Saturday, August 9, 2014

ನೀನೆಂದರೆ ನನ್ನೊಳಗೆ...



ಸುಮ್ಮನೆ ಕಳೆದು ಹೋಗ್ತಿರೋ ಸೋಮಾರಿ ಸಂಜೆಗಳಿವು.
ತಾರಸಿಯ ಮೇಲೆ ನಿಂತು ಬೀಳೋ ಮಳೆಹನಿಗಳೆಲ್ಲವನ್ನೂ ಜೋಪಾನ ಮಾಡೋ ಹುಚ್ಚು ಈಗೀಗ.ಆ ಹನಿಗಳೋ ಕೈಯಿಂದ ಜಾರೋವಾಗ ನೆನಪಲ್ಲಿ ನಿನ್ನ ಮೂಡಿಸಿ ನೆಲ ತಾಕಿ ನಗುತ್ವೆ.ಅಂದುಕೊಳ್ತೀನಿ ಒಂದು ದಿನವಾದರೂ ನಿನ್ನ ನೆನಪಾಗದೆ ಇರಬೇಕೆಂದು.ನೆನಪಿಗೂ ನಿನ್ನ ಮೇಲೆಯೇ ಮನಸು ಮಹರಾಯ.
ದಿನಕ್ಕಿಂತ ಜಾಸ್ತಿ ಸುರಿತಿರೋ ಈ ಮಳೆ ಇವತ್ಯಾಕೋ ನೀ ಜೊತೆ ಇರಬೇಕಿತ್ತು ಅನ್ನೋ ಭಾವವ ಮೂಡಿಸಿ ಮರೆಯಾಯ್ತು.
ನೆನಪುಗಳಲ್ಲಿ ನೀ ಜೀವಂತ...
                                                                 *    *   *
             ತಿಂಗಳುಗಳೇ ಆಗಿ ಹೋದವು ನಿನ್ನೊಟ್ಟಿಗೆ ಮಾತಿಲ್ಲದೇ.ಪ್ರತಿ ದಿನ ಸುರಿಯೋ ಮಳೆ ನಿನ್ನ ನೆನಪ ಮೂಡಿಸಿ ಮರೆಯಾದ್ರೆ ತಲೆ ಕೊಡವಿ ಎದ್ದುಬಿಡ್ತೀನಿ ನೀ ಮತ್ತೆ ನೆನಪಾಗದಿರಲಿ ಅನ್ನೋ ಕಾರಣಕ್ಕೆ.ಒಂದಿಷ್ಟು ದಿನ ನನ್ನ ಪಾಡಿಗೆ ನನ್ನ ಬಿಟ್ಟುಬಿಡು ಅಂದಿದ್ದೆ. ನಿನಗೋ ಕೆಟ್ಟ ಹಠ.ನಾ ಸಾರಿ ಅನ್ನೋ ತನಕ ನೀ ಮಾತಾಡಲಾರೆ,ನೀ ಮಾತಾಡೋ ತನಕ ನಾ ಸಾರಿ ಅನ್ನಲಾರೆ.ಇರಲಿ ಬಿಡು ಮಾತಿಲ್ಲದ ,ಗದ್ದಲವಿಲ್ಲದ ಈ ಸಂಜೆಗಳೇ ಹಿತವಾಗಿದೆ ನಂಗೆ ಕೊನೆಪಕ್ಷ ಸುಮ್ಮ ಸುಮ್ಮನೆ ಕಾಡಿಸೋರಿಲ್ಲದೇ. ಅಮ್ಮನ ಕಾಳಜಿಯ ಕಂಗಳು,ಬೆಚ್ಚಗಿನ ಅಪ್ಪುಗೆಯಲ್ಲಿ ಈ ಮಲೆನಾಡ ಮಳೆ ತುಂಬಾನೆ ಹಿತವಾಗಿದೆ.ನೀನಿರಬೇಕಿತ್ತು ಈಗಿಲ್ಲಿ.

                 ಕಾಗದದ ದೋಣಿ ಮಾಡಿ ತೋಟದ ಹೊಳೆಯಲ್ಲಿ ತೇಲಿ ಬಿಡೋವಾಗ ಅವ  ಮುಖ ಊದಿಸ್ತಾನೆ ನನಗೆಲ್ಲೋ ಹುಚ್ಚು ಅನ್ನೋ ತರ ನೋಡಿ.ನೀನೂ ಹಾಗೆಯೇ ಅಲ್ವಾ ಚಿಕ್ಕ ಚಿಕ್ಕ ಖುಷಿಗಳನ್ನ ಮುಟ್ಟಿಯೂ ನೋಡದೇ ಹೊರಟುಬಿಡ್ತೀಯ.ಬೇಸರಿಸಿ ಕೂತಾಗ ಏನಾಯ್ತು ಅನ್ನೋದನ್ನೂ ಕೇಳದೇ ನಿನ್ನ ಪಾಡಿಗೆ ಸುಮ್ಮನಾಗಿಬಿಡ್ತೀಯ ನೋಡು ಆಗೆಲ್ಲಾ ಕೂಗಾಡ್ತೀನಿ  ನೀ ನನ್ನ ಭಾವಗಳ ಜೊತೆಗೆ ಮಾತಾಡಲ್ಲ ಅಂತ.ಅದೆಷ್ಟೋ ಜಗಳ,ಸಿಟ್ಟು,ಬೇಸರಗಳ ನಂತರವೂ ಒಂದಿನಿತೂ ಬೇಸರಿಸದೇ ಹಾಗೆಯೇ ಮಾತ ಶುರುವಿಡ್ತೀಯಲ್ಲಾ ನನ್ನೊಳಗಿರೋ ನಂಗೆ ನನ್ನ ಮೇಲೆಯೇ ಮುನಿಸಾಗಿಬಿಡುತ್ತೆ ಆಗೆಲ್ಲಾ.ನೀ ತೋರೋ ಈ ಪ್ರೀತಿಗೆ ಕಣ್ಣಂಚು ಮಾತಾಡುತ್ತೆ ಈಗೀಗ.

 ಮನಸು ಮುನಿಸುಗಳ ನಡುವೆಯೇ  ನನ್ನೊಳಗೆ ನೀ ಬಂದು  ನೀನೇ ನಾನಾಗಿದ್ದು.
ಹೃದಯ ಕಡಲ ಸನಿಹ ಸೆಳೆದಿದ್ದೂ ನೀನೇ.
ನಂಗೀಗ ಈ ಕಡಲ ಮೇಲೆ ಪ್ರೀತಿಯಾಗಿದೆ ನೋಡು.

                ಮುನಿಸಂದ್ರೆ ನೀನು...ಮಾತಂದ್ರೆ ನೀನು. ಒಮ್ಮೆಮ್ಮೆ ಮೌನಕ್ಕೂ ನೀನೇ ಬೇಕಾಗ್ತೀಯ ನೋಡು.ಗದ್ದಲ ಮಾಡೋ ಮೌನಕ್ಕೆ ನೀ ಕೈ ಹಿಡಿದು ಜೊತೆ ಕೂತ್ರೆ ಮಧ್ಯ ರಾತ್ರಿಯ ತನಕ ಸುಮ್ಮನೆ ಕೂತಿದ್ದಿದೆ.ಆ ತಿರುವಲ್ಲಿ ನೀ ನಂಗಾಗಿ ಕಾದಿರುವೆಯೇನೋ ಅನ್ನೋ ಭಾವಕ್ಕೆ ಹೆಜ್ಜೆಗಳು ನನ್ನನ್ನಿಲ್ಲಿಯೇ ನಿಲ್ಲಿಸಿಬಿಟ್ಟಿವೆ ನೋಡು ಬೇಕಾದರೆ ನೀನೇ ಮುಂದೆ ಬಾ ಅನ್ನೋ ಭಾವಕ್ಕೆ!
ಒಪ್ಪಿಕೊಳ್ತೀನಿ ಪಾಪುವಿನ ತರಹ ನೀ ನನ್ನ ನೋಡಿಕೊಳ್ತೀಯ ಅಂತ.ಆದರೂ ಬದಲಾಗಿರೋ ನಿನ್ನ priorityಗಳ ಬಗೆಗಿನ ಬೇಸರ ನನ್ನನ್ನ ನಿನ್ನೆಡೆಗೆ ಮೆತ್ತಗಾಗುವುದನ್ನ ತಡೆದು ಬಿಟ್ಟಿವೆ.
ಆದರೂ ನನ್ನೆಲ್ಲಾ ಮಧುರ ಭಾವಗಳ ಮೊದಲಿಗ ನೀನು.

ಪ್ರೀತಿಯ ನಾವೆಗೆ ನೀ ಎನ್ನ ನಾವಿಗ.


   


                       ಮಳೆ ಹನಿಗಳ ಹಿಡಿದಿದ್ದು ಸಾಕು ,ಈಗಷ್ಟೇ ಜ್ವರ ಬಿಟ್ಟಿದೆ ನಿಂಗೆ,ಕೂರಬೇಡ ಗಾಳಿಯಲ್ಲಿ ಅಂತಂದು ಹೊರಡಿಸಿಬಿಟ್ರು ಅಮ್ಮ ಇಲ್ಲಿಂದ.
ನಿನ್ನ ಜೊತೆಗಿನ ಮಾತುಗಳೂ ಜೊತೆಬರ್ತಿವೆ.ಮಳೆಯೂ ಕಾಯುತಿದೆ ನಿಂಗಾಗಿ. ಮನವೂ ಕಾಯುತಿದೆ ಬೆಚ್ಚಗಾಗೋಕೆ.
 ನೀ ಬಂದ್ರೆ ಅಮ್ಮನೂ ಬಿಡ್ತಾರೆ ಮಳೆಯಲ್ಲಿ ನೆನೆಯೋಕೆ .ಬಂದುಬಿಡೋ ಒಮ್ಮೆ ಮಳೆಯಲ್ಲಿ ಜೊತೆ ನಡೆಯಬೇಕಿದೆ ನಿನ್ನೊಡನೆ ನಾ  ...
                                                            *      *       *

ನಿರುಪಾಯಿಯ ಭಾವ ಸಂಭ್ರಮಕ್ಕೆ ಎರಡು ವರ್ಷಗಳ ಖುಷಿ .ಸಿಕ್ಕಿರೋ ,ಪಡೆದಿರೋ ಈ  ಸ್ನೇಹಗಳಿಗೆ ....
ಪ್ರೀತಿಯಿಂದ ,
ನಿರುಪಾಯಿ .

11 comments:

  1. ರಾಮ ಎಲ್ಲೆಲ್ಲಿಯೂ ಇರುತ್ತಾನೆ ಅನ್ನುವ ಅಚಲ ವಿಶ್ವಾಸ ಹನುಮಂತನದು.. ವಿರಾಮ, ಅಲ್ಪ ವಿರಾಮ, ಪೂರ್ಣ ವಿರಾಮ ಎಲ್ಲೆಡೆಯೂ..

    ಒಂದು ಚಿಕ್ಕ ವಿರಾಮ ಮನಸ್ಸನ್ನು ಹಗುರಾಗಿಸಿ, ಬೆಚ್ಚಗಾಗಿಸಿ, ಗೂಡಿನಲ್ಲಿರುವ ಹಕ್ಕಿಯ ಮರಿಗಳನ್ನು ಸಂತೈಸುವ ತಾಯಿ.. ಇವೆಲ್ಲಾ ಮನಸ್ಸನ್ನು ಹುರಿ ಮಾಡಿ ಮತ್ತಷ್ಟು ಸಾಧನೆಗಳಿಗೆ ಮುನ್ನುಗಿಸುವಂತೆ ಮಾಡುತ್ತದೆ..

    ನಿನ್ನ ಬರಹದಲ್ಲಿ ಇಣುಕುವ ಮಮತೆ, ಕಾಳಜಿ, ಪ್ರೀತಿ, ಮಮಕಾರ ಆಹಾ ಅದನ್ನು ಓದುತ್ತಾ ಹೋದ ಹಾಗೆ ಮಳೆ ನೀರಿನ ಹನಿಗಳನ್ನು ನೋಡಿದ ಹಾಗೆ ಆಗುತ್ತದೆ.. ಮಳೆ ಹನಿಯು ಒಂದು ಹನಿ ದಪ್ಪ, ಒಂದು ಹನಿ ಸಣ್ಣ, ಇನ್ನೊಂದು ಸೂಜಿಯ ಹಾಗೆ ಚೂಪಾದರೆ, ಇನ್ನೊಂದು ನಿಧಾನವಾಗಿ ನಾ ಬಂದೆ ನಾನಿರುವೆ ಎನ್ನುವ ಧೈರ್ಯ ಕೊಡುತ್ತದೆ..

    ಸೂಪರ್ ಮಗಳೇ.. ಪ್ರತಿ ಸಾಲುಗಳು ಇಷ್ಟವಾದವು.. ಅದರಲ್ಲೂ
    "ಹನಿಗಳೋ ಕೈಯಿಂದ ಜಾರೋವಾಗ ನೆನಪಲ್ಲಿ ನಿನ್ನ ಮೂಡಿಸಿ ನೆಲ ತಾಕಿ ನಗುತ್ವೆ" ಸೂಪರ್ ಸೂಪರ್ ಸೂಪರ್

    ಮಸ್ತ್ ಬರಹ.. ಮುದ್ದಾಗಿದೆ ಮಗಳೇ

    ReplyDelete
  2. ಚೆಂದ ಬರದ್ದೆ ಬಿ.ಪಿ.(ಭಾಗ್ಯ ಪಾಪು) :-)

    ReplyDelete
  3. Coming to the point ಪ್ರತೀ ಸಲಕ್ಕಿಂತ ಭಿನ್ನವಾಗಿ ಬರೆಯೋ ಪ್ರಯತ್ನ ಮಾಡಿದಂಗಿದೆ.ಅದು ಇಷ್ಟವಾಯ್ತು..ಪ್ರತೀ ಪ್ಯಾರಾದಲ್ಲೂ ಕಾವ್ಯದ ಝಲಕ್ ಖುಷಿ ಕೊಡ್ತು. ಹೊಸ ಪ್ರಯತ್ನಕ್ಕೊಂದು ಗುಡ್ ಲಕ್ ಪುಟ್ಟಿ :-)

    ReplyDelete
  4. ಮನಸು ಮುನಿಸುಗಳ ನಡುವೆಯೇ ನನ್ನೊಳಗೆ ನೀ ಬಂದು ನೀನೇ ನಾನಾಗಿದ್ದು.
    ಮಸ್ತ್ ಮಸ್ತ್

    ReplyDelete
  5. ಬದುಕಿನಲ್ಲಿ ಅವರವರ priorityಗಳು ಅವರವರದೇ ನಿಜ.
    ಮಳೆಯಲಿ ಜೋಡಿಯಾಗಿ ನೆನೆಯುವ ಬಯಕೆ ಇದೀಗ ನನ್ನಲ್ಲೂ ಮೂಡಿತು, ಒಪ್ಪುವಳೇ ಎನ್ನ ಮನೆ-ಮನದೊಡತಿ?

    ReplyDelete
  6. ಚಂದದ ಭಾವ ಗುಚ್ಛ - ಮಳೆ ಹನಿಗಳ ಹಾಗೇ...
    ನಿರುಪಾಯಿಯ ಭಾವ ಸಂಭ್ರಮದ ಎರಡು ವರ್ಷಗಳ ಖುಷಿಗೆ ಶುಭಾಶಯಗಳು...
    ಹೀಗೇ ಸಾಗುತಿರಲಿ ಅಕ್ಷರ ಸಾಂಗತ್ಯ...

    ReplyDelete
  7. ಬರಹಕ್ಕೂ ಕಾವ್ಯಕ್ಕೂ ಭಾವಕ್ಕೂ ಎಲ್ಲೋ ಪ್ರೀತಿಯಾದ ಅನುಭವ ಕೊಟ್ಟ ಬರಹ...ತುಂಬಾ ವಿಭಿನ್ನವಾಗಿ ಸುಂದರವಾಗಿ ಮೂಡಿಬಂದಂತ ಅನುಭವ...:)

    ReplyDelete
  8. ನಿನ್ನೀ ಚಂದ ಚಂದದ ಸಾಲುಗಳಿಗೆ
    ನವಿರಾದ ಭಾವಗಳಿಗೆ ಮನಸ್ಸು ಮೃದುವಾಗಿಬಿಡುತ್ತವೆ...
    ತುಂಬಾ ಹತ್ತಿರವೆನಿಸುವ ಸಾಲುಗಳು.......
    ತನ್ನತನವನ್ನು ಬಿಟ್ಟುಕೊಡದ ಬರಹಗಳು...
    ಚಂದ ಚಂದ....

    ಎರಡು ಹನ್ನೆರಡಾಗಲಿ.....
    ಶುಕ್ರಿ...ಯಾ......

    ReplyDelete
  9. ಮೊದಲಿಗೆ ಮುದ್ದುಮ್ಮನ ಎರಡು ವರ್ಷಗಳ ಅಕ್ಷರ ಪಯಣಕ್ಕೆ ಶುಭಾಶಯಗಳು... ಅಭಿನಂದನೆಗಳು...
    ಬರಹ..
    ಕಾದು ಬರಡಾದ ಇಳೆಗೆ ಮಳೆಹನಿಯು ಬಿದ್ದಂಗಿತ್ತು..
    ಇಷ್ತಾಯ್ತು ಹುಡುಗಿ..
    ಬರೀತಿರು...

    ReplyDelete
  10. ಮಳೆ ... ಮಳೆ ಜೊತೆಗೆ ಕಾಡೋ ಮಳೆಹುಡುಗಾ ... ಆತನೊಂದಿಗಿನ ಬೆಚ್ಚಗಿನ ಭಾವಗಳು ..

    ಮುಚ್ಚಿಡೋ ಭಾವಗಳ ಜೊತೆ ಎಚ್ಚರಿಸೋ ಅಮ್ಮಾ .. ಈ ಎಲ್ಲದರ ನಡುವೆ ಮುನಿಸು ತೊರೆದು ಮಾತಾನಾಡೋ ಎನ್ನುವ ಮುದ್ದಾದ ಹುಡುಗಿ ....

    combination ಸೂಪರ್ ...

    ಭಾವಗಳ ಜೊತೆಯಲ್ಲೇ ಮಳೆಯಲ್ಲೂ ನೆನೆದ ಅನುಭವ ...

    ಎರಡರ ಸಂಭ್ರಮಕ್ಕೆ ಶುಭಾಷಯಗಳೊಂದಿಗೆ ಖುಷಿ ಮತ್ತು ಖುಷಿ ಕೊಡುವ ಭಾವಗಳು ನೂರಾಗಲಿ ಎಂಬ ಹಾರೈಕೆ ...

    ReplyDelete