ಕಣ್ಣು ತೋಯಿಸಿಕೊಳ್ಳೋ ,ದಿಂಬು ಒದ್ದೆಯಾಗಿಸೋ ಈ ರಾತ್ರಿಗಳಲ್ಲಿ ತೀರಾ ಅನ್ನೋವಷ್ಟು ನೆನಪಾಗ್ತೀಯ ನೀ.
ನಿನ್ನ ಮಡಿಲಲ್ಲಿ ಮಲಗಿ ಮನಸು ಹಗುರಾಗೋ ತನಕ ಅಳಬೇಕನಿಸುತ್ತೆ.ದಕ್ಕಿರೋ ಅದೆಷ್ಟೋ ಅವ್ಯಕ್ತ ಖುಷಿಗಳನ್ನ ಹೇಳಿ ನಗಬೇಕನಿಸುತ್ತೆ.ಎದುರು ಕೂರಿಸಿಕೊಂಡು ಗಂಟೆಗಟ್ಟಲೇ ಮಾತನಾಡಬೇಕನಿಸುತ್ತೆ.ಆದರೆ ಮೊದಲಿನಿಂದಲೂ ಹಾಗೆಯೇ ಅಲ್ವಾ ನೀ ಅಲ್ಲಿ ನಾ ಇಲ್ಲಿ.ಜೊತೆಗೊಂದು ನಿಟ್ಟುಸಿರು.
ಮಾತು ಗದ್ದಲ ಮಾಡೋವಾಗ ಮೌನವ ಹೇಳಿಕೊಡ್ತೀಯ.
ಇಳಿ ಸಂಜೆಯ ನನ್ನೆಲ್ಲಾ ಮೌನಗಳಿಗೆ ಅಕ್ಷರಶಃ ಮಾತು ಕಲಿಸಿಬಿಡ್ತೀಯ.
ನನ್ನ ಮತ್ತು ಅವನದ್ದೊಂದು ಸಾದಾ ಸೀದ ಪ್ರಪಂಚವಿದೆ.ಅಲ್ಲಿ ತೀರಾ ಅನ್ನೋವಷ್ಟು ಮುದ್ದಿದೆ.ಪ್ರೀತಿ ಜಾಸ್ತಿಯಾದಾಗ ಗುದ್ದಾಟವಿದೆ.ಆಗಸದ ಕೌತುಕಗಳ ಬಗೆಗಿಷ್ಟು ಆಶ್ಚರ್ಯವಿದೆ.start clusterನಿಂದ ಶುರುವಾಗಿ ಮೊನ್ನೆಯ ’ಯಾನ’ದ ತನಕದ ನಮ್ಮ ಮಾತುಗಳ ಜಗತ್ತಿಗೆ ನಿಂಗೆ ಮಾತ್ರ ಪ್ರವೇಶ.
ಆಟ ಆಡೋಕೆ ಯಾರೂ ಇಲ್ಲ ಅಂತ ಅವ ಬೇಸರಿಸಿದ್ರೆ ಜೊತೆಯಾಗ್ತೀಯ ಆಟಕ್ಕೆ.ಈ ಊಟ ಬೇಡ ಅಂತ ನಾ ಸಿಟ್ಟು ಮಾಡಿದ್ರೆ ನಂಗಾಗಿ ಬೇರೆಯದನ್ನ ಮಾಡಿಕೊಡ್ತೀಯ ಅರೆ ಕ್ಷಣಕ್ಕೆ.ತೋಟದ ಕೆಲಸಕ್ಕೆ ಯಾರೂ ಬಂದಿಲ್ಲ ಅಂತ ಅವರನ್ನೋಕೂ ಮುಂಚೆಯೇ ತೋಟದಲ್ಲಿರ್ತೀಯ.ಮನೆಯವರು ಹುಷಾರಿಲ್ಲದೇ ಮಲಗಿದ್ರೆ ನೀ ಅವತ್ತಿಡೀ ಅವರ ಕೆಲಸಕ್ಕೆ ನಿಲ್ತೀಯ...ಎಲ್ಲರ ಇಷ್ಟ ಕಷ್ಟಗಳೂ ಗೊತ್ತು ನಿಂಗೆ.
ಮನೆಯಲ್ಲೊಂದು ದಿನ ನೀ ಇಲ್ಲದಿದ್ರೆ ಎಲ್ಲವೂ ಖಾಲಿ ಖಾಲಿ ಅನ್ನಿಸಿಬಿಡುತ್ತೆ ನಮ್ಮಗಳಿಗೆ...
ನಿನ್ನೀ ಪ್ರೇಮಮಯೀ ಅಸ್ತಿತ್ವಕ್ಕೆ ನನ್ನದೊಂದು ನಮನ.
ಇಂತಿಪ್ಪ ನೀನು ಬೇಸರಿಸಿದ್ದು ನಾ ನೋಡಿಯೇ ಇಲ್ಲ.ಸುಸ್ತು ಅನ್ನೋ ಪದದ ಅರ್ಥ ಗೊತ್ತಿಲ್ಲದ ತರ ಬೆಳಿಗ್ಗೆಯಿಂದ ರಾತ್ರಿಯ ತನಕ ಎಲ್ಲರನ್ನೂ,ಎಲ್ಲವನ್ನೂ ನಗು ನಗುತ್ತಾ ನಿಭಾಯಿಸೋ ನಿನ್ನೀ ತಾಳ್ಮೆಗೆ ನನ್ನದ್ದೊಂದು ನಮನ.
ನಿನ್ನವರಿಗಾಗಿ ನೀ ಮಾಡೋ ಅದೆಷ್ಟೋ sacrifice ಗಳಿಗೆ ಕಣ್ಣು ತುಂಬ ಬರುತ್ತೆ ನಂಗೆ.
ಪ್ರೀತಿಯೆಂದರೆ ನೀ...
ಭಾವಗಳ ಪ್ರತಿರೂಪ ನೀ..
ಧನ್ಯತೆಯ ಭಾವ ನೀ.
ಮಾತು ಧಾತುವಿನ ಸಮ್ಮಿಲನ ನೀ.
ನಿನ್ನೊಟ್ಟಿಗೆ ಮಾಡಿದ್ದ ಅದೆಷ್ಟೋ ಹಠಗಳಿವೆ.ಈಗಲೂ ಅಪರೂಪಕ್ಕೆ ಮಾಡೋ ಸಿಟ್ಟುಗಳಿವೆ.friends,ride,treck,trip ಅಂತೆಲ್ಲಾ ಸುತ್ತೋವಾಗ ದಿನಕ್ಕೆ ನೂರು ಸಾರಿ ಹುಷಾರು ಅಂತ ನೀ ಎಚ್ಚರಿಸಿದ್ದಿದೆ.
ಗೊಂದಲಗಲನ್ನೆಲ್ಲಾ ಹಾಗೆಯೇ ಹರವಿಟ್ಟು ನಿನ್ನ ನೋಯಿಸಿದ್ದಿದೆ.ತೀರಾ ಅನ್ನೋವಷ್ಟು ತಲೆ ತಿಂದು ಬೈಸಿಕೊಂಡಿದ್ದಿದೆ.ಕೈ ಮುರಿದುಕೊಂಡಾಗ ತಿಂಗಳುಗಟ್ಟಲೇ ನೀನೇ ಊಟ ಮಾಡಿಸಿದ್ದಿದೆ.
ನಾಲ್ಕು ಹೆಜ್ಜೆ ಜಾಸ್ತಿ ನಡೆದ್ರೂ ಬರ್ತಿದ್ದ ಕಾಲು ನೋವಿಗೆ ನೀ ಮಧ್ಯ ರಾತ್ರಿಯ ತನಕ ಎಣ್ಣೆ ಹಚ್ಚಿ ಕಾಲು ತಿಕ್ತಿದ್ದ ನೆನಪಿದೆ.’ಅಬ್ಬೂ’ ಅಂತ ಅಳೋವಾಗ ನೀ ಸಮಾಧಾನಿಸಿ ಮುತ್ತಿಟ್ಟಿದ್ದಿದೆ.
ನೆನಪೆಂದರೇ....ಮಳೆಬಿಲ್ಲ ಛಾಯೆ.
ಭಾವಗಳಿಗೂ ತುಸು ವಿಶ್ರಾಂತಿ ನೋಡು ಅಂದಿದ್ದೆ ನಾ ಅವತ್ತು ನಿಂಗೆ...ಮನಸು ಮರುಭೂಮಿಯಾಗಿಬಿಟ್ಟೀತು ಜೋಪಾನ ಅಂತಂದೆಯಲ್ಲ ನೀ ,ನೋಡು ಮನದಲ್ಲೀಗ ಸೋನೆಯ ಸೂಚನೆ..
ನೀ ಎನ್ನ ಲಾಲಿಸೋ ಅಮ್ಮ...ಒಮ್ಮೊಮ್ಮೆ ಪ್ರೀತಿ ಮಾಡೋಕಂತಾನೆ ಇರೋ ಅಕ್ಕ...ನಗುವ ಹಂಚಿಕೊಳ್ಳೋ ಆತ್ಮೀಯ... ಒಮ್ಮೊಮ್ಮೆ ಅಳುವಲ್ಲೂ ನಗುವ ತರಿಸೋ ಗೆಳತಿ...ಕನಸುಗಳಿಗೆ ನೀರೆರೆದು ಪೋಷಿಸೋ ,ನೆನಪ ಅಲೆಯಲ್ಲಿ ಕನಸುಗಳು ತೇಲೋವಾಗ ಖುಷಿಸೋ ಆತ್ಮಬಂಧು...ಗುಜರಿಯಾದ ಮನದ ಧೂಳ ಕೊಡವಿ ಸ್ವಚ್ಚ ಮಾಡಿ ಅದು ಮತ್ಯಾವತ್ತೂ ಸಂತೆಯಾಗದಂತೆ ಮಾಡಿಬಿಡೋ ಮಾಯಾವಿ.
ಗೆದ್ದಾಗ ಬೆನ್ನು ತಟ್ಟೋ ,ಸೋತಾಗ ಧೈರ್ಯ ತುಂಬಿ ಬದುಕ ಪಾಠಗಳ ತೀರಾ ನಾಜೂಕಾಗಿ ಹೇಳಿಕೊಡೋ ನೀನೆಂದರೆ ನಮ್ಮಿಬ್ಬರ(ನನ್ನ,ತಮ್ಮನ) ಹೆಮ್ಮೆ.
ನಿನ್ನ ಬಗೆಗೆ ಮಾತಾಡೋದು,ನಿನ್ನೊಟ್ಟಿಗೆ ಮಾತಾಡೋಕೆ ಮಾತುಗಳು ತುಂಬಾ ಉಳಿದಿವೆ....
ಎಲ್ಲರ ಹಿತವ ಗಮನಿಸ್ತಾ ನಿನ್ನ ನೀ ನೆನಪು ಮಾಡಿಕೊಳ್ಳೋಕೆ ಸಮಯ ಎಲ್ಲಿರುತ್ತೆ ಹೇಳು...ನಿನಪಿರಲಿಕ್ಕಿಲ್ಲ ನಿಂಗೆ. ಇವತ್ತು ನಿನ್ನ ಜನುಮ ದಿನ.
ಬದುಕ ರೀತಿಯ ಬದುಕಿಗಿಷ್ಟು ಪ್ರೀತಿಯ ಕೊಟ್ಟ ಇಲ್ಲಿಯವರೆಗಿನ ಬದುಕ ಆತ್ಮೀಯರು ಅನ್ನಿಸಿಕೊಂಡವರೆಲ್ಲರೂ ನಿನ್ನ ಜನುಮ ದಿನವ ಬಚ್ಚಿಟ್ಟುಕೊಂಡ ಇದೇ ತಿಂಗಳಲ್ಲಿ ಜನುಮ ದಿನವ ಆಚರಿಸಿಕೊಳ್ತಿದಾರೆ ಅಂದ್ರೆ ನಂಬಲೇ ಬೇಕು ನೀ!
with a hug,
ನೀ ಪ್ರೀತಿಸೋ ನಿನ್ನವರಿಂದ ನಿನಗೊಂದು ಹ್ಯಾಪಿ ಬರ್ತ್ ಡೇ :)
ಪ್ರೀತಿಯಿಂದ.
happy birthday Dear Kavva
ReplyDeleteI think it's so much beyond the words to say how much gratitude and love you have to wards your mom, that to when you have the gem of the women like Sumi as mom. You have done it fairly well Bhagya. :) - Cheers Vanitakka
ReplyDeleteಅಮ್ಮನೆನ್ನುವವಳು ಈ ಬದುಕಲ್ಲಿ ಏನೆಲ್ಲಾ ಅಲ್ಲವಾ..?
ReplyDeleteನಾವುಗಳು ಮಾಡುವ ತುಂಟಾಟ, ಮೊಂಡಾಟ ಗಳನ್ನೆಲ್ಲಾ ಸೈರಿಸಿಕೊಳ್ಳುವ ತಾಳ್ಮೆ ಅವಳಿಗಲ್ಲದೇ ಬೇರೆರಾರಿಗಿದ್ದೀತು ಹೇಳು..?
ನಾವುಗಳು ಕರೆದುಕೊಳ್ಳುವ 'ಸಾಹಸ' ಕ್ಕೆ ಅಪ್ಪನನ್ನು ಒಪ್ಪಿಸುತ್ತಿವೋ ಬಿಡುತ್ತಿವೋ.. ಅಮ್ಮನನ್ನು ಒಪ್ಪಿಸುವ ಕಾರ್ಯ ಮಾತ್ರ ಸಲೀಸು..
ನಮ್ಮಗಳ ಹುಚ್ಚಾಟವನ್ನು ಬೆಂಬಲಿಸುತ್ತಾಳೆ ಅನ್ನುವುದುದಕ್ಕೆ ಅವಳು ದೊಡ್ದವಳಲ್ಲ..
ನಮ್ಮ ಮೇಲೆ ಅತೀವ ವಿಶ್ವಾಸ ಇಟ್ಟಿರುತ್ತಾಳಲ್ಲ...
ನಾವು ಗೆದ್ದರೆ ಅವಳೇ ಗೆದ್ದಂತೆ. ನಾವು ಸೋತರೆ ಮತ್ತೆ ಎದ್ದು ನಿಲ್ಲಿಸುವ ತಾಕತ್ತು ಇದೆಯಲ್ಲ ಅವಳಿಗೆ...
ಅದಕ್ಕಾಗಿ ಅವಳು ದೊಡ್ಡವಳಾಗಿದ್ದು...
ಅಮ್ಮನೆಂದರೆ ಎಲ್ಲವೂ...
ತುಂಬಾ ಇಷ್ಟವಾಯ್ತು ಬರಹ..
ಅಮ್ಮನಿಗೆ ನನ್ನ ಕಡೆಯಿಂದಲೂ ಹುಟ್ಟು ಹಬ್ಬದ ಶುಭಾಶಯ ತಿಳಿಸು... With lots of Love....
Excellent.....
ReplyDeleteಈಕೆಯ ಬಗೆಗೆ ಬರೆಯುತ್ತಾ ಹೋದಂತೆಲ್ಲ ಅಕ್ಷಯವಾಗುತ್ತಾ ಹೋಗುತ್ತಾಳೆ .. ಎಂದು ಅಮ್ಮನ ಬಗ್ಗೆ ಬರೆದಿದ್ದೆ ..
ReplyDeleteಮೊಗೆದಷ್ಟು ಪ್ರೀತಿ ಕೊಡುವ ಈ ಪುಟ್ಟ ತಂಗಿಯ ಕೊಟ್ಟ ಆ ಅಮ್ಮನಿಗೆ ನನ್ನಿಂದ ಹ್ಯಾಪಿ ಬರ್ತ್ ಡೇ ...
ಅಮ್ಮ ಅಂದರೆ ಅಮ್ಮ ಅಷ್ಟೇ...
ReplyDeleteಶುಭಾಶಯಗಳು ಆಯೀ...
ನಿನ್ನ ಮಮತೆಯ ಮಡಿಲ ಹಾರೈಕೆ ಕಾಯಲಿ ನಮ್ಮಗಳ...
ಪುಸ್ತಕದಲ್ಲಿ ಓದಿದ ನೆನಪು.. ಒಂದು ವಸ್ತು ಕಳೆದು ಹೋಗಿದೆ ಅಂದ್ರೆ ಅದು ಅಮ್ಮ ಹುಡುಕಿಸೋತ ಮೇಲೆ ಮಾತ್ರ ಅಂತ.. ಅಂಥಹ ಸೂಕ್ಷದರ್ಶಕ ಯಂತ್ರ ಅಮ್ಮ..
ReplyDeleteಅಮ್ಮ ನೀನು ಇಬ್ಬರೂ ಗೆಳತಿಯರ ಹಾಗೆ ಸಂಭಾಷಿಸುವುದನ್ನು ನೋಡಿದ್ದೇನೆ.. ಒಬ್ಬರ ಮಿಡಿತ ಇನ್ನೊಬ್ಬರಿಗೆ ಕಾಣುತ್ತದೆ.. ಸುಂದರ ಬರಹಗಳ ಮೂಲಕ ಭುವಿಗೆ ತಂದ ಜೀವದ.. ಭುವಿಗೆ ಬಂದ ದಿನವನ್ನು ಸುಂದರ ಮನ ಕಾಡುವ ಪದಗಳಿಂದ ಅಲಂಕರಿಸಿದ್ದೀಯ..
ದೀವಾರ್ ಚಿತ್ರದಲ್ಲಿ ನಿನ್ನ ಹತ್ತಿರ ಏನಿದೆ ಅಂತ ಹೇಳಿದಾಗ.. ನನ್ನ ಹತ್ತಿರ ಅಮ್ಮ ಇದ್ದಾಳೆ ಎನ್ನುತ್ತಾರೆ.. ಇದೊಂದೇ ಸಂಭಾಷಣೆ ಸಾಕು ಅಮ್ಮನ ತೂಕವನ್ನು ಹೇಳೋಕೆ..
ಸೂಪರ್ ಬರಹ ಮಗಳೇ.. ಮುದ್ದಾದ ತಾಯಿಯಂತ ಮಗಳನ್ನು ಕೊಟ್ಟ ನಿನ್ನ ಜನನಿಗೆ ನನ್ನ ಪರಿವಾರದ ಎಲ್ಲರ ಕಡೆಯಿಂದ ಶುಭಾಶಯಗಳು
ಹಲವು ಭಾವಗಳಿಗೆ ಒಗ್ಗುವ ಆಕೆ, ಒಮ್ಮೆಲೆ ಎಲ್ಲವೂ ಆಗುವ ಪರಿ ಖುಷಿಕೊಟ್ಟಿತು.
ReplyDeleteಅಮ್ಮ ನೀನು ಇಬ್ಬರೂ ಗೆಳತಿಯರ ಹಾಗೆ ಸಂಭಾಷಿಸುವುದನ್ನು ನೋಡಿದ್ದೇನೆ.. ಎಂದು ಶ್ರೀಕಾಂತ ಸಾರ್ ಹೇಳುವುದನ್ನು ನೋಡಿದರೆ ನಮಗೆ ಇನ್ನಷ್ಟು ಖುಷಿಯಾಯಿತು.
ಅವರಿಗೆ ನಮ್ಮ ಕಡೆಯಿಂದಲೂ ಜನುಮದಿನದ ಶುಭಾಶಯಗಳು.
ಪ್ರೀತಿಯ ಶುಭಾಶಯಗಳಿಗೆ ಧನ್ಯವಾದಗಳು..
ReplyDeleteಭಾವಗಳ ವಿನಿಮಯದಲ್ಲಿ ಮತ್ತೆ ಸಿಕ್ತೀನಿ.
ಪ್ರೀತಿಯಿಂದ