Monday, March 31, 2014

ನೆನಪುಗಳ ಒಳಹರಿವು...



ಪರಿಚಿತ ಗೆಳೆಯ ಅವ...ಅತೀ ಆತ್ಮೀಯ ಗೆಳತಿ ಅವಳು.

ಖುಷಿಯ ಮೊದಲ ಭಾವದ ರವಾನೆಯಾಗೋದು,ಬೇಸರದ  ಮೊದಲ ಸೂಚನೆಯ ಅರಿವು ಸಿಗೋದು,ಅಷ್ಟಾಗಿ ಮಾತಿಲ್ಲದೆಯೂ ಭಾವಗಳ ಪೂರ್ತಿಯಾಗಿ ಅರ್ಥೈಸಿಕೊಂಡು ಒಮ್ಮೆ ಕೈ ತಟ್ಟಿ ಎದ್ದು ಹೋಗೋವಾಗ  ಇರೋ ನಿರಾಳತೆ...ಅದೆಷ್ಟು ಚಂದವಲ್ವಾ ಕಣ್ಣಲ್ಲೇ ಅರ್ಥೈಸಿಕೊಳೋ ಈ ಆತ್ಮೀಕ ಭಾವದ ಖುಷಿಗಳು.
ಎಂದಿನಂತೆ  ನೆನಪ ಹರಿವು ನಿಮ್ಮೆಗೆಡೆ ನನ್ನಿಂದ.

ನಂಗೆ ಪೂರ್ತಿಯಾಗಿ ಅರ್ಥವಾಗದ ಅವನನ್ನವಳು ಇಡಿಯಾಗಿ ಅರ್ಥೈಸಿಕೊಂಡು ನನ್ನ ಅವನ ಮಧ್ಯದ ಒಂದಿಷ್ಟು ಗೊಂದಲದ ಭಾವಗಳನ್ನ ಪರಿಹರಿಸೋವಾಗ ಅವಳನ್ನ ಆಶ್ಚರ್ಯದಿಂದ ದಿಟ್ಟಿಸೋದ ಬಿಟ್ರೆ ನಂಗೇನೂ ಬರಲ್ಲ..ಗೆಳತೀ,ನೀ ಸಲುಹೋ ,ಸಲುಹುತಿರೋ ಈ ಪ್ರೀತಿಗೆ ಏನೆಂದು ಹೆಸರಿಡಲಿ ನಾ..
ಸೋತಾಗ ಧೈರ್ಯ ಹೇಳಿ ಜೊತೆಗೆ ನಾಲ್ಕು ಹೆಜ್ಜೆ ಹಾಕಿ ಬದುಕಿಗೊಂದು ಆತ್ಮವಿಶ್ವಾಸವ ಕೊಡ್ತೀಯ.ಗೆದ್ದಾಗ ನನಗಿಂತಲೂ ಜಾಸ್ತಿ ಬೀಗ್ತೀಯ...ಎಡವಿದಾಗ ದಾರಿ ನೋಡಿ ನಡಿ ಅಂತ ತೋರಿಸಿಕೊಡ್ತೀಯ.ಮನ ಬಿಕ್ಕೋವಾಗಲೆಲ್ಲಾ ನಿನ್ನ ಕೈ ನನ್ನ ಕೈಯಲ್ಲಿ....ನೀ ನನ್ನ ಗದರಿದ ನೆನಪಿಲ್ಲ ಆದರೆ ತೀರಾ ಹಠ ಮಾಡೋ,ನನ್ನದೇ ಸರಿ ಅನ್ನೋ ನಂಗೆ ಹೊಡೆದು ಬುದ್ದಿ ಹೇಳ್ತೀಯ ಒಮ್ಮೊಮ್ಮೆ...ನೆನಪುಗಳ ಅಲೆಯಲ್ಲಿ ಕನಸುಗಳು ತೇಲೋವಾಗ ಒಮ್ಮೊಮ್ಮೆ ಖುಷಿ ಪಟ್ರೆ ಇನ್ನೊಮ್ಮೆ ಗಾಬರಿಯಾಗ್ತೀಯ...
ಮಾತು ಕಡಿಮೆಯಾದ್ರೂ ನೀ ನನ್ನೆಲ್ಲಾ ಭಾವಗಳ ಪ್ರತಿಬಿಂಬ.ಬದುಕೆಷ್ಟು ಧೈರ್ಯವ ಕಸಿದುಕೊಂಡ್ರೂ ಮತ್ತೆ ಬದುಕಿಗೇ ಧೈರ್ಯ ಕೊಡೋ ನೀನಂದ್ರೆ ನನ್ನ ಹೆಮ್ಮೆ.
ಸೋಲಲ್ಲೂ ಮುಂದಿನ ಗೆಲುವಿದೆ ಅನ್ನೋ ನೀ ನನ್ನ ಗೆಲುವು ...ಅಮ್ಮ ಗೆಳತಿಯಾದಾಗ ಗೆಳತಿ ಅಕ್ಕನಾದಾಗ ನನ್ನ ತಾಕೋ ಸಂಪೂರ್ಣ ಖುಷಿಯ ಭಾವಗಳು ನಿನ್ನ ಹೆಸರಲ್ಲಿದೆ.
ಮುಂದಿನ ಬದುಕಲ್ಲೂ ನಿನ್ನೆಡೆಗೆ ನಂದು ಮುಗಿಯದ ವ್ಯಾಮೋಹ...

ಪ್ರೀತಿಯಲ್ಲಿ ನೀ ಅಮ್ಮ...ಮಾತಲ್ಲಿ ನಾ ಮಗಳು!

ಅವ ನನ್ನ ಹೆಗಲ ಮೇಲೆ ಕೂರಿಸಿಕೊಂಡು ಇಡಿಯ ಊರ ನಿನ್ನೆ ಮೊನ್ನೆ ಸುತ್ತಿಸಿದ ನೆನಪು!ಬದುಕಂದ್ರೇ ಹೀಗೆ ಬದುಕಲ್ಲಿ ಹೀಗೆಯೇ ಇರಬೇಕೆಂದು ಒಂದಿಷ್ಟು ಬದುಕ ಪ್ರೀತಿಯ ಅದರ ರೀತಿಯ ಕಲಿಸಿಕೊಟ್ಟಿದ್ದು ಅವನೇ.
ಗೆಳೆಯಾ...ನನ್ನ ಭಾವಗಳೆಲ್ಲವೂ ಅವಳಿಂದಲೇ ನಿನ್ನ ತಲುಪುತ್ತೆಯಾದ್ರೂ ಅದ ನಿನ್ನ ತಲುಪಿತಲ್ಲ ಅನ್ನೋ ಸಮಾಧಾನ ನಂದು...ಮೊದಲ ಗೆಳೆಯನ ಜಾಗ ಕೊಟ್ಟಿಲ್ಲದಿದ್ರೂ ನೀ ನನ್ನ ಬದುಕ ಗೆಳೆಯ.ಕಲಿಸಿಕೊಟ್ಟಿದ್ದು ನೀ.ಬೆರೆತು ಮುನ್ನಡೆದಿದ್ದು ನಾ.
ನೀನವನ ಪಡಿಯಚ್ಚು ಅಂತ ಎಲ್ಲರೂ ಹೇಳೋವಾಗ ಹುಬ್ಬೇರಿಸಿ ಹೊರಟುಬಿಡ್ತೀನಿ ಎಲ್ಲದರಲ್ಲೂ ನಾ ನಿನ್ನ ಪ್ರತಿಬಿಂಬವ ಅಂತ ನೋಡಿಕೊಳ್ಳೋಕೆ!!
ಮೊದಲ ಹೆಜ್ಜೆಯ ಆ ದಿನಗಳಲ್ಲಿ ನಾ ಬಿದ್ದಾಗೆಲ್ಲಾ ಕೈ ಹಿಡಿದು ಎತ್ತಿದ್ದು,ಸಮಾಧಾನಿಸಿದ್ದು ನೀನೇನೆ...ಇವತ್ತು ನಾ ಎಡವಿ ಬಿದ್ದಾಗ ದೂರದಲ್ಲಿ ನಿಂತು ಕಣ್ಣಲ್ಲೇ ಧೈರ್ಯ ಹೇಳಿ ನಿಂತಾಗ ಮಾತ್ರ ನಡೆಯೋಕೆ ಸಾಧ್ಯ ಅನ್ನೋ ವಿಶ್ವಾಸವೊಂದ ಇಡೀ ಬದುಕಿಗಾಗೋವಷ್ಟು ಕೊಟ್ಟಿರೋ ನೀನಂದ್ರೆ ನನ್ನೊಳಗಿರೋ ನಾನೇನೆ!ಕೂಸು ಮರಿ ಮಾಡಿದ್ದೆ ನಿನ್ನೆ ಮೊನ್ನೆ ಅಂತ ನೀವುಗಳು ಹೇಳೋವಾಗ ನಂಗೂ ಅದೆ ಅನ್ನಿಸೋದು ಸಮಯ ಯಾಕಿಷ್ಟು ಧಾವಂತದಿ ಓಡ್ತಿದೆ ಅಂತ.ಆದರೂ ಈ ಓಡ್ತಿರೊ ಖುಷಿಯಲ್ಲೂ ನನ್ನದೊಂದಿಷ್ಟು ನೆಮ್ಮದಿಯಿದೆ.ಮನ ರಾಡಿಯಾದಾಗಲೆಲ್ಲಾ ನೀ ಕದ ತಟ್ಟಿ ಒಳ ಬಂದು ಚೊಕ್ಕ ಮಾಡಿಬಿಡ್ತೀಯ ಆದರೆ ಮರುದಿನದ ಮಳೆ ಮತ್ತಿಷ್ಟು ಮಣ್ಣು ಕದಡಿ ಹೋಗಿಬಿಡುತ್ತೆ ನನ್ನೊಳಗೆ.ಹೊರಟುಬಿಟ್ಟಿರ್ತೀಯ ಅದರರಿವು ನಿನ್ನ ತಾಕೋಕೂ ಮುಂಚೆಯೆ..ಮತ್ತೆ ನಾನೇ ಎದ್ದು ನಿಂತುಕೊಳ್ತೀನಿ.
ಆದರೂ ನಿನ್ನೆಡೆಗೆ ನಂದು ಬದುಕ ಪೂರ್ತಿಯ ನಂಟು ಅವಳಂತೆಯೇ.

ಸಿಟ್ಟಲ್ಲಿ ನೀ ಅಪ್ಪ...ಹಠದಲ್ಲಿ ನಾ ಮಗಳು!

ಒಬ್ಬರನ್ನೊಬ್ಬರು ಬಿಟ್ಟು ಕೊಡದೆ ಬದುಕ ಪೂರ್ತಿ ಒಬ್ಬರಿಗೊಬ್ಬರು ಆಸರೆಯಾಗಿ ನಿಲ್ಲೋ ಅವರಿಬ್ಬರೂ ನನ್ನವರೇ.ಅವನ ಸಿಟ್ಟನ್ನೂ ಸರಿ ಮಾಡೋ ಅವಳು ,ಅವಳ ಬೇಸರಗಳಿಗೆ ಕಿವಿಯಾಗೋ ಅವನು ಇಬ್ಬರೂ ಸೇರಿ ಚಂದದ ಮನೆಯೊಂದ ಅಷ್ಟೇ ಚಂದಿ ಸಲುಹಿ ಇವತ್ತಿಲ್ಲಿ ನೆಮ್ಮದಿಯ ನಿಟ್ಟುಸಿರಿಟ್ಟಾಗ ನನ್ನಲ್ಲಿರೋ  ಗೊಂದಲಗಳೆಲ್ಲಾ ಹಿಂತಿರುಗಿಯೂ ನೋಡದೇ ಹೊರಟುಹೋದ ಅವ್ಯಕ್ತ ಖುಷಿ ಒಳಗೊಳಗೆ.
ಇದೇ ಖುಷಿಯನ್ನೆ ಅಲ್ವಾ ಅವರಿಬ್ಬರೂ ನನ್ನ ಕಣ್ಣಲ್ಲಿ ನೋಡಬಂದಿದ್ದು!




ಕಿರುಬೆರಳ ಹಿಡಿದು ನೀವು ಪ್ರೀತಿಯ ಬದುಕಿಗೆ ಅಡಿಯಿಟ್ಟು ಇವತ್ತಿಗೆ ಇಪ್ಪತ್ತೊಂದು ವರ್ಷಗಳು....ಬದುಕಿಗೆ ನಾ ಬಂದು ಈಗ ನಿಮ್ಮ ಬದುಕೇ ನಾನಾ(ವಾ)ಗಿ ಹತ್ತೊಂಬತ್ತು ವರ್ಷ!
ಈ ಚಂದದ ಅರಮನೆಯಲ್ಲಿಷ್ಟು ಕನಸಿದೆ...ಕನಸ ಬೊಂಬೆಗಳಿಗೆ ಬಣ್ಣ ತುಂಬೋಕೊಂದಿಷ್ಟು ಬಣ್ಣಗಳನ್ನಾಗಲೇ ಕೊಂಡದ್ದಾಗಿದೆ.
ತುಸು ದೂರದಲ್ಲಿ ಚೂರೇ ಚೂರು ಮುನಿಸಿದ್ದರೂ ಮನ ಖುಷಿಸೋಕೆ ,ಪ್ರೀತಿಯ ಭಾವವೆಲ್ಲಾ ನದಿಯಾಗಿ ಹರಿಯೋಕೆ ಅಲ್ಯಾವ ಅಡೆತಡೆಯೂ ಇಲ್ಲ.
ಪ್ರೀತಿಯೆಂದರೆ ನೀವು...ಪ್ರೀತಿಸೋ ಜೀವಗಳ ಜೊತೆಗಿನ ನಿಮ್ಮೀ ಪ್ರೀತಿಯ ಅರ್ಧಪಾಲು ನಂದು ಅನ್ನೋ ಖುಷಿಯಲ್ಲಿ...
 ಮುಗಿಯದ ಮುದ್ದಲ್ಲಿ..ಕಾಡೋ ಹಠದಲ್ಲಿ...ಬದುಕ ಭರವಸೆಗಳಲ್ಲಿ....ಜೊತೆಯಿರ್ತೀನಿ ಯಾವತ್ತೂ....
ಪ್ರೀತಿಯಿಂದ.
                                                                          ***

ನಿರುಪಾಯದಲ್ಲಿ ಕಾಣ್ತಿರೋ ಐವತ್ತರ ಭಾವ ಸಂಭ್ರಮಕ್ಕೆ ನನ್ನದಿಷ್ಟು ಖುಷಿಗಳು ಜೊತೆಯಾಗಿ.

Friday, March 14, 2014

ಗುಳಿಕೆನ್ನೆ ಹುಡುಗಂಗೆ

ಜಾತ್ರೆಯ ಜನ ಜಂಗುಳಿಯ ಮಧ್ಯ ಕೈ ತಾಕಿ ಹೋದ ಹುಡುಗ ನೀನು.ಮುಖ ನೋಡಿ ಗುರಾಯಿಸಬಂದ್ರೆ ನಾ ನಿಂಗೆ ಮೊದಲೇ ಪರಿಚಯವಿದ್ದೆ ಅನ್ನೋ ತರಹ ಸಾರಿ ಕಣೋ ಅಂತಂದು ಕಣ್ಣು ಮಿಟುಕಿಸಿ ಹೋಗಿಬಿಟ್ಟಿದ್ದೆ!ಯಾರಿವನು ಅಂದುಕೊಂಡು ಮಧ್ಯ ದಾರಿಯಲ್ಲಿ ನಿಂತೇ ಯೋಚಿಸುತ್ತಿದ್ದ ನನ್ನನ್ನ ತೀರಾ ಅನ್ನೋ ಅಷ್ಟು ಕಾಡಿಸಿದ್ದ ಗೆಳತಿಯರು ಪರಿಚಿತನಲ್ಲದ ನಿನ್ನನ್ನಾಗಲೇ ನನ್ನ ಹುಡುಗನ್ನಾಗಿಸಿಬಿಟ್ಟಿದ್ದರು!!
ನಾನವತ್ತು ನೋಡಿದ್ದು ನಿನ್ನ ಗುಳಿಕೆನ್ನೆ ಮಾತ್ರ. ನನ್ನ ಗೆಳತಿಯರೂ ನಿನ್ನ ಕರೆಯೋದು ಗುಳಿಕೆನ್ನೆ ಹುಡುಗ ಅಂತಲೇ.

ನಂತರದ ದಿನಗಳಲ್ಲಿ ನಾ ಪಾನಿಪುರಿ ತಿನ್ನೋವಾಗ,ಇಲ್ಲದ ತಲೆಹರಟೆ ಮಾಡಿಕೊಂಡು ರಸ್ತೆ ಮಧ್ಯದಲ್ಲೇ ಜಗಳ ಆಡುತ್ತಾ ನಿಲ್ಲೋವಾಗಲೆಲ್ಲಾ ದೂರದಿಂದಲೇ ನನ್ನ ನೋಡುತ್ತಾ ನಗುತ್ತಿದ್ದ ನಿನ್ನ ನಾ ಯಾವತ್ತೋ ಗುರುತಿಸಿದ್ದೆ ಬಿಡು.ಅವತ್ಯಾವತ್ತೋ ಸುರಿಯೋ ಮಳೆಯಲ್ಲಿ ರಸ್ತೆಬದಿಯಲ್ಲಿ ನಿಂತು ಜೋಳ ತಿನ್ನುತ್ತಿದ್ದ ನನ್ನ ಪಕ್ಕ ಬಂದು ಮಧ್ಯ ದಾರಿಯಲ್ಲಿ ಸ್ಕೂಟಿ ನಿಲ್ಲಿಸಿ ಬಂದಿದ್ದೀಯ ಅಂತ ಹೇಳಿದಾಗ ಇರಿ ತಿಂದು ಆಮೇಲೆ ನೋಡ್ತೀನಿ ಅಂತ ಕಣ್ಣು ಮಿಟುಕಿಸಿದ್ದ ನಂಗೆ ಕೋತಿ ಕೀ ಕೊಡು ಅಂತ ತೆಗೆದುಕೊಂಡು ಹೋಗಿದ್ದೆಯಲ್ಲಾ..
ಇವತ್ತೂ ಅಂತದ್ದೇ ಮಳೆ ಕಣೋ ಇಲ್ಲಿ..ಮಳೆಯಲ್ಲಿ ಜೋಳದ ಜೊತೆ ನಿನ್ನ ಮೊದಲ ಭೇಟಿಯ ಆ ದಿನ ನೆನಪಾಯ್ತು ಅಂತ ಮೇಸೇಜ್ ಮಾಡಿದ್ರೆ ನಿಂತಿರೇ ಹುಡುಗಿ ಇನ್ನೊಂದೈದು ತಾಸು ಹಾಗೆಯೇ ಮತ್ತೆ ನಿನ್ನ ಸ್ಕೂಟಿ ಬದಿಗಿರಿಸಿ ಹೋಗ್ತೀನಿ.ಯಾಕೋ ಮತ್ತದೇ ಬಜಾರಿ ಹುಡುಗಿಯನ್ನ ನೋಡೋ ಆಸೆಯಾಗಿದೆಅಂತ ರೀಪ್ಲೈ ಮಾಡ್ತೀಯಾ ಕೋತಿ.
ಪೂರ್ತಿಯಾಗಿ ನಾ ತೇಲಿಹೋದೆ ಆ ದಿನಗಳಲ್ಲಿ....
ಜಗಳದಿಂದಲೇ ಶುರುವಾಗಿತ್ತು ಅವತ್ತು ನನ್ನ ನಿನ್ನ ಗೆಳೆತನ...ಪಾರ್ಕ್ ಮಾಡಿದ್ದ ನನ್ನ ಸ್ಕೂಟಿಯ ಮೇಲೆ ಕುಳಿತುಕೊಂಡು ನೀನು ನಿನ್ನ ಗೆಳೆಯರು ಹರುಟುತ್ತಿದ್ದುದ್ದರ ನೋಡಿ ತಡೆಯಲಾರದ ಸಿಟ್ಟಲ್ಲಿ ಬೈದಿದ್ದೆ ನನ್ನ ಸ್ಕೂಟಿನೇ ಬೇಕಾ ನಿಮ್ಮಗಳಿಗೆ ಅಂತಂದು.ಜಗಳಕ್ಕೆ ನಿಂತಿದ್ದ ನಿನ್ನ ಸ್ನೇಹಿತರನ್ನ ನೀ ಸಮಾಧಾನಿಸಿ ಸಾರಿ ಅಂತಂದು ಎದ್ದು ಹೋದೆಯಲ್ವಾ,ಅಂದುಕೊಂಡೆ ಪಾಪ ಹುಡುಗ ಅಂತಂದು.

ಆಮೇಲಿನ ದಿನಗಳ ಮಾತೆಲ್ಲಾ ನಡೆದಿದ್ದು ಕ್ಯಾಂಟೀನ್ ನಲ್ಲಿ...ಆಮೇಲೂ ಎದುರು ಫೋನ್ ನಂಬರ್ ಕೇಳದೆ ನಿನ್ನ ನಂಬರ್ ಬರೆದು ನನ್ನ ಸ್ಕೂಟಿಯ ಮೇಲೆ ಆ ಚೀಟಿ ಇಟ್ಟು ಹೋಗಿದ್ದೆಯಲ್ಲಾ ..ನಾನಂದ್ರೆ ನಿಂಗೆ ನಿಜಕ್ಕೂ ಅಷ್ಟು ಭಯವಿತ್ತೇನೋ ಅಂತ ಕೇಳಿದ್ರೆ ಇವತ್ತಿಗೂ ಬರಿಯ ಭಯವಲ್ಲ ಕಣೇ ಅಲ್ಲೆ ಎಲ್ಲರೆದುರು ಜಗಳಕ್ಕೆ ನಿಂತುಬಿಡೋ ಬಜಾರಿ ನೀ ಅನ್ನೋ ಮುಜುಗರ ಅಷ್ಟೇ ಅಂತಂದು ಕಣ್ಣು ಮಿಟುಕಿಸಿ ಗುದ್ದಿಸಿಕೊಳ್ತೀಯಲ್ಲಾ..

ಯಾಕೋ ಆ ಸ್ಕೂಟಿ...ಆ ಮಳೆ ...ಆ ಜಗಳ, ಮುನಿಸುಗಳು ಮನದೊಳಗೇ ನಗುತ್ತಿವೆ ಇವತ್ತು.

ಪ್ರೀತಿ ಯಾವಾಗ ಹುಟ್ಟಿದ್ದೋ ಗೊತ್ತಿಲ್ಲ ನಂಗಿನ್ನೂ..ಆದ್ರೂ ಒಬ್ಬರಿಗೊಬ್ಬರು ಪ್ರೀತಿಯ ನಿವೇದನೆ ಮಾಡಿಕೊಳ್ಳದೇ ಇಬ್ಬರಿಗೂ ಪ್ರೀತಿ ಖಾತ್ರಿಯಾಗಿದ್ದ ದಿನ ಬದುಕ ತುಂಬಾ ಖುಷಿಗಳು ಮಾತ್ರ ಇರೋ ಭಾವ ಅವತ್ತಿಂದ ಇವತ್ತಿನ ತನಕ.

ನೀ ನಂಗೆ ಗೆಳತಿಯಾಗೋಕೂ ಮುಂಚೆ ನನ್ನ ಪ್ರೀತಿಯಾಗಿಬಿಟ್ಟಿದ್ದೆ ಅಂತ ನೀ ಭಾವುಕನಾಗಿ ಪ್ರತಿ ಬಾರಿ ಹೇಳೋವಾಗ ನಿನ್ನ ತಲೆ ಸವರಿ ಕಣ್ಣಂಚ ಒದ್ದೆಯಾಗಿಸೋದ ಬಿಟ್ಟು ನಂಗೇನೂ ಗೊತ್ತಿಲ್ಲ...

ಎಲ್ಲೇ ಹೋದ್ಲು ನನ್ನಾ ಜಗಳಗಂಟಿ ಗೆಳತಿ ಅಂತ ನೀ ಕೇಳೋವಾಗಲೆಲ್ಲಾ ನಾನೂ ಹುಡುಕ್ತೀನಿ ಆ ಹಳೆಯ ಹುಡುಗಿಯನ್ನ...
ಬಾರೋ ಲಾಂಗ್ ಡ್ರೈವ್ ಹೋಗೋಣ ಅಂದಿದ್ದ ಆ ದಿನ ನೀ ಬೇಸರಿಸಿದ್ದೆ ನೋಡು ಪಕ್ಕಾ ಹುಡುಗರ ತರಹ ಇರ್ತೀಯ ನೀ...ನಂಗೆ ನನ್ ಹುಡುಗಿ ಹುಡುಗಿಯ ತರಹ ಇರ್ಬೇಕು ಅಂತ...ಮರು ದಿನದಿಂದ ನಂಗೆ ಗೊತ್ತಿಲ್ಲದೇ ನನ್ನಲ್ಲಿಷ್ಟು ಬದಲಾವಣೆಗಳು..ಹಣೆಗೆ ಬೊಟ್ಟಿಡದ ಹುಡುಗಿ ಆಮೇಲೊಂದು ದಿನವೂ ಖಾಲಿ ಹಣೆಯಲ್ಲಿರಲಿಲ್ಲ..ನಿಂಗಾಗೆ ನಾ ಬಳೆ ತಗೊಂಡ ನೆನಪು! ನಿನ್ನ ಕಣ್ಣಲ್ಲಿನ ಅವತ್ತಿನ ಖುಷಿ ಇವತ್ತೂ ನನ್ನೆದೆಯಲ್ಲಿ ಜೋಪಾನವಾಗಿದೆ..

ಆಮೇಲೆ ನಾನ್ಯಾವತ್ತೂ ಲಾಂಗ್ ಡ್ರೈವ್ ,ವೋಡ್ಕಾ, ಅಂತೆಲ್ಲಾ ತರ್ಲೆ ಮಾಡಿದ್ದ ನೆನಪಿಲ್ಲ....ಆಮೇಲೆ ನಿನ್ನ ಮನಕ್ಕೆ ನಾ ’ಸ್ಪಟಿಕ’ಳಾಗಿ ಬಿಟ್ಟಿದ್ದೆ ಅಲ್ವಾ...
ಅವತ್ತಿಂದ ನಂಗೆ ನನ್ನ ನಿಜದ ಹೆಸರು ಮರೆತೇ ಹೋಗಿದೆ ಅಕ್ಷರಶಃ...

ಅವತ್ತು ನೀನಿತ್ತ ಕಾಲ್ಗೆಜ್ಜೆ ,ನವಿಲುಗರಿಯ ಮತ್ತೆ ಸವರಬೇಕನಿಸ್ತಿದೆ ನಂಗಿವತ್ತು...

ಇದೆಲ್ಲಾ ಕನಸೋ ನನಸೋ ಅನ್ನೋ ಗೊಂದಲ ನಂಗಿನ್ನು...ವರ್ಷಗಳ ಹಿಂದೆ ತರ್ಲೆ ಮಾಡ್ತಾನೆ ನನ್ನವನಾಗಿ ಹೋಗಿದ್ದ ಹುಡುಗ ಇವತ್ತು ಕನಸುಗಳಿಗೆಲ್ಲ ಜೊತೆಯಾಗಿ ,ತರ್ಲೆಗಳನ್ನೆಲ್ಲಾ ಸಹಿಸಿಕೊಂಡು, ನಂಗೆ ನೀನೇ ಬೇಕೆಂದು ಹಠ ಹಿಡಿದು ಕೂತು ಕೊನೆಗೆ ಈ ಬಜಾರಿ ಹುಡುಗಿಯ ನನಸ ರಾಜ್ಯದ ರಾಜನಾಗೋಕೆ ಸಿದ್ಧನಾಗಿರೋ ಮುದ್ದು ಗೆಳೆಯ ಇನ್ನೊಂದು ವಾರಕ್ಕೆ ನೀ ನನ್ನ ಬಾಳಸಂಗಾತಿಯಾಗ್ತೀಯಲ್ಲೊ...ಆತ್ಮ ಸಂಗಾತಿಯಾಗಿ

ಈ ಕನಸಿನೂರಿನ ಚಂದಮನ ಅಂಗಳದಲ್ಲಿ ಕೂತು ನಿನ್ನೊಟ್ಟಿಗೆ ಮಾತಾಡಬೇಕಿದೆ ತುಸು ಜಾಸ್ತಿಯೇ...

ಸಂಜೆ ಸಾಯೋ ಹೊತ್ತಲ್ಲಿ ಕಡಲ ಅಲೆಗಳಿಗೆ ಪಾದ ತೋಯಿಸುತ್ತಾ ನಿನ್ನ ಕಿರುಬೆರಳ ಹಿಡಿದು ನಡೆಯೋ ಆಸೆ ನಂಗೆ...ಮನ ಗರಿ ಬಿಚ್ಚಿ ನಲಿಯೋವಾಗ ಗೆಜ್ಜೆ ಕಟ್ಟಿ ಕುಣಿಯೋ ಆಸೆ...ತನ್ಮಯಳಾಗಿ ನಿನ್ನ ಕಣ್ತುಂಬಿಕೊಳ್ಳೋ ಬಯಕೆ..ಹೀಗೇ ಹತ್ತಾರು ಆಸೆ ನೂರೆಂಟು ಕನಸುಗಳ ನಿನ್ನಲ್ಲಿ ಜೋಪಾನ ಮಾಡೋ ಹಂಬಲ ನಂದು.

ಸಮುದ್ರದಂಚಿನ ನಮ್ಮದೇ ಪುಟ್ಟ ಅರಮನೆಯಲ್ಲಿ ನಿನ್ನೆಲ್ಲಾ ಕನಸುಗಳ ಜೊತೆ ನಿನ್ನ ಕೈ ಹಿಡಿದು ಬದುಕ ಪೂರ್ತಿ ನಲಿವ ನಿನ್ನದೇ ಹುದುಗಿಯ ಭಾವವಿದು ಗೆಳೆಯ.

ನಿನ್ನಾ ಗುಳಿಕೆನ್ನೆಯ ಸವರೋಕಂತಾನೇ ಕಾಯ್ತಿರೋ, ಮತ್ತದೇ ಮಳೆಯಲ್ಲಿ ನೆನಪುಗಳ ಜೊತೆ ಕನಸುಗಳ ಕೈ ಹಿಡಿದು ಹೆಜ್ಜೆ ಹಾಕೋಕೆ ನಿಂತಿರೋ ನಿನ್ನದೇ ಹುಡುಗಿ..

ಮತ್ತೆ ಮಳೆಯಾಗಿದೆ ನನ್ನೆದೆಯ ಬೀದಿಯಲ್ಲಿ..ಮಣ್ಣ ಘಮದಲ್ಲಿ ನಿನ್ನನರಸಿ..
ನಿನ್ನದೇ ಜಗಳಗಂಟಿ ಹುಡುಗಿ.
ಸ್ಪಟಿಕ