Wednesday, December 11, 2013

"ಲ್ಯಾರಿ ಅಜ್ಜ" ಅನ್ನೋ ನೆನಪು...



        ಬೆಳಿಗ್ಗೆ ಬೆಳಿಗ್ಗೆ ಅಮ್ಮ ’ಲ್ಯಾರಿ ಅಜ್ಜ ಕೊಟ್ಟ ಆ ಟೆಲಿಸ್ಕೋಪ್ ನಾ ಗುಜರಿಯವನಿಗೆ ಕೊಡ್ಲಾ ’ ಅಂತ ಕೇಳಿದಾಗ ರೇಗಿ ಫೋನಿಟ್ಟ ಮೇಲೆ ಈ ಲ್ಯಾರಿ ಅಜ್ಜ ಯಾಕೋ ತುಂಬಾ ನೆನಪಾದ್ರು ..
ಹೌದಲ್ವಾ ತಿಂಗಳೆರಡಾಯ್ತು ಇವರಿಂದ ನಂಗೆ ಮೇಲ್ ಬಂದು ಅಂತ ಯೋಚಿಸ್ತಾನೆ ಮತ್ತೆ ಮೇಲ್ ಚೆಕ್ ಮಾಡಬಂದೆ .ಇರಲಿಲ್ಲ ಅವರಿಂದ್ಯಾವುದೇ ಮೇಲ್.ಅಣುಕಿಸುತ್ತಿದ್ದವು ಅಲ್ಲೊಂದಿಷ್ಟು ಗೂಗಲ್ ಪ್ಲಸ್,ಲಿಂಕರ್ ಮೇಲ್ ಗಳು ನನ್ನ.
ಅವರ ಜೊತೆಗಿನ ಹಳೆ ಮೇಲ್ ಗಳನ್ನ ಓದ್ತಾ ಜಾರಿದ್ದೆ ಅದೇ ದಿನಗಳಿಗೆ...

ಆ ಲ್ಯಾರಿ ಅಜ್ಜಾ-

  ನನಗಿನ್ನೂ ಐದರ ವಯಸ್ಸು ಆಗ.ಏನೋ ರಿಸರ್ಚ್ ಗೆ (ಯಾವುದದು ಅನ್ನೋ ತಿಳಿಯೋ ವಯಸ್ಸಾಗಿರಲಿಲ್ಲ ನಂಗೆ) ಅದ್ಯಾವುದೋ  ದೂರದ ದೇಶದಿಂದ  ನನ್ನೂರಿಗೆ ಬಂದಿದ್ದ ಬಿಳಿಯ ಕೂದಲಿನ ಅಷ್ಟೇ ಬಿಳಿಯ ಮುಖದ ಅಜ್ಜ ಅವರು.
ಸರಿ ಸುಮಾರು ನನ್ನಜ್ಜನ ವಯಸ್ಸಿನವರು.ನಾಲ್ಕು ತಿಂಗಳು ನಮ್ಮನೆಯಲ್ಲೇ ಉಳಿದುಕೊಂಡು ಬೆಳಿಗ್ಗೆಯಿಂದ ಸಂಜೆಯ ತನಕ ಕಾಡು ಅಲೀತಾ ರಾತ್ರಿ ಪೂರ್ತಿ ಮೆತ್ತು(ಅಟ್ಟ) ಹತ್ತಿ ಅದೇನೇನೋ ಬರೀತಾ ಕೂರೋ ಈ ಅಜ್ಜ ಅಂದ್ರೆ ಒಂದಿಷ್ಟು ಕುತೂಹಲ.
’ಲ್ಯಾರಿ’ಅನ್ನೋ ಅವರ ಹೆಸರನ್ನೂ ಹೇಳೋಕೆ ಬರದ ನಾ ಅವರ ಬೆನ್ನು ಹಿಂದೆ ಬಿದ್ದ ಬೇತಾಳದ ತರಹ ಅವರ ಜೊತೆಯೆ ಅಲೆಯುತ್ತಿದ್ದೆ.ಅಪ್ಪ ,ಅಮ್ಮ,ಕೊನೆಗೆ ನನ್ನಜ್ಜ ಗದರಿದರೂ ಕೇಳದೆ ಅವರ ಜೊತೆ ನಾನೂ ಕಾಡು  ಅಲೆಯೋಕೆ ಹೋಗ್ತಿದ್ದೆ ಆಗ.(ಯಾಕಂದ್ರೆ ಶಾಲೆ ನೋಡಿದ್ದೆ ಆರು ವರ್ಷಕ್ಕೆ.ಮನೆಯಲ್ಲಿ ಮಾಡೋ ಕಿಲಾಡಿಗಳಿಗೆ ರೇಗುತ್ತಿದ್ದ ಎಲ್ಲರಿಗಿಂತ ಈ ತಾತನಲ್ಲೇನೋ ವಿಶೇಷತೆ ಇದೆ ಅನ್ನಿಸಿಬಿಡ್ತಿತ್ತು.ಅಥವಾ ಅವರು ಕೊಡೋ ಬಣ್ಣ ಬಣ್ಣ ಚಾಕಲೇಟುಗಳಿಗಾಗಿಯೋ ಗೊತ್ತಿಲ್ಲ ನಂಗಿನ್ನೂ).
ಅವರೂ ಅಷ್ಟೇ ಹೆಗಲ ಮೇಲೆ ಕೂರಿಸಿಕೊಂಡು ಕಾಡಲ್ಲಿ ಕಾಲು ಕಾಲಿಗೂ ಸಿಗೋ ಎಲ್ಲದರ ವೈವಿಧ್ಯತೆಗಳ ಅವರದೇ ಮಾತುಗಳಲ್ಲಿ ಹೇಳ್ತಾ ಹೋಗ್ತಿದ್ರು.
ಗದರದೇ ನಾ ಕೇಳೋ ಎಲ್ಲಾ ಪ್ರಶ್ನೆಗಳಿಗೂ ಪ್ರೀತಿಯಿಂದ ಉತ್ತರಿಸೋ ಈ ಅಜ್ಜ ಕೊನೆಗೂ ನಂಗೆ ಪ್ರೀತಿಯ ಲ್ಯಾರಿ ಅಜ್ಜ ಆಗಿದ್ರು!
 
ಅವರ ಹಾಸಿಗೆಯಿಂದ ಹಿಡಿದು ಎಲ್ಲದರಲ್ಲೂ ಏನೋ ಹೊಸದು ನೋಡೋ ಖುಷಿ ನಮ್ಮಗಳಿಗೆ.ಟೆಲಿಸ್ಕೋಪ್ ಹಿಡಿದು  ಕಾಡಿನಿಂದ ಹಿಡಿದು ತಂದ ಚಿಕ್ಕ ಚಿಕ್ಕ ಹುಳಗಳನ್ನ ಇಂಚಿಂಚೂ ಬಿಡದೇ  ಅವರು ನೋಡ್ತಿದ್ರೆ ಆಮೇಲೆ ನಂಗೂ ನೋಡೋ ಧಾವಂತ .ಏನೋ ದೊಡ್ಡದಾಗಿ ಅರ್ಥವಾಗೋ ತರಹ ನೋಡ್ತಿದ್ದೆ ನಾನೂನೂ!ಅಪ್ಪ ಅಮ್ಮ ಎಷ್ಟೇ ಗದರಿದ್ರೂ ನಾ ಲ್ಯಾರಿ ಅಜ್ಜನ ಬಿಟ್ಟು ಎದ್ದು ಹೋಗ್ತಿರಲಿಲ್ಲ .ಅವರೂ ನನ್ನ ಬಿಟ್ಟುಕೊಡ್ತಿರಲಿಲ್ಲ.
ಎಲ್ಲವನ್ನೂ ಬೆರಗುಗಣ್ಣಿನಿಂದಲೇ ನೋಡೋ ಈ ಪೋರಿ ಅದೆಷ್ಟು ಪ್ರಶ್ನೆ ಕೇಳ್ತಾಳೆ ಅಂತ ಪ್ರೀತಿಯಿಂದ ನನ್ನ ಅಜ್ಜನಲ್ಲಿ ಆಪಾದನೆ ಮಾಡೋ ಲ್ಯಾರಿ ಅಜ್ಜ ನನಗೊಂದು ಕೌತುಕ ಪ್ರಪಂಚ ಆಗ.
ನಾಲ್ಕು ತಿಂಗಳು ಜೊತೆಯಿದ್ದ ಅಜ್ಜ ಹೊರಟಾಗ ತೀರಾ ಅನ್ನೋ ಅಷ್ಟು ಅತ್ತಿದ್ದೆನಂತೆ ನಾ(ಅತ್ತಿದ್ದನ್ನ ಯಾವಾಗ್ಲೂ ಮರೆತುಬಿಡ್ತೀನಿ). ಅವರೂ ಕಣ್ಣಲ್ಲಿ ನೀರಿಟ್ಟುಕೊಂಡೆ ಹೋಗಿದ್ರಂತೆ ಮತ್ತೆ ಬರ್ತೀನಿ ಪುಟ್ಟಿ ಆ ನಿನ್ನ ಶಕ್ತಿಮಾನ್ ನೋಡೋಕೆ ಅಂತಂದು.ಆಗ ನ್ಯಾಷನಲ್ ನಲ್ಲಿ ಬರುತ್ತಿದ್ದ ಶಕ್ತಿಮಾನ್ ಬೇಕಂತ ನಾ ಹಟ ಮಾಡಿದ್ರೆ ಮನೆಯವರೆಲ್ಲ ಸಿಕ್ತಾನೆ ಅವ ನಿನ್ನ ಗಂಡನಾಗಿ ಅಂತ ಸಮಾಧಾನ ಮಾಡ್ತಿದ್ರಂತೆ!(ಈಗಲೂ ನಗ್ತಾರೆ ಎಲ್ರೂ ಶಕ್ತಿಮಾನ್ ಬಗೆಗೆಗಿನ ನನ್ನ ಹಟಕ್ಕೆ).
ಹೊರಟಿದ್ರೂ ಕೊನೆಗೂ ಇಡೀ ಮನೆ ಮಂದಿಗೆ ಕೃತಜ್ನತೆಯ ಕೈ ಮುಗಿದು  ತನ್ನೂರ ಕಡೆಗೆ!

ಹೀಗೇ ಹೊರಟ ಲ್ಯಾರಿ ಅಜ್ಜ ಮತ್ತೆ ನನ್ನೂರಿಗೆ ಬಂದಿದ್ದು ಕಳೆದ ವರುಷ ಭಾರತಕ್ಕೆ ಬಂದಾಗ.ಅಕ್ಷರಶಃ ಮರೆತೇ ಹೋಗಿದ್ದ ಇವರನ್ನ ಮತ್ತೆ ಮನೆಯಲ್ಲಿ ನೋಡ್ತೀವಿ ಅನ್ನೋ ಕನಸು ಕೂಡಾ ಕಂಡಿರಲಿಲ್ಲ ನಾವು.ನೋಡಿದ ತಕ್ಷಣವೇ ನನ್ನೊಟ್ಟಿಗೆ ಕಾಡು ಅಲೆಯೋಕೆ ಬರ್ತಿದ್ದ ಪುಟ್ಟಿ ಇವಳೇನಾ ಗುರುತು ಸಿಗೋಕಾಗದಷ್ಟು ಬೆಳೆದು ನಿಂತಿದ್ದಾಳೆ ಅಂತ ಆಶ್ಚರ್ಯದಿಂದ ಕೇಳೋವಾಗ ಏನೋ ಖುಷಿ ನಂಗೆ. ನಂಗಂತಾ ಮತ್ತೆ ತಂದಿರೋ ಚಾಕಲೇಟ್ ಜೊತೆಗೆ ಒಂದು ಪುಟ್ಟ ಕವರ್ ತೆರೆದು ನೋಡಿದ್ರೆ ಒಂದಿಷ್ಟು ಚಂದದ ಶಕ್ತಿಮಾನ್ ಚಿತ್ರಗಳು!! ನಾ ಮರೆತ ಶಕ್ತಿಮಾನ್ ನಾ ಈ ತಾತ ನೆನಪಿಟ್ಟುಕೊಂಡಿದ್ದ ನೋಡಿ ನಂಗೂ ಆಶ್ಚರ್ಯವಾಗದಿರಲಿಲ್ಲ!.
ಜೊತೆಗೆ ಅವತ್ತು ಅಲೆದಾಡಿದ್ದ ಅದೇ ಕಾಡ ಒಳಹೊಕ್ಕರೆ ಅದೊಂದು ಬಯಲ ತರ ಅನ್ನಿಸಿಬಿಡ್ತು ಪುಟ್ಟಿ ..ಬಾ ಮತ್ತೆ ಒಂದು ಸಲ ಆ ಕಾಲು ಹಾದಿಯಲ್ಲಿ ಹೋಗಿ ಬರೋಣ ಆದರೆ ಅವತ್ತಿನ ತರಹ ನಿನ್ನ ಕೂಸುಮರಿ ಮಾಡೋಕೆ ನಂಗಾಗಲ್ಲ ಇವತ್ತು ಅಂತ ಮುಖ ಬಾಡಿಸಿದ್ದ ಅಜ್ಜಂಗೆ ನಾನಂದಿದ್ದೆ ಇದಾನಲ್ಲ ಶಕ್ತಿಮಾನ್ ಅಂತ ಕಣ್ಣು ಮಿಟುಕಿಸಿ. ಒಂದೀಡಿ ದಿನದ ಮಾತುಕತೆಗಳು ಮುಗಿದಾದ ಮೇಲೆ ನಾವಿಬ್ರೂ ಆ ರಾತ್ರಿಯ ಅದೇ ಮೆತ್ತಿನ ಅವರ ರೂಮಲ್ಲಿ ಕೂತು ಏನೇನೋ ಮಾತಾಡಿದ್ವಿ(ಆ ರೂಮಿಗೆ ಈಗಲೂ ಲ್ಯಾರಿ ಅಜ್ಜನ ರೂಮು ಅಂತೀವಿ ನಾವು)ಹೋದ ವರ್ಷವೇ ತಿಳಿದಿದ್ದು ಅವರು ಮಂಗನ ಖಾಯಿಲೆಗೆ ಏನೋ ಔಷದಿ ಹುಡುಕೋಕೆ ಬಂದಿದ್ದಂತ.ಬಿಡದೇ ಕೇಳಿದ್ದೆ ಎರಡು ಗಂಟೆ ಪ್ರಶ್ನೆಯ ಮೇಲೆ ಪ್ರಶ್ನೆಗಳ.ಎಲ್ಲಕ್ಕೂ ಉತ್ತರಿಸಿ ಅವರ ಮನೆ,ಮಗನ ಬಗೆಗೆ ಮಾತು ತಿರುಗಿಸಿದ್ದ ತಾತನ ಕಂಗಳಲ್ಲಿ ಏನೋ ಅಳಲು,ನೋವ ಭಾವ ಸ್ಪಷ್ಟವಾಗಿ ಕಂಡಿತ್ತು ನಂಗೆ.
ಆಮೇಲೆ ತಲೆ ಸವರಿ ಹೊರಡ್ತೀನಿ ಪುಟ್ಟಿ ನಾಳೆ ನಾ ಈ ಬಾರಿ ಕಣ್ಣೀರ ಜೊತೆ ಬೀಳ್ಕೊಡೋ ಹಾಗಿಲ್ಲ ನೀ ಅಂದಾಗ ಒತ್ತಾಯ ಮಾಡಿದ್ದೆ ಮತ್ತೆ ಯಾವಾಗ ಬರ್ತೀರ ಅಂತ ಹೇಳಲೇಬೇಕಂತ.
ಕಣ್ಣು ಮಿಟುಕಿಸಿ ನಿನ್ನ ಶಕ್ತಿಮಾನ್ ಜೊತೆ ಮಾತಾಡೋಕೆ ಬರ್ತೀನಿ ಮತ್ತೆ ಅಂದಿದ್ರು.

ಆಮೇಲೆ ಅವರಿಂದ ಪಡೆದುಕೊಂಡ ಮೇಲ್ ಐಡಿ ಹಿಡಿದು ನಾ ಅವರನ್ನ ಮತ್ತೆ ಮಾತಾಡಿಸಿದ್ದೆ.ಒಂದು ವರ್ಷದಲ್ಲಿ ನಾನವರಿಗೆ ಮಾಡಿದ್ದು ನಾಲ್ಕು ಮೇಲ್! ಅವರು ನಂಗೆ ಮಾಡಿದ್ದು ಹನ್ನೆರಡು ಮೇಲ್!!

Dear Putti  ಅಂತ ಮಾತು ಶುರುವಿಡೋ ತಾತ ಕೂತು ಆ ದಿನಗಳ ಬಗೆಗೆ,ಅವರ ರಿಸರ್ಚ್ ಬಗೆಗೆ,ಅಲ್ಲಿಯ ಸಂಭಂದ,ಮನೆ,ಮನಸ್ಸುಗಳ ಭಾವಗಳೇ ಇಲ್ಲದ ಮನುಶ್ಯ ಬಂಧಗಳ ಬಗೆಗೆ ಅವರು ಒಂದೊಂದು ತೀರಾ ಭಾವೂಕ ಮೇಲ್ ಮಾಡ್ತಿದ್ದಾಗ ಉತ್ತರಿಸೋಕಾಗದೇ ನಾ ಮೌನಿ.
ಈ ಪುಟ್ಟಿಯ ತರಹದ್ದೇ ಮೊಮ್ಮಗಳು ನಂಗೂ ಬೇಕಿತ್ತು ಅಂತಿದ್ದ ಮೇಲ್ ಒಂದಕ್ಕೆ ನಾನಂದಿದ್ದೆ-ಬಂದುಬಿಡಿ ಭಾರತಕ್ಕೆ ನಿಮ್ಮೊಟ್ಟಿಗೆ ಇದ್ದುಬಿಡ್ತೀನಿ ಮೊಮ್ಮಗಳಾಗಿ ಅಂತ.ಈ ಮಾತ ಕೇಳಿ ಇನ್ನೊಂದಿಷ್ಟು ವರುಷ ಜಾಸ್ತಿ ಬದುಕಿಯೇನು ಪುಟ್ಟಿ ಅಂತ ತಕ್ಷಣಕ್ಕೊಂದು ರಿಪ್ಲೈ ಬಂದಿತ್ತು.

ನಿನ್ನೂರಲ್ಲಿ ಸಿಕ್ಕ ಆ ಆತ್ಮೀಯತೆಗೆ,ಚಂದದ ಗೆಳೆಯನಾದ ನಿನ್ನಜ್ಜಂಗೆ,ನನ್ನದೇ ಮಕ್ಕಳಾಗಿ ಹೋದ ನಿನ್ನಪ್ಪ ದೊಡ್ಡಪ್ಪಂಗೆ,ಮುದ್ದು ಮೊಮ್ಮಗಳಾಗಿ ದಿನ ಪೂರ್ತಿ ಮಾತಾಡ್ತಿದ್ದ ನಿಂಗೆ ಕೃತಜ್ನತೆ ಹೇಳೋದ ಬಿಟ್ಟು ಇನ್ನೇನೂ ಗೊತ್ತಿಲ್ಲ ಪುಟ್ಟಿ.ಬಹುಶಃ ಭಾರತದಲ್ಲಿ ಮಾತ್ರ ಈ ಪ್ರೀತಿ ದಕ್ಕುತ್ತೇನೋ ಅಂದಾಗ ಹೆಮ್ಮೆ ಅನಿಸಿತ್ತು ನಂಗೆ.ಯಾವಾಗ್ಲೂ ಪುಟ್ಟಿ ಅಂತ ಪ್ರೀತಿಸೋ ,ಹೆಗಲ ಮೇಲೆ ಕೂರಿಸಿಕೊಂಡು ಹೊರಡೋ ಈ ತಾತ ಅದ್ಯಾಕೇ ಭಾರತಕ್ಕೆ ಬಂದ್ರೋ ಗೊತ್ತಿಲ್ಲ .ನನ್ನ ಕೇಳಿದ್ರೆ ನಂಗಿನ್ನೊಬ್ಬ ತಾತನ ಕೊಟ್ಟು ಹೋಗೋಕೆ ಬಂದ್ರೇನೋ ಅಂತೀನಿ...ಅಪ್ಪನೂ ಅದನ್ನೆ ಅಂತಾರೆ "ಎಲ್ಲೋ ಆರು ತಿಂಗಳಿಗೊಮ್ಮೆ ಫೋನ್ ಮಾಡೋ ಲ್ಯಾರಿ ಅಜ್ಜಂಗೆ ಪುಟ್ಟಿ ಬಿಟ್ರೆ ಬೇರೆ ಯಾರೂ ನೆನಪಿಗೆ ಬರಲ್ಲ ಮಾತಾಡೋ ಅರ್ಧಗಂಟೆಯಲ್ಲಿ ಇಪ್ಪತ್ತು ನಿಮಿಷ ಪುಟ್ಟಿ ಇರ್ತಾಳೆ ಆಮೇಲೆ ಹತ್ತು ನಿಮಿಷ ಅವಳಜ್ಜ ಇರ್ತಾರೆ .ಒಟ್ಟಿನಲ್ಲಿ ಲ್ಯಾರಿ ಅಜ್ಜನ ಭಾರತದ ಪ್ರಪಂಚದಲ್ಲಿರೋದು ಇವರಿಬ್ಬರೇ ಏನೋ" ಅಂತ.ಮಾತಿಗೆ ಶುರುವಿಟ್ರೆ ಎಲ್ಲರನ್ನೂಮೋಡಿ ಮಾಡೋ ತೀರಾ ಚಂದದ ಇವರ ಮಾತುಗಳ ಕೇಳೋಕೆ ಆ ದಿನಗಳನ್ನೇ ಕಾಯ್ತಿರ್ತೀನಿ ನಾನು.

ನಿನ್ನೊಟ್ಟಿಗೆ ಇಲ್ಲಿಂದ ಮಾತಾಡೋವಾಗ ನಂಗೇನೋ ಖುಷಿ.ಬಹುಶಃ ಕೆಲಸವಿಲ್ಲದೇ ಮಗನ ಮನೆಯಲ್ಲಿರೋ ಬೇಸರಕ್ಕೋ ಅಥವ ನಿಮ್ಮಗಳ ಆ ಬಂಧಗಳಿಗೋ ಗೊತ್ತಿಲ್ಲ ಸಮಾಧಾನವಂತೂ ದಕ್ಕಿದೆ ತುಂಬಾ ದಿನಗಳ ನಂತರ.ನಿಮ್ಮ ಮನೆಯ ಅನ್ನದ ಋಣವಿದೆ ಅಂತೆಲ್ಲಾ ಮಾತಾಡೋ ಈ ತಾತ ಹದಿಮೂರು ವರ್ಷದ ನಂತರ ಮತ್ತೆ ಬಂದುಬಿಟ್ಟಿದ್ರು ನನ್ನ ಬದುಕಲ್ಲಿ.

ಬಹುಶಃ ಇದೆ ಮೂಲವಿದ್ದೀತು ನಂಗೆ ಕಾಡಲ್ಲಿ ಅಲೆಯೋ ಹುಚ್ಚು ಜಾಸ್ತಿಯಾಗೋಕೆ.ಒಬ್ಬಳೇ ಈ ನೆನಪುಗಳ ಜಾಡು ಹಿಡಿದು ಕಾಡಿನಲ್ಲಿ ಇಡೋ  ಪ್ರತಿ ಹೆಜ್ಜೆಯೂ ಒಂದು ಹೊಸ ಹುರುಪಿನ ಹೆಜ್ಜೆಯಾಗೋದರ ಅರಿವು ಸಿಕ್ಕಾಗಲೆಲ್ಲಾ ಲ್ಯಾರಿ ಅಜ್ಜ ನೆನಪಾಗ್ತಾರೆ ನಂಗೆ.ಮನೆಯಲ್ಲಿ ಕಾಲು ನಿಲ್ಲೋದು ಕಮ್ಮೀ. ಒಬ್ಬೊಬ್ಬಳೇ ಅಲೆಯೋ ಖುಷಿ ಸಿಕ್ಕಾಗಿನಿಂದ ಅಜ್ಜ ಹದಿಮೂರು ವರ್ಷದ ಹಿಂದೆ ಕೊಟ್ಟಿದ್ದ ಆ ಟೆಲಿಸ್ಕೋಪ್ ಹಿಡಿದು ಹೊರಟ್ರೆ ಮನೆಯಲ್ಲಿ ಅಮ್ಮ ದೊಡ್ಡಮ್ಮನ ಬೈಗುಳ ಶುರುವಾಗಿರುತ್ತೆ ಲ್ಯಾರಿ ಅಜ್ಜನ ಮೊಮ್ಮಗಳೇ ಇವಳು ಅಂತ!.
 ನೆನಪಾದಾಗಲೆಲ್ಲಾ ಈ ಲ್ಯಾರಿ ಅಜ್ಜಂಗೆ ಕಾಡು ಸುತ್ತೋ ಖುಷಿಯ ಕಲಿಸಿದ್ದಕ್ಕಾಗಿ ಒಂದು ಧನ್ಯವಾದವ ಹೇಳ್ತಿದ್ದೆ ನಾ..ಬದುಕಲ್ಲಿಷ್ಟು ಸಾಹಸಗಳ ಮಾಡಿದಾಗಲೇ ಕಣೋ ಬದುಕ ಬಗೆಗೆ,ನಮ್ಮ ಬಗೆಗೆ ಪ್ರೀತಿಯಾಗೋದು,ಸಾಧಿಸೋ ಧೈರ್ಯ ಸಿಗೋದು ಅಂತಿದ್ದ ತಾತನ ಮಾತುಗಳು ಪೂರ್ತಿಯಾಗಿ ಅರ್ಥವಾಗದಿದ್ರೂ ಮೋಡಿ ಮಾಡಿದ್ದಂತೂ ಹೌದು.

ಆದರೆ ಈಗೊಂದೆರಡು ತಿಂಗಳ ಹಿಂದೆ  ನಾನೂ ಅವರಿಗೆ ಮೇಲ್ ಮಾಡಿರಲಿಲ್ಲ ಅವರಿಂದಲೂ ಮೇಲ್ ಬಂದಿರಲಿಲ್ಲ..ಬೆಳಿಗ್ಗೆಯಿಂದ ನೆನಪಾಗ್ತಿದ್ದ ತಾತನನ್ನು ಮಾತಾಡಿಸಬೇಕಂತ  ಇಷ್ಟುದ್ದದ ದೀರ್ಘ ಭಾವಗಳ ಬರೆದಿದ್ದೆ.
ಆಗೊಂದು ಮೇಲ್ ರಿಸೀವ್ ಆಗಿತ್ತು "Dear Putti" ಅನ್ನೋ ಅದೇ ಆತ್ಮೀಯತೆಯಲ್ಲಿ.
ಆದರೆ ಬರೆದಿದ್ದು ಲ್ಯಾರಿ ಅಜ್ಜನಲ್ಲ :(
ಅವರದ್ದೆ ಪಡಿಯಚ್ಚು ಅವರ ಮಗ..
"ಅಪ್ಪ ಹೋಗಿ ತಿಂಗಳೊಂದಾಯ್ತು .ಈ ಪುಟ್ಟಿಯ ಬಗ್ಗೆ,ಈ ಪುಟ್ಟಿಯ ಚಂದದ ಮನೆಯ ಬಗ್ಗೆ,ಮನೆಯವವರ ಮನಸ್ಸುಗಳ ಬಗ್ಗೆ ಇಡೀ ದಿನ ಮಾತಾಡ್ತಿದ್ದ ಅಪ್ಪ ನಂಗೂ ನಿಮ್ಮನ್ನೆಲ್ಲಾ ಒಮ್ಮೆಯಾದರೂ ನೋಡೋ ತರಹದ ಭಾವವೊಂದ ಕೊಟ್ಟು ಹೋದ್ರು ನಿನ್ನ ಮೇಲ್ ಐಡಿಯ ಜೊತೆಗೆ.
ನಿನ್ನೂರನ್ನ ನೋಡೋಕೆ,ನಿನ್ನ ಜೊತೆಯಿಷ್ಟು ಮಾತಾಡೋಕೆ ಬರ್ತೀನಿ ಸಧ್ಯದಲ್ಲೇ .
ನಿನ್ನಿಷ್ಟದ ಚಾಕಲೇಟ್ ಬಾಕ್ಸ್ ನಾ ಆಗಲೇ ತೆಗೆದುಕೊಂಡಾಗಿದೆ.
ಸಿಕ್ತೀಯ ಅಲ್ವಾ?"

ಲ್ಯಾರಿ ಅಜ್ಜನ ನೆನಪು ಶಾಶ್ವತ ನೆನಪಾಗಿಯೇ ಉಳಿದ ಬೇಸರಕ್ಕೆ ಕಣ್ಣಂಚು ಮಾತಾಡ್ತು. ಇನ್ನೂ ಸೆಂಡ್ ಒತ್ತಿರದ ಲ್ಯಾರಿ ಅಜ್ಜನಿಗೆ ಮಾಡೋ ಮೇಲ್ ನಾ ಡಿಲೀಟ್ ಮಾಡಿಬಿಟ್ಟೆ .
ಆದರೊಂದು ಅವ್ಯಕ್ತ ಭಾವ ಮನ ತಾಕಿ ಹೋಯ್ತು.ಮುಖ ನೋಡಿರದ ಲ್ಯಾರಿ ಅಜ್ಜನ ಮಗ ನಮ್ಮಗಳ ಮೇಲೆ ಇಷ್ಟು ಪ್ರೀತಿಯ ಭಾವವ ಇಟ್ಟುಕೊಂಡಿದ್ದಾರಲ್ಲ ಅಂತಾ.
ಅವರ ಬರುವಿಕೆಯ ನಿರೀಕ್ಷೆಯಲ್ಲಿ .....ನಾ....
"ಲ್ಯಾರಿ ಅಜ್ಜನ ಮೊಮ್ಮಗಳಾಗಿ ಕಾಯ್ತಿರ್ತೀನಿ ನನ್ನಜ್ಜನ ಜೊತೆಗಿಲ್ಲಿ ...ಪ್ರೀತಿಯಿಂದ " ಅಂತ ಸೆಂಡ್ ಬಟನ್ ಒತ್ತಿದ್ದೆ ಟು ದ ಸನ್ ಆಫ್ ಲ್ಯಾರಿ ಅಜ್ಜ

16 comments:

  1. ಬಹು ಆಪ್ತವಾದ ಬರಹ. ಲ್ಯಾರಿ ಅಜ್ಜ ಮತ್ತು ಈಗಲೂ ಅಷ್ಟೇ ಒಲುಮೆ ಇಟ್ಟಿರೋ ಅವರಿಬ್ಬರೂ ನನಗೆ ನೆಚ್ಚಿಗೆಯಾದರು. ಆ ಟೆಲಿಸ್ಕೋಪ್ ನಿಮ್ಮ ಶಕ್ತಿನಾನಿಗೂ ಕಾದಿರಿಸಿ

    ReplyDelete
  2. ಭಾಗ್ಯಾ -
    ಲ್ಯಾರಿ ಅಜ್ಜನ ನೆನಪುಗಳೊಂದಿಗೆ ಆತ ತೋರಿಸಿದ ಕಾಡಿನ ನಂಟು ಜಾರಿಯಲ್ಲಿರಲಿ...
    ಇನ್ನಷ್ಟು ಚೆನ್ನಾಗಿ ಬದುಕಿನ ಆಂತರ್ಯದ ಅರಿವಾದೀತು...
    ಕಾಪಿಟ್ಟುಕೊಂಡ ಆತ ಕೊಟ್ಟ ಟೆಲಿಸ್ಕೋಪಿನೊಂದಿಗೆ ಆತನ ಒಳನೋಟದ ಮಾತುಗಳು ನೆನಪಾದರೆ ಬದುಕಿಗೊಂದು ಮುನ್ನೋಟ ದಕ್ಕೀತು... ಅಜ್ಜ ಸದಾ ಜತೆಗಿರಲಿ ನೆನಪುಗಳಲಿ...
    ಚಂದದ ಬರಹ...

    ReplyDelete
  3. gud1...... bhaagya,
    nenapugaLu.... namma eshto dinagaLanna, kshanagaLanna kasidukoLLuttave...
    harry ajja - rest in peace........

    ReplyDelete
  4. ಲ್ಯಾರಿ ಅಜ್ಜನ ಜೊತೆ ಕಟ್ಟಿ ಬಿಟ್ಟ ಭಾವಗಳು ಇಷ್ಟವಾದವು.....

    ಭಿನ್ನತೆಯಿದೆ.... ಏನೇ ಬರೆದರೂ ಅದರಲ್ಲಿ ಭಾವಗಳೇ ತುಂಬಿರುವುದು ವಿಶೇಷ...

    ಹೊರಗಿನವರು ಯಾರಾದರೂ ಬಂದರೆ ಅವರು ನಮ್ಮನ್ನು ಹಚ್ಚಿಕೊಳ್ಳುವುದರ ಬಗ್ಗೆ
    ನನ್ನಲ್ಲಿಯೂ ಕೆಲವು ಸಾಕ್ಷಿಗಳಿವೆ......

    ಚಂದ ಚಂದ ಬರಹ.... ಶುಕ್ರಿಯಾ....

    ReplyDelete
  5. ಪರದೇಶದ ಆ ಲ್ಯಾರಿ ಹಾಗು ಭಾರತದ ಈ ಪುಟ್ಟಿ ಅಜ್ಜ, ಮೊಮ್ಮಗಳಾಗಿ ಬೆಳೆದ ರೀತಿಯನ್ನು ಅನನ್ಯವಾಗಿ ಚಿತ್ರಿಸಿದ್ದೀರಿ. ಮನಸ್ಸಿಗೆ ತಟ್ಟುವ ಲೇಖನ.

    ReplyDelete
  6. ಸೂಪರ್ ಭಾಗ್ಯ. ನಿನ್ನ ಇಲ್ಲಿಯವರೆಗಿನ ಬರಹಗಳಲ್ಲಿ ಇದು one of the best ಅಂತ ಅನುಸ್ತು. ಪ್ರೀತಿ ಪ್ರೇಮದ ಬರಹಗಳ ಜಾಡು ಬಿಟ್ಟು ಬೇರೆ ತರ ಬರೆಯೋ ಪ್ರಯತ್ನ ಮಾಡಿದ್ದೆ ಸುಮಾರು ಸಮಯದ ನಂತರ.. ಆ ಪ್ರಯತ್ನ ಮೂಡಿಬಂದಿರೋ ರೀತಿ ಸಖತ್ ಖುಷಿ ಕೊಡ್ತು. ಬರಹದಲ್ಲಿರೋ ಭಾವಗಳ ಬಂಧ... ಲ್ಯಾರಿ ಅಜ್ಜ, ಟೆಲಿಸ್ಕೋಪು, ಮಂಗನ ಕಾಯಿಲೆಗೆ ಔಷಧ ಕಂಡುಹಿಡಿಯೋಕೆ ಅಂತ ಬಂದ ಭೂತ ಕಾಲದ ನೆನಪ ಅಜ್ಜನಿಗೂ ಮುಂಚೆಯ ಪುಟ್ಟಿ ನೀನೇನಾ ಅನ್ನೋ ವರ್ತಮಾನಕ್ಕೂ, ನಿನ್ನ ಇಷ್ಟದ ಚಾಕಲೇಟ್ ತಗೊಂಡಿದ್ದೇನೆ ಎಂದೆನ್ನೊ ಸಂಭಾವೀ ಭವಿಷ್ಯತ್ತಿನ ಲ್ಯಾರಿಯಜ್ಜನ ಮಗನಿಗೂ ಅದೇನೋ ಅರಿಯದ ಕಾಲದ ಬೆಸುಗೆ. ಇವೆಲ್ಲಾ ಶಬ್ದಗಳಿಗೆ ದಕ್ಕಿಸಿರೋ ಪ್ರಯತ್ನಕ್ಕೆ ಅಭಿನಂದನೆಗಳು :-)

    ReplyDelete
  7. ವಾಹ್ ವಾಹ್....ಛಂದ ;) )....ಕನಸು ಕಂಗಳ ಹುಡುಗ ಅವರ ಮಾತಿಗೆ ನನ್ನದೂ ಒಂದು ಜೈ...
    ಬಹಳ ಇಷ್ಟ ಆಯ್ತು ಕಣೇ...ಬರೀತಾ ಇರು :) :)
    *****/***** :D

    ReplyDelete
  8. ಚನ್ನಾಗಿದೆ ಭಾಗ್ಯ...
    ಎಂದೋ ಪರಿಚಯವಾದವರು ಒಂದು ಕಡೆಯ ನೆನಪಿನಂಗಳದಲ್ಲಿ ಕೂತು ಬಿಡುತ್ತಾರೆ ಅಲ್ವ....

    ReplyDelete
  9. ಲ್ಯಾರಿ ಅಜ್ಜ ನನಗೂ ಸಿಗಬೇಕಿತ್ತು ಅನ್ನಿಸ್ತು ಭಾಗ್ಯ. ಖಂಡಿತ ನೋವಾಗ್ತಿದೆ. ಬಹಳ ಚೆಂದಗೆ ಬರೆದಿದ್ದೀಯ. ಖುಷಿಯಾಯ್ತು.

    ReplyDelete
  10. ಭಾಗ್ಯ ಜಿ
    ನೀವು ಏನೇ ಬರೆದರೂ ಅದರಲ್ಲಿ ಭಾವಗಳೇ ತುಂಬಿರುವುದು ವಿಶೇಷ...
    ಅದಕ್ಕೆ ನಿಮ್ಮ ಬರಹಗಳು ಚೆಂದ ಇರುತ್ತವೆ.ಅದರಲ್ಲೂ ಲ್ಯಾರಿ ಅಜ್ಜನ ನೆನಪು ಚೆಂದಗೆ ಮಾಡಕೊಂಡಿದ್ದಿಯಾ.

    ReplyDelete
  11. ಬಹಳ ಆಪ್ತವೆನಿಸೋ ಬರಹ ..ಕೆಲವೊಮ್ಮೆ ದೂರದ ಸಂಬಂಧಗಳು ಹೇಳಲಾರದಷ್ಟು ನೆನಪುಗಳನ್ನ ಕೊಟ್ಟು ಹೋಗೋದು ನಿಜ :)
    ಲ್ಯಾರಿ ಅಜ್ಜನು, ನಿನ್ನ ಭಾವಗಳು ಸೇರಿ ಚೆಂದದ ಭಾವ ಔತಣ ಇಲ್ಲಿ ಸಿಕ್ಕಿದೆ :) ಹೊಸದೊಂದು ತಿರುವಿನೆಡೆಗೆ ಸಾಗಿದೆ ಬರಹಗಳು :)

    ReplyDelete
  12. ಪುಟ್ಟಾ ಕಣ್ಣಂಚು ಒದ್ದೆ ಒದ್ದೆ...
    ಅದ್ಯಾಕೆ ಇಷ್ಟು ಚಂದ ಬರಿತೀಯಾ ಭಾವಗಳ ಈ ರೀತಿ ಒಪ್ಪವಾಗಿ ಜೋಡಿಸುತ್ತಿಯಾ...

    ನಿನ್ನ ಲ್ಯಾರಿ ಅಜ್ಜನ ನೆನಪಲ್ಲಿ ನನ್ನ ಬಾಬಜ್ಜನ ನೆರಳಿದೆ.. ಮನ ಮತ್ತೆ ಬಾಲ್ಯಕ್ಕೆ ತಿರುಗಿದೆ,.. ಬಾಬಜ್ಜ ಬೇಕೆಂದು ಮನ ಹಠ ಹಿಡಿಯುವಂತೆ ಮಾಡಿದೆ ನಿನ್ನ ಭಾವ ಬರಹ.
    Missing him alot

    Liked very much ಮುದ್ದಮ್ಮಾ...

    ReplyDelete
  13. ಈ ಪುಟ್ಟಿಯ ತರಹದ್ದೇ ಮೊಮ್ಮಗಳು ನಂಗೂ ಬೇಕಿತ್ತು ಅಂತಿದ್ದ ಮೇಲ್ ಒಂದಕ್ಕೆ ನಾನಂದಿದ್ದೆ-ಬಂದುಬಿಡಿ ಭಾರತಕ್ಕೆ ನಿಮ್ಮೊಟ್ಟಿಗೆ ಇದ್ದುಬಿಡ್ತೀನಿ ಮೊಮ್ಮಗಳಾಗಿ ಅಂತ.ಈ ಮಾತ ಕೇಳಿ ಇನ್ನೊಂದಿಷ್ಟು ವರುಷ ಜಾಸ್ತಿ ಬದುಕಿಯೇನು ಪುಟ್ಟಿ ಅಂತ ತಕ್ಷಣಕ್ಕೊಂದು ರಿಪ್ಲೈ ಬಂದಿತ್ತು.- ನಿಜ ಬೇಜಾರಾತು

    ReplyDelete
  14. ಯಾಕೋ ಮನಸ್ಸು ಒದ್ದೆ ಒದ್ದೆ ... ಆ ಅಜ್ಜನ್ನ ನಾನೂ ಒಮ್ಮೆ ನೋಡಬೇಕಿತ್ತು ಅನಿಸಿತ್ತು ನೀ ಭಾವಗಳ ಕಟ್ಟಿ ಕೊಟ್ಟ ರೀತಿಗೆ ...

    ReplyDelete
  15. ನಿರುಪಾಯಿಯ ಭಾವವೊಂದ ನೀವಿಷ್ಟಪಟ್ಟಿದ್ದು ನನ್ನ ಖುಷಿ...
    ಭಾವಗಳ ತೇರಲ್ಲಿ ನಾ ಮತ್ತೆ ಮತ್ತೆ ಜೊತೆಯಾಗ್ತಿರ್ತೀನಿ..
    ಪ್ರೀತಿಯಿಂದ

    ReplyDelete
  16. ಮೊದಲಿಗೆ ಆ ಮೇಲ್ ಡಿಲೀಟ್ ಮಾಡಬಾರದಿತ್ತು.. ಅವ್ಯಕ್ತ ಭಾವ ಮನದಾಳದಿಂದ ಹೊರಹೊಮ್ಮಿದ್ದು ಹಾಗೆಯೇ ಒಂದು ಅಮರ ನೆನಪಾಗಿ ಉಳಿಯಬಲ್ಲಂಥಹ ಸುಂದರ ಮಾತುಗಳು ಇರಬೇಕಿತ್ತು.

    ಇದು ಕಲ್ಪನೆ, ಘಟನೆ.. ಏನೇ ಆದರೂ ಬರೆದ ಪ್ರತಿ ಸಾಲುಗಳು ಗಮನ ನೀಡುತ್ತಿದ್ದದ್ದು ನಮ್ಮ ಮಣ್ಣಿನಲ್ಲಿ ಇರುವ ಅತಿಥಿ ಸತ್ಕಾರದ ಗುಣ. ಯಾರೇ ಬಂದರೂ ನೀರು ಬೆಲ್ಲ ಕೊಡುತ್ತಾರೆ ಎನ್ನುವ ನಮ್ಮ ನಾಡಿನ ನಾಣ್ಣುಡಿ ಎತ್ತಿ ಎತ್ತಿ ತೋರುತ್ತಿತ್ತು.

    ಬಾಲ್ಯದಲ್ಲಿ ನಮ್ಮ ಮನದಾಳದಲ್ಲಿ ಕೂತ ಅದೆಷ್ಟೋ ಇಂತಹ ಪಾತ್ರಗಳು ನಮ್ಮ ವ್ಯಕ್ತಿತ್ವ ರೂಪಗೊಳ್ಳುವಲ್ಲಿ ನಮಗೆ ಅರಿವಿಲ್ಲದೆ ನಮ್ಮೊಳಗೇ ಸೇರಿ ಬಿಡುತ್ತಾರೆ..

    ಇದನನ್ನು ಓದುತ್ತ ಓದುತ್ತಾ ನನ್ನೇ ಕಳೆದುಹೋದೆ ಅಜ್ಜನ ನೆನಪಲ್ಲಿ ಎನ್ನುವ ಮಾತು ಮಾತ್ರ ಗಾಳಿ ನೀರು ಈ ಲೋಕದಲ್ಲಿ ಇರುವಷ್ಟೇ ಸತ್ಯ..

    ಸೂಪರ್ ಮಗಳೇ ಸೂಪರ್ ಲೇಖನ.. ಹೃದಯಕ್ಕೆ ಹತ್ತಿರವಾದ ಲೇಖನ

    ReplyDelete