬ್ಯಾಟರಿ ಲೋ ತೋರ‍್ಸಿ ಅದೇ ಸ್ವಿಚ್ ಆಫ಼್ ಆದ್ಮೇಲೆ ಮಲ್ಗಿದ್ರೆ ಅವತ್ತಿನ ದಿನ ಸಾರ್ಥಕ....

ಆದ್ರೂ ಸ್ವಲ್ಪ ಒಳ್ಳೆವ್ರಾಗ್ಬೇಕು ಇನ್ನಾದ್ರೂ (ಬ್ರಾಂಚ್ ಎಂಟರ್ ಆಗಿದೀವಿ ಅಂತಾನಾ ಕೇಳಿದ್ರೆ ನಿಮ್ಗೂ ನಮ್ ಲೆಕ್ಚರ್ಸ್ ಗೂ ಏನೂ ವ್ಯತ್ಯಾಸ ಇಲ್ಲ ಅಂತ ಘಂಟಾನುಘಂಟವಾಗಿ ಹೇಳ್ಬಿಡ್ತೀನಿ ಅಷ್ಟೇ ).

ಹಳೆ ಹುಡುಗರಿಗೆಲ್ಲಾ ಒಂದು ಸೈಲೆಂಟ್ ಬಾಯ್ ಹೇಳಿ ತೀರಾ ಉಲ್ಟಾ ಆದ ನಮ್ಮದೇ ಟೇಸ್ಟ್ ಗಳ್ನಾ ಟ್ರಾಕ್ ಗೆ ತರೋ ಶತ ಪ್ರಯತ್ನವ ಮಾಡ್ಲೇ ಬೇಕು ಇನ್ನು ....

ವಾಟ್ಸ್ ಅಪ್ ಗೆ ಬಾ,ಸ್ಕೈಪ್ ಗೆ ಬಾ, ಅಲ್ ಬಾ ಇಲ್ ಬಾ ಅಂತ ಬ್ಲಾ ಬ್ಲಾ ಮಾಡಿದ್ರೆ ಒದೆ ಬೀಳುತ್ತೆ ಅಷ್ಟೇ ....

ಒಂದ್ ರೌಂಡ್ ಅಜ್ನಾಥ ವಾಸ ಮುಗಿದ್ಮೇಲೆ ಸಿಗ್ತೀನಿ ಮತ್ತೆ ತಲೆ ತಿನ್ನೋಕೆ ..ಅಲ್ಲಿ ತನ್ಕ ಆ ತಲೆಗಳ್ನಾ ಜೋಪಾನ ಮಾಡ್ಕೊಳಿ.

ಗ್ಯಾಪಲ್ಲಿ ಟೈಮ್ ಇದ್ರೆ ...ಮೊಬೈಲ್ ನಲ್ಲಿ ಬಿಟ್ಟಿ ಕರೆನ್ಸಿ ಇದ್ರೆ ಅವಾಗಾವಾಗ ನೀವೂ ಬದ್ಕಿದೀರ ಅಂತ ಹೇಳ್ತಿರಿ ...ಇಲ್ಲಾ ಫೋಟೋಕ್ಕೆ ಹಾರ ಹಾಕಿ ಕೈ ಮುಗ್ಯೋಕೆ ಗೊತ್ತಾಗಲ್ಲ ಅಂತಷ್ಟೇ.

* * *

ಹಳೆ ಹುಡ್ಗ ಯಾರಂತ ಕೇಳೋ ಹಂಗಿಲ್ಲ ....ಹೊಸ ಹುಡ್ಗನ್ ಹೆಸ್ರೂ ಕೇಳೋ ಹಂಗಿಲ್ಲ ....ಏನ್ ಹುಡ್ಗೀರಪ್ಪ ಅಂತ ಬೈಯ್ಯೋ ಹಂಗಿಲ್ಲ ...ಎಷ್ಟ್ ನೀಟ್ ಆಗಿ ಕೊರಿತಾಳೆ ಅಂತಾನೂ ಉಗ್ಯೋ ಹಂಗಿಲ್ಲ .....

ಟೊಟಲ್ಲಿ ..... ಉಫ಼್ .

(ಬ್ಲಾಗ್ ಅನ್ನೋದು ರಾಗಿ ಮುದ್ದೆ ಹೋಟೆಲ್ ಆಗ್ಬಾರ್ದು ...ಆವಾಗಾವಾಗ ಮಸಾಲ್ ಪುರಿನೂ ಮಾಡ್ತಿರ್ಬೇಕು ಅಂತ ನೀಟ್ ಆಗಿ ಡೈಲಾಗ್ ಹೇಳಿದ್ದ ಗೆಳೆಯಂಗೆ ......ಮಸಾಲ್ ಪುರಿನಲ್ಲಿ ಸ್ವಲ್ಪ ಪುರಿ ಕಡ್ಮೆ ಇದೆ ಅನ್ಸುತ್ತೆ ,,ಅಥ್ವಾ ಪಾನಿ ಪುರಿ  ಆಯ್ತು ಅನ್ಸುತ್ತೆ ಕಣೋ ಸ್ವಲ್ಪ ಅಡ್ಜಸ್ಟ್ ಮಾಡ್ಕೋ :ಫ್ )