ಅವತ್ತೇ ಹೇಳಿದ್ದಳು ಅವಳವನಿಗೆ ...
"ಬದುಕಲ್ಲಿ ಕಳಕೊಂಡಿದ್ದನ್ನ ಮಾತ್ರ ಹುಡುಕು..ಸಿಗದಿದ್ದ ಪ್ರೀತಿಯನ್ನೇಕೆ ಕಳಕೊಂಡ ಪ್ರೀತಿ ಅನ್ನುತ್ತೀಯಾ !ಸಿಗದೇ ಕಳೆದು ಹೋದುದರ ಬಗ್ಗೆ ನಿನಗಿರೋ ಅತಿಯಾದ ವ್ಯಾಮೋಹಕ್ಕೆ ನನ್ನಲ್ಲಿ ಯಾವ ಶಬ್ಧವೂ ಇಲ್ಲ ...
ಗೆಳೆಯಾ, ಬೇಸರಿಸದಿರು ..ನಾ ನಿನ್ನವಳಲ್ಲ "
ಬದುಕ ಪ್ರಶ್ನೆಗೆ ನೇರಾ ನೇರಾ ಉತ್ತರ ಕೊಟ್ಟಿದ್ದ ಅವಳ ಬಗೆಗೊಂದು ಆಶ್ಚರ್ಯದ ನೋಟ ನಂಗೆ ಮೂಡಿದ್ದು ಸಹಜ ಅನ್ನೋ ಭಾವ ನಂದು ...
ವರ್ಷವೊಂದರ ಹಿಂದಿನ ಮಾತು ....
ಅವಳಂದ್ರೆ ......
ಮೌನ ಗೌರಿ ! ತನ್ನ ಪಾಡಿಗೆ ತಾನಾಯ್ತು ,ತನ್ನ ಓದಾಯ್ತು ಅಂತಿದ್ದವಳು...ಹೀಗೆಯೇ ಇರಬೇಕೆಂಬ ಕಟ್ಟುಪಾಡುಗಳೂ ಇಲ್ಲದೇ ,ಹೇಗೋ ಇದ್ದರಾಯ್ತು ಅನ್ನೋ ಉದಾಸೀನ ಭಾವವೂ ಇಲ್ಲದೇ .....
ಬದುಕ ಬಗೆಗೆ ಯಾವುದೇ ಬೇಸರವಿಲ್ಲದೇ ,ಬದುಕ ರೇಸ್ ನಲ್ಲಿ ಮುಂದೆಯೆ ಇರಬೇಕೆಂಬ ಧಾವಂತವೂ ಇಲ್ಲದೇ ,ಬದುಕೊಂದಿಗೆ ಯಾವುದೇ ನಿರೀಕ್ಷೆ ಇಲ್ಲದೆ ಇದ್ದ ಸಾದಾ ಸೀದಾ ಹುಡುಗಿ ಅವಳು....
ಸೌಮ್ಯ ಸ್ವಭಾವ ,ಸ್ನೇಹದ ಕುರುಹು ಸಿಕ್ಕರೂ ಸ್ವಲ್ಪ ಆತ್ಮೀಯತೆ ತೋರಿದ್ರೂ ಅವರನ್ನ ಹಚ್ಚಿಕೊಳ್ಳೋ ಅಷ್ಟು ಭಾವ ಜೀವಿ ..
ಪ್ರೀತಿ ಪ್ರೇಮದ ಬಗ್ಗೆ ವಯೊ ಸಹಜ ಕುತೂಹಲ ಬಿಟ್ರೆ ಬೇರೆ ಯಾವ ಮಧುರ ಭಾವಗಳೂ ಮೂಡಿರದ ಮನವದು ....ಪ್ರೀತಿಯ ನಿವೇದನೆ ಮಾಡಿಕೊಂಡಿದ್ದ ಅದೆಷ್ಟೋ ಹುಡುಗರಿಗೆ ಅವಳ ಮೌನವೆ ಉತ್ತರವಾಗಿ ಆ ಮೌನವೇ ಬೇಸರ ತರಿಸಿ ಅವರ್ಯಾರೂ ಅವಳ ತಂಟೆಗೆ ಬರದೇ ಸುಮ್ಮನಾಗುತ್ತಿದ್ದರು ...
ಇಂತದ್ದೇ ಒಂದು ಸಂದರ್ಭದಲ್ಲಿ ಮಾತಾಡಿಸಿದ್ದ ಹುಡುಗ ಅವನು ....
ಸ್ವಲ್ಪ ಆತ್ಮೀಯತೆಗೆ ಮಾರು ಹೋಗುತ್ತಿದ್ದ ಹುಡುಗಿಗೆ ಅವನ ಪ್ರೀತಿಯ ಆತ್ಮೀಯತೆಗೆ ಮಾತೆ ಬರುತ್ತಿರಲಿಲ್ಲ !...ತನಗಿಂತ ಅವಳನ್ನೇ ಹೆಚ್ಚು ಇಷ್ಟಪಡೊ ಹುಡುಗ ಅವನು ...!
ಸ್ನೇಹದ ಸಲುಗೆಯಲ್ಲಿ ಆತ್ಮೀಯತೆಯ ಮಾತಲ್ಲಿ ಕಳೆದು ಹೋಗಿದ್ದಳು ...ಬದುಕಲ್ಲಿ ಒಂದಿಷ್ಟು ಬದಲಾದ ಭಾವಗಳ ಅನುಭವ ಆಗುತ್ತಿತ್ತು ...ಬದುಕ ಬಗೆಗೆ ನಿರೀಕ್ಷೆ ಒಂದು ಮೂಡಿತ್ತು ..
ತನಗಾಗಿ ಒಬ್ಬ ಆತ್ಮೀಯನಿರೋ ಭಾವ ಬಲವಾಗಿತ್ತು ....ಮನದ ಮಾತು ಕೇಳೋಕೆ ಒಂದು ಸುಂದರ ಮನವಿತ್ತು ...ಅಳುವ ಕಂಗಳಿಗೇ ಸಮಾಧಾನಿಸೋ ಕೈ ಒಂದಿತ್ತು ...ನೋವ ಭಾವಕ್ಕೆ ಜೊತೆಯಾಗೋ ತೋಳಿತ್ತು ....ಅದೆಷ್ಟೋ ಬಾರಿ ಆ ತೋಳಲ್ಲಿ ಮುಖ ಹುದುಗಿಸಿ ಕಳೆದ ಒಂಟಿ ತನದ ನೆಮ್ಮದಿಯಿತ್ತು .....
ಅಲ್ಲೊಂದು ನಿಶ್ಕಲ್ಮಶ ಪ್ರೀತಿಯ ಸ್ನೇಹವಿತ್ತು ...ಸ್ನೇಹದ ಸಲುಗೆಯಿತ್ತು ..ಸ್ನೇಹಿತನ ಪ್ರೀತಿಯಿತ್ತು ...ಪ್ರೀತಿಯಲ್ಲೊಂದು ಕಾಳಜಿಯಿತ್ತು ...
ಬಹುಶಃ ಬದುಕಿಗೆ ಬೇಕಾದ ಎಲ್ಲಾ ಭಾವಗಳೂ ಅಲ್ಲಿದ್ದವೇನೋ .....ಕಳಕೊಂಡ ಬದುಕ ಪ್ರೀತಿ ಮತ್ತವಳಿಗೆ ದಕ್ಕಿತ್ತು !
ಯಾರಿಗೂ ಕಾಯದ ಕಾಲ ಹೀಗೇ ಸಾಗಿತ್ತು ...
ಅಂತದ್ದೇ ಒಂದು ದಿನ ...
ಮುಸ್ಸಂಜೆಯ ತಂಗಾಳಿಗೆ ಮೈಯೊಡ್ದಿ ಅವನು ಹೇಳಿದ್ದ ...
ಗೆಳತಿ ....ತುಂಬಾ ದಿನದಿಂದ ಬಚ್ಚಿಟ್ಟುಕೊಂಡ ಭಾವ ಇದು ...ನಂಗೇ ಗೊತ್ತಿಲ್ಲದೇ ನಾ ನಿನ್ನೆಡೆಗೆ ವಾಲಿದ್ದೇನೆ...ಹೇಳೋಕೆ ಧೈರ್ಯ ಇಲ್ಲದೇ ಹೇಳದೆ ಇರಲೂ ಅಗದೇ ಅದೆಷ್ಟೋ ನೀರವ ರಾತ್ರಿಗಳು ಸಂದ ಮೇಲೆ ಇವತ್ತು .... ..ಇವತ್ತು..ನಿನ್ನೆದುರು ಮಂಡಿಯೂರಿ ಕೇಳ ಬಂದೆ ...ನೀ ನನ್ನ ಜೀವದ ಗೆಳತಿ ...ಜೀವನದ ಸಂಗಾತಿಯಾಗು ಬಾ ......
ಅಲೆಯೊಂದಕ್ಕೆ ಮುಖವೊಡ್ಡಿ ಖುಷಿಸುತ್ತಿರೋವಾಗ ಬಂದ ಅದೇ ಅಲೆಗೆ ಕೊಚ್ಚಿ ಹೋದ ಭಾವ ಅವಳದ್ದು !!
ತುಂಬಾನೇ ಇಷ್ಟ ಪಡೋ ಅಲೆಯೊಂದು ಅವಳನ್ನೆ ಎಳೆದುಕೊಂಡು ಹೋಗಿತ್ತಲ್ಲಿ ...
ಸ್ವಚ್ಚ ಸುಂದರ ಪರಿಶುದ್ದ ಸ್ನೇಹ ನಮ್ಮದೆಂಬ ಅವಳ ಮನದ ಭಾವವನ್ನೂ ಕೊಚ್ಚಿ ಹೋಗೋ ಅಷ್ಟು ಶಕ್ತಿ ಹೊಂದಿದ್ದ ಆ ಅಲೆಯನ್ನು ನೋಡಿ ಕ್ಷಣವೊಂದಕ್ಕೆ ಅವಳೂ ನಿಬ್ಬೆರಳಾಗಿದ್ದಳು...
ಆಗಷ್ಟೇ ಪಡಕೊಂಡ ಸ್ನೇಹವಲ್ಲದ ಪ್ರೇಮದ ಪ್ರೀತಿ ಅವಳ ಬದುಕ ಪ್ರೀತಿಯನ್ನ ಅಕ್ಷರಶಃ ಕೊಂದಿತ್ತು ...
ಸ್ನೇಹಕ್ಕೂ ಮೀರಿದ ಪ್ರೀತಿಯ ಭಾವ ಅವಳಿಗ್ಯಾವತ್ತೂ ಅನುಭವವಾಗಿರಲೇ ಇಲ್ಲ ...ಅವನಿಗಾ ಭಾವ ಬರೋ ತರ ತಾನ್ಯಾವತ್ತು ನಡಕೊಂಡೆ ಅಂತ ಒಬ್ಬಂಟಿಯಾಗಿ ಕೂತು ಅದೆಷ್ಟೋ ಮುಸ್ಸಂಜೆಯಲ್ಲಿ ತನ್ನನ್ನೇ ತಾ ಪ್ರಶ್ನಿಸಿಕೊಂಡಳು .....ಅದು ಅವ ಅಂದುಕೊಂಡ ಭಾವ ಕಣೇ ನೀನ್ಯಾಕೆ ಅಷ್ಟು ಬೇಸರ ಮಾಡ್ತೀಯಾ ಆ ಭಾವಕ್ಕೆ ಅಂತ ಸಂತೈಸ ಬರೋ ಮನವನ್ನ ದೂರ ಕಳಿಸಿ ಕಳಿಸಿ ತನ್ನನ್ನ ತಾ ಕೇಳುತ್ತಿದ್ದಳು ...
ಕೊನೆಗೊಮ್ಮೆ ಸಿಕ್ಕ ಉತ್ತರ ಮಾತ್ರ ಅವಳನ್ನ ಮಂಕಾಗಿಸಿತ್ತು ...
"ಹುಚ್ಚು ಹುಡುಗಿ ...ಹುಡುಗನೊಟ್ಟಿಗಿನ ಸ್ನೇಹ ತುಂಬಾ ದಿನ ಪರಿಶುದ್ಧ ಸ್ನೇಹವಾಗಿ ಉಳಿಯಲ್ಲ ಕಣೇ ...ಸ್ನೇಹ ಕಾರಣವಿಲ್ಲದೇ ಪ್ರೀತಿಯಾಗಿ ಹೋಗುತ್ತೆ ...ನಿನ್ನೀ ಸ್ನೇಹದ ಸಲುಗೆಯೇ ,ಆತ್ಮೀಯತೆಯ ಭಾವವೆ ಅವನಿಗೆ ನಿನ್ನದೂ ಪ್ರೀತಿ ಅನ್ನಿಸಿರಬಹುದು ....ನೀ ಹಂಚಿಕೊಂಡ ನಿನ್ನ ದುಃಖ ,ತಲೆಯಿರಿಸಿ ಅತ್ತ ಕಣ್ಣ ಹನಿ ಅವನ ಎದೆಗೆ ನಿನ್ನ ಮಧುರ ಪ್ರೀತಿಯ ಅನುಭವ ನೀಡಿದೆ ಗೆಳತಿ ....ಬೇಸರಿಸದಿರು ....ಅವನ ಪ್ರೀತಿಯನ್ನ ಒಪ್ಪಿ ಅಪ್ಪಿಕೊಂಡುಬಿಡು ಒಮ್ಮೆ " ಮಾತಾಡಿದ ಮನವನ್ನ ಧಿಕ್ಕರಿಸಿ ಅಂದಿನಿಂದ ಮನದ ಮಾತನ್ನ ಕೇಳೋದನ್ನ ಬಿಟ್ಟಿದ್ದಳು ....
ಅದೇ ಮುಸ್ಸಂಜೆಯಲ್ಲಿ ಒಬ್ಬಂಟಿಯಾಗಿ ಬಿಕ್ಕಿ ಬಿಕ್ಕಿ ಅತ್ತಾಗ ಸಂತೈಸ ಬರೋಕೆ ಅವನಿರಲಿಲ್ಲ ..ಕಣ್ಣೀರ ಹನಿಯಾಗಿ ಕೈ ಇಂದ ಜಾರಿ ಹೋಗಿದ್ದ ...
ಮತ್ತದೇ ವರ್ಷದ ಹಿಂದಿನ ಬದುಕಿನೆಡೆಗೆ ಫ಼ೆದರ್ ಲೈಟ್ ಆಗಿರೋ ಬದುಕಿನೆಡೆಗೆ ಮುಖ ಮಾಡಿದ್ದಳು ..ಸ್ನೇಹದ ಆತ್ಮೀಯತೆಯೊಂದನ್ನು ಕಳಕೊಂಡ ಭಾರದ ಮನದೊಂದಿಗೆ ....
ಮೊದಲೇ ಮಿತಭಾಷಿಯಾಗಿದ್ದ ಅವಳು ಈಗ ಅಕ್ಷರಶಃ ಮೌನಿ...
ಹುಡುಗರನ್ನ ನೋಡೋಕೂ ಭಯ ಪಡೋ ಹುಡುಗಿಯಾಗಿ ಬಿಟ್ಟಿರೋ ಈ ಹುಡುಗಿ ...ಹುಡುಗು ಬುದ್ದಿಯಿಲ್ಲ ....ಎಲ್ಲಾ ಭಾವಕ್ಕೂ ಒಂದೆ ಭಾವ ...ಮೌನದ ಸತ್ವ ಇಲ್ಲದ ನಗು ಮಾತ್ರ ಅವಳದೆನ್ನೋ ತರದ ಭಾವ ...
ಕಳಕೊಂಡ ಸ್ನೇಹವನ್ನ ಹುಡುಕಿ ಎಲ್ಲೂ ಸಿಗದೆ ಕೊನೆಗೆ ಪ್ರೀತಿ ಒಪ್ಪಿ ಕೊಳ್ಳದಿರೋದೆ ತಪ್ಪು ಅಂತ ಕೂಗಿ ಕೂಗಿ ಹೇಳೋ ಮನದ ಮೇಲೂ ಬೇಸರವೆನೆಸಿ ...ಸ್ನೇಹದ ಮುಖವಾಡದ ಹುಡುಗನ ಮೇಲೆ ಕರುಣೆ ತೋರಿ ....ಇನಿಯನಾಗಿ ಕಾಣದ ಪ್ರೀತಿ ಸ್ನೇಹದ ಪರಿಯನ್ನೇ ನೀಡೋ ಪರಿಯನ್ನ ದಿಟ್ಟಿಸಿ.....ಮತ್ತದೇ ನೀರವ ಸಂಜೆಗಳಲ್ಲಿ ಬರದಿದ್ದ ಚಂದಿರನನ್ನು ಹುಡುಕುತ್ತಾ ಮೂಕವಾಗಿ ರೋದಿಸೋ ಅವಳ ಬಗ್ಗೆ ಮರುಕವಿದೆ ...
ಈಗಲೂ ಗೆಳೆಯನಾಗಿ ಬಂದಿದ್ದ ಅವನ ಬಗ್ಗೆ ಅವಳಿಗೆ ಸ್ವಚ್ಚ ಸ್ನೇಹದ ಪ್ರೀತಿಯಿದೆ ....ಸ್ನೇಹಿತೆಯಾಗಿ ಆಧರಿಸೋ ಮನವಿದೆ ...ಪ್ರೀತಿಯ ಸ್ಪರ್ಶದ ಆಶಯವಿದೆ ....
ತಲೆ ನೇವರಿಸೋ ಆಸೆಯಿದೆ ..
ಕನಸಲ್ಲಿ ರಾಜಕುಮಾರನಾಗಿ ಅದೇ ಹುಡುಗ ಬಂದಾಗ ಬದುಕಿನಿಂದ ಎದ್ದು ಹೋಗೋ ಅಷ್ಟು ಅಸಹನೀಯ ಭಾವವಿದೆ ಆ ಪ್ರೀತಿಯ ಬಗ್ಗೆ ....
ತಲೆಗೊಂದು ಮೊಟಕಿ ನೀ ನನ್ನ ಗೆಳೆಯ ಕಣೋ ...ಮಧುರ ಪ್ರೀತಿಯನ್ನ ಕೊಡೋ ಇನಿಯನಾಗ್ತೀನಿ ಅನ್ನೋ ಹಟ ಬಿಟ್ಟು ಮೃದು ಮಧುರ ಗೆಳೆತನವನ್ನ ಮರಳಿ ಕೊಡ್ತೀನಿ ಅಂತ ಹೇಳೋ ಅವನ ಒಂದು ಮಾತಿಗಾಗಿ ಕಾಯ್ತಾ ...
ಮತ್ತದೇ ಭಾವಕ್ಕೆ ಭಾವವಾಗೋ ಗೆಳೆಯನ ನಿರೀಕ್ಷೆ ಮಾಡೋ ಹುಚ್ಚು ಮನಸ್ಸಿದೆ .....
ಈ ಹುಡುಗಾ ಪರಿಚಿತನಾ ....????...ಪೂರ್ತಿಯಾಗಿ ಅಪರಿಚಿತನಾ ???
ಅವತ್ತು .....ಪರಿಚಿತನಾಗಿದ್ದ ಅಪರಿಚಿತ..... ಇವತ್ತು ....ಅಪರಿಚಿತನಂತಿರೋ ಪರಿಚಿತ !!
(ಅಕ್ಷರ ಅವೇ ...ಅದ್ರೂ ಅಪರಿಚಿತನಾಗೋ ಅತೀ ಪರಿಚಿತನ ನೋವ ಭಾವ ಅವಳಿಗೆ ಮಾತ್ರಾ ಗೊತ್ತೇನೊ )