Monday, May 27, 2013

ಭಾವಕ್ಕೆ ಜೊತೆಯಾಗೋ ಭಾವ.....

ಅದೆಲ್ಲೋ ಇದ್ದು ಮುಖವನ್ನೂ ನೋಡದಿರೋರ ಮಧ್ಯ ಸುಂದರ ಸ್ನೇಹವೊಂದು ಹೆಮ್ಮರವಾಗಿ ಬೆಳೆಯೋದು ಸಾಧ್ಯವೇ ಅನ್ನೋ ಅವಳ ಪ್ರಶ್ನೆಗೆ ನೇರಾ ನೇರಾ ಉತ್ತರ ಸಿಕ್ಕಿತ್ತು ಅವತ್ತು …

"ಗೆಳತಿ, ಆತ್ಮೀಯತೆ ಬೆಳೆಯೋಕೆ ಇಂತದ್ದೆ ಸ್ಥಳ ಬೇಕೆಂದಿಲ್ಲ. ನನ್ನ ನಿನ್ನ ಈ ಸ್ನೇಹ ಎದುರು ಕೂತು ಮುಖ ನೋಡಿ ಮಾತಾಡಿಲ್ಲ ! ಗಂಟೆಗಟ್ಟಲೇ ಹರಟಿಲ್ಲ. ತೋಳಲ್ಲಿ ಮುಖ ಹುದುಗಿಸಿ ಅತ್ತಿಲ್ಲ….ಸಾಹಿತ್ಯವನ್ನು ಬಿಟ್ಟು ಬೇರೆ ಯಾವ ವೈಯಕ್ತಿಕ ಮಾತನ್ನೂ ಆಡಿರದ ಸ್ನೇಹ ಇದು! ಆದರೂ ಎದುರು ಬದುರು ಕೂತು ಮಾತಾಡಿದ,ಒಟ್ಟಿಗೆ ಕೂತು ಹರಟಿದ, ಕಣ್ಣಂಚಿನ ಕಣ್ಣೀರ ಒರೆಸಿದ ನನ್ನ ತುದಿಬೆರಳ ಸ್ನೇಹಕ್ಕಿಂತ ಹತ್ತಿರವಾದ ಭಾವ ಇದು ! ಪರಸ್ಪರ ಗೌರವಿಸೋ ಎರಡು ಸುಂದರ ಮನವಿದ್ದರೆ ಸಾಕು ಕಣೇ ಸ್ನೇಹಿತರಾಗೋಕೆ ಅನ್ನೋ ಅವನ ಮಾತಿಗೆ ನಿಜಕ್ಕೂ ತಲೆಯಾಡಿಸಿದ್ದಳು ಅವಳು.






ಅಲ್ಲೊಂದು ಮಧುರ ಸ್ನೇಹ ಅದಾಗಲೇ ಹೆಮ್ಮರವಾಗಿ ಬೆಳೆದಿತ್ತು. ಮುಖ ನೋಡದೇ ಅವಳವನಿಗೆ ಹತ್ತಿರವಾಗಿದ್ದಳು. ಅದೆಷ್ಟೋ ಭಾವಗಳನ್ನ ಸಂಕೋಚವಿಲ್ಲದೇ ಹಂಚಿಕೊಳ್ಳೋ ಅಷ್ಟು ಸಲುಗೆ ಅವರಿಬ್ಬರ ನಡುವೆ ಇತ್ತು. ಮನದಲ್ಲಿ ನಡೆಯೋ ಕೆಲವೊಂದು ಗೊಂದಲಗಳನ್ನ ಇಬ್ಬರೂ ನೇರಾ ನೇರಾ ಹೇಳಿಕೊಂಡು ಬಗೆಹರಿಸಿಕೊಳ್ಳುತ್ತಿದ್ದರು. ಇಬ್ಬರ ಭಾವದಲ್ಲೂ ಪ್ರಾಮಾಣಿಕ ಉತ್ತರ ಸಿಗುತ್ತಿತ್ತು.


ಮುಖವನ್ನೇ ನೋಡಿರದ ಹುಡುಗನ ಮೇಲೇ ನಿಂಗ್ಯಾಕೆ ಅಷ್ಟೊಂದು ನಂಬಿಕೆ ಗೆಳತಿ ಅನ್ನೋ ಅವನ ಪ್ರಶ್ನೆಗೆ -ಉತ್ತರ ನಂಗೂ ತಿಳಿಯದು ಗೆಳೆಯಾ, ಕೆಲವೊಮ್ಮೆ ನಂಗೂ ಇಂತದ್ದೇ ಅಸಂಬದ್ಧ ಪ್ರಶ್ನೆಗಳು ಕಾಡ್ತಾ ಇರುತ್ವೆ, ನಿನ್ನೊಟ್ಟಿಗೆ ನಾ ಮಾತಾಡಿದ ಈ ಕ್ಷಣ ನಂಗೇನೋ ಖುಷಿ. ಹಂಚಿಕೊಳ್ಳೋ ಪ್ರತಿ ಭಾವಕ್ಕೂ ಹೊಸತನದ ರಂಗು. ನನ್ನೆಲ್ಲಾ ಭಾವಕ್ಕೂ ಪ್ರೀತಿಯಿಂದ ಸ್ಪಂದಿಸೊ ನಿನ್ನ ಮನದೊಂದಿಗೆ ನಾನೇ ಸೇರಿ ಹೋದ ಅನುಭವ. ನಿನ್ನ ಗೆಳತಿಯಾಗಿ, ತಂಗಿಯಾಗಿ, ಆತ್ಮೀಯ ಬಂಧುವಾಗಿ ನಿನ್ನೊಟ್ಟಿಗೆ ನನ್ನೆಲ್ಲಾ ಭಾವಗಳನ್ನ ಹೇಳಿಕೊಳ್ಳೋ ,ಹಂಚಿಕೊಳ್ಳೋ ಖುಷಿ ಮಾತ್ರ ನಂದು ಅಂತಷ್ಟೇ ಹೇಳಬಲ್ಲೆ ಅನ್ನೋದು ಅವಳ ಸಿದ್ಧ ಉತ್ತರ.
 ಇಷ್ಟೊಂದು ನಂಬಿಕೆಗೆ ನಾ ಅರ್ಹನೋ ಅಲ್ವೊ ಅನ್ನೋ ಭಯ ನಂದು ಕಣೇ ಅಂತ ಆ ಭಾವವನ್ನ ಮತ್ತೂ ಗೋಜಲಾಗೇ ಉಳಿಸೋ ಅವನ ಜಾಣತನಕ್ಕೆ ಪದ ಸಿಗದೇ ಅವಳೇ ಸುಮ್ಮನಾಗುತ್ತಿದ್ದಳು.


ಮುಂಜಾನೆಗೊಂದು ಭರವಸೆಯ ಮಾತು, ಮುಸ್ಸಂಜೆಗೊಂದು ತಂಪಾದ ಶುಭಾಶಯ ಅವನ ಪ್ರತಿ ದಿನದ ದಿನಚರಿ. .ಊಟ ಮಾಡೋದನ್ನ ಮರೆತಾನು ಆದರೀ ಶುಭಾಶಯವನ್ನ ಪ್ರತಿ ದಿನವೂ ಉದಯಿಸೋ ಸೂರ್ಯನಷ್ಟೇ ಸತ್ಯವಾಗಿ ಹೇಳುವವ ಅವ. ಪ್ರತಿದಿನದ ಅವನ ಸುಪ್ರಭಾತದ ಶುಭಾಶಯ ಅವಳಿಗೆ ಹೊಸತನ ತರುತ್ತಿತ್ತು .ಏಳೋಕೆ ಸೋಮಾರಿಯಾದ ಗೆಳತಿಯನ್ನ ಅದೆಷ್ಟೋ ದೂರದಿಂದ ಏಳಿಸೋ ಆತ್ಮೀಯತೆಯ ಸಲುಗೆ ಅವನದು…


ಅವಳ ಪ್ರಶ್ನೆಗೆ ಅವನದೊಂದು ಮರು ಪ್ರಶ್ನೆ! ಪ್ರಶ್ನೆಗೆ ಪ್ರಶ್ನೆಯೇ ಉತ್ತರವಾ ಅನ್ನೊದೇ ಅವಳು ತಿಳಿಯದೇ ಕೇಳೋ ಪ್ರಶ್ನೆ :)


ಈ ಆತ್ಮೀಯತೆಯ ಭಾವಕ್ಕೆ ಉತ್ತರ ಹುಡುಕ ಹೊರಟರೆ ತಲುಪೋದು ಗೊಂದಲದ ತುದಿಯನ್ನ ಅನ್ನೋದು ತಿಳಿದ ಮೇಲೆ, ಕೆಲವೊಂದಿಷ್ಟು ಪ್ರಶ್ನೆಗಳನ್ನ ಪ್ರಶ್ನೆಗಳನ್ನಾಗಿಸಿಯೇ ಉಳಿಸೋದು ಸೂಕ್ತ ಅನ್ನೋ ಭಾವ ಇಬ್ಬರದೂ ಕೂಡಾ…
ಮುಸ್ಸಂಜೆಯಲ್ಲಿ ಸುರಿವ ಮಳೆಗೆ ಮುಖವೊಡ್ದಿ ಖುಷಿಸಿ ಬಂದ ಅವಳು ಇವತ್ತಿನ ಮಳೆಗೆ ನಿನ್ನ ನೆನಪಾಯ್ತು ಗೆಳೆಯಾ, ನೆಲ ತಾಕಿದ ಹನಿಯಲ್ಲಿ ನಾ ನಿನ್ನ ಕಂಡೆ ಅಂದಾಗ ಸುಮ್ಮನೆ ಹನಿಗಳಿಗೆ ಕೈಯೊಡ್ಡು ನೀ ನನ್ನ ತಾಕಿದ ಅನುಭವ ನನ್ನದಾದೀತು ಅಂತ ಕಣ್ಣು ಮಿಟುಕಿಸೋ ಅವನು.
 ವಿಷಯವೊಂದು ಸಿಕ್ಕಾಗ ಗಂಟೆಗಟ್ಟಲೇ ವಿಮರ್ಶಿಸೋ ಆ ಎರಡು ಮನವನ್ನ ನೋಡಿದಾಗ ನಿಜಕ್ಕೂ ಒಂದು ಖುಷಿಯ ಅನುಭವ ಆಗೋದು ಸತ್ಯ. ಚಿಕ್ಕ ಚಿಕ್ಕ ಖುಷಿಗಳನ್ನೂ ಪ್ರೀತಿಯಿಂದ ಅನುಭವಿಸೋ ಮನಗಳು ಅವು.

ಅಷ್ಟೊಂದಾಗಿ ಪ್ರಪಂಚ ನೋಡಿರದ ಅವಳಿಗೆ ಅವನ ಜೀವನ ಅನುಭವವೇ ದಿನ ದಿನಕ್ಕೂ ಹೊಸ ಪ್ರಪಂಚ ನೋಡುತ್ತಿರೋ ತರ ಭಾಸ ಮಾಡಿದ ತರಲೆಗಳೆಷ್ಟೋ, ಭಾವುಕರಾಗಿ ಮಾತಾಡಿದ ದಿನಗಳೆಷ್ಟೋ, ಕಾಲೆಳೆದು /ಎಳೆಸಿಕೊಂಡು ತೋರಿರೋ ಹುಸಿ ಮುನಿಸುಗಳೆಷ್ಟೋ…


ಹೇಳಲಾಗದ ಅವೆಷ್ಟೋ ಇಲ್ಲ ಗಳ ನಡುವೆ ಇರೋ ಒಂದೇ ಒಂದು ಭಾವ ಮಾತ್ರ…ಅವನವಳ ಸ್ನೇಹಿತ.

ಬದುಕು ಕರುಣಿಸಿದ ಅಪರೂಪದ ಗೆಳೆತನದ ಖುಷಿ ಅದು.

 ಆಶ್ಚರ್ಯ ಆಗೋದು ಇಲ್ಲೆ
ಯಾರನ್ನೂ ಅಷ್ಟಾಗಿ ಹಚ್ಚಿಕೊಳ್ಳದ ಅವಳು ಅದ್ಯಾವತ್ತೋ ಅವನ ಸ್ವಚ್ಚ ನಗುವಿಗೆ ಸೋತಿದ್ದಳು… ಸ್ನೇಹಕ್ಕೆ ಜೊತೆಯಾಗಿ, ಜವಾಬ್ದಾರಿಗಳಿಗೆ ಬೆನ್ನು ಮಾಡದೆ, ನಿನ್ನೆಲ್ಲಾ ನೋವುಗಳು ನನ್ನವೂ ಕೂಡಾ ಅನ್ನುತ್ತಾ ನೋವಿಗೆ ನಾ ಜೊತೆ ಇರುವೆ ಅನ್ನೋ ಸೂಕ್ಷ್ಮಗಳ ತಿಳಿ ಹೇಳುತ್ತಾ, ಆತ್ಮೀಯತೆಗೆ ಎರಡರಷ್ಟು ಆತ್ಮೀಯತೆ ತೋರುತ್ತಾ, ಭಾವಗಳನ್ನ ಬಿಡಿ ಬಿಡಿಯಾಗಿ ತಿಳಿಸೋ ಅವನನ್ನ ತುಂಬಾನೇ ಹಚ್ಚಿಕೊಟ್ಟ ಭಾವ ಅವಳದು.

ಮೊದಲ ಮಾತಿಗೆ ಅತೀ ಆತ್ಮೀಯ ಅನ್ನಿಸೋ ಅವನಂತದ್ದೇ ಸ್ನೇಹ ಎಲ್ಲರಿಗೂ ಸಿಗಲಿ….

"ಭಾವ ನೀನಾದರೆ ….ಭಾವನೆ ನಾನು "ಅನ್ನೋ ಸಲುಗೆಯ ಆ ಸ್ನೇಹ ಚಿರಾಯುವಾಗಲಿ ಅನ್ನೋ ಆಶಯವನ್ನು ಹೊತ್ತು …

ಆತ್ಮೀಯತೆಯ ಸೋಂಕೂ ಇಲ್ಲದೇ ಬರಿಯ ಹಣ, ಒಣ ಪ್ರತಿಷ್ಟೆಗಳ ಹಿಂದೆ ಬಿದ್ದಿರೋ ಸಮಾಜಕ್ಕೊಂದು ಧಿಕ್ಕಾರವೀಯುತ್ತಾ…

ರಕ್ತ ಸಂಬಂಧವಿಲ್ಲದೇ, ಸ್ನೇಹಿತರಲ್ಲದೇ, ಪರಸ್ಪರ ಪರಿಚಿತರಲ್ಲದೇ, ಅದೆಲ್ಲೋ ಒಂದು ಸಣ್ಣ ಸ್ನೇಹವಾಗಿ, ಸ್ನೇಹ ಸಂಬಂಧವಾಗಿ ,ರಕ್ತ ಸಂಬಂಧಕ್ಕೂ ಮೀರಿದ ಆತ್ಮೀಯತೆ ಮೂಡಿ, ಭಾವಕ್ಕೆ ಭಾವ ಧಾರೆಯೆರೆಯೋ, ಪ್ರೀತಿಗೆ ಸಹಸ್ರ ಪ್ರೀತಿ ನೀಡೋ ಇಂತಹ ಅದೆಷ್ಟೋ ಪಕ್ವ ಸ್ನೇಹಗಳ ಮಾತಾಗಿ,
 ಇಂತದ್ದೇ ಸ್ನೇಹ ಎಲ್ಲರಿಗೂ ಸಿಗಲಿ…
ಎಲ್ಲರದೂ ಆಗಲಿ.\


 [ಪಂಜುವಿನಲ್ಲಿ ಪ್ರಕಟಗೊಂಡ ನನ್ನ  ಭಾವವಿದೆ :)
ಧನ್ಯವಾದ ಪಂಜು ಬಳಗಕ್ಕೆ ....
ಪಂಜು ಲಿಂಕಿಗಾಗಿ ...
http://www.panjumagazine.com/?p=2469 ]

18 comments:

  1. "ಸ್ನೇಹಕ್ಕೆ ಒಂದೇ ಮಾತು.... ಹೃದಯಗಳು ಆಡೋ ಮಾತು" ಇದು ತಿರುಗುಬಾಣ ಚಿತ್ರದ ಹಾಡು. ಹಾಗೆಯೇ ಸ್ನೇಹಕ್ಕೆ ಬೇಕಿರುವುದು ಎರಡು ಮಿಡಿಯುವ ಹೃದಯಗಳ ಮನಗಳು. ಸಂಬಂಧಕ್ಕೆ ಹೆಸರಿಲ್ಲದ ಎಷ್ಟೋ ನಂಟು ಈ ಜಗತ್ತಿನೊಳಗೆ ಇದೆ. ಅಂಥಹ ನಂಟಿನ ಒಳಗಿನ ಲೋಕವನ್ನು ಒಮ್ಮೆ ಹೊಕ್ಕಾಗ ಸಿಗುವ ಒಂದು ಸುಂದರ ಅನುಭವ ಈ ಲೇಖನ ಓದಿದಾಗ ಸಿಕ್ಕಿತು. ಸೂಪರ್ ಬರಹ. ನನಗೆ ಇಷ್ಟವಾದ ಸಾಲುಗಳು...

    "ಮುಸ್ಸಂಜೆಯಲ್ಲಿ ಸುರಿವ ಮಳೆಗೆ ಮುಖವೊಡ್ದಿ ಖುಷಿಸಿ ಬಂದ ಅವಳು ಇವತ್ತಿನ ಮಳೆಗೆ ನಿನ್ನ ನೆನಪಾಯ್ತು ಗೆಳೆಯಾ, ನೆಲ ತಾಕಿದ ಹನಿಯಲ್ಲಿ ನಾ ನಿನ್ನ ಕಂಡೆ ಅಂದಾಗ ಸುಮ್ಮನೆ ಹನಿಗಳಿಗೆ ಕೈಯೊಡ್ಡು ನೀ ನನ್ನ ತಾಕಿದ ಅನುಭವ ನನ್ನದಾದೀತು"

    ಇದು ಮುಖಾನುಭಾವ ಇಲ್ಲದೆ... ಭಾವನೆಯ ಮುಖವನ್ನು ನೋಡಬಹುದು ಎಂದು ಕೂಗಿ ಕೂಗಿ ಹೇಳುವ ಸಾಲುಗಳು ... ಸೂಪರ್ ಬಿ ಪಿ

    ReplyDelete
    Replies
    1. ಧನ್ಯವಾದ ಶ್ರೀಕಾಂತಣ್ಣ ...
      ಮುಖ ಪರಿಚಯ ಇಲ್ಲದೇ ಇಷ್ಟು ಆತ್ಮೀಯತೆ ,ಸ್ನೇಹ ,ಭಾವ,ಬೆಳೆಯೋಕೆ ಸಾಧ್ಯಾನ ? ಅನ್ನೋ ಪ್ರಶ್ನೆಗೆ ಉತ್ತರ ಹುಡುಕೋಕೆ ಹೋಗಿ ....
      ಕೊನೆಗೂ ಸಿಗದ ಉತ್ತರವನ್ನ ನೀವಿಷ್ಟಪಟ್ಟಿದ್ದು ನಂಗೂ ಇಷ್ಟವಾಯ್ತು :)
      ಬರ್ತಿರಿ

      Delete
  2. ಮೊದಲ ಮಾತಿಗೆ ಅತೀ ಆತ್ಮೀಯ ಅನ್ನಿಸೋ ಅವನಂತದ್ದೇ ಸ್ನೇಹ ಎಲ್ಲರಿಗೂ ಸಿಗಲಿ…. ಎಂಬ ನಿಮ್ಮ ಆಶಯ ನೆಚ್ಚಿಗೆಯಾಯಿತು. ಪರಿಚಯವೇ ಇಲ್ಲದ ಅದೆಷ್ಟೋ ಸ್ನೇಹಗಳು ನನಗೆ ಈ ಮುಖ ಪುಟ ಬ್ಲಾಗ್ ಲೋಕದಿಂದ ಸಿಕ್ಕಿವೆ. ನನಗೆ ಅದೇ ಆನಂದ. ಒಳ್ಳೆಯ ಲೇಖನ ಭಾಗ್ಯ ಅವರೇ,

    ReplyDelete
    Replies
    1. ಥಾಂಕ್ಸ್ ಬದರಿ ಸರ್ ….

      ನಿಜ ನನ್ನದೂ ಈ ಭಾವಕ್ಕೆ ಹೊರತಾಗಿಲ್ಲ …

      ಈ ಬ್ಲಾಗ್ ಮುಖ ಪುಟದಲ್ಲೇ ನನ್ನ ಅದೆಷ್ಟೋ ಆತ್ಮೀಯರಿದ್ದಾರೆ ..ನನ್ನವರಾಗಿ ..ನನ್ನೆಲ್ಲಾ ಭಾವಕ್ಕೂ ಜೊತೆಯಾಗಿ ..ಬರಹಕ್ಕೆ ಪ್ರೋತ್ಸಾಹಕರಾಗಿ..

      ನೀವಿಷ್ಟಪಟ್ಟಿದ್ದು ನನಗೂ ಖುಷಿ

      Delete
  3. ಅಭಿನಂದನೆಗಳು.....ಪಂಜುವಿನಲ್ಲೂ ನೋಡಿದೆ...
    ಬರೆಯುತ್ತಿರಿ...
    ಶುಭವಾಗಲಿ...
    ನೋಡು ನೋಡುತ್ತಿದ್ದಂತೆ ಏಣಿ ಹತ್ತುತ್ತಾ ಮೇಲೆ ಮೇಲೇ ಹೋಗುತ್ತಿದ್ದೀರಿ...ಖುಷಿ ಆಗ್ತಿದೆ...:)
    ನಮಸ್ತೆ :)

    ReplyDelete
    Replies
    1. ಥಾಂಕ್ಸ್ ಚಿನ್ಮಯ್ ಜಿ ...
      ಎಲ್ಲಕ್ಕೂ ಕಾರಣ ನಿಮ್ಮೆಲ್ಲರ ಪ್ರೋತ್ಸಾಹ :)
      ಖುಷಿ ಆಯ್ತು ..ಬರ್ತಿರಿ
      ನಮಸ್ತೆ

      Delete
  4. ನವುರು ಭಾವನೆಗಳ ಸುಂದರ ಪ್ರಸ್ತುತಿ.. ನನಗೂ ಇಂಥದ್ದೇ ಗೆಳೆತನದ ಭಾಗ್ಯ ಸಿಕ್ಕಿದೆ ... ಅಲ್ಲೂ ರಕ್ತ ಸಂಬಂಧಕ್ಕೂ ಮೀರಿದ ಆತ್ಮೀಯತೆ ಇದೆ ... ಅದೇ ಕಾರಣಕ್ಕೋ ಏನೋ ನಿಮ್ಮ ಬರಹ ಮನದಾಳಕ್ಕೆ ಹೊಕ್ಕಿತು ...

    ReplyDelete
    Replies
    1. ಥಾಂಕ್ಸ್ ಹುಸೇನ್ ಸರ್ ...
      ನಿಜ ಎಲ್ಲೋ ಒಂದು ಪುಟ್ಟ ಹಾಯ್ ಇಂದ ಶುರುವಾಗಿ ಕೊನೆಗೊಮ್ಮೆ ಎಲ್ಲಾ ಭಾವಕ್ಕೂ ಜೊತೆಯಾಗಿ ನಿಲ್ಲೋ ಇಂತಹ ಸ್ನೇಹವನ್ನೊಮ್ಮೆ ಹಿಂತಿರುಗಿ ನೋಡಿದಾಗ ಆಶ್ಚರ್ಯ ಅನಿಸುತ್ತೆ !!!
      ಬದುಕ ಪ್ರೀತಿಗೆ ಇನ್ನೇನು ಬೇಕು ಅಲ್ವಾ ?
      ಬರ್ತಾ ಇರಿ

      Delete
  5. ಚೆಂದದ ಭಾವಗಳು .... ಸ್ನೇಹ ಒಂದು ರೀತಿಯ ಸಂಚಲನ .... ರಕ್ತಸಂಬಂಧ ಮೀರಿದ ಬಂಧ ...ಯಾವುದೆ ಒತ್ತಡಗಳಿರದ ಮಧುರ ಭಾವ... ಯಾವ ಸಂಕೋಲೆಗಳಿಗೂ ಸಿಲುಕದ ಸುಂದರ ಸಿಂಚನ ... :)
    ಅಭಿನಂದನೆಗಳು ನಿನ್ನ ಸಾಧನೆಗೆ ಗೆಳತಿ :)
    I'm proud of u :)

    ReplyDelete
  6. ಥಾಂಕ್ಸ್ ಜಿ..
    ಸ್ನೇಹದ ಸಂಕೋಲೆಯೆ ಹಾಗೆ ಅಲ್ವಾ?
    ಹೆಸರಿರದೇ ಹತ್ತಿರವಾಗಿ ಬಿಡುತ್ತೆ..
    ಇಷ್ಟ ಪಟ್ಟಿದ್ದು ಖುಷಿ ಆಯ್ತು

    ReplyDelete
  7. This comment has been removed by the author.

    ReplyDelete
  8. ಓದು ಓದುತ್ತಿದ್ದಂತೆಯೇ ಜೀವನದ ಅತ್ಯಂತ ಸ್ಮರಣಾರ್ಹ ಸ್ನೇಹದ ಕೆಲವು ಕ್ಷಣಗಳು ಹಾಗೆ ಕಣ್ಮುಂದೆ ಹಾದು ಹೋದಂತಾಯಿತು! ಎಂದಿನಂತೆ ಈ ಬಾರಿಯೂ ಅತ್ಯಂತ ಭಾವುಕತೆಯಿಂದ ತುಂಬಿದೆ ನಿಮ್ಮ ಬರಹ! ಹೀಗೆ ಬರೆಯುತ್ತಿರಿ...

    ReplyDelete
    Replies
    1. ಥಾಂಕ್ಸ್ ಪ್ರದೀಪ್ ಜಿ ....
      ಬರಹ ಓದಿ ನಿಮಗೂ ಇಂತದ್ದೇ ಸ್ನೇಹದ ಸಲುಗೆಯ ಭಾವ ನೆನಪಾದ್ರೆ ನಾ ಬರೆದಿದ್ದು ಸಾರ್ಥಕ :)

      Delete
  9. ತುಂಬಾ ದಿನಗಳ ನಂತರ ಪ್ರತಿ ಕ್ರಿಯಿಸುತ್ತಿದ್ದೆನೆ. ನಿಜ ಹೇಳ್ಬೇಕು ಅಂದ್ರೆ ಏನು ಹೇಳಬೇಕು ಅಂತ ಗೊತ್ತಾಗದೆ ಒದ್ದಾಡ್ತಾ ಇದ್ದೇನೆ. ನಮ್ಮ ಜೀವನದಲ್ಲಿ ಎಷ್ಟೋ ಸಂಬಂಧಗಳು ನಮ್ಮ ಜೊತೆಯಾಗಿರುತ್ತೆ. ಅದರಲ್ಲಿ ರಕ್ತ ಸಂಬಂಧ ಬಿಟ್ಟು ಉಳಿದವೆಂದರೆ ಸ್ನೇಹ, ಸಂಗಾತಿ ಇನ್ನೂ ಹಲವು. ಕೆಲ ಸಂಬಂಧಗಳೇ ಹೀಗೆ ರಕ್ತ ಸಂಬಂಧಕ್ಕಿಂತಲೂ ಹೆಚ್ಚು ಹತ್ತಿರವಾಗಿಬಿಡುತ್ತೆ. ಅದರಲ್ಲೂ ಸ್ನೇಹ ಅನ್ನೋ ಸಂಬಂಧವೇ ಹೀಗೆ ಹಚ್ಚಿಕೊಂಡಷ್ಟೂ ಹತ್ತಿರವಾಗಿಬಿಡುತ್ತೆ.
    ಸ್ನೇಹದ ಭಾವಗಳನ್ನ ಪದಗಳಲ್ಲಿ ಹಿಡಿಯೋದು ತುಂಬಾ ಕಷ್ತ, ಹಾಗಾಗಿ ನಿಮ್ಮ ಬರಹ ಒದಿ ಒಮ್ಮೆ ಕಣ್ಣು ಒದ್ದೆಯಾದದ್ದಂತೂ ನಿಜ. ಎಷ್ತೋ ಸಾಲುಗಳು ಮನಕ್ಕೆ ತುಂಬಾ ತಾಕಿದವು.

    "ಅವಳ ಪ್ರಶ್ನೆಗೆ ಅವನದೊಂದು ಮರು ಪ್ರಶ್ನೆ! ಪ್ರಶ್ನೆಗೆ ಪ್ರಶ್ನೆಯೇ ಉತ್ತರವಾ ಅನ್ನೊದೇ ಅವಳು ತಿಳಿಯದೇ ಕೇಳೋ ಪ್ರಶ್ನೆ :)" ನಿಜಕ್ಕೂ ಪ್ರಶ್ನೆಗೆ ಪ್ರಶ್ನೆಯೇ ಉತ್ತರ.

    "ಮುಸ್ಸಂಜೆಯಲ್ಲಿ ಸುರಿವ ಮಳೆಗೆ ಮುಖವೊಡ್ದಿ ಖುಷಿಸಿ ಬಂದ ಅವಳು ಇವತ್ತಿನ ಮಳೆಗೆ ನಿನ್ನ ನೆನಪಾಯ್ತು ಗೆಳೆಯಾ, ನೆಲ ತಾಕಿದ ಹನಿಯಲ್ಲಿ ನಾ ನಿನ್ನ ಕಂಡೆ ಅಂದಾಗ ಸುಮ್ಮನೆ ಹನಿಗಳಿಗೆ ಕೈಯೊಡ್ಡು ನೀ ನನ್ನ ತಾಕಿದ ಅನುಭವ ನನ್ನದಾದೀತು ಅಂತ ಕಣ್ಣು ಮಿಟುಕಿಸೋ ಅವನು." ಆಹಾ.

    "ಮೊದಲ ಮಾತಿಗೆ ಅತೀ ಆತ್ಮೀಯ ಅನ್ನಿಸೋ ಅವನಂತದ್ದೇ ಸ್ನೇಹ ಎಲ್ಲರಿಗೂ ಸಿಗಲಿ" ಎಲ್ಲರಿಗೂ ಇದೇ ತರಹದ ಸ್ನೆಹ ಸಿಕ್ಕರೆ ಎಷ್ತು ಚೆನ್ನ ಅಲ್ಲವೇ? ಈ ಆಶಯ ತುಂಬಾ ಹಿಡಿಸಿತು.

    ಬರೆಯೋಕೆ ಹೋದರೆ ತುಂಬಾ ಇದೆ. ಸಮಯದ ಅಭಾವ, ನೆಟ್ ಪ್ರೊಬ್ಲ್ಮಮ್.. ಎಲ್ಲರಿಗೂ ಇಂಥಹದ್ದೇ ಸ್ನೇಹ ಸಿಗಲಿ ಅನ್ನುವುದೇ ನನ್ನ ಆಶಯ ಕೂಡ.

    ಮನಕ್ಕೆ ಹತ್ತಿರವಾಗೋ,
    ಭಾವಕ್ಕೆ ಜೋತೆಯಾಗೋ,
    ನಗುವ ಹಿಂದಿನ ನೋವ ಅರಿಯೋ
    ಸ್ನೇಹವಿರಲಿ ಎಲ್ಲರಲೂ.

    ಮತ್ತೊಮ್ಮೆ ಪ್ರಿತಿಯ ಸಲಾಮು ಸುಂದರ ಬರಹಕ್ಕೆ.

    ReplyDelete
    Replies
    1. ಧನ್ಯವಾದ ಗಣೇಶ್ ಜಿ
      ತುಂಬಾ ದಿನದ ನಂತರ ಬ್ಲಾಗ್ ಗೆ ಬಂದಿದ್ದು ಖುಷಿ ಆಯ್ತು ...
      ನಿಜ ,ಎಲ್ಲೋ ಒಂದು ಸಣ್ಣ ಸ್ನೇಹವಾಗಿ ಆ ಸ್ನೇಹವೆ ಬದುಕಾಗೋದು ಚಂದವೆ ....
      ಗೆಳತಿ ಊಟ ಮಾಡದಿದ್ದಾಗ ಬೈದು ದೂರದಿಂದಲೇ ಊಟ ಮಾಡಿಸೋ ಗೆಳೆಯ ,
      ಅವಳಿಗಿರದ ಅವಳೂಟ ,ಅವಳ ಬದುಕ ಬಗೆಗಿನ ಅವನ ಪ್ರೀತಿ ,ಸಲುಗೆ, ಸಿಟ್ಟು...
      ಒಂದು ದಿನ ಮಾತಾಡದೇ ಇರೋದಕ್ಕೆ ಏನೋ ಕಳಕೊಂಡ ಭಾವ ...
      ಇಂತದ್ದೇ ಸಲುಗೆಯ ಸ್ನೇಹ ,ಸ್ನೇಹದ ಆತ್ಮೀಯತೆ,ಆತ್ಮೀಯತೆಯ ಪ್ರೀತಿ,ಪ್ರೀತಿಯ ಬಂಧ
      ಎಲ್ಲರದೂ ಆಗಲಿ :)

      Delete
  10. ಸಂಭಂದಗಳಿಗೆ ಮೀರಿದ್ದು ಸ್ನೇಹ.. ಆದರೆ ಸ್ನೇಹವೂ ಸಂಭಂದವೆ.. ಸಂಭಂದವೋ, ಅಲ್ಲವೂ ಮುಖ್ಯವಲ್ಲ. ಒಬ್ಬರಲ್ಲೊಬ್ಬರು ಇಟ್ಟಿರುವ ನಂಬಿಕೆ. ಅದು ಇದ್ದಷ್ಟು ದಿನ ಸ್ನೇಹವಿರುತ್ತದೆ. ಬಾವಗಳ ಸೊಕ್ಷ್ಮ, ನವಿರಾದ ನವಿಲುಗರಿಯಂತ , ಅಪ್ಯಾಯಮಾನ ಪದಗಳಿವೆ ಲೇಖನದಲ್ಲಿ. ಇಷ್ಟವಾಯಿತು.

    ReplyDelete
    Replies
    1. ಧನ್ಯವಾದ ..
      ಆತ್ಮೀಯ ಪ್ರತಿಕ್ರಿಯೆಗೆ ಆಭಾರಿ :)
      ನಿಮಗಿಷ್ಟವಾದುದ್ದು ನನ್ನ ಖುಷಿ .
      ನಿರುಪಾಯದ ಹೊಸ ಅತಿಥಿಗೆ ಸ್ವಾಗತ

      Delete
  11. ವರ್ಣನಾತೀತ ಸಂಬಂಧಕ್ಕೆ ಪದಗಳ ಅಲಂಕಾರ ಪ್ರಶಂಸನೀಯವಾಗಿದೆ.
    ನವಿರು ಭಾವನೆಗಳನ್ನೊಳಗೊಂಡ ಪದಗಳು ಒದುಗರನ್ನೂ ಅದೇ ಲಹರಿಗೆ ಕರೆದೊಯ್ಯುತ್ತವೆ.
    ನಿಮ್ಮ ಬರವಣಿಗೆ ನಮ್ಮ ಮನಸ್ಸನ್ನೊಂದಿಷ್ಟು ಹಗುರಗೊಳಿಸಿದೆ.ಧನ್ಯವಾದಗಳು.

    ReplyDelete