Wednesday, September 24, 2014

ಗೆಳತೀ ಬೇಡೆನ್ನಬೇಡ ತುಸು ದೂರ ಜೊತೆ ನಡೆಯಬೇಕು.
     
         ಹೌದಲ್ವಾ ಒಂದು ಮುಗ್ಧ ಪ್ರೀತಿಯ ಸದ್ದಿಲ್ಲದೆ ಬಾಡಿಸಿ ಅವಳು ಹೊರಟುಹೋದ ಮೇಲೆ ನಾ ಅವಳೊಟ್ಟಿಗೆ ಮಾತೇ ಆಡಿಲ್ಲ. ಬೆಳಿಗ್ಗೆ ರೂಮ್ ಕ್ಲೀನ್ ಮಾಡೋವಾಗ ಅವ ನಮ್ಮಿಬ್ಬರಿಗೂ ಕೊಡಿಸಿದ್ದ ಒಂದೇ ತರಹದ  ear rings  ಕೈ ತಾಕಿ ಮತ್ತೆ ಅವಳನ್ನೊಮ್ಮೆ ಮಾತನಾಡಿಸಬೇಕು ಅನ್ನೋ ಭಾವವೊಂದ ರವಾನಿಸಿ ಮರೆಯಾಯ್ತು.
ನೆನಪುಗಳು ಉಕ್ಕುಕ್ಕಿ ಹರಿಯೋವಾಗ ಬದುಕು ತೀರಾ ಕಾಡುತ್ತೆನೋ.

         ಅವರಿಬ್ಬರೂ ಹಾಗೆಯೇ.ತೀರಾ ವಿರುದ್ಧ ಭಾವಗಳನ್ನಿಟ್ಟುಕೊಂಡೇ ಪರಿಚಿತರಾದವರು.ಅವಳಿಂದ ಅವನ ಪರಿಚಯವಾದ್ರೆ ಅವನಿಂದ ಅವಳು ಅರ್ಥವಾಗ ತೊಡಗಿದ್ದಳು.ಬೆಟ್ಟದಷ್ಟು ಪ್ರೀತಿ ಮಾಡೋ ಹುಡುಗ.ಆ ಭಾವವ ಮುಟ್ಟಿಯೂ ನೋಡದೇ ತನ್ನ ಪಾಡಿಗೆ ತಾನಿರೋ ಹುಡುಗಿ ಜೊತೆಗೆ ಪ್ರೀತಿಯ ಬಗ್ಗೆ ಅದರ ರೀತಿಯ ಬಗ್ಗೆ ತೀರಾ ಅನ್ನೋವಷ್ಟು ಮಧುರ ಭಾವಗಳನ್ನಿರಿಸಿಕೊಂಡಿರೋ ನಾ.ಅವನಿಗೆ ಬದುಕೇ ಅವಳಾದ್ರೆ ಅವಳ ಬದುಕೊಳಗೆ ಇನ್ಯಾರೋ ಆಮಂತ್ರಿತ ಆ ನಾಲ್ಕು ವರ್ಷದ ಪ್ರೀತಿಯ ಅವಶೇಷವೂ ಇಲ್ಲದ ತರಹ ಮಾಡಿರೋವಾಗ ಮೊದಲೇ ಆ ಭಾವದ ಬಗೆಗಿರೋ ನನ್ನ ಗೊಂದಲಗಳು ಇನ್ನಷ್ಟು ಗೋಜಲು.ನಾ ನಿನ್ನ ಪ್ರೀತಿಸ್ತೀನಿ ಅಂತ ಸುಮ್ಮ ಸುಮ್ಮನೇ ಹೇಳಬಹುದಾ?ಅಲ್ಲದಿದ್ರೆ ಅವಳಿಷ್ಟು ದಿನ ಮಾಡಿದ್ದು ಅದೆ ಅಲ್ಲವಾ.

ಯಾವುದೋ ಜಗಳಕ್ಕೆ ಅವ ಮಾತನಾಡಿಸಿಲ್ಲಿ ಅಂತ ಬಿಕ್ಕಿ ಬಿಕ್ಕಿ ಅತ್ತಿದ್ದ ಗೆಳತಿ ಇವತ್ತವನಿಗೆ ಇನ್ಯಾವತ್ತೂ ನೆನಪಾಗಿಯೂ ನಾ ನಿನ್ನ ನೋಡಲಾರೆ ಅಂತ ಹೇಳೋವಾಗ ದಿನ ದಿನಕ್ಕೂ ಬದಲಾಗೋ ನಮ್ಮದೇ ಭಾವಗಳ ಬಗೆಗೆ ನಂಗಿನಿತು ಆಶ್ಚರ್ಯ.

         ಪ್ರೀತಿ ಎಲ್ಲರನ್ನೂ ಮೃದುವಾಗಿಸಿಬಿಡುತ್ತಂತೆ.ಅದರಲ್ಲೂ  ತನಗಿಂತಲೂ ಜಾಸ್ತಿ ಪ್ರೀತಿಸೋ ಆ ಜೀವದ ಪ್ರೀತಿ ಸಿಕ್ಕಿದ್ದಕ್ಕೆ ಅವಳು ಬೆಣ್ಣೆಯಾಗಬೇಕಿತ್ತಲ್ವಾ.ದಿನ  ಕಳೆದಂತೆ ಒಗಟು ಅನ್ನಿಸ್ತಿದ್ದ ಹುಡುಗಿ ಈಗೀಗ ಒರಟು ಅನ್ನಿಸೋಕೆ ಶುರುವಾಗಿಬಿಟ್ಟಿದ್ದಾಳೆ.ಬದುಕ ಯಾವ ಭಾವುಕತೆಯನ್ನ ಯಾವತ್ತೂ ಅನುಭವಿಸಿದವಳಲ್ಲ ಬದಲು ನಾ ಬದುಕೋ ಬದುಕ ಬಗ್ಗೆ ತೀರಾ ಬೇಸರ ಆಗೋವಷ್ಟು ವ್ಯಂಗ್ಯ ಮಾಡಿ ನಕ್ಕಿದ್ದವಳು.ಬೇಸರವಿಲ್ಲ ಯಾಕಂದ್ರೆ ಅವಳೆನ್ನ ಗೆಳತಿ.

ಬದುಕ ಚಿತ್ರಕ್ಕೊಂದು ಚೌಕಟ್ಟು ಹಾಕಿ ಬದುಕೋದನ್ನ ಕಲಿತ ಮೇಲೆ ಅಥವಾ ನನ್ನನ್ನ ನಾನಾಗಿ ಪ್ರೀತಿಸೋ ಪ್ರೀತಿಯೊಂದನ್ನ ಕಳಕೊಂಡ ಮೇಲೆ ಏನೋ ಅವಳು ಧಿಕ್ಕರಿಸಿ ಎದ್ದು ಬಂದ ಆ ಪ್ರೀತಿಯ ಬಗ್ಗೆ ನಂಗೆ ಮರುಕ ಹುಟ್ಟಿರೋದು..
ನೀ ಕಳೆದುಕೊಂಡಿದ್ದು ಬರಿಯ ನಿನ್ನನ್ನಿಷ್ಟಪಡೋ ಗೆಳೆಯನನ್ನಲ್ಲ ಬದಲು ನಿನ್ನಿಷ್ಟದ ಬದುಕನ್ನ ಅಂತ ಹೇಳಬೇಕಂದುಕೊಳ್ತೀನಿ ಆದರೆ ಮಾತು ಸತ್ತ ಮೇಲಿನ ನೀರವ ಮೌನ ನನ್ನನ್ನ ಸುಮ್ಮನಾಗಿಸಿಬಿಡುತ್ತೆ.
ಎಲ್ಲವನ್ನೂ ಹೇಳಿ ಹಗುರಾಗಲೇಬೇಕಂತ ಫೋನಾಯಿಸ್ತೀನಿ ನನ್ನವನಿಗೆ ಅವ ಅಂತಾನೆ ’ನೀನೆಷ್ಟು ಸೆನ್ಸಿಟಿವ್’!! ಎದೆ ಭಾರವಾಗಿ ಮಾತೆಲ್ಲಾ ಖಾಲಿಯಾದಂತನಿಸಿ ನಾನೂ ಸುಮ್ಮನಾಗ್ತೀನಿ. ಅಸಲು ನನ್ನನ್ನಿಷ್ಟು sensitive ಮಾಡಿದ್ದು ಯಾರೆಂಬುದು ಅವನಿಗೂ ಗೊತ್ತು .ಬಹುಶಃ ನನ್ನ ಗೊಂದಲಗಳು ಅವನನ್ನ ತಾಕದಿರಲಿ ಅನ್ನೋ ಭಾವವಿದ್ದೀತು ನೀನೆಷ್ಟು expressive ಅನ್ನೋ ಮಾತುಗಳ ಹಿಂದಿನ ಭಾವ.

         ಅವನಿವತ್ತೂ ನನ್ನ ಅದೇ ಹಳೆಯ ಗೆಳೆಯ ಆದರೆ ಅವನ ಭಾವಗಳ ಜೊತೆ ತೀರಾ ಅನ್ನೋವಷ್ಟು ಆಟವಾಡಿ ಈಗ ತನಗೇನೂ ಸಂಬಂಧವೇ ಇಲ್ಲ ಅನ್ನೋ ತರಹ ತನ್ನ ರೂಮ್ ಅನ್ನೋ ಪ್ರಪಂಚದ ಆಚೆ ಬರದ ಅವಳ ಬಗ್ಗೆ ನಂಗಷ್ಟು ಬೇಸರ.
ಅವಳ ಕೈ ಹಿಡಿದುಕೊಂಡು ಕೂರೋಕೂ ನೂರು ಬಾರಿ ಯೋಚಿಸೋ ಗೆಳೆಯಂಗೆ ನಾ ಸಿಗಲಿಲ್ಲ ಅನ್ನೋ ಕಾರಣಕ್ಕೆ ,ಆ ಬೇಸರಕ್ಕೆ ನನ್ನ ಈ ಹಾದಿ ತಪ್ಪು ಅಂತ ಹೇಳ್ತೀಯ ಅಂತಲ್ಲಾ ಕಿರುಚಾಡೋ ಗೆಳತಿ.
ಯಾರೂ ಇಲ್ಲ ಅಂತೆಲ್ಲಾ ಬೇಸರಿಸ್ತಿದ್ದ ಅವಳಿಗೆ ಅವಳದೇ ಜಗತ್ತಲ್ಲಿ ಎಲ್ಲವನ್ನೂ ದಕ್ಕಿಸಿಕೊಟ್ಟಿದ್ದು ಅವ ನನ್ನದಿಷ್ಟು ನೋವನ್ನ ಆಸ್ಥೆಯಿಂದ ಕೇಳಿ ಅದೆಷ್ಟೋ ಕಣ್ಣ ಹನಿಗಳು ಜಾರದಂತೆ ತಡೆದಿದ್ದ.ಗೆಳತಿಯಾಗಿ ಅವ ನನ್ನ ಪ್ರೀತಿಸ್ತಾನೆ ಆದರೆ ಅವಳಿಗದು ತಪ್ಪಾಗಿ ಕಾಣುತ್ತೆ.ನಾವಿಬ್ಬರೂ ಒಂದೇ ತರವಲ್ಲ-ನಮ್ಮ ಮೇಲಿನ ಅವನ ಪ್ರೀತಿ ಕೂಡಾ.ವಿಪರ್ಯಾಸವೆಂದರೆ ಇಲ್ಲಿಯ ತನಕವೂ ಬರಿಯ ನಂಬಿಸಿಕೊಂಡು ಬಂದಿದ್ದು,ಮುಖವಾಡದ ಜೊತೆಗೇ ಬದುಕ್ತಿರೋ ಅವಳು ನಮ್ಮಗಳಿಗೆ fake ಅಂತ ಕರಿಯೋದು.

ಬೆಸೆದುಕೊಂಡಿರೋ ಭಾವವಾದರೂ ಎಂತದ್ದು.ಉಳಿಸಿಕೊಳ್ಳಲೇ ಬೇಕಾದಾಗ ಬೇಸರಗಳ ನಡುವೆಯೂ ನಕ್ಕು ಸುಮ್ಮನಾಗ್ತೀನಿ ಅಷ್ಟೇ.
ಮುರಿದುಕೊಳ್ಳ ಬೇಕಂದ್ರೆ ಅವಳಂತೆಯೇ ನನ್ನಲ್ಲೂ ನೂರು ಕಾರಣ.

                ಬದುಕು ಕವಲಾಗಿ ,ಸಂಬಂಧವೊಂದು ಬಣ್ಣ ಬದಲಿಸೋಕೂ ಮುನ್ನ ಅದರಿಂದ ದೂರಾಗಿ ನಾನೇನೋ ನಿರಾಳವಾಗಿದ್ದೀನಿ.ಆದರೆ ಮುಖವಾಡದ ದಾರಿಯಲ್ಲಿ ತನ್ನ ನಿಜ ಮುಖವ ಹುಡುಕ್ತಿರೋ ಗೆಳತಿ,ಅಲ್ಲೆಲ್ಲೋ ರಾತ್ರಿ ಹಗಲುಗಳ ಲೆಕ್ಕ ತಪ್ಪಿ ಕಂಗಾಲಾಗಿ ಕೂತಿರೋ ಗೆಳೆಯ ಇಬ್ಬರಲ್ಲೂ ಏನೋ ತಲ್ಲಣ.

ಇಲ್ಲವಳ ಭಾವ ಪಲ್ಲಟ  .... ಅಲ್ಲವನ ಪ್ರೇಮಮಯೀ ಅಸ್ತಿತ್ವ.

ಅವ ಕೊಡಿಸಿದ ಆ ಕಿವಿಯೋಲೆಯ ಮತ್ತೆ ಹಾಕೋ ಮನಸಾಗಿದೆ ನಂಗೆ.

ಸಂಜೆಯಾಗೋದನ್ನ ಕಾಯ್ತಿದೀನಿ ಅವರಿಬ್ಬರ ಜೊತೆಗೊಂದು ಪುಟ್ಟ ವಾಕ್ ಹೋಗೋಕೆ.