Monday, May 5, 2014

ಮಾಸದ ಸ್ನೇಹ ಪಯಣ...


ಎರಡು ವರ್ಷದಿಂದ ಕಾಫೀ ಡೇ ನ ಲೆಫ್ಟ್ ಕಾರ್ನರ್ ನಲ್ಲಿ ನಮ್ಮ ಹೆಸರಿಗಿರೋ ಆ ಐದು ಕುರ್ಚಿಗಳು.
ಮೊದಲ ಬಾರಿಯ ಪರಿಚಯದ ನಗುವಿಂದ ಶುರುವಾಗಿ ಮೊನ್ನೆಯ ವಿದಾಯದ ನೋವಿನ ತನಕವೂ  ದಕ್ಕೋ ನೆನಪುಗಳ ಜಾಗವದು!
ಇಷ್ಟು ಕಾಲ ಒಟ್ಟಿಗಿದ್ದ ಈ ಚಂದದ ಗೆಳೆತನಕ್ಕೆ,

ಸುಮ್ಮನೆ ನನ್ನ ಪಾಡಿಗೆ ನಾನಿದ್ದ ಹುಡುಗಿಯನ್ನ ಕೆಣಕಿ ಎಲ್ಲರೆದುರು ಬೈಸಿಕೊಂಡಿದ್ದು ಹೀಗೊಂದು ಆತ್ಮೀಕ ಸ್ನೇಹಕ್ಕೆ ಮುನ್ನುಡಿ.ಇಡಿಯ ಕ್ಯಾಂಪಸ್ನಲ್ಲಿ ನಮ್ಮೂರ ಹುಡುಗಿ ನೀನೊಬ್ಬಳೆ ಅದರಲ್ಲೂ ನಿನ್ನದೂ ಅಪ್ಪೆಹುಳಿ ಗುಂಪು(ಹವ್ಯಕ ಅಕೌಂಟ್) ಅನ್ನೋದು ತಿಳಿದ ಮೇಲೂ ಸುಮ್ಮನೆ ಕೂರೋಕಾಗದೆ ಕಾಲೆಳೆಯೋಕೆ ಬಂದ್ವಿ ಆದರೆ ನೀ ಸೂಪರ್ ಸೀನಿಯರ್ಸ್ ಅನ್ನೋ ಭಯವೂ ಇಲ್ಲದೇ ಗುರಾಯಿಸಿಹೋದೆ ಅಂತನ್ನೋದು ಪ್ರತಿಯ ಭೇಟಿಯಲ್ಲೂ ಇರೋ ಮಾತು! ಒಂದಿಡೀ ದಿನದ ಜಗಳವೇ ಮರುದಿನದಿಂದ ನಕ್ಕು ಮಾತಾಡೋದು ಅಭ್ಯಾಸವಾಗೋ ತರಹ ಮಾಡಿದ್ದು.
ನನ್ನ ದೊಡ್ದ ಗೆಳೆಯರ ಗುಂಪಿಗೆ ಅವತ್ತೆ ಸೇರಿಸಿಕೊಂಡಿದ್ದೆ ನನ್ನೂರ ಈ ಸೀನಿಯರ್ಸ್ ಗಳನ್ನ!

ಆಮೇಲಿನದೆಲ್ಲಾ ನನಗಿಂತಲೂ ಜಾಸ್ತಿ ಗೊತ್ತಿರೋದು ಕಾಫೀ ಡೇನಲ್ಲಿನ ಆ ಕಾರ್ನರ್ ಸೀಟ್ ಗೆ,ರೈಡ್ ಅಂತ ಹೋಗೋ ಆ ಹಾಸ್ಟೆಲ್ ರೋಡ್ ಗೆ , ಸುಮ್ಮನೆ ಬೇಸರಕ್ಕೆ ಓಡಾಡೋ ಅದೇ ಎಮ್ ಜಿ ರೋಡಿನ ಉದ್ದಕ್ಕೆ ಮತ್ತು ವಾಟ್ಸ್ಅಪ್ ಅನ್ನೋ ನನ್ನಿಷ್ಟದ ಗೆಳೆಯಂಗೆ!

ಯಾವುದಕ್ಕೂ ತಲೆಕೆಡಿಸಿಕೊಳ್ಳದ ಈ ಹುಡುಗರ ಗುಂಪಲ್ಲಿ ನಂಗೆ ಸಿಕ್ಕಿದ್ದು ಬರಿಯ ನಗುವಿನ,ತುಸು ಜಾಸ್ತಿ ಅನ್ನಿಸೋವಷ್ಟು ಕೀಟಲೆಯ ಜೊತೆಗಿನ ಖಾಯಂ ಸದಸ್ಯತ್ವ!
ದಿನಪೂರ್ತಿ ಮಾತಾಡಿದ್ದಿಲ್ಲ,ಕೈಯಲ್ಲಿ ಕೈ ಇರಿಸಿ ಭರವಸೆ ನೀಡಿದ ನೆನಪಿಲ್ಲ,ನನ್ಯಾವ ಭಾವಗಳನ್ನೂ ಕೂತು ಓದಬಂದಿಲ್ಲ ಇವರು...ಒಂದಿಷ್ಟು ಟೀನ್ ಭಾವಗಳನ್ನ ಹಂಚಿಕೊಂಡಿದ್ದು ಬಿಟ್ರೆ ಬದುಕ ಭರವಸೆಗಳ ಬಗೆಗೆ ಮಾತಾಡೋದು ,ಮಾತಾಡಿದ್ದು ತೀರಾ ಕಡಿಮೆಯೆ.

ಆದರೂ ಇವರೆನ್ನ ಬದುಕ ಗೆಳೆಯರು... ನಾನಿವರ ತರಲೆ ಗೆಳತಿ!

ಇಲ್ಲೊಂದಿಷ್ಟು ಪಕ್ಕಾ ಬ್ರಾಂಡೆಡ್ (?) ಟಾಕ್ ಗಳಿವೆ...
ಜೊತೆಗೆ ನಾನೂ ಇದ್ದೀನಿ ಅನ್ನೋದನ್ನೂ ನೋಡದೇ ಎದುರು ಬರೋ ಹುಡುಗಿಗೆ ಹೇಳೋ ಇವರುಗಳ ಕಾಮೆಂಟ್ ಕೇಳಿ ರಸ್ತೆ ಮಧ್ಯವೇ ಕೂತು ನಕ್ಕಿದ್ದಿದೆ! heineken beer ಇಂದ ಶುರುವಾಗಿ, corona ,signature whisky ,absolute vodka ಕ್ಕೊಂದು ಕಾಮಾ ಕೊಟ್ಟು lee cooper woodland ಶೂಸ್ , adidas ,nike ತನಕವೂ ಇಡೀ ದಿನ  ಮಾತಾಡೋ ಇವರುಗಳಿಗಿಂತ ಬ್ಯೂಟಿ ಟಿಪ್ಸ್ ಬಗ್ಗೆ ೫೯ ನಿಮಿಷ ಮಾತಾಡೋ ಹುಡುಗಿಯರೇ ವಾಸಿ ಅಂತನಿಸೋವಷ್ಟು ಬೇಸರಿಸಿ ಮುಖ ಊದಿಸಿದ್ದಿದೆ.ಯಾಕಷ್ಟು ಬ್ರಾಂಡ್ ಗಳ ಬಗೆಗೆ ಮಾತಾಡ್ತೀಯ ಅಂತ ಕೇಳೋ ನನ್ನವರ ಮಾತುಗಳಿಗೆ ಇವರನ್ನ ನೆನಪಿಸಿಕೊಂಡು ಗಂಟೆಗಟ್ಟಲೇ ನಕ್ಕಿದ್ದಿದೆ...ಪಕ್ಕಾ ಲೋಕಲ್ ಭಾವಗಳಿಗೆ ಬ್ರಾಂಡ್ ಟಚ್ ಕೊಟ್ಟು ಅದ್ಯಾವುದೋ ಬ್ರಾಂಡ್ ಗೆ  royal ಅಂಬಾಸಿಡರ್ ಇವರೇ ಏನೋ ಅನ್ನೋ ಸಣ್ಣ ಅನುಮಾನ ನನ್ನ ತಾಕೋ ತರ ಮಾಡಿದ್ದೂ ಇದೆ!
ಅಲ್ಯಾವುದೋ ಹುಡುಗಿಗೆ ಪ್ರಪೋಸ್ ಮಾಡೋದು ಹೇಗೆ ಅನ್ನೋದನ್ನೂ  ಬ್ರಾಂಡೆಡ್ ಮಾತುಗಳಲ್ಲೇ ನಾನೂ  ಹೇಳಿಕೊಟ್ಟಿದ್ದಿದೆ!(ಲವ್ ಗುರು ಅನ್ನದಿರಿ).

 ಈ ಗೆಳೆಯರ birth day ಕೇಕ್ ನಲ್ಲಿ ಸಿಗೋ ಮೊದಲ ಬೈಟ್, ನನ್ನ birth day ಸೆಲೆಬ್ರೇಷನ್ ಗೂ ನನ್ನನ್ನೇ ಅತಿಥಿ ಮಾಡಿ ಅವರು ಕೊಟ್ಟ ಆ ಟ್ರೀಟ್ ,ಮಳೆಗಾಲದ ಸಂಜೆಗಳಲ್ಲಿ ಹುಡುಗಿಯರ ಹಾಸ್ಟೆಲ್ ಮುಂದೆ ಹೋಗೋ ರೈಡ್ ಗೆ ಬೇಸರಿಸಿ ಎಲ್ಲ ವೂ ನಿಮ್ಮದೇ ಫ಼ೇವರ್ಸ್ ಅಂತಂದ್ರೆ ಹುಡುಗರು ಅಂತ ನಾವಿಷ್ಟು ಜನ ಇದೀವಿ ನಮ್ಮಲ್ಲೇ ಒಬ್ಬರನ್ನ ನೋಡೇ ಹುಡುಗಿ ಅಂತ ರೇಗಿಸೋ ಮಾತುಗಳು, women's dayಗೆ ಜೊತೆಯಿದ್ದ ಗೆಳತಿಯರಿಗೆಲ್ಲಾ ವಿಷ್ ಮಾಡಿ ನನ್ನ ಮಾತ್ರ ಬಿಟ್ಟು ರೇಗಿಸಿದ್ದ ದಿನ,ಯಾವುದೋ ಬೇಸರವ ಇವರುಗಳು ಹೇಳೋವಾಗ ನಗು ತಡೋಯೋಕಾಗದೇ ಕಿಸಿಕ್ಕಂತ ನಕ್ಕಾಗ ಭಾವಗಳಿಲ್ಲದ ಬಜಾರಿ ಗೆಳತಿ ನೀನು ಅಂತಂದು ತಕ್ಷಣಕ್ಕೆ i never mean it ಅಂತಂದ  ಇಳಿ ಸಂಜೆಯ ತಪ್ಪೊಪ್ಪಿಗೆ,ಕನಸ ಹುಡುಗನ ಬಗೆಗಿರೋ ನನ್ನ ಹುಚ್ಚುಚ್ಚು ಕನಸುಗಳಿಗೆ ’ನಿಂಗೆ ಈ ಜನುಮದಲ್ಲಿ ಅಂತಹ ಹುಡುಗ ಸಿಗಲಾರ’ ಅಂತನ್ನೋ ಈ ಬ್ಯಾಚುಲರ್ಸ್ ಶಾಪ! ದೃಷ್ಟಿಯಾಗುತ್ತಲ್ಲೆ ನಮ್ಮಗಳದ್ದೇ ಅಂತಂದು ಅವಾಗಾವಾಗ ಮರ ಹತ್ತಿಸೋ ಕಾರ್ಯ,ಹುಷಾರಿಲ್ಲದೆ ಆಸ್ಪತ್ರೆಯಲ್ಲಿ ಮಲಗಿದ್ದ ರಾತ್ರಿಯಲ್ಲಿ ಜೊತೆಯಿದ್ದು ಕೊಟ್ಟ ಧೈರ್ಯ,
ರಕ್ಷಾಬಂಧನಕ್ಕೆ ರಾಖಿ ಕಟ್ಟಬಾರದು ಅಂತಂದ್ರೆ ಚಾಕಲೇಟ್ ಕೊಡಿಸಬೇಕೆಂದು ಕಂಡೀಷನ್ ಹಾಕಿದ್ದ ಆ ದಿನ!

ನೆನಪುಗಳ ಜೊತೆ ಮತ್ತೆ ಮತ್ತೆ ಮಾತಾಡಬೇಕು ಅನಿಸೋಕೆ ಕಾರಣ  ಈ ನೆನಪುಗಳನ್ನ ಜೊತೆ ಇರಿಸಿಕೊಂಡಿದ್ದಕ್ಕೇ ಆದೀತು.

ಮೊದಲ ಮಳೆಯಂತೆ ....ನೆನಪು ಎದೆ ತಾಕಿ.

ಬರಿಯ  ಚಂದದ ಗೆಳೆತನ ಮಾತ್ರ ನಡುವೆ ಇದ್ದಿದ್ದು ಅಂತನ್ನಲಾರೆ ನಾನು...ಗೆಳೆತನದ ಭಾವದಲ್ಲಿ ಪ್ರೀತಿಯಾಯ್ತೇ ಹುಡುಗಿ ನಿನ್ನ ಮೇಲೆ ಅಂತಂದು ಹೇಳೋ ಗೆಳೆಯಂಗೆ ಆ ಪ್ರೀತಿಯಲ್ಲೂ ನಾ ಗೆಳೆತನವ ಮಾತ್ರ ನೀಡೋಕಾಗೋದು ಕಣೋ ಗೆಳತಿಯಾಗಿ ಮಾತ್ರ  ಜೊತೆಯಿರ್ತೀನಿ ಅಂತ ಹೇಳೋವಾಗ ನಡುವೆ ನಡೆದಿದ್ದ ಅದೆಷ್ಟೋ ವಾಕ್ ಯುದ್ಧಗಳು ಅಕ್ಷರಶಃ ಮನವ ಮುರಿದಿತ್ತು...ಬೇಸರಗಳೇನೇ ಇದ್ದರೂ ಇಲ್ಲಿಯ ತನಕದ ಹೊಸ ಊರಿನ ಸ್ನೇಹ ಪಯಣದಲ್ಲಿ ಮಾಸದ ಪಯಣಿಗರು ನನ್ನೂರ ಈ ಗೆಳೆಯರು.
ನಾ ಮಾಡೋ ಬೇಸರಗಳಿಗೂ ಅವರೇ ಸಾರಿ ಅಂದು ಮತ್ತೆ ಮಾತಾಡಿಸೋ ಇವರುಗಳ ಜೊತೆಗಿನ ನನ್ನ ಗೆಳೆತನ ಸಾವಿನ ತನಕದ್ದು.

ಇನ್ನು ನಮ್ಮನೆಯಲ್ಲಿ ಇವರು ಮನೆ ಮಕ್ಕಳು..ಮಗಳ ಕೀಟಲೆಗಳನ್ನ ಸಹಿಸಿಕೊಂಡು ಅವಳನ್ನ ಹಾಗೆಯೇ ಇಷ್ಟ ಪಡೋ ಇವರುಗಳಿಗೆ ಅಮ್ಮ ಕೃತಜ್ನತೆಯ ಕೈ ಮುಗಿಯ ಹೋದ್ರೆ ಹೀಗೆ ಹೇಳಿದ್ರೆ ಮನೆಗೆ ಬರಲ್ಲ ಅಂತ ಹೇಳಿ ನಮ್ಮನೆ ಹುಡುಗಿ ಇವಳು ಅಂತ ಹೇಳಿ ಕೆನ್ನೆ ಹಿಂಡಿದ ನೆನಪಿದೆ.ಅಲ್ಯಾರೋ ನನ್ನ ಬಗ್ಗೆ ಕಾಮೆಂಟ್ ಮಾಡಿದ್ದು ಎಡ ಕಿವಿಗೆ ಬಿದ್ರೂ ಅವತ್ತೊಂದು ಜಗಳ ಇದೆ ಅಂತನಿಸಿಬಿಡೋವಷ್ಟು ರಂಪ ಮಾಡಿದ್ದಿದೆ. ವಾದಕ್ಕೆ ನಿಂತರೆ ಒಂದು ನಾ ಸುಮ್ಮನಾಗಬೇಕು ಇಲ್ಲದಿದ್ದರೆ ಎಲ್ಲರೂ ನಮ್ಮನ್ನೇ ನೋಡ್ತಿದಾರೆ ಅನ್ನೋದರ ಅರಿವಾಗಬೇಕು ಅಲ್ಲಿಯ ತನಕ ರಸ್ತೆ ಮಧ್ಯವಾದರೂ ಸರಿಯೆ ಅವರಂತೂ ಸುಮ್ಮನಾಗಲ್ಲ! ಹೊರಟು ಹೋಗೋ ಆಸೆ ಹೆಸರಿಲ್ಲದ ಕಡೆ ಅಂತಲ್ಲೆ ಒಮ್ಮೊಮ್ಮೆ ನನ್ನನ್ನೂ ಕಂಗಾಲಾಗಿಸಿದ್ದಿದೆ!ಕೆಲ ವಾದಗಳಿಗೆ ನಾ ಹೊಟ್ಟೆ ಹಿಡಿದು ನಕ್ಕಿದ್ದಿದೆ.

ಈಗಲೂ ನೆನಪಲ್ಲಿ ನಗುವ ಮಾತ್ರ ಬಿಟ್ಟು ಹೋಗ್ತಿರೋದು ಇವರು ನನ್ನಲ್ಲಿ.
ಒಂಚೂರು ಸಿಟ್ಟು ,ಒಂದಿಷ್ಟು ಒಲವು ,ಬೊಗಸೆಯಷ್ಟು ನಲಿವಿಗೆ ಜೊತೆಯಾದ ನನ್ನೂರ ಸೋ ಕಾಲ್ಡ್ ಸೂಪರ್ ಸೀನಿಯರ್ಸ್ ಜೊತೆಗಿನ ಈ ಪಯಣದಲ್ಲಿ ನನ್ನದೊಂದು ದಿಕ್ಕು ಇವರುಗಳದ್ದೊಂದು ದಿಕ್ಕು ಇನ್ನುಮುಂದೆ...
ಬೇಜಾರಾದಾಗ ,ಚಾಕಲೇಟ್ ಬೇಕೆನಿಸಿದಾಗ,ಮಳೆಯಲ್ಲಿ ರೈಡ್ ಹೋಗೋವಾಗ,ತಲೆ ತಿನ್ನೋಕೆ ಯಾರೂ ಸಿಗದೇ ಇದ್ದಾಗ ,ತುಂಬಾ ಬಿಡುವಿದ್ದಾಗ ,ರಸ್ತೆ ಬದಿಯ ಗೋಲ್ಗಪ್ಪಾ ತಿನ್ನೋವಾಗ,ತಮ್ಮನ ಜೊತೆ ಜಗಳಕ್ಕೆ ನಿಲ್ಲೋವಾಗ,ಕಾತರಿಸುವ,ಕಣ್ಣು ತೋಯಿಸಿಕೊಳ್ಳುವ....  ಅದೆಷ್ಟೋ ಇಂತಹುದೇ ಭಾವಗಳಿಗೆ ಬಹುಶಃ ಇನ್ನು ಮುಂದೆ ಇವರುಗಳೇ ನೆನಪಾಗ್ತಾರೇನೋ ನಂಗೆ!

ತಣ್ಣಗಿನ ಕಾಫಿಯ ಜೊತೆ ವಿದಾಯದ ಮಾತಿನ ನಂತರ ವಾಪಸ್ಸಾದ ಮೇಲೆ ಕ್ಷಣ ಖಾಲಿ ಖಾಲಿ ಅನ್ನಿಸಿದ್ರೂ ಇಷ್ಟು ದಿನದ ಈ ಸುದೀರ್ಘ ಖುಷಿಗಳಿಗೆ,ಚಂದದ ನೆನಪುಗಳಿಗೆ,ಒಂದಿನಿತು ಬೇಸರಕ್ಕೆ,ಸಹಿಸಿಕೊಂಡ  ಅದೆಷ್ಟೋ ತರಲೆಗಳ ಜೊತೆಗೆ ನನ್ನದೊಂದು ಕೃತಜ್ನತೆಯ ನಮನ.

ಜೊತೆಯಿರೋ ಚಂದದ ಕನಸುಗಳು ಹಾದಿಯ  ಆಯಾಸ ಸೋಕದಿರಲಿ ಇವರನ್ನ.ಗೆಲುವು ದಕ್ಕಲಿ ..ಆ ಗೆಲುವಲ್ಲಿ ಬದುಕ ಖುಷಿಗಳಿರಲಿ ಅನ್ನೋ ಆಶಯದಿ...ಮುಂದ್ಯಾವುದೋ ತಿರುವಲ್ಲಿ ಮತ್ತೆ ಜೊತೆಯಾಗ್ತೀನಿ ಅನ್ನೋ ಭರವಸೆಯಲಿ,
ಪ್ರೀತಿಯಿಂದ,