Friday, November 22, 2013

ಸುಮ್ ಸುಮ್ನೆ

ಏನೋ ಕಳಕೊಂಡ ಭಾವದಲ್ಲಿತ್ತು ನಿನ್ನೆಯ ಇಳಿ ಸಂಜೆ.ಸುಮ್ಮನೆ ಟೆರೇಸ್ ನಲ್ಲಿ ಒಂದರ್ಧ ಗಂಟೆ ಕೂರೋಣ ಅಂತ ಹೋದ್ರೆ ಎದುರು ಮನೆಯ ಟೆರೇಸ್ನಲ್ಲಿ ನಿಂತಿದ್ದ ಕೆಂಪಂಗಿಯ ಹುಡುಗ ದುರುಗುಟ್ಟಿಕೊಂಡು ನೋಡುತ್ತಿದ್ದ. ಸಿಗರೇಟು ಸುಡೋಕೆ ಟೆರೇಸೇ ಬೇಕಿತ್ತಾ ಇವನಿಗೆ ಅಂತ ಗೊಣಗಿಕೊಂಡು ಕೆಳಗಿಳಿದು ಬಂದಿದ್ದೆ.ಎಲ್ಲಿಯೂ ಸಮಯ ಸರಿಯದೇ ಕ್ರಿಕೆಟ್ ಆದ್ರೂ ನೋಡೋಣ ಅಂತ ಹೋದ್ರೆ ಸರಿಯಾಗಿ ಅಲ್ಲಿಗೆ ಬ್ರೇಕ್ ಇತ್ತು! ಮತ್ತೆ ಪುಸ್ತಕವ ಹಿಡಿಯೋ ಮನಸ್ಸಾಗದೇ ಆ ಕಡೆ ಈ ಕಡೆ ಓಡಾಡುತ್ತಿದ್ದಾಗ ನೆನಪಾಗಿದ್ದು ಗೋಲ್ ಗಪ್ಪಾ ಅಂಕಲ್.ಅವಾಗ್ಲೇ ನೆನಪಾಗಿದ್ದು ನಾ ನನ್ನ ಹಳೆ ಹುಡುಗನನ್ನ ಮರೆತು ತುಂಬಾ ದಿನಗಳಾದ್ವಲ್ವಾ ಅಂತ!

ನನ್ನ ಇಂತಹುದೇ ಅದೆಷ್ಟೋ ಸಂಜೆಗಳ ಜೊತೆಯಾಗೋದು ಇದೆ ಗೋಲ್ ಗಪ್ಪಾ.ಮಾರು ಮಾರಿಗೊಂದು ಇದ್ರೂ ನಂಗೆನೋ ಈ ಗೋಲ್ಗಪ್ಪಾ ಅಂದ್ರೆ ಲವ್.(ಫಾರ್ ಯುವರ್ ಕೈಂಡ್ ಇನ್ಫೋ: ಗೋಲ್ಗಪ್ಪಾ ಮಾಡಿಕೊಡೋದು ಅಂಕಲ್).ಒಬ್ಬಳೇ ಹೋಗಿ ತಿಂದುಕೊಂಡು ಆ ಅಂಕಲ್ ಜೊತೆ ಮಾತಾಡಿಕೊಂಡು ಅವರನ್ನಷ್ಟು ನಗಿಸಿ ಬರೋದ್ರಲ್ಲೇನೋ ಚಂದದ ತೃಪ್ತ ಖುಷಿ ನಂಗೆ. ಮುಂದೆ ಯೋಚಿಸದೇ ಆ ಕಡೆ ಹೊರಟೆ.ದೂರದಿಂದಲೇ ಮುಗುಳ್ನಕ್ಕ ಅಂಕಲ್ "ಯಾಕೇ ಪುಟ್ಟಿ ತುಂಬಾ ದಿನ ಆಗಿತ್ತು ಈ ಕಡೆ ಬರದೆ "ಅಂತ ಕೇಳಿದಾಗ ಸಲಿಸಾಗಿ ಬಾಯಿಗೆ ಬಂದ "ಪರೀಕ್ಷೆಗಳಿದ್ವು ಅಂಕಲ್ ..ಬರೋಕಾಗಿರ್ಲಿಲ್ಲ" ಅಂತಂದಿದ್ದೆ ಹೌದು.ಆದರೆ ಅತೀ ಇಷ್ಟದ ಇದನ್ಯಾಕೆ ಇಷ್ಟು ದಿನ ಮರೆತು ಬಿಟ್ಟಿದ್ದೆ ಅಂತ ಯೋಚನೆಗೆ ಬಿದ್ದಿದ್ದೆ ನಾ.ಅದೂ ಊಟ ಬಿಟ್ರೂ ಇದನ್ನ ಬಿಡದಿದ್ದ ನಾನು!

ಮತ್ತೆ ರಾತ್ರಿ ಅಪ್ಪ ಅಮ್ಮಂಗೆ ಒಂದಿಡೀ ದಿನದ ನನ್ನನ್ನ ಒಪ್ಪಿಸೋವಾಗ ಹೇಳಿದ್ದೆ "ಅಮ್ಮಾ ಇವತ್ಯಾಕೋ ತುಂಬಾ ದಿನ ಆದ್ಮೇಲೆ ತಿಂದೆ ನೋಡು ..ಮತ್ತೂ ಖುಷಿ ಸಿಕ್ತು ".ಅದಕ್ಕೆ ಅಪ್ಪ ಕಾಲೆಳೆದಿದ್ರು ಇಷ್ಟು ದಿನ ಪಾಪ ಅವರ ಊಟಕ್ಕೆ ಕಡಿಮೆ ಆಯ್ತೇನೋ .ಇವತ್ತು ಅವರಿಗೂ ಒಳ್ಳೆಯ ವ್ಯಾಪಾರ ಬಿಡು ಅಂತೆಲ್ಲಾ. ಅಮ್ಮ ಮುಂದುವರೆಸಿ ಎಷ್ಟು ತಿಂದೆ ಅಂತ ಕೇಳಲ್ಲ ,ಆದರೆ ಪುಟ್ಟಿ ಸ್ವಲ್ಪ ದಿನಕ್ಕೆ ಪರೀಕ್ಷೆಗಳು ನಿಂಗೆ ಹುಷಾರು ನೆಗಡಿಯಾಗುತ್ತೆ ಅಂತೀನ್ನೆನೇನೋ ಮುಗಿಯದ ಅದೇ ಅತೀ ಕಾಳಜಿ.

ಇರಿ ಮಾರಾಯ್ರೇ ..ಹೇಳಹೊರಟಿರೋದು ಗೋಲ್ಗಪ್ಪಾ ಪುರಾಣ ಅಲ್ಲ. ಆಗಲೇ conclusion ಗೆ ಬರಬೇಡಿ.

ಯಾಕೆ ನನ್ನ ಸಂಜೆಗಳು ಕಾಣದೇ ನಾಪತ್ತೆಯಾಗಿದ್ವು ಇಷ್ಟು ದಿನಗಳು ಅಂತ ಏನೋ ದೊಡ್ಡದಾಗಿ ಯೋಚನೆಗೆ ಬಿದ್ದೋರ ತರಹ ಫೋಸ್ ಕೊಟ್ಕೊಂಡು ಅದೇ ಬಾಲ್ಕನಿಯಲ್ಲಿ ಕೂತಿದ್ದಾಗ ಮೊಬೈಲ್ ಬೀಪ್ ಆಗಿತ್ತು ಉತ್ತರ ಸಿಕ್ಕಂತೆ.

ಎಲ್ಲೇ ಹೋದೆ ಕೋತಿ ನಿನ್ನನ್ನೆಷ್ಟು ಕರೆಯೋದು ವಾಟ್ಸ್ಅಪ್(whatsapp)ಗೆ ಅಂತ ಮುಖ ಕೆಂಪಗೆ ಮಾಡಿಕೊಂಡು ಮೆಸೇಜ್ ಮಾಡಿದ್ದ ಗೆಳತಿ.ಅಂದುಕೊಂಡೆ ಹೌದಲ್ವಾ ನಾನಿಷ್ಟು ದಿನ ಕಳೆದುಹೋಗಿದ್ದು ಇಲ್ಲಿಯೇ ಇದ್ದೀತು ಅಂತ.

ರಾತ್ರಿಯಾದ್ರೆ ಸಾಕು ನಿಧಿ ಸಿಕ್ಕೋ ತರಹ whatsappನಲ್ಲಿ ಬಿದ್ದುಕೊಳ್ಳೋ ಸ್ನೇಹಿತರಿಗೆ,ಅಣ್ಣಂದಿರಿಗೆ,ಅಕ್ಕಂಗೆ ಕಾಲೆಳೆಯೋಕೆ ಸಿಗೋದು ನಾ ಮಾತ್ರವೇನೋ ಅಂತ ಅನ್ನೋದೆ ನನ್ನ ದೊಡ್ಡ ಅನುಮಾನ! ತಾ ಮುಂದು ನಾ ಮುಂದು ಅಂತ ಕಿತ್ತಾಡ್ತಾ ಕಾಲೆಳೆಯೋ ಇವರುಗಳನ್ನೆಲ್ಲಾ ಇಷ್ಟು ದಿನಗಳ ಕಾಲ ಸಹಿಸಿಕೊಂಡಿರೋ ನಂಗೆ ನೀವು ಶಹಬ್ಬಾಶ್ ಅನ್ನಲೇ ಬೇಕು.ಹೇಳಿಲ್ಲ ಅಂದ್ರೆ ನಾನೇ ಹೇಳ್ಸ್ಕೊಂತೀನಿ :ಫ್

ಹೀಗೊಬ್ಬ ಚಂದದ ಗೆಳೆಯ ನನ್ನ ಕಾಡಬಂದು ತುಂಬಾ ದಿನಗಳಾದ್ವು ನೋಡಿ.ಟೈಪ್ ಮಾಡೋಕೆ ಬೇಜಾರು (ಅರ್ಧ ಒಪ್ಪಿಕೊಳ್ತೀನಿ ಸ್ವಲ್ಪ ಜಾಸ್ತಿ ಸೊಂಬೇರಿ ನಾ ಅಂತ)ಅನ್ನೋ ನಾನು ರಾತ್ರಿ ೧೦ಕ್ಕೆ ಮಾತು ಶುರು ಮಾಡಿ ೧:೩೦ಗೆ ಮಾತು ನಿಲ್ಲಿಸ್ತಿದ್ದೆ ಅಂತದ್ರೆ ನಿಮ್ಗೂ ಅರ್ಥ ಆದೀತು.

ಅವತ್ತಿವರೆ ನಂಗೆ "ಯಾಕೆ ದಿನಕ್ಕೆ ೪ forward ಮೆಸೇಜ್ ಮಾಡ್ತೀಯ..ಯಾವುದಾದ್ರೂ ಹುಡುಗನ್ನ ಹುಡ್ಕೋ ಮೆಸೇಜ್ ಖಾಲಿ ಮಾಡೋಕೆ"ಅಂತ ಕಾಲೆಳೆದಿದ್ರು.ಆದರೆ ಇವತ್ತು "ರಾತ್ರಿ ಒಂದಾದ್ರೂ whatsapp ನಲ್ಲೇ ಬಿದ್ದಿರ್ತೀಯ ..ಹುಡ್ಗಿ ಹಾಳಾದಂಗಿದೆ" ಅಂತಾ ಇನ್ನೇನೋ ಕಾಲೆಳೆಯ ಬರುತ್ತಾರೆ.ಮಾತಾಡ್ತಾ ಇರೋದು,ಏನೋ ಗಹನ ಚರ್ಚೆಯಲ್ಲಿ ತೊಡಗಿರೋದು ಇವರುಗಳ ಜೊತೆಯೇ ಆಗಿದ್ರೂ ತಲೆಗೊಂದೊಂದು ಕಾಮೆಂಟ್ ಗಳು ಬೀಳ್ತಿರುತ್ತೆ ಸುಮ್ ಸುಮ್ನೆ.

ಮೊದಲೇ ತುಂಬಾ ಅನ್ನೋ ಅಷ್ಟು ಉರಿಯೋ ನಂಗೆ ಇವರುಗಳ ಇಲ್ಲದ ಕಾಮಿಡಿಗಳಿಗೆ ಮೈ ಪರಚಿಕೊಳ್ಳೋ ಅಷ್ಟು ಸಿಟ್ಟು ಬರೋದು.ಎಲ್ಲರಿಗೂ ಒಂದು ಸೈಲೆಂಟ್ ಬಾಯ್ ಅಂದು ಮುದ್ದು ಗೆಳೆಯನನ್ನ ಮೊಬೈಲ್ ನಿಂದ ತೆಗೆದು ೪ ದಿನಗಳಾದ್ವು!!

ಇವತ್ತೂ ಮತ್ತವ ಗೋಲ್ಗಪ್ಪಾ ತಿನ್ನೋಕೆ ಅಂತಾ ಬಿಡುವು ಕೊಡೋದರ ಮೂಲಕ ನೆನಪಾದ.ದಿನವೂ ಹಾಗೆ ಒಂದಲ್ಲ ಒಂದು ಕೆಲಸದಲ್ಲಿ ನೆನಪಾಗ್ತಾನೆ ಪಕ್ಕಾ ಹಳೆಯ ಹುಡುಗನ ತರಾನೆ!

ಎಲ್ಲವೂ ಇದೆ ಇಲ್ಲಿ.ಎಲ್ಲರೂ ಇದ್ದಾರೆ.ಅನ್ ಲಿಮಿಟೆಡ್ ಟಾಕ್ಸ್, ಅನ್ ಲಿಮಿಟೆಡ್ ನಗು..ಒಂದಿಷ್ಟು ಕ್ರೇಜಿ ಗೆಳೆಯರ ಗುಂಪಿದ್ರೆ ಸಾಕು ಲೈಫ್ ಬರ್ಬಾದ್ ಆದಂಗೇ.

LKG ಕ್ರಶ್ ಇಂದ ಶುರುವಾಗೋ ಕಾಲೆಳೆಯೋ ಕೆಲಸ ಬಂದು ನಿಲ್ಲೋದು ಬೆಳಿಗ್ಗೆ ಕ್ಯಾಂಪಸ್ ನಲ್ಲಿ ಸ್ಮೈಲ್ ಮಾಡಿದ್ದ ಸೀನಿಯರ್ ಹುಡುಗನ ತನಕ!ಇನ್ನು ಕ್ಲಾಸಿನಲ್ಲಿರೋ ಒಂದು ತರಲೆ whatsapp ಗೆಳೆಯರ ಗುಂಪಲ್ಲಿ ಖಾಯಂ ಸದಸ್ಯತ್ವ ಸಿಕ್ಕಿದ್ರೆ ಕಥೆ ಮುಗಿದಂತೆ!.ಏನಾಗುತ್ತಿದೆ ಅಂತ ನೋಡೋಕೆ ಹೋಗಿದ್ರೂ ಅವತ್ತಿಡಿ ಅವರ ಬಗೆಗೆ ಮಾತಾಡೋ,ಅವರನ್ನ ತೀರಾ ಅನ್ನೋ ಅಷ್ಟು ಗೋಳು ಹೊಯ್ಯೋ ಈ ಕ್ಲಾಸಿನ ಗುಂಪಿಂದ ತಪ್ಪಿಸಿಕೊಂಡು ಬಂದ್ರೆ ಏನೋ ಸಾಧಿಸಿದ ಖುಷಿ.

ಸುಮ್ಮನೆ ಕಾಲೆಳೀತಾ ಕೂರೋದು ನಂಗಿಷ್ಟ ಆಗಲ್ಲ.ಒಮ್ಮೊಮ್ಮೆ ಉಸಿರುಗಟ್ಟಿಸಿ ಬಿಡೋ ಇವರುಗಳಿಂದ ನೆಮ್ಮದಿ ಸಿಕ್ಕಿ ಒಂದೆರಡು ತಿಂಗಳುಗಳಾದ್ವೇನೋ.

ಇಡಿಯ ಕ್ಲಾಸಿನ ಯುನಿಟಿಯ ಅರಿವು ಸಿಗೋದು ಇಲ್ಲಿಯೇ. ದಿನಕ್ಕೊಬ್ಬರಂತೆ ಟಾರ್ಗೆಟ್ ಮಾಡಿಕೊಳ್ಳೋ ಇವರುಗಳು ಕಾಲೆಳೆಯೋವಾಗ ಮಾತ್ರ ಎಲ್ಲರೂ ಒಂದೇ.ಎಲ್ಲಾ ಸೀಕ್ರೆಟ್ ಗಳು ಬಯಲಾಗೋದು ಇಲ್ಲಿಯೇ.ಏನೋ ತಮಾಷೆಗೆ ಶುರುವಾದ ವಿಷಯ ಚೌಕಟ್ಟಿನಿಂದ ಹೊರ ಬಂದು ಆಮೇಲಲ್ಲಿ ಸರಿಯಾಗಿ ಬೈದ ಮೇಲೆ ಎಲ್ಲಾ ತಣ್ಣಗಾಗಿ ಮಲಗೋದು.

ಇನ್ನಿಲ್ಲಿ ಎಲ್ಲಾ ಲೆಕ್ಚರರ್ಸ್ ಗೂ ಒಂದೊಂದು ಇಡೀ ದಿನದ ಕಾಮೆಂಟ್ ಕಾರ್ಯ ಸಾಗ್ತಿರುತ್ತೆ.ಅಲ್ಲೆಲ್ಲಾ ಸುಮ್ಮನೆ ಏನೇನೋ ಫನ್ನಿ ಫನ್ನಿ ಕಾಮೆಂಟ್ ಮಾಡೋದು ,ಮಾಡೋ ಕಾಮೆಂಟ್ ಗಳಿಗೆ ಎಲ್ಲರೂ ಲೈಕ್ ಕೊಡೋದು...ಹೀಗೆ ಏನೇನೂ ಕಾಂಪಿಟೇಶನ್ ಮೇಲೆ ಮಾಡ್ತಿರ್ತೀವಿ.

ಎಲ್ಲಾ ಭಾವಕ್ಕೂ ಒಂದೊಂದು ಚಂದದ smily ಗಳು ಇರುತ್ತೆ ಇಲ್ಲಿ.ಮೊದಲ ವ್ಯಾಮೋಹಕ್ಕೆ ಕಾರಣ ಈ smily ಗಳೇ ಏನೋ. ತೀರಾ ಕಾಲೆಳೆಯೋ ಗೆಳೆಯಂಗೆ ಕೊಲೆಯಾಗುತ್ತೆ ಅಂತ ಚಾಕು ತೋರಿಸಬಹುದು,ಇಷ್ಟವಾಗದ್ದನ್ನ ಶೂಟ್ ಮಾಡಬಹುದು(ನಂಗೆಲ್ರೂ ಬದನೆಕಾಯಿ ಶೂಟರ್ ಅಂತಾರೆ ಇಲ್ಲಿ).ಅಲ್ಲೊಬ್ಬ ಗೆಳತಿ ಪಂಚ್ ಮಾಡಿದ್ರೆ ಪಂಚ್ ಬ್ಯಾಕ್ ಮಾಡೋಕೆ ಆಗೋದು ಇಲ್ಲಿ ಮಾತ್ರವೇನೋ.ಇನ್ನೊಂದಿಷ್ಟು ಮಹಾನುಭಾವರು ಚಂದಿರನನ್ನೂ ಜೊತೆ ಕಳಿಸಿ ಶುಭ ರಾತ್ರಿ ಹೇಳಿದ್ರೆ ಮತ್ತೊಂದಿಷ್ಟು ಜನ ಕಾಫಿಯ ಜೊತೆ ಮುಂಜಾನೆಯ ಸ್ವಾಗತಿಸೋಕೆ ರೆಡಿ ಇರ್ತಾರೆ.ರಾತ್ರಿ ಬೆಳಗನ್ನದೇ ಇಡೀ ದಿನದ ಎಲ್ಲಾ ಭಾವಕ್ಕೂ ಇಲ್ಲೊಂದಿಷ್ಟು ಸ್ಮೈಲ್ಸ್.ಕತ್ತೆ ,ನಾಯಿ ಅಂತ ಪ್ರೀತಿಯಿಂದ ಬೈಯೋಕೂ ಇಲ್ಲಿ ಸಿಂಬಲ್ಸ್ ಇದೆ!

ಪ್ರೀತಿ,ನಗು,ಮುದ್ದು,ಹಗ್,ಸಿಟ್ಟು,ಕಾಯೋ ಬೇಸರ ಎಲ್ಲಕ್ಕೂ ಒಂದೊಂದು ಸ್ಮೈಲಿ ಗಳು ಸಿದ್ಧವಾಗಿ ನಿಂತಿವೆ.ನಕ್ಕು ನಕ್ಕು ಕಣ್ಣಲ್ಲಿ ನೀರು ಬರುತ್ತೆ ಅಂತಾದಾಗ್ಲೂ ಅದು ಅಭಿವ್ಯಕ್ತವಾಗೋದು ಸಿಂಬಲ್ ಇಂದಾನೆ.

ವಾಯ್ಸ್ ಮೇಸೇಜ್ ಅನ್ನೋ ಇಷ್ಟದ ಆಪ್ಷನ್ ಒಂದು ಮಾತ್ರ ನಾ ದಿನಕ್ಕೆ ೫೦ ಮಾಡ್ತೀನಿ ನೀಟ್ ಆಗಿ.ಅಲ್ಲೆಲ್ಲೋ ದೂರವಿರೋ ಅಕ್ಕ ದಿನಕ್ಕೆರಡು ಮುದ್ದು ಮಾತು,ದಿನಕ್ಕೆರಡು ಪೆದ್ದು ಮಾತಲ್ಲಿ ಮೆಸೇಜ್ ಹಾಕೋವಾಗ ನಾ whatsapp ಯೂಸ್ ಮಾಡ್ತಿರೋದೂ ಸಾರ್ಥಕ ಅನ್ನೋ ಭಾವ.ಮನೆಗೆ ಹೋದಾಗ ಅಪ್ಪಂಗೂ ಹೇಳಿಕೊಟ್ಟು ಅವರ ಮೊಬೈಲ್ ಗೂ ಇನ್ಸ್ಟಾಲ್ ಮಾಡಿ ಬಂದಿದ್ದೆ.ದಿನಕ್ಕೆ ನಾಲ್ಕು ಕಾಲ್ ಮಾಡಿ ಊಟ ಆಯ್ತ,ತಿಂಡಿ ಆಯ್ತ ,ಕ್ಲಾಸ್ ಹೆಂಗಿತ್ತು ...ಅಂತೆಲ್ಲಾ ವಿಚಾರಿಸೋ ಅಪ್ಪ ಅಮ್ಮಂಗೆ ಹೀಗೊಂದು ಹೇಳಿದ್ದರ ಹಿಂದಿನ ಕಾರಣ ಪೀಜಿಯಲ್ಲೆಲ್ಲಾ ನಂಗೆ ಪಾಪು ಪಾಪು ಅಂತ ಆಡಿಕೊಳ್ಳೋದು.ಅಪ್ಪ ಬಿಡದೆ ದಿನಕ್ಕೆ ನಾಲ್ಕು ಬಾರಿ ವಿಚಾರಿಸಿಕೊಳ್ಳೋವಾಗ್ ಖುಷಿ ನಂದಾಗಿದ್ರೂ ಇವರುಗಳ ನಾನ್ ಸ್ಟಾಪ್ ಕಾಮೆಂಟ್ ಗೆ ಹೆದರಿದ್ದೆ ನಾ.ಈಗ ಅಪ್ಪನೂ ಖುಷಿಯಾಗಿ ವಾಯ್ಸ್ ಮೆಸೇಜ್ ಮಾಡೋವಾಗ ನಂಗೆನೋ ಖುಷಿ.

ಇದಷ್ಟು ಮೇಸೇಜ್ ಕಾಲಾಹರಣವಾದ್ರೆ ಇಲ್ಲೊಂದಿಷ್ಟು ತರಲೆ ಗೆಳೆಯ ಗೆಳತಿಯರಿದ್ದಾರೆ. ಅವರುಗಳ ಬಗೆಗೆ ಹೇಳದಿದ್ದೆ ಪೂರ್ತಿಯಾಗದ ಭಾವ .whatsapp dare ಅನ್ನೋ ಡಬ್ಬಾ ಗೇಮ್ ನಲ್ಲಿ ಮೊದಲು ಬಲಿಯಾಗೊದೇ ನಾನು.(ಪಾಪ ನಾನು)ಅಲ್ಲೇನೋ ಕಾಮೆಂಟ್ ಮಾಡಿ ಆಮೇಲವರ ಟ್ರಿಕ್ ಅರಿವಾಗ ಅವರುಗಳು ಹೇಳೋ ಸ್ಟೇಟಸ್ ಹಾಕೋ ಅನಿವಾರ್ಯತೆಗೆ ಸಿಕ್ಕಿಬಿಡ್ತೀನಿ.ಮೊನ್ನೆ ಮೊನ್ನೆ ಗೆಳತಿಯೊಬ್ಬಳ ಸ್ಟೇಟಸ್ ಗೆ ಕಾಮೆಂಟ್ ಹಾಕಿದ ತಪ್ಪಿಗೆ ನನ್ನ ಸ್ಟೇಟಸ್"I still love my ex" ಅಂತ ಹಾಕಬೇಕಿತ್ತು .ಯಾವತ್ತೂ ಮಾತಾಡಿಸಿರದ ಯಾರ್ಯಾರೋ ಬಂದು ಯಾರದು ಹುಡುಗ ಅಂತೆಲ್ಲಾ ಕೇಳೋವಾಗ ಬಿದ್ದು ಬಿದ್ದು ನಕ್ಕಿದ್ದೆ.ನನ್ನ ತರಹವೇ ಬಕ್ರಾ ಆಗಿದ್ದ ಗೆಳೆಯನೊಬ್ಬನ ಸ್ಟೇಟಸ್"I still hate my ex" ಅಂತ ಬಂದಿತ್ತು..ಎಲ್ಲರೂ ನೋಡಿ ಇಬ್ಬರಿಗೂ ಎರಡು ದಿನ ನೀಟ್ ಆಗಿ ಕಾಲೆಳೆದಾದ ಮೇಲೆ ಇಬ್ಬರೂ ಸೇರಿ ಆ ಗೆಳತಿಗೆ ಹೊಗೆ ಹಾಕಿದ್ದಾಯ್ತು! ಹೀಗೇ ಏನೇನೋ ಒಂದಿಷ್ಟು ಇಲ್ಲದ ಹುಡುಗರ ಹೆಸರು ಹೇಳಿ ಕಾಲೆಳೆಯೋ ನಮ್ಮಗಳ ಪರಂಪರೆ ಇಲ್ಲಿಯೂ ಮುಂದುವರೆದಿದ್ದು ವಿಶೇಷ ಅಷ್ಟೇ.!

ಹೇಳೋಕೊದ್ರೆ ಮುಗಿಯದಷ್ಟು ಕಥೆಗಳಿವೆ ಇಲ್ಲಿ ..

ಯಾವಾಗ್ಲೂ ಇಲ್ಲಿಯೇ ಬಿದ್ದುಕೊಂಡಿರೋ ಹುಡುಗಂಗೆ "ಬದುಕಿದೆಯೇನೋ ನಿಂಗೆ ಅಂದ್ರೆ "nope dude ..I have whatsapp" ಅಂತ ತಮಾಷೆ ಮಾಡಿ ಎಲ್ಲರೂ ನಗೋ ತರ ಮಾಡ್ತಾನೆ.ಅಲ್ಲಿನ್ನೊಬ್ಬ ಗೆಳೆಯ ಬ್ರೋಕನ್ ಹಾರ್ಟ್ ಬಗ್ಗೆ ಹಾರ್ಟ್ ಟಚಿಂಗ್ ಪಂಚ್ ಕೊಡ್ತಾನೆ.ಇನ್ನು ನನ್ನ ಬಳಿ ಇರದ ಒಂದಿಷ್ಟು ಕಾಂಟಾಕ್ಟ್ ಗಳು ಅಲ್ಲೆಲ್ಲಿಂದಲೋ ಬಂದು ಹಾಯ್ ಅಂದು ತಲೆ ಕೆರೆದುಕೊಳ್ಳೋ ತರಹ ಮಾಡ್ತಾರೆ ಯಾರಿರಬಹುದು ಅಂತ.

whatsappನಲ್ಲಿ P.hD ಮಾಡ್ತಿರೋ ಹುಡುಗ್ರಾ ಮುಂದಿನ ಅಡ್ವಾನ್ಸ್ಡ್ Appನಲ್ಲಿ ನಮ್ಮ ಬಳಿ ಇರದ ಕಾಂಟಾಕ್ಟ್ ಗಳನ್ನ allow ಮಾಡದ ತರಹ ಮಾಡಿಬಿಡ್ರಪ್ಪ ಪುಣ್ಯ ಬರುತ್ತೆ ನಿಮ್ಮಗಳಿಗೆ :)

ಬಿಡದೇ ಕಾಡ್ತಿರೋ ಈ ಗೀಳಿಂದ ನಾನಂತೂ ಎದ್ದು ಬಂದೆ .ಇನ್ನು ನೀವುಗಳು ಏನೇ ಅಂದ್ರೂ ನಾನಲ್ಲಿ ಬರಲ್ಲ ..ಕಾಲೆಳೆಯೋಕೆ ಬೇರೆಯರವರನ್ನ ಹುಡುಕೋ ನಿಮ್ಮಗಳ ಕೆಲಸಕ್ಕೊಂದು ದೊಡ್ಡ ನಮನ ಹೇಳಿ ,ನಿಮ್ಮಗಳಿಗೆ ಹೇಳದೆಯೇ ಅಲ್ಲಿಂದ ಹೊರಬಿದ್ದೆ.ಮತ್ತೆ ಅಲ್ಲಿ ಬಾ ಅಂದ್ರೆ ನೀವ್ಯಾರು ಅಂತೀನಿ ಅಷ್ಟೇ :ಫ್ ಮಿಸ್ ಮಾಡಿಕೊಳ್ಳೋ ಫನ್ ಗಳ ನಂತರವೂ ನಂಗೊಂದು ಲೈಫ್ ಇದೆ(ಹೆವೀ ಡೈಲಾಗ್ ಅಂತ ಗೊತ್ತು ನಂಗೂನೂ) .

ಅದೆಷ್ಟೋ ಹುಡುಗರ ಲೈಫ್,ಟೈಮ್ ನನ್ನಾ ಉಳಿಸಿದ ಕೀರ್ತಿಯಾದ್ರೂ ಸಿಗ್ಲಿ ನಂಗೆ ..ಮತ್ತೆ ಈ ಹಳೆ ಹುಡುಗ ತೀರಾ ಕಾಡಿದ ದಿನ ವಾಪಸ್ಸಾಗ್ತೀನಿ(ಒಂದೆರಡು ತಿಂಗಳ ನಂತರ).ಅಲ್ಲಿಯ ತನಕ ಕೆಲಸವಿಲ್ಲದ ಒಂದಿಷ್ಟು ಗ್ರುಪ್ ಗಳಿಗೆ,ಒಂದಿಷ್ಟು ನಾನ್ ಸ್ಟಾಪ್ ಸುದ್ದಿಗಳಿಗೆ ಬದುಕು ತುಂಬುತ್ತಿರೋ ಮಚ್ಚಾಸ್ ಅಂಡ್ ಮಚ್ಚಿಸ್  ..ಮಿಸ್ ಮಾಡ್ಕೊಳಿ ನನ್ನನ್ನ :ಫ್ ಅದ್ಯಾವುದೋ ಕಿತ್ತೊಗಿರೋ ಸಾಂಗ್ ಜೊತೆಗೆ .

 

 

Wednesday, November 13, 2013

ಮನಸ್ವೀ...,


ಕಳೆದು ಹೋಯ್ತಲ್ಲೋ ನಾಲ್ಕು ವಸಂತಗಳು ...

ಅವತ್ತು ಮನೆಯಲ್ಲಿ ಮೊದಲ ಮೊಮ್ಮಗಳ ಮದುವೆ ಸಂಭ್ರಮ!ಮನೆಯೂ ಮದುಮಗಳಂತೆ ಸಿಂಗಾರವಾಗಿತ್ತು.ಎಲ್ಲರಿಗೂ ಸಡಗರ...
ಪ್ರೀತಿಯ ಮನೆಯ ದೊಡ್ಡಕ್ಕ ನಿನ್ನರಸಿಯಾಗೋ ಖುಷಿ ನಿಂದಾಗಿದ್ರೆ ಅವಳಿಗಿನ್ನು ಪ್ರತಿ ದಿನ ಕಾಟ ಕೊಡೋಕೆ ,ಮಾತಾಡೋಕೆ,ಜಗಳವಾಡೋಕೆ ಆಗಲ್ವಲ್ಲಾ ಅನ್ನೋ ಬೇಜಾರು ನಮ್ಮಗಳಿಗೆ.ಆದರೂ ಏನೋ ಒಂದಿಷ್ಟು ಖುಷಿಗಳು ...ಅಕ್ಕನ ಜೊತೆ ನೀನೂ ಸಿಕ್ತೀಯ ತರಲೆ ಮಾಡೋಕೆ,ಕಾಟ ಕೊಡೋಕೆ ಅಂತೆಲ್ಲಾ ಏನೇನೋ ...ಆದರೂ ಮನದಲ್ಲೊಂದು ಅಳುಕು ..ಅಕ್ಕನೊಟ್ಟಿಗೆ ಏನೋ ಸ್ವಂತ ಅಕ್ಕನಂತೆಯೇ ಇರೋ ಸಲಿಗೆ,ಮಾತು,ಮಸ್ತಿ ಎಲ್ಲವೂ..ಆದರೆ ನೀ ಹೇಗಿರ್ತೀಯೋ ಏನೋ ಅನ್ನೋ ತರಹದ್ದು ಒಂದಿಷ್ಟು ಭಾವಗಳು ...ಏನೇ ಆದ್ರೂ ಅವತ್ತಲ್ಲಿ ಮುದ್ದು ಅಕ್ಕನ ಮದುವೆ ಸಂಭ್ರಮ .

ಮದುವೆಗೆ ಜೊತೆಯಾಗಿದ್ದ ೧೦ನೇ ಕ್ಲಾಸಿನ ಪರೀಕ್ಷೆಗಳಿಗೊಂದಿಷ್ಟು ಬೈದು ಜೊತೆಯಾಗಿದ್ದೆ ನಾ ಎಲ್ಲರನೂ...ಅಕ್ಕನಲ್ಲಿ ಮಾಡಿದ್ದ ಕೀಟಲೆಗಳಿಗೆ ಲೆಕ್ಕವಿರಲಿಲ್ಲ ..ಅವಳ ಈ ರಾಜಕುಮಾರನ ಬಗೆಗೆ ತುಸು ಜಾಸ್ತಿ ಅನ್ನೋ ಅಷ್ಟು ಕಾಲೆಳೆದಿದ್ವಿ ನಾವುಗಳು.
ಇಡೀ ಮನೆಯಲ್ಲಿ ಗಲಾಟೆ,ಮಾತು,ಹರಟೆ,ಒಂದಿಷ್ಟು ಭರದ ಕೆಲಸಗಳು..

ಅಜ್ಜ ಅಜ್ಜಿಗೆ ಮೊಮ್ಮಗಳ ಮದುವೆ ಗಡಿಬಿಡಿ,ಅಪ್ಪ ದೊಡ್ಡಪ್ಪಂಗೆ ಇನ್ನೂ ಪುಟ್ಟಿಯಾಗಿರೋ ಈ ಹುಡುಗಿ ಇಷ್ಟು ಬೇಗ ಮದುವೆಗೆ ಬಂದ್ಲಾ ಅನ್ನೋ ಆಶ್ಚರ್ಯ ಆದ್ರೆ ನನ್ನಮ್ಮ ,ದೊಡ್ದಮ್ಮಂಗೆ ಮುದ್ದು ಮಗಳಿಗೆ ನಾಳೆಯಿಂದ ಈ ಮನೆ ತವರು ಮನೆಯಾಗಿ ಬಿಡುತ್ತಲ್ಲ ಅನ್ನೋ ಬೇಸರ..ಇನ್ನು ನಂಗೆ, ಎರಡನೇ ಅಕ್ಕಂಗೆ ಈ ಅಕ್ಕ ಜೊತೆ ಇರಲ್ವಲ್ಲಾ ಇನ್ನು ಯಾವಾಗ್ಲೂ ಬಾವನ ಜೊತೆ ಇರ್ತಾಳಲ್ವಾ ಅಂತ ನಿನ್ನ ಮೇಲೊಂದು ಸಣ್ಣ ಹೊಟ್ಟೆಕಿಚ್ಚಾದ್ರೆ ಮೊದಲ ಬಾರಿ ಸೀರೆ ಉಡೋ ಖುಷಿ ಇನ್ನೊಂದು ಕಡೆ..ತಮ್ಮನಿಗೇನೋ ಸಂಭ್ರಮ ಎಲ್ಲರೂ ಅವನನ್ನಪ್ಪಿ ಮುದ್ದು ಮಾಡಿ ಮಾತಾಡ್ತಾರಲ್ಲಾ ಅಂತಾ. ಇನ್ನು ನಿನ್ನೀ ಹೆಂಡತಿಯದು ಒಂದಿಷ್ಟು ಟೆನ್ಷನ್ಸ್ !

ಕೊನೆಗೂ ಜೊತೆಯಾದೆ ಮಾರಾಯ ನೀ ನನ್ನಕ್ಕನಿಗೆ ಅವತ್ತಿದೆ ದಿನ..ಬೇರೆ ಯಾವ ಹುಡುಗನನ್ನೂ ನೋಡೋಕೆ ಬಿಡದೆ ಮೊದಲ ಹುಡುಗನೇ ಸರಿಯಾಗಿ ಪಾಪ ನನ್ನಕ್ಕ ಕೊನೆಗೂ ಸಿಕ್ಕಿದ್ಲು ನೋಡು ನಿಂಗೆ ..ಪುಣ್ಯ ಮಾಡಿದ್ದೆ ನೀ :ಫ್ ;)

ನಂತರದ್ದೆಲ್ಲಾ ಬಿಡು ಶಬ್ಧಕ್ಕೆ ದಕ್ಕದ ಭಾವ.
ಹೀಗೊಬ್ಬ ಬಾವ ಇರ್ತಾನೆ ಅನ್ನೋದರ ಸಣ್ಣ ಕಲ್ಪನೆಯೂ ಇರಲಿಲ್ಲ ನಮ್ಮಗಳಿಗೆ.ಬರಿಯ ಅಕ್ಕನ ಗಂಡನಾಗಿರದೇ ಈ ಮನೆಯ ಮುದ್ದು ಮೊಮ್ಮಕ್ಕಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದೆ(ಹೊಟ್ಟೆಕಿಚ್ಚಿದೆ..ಪ್ರೀತಿಯಲ್ಲಿ ನಿಂಗೂ ಒಂದು ದೊಡ್ಡ ಪಾಲು ಇದೆಯಲ್ಲಾ ಅಂತಾ :ಫ್ ) .

ಅದೆಷ್ಟು ಚಂದದ ಭಾವಗಳ ಕಟ್ಟಿಕೊಟ್ಟು ಬಿಟ್ಟೆ ಅಲ್ವಾ ನೀ ? ಇರದಿದ್ದ ಅಣ್ಣನ ಕೊರತೆ ನೀಗಿಸಿದೆ ನಮ್ಮಗಳಿಗೆ.ಜೊತೆಗೆ ಆಡೋಕೆ ಯಾರೂ ಇಲ್ಲ ನಂಗೆ ಅಂತ ಮುಖ ಊದಿಸಿ ಕೂರೋ ತಮ್ಮನಿಗೆ ಚಂದದ ಗೆಳೆಯನಾದೆ.ಅಜ್ಜನಲ್ಲಿ ಹಠ ಮಾಡಿ ಕ್ರಿಕೆಟ್ ಆಡೋ ತಮ್ಮನಿಗೆ ನೀ ಬಂದ ಮೇಲೆ ಅಜ್ಜನ ಜೊತೆ ಕ್ರಿಕೆಟ್ ಆಡಿದ ನೆನಪಿಲ್ವಂತೆ ! ಅಜ್ಜನದೊಂದು ಮುದ್ದು ಆರೋಪ ಇದೆ ನೋಡು ,ನೀ ಬಂದ ಮೇಲೆ ಅಜ್ಜನಿಗೆ ಕೆಲಸವಿಲ್ವಂತೆ.ಯಾಕಂದ್ರೆ ತಮ್ಮ ರಜಾದಲ್ಲರ್ಧ ದಿನ ನಿನ್ನೊಟ್ಟಿಗೆ ಇರ್ತಾನಂತೆ:)

ಅಜ್ಜಿಯ ಮಾತಿಗೆ ಕೂರಿಸಿ ಅಜ್ಜ ಅಜ್ಜಿಯ ಆ ದಿನಗಳ ನೆನಪಿಸಿ ಕಾಲೆಳೆದು ಅವರಿಬ್ಬರೂ ಮನ ಬಿಚ್ಚಿ ನಗೋ ತರ ಮಾಡೋಕಾಗೋದು ತಮ್ಮನ ಬಿಟ್ರೆ ಬಹುಶಃ ನಿನ್ನಿಂದ ಮಾತ್ರ ಸಾಧ್ಯವೇನೋ(ಮೊಮ್ಮಗಂದಿರಿಬ್ಬರಿಗೆ).
ಇನ್ನು ದೊಡ್ಡಪ್ಪ -ದೊಡ್ಡಮ್ಮ, ಅಪ್ಪ-ಅಮ್ಮಂಗೆ ನೀ ದೊಡ್ದ ಮಗನಾಗಿಬಿಟ್ಟಿದ್ದೀಯ ನೋಡು!
ಈ ಮನೆಯಲ್ಲೂ ಪ್ರೀತಿಯ ದೊಡ್ಡ ಪಾಲು ..ಆ ಮನೆಯ ಪ್ರೀತಿಗೆಲ್ಲ ವಾರಸುದಾರ ನೀನೊಬ್ಬನೆ ..ಸಿಗಬೇಕಾದುದ್ದೇ ನಿಂಗೀ ಪ್ರೀತಿ.ಎಲ್ಲರನೂ ಅಷ್ಟು ಇಷ್ಟ ಪಡೋ,ಬಂಧಗಳನಷ್ಟು ಚಂದದಿ ಸಲಹೋ ನಿಂಗೆ ಎರಡೂ ಕಡೆಯ ಚಂದದ ಮುದ್ದು ಭಾವವ ಕೊಡೋ ಮೊಮ್ಮಗನ ಪಾತ್ರ ಸಿಕ್ಕಿದೆಯಲ್ಲೋ ಬಾವಯ್ಯ ..

ನಿನ್ನ ಪ್ರೀತಿ ಮಾಡೋ ಭರದಲ್ಲಿ ಮನೆ ಮಗಳೇ ಇಲ್ಲಿ ಸ್ವಲ್ಪ ಕಡಿಮೆ ಪ್ರೀತಿ ಮಾಡಿಸಿಕೊಳ್ತಾಳಲ್ಲೋ ..ಎಲ್ಲರೂ ಮೊದಲು ಕೇಳೋದು ನಿನ್ನ ಬಗೆಗೆ..ಅಮೇಲವಳನ್ನ ವಿಚಾರಿಸಿಕೊಳ್ಳೋದು! ಈ ಬಗ್ಗೆ ನನ್ನಕ್ಕನೂ ಮಧುರ ಆರೋಪ ಮಾಡ್ತಾಳೆ ಅಳಿಯನೇ ಮೊದಲು ನೆನಪಾಗೋದು ನಿಮ್ಮಗಳಿಗೆ ಅಂತಾ ..ನಾನೂ ಅದೆಷ್ಟೋ ಸಾರಿ ಬೈಸಿಕೊಂಡಿದ್ದೀನಿ ಬಾವ ಮಾತ್ರ ನೆನಪಾಗೋದಲ್ವಾ ಅಂತಾ!(ಈಗಲೂ ಸಹ ವಿಷ್ ಮಾಡೋಕಂತ ನಿನ್ನ ನಂಬರ್ ಗೆ ಫೋನ್ ಮಾಡಿದ್ದಕ್ಕೊಂದು ರೆಡಿ ಇದ್ದ ಅದೇ ಡೈಲಾಗ್ ಬಿತ್ತು ನಂಗೆ)

 

ನಿಜ ಕಣೋ ಬಾವ...ಅದೆಷ್ಟು ಪ್ರೀತಿಯ ಮನೆ(ಮನ) ಅಲ್ವಾ ನಿಂದು ..ನನ್ನಕ್ಕ ಅಲ್ಲಿ ತುಂಬಾ ಖುಷಿಯಾಗಿದ್ದಾಳೆ ಅನ್ನೋದರ ಅರಿವು ಸಿಕ್ಕಾಗಲೆಲ್ಲಾ ನಮ್ಮಗಳ ಮನವೂ ಖುಷಿಸುತ್ತೆ.
ಜೊತೆಗೆ ಈ ಖುಷಿಗೆ ಮತ್ತೊಂದು ಕಾರಣ ಅನ್ನೋ ತರಹ ಮುದ್ದು ಪುಟ್ಟಿ ಕೂಡಾ ಜೊತೆಯಾಗಿ ಎರಡು ವರ್ಷಗಳಾದ್ವು.ನಿನ್ನೆ ಮೊನ್ನೆ ಅವಳ ಬರುವಿಕೆಯ ಎಲ್ಲರೂ ಕಾದ ನೆನಪು!ಅದೆಷ್ಟು ಬೇಗ ವರ್ಷಗಳಾಗಿ ಬಿಟ್ವು ..ಬಹುಶಃ ನಿಮ್ಮಗಳ ಈ ಪ್ರೀತಿ,ಜೊತೆಯಾಗಿರೋ ಭಾವ,ಜೊತೆಗೆ ಈ ಮುದ್ದು ಪುಟ್ಟಿಯ ಮುದ್ದು ಮುದ್ದು ನಡೆ,ಮಾತುಗಳಲ್ಲಿ ನಮಗೆ ವರ್ಷ ಕಳೆದುಹೋಗ್ತಿರೋದರ ಅರಿವು ಸಿಗ್ತಿಲ್ವೇನೊ!ಈ ಪುಟ್ಟಿಯೂ ನಿಮ್ಮಿಬ್ಬರಂತೇ ಎರಡೂ ಮನೆಯ ,ಎಲ್ಲರ ಮನಸ್ಸುಗಳ ಏಕೈಕ ರಾಜಕುಮಾರಿ :)

ಇನ್ನು ಈ ಪ್ರೀತಿ ಸ್ನೇಹದ ಹೊರತು ನೀನಂದ್ರೆ ನನ್ನಲ್ಲೊಂದಿಷ್ಟು ಬದುಕಿದೆ..
ನನ್ನ ಅದೆಷ್ಟೋ ಪ್ರಶ್ನೆಗಳ ಉತ್ತರ (my searching machine ...you can name as my google ) :ಫ್ .ನಂಗೆ ಬಗೆಹರಿಯದ ಅದೆಷ್ಟೋ ಸಾಫ್ಟ್ ವೇರ್ ಗಳ ಬಗೆಗೆ ಮಾಹಿತಿ ಕೊಡೋ ,ಏನೂ ತಿಳಿಯದಿದ್ದ ಆ ದಿನಗಳಲ್ಲಿ ಒಂದಿಷ್ಟು Apps ಗಳ ಪರಿಚಯಿಸಿ ,ಹೇಳಿಕೊಟ್ಟು ಇವತ್ತೊಂದು ವೆಬ್ ಡಿಸೈನ್ ಮಾಡೋವಷ್ಟು ಕಾನ್ಫಿಡೆನ್ಸ್ ಮೂಡಿಸಿರೋ,ಮಾತಂದ್ರೆ ಅಲರ್ಜಿ ಅಂತಿದ್ದವಳಿಗೆ ಬೈದು ಮಾತಾಡೋದನ್ನ, ಇವತ್ತು ಮಾತಿಲ್ಲದಿದ್ದರೇನೋ ಬೇಜಾರು ಅನ್ನೋ ಅಷ್ಟು ಬದಲಾಯಿಸಿರೋ ,
ತೀರಾ ಅನ್ನಿಸೋ ಬೇಸರಗಳಿಗೆ ಕಿವಿಯಾಗೋ , ಯಾವಾಗಲೂ ನಗಿಸೋ ,ಮಾಡಿದ ತಪ್ಪುಗಳಿಗೆ ಕಿವಿ ಹಿಂಡಿ ಸರಿ ಮಾಡೋ,ಸಣ್ಣ ಸಣ್ಣ ವಿಷಯಕ್ಕೂ ತೀರಾ ಅನ್ನೋ ಅಷ್ಟು ಜಗಳವಾಡೋ ,ನಿಮ್ಮನೆಗೆ ಬರದಿದ್ದರೆ ದೊಡ್ಡ ದೊಡ್ದ ಮಾತುಗಳಲ್ಲಿ "ನಾವ್ಯಾರು ನಿಂಗೆ ನೆನಪಿರಲ್ಲ ಅಲ್ವಾ..ಮರೆತುಬಿಟ್ಟೆ ಅಲ್ವಾ ,ಚಿಕ್ಕಮಗಳೂರ ನೆನಪಲ್ಲಿ ನಾವೆಲ್ಲಾ ಮರೆವು " ಅಂತ ಹೇಳೋ,ಕಾಳಜಿಸೋ ,ಬೇಸರಿಸೋ,ಕೋಪಮಾಡಿಕೊಳ್ಳೋ,ಸಣ್ಣ ಗೆಲುವಿಗೂ ಬೆನ್ನು ತಟ್ಟೋ ,ದೊಡ್ಡದೊಂದು ಅಭಿನಂದನೆ ಹೇಳೋ ..ಇನ್ನೂ ಅದೆಷ್ಟೋ ಭಾವಗಳ ಜೊತೆ ಇರೋ,ಕನಸುಗಳಿಗೆ ನೀರೆರೆದು ಪೋಷಿಸೋ ,ಸೋತಾಗ ಧೈರ್ಯ ತುಂಬೋ,ಬೀಗೋವಾಗ ಗುದ್ದಿ ಬೀಗೋ ಗುಣಗಳ ಕಡಿಮೆಯಾಗಿಸೋ..... ಅಣ್ಣ,ಗೆಳೆಯ,ಆತ್ಮೀಯ ,ಮುದ್ದಕ್ಕನ ಮುದ್ದು ಗಂಡ ಈ ಬಾವ :)

ಇರಲಿ ಹೀಗೊಂದು ಚಂದದ ಭಾವ ಬಂಧ ಈ ಬಾವನೊಡನೆ,ಮನಸ್ವಿಯ ಜೊತೆ ಯಾವಾಗಲೂ.

ನಿನ್ನೊಟ್ಟಿಗೆ ಮಾಡಿದ್ದ ಅದೆಷ್ಟೋ ಕಿಲಾಡಿತನಗಳಿವೆ ..ನೀನೂ ನಮ್ಮೊಟ್ಟಿಗೆ ಸೇರಿದಾಗ ನಮ್ಮಗಳ ತರಹವೇ ಆಡೋ ಒಂದಿಷ್ಟು ತರಲೆಗಳಿವೆ...ಅಕ್ಕ ಬಂದು ಜೋರು ಮಾಡಿ ಪುಟ್ಟಿ ಮಲಗಿದ್ದಾಳೆ ಅನ್ನೋ ತನಕವೂ ನಮ್ಮಗಳ ಮನೆ ಹಂಚು ಹಾರಿಸೋ ಕೆಲಸ ಸಾಗ್ತಾನೆ ಇರುತ್ತೆ ಜೊತೆ ಸೇರಿದ್ದಾಗ...ಅಕ್ಕನಿಗೆ ಕಾಲೆಳೆದು ,ಗೋಳು ಹೊಯ್ಯೋ ನಿನ್ನಲ್ಲಿ ಕಳಿಸಿಕೊಡೋ ಅವಳನ್ನ ಮನೆಗೆ ಅಂದ್ರೆ ಮಾತ್ರ "ನೀನೇ ಬಾ ನಮ್ಮನೆಗೆ ,ನಿನ್ನಕ್ಕನ ಕಳಿಸಿದ್ರೂ ನನ್ನ ಮಗಳನ್ನಂತೂ ಕಳಿಸಲ್ಲ "ಅನ್ನೋ ಸಿದ್ಧ ಉತ್ತರವೊಂದು ಯಾವಾಗ್ಲೂ ರೆಡಿ ಇರುತ್ತೆ !! ಹಾಗಾಗಿ ನಿಮಗಿಬ್ಬರಿಗಲ್ಲದಿದ್ರೂ ಮಗಳಿಗೆ ಸೋತು ನಾವುಗಳೂ ಅರ್ಧ ರಜೆಯನ್ನ ನಿಮ್ಮನೆಯಲ್ಲಿ ಕಳೆಯಲೇ ಬೇಕಿರುತ್ತೆ.ಮತ್ತೆ ನಿಂದದೇ ಆರೋಪದ ಪಟ್ಟಿ ಸಿದ್ದವಿರುತ್ತೆ ಮತ್ತೊಮ್ಮೆ ನಾ ಮನೆಗೆ ಬರೋ ಹೊತ್ತಿಗೆ "ಈ ಹುಡುಗಿ ದೊಡ್ಡೋಳಾಗಿದಾಳೆ ,ಇವಳಿಗೆ ನಾವುಗಳು ನೆನಪೂ ಇರಲ್ಲ" ಅಂತಿನ್ನೇನೇನೋ ಬ್ಲಾ ಬ್ಲಾ ಮಾತುಗಳು ಮತ್ತೆ ನಿಮ್ಮನೆ ಕಡೆಗೆ ಎಳೆದುಕೊಂಡು ಹೋಗುತ್ತೆ ನನ್ನನ್ನ
(ಈ ಮಾತುಗಳಿಗೆ ನೀ ಅಜ್ಜ ಅಜ್ಜಿಯಲ್ಲಿ ಬೈಸಿಕೊಳ್ತೀಯ ಯಾವಾಗ್ಲೂ ...ಅರ್ಧ ರಜೆ ನಿಮ್ಮನೆಯಲ್ಲೇ ಇರ್ತಾಳೆ ಅವ್ಳು ..ನಮ್ಮಗಳಿಗೂ ಬಿಡೋ ಸ್ವಲ್ಪ ಮಾತುಗಳಾಡೋಕೆ ಅವಳೊಟ್ಟಿಗೆ ಅನ್ನೋ ಅವರ ಬೇಸರಕ್ಕೆ).

ಏನೇ ಆಗಲಿ ಬಾವ...ಒಂದಿಷ್ಟು ಹುಸಿ ಮುನಿಸು ,ನೀ ಕಾಲೆಳೆಯೋ ನನ್ನ ಚಂದದ ಕನಸ ಹುಡುಗ,ಒಂದಿಷ್ಟು ಆತ್ಮೀಯತೆ,ತೀರಾ ಆಗೋ ಸಲುಗೆ ಕೊನೆಗೆ ನನ್ನ ಆ ಕನಸ ಹುಡುಗನನ್ನ ನೀ ಪಾಪ ಅಂದು ಒಂದಿಷ್ಟು ಆಡಿಕೊಂಡ ಮೇಲೆ ನನ್ನ ಸಿಟ್ಟಲ್ಲಿ ಮುಗಿದು ,ಅಕ್ಕನ ಮುದ್ದಲ್ಲಿ ಮತ್ತೆ ಶುರುವಾಗಿ ಮತ್ತದೇ ದಿನಚರಿ ಮುಂದುವರೆಯೋವಾಗ ಏನೋ ಒಂದಿಷ್ಟು ಖುಷಿಗಳು ನನ್ನೊಳಹೊಕ್ಕ ಅನುಭವ.

ನಂಗತೀ ಇಷ್ಟ ನಿಮ್ಮಗಳ ಪ್ರೀತಿ...

ಮುದ್ದಿಸೋ ಅಕ್ಕ,ಪ್ರತಿಯ ಹೆಜ್ಜೆಯಲ್ಲೂ ಬದುಕ ಹೇಳಿಕೊಡೋ ಬಾವ,ಅಲ್ಲಿಂದಲೇ ನನ್ನೆಲ್ಲಾ ಭಾವಗಳಿಗೂ ಸಾಥ್ ನೀಡೋ ಇದೇ ಅಕ್ಕನ ಪಡಿಯಚ್ಚು ಇನ್ನೊಂದು ಅಕ್ಕ,ಪ್ರೀತಿ ಮಾಡೋ ಅಣ್ಣನಾಗೋ ತಮ್ಮ , ಪ್ರೀತಿಯ ಅರಮನೆಯ ಈ ಮುದ್ದು ದೊಡ್ದಕ್ಕ -ಬಾವಂಗೆ ಇಲ್ಲಿಂದೊಂದು ಶುಭಾಶಯ ಹೇಳ ಬಂದೆ ನಾನಿವತ್ತು ಈ ಅಕ್ಕನ ತವರು ಮನೆಯ ಕಡೆಯಿಂದ :)

ಚಂದದ ದಾಂಪತ್ಯದ ಒಲವಲ್ಲಿ,
ಸ್ನೇಹದ ಸಲುಗೆಯ ಸೆಲೆಯಲ್ಲಿ,
ಪ್ರೀತಿಸೋ ಜೀವಗಳ ಆಶಯಗಳಲ್ಲಿ,
ಮುದ್ದು ಪುಟ್ಟಿಯ ನಗುವಲ್ಲಿ,
ಅಜ್ಜಾ ಅಜ್ಜಿಯ ಕಣ್ರೆಪ್ಪೆಯ ಜೋಪಡಿಯಲ್ಲಿ,
ಅಪ್ಪ ಅಮ್ಮನ ಬದುಕ ಕನಸುಗಳಲ್ಲಿ,
ಇರಲಿರಲಿ ಈ ಒಲವ ಪ್ರೀತಿ ಚಿರಕಾಲ ಹೀಗೇ .
ನಗುತಿರಿ ಯಾವತ್ತೂ ...ತಬ್ಬಿರೋ ಈ ಬಂಧಗಳ ಜೊತೆ.....

ಪ್ರೀತಿಯಿಂದ ,
ನಿಮ್ಮನ್ನ ಪ್ರೀತಿಸೋ ಮನೆ ಮಂದಿ

Monday, November 11, 2013

ಹೀಗೊಂದು ಧನ್ಯತೆಯ ಭಾವ...



ಇವತ್ತಿಲ್ಲಿ ನಿರುಪಾಯದ ಐವತ್ತು ಭಾವಗಳ ಒಡತಿಯಾಗಿ ಹೀಗೊಂದು ಬ್ಲಾಗ್ ಮುಖಪುಟದ ಖುಷಿಯ ಹಂಚಿಕೊಳ್ಳೋಕೆ ನಾ ಬಂದೆ ತುಂಬಾ ದಿನದ ನಂತರ ಮತ್ತೆ ಭಾವಗಳ ಅರಮನೆಗೆ..

(ನೀವು ತೀರಾ ಇಷ್ಟಪಟ್ಟಿದ್ದ ೭ ನಿರುಪಾಯದ ಭಾವಗಳ ಬದಿಗಿರಿಸೋಕೆ ಹೋಗಿ ಆ ಭಾವಗಳು ಬ್ಲಾಗ್ ಇಂದಾನೇ ಕಾಣೆಯಾದುದ್ದಕ್ಕೆ ಕ್ಷಮೆ ಕೇಳ್ತಾ )

ಕುಳಿತು ಮಾತಾಡಿದ್ದಿಲ್ಲ ...ಅಲ್ಲೆಲ್ಲೋ ಫೇಸ್ಬುಕ್ ಮೇಸೇಜ್ ಗಳಲ್ಲಿ ಅಪರೂಪಕ್ಕೆ ಮಾತಾಡಿದ್ದು ಬಿಟ್ಟರೆ ನಂಗ್ಯಾವ ಪರಿಚಯಗಳೂ ಇಲ್ಲ .ಬ್ಲಾಗ್ ಓದಿ ಕಾಮೆಂಟಿಸಿ ಸುಮ್ಮನಾಗೋ ಅಷ್ಟೇ ಪರಿಚಯ ಅವತ್ತು ನಂಗಿದ್ದಿದ್ದು..ಮಾತಾಡೋದು ಕಡಿಮೆ .ಸುಮ್ಮನೆ ಕುಳಿತು ಮಾತು ಕೇಳೋದೇ ಇಷ್ಟ ...ಹೀಗೋರಾವಾಗ ಬ್ಲಾಗ್ ನಲ್ಲಿ ಸಿಕ್ಕಿದ್ದ ಅಣ್ಣ ಪ್ರೀತಿಯಿಂದ ನನ್ನೆಲ್ಲಾ ಭಾವಗಳನೂ ಓದಿ ,ಮೆಚ್ಚಿ, ಬೆನ್ನು ತಟ್ಟಿ ಪ್ರೋತ್ಸಾಹಿಸಿ ಕರೆದು ಮಾತಿಗೆ ಕೂರಿಸಿದ್ರು. ನನ್ನ ಮಾತು ಶುರುವಾಗಿದ್ದು ಇವತ್ತಿಲ್ಲಿ ಸುಮ್ಮನೆ ಕೂರೋಕೆ ಆಗದಷ್ಟು ಮಾತಾಡೋಕೆ ಬಂದಿದ್ದು ಅಲ್ಲಿಂದಲೇ ಏನೋ .

ವಾರದ ಹಿಂದಿನ ಭಾವವಿದು ...ನನಗಷ್ಟಾಗಿ ಪರಿಚಯವಿಲ್ಲದಿದ್ದರೂ ,ಅದೆಷ್ಟೋ ಬ್ಲಾಗ್ ಗಳ ನೋಡದಿದ್ದರೂ ಬ್ಲಾಗಿಗರ ಬಳಗದಲ್ಲಿ ನಾ ಪುಟ್ಟ ತಂಗಿ ಅನ್ನೋದರ ಅರಿವಿತ್ತು .ಆದರೆ ಒಮ್ಮೆಯೂ ಮಾತಾಡದೇ ಎದುರು ಬಂದಾಗ "ನೀವು ಅವರಲ್ವಾ?" ಅಂತ ನೀವೆಲ್ಲಾ ಗುರುತಿಸುತ್ತೀರ ಅನ್ನೋದು ಖಂಡಿತ ಗೊತ್ತಿರಲಿಲ್ಲ .ನಾನವತ್ತೂ ಹೇಳಿದ್ದೆ ..ನಂಗ್ಯಾರೂ ಗೊತ್ತಿಲ್ಲ .ಅಲ್ಲಿ ಬಂದು ಸುಮ್ಮನೇ ಮುಖ ಮುಖ ನೋಡೋದಾಗುತ್ತೆ ಅಂತ .ಆದರೆ ನಾನಂದುಕೊಂಡಿದ್ದು ತಲೆಕೆಳಗಾಗಿತ್ತು. ನಗುಮೊಗದಿ ಸ್ವಾಗತಿಸೋ ಅಣ್ಣಂದಿರು ..ಕೂಸೆ ಅಂತಾನೆ ಮಾತಾಡಿಸೋ ದೊಡ್ಡಣ್ಣ , ಅಕ್ಕಾ ಹೆಚ್ಚೋ ಅಣ್ಣ ಹೆಚ್ಚೋ ಅಂತ ಮುಖ ಊದಿಸಿ ಪ್ರೀತಿಯಿಂದ ಮನೆಗೆ ಆಮಂತ್ರಿಸೋ ಈ ಅಣ್ಣ ಅತ್ತಿಗೆ ,ಎಷ್ಟು ಹೊತ್ತಿಗೆ ಬರ್ತೀಯ, ಗೊತ್ತಾಗುತ್ತಾ ಬರೋಕೆ ಅಂತ ಕಾಳಜಿಸೋ ನಾ ಕಾಡಿ ಬೇಡಿ ಅಲ್ಲಿಯೇ ಉಳಿಸಿಕೊಂಡಿದ್ದ ಗೆಳೆಯ,ನೀನಲ್ಲಿಂದ ಬಂದಿದ್ದು ಖುಷಿ ಆಯ್ತು ಅಂತ ಪೂರ್ತಿಯಾಗಿ ಮಾತಿನಲ್ಲೇ ಕಟ್ಟಿ ಹಾಕೋ ಇವರುಗಳ ಜೊತೆಗಿನ ಆ ದಿನ ನಾನಂದುಕೊಂಡಿದ್ದು ನಾನಿಲ್ಲಿಗೆ ಬರದಿದ್ರೆ ಏನನ್ನೋ ಕಳಕೊಳ್ತಿದ್ದೆ ಅಂತ .

ಇಲ್ಲೊಂದಿಷ್ಟು ಸಂಭ್ರಮವಿತ್ತು ..ಎಲ್ಲರ ಮುಖದಲ್ಲೂ ಏನೋ ಒಂದು ಲವಲವಿಕೆಯಿತ್ತು...ತೀರಾ ಅನ್ನೋ ಖುಷಿಗಳಿದ್ವು ...ಹರಟೆಯಿತ್ತು,ಮಾತಿತ್ತು,ನಗುವಿತ್ತು,ಕಲರವವಿತ್ತು ....

ಮನೆಯಲ್ಲಿನ ಹಬ್ಬಕ್ಕಿಂತಲೂ ಇಲ್ಲಿಯ ಹಬ್ಬವೇ ತೀರಾ ಚಂದವಾಗಿತ್ತು ...

ಎಲ್ಲರೂ ಅವರ ಪುಸ್ತಕ ಬಿಡುಗಡೆಯಾಗ್ತಿದ್ದ ಖುಷಿಗಿಂತ ತುಸು ಜಾಸ್ತಿ ಖುಷಿಯಲ್ಲಿದ್ದರು..ಬ್ಲಾಗ್ ಮುಖ ಪುಟದ ಸ್ನೇಹದ ಅಲೆಯಲ್ಲಿ ಎಲ್ಲರದೂ ಮಿಂದೆದ್ದ ಚಂದದ ಭಾವ.ಪ್ರೀತಿ ಒಲವಲ್ಲಿ ಭಾವ ತೀವ್ರತೆಯಲ್ಲಿ ತೇಲುತ್ತಿದ್ದ ಈ ಭಾವ ವಾರದ ಹಿಂದೆ ನಯನ ಸಭಾಂಗಣದಲ್ಲಿ ಸೇರಿದ್ದ ಎಲ್ಲರಿಗೂ ದಕ್ಕಿತ್ತು ಅಂದರೆ ಅತಿಶಯೋಕ್ತಿ ಆಗಲಾರದು ..

ನಂಗಿಲ್ಲಿ ದಕ್ಕಿದ್ದು ಒಂದಿಷ್ಟು ಹೇಳಲಾಗದ ಖುಷಿಗಳು ..ನಾನ್ಯಾರಿಗೂ ಪರಿಚಯವಿಲ್ಲ ಅಂತ ಹಿಂದಿನ ದಿನವಷ್ಟೇ ತಮಾಷೆ ಮಾಡಿದ್ದಾಗ "ನನ್ನ ಕ್ಯಾಮರಾಕ್ಕಂತೂ ನೀ ಚಿರಪರಿಚಿತೆ" ಅಂತ ಕಾಲೆಳೆದಿದ್ದ ಅಣ್ಣ ಪ್ರೀತಿಯಿಂದ ಎಲ್ಲರಿಗೂ ಇವಳು ನನ್ನ ಎರಡನೇ ಮಗಳು ಅನ್ನೋವಾಗ ಮಾತಿರಲಿಲ್ಲ ನನ್ನಲ್ಲಿ. ಮನ ತುಂಬಿತ್ತು .ಎಲ್ಲರೂ ಕಾಕಾ ಅಂತಿದ್ದ ಈ ಹಿರಿಯರ ನೋಡಿ ,ಮಾತಾಡಿದಾದ ಅವರು ನಕ್ಕು ಚಂದದ ಶುಭಾಶಯವೊಂದ ಹೇಳಿದಾಗ ಸಿಕ್ಕ ಧನ್ಯತೆಯ ಭಾವಕ್ಕೆ ನೀವು ಕಾರಣರು ಅಣ್ಣಾ...ಮೊದಲ ಭೇಟಿಯ ಈ ಸಂಭ್ರಮದಲ್ಲಿ ಪ್ರೀತಿಯಾಯ್ತು ನನ್ನ ಮೇಲೆ ನಂಗೇ :ಫ್

ಇಲ್ಲೊಂದು ಚಂದದ ಗೆಳೆಯರ ಬಳಗವಿದೆ.ಎಲ್ಲರನೂ ಕಾಲೆಳೀತಾ ,ಎಲ್ಲರನೂ ನಗು ಮೊಗದಿ ಮೋಡಿ ಮಾಡೋ ಇವರುಗಳ ಜೊತೆ ಒಂದೆರಡು ಗಂಟೆ ಕುಳಿತು ಈ ಚಂದದ ಕಾರ್ಯಕ್ರಮದ ಖುಷಿಯ ದಕ್ಕಿಸಿಕೊಂಡಿದ್ದಾಗಿದೆ.ಈ ಪ್ರೀತಿಗೆ ,ಇವರೆಲ್ಲರ ಈ ಆತ್ಮೀಯತೆಗೆ ಹೇಳ ಬೇಕಿರೋ ಮಾತುಗಳೆಲ್ಲಾ ಇಲ್ಲೆಯೇ ಉಳಿದಿದೆ.ನಿಮ್ಮ ಈ ಪ್ರೀತಿ ಆ ದೇಶದಲ್ಲಿರೋ ಅಣ್ಣನನ್ನ ಇದೊಂದು ದಿನಕ್ಕಾಗಿ ಇಲ್ಲಿಯ ತನಕ ಎಳೆದುಕೊಂಡು ಬಂದಿದೆ ಅಂತಾದ್ರೆ ನಿಜಕ್ಕೂ ಹೆಮ್ಮೆಯಾಗುತ್ತೆ ನಿಮ್ಮೆಲ್ಲರ ಮೇಲೆ ..ಬ್ಲಾಗ್ ಪ್ರೀತಿಯೇ ಅಂತಹುದ್ದೇನೋ ..ಎಲ್ಲರನೂ ಕಾಡುತ್ತೆ ,ಎಲ್ಲರನೂ ಅಪ್ಪುತ್ತೆ ,ಎಲ್ಲರಿಗೂ ದಕ್ಕುತ್ತೆ ಕೂಡಾ....

ಸಿಕ್ಕ ಒಂದಿಷ್ಟು ಡೈರಿಮಿಲ್ಕ್ ನಲ್ಲಿ ಸಧ್ಯ ಲಾಲಿಪಾಪ್ ಪುಟ್ಟಿಯನ್ನಾಗಿ ಮಾಡಲಿಲ್ಲ ಇವರೆನ್ನ ಅಂದುಕೊಳ್ಳುತ್ತಿದ್ದಾಗಲೇ ಅಲ್ಲೆಲ್ಲೋ ಸಿಕ್ಕ ಲಾಲಿಪಾಪ್ ! ಮುಖ ಊದಿಸಿ ಪುಟ್ಟಿಯಲ್ಲ ನಾ ಅಂದ್ರೆ ನಿಂಗೆ ಅಂತಾನೆ ಅಲ್ಲಿಂದ ತಂದಿದ್ದು ಕಣೇ ನೀ ಇಲ್ಲಿ ಎಲ್ಲರಿಗೂ ಪುಟ್ಟಿನೇ ಅಂತ ಎಲ್ಲರೂ ನಗೋ ತರ ಮಾಡೋ ಬ್ಲಾಗಿನಿಂದಲೇ ಪರಿಚಿತನಾಗಿರೋ ಆತ್ಮೀಯ.ಖುಷಿಯಿದೆ ನಿಮ್ಮಗಳ ಎದುರು ಪುಟ್ಟ ಪುಟ್ಟಿಯಾಗಿರೋಕೂ...

ನಿಮ್ಮೆಲ್ಲರ ಜೊತೆ ಮಾತಾಡಿ ನಕ್ಕ ಆ ಚಂದದ ಬೆಳಗು ...ಕಲೆತು ,ಕುಳಿತು ,ಹರಟಿ ,ಜಗಳವಾಡಿ ಎಲ್ಲರೊಟ್ಟಿಗೆ ಊಟ ಮಾಡಿದ ಆ ಚಂದದ ಮಧ್ಯಾಹ್ನ .....ಅಣ್ಣ ಅತ್ತಿಗೆ ಪುಟ್ಟ ತಂಗಿಯ ಜೊತೆಗೆ ಮಗಳಾಗಿ, ತಂಗಿಯಾಗಿ,ಅಕ್ಕನೂ ಆಗಿ ಮಾತಾಡಿ , ರಾತ್ರಿಯನೂ ಬಿಡದೆ ಇಡೀ ದಿನ ನಕ್ಕ ಆ ದಿನ...

ಹೌದು...ಇಲ್ಲೊಂದು ಚಂದದ ಮನೆಯಿದೆ..ಭಾವಗಳ ಜೋಪಾನ ಮಾಡೋ ಆತ್ಮೀಯ ಮನೆಮಂದಿಯಿದ್ದಾರೆ.ಅಣ್ಣಂದಿರ ಪ್ರೀತಿ,ಅಕ್ಕಂದಿರ ಮುದ್ದು ,ತಂಗಿಯ ಕೀಟಲೆ,ಕಾಲೆಳೆಯೋ ,ನಗಿಸೋ ಗೆಳೆಯರ ದೊಡ್ಡ ಬಳಗ ಎಲ್ಲವೂ ಇದೆ ಈ ಕುಟುಂಬದಲ್ಲಿ.ಬರೆದಿದ್ದು ಬರಿಯ ೫೦ ಸಾದಾ ಸೀದಾ ಭಾವಗಳು ..ಪಡೆದಿದ್ದು ಒಂದು ದೊಡ್ಡ ಪ್ರೀತಿಯ ಪರಿವಾರ ಅನ್ನೋದರ ಅರಿವು ಸಿಕ್ಕಿದ್ದು ಮಾತ್ರ ಈಚೆಗೆ !!...ಮೊಗೆ ಮೊಗೆದು ಕೊಡೋ ನಿಮ್ಮ ಪ್ರೀತಿಗಳ ಹಾಗೆಯೇ ಜೋಪಾನ ಮಾಡ್ತೀನಿ ನಾ.

ಹೀಗೊಂದು ಚಂದದ ಮನೆಯ ಮುದ್ದಿನ ಪುಟ್ಟಿ ಅನ್ನೋ ಕೋಡಿನ ಜೊತೆಗೆ -

ಬರೆದಿರೋ ಐವತ್ತೂ ಭಾವಗಳ ಪ್ರೀತಿಯಿಂದ ಓದಿ ಪ್ರೋತ್ಸಾಹಿಸಿದ್ದೀರ..ತಪ್ಪುಗಳನ್ನೂ ಚಂದವಾಗೇ ತಿಳಿಸಿಕೊಟ್ಟಿದ್ದೀರ ..ಅಲ್ಲಿ ಮೊದಲ ಭೇಟಿಯಲ್ಲಿ ಆತ್ಮೀಯರಾಗಿದ್ದೀರ..

ಇರಲಿರಲಿ ಈ ಪ್ರೀತಿ ಚಿರಕಾಲ ಹೀಗೆ...

ಪ್ರೀತಿಯಿಂದ,

ನಿರುಪಾಯಿ  ನಾ