Wednesday, August 20, 2014

ಬದುಕೆಂಬ ಬದುಕಿಗೆ...                   ಕಣ್ಣು ತೋಯಿಸಿಕೊಳ್ಳೋ ,ದಿಂಬು ಒದ್ದೆಯಾಗಿಸೋ ಈ ರಾತ್ರಿಗಳಲ್ಲಿ ತೀರಾ ಅನ್ನೋವಷ್ಟು ನೆನಪಾಗ್ತೀಯ ನೀ.
ನಿನ್ನ ಮಡಿಲಲ್ಲಿ ಮಲಗಿ ಮನಸು ಹಗುರಾಗೋ ತನಕ  ಅಳಬೇಕನಿಸುತ್ತೆ.ದಕ್ಕಿರೋ ಅದೆಷ್ಟೋ ಅವ್ಯಕ್ತ ಖುಷಿಗಳನ್ನ ಹೇಳಿ ನಗಬೇಕನಿಸುತ್ತೆ.ಎದುರು ಕೂರಿಸಿಕೊಂಡು ಗಂಟೆಗಟ್ಟಲೇ ಮಾತನಾಡಬೇಕನಿಸುತ್ತೆ.ಆದರೆ ಮೊದಲಿನಿಂದಲೂ ಹಾಗೆಯೇ ಅಲ್ವಾ ನೀ ಅಲ್ಲಿ ನಾ ಇಲ್ಲಿ.ಜೊತೆಗೊಂದು ನಿಟ್ಟುಸಿರು.

 ಮಾತು ಗದ್ದಲ ಮಾಡೋವಾಗ ಮೌನವ ಹೇಳಿಕೊಡ್ತೀಯ.
ಇಳಿ ಸಂಜೆಯ ನನ್ನೆಲ್ಲಾ ಮೌನಗಳಿಗೆ ಅಕ್ಷರಶಃ ಮಾತು ಕಲಿಸಿಬಿಡ್ತೀಯ.

ನನ್ನ  ಮತ್ತು ಅವನದ್ದೊಂದು ಸಾದಾ ಸೀದ ಪ್ರಪಂಚವಿದೆ.ಅಲ್ಲಿ ತೀರಾ ಅನ್ನೋವಷ್ಟು ಮುದ್ದಿದೆ.ಪ್ರೀತಿ ಜಾಸ್ತಿಯಾದಾಗ ಗುದ್ದಾಟವಿದೆ.ಆಗಸದ ಕೌತುಕಗಳ ಬಗೆಗಿಷ್ಟು ಆಶ್ಚರ್ಯವಿದೆ.start clusterನಿಂದ ಶುರುವಾಗಿ ಮೊನ್ನೆಯ ’ಯಾನ’ದ ತನಕದ ನಮ್ಮ ಮಾತುಗಳ ಜಗತ್ತಿಗೆ ನಿಂಗೆ ಮಾತ್ರ ಪ್ರವೇಶ.
ಆಟ ಆಡೋಕೆ ಯಾರೂ ಇಲ್ಲ ಅಂತ ಅವ ಬೇಸರಿಸಿದ್ರೆ ಜೊತೆಯಾಗ್ತೀಯ ಆಟಕ್ಕೆ.ಈ ಊಟ ಬೇಡ ಅಂತ ನಾ ಸಿಟ್ಟು ಮಾಡಿದ್ರೆ ನಂಗಾಗಿ ಬೇರೆಯದನ್ನ ಮಾಡಿಕೊಡ್ತೀಯ ಅರೆ ಕ್ಷಣಕ್ಕೆ.ತೋಟದ ಕೆಲಸಕ್ಕೆ ಯಾರೂ ಬಂದಿಲ್ಲ ಅಂತ ಅವರನ್ನೋಕೂ ಮುಂಚೆಯೇ ತೋಟದಲ್ಲಿರ್ತೀಯ.ಮನೆಯವರು ಹುಷಾರಿಲ್ಲದೇ ಮಲಗಿದ್ರೆ ನೀ ಅವತ್ತಿಡೀ ಅವರ ಕೆಲಸಕ್ಕೆ ನಿಲ್ತೀಯ...ಎಲ್ಲರ ಇಷ್ಟ ಕಷ್ಟಗಳೂ ಗೊತ್ತು ನಿಂಗೆ.
ಮನೆಯಲ್ಲೊಂದು ದಿನ ನೀ ಇಲ್ಲದಿದ್ರೆ ಎಲ್ಲವೂ ಖಾಲಿ ಖಾಲಿ ಅನ್ನಿಸಿಬಿಡುತ್ತೆ ನಮ್ಮಗಳಿಗೆ...
ನಿನ್ನೀ ಪ್ರೇಮಮಯೀ ಅಸ್ತಿತ್ವಕ್ಕೆ ನನ್ನದೊಂದು ನಮನ.

ಇಂತಿಪ್ಪ ನೀನು ಬೇಸರಿಸಿದ್ದು ನಾ ನೋಡಿಯೇ ಇಲ್ಲ.ಸುಸ್ತು ಅನ್ನೋ ಪದದ ಅರ್ಥ ಗೊತ್ತಿಲ್ಲದ ತರ ಬೆಳಿಗ್ಗೆಯಿಂದ ರಾತ್ರಿಯ ತನಕ ಎಲ್ಲರನ್ನೂ,ಎಲ್ಲವನ್ನೂ ನಗು ನಗುತ್ತಾ ನಿಭಾಯಿಸೋ ನಿನ್ನೀ ತಾಳ್ಮೆಗೆ ನನ್ನದ್ದೊಂದು ನಮನ.
ನಿನ್ನವರಿಗಾಗಿ ನೀ ಮಾಡೋ ಅದೆಷ್ಟೋ sacrifice ಗಳಿಗೆ ಕಣ್ಣು ತುಂಬ ಬರುತ್ತೆ ನಂಗೆ.
ಪ್ರೀತಿಯೆಂದರೆ ನೀ...
ಭಾವಗಳ ಪ್ರತಿರೂಪ ನೀ..
ಧನ್ಯತೆಯ ಭಾವ ನೀ.
ಮಾತು ಧಾತುವಿನ ಸಮ್ಮಿಲನ ನೀ.

ನಿನ್ನೊಟ್ಟಿಗೆ ಮಾಡಿದ್ದ ಅದೆಷ್ಟೋ ಹಠಗಳಿವೆ.ಈಗಲೂ ಅಪರೂಪಕ್ಕೆ ಮಾಡೋ ಸಿಟ್ಟುಗಳಿವೆ.friends,ride,treck,trip ಅಂತೆಲ್ಲಾ ಸುತ್ತೋವಾಗ ದಿನಕ್ಕೆ ನೂರು ಸಾರಿ ಹುಷಾರು ಅಂತ ನೀ ಎಚ್ಚರಿಸಿದ್ದಿದೆ.
ಗೊಂದಲಗಲನ್ನೆಲ್ಲಾ ಹಾಗೆಯೇ ಹರವಿಟ್ಟು ನಿನ್ನ ನೋಯಿಸಿದ್ದಿದೆ.ತೀರಾ ಅನ್ನೋವಷ್ಟು ತಲೆ ತಿಂದು ಬೈಸಿಕೊಂಡಿದ್ದಿದೆ.ಕೈ ಮುರಿದುಕೊಂಡಾಗ ತಿಂಗಳುಗಟ್ಟಲೇ ನೀನೇ ಊಟ ಮಾಡಿಸಿದ್ದಿದೆ.
ನಾಲ್ಕು ಹೆಜ್ಜೆ ಜಾಸ್ತಿ ನಡೆದ್ರೂ ಬರ್ತಿದ್ದ ಕಾಲು ನೋವಿಗೆ ನೀ ಮಧ್ಯ ರಾತ್ರಿಯ ತನಕ ಎಣ್ಣೆ ಹಚ್ಚಿ ಕಾಲು ತಿಕ್ತಿದ್ದ ನೆನಪಿದೆ.’ಅಬ್ಬೂ’ ಅಂತ ಅಳೋವಾಗ ನೀ ಸಮಾಧಾನಿಸಿ ಮುತ್ತಿಟ್ಟಿದ್ದಿದೆ.

ನೆನಪೆಂದರೇ....ಮಳೆಬಿಲ್ಲ ಛಾಯೆ.

ಭಾವಗಳಿಗೂ ತುಸು ವಿಶ್ರಾಂತಿ ನೋಡು ಅಂದಿದ್ದೆ ನಾ ಅವತ್ತು ನಿಂಗೆ...ಮನಸು ಮರುಭೂಮಿಯಾಗಿಬಿಟ್ಟೀತು ಜೋಪಾನ ಅಂತಂದೆಯಲ್ಲ ನೀ ,ನೋಡು ಮನದಲ್ಲೀಗ ಸೋನೆಯ ಸೂಚನೆ..

ನೀ ಎನ್ನ ಲಾಲಿಸೋ ಅಮ್ಮ...ಒಮ್ಮೊಮ್ಮೆ ಪ್ರೀತಿ ಮಾಡೋಕಂತಾನೆ ಇರೋ ಅಕ್ಕ...ನಗುವ ಹಂಚಿಕೊಳ್ಳೋ ಆತ್ಮೀಯ... ಒಮ್ಮೊಮ್ಮೆ ಅಳುವಲ್ಲೂ ನಗುವ ತರಿಸೋ ಗೆಳತಿ...ಕನಸುಗಳಿಗೆ ನೀರೆರೆದು ಪೋಷಿಸೋ ,ನೆನಪ ಅಲೆಯಲ್ಲಿ ಕನಸುಗಳು ತೇಲೋವಾಗ ಖುಷಿಸೋ ಆತ್ಮಬಂಧು...ಗುಜರಿಯಾದ ಮನದ ಧೂಳ ಕೊಡವಿ ಸ್ವಚ್ಚ ಮಾಡಿ ಅದು ಮತ್ಯಾವತ್ತೂ ಸಂತೆಯಾಗದಂತೆ ಮಾಡಿಬಿಡೋ ಮಾಯಾವಿ.
ಗೆದ್ದಾಗ ಬೆನ್ನು ತಟ್ಟೋ ,ಸೋತಾಗ ಧೈರ್ಯ ತುಂಬಿ ಬದುಕ ಪಾಠಗಳ ತೀರಾ ನಾಜೂಕಾಗಿ ಹೇಳಿಕೊಡೋ ನೀನೆಂದರೆ ನಮ್ಮಿಬ್ಬರ(ನನ್ನ,ತಮ್ಮನ) ಹೆಮ್ಮೆ.

ನಿನ್ನ ಬಗೆಗೆ ಮಾತಾಡೋದು,ನಿನ್ನೊಟ್ಟಿಗೆ ಮಾತಾಡೋಕೆ ಮಾತುಗಳು ತುಂಬಾ ಉಳಿದಿವೆ....
ಎಲ್ಲರ ಹಿತವ ಗಮನಿಸ್ತಾ ನಿನ್ನ ನೀ ನೆನಪು ಮಾಡಿಕೊಳ್ಳೋಕೆ ಸಮಯ ಎಲ್ಲಿರುತ್ತೆ ಹೇಳು...ನಿನಪಿರಲಿಕ್ಕಿಲ್ಲ ನಿಂಗೆ. ಇವತ್ತು ನಿನ್ನ ಜನುಮ ದಿನ.
ಬದುಕ ರೀತಿಯ ಬದುಕಿಗಿಷ್ಟು ಪ್ರೀತಿಯ ಕೊಟ್ಟ ಇಲ್ಲಿಯವರೆಗಿನ ಬದುಕ ಆತ್ಮೀಯರು ಅನ್ನಿಸಿಕೊಂಡವರೆಲ್ಲರೂ ನಿನ್ನ ಜನುಮ ದಿನವ ಬಚ್ಚಿಟ್ಟುಕೊಂಡ ಇದೇ ತಿಂಗಳಲ್ಲಿ ಜನುಮ ದಿನವ ಆಚರಿಸಿಕೊಳ್ತಿದಾರೆ ಅಂದ್ರೆ ನಂಬಲೇ ಬೇಕು ನೀ!
with a hug,
ನೀ ಪ್ರೀತಿಸೋ ನಿನ್ನವರಿಂದ ನಿನಗೊಂದು ಹ್ಯಾಪಿ ಬರ್ತ್ ಡೇ :)
ಪ್ರೀತಿಯಿಂದ.

Saturday, August 9, 2014

ನೀನೆಂದರೆ ನನ್ನೊಳಗೆ...ಸುಮ್ಮನೆ ಕಳೆದು ಹೋಗ್ತಿರೋ ಸೋಮಾರಿ ಸಂಜೆಗಳಿವು.
ತಾರಸಿಯ ಮೇಲೆ ನಿಂತು ಬೀಳೋ ಮಳೆಹನಿಗಳೆಲ್ಲವನ್ನೂ ಜೋಪಾನ ಮಾಡೋ ಹುಚ್ಚು ಈಗೀಗ.ಆ ಹನಿಗಳೋ ಕೈಯಿಂದ ಜಾರೋವಾಗ ನೆನಪಲ್ಲಿ ನಿನ್ನ ಮೂಡಿಸಿ ನೆಲ ತಾಕಿ ನಗುತ್ವೆ.ಅಂದುಕೊಳ್ತೀನಿ ಒಂದು ದಿನವಾದರೂ ನಿನ್ನ ನೆನಪಾಗದೆ ಇರಬೇಕೆಂದು.ನೆನಪಿಗೂ ನಿನ್ನ ಮೇಲೆಯೇ ಮನಸು ಮಹರಾಯ.
ದಿನಕ್ಕಿಂತ ಜಾಸ್ತಿ ಸುರಿತಿರೋ ಈ ಮಳೆ ಇವತ್ಯಾಕೋ ನೀ ಜೊತೆ ಇರಬೇಕಿತ್ತು ಅನ್ನೋ ಭಾವವ ಮೂಡಿಸಿ ಮರೆಯಾಯ್ತು.
ನೆನಪುಗಳಲ್ಲಿ ನೀ ಜೀವಂತ...
                                                                 *    *   *
             ತಿಂಗಳುಗಳೇ ಆಗಿ ಹೋದವು ನಿನ್ನೊಟ್ಟಿಗೆ ಮಾತಿಲ್ಲದೇ.ಪ್ರತಿ ದಿನ ಸುರಿಯೋ ಮಳೆ ನಿನ್ನ ನೆನಪ ಮೂಡಿಸಿ ಮರೆಯಾದ್ರೆ ತಲೆ ಕೊಡವಿ ಎದ್ದುಬಿಡ್ತೀನಿ ನೀ ಮತ್ತೆ ನೆನಪಾಗದಿರಲಿ ಅನ್ನೋ ಕಾರಣಕ್ಕೆ.ಒಂದಿಷ್ಟು ದಿನ ನನ್ನ ಪಾಡಿಗೆ ನನ್ನ ಬಿಟ್ಟುಬಿಡು ಅಂದಿದ್ದೆ. ನಿನಗೋ ಕೆಟ್ಟ ಹಠ.ನಾ ಸಾರಿ ಅನ್ನೋ ತನಕ ನೀ ಮಾತಾಡಲಾರೆ,ನೀ ಮಾತಾಡೋ ತನಕ ನಾ ಸಾರಿ ಅನ್ನಲಾರೆ.ಇರಲಿ ಬಿಡು ಮಾತಿಲ್ಲದ ,ಗದ್ದಲವಿಲ್ಲದ ಈ ಸಂಜೆಗಳೇ ಹಿತವಾಗಿದೆ ನಂಗೆ ಕೊನೆಪಕ್ಷ ಸುಮ್ಮ ಸುಮ್ಮನೆ ಕಾಡಿಸೋರಿಲ್ಲದೇ. ಅಮ್ಮನ ಕಾಳಜಿಯ ಕಂಗಳು,ಬೆಚ್ಚಗಿನ ಅಪ್ಪುಗೆಯಲ್ಲಿ ಈ ಮಲೆನಾಡ ಮಳೆ ತುಂಬಾನೆ ಹಿತವಾಗಿದೆ.ನೀನಿರಬೇಕಿತ್ತು ಈಗಿಲ್ಲಿ.

                 ಕಾಗದದ ದೋಣಿ ಮಾಡಿ ತೋಟದ ಹೊಳೆಯಲ್ಲಿ ತೇಲಿ ಬಿಡೋವಾಗ ಅವ  ಮುಖ ಊದಿಸ್ತಾನೆ ನನಗೆಲ್ಲೋ ಹುಚ್ಚು ಅನ್ನೋ ತರ ನೋಡಿ.ನೀನೂ ಹಾಗೆಯೇ ಅಲ್ವಾ ಚಿಕ್ಕ ಚಿಕ್ಕ ಖುಷಿಗಳನ್ನ ಮುಟ್ಟಿಯೂ ನೋಡದೇ ಹೊರಟುಬಿಡ್ತೀಯ.ಬೇಸರಿಸಿ ಕೂತಾಗ ಏನಾಯ್ತು ಅನ್ನೋದನ್ನೂ ಕೇಳದೇ ನಿನ್ನ ಪಾಡಿಗೆ ಸುಮ್ಮನಾಗಿಬಿಡ್ತೀಯ ನೋಡು ಆಗೆಲ್ಲಾ ಕೂಗಾಡ್ತೀನಿ  ನೀ ನನ್ನ ಭಾವಗಳ ಜೊತೆಗೆ ಮಾತಾಡಲ್ಲ ಅಂತ.ಅದೆಷ್ಟೋ ಜಗಳ,ಸಿಟ್ಟು,ಬೇಸರಗಳ ನಂತರವೂ ಒಂದಿನಿತೂ ಬೇಸರಿಸದೇ ಹಾಗೆಯೇ ಮಾತ ಶುರುವಿಡ್ತೀಯಲ್ಲಾ ನನ್ನೊಳಗಿರೋ ನಂಗೆ ನನ್ನ ಮೇಲೆಯೇ ಮುನಿಸಾಗಿಬಿಡುತ್ತೆ ಆಗೆಲ್ಲಾ.ನೀ ತೋರೋ ಈ ಪ್ರೀತಿಗೆ ಕಣ್ಣಂಚು ಮಾತಾಡುತ್ತೆ ಈಗೀಗ.

 ಮನಸು ಮುನಿಸುಗಳ ನಡುವೆಯೇ  ನನ್ನೊಳಗೆ ನೀ ಬಂದು  ನೀನೇ ನಾನಾಗಿದ್ದು.
ಹೃದಯ ಕಡಲ ಸನಿಹ ಸೆಳೆದಿದ್ದೂ ನೀನೇ.
ನಂಗೀಗ ಈ ಕಡಲ ಮೇಲೆ ಪ್ರೀತಿಯಾಗಿದೆ ನೋಡು.

                ಮುನಿಸಂದ್ರೆ ನೀನು...ಮಾತಂದ್ರೆ ನೀನು. ಒಮ್ಮೆಮ್ಮೆ ಮೌನಕ್ಕೂ ನೀನೇ ಬೇಕಾಗ್ತೀಯ ನೋಡು.ಗದ್ದಲ ಮಾಡೋ ಮೌನಕ್ಕೆ ನೀ ಕೈ ಹಿಡಿದು ಜೊತೆ ಕೂತ್ರೆ ಮಧ್ಯ ರಾತ್ರಿಯ ತನಕ ಸುಮ್ಮನೆ ಕೂತಿದ್ದಿದೆ.ಆ ತಿರುವಲ್ಲಿ ನೀ ನಂಗಾಗಿ ಕಾದಿರುವೆಯೇನೋ ಅನ್ನೋ ಭಾವಕ್ಕೆ ಹೆಜ್ಜೆಗಳು ನನ್ನನ್ನಿಲ್ಲಿಯೇ ನಿಲ್ಲಿಸಿಬಿಟ್ಟಿವೆ ನೋಡು ಬೇಕಾದರೆ ನೀನೇ ಮುಂದೆ ಬಾ ಅನ್ನೋ ಭಾವಕ್ಕೆ!
ಒಪ್ಪಿಕೊಳ್ತೀನಿ ಪಾಪುವಿನ ತರಹ ನೀ ನನ್ನ ನೋಡಿಕೊಳ್ತೀಯ ಅಂತ.ಆದರೂ ಬದಲಾಗಿರೋ ನಿನ್ನ priorityಗಳ ಬಗೆಗಿನ ಬೇಸರ ನನ್ನನ್ನ ನಿನ್ನೆಡೆಗೆ ಮೆತ್ತಗಾಗುವುದನ್ನ ತಡೆದು ಬಿಟ್ಟಿವೆ.
ಆದರೂ ನನ್ನೆಲ್ಲಾ ಮಧುರ ಭಾವಗಳ ಮೊದಲಿಗ ನೀನು.

ಪ್ರೀತಿಯ ನಾವೆಗೆ ನೀ ಎನ್ನ ನಾವಿಗ.


   


                       ಮಳೆ ಹನಿಗಳ ಹಿಡಿದಿದ್ದು ಸಾಕು ,ಈಗಷ್ಟೇ ಜ್ವರ ಬಿಟ್ಟಿದೆ ನಿಂಗೆ,ಕೂರಬೇಡ ಗಾಳಿಯಲ್ಲಿ ಅಂತಂದು ಹೊರಡಿಸಿಬಿಟ್ರು ಅಮ್ಮ ಇಲ್ಲಿಂದ.
ನಿನ್ನ ಜೊತೆಗಿನ ಮಾತುಗಳೂ ಜೊತೆಬರ್ತಿವೆ.ಮಳೆಯೂ ಕಾಯುತಿದೆ ನಿಂಗಾಗಿ. ಮನವೂ ಕಾಯುತಿದೆ ಬೆಚ್ಚಗಾಗೋಕೆ.
 ನೀ ಬಂದ್ರೆ ಅಮ್ಮನೂ ಬಿಡ್ತಾರೆ ಮಳೆಯಲ್ಲಿ ನೆನೆಯೋಕೆ .ಬಂದುಬಿಡೋ ಒಮ್ಮೆ ಮಳೆಯಲ್ಲಿ ಜೊತೆ ನಡೆಯಬೇಕಿದೆ ನಿನ್ನೊಡನೆ ನಾ  ...
                                                            *      *       *

ನಿರುಪಾಯಿಯ ಭಾವ ಸಂಭ್ರಮಕ್ಕೆ ಎರಡು ವರ್ಷಗಳ ಖುಷಿ .ಸಿಕ್ಕಿರೋ ,ಪಡೆದಿರೋ ಈ  ಸ್ನೇಹಗಳಿಗೆ ....
ಪ್ರೀತಿಯಿಂದ ,
ನಿರುಪಾಯಿ .