Wednesday, December 11, 2013

"ಲ್ಯಾರಿ ಅಜ್ಜ" ಅನ್ನೋ ನೆನಪು...        ಬೆಳಿಗ್ಗೆ ಬೆಳಿಗ್ಗೆ ಅಮ್ಮ ’ಲ್ಯಾರಿ ಅಜ್ಜ ಕೊಟ್ಟ ಆ ಟೆಲಿಸ್ಕೋಪ್ ನಾ ಗುಜರಿಯವನಿಗೆ ಕೊಡ್ಲಾ ’ ಅಂತ ಕೇಳಿದಾಗ ರೇಗಿ ಫೋನಿಟ್ಟ ಮೇಲೆ ಈ ಲ್ಯಾರಿ ಅಜ್ಜ ಯಾಕೋ ತುಂಬಾ ನೆನಪಾದ್ರು ..
ಹೌದಲ್ವಾ ತಿಂಗಳೆರಡಾಯ್ತು ಇವರಿಂದ ನಂಗೆ ಮೇಲ್ ಬಂದು ಅಂತ ಯೋಚಿಸ್ತಾನೆ ಮತ್ತೆ ಮೇಲ್ ಚೆಕ್ ಮಾಡಬಂದೆ .ಇರಲಿಲ್ಲ ಅವರಿಂದ್ಯಾವುದೇ ಮೇಲ್.ಅಣುಕಿಸುತ್ತಿದ್ದವು ಅಲ್ಲೊಂದಿಷ್ಟು ಗೂಗಲ್ ಪ್ಲಸ್,ಲಿಂಕರ್ ಮೇಲ್ ಗಳು ನನ್ನ.
ಅವರ ಜೊತೆಗಿನ ಹಳೆ ಮೇಲ್ ಗಳನ್ನ ಓದ್ತಾ ಜಾರಿದ್ದೆ ಅದೇ ದಿನಗಳಿಗೆ...

ಆ ಲ್ಯಾರಿ ಅಜ್ಜಾ-

  ನನಗಿನ್ನೂ ಐದರ ವಯಸ್ಸು ಆಗ.ಏನೋ ರಿಸರ್ಚ್ ಗೆ (ಯಾವುದದು ಅನ್ನೋ ತಿಳಿಯೋ ವಯಸ್ಸಾಗಿರಲಿಲ್ಲ ನಂಗೆ) ಅದ್ಯಾವುದೋ  ದೂರದ ದೇಶದಿಂದ  ನನ್ನೂರಿಗೆ ಬಂದಿದ್ದ ಬಿಳಿಯ ಕೂದಲಿನ ಅಷ್ಟೇ ಬಿಳಿಯ ಮುಖದ ಅಜ್ಜ ಅವರು.
ಸರಿ ಸುಮಾರು ನನ್ನಜ್ಜನ ವಯಸ್ಸಿನವರು.ನಾಲ್ಕು ತಿಂಗಳು ನಮ್ಮನೆಯಲ್ಲೇ ಉಳಿದುಕೊಂಡು ಬೆಳಿಗ್ಗೆಯಿಂದ ಸಂಜೆಯ ತನಕ ಕಾಡು ಅಲೀತಾ ರಾತ್ರಿ ಪೂರ್ತಿ ಮೆತ್ತು(ಅಟ್ಟ) ಹತ್ತಿ ಅದೇನೇನೋ ಬರೀತಾ ಕೂರೋ ಈ ಅಜ್ಜ ಅಂದ್ರೆ ಒಂದಿಷ್ಟು ಕುತೂಹಲ.
’ಲ್ಯಾರಿ’ಅನ್ನೋ ಅವರ ಹೆಸರನ್ನೂ ಹೇಳೋಕೆ ಬರದ ನಾ ಅವರ ಬೆನ್ನು ಹಿಂದೆ ಬಿದ್ದ ಬೇತಾಳದ ತರಹ ಅವರ ಜೊತೆಯೆ ಅಲೆಯುತ್ತಿದ್ದೆ.ಅಪ್ಪ ,ಅಮ್ಮ,ಕೊನೆಗೆ ನನ್ನಜ್ಜ ಗದರಿದರೂ ಕೇಳದೆ ಅವರ ಜೊತೆ ನಾನೂ ಕಾಡು  ಅಲೆಯೋಕೆ ಹೋಗ್ತಿದ್ದೆ ಆಗ.(ಯಾಕಂದ್ರೆ ಶಾಲೆ ನೋಡಿದ್ದೆ ಆರು ವರ್ಷಕ್ಕೆ.ಮನೆಯಲ್ಲಿ ಮಾಡೋ ಕಿಲಾಡಿಗಳಿಗೆ ರೇಗುತ್ತಿದ್ದ ಎಲ್ಲರಿಗಿಂತ ಈ ತಾತನಲ್ಲೇನೋ ವಿಶೇಷತೆ ಇದೆ ಅನ್ನಿಸಿಬಿಡ್ತಿತ್ತು.ಅಥವಾ ಅವರು ಕೊಡೋ ಬಣ್ಣ ಬಣ್ಣ ಚಾಕಲೇಟುಗಳಿಗಾಗಿಯೋ ಗೊತ್ತಿಲ್ಲ ನಂಗಿನ್ನೂ).
ಅವರೂ ಅಷ್ಟೇ ಹೆಗಲ ಮೇಲೆ ಕೂರಿಸಿಕೊಂಡು ಕಾಡಲ್ಲಿ ಕಾಲು ಕಾಲಿಗೂ ಸಿಗೋ ಎಲ್ಲದರ ವೈವಿಧ್ಯತೆಗಳ ಅವರದೇ ಮಾತುಗಳಲ್ಲಿ ಹೇಳ್ತಾ ಹೋಗ್ತಿದ್ರು.
ಗದರದೇ ನಾ ಕೇಳೋ ಎಲ್ಲಾ ಪ್ರಶ್ನೆಗಳಿಗೂ ಪ್ರೀತಿಯಿಂದ ಉತ್ತರಿಸೋ ಈ ಅಜ್ಜ ಕೊನೆಗೂ ನಂಗೆ ಪ್ರೀತಿಯ ಲ್ಯಾರಿ ಅಜ್ಜ ಆಗಿದ್ರು!
 
ಅವರ ಹಾಸಿಗೆಯಿಂದ ಹಿಡಿದು ಎಲ್ಲದರಲ್ಲೂ ಏನೋ ಹೊಸದು ನೋಡೋ ಖುಷಿ ನಮ್ಮಗಳಿಗೆ.ಟೆಲಿಸ್ಕೋಪ್ ಹಿಡಿದು  ಕಾಡಿನಿಂದ ಹಿಡಿದು ತಂದ ಚಿಕ್ಕ ಚಿಕ್ಕ ಹುಳಗಳನ್ನ ಇಂಚಿಂಚೂ ಬಿಡದೇ  ಅವರು ನೋಡ್ತಿದ್ರೆ ಆಮೇಲೆ ನಂಗೂ ನೋಡೋ ಧಾವಂತ .ಏನೋ ದೊಡ್ಡದಾಗಿ ಅರ್ಥವಾಗೋ ತರಹ ನೋಡ್ತಿದ್ದೆ ನಾನೂನೂ!ಅಪ್ಪ ಅಮ್ಮ ಎಷ್ಟೇ ಗದರಿದ್ರೂ ನಾ ಲ್ಯಾರಿ ಅಜ್ಜನ ಬಿಟ್ಟು ಎದ್ದು ಹೋಗ್ತಿರಲಿಲ್ಲ .ಅವರೂ ನನ್ನ ಬಿಟ್ಟುಕೊಡ್ತಿರಲಿಲ್ಲ.
ಎಲ್ಲವನ್ನೂ ಬೆರಗುಗಣ್ಣಿನಿಂದಲೇ ನೋಡೋ ಈ ಪೋರಿ ಅದೆಷ್ಟು ಪ್ರಶ್ನೆ ಕೇಳ್ತಾಳೆ ಅಂತ ಪ್ರೀತಿಯಿಂದ ನನ್ನ ಅಜ್ಜನಲ್ಲಿ ಆಪಾದನೆ ಮಾಡೋ ಲ್ಯಾರಿ ಅಜ್ಜ ನನಗೊಂದು ಕೌತುಕ ಪ್ರಪಂಚ ಆಗ.
ನಾಲ್ಕು ತಿಂಗಳು ಜೊತೆಯಿದ್ದ ಅಜ್ಜ ಹೊರಟಾಗ ತೀರಾ ಅನ್ನೋ ಅಷ್ಟು ಅತ್ತಿದ್ದೆನಂತೆ ನಾ(ಅತ್ತಿದ್ದನ್ನ ಯಾವಾಗ್ಲೂ ಮರೆತುಬಿಡ್ತೀನಿ). ಅವರೂ ಕಣ್ಣಲ್ಲಿ ನೀರಿಟ್ಟುಕೊಂಡೆ ಹೋಗಿದ್ರಂತೆ ಮತ್ತೆ ಬರ್ತೀನಿ ಪುಟ್ಟಿ ಆ ನಿನ್ನ ಶಕ್ತಿಮಾನ್ ನೋಡೋಕೆ ಅಂತಂದು.ಆಗ ನ್ಯಾಷನಲ್ ನಲ್ಲಿ ಬರುತ್ತಿದ್ದ ಶಕ್ತಿಮಾನ್ ಬೇಕಂತ ನಾ ಹಟ ಮಾಡಿದ್ರೆ ಮನೆಯವರೆಲ್ಲ ಸಿಕ್ತಾನೆ ಅವ ನಿನ್ನ ಗಂಡನಾಗಿ ಅಂತ ಸಮಾಧಾನ ಮಾಡ್ತಿದ್ರಂತೆ!(ಈಗಲೂ ನಗ್ತಾರೆ ಎಲ್ರೂ ಶಕ್ತಿಮಾನ್ ಬಗೆಗೆಗಿನ ನನ್ನ ಹಟಕ್ಕೆ).
ಹೊರಟಿದ್ರೂ ಕೊನೆಗೂ ಇಡೀ ಮನೆ ಮಂದಿಗೆ ಕೃತಜ್ನತೆಯ ಕೈ ಮುಗಿದು  ತನ್ನೂರ ಕಡೆಗೆ!

ಹೀಗೇ ಹೊರಟ ಲ್ಯಾರಿ ಅಜ್ಜ ಮತ್ತೆ ನನ್ನೂರಿಗೆ ಬಂದಿದ್ದು ಕಳೆದ ವರುಷ ಭಾರತಕ್ಕೆ ಬಂದಾಗ.ಅಕ್ಷರಶಃ ಮರೆತೇ ಹೋಗಿದ್ದ ಇವರನ್ನ ಮತ್ತೆ ಮನೆಯಲ್ಲಿ ನೋಡ್ತೀವಿ ಅನ್ನೋ ಕನಸು ಕೂಡಾ ಕಂಡಿರಲಿಲ್ಲ ನಾವು.ನೋಡಿದ ತಕ್ಷಣವೇ ನನ್ನೊಟ್ಟಿಗೆ ಕಾಡು ಅಲೆಯೋಕೆ ಬರ್ತಿದ್ದ ಪುಟ್ಟಿ ಇವಳೇನಾ ಗುರುತು ಸಿಗೋಕಾಗದಷ್ಟು ಬೆಳೆದು ನಿಂತಿದ್ದಾಳೆ ಅಂತ ಆಶ್ಚರ್ಯದಿಂದ ಕೇಳೋವಾಗ ಏನೋ ಖುಷಿ ನಂಗೆ. ನಂಗಂತಾ ಮತ್ತೆ ತಂದಿರೋ ಚಾಕಲೇಟ್ ಜೊತೆಗೆ ಒಂದು ಪುಟ್ಟ ಕವರ್ ತೆರೆದು ನೋಡಿದ್ರೆ ಒಂದಿಷ್ಟು ಚಂದದ ಶಕ್ತಿಮಾನ್ ಚಿತ್ರಗಳು!! ನಾ ಮರೆತ ಶಕ್ತಿಮಾನ್ ನಾ ಈ ತಾತ ನೆನಪಿಟ್ಟುಕೊಂಡಿದ್ದ ನೋಡಿ ನಂಗೂ ಆಶ್ಚರ್ಯವಾಗದಿರಲಿಲ್ಲ!.
ಜೊತೆಗೆ ಅವತ್ತು ಅಲೆದಾಡಿದ್ದ ಅದೇ ಕಾಡ ಒಳಹೊಕ್ಕರೆ ಅದೊಂದು ಬಯಲ ತರ ಅನ್ನಿಸಿಬಿಡ್ತು ಪುಟ್ಟಿ ..ಬಾ ಮತ್ತೆ ಒಂದು ಸಲ ಆ ಕಾಲು ಹಾದಿಯಲ್ಲಿ ಹೋಗಿ ಬರೋಣ ಆದರೆ ಅವತ್ತಿನ ತರಹ ನಿನ್ನ ಕೂಸುಮರಿ ಮಾಡೋಕೆ ನಂಗಾಗಲ್ಲ ಇವತ್ತು ಅಂತ ಮುಖ ಬಾಡಿಸಿದ್ದ ಅಜ್ಜಂಗೆ ನಾನಂದಿದ್ದೆ ಇದಾನಲ್ಲ ಶಕ್ತಿಮಾನ್ ಅಂತ ಕಣ್ಣು ಮಿಟುಕಿಸಿ. ಒಂದೀಡಿ ದಿನದ ಮಾತುಕತೆಗಳು ಮುಗಿದಾದ ಮೇಲೆ ನಾವಿಬ್ರೂ ಆ ರಾತ್ರಿಯ ಅದೇ ಮೆತ್ತಿನ ಅವರ ರೂಮಲ್ಲಿ ಕೂತು ಏನೇನೋ ಮಾತಾಡಿದ್ವಿ(ಆ ರೂಮಿಗೆ ಈಗಲೂ ಲ್ಯಾರಿ ಅಜ್ಜನ ರೂಮು ಅಂತೀವಿ ನಾವು)ಹೋದ ವರ್ಷವೇ ತಿಳಿದಿದ್ದು ಅವರು ಮಂಗನ ಖಾಯಿಲೆಗೆ ಏನೋ ಔಷದಿ ಹುಡುಕೋಕೆ ಬಂದಿದ್ದಂತ.ಬಿಡದೇ ಕೇಳಿದ್ದೆ ಎರಡು ಗಂಟೆ ಪ್ರಶ್ನೆಯ ಮೇಲೆ ಪ್ರಶ್ನೆಗಳ.ಎಲ್ಲಕ್ಕೂ ಉತ್ತರಿಸಿ ಅವರ ಮನೆ,ಮಗನ ಬಗೆಗೆ ಮಾತು ತಿರುಗಿಸಿದ್ದ ತಾತನ ಕಂಗಳಲ್ಲಿ ಏನೋ ಅಳಲು,ನೋವ ಭಾವ ಸ್ಪಷ್ಟವಾಗಿ ಕಂಡಿತ್ತು ನಂಗೆ.
ಆಮೇಲೆ ತಲೆ ಸವರಿ ಹೊರಡ್ತೀನಿ ಪುಟ್ಟಿ ನಾಳೆ ನಾ ಈ ಬಾರಿ ಕಣ್ಣೀರ ಜೊತೆ ಬೀಳ್ಕೊಡೋ ಹಾಗಿಲ್ಲ ನೀ ಅಂದಾಗ ಒತ್ತಾಯ ಮಾಡಿದ್ದೆ ಮತ್ತೆ ಯಾವಾಗ ಬರ್ತೀರ ಅಂತ ಹೇಳಲೇಬೇಕಂತ.
ಕಣ್ಣು ಮಿಟುಕಿಸಿ ನಿನ್ನ ಶಕ್ತಿಮಾನ್ ಜೊತೆ ಮಾತಾಡೋಕೆ ಬರ್ತೀನಿ ಮತ್ತೆ ಅಂದಿದ್ರು.

ಆಮೇಲೆ ಅವರಿಂದ ಪಡೆದುಕೊಂಡ ಮೇಲ್ ಐಡಿ ಹಿಡಿದು ನಾ ಅವರನ್ನ ಮತ್ತೆ ಮಾತಾಡಿಸಿದ್ದೆ.ಒಂದು ವರ್ಷದಲ್ಲಿ ನಾನವರಿಗೆ ಮಾಡಿದ್ದು ನಾಲ್ಕು ಮೇಲ್! ಅವರು ನಂಗೆ ಮಾಡಿದ್ದು ಹನ್ನೆರಡು ಮೇಲ್!!

Dear Putti  ಅಂತ ಮಾತು ಶುರುವಿಡೋ ತಾತ ಕೂತು ಆ ದಿನಗಳ ಬಗೆಗೆ,ಅವರ ರಿಸರ್ಚ್ ಬಗೆಗೆ,ಅಲ್ಲಿಯ ಸಂಭಂದ,ಮನೆ,ಮನಸ್ಸುಗಳ ಭಾವಗಳೇ ಇಲ್ಲದ ಮನುಶ್ಯ ಬಂಧಗಳ ಬಗೆಗೆ ಅವರು ಒಂದೊಂದು ತೀರಾ ಭಾವೂಕ ಮೇಲ್ ಮಾಡ್ತಿದ್ದಾಗ ಉತ್ತರಿಸೋಕಾಗದೇ ನಾ ಮೌನಿ.
ಈ ಪುಟ್ಟಿಯ ತರಹದ್ದೇ ಮೊಮ್ಮಗಳು ನಂಗೂ ಬೇಕಿತ್ತು ಅಂತಿದ್ದ ಮೇಲ್ ಒಂದಕ್ಕೆ ನಾನಂದಿದ್ದೆ-ಬಂದುಬಿಡಿ ಭಾರತಕ್ಕೆ ನಿಮ್ಮೊಟ್ಟಿಗೆ ಇದ್ದುಬಿಡ್ತೀನಿ ಮೊಮ್ಮಗಳಾಗಿ ಅಂತ.ಈ ಮಾತ ಕೇಳಿ ಇನ್ನೊಂದಿಷ್ಟು ವರುಷ ಜಾಸ್ತಿ ಬದುಕಿಯೇನು ಪುಟ್ಟಿ ಅಂತ ತಕ್ಷಣಕ್ಕೊಂದು ರಿಪ್ಲೈ ಬಂದಿತ್ತು.

ನಿನ್ನೂರಲ್ಲಿ ಸಿಕ್ಕ ಆ ಆತ್ಮೀಯತೆಗೆ,ಚಂದದ ಗೆಳೆಯನಾದ ನಿನ್ನಜ್ಜಂಗೆ,ನನ್ನದೇ ಮಕ್ಕಳಾಗಿ ಹೋದ ನಿನ್ನಪ್ಪ ದೊಡ್ಡಪ್ಪಂಗೆ,ಮುದ್ದು ಮೊಮ್ಮಗಳಾಗಿ ದಿನ ಪೂರ್ತಿ ಮಾತಾಡ್ತಿದ್ದ ನಿಂಗೆ ಕೃತಜ್ನತೆ ಹೇಳೋದ ಬಿಟ್ಟು ಇನ್ನೇನೂ ಗೊತ್ತಿಲ್ಲ ಪುಟ್ಟಿ.ಬಹುಶಃ ಭಾರತದಲ್ಲಿ ಮಾತ್ರ ಈ ಪ್ರೀತಿ ದಕ್ಕುತ್ತೇನೋ ಅಂದಾಗ ಹೆಮ್ಮೆ ಅನಿಸಿತ್ತು ನಂಗೆ.ಯಾವಾಗ್ಲೂ ಪುಟ್ಟಿ ಅಂತ ಪ್ರೀತಿಸೋ ,ಹೆಗಲ ಮೇಲೆ ಕೂರಿಸಿಕೊಂಡು ಹೊರಡೋ ಈ ತಾತ ಅದ್ಯಾಕೇ ಭಾರತಕ್ಕೆ ಬಂದ್ರೋ ಗೊತ್ತಿಲ್ಲ .ನನ್ನ ಕೇಳಿದ್ರೆ ನಂಗಿನ್ನೊಬ್ಬ ತಾತನ ಕೊಟ್ಟು ಹೋಗೋಕೆ ಬಂದ್ರೇನೋ ಅಂತೀನಿ...ಅಪ್ಪನೂ ಅದನ್ನೆ ಅಂತಾರೆ "ಎಲ್ಲೋ ಆರು ತಿಂಗಳಿಗೊಮ್ಮೆ ಫೋನ್ ಮಾಡೋ ಲ್ಯಾರಿ ಅಜ್ಜಂಗೆ ಪುಟ್ಟಿ ಬಿಟ್ರೆ ಬೇರೆ ಯಾರೂ ನೆನಪಿಗೆ ಬರಲ್ಲ ಮಾತಾಡೋ ಅರ್ಧಗಂಟೆಯಲ್ಲಿ ಇಪ್ಪತ್ತು ನಿಮಿಷ ಪುಟ್ಟಿ ಇರ್ತಾಳೆ ಆಮೇಲೆ ಹತ್ತು ನಿಮಿಷ ಅವಳಜ್ಜ ಇರ್ತಾರೆ .ಒಟ್ಟಿನಲ್ಲಿ ಲ್ಯಾರಿ ಅಜ್ಜನ ಭಾರತದ ಪ್ರಪಂಚದಲ್ಲಿರೋದು ಇವರಿಬ್ಬರೇ ಏನೋ" ಅಂತ.ಮಾತಿಗೆ ಶುರುವಿಟ್ರೆ ಎಲ್ಲರನ್ನೂಮೋಡಿ ಮಾಡೋ ತೀರಾ ಚಂದದ ಇವರ ಮಾತುಗಳ ಕೇಳೋಕೆ ಆ ದಿನಗಳನ್ನೇ ಕಾಯ್ತಿರ್ತೀನಿ ನಾನು.

ನಿನ್ನೊಟ್ಟಿಗೆ ಇಲ್ಲಿಂದ ಮಾತಾಡೋವಾಗ ನಂಗೇನೋ ಖುಷಿ.ಬಹುಶಃ ಕೆಲಸವಿಲ್ಲದೇ ಮಗನ ಮನೆಯಲ್ಲಿರೋ ಬೇಸರಕ್ಕೋ ಅಥವ ನಿಮ್ಮಗಳ ಆ ಬಂಧಗಳಿಗೋ ಗೊತ್ತಿಲ್ಲ ಸಮಾಧಾನವಂತೂ ದಕ್ಕಿದೆ ತುಂಬಾ ದಿನಗಳ ನಂತರ.ನಿಮ್ಮ ಮನೆಯ ಅನ್ನದ ಋಣವಿದೆ ಅಂತೆಲ್ಲಾ ಮಾತಾಡೋ ಈ ತಾತ ಹದಿಮೂರು ವರ್ಷದ ನಂತರ ಮತ್ತೆ ಬಂದುಬಿಟ್ಟಿದ್ರು ನನ್ನ ಬದುಕಲ್ಲಿ.

ಬಹುಶಃ ಇದೆ ಮೂಲವಿದ್ದೀತು ನಂಗೆ ಕಾಡಲ್ಲಿ ಅಲೆಯೋ ಹುಚ್ಚು ಜಾಸ್ತಿಯಾಗೋಕೆ.ಒಬ್ಬಳೇ ಈ ನೆನಪುಗಳ ಜಾಡು ಹಿಡಿದು ಕಾಡಿನಲ್ಲಿ ಇಡೋ  ಪ್ರತಿ ಹೆಜ್ಜೆಯೂ ಒಂದು ಹೊಸ ಹುರುಪಿನ ಹೆಜ್ಜೆಯಾಗೋದರ ಅರಿವು ಸಿಕ್ಕಾಗಲೆಲ್ಲಾ ಲ್ಯಾರಿ ಅಜ್ಜ ನೆನಪಾಗ್ತಾರೆ ನಂಗೆ.ಮನೆಯಲ್ಲಿ ಕಾಲು ನಿಲ್ಲೋದು ಕಮ್ಮೀ. ಒಬ್ಬೊಬ್ಬಳೇ ಅಲೆಯೋ ಖುಷಿ ಸಿಕ್ಕಾಗಿನಿಂದ ಅಜ್ಜ ಹದಿಮೂರು ವರ್ಷದ ಹಿಂದೆ ಕೊಟ್ಟಿದ್ದ ಆ ಟೆಲಿಸ್ಕೋಪ್ ಹಿಡಿದು ಹೊರಟ್ರೆ ಮನೆಯಲ್ಲಿ ಅಮ್ಮ ದೊಡ್ಡಮ್ಮನ ಬೈಗುಳ ಶುರುವಾಗಿರುತ್ತೆ ಲ್ಯಾರಿ ಅಜ್ಜನ ಮೊಮ್ಮಗಳೇ ಇವಳು ಅಂತ!.
 ನೆನಪಾದಾಗಲೆಲ್ಲಾ ಈ ಲ್ಯಾರಿ ಅಜ್ಜಂಗೆ ಕಾಡು ಸುತ್ತೋ ಖುಷಿಯ ಕಲಿಸಿದ್ದಕ್ಕಾಗಿ ಒಂದು ಧನ್ಯವಾದವ ಹೇಳ್ತಿದ್ದೆ ನಾ..ಬದುಕಲ್ಲಿಷ್ಟು ಸಾಹಸಗಳ ಮಾಡಿದಾಗಲೇ ಕಣೋ ಬದುಕ ಬಗೆಗೆ,ನಮ್ಮ ಬಗೆಗೆ ಪ್ರೀತಿಯಾಗೋದು,ಸಾಧಿಸೋ ಧೈರ್ಯ ಸಿಗೋದು ಅಂತಿದ್ದ ತಾತನ ಮಾತುಗಳು ಪೂರ್ತಿಯಾಗಿ ಅರ್ಥವಾಗದಿದ್ರೂ ಮೋಡಿ ಮಾಡಿದ್ದಂತೂ ಹೌದು.

ಆದರೆ ಈಗೊಂದೆರಡು ತಿಂಗಳ ಹಿಂದೆ  ನಾನೂ ಅವರಿಗೆ ಮೇಲ್ ಮಾಡಿರಲಿಲ್ಲ ಅವರಿಂದಲೂ ಮೇಲ್ ಬಂದಿರಲಿಲ್ಲ..ಬೆಳಿಗ್ಗೆಯಿಂದ ನೆನಪಾಗ್ತಿದ್ದ ತಾತನನ್ನು ಮಾತಾಡಿಸಬೇಕಂತ  ಇಷ್ಟುದ್ದದ ದೀರ್ಘ ಭಾವಗಳ ಬರೆದಿದ್ದೆ.
ಆಗೊಂದು ಮೇಲ್ ರಿಸೀವ್ ಆಗಿತ್ತು "Dear Putti" ಅನ್ನೋ ಅದೇ ಆತ್ಮೀಯತೆಯಲ್ಲಿ.
ಆದರೆ ಬರೆದಿದ್ದು ಲ್ಯಾರಿ ಅಜ್ಜನಲ್ಲ :(
ಅವರದ್ದೆ ಪಡಿಯಚ್ಚು ಅವರ ಮಗ..
"ಅಪ್ಪ ಹೋಗಿ ತಿಂಗಳೊಂದಾಯ್ತು .ಈ ಪುಟ್ಟಿಯ ಬಗ್ಗೆ,ಈ ಪುಟ್ಟಿಯ ಚಂದದ ಮನೆಯ ಬಗ್ಗೆ,ಮನೆಯವವರ ಮನಸ್ಸುಗಳ ಬಗ್ಗೆ ಇಡೀ ದಿನ ಮಾತಾಡ್ತಿದ್ದ ಅಪ್ಪ ನಂಗೂ ನಿಮ್ಮನ್ನೆಲ್ಲಾ ಒಮ್ಮೆಯಾದರೂ ನೋಡೋ ತರಹದ ಭಾವವೊಂದ ಕೊಟ್ಟು ಹೋದ್ರು ನಿನ್ನ ಮೇಲ್ ಐಡಿಯ ಜೊತೆಗೆ.
ನಿನ್ನೂರನ್ನ ನೋಡೋಕೆ,ನಿನ್ನ ಜೊತೆಯಿಷ್ಟು ಮಾತಾಡೋಕೆ ಬರ್ತೀನಿ ಸಧ್ಯದಲ್ಲೇ .
ನಿನ್ನಿಷ್ಟದ ಚಾಕಲೇಟ್ ಬಾಕ್ಸ್ ನಾ ಆಗಲೇ ತೆಗೆದುಕೊಂಡಾಗಿದೆ.
ಸಿಕ್ತೀಯ ಅಲ್ವಾ?"

ಲ್ಯಾರಿ ಅಜ್ಜನ ನೆನಪು ಶಾಶ್ವತ ನೆನಪಾಗಿಯೇ ಉಳಿದ ಬೇಸರಕ್ಕೆ ಕಣ್ಣಂಚು ಮಾತಾಡ್ತು. ಇನ್ನೂ ಸೆಂಡ್ ಒತ್ತಿರದ ಲ್ಯಾರಿ ಅಜ್ಜನಿಗೆ ಮಾಡೋ ಮೇಲ್ ನಾ ಡಿಲೀಟ್ ಮಾಡಿಬಿಟ್ಟೆ .
ಆದರೊಂದು ಅವ್ಯಕ್ತ ಭಾವ ಮನ ತಾಕಿ ಹೋಯ್ತು.ಮುಖ ನೋಡಿರದ ಲ್ಯಾರಿ ಅಜ್ಜನ ಮಗ ನಮ್ಮಗಳ ಮೇಲೆ ಇಷ್ಟು ಪ್ರೀತಿಯ ಭಾವವ ಇಟ್ಟುಕೊಂಡಿದ್ದಾರಲ್ಲ ಅಂತಾ.
ಅವರ ಬರುವಿಕೆಯ ನಿರೀಕ್ಷೆಯಲ್ಲಿ .....ನಾ....
"ಲ್ಯಾರಿ ಅಜ್ಜನ ಮೊಮ್ಮಗಳಾಗಿ ಕಾಯ್ತಿರ್ತೀನಿ ನನ್ನಜ್ಜನ ಜೊತೆಗಿಲ್ಲಿ ...ಪ್ರೀತಿಯಿಂದ " ಅಂತ ಸೆಂಡ್ ಬಟನ್ ಒತ್ತಿದ್ದೆ ಟು ದ ಸನ್ ಆಫ್ ಲ್ಯಾರಿ ಅಜ್ಜ

Tuesday, December 3, 2013

ಆ ಗಿಟಾರು ಹುಡುಗ ...

ತುಂಬಾ ದಿನಗಳ ನಂತರ ಅದೊಂದು ಭಾನುವಾರದ ಮಧ್ಯಾಹ್ನ ಮಲಗಿದ್ದೆ ಸರಿಯಾಗಿ ಐದಕ್ಕೆ ಅಲಾರಾಂ ಇಟ್ಟು!ಜನ ಜಂಗುಳಿಯ ಮಧ್ಯ ನನ್ನ ನಾ ಒಂಟಿಯಾಗಿಸಿಕೊಳ್ಳೋ ಖುಷಿ ಸಿಕ್ಕ ದಿನದಿಂದ ಬದುಕಿಗೊಂದು ಪ್ರಬುದ್ಧತೆ ಬಂದಿತ್ತು.ಆದರವತ್ಯಾಕೋ ಜನರ ಮಧ್ಯ ಕಳೆದು ಹೋಗಬೇಕನ್ನಿಸಿದ ಭಾವವ ಬದಿಗೊತ್ತಿ,ಯೋಚನೆಗೂ ಜಾಗ ಬಿಡದೆ ನಿದ್ದೆ ಹತ್ತಿತ್ತು ನಂಗೆ.ಏಳೋ ಹೊತ್ತಿಗೆ ಮೊಬೈಲ್ ಗೆ ಸರಿಯಾಗಿ ಐವತ್ತು ಮಿಸ್ ಕಾಲ್ ಗಳಿದ್ದವು.ಗಾಬರಿ ಬಿದ್ದು ತಿರುಗಿ ಫೋನಾಯಿಸಿದ್ರೆ "ಗೂಬೆ ,ದೊಡ್ಡವಳಾಗಿಬಿಟ್ಟಿದ್ದೀಯ.ಕೈಗೆ ಸಿಗೋದು ಬಿಡು ಫೋನಲ್ಲಿ ಮಾತಿಗೂ ಸಿಗಲ್ಲ ನೀನು" ಅಂತ ಮುಗಿಯದ ದೊಡ್ಡ ಧ್ವನಿಯಲ್ಲಿ ಸಿಟ್ಟು ಮಾಡಿದ್ದ ಗೆಳೆಯ.

ಮೊದಲಿನಿಂದಲೂ ಅಷ್ಟೇ .ಒಂದಿಬ್ಬರು ಆತ್ಮೀಯ ಗೆಳತಿಯರನ್ನ ಬಿಟ್ರೆ ಹೆಚ್ಚಾಗಿ ನಾನಿರೋದು(ನಂಗಿರೋದು) ಗೆಳೆಯರ ಗುಂಪಲ್ಲೆ.ಬ್ಯೂಟಿ ಟಿಪ್ಸ್,ಡ್ರೆಸ್, ಗಾಸಿಪ್ಸ್, ಜಲಸ್ ಅಂತಿಪ್ಪ ಹುಡುಗಿಯರಿಗಿಂತ ನಂಗೆ ಯಾವಾಗ್ಲೂ VIP ಬ್ರಾಂಡ್ ತೋರ್ಸೋ ,ಜಾಸ್ತಿ ತಲೆ ಹರಟೆ ಮಾಡೋ ,ಯಾವಾಗ್ಲೂ ಎಲ್ಲದಕ್ಕೂ ನಗೋ, ನಾವೂ ಹೊಟ್ಟೆ ಹಿಡಿದು ನಗೋ ತರ ಮಾಡೋ ಹುಡುಗರೇ ಜಾಸ್ತಿ ಇಷ್ಟ ಆಗೋದು ..ಇಲ್ಲಿ ದಕ್ಕಿದ್ದೂ ಅಂತಹುದೇ ಪಕ್ಕಾ ಕ್ರೇಜಿ ಹುಡುಗರ ಚಂದದ ಸ್ನೇಹ ಬಳಗ.

ಕಾಲೇಜಿನ ಮೊದಲ ದಿನ ಮಾಡಿದ್ದ rag ನಿಂದ ಶುರುವಾದ ಸ್ನೇಹ ಇವತ್ತಿಲ್ಲಿ ಅವರೆಲ್ಲರ ಬಳಿ ಹೊಡೆದಾಡಿ ಮುಖ ಊದಿಸೋ ಅಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ನನ್ನೂರ ಇವರುಗಳ ಜೊತೆಗೊಂದಿಷ್ಟು ಮಾತಾಡಿದ್ದು ,ಕೂತು ತಲೆಹರಟೆ ಮಾಡಿದ್ದು ಲೆಕ್ಕವಿಲ್ಲದಷ್ಟು ,,ಸೀನಿಯರ್ಸ್ ಅಂತಾ ತುಂಬಾ ಕೊಬ್ಬು ಮಾಡ್ತಿದ್ದ ಇವರುಗಳ ಕೊಬ್ಬಿಳಿಸಿ ಗೆಳೆಯರನ್ನಾಗಿ ಮಾಡಿಕೊಳ್ಳೋಕೆ ನಾ ತೆಗೆದುಕೊಂಡಿದ್ದು ಸರಿ ಸುಮಾರು ನಾಲ್ಕಾರು ತಿಂಗಳು!..

ಆಮೇಲಾಮೇಲೆ ಗೆಳೆತನದ ಪ್ರತಿ ಸಲುಗೆಯ ಭೇಟಿಯಲ್ಲೂ ಪ್ರತಿ ಗೆಳೆಯರ ಜನುಮ ದಿನಕ್ಕೂ ಒಂದೊಂದು ಫಂಕಿ ಗಿಫ಼್ಟ್ ಹಿಡಿದು ಅಲ್ಲೊಂದಿಷ್ಟು ನಕ್ಕು ಬರೋದರ ಅಭ್ಯಾಸವಾಗಿ ಹೋಗಿದ್ದು ತುಂಬಾ ದಿನಗಳಾಯ್ತು.

ಅಲ್ಲಿ ಪ್ರತಿ ಗೆಳೆಯನ ಬರ್ತ್ ಡೇ ಕೇಕ್ ನಲ್ಲಿ ನಂಗೇ ಸಿಗೋ ಫಸ್ಟ್ ಬೈಟ್ ಗೆ ಉಳಿದವರೆಲ್ಲಾ ಮುಖ ಊದಿಸಿ ಕೂರೋವಾಗ ಏನೋ ಒಂದು ಚಂದದ ಖುಷಿ ನನ್ನೊಳಗೆ ನಂಗೆ . ಅವತ್ತು ನಾನವರ ಹುಡುಗಿಯಾಗಿ ಬಿಡ್ತಿದ್ದೆ ಅಕ್ಷರಶಃ ! ಎಲ್ಲರೂ ಇವತ್ತೂ ಆಡಿಕೊಳ್ತಾರೆ ನಿಂಗೆ ಇದಾರು ಹುಡುಗರಿದ್ದಾರಲ್ಲೆ ,ಯಾರನ್ನ ಸೆಲೆಕ್ಟ್ ಮಾಡ್ತೀಯ ನಮ್ಮೈವರಲ್ಲಿ ಅಂದುಕೊಂಡು.ಸುಮ್ಮನೆ ಅವರುಗಳ ತಲೆಹರಟೆಗೆ ನಕ್ಕು ನಾನೂ ಅಲ್ಲೊಂದಿಷ್ಟು ತರ್ಲೆ ಮಾಡೋವಾಗ ಎಲ್ಲರಿಗೂ ನಗೋದು ಮಾತ್ರ ಗೊತ್ತೆನೋ ಅನಿಸಿಬಿಡುತ್ತಿತ್ತು.

ಆದರೆ ಅವತ್ಯಾಕೋ ಆತ್ಮೀಯತೆಯ ಸಲುಗೆ ತೀರಾ ಅನ್ನಿಸಿ ನಾನಲ್ಲೊಬ್ಬ ಗೆಳೆಯಂಗೆ "ಅಪ್ಪ ಅಮ್ಮನ ದುಡ್ಡಲ್ಲಿ ಹೇಗ್ ಹೇಗೋ ಬದುಕೋ ಹುಡುಗ ಇಷ್ಟ ಆಗಲ್ಲ ನಂಗೆ" ಅಂದಿದ್ದೆ ಅವನ ಬದುಕ ಬಗ್ಗೆ!..ಅನಿಸಿತ್ತು ಆಮೇಲೆ ನಾನ್ಯಾರು ಅವನ ಬದುಕ ಬಗೆಗೆ ಪ್ರಶ್ನಿಸೋಕೆ ಅಂತ.ಆದರೆ ಆಡಿದ್ದ ಮಾತಿಗೆ ಅವ ನನ್ನ ಪೂರ್ತಿಯಾಗಿ ಬೈದು "ನನ್ನಪ್ಪ ಅಮ್ಮನೂ ಹೇಳದ ಈ ಭಾವವ ನೀ ಹೇಳಿದ್ದು ನಂಗಿಷ್ಟವಾಗಿಲ್ಲ" ಅಂತಂದು ಎದ್ದು ಹೋಗಿದ್ದ ಗೆಳೆತನದ ಸಲುಗೆಯ ಸರಿಸಿ.

ಬೇಸರವಾಯ್ತಂತಲ್ಲ ..ಆದರೂ ತುಸು ಬೇಸರಿಸಿದ್ದೆ ನಾನಲ್ಲಿ.ಆದರೆ ತಪ್ಪು ನನ್ನದೇ ಇದ್ದಾಗ್ಲೂ ಅದ ಒಪ್ಪಿಕೊಳ್ಳದ ನಾ, ಎದುರುಗಡೆಯ ವ್ಯಕ್ತಿಯೇ ಸಾರಿ ಕೇಳಬೇಕಂತ ಹಠ ಹಿಡಿಯೋ ತೀರಾ ಹಮ್ಮಿನ ಹುಡುಗಿ ಅವನಿಗೆ ಸಾರಿ ಅಂತಂದು ಸುಮ್ಮನಾಗಿಬಿಟ್ಟಿದ್ದೆ!

ಅವತ್ತಿನಿಂದ ನಂಗೀ ಇಷ್ಟದ ಗೆಳೆಯರ ಗುಂಪಲ್ಲಿ ಹೆಚ್ಚಾಗಿ ಸೇರೋಕೆ ಕಷ್ಟ ಆಗೋದು.ತೀರಾ ಅನ್ನೋ ಅಷ್ಟು ಕಂದಕವ ತಂದು ಬಿಟ್ಟಿದ್ದ ಅವ ಅಲ್ಲಿ.ಉಸಿರುಗಟ್ಟೋ ಸ್ನೇಹದಲ್ಲಿ ಯಾವತ್ತೂ ಉಳಿಯೋಕೆ ಇಷ್ಟ ಪಡದ ನಾ ಆಮೇಲವರ ಬರ್ತ್ ಡೈ ಪಾರ್ಟಿ,ಸುಮ್ಮನೊಂದು ಹ್ಯಾಂಗ್ ಔಟ್ ಏನೋ ಇಲ್ಲದ ಕಾರಣಗಳ ಹೇಳಿ ನಿಲ್ಲಿಸಿಬಿಟ್ಟಿದ್ದೆ...ಹತ್ತು ಬಾರಿ ಕರೆದಾಗ್ಲೂ ಒಮ್ಮೆಯೂ ಹೋಗದ ನನ್ನ ಅವರುಗಳು ಕರೆಯೋದೂ ಬಿಟ್ಟು ಬಿಟ್ಟಿದ್ರು ಕಾರಣವನ್ನೂ ಕೇಳದೇ!. ಅಲ್ಲಿಯೂ ಅವರುಗಳು ನನ್ನ ಕರೆಯೋದು ಪುಟ್ಟಿ ಅಂತಾನೇ..ಎಲ್ಲೋ ವಾರಕ್ಕೊಂದು ಮಿಸ್ ಯು ಮೇಸೆಜ್ ಮಾಡಿ,ತಿಂಗಳಿಗೊಮ್ಮೆ ಬದ್ಕಿದೀಯೇನೇ ಕೋತಿ ಅಂತ ಮಾತಾಡಿಸೋ ಇವರುಗಳ ಕಾಳಜಿಯ ಕಾಲೆಳೆಯೋ ಮಾತುಗಳಿಗೆ ಭಯ ಬೀಳ್ತಿದ್ದೆ ಪ್ರತಿ ಬಾರಿ ..ಎಲ್ಲಿ ಅವನ ತರಹವೇ ಇವರುಗಳಿಗೂ ಏನೋ ಹೇಳೋಕೆ ಹೋಗಿ ಎಲ್ಲಿ ಕಳೆದು ಹೋಗ್ತಾರೋ ಅನ್ನೋ ಭಯ.ಆದರೂ ಅನಿಸಿದ್ದನ್ನ ನೇರಾ ನೇರಾ ಮುಲಾಜಿಲ್ಲದೇ ಹೇಳೋ ಹುಡುಗಿಗೆ ಯಾರಿದ್ರೂ ಯಾರು ಎದ್ದು ಹೋದ್ರೂ ಅಷ್ಟೊಂದೇನೂ ಬೇಸರವಾಗ್ತಿರ್ಲಿಲ್ವೇನೋ.ಆದರೆ ಎಲ್ಲರಿಗಿಂತ ಆತ್ಮೀಯ ಅನ್ನಿಸಿ,ಅದೆಷ್ಟೋ ಭಾವಗಳ ,ಚಿಲ್ಲು ಚಿಲ್ಲು ಕನಸುಗಳ ಕೆದಕಿ ಕೇಳಿದ್ದ ಹುಡುಗ ಸಾರಿ ಅಂದ ನಂತರವೂ ಎದ್ದು ಹೋದ ಅನ್ನೋದೊಂದೆ ಬೇಸರ.

ಏನೋ ಒಂದಿಷ್ಟು ಒಂಟಿತನ ಅನಿಸಿತ್ತು ಒಂದಷ್ಟು ದಿನಗಳು ..ಒಂಟಿತನದ ಏಕಾಂತದ ಖುಷಿ ಸಿಕ್ಕ ದಿನದಿಂದ ನೆಮ್ಮದಿಯ ನಗು ಮೂಡಿತ್ತು.

ಬದುಕ ಬಗೆಗೆ ಒಂದಿಷ್ಟು ಬೇರೆಯದೇ ಭಾವಗಳಿರೋ ಹುಡುಗಿ ನಾ.ಎಲ್ಲರಲ್ಲೂ ಚಿಲ್ಲು ಚಿಲ್ಲು ಮಾತಾಡಿ ಒಂದಿಷ್ಟು ಫನ್ ಗಳ ನಂತರವೂ ಬದುಕಿನ್ನೇನೋ ಬೇರೆಯದೇ ಇದೆ ಅನ್ನೋದ ಅರಿತಿದ್ದೆ ಅಲ್ಲಿ.ಆದರೆ ಅಲ್ಯಾರಿಗೂ ಹೇಳಹೊರಡಲ್ಲ ಸಾಮಾನ್ಯದಿ .ಆದರೆ ಈ ಗೆಳೆಯ ಮಾತ್ರ ನನ್ನೆಲ್ಲ ಚೌಕಟ್ಟುಗಳ ಮೀರಿ ನನ್ನಲ್ಲಿ ಬಂದುಬಿಟ್ಟಿದ್ದ ..ಬ್ರಾಂಡೆಡ್ ಮಾತುಗಳಲ್ಲಿ ಗೊತ್ತಿರೋ ಎಲ್ಲಾ ಬ್ರಾಂಡ್ ಗಳ ಹೇಳೋದ ಬಿಟ್ರೆ ಅವುಗಳನ್ಯಾವುದನ್ನೂ ನಾ ಹಾಕಿರಲಿಲ್ಲ .ಅವನಿಗೆ ಹೇಳಿದಂತೆಯೇ ಅಪ್ಪ ಅಮ್ಮನ ದುಡ್ಡಲ್ಲಿ ತೀರಾ ಅನ್ನೋ ಅಷ್ಟು ಆಡೋದು ಸರಿ ಬೀಳ್ತಿರಲಿಲ್ಲ ನಂಗೆ.ನಾನವನಿಗೆ ಹೇಳಿದ್ದು ಅದನ್ನೆ ಅವತ್ತು.ಆದರವನಿಗೆ ಅದು ತುಂಬಾ ಹರ್ಟ್ ಆಗಿದೆಯಂತ ಗೊತ್ತಾಗಿದ್ದು ಅವ ನನ್ನ ಬಿಟ್ಟು ಹೋದ ಮೇಲೆ.ಆಮೇಲೆಲ್ಲೋ ವಾಪಸ್ಸಾದ ಗೆಳೆಯನಾಗಿ ..ಆದರೆ ಅವ ವಾಪಸ್ಸಾಗೊ ಹೊತ್ತಿಗೆ ಅಲ್ಲೊಂದು ಮುಚ್ಚಲಾಗದ ,ಸರಿಸೋಕಾಗದ ಕಂದಕವೊಂದು ಬಂದುಬಿಟ್ಟಿತ್ತು!!

ಆ ಹಳೆಯ ದಿನಗಳ ನೆನಪಿಸಿಕೊಂಡು ಸುಮ್ಮನೇ ಕೂತಿದ್ದಾಗ ಅದ್ಯಾಕೋ ಮತ್ತೆ ಇವರುಗಳನ್ನೊಮ್ಮೆ ಮಾತಾಡಿಸಿ ಬರಬೇಕನಿಸಿಬಿಟ್ಟಿತ್ತು.
ಗೊಂದಲದಲ್ಲಿ ಆ ಖುಷಿಯಲ್ಲಿ ಪಾಲುದಾರಳಾಗೋಕೆ..ಗೊತ್ತಿತ್ತು ದೊಡ್ಡ ಪಾಲು ಸಿಗೋದು ನಂಗೆ ಅಂತಂದು!

ಆದರೂ ಒಂದು ಅವ್ಯಕ್ತ ಭಾವ ಅದು.
 ಅಗೈನ್ ಮತ್ತೆ ಸಿಕ್ಕಿತ್ತು ಕೇಕ್ ನ ಮೊದಲ ಬೈಟ್...!!
ಅದೇ ಹಳೆಯ ಪ್ರೀತಿಯಿಂದ ಮಾತಾಡಿಸೋ ,ಅಷ್ಟೇ ತರಲೆ ಮಾಡೋ ಅವರುಗಳನ್ನ ಇಷ್ಟು ದಿನ ಯಾಕೆ ಮಿಸ್ ಮಾಡ್ಕೊಂಡೆ ನಾ ಅನ್ನಿಸಿಬಿಡ್ತು ಅವತ್ತಲ್ಲಿ!.ಮೂರು ತಾಸು ಕಾಫೀ ಡೇ ನಲ್ಲಿ ಮಾಡಿದ ತರಲೆ,ಮಸ್ತಿ,ಮಾತು ನಗುವಿನಿಂದಾಚೆಗೂ ನನ್ನಲ್ಲೇನೋ ಹುಡುಕಾಟ....

ನಾನವರಿಗೆ ನನ್ನೆಲ್ಲ ತರ್ಲೆಗಳ ಸಹಿಸಿಕೊಳ್ಳೋ,ತೀರಾ ಸೈಲೆಂಟ್ ಆಗಿರೋ ,ಅವನ ಮನೆಯಲ್ಲಿ ನಂಗೆ ಮನೆ ಮಗಳ ಸ್ಥಾನ ಕೊಡಿಸಿರೋ ,ಅಮ್ಮ ನೆನಪಾದಾಗಲೆಲ್ಲಾ ಮನೆಗೆ ಕರೆದು ಗಂಟೆಗಟ್ಟಲೇ ಅವನಮ್ಮನನ್ನ ನನ್ನ ಅಮ್ಮನನ್ನಾಗಿ ಮಾಡಿಬಿಡೋ ಈ ಊರ ನನ್ನ ಗೆಳೆಯನನ್ನ ಪರಿಚಯಿಸಿದಾಗ ಕಣ್ಣು ಮಿಟುಕಿಸಿ ನಂಗೆ ಮಾತ್ರ ಕೇಳೋ ತರ "ನಮ್ಮಷ್ಟು ಚೆನಾಗಿಲ್ಲ ಹುಡುಗ" ಅಂದಿದ್ರು! ನಾನೂ ಕಣ್ಣು ಮಿಟುಕಿಸಿ "ಅವ ಚೆನಾಗಿರೋಕೆ ಅವನೇನು ನನ್ನ ಹುಡುಗನಲ್ಲ " ಅಂದುಬಿಟ್ಟಿದ್ದೆ :ಫ್

ಇನ್ನು ಹುಡುಕಾಟದ ಕಾತರತೆಗೊಂದು ಕಾರಣವಿತ್ತು .ನಾ ಬೇಸರ ಮಾಡಿದ್ದ,ದೊಡ್ಡದಾಗಿ ಬದುಕ ಬಗ್ಗೆ ಹೇಳ ಹೊರಟಿದ್ದ ಆ ಗೆಳೆಯ ಕಾಣಿಸಿರಲಿಲ್ಲ ನಂಗಲ್ಲಿ.ಅವ ನನ್ನ ನೋಡಿದಾಗಲೆಲ್ಲಾ ಮುಖ ತಿರುಗಿಸಿಕೊಂಡು ಹೋಗೋವಾಗ ನೋವಿಗಿಂತ ಬೇಸರ ಕಾಡೋದು ನನ್ನ.ಅವನಿಗೆ ಬೇಸರವಾಗದಿರಲಿ ಅನ್ನೋ ಕಾರಣಕ್ಕೆ ಮಾತ್ರ ನಾನಾ ಚಂದದ ಸ್ನೇಹಿತರ ಸ್ವಲ್ಪ ಮಟ್ಟಿಗೆ ದೂರ ಮಾಡಿಕೊಂಡಿದ್ದು.

ಅವನಿಗೊಂದಿಷ್ಟು ಜಾಸ್ತಿ ಅನ್ನೋವಷ್ಟು ಬೈದಿದ್ದೆ ನಾನು .ಅವ ಹುಚ್ಚು ಹುಚ್ಚಾಗಿ ಪ್ರೀತಿಯ ಹೇಳಿಕೊಂಡಾಗ .ಸ್ನೇಹದಲ್ಲಿ ಪ್ರೀತಿ -ಪ್ರೇಮದ ಭಾವವ್ಯಾಕೋ ನಂಗೆ ಸಹ್ಯವಾಗ್ತಿರಲೇ ಇಲ್ಲ.
ತುಂಬಾ ಅನ್ನೋವಷ್ಟು ಈಗೋ, attitude ಇರೋ ಆ ಹುಡುಗ ನನ್ನ ಪೂರ್ತಿಯಾಗಿ ನಿರ್ಲಕ್ಷಿಸಿ ಗೆಳೆತನದ ಬಂಧವನ್ನೂ ಕಳಚಿಕೊಂಡು ಹೋಗಿದ್ದ .
After all, that was a stupid CRUSH ಅಂದುಕೊಂಡು ಸುಮ್ಮನಾಗಿದ್ದೆ ನಾನೂನೂ.

ಮತ್ತೆ ಆ ಮುದ್ದು ಗೆಳೆಯ ಬೇಸರಿಸ್ತಾನೇನೋ ನನ್ನ ನೋಡಿ ಅಂದುಕೊಂಡ್ರೆ ಅವನವತ್ತಲ್ಲಿ ಬಂದಿರಲೇ ಇಲ್ಲ !!

ನನ್ನದೇ ಮನವನ್ನ ಓದಿದೋರ ತರಹ ಅಲ್ಲೊಬ್ಬ ಗೆಳೆಯ ,ಆ ಹುಡುಗನೂ ನಿನ್ನ ತರಹವೇ ಕೈಗೆ ಸಿಕ್ತಿಲ್ಲ.ಹಾಸ್ಟೆಲ್ ನಲ್ಲೂ ತಾನಾಯ್ತು ತನ್ನ ರೂಮಾಯ್ತು ಅನ್ನೋ ತರಹ ತೀರಾ ಬ್ಯುಸಿ ಆಗಿ ಇದ್ದು ಬಿಡ್ತಾನೆ.ಇಡೀ ದಿನ ಪಟ ಪಟ ಮಾತಾಡ್ತಾ ಜಾಸ್ತಿ ತರ್ಲೆ ಮಾಡ್ತಿದ್ದ ಅವನೆಲ್ಲಿ ಕಳೆದು ಹೋದ ಅನ್ನೋದ ಹುಡುಕಿ ಹುಡುಕಿ ಸುಸ್ತಾಯ್ತು ಕಣೇ ..ನೀ ನಮ್ಮಗಳಿಗಿಂತ ಜಾಸ್ತಿಯಾಗಿ ಅವನ ಜೊತೆ ಮಾತಾಡಬಲ್ಲೆ ಕೇಳಿಬಿಡೇ ಅವನಿಗೇನಾಯ್ತೆಂದು ಅಂದಾಗ ಹುಬ್ಬೇರಿಸಿದ್ದೆ ನಾ.
ಅಂದರೆ ಅವ ನನ್ನ ಅವನ ಜಗಳ ,ಮನಸ್ತಾಪಗಳ ಯಾರೆದುರೂ ಹರವಿಲ್ಲ ಅನ್ನೋದರ ಅರಿವು ಸಿಕ್ಕಿ ನನ್ನಲ್ಲೇನೋ ಒಂದು ತರಹದ ಮುಜುಗರ.ನಂಗೊತ್ತು ಅವನ ಅತೀ ಆತ್ಮೀಯರು ಈ ಸ್ನೇಹಿತರೇ ಅನ್ನೋದು.ಆದರೆ ನಾ ಈ ಜಗಳಗಳ,ಅವನ ಪ್ರೀತಿಯ ನಿವೇದನೆಯ ಭಾವಗಳ ಎಲ್ಲಾ ಭಾವಗಳನ್ನೂ ಹಂಚಿಕೊಳ್ಳೋ ಗೆಳೆಯನಲ್ಲಿ ಹೇಳಿದ್ದೆ.ಇಲ್ಲಿ ನಂಗೀ ಗೆಳೆಯ ತೀರಾ ಭಿನ್ನವಾಗಿ ಕಂಡುಬಿಟ್ಟ.

ಯಾರ್ಯಾರದೋ ಎದುರು ನಾ ಸಣ್ಣವನಾಗೋಕೂ ಇಷ್ಟವಾಗಲ್ಲ...ಬೇರೆಯವರನ್ನ ಸಣ್ಣವರನ್ನಾಗಿ ಮಾಡೋಕೂ ಇಷ್ಟವಾಗಲ್ಲ ಅಂತ ಅವತ್ಯಾವತ್ತೋ ಆಡಿದ್ದ ಅವನದೇ ಮಾತುಗಳು ಮನ ಸವರಿ ಎದ್ದು ಹೋಯ್ತು ಕ್ಷಣಕ್ಕೆ!
ಹಾರಿಕೆಗೆ ಸರಿ ಕಣ್ರೋ ವಿಚಾರಿಸ್ತೀನಿ ನಾನು ಅಂತಂದ್ರೂ ನಂಗವನ ಮನದ ಅರಿವು ಸಿಕ್ಕಿ ಬಿಟ್ಟಿತ್ತಲ್ಲಿ!

ಮನದಲ್ಲಾಗುತ್ತಿದ್ದ ಗೊಂದಲಗಳ ಅರಿವು ಸಿಕ್ಕಿರೋ ತರಹ ಕೈ ಹಿಡಿದು ಕಣ್ಣಲ್ಲೇ ಸಮಾಧಾನಿಸಿದ್ದ ನನ್ನೀ ಗೆಳೆಯ.ಅಷ್ಟಾಗಿ ಕನ್ನಡ ಅರ್ಥವಾಗದಿದ್ದರೂ ಅವರುಗಳ ಪ್ರತಿ ಮಾತಿಗೂ ನನ್ನಲ್ಲಾಗುತ್ತಿದ್ದ ಭಾವಗಳ ಸಂಜೆ ಮನೆಗೆ ಬಂದು ಎದುರು ತೆರೆದಿಟ್ಟಿದ್ದ ಇವನ ನೋಡಿ ಆಶ್ಚರ್ಯವಾದುದ್ದಂತೂ ಸುಳ್ಳಲ್ಲ! ಕ್ಷಣವೊಂದಕ್ಕೆ ನಡುಗಿ ಹೋಗಿದ್ದೆ ಇವನೆಲ್ಲಿ ಇಂಚಿಂಚೂ ಬಿಡದೇ ನನ್ನ ಮನಸ್ಸ ಓದಿ ಬಿಡ್ತಾನೋ ಅಂತ.

ಆ ದಿನದ ಪಾರ್ಟಿ ಮುಗಿಸಿ ಒಂದಿಷ್ಟು ಖುಷಿಸಿ,ವರ್ಷಕ್ಕಾಗೋವಷ್ಟು ನಗುವ ತುಂಬಿಕೊಂಡು ,ಮತ್ತೆ ಅವರುಗಳಿಗೆ ಮಿಸ್ ಯು ಅಂದು ಬರೋವಾಗ ಮತ್ತೆ ಕಾಡಿದ್ದ ಬಿಟ್ಟು ಹೋದ (ಎದ್ದು ಹೋದ) ಆ ಗೆಳೆಯ.

ಬರೋವಾಗ ಅವರಂದಿದ್ದ " ಆ ಬ್ಯುಸಿ ಗೆಳೆಯ ಅದೇನೋ ಗಿಟಾರು ಕ್ಲಾಸ್ ಗೆ ಹೋಗ್ತಿದಾನೆ ಕಣೇ ..ನಿಂಗೂ ಗೊತ್ತೆನೋ ..ಸಧ್ಯದಲ್ಲೆ ಅವನಿಂದೊಂದು ಗಿಟಾರು ಪ್ರೋಗ್ರಾಮ್ ಮಾಡಿಸೋಣ " ಅಂತ ಆಗದ ಪ್ರೋಗ್ರಾಮ್ ಒಂದನ್ನ ತುಂಬಾ ಕಾನ್ಫಿಡೆಂಟ್ ಆಗಿ ಹೇಳಿ ತಲೆ ಸವರಿ ,ಕೆನ್ನೆ ಹಿಂಡಿ ಹೊರಟು ಹೋದ ಈ ಗೆಳೆಯ ಹೋದ ದಿಕ್ಕನ್ನೇ ನೋಡೋದ ಬಿಟ್ಟು ನಂಗೇನೂ ಉಳಿದಿರಲಿಲ್ಲ ಮತ್ತೆ ಅಲ್ಲಿ !!!!

ಆ ಗಿಟಾರು ಹುಡುಗ ...

ಮನದ ಅಲೆಯಲ್ಲಿ ಕೊಚ್ಚಿಹೋದ ಕಣ್ಣಂಚ ಹನಿಗಳು ನೆಲ ತಾಕೋಕೂ ಮುಂಚೆ ನನ್ನೀ ಗೆಳೆಯ ಕೈ ಹಿಡಿದು ಕರೆದುಕೊಂಡು ಹೊರಟಿದ್ದ ಅವನ ಮನೆಗೆ.
ಅಮ್ಮನ ಮಡಿಲಲ್ಲಿ ಒಂದು ಕ್ಷಣ ಬಿಕ್ಕ ಬೇಕನಿಸಿ ಕೂತಾಗ ಮತ್ತೆ ನೆನಪಾಗಿದ್ದು..

ಅದೇ ಗಿಟಾರು ಹುಡುಗ.... ಹೌದು ಅವನೇ...