Monday, March 31, 2014

ನೆನಪುಗಳ ಒಳಹರಿವು...



ಪರಿಚಿತ ಗೆಳೆಯ ಅವ...ಅತೀ ಆತ್ಮೀಯ ಗೆಳತಿ ಅವಳು.

ಖುಷಿಯ ಮೊದಲ ಭಾವದ ರವಾನೆಯಾಗೋದು,ಬೇಸರದ  ಮೊದಲ ಸೂಚನೆಯ ಅರಿವು ಸಿಗೋದು,ಅಷ್ಟಾಗಿ ಮಾತಿಲ್ಲದೆಯೂ ಭಾವಗಳ ಪೂರ್ತಿಯಾಗಿ ಅರ್ಥೈಸಿಕೊಂಡು ಒಮ್ಮೆ ಕೈ ತಟ್ಟಿ ಎದ್ದು ಹೋಗೋವಾಗ  ಇರೋ ನಿರಾಳತೆ...ಅದೆಷ್ಟು ಚಂದವಲ್ವಾ ಕಣ್ಣಲ್ಲೇ ಅರ್ಥೈಸಿಕೊಳೋ ಈ ಆತ್ಮೀಕ ಭಾವದ ಖುಷಿಗಳು.
ಎಂದಿನಂತೆ  ನೆನಪ ಹರಿವು ನಿಮ್ಮೆಗೆಡೆ ನನ್ನಿಂದ.

ನಂಗೆ ಪೂರ್ತಿಯಾಗಿ ಅರ್ಥವಾಗದ ಅವನನ್ನವಳು ಇಡಿಯಾಗಿ ಅರ್ಥೈಸಿಕೊಂಡು ನನ್ನ ಅವನ ಮಧ್ಯದ ಒಂದಿಷ್ಟು ಗೊಂದಲದ ಭಾವಗಳನ್ನ ಪರಿಹರಿಸೋವಾಗ ಅವಳನ್ನ ಆಶ್ಚರ್ಯದಿಂದ ದಿಟ್ಟಿಸೋದ ಬಿಟ್ರೆ ನಂಗೇನೂ ಬರಲ್ಲ..ಗೆಳತೀ,ನೀ ಸಲುಹೋ ,ಸಲುಹುತಿರೋ ಈ ಪ್ರೀತಿಗೆ ಏನೆಂದು ಹೆಸರಿಡಲಿ ನಾ..
ಸೋತಾಗ ಧೈರ್ಯ ಹೇಳಿ ಜೊತೆಗೆ ನಾಲ್ಕು ಹೆಜ್ಜೆ ಹಾಕಿ ಬದುಕಿಗೊಂದು ಆತ್ಮವಿಶ್ವಾಸವ ಕೊಡ್ತೀಯ.ಗೆದ್ದಾಗ ನನಗಿಂತಲೂ ಜಾಸ್ತಿ ಬೀಗ್ತೀಯ...ಎಡವಿದಾಗ ದಾರಿ ನೋಡಿ ನಡಿ ಅಂತ ತೋರಿಸಿಕೊಡ್ತೀಯ.ಮನ ಬಿಕ್ಕೋವಾಗಲೆಲ್ಲಾ ನಿನ್ನ ಕೈ ನನ್ನ ಕೈಯಲ್ಲಿ....ನೀ ನನ್ನ ಗದರಿದ ನೆನಪಿಲ್ಲ ಆದರೆ ತೀರಾ ಹಠ ಮಾಡೋ,ನನ್ನದೇ ಸರಿ ಅನ್ನೋ ನಂಗೆ ಹೊಡೆದು ಬುದ್ದಿ ಹೇಳ್ತೀಯ ಒಮ್ಮೊಮ್ಮೆ...ನೆನಪುಗಳ ಅಲೆಯಲ್ಲಿ ಕನಸುಗಳು ತೇಲೋವಾಗ ಒಮ್ಮೊಮ್ಮೆ ಖುಷಿ ಪಟ್ರೆ ಇನ್ನೊಮ್ಮೆ ಗಾಬರಿಯಾಗ್ತೀಯ...
ಮಾತು ಕಡಿಮೆಯಾದ್ರೂ ನೀ ನನ್ನೆಲ್ಲಾ ಭಾವಗಳ ಪ್ರತಿಬಿಂಬ.ಬದುಕೆಷ್ಟು ಧೈರ್ಯವ ಕಸಿದುಕೊಂಡ್ರೂ ಮತ್ತೆ ಬದುಕಿಗೇ ಧೈರ್ಯ ಕೊಡೋ ನೀನಂದ್ರೆ ನನ್ನ ಹೆಮ್ಮೆ.
ಸೋಲಲ್ಲೂ ಮುಂದಿನ ಗೆಲುವಿದೆ ಅನ್ನೋ ನೀ ನನ್ನ ಗೆಲುವು ...ಅಮ್ಮ ಗೆಳತಿಯಾದಾಗ ಗೆಳತಿ ಅಕ್ಕನಾದಾಗ ನನ್ನ ತಾಕೋ ಸಂಪೂರ್ಣ ಖುಷಿಯ ಭಾವಗಳು ನಿನ್ನ ಹೆಸರಲ್ಲಿದೆ.
ಮುಂದಿನ ಬದುಕಲ್ಲೂ ನಿನ್ನೆಡೆಗೆ ನಂದು ಮುಗಿಯದ ವ್ಯಾಮೋಹ...

ಪ್ರೀತಿಯಲ್ಲಿ ನೀ ಅಮ್ಮ...ಮಾತಲ್ಲಿ ನಾ ಮಗಳು!

ಅವ ನನ್ನ ಹೆಗಲ ಮೇಲೆ ಕೂರಿಸಿಕೊಂಡು ಇಡಿಯ ಊರ ನಿನ್ನೆ ಮೊನ್ನೆ ಸುತ್ತಿಸಿದ ನೆನಪು!ಬದುಕಂದ್ರೇ ಹೀಗೆ ಬದುಕಲ್ಲಿ ಹೀಗೆಯೇ ಇರಬೇಕೆಂದು ಒಂದಿಷ್ಟು ಬದುಕ ಪ್ರೀತಿಯ ಅದರ ರೀತಿಯ ಕಲಿಸಿಕೊಟ್ಟಿದ್ದು ಅವನೇ.
ಗೆಳೆಯಾ...ನನ್ನ ಭಾವಗಳೆಲ್ಲವೂ ಅವಳಿಂದಲೇ ನಿನ್ನ ತಲುಪುತ್ತೆಯಾದ್ರೂ ಅದ ನಿನ್ನ ತಲುಪಿತಲ್ಲ ಅನ್ನೋ ಸಮಾಧಾನ ನಂದು...ಮೊದಲ ಗೆಳೆಯನ ಜಾಗ ಕೊಟ್ಟಿಲ್ಲದಿದ್ರೂ ನೀ ನನ್ನ ಬದುಕ ಗೆಳೆಯ.ಕಲಿಸಿಕೊಟ್ಟಿದ್ದು ನೀ.ಬೆರೆತು ಮುನ್ನಡೆದಿದ್ದು ನಾ.
ನೀನವನ ಪಡಿಯಚ್ಚು ಅಂತ ಎಲ್ಲರೂ ಹೇಳೋವಾಗ ಹುಬ್ಬೇರಿಸಿ ಹೊರಟುಬಿಡ್ತೀನಿ ಎಲ್ಲದರಲ್ಲೂ ನಾ ನಿನ್ನ ಪ್ರತಿಬಿಂಬವ ಅಂತ ನೋಡಿಕೊಳ್ಳೋಕೆ!!
ಮೊದಲ ಹೆಜ್ಜೆಯ ಆ ದಿನಗಳಲ್ಲಿ ನಾ ಬಿದ್ದಾಗೆಲ್ಲಾ ಕೈ ಹಿಡಿದು ಎತ್ತಿದ್ದು,ಸಮಾಧಾನಿಸಿದ್ದು ನೀನೇನೆ...ಇವತ್ತು ನಾ ಎಡವಿ ಬಿದ್ದಾಗ ದೂರದಲ್ಲಿ ನಿಂತು ಕಣ್ಣಲ್ಲೇ ಧೈರ್ಯ ಹೇಳಿ ನಿಂತಾಗ ಮಾತ್ರ ನಡೆಯೋಕೆ ಸಾಧ್ಯ ಅನ್ನೋ ವಿಶ್ವಾಸವೊಂದ ಇಡೀ ಬದುಕಿಗಾಗೋವಷ್ಟು ಕೊಟ್ಟಿರೋ ನೀನಂದ್ರೆ ನನ್ನೊಳಗಿರೋ ನಾನೇನೆ!ಕೂಸು ಮರಿ ಮಾಡಿದ್ದೆ ನಿನ್ನೆ ಮೊನ್ನೆ ಅಂತ ನೀವುಗಳು ಹೇಳೋವಾಗ ನಂಗೂ ಅದೆ ಅನ್ನಿಸೋದು ಸಮಯ ಯಾಕಿಷ್ಟು ಧಾವಂತದಿ ಓಡ್ತಿದೆ ಅಂತ.ಆದರೂ ಈ ಓಡ್ತಿರೊ ಖುಷಿಯಲ್ಲೂ ನನ್ನದೊಂದಿಷ್ಟು ನೆಮ್ಮದಿಯಿದೆ.ಮನ ರಾಡಿಯಾದಾಗಲೆಲ್ಲಾ ನೀ ಕದ ತಟ್ಟಿ ಒಳ ಬಂದು ಚೊಕ್ಕ ಮಾಡಿಬಿಡ್ತೀಯ ಆದರೆ ಮರುದಿನದ ಮಳೆ ಮತ್ತಿಷ್ಟು ಮಣ್ಣು ಕದಡಿ ಹೋಗಿಬಿಡುತ್ತೆ ನನ್ನೊಳಗೆ.ಹೊರಟುಬಿಟ್ಟಿರ್ತೀಯ ಅದರರಿವು ನಿನ್ನ ತಾಕೋಕೂ ಮುಂಚೆಯೆ..ಮತ್ತೆ ನಾನೇ ಎದ್ದು ನಿಂತುಕೊಳ್ತೀನಿ.
ಆದರೂ ನಿನ್ನೆಡೆಗೆ ನಂದು ಬದುಕ ಪೂರ್ತಿಯ ನಂಟು ಅವಳಂತೆಯೇ.

ಸಿಟ್ಟಲ್ಲಿ ನೀ ಅಪ್ಪ...ಹಠದಲ್ಲಿ ನಾ ಮಗಳು!

ಒಬ್ಬರನ್ನೊಬ್ಬರು ಬಿಟ್ಟು ಕೊಡದೆ ಬದುಕ ಪೂರ್ತಿ ಒಬ್ಬರಿಗೊಬ್ಬರು ಆಸರೆಯಾಗಿ ನಿಲ್ಲೋ ಅವರಿಬ್ಬರೂ ನನ್ನವರೇ.ಅವನ ಸಿಟ್ಟನ್ನೂ ಸರಿ ಮಾಡೋ ಅವಳು ,ಅವಳ ಬೇಸರಗಳಿಗೆ ಕಿವಿಯಾಗೋ ಅವನು ಇಬ್ಬರೂ ಸೇರಿ ಚಂದದ ಮನೆಯೊಂದ ಅಷ್ಟೇ ಚಂದಿ ಸಲುಹಿ ಇವತ್ತಿಲ್ಲಿ ನೆಮ್ಮದಿಯ ನಿಟ್ಟುಸಿರಿಟ್ಟಾಗ ನನ್ನಲ್ಲಿರೋ  ಗೊಂದಲಗಳೆಲ್ಲಾ ಹಿಂತಿರುಗಿಯೂ ನೋಡದೇ ಹೊರಟುಹೋದ ಅವ್ಯಕ್ತ ಖುಷಿ ಒಳಗೊಳಗೆ.
ಇದೇ ಖುಷಿಯನ್ನೆ ಅಲ್ವಾ ಅವರಿಬ್ಬರೂ ನನ್ನ ಕಣ್ಣಲ್ಲಿ ನೋಡಬಂದಿದ್ದು!




ಕಿರುಬೆರಳ ಹಿಡಿದು ನೀವು ಪ್ರೀತಿಯ ಬದುಕಿಗೆ ಅಡಿಯಿಟ್ಟು ಇವತ್ತಿಗೆ ಇಪ್ಪತ್ತೊಂದು ವರ್ಷಗಳು....ಬದುಕಿಗೆ ನಾ ಬಂದು ಈಗ ನಿಮ್ಮ ಬದುಕೇ ನಾನಾ(ವಾ)ಗಿ ಹತ್ತೊಂಬತ್ತು ವರ್ಷ!
ಈ ಚಂದದ ಅರಮನೆಯಲ್ಲಿಷ್ಟು ಕನಸಿದೆ...ಕನಸ ಬೊಂಬೆಗಳಿಗೆ ಬಣ್ಣ ತುಂಬೋಕೊಂದಿಷ್ಟು ಬಣ್ಣಗಳನ್ನಾಗಲೇ ಕೊಂಡದ್ದಾಗಿದೆ.
ತುಸು ದೂರದಲ್ಲಿ ಚೂರೇ ಚೂರು ಮುನಿಸಿದ್ದರೂ ಮನ ಖುಷಿಸೋಕೆ ,ಪ್ರೀತಿಯ ಭಾವವೆಲ್ಲಾ ನದಿಯಾಗಿ ಹರಿಯೋಕೆ ಅಲ್ಯಾವ ಅಡೆತಡೆಯೂ ಇಲ್ಲ.
ಪ್ರೀತಿಯೆಂದರೆ ನೀವು...ಪ್ರೀತಿಸೋ ಜೀವಗಳ ಜೊತೆಗಿನ ನಿಮ್ಮೀ ಪ್ರೀತಿಯ ಅರ್ಧಪಾಲು ನಂದು ಅನ್ನೋ ಖುಷಿಯಲ್ಲಿ...
 ಮುಗಿಯದ ಮುದ್ದಲ್ಲಿ..ಕಾಡೋ ಹಠದಲ್ಲಿ...ಬದುಕ ಭರವಸೆಗಳಲ್ಲಿ....ಜೊತೆಯಿರ್ತೀನಿ ಯಾವತ್ತೂ....
ಪ್ರೀತಿಯಿಂದ.
                                                                          ***

ನಿರುಪಾಯದಲ್ಲಿ ಕಾಣ್ತಿರೋ ಐವತ್ತರ ಭಾವ ಸಂಭ್ರಮಕ್ಕೆ ನನ್ನದಿಷ್ಟು ಖುಷಿಗಳು ಜೊತೆಯಾಗಿ.

20 comments:

  1. ಆದರೂ ನಿನ್ನೆಡೆಗೆ ನಂದು ಬದುಕ ಪೂರ್ತಿಯ ನಂಟು - ನೀವು ನಮಗೆ ಇಷ್ಟವಾಗೋದೇ ಹೀಗೆ...
    ನಮ್ಮಂತಹ ಕಾವ್ಯಾಸಕ್ತರಿಗೆ ನಿಮ್ಮ ಒಳಗಿನ ಕವಿತ್ವದ ಸೋಜಿಗವೆಂದ್ರೆ:
    ಪ್ರೀತಿಯೆಂದರೆ ನೀವು...ಪ್ರೀತಿಸೋ ಜೀವಗಳ ಜೊತೆಗಿನ ನಿಮ್ಮೀ ಪ್ರೀತಿಯ ಅರ್ಧಪಾಲು ನಂದು ಅನ್ನೋ ಖುಷಿಯಲ್ಲಿ...

    ಒಳ್ಳೆಯ್ ಬರಹ.

    ReplyDelete
    Replies
    1. ಧನ್ಯವಾದ ಬದರಿ ಸರ್....ಭಾವವೊಂದಕ್ಕೆ ಕವನದ ನಾಮಕರಣ ಮಾಡಿ ಮತ್ತೆ ಮತ್ತೆ ಬರೆಯೋಕೆ ಪ್ರೇರೆಪಿಸೋ ನಿಮಗೊಂದು ನಮನ...
      ಖುಷಿಯಾಯ್ತು..
      ಭಾವಗಳ ತೇರಲ್ಲಿ ನಾ ಮತ್ತೆ ಜೊತೆಯಾಗ್ತೀನಿ

      Delete
  2. ಕೆಲವೊಮ್ಮೆ ಅರಿವಾದರೂ ನಿರ್ಮಲ ಮುಖಭಾವ. ದೂರದಲ್ಲಿದ್ದರೂ ನೆರಳಂತೆ ಎಡ ತಾಕುವ ವಿಶ್ವಾಸ... ಎಲ್ಲರಲ್ಲೂ ಹೇ ನಾನಿದ್ದೇನೆ ಎನ್ನುತ್ತಾ ಮನೋಭಾವ.. "ನಾ ಎಡವಿ ಬಿದ್ದಾಗ ದೂರದಲ್ಲಿ ನಿಂತು ಕಣ್ಣಲ್ಲೇ ಧೈರ್ಯ ಹೇಳಿ ನಿಂತಾಗ ಮಾತ್ರ ನಡೆಯೋಕೆ ಸಾಧ್ಯ ಅನ್ನೋ ವಿಶ್ವಾಸವೊಂದ ಇಡೀ ಬದುಕಿಗಾಗೋವಷ್ಟು ಕೊಟ್ಟಿರೋ ನೀನಂದ್ರೆ ನನ್ನೊಳಗಿರೋ ನಾನೇನೆ" ಇದೊಂದು ಮಾತು ಸಾಕು ಬೆಟ್ಟದಷ್ಟು ಕದಲದ ಆತ್ಮವಿಶ್ವಾಸದ ಕೋಟೆಯ ಸಾಕ್ಷಿಗೆ.

    ಮೊದಲಿಗೆ ಸುವರ್ಣ ಬರಹಕ್ಕೆ ಹತ್ತಿರ ಹತ್ತಿರ ಬೆಳ್ಳಿ ಹಬ್ಬದ ಲೇಪ.. ಮಗಳೇ ಈ ಬರಹ ಕೊಂಚ ಕಾಲ ನನ್ನ ಮನಸ್ಸನ್ನು ದಶಕಗಳ ಕಾಲ ಹಿಂದಕ್ಕೆ ಓಡಿಸಿದ್ದು ನನಗೆ ಬಹಳ ಕುಶಿ ನೀಡಿತು.

    ಬೆನ್ನು ತಟ್ಟಲು ನೂರು ಕೈಗಳು ಇರುತ್ತವೆ.. ಎದೆ ತಟ್ಟಿ ಹೇಳಿಕೊಳ್ಳಲು ಮಾತಾ ಪಿತೃಗಳು ಮಾತ್ರ ಸಿದ್ಧರಿರುತ್ತಾರೆ. ಅಂತಹ ಸುಂದರ ಬರಹಕ್ಕೆ ಅವರ ಎದೆ ಸಂತಸದಿಂದ ಬೀಗುತ್ತಿದ್ದಾರೆ.. ಅದರ ಪೂರ್ತಿ ಶ್ರೇಯ ನಿನಗೆ ಮತ್ತು ನಿನ್ನ ಕೈ ಹಿಡಿದು ನಡೆಸುವ ಆ ದೇವರುಗಳಿಗೆ.

    ಮಗಳೇ. ನೀ ನನಗೆ ಇನ್ನಷ್ಟು ಮತ್ತಷ್ಟು ಹತ್ತಿರವಾದೆ.. ಸೂಪರ್ ಮಗಳೇ

    ReplyDelete
    Replies
    1. ಅಣ್ಣಾ...
      ಅಪ್ಪ ಅಮ್ಮನ ಬಗೆಗಿನ ಭಾವವೊಂದ ನೀವಿಷ್ಟಪಟ್ಟಿದ್ದು ಅಷ್ಟೇ ಆಪ್ತವಾಗಿ ಮಾತಾಡಿದ್ದು ಹತ್ತಿರ ಅನ್ನಿಸ್ತು..
      ಸುವರ್ಣ ಸಂಭ್ರಮದ ಭಾವವೊಂದಕ್ಕೆ ನೀವು ಜೊತೆ ಸಿಕ್ಕಿದ್ದು ನನ್ನ ಖುಷಿ.
      ಥಾಂಕ್ಸ್ ಫಾರ್ ದ ಫೀಲ್.
      ಭಾವಗಳ ವಿನಿಮಯದಲ್ಲಿ ಯಾವತ್ತಿಗೂ ಜೊತೆಯಾಗಿ

      Delete
  3. ಶುಭಾಶಯಗಳು....
    ಅಮ್ಮ - ಅಪ್ಪನ ಇಪ್ಪತ್ತೊಂದು ಸಂವತ್ಸರಗಳ ಪ್ರೀತಿ ಬಂಧಕ್ಕೂ, ನಿನ್ನ ಐವತ್ತರ ಭಾವ ಸಂಭ್ರಮಕ್ಕೂ...
    ಖುಷಿಗಳಿರಲಿ...

    ReplyDelete
    Replies
    1. ಥಾಂಕ್ಸ್ ಶ್ರೀವತ್ಸ ಚಂದದ ಶುಭಾಶಯಕ್ಕೆ...
      ಖುಷಿಯಾಯ್ತು ನಿನ್ನ ಖುಷಿಯ ಹಾರೈಕೆಗೆ

      Delete
  4. ಖುಷಿಗಳು ಇಮ್ಮಡಿಯಾಗಲಿ ಮುದ್ದಮ್ಮಾ..
    ಶುಭಾಶಯಗಳು

    ReplyDelete
    Replies
    1. ಧನ್ಯವಾದ ಮುದ್ದಕ್ಕಾ ನಿಮ್ಮೀ ಚಂದದ ಶುಭಾಶಯಕ್ಕೆ...
      ಭಾವಗಳ ತೇರಲ್ಲಿ ನಾ ಮತ್ತೆ ಜೊತೆಯಾಗ್ತೀನಿ

      Delete
  5. Oho..1st April--- I am sure you are not kidding. ..I am a part of the celebration.
    ..Good write up Bhagya.

    ReplyDelete
    Replies
    1. thanks vanitakka ..
      no actually aniversary is on 30th march but this balanced happyness got published on 31st march :)
      thaank for being a part of this joy :)

      Delete
  6. ಹೆಜ್ಜೆಹೆಜ್ಜೆಗೂ ಬೆನ್ನೆಲುಬಾಗಿ ನಿಂತ ತಂದೆತಾಯಿಯ 21 ನೇ ಸಾಮರಸ್ಯದ ಬದುಕಿನ ದ್ಯೋತಕ ಈ ಬರಹ...ಪ್ರೀತಿಯ ಪರಿಪಕ್ವ ಶ್ರೋತೃಗಳ ಪ್ರತಿಬಿಂಬ ಈ ಬರಹ..ಶ್ರೀಕಾಂತಣ್ಣ ಹೇಳಿದಂತೆ "ಬೆನ್ನು ತಟ್ಟಲು ನೂರು ಕೈಗಳು ಇರುತ್ತವೆ.. ಎದೆ ತಟ್ಟಿ ಹೇಳಿಕೊಳ್ಳಲು ಮಾತಾ ಪಿತೃಗಳು ಮಾತ್ರ ಸಿದ್ಧರಿರುತ್ತಾರೆ"....:)

    ReplyDelete
    Replies
    1. ನಿಜ ಆದಿ...
      ಚಂದದ ಅನಿಸಿಕೆಗೆ ಧನ್ಯವಾದ

      Delete
  7. Happy anniversary ... Appa amma ...

    Putti one of your best....

    ReplyDelete
    Replies
    1. ಥಾಂಕ್ ಯು ಸಂಧ್ಯಕ್ಕಾ .....
      ಭಾವವೊಂದು ರೆಕ್ಕೆ ಬಿಚ್ಚಿ ಹಾರೋವಾಗಿನ ಖುಷಿಗೆ ಚಂದದ ಭಾವ ಅಂತ ನೀ ಅಂದಿದ್ದು ಮತ್ತೂ ಖುಷಿಯಾಯ್ತು..
      ಭಾವಗಳ ಜಾತ್ರೆಯಲ್ಲಿ ಮತ್ತೆ ಮತ್ತೆ ಸಿಕ್ತೀನಿ ನಾ

      Delete
  8. ಅಮ್ಮ ಮಮತೆಯ ಅಸೀಮ ಗಡಿಯಾದರೆ ಅಪ್ಪ ಅಮೂಲ್ಯ ಶಿಲ್ಪವ ತಯಾರಿಸುವ ಕುಶಲ ಶಿಲ್ಪಿ.
    ಇವರಿಬ್ಬರಿಲ್ಲದಿದ್ದರೆ ಮಗು ಅಪೂರ್ಣ ಆ ಮುಂದಿನ ಪ್ರಜೆ ನಿಷ್ಫ್ರಯೋಜಕ.... ಬಹಳ ಭಾವಪೂರ್ಣ ಲೇಖನ ಪುಟ್ಟಾ...ದೇವರು ನಿನ್ನಪ್ಪ ಅಮ್ಮಂಗೆ ಆಯುರಾರೋಗ್ಯಕರುಣಿಸಲಿ ಎನ್ನುವ ಪ್ರಾರ್ಥನೆ ಜೊತೆಗೆ ನಿನ್ನ ಜೀವನದಲ್ಲಿ ಸದಾ ಸುಖ ಸಂತೋಷ ತುಂಬಿರಲಿ ಎಂದು ಹಾರೈಸುತ್ತೇನೆ.

    ReplyDelete
    Replies
    1. ಅಜಾದ್ ಜಿ..
      ತುಂಬಾ ದಿನಗಳ ನಂತರ ನಿರುಪಾಯದಲ್ಲಿ ನಿಮ್ಮ ನೋಡ್ತಿರೋ ಖುಷಿ ನಂದು...
      ಚಂದದ ಶುಭಾಶಕ್ಕೆ ಮನ ತುಂಬಿ ಬಂತು ...
      ಥಾಂಕ್ಸ್ ಅಗೈನ್...
      ಭಾವಗಳ ವಿನಿಯೋಗದಲ್ಲಿ ಮತ್ತೆ ಸಿಕ್ತೀನಿ

      Delete
  9. ಮುಗಿಯದ ಮುದ್ದಲ್ಲಿ.. ಅನ್ನೋ ಶಬ್ಧ ಪ್ರಯೋಗ ಕಾಡಿಸುವಂತಿದೆ....
    ತುಂಬಾ ಒಳ್ಳೆಯ ಪ್ರಯೋಗ....
    ಪ್ರೀತಿಯಲ್ಲೆಲ್ಲಾ ಪಾಲು ಕೊಡೋದು ಹೇಗೆ ಹೇಳು... ನಿನಗೆ ಕೊಡುವ ಪ್ರೀತಿ ಪೂರ್ತಿ ನಿನಗೇ ಮತ್ತೆ ಬೇರೆಯವರದು ಅವರಿಗೆ... ನಿನ್ನ ಪಾಲಿನ ಪ್ರೀತಿಯಲ್ಲಿ ನಯಾ ಪೈಸೆ ಪಾಲಿಲ್ಲ.....
    ಎಂದಿನಂತೆ ಬಲು ಇಷ್ಟವಾಗೋ ಥರಾ.....ಈ ನಿನ್ನ ಬರಹ....

    ReplyDelete
    Replies
    1. ಧನ್ಯವಾದ ರಾಘವಣ್ಣಾ...
      ಒಮ್ಮೊಮ್ಮೆ ಮನಸೂ ಮುಷ್ಕರ ಹೂಡೂತ್ತೆ ಭಾವವೊಂದಕ್ಕೆ ಹಾಗೆಯೇ ಪ್ರತಿಕೃಯಿಸೋಕೆ...
      ನೀವಿಷ್ಟಪಟ್ಟಿದ್ದು ,ಓದಬಂದಿದ್ದು ನನ್ನ ಖುಷಿ.
      ಭಾವಗಳ ತೇರಲ್ಲಿ ನಾ ಜೊತೆಯಾಗ್ತೀನಿ ಮತ್ತೆ

      Delete
  10. ಅಪ್ಪ ಅಮ್ಮನ ಮದುವೆಯ ೨೧ನೇ ಸಂವತ್ಸರಕ್ಕೆ ಮಗಳಿಂದ ಮುದ್ದಿನ ಉಡುಗೊರೆ.ಅಪ್ಪ ಅಮ್ಮನ ಸಂಬಂಧ ಉತ್ತಮ ಸ್ನೇಹವಾದರೆ ಜೀವನದಲ್ಲಿ ಮತ್ತಿನ್ನೇನು ಬೇಕು ಹೇಳಿ. "ಸ್ನೇಹ" ಇದೊಂದೇ ಪದ ಸಾಕು, ಇದಕ್ಕೆ ವಯಸ್ಸಿನ ಅಂತರವಿಲ್ಲ,ಜಾತಿ ಭೇಧವಿಲ್ಲ.
    ಬರಹದಲ್ಲಿ ಉತ್ತಮ ಹಿಡಿತವಿದೆ. ಮೊದಲಿಂದಲೂ ನಿಮ್ಮ ಬರಹವನ್ನ ಓದುತ್ತಿದ್ದೇನೆ, ಸುಂದರವಾಗಿ ಪದಗಳನ್ನ ಪೋಣಿಸುತ್ತೀರ. ಇನ್ನಷ್ಟು ಬರೆಯಿರಿ.
    ಶುಭವಾಗಲಿ.

    ReplyDelete
    Replies
    1. ಥಾಂಕ್ಸ್.
      ನಿಜ,ಸ್ನೇಹದ ಭಾವವೇ ಅಲ್ವಾ ಎಲ್ಲರನ್ನೂ ಜೊತೆ ಸೇರಿಸಿ ಒಂದಿಷ್ಟು ಭಾವಗಳ ಬೆಸೆಯೋದು...
      ಪ್ರೀತಿಯ ಶುಭಾಶಯಕ್ಕೆ ಶರಣು.
      ಮತ್ತೆ ಸಿಕ್ತೀನಿ

      Delete