Friday, June 20, 2014

ಎದೆಯ ಗೂಡಿನೊಳಗೇನೋ ಗಲಭೆಯಾಗಿಹುದು...




 ಮೊದಲ ಸಾರಿ ನಾ ಜೊತೆಯಿಲ್ಲದೇ ಅವ ಊರಿಗೆ ಹೊರಟಿದ್ದಾನೆ.ಕೈಯಲ್ಲಿ ಕೈ ಇಟ್ಟು ಬದುಕೆಂಬ ಬದುಕಿಗೆ ಅವ ಸಿಕ್ಕಾಗಿನಿಂದ ಅವ ನನ್ನ ಬಿಟ್ಟು ಎಲ್ಲಿಗೂ ಹೋಗಿದ್ದಿಲ್ಲ.ನಾ ಅವನನ್ನ ಹೋಗೋಕೂ ಬಿಟ್ಟಿಲ್ಲ.ಪಕ್ಕದಲ್ಲಿರದ ಅವ ಕಾಡದಿರಲಿ ನನ್ನ ಅನ್ನೋ ಕಾರಣಕ್ಕೆ ಮೊಬೈಲ್ ತುಂಬಾ ತುಂಬಿಕೊಂಡಿದ್ದ ನನ್ನಿಷ್ಟದ ಹಾಡುಗಳನ್ನ ಕೇಳ್ತಾ ಕೂತಿದ್ದೀನಿ...’ಎದೆಯ ಗೂಡಿನೊಳಗೇನೋ ಗಲಭೆಯಾಗಿಹುದು’ ಅದೆಷ್ಟನೆಯ ಬಾರಿಯೋ ಗೊತ್ತಿಲ್ಲ ಮುಂದಿನ ಹಾಡಿಗೆ ಹೋಗದಂತೆ ತಡೆದಿದೆ ನನ್ನನಿದು.
ಸಾಲುಗಳ್ಯಾಕೋ ನಂಗೆ ನಾ ಹೇಳಿಕೊಂಡಂತನಿಸಿ,ಆ ದಿನಗಳೆಲ್ಲಾ ಪಕ್ಕ ಕೂತು ಅವನಿಲ್ಲದ ನನ್ನ ಮತ್ತೆ ಮಾತನಾಡಿಸಿದಂತೆ.

       ನಿವೇದನೆಯಾಗದ ಪ್ರೀತಿ ಅದು.ಆ ಪ್ರೀತಿಯೆಡೆಗೆ ನನ್ನದು ಪೂರ್ಣ ಶರಣಾಗತಿ.ಅವನೇ ಬೇಕೆಂಬ ಹಠ.ಚಂದದ ದಿನಗಳವು.ಪ್ರೀತಿ ಯಾವಾಗ ಆಗಿದ್ದು ಇಬ್ಬರಿಗೂ ತಿಳಿದಿಲ್ಲ.ಕನಸುಗಳಿಗೆ ಅವ ಜೊತೆಯಾಗಿ ಅವುಗಳನ್ನೆಲ್ಲಾ ಕೂಸು ಮರಿ ಮಾಡಿ ಬೆಳೆಸಿ ಸರಿ ಸುಮಾರು ಹತ್ತು ವರ್ಷಗಳು.ಅವತ್ತಿನಿಂದ ಇಲ್ಲಿಯ ತನಕ ಅವ ಜಗತ್ತಿನ ಎಲ್ಲಾ ಆತ್ಮೀಕ ಭಾವಗಳನ್ನೂ ನನ್ನೆಡೆಗೆ ತೋರಿದ್ದಾನೆ.ಮಾತಾಡೋ ಬೇಜಾರು ಅಂದಾಗ್ಲೂ ಅವ ಸುಮ್ಮನೆ ಕೈ ಹಿಡಿದು ಕುಳಿತುಬಿಡ್ತಿದ್ದ ಆಗೆಲ್ಲಾ.ಚಿಕ್ಕ ಸಿಟ್ಟನ್ನೂ ನನ್ನೆಡೆಗೆ ತೋರಿದ ನೆನಪಿಲ್ಲ ನಂಗೆ.ಆದರೆ ಇವತ್ತಿನ ಅವ ಯಾಕೋ ತೀರಾ ಬೇರೆ.ಯಾಕಿಷ್ಟು ಬದಲಾದ?
ಯೋಚಿಸಿಕೊಳ್ತೀನಿ ನನ್ನೊಳಗೆ ನಾ...ಸಿಗೋ ಉತ್ತರ ಮಾತ್ರ ಮತ್ತೆ ಅವ ಇಷ್ಟ ಪಡದ ಅದೇ ತೀರಕ್ಕೆ ತಂದು ನಿಲ್ಲಿಸಿಬಿಡುತ್ತೆ ನನ್ನ.

       ನನಗಾಗಿ ಲೆಕ್ಕವಿಲ್ಲದಷ್ಟು ಕಾಂಪ್ರಮೈಸ್ ಗಳು ಅವನವು.ಮಾತಾಡಲ್ಲ ನೀ ಅಂತ ಸಿಟ್ಟು ಮಾಡೋ ನಂಗಾಗಿ ಸುಮ್ಮನಿರು ಮಹರಾಯ ಅನ್ನೋವಷ್ಟು ಮಾತು ಕಲಿತಿದ್ದಾನೆ.ಓಡಾಟವೇ ಇಷ್ಟವಾಗದ ಅವನ ಈಗೀಗಿನ ಭಾನುವಾರಗಳೆಲ್ಲಾ ಬರಿಯ ಪ್ರವಾಸದ ದಿನಗಳಾಗೋವಷ್ಟು ಬದಲಾಗಿದೆ.ಸುಸ್ತು ಕಣೋ ಈ ವಾರವಾದರೂ ಮನೆಯಲ್ಲಿರೋಣ ಅಂತನ್ನೋ ನನ್ನ ಮಾತು ಮುಗಿಯೋಕೂ ಮುನ್ನವೇ ’ಇದೀನಲ್ಲೆ ನಿನ್ನ ಎತ್ತಿಕೊಂಡು ಸುತ್ತಿಸೋಕೆ’ ಅಂತ ಕಣ್ಣು ಮಿಟುಕಿಸಿ ಹೊರಡಿಸಿಬಿಡ್ತಾನೆ.
ಅವ ಅವತ್ತಿನ ನಾನಾಗ ಬಂದ್ರೆ ನಾ ಅವತ್ತಿನ ಅವನಾಗಿ ಬದಲಾಗಿಬಿಟ್ಟಿರೋ ವಿಷಯ ಅವನಿಗಷ್ಟಾಗಿ ಅರಿವಾಗಿಲ್ಲ.
ಮಾತಂದ್ರೆ ಅಸಹನೆ ನಂಗೀಗ.ಯಾರೂ ಬೇಡ ಕಣೋ ಒಂದಿಷ್ಟು ದಿನ ಅಮ್ಮನ ಮನೆಗೆ ಹೋಗ್ತೀನಿ ಅಂತ ನಾ ಅಳೋಕೆ ಶುರುವಿಟ್ರೆ ಹುಚ್ಚು ಹುಡುಗಿ ಬದುಕಲ್ಲೇನಾಯಿತು ಅಂತ ಈ ಬೇಸರ ನಿಂಗೆ ನನ್ನ ಬಿಟ್ಟು ಹೋಗ್ತೀಯ ಅಂತ ಅವ ಭಾವೂಕನಾಗಿಬಿಡ್ತಾನೆ.

ಅಂದುಕೊಂಡ ಮಾತುಗಳೆಲ್ಲಾ ಮತ್ತೆ ಗಂಟಲೊಳಗೆ.

      ಗೊಂಬೆಗಳಂದ್ರೆ ತುಂಬಾ ಇಷ್ಟಪಡೋ ಅವನು ಮನೆಯ ತುಂಬಾ ಗೊಂಬೆಗಳನ್ನೆ ತಂದಿಟ್ಟಿದ್ದ.ನನಗವನ ಮೊದಲ ಉಡುಗರೆಯೂ ಅವನಿಷ್ಟದ ಆ ಟೆಡ್ಡಿ.ಇವತ್ತು ಮನೆಯಲ್ಲಿ ಅದೊಂದನ್ನ ಬಿಟ್ಟು ಬೇರೆ ಯಾವ ಗೊಂಬೆಯೂ ಇಲ್ಲ.ಇರಲಿ ಬಿಡೋ ಅಂತ ನಾನಂದ್ರೆ ಮಾತೇ ಕೇಳದವನಂತೆ ಅದನ್ನೆಲ್ಲ ತೆಗೆದಿರಿಸಿದ್ದ.ಈಗ ಮನೆಯೂ ಖಾಲಿ ಖಾಲಿ ಮನದಂತೆಯೇ!
ಮಕ್ಕಳಂದ್ರೆ ಅವಂಗೆ ನನ್ನಷ್ಟೇ ಇಷ್ಟ.ನಂಗ್ಯಾವಾಗ ಕೊಡ್ತೀಯ ಮುದ್ದು ಪುಟ್ಟಿಯನ್ನ ಅಂತ ಮುದ್ದುಗರೆದಿದ್ದ ಅವತ್ತು.ರಸ್ತೆಯಲ್ಲಿ ಯಾವುದೋ ಪಾಪು ಆಡಿಕೊಂಡಿದ್ರೂ ಅದನ್ನೆತ್ತಿ ಮುದ್ದು ಮಾಡಿ ಬರ್ತಿದ್ದ.ಆದೈವತ್ತು ಎದುರು ಯಾವುದೇ ಪಾಪು ನಕ್ಕರೂ ನೋಡದವನಂತೆ ಹೊರಟುಬಿಡುತ್ತಾನೆ ಅವ.

ಅಸಲು ಅಲ್ಯಾವುದೋ ಕಂದಮ್ಮನ ಮುದ್ದು ಮಾಡೋವಾಗ ನನಗಿರದ ನನ್ನ ಕಂದಮ್ಮನ ನೆನಪ ನೋವು ನನ್ನ ತಾಕದಿರಲಿ ಅನ್ನೋ ಅವನ ಕಾಳಜಿಗೆ ಕಣ್ಣು ತುಂಬಿ ಬರುತ್ತೆ ನಂಗೆ.
ನಂಗೆನೂ ಬೇಸರವಿಲ್ಲ ಕಣೋ ,ನೀ ಖುಷಿಯಿಂದ ಆ ಪಾಪುವ ಮುದ್ದು ಮಾಡಿದ್ರೆ ನಂಗೆ ತುಂಬಾ ಖುಷಿಯಾಗುತ್ತೆ ಅಂತಂದ್ರೆ ನೀ ನನ್ನ ಪಾಪು ಅಂತ ಎದೆಗವಚಿಕೊಳ್ತಾನೆ.ಆದರವನ ಕಣ್ಣೀರ ಹನಿ ನನ್ನ ಕೈ ತಾಕಿ ತನ್ನಿರುವಿಕೆಯ ತೋರಿಸಿಬಿಡುತ್ತೆ.
       
    ನನ್ನೆಲ್ಲಾ ಖುಷಿಗಳಲ್ಲಿ ಅವನ ಕಾಣೋ ಅವ  ಒಮ್ಮೆ ಮಡಿಲಲ್ಲಿ ಮಲಗಿ ನಿದ್ದೆ ಮಾಡಿಸು ನೋಡೋಣ ಅಂತಂದ್ರೆ ಇನ್ನೊಮ್ಮೆ ಹಠ ಹಿಡಿದು ಊಟ ಮಾಡಿಸಿಕೊಳ್ತಾನೆ.ಮನೆಯಲ್ಲಿರೋವಷ್ಟು ಹೊತ್ತು ಜೊತೆ ಇರೋ ಅವನಲ್ಲಿ ಒಮ್ಮೊಮ್ಮೆ ಸಿಟ್ಟು ಮಾಡಿದ್ದಿದೆ.ಆದರೂ ನನ್ನೊಳಗಿನ ಅಮ್ಮನ ನಂಗೆ ತೋರಿಸಿ ಅದರಲ್ಲಿಷ್ಟು ಸಮಾಧಾನವ ಮಾಡೋ ಅವನ ವ್ಯಕ್ತಿತ್ವದ ಮುಂಬಾಗಿಲ ಚಿಲಕ ಮುಟ್ಟೋದೂ ಸಾಧ್ಯವಿಲ್ಲವೇನೋ ನಾನನ್ನೋ ನಂಗೆ !

ಆ ದಿನಗಳ ಮಾತು ಮಬ್ಬಾಗಿ ಕಣ್ಣ ರೆಪ್ಪೆ ತೋಯ್ದು ನಾ ನಿದ್ದೆ ಮಾಡೋ ಸಮಯ.

 ಮೇಸೆಜ್ ಬೀಪ್ ಆಗಿತ್ತು."ನೀ ಭಾವುಕಳಾ ?ಶುದ್ಧ ಮಟೀರಿಯಲಿಸ್ಟಾ?"ಅವನ ಪ್ರಶ್ನೆ.ನಾವಿಬ್ಬರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋದು ಎಸ್ಸೆಮ್ಮೆಸ್ ಗಳಿಂದಲೇ.ಎದುರು ಕೂತು ಅವ ಪ್ರಶ್ನೆ ಇಟ್ಟರೆ ಸುಮ್ಮನೆ ನಕ್ಕುಬಿಡ್ತೀನಿ ನಾ. ಅವನಿಗೂ ಈ ವಿಷಯ ಗೊತ್ತು.ಹಾಗಾಗಿಯೇ ಏನೋ ಒಮ್ಮೊಮ್ಮೆ ನಗು ನೋಡೋಕಂತಾನೆ ಒಂದಿಷ್ಟು ಪ್ರಶ್ನೆಗಳ ಕೇಳ್ತಾನೆ.
ಪ್ರಶ್ನೆಗಳಿಗೆ ಉತ್ತರಿಸೋ ಗೊಂದಲ ಬಿಟ್ಟು ತುಂಬಾ ದಿನಗಳಾದವು.ಆದರೂ ಉತ್ತರಿಸಲೇ ಬೇಕವನಿಗೆ...
ಅಸಲು ಒಳಗಿರೋ ಭಾವವಾದರೂ ಎಂತದ್ದು ತೀರಾ ಭಾವುಕಳೇನಲ್ಲ ಅಂತಂದ್ರೆ ಅವ ಅಂತಾನೆ ಯಾವಾಗ ಬಿಡ್ತೀಯ ಅಡ್ದ ಗೋಡೆ!

ಪ್ರಶ್ನೆಗೆ ಉತ್ತರಿಸೋಕೂ ಮುನ್ನ ಹೇಳಬೇಕನಿಸಿದೆ ಅವಂಗೆ ಬಿರುಗಾಳಿಯೆದುರು ಹಡಗ ಹಾಯಿ ಕಟ್ಟ ಹೊರಟಿರೋ ಹುಚ್ಚು ಸಾಹಸದ ಹಾದಿಯ ಬಿಟ್ಟು ಬಾ ,ಜೊತೆ ಬರ್ತೀನಿ ನಾನೂ...ಹೌದು ಏನೋ ಕಳಕೊಂಡೆ ಅಂತ ಬೇಸರಿಸ್ತಿದ್ದ ನಂಗೆ ಅವ ಬದುಕ ಪ್ರೀತಿಯ ಹೇಳಿಕೊಟ್ಟ.ಅವ ಊರ ತಲುಪೋಕು ಮುನ್ನ ನನ್ನ ಭಾವಗಳವನ ತಲುಪೀತು..
ನಾನೂ ಬರ್ತಿದೀನಿ ಕಣೋ..ಯಾಕೋ ಮತ್ತೆ ಕಾಲಿಗೆ ಗೆಜ್ಜೆ ಕಟ್ಟೋ ಮನಸ್ಸಾಗಿದೆ.

ತಕ್ಷಣಕ್ಕೊಂದು ರಿಪ್ಲೈ."ಇಲ್ಲಿಯೇ ಕಾಯ್ತಿರ್ತೀನಿ ಕಣೆ.ಇದ್ದುಬಿಡೋಣ ಅಪ್ಪ ಅಮ್ಮಂಗೆ ಮಕ್ಕಳಾಗಿ ಅವರ ಜೊತೆಗೆ ಅವರೂರಲ್ಲಿ.ಜೋಪಾನ ಮಾಡಬೇಕಿದೆ ನಾ ನಿನ್ನ ನನ್ನೆದೆಯಲ್ಲಿ.ನೀ ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯೋದನ್ನ ಕೂತು ನೋಡಬೇಕಿದೆ ನಂಗೆ.ಪುಟ್ಟಾ ,ಬದುಕಂದ್ರೆ ನಿನ್ನೊಟ್ಟಿಗೆ ನಾ ಇರೋದು ಅದ ಬಿಟ್ಟು ನೀ ಕೊಡೋಕಾಗದ ಇನ್ನೂ ಅಸ್ತಿತ್ವ ಇರದ ಮಗುವಲ್ವೇ..ಈಗಾದ್ರೂ ನಿಂಗೆ ಅರ್ಥ ಆಗಿದ್ದು ನನ್ನಿಡೀ ಬದುಕ ಖುಷಿ *some text missing*" ಅವ ಇನ್ನೇನು ಕಳಿಸಿದ್ದ ಅನ್ನೋದ ನೋಡದೆ ಹೊರಟಾಗಿದೆ ಅವ ಇಷ್ಟ ಪಡೋ ಅದೇ ಗೆಳತಿಯಾಗಿ.

ಅಂದ ಹಾಗೆ ನಾ ಭಾವೂಕಳಾ ? ಶುದ್ಧ ಮಟೀರಿಯಲಿಸ್ಟಾ?

ಬದುಕೆಂಬ ಬದುಕಿಗೆ ಪ್ರೀತಿಯಿಂದ.