ಒಂಟಿತನದ, ಕತ್ತಲೆಯ ಭಾವದ ಜೊತೆಗಾರನಾದ ಅವನ ಮೇಲೆ ಅವಳಿಗ್ಯಾಕೋ ಒಲವ ಮೋಹ....ಅವನವಳ ಗೆಳೆಯ ,ಇನಿಯ ,ಪ್ರೀತಿ ,ಸಿಟ್ಟು.ಬೇಸರ.
ಎಲ್ಲಾ ಭಾವಗಳ ಏಕೈಕ ಸಂಗಾತಿ ಎಂದರೆ ಸರಿಯಾದೀತೇನೋ ...
ಅವಳ ಅದೆಷ್ಟೋ ನೀರವ ರಾತ್ರಿಗಳಿಗೆ ಕಿವಿಯಾದವನವನು .ಅದೆಷ್ಟೋ ಬೇಸರಗಳ ಒಡೆಯ ,ಹಲ ಅತಿಶಯದ ಕನಸುಗಳ ಗೆಳೆಯ ....
ಪ್ರೀತಿ ಕಂಗಳ ಸರದಾರನೀ ಕನಸುಗಾರ :)
ಅವಳ ಕೆಲ ಗುಟ್ಟುಗಳೂ ಅವನ ಜೋಪಡಿಯಲ್ಲಿ ಜೋಪಾನವಾಗಿವೆಯೇನೋ ...!
ಭಾವಕ್ಕೆ ಜೊತೆಯಾಗಿ -
ದೂರಾದ ನೋವ ಭಾವವನ್ನ ಸಂಜೆಯ ಕತ್ತಲಲ್ಲಿ ಮಹಡಿಯಲ್ಲಿ ಕೂತು ಮಾತಾಡೋದು ಅವಳಿಗ್ಯಾಕೋ ಇಷ್ಟ ..ಒಂದರ್ಧ ಗಂಟೆ ಮನದೊಂದಿಗೆ ಮಾತಾಡೋಕೆ ಬೆಳಿಗ್ಗೆ ಇಂದ ಸಂಜೆ ಆಗೋದನ್ನೆ ಕಾಯೋಳು ಅವಳು ...ಕತ್ತಲ ರಾತ್ರಿಗಳಲ್ಲೂ ಮೋಡಗಳ ಮರೆಯಲ್ಲಿ ಅವನನ್ನ ಹುಡುಕುತ್ತಾ ಕೂರೋ ಹುಚ್ಚು ಮನ ಅವಳದ್ದು ..ಅವತ್ತು ಅವನಿಲ್ಲ ಅಂತ ಗೊತ್ತಿದ್ದರೂ ಮತ್ತವನನ್ನೇ ಹುಡುಕೋ ಧಾವಂತದ ಹುಡುಗಿ ಅವಳು ...
ಇಂಥದ್ದೇ ಅದೆಷ್ಟೋ ಸಾವಿರ ಭಾವಗಳ ಹಕ್ಕುದಾರ ಅವನು ..ನಗು ಮೊಗದಿ ಎಲ್ಲರನೂ ಮೋಡಿ ಮಾಡೋ ಚೆನ್ನಿಗ..."ನನ್ನ ಹುಡುಗ ನಿನ್ನಂತೇ ಇರಬೇಕು ಕಣೋ " ಅನ್ನೋ ಅದೆಷ್ಟೋ ಹುಡುಗಿಯರ ಮನಸ ಹುಡುಗ ಅವಳ ಈ ಕನಸ ಸುಂದರ :)
ಪುಟ್ಟುವಿಗೆ ಮಾಮ ...ಅವನಮ್ಮನಿಗೆ ಮಗನನ್ನ ಊಟ ಮಾಡಿಸೋಕೇ ಅಂತಾನೇ ಬಂದ ಗೆಳೆಯ .....
ಹುಡುಗರಿಗೆ ಪ್ರೇಮ ಕವಿ ..ಗೆಳತಿಯರಿಗೆ ಮೊದಲ ಗೆಳೆಯ...ಅಜ್ಜ ಅಜ್ಜಿಗೆ ವಾಕಿಂಗ್ ಫ್ರೆಂಡ್ ....ಅದೆಷ್ಟೋ ಬೇಸರಿಸೋ ಮುಸ್ಸಂಜೆಗಳ ನೆಚ್ಚಿನ ಮಿತ್ರ ....
ಬೆಳದಿಂಗಳ ಸಜ್ಜನಿಕ .ಜ಼ಗದೆಲ್ಲ ಮಧುರ ಭಾವಗಳ ಒಡೆಯ ಈ ಕ್ಷಣ ಮನವನ್ನಾಳಿದ ಸೊಬಗು :)
ಕಾರ್ಮೋಡದೊಳಗೂ ನುಸುಳೋ ಪರಿಣಿತ .
ನೋವನ ಮುದುಡಿಸೋ ನಲಿವಿನ ಧೀಮಂತ .
ಅವನೇ ಇವನು ...
ಯಾರಿವನು ?
ಮುನಿಸಿಕೊಂಡ ನಕ್ಷತ್ರ ಬಾನ ಮಾಳಿಗೆಯಲ್ಲಿ ಕುಳಿತುಕೊಂಡರೆ ಅದನ್ನೂ ಸ್ಪರ್ಶಿಸಿ ಕಾಂತಿ ಕೊಡೋ ಅದೇ ಬಾನ ಚಂದಿರನಿವನು ....
ಫೋಟೋ ಕ್ರೆಡಿಟ್ಸ್ :ಬಾಲಣ್ಣ (ನಿಮ್ಮೊಳಗೊಬ್ಬ ಬಾಲು)
ಅವಳ ಮನಕ್ಕೆ ಅವನು -
ಕಣ್ಣ ಕನಸ ಹೊರಹಾಕದವಳಿಗೆ
ಕಣ್ಣಿನಲೇ ಮಾತು ಕಲಿಸೋನು.
ಭಾವ ಹಂಚಿಕೊಳ ಬರದವಳಿಗೆ
ಭಾವಗಳ ಬದುಕ ತಿಳಿಸೋನು .
ಯಾರಿವನು ?
ನೀನಾ?
ಅವನಾ?
ಫೋಟೋ ಕ್ರೆಡಿಟ್ಸ್ :ಬಾಲಣ್ಣ(ನಿಮ್ಮೊಳಗೊಬ್ಬ ಬಾಲು)
ಬದುಕ ಪಯಣದಲ್ಲೊಂದು ಖಾಯಂ ಸಹ ಪಯಣಿಗನ ಹುಡುಕಾಟದಲ್ಲಿರೋ ಅವಳಿಗೆ ..
ಕನಸುಗಳಿಗೆ ಜೊತೆಯಾಗೋ ನೀರವ ರಾತ್ರಿಗಳ ಸಮಾಧಾನೀ ಗೆಳೆಯನಾದ ಬಾನ ಚಂದಿರನೇ ಬಾಳ ಚಂದಿರನಾದಂತೆ ಭಾಸವಾಗಿ...
ಅವಳದೇ ಕನಸುಗಳ ಸುತ್ತಾ ನನ್ನದೊಂದು ಸುತ್ತು :)
(ಬಾಲಣ್ಣ ,ಸುಂದರ ಚಂದಿರನನ್ನು ನಿಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಕ್ಕೆ ಮೊದಲ ಧನ್ಯವಾದ ನಿಮಗೆ .ನಿಮ್ಮ ಸುಂದರ ಚಂದಿರ ಎಂತಹವರನ್ನೂ ಮೋಡಿ ಮಾಡೋ ತರ ಇದೆ :)
ಬಲು ಸುಂದರ ನಿಮ್ಮೂರಿನ ಚಂದಿರನನ್ನು ತಂದು ಕೈಯಲ್ಲಿರಿಸಿದ್ದೀರಿ .ಎಲ್ಲರಿಗೂ ಇಷ್ಟವಾಗೋ ಚಂದಿರ ನಿಮ್ಮಿಂದ ಇನ್ನೂ ಸುಂದರವಾಗಿ ಕಂಡ ಇವತ್ತು ...ಥಾಂಕ್ಸ್ ಜಿ )
ಈ ಬಾರಿ ನಂದೇ ಮೊದಲ ಕಾಮೆಂಟ್..
ReplyDeleteಥಾಂಕ್ಸ್ ಪ್ರಶಸ್ತಿ .
Delete’ಮೊದಲ ಓದುಗ ನಾನು’ ಅಂತ ನನ್ನ ಬ್ಲಾಗ್ ಗೂ ಖುಷಿಸೋರಿದ್ದಾರಲ್ಲ ಅನ್ನೋದು ನನ್ನ ಖುಷಿ :)
ಸಂದ್ಯಕ್ಕನ ಬ್ಲಾಗಲ್ಲಿ ಚಂದ್ರನ ಬಗ್ಗೆ ಬರೆದಾಗ ಇದರ ಬಗ್ಗೆ ಒಂದು ಪೋಸ್ಟ ನಿರೀಕ್ಷಿಸಿದ್ದಿ.. ಚೆಂದಿದ್ದು ಪುಟ್ಟಿ :-)
ReplyDeleteಧನ್ಯವಾದ ಜಿ .
Deleteಸಂಧ್ಯೆಯಂಗಳದಿ ’ಅಂಗಳದ ಚಂದಿರನಾಗಲಿ ಮನದ ಹುಡುಗ’ ಅಂದಿದ್ದೆ ನಾ ...
ಅದಕ್ಕವರ ಪ್ರತಿಕ್ರಿಯೆಯೇ ಇದಿಷ್ಟೂ ಭಾವಕ್ಕೇ ಜೊತೆಯಾಯಿತೇನೋ :)
ಯಾರೂ ಗುರುತಿಸಲ್ಲ ಅಂದುಕೊಂಡಿದ್ದನ್ನ ಮೊದಲ ಕಾಮೆಂಟುದಾರರೇ ಗುರುತಿಸಿಬಿಟ್ಟರು :)
ಖುಷಿ ಆಯ್ತು ...ಬರ್ತಾ ಇರಿ
ಚಂದ್ರ ಇದ್ದಾಗ ಏನೇನೋ ಹೊಸ ಹೊಸ ಭಾವನೆಗಳು ಮೂಡದಂತೂ ಹೌದು :)
ReplyDeleteಧನ್ಯವಾದ ಹರೀಶ್ ಜಿ ..
Deleteಚಂದ್ರನನ್ನ ನೋಡೋಕೆ ಅಂತ ನನ್ನ ಬ್ಲಾಗ್ ಗೆ ಮೊದಲು ಇಣುಕಿದ್ರಿ ಅಲ್ವಾ ? :)
ನಿಜ...ಚಂದ್ರಂಗೆ ಚಂದಿರನೇ ಸಾಟಿ ಭಾವಗಳ ವಿನಿಯೋಗದಲ್ಲಿ
ಬರ್ತಾ ಇರಿ .
ಅತಿಯಾದ್ರೆ ಅಮೃತವೂ ವಿಷ ಅಂತಾರಲ್ಲಾ.. ಹಾಗೆ ನಮ್ಮ ಸೂರ್ಯ.. ಅದೆಷ್ಟು ಪ್ರಖರ ಬೆಳಕು.. ಸುಟ್ಟೇ ಹಾಕ್ತಾನೇನೋ ಅನ್ನೋವಷ್ಟು..
ReplyDeleteನಮ್ಮ ಚಂದ್ರ ಅದೇ ಸೂರ್ಯನಿಂದ ಸ್ವಲ್ಪವೇ ಸ್ವಲ್ಪ ಬೆಳಕು ಸಾಲ ತಂದು ಕಡುಗಪ್ಪಲ್ಲಿ ನಾನೊಬ್ನೆ ಸರ್ದಾರ ಅನ್ನೋ ತರ ಬೆಳ್ಳಗೆ ಬೆಳಗಿ ಹೀಗೆ ಅದ್ಯಾರದೋ ಕವಿತೆಗಳಿಗೆ ಸ್ಫೂರ್ತಿಯಾಗ್ತಾನೆ.. ಇನ್ಯಾರದೋ ಮನದ ಭಾವಗಳಿಗೆ ಕಿವಿಯಾಗ್ತಾನೆ.. ಆಯಾಸಗೊಂಡವರ ಪಾಲಿಗೆ ಆಸರೆಯಾಗ್ತಾನೆ.. ಅಲ್ಲೆಲ್ಲೋ ಮಗು ಊಟ ಬೇಡ ಅಂದ್ರೆ ರಮಿಸಿ ಒಲ್ಲಿಸಿ ಉಣಿಸುತ್ತಾನೆ.. ಕಾರಿರುಳ ಒಂಟಿ ದಾರಿಗಳಲ್ಲಿ ಜೊತೆಗೆ ಹೆಜ್ಜೆ ಹಾಕ್ತಾನೆ..
ಮತ್ತಲ್ಲಿ ಸೂರ್ಯ ಮತ್ತಷ್ಟು ಉರಿದುರಿದು ಉಗಿಸಿ ಉಪ್ಪಿನಕಾಯಿ ಹಾಕಿಸಿಕೊಳ್ತಿರ್ತಾನೆ...
ಭಾವ ಲಹರಿಗಳು ಹೀಗೆಯೇ ಇನ್ನಷ್ಟು ಹರಿದು ಬರಲಿ.. :)
ಧನ್ಯವಾದ ದಿಲೀಪ್ ಅಣ್ಣಾ...
Deleteನಿಜ ಪ್ರಖರತೆಯ ಸೂರ್ಯನಿಗಿಂತ ಮಂದಹಾಸದ ಬೆಳದಿಂಗಳ ಚಂದಿರನೇ ಎಲ್ಲರಿಗೂ ಇಷ್ಟ ಆಗ್ತಾನೆ ಅಲ್ವಾ ?
ಸಿಟ್ಟಿನ ಸೂರ್ಯನಿಂದ ದೂರಾಗಿ ..ಚಂದಿರನ ಮುಗ್ಧತೆಗೆ ವಾಲೋ ಭಾವವನ್ನ ಇಷ್ಟ ಪಟ್ಟಿದ್ದಕ್ಕೊಂದು ಥಾಂಕ್ಸ್ .:)
ಚಿಕ್ಕ ಮಕ್ಕಳಿಗೆ ಚಂದಮಾಮ.. ದೊಡ್ಡ ಮಕ್ಕಳಿಗೆ ಚಂದ್ರ.. ಪ್ರೇಮಿಗಳಿಗೆ ಚಾಂದ್-ಕ-ತುಕುಡ.. ಹಿರಿಯರಿಗೆ ತಮ್ಮ ಜೀವನದ ಹಾದಿಯಲ್ಲಿ ನಡೆಯುವ ಪಯಣಿಗ.. ಹೀಗೆ ನೀರಿನಂತೆ ಪಾತ್ರೆ ತಕ್ಕ ಪಾತ್ರವನ್ನು ಬದಲಿಸುವ ಚಂದ್ರ ಎಲ್ಲರ ಕಣ್ಮಣಿ ಹೌದು. ಬೆಳದಿಂಗಳಿಗಾಗಿ ಕಾಯುವ ಪ್ರೇಮಿಗಳು ಒಂದು ಕಡೆಯಾದರೆ.. ಅಮ್ಮನ ಕೈ ತುತ್ತು ತಿನ್ನಲು ಕಾಯುವ ಅವಿಭಕ್ತ ಕುಟುಂಬ ಒಂದು ಕಡೆ.. ಹೀಗೆ ಎಲ್ಲರ ಮನದ ನಾಯಕ ಮನದ ಕಾರಕನಾದ (ಜ್ಯೋತಿಷ್ಯದ ಪ್ರಕಾರ) ಸಂಜೆ ಬಾನ ಸಿಂಧೂರ ಚಂದಿರನ ಲೇಖನ ಸೊಗಸಾಗಿ ಮೂಡಿಬಂದಿದೆ. ಲೇಖನದ ಕಿರೀಟಕ್ಕೆ ನವಿಲು ಗರಿ ಈ ಸಾಲುಗಳು "ಕಾರ್ಮೋಡದೊಳಗೂ ನುಸುಳೋ ಪರಿಣಿತ
ReplyDeleteನೋವನ ಮುದುಡಿಸೋ ನಲಿವಿನ ಧೀಮಂತ"
ಸೂಪರ್ ಲೇಖನ.. ನಿನಗೊಂದು ಚಂದಿರನ ಬೆಳದಿಂಗಳಿನಂತಹ ನಗೆಯ ಕಾಣಿಕೆ ಭಾಗ್ಯ ಪುಟ್ಟಿ.
:) ಎಂದಿನಂತೆ ಬರಹಕ್ಕಿಂತ ಹತ್ತಿರವಾಗೋ ಶ್ರೀಕಾಂತಣ್ಣನ ಪ್ರತಿಕ್ರಿಯೆ :)
Deleteಥಾಂಕ್ಸ್ ಜಿ ...ಕಾರ್ಮೋಡದೊಳಗೆ ನುಸುಳೋ ಪರಿಣಿತಿ ನಮಗೂ ಮಾದರಿ ಅಲ್ವಾ ..ಬಿಡದೇ ಬರೋ ಕಷ್ಟಗಳ ,ಬೇಸರಗಳೊಳ ನುಸುಳಿ ಮತ್ತದೇ ಬೆಳಕು ನೀಡಬೇಕೆಂಬ ಆಶಯದೊಂದಿಗೆ ಈ ಬಾನ ಮಾಳಿಗೆಯಲ್ಲಿ ಬಾಳ ಚಂದಿರ :)
ನಗೆಯ ಕಾಣಿಕೆ ಕೊಟ್ಟಿದ್ದೂ ಖುಷಿ ಆಯ್ತು :)
ಬರ್ತಾ ಇರಿ
ಈ ತಂಗಿಯ ಕವಿತೆ ಕೇಳಲೆಂದೇ ನಿನ್ನೆ ಆ ಚಂದಿರ ನನ್ನ ಕ್ಯಾಮರಾಗೆ ಪೋಸ್ ಕೊಟ್ಟಾ ಅನ್ನಿಸುತ್ತೆ. ಹೌದು ಈ ಚಂದಿರ ಬಲು ಸುಂದರ, ಮಕ್ಕಳ ಪ್ರೀತಿಯ ಚಂದಾಮಾಮ , ಪ್ರೇಮಿಗಳಿಗೆ ಸ್ಪೂರ್ತಿಧಾಮ , ಬೆಳದಿಂಗಳ ಊಟಕ್ಕೆ ಜೊತೆಗಾರ, ನಕ್ಷತ್ರ ಲೋಕದಲ್ಲಿ ಪ್ರಶಾಂತ ನಗೆಯ ಸೊಗಸುಗಾರ, ಇತ್ಯಾದಿ ಕವಿತೆಗಲ್ಲಿನ ಪ್ರತೀ ಪದಗಳು ಭಾವನೆಗಳ ಮೆರವಣಿಗೆ ಮಾಡಿಸಿವೆ , ಈ ತುಂಟ ಹುಡುಗಿಯಲ್ಲಿ ಇಷ್ಟೊಂದು ಚಂದದ ಭಾವನೆಗಳನ್ನು ಮೂಡಿಸಿದ ಆ ಚಂದಿರಗೆ ಜೈ ಹೊ ಎನ್ನೋಣ ಹಾಗೆ ಕವಿತೆ ಬರೆದ ಆ ತುಂಟ ಹುಡುಗಿಗೆ ಶಹಬಾಸ್ ಎನ್ನೋಣ .
ReplyDeleteಮೊದಲ ಧನ್ಯವಾದ ನಿಮಗೆ ಬಾಲಣ್ಣ :)
Deleteನಿಮ್ಮೂರ ಚಂದಿರನ ರಂಗನ್ನು ತೋರಿಸಿದ್ರಿ ಎಲ್ಲರಿಗೂ ...
’ಬಾಲಣ್ಣ ಇವತ್ತು ನಿಮ್ಮೂರ ಚಂದ್ರ ಹೆಂಗಿದಾನ’ ಅನ್ನೋ ಒಂದೇ ಮಾತಿಗೆ ಮಹಡಿಯೇರಿ ಅವನನ್ನ ಕೈಯಲ್ಲಿ ಹಿಡಿದು ತಂದು ತೋರಿಸಿರೋ ನಿಮ್ಮ ಮನಕ್ಕೊಂದು ನಮನ :)
ಚಂದಿರನ ಮೆಚ್ಚುಗೆಯ ಶಹಬ್ಬಾಶ್ ಗಿರಿಯಲ್ಲಿ ನಿಮ್ಮದೂ ಪಾಲಿದೆ ..ದೊಡ್ಡ ಪಾಲು ಸಂದಾಯವಾಗಬೇಕಿರುವುದೂ ನಿಮಗೆ :)
ಭಾವಗಳ ಮೆರವಣಿಗೆಯನ್ನು ಇಷ್ಟಪಟ್ಟಿದ್ದು ಖುಷಿ ಆಯ್ತು
ಶೀರ್ಷಿಕೆಗೆ 25, ಬಾಲಣ್ಣನ ಚಿತ್ರಕ್ಕೆ 25, ಹೂರಣಕ್ಕೆ 25 ಮತ್ತು ನೇಯ್ಗೆಗೆ 25 = ಒಟ್ಟಾರೆ 100/100.
ReplyDeleteಕವಿಗಳಿಗೆ ಪರಮಾಪ್ತ ಚಂದ ಮಾಮಾ. ಹಲವು ಭಾವಗಳಿಗೆ ಸಲೀಸಾಗಿ ಒಗ್ಗುವ ಮಿತ್ರಮ.
ಬದರಿ ಸರ್ ..ನಿಮ್ಮಿಂದ ನನಗೆ ಸಿಕ್ಕ ಎರಡನೇ ಪೂರ್ಣ ನೂರಂಕ :)
Deleteಚಂದಿರನ ಮನದಂಗಳದ ಭಾವಗಳ ಇಷ್ಟ ಪಟ್ಟು ಓದಿ ನೀವು ಕೊಟ್ಟ ಮೆಚ್ಚುಗೆಗೆ ನಾ ಧನ್ಯ :)
ಬರ್ತಾ ಇರಿ ..
ನಿನ್ನೆ ರಾತ್ರಿಯಷ್ಟೇ ಅವನನ್ನ ಪ್ರಶಾಂತ್ ಗೆ(ನನ್ನ ಪತಿ) ಮತ್ತೆ ಮತ್ತೆ "ಎಷ್ಟು ಚಂದ ನೋಡಿ" ಅಂತ ತೋರಿಸಿ ತೋರಿಸಿ, ಅವರ ಹೊಟ್ಟೆಯುರಿಗೆ ಪಾತ್ರನನ್ನಾಗಿ ಮಾಡಿದೆ ಭಾಗ್ಯ...ಹಾಗೆ ನೀನು ಇನ್ನೊಂದು ಪಾತ್ರವನ್ನ ಅವನಿಗೆ ಆರೋಪಿಸಬಹುದು, "ಗಂಡಂದಿರ ಅಸೂಯೆಯ ಆಗರ" ಅಂತ....ಒಂದೊಂದು ಬರಹದ ಮೂಲಕವೂ ಹೆಚ್ಚುಹೆಚ್ಚು ಆಪ್ತಳೆನಿಸುತಿದ್ದೀಯಾ... May God bless...
ReplyDeleteಥಾಂಕ್ಸ್ ಅನು ಅಕ್ಕ :)
Deleteನಿಮ್ಮೀ ಮೆಚ್ಚುಗೆಯ ನುಡಿಗೊಂದು ನಮನ ..
ನಂಗೂ ನಿನ್ನೆಯ ಇದೇ ಚಂದಿರ ಕಾಡಿದ್ದು !
ಅಂದ ಹಾಗೆ ’ಗಂಡಂದಿರ ಅಸೂಯೆಯ ಆಗರ’ದ ಬಗ್ಗೆ ನನಗೆ ತಿಳಿದಿರಲಿಲ್ಲ ;)
ಹಾ ಹಾ ಹಾ ...
ತುಂಬಾ ತುಂಬಾ ಖುಷಿ ಆಯ್ತು ನಿಮ್ಮ ಪ್ರತಿಕ್ರಿಯೆಯಿಂದ :)
ನಿಮಗೂ ಚಂದಿರನಂಥ ಗೆಳೆಯ ಸಿಗಲಿ ಎಂದು ಆಶಿಸುತ್ತೇನೆ .. ಚೆನ್ನಾಗಿದೆ ಎಲ್ಲ ಸಾಲುಗಳು ..
ReplyDelete"ಕಾರ್ಮೋಡದೊಳಗೂ ನುಸುಳೋ ಪರಿಣಿತ .ನೋವನ ಮುದುಡಿಸೋ ನಲಿವಿನ ಧೀಮಂತ ." ಈ ಸಾಲು ಮತ್ತು ಕಲ್ಪನೆ ತುಂಬ ಇಷ್ಟ ಆಯಿತು .. ನಿಮ್ಮ ಭಾವನೆಗಳ ಆಗರ ಹೀಗೆ ಹೊರ ಹೊಮ್ಮುತ್ತಿರಲಿ ...
ಸಾಲುಗಳನ್ನೆಲ್ಲಾ ಇಷ್ಟಪಟ್ಟು ಓದಿದ್ದಕ್ಕೆ ಧನ್ಯವಾದ ಗಿರೀಶ್ ಜಿ :)
Deleteಚಂದಿರನಂತಹಾ ಗೆಳೆಯ ಸಿಗಲಿ ಅಂತ ಹಾರೈಸಿದ್ದು ಖುಷಿ ಆಯ್ತು :ಫ್
ಬರ್ತಾ ಇರಿ
ಚಂದಿರನು ಮರೆಯಾದರೇನಂತೆ ತನ್ವಂಗಿ....
ReplyDeleteಅಂತಾ ಬರ್ದಿದ್ದೆ ಹಿಂದೊಂದ್ ಸಲಾ....
ಈ ಸಲ ಅದ್ನಾ,
ಚಂದಿರನು ಸೆರೆಯಾದಾನೇನೆ ಪುಟ್ತಂಗಿ ಅನ್ಬೇಕು...
ಚೆನ್ನಾಗಿದೆ :)...
ಬರೀತಾ ಇರಿ :)..
ಥಾಂಕ್ಸ್ ಚಿನ್ಮಯಣ್ಣಾ ..
Deleteಬರಹ ಓದಿ ,ಸೆರೆಯಾದ ಚಂದಿರನನ್ನು ಇಷ್ಟಪಟ್ಟು ,
ಪುಟ್ತಂಗಿಯನ್ನು ಬರೆಯೋಕೇ ಪ್ರೋತ್ಸಾಹಿಸಿದ್ದು ಖುಷಿ ಕೊಡ್ತು :)
ಬರ್ತಿರಿ
ಮನದ ಚಂದಿರನ ಬಗ್ಗೆ ನೀ ಹಾಕಿದ ಕಾಮೆಂಟ್ ಓದಿದವಳು ನಿನ್ನೆ ಅಮ್ಮನ್ನ ಕೇಳಿದ್ದೆ. ಇವತ್ತು ಹುಣ್ಣಿಮೆಯಾ ? ಅಂತ . ನೀ ನಕ್ಕು ನೋಡು ಬೆಳದಿಂಗಳು ಬಂದ್ರೆ ಹುಣ್ಣಿಮೆಯೇ ಎಂದು ಅಮ್ಮ ತಮಾಷೆ ಮಾಡಿದ್ದಳು. ಚಂದ್ರನ ನೋಡಿದವಳು ಅಮ್ಮನಿಗೊಂದು ಮುತ್ತು ಕೋರಿಯರ್ ಮಾಡಿದ್ದೆ. ..:)
ReplyDeleteಇಲ್ಲಿ ನೋಡಿದರೆ ನಿನ್ನ ಬ್ಲಾಗ್ ನಲ್ಲಿ ಹಾಲು ಬೆಳದಿಂಗಳು ಚೆಲ್ಲಿದೆಯಲ್ಲೇ ಹುಡುಗಿ. ಚಂದ್ರನಿಗಿಂತ ಅವ ಮೂಡಿಸುವ ಭಾವಗಳಿಗಿಂತ ಚೆನ್ನಾಗಿದೆ ನಿನ್ನ ಈ ಬೆಳದಿಂಗಳ ಕಡಲು. ಚಂದ್ರನೊಡಲ ಪ್ರೀತಿಯ ಮಗುವಾಗಿ ಅದೇಷ್ಟು ಪ್ರೀತಿಯ ಭಾವಗಳನ್ನು ಬೆಚ್ಚ್ಚನೆನಿಸುವಷ್ಟು ಬರೆದಿದ್ದೀಯ ..
ಥಾಂಕ್ಸ್ ಸಂಧ್ಯಕ್ಕ :)
Deleteಮನದ ಚಂದಿರ ಕಾಡೋಕೆ ನೀ ಹೇಳಿದ ಆ ನಿನ್ನ ಬೆಳಕು ತರೋ ಸೂರ್ಯ ಕಾರಣನಾದ :)
ಚಂದಿರನೊಟ್ಟಿಗಿನ ಸಲುಗೆಯೇ ಅಂತದ್ದಲ್ವೇನೆ ಅಕ್ಕಾ ?
ಒಂಚೂರು ಸಿಟ್ಟು, ಒಂದಿಷ್ಟು ಬೇಸರ, ಬೊಗಸೆಯಷ್ಟು ಒಲವು, ಇನ್ನೊಂದಿಷ್ಟು ನಲಿವು, ಒಂದು ಕಂಬನಿ, ಒಂದು ಮುಗುಳ್ನಗು....
ನಿರುಪಾಯದ ಎಲ್ಲಾ ಭಾವಗಳೂ ಅವನ ಜೋಪಡಿಯಲ್ಲೂ ಬೆಚ್ಚಗೆ ಹೊದ್ದು ಕೂತಿವೆ :)
ರಾತ್ರಿಯಾಗಸದಲ್ಲಿ ನಿನಗೂ ಕಾಣೀಸೀತು ..ನೋಡಿ ನಕ್ಕು ಬಿಡು :)
ಖುಷಿ ಆತು ..ಬರ್ತಾ ಇರಿ
ಗೆಳೆಯ ,ಇನಿಯ ,ಪ್ರೀತಿ ,ಸಿಟ್ಟು.ಬೇಸರ ಎಲ್ಲಕ್ಕೂ ಅವನೆ.....
ReplyDeleteಟೆರೇಸಿನ ಮೇಲಿನ ನೇರ ನೋಟದಿಂದ....
ತೆಂಗಿನ ಗರಿಗಳ ನಡುವಿನ ಕಳ್ಳ ನೋಟದಿಂದ....
ಕೆರೆ ನೀರಿನ ಬಿಂಬದಿಂದ.... ಕಿಟಕಿಯ ಸರಳ ನಡುವಿಂದ
ನಮ್ಮನ್ನೇ ಹುಡುಕಿ ಭಾವ ಉಕ್ಕಿಸಿ ನಗುತ್ತಾನಲ್ಲಾ... ಕಳ್ಳ!!!!!!!
ನಿನ್ನಿಂದಲೂ ಭಾವ ಬರಹ ಕಕ್ಕಿಸಿದ್ದಾನೆ....
ಸುಂದರ.... ಅತೀ ಸುಂದರ....
ಧನ್ಯವಾದ ರಾಘವ್ ಜಿ ...
Deleteಕಕ್ಕಿಸಿದ್ದೋ ಕ್ಲಿಕ್ಕಿಸಿದ್ದೋ ನಾ ಅರಿಯೆ ...
ಬಾನಂಗಳದ ತುದಿಯಿಂದ ನಿರುಪಾಯದ ತಟದಲ್ಲಿ ಕಾಡಿದ್ದಂತೂ ಹೌದು :)
ಕಿಡಕಿಯಲ್ಲಿ ಇಣುಕಿ ಅದ್ಯಾಕೋ ಅಮ್ಮನ ಮಡಿಲಲ್ಲಿ ಕೂತು ನೋಡುತ್ತಿದ್ದ ಚಂದಮಾಮನನ್ನು ನೆನಪಿಸಿಬಿಟ್ಟಿದ್ದ .
ಅದೇ ಮುಗುಳ್ನಗುವಿನ ಶಾಂತ ಮುಖ ...ವ್ಯತ್ಯಾಸ ಅಂದ್ರೆ ಪಕ್ಕದಲ್ಲಿರಬೇಕಿದ್ದ ಅಮ್ಮ ದೂರ ನಿಂತು ಮುದ್ದು ಮಾಡಿದಂತೆ ಅನಿಸ್ತು :)
ಬರ್ತಾ ಇರಿ
ಚಂದ್ರನ ಅಮೃತ ಕಿರಣಗಳ ಅರಿವು ಆಗಬೇಕಾದರೆ ಧಗ ಧಗಿಸುವ ಸೂರ್ಯನ ಅನುಭವವಿರಬೇಕು. ನಿಮ್ಮ ಕವಿತೆ ಮನಕೆ ತಂಪೆರೆಯಿತು.....
ReplyDeleteಕವಿತೆ (?) ಇಷ್ಟವಾದರೆ ಬರೆದಿದ್ದು ಸಾರ್ಥಕ :)
ReplyDeleteಖುಷಿ ಆಯ್ತು ..ಬರ್ತಿರಿ
This comment has been removed by the author.
ReplyDeleteಸಖತ್ತಾಗಿದ್ದು ಗೆಳತಿ..... ಕವಿತೆಯಂತು ಸೂಪರ್ರು .... ಟೈಟಲ್ ಕೇಳಿದ್ ಕೂಡ್ಲೇ ಸುಮಾರ್ ಹಾಡು ನೆನಪಿಗೆ ಬಂದ್ವು ... ಬಟ್ ೨ ಹಾಡು ಮಾತ್ರ ಇಲ್ಲಿ ನೆನಿಲೇ ಬೇಕು ,,,,
ReplyDelete"ನೀನಿಲ್ಲದೆ ಆ ಚಂದಿರ ಈ ಕಣ್ಣಲಿ ಕಸವಾಗಿದೆ" ಅಂತ ಹೇಳಿದ್ ಕಾಯ್ಕಿಣಿ ...
"ಹುಣ್ಣಿಮೆ ಚಂದಿರನ ಹೆಣ ಬಂತು ಮುಗಿಲಾಗ ತೇಲತ ಹಗಲ"ಅಂದ ಬೇಂದ್ರೆ ಅಜ್ಜ...
ಚಂದ್ರನ್ನ ಏನೇನ್ ರೀತಿಲಿ ವರ್ಣನೆ ಮಾಡ್ಳಕ್ಕು ಅಂತಾ ??
ಥಾಂಕ್ಸ್ ಜಿ :)
Deleteನಿಜ ಬಾನಂಗಳದ ಚಂದಿರನಿಗೆ ಏನೆಲ್ಲಾ ಅನ್ನಬಹುದು ಅಲ್ವಾ ?
ನಿಮಗೆ ನೆನಪಾದ ಹಾಡೂ ಚೆನ್ನಾಗಿದೆ :)
ಬರ್ತಾ ಇರಿ
ಆಹ! ಚಂದ್ರಲೋಕಕ್ಕೆ ಹೋಗಿ ಬಂದಂತಿತ್ತು ನಿಮ್ಮ ಲೇಖನ... ತುಂಬಾ ಚೆನ್ನಾಗಿದೆ!
ReplyDeleteಧನ್ಯವಾದ :)
Deleteಮರೀ -
ReplyDeleteಚಂದಿರನೆಂದರೆ ತಂಪು, ಚಂದಿರನೆಂದರೆ ಕತ್ತಲ ಬಾನಿನ ಸೊಬಗು, ಚಂದಿರನೆಂದರೆ ಒಲವು, ಚಂದಿರನೆಂದರೆ ಚೆಲುವು,
ಚಂದಿರನೆಂದರೆ ಕಣ್ಣ ಹನಿಗೊಂದು ಮೃದು ಸಾಂತ್ವನ, ಅವನೆಂದರೆ ಅಮ್ಮನ ಮಡಿಲಿನ ಘಮದ ನೆನಪು, ಅವ ಬದುಕಿನೇರಿಳಿತಗಳ ಪ್ರತೀಕ, ಅವನೆಂದರೆ ಕನಸು, ಕನಸು ಕೈ ತಪ್ಪಿದಾಗಿನ ಭರವಸೆಯೂ ಆತನೇ, ಅವನ ಬೆಳದಿಂಗಳಲ್ಲಿ ಮಗುವ ನಗೆಯ ಒನಪಿದೆ...ಆತ ನನ್ನ ಅತೀ ಪ್ರೀತಿಯ ಪ್ರಕೃತಿಗೆ ಹಾಲ್ಬೆಳಕ ಜಳಕ ಮಾಡಿಸೋ ಮಹಾ ಮೋಡಿಗಾರ...ಅವನ ಬಗ್ಗೆ ಎಷ್ಟು ಬರೆದರೂ, ಏನೆಲ್ಲ ಬರೆದರೂ ಕಡಿಮೆಯೇ ಅನ್ಸುತ್ತೆ ನಂಗೆ...ಕಾಡುವ, ಕಾಯುವ ಚಿಗುರು ಪ್ರೀತಿ ಅವನದು...
ಅಂಥ ಚಂದಿರನ ಬಗ್ಗೆ ತುಂಬ ಚಂದದ ಭಾವ ಲಹರಿಯ ಹರಿ ಬಿಟ್ಟಿದೀಯಾ...ಅವಳ ಎಂಬಲ್ಲೆಲ್ಲ ಅವನ ಅಂತ ಬರೆದರೆ ನಿನ್ನ ಸಾಲುಗಳೆಲ್ಲ ನನ್ನವೂ ಆಗುತ್ತೆ...ತುಂಬಾ ತುಂಬಾ ಇಷ್ಟವಾಯಿತು ಕಾರ್ಮೋಡದೊಳಗೂ ನುಸುಳೋ ಪರಿಣಿತನ, ನೋವ ಮುದುಡಿಸೋ ನಲಿವಿನ ಧೀಮಂತನೆಡೆಗಿನ ಭಾವ ಪ್ರವಾಹ...