ಪರಿಚಿತ ಗೆಳೆಯ ಅವ...ಅತೀ ಆತ್ಮೀಯ ಗೆಳತಿ ಅವಳು.
ಖುಷಿಯ ಮೊದಲ ಭಾವದ ರವಾನೆಯಾಗೋದು,ಬೇಸರದ ಮೊದಲ ಸೂಚನೆಯ ಅರಿವು ಸಿಗೋದು,ಅಷ್ಟಾಗಿ ಮಾತಿಲ್ಲದೆಯೂ ಭಾವಗಳ ಪೂರ್ತಿಯಾಗಿ ಅರ್ಥೈಸಿಕೊಂಡು ಒಮ್ಮೆ ಕೈ ತಟ್ಟಿ ಎದ್ದು ಹೋಗೋವಾಗ ಇರೋ ನಿರಾಳತೆ...ಅದೆಷ್ಟು ಚಂದವಲ್ವಾ ಕಣ್ಣಲ್ಲೇ ಅರ್ಥೈಸಿಕೊಳೋ ಈ ಆತ್ಮೀಕ ಭಾವದ ಖುಷಿಗಳು.
ಎಂದಿನಂತೆ ನೆನಪ ಹರಿವು ನಿಮ್ಮೆಗೆಡೆ ನನ್ನಿಂದ.
ನಂಗೆ ಪೂರ್ತಿಯಾಗಿ ಅರ್ಥವಾಗದ ಅವನನ್ನವಳು ಇಡಿಯಾಗಿ ಅರ್ಥೈಸಿಕೊಂಡು ನನ್ನ ಅವನ ಮಧ್ಯದ ಒಂದಿಷ್ಟು ಗೊಂದಲದ ಭಾವಗಳನ್ನ ಪರಿಹರಿಸೋವಾಗ ಅವಳನ್ನ ಆಶ್ಚರ್ಯದಿಂದ ದಿಟ್ಟಿಸೋದ ಬಿಟ್ರೆ ನಂಗೇನೂ ಬರಲ್ಲ..ಗೆಳತೀ,ನೀ ಸಲುಹೋ ,ಸಲುಹುತಿರೋ ಈ ಪ್ರೀತಿಗೆ ಏನೆಂದು ಹೆಸರಿಡಲಿ ನಾ..
ಸೋತಾಗ ಧೈರ್ಯ ಹೇಳಿ ಜೊತೆಗೆ ನಾಲ್ಕು ಹೆಜ್ಜೆ ಹಾಕಿ ಬದುಕಿಗೊಂದು ಆತ್ಮವಿಶ್ವಾಸವ ಕೊಡ್ತೀಯ.ಗೆದ್ದಾಗ ನನಗಿಂತಲೂ ಜಾಸ್ತಿ ಬೀಗ್ತೀಯ...ಎಡವಿದಾಗ ದಾರಿ ನೋಡಿ ನಡಿ ಅಂತ ತೋರಿಸಿಕೊಡ್ತೀಯ.ಮನ ಬಿಕ್ಕೋವಾಗಲೆಲ್ಲಾ ನಿನ್ನ ಕೈ ನನ್ನ ಕೈಯಲ್ಲಿ....ನೀ ನನ್ನ ಗದರಿದ ನೆನಪಿಲ್ಲ ಆದರೆ ತೀರಾ ಹಠ ಮಾಡೋ,ನನ್ನದೇ ಸರಿ ಅನ್ನೋ ನಂಗೆ ಹೊಡೆದು ಬುದ್ದಿ ಹೇಳ್ತೀಯ ಒಮ್ಮೊಮ್ಮೆ...ನೆನಪುಗಳ ಅಲೆಯಲ್ಲಿ ಕನಸುಗಳು ತೇಲೋವಾಗ ಒಮ್ಮೊಮ್ಮೆ ಖುಷಿ ಪಟ್ರೆ ಇನ್ನೊಮ್ಮೆ ಗಾಬರಿಯಾಗ್ತೀಯ...
ಮಾತು ಕಡಿಮೆಯಾದ್ರೂ ನೀ ನನ್ನೆಲ್ಲಾ ಭಾವಗಳ ಪ್ರತಿಬಿಂಬ.ಬದುಕೆಷ್ಟು ಧೈರ್ಯವ ಕಸಿದುಕೊಂಡ್ರೂ ಮತ್ತೆ ಬದುಕಿಗೇ ಧೈರ್ಯ ಕೊಡೋ ನೀನಂದ್ರೆ ನನ್ನ ಹೆಮ್ಮೆ.
ಸೋಲಲ್ಲೂ ಮುಂದಿನ ಗೆಲುವಿದೆ ಅನ್ನೋ ನೀ ನನ್ನ ಗೆಲುವು ...ಅಮ್ಮ ಗೆಳತಿಯಾದಾಗ ಗೆಳತಿ ಅಕ್ಕನಾದಾಗ ನನ್ನ ತಾಕೋ ಸಂಪೂರ್ಣ ಖುಷಿಯ ಭಾವಗಳು ನಿನ್ನ ಹೆಸರಲ್ಲಿದೆ.
ಮುಂದಿನ ಬದುಕಲ್ಲೂ ನಿನ್ನೆಡೆಗೆ ನಂದು ಮುಗಿಯದ ವ್ಯಾಮೋಹ...
ಪ್ರೀತಿಯಲ್ಲಿ ನೀ ಅಮ್ಮ...ಮಾತಲ್ಲಿ ನಾ ಮಗಳು!
ಅವ ನನ್ನ ಹೆಗಲ ಮೇಲೆ ಕೂರಿಸಿಕೊಂಡು ಇಡಿಯ ಊರ ನಿನ್ನೆ ಮೊನ್ನೆ ಸುತ್ತಿಸಿದ ನೆನಪು!ಬದುಕಂದ್ರೇ ಹೀಗೆ ಬದುಕಲ್ಲಿ ಹೀಗೆಯೇ ಇರಬೇಕೆಂದು ಒಂದಿಷ್ಟು ಬದುಕ ಪ್ರೀತಿಯ ಅದರ ರೀತಿಯ ಕಲಿಸಿಕೊಟ್ಟಿದ್ದು ಅವನೇ.
ಗೆಳೆಯಾ...ನನ್ನ ಭಾವಗಳೆಲ್ಲವೂ ಅವಳಿಂದಲೇ ನಿನ್ನ ತಲುಪುತ್ತೆಯಾದ್ರೂ ಅದ ನಿನ್ನ ತಲುಪಿತಲ್ಲ ಅನ್ನೋ ಸಮಾಧಾನ ನಂದು...ಮೊದಲ ಗೆಳೆಯನ ಜಾಗ ಕೊಟ್ಟಿಲ್ಲದಿದ್ರೂ ನೀ ನನ್ನ ಬದುಕ ಗೆಳೆಯ.ಕಲಿಸಿಕೊಟ್ಟಿದ್ದು ನೀ.ಬೆರೆತು ಮುನ್ನಡೆದಿದ್ದು ನಾ.
ನೀನವನ ಪಡಿಯಚ್ಚು ಅಂತ ಎಲ್ಲರೂ ಹೇಳೋವಾಗ ಹುಬ್ಬೇರಿಸಿ ಹೊರಟುಬಿಡ್ತೀನಿ ಎಲ್ಲದರಲ್ಲೂ ನಾ ನಿನ್ನ ಪ್ರತಿಬಿಂಬವ ಅಂತ ನೋಡಿಕೊಳ್ಳೋಕೆ!!
ಮೊದಲ ಹೆಜ್ಜೆಯ ಆ ದಿನಗಳಲ್ಲಿ ನಾ ಬಿದ್ದಾಗೆಲ್ಲಾ ಕೈ ಹಿಡಿದು ಎತ್ತಿದ್ದು,ಸಮಾಧಾನಿಸಿದ್ದು ನೀನೇನೆ...ಇವತ್ತು ನಾ ಎಡವಿ ಬಿದ್ದಾಗ ದೂರದಲ್ಲಿ ನಿಂತು ಕಣ್ಣಲ್ಲೇ ಧೈರ್ಯ ಹೇಳಿ ನಿಂತಾಗ ಮಾತ್ರ ನಡೆಯೋಕೆ ಸಾಧ್ಯ ಅನ್ನೋ ವಿಶ್ವಾಸವೊಂದ ಇಡೀ ಬದುಕಿಗಾಗೋವಷ್ಟು ಕೊಟ್ಟಿರೋ ನೀನಂದ್ರೆ ನನ್ನೊಳಗಿರೋ ನಾನೇನೆ!ಕೂಸು ಮರಿ ಮಾಡಿದ್ದೆ ನಿನ್ನೆ ಮೊನ್ನೆ ಅಂತ ನೀವುಗಳು ಹೇಳೋವಾಗ ನಂಗೂ ಅದೆ ಅನ್ನಿಸೋದು ಸಮಯ ಯಾಕಿಷ್ಟು ಧಾವಂತದಿ ಓಡ್ತಿದೆ ಅಂತ.ಆದರೂ ಈ ಓಡ್ತಿರೊ ಖುಷಿಯಲ್ಲೂ ನನ್ನದೊಂದಿಷ್ಟು ನೆಮ್ಮದಿಯಿದೆ.ಮನ ರಾಡಿಯಾದಾಗಲೆಲ್ಲಾ ನೀ ಕದ ತಟ್ಟಿ ಒಳ ಬಂದು ಚೊಕ್ಕ ಮಾಡಿಬಿಡ್ತೀಯ ಆದರೆ ಮರುದಿನದ ಮಳೆ ಮತ್ತಿಷ್ಟು ಮಣ್ಣು ಕದಡಿ ಹೋಗಿಬಿಡುತ್ತೆ ನನ್ನೊಳಗೆ.ಹೊರಟುಬಿಟ್ಟಿರ್ತೀಯ ಅದರರಿವು ನಿನ್ನ ತಾಕೋಕೂ ಮುಂಚೆಯೆ..ಮತ್ತೆ ನಾನೇ ಎದ್ದು ನಿಂತುಕೊಳ್ತೀನಿ.
ಆದರೂ ನಿನ್ನೆಡೆಗೆ ನಂದು ಬದುಕ ಪೂರ್ತಿಯ ನಂಟು ಅವಳಂತೆಯೇ.
ಸಿಟ್ಟಲ್ಲಿ ನೀ ಅಪ್ಪ...ಹಠದಲ್ಲಿ ನಾ ಮಗಳು!
ಒಬ್ಬರನ್ನೊಬ್ಬರು ಬಿಟ್ಟು ಕೊಡದೆ ಬದುಕ ಪೂರ್ತಿ ಒಬ್ಬರಿಗೊಬ್ಬರು ಆಸರೆಯಾಗಿ ನಿಲ್ಲೋ ಅವರಿಬ್ಬರೂ ನನ್ನವರೇ.ಅವನ ಸಿಟ್ಟನ್ನೂ ಸರಿ ಮಾಡೋ ಅವಳು ,ಅವಳ ಬೇಸರಗಳಿಗೆ ಕಿವಿಯಾಗೋ ಅವನು ಇಬ್ಬರೂ ಸೇರಿ ಚಂದದ ಮನೆಯೊಂದ ಅಷ್ಟೇ ಚಂದಿ ಸಲುಹಿ ಇವತ್ತಿಲ್ಲಿ ನೆಮ್ಮದಿಯ ನಿಟ್ಟುಸಿರಿಟ್ಟಾಗ ನನ್ನಲ್ಲಿರೋ ಗೊಂದಲಗಳೆಲ್ಲಾ ಹಿಂತಿರುಗಿಯೂ ನೋಡದೇ ಹೊರಟುಹೋದ ಅವ್ಯಕ್ತ ಖುಷಿ ಒಳಗೊಳಗೆ.
ಇದೇ ಖುಷಿಯನ್ನೆ ಅಲ್ವಾ ಅವರಿಬ್ಬರೂ ನನ್ನ ಕಣ್ಣಲ್ಲಿ ನೋಡಬಂದಿದ್ದು!
ಕಿರುಬೆರಳ ಹಿಡಿದು ನೀವು ಪ್ರೀತಿಯ ಬದುಕಿಗೆ ಅಡಿಯಿಟ್ಟು ಇವತ್ತಿಗೆ ಇಪ್ಪತ್ತೊಂದು ವರ್ಷಗಳು....ಬದುಕಿಗೆ ನಾ ಬಂದು ಈಗ ನಿಮ್ಮ ಬದುಕೇ ನಾನಾ(ವಾ)ಗಿ ಹತ್ತೊಂಬತ್ತು ವರ್ಷ!
ಈ ಚಂದದ ಅರಮನೆಯಲ್ಲಿಷ್ಟು ಕನಸಿದೆ...ಕನಸ ಬೊಂಬೆಗಳಿಗೆ ಬಣ್ಣ ತುಂಬೋಕೊಂದಿಷ್ಟು ಬಣ್ಣಗಳನ್ನಾಗಲೇ ಕೊಂಡದ್ದಾಗಿದೆ.
ತುಸು ದೂರದಲ್ಲಿ ಚೂರೇ ಚೂರು ಮುನಿಸಿದ್ದರೂ ಮನ ಖುಷಿಸೋಕೆ ,ಪ್ರೀತಿಯ ಭಾವವೆಲ್ಲಾ ನದಿಯಾಗಿ ಹರಿಯೋಕೆ ಅಲ್ಯಾವ ಅಡೆತಡೆಯೂ ಇಲ್ಲ.
ಪ್ರೀತಿಯೆಂದರೆ ನೀವು...ಪ್ರೀತಿಸೋ ಜೀವಗಳ ಜೊತೆಗಿನ ನಿಮ್ಮೀ ಪ್ರೀತಿಯ ಅರ್ಧಪಾಲು ನಂದು ಅನ್ನೋ ಖುಷಿಯಲ್ಲಿ...
ಮುಗಿಯದ ಮುದ್ದಲ್ಲಿ..ಕಾಡೋ ಹಠದಲ್ಲಿ...ಬದುಕ ಭರವಸೆಗಳಲ್ಲಿ....ಜೊತೆಯಿರ್ತೀನಿ ಯಾವತ್ತೂ....
ಪ್ರೀತಿಯಿಂದ.
***
ನಿರುಪಾಯದಲ್ಲಿ ಕಾಣ್ತಿರೋ ಐವತ್ತರ ಭಾವ ಸಂಭ್ರಮಕ್ಕೆ ನನ್ನದಿಷ್ಟು ಖುಷಿಗಳು ಜೊತೆಯಾಗಿ.