Thursday, June 6, 2013

ಮಳೆಯ ಹುಡುಗಿಯ ಮಾತಾಗಿ...

                                               ನನ್ನೂರ ಮಳೆಯ ನೆನಪಲ್ಲಿ

ಬಿಡದೇ ಸುರಿವ ಜಿಟಿ ಜಿಟಿ ಮಳೆ ,ಮನೆಯ ತಾರಸಿಯಲ್ಲಿ ನಿಂತು ಮಳೆಹನಿಗಳಲ್ಲೇನನ್ನೋ ಹುಡುಕೋ ಹುಚ್ಚು ,ಹಾಯಿ ದೂರ ಕಾಣೋ ಹಸಿರ ಸೊಬಗು ,ಮಂಜಿನ ಅಂಗಳ ,ಮುಂಜಾನೆಯ ಮಬ್ಬು ,ಮಲೆನಾಡ ಮಳೆ ಅದು ....ವರ್ಷದಲ್ಲಾರು ತಿಂಗಳು ಬಿಡದೇ ಸುರಿವ ಮಳೆ...

ಮಳೆಗಾಲದ ಆ ಸಂಜೆಗಳಲ್ಲೇನೋ ಸೊಗಸಿತ್ತು .ಮಳೆಯಲ್ಲಿ ನೆನೆಯೋ ಹುಚ್ಚು ತುಸು ಜಾಸ್ತಿಯೇ ಇತ್ತು .!

ಜೊತೆಯಲ್ಲಿದ್ದಾಗ ಕಾಡದ ದೂರವಾದ ಮೇಲೆ ಕಾಡಿಸಿ ಕಾಡಿಸಿ ಕಾಡೋ ಭಾವಗಳ ಮೇಲೆ ತುಸು ಜಾಸ್ತಿ ಅನಿಸೋ ಅಷ್ಟು ಬೇಸರವಿದೆ ..

ವರ್ಷದ ಹಿಂದಿದ್ದ ಮಳೆಗಾಲದ ಈ ಮಳೆ ಮತ್ತೆ ಮತ್ತೆ ದೂರದ ಮನೆಯ ನೆನಪನ್ನ ಹಸಿಯಾಗಿಸಿದೆ ...

ಕನಸುಗಳ ಹುಸಿಯಾಗಿಸಿದೆ....

ಇಂತದ್ದೇ ಮಳೆ...ಕಾರ್ಮೋಡದ ಸಂಜೆಯ ತಾರಸಿಯಲ್ಲಿ ನಿಂತು ಇಷ್ಟಪಡೋ ಅದೇ ಮಳೆಹನಿಗಳಿವು. ಮಳೆಯಲ್ಲಿ ಜೊತೆಯಾಗಿ ಕುಣಿಯೋಕೆ ತಮ್ಮ ,ತಲೆಯೊರೆಸಿ ಮುದ್ದು ಮಾಡೋ ಅಮ್ಮ, ಪ್ರೀತಿ ಬೆರೆಸಿದ ಬೆಚ್ಚಗಿನ ಕಾಫಿ ಮಾಡಿಕೊಡೋಕೆ ದೊಡ್ಡಮ್ಮ ,ಮಳೆಯಲ್ಲಿ ನೆಂದು ಹುಡುಗಾಟವಾಡ್ತೀರ ಅಂತ ಮುಖ ಊದಿಸೋ ಅಪ್ಪ,ಸ್ವೆಟ್ಟರ್ ಒಳಗೊಂದು ಜಾಗ ಕೊಡೋ ಅಜ್ಜ, ಸಂಜೆಗಂತಾನೇ ಮೀಸಲಿದ್ದ ಹಪ್ಪಳ ಸಂಡಿಗೆ,ಕಂಬಳಿ ಒಣಗಿಸೋಕೆ ಮಾಡಿರೋ ಒಲೆ , ಕರೆಂಟ್ ಇಲ್ಲದ ರಾತ್ರಿಗಳಲ್ಲಿ ಒಟ್ಟಿಗೆ ಕೂತು ಹರಟೋ ಪ್ರೀತಿಯ ಮನೆಮಂದಿ,ದೊಡ್ಡ ಮನೆಯ ಪ್ರೀತಿಯಲ್ಲಿ ಸಿಗೋ ದೊಡ್ಡ ಪಾಲು ..ಮಳೆಗಾಲದ ರಾತ್ರಿಗಳಲ್ಲಿ ತಾನಾಗೇ ಆಗೋ ಕ್ಯಾಂಡಲ್ ಲೈಟ್ ಡಿನ್ನರ್ ,

ಅವತ್ತಿದ್ಯಾವುದೂ ಕಿಂಚಿತ್ತೂ ಕಾಡಿರಲಿಲ್ಲ ನನ್ನ! .

ಅನುಭವದ ಮಾತು ದೂರಾ ದೂರ...!

ಮತ್ತೆ ಕರಿತೀದೆ ದಡದ ಇನ್ನೊಂದು ತೀರ..!

ವಾರವಾದರೂ ಬರದ ಕರೆಂಟ್ ಬಗೆಗೊಂದು ಬೇಸರ,ಟೀವಿ ನೋಡೋಕೂ ಬಿಡದ ಗುಡುಗಿನ ಬಗೆಗೊಂದು ಹೇಳಲಾಗದ ಸಿಟ್ಟು ,ಪಿಯು ಮುಗಿದ ನಾಲ್ಕು ತಿಂಗಳ ಸಹ್ಯವಾಗದ ರಜಾ,೪ ಬಾರಿ ಹೇಳಿದ್ದ ವಟ ವಟ ಸುದ್ದಿಗಳನ್ನ ಇನ್ನೊಮ್ಮೆ ಹೇಳೋಕಂತ ಶುರು ಮಾಡಿದ್ರೆ "ಪುಟ್ಟಿ ಪ್ಲೀಸ್ "ಅಂತ ಮಾತಾಡೋಕೇ ಬಿಡದ ಅಮ್ಮ ದೊಡ್ಡಮ್ಮ ,ಅದೆಷ್ಟೋ ಸಲ ಓದಿ ಮುಗಿದಿದ್ದ ಅದೇ ಕಾದಂಬರಿಗಳು,ಇರದ ನೆಟ್ ವರ್ಕ್ ನಿಂದಾಗಿ ಕಾಣೆ ಆಗಿದ್ದ ಸಿಸ್ಟಮ್ ,ಫೇಸ್ಬುಕ್,ಮೊಬೈಲ್, -ಇವಷ್ಟೇ ವರ್ಷದ ಹಿಂದಿನ ಇಂತದ್ದೇ ಮಳೆಗಾಲದಲ್ಲಿ ಕಾಡೋ ಬೇಸರಗಳಾಗಿತ್ತು.

ಯಾಕೋ ಗೆಳೆಯ ,ಅಲ್ಲಿಂದ ಎದ್ದು ಬಂದ ಮೇಲೂ ಅಲ್ಲಿಯ ಭಾವ ತೀರಾ ಕಾಡುತ್ತೆ ನನ್ನ?

ಇದೂ ಮಲೆನಾಡೇ ...ಇಲ್ಲಿಯೂ ಅಂತದ್ದೇ ಮಳೆ ..ಮಳೆಯಲ್ಲಿ ನೆನೆಯೋ ಅದೇ ಹುಚ್ಚಿದೆ ..

ಇವತ್ತಿನ ಮಳೆಯಲ್ಲಿ ಖುಷಿ ಅಂದ್ರೆ ಟೆರೇಸ್ನಲ್ಲಿ ನಿಂತು ಹಾಕೋ ಒಂದಿಷ್ಟು ಸ್ಟೆಪ್ಸ್, ಮಳೆಯಲ್ಲಿ ಮಜಾ ತರೋ ರೈಡ್ craze ,ಮಳೆ ಹನಿಗಳ ಜೊತೆ ತಿನ್ನೋ ಗೋಲ್ ಗಪ್ಪಾ,,ನಾವೇ ಮಾಡಿಕೊಂಡ ಬೆಚ್ಚಗಿದೆ ಅಂದುಕೊಂಡು ಕುಡಿಯೋ ಕಾಫಿ,ಯಾವುದೂ ಅಮ್ಮ ಮಾಡಿಕೊಡೋ ಪಕೋಡಕ್ಕೆ ,ಮನೆಯಲ್ಲಿ ನೆನೆಯೋ ಮಳೆಗೆ ಪ್ರತಿಸ್ಪರ್ಧಿಯಾಗಲ್ಲ!

ಕಿಟಕಿಯಲ್ಲಿ ನಿಂತು ನೋಡೋ ಮಳೆಹನಿಗಳು ಕಣ್ಣ ಹನಿಗಳಂತನಿಸಿ ಕಿಟಕಿ ಮುಚ್ಚೋ ಅಷ್ಟು ಬೇಜಾರು,

ಹನಿಗಳ ಜೊತೆ ನೆನಪಾಗೋ ಊರ ಮಳೆ,ಮನೆಯ ಮಳೆ,

ಮಳೆಗೆ ಮನೆಯ ಮಾಡು ಸೋರದೇ ಮನೆಯವರ ಮನಸ್ಸು ಸೋರುತ್ತಿದ್ದುದರ ಬಗೆಗೊಂದು ಬೇಸರ....

ಮಳೆಗೆ ನೆನಪಾಗೋ ಒಲವ ಹುಡುಗ ...ಅದೇ ಕ್ಷಣಕ್ಕೆ ನೆನಪಾಗೋ ಅವನ ಪ್ರೀತಿ ...

ಅವನಿಗೆ ಪ್ರೀತಿ ನಿರಾಕರಿಸಿದ ಭಾವಗಳೇ ಇರದ  ಹುಡುಗಿ !!  ,ಇವನಿಗೆ ಭಾವಗಳೇ ಈ ಹುಡುಗಿಯೇನೋ ಅಂತಿಪ್ಪ ಸಣ್ಣ ಸಂಶಯ !!

ಒಟ್ಟಿನಲ್ಲಿ ಅಲ್ಲಿಂದ ಬೀಳೋ ಮಳೆ ಹನಿಗಳು ನೆಲ ತಾಕೋ ತನಕ ನನ್ನಲ್ಲೇ ಆಗೋ ಒಂದಿಷ್ಟು ದ್ವಂದ್ವಗಳು,ಗೊಂದಲಗಳಿಗೆ ಉತ್ತರ ಹುಡುಕ ಹೊರಟು ,ಸಮಾಧಾನಿಸದ ಭಾವಗಳಿಗೆ !

ಮತ್ತದೇ ನೀರವತೆಯ ಮೌನದ ಸಂಜೆಯಲ್ಲಿ ಬಿಡದೇ ಸುರಿವ ಮಳೆಯಲ್ಲಿ ಬೆಚ್ಚಗಿನ ನೆನಪೊಂದನ್ನ ಹುಡುಕುತ್ತಿರೋವಾಗ ಸಿಕ್ಕ ಕಾಡೋ ನೆನಪೊಂದ ಎತ್ತಿಕೊಂಡು.....






 


ಓ ಮನಸೇ ...

ನೀ ಹೀಗೇಕೆ ..

ಬೇಡವೆಂದರೂ ಬಂದು ಕಾಡುತ್ತೀಯಲ್ಲೇ ,

ಕಾಲೆಲೆಯೋ ಗೆಳತಿಯಾಗಿ,

ನೆನಪ ಹುಡುಗನಾಗಿ,

ಬೆಚ್ಚಗಿನ ಕನಸಾಗಿ,

ತಾಗೋ ಹತಾಶೆಯಾಗಿ....

ಕಾಡದಿರು ನನ್ನ ನೀ...

ನಾ ನಿನ್ನ ಇನಿಯನಿಲ್ಲ ...

ಬೇಡವೆಂದರೂ ಬಂದು ಬೆಚ್ಚಗಿನ ಗೂಡೊಂದ ಕಟ್ಟಿ ,ಮನದಲ್ಲೊಂದು ಮಹಲು ಮಾಡೋ ಬೆಚ್ಚಗಿನ ಕಾಡೋ ನೆನಪುಗಳ ಜತನದಿಂದ ಎತ್ತಿಡಲು ಸೋತೆನಾ ನಾ??

32 comments:

  1. ನೆನಪ ಮಳೆಯಲ್ಲಿ ಮಿಂದ ಭಾವ.... ಚೆನ್ನಾಗಿದೆ ಗೆಳತಿ...

    ReplyDelete
    Replies
    1. ಮಳೆಯಲ್ಲಿ ಕಾಡೋ ನೆನಪೊಂದು ನಿನಗೂ ಇಷ್ಟವಾಗಿದ್ದು ನನ್ನ ಖುಷಿ :)

      Delete
  2. ಒಂಟಿ ಮನ ಮಳೆಯಲ್ಲಿ ನಿಂತರೆ ಹಲವು ಭಾವಗಳಿಗೆ ಜೀವ ಬರುವುದು.. ಒಂದೇ ಮಳೆಗೆ ಚಿಗುರುವ ಅಣಬೆಗಳಂತೆ. ಅಲ್ಲಿ ಅಷ್ಟಾಗಿ ಅನುಭವಿಸದ, special ಎನಿಸದವುಗಳೆಲ್ಲ ದೂರ ನಿಂತು ನೋಡುವಾಗ miss ಆಗುತ್ತಿವೆಯೇನೋ ಎನಿಸುವುದು ನಿಜ.

    ಚಂದವಿದೆ ಚಿನ್ನಿ ... :)
    ಭಾವಗಳ ಸಾಲು ... ಮಳೆಯ ಹಾಡು ....
    ತೋಯುವ ಆಸೆ ತರುವ ಮಳೆಗೆ ಹಿತ ನೀಡುವ ಬೆಚ್ಚನೆಯ ಭಾವಗಳ ಅನಾವರಣ ...

    ReplyDelete
    Replies
    1. ನಿಜ ಸಂಧ್ಯಕ್ಕ ..ದೂರ ಆದ್ಮೇಲೆ something is missing ಅನ್ಸೋದು
      ಅಲ್ಲಿದ್ದಾಗ ಎಲ್ಲದರ ಮೇಲೂ ಸಿಟ್ಟು ಸಿಡುಕು ..ದೂರಾದ ಮೇಲೇ ಅರ್ಥ ತಿಳಿಯೋದೇನೊ ಅಲ್ವಾ ?
      ಮಳೆಯ ಹುಡುಗಿಯ ಮಾತನ್ನ ನೀವಿಷ್ಟ ಪಟ್ಟಿದ್ದು ನನ್ನ ಖುಷಿ ..
      ಭಾವಗಳ ವಿನಿಯೋಗದಲ್ಲಿ ಮತ್ತೆ ಸಿಗೋಣ

      Delete
  3. ಮಳೆ ಹೀಗೆ ಕಾಡಿದರೆ ನಾವೂ ನಿರುಪಾಯ.. ಮನದ ಎಲ್ಲಾ ಬೇಸರಗಳನ್ನು ತೊಳೆದು ಹೊಸಕನಸುಗಳನ್ನು ಈ ಮಳೆ ಚಿಗುರಿಸಲಿ..
    ಹೀಗೆಯೇ ಬರೆಯುತ್ತಾ ಇರಿ..

    ReplyDelete
    Replies
    1. ಹಮ್ ಅಜಯ್ ಜಿ ..ನಿಮ್ಮೂರ ಮಳೆಗೆ ನಾನೂ ನಿರುಪಾಯಿ :)
      ಈ ಮಳೆ ಮುದ ಕೊಡೋ ನೆನಪುಗಳ ಮಾತ್ರ ಹೆಕ್ಕಿ ತರಲಿ ಅನ್ನೋದು ನನ್ನ ಆಶಯ ಕೂಡಾ
      ಥಾಂಕ್ಸ್

      Delete
  4. ಮಳೆಯ ಮೊದ ಮೊದಲ ಹನಿಯೆಲ್ಲವೂ
    ಮನಸ ಮೇಲಿನ ಮೊದಲ ಅನುಭವದಂತೆ....
    ಹೊಸ ಹೊಸದಾಗಿಯೇ ರೂಪುಗೊಳ್ಳುತ್ತದೆ.
    ಅಜ್ಜನ ಸ್ವೆಟರಿನಲ್ಲಿಯ ಬೆಚ್ಚನೆಯ ಜಾಗ ತುಂಬಾ ಇಷ್ಟವಾಯಿತು.
    "ಕಿಟಕಿಯಲ್ಲಿ ನಿಂತು ನೋಡೋ ಮಳೆಹನಿಗಳು ಕಣ್ಣ ಹನಿಗಳಂತನಿಸಿ ಕಿಟಕಿ ಮುಚ್ಚೋ ಅಷ್ಟು ಬೇಜಾರು" ಈ ಸಾಲು
    ಮನಸನ್ನು ತುಂಬಾ ತಾಕಿತು....
    ಅಲ್ಲಿಯ ಭಾವಗಳು ತಾಕದಿರಲೆಂದು ನಾವು ಎದ್ದು ಬಂದಾಗಲೇ ಅಲ್ಲಿಯ ಭಾವಗಳು ನಮ್ಮನ್ನು ಹೆಚ್ಚಾಗಿ ತಾಕೋದು....
    ಸಂಜೆಯ ತಂಗಾಳಿ. ಸುರಿಯೋ ಮಳೆ, ಮುಸುಕಾಗಿಸೋ ಇಬ್ಬನಿ.. ಮತ್ತೆ ಮತ್ತೆ ತೀರ ಮುಟ್ಟಿ ವಾಪಸ್ಸಾಗುವ ಸಮುದ್ರದಲೆಗಳು ಇಂಥವುಗಳೇ ಹಳೆಯ ನೆನಪುಗಳನ್ನು, ಬಚ್ಚಿಟ್ಟ ಪ್ರೀತಿಗಳನ್ನು, ಅದುಮಿಟ್ಟ ಭಾವನೆಗಳನ್ನ ಇಂಥವುಗಳನ್ನೆಲ್ಲಾ ಹಸಿಯಾಗಿಸೋದು....

    ಪುಟಾಣಿ ಮಳೆಯ ಹುಡುಗೀ.....
    ಅಪೀ ಬರದ್ದೆ........

    ReplyDelete
    Replies
    1. ಥಾಂಕ್ಸ್ ರಾಘವ್ ಜಿ ...
      ಅಜ್ಜನ ಸ್ವೆಟರ್ ನಾ ಬೆಚ್ಚಗಿನ ಭಾವ ,ಮಳೆ ಹನಿಗಳ ರೂಪಾಂತರದ ಭಾವಗಳ ನೀವಿಷ್ಟ ಪಟ್ಟಿದ್ದು ಖುಷಿ ಆಯ್ತು ...
      ಭಾವಗಳ ವಿನಿಯೋಗದಲ್ಲಿ ಮತ್ತೆ ಸಿಕ್ತೀನಿ

      Delete
  5. ಚಿಕ್ಕಮಗಳೂರಿನಲ್ಲಿ ಮಳೆ ಜಾಸ್ತಿ ಅನ್ಸುತ್ತೆ .. ಅದಕ್ಕೆ ಮಳೆ ಬಗ್ಗೆನೇ ಲೇಖನಗಳು ಬರುತ್ತಿವೆ .. ಅಲ್ವ ಭಾಗ್ಯ.. ನಿಮ್ಮ ಒಲವಿನ ಹುಡುಗ ಇಡೀ ಮಳೆಗಾಲ ಪೂರ್ತಿ ನಿಮ್ಮನ್ನು ಕಾಡುತ್ತಿರಲಿ .. ಇಂಥ ಭಾವಗಳು ಇನ್ನಷ್ಟು ಬರಲಿ .. ಆದರೂ ನಿಮ್ಮ ಭಾವಗಳಿಗೆ ಪ್ರತಿಕ್ರಿಯಿಸುವುದಕ್ಕೆ ನಾನತೂ ನಿರುಪಾಯ :-)

    ReplyDelete
    Replies
    1. ಹಾ ಹಾ ...ತುಸು ಜಾಸ್ತಿ ಅನಿಸೋ ಅಷ್ಟು ಮಳೆ ಕಾಫಿ ನಾಡಲ್ಲಿ...
      ನಿರುಪಾಯದಲ್ಲಿ ತುಂಬಾ ಕಾಡೋ ಭಾವಗಳಲ್ಲಿ ಮಳೆಯೂ ಒಂದು :)
      ಭಾವಗಳನ್ನ ಇಷ್ಟ ಪಟ್ಟಿದ್ದಕ್ಕೆ ಥಾಂಕ್ಸ್ ..
      ಮತ್ತೆ ಸಿಗೋಣ

      Delete
  6. ಚೆನಾಗಿದೆ ....
    ಬರೆಯುತ್ತಿರಿ :)

    ReplyDelete
    Replies
    1. ಥಾಂಕ್ಸ್ ಚಿನ್ಮಯಣ್ಣಾ ..
      ತಪ್ಪು ಒಪ್ಪುಗಳ ಒಪ್ಪವಾಗಿ ತಿಳಿಸಿಕೊಡೋಕೆ ಬರ್ತಾ ಇರಿ

      Delete
  7. ಚಿಕ್ಕಮಗಳೂರಿನ ಪುಟ್ಟ ತಂಗಿ ಮಳೆಯ ಬಗ್ಗೆ ಬಣ್ಣ ಬಣ್ಣದ ಪದಗಳಿಂದ ಕಾಮನಬಿಲ್ಲನ್ನು ರಚಿಸಿದ್ದಾಳೆ , ಒಳ್ಳೆಯ ಕವಿತೆ ತಂಗಿ , ಕವಿತೆಯಲ್ಲಿ ಪದಗಳ ಮೆರವಣಿಗೆ ಚೆನ್ನಾಗಿದೆ.

    ReplyDelete
    Replies
    1. ಧನ್ಯವಾದ ಬಾಲಣ್ಣ ..
      ಬಣ್ಣ ಬಣ್ಣದ ಭಾವಗಳ ಮಳೆಬಿಲ್ಲನ್ನು ನೀವಿಷ್ಟ ಪಟ್ಟಿದ್ದು ಖುಷಿ ಆಯ್ತು ..
      ಭಾವಗಳ ವಿನಿಯೋಗದಲ್ಲಿ ಮತ್ತೆ ಸಿಗೋಣ :)

      Delete
  8. ಚೆನ್ನಾಗಿದ್ದು ಮಳೆ ಲೇಖನ.. :-)
    ಮಳೇಲಿ ಅಮ್ಮ, ದೊಡ್ಡಮ್ಮ ಎಲ್ಲಾ ನಾರ್ಮಲ್ಲೇ ಅನ್ನೋ ತರದಲ್ಲಿ ಹೋಗ್ತಿದ್ದ ದಾಟಿಯ ಲೇಖನಕ್ಕೆ ಪುಟ್ಟಮ್ಮನ ಪುಟ್ಟ ಗೆಳೆಯನಿಂದ ಪ್ರೀತಿಯ ಸಿಂಚನ .. ಆ ಹುಡ್ಗ ಹಿಂಗೇ ಕಾಡ್ತಿರಲಿ.. ಇನ್ನೊಂದಿಷ್ಟು , ಮತ್ತೊಂದಿಷ್ಟು ಲೇಖನಗಳು ನಿಂತರೂ ನಿಲ್ಲೆನೆನ್ನದ ಮಲೆನಾಡ ಮಳೆಗಾಲದ ಮಳೆಯಂತೆ ಹರಿಯುತ್ತಿರಲಿ :-)

    ReplyDelete
    Replies
    1. ಥಾಂಕ್ಸ್ ಪ್ರಶಸ್ತಿ ..
      ನನ್ನಾ ಪುಟ್ಟ ಗೆಳೆಯ ಇನ್ಯಾರೂ ಅಲ್ಲಾ ..ಮಳೆಯ ಹುಡುಗ ಅವ ..
      ಮಲೆನಾಡ ಮಳೆ ಇರೋ ತನಕವೂ ಕಾಡ್ತಾನೇ ಇರ್ತಾನೆ ಬಿಡಿ ಬಿಡದೇ ಸುರಿಯೊ ಮಳೆಯ ಜೊತೆ-ಮಳೆ ಹನಿಯಾಗಿ,ಬೆಚ್ಚಗಿನ ನೆನಪಾಗಿ,ಕಾಡೋ ಮನೆಯಾಗಿ ,ಪ್ರೀತಿಸೋ ಮನೆಯವರಾಗಿ ..
      ಭಾವಗಳೊಟ್ಟಿಗೆ ಮಾತಾಡೋಕೆ ಮತ್ತೆ ಸಿಗೋಣ :)

      Delete
  9. ಒಂದ್ಸಲ ಆಗುಂಬೆ ಹತ್ರ ಮಳೆಲ್ಲಿ ಸುತ್ತಾಡಿ ಬಂದಂಗಾತು ನೋಡು ....ಮಳೆಯಷ್ಟೇ ಮುದನೀಡೋ ಬರಹ :)

    ReplyDelete
    Replies
    1. ಥಾಂಕ್ಸ್ ಜಿ ..
      ಮಳೆಯ ಜೊತೆ ನೆನಪುಗಳೂ ಕಾಡದೇ ಮುದ ನೀಡ್ಲಿ ..
      ಪ್ರತಿ ಮಳೆಯೂ ಹೊಸ ಚೈತನ್ಯ ಕೊಡ್ಲಿ

      Delete
  10. ಮಳೆ ಮತ್ತು ನೆನಪುಗಳ ಸುತ್ತ ಗಿರಿಗಿಟ್ಲೆ ಆಡುವ ಈ ಕಾವ್ಯ - ಬರಹ, ನನಗೆ ನನ್ನೂರ ನೆನಪು ತರಿಸಿತು. ನಿಮ್ಮದು ಮಲೆನಾಡು ನಮ್ಮದು ಬಯಲು ಸೀಮೆ, ಅಲ್ಲಿ ಮಳೆ ಅನವಾಯಿತಿ, ಇಲ್ಲಿ ಮಳೆ ಕನಸ ಮಾತಾಯಿತಿ!

    ಕಾವ್ಯ ಹೀಗಿರಬೇಕು,
    "ಅವತ್ತಿದ್ಯಾವುದೂ ಕಿಂಚಿತ್ತೂ ಕಾಡಿರಲಿಲ್ಲ ನನ್ನ! .
    ಅನುಭವದ ಮಾತು ದೂರಾ ದೂರ...!
    ಮತ್ತೆ ಕರಿತೀದೆ ದಡದ ಇನ್ನೊಂದು ತೀರ..!"

    ReplyDelete
    Replies
    1. ಧನ್ಯವಾದ ಬದರಿ ಸರ್ ..
      ಬಯಲು ಸೀಮೆಯ ಮಳೆಯ ಬಗ್ಗೆ ನಾನರಿಯೆ ...ಮಲೆನಾಡ ಮಳೆಯನ್ನ ಇಷ್ಟ ಪಟ್ಟು ಮಳೆಯ ಹುಡುಗಿಯ ಕಾವ್ಯವನ್ನ ನೀವಿಷ್ಟ ಪಟ್ಟ ಸಂಪೂರ್ಣ ಖುಷಿ ಮಾತ್ರ ನಂದು
      ನಿಮ್ಮೀ ಪ್ರೋತ್ಸಾಹಕ್ಕೆ ನಾ ಆಭಾರಿ ...

      ಭಾವಗಳ ತೇರಲ್ಲಿ ಮತ್ತೆ ಜೊತೆಯಾಗ್ತೀನಿ

      Delete
  11. ಚೆನ್ನಾಗಿದೆ.

    ReplyDelete
    Replies
    1. ಧನ್ಯವಾದ ...
      ನಿರುಪಾಯಕ್ಕೆ ಸ್ವಾಗತ :)

      Delete
  12. ಚೆನ್ನಾಗಿದೆ.. ಮಳೆಯಲ್ಲಿ ತೊಯ್ದ ಸಾಲುಗಳು...

    ReplyDelete
    Replies
    1. ಥಾಂಕ್ಸ್ ಜಿ :)
      ಸಾಲುಗಳು ತೋಯ್ದ್ರು ನೆನಪುಗಳು ಬೆಚ್ಚಗಿವೆ :)
      ಸಿಗೋಣ ಮತ್ತೆ

      Delete
  13. "ಮಳೆ ಬಂತು ಮಳೆ ಕೊಡೆ ಹಿಡಿದು ನಡೆ" ಎನ್ನುವ ಶಾಲಾ ಪದ್ಯ ನೆನಪಿಗೆ ಬಂತು. ಪ್ರತಿಯೊಂದು ಮಳೆ ಹನಿ ಹೊತ್ತು ತರುವ ಕನಸುಗಳು, ಸಂದೇಶಗಳು ಅವರ್ಣನೀಯ. ಮಳೆಯನ್ನೂ ನೋಡಿ,ನೆನೆದು, ತೊಪ್ಪೆಯಾದಾಗ ಸಿಗುವ ಸಂತಸ ಹೇಳಲಾಗದು. ಬಿಸಿ ಬಿಸಿ ಕರಂ ಕುರಂ ಎನ್ನುವ ಚಕ್ಕಲಿ, ಕೋಡುಬಳೆಗಳ, ಬೋಂಡ, ಬಜ್ಜಿಗಳ ಜೊತೆ ಕಳೆವ ಆ ಮಳೆಗಾಲದ ನೆನಪನ್ನು ಹಸಿರು ಮಾಡಿದೆ. ಸೂಪರ್ ಬಿ ಪಿ.

    ReplyDelete
    Replies
    1. ಅಯ್ಯಯ್ಯೋ ಶ್ರೀಕಾಂತಣ್ಣ ನಿಮ್ಮ ಭಜಿ, ಚಕ್ಕಲಿ, ಕೋಡುಬಳೆ ಕರಂ ಕರಂ ಶಬ್ದ ಕೇಳಿ ಬಾಯಲ್ಲಿ ನೀರು ಬಂತು. ಗಂಟಲು ಕೆರಿತಾ ಇದೆ ಬೇರೆ.

      Delete
    2. ಥಾಂಕ್ಸ್ ಶ್ರೀಕಾಂತಣ್ಣ ..
      ಮಳೆಯ ನೆನಪಲ್ಲಿ ಒದ್ದೆಯಾದ ಮನೆಯ ನೆನಪುಗಳೊಟ್ಟಿಗೆ ಚಕ್ಕುಲಿ ಕೋಡುಬಳೆಯನ್ನೂ ನೆನಪಿಸಿಬಿಟ್ರಿ ನೀವು :)
      ಭಾವಗಳ ವಿನಿಯೋಗದಲ್ಲಿ ಮತ್ತೆ ಸಿಗುವಾ ...

      Delete

  14. ಮಳೆಗೆ ಮನದಲ್ಲಿ ಹಳೆಯ ಕನಸುಗಳು ಮತ್ತೆ ಚಿಗುರೊಡೆದಿದೆ.
    ಬಿಸಿಲ ಬೇಗೆ ಬೇಡವೇನಿಸಿದರೂ, ಜಿಟಿ ಜಿಟಿ ಮಳೆ ಬೋರೆನಿಸಿದರೂ, ಕೊರೆವ ಚಳಿ ಸಾಕೆನಿಸಿದರೂ ನಮ್ಮ ಜೀವನದಲ್ಲಿ ಪ್ರತಿಯೊಂದು ಋತು ಕೂಡ ಮರೆಯಲಾರದ ನೆನಪನ್ನ ಬಿಟ್ಟು ಹೋಗುತ್ತದೆ. ಅದೇ ರೀತಿ ಮಳೆಗಾಲದ ಮಳೆ ನಮ್ಮ ಜೀವದಲ್ಲಿ ಹೊಸ ಕನಸುಗಳಿಗೆ ನೀರೆರೆದು, ಆಸೆಗಳ ಬೀಜಕ್ಕೆ ಚಿಗುರೊಡೆಯಲು ಅನುವು ಮಾಡಿಕೊಡುತ್ತೆ. ಮಳೆಗೆ ಮುಖವೊಡ್ಡಿ ನಿಂತಾಗ ತಲೆಯಲ್ಲಿರುವ ಚಿಂತೆಗಳಲ್ಲ ನಿರಿನೊಡನೆ ಇಳಿದಂತ ಅನುಭವ. ಬೀಸುವ ಮಳೆಯಲ್ಲಿ ಬೈಕ್ ಮೇಲೆ ಸುಯ್ಯನೆ ಹೋಗುತ್ತಿದ್ದರೆ ಮತ್ತೇನೂ ಬೇಡವೆನಿಸುತ್ತದೆ.

    ಕಾಲಕಾಲಕ್ಕೆ ಮಳೆಗಾಲದ ಅನುಭವಗಳು ಬೇರೆಬೇರೆಯೇನಿಸಿದರೂ ಸಿಗುವ ಮಜವೇ ಬೇರೆ.
    ಮೊದಲೆಲ್ಲ ಮಳೆಯಲ್ಲಿ ನೆನೆದು ಎಷ್ಟೇ ಕುಣಿದು ಕುಪ್ಪಳಿಸಿದರೂ ಏನೂ ಆಗುತ್ತಿರಲಿಲ್ಲ, ಆದರೆ ಇತ್ತೀಚಿಗೆ ಸ್ವಲ್ಪ ನೆನೆದರೂ ಥಂಡಿಯಾಗುವ ಭಯ. ಕಾಲಕಾಲಕ್ಕೆ ನಾವೂ ಬದಲಾಗುತ್ತಿದ್ದೆವೆ ಅಷ್ಟೇ.

    ಹಳ್ಳಿಯ ಮಳೆಗಾಲದ ನೆನಪೇ ಬೇರೆ ಬಿಡಿ. ಅದನ್ನ ಅನುಭವಿಸಲು ಯೋಗವಿರಬೇಕಷ್ಟೇ. ಅಲ್ಲವೇ??

    ನೆನ್ನೆಯಷ್ಟೇ ಎರಡು ಗಂಟೆಗಳ ಕಾಲ ತೊಯ್ದ ಅನುಭವ ಮತ್ತೆ ನಿಮ್ಮ ಬರಹ ಇವೆಲ್ಲವೂ ಮತ್ತೆ ಜೀವನದಲ್ಲಿ ಹೊಸ ಕನಸುಗಳು ಚಿಗುರೊಡೆಯುವಂತೆ ಮಾಡಿದೆ.
    _/\_

    ReplyDelete
    Replies
    1. ಥಾಂಕ್ಸ್ ಜಿ ..ನಿಜ ಹಳೆ ಕೊಳೆ ತೊಳೆದು ಹೊಸ ಪ್ರೀತಿ ಮೂಡಲಿ ,ಹೊಸ ಮಳೆಯ ತುಂತುರು ಹನಿಗಳು ಹೊಸ ಚೈತನ್ಯ ಕೊಡಲಿ ..
      ಆತ್ಮೀಯ ಪ್ರತಿಕ್ರ‍ಿಯೆಗೆ ಶರಣು

      Delete
  15. ಅಲ್ಲಿ ಬಿಡದೆ ಸುರಿಯುವ ಜಿಟಿ ಜಿಟಿ ಮಳೆ ಅಲ್ಲಿರುವಾಗ ಅದು ಏಕತಾನದ ಹಾಡು...
    ಇಂದಿಲ್ಲಿ ಅದರ ನೆನಪು ಬಿಡದೆ ಕಾಡುವ ಅಮ್ಮನ ಜೋಗುಳದಂತೆ...
    ಇದು ಆ ಊರ ತೊರೆದು ಇನ್ನೆಲ್ಲೋ ಚಿಗುರ ಹೊರಟ ಪ್ರತಿ ಮಲೆನಾಡಿಗನ ಪಾಡು ಕಣೇ...
    ಚೆನ್ನಾಗಿದೆ ಭಾವ ಬರಹ...ಮಳೆ ಇನ್ನಷ್ಟು ಭಾವಗಳ ಬೆಳೆ ಬೆಳೆಸಲಿ...:)

    ReplyDelete
    Replies
    1. ನಿಜ ..ಮನೆಯ ಮಳೆಯ ಆಪ್ತತೆ ಮಲೆನಾಡಿಗರಿಗೆ ಮಾತ್ರ ಗೊತ್ತೇನೋ ..
      ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದ .
      ಭಾವಗಳ ತೇರಲ್ಲಿ ಮತ್ತೆ ಜೊತೆಯಾಗ್ತೀನಿ

      Delete