Sunday, February 8, 2015

ಕನಸಿನ ತೇರು ಹೊರಡುವ ಹೊತ್ತಿಗೆ...



              ಸಂಜೆ ಐದರ ಮನಸ್ಸದು.ಗಾಳಿ ರೆಕ್ಕೆ ಕಟ್ಟಿಕೊಂಡು ಆಗಸಕ್ಕೆ ಹಾರೋ, ಕಡಲಂಚಿನ ಕೆಂಪು  ಸೂರ್ಯನನ್ನ ನೋಡ್ತಾ ಇಳಿ ಸಂಜೆಗಿಷ್ಟು ಖುಷಿಯ ಕೊಡೋ,ಮರಳ ಮನೆ ಕಟ್ಟಿ ಕನಸುಗಳನ್ನೆಲ್ಲಾ ಅದರೊಳಕ್ಕೆ ಜೋಪಾನ ಮಾಡ್ತಿದ್ದ ದಿನಗಳವು.ಬೇಸರಗಳನ್ನೆಲ್ಲಾ ಮೂಟೆ ಕಟ್ಟಿ ಯಾರೂ ಇಲ್ಲದ ಏಕಾಂತದಲ್ಲಿ ಒಬ್ಬಳೇ ಅನುಭವಿಸೋ ಖುಷಿ ಸಿಕ್ಕಾಗಿನಿಂದ ಅವನ ಮಾತಿಲ್ಲದ ಸಂಜೆಗಳ್ಯಾಕೋ ಹಿತ ಅನ್ನಿಸೋಕೆ ಶುರುವಾಗಿತ್ತು.
ಆದರವತ್ತು ಯಾವತ್ತೂ ಜೊತೆಬರದ ಅವಳು ಕೈ ಹಿಡಿದು ಜೊತೆ ಬಂದಿದ್ದು ನನ್ನ ಅದೇ ಇಷ್ಟದ ಕೆಂಪು ಕೆಂಪು ಕಡಲ ತೀರಕ್ಕೆ.ಅವಳ ಒಂದೆಳೆಯ ಕಾಡಿಗೆ ಕಂಗಳೊಳಗೆ ಇಣುಕಿದ್ದೆ ಸುಮ್ಮನೆ.ಅಲ್ಲಿರೋ ಭಾವಗಳ್ಯಾಕೋ ಅರೇ ಕ್ಷಣ ಅಲ್ಲಿಯೆ ನಿಲ್ಲಿಸಿಬಿಟ್ಟಿದ್ದವು.ಅವಳೇ ಮಾತು ಶುರುವಿಡಲಿ ಅಂತ ಕುಳಿತಿದ್ದವಳನ್ನ ಕೇಳಿದ್ದಳು ’ನಿನ್ನಲ್ಲೊಂದೂ ಸಂಜೆಯಿರಲಿಲ್ವಾ ನನ್ನೊಟ್ಟಿಗೆ ಕಳೆಯೋಕೆ?’.
 ಸದ್ದಿಲ್ಲದೇ ಗದ್ದಲ ಎಬ್ಬಿಸಿದ್ದ ಅವಳ ಮನದ ಭಾವಗಳ ಅರಿವಿದ್ದಿದ್ದಕ್ಕೋ ಅಥವಾ ಅಲ್ಲವರ ಮಾತುಗಳು ನಂಗೆ ಸಂಬಂಧಿಸಿದ್ದಲ್ಲ ಅಂತ ಮನಕ್ಕೊಂದು ಬೇಲಿ ಹಾಕಿಕೊಂಡು ನನ್ನ ಪಾಡಿಗೆ ನಾನಿದ್ದಕ್ಕೋ ಏನೋ ಅವಳ ಪ್ರಶ್ನೆಗೆ ಉತ್ತರಿಸೋ ಮನಸ್ಸಾಗಿರಲಿಲ್ಲ ನಂಗವತ್ತು.

               ಕನಸ ತೇರು ಹೊರಡುವ ಅದೇ ಹೊತ್ತಲ್ಲೇ ಕೇಳಿದ್ದೆ ನಾನವಳಿಗೆ ನಿಂಗ್ಯಾವ ತರಹದ ಹುಡುಗ ಬೇಕೆ ಅಂತಂದು.ತೀರಾ ಇಷ್ಟಪಡೋ ಹುಡುಗ ಸಿಕ್ಕಿದ್ರೆ ಸಾಕು ಅಂತಂದ ಅವಳ ಕನಸ ರಾಜಕುಮಾರನ ಹೇಳೋವಾಗ ಅಪ್ಪಿ ಮುದ್ದಿಸಿದ್ದೆ ನಾನವಳನ್ನ.ಆದರಿವತ್ತವಳ ಕಂಗಳಲ್ಲಿ ’Im rejected'ಅನ್ನೋ ಅದೆಷ್ಟೋ ಭಾವಗಳು ಅಲುಗಾಡದೇ ಕುಳಿತಿರೋವಾಗ ಮಾತು ಬರದೆ ನಾ ಮೌನಿ.ಸುಮ್ಮನೆ ಅವರೆದುರು ಸೀರೆಯುಟ್ಟು ನಿಲ್ಲೋವಾಗ,ಎಲ್ಲರೂ ನನ್ನನ್ನೇ ನೋಡ್ತಿದಾರೆ ಅನ್ನೋ ಭಾವದೆದುರು ಜಾಸ್ತಿ ಹೊತ್ತು ನಿಲ್ಲೋಕಾಗದೇ ಒಳಗಡೆ ಹೋಗೋವಾಗ,ಇನ್ನೇನು ಅವನೇ ನನ್ನ ಹುಡುಗ ಅಂತ ಅವನ ಬಗೆಗಿಷ್ಟು ಕನಸ ಕಂಡಾದ ಮೇಲೆ ಅವರಿಂದ ಬರೋ ಉತ್ತರ,ಆಮೇಲೆ ಮತ್ತೆ ನಡೆಯೋ ಅದೇ ವಧು ಪರೀಕ್ಷೆಯ ಜೊತೆ ಅದದೇ ಭಾವಗಳು.ಹುಡುಗ ಮಾತ್ರ ಬೇರೆಯಷ್ಟೆ.ಚಿತ್ರಿಸೋಕಾಗದ ಮನೋಹಂತ ಅದು.ಬಟ್ಟೆ ಬದಲಾದಂತೆ ಮನಸ್ಸೂ ಬದಲಾಗಿದ್ದರೆ ಬದುಕೆಷ್ಟು ಚಂದವಿತ್ತಲ್ವಾ.
ಲೆಕ್ಕವಿಲ್ಲದಷ್ಟು ಬಾರಿ ನಂಗೂ ಅನಿಸಿತ್ತು ಇವತ್ತವಳ ಗೊಂದಲಗಳು ನಾಳೆ ನನ್ನವೂ ಕೂಡಾ.

                 ನಂದೆಲ್ಲಾ ನಿರ್ಧಾರಗಳನ್ನೂ ನಂಗೇ ಬಿಟ್ಟು ಬಿಡೋ ಅವರೆಡೆಗೆ ನಂದೂ ತಿರಸ್ಕಾರವಿದೆ.ಆದರೆ ಅದೇ ನಿರ್ಧಾರಗಳು ನನ್ನ ಗಟ್ಟಿ ಮಾಡಿ ಬದುಕಂದ್ರೆ ಹೀಗೆಯೇ ಅಂತೆಲ್ಲಾ ಹೇಳಿಕೊಟ್ಟು ನನಗೆ ಗೊತ್ತಿಲ್ಲದ ಒಂದಿಷ್ಟು ಚಂದದ ಖುಷಿಗಳು ಆಗಾಗ ನನ್ನದೇ ದಾರಿಯಲ್ಲಿ ಭೇಟಿಯಾಗಿದ್ದಿದೆ.ಆದರೂ ನಂಗವಳಂದ್ರೆ ಯಾವುದನ್ನೂ ಪ್ರಶ್ನಿಸದ ,ತನ್ನ ಭಾವಗಳನ್ನೆಲ್ಲಾ ತನ್ನಲ್ಲೆ ಬಚ್ಚಿಟ್ಟುಕೊಳ್ಳೋ ನಂಗೆ ತೀರಾ ವಿರುದ್ಧ ಅಂತನಿಸೋ ವ್ಯಕ್ತಿತ್ವ.




                ಕಾರಣವ ಹೇಳದೇ ತಿರಸ್ಕರಿಸಿಬಿಡೋ ಈ ಹುಡುಗರೆಡೆಗೆ ನಂಗೆ ತೀರಾ ಅನ್ನೋವಷ್ಟು ಬೇಸರ ಅಂತ ಅವಳಂದಾಗ ಕಾರಣವ ಹೇಳಿ ಎದ್ದು ಹೋದ ಅವ ನೆನಪಾಗಿಬಿಡ್ತಾನೆ ನಂಗೆ.ಆದರೂ ಚಂದದ ಖುಷಿಗಳ ತಬ್ಬಿರೋ ಬದುಕ ಒಂದು ಹಂತವ ಹತ್ತಿ  ಯಾರ ಜೊತೆಗೂ ದೊಡ್ಡದೊಂದು ಮಾತೂ ಆಡದಿರೋ ತೀರಾ ಮೃದು ಅನ್ನಿಸೋ ಅವಳನ್ನ ನೋಡೋವಾಗ ನಂಗೂ ಕಾರಣವ ಹೇಳದ ಅವರುಗಳ ಮೇಲೆ ಬೇಸರವಾಗುತ್ತೆ.ಪ್ರತಿ ಬಾರಿಯೂ ಹೊಸ ನಿರೀಕ್ಷೆಗಳ ಜೊತೆ ಅವರೆದುರು ನಿಲ್ಲೋ ಅವಳನ್ನ ನೋಡೋವಾಗ ಸಂಕಟ ಅನ್ನಿಸುತ್ತೆ ಕೂಡಾ.ಹೇಳಬೇಕಂದುಕೊಳ್ತೀನಿ ತಲೆತಗ್ಗಿಸಿ ನಿಲ್ಲೋದನ್ನ ಬಿಟ್ಟು ತಲೆಯೆತ್ತಿ ಮಾತಾಡೋದನ್ನ ಕಲಿತುಬಿಡೆ ನಿನ್ನಿಷ್ಟದ ಬದುಕಾದರೂ ದಕ್ಕೀತು ಅಂತ.ಆದರೆ ನಾ ಮಾತು ಜೋಡಿಸೋಕೂ ಮುಂಚೆಯೆ ಅವಳು ಮತ್ತೆ ಸೀರೆಯುಡೋಕೆ ನಿಂತಿರುತ್ತಾಳೆ!ಮತ್ತದೆ ಅಸಹನೆ ನನ್ನಲ್ಲಿ.
           
             ಮೊದಲಿಂದಲೂ ಹಾಗೆಯೇ-  ನಾ ಯಾವಾಗಲೂ ಗುಡುಗೋ ಗುಡುಗಾದ್ರೆ ಅವಳು ಆಗೀಗ ಸುರಿಯೋ ತುಂತುರು ಮಳೆ.ನಂಗೆ ಭೋರ್ಗರೆಯೋ ಸಮುದ್ರ ಇಷ್ಟವಾಗ್ತಿದ್ರೆ ಅವಳಿಗೆ ಪ್ರಶಾಂತ ನದಿ ಇಷ್ಟ.ಅವಳು ಯಾವಾಗಲೂ ಮನೆಯಲ್ಲೇ ಇರೋ ಅವರ ಪ್ರೀತಿಯಾದ್ರೆ ನಾ ವರ್ಷಕ್ಕೊಮ್ಮೆ ಮನೆಗೆ ಹೋಗೋ ಅತಿಥಿ.ಬದುಕ ನಿರ್ಧಾರಗಳನ್ನೆಲ್ಲಾ ಅವರ ಕೈಗಿತ್ತು ಸುಮ್ಮನಿರೋ ಅವಳೆಡೆಗೆ  ನಂಗಷ್ಟು ಸಿಟ್ಟು ಕೂಡಾ.ಆದರೂ ಯಾಕೋ ಅವಳೆನ್ನ ಭಾವಗಳ ಪ್ರತಿಬಿಂಬ.ಅವಳೆಲ್ಲಾ ತಲ್ಲಣಗಳಿಗೆ ನಾ ಅಕ್ಷರವಾಗಿಬಿಟ್ರೆ ನನ್ನೆಲ್ಲಾ  ಬೇಸರಗಳಿಗೆ ಅವಳು ಕಿವಿಯಾಗಿಬಿಡ್ತಾಳೆ.ಅವಳ ಕನಸುಗಳನ್ನೆಲ್ಲಾ ನಾ ಮನೆಯಲ್ಲಿ ಜಗಳ ಮಾಡಿಯಾದ್ರೂ ಅವಳ ಕೈಗಿತ್ತು ಹೋಗ್ತೀನಿ ಆದ್ರೆ ಮತ್ತೆ ಮನೆಗೆ ಬರೋವಾಗ ಅವಳ ಕೈ ಅವರ ನಿರ್ಧಾರಗಳ ಜೊತೆ ಬೆರೆತು ಹೋಗಿರುತ್ತೆ.ನೀ ಬಿಡು ಖುಷಿಯಾಗಿದ್ದೀಯ ಬೇಸರಗಳೆಲ್ಲಾ ನಂದು ಮಾತ್ರ ಅಂತನ್ನೋ ಅವಳೆಡೆಗೆ ನನ್ನದು ನಂಗೂ ಅರ್ಥವಾಗದ ನೋಟ.
ಆದರೂ ನಾನವಳ ಭಾವಲೋಕದ ಪ್ರಶ್ನೆಗಳಿಗೆ ತೀರಾ ಪ್ರಾಕ್ಟಿಕಲ್ ಉತ್ತರ ಕೊಟ್ಟುಬಿಡ್ತೀನೇನೋ ಅನ್ನೋ ಭಯ ಶುರುವಾಗಿದೆ.ಅವಳ ಗೊಂದಲಗಳು ನನ್ನ ಸೋಕದಿರಲಿ ಅನ್ನೋ ಕಾರಣಕ್ಕೋ ಏನೋ ನಾನವಳ ಜೊತೆ ಮಾತಾಡದೇ ಇದ್ದಿದ್ದು .ಆದರವತ್ತು ನನ್ನಿಷ್ಟದ ಕಡಲ ಅಂಚಲ್ಲಿ ಅವಳು ಕೇಳಿದ್ದ ಪ್ರಶ್ನೆಯಿದೆಯಲ್ಲ ನನ್ನೆಡೆಗೆ ತೀರಾ ಅನ್ನೋವಷ್ಟು ಬೇಸರದ ಭಾವವೊಂದನ್ನ ಅಚ್ಚೊತ್ತಿ ಮರೆಯಾಗಿಬಿಡ್ತು.
ನನ್ನಲ್ಲೂ ಒಂದು ಸಂಜೆಯಿತ್ತಾ ಅವಳ ಜೊತೆ ಕಳೆಯೋಕೆ?

ಆದರೂ ಯಾಕೋ ಕನಸಿನ ತೇರು ಹೊರಡುವ ಹೊತ್ತಿಗೆ ಕೆನ್ನೆಯ ಮೇಲೆ ಕಣ್ಣೀರು.