Thursday, May 16, 2013

ಮನೋ ವ್ಯಾಪಾರಿ ನಾ ....


ಬಾಳ ಸಂತೆಯಲ್ಲಿ ಜೀವದಾಳದ ಭಾವಗಳು ಹರಾಜಿಗಿವೆ !

ಕೊಂಡುಕೊಳ್ಳೋರಿಲ್ಲದೇ ,ಹಾಗೇ ಬಿಟ್ಟು ಎದ್ದು ಹೋಗಲೂ ಆಗದೇ ,ಕೈ ಬಿಡೋ ಅಸಹಾಯಕತೆಗಾಗಿ ನನ್ನದೇ ಮನವನ್ನ ನಲುಗಿಸುತ್ತಾ ........

ನನ್ನವರ ಮನಸ್ಸುಗಳನ್ನೂ ನಲುಗಿಸ ಬರುತ್ತಿರೋ ಭಾವ ಗಳ ಹರಾಜಿದು .....


                             



ತುಂಬಾ ಕಡಿಮೆ ಬೆಲೆಯ ವಸ್ತು ...ಬೆಲೆ ತೆರದೇ ಪಡೆಯಬಹುದಾದದ್ದು ....ಒಂಚೂರು ಸಮಯ ,ಒಂದಿಷ್ಟು ಒಲುಮೆ ,ಸ್ವಲ್ಪ ಆತ್ಮೀಯತೆಗೆ ದಕ್ಕೋ ವಸ್ತು ...

ಆದರೆ ಪಡೆದಾದ ಮೇಲೆ ಮಾತ್ರ ತಕ್ಕ ಬೆಲೆ ತೆರಲೇ ಬೇಕು .ಜೋಪಾನ ಮಾಡೋ ಕೆಲಸ !

ನೋವಿಗೆ ಕಣ್ಣ ಹನಿ ಜೊತೆಯಾದೀತು ಅಥವಾ ಕೈ ಹಸ್ತ ಜೊತೆಯಾದೀತು....ನಲಿವಿಗೆ ಕಿರು ನಗು ಜೊತೆಯಾದೀತು ಅಥವಾ ಅರ್ಥವಾಗದ ದೊಡ್ಡದೊಂದು ನಗುವೇ ಜೊತೆ ಸೇರೀತು ...
ಜೊತೆಯಾಗೋದಂತೂ ನಿಜ !!

ಭಾವವೊಂದೆ...
ಜೊತೆಯಾಗಿ ನಾವೂ ಇದ್ದೀವಿ ..ನಮ್ಮದೂ ಕೂಡಾ ನಿನ್ನದೇ ಹಾದಿ ...ಒಟ್ಟಿಗೇ ನಡೆಯೋಣ ಬಾ ಅಂತ ಕರೆಯೋ ಭಾವ .!

ಇದು ಪ್ರೀತಿಸೋ ಮನಗಳೊಟ್ಟಿಗೆ ,ಆಧರಿಸೋ ಮನಸ್ಸುಗಳೊಟ್ಟಿಗಿನ ನಡುವಣದ ಒಪ್ಪಂದ......
ಸಾಕ್ಷ ಸಹಿ ಹಾಕದೇ ನಡೆಯೋ ಮನಸ ಒಡಂಬಡಿಕೆ ....

ಹೇಳಿಕೊಂಡ ಪ್ರೀತಿಯ ಭಾವ ....ಹಂಚಿಕೊಂಡ ನೋವ ಅನುಭವ...ನೀಡೋ ಸಾಂತ್ವಾನ ...ಕಣ್ಣೀರೊರೆಸೋ ಆತ್ಮೀಯ ಕೈ ...

ನಾವೂ ಇದ್ದೀವಿ ಜೊತೆ ಅನ್ನೋ ಭಾವದ ಭರವಸೆ !

ಕೈ ಚಾಚೋ ಆಮಂತ್ರಣದ ಸಂಕೋಲೆ ....ಆಮಂತ್ರಣವಿಲ್ಲದ ಮನೆ (ಮನ)ಯಲ್ಲಿ ಅತೀ ಆಮಂತ್ರಿತನಂತೆ ,ಇಷ್ಟದ ಬಂಧುವಂತೆ ಸತ್ಕರಿಸೋ ಆ ಪರಿ .....

ಭಾವದಾಚೆಗೂ ಹೊರಳೋ ಬದುಕ ಪ್ರೀತಿ .

ಕಣ್ಣ ಭಾಷೆಯನ್ನೂ ಬಿಡದೇ ಅರ್ಥಮಾಡಿಕೊಳ್ಳೋ ಜಾಣತನ .....

ನಿಮ್ಮಗಳ ಮನದಲ್ಲಿನ ಲಾಲಿಪಾಪ್ ಪುಟ್ಟಿ ಅನ್ನೋ ಪ್ರೀತಿಯ ಪುಟ್ಟ ಭಾವ :)

ಗುರುತಿಸೋ ಸಣ್ಣ ನೋವ ಭಾವ ..ಎದುರು ಏನಾಯ್ತೇ ಗೆಳತಿ ಅಂತ ಕೇಳದಿದ್ದರೂ ಆಮೇಲೊಮ್ಮೆ ಯಾಕೋ ಪುಟ್ಟಾ ಬೆಳಿಗ್ಗೆ ಸಪ್ಪೆಯಾಗಿದ್ದೆ ಅಂತ ವಿಚಾರಿಸೋ ನಿನ್ನೇ ಮೊನ್ನೆ ಮಾತಾಡಿದ್ದ ಅದೇ ಗೆಳೆಯ ....!!

 

ಆತ್ಮೀಯತೆಯಂದ್ರೆ ಇದಾ ?.....ಉತ್ತರ ಹುಡುಕೋಕೆ ಹೊರಟಿಲ್ಲ ನಾ ....ಮಾರಾಟಕ್ಕಿಟ್ಟಿರೋದರ ಬಗ್ಗೆ ಜಾಸ್ತಿ ವ್ಯಾಮೋಹ ಒಳ್ಳೆಯದಲ್ಲ !!

ನನ್ನವರಾಗಿ ಆಧರಿಸೋ ,ಖುಷಿಸೋ ,ದುಃಖಿಸೋ ,ಸ್ನೇಹಿಸೋ ನಿಮ್ಮ ಅಪ್ಪಟ ಪ್ರೀತಿಯ ಭಾವಕ್ಕೊಂದು ನಮನ ....

ಈ ಪ್ರೀತಿ ಸಮ್ಮೋಹವಲ್ಲ ...ವ್ಯಾಮೋಹವೂ ಅಲ್ಲ ...ಮುಖ ನೋಡದೇ ಮೂಡಿದ್ದ ಮನಸ್ಸಿನ ಬಂಧ ...ಹತ್ತಿರದ ಬಂಧುವಾಗಿ ಜೊತೆಯಾಗಿ ಕೊನೆಯತನಕ ಕರೆದೊಯ್ಯೋ ಹೇಳಲಾಗದ ಅನುಭವಕ್ಕೆ ಬಂದಿರೋ ಶಬ್ಧ ಸಿಗದ ಶಬ್ಧ ...
ನೀವೇ ನಾಮಕರಿಸಬಿಡಿ ...

ಕೊನೆಯ ತನಕ ಜತನ ಮಾಡಿಯೇನು ನಾನದನ್ನ !

ಭಾವಗಳನ್ನ ಹರಾಜಿಗಿಡದೇ ಜೋಪಾನ ಮಾಡಿದ್ದರೂ ಅದೆಲ್ಲೋ ಧುತ್ತನೆ ಹಾರಿ ನಿಮ್ಮಲ್ಲಿ ,ನಿಮ್ಮ ತೆಕ್ಕೆಯಲ್ಲಿ ಜೋಪಾನವಾಗಿದೆ !

ಕ್ಷಣವೊಂದಕ್ಕೆ ಮನೋ ವ್ಯಾಪಾರಿ ನಾನು ಎಂತೆನಿಸಿ ...ಮತ್ತೊಂದು ಕ್ಷಣಕ್ಕೆ ಬೇರೆ ಯಾರೊಂದಿಗೋ ವ್ಯವಹರಿಸಿದ್ದಲ್ಲ ,ನನ್ನವರಿಗೇ ವ್ಯಾಪಾರ ಮಾಡಿದ್ದೆಂದು ಸಮಾಧಾನಿಸಿ ...

ಮತ್ತದೇ ಬದುಕಲ್ಲಿ ಹಾಗೆಯೇ ಪಯಣಿಸುತ್ತಾ .....

 

               



ಮಧ್ಯ ಬರೋ ದಲ್ಲಾಳಿ ಯಾರೋ ತಿಳಿಯದು....

ಆದರೇ...

ಮನದ ಭಾವಗಳ ವ್ಯಾಪಾರಿ ನಾ......

ಹರಾಜಿನಲ್ಲಿ ಬಾಚಿಕೊಂಡ ಭಾವಕ್ಕೆಲ್ಲಾ ಹಕ್ಕುದಾರರು ನೀವೇ ....

ಹಕ್ಕುಗಳನ್ನ ಕಾಯ್ದಿರಿಸಲಾಗಿದೆ  !!

34 comments:

  1. ಹರಿಶ್ಚಂದ್ರ ಹರಾಜಿಗೆ ಇಟ್ಟದ್ದು ತನ್ನ ಮಡದಿ ಪುತ್ರರನ್ನಲ್ಲ ಬದಲಿಗೆ ನಂಬಿಕೊಂಡಿದ್ದ ಸತ್ಯ ಧರ್ಮಗಳ ಪರೀಕ್ಷೆಯನ್ನ. ನಂಬಿ ಕೆಟ್ಟವರಿಲ್ಲ ರಂಗಯ್ಯನ ಎನ್ನುವ ಪುರಂದರದಾಸರು ನಂಬಿದ್ದು ವಿಠಲನ ಮೇಲಿನ ನಂಬಿಕೆಯನ್ನ. ಭಾವಗಳ ಹರಾಜಿಗೆ ಇಟ್ಟಂತೆಯೇ ಭಾವವನ್ನು ಭಾಗಿಸುತ್ತ ಗುಣಿಸುತ್ತಾ ಕೂಡುತ್ತಾ ಆದರೆ ಕಳೆಯದೆ ಬರೆದ ಪದಗಳು ಸೊಗಸಾಗಿವೆ. ಓದುತ್ತಾ ಹೋದ ಹಾಗೆ ಚಿತ್ರದುರ್ಗ ಕೋಟೆಯಲ್ಲಿನ ಹಲವಾರು ಬಾಗಿಲುಗಳು ತೆಗೆಯುತ್ತಾ ಹೋದಂತೆ ಭಾಸವಾಗುತ್ತದೆ. ಒಂದು ಹೊಸತನದ ಬರಹ ಇಷ್ಟವಾಯಿತು

    ಮನಸಸೆಳೆಯುವ ಸಾಲುಗಳು
    "ಮನದ ಭಾವಗಳ ವ್ಯಾಪಾರಿ ನಾ......
    ಹರಾಜಿನಲ್ಲಿ ಬಾಚಿಕೊಂಡ ಭಾವಕ್ಕೆಲ್ಲಾ ಹಕ್ಕುದಾರರು ನೀವೇ ....
    ಹಕ್ಕುಗಳನ್ನ ಕಾಯ್ದಿರಿಸಲಾಗಿದೆ !!"

    ReplyDelete
    Replies
    1. ನಿರುಪಾಯಕ್ಕೆ ಸೇರಿದ ಹೊಸ ಭಾವವನ್ನ ಇಷ್ಟಪಟ್ಟಿದ್ದಕ್ಕೆ ಧನ್ಯವಾದ ಶ್ರೀಕಾಂತ್ ಜಿ .
      ನಿಜ..ಮನೋವ್ಯಾಪಾರದಲ್ಲಿ ಸ್ನೇಹ ,ಪ್ರೀತಿ ,ನಲಿವು ದುಃಖ ,ನೋವು ... ಹೀಗೆ ಮನ ಮಾತಾಡಬಲ್ಲ ಭಾವ ಸಂಬಂಧಿ ವಿಷಯಗಳು ವ್ಯಾಪಾರದ ಸರಕುಗಳು ಅಲ್ವಾ ?
      ಬರ್ತಾ ಇರಿ :)

      Delete
  2. ನಾ ಮೌನಿ ಪುಟ್ಟಿ ನಿನ್ನ ಪ್ರೇಮಕ್ಕೆ ಅಭಿಮಾನಕ್ಕೆ.. ನಿನ್ನ ಪ್ರೇಮಕ್ಕೆ ..

    ನಿನ್ನೊಡನೆ ಸರಿಯಾಗಿ ಸಮಯ ಕಳೆಯಲು ಬಿಡದ ನನ್ನ ಕೆಲಸಗಳಿಗೆ ಹಿಡಿಶಾಪ ಹಾಕುತ್ತಿದ್ದೇನೆ ... :(

    A Big Hug ...

    ಖುಷಿಯ ಕಣ್ಣೀರಿನಿಂದ ನಿನ್ನ ಹೆಗಲು ಒದ್ದೆಯಾದರೆ ನನ್ನ ಬಯ್ಯದಿರು ,,..

    ReplyDelete
    Replies
    1. ಸಂಧ್ಯಕ್ಕ ನೀ ನಂಗೆ ತಾಸೊಂದರ ಮಟ್ಟಿಗಾದ್ರೂ ಸಿಕ್ಕಿದ್ದೆ ಅವತ್ತಲ್ಲಿ ಅನ್ನೋದು ನನ್ನ ಖುಷಿ ..
      .ನನ್ನ ಪುಟ್ಟಕ್ಕನನ್ನ ನೋಡಿ ಮಾತಾಡಿ ಖುಷಿಸಿದ ಆ ಭಾವ ನನ್ನ ಮಧುರ ನೆನಪು ...
      ಆದ್ರೆ ಪೂರ್ತಿಯಾಗಿ ಮಾತಾಡದ ,ಬಿಟ್ಟು ಬಂದ ಬೇಜಾರಿದೆ ನನ್ನೊಟ್ಟಿಗೆ .
      ಸಂಧ್ಯೆಯಂಗಳದ ಸಂಧ್ಯಕ್ಕ .... ಯಾವತ್ತಿಗೂ ನೀ ನನ್ನ ಪುಟ್ಟಕ್ಕ :)
      ಮನೋವ್ಯಾಪಾರದ ಹಕ್ಕುದಾರರು ನೀವೆ ..
      ಭಾವಗಳ ಹರಾಜಲ್ಲಿ ಮತ್ತೆ ಸಿಗೋಣ !!

      Delete
  3. ಭಾವಗಳ ಒಲವಲ್ಲಿ ತೊಯ್ಯಲೊಂದು ಮಳೆ! ಹರಿಯಲಿ ಸುರಿಯಲಿ ಮುಗಿಲು ಕವಿದು ಬೀಳುವಂತೆ.. ಜಲಪಾತವಾಗಲಿ ಪ್ರೀತಿ ಹೊಳೆ.

    ReplyDelete
    Replies
    1. ಥಾಂಕ್ಸ್ ..ನಿಮ್ಮ ಮೊದಲ ಹೆಜ್ಜೆ ಗುರುತನ್ನ ನನ್ನ ನಿರುಪಾಯದಲ್ಲಿ ಮೂಡಿಸಿದ್ದು ನನ್ನ ಖುಶಿ ...
      ಕೆಲ ಭಾವಗಳೇ ಹಾಗಲ್ವಾ ...ಸಿಕ್ಕಾಗ ಹಂಗಿಲ್ಲದೇ ಹರಿದು ಬಿಡುತ್ತೆ ..ಅಂತದ್ದೆ ಒಂದು ಭಾವಕ್ಕೆ ....ಭಾವದೊಂದಿಗೆ ...ಮನಸ್ಸಿನ ಭಾವಗಳ ವ್ಯಾಪಾರಿಯಾಗಿ

      Delete
  4. ತೀರಾ ಮನಸ್ಸಿನ ಆಳದಿಂದ ಬರುವ ಭಾವಗಳಿಗೆ
    ತನ್ನಿಂತಾನೇ ತೀವೃವಾಗಿ ಮನಸ್ಸು ಹದಮಾಡಿ ಎರೆದ
    ಭಾವನೆಗಳ ಬರಹಕ್ಕೆ ನ್ಯಾಯವಾಗಿ ಅದರ ಮಟ್ಟಕ್ಕೆ ಪ್ರತಿಕ್ರಿಯಿಸೋದು
    ಕಷ್ಟ...
    ಏನನ್ನಬೇಕೋ ತಿಳಿಯುತ್ತಿಲ್ಲ....
    ನಿನ್ನ ಮನೋ ವ್ಯಾಪಾರಕ್ಕೆ ಒಂಚೂರು ಸಮಯ
    ಒಂದಿಷ್ಟು ಒಲುಮೆ ಸಾಕು.... ನೀನಂದುಬಿಟ್ಟೆ...
    ನಮನೋ ವ್ಯಾಪಾರದಲ್ಲಿ ಕೊಂಡುಕೊಂಡಿದ್ದನ್ನು
    ಅರಗಿಸಿಕೊಳ್ಳಬೇಡವೇ ಪುಟಾಣಿ....

    ಭಾವಗಳ ಸಂತೆ ಈ ಬರಹ....
    ತುಂಬಾ ತುಂಬಾ ಚನ್ನಾಗಿದೆ.....





    ReplyDelete
    Replies
    1. ಧನ್ಯವಾದ ರಾಘವ್ ಜಿ ..
      ನಿಮ್ಮೀ ಆತ್ಮೀಯ ಭಾವಕ್ಕೊಂದು ಶರಣು ...
      ಅದಕ್ಕೇ ಹೇಳಿದ್ದು ....ಬೆಲೆ ತೆತ್ತದೇ ಸುಮ್ಮನೇ ಕೊಂಡುಕೊಂಡ ವಸ್ತುವಿಗೆ ಆಮೇಲೆ ಬೆಲೆ ಕೊಡೋದು ,ಜೋಪಾನ ಮಾಡೋದು ನಿಮ್ಮದಾದೀತು ಜೋಕೆ ಅಂತ.
      ಅರಗಿಸಿಕೊಳ್ಳೋ ಭಾವ ನಿಮ್ಮದಾಗಲಿ
      ನಿಜ ,ಭಾವಗಳ ಸಂತೆಯಲ್ಲಿ ಬದುಕ ಭಾವ ಲಹರಿಯ ಹರಾಜು ಆತ್ಮೀಯರೊಟ್ಟಿಗೆ ,ಆತ್ಮೀಯರೆನಿಸಿಕೊಂಡವರ ಜೊತೆಗೆ !
      ಬರ್ತಾ ಇರಿ ..

      Delete
  5. ವಾಹ್! ಮನತಟ್ಟಿತು ನಿಮ್ಮ ಬರಹ... ಮಧುರವಾದ ಭಾವವಿರುವ ಸಾಲುಗಳು ತುಂಬಾ ಹಿಡಿಸಿತು...

    ReplyDelete
    Replies
    1. ಧನ್ಯವಾದ ಪ್ರದೀಪ್ ಜಿ
      ನನ್ನ ನಿರುಪಾಯದ ಹೊಸ ಅತಿಥಿಗೆ ಸ್ವಾಗತ ..
      ಭಾವಗಳನ್ನ ಇಷ್ಟ ಪಟ್ಟಿದ್ದು ಖುಷಿ ಆಯ್ತು .ಬರ್ತಾ ಇರಿ

      Delete
  6. ಮನಸ್ಸಿನ ಭಾವಗಳನ್ನ ಮುಕ್ತವಾಗಿ ಹಂಚಿಕೊಳ್ಳಲೂ ಒಂದು ಮನಸ್ಸಿನ ಕೊರತೆ ಕಾಡುತ್ತದೆ. ಹಂಚಿಕೊಂಡದ್ದೇ ರೆಕ್ಕೆ ಪುಕ್ಕಗಳಿಗೆ ಗ್ರಾಸವಾಗುವ ಅಪಾಯವೂ ಇದೆ.
    ನನ್ನ ಮನಸ್ಸಿಗೆ ತಟ್ಟಿದ ಬರಹವಿದು.

    ReplyDelete
    Replies
    1. ಥಾಂಕ್ಸ್ ಬದರಿ ಸರ್ ...ಭಾವ ಮನ ಮುಟ್ಟಿದ್ರೇ ನಾ ಧನ್ಯ .!
      ಹಿಡಿದಿಟ್ಟ ಭಾವಗಳು ಮನದ ಮುಷ್ಕರದ ನಡುವೆಯೂ ಆತ್ಮೀಯರೊಡನೆ ಸಲೀಸಾಗಿ ಹರಿದುಬಿಡುತ್ವೆ ಅಲ್ವಾ ?
      ಆಮೇಲೆ ರೆಕ್ಕೆ ಪುಕ್ಕಗಳಿಗೆ ಭಾಸವಾಗೋ ಅಪಾಯವಿದ್ದೇ ಇದೆ ಬಿಡಿ

      Delete
  7. ಭಾವನೆಗಳ ಸಂತೆ.....!

    ReplyDelete
    Replies
    1. ಧನ್ಯವಾದ ಜಿ
      ಬರ್ತಾ ಇರಿ

      Delete
  8. hey...ಇಷ್ಟ ಆಯ್ತು... :)

    ReplyDelete
  9. ಭಾವಗಳ ಇನ್ನೊಂದು ಲೋಕಕ್ಕೆ ಕರೆದುಕೊಂಡು ಹೋಗೋ ಹಂಗಿದ್ದು ನಿನ್ನ ಬರಹ .....:) ಈ ವರೆಗಿನ ಬರಹಗಳಲ್ಲಿ ಬೆಸ್ಟ್ ಅಂತ ಅನುಸ್ತು ಯಂಗೆ... ವ್ಯಾಪಾರ ಮಾಡದೆ ಅಡಗಿಸಿಟ್ಟ ಭಾವಗಳೇ ನಿಜವಾದ ಪ್ರೀತಿ ಅಂತ ಎಲ್ಲೋ ಕೇಳಿದ್ದೆ ... ಹೌದಾ ಗೆಳತಿ?

    ReplyDelete
    Replies
    1. ಥಾಂಕ್ಸ್ ಆದರ್ಶ ...
      ಭಾವಗಳು ಮನಕ್ಕೆ ಹತ್ತಿರವಾದ್ರೆ ನಾ ಧನ್ಯ
      ಭಾವಗಳನ್ನ ಹಂಚಿಕೊಳ್ಳದೇ ಅಥವಾ ಹೇಳದೆ ಉಳಿಸಿಕೊಂಡರೆ ಯಾರಿಗದು ಅರ್ಥವಾದೀತು ?
      ನಿಜದ ಪ್ರೀತಿಗೆ ಯಾವತ್ತಾದರೂ ಒಲವ ಒಲುಮೆ,ಸ್ನೇಹದ ಸಲುಗೆ ದಕ್ಕೀತು ..ಏನಂತೀಯಾ ?

      Delete
  10. nice one ಭಾವನೆಗಳ ಲೋಕದಲ್ಲಿನ ವಿಹಾರ , ಅಕ್ಷರಗಳ ಮೆರವಣಿಗೆ , ವಾಹ್ ವಾಹ್ ಚೆನ್ನಾಗಿದೆ.

    ReplyDelete
    Replies

    1. ಧನ್ಯವಾದ ಬಾಲಣ್ಣ .
      ಭಾವಗಳಿಗೆ ಅಕ್ಷರಗಳದ್ದು ಸಾಥ್ ಅಷ್ಟೇ
      ಬರ್ತಾ ಇರಿ

      Delete
  11. ಭಾವಗೊಂಚಲು.. ಚೆನ್ನಾಗಿವೆ .. ನಿಮ್ಮ ನವಿರಾದ ಭಾವನೆಗಳು ...

    ReplyDelete
    Replies
    1. ಥಾಂಕ್ ಯು ಗಿರೀಶ್ ಜಿ :)
      ಬರ್ತಾ ಇರಿ

      Delete
  12. ಹರಾಜಿನಲ್ಲಿ ಬಾಚಿಕೊಂಡ ಭಾವಕ್ಕೆಲ್ಲಾ ಹಕ್ಕುದಾರರು ನೀವೇ ....

    ಹಕ್ಕುಗಳನ್ನ ಕಾಯ್ದಿರಿಸಲಾಗಿದೆ !!

    ಬಾಚಿಕೊಂಡವರೇ ಹಕ್ಕುದಾರರು ... ಕಾಯ್ದಿರಿಸುವ ಹಾಗಿಲ್ಲ :):) ಸುಂದರ ಬಲು ಸುಂದರ ...

    ReplyDelete
  13. ಪ್ರವೀಣ್ ಜಿ ...
    ನನ್ನ ಬ್ಲಾಗ್ ಗೆ ಸ್ವಾಗತ
    ಬಾಚಿಕೊಂಡವರ ಹಕ್ಕುಗಳನ್ನೇ ಕಾಯ್ದಿರಿಸಲಾಗಿದೆ ಎಂದರ್ಥ :)
    ಬರ್ತಾ ಇರಿ ..ಖುಷಿ ಆಯ್ತು

    ReplyDelete
  14. ಏನು ಹೇಳೋದು ?
    ಹೀಗೆ ಬರೆದು ನಮ್ಮನ್ನು ಕೊಳ್ಳಲು ಪ್ರೇರೇಪಿಸುತ್ತಿರುವ ನಿಮಗೆ ಬೈಯ್ಯಲಾರೆವು
    ಕೊಳ್ಳದೇ ಇರಲಾರೆವು
    ಖಂಡಿತಾ ನಮ್ಮ ಸರಕಿಗೆ ನಾವೇ ಜವಾಬ್ದಾರರಾಗಿರುತ್ತೇವೆ :)
    ಬರೆಯುತ್ತೀರಿ

    ReplyDelete
    Replies
    1. ಥಾಂಕ್ಸ್ ಅಕ್ಕ .
      ನಿಮ್ಮನ್ನಿಲ್ಲಿ ನೋಡಿ ಖುಷಿ ಆಯ್ತು :)
      ಸರಕುಗಳು ಜೋಪಾನ ಮತ್ತೆ :)
      ಬರ್ತಾ ಇರಿ

      Delete
  15. ಮನದ ಮೂಲೆಯಲ್ಲಿ ರಾಶಿಯಾದ ಭಾವಗಳು,ರಾಜಿಯಾಗದೆ ...ಸರಬರಾಜಿಗಿವೆ.... ಹರಾಜಿಗಿವೆ..., ಇಷ್ಟವಾದ ಬರಹ.

    ReplyDelete
    Replies
    1. ಧನ್ಯವಾದ ಜಿ .ಮೊದಲ ಬಾರಿ ನನ್ನ ಬ್ಲಾಗ್ ಗೆ ಬಂದಿದ್ದು ನನ್ನ ಖುಷಿ .
      ಎಲ್ಲ ಭಾವಗಳ ಮೌನದಲೇ ಬಿಡಿಸಿ...
      ಕಣ್ಣಂಚ ಹನಿಯಲ್ಲಿ - ಬೆಸೆದ ಬೆರಳುಗಳ ಭರವಸೆಯಲಿ...
      ಅರ್ಥವಾಗದ ಮನೋ ವ್ಯಾಪಾರ - ಇತ್ಯರ್ಥವಾಗಬಾರದ ಭಾವಗಳ ಝೇಂಕಾರ.
      ಬರ್ತಾ ಇರಿ :)

      Delete
  16. ಒಂದು ಸಣ್ಣ ಭಾವ .. ಕವಲೊಡೆದು ಪದರ ಪದರಗಳಾಗಿ ಸಾಗುತ್ತದೆ ... ಕೆಲವೊಂದು ಕಡೆ ಭಾವಾತಿರೇಕವಿದೆ, ಮೌನವಿದೆ ... ಸುಮ್ಮನೆ ಇಷ್ಟವಾಗುತ್ತದೆ ನಿನ್ನ ಬರಹ ತಂಗೀ ...

    ReplyDelete
    Replies
    1. ಥಾಂಕ್ಸ್ ಜಿ :)
      ಕೆಲ ಭಾವಗಳೇ ಹಾಗೇ ಅಂದ್ಕೊಂತೀನಿ ನಾ ...
      ಶಬ್ಧಕ್ಕೆ ಸಿಗೋದು ಕಷ್ಟ ..ಸಿಕ್ಕಾಗ ಮಾತ್ರ ಹರಿದುಬಿಡುತ್ತೆ ..
      ಇಷ್ಟಪಟ್ಟಿದ್ದು ಖುಷಿ ಆಯ್ತು

      Delete