Saturday, July 11, 2015

ಮತ್ತೆ ಕಾಡಿದೆ ಕಂದನ ಕನವರಿಕೆ ...



ಆಗಲೇ ಎರಡು ವರುಷಗಳಾದವು !! ಕಾಲೇಜಿನ ಯಾವುದೋ ಪ್ರೋಗ್ರಾಮ್ ಗೆ ಸೀರೆಯುಟ್ಟು ಹೋಗಬೇಕಿದ್ದ ಅನಿವಾರ್ಯ ಒಂದುಕಡೆ ಆದ್ರೆ ಅದ ಉಡೋಕೂ ಬರದ ನಂಗೆ ತೀರಾ materialistic ಅನ್ನಿಸೋ ಈ ಜನಗಳ ಕೇಳೋ ಮನಸ್ಸಿರಲಿಲ್ಲ. ಗೊತ್ತಾಗದೆ ಸುಮ್ಮನೆ ಕೂತಿದ್ದವಳಿಗೆ ಅದೇ ಬೀದಿಯ ಕೊನೆಯ ಮನೆಯಲ್ಲಿರೋ ಅವಳ ನೆನಪಾಗಿತ್ತು.

ಖುಷಿಯಿಂದಲೇ ಸೀರೆ ಉಡಿಸಿ "ದೃಷ್ಟಿಯಾಗುತ್ತಲ್ಲೇ ನಂದೇನೆ,ಅಲ್ಯಾವ ಹುಡುಗ ಪ್ರೀತಿಯಲ್ಲಿ ಬೀಳ್ತಾನೋ ಗೊತ್ತಿಲ್ಲ ನೋಡು " ಅಂತ ಕಣ್ಣು ಮಿಟುಕಿಸಿ ಹಣೆಗೆ ಮುತ್ತಿಟ್ಟಿದ್ದ ಅವಳು ಆಗಲೇ ನನ್ನಲ್ಲೇನೋ ಭಾವವ ಕಟ್ಟಿಕೊಟ್ಟು ಬಿಟ್ಟಿದ್ದಳು.

ಬದುಕ ಅನಿವಾರ್ಯತೆಗಳಿಗೆ ಸಾವಿರ ಮೈಲಿ ಆಚೆಯ ಊರಿಂದ ಈ ಊರಿಗೆ ಬಂದಿರೋ ಗೆಳತಿ ಅವಳು. ಜೊತೆಗೆ ಬದುಕ ಪ್ರೀತಿಗಳನ್ನೆಲ್ಲ ಅವಳಿಗೆ ಮಾತ್ರ ಕೊಡೊ ಅವ. ಇಬ್ಬರದ್ದೂ ಒಂದು ಪುಟ್ಟ ಚಂದದ ಮನೆ.ಕನ್ನಡ ಅರ್ಥವೇ ಆಗದ ಅವಳಿಗೆ ಹಿಂದಿ ಮಾತನಾಡೋಕೆ ಬರದ ನಾ ಹೇಗೆ ಗೆಳತಿಯಾದ್ನೋ ಗೊತ್ತಿಲ್ಲ.ಈಗಂತೂ ಗಂಟೆಗಟ್ಟಲೆ ಮಾತಾಡೋ ಅವಳು ಅಕ್ಕ ಅನಿಸಿಬಿಟ್ಟಿದ್ದಾಳೆ.

ಇಂತಿದ್ದ ಅವಳು ಅದೊಂದು ದಿನ ತುಂಬಾ ಖುಷಿಯಿಂದ ಒಡಲಲ್ಲಿ ಹೊಸದೊಂದು ಜೀವ ಬೆಳಿತಿರೋ ಮಾತು ಹೇಳಿದ್ದಾಗ ಅಕ್ಷರಶಃ ಕುಣಿದಿದ್ದೆ ನಾ.ಆಗಲೇ ಅಮ್ಮನ ಕಳೆ ಮುಖದಲ್ಲಿ ನೋಡು ಅಂದಿದ್ದವಳಿಗೆ ಇನ್ನಾರು ತಿಂಗಳು ಅಂತ ಹೇಳಿದ್ದವಳು ಅವಳು. ಆ ಆರು ತಿಂಗಳಲ್ಲಿ ಅವಳಷ್ಟೇ ಕನಸು ಕಟ್ಟಿದ್ದೆ ನಾನೂ. ಅವಳು ಪಾಪುವಿಗೆ ಸ್ನಾನ ಮಾಡಿಸೋವಾಗ ಪಕ್ಕ ನಿಂತು ನೋಡಬೇಕು, ಆಗಷ್ಟೇ ನಿದ್ದೆಯಿಂದೆದ್ದ ಆ ಪುಟ್ಟ ಕಂದನ ಎತ್ತುಕೊಂಡು ಆಡಿಸಬೇಕು,ಅದರ ಅಳು,ನಗು ಎಲ್ಲವನ್ನೂ ನೋಡಬೇಕು,ಚಂದ ಚಂದದ ಅಂಗಿ ಹಾಕಿ ಖುಷಿಸಬೇಕು,ನಿದ್ದೆಯಲ್ಲಿ ಬೆಚ್ಚಿ ಮರು ಕ್ಷಣಕ್ಕೆ ಅದೇ ನಿದ್ದೆಯಲ್ಲಿ ನಗೋ ಪಾಪುವ ಪಕ್ಕ ಇಡೀ ದಿನ ಕೂರಬೇಕು, ಅವಳು ಅವನು ಅನ್ನೋ ಅನನುಭವಿ ಅಪ್ಪ ಅಮ್ಮ ಆ ಕಂದಂಗೆ ಎಣ್ಣೆ ಹಚ್ಚುವಾಗ ಅವರಿಬ್ಬರಿಗೂ ಆಡಿಕೊಂಡು ನಗಬೇಕು ಹೀಗೆ ಏನೇನೋ ಭಾವಗಳು ನನ್ನೊಳಗೂ ಹರಿದಾಡಿದ್ವು.

ಅದೆಷ್ಟೋ ದಿನ ಅವಳಿಗೆ ಕಾಡಿದ್ದಿದೆ ಪಾಪು ಎಲ್ಲಿ ಓಡಾಡ್ತಿದೆ ತೋರಿಸು ಅಂತೆಲ್ಲ. ಅವಳೋ ಹೊಟ್ಟೆಯ ಮೇಲೆ ನನ್ನ ಕೈ ಇರಿಸಿ ಇದು ಪಾಪುವಿನ ತಲೆ ನೋಡು ಅಂತೆಲ್ಲ ಹೇಳಿ ನಂಗೂ ಆ ಪುಟ್ಟ ಓಡಾಟದ ಫೀಲ್ ಮೂಡಿಸಿದ್ದಿದೆ. ವಾಹ್ ಅದೆಷ್ಟು ಚಂದವಲ್ವೇನೆ ಈ ಪುಟ್ಟ ಓಡಾಟದ ಅನುಭವ ಅಂದಿದ್ದವಳ ತಬ್ಬಿ 'ಅಮ್ಮ' ಆಗೋ ಖುಷಿ ಅದೇ ಕಣೆ ಪುಟ್ಟಿ ಅಂದಿದ್ದವಳು ಅವಳು.

ದಿನಗಳ ಲೆಕ್ಕ ಹಾಕಿ ಕೂತಿದ್ದವಳಿಗೆ ಇನ್ನೊಂದು ತಿಂಗಳಲ್ಲಿ ಹೊಸ ಅತಿಥಿಯ ಆಗಮ ಆಗುತ್ತಲ್ಲೇ ಅಂದಿದ್ದೆ ನಾ. ಅಮ್ಮ ನೆನಪಾಗ್ತಿದಾರೆ ಅಂತ ಅತ್ತು ಮರು ಕ್ಷಣಕ್ಕೆ ನಂಗೊಬ್ಬ princess ಬೇಕು ಕಣೆ ನಾನಂತೂ ನನ್ನಮ್ಮನ ತರಹ ಮನೆಯಿಂದ ಅವಳನ್ನ ದೂರ ಮಾಡಲಾರೆ ಅಂತೆಲ್ಲ ಹೇಳಿ ಮತ್ತೆ ಕನಸಿಗೆ ಜಾರಿದ್ದಳು.ದಿನ ಕಳೆದಂತೆಲ್ಲ ಅವಳ ಗೊಂದಲ,ಗಾಬರಿಗಳೆಲ್ಲಾ ಅರ್ಥ ಆಗ್ತಿದ್ರೂ ಏನೂ ಹೇಳೋಕೆ ತೋಚದ ಸ್ಥಿತಿ ನಂದು.

ಅದೊಂದು ಸಂಜೆ ಗಾಬರಿಯಿಂದ ಫೋನಾಯಿಸಿದ್ದ ಅವನ ಮಾತು ಮುಗಿಯೋಕೂ ಮುಂಚೆಯೇ ಕಣ್ಣ ಹನಿ ಕೆನ್ನೆಯಿಂದ ಜಾರಿತ್ತು.ಬದುಕ ಬೇಸರಗಳನ್ನೆಲ್ಲಾ ತನ್ನೊಳಗೆ ಇರಿಸಿಕೊಂಡವಳಿಗೆ "ಬದುಕೇ ಯಾಕಿಷ್ಟು ಬೇಸರಗಳ ಬಿಟ್ಟು ಹೋದೆ?" ಅಂತ ಮತ್ತೆ ಮತ್ತೆ ಕೇಳಿಕೊಳ್ಳೋ ತರಹ ಮಾಡಿತ್ತು. ಎಂಟು ತಿಂಗಳಲ್ಲಿ ಎಣಿಸೋಕಾಗದಷ್ಟು ಕನಸ ನೇಯ್ದಿದ್ದವಳಿಗೆ ಇನ್ಯಾವತ್ತೂ ಸದ್ದು ಮಾಡದ ಅವಳ ಕಂದಮ್ಮ ಶಾಶ್ವತ ಕನಸಾಗಿಬಿಟ್ಟಿದ್ದಳು.ನನ್ನೊಳಗೂ ಒಂದಿಷ್ಟು ಬೇಸರ,ಅವನಲ್ಲೂ ಒಂದಿಷ್ಟು ಕನವರಿಕೆ...

ಬದುಕ ಅನಿವಾರ್ಯತೆಗಳ ಜೊತೆ ಜೊತೆಗೆ ಎಲ್ಲವನ್ನೂ ಮರೆತು ಮತ್ತೆ ವಾಸ್ತವಕ್ಕೆ ಬಂದಿದ್ದವಳ ಜೊತೆಗಿನ ಬಂಧ ಮತ್ತೂ ಜಾಸ್ತಿಯಾಗಿತ್ತು. ಅವಳಿಗೂ ಮಲೆನಾಡ ಹುಚ್ಚು ಹಿಡಿಸಿದ್ದ ನಾ ಅವನ ,ಅವಳ ಪ್ರಪಂಚದೊಳಗೆ ಯಾವತ್ತೋ ಸೇರಿಹೋಗಿದ್ದೆ.

ಈಗೆಲ್ಲ ಅವಳಂದ್ರೆ ನೆನಪ ಕಂಪು...
ಒಂದಿಷ್ಟು ದಿನದಿಂದ ನನ್ನದೇ ಭಾವಗಳ ಜೊತೆ ಕಳೆದು ಹೋಗಿದ್ದವಳಿಗೆ ಇವತ್ಯಾಕೋ ಅವಳ ನೆನಪಾಗ್ತಿದೆ. ಜೊತೆಗೆ ಇನ್ನೂ ಅಸ್ತಿತ್ವ ಇರದ ಅವಳ ಕಂದಮ್ಮ ಕೂಡಾ. ಮತ್ತೆ ಅವಳು ಸುರಿಸುವ ಸ್ನೇಹ,ಪ್ರೀತಿಯ ಮಳೆಯಲ್ಲಿ ಸುಮ್ಮನೆ ನೆನೆಯಬೇಕನ್ನಿಸ್ತಿದೆ...