Thursday, April 30, 2015

ಸಂಘರ್ಷಿಣಿ ...


             ಭೋರ್ಗರೆವ ಸಮುದ್ರ ಅದು.ಅದಕ್ಕೂ ಪುರುಷತ್ವದ ಹಮ್ಮು.ನಾನೋ ಅಲ್ಲೇ ಎಲ್ಲೋ ಕೂತು  ರಾತ್ರಿಯಿಡೀ ನಕ್ಷತ್ರ ಎಣಿಸಿದ್ದಿದೆ. ಕನಸುಗಳನ್ನ ಎಣಿಸೋಕಾಗದೇ ಹಾಗೆಯೇ ರಾಶಿ ಹಾಕಿದ್ದಿದೆ.ಕಡಲಂದ್ರೆ 'ಸ್ಪಟಿಕ' ನೆನಪಾಗ್ತಾಳೆ... ಹೀಗಾಗಿಯೇ ಏನೋ ಕಡಲ ಜೊತೆಗಿನ ನಂಟು,ನೆನಪು,ಪ್ರೀತಿ ಎಲ್ಲವೂ ದೊಡ್ಡದಿದೆ.

             ಅದೆಷ್ಟು ನಿರ್ಬಂಧಿತ ಬದುಕು ಅವಳದ್ದು.ವಾರದ ಕೊನೆಯಲ್ಲಿ ನನ್ನ ಜೊತೆ ಒಂದರ್ಧ ಗಂಟೆ ಮಾತಿಗೆ ಕೂತರೆ ಇಡೀ ವಾರದ ಮಾತು ಮುಗಿಯಬೇಕು. ಆಮೇಲೊಂದು ನಿಮಿಷವೂ ಅಲ್ಲಿರದೆ ಮನೆಯ ಕಡೆ ಹೊರಡಬೇಕಿತ್ತು.ಬದುಕ ಬಗೆಗೆ ಕಾತರ ನಿರೀಕ್ಷೆಗಳೇನೂ ಇಲ್ಲದೆ ಎಲ್ಲವನ್ನೂ ಒಪ್ಪೋ  ಎಲ್ಲದನ್ನೂ ಅಪ್ಪೋ ಅವಳಂದ್ರೆ ಮುಗಿಯದ ಕುತೂಹಲ. ತಿಂಗಳಿಗೆ ಆ ಮೂರು ದಿನ ಹೊರಗಡೆ ಕೂರಲೇಬೇಕಿದ್ದ ಅವಳ ಮನೆಯ ಆ ರೀತಿಗಳ ವಿರುದ್ದ ಅದೆಷ್ಟು ಬಾರಿ ಮಾತಾಡಿದ್ದೆ ನಾ. ಅವಳೋ ಎಲ್ಲವನ್ನೂ ಪ್ರೀತಿಯಿಂದಲೇ ಸಹಿಸಿಕೊಳ್ಳೋ, ಜಾಸ್ತಿ ಅನಿಸೋವಷ್ಟು ಒಳ್ಳೆಯತನವಿರೋ ಹುಡುಗಿ. 
         
          ಸಣ್ಣ ಸಣ್ಣದಕ್ಕೂ ಮನೆಯವರ ಅನುಮತಿ ಕೇಳೋ ಅವಳಿಗೆ ಯಾವುದಕ್ಕೂ ಏನೂ ಕೇಳದ ಹೇಗ್ ಹೇಗೋ ಬದುಕೋ ನಾ ಗಂಟು ಬಿದ್ದಿದ್ದೆ  ಒಮ್ಮೆಯಾದರೂ ನನ್ನೂರಿಗೆ ಬಾ ಅಂತ.ಮನೆಯಲ್ಲೊಮ್ಮೆ ಕೇಳಿ ಆಮೇಲೆ ಹೇಳ್ತೀನಿ ಅಂದಿದ್ದವಳು ಇವತ್ತಿಗೂ ಏನೂ ಹೇಳದೆ ಸುಮ್ಮನಿದ್ದಾಳೆ.  ಅವಳ ಜೊತೆಯಲ್ಲಿ ನಮ್ಮನೆಯ ಮಹಡಿಯ ಮೇಲೆ ಕೂತು ಮತ್ತೆ ಹುಚ್ಚುಚ್ಚು ಕನಸು ಕಟ್ಟೋ,ಹೆಚ್ಚೆಚ್ಚು ನಕ್ಷತ್ರ ಎಣಿಸೋ ಆಸೆ ಇನ್ನೂ ಹಾಗೆಯೇ ಉಳಿದಿದೆ. 
  
            'ಎದೆಗೊರಗಿ ಕೂತರೆ ಆಹ್! ಅನಿಸಬೇಕು. ಅಂತಹ ಹುಡುಗ ಬೇಕು ಕಣೆ ಬದುಕಿಗೆ' ಅಂತೆಲ್ಲ ಹೇಳಿ ನಂಗೂ ಅಂತಹುದ್ದೆ ಹುಡುಗ ಬೇಕು ಅನ್ನಿಸೋವಷ್ಟು ಹುಚ್ಚು ಹಿಡಿಸಿದ್ದವಳು ಅವಳು. ಅವತ್ತೇ ಹೇಳಿದ್ದೆ ಅವಳಿಗೆ  ನಿನಗೇನಾದರೂ ಆ ಹುಡುಗ ಸಿಕ್ಕರೆ ಖಂಡಿತ ಹಾರಿಸಿಕೊಂಡು ಹೋಗ್ತೀನಿ ನೋಡು ಅಂತ. ನಕ್ಕು 'ನಂಗೆ  ರಾಧೆ ಕೂಡಾ ಇಷ್ಟವೇ ಕಣೆ ಗೆಳತಿ, ನನ್ನೀ ರುಕ್ಮಿಣಿಗಾಗಿ ನಾ ರಾಧೆಯಾಗೋಕೆ ರೆಡಿ' ಅಂತ ಕೆನ್ನೆ ತಟ್ಟಿ ಹಣೆಗೊಂದು ಹೂಮುತ್ತನ್ನಿತ್ತವಳನ್ನ ನೋಡಿ ಕಣ್ಣಂಚು ಒದ್ದೆಯಾಗಿತ್ತು ಅವತ್ತು. ನಾನಂದ್ರೆ ಅವಳಿಗೆ ರಾಧೆಯಷ್ಟೇ ಪ್ರೀತಿ. ಆಮೇಲೆಲ್ಲಾ ಅವಳಿಗೆ ಯಯಾತಿ, ದೇವಯಾನಿ, ರಾಧೆ  ಇಷ್ಟವಾದ್ರೆ ನಂಗೆ ಹಿಮವಂತ, ಶರ್ಮಿಷ್ಠೆಯ ಪಾತ್ರಗಳು ತುಂಬಾ ಇಷ್ಟವಾಗ್ತಿದ್ವು.  ಅವಳಿಷ್ಟ ಪಡೋ ಹುಡುಗ ಸಿಕ್ಕಿದ್ದ ಕೂಡಾ. ಬದುಕಿಗೆ ಅವ  ಸಿಕ್ಕ ಮೇಲೆ ಬದುಕೆಷ್ಟು ಚಂದವಲ್ವೇನೆ ಅಂತ ಕೇಳಿದ್ದವಳ ತೋಳು ತಬ್ಬಿ ಬಿಕ್ಕಿದ್ದವಳು ಅವಳು. ಮತ್ತೆ ಮನೆಯವರ ಅನುಮತಿಗೆ ಕಾದು, ಬದುಕಾಗಿ ಪ್ರೀತಿಸಿದವನನ್ನು ತೊರೆಯೋವಾಗಿನ  ಅವಳ ತಳಮಳಗಳು, ಬೇಸರಗಳು ಅರ್ಥವಾಗ್ತಿದ್ರೂ ಏನೂ ಹೇಳೋಕೆ ತೋಚದ ಸಂದಿಗ್ಧ. ಹೇಳಿದಂತೆಯೇ ರಾಧೆಯ ಆ ಕೃಷ್ಣನನ್ನು ಬಿಟ್ಟುಕೊಟ್ಟಿದ್ಲು ನಂಗಾಗಿ. 

             ನಾ ಅವನ ಬದುಕಿಗೆ ಬರೋಕೂ ಮುಂಚೆಯೂ ಅವಳಿದ್ಲು. ನಾ ಬಂದ ಮೇಲೆಯೂ ಅವಳೇ ಕನವರಿಕೆಯ ಬದುಕಾಗಿಬಿಟ್ಟಿದ್ದಾಳೆ. ಈಗಲೂ ಅವನ ರಾಯಲ್ ಎನ್ಫಿಲ್ದ್ ನ ಹಿಂದಿನ ಸೀಟ್ ಅಲ್ಲಿ ಕೂರೋವಾಗ ಆ ಜಾಗ ಅವಳದ್ದೇನೋ ಅಂತನಿಸುತ್ತೆ.ನಂಗೇ ಪ್ರೀತಿಯಾಗೋ ನನ್ನ ಉದ್ದ ಕೂದಲು ಈಗೀಗ ಅವನಿಗೆ ಅವಳ ನೆನಪಿಸೋ ಇನ್ನೊಂದು  ಭಾವ ಅಷ್ಟೇ ಏನೋ ಅನಿಸಿಬಿಡುತ್ತೆ.  ಮರಳ ದಂಡೆಯ ಮೇಲೆ ಕಟ್ಟೋ ಆ ಗುಬ್ಬಚ್ಚಿ ಗೂಡು,ಜೊತೆ ಹಾಕೋ ಪ್ರತಿ ಹೆಜ್ಜೆಯಲ್ಲೂ ಅವಳ ಸುಳಿವು. ಅವ ಅಂದ್ರೆ ಹೂಕಂಪನದ ಬದಲು ಒಂದು ಅತೀ ಆತ್ಮೀಯ ಭಾವ ನನ್ನನ್ನ ಬಂಧಿಸುತ್ತೆ  . ಅವ 'ನೀ ನನ್ನ ಆತ್ಮೀಯ ಗೆಳತಿ'ಅಂದಾಗ ಮನ ಸಂಭ್ರಮಿಸೋ ಕಡಲಾಗುತ್ತೆ. 

         ಬರೀ ಪ್ರೀತಿಸಿಕೊಂಡು ಮಾತ್ರ ಗೊತ್ತಿರೋ ಹುಡುಗಿಗೆ ಪೂರ್ತಿಯಾಗಿ ಯಾರನ್ನೂ ಪ್ರೀತಿಸಿ ಗೊತ್ತಿಲ್ಲ. ಅವ ಕೂಡಾ ನನ್ನನ್ನ ಇಡಿಯಾಗಿ ಪ್ರೀತಿಸಲಾರನೇನೋ. ಆದರೆ ನಂಗೋ ಅವಳು ನನ್ನ ಪ್ರೀತಿಸಿದಂತೆಯೇ ನನ್ನನ್ನ ನಾನಾಗಿ ಪ್ರೀತಿಸೋ ಹುಡುಗ ಬೇಕು. ಬದಲಾಗ್ತಿರೋ ನನ್ನದೇ ಭಾವಗಳ  ಮಧ್ಯೆ ಅವನ ರುಕ್ಮಿಣಿಯಾಗೋದು  ಅಂತ  ಅವಳಿಗೆ ಹೇಳಬೇಕೆಂದುಕೊಂಡಿದ್ದೀನಿ. ಅತ್ತ ಅವಳು ದೇವಯಾನಿ ಆಗ್ತಿದ್ರೆ ಇತ್ತ ಶರ್ಮಿಷ್ಠೆ ನನ್ನನ್ನಾವರಿಸಿಕೊಳ್ತಿದಾಳೆ. ಇಬ್ಬರ ಮಧ್ಯ ಯಯಾತಿ ಎಲ್ಲಿ ಕಳೆದು ಹೋದ ಅನ್ನೋದನ್ನ ಹುಡುಕಬೇಕಿದೆ. 

ಯಾಕೋ ಈಗೀಗ ಈ ರಾಧೆಯನ್ನ ಇನ್ನಿಲ್ಲದಂತೆ ಪ್ರೀತಿಸಬೇಕನ್ನಿಸ್ತಿದೆ . 
               

Friday, April 10, 2015

ದಕ್ಕೋ ನೆನಪುಗಳ ಜಾಗಕ್ಕೆ...


         ಒಮ್ಮೊಮ್ಮೆ ಕೊನೆಯೇ ಇಲ್ಲದಂತೆ ಹರಡಿರೋ ಚುಕ್ಕೆಗಳ ವಿಸ್ತಾರ. ಇನ್ನೊಮ್ಮೆ ಉದ್ದಕೂ ಹಗಲು. ಕೆಳಗೆ ಮೇಲೆ ಬದಿಯಲ್ಲಿ ಎಲ್ಲೆಲ್ಲೂ ಆಕಾಶ. ಇತ್ತೀಚಿಗೆ ಮತ್ತೆ ಮೊದಲಿನಿಂದ ಬದುಕಬೇಕನಿಸ್ತಿದೆ ನಂಗೆ. ಯಾರನ್ನೂ ಕೇಳದೇ  ಬರಿಯ ನಾ ಮಾತ್ರ ಅತೀ ಅನ್ನಿಸೋ ನನ್ನದೇ ಭಾವಗಳ ಜೊತೆ ಅರೆಕ್ಷಣ ಕಳೆದುಹೊಗಬೇಕನಿಸ್ತಿದೆ. 

ಅದಕ್ಕೇ ಏನೋ ತೀರಾ ಇಷ್ಟ ಪಡೋ ಅದೆಷ್ಟೋ ನೆನಪುಗಳ ಇರಿಸಿಕೊಂಡಿರೋ ಅದೇ ಜಾಗ ಮತ್ತೆ ಮತ್ತೆ ಕಾಡ್ತಿದೆ. 

        ಅವನೊಬ್ಬನಿದ್ದಾನೆ. ಬದುಕಲ್ಲಿ ಯಾವ ಭಾವೂಕತೆಗಳಿಗೂ ಜಾಗ ಕೊಡದೆ ತನ್ನೊಳಗೆ ಯಾರನ್ನೂ ಬಿಟ್ಟುಕೊಳ್ಳದೇ ತನ್ನ ಪಾಡಿಗೆ ತಾನಿರೋ ಅರ್ಥವೇ ಆಗದ ಹುಡುಗ.ಆದರೂ ಅವ ಅಂದ್ರೆ ಬದುಕ ಮೊದಲ ಪ್ರೀತಿ.

ಅವಳು - ಈಗಲೂ ಆಕಾಶದಲ್ಲೊಂದು ವಿಮಾನ ಹಾರಿದ್ರೆ ಬೆರಗುಗಣ್ಣಿನಿಂದ ಟಾಟಾ ಮಾಡೋವಷ್ಟು ಮುಗ್ಧತೆಯ ಉಳಿಸಿಕೊಂಡಿರೋ ಜೀವದ ಗೆಳತಿ.ಜೊತೆಗೆ ಅವಳಷ್ಟು ಭಾವುಕಳಲ್ಲದ,ಅವನಷ್ಟು ಪ್ರಾಕ್ಟಿಕಲ್ ಅಲ್ಲದ ಆದರೂ ಅವರಿಬ್ಬರೂ ಯಾವಾಗಲೂ ಜೊತೆಯಿರಬೇಕನ್ನೋ ನಾ.ಬೇಸರಗಳೆಲ್ಲಾ ಮರೆತುಹೋಗೋವಷ್ಟು ಪ್ರೀತಿ ಅವರಂದ್ರೆ .  

   ಮೊದ ಮೊದಲ ಆ ದಿನಗಳಲ್ಲಿ  ಮೂವರೂ ಸಂಜೆಯ ಕೆಂಪು ಕೆಂಪು ಸೂರ್ಯನ ನೋಡ್ತಾ ಅದೆಷ್ಟೋ ಕನಸುಗಳಿಗೆ ಬಣ್ಣ ತುಂಬಿದ್ದು ಇದೇ ಜಾಗದಲ್ಲೇ ಅಲ್ವಾ.ಲೆಕ್ಕ ತಪ್ಪೋವಷ್ಟು ಚಂದ ಚಂದದ ಅದೇ ಕನಸುಗಳನ್ನ ಜತನದಿಂದ ಎತ್ತಿಟ್ಟಿದ್ದೆ. ಯಾಕೋ ಮತ್ತೆ ಅವುಗಳ ಜೊತೆ ಮನಸ ಬಿಚ್ಚಿ ಮಾತನಾಡಬೇಕನಿಸ್ತಿದೆ ಅಂತಂದಿದ್ದಕ್ಕೆ  ಅವ  ನಕ್ಕು "ಅದ್ಯಾವುದೋ ಹಳೆ ಕನಸುಗಳಂತೆ,ಮಾತಂತೆ,ನೀನುಂಟು ಅವಳುಂಟು ಅವಳ ಪಕ್ಕ ಕೂತಿದ್ರೆ ನಿಂಗೆ ನನ್ನ ನೆನಪಾದ್ರೂ ಎಲ್ಲಿರುತ್ತೆ ಹೇಳು.. ಇರು ನಿನ್ನ ಎರಡನೇ ಪ್ರೀತಿಗೆ ನಾನೇ ಫೋನ್ ಮಾಡ್ತೀನಿ ಅದೆಷ್ಟು ಗಂಟೆ ಬೇಕಿದ್ರೂ ಕನಸು ಕಾಣಿ "  ಅಂತ ಆಡಿಕೊಂಡು ಎದ್ದು ಹೋಗಿಬಿಟ್ಟ.

            ಅವ ಯಾವಾಗಲೂ ಹಾಗೆಯೇ ಅಲ್ವಾ ,ನನ್ನ ಅವಳ ಕನಸ  ಪ್ರಪಂಚದೊಳಕ್ಕೆ ಅವ ಯಾವತ್ತೂ ಬರಲೇ ಇಲ್ಲ. ನಾವೇ ಬಲವಂತದಿಂದ ಜೊತೆ ಕೂರಿಸಿಕೊಳ್ತಿದ್ವಿ .  ಸ್ನೇಹಕ್ಕೆ ಜೊತೆಯಿದ್ದ ಬದುಕಿಗೆ ಜೊತೆಯಾಗ್ತೀಯ ಅಂತ ಕೇಳಿದಕ್ಕೆ ಹಮ್ ಅನ್ನೋ ಅನಿವಾರ್ಯವೇನೂ  ಇರಲಿಲ್ಲ ಆದರೂ ಕೇಳದೇ ಕೆನ್ನೆ ಹಿಂಡೋವಷ್ಟು ಸಲುಗೆ ಪಡೆದಿದ್ದ ಅವನಲ್ಲಿ ಕಳೆದು ಹೋಗಿದ್ದೆ. ಅವನ ಜೋಡಿ ಹೆಜ್ಜೆಗುರುತುಗಳಲ್ಲಿ ನಾ ಕಳೆದು ಹೋಗಿ ತುಂಬಾ ಕಾಲವೇ ಆಯ್ತು. ಆಮೇಲೆಲ್ಲಾ ಮೂವರೂ ಅವರವರ ಬದುಕ ಜೊತೆ ಬ್ಯುಸಿ ಆಗಿ ಅಗತ್ಯ ಅನಿವಾರ್ಯಗಳೆಲ್ಲಾ ಬದಲಾಗಿ ಯಾಕೋ ನಮ್ಮಗಳ ಆ ಸಂಜೆಯ ಜಾಗಕ್ಕೆ ಹೋಗೋಕೆ ಆಗಿರಲಿಲ್ಲ.  

         ಒಮ್ಮೊಮ್ಮೆ ಗೆಲುವು ಕೊಡೋ    energy ದೊಡ್ದದೆನಿಸಿದ್ರೆ ಅದೆಷ್ಟೋ ಬಾರಿ ಅದೇ ಗೆಲುವು ನಮ್ಮಿಬ್ಬರ ಮಧ್ಯ ದೊಡ್ಡದೊಂದು ಅಂತರ ಮೂಡಿಸಿ ಆ ಕಡೆ ಖುಷಿ  ಪಡೋಕೂ ಆಗದ ಪೂರ್ತಿಯಾಗಿ ಅಭಿವ್ಯಕ್ತ ಪಡಿಸೋಕೂ ಆಗದ ಅವ್ಯಕ್ತ ನಿಟ್ಟುಸಿರೊಂದನ್ನ ನನ್ನೊಳಗೇ ಇರಿಸಿಬಿಟ್ಟಿದೆ . ಬದುಕಿಗೊಂದು purpose ಸಿಗುತ್ತಿದೆ ಅನಿಸೋವಾಗಲೇ ಮನಸ್ಯಾಕೋ ಗಾಬರಿಯಾದಂತೆನಿಸಿಬಿಡುತ್ತೆ . ಅರೇ ಕ್ಷಣ ಎಲ್ಲವೂ  ಸ್ಥಬ್ದ .  

            ನೀ ತುಂಬಾ ಬದಲಾಗಿದ್ದಿ ಅಂತ ಅವನಂದಾಗ ನನ್ನದೂ ಅದೇ ಪ್ರತಿದ್ವನಿ.ಹತ್ತಿರ ಇರ್ತೀನಿ ಅಂದಾಗ ಸೇರಿಸಿಕೊಳ್ಳದೇ ದೂರ ಹೋಗ್ತೀನಿ ಅಂದಾಗ ಅದಕ್ಕೂ ಬಿಟ್ಟು ಕೊಡದೇ ಅದೊಂದು ಅಂತರವ ಇವತ್ತಿಗೂ ಕಾಯ್ದು ಕೊಂಡಿರೋ ಅವ ಈಗೀಗ ಒಗಟು. 

ಆಗೆಲ್ಲಾ ದಿನಕ್ಕೆ ನಾಲ್ಕು ಬಾರಿ ಮಾತಾಡ್ತಿದ್ದ ಅವಳು ಈಗೀಗ ವಾರಕ್ಕೊಮ್ಮೆಯೂ ಸಿಗದೇ ಕಾಯಿಸೋವಾಗ ಒಳಗೆಲ್ಲಾ ಖಾಲಿ ಖಾಲಿ . ಇಷ್ಟಕ್ಕೂ ಜೊತೆಯಿರೋ ಭಾವವಾದರೂ ಎಂತದ್ದು.ಬದುಕ ಜೊತೆ ಕಳೆದು ಹೋಗಿರೋ ಅವರ ಮೇಲೆ ಸುಮ್ಮ ಸುಮ್ಮನೇ ರೇಗಿ ನಾನೇನೋ ನಿರಾಳ ಆದರೆ  ಪ್ರೀತಿಯನ್ನೆಲ್ಲಾ ನಂಗೆ ಮಾತ್ರ ಕೊಟ್ಟು ಆಮೇಲೂ ನನ್ನೆಡೆಗೆ ಕಾಳಜಿಯಿಲ್ಲ ಅಂತ ಬೈಸಿಕೊಳ್ಳೋ ಅವರಿಬ್ಬರೂ ಪಾಪ ಅನ್ನಿಸಿಬಿಡ್ತಾರೆ . ಜೊತೆಗೆ ನಾನಲ್ಲದ ನಾ ಕೂಡಾ.

ನನ್ನರಿವಿಗೂ ಬರೋವಷ್ಟು ಮಾತು ಕಡಿಮೆ ಮಾಡಿರೋ ನಂಗೆ ವಯಸ್ಸಿಗೆ ಮೀರಿದ ಗಾಂಭೀರ್ಯ ನಿಂದು  ಅಂತ ಅವಳು ಹೇಳೋವಾಗ ಕಡಲಲ್ಲೂ ಉಳಿಯಲಾಗದ ದಡದಲ್ಲೂ ನಿಲ್ಲಲಾಗದ ತಳಮಳ ಈಗೀಗ .ಆದರೆ  ನಗು ಮರೆತು ಹೋದ ಮೇಲೂ ಅಷ್ಟೇ ಚಂದದಿ ನಗೋ ಅವರಿಬ್ಬರ ಪ್ರೀತಿಯಿದೆ ಅನ್ನೋ ಸಮಾಧಾನ . 

ಕಾಡೋ ನೋವುಗಳನ್ನ ಕೂಡಾ ಇನ್ನಿಲ್ಲದಂತೆ ಪ್ರೀತಿಸೋದನ್ನ ಕಲಿತಿದ್ದೀನಿ. 

     ಆ ತಿರುವಲ್ಲಿ ಅವಳು ನಗುತ್ತಾ ಬರ್ತಿದ್ದಾಳೆ. ಇನ್ನೇನು ಹತ್ತಿರ ಬಂದುಬಿಡ್ತಾಳೆ. ಬರೋಕೂ ಮುಂಚೆ ಬೇಸರಗಳನ್ನೆಲ್ಲಾ ಮೂಟೆಕಟ್ಟಿ ಯಾರೂ ಇಲ್ಲದಿರೋ ಏಕಾಂತದಲ್ಲಿ ಜೋಪಾನ ಮಾಡಬೇಕಿದೆ. ಯಾಕಂದ್ರೆ ನನ್ನ ಬೇಸರಗಳ ಸಣ್ಣ  ಸುಳಿವು ಸಿಕ್ಕರೂ ಇವತ್ತಿನ ಈ ಸಂಜೆಯ ಅವಳ ನಗುವಿಗೆ ರಜ.. 

ಅವ ಮತ್ತೆ ಫೋನಾಯಿಸೋಕೂ ಮುಂಚೆ ಕನಸ ವಾಸ್ತವದೊಳಕ್ಕೆ ಅವಳೊಟ್ಟಿಗೆ ಒಂದಿಷ್ಟು ಹೊತ್ತ ಕಳೆಯಬೇಕಿದೆ... 

ನಾ ನಾನಾಗಿ ಅದೇ ನೆನಪ ಜಾಗದಲ್ಲಿ .