Friday, June 21, 2013

ಪ್ರೀತಿ ಇಲ್ಲದ ಮೇಲೇ .....

ಪ್ರೀತಿಯ ಮುದ್ದು ,

ಬದುಕಿನ ಒಂದು ಹಂತವ ಹತ್ತಿ ಹಿಂತಿರುಗಿದಾಗ ತುಂಬಾ ಕಾಡಿದ್ದ ಸಂಗಾತಿ ನೆನಪಿದು .

ಬಾಳ ದೋಣಿಯಲ್ಲಿ ಅಂಬಿಗನ ಹುಡುಗಾಟದಲ್ಲಿದ್ದಾಗ ಸಿಕ್ಕ ಹುಡುಗ ನೀನು !

ಪ್ರೀತಿ ಪ್ರೇಮದ ಬಗೆಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿರದ ನನ್ನಲ್ಲಿ ಅದ್ಯಾಕೋ ಒಂಟಿತನದ ಭೂತ ಕಾಡ ಹತ್ತಿತ್ತು ...ಎಲ್ಲರಂತೆ ನಂಗೂ ಪ್ರೀತಿಸೋ ,ಮುದ್ದಿಸೋ ಮನವೊಂದು ಬೇಕನಿಸತೊಡಗಿತ್ತು ..

ಹುಚ್ಚು ಕನಸು ಕಾಣೋ ವಯಸಲ್ಲೇ ನೀ ನನಗೆ ಪರಿಚಯವಾಗಿದ್ದು ...ಗಂಟೆಗಟ್ಟಲೇ ಹರಟಿದ್ದು ..
ತುಂಬಾ ಕಾಲೆಯುತ್ತಿದ್ದ ಸ್ನೇಹಿತರ ಗುಂಪಲ್ಲಿ ನೀ ಯಾಕೋ ತೀರಾ ಅಪರೂಪನಾಗಿ ಕಂಡೆ ನಂಗೆ . ಆತ್ಮೀಯನಾದೆ ,ಆದರಿಸಿದೆ.ಅದೆಷ್ಟೋ ಮಾತುಗಳಿಗೆ ಕಿವಿಯಾದೆ ,ಪ್ರೀತಿಗೆ ಹೆಸರಾದೆ ,
ನನ್ನ ಬೇಸರಕ್ಕೆ ನೀ ಕೈ ಹಿಡಿದು ನೀಡೋ ಸಾಂತ್ವಾನಕ್ಕೆ ನಾ ಯಾವತ್ತೋ ಕಳೆದು ಹೋದೆ .

ತೀರಾ ಸೌಮ್ಯನಲ್ಲದ ತೀರಾ ಮಾತಾಡೋನೂ ಅಲ್ಲದ ನಿನ್ನ ಮೇಲೆ ಸಣ್ಣದೊಂದು ಒಲವಾಗಿತ್ತಲ್ಲಿ .

ಅವತ್ತದ್ಯಾವುದೋ ಹುಡುಗನ ಹೆಸರ ಹೇಳಿ ರೇಗಿಸಿದ್ದ ನಿನ್ನ ಮೇಲೆ ತೀರಾ ಸಿಟ್ಟು ಬಂದಿತ್ತು ನಂಗೆ .ಈ ಹುಡುಗ ಯಾಕೆ ಇನ್ಯಾರದೋ ಹೆಸರಿಗೆ ತನ್ನ ಹುಡುಗಿಯ ಹೆಸರ ಹೇಳಿದ್ದಾನೆ ಅನ್ನೋ ಕೋಪ ಸೀದಾ ಮನದ ಮಾತನ್ನ ನಿನ್ನೆದುರಿಗೆ ತೆರೆದಿಟ್ಟಿತ್ತು ...ನಿನ್ನನ್ನಿಲ್ಲಿ ಆರಾಧಿಸುತ್ತಿರೋ ಹುಡುಗಿಯನ್ಯಾಕೆ ಇನ್ಯಾರದೋ ಹೆಸರ ಜೊತೆಯಾಗಿಸುತ್ತೀಯಾ "ಲವ್ ಯು ಸ್ಟುಪಿಡ್ " ಅಂತ ಹೇಳಿ ಆಮೇಲೆ ನಾಲಿಗೆ ಕಚ್ಚಿ ಕೊಂಡ ನೆನಪು ನಿನ್ನೆ ಮೊನ್ನೆಯದು ಅನಿಸುತ್ತಿದೆ ಕಣೋ !
ನೀ ನಕ್ಕು ಮುದ್ದಿಸಿದ್ದೆ ನೆನಪಿದ್ಯಾ ನಿಂಗೆ ?

ಆಮೇಲಿನದು ನಂಗಿಂತ ಜಾಸ್ತಿ ಗೊತ್ತಿರೋದು ಪ್ರತಿ ದಿನದ ಸಂಜೆಯಲ್ಲಿ ಮರಳ ತೀರದಲ್ಲಿ ಕೂರುತ್ತಿದ್ದ ಅದೇ ಕಲ್ಲು ಬಂಡೆಗಳಿಗೆ ..
ನಮ್ಮಿಬ್ಬರ ಭಾವಗಳ ಏಕೈಕ ಸಂಬಂಧಿ ಎಂದರೆ ಅದೇ ಇದ್ದೀತು ...
ಆ ತೀರದಲ್ಲಿ ನಿನ್ನೊಟ್ಟಿಗೆ ನಿನ್ನ ಕಿರುಬೆರಳ ಹಿಡಿದು ದಿನವೂ ಕೂರುತ್ತಿದ್ದ ದಿನಗಳ್ಯಾಕೋ ನೆನಪಾಗಿದೆ ಕಣೋ .ಭಾವಕ್ಕೆ ಜೊತೆಯಾಗಿ ,ಬದುಕಿಗೆ ಪಾಲುದಾರನಾಗಿ ಬರುವೆ ಗೆಳತಿ ಅಂತ ನೀ ನೀಡಿದ್ದ ಭರವಸೆಯ ಆ ದಿನಗಳು ನೆನಪಾಗುತ್ತಿವೆ..ಜೊತೆಯಾಗಿ ಸುತ್ತಿದ್ದೆಷ್ಟೋ , ಎದುರು ಕೂತು ಕಣ್ಣಂಚ ಒದ್ದೆಯಾಗಿಸಿದ್ದೆಷ್ಟೋ ,ಪ್ರೀತಿಯಿಂದ ತಲೆ ಸವರಿ ನೀ ಹೇಳಿದ್ದ ಧೈರ್ಯ ,ಕಣ್ಣಲ್ಲಿ ಕಣ್ಣಿಟ್ಟು ಕೊಟ್ಟ ಭರವಸೆ ಈ ಜನ್ಮಕ್ಕಾಗುವಷ್ಟಿದೆ .
ನಮ್ಮಿಬ್ಬರ ಪ್ರತಿ ಭಾವಗಳೂ ಆ ಮರಳ ದಂಡೆಗೆ ಗೊತ್ತೇನೋ ...ಪಾರ್ಕಿನಲ್ಲಿ ಕೂತು ಮನಸೋ ಇಚ್ಚೆ ಹರಟಿದ್ವಿ ಬಿಟ್ರೆ ಅಲ್ಲಿರೋ ಜೋಡಿಗಳ ತರ ನಾವ್ಯಾವತ್ತೂ ಮಾಡಿಲ್ಲ .
ನೀನ್ಯಾವತ್ತೂ ನನ್ನ ತಬ್ಬಿಕೊಂಡಿಲ್ಲ ,ಕೈಯಲ್ಲಿ ಬೆಸೆವ ನಾನಿದ್ದೇನೆ ಜೊತೆ ಅನ್ನೋ ಕೈ,ಹಣೆಯ ಮೇಲೊಂದು ಮುತ್ತು ಬಿಟ್ಟು ಅದರಾಚೆಯ ಯಾವುದನ್ನೂ ನಿರೀಕ್ಷಿಸಿಲ್ಲ !..ನಿನ್ನ ಮೇಲಿನ ನನ್ನ ಹೆಮ್ಮೆ ಜಾಸ್ತಿಯಾಗೋದು ಇಲ್ಲೆ ಕಣೋ ....

ಎಲ್ಲರೆದುರು ಪ್ರೀತಿಯ ಪ್ರದರ್ಶನ ಮಾಡೋ,ಪ್ರೀತಿ ಅಂದ್ರೆ ಅಸಹ್ಯ ಆಗೋ ತರ ಆಡೋ ಅದೆಷ್ಟೋ ಮಂದಿಯೆದುರು ನೀ ಆದರ್ಶನಾದೆ ಅನ್ನೋ ಖುಷಿ ನಂದಾಗಿತ್ತು ಅಲ್ಲಿ !

ಆದರೆ ಇವತ್ಯಾಕೋ ನೀ ನನ್ನ ಕನವರಿಕೆಯ ಕನಸಾಗಿ ಕಾಡ ಬಂದೆ ,ಏನನ್ನೋ ಹುಡುಕುತ್ತಾ ಇದ್ದಾಗ ಸಿಕ್ಕ "ಮಿಸ್ ಯು ಸ್ವೀಟ್ ಹಾರ್ಟ್ "ನೀ ನನಗೆ ಕೊಟ್ಟಿದ್ದ ಮೊದಲ ಗ್ರೀಟಿಂಗ್ ನಿನ್ನಲ್ಲೇ ಕಳೆದುಹೋಗಿದ್ದ ನನ್ನ ಹುಡುಕ ಹೊರಟಿತ್ತು ...
ಬಿಡು ,ನೀನಿಲ್ಲದೆಯೂ ಇರಬಲ್ಲ ನಂಗೆ ನೆನಪನ್ನೂ ಕೊಡವಿ ಎದ್ದು ಬರೋದು ಅಷ್ಟು ಕಷ್ಟವಾಗಲಾರದು !
ಆದರೆ ಮುದ್ದು (ಕ್ಷಮಿಸು ನೀ ಇನ್ಯಾರದೋ ಮುದ್ದು ಆದ್ರೂ ನಂಗೆ ನೀನ್ಯಾವತ್ತೂ ನನ್ನ ಮುದ್ದು ) ಕಾರಣವೇ ಹೇಳದೆ ಎದ್ದು ಹೋದೆಯಲ್ಲೊ ನೀ .
ಭಾವಗಳ ಹೊಯ್ದಾಟವನ್ನ ನಿನ್ನಲ್ಲಿ ನಾನವತ್ತೇ ಗುರುತಿಸಿದ್ದೆ !...ಮೆಸೇಜ್ ಗೆ ಬರದ ರೀಪ್ಲೈ ,ಅಮೇಲೊಮ್ಮೆ ನೀ ಕೇಳೋ ಅರ್ಥವಿಲ್ಲದ ಪ್ರಶ್ನೆಗಳಾದ "ನಾ ಇರದಿದ್ದರೆ ನೀ ಏನು ಮಾಡ್ತೀಯ ?, ನನ್ನನ್ನ ನೆನಪಿಂದಳಿಸಿ ಬಿಡೆ ಹುಡುಗಿ "ಅನ್ನೋ ಅದೆಷ್ಟು ಅಸಂಬದ್ದ ಮಾತುಗಳಿಗೆ ಬಿಕ್ಕಿ ಬಿಕ್ಕಿ ಅತ್ತಿದ್ದೆ ..ನಿನ್ನ ನಿರ್ಧಾರಗಳ ಅರಗಿಸಿಕೊಳ್ಳೋ ಶಕ್ತಿ ನನಗವತ್ತಿರಲಿಲ್ಲ ನಿಜವಾಗ್ಯೂ ...


ಕಾಡಿಸಿ ಕಾಡಿಸಿ ಕೇಳಿದ್ದೆ .ಮನ ಹಗುರಾಗಿಸಿ ಅತ್ತು ಬಿಡೋ ನಾನಿದ್ದೀನಿ ಜೊತೆಗೆ ಅಂತದೆಷ್ಟೋ ಸಲ ಹೇಳಿದ್ದೆ .ನಂಗೇನು ಗೊತ್ತು ಶಾಶ್ವತ ಕಣ್ಣೀರೊಂದನ್ನು ನನಗೇ ಕೊಟ್ಟು (ಬಿಟ್ಟು )ಹೋಗೋ ಹುನ್ನಾರವಿದು ಅನ್ನೋದು ....!!

ಯಾಕೋ ಸಪ್ಪಗಿದ್ದೀಯಾ ? ಅನ್ನೋ ನನ್ನ ಪ್ರಶ್ನೆಗಳನ್ನ ಪ್ರಶ್ನೆಗಳನ್ನಾಗಿಯೆ ಉಳಿಸಿ ,ನೀನಿಲ್ಲದ ಜಗತ್ತೇ ಇಲ್ಲ ಅನ್ನೋ ಮನವೊಂದನ್ನು ಪೂರ್ತಿಯಾಗಿ ಬಿಟ್ಟು ಹೊರಟು ಹೋದೆ ನೀನು ..

ಕೊನೆಗೆ ನೀ ಎದ್ದೇ ಹೋದೆ ,ಮನಸ್ಸಿಂದಲ್ಲ ..ಕನವರಿಕೆಯ ಕನಸಿಂದ ಮಾತ್ರಾ

ನೆನಪುಗಳನ್ನಿಲ್ಲೇ ಬಿಟ್ಟು ಹೋಗಿದ್ದೀಯಲ್ಲೋ ಹುಡುಗಾ..ಮರೆತು ಹಾಗೇ ಹೋದೆಯೋ ಅಥವಾ ನಿನ್ನ ಪ್ರೀತಿಸಿದ ತಪ್ಪಿಗೆ ನನ್ನನ್ನದು ಕೊನೆಯ ತನಕ ಕಾಡಲಿ ಅಂತ ಬೇಕಂತಲೇ ಬಿಟ್ಟು ಹೋದೆಯೋ ನಾ ಅರಿಯೆ ...

ನೀ ನನಗೆ ಸಿಕ್ಕ ಭ್ರಮೆಯಲ್ಲಿ ಜಗತ್ತೇ ನನ್ನದು ಅಂತ ಬೀಗುತ್ತಿತ್ತಲ್ಲೋ ಈ ಹುಚ್ಚು ಮನಸ್ಸು !ಪಾಠವೊಂದ ಕಲಿಸಿದೆ ನೀ ..ಕೊನೆಯ ತನಕ ಮರೆಯದ ಅತೀ ಹತ್ತಿರವಾದ ಪಾಠವದು !ಮನ ಮಾತ್ರ ಯಾರನ್ನೂ ನಿನಗಿಂತ ಜಾಸ್ತಿ ಪ್ರೀತಿಸದಿರೆ ಹುಚ್ಚಮ್ಮ ಅಂತ ಪ್ರತಿ ದಿನ ನೆನಪಿಸುತ್ತೆ ...ನಾ ನಿನ್ನ ಪ್ರೀತಿಸಿದ ಖುಷಿಗೆ ನನ್ನದೇ ಮನ ನನ್ನ ಖುಷಿ ಕಸಿದುಕೊಂಡಂತನಿಸುತ್ತೆ ಕ್ಷಣವೊಂದಕ್ಕೆ !
 
 
ಅದಕ್ಕೂ ನನಗಿಂತ ನಿನ್ನ ಮೇಲೇ ಜಾಸ್ತಿ ವ್ಯಾಮೋಹ ನೋಡು !
ಹೊಟ್ಟೆ ಕಿಚ್ಚಾಗುತ್ತೆ ಕಣೋ ನಿನ್ನ ಮೇಲೆ ..ಮನಸ್ಸಿನ ಮೇಲೆ ಸರ್ವಾಧಿಕಾರಿಯಾಗಿ ಮೆರೆದು ಈಗ ನಿನಗಿದು ಸಂಬಂಧಿಸಿದ್ದೇ ಅಲ್ಲಾ ಅನ್ನೋ ತರ ಹೊರ ನಡೆದೆಯಲ್ಲೋ ..ಪೂರ್ತಿಯಾಗಿ ನಿನ್ನದಾಗಿದ್ದನ್ನ ಬಿಟ್ಟು ಹೋಗೋವಾಗ ಸ್ವಲ್ಪವೂ ಬೇಸರವಾಗಲಿಲ್ವಾ ನಿಂಗೆ ?
ನೀನೆ ಕಟ್ಟಿದ್ದ ಕನಸ ಮನೆ ಮಗುಚಿ ಬಿದ್ದಾಗ್ಲೂ ಒಂದಿನಿತು ದುಃಖವಾಗ್ಲಿಲ್ವಾ ?
ಅಥವಾ
 ಮುಖವಾಡದ ಪ್ರೀತಿ ಅದಾಗಿತ್ತಾ ?
ನಿಜ ಹೇಳು ..
ಹಾರಿಕೆಯ ಉತ್ತರ ಕೇಳಿ ಕೇಳಿ ಮನ ಬಿಕ್ಕುತ್ತಿದೆ ,ನೀ ನಡೆದ ಈ ಮನಸ್ಸು ಯಾರಿಗೂ ಕಾಣದಂತೆ ಆತ್ಮಹತ್ಯೆ ಮಾಡಿಕೊಂಡು ತುಂಬಾ ದಿನಗಳಾಯ್ತು !...
ಯಾರದೋ ಎದೆಯಲ್ಲಿ ಕನಸ ಸೌಧವನ್ನ ಕಟ್ಟಿ ಒಮ್ಮೆಗೇ ಅದನ್ನ ದ್ವಂಸ ಮಾಡಿ ಹಿಂದೆ ತಿರುಗಿಯೂ ನೋಡದೇ ಹೋಗೋ ಅಷ್ಟು ಕೆಟ್ಟವನಲ್ಲ ನನ್ನ ಹುಡುಗ ...ಯಾವುದೋ ಹೇಳಲಾಗದ ಅನಿವಾರ್ಯತೆಗೆ ಕಟ್ಟುಬಿದ್ದು ನೀ ಹೊರನಡೆದೆಯೇನೋ .ನನಗರ್ಥವಾದೀತು ಕಣೋ ....
ಯಾಕಂದ್ರೆ ನೀ ನನ್ನ ಪ್ರೀತಿ ..

ಬಾಳ ತೆಪ್ಪ ಹುಟ್ಟಿಲ್ಲದೇ ಹೊಯ್ದಾಡುತ್ತಿದ್ದಾಗ ಹುಟ್ಟು ಹಾಕಿದ್ದು ನೀ ಬಿಟ್ಟು ಹೋದ ಮಧುರ ನೆನಪುಗಳೇ..ಸುನಾಮಿಯಾಗದೆ ಮೃದು ಮಧುರ ನೆನಪುಗಳ ಖುಷಿಸೋ ಅಲೆಯಾಗಿ ದಡ ಸೇರಿಸಿತು ನನ್ನ ...
ಇದೇ ನಾ ನನ್ನೊಟ್ಟಿಗೆ ಮಾಡಿಕೊಂಡ ಕಾಂಪ್ರಮೈಸ್ ...

ನೀ ನನ್ನ ಬಿಟ್ಟು ಹೋಗಿದ್ದು ಸಣ್ಣ ಬೇಸರ ನನ್ನ ಮಟ್ಟಿಗೆ ...ನೀ ನೀನಾಗಿ ನನ್ನೊಟ್ಟಿಗಿಲ್ಲ ಅಷ್ಟೆ ..
ನೆನಪಾಗಿ ,ಕನಸಾಗಿ,ಪ್ರೀತಿಯಾಗಿ,ಆತ್ಮ ಸಂಗಾತಿಯಾಗಿ ನಾ ಯಾವತ್ತೋ ಜೋಪಾನ ಮಾಡಿದ್ದೇ ನಿನ್ನ ! ಈಗಲೂ ಬೆಚ್ಚಗೆ ಇದ್ದೀಯ ನೀ ನನ್ನೊಳಗೆ .

ಆದರೆ ನನ್ನ ಯಶಸ್ಸಿಗೆ ಸಂಪೂರ್ಣವಾಗಿ ಖುಷಿಸೋ ಒಂದು ಜೀವದ ಕೊರತೆ ಮತ್ತೆ ಕಾಡುತ್ತಿದೆ ನನ್ನ ,ಎದೆಯ ನಿಟ್ಟುಸಿರಾಗಿ, ಬೇಸರದ ಮುಸ್ಸಂಜೆಯಾಗಿ,ಮನದ ಕಣ್ಣೀರಾಗಿ, ಅದೇ ಮರಳು ದಂಡೆಯ ಬಂಡೆಯಾಗಿ ,ಕೈ ತಾಕೋ ಅಲೆಯಾಗಿ .
ಆದರೇ ನಾನಿನ್ಯಾವತ್ತೂ ಬೇರೊಬ್ಬ ಅಂಬಿಗನ ಹುಡುಕಾಟ ಮಾಡಲಾರೆ ..

ಯಾಕಂದ್ರೆ ನಾ ನೀನಲ್ಲ !

ನನ್ನ ಪ್ರೀತಿ ಸತ್ತಿಲ್ಲ ,ಒಲವು ಕವಲೊಡೆಯಲ್ಲ ..
ಬೆಚ್ಚಗಿದ್ದೀಯ ಕಣೋ ನೀನಿಲ್ಲಿ ..ನೆನಪಲ್ಲಿ ..ಮನಸಲ್ಲಿ .

ಇಷ್ಟು ಸಾಕು ನಂಗೆ ..ನಿನ್ನ ನೆನಪುಗಳೊಟ್ಟಿಗೆ ಬದುಕ ಸವೆದೇನು ಹೊರತು ಹುಡುಕಿ ಬಂದ ಬೇರೊಂದು ಪ್ರೀತಿಯನ್ನ ಅನುಮೋದಿಸಲಾರೆ ನಾ ...ಅನುಸರಿಸಲಾರೆ

ನಾನಿವತ್ತೂ ತಪ್ಪಿಲ್ಲದ ನನ್ನ ತಪ್ಪಿಗೆ ಮಂಡಿಯೂರಿ ಕ್ಷಮೆ ಕೇಳುತ್ತಿದ್ದೇನೆ ನಿನ್ನಲ್ಲಿ .ನೀ ನನ್ನವನಾಗದಿದ್ದರೂ ನನ್ನ ಪ್ರೀತಿಯೊಂದಿಗಿನ ಮಧುರ ಭಾವಕ್ಕೆ ಜೊತೆಯಾಗಿದ್ದೆ ಅನ್ನೋ ಕಾರಣಕ್ಕಾದರೂ ಒಮ್ಮೆ ಕ್ಷಮಿಸುಬಿಡು ನಿನ್ನ ಪ್ರೀತಿ ಮಾಡಿದ್ದ ,ಮಾಡುತ್ತಿರೋ ನಿನ್ನದೇ ಹುಡುಗಿಯನ್ನ...


(ಕಳಕೊಂಡ ಪ್ರೀತಿಯಲ್ಲಿ ಅವನದೇ ತಪ್ಪು ಅನ್ನೋಕೆ ಒದ್ದಾಡುತ್ತಿರೋ ,ತಪ್ಪಿಲ್ಲದ ತನ್ನನ್ನೂ ತಪ್ಪಾಗಿಸಿಕೊಂಡು ಕ್ಷಮೆ ಕೇಳುತ್ತಿರೋ ಹುಡುಗಿಯ ಮಾತಾಗಿ ....
ಪ್ರೀತಿಸೋ ಜೀವವೊಂದನ್ನ ಕಳಕೊಳ್ಳದಿರು ಗೆಳೆಯ ...ಇಂತದ್ದೇ ಪ್ರೀತಿ ಎಲ್ಲರಿಗೂ ದಕ್ಕಲ್ಲ ...ನಿನಗೆ ದಕ್ಕಿದ್ದ ಪ್ರೀತಿಯನ್ನ ನೀ ದೂರ ಮಾಡಿದೆ ...ಮನವೊಂದಕ್ಕೆ ಮೋಸ ಮಾಡಿದ ಪಾಪಪ್ರಜ್ಞೆಯಲ್ಲಿ ಅದ್ ಹೇಗೆ ಬದುಕುವೆಯೋ ನೀ .
ನಿನ್ನಲ್ಲಿದ್ದ ಅವಳ ಮನವನ್ನವಳು ಪೂರ್ತಿಯಾಗಿ ಹಿಂಪಡೆಯೋ ಮುನ್ನ ಅವಳವನಾಗು ನೀ ...ಕ್ಷಮಿಸಿ ಅಪ್ಪಿಯಾಳು ...)


ಶ್ರೀಕಾಂತಣ್ಣನ ಈ ಭಾವವನೂ ನೋಡಿಬಿಡಿ ಒಮ್ಮೆ

http://kantha-themagnet.blogspot.in/2013/06/blog-post.html

ಥಾಂಕ್ಸ್ ಶ್ರೀಕಾಂತಣ್ಣ ,ಮೂಡಿದ್ದ ಗೊಂದಲವೊಂದನ್ನ ಸಲೀಸಾಗಿ ಬಗೆಹರಿಸಿದ್ದಕ್ಕೆ :)

 

46 comments:

  1. ಭಾಗ್ಯಾ -
    ಎಂದಿನಂತೆ ಚಂದದ ಭಾವ ಬರಹ ನಿನ್ನದು...
    ಹಾಗೆಯೇ ಎಂದಿನಂತೆ ನನ್ನದೊಂದಷ್ಟು ಗೊಂದಲಗಳು ಇಂತಿವೆ :
    ಒಂದೊಮ್ಮೆ ಮನವನಾಳಿದ ಪ್ರೀತಿ ಎಂದಿಗೂ ಪೂರ್ತಿ ಕಳೆದು ಹೋಗದೇ ಶಾಶ್ವತವಾದ ಮನದ ಮೂಲೆಯ ನೆನಪಾಗಿ, ಒಂದು ಹನಿ ಕಣ್ಣೀರಾಗಿ, ಕನವರಿಕೆಯಾಗಿ, ಮಧುರ ಯಾತನೆಯಾಗಿ ಮನದಲ್ಲಿ ಉಳಿದು ಹೋಗೋದು ಸಹಜವೇ...ಆದರೆ ಅದು ಕಳೆದು ಹೋಗಿಯಾಗಿದೆ ಅನ್ನೋದು ಸ್ಪಷ್ಟಗೋಚರವಾದ ನಂತರವೂ ಮನವನ್ನು ಪೂರ್ತಿಯಾಗಿ ಅಲ್ಲೇ ಇಡ್ತೀನಿ ಅನ್ನೋದು ಮೂರ್ಖತನವಾದೀತು...ಅದು ನಿನ್ನೆಗಳಲ್ಲಿ ಬದುಕೋ ಹುಚ್ಚುತನ ಅನ್ನಿಸಲ್ವಾ...ಬಂದ ಹೊಸ ಪ್ರೀತಿಯ ತಿರಸ್ಕರಿಸೋದು (ಅದು ಪ್ರಾಮಾಣಿಕ ಪ್ರೀತಿ ಆಗಿದ್ದಲ್ಲಿ ಮಾತ್ರ) ಇಂದಿನ ನಮ್ಮ ಸ್ಥಿತೀನ ನಾಳೆ ನಾವು ಅವರಿಗೆ ನೀಡಿದಂತೆಯೂ ಆಗಬಹುದಲ್ವಾ...ಮತ್ತು ಪ್ರೀತಿಯೆಂಬುದು ನಿಂತ ನೀರಾಗಬಾರದು...ಮಧುರ ಯಾತನೆಯೊಂದನು ಕೈಯಾರ ಶಾಶ್ವತ ಯಾತನೆಯಾಗಿಸಿಕೊಂಡು ಪ್ರೀತಿಗಿಂತ ಬಹುದೊಡ್ಡದಾದ ಬದುಕನ್ನೇ ಕೊಲ್ಲುವುದು ಎಷ್ಟು ಸರಿ...ಪ್ರೀತಿ ಹರಿವ ಜೀವ ಜಲ...ಅದು ಹರಿಯುತ್ತಲೇ ಇರಲಿ ಸದಾ...

    ReplyDelete
    Replies
    1. ಭಾಗ್ಯ,
      ನಿಮ್ಮ ಲೇಖನ ನನ್ನ ಗೆಳತಿಯೊಬ್ಬಳ ನಿಜ ಜೀವನದ ಚಿತ್ರಣದ೦ತಿದೆ. ಭಾವಲಹರಿ, ಪ್ರೀತಿಯಲ್ಲಿರುವ ಪ್ರಾಮಾಣಿಕತೆ ಮುಖ್ಯವಾಗಿ ಎದ್ದು ಕಾಣಿಸುತ್ತೆ. ನನ್ನ ಸ್ನೇಹಿತೆಗೆ ವಾರಕ್ಕೆ ಎರಡು-ಮೂರು ಬಾರಿಯಾದರು ಹುರಿದು೦ಬಿಸಿ, ವಾಸ್ತವವನ್ನ ಅರಗಿಸಿಕೊ೦ಡು, ಎಲ್ಲಕ್ಕಿ೦ತ ದೊಡ್ಡದಾದ ಬದುಕನ್ನ ಅಲ್ಲಗಣಿಸೋದು ಸಮ೦ಜಸವಲ್ಲ, ಈ ದಿನ - ಈ ಕ್ಷಣವನ್ನು ಮಾತ್ರ ಪ್ರೀತಿಸುವ೦ತೆ ಪ್ರೇರೇಪಿಸುವ ಕೆಲಸ ನನ್ನದು.....

      ಶ್ರೀವತ್ಸ,
      ನಿಮ್ಮ ಪ್ರತಿಕ್ರಿಯೆ ಬಹಳ ಇಷ್ಟವಾಯ್ತು..... ಜೀವನೋತ್ಸಾಹ ಹೀಗೇ ಇರಲಿ....

      ಶ್ರೀಕಾ೦ತ್....
      ಹೊಸ ಪ್ರಯೋಗ ಚೆನ್ನಾಗಿದೆ!!! ವ್ಯಥೆ ತು೦ಬಿದ ಲೇಖನಕ್ಕೊ೦ದು ಟ್ವಿಸ್ಟ್ ಕೊಟ್ಟು, ನಿಮ್ಮದೇ ಶೈಲಿಯಲ್ಲಿ ಕಥೆ ಎಣೆದ ರೀತಿ ಸೊಗಸಾಗಿದೆ.

      Delete
    2. ಥಾಂಕ್ಸ್ ಜಿ ..
      ಆದರೆ ಅವಳ ಪ್ರೀತಿಯ ಭಾವಗಳು ಏನಿವೆಯೇನೋ ಅಲ್ವಾ ?
      ಬಹುಶಃ ಅವಳ ಮಟ್ಟಿಗೆ ಪ್ರೀತಿ ಒಂದೇ ಸಲ ಆಗೋದೆಂಬ ,ಮನಸ್ಸಲ್ಲಿರೋ ಅವನ ಮುಖವನ್ನ ಅಳಿಸದೇ ಹಾಗಿಯೆ ಉಳಿಸಿಕೊಳ್ಳಬೇಕೆಂಬ ಇರಾದೆ ಇದ್ದೀತು .

      ನಿಮ್ಮೀ ಬದುಕ ಭಾವದ ಬಗೆಗಿನ ಪ್ರತಿಕ್ರಿಯೆ ಹತ್ತಿರ ಅನಿಸ್ತು ...

      ಕಳಕೊಂಡ ಇದೇ ಪ್ರೀತಿ ಮತ್ತೆ ದಕ್ಕಿದ್ದರ ಬಗೆಗೆ ಶ್ರೀಕಾಂತಣ್ಣನ ಚಂದದ ಭಾವ ಮೆರವಣಿಗೆಯನ್ನೂ ಒಮ್ಮೆ ನೋಡಿ .
      ಅಲ್ಲಿಯ ಹ್ಯಾಪಿ ಎಂಡಿಂಗ್ ಖುಷಿ ಕೊಡುತ್ತೆ ನಿಮ್ಗೂ .

      ಇನ್ನೊಂದು ಭಾವದ ಜೊತೆ ನಾ ಮತ್ತೆ ಜೊತೆಯಾಗ್ತೀನಿ

      Delete
    3. ಥಾಂಕ್ಸ್ ರೂಪಕ್ಕಾ ...
      ನಿರುಪಾಯಕ್ಕೆ ಸ್ವಾಗತ ..
      ನನ್ನೀ ಭಾವವನ್ನ ನೀವಿಷ್ಟ ಪಟ್ಟಿದ್ದು ಖುಷಿಯಾಯ್ತು ..

      ಭಾವಗಳ ವಿನಿಮಯದಲ್ಲಿ ಮತ್ತೆ ಜೊತೆಯಾಗ್ತೀನಿ .

      Delete
  2. ಚೆಂದದ ಬರಹ ಭಾಗ್ಯ.. ಇದನ್ನ ಬಳಸಿಕೊಂಡು ಶ್ರೀಕಾಂತ್ ಅವರು ಬರೆದ ಬರಹ ಇನ್ನೂ ಮುದಗೊಳಿಸಿತು.. ಖುಷಿಯಾಯ್ತು.. :)

    ReplyDelete
    Replies
    1. ಥಾಂಕ್ ಯು ಜಿ .

      ನಿರುಪಾಯಕ್ಕೆ ಸ್ವಾಗತ .

      ನಿಜ .ಶ್ರೀಕಾಂತಣ್ಣನ ಖುಷಿಯ ಸೆಲೆಯೆ ನಂಗೂ ಇಷ್ಟವಾಗಿದ್ದು.
      ಖುಷಿಯಾಯ್ತು .
      ಮತ್ತೆ ಸಿಗೋಣ

      Delete
  3. ಭಾಗ್ಯ ,

    ಟಿಪಿಕಲ್ 'ಭಾಗ್ಯಸ್ವಗತ' , ಎಲ್ಲಿ ಹೇಗೆ ಬರೆದರೂ ನೀನೆ ಬರೆದಿದ್ದು ಅಂತ ಗೊತ್ತಾಗುವ ಟ್ರೇಡ್ಮಾರ್ಕ್ ಇರುವ, still ಏಕತಾನತೆ ಅನಿಸದ ಬರಹ ನಿನ್ನದಾಗ್ತಾ ಇದೆ. ಅಭಿನಂದನೆಗಳು ಅದಕ್ಕೆ.

    ಬಿಟ್ಟು ಹೋದ ಜನರ ಬಗ್ಗೆ ನಾವು ಚಿಂತಿಸಬಾರದು ಎಂದುಕೊಳ್ಳುವಲ್ಲಿಯೇ ಅವರನ್ನು ನೆನೆಸಿಕೊಳ್ಳುತ್ತದೆ ಮನಸ್ಸು, ತನ್ನನ್ನು ತಾನೇ ಕೊಲ್ಲುತ್ತದೆ ಪ್ರತೀ ಬಾರಿಯೂ, ಬಿಟ್ಟೆನೆಂದರೂ ಬಿಡದೀ ಮೋಹ ಎನ್ನುವ ಹಾಗೆ. ಎಲ್ಲೋ ಓದಿದ ನೆನಪು, ನಿಮ್ಮ ಪ್ರೀತಿ ನಿಜವಾದದ್ದೇ ಆದರೆ ಮಾತು ನಿಮ್ಮ ಪ್ರೀತಿಪಾತ್ರರು ಅದನ್ನು ತ್ಯಜಿಸಿದರೆ ಆಗುವ ನಷ್ಟ ನಿಮಗಲ್ಲ ಎಂದು, ಅದೂ ವ್ಯಕ್ತವಾಗಿದೆ ಇಲ್ಲಿ. ಅಹಂ ಗಿಂತ ಭಾವನೆ ದೊಡ್ಡದು ಎಂದು, ತಪ್ಪಿಲ್ಲದೆ ಕ್ಷಮೆ ಕೇಳುವ ಹುಡುಗಿ ದೊಡ್ಡವಳಾಗಿ ಬಿಡುತ್ತಾಳೆ, ಇಷ್ಟ ಆಗ್ತಾಳೆ :)

    ಬರೀತಾ ಇರು ಅಂತ ಎಕ್ಸಾಮ್ ಟೈಮ್ ಅಲ್ಲಿ ಹೇಳಬೇಕಾ? ಓದಬೇಕೆಂಬ ನನ್ನ ಸ್ವಾರ್ಥಕ್ಕೆ ಹೇಳುತ್ತಿದ್ದೇನೆ ಎನ್ನಿಸುತ್ತದೆ. ಓದು , ಬರೀ , ಬ್ಯಾಲೆನ್ಸ್ ಮಾಡು :)

    ReplyDelete
    Replies
    1. ಥಾಂಕ್ ಯು ಜಿ .
      ಬರೆದಿದ್ದನ್ನ ಇಷ್ಟಪಟ್ಟು ,ಎಲ್ಲೇ ಬರೆದ್ರು ನನ್ನ ಬರಹಗಳ ಗುರುತಿಸಬಹುದೆಂಬ ನಿಮ್ಮೀ ಮಾತು ತುಂಬಾ ಖುಷಿಯಾಯ್ತು .

      ನಿಜ .ಕಳೆದುಕೊಂಡಿದ್ದರ ಬಗೆಗೆ ತೀರಾ ವ್ಯಾಮೋಹ ಯಾಕಿರುತ್ತೋ ಏನೋ ಅಲ್ವಾ ?
      ಅದೇ ಬೇಕು ಅನಿಸುತ್ತೆ .
      ಶ್ರೀಕಾಂತಣ್ಣನ ಬರಹವನ್ನೂ ನೋಡಿ ಒಮ್ಮೆ ...ಶೈಲಿ ,ಹೆಣೆದ ರೀತಿ ,ಕೊನೆಗೆ ಕೊಟ್ಟ ಟ್ವಿಸ್ಟ್ ಎಲ್ಲವೂ ಹತ್ತಿರವಾಗುತ್ತೆ

      ತಪ್ಪಿಲ್ಲದೇ ಕ್ಷಮೆ ಕೇಳಿದ ಹುಡುಗಿಯ ಭಾವವೊಂದ ನೀವಿಷ್ಟ ಪಟ್ಟಿದ್ದು ,ತುಂಬಾ ದಿನಗಳಾದ ಮೇಲೆ ನಿರುಪಾಯಕ್ಕೆ ಬಂದಿದ್ದು ಎರಡಕ್ಕೂ ಸೇರಿ ಒಂದು ಧನ್ಯವಾದ ನಿಮ್ಗೆ :)

      ಪರೀಕ್ಷೆಯ ಕಾರುಬಾರು ಇನ್ನೇನು ಮುಗೀತು ಬಿಡಿ :)
      ನಿಮ್ಮ ತಲೆ ತಿನ್ನೋಕೆ ವಾಪಸ್ಸಾದೆ ಮತ್ತೆ ಅಂದ್ಕೊಳಿ :)
      ಭಾವಗಳ ತೇರಲ್ಲಿ ಜೊತೆಯಾಗ್ತೀನಿ ನಾ .

      Delete
  4. ಸುಬ್ಬು ಮಾತು ಹೌದು ಅನಿಸ್ತಾ ಇದ್ದು ನಂಗೂ ಭಾಗ್ಯ..
    ಚೆನ್ನಾಗಿ ಬರೀತಾ ಇದ್ದೆ. ಮುಂದುವರೆಸು.. ಮಳೆಗಾಲ ಬರ್ತಾ ಇದ್ದು.. ನಿನ್ನ ಎಕ್ಸಾಮೂ ಮುಗಿತಾ ಇದ್ದು ;-) ಹಂಗಾಗಿ ಭೋರಂತ ಸುರೀತಿರೋ ಮಳೆಗೆ ಬೆಚ್ಚನೆ ನೆನಪು ಕೊಡೋಕೆ ನಿನ್ನ ಇನ್ನೊಂದಿಷ್ಟು ಕತೆಗಳು ಬರಲೆಂಬ ನಿರೀಕ್ಷೆಯಲ್ಲಿ :-)
    ಶ್ರೀಕಾಂತಣ್ಣನ ಬ್ಲಾಗನ್ನೂ ಓದಿದಿ..
    What an improvisation sir ji !! :-)
    ಒಂದೇ ಕತೆಯನ್ನು ಇಟ್ಟುಕೊಂಡು ಒಂದು ಪದವನ್ನೂ ಬದಲಾಯಿಸದೇ ಮತ್ತೊಂದು ರೂಪ ಕೊಡೋ ಪ್ರಯತ್ನವೇ ಒಂದು ಹೊಸ ಕಲ್ಪನೆ.. superb

    ReplyDelete
    Replies
    1. ಥಾಂಕ್ಸ್ ಪ್ರಶಸ್ತಿ :)
      ಹಾ ಹಾ ..ಪರೀಕ್ಷೆಯ ತಲೆಬಿಸಿ ಮುಗಿದಂತೆಯೆ ಬಿಡಿ :)
      ಬೋರ್ ಅಂತಾ ಸುರಿಯೋ ಮಳೆಯ ಜೊತೆಗೆ ಮತ್ತೆ ಬೋರ್ ಹೊಡೆಸೋಕೆ ಬರ್ತೀನಿ ನಾ.


      ಇಬ್ಬರ ಭಾವವೂ ನಿಮಗಿಷ್ಟವಾಗಿದ್ದು ನನ್ನ ಖುಷಿ :)
      ಇನ್ನೊಂದು ಭಾವದ ಜೊತೆ ಮತ್ತೆ ಸಿಗೋಣ

      Delete
  5. ಗೆಳೆಯತಿ ಭಾಗ್ಯ ಭಟ್ ಮತ್ತು ಅಲೆಮಾರಿ ಶ್ರೀಮಾನ್ ಅವರ ಬ್ಲಾಗ್ ಬರಹಗಳು ಒಂದೇ ನಾಣ್ಯದ ಎರಡು ಮುಖಗಳಾಗಿರುವ ಕಾರಣದಿಂದ ಇಬ್ಬರಿಗೂ ಸೇರಿ ಒಂದೇ ಕಾಮೆಂಟ್ ಬರೆಯುವ ಸ್ವಾತಂತ್ರ್ಯ ತೆಗೆದುಕೊಳ್ಳುತ್ತಿದ್ದೇನೆ.

    ಮೊದಲು ಭಾಗ್ಯಾ ಭಟ್ ಅವರ ಮೂಲ ಬ್ಲಾಗ್ ಬರಹವನ್ನು ಓದುತ್ತಾ ಹೋದ ಹಾಗೆಲ್ಲಾ ನನಗೆ ಇದು ನನ್ನ ಹದಿ ಹರಯದಲ್ಲೂ ತೀವ್ರವಾಗಿ ಕಾಡಿದ ಪರಿತಾಪ ಅನಿಸ ಹತ್ತಿತ್ತು. ಇಲ್ಲಿ ಲೇಖಕಿ ದೃಷ್ಟಿಯಲ್ಲಿ 'ಅವನು' ಹೇಗೋ ಹಾಗೆಯೇ ನನ್ನ ದೃಷ್ಟಿಯಲ್ಲಿ 'ಅವಳು'. ಅವಳಾಗಲಿ ಅಥವಾ ಅವನಾಗಲೀ ಒಲುಮೆ - ಬಿಟ್ಟು ಹೋಗುವಿಕೆ - ಬದುಕಿನ ಪೂರಾ ಕಾಡುವ ವಿರಹದ ಛಾಯೆ ಬದಲಾಗೋಲ್ಲ. ಬಿಟ್ಟು ಹೋದ ವ್ಯಕ್ತಿಗೆ ಮರೆವು ವರವಾದರೆ ನಮಗೆ ಅವರ ನೆನಪೇ ಶಾಪ. ಭಾವ ವ್ಯಕ್ತಪಡಿಸುವ ಈ ಬರಹದ ತೀವ್ರತೆ ಖಂಡಿತ ನಮಗೆ ತಟ್ಟುತ್ತದೆ.

    ಬಹುಶಃ ಅದೇ ಕಾರಣಕ್ಕಿರಬೇಕು ಶ್ರೀ. ಶ್ರೀಕಾಂತ್ ಅವರು ಬರೆಯುತ್ತಾ, 'ನನಗಿಂತ ನಿನ್ನ ಮೇಲೇ ಜಾಸ್ತಿ ವ್ಯಾಮೋಹ ನೋಡು!' ಎನ್ನುತ್ತಾರೆ. ಪರಸ್ಪರ ಪ್ರೇಮಿಗಳು ಒಬ್ಬರ ಮನಸ್ಸಿನಲ್ಲಿ ಒಬ್ಬರು ನೆಲೆ ನಿಂತು ಬಿಟ್ಟಿರುತ್ತಾರೆ ಹಾಗಾಗಿ ಅವನುಎಂದರೆ ಅವಳು. ಅವಳು ಎಂದರೆ ಅವನೇ! ಅದಕ್ಕಾಗಿಯೇ ಶ್ರೀಮಾನ್ ಬೇರೆ ಕಡೆ ವಾಲಿ ಬಿಟ್ಟವರನ್ನು ತಿದ್ದುವ ಉದ್ದೇಶದಿಂದ
    "ನಿನ್ನಲ್ಲಿದ್ದ ಅವಳ ಮನವನ್ನವಳು ಪೂರ್ತಿಯಾಗಿ ಹಿಂಪಡೆಯೋ ಮುನ್ನ ಅವಳ ಗೆಳೆಯನಾಗು ನೀ ...ಸ್ನೇಹದ ಕಡಲಿನ ಗೆಳೆತನದ ಹಾಯಿ ದೋಣಿಯ ರಾಣಿ ಕ್ಷಮಿಸಿ ಅಪ್ಪಿಯಾಳು ..." ಎಂಬ ಅತ್ಯುತ್ತಮ ಪರಿಹಾರ ಸೂಚಿಸುತ್ತಾರೆ, ಓದುಗ ವನಾಗಿದ್ದಾರೆ ಈ ತಿದ್ದುವಿಕೆಯನ್ನು ಅವನು ಎಂದೂ ಓದಿಕೊಳ್ಳಬಹುದು.

    ಒಟ್ಟಾರೆ, ಭಾಗ್ಯ ಅವರ ಕಾವ್ಯಾತ್ಮಾಕ ಬರವಣಿಗೆ ಮತ್ತು ಶ್ರೀಮಾನ್ ಅವರು ಗೀತೆಗಳನ್ನು ಬಳಸಿ ಬರಹವನ್ನು ಒಗ್ಗಿಸಿ - ರುಚಿಸುವಂತೆ ಮಾಡುವ ಅಪೂರ್ವ ಕಲೆ ಎರಡೂ ಮನಸ್ಸಿನಾಳಕ್ಕೆ ಇಳಿಯುತ್ತವೆ.

    ಶ್ರೀಮಾನ್ ಅವರ ಶೈಲಿಯಲ್ಲೇ ನಮ್ಮದೂ ಉಪ ಸಂಹಾರ...
    "ಎಲ್ಲೇ ಇರು ಹೇಗೆ ಇರು..."





    ReplyDelete
    Replies
    1. ಧನ್ಯವಾದ ಬದರಿ ಸರ್ .
      ಎಲ್ಲರ ಭಾವಗಳನೂ ಇಷ್ಟಪಟ್ಟು ಓದುವ ,ಪ್ರೋತ್ಸಾಹಿಸುವ ನಿಮ್ಮ ಮನಕ್ಕೊಂದು ನಮನ .

      ನಿಜ .ಅದ್ಯಾಕೋ ಮೊದಲ ಪ್ರೀತಿ ನೆಲ ಕಚ್ಚಿದ ಭಾವ ಮಾತ್ರ ಬದುಕ ತುಂಬಾ ಕಾಡ ಬರುತ್ತೆ .
      ಭಾವ ನಿಮಗಿಷ್ಟವಾದುದ್ದು ನನ್ನ ಖುಷಿ .

      ಶ್ರೀಕಾಂತಣ್ಣನ ಚಂದದ ನೇಯ್ಗೆಯ ನೀವಿಷ್ಟಪಟ್ಟಿದ್ದು ಮತ್ತೂ ಖುಷಿ .

      ಮತ್ತೆ ಸಿಗೋಣ ಇನ್ನೊಂದು ಭಾವದ ಜೊತೆ

      Delete
  6. ಪ್ರೀತಿಗೊಂದು ಆಣೆಯಿಟ್ಟು ... ಕನಸುಗಳಿಗೆ ಮಣೆ ಹಾಕಿ, ಎದೆಯಲ್ಲಿ ಜಾಗ ಮಾಡಿಕೊಂಡ ಹುಡುಗ ಹೇಳದೆ ಕೇಳದೆ ಎದ್ದು ಹೋದವನು. ಅಂಥವನನ್ನು ಕ್ಷಮಿಸುವ ದೊಡ್ಡ ಮನಸಿನ ಹುಡುಗಿ ಆಕೆ... ಕಡಲ ತೀರದಲ್ಲಿ ಅರಳಿದ ಕಥೆಯಲ್ಲಿ ಭಾವಗಳ ಅಲೆಗಳ ಅಬ್ಬರ ಜಾಸ್ತಿ....

    ಆದರೆ ನನ್ನಗಿಲ್ಲಿ ಅನಿಸಿದ್ದು : ಈಕೆಯ ಕನಸನ್ನು ತುಳಿದು ಹೋದ ಆತನಿಗೆ ಇನ್ನೊಂದು ಚಂದದ ಬದುಕಿದೆಯಾದರೆ ಈಕೆಗೇಕಿಲ್ಲ?? ಆಕೆ ಪ್ರೀತಿಸುವ ಜೀವ ಸುಖವಾಗಿದೆ ಎಂದಾಗ ಆಕೆಯನ್ನು ಪ್ರೀತಿಸುವ ಜೀವದೊಂದಿಗೆ ಬದುಕು ಸುಂದರಗೊಳಿಸಿಕೊಳ್ಳುವ ಅವಕಾಶ ಆಕೆಗಿದೆ. ಹಾಗಾಗಿ ಹುಡುಕಿ ಬರುವ ಇನ್ನೊಂದು ಪ್ರೀತಿಯನ್ನು ಅನುಮೊದಿಸಲಾರೆ ಎಂಬುದು ನನ್ನ ಮಟ್ಟಿಗಂತೂ ಮೂರ್ಖತನವಾದೀತು ಎನಿಸುತ್ತದೆ.

    super ....

    ReplyDelete
    Replies
    1. ಥಾಂಕ್ ಯು ಸಂಧ್ಯಕ್ಕಾ :)
      ಯಾವಾಗ್ಲೂ ಹತ್ತಿರಾ ಹತ್ತಿರದ ಪ್ರತಿಕ್ರಿಯೆ ಮಾಡೋ ಸಂಧ್ಯಕ್ಕನ ರಿಪ್ಲೈ ಸಂಧ್ಯೆಯಂಗಳದ ಬರಹಗಳಷ್ಟೇ ಇಷ್ಟ ಆಗುತ್ತೆ ನಂಗೆ :)

      ಆದರೆ ಸಂಧ್ಯಕ್ಕಾ ,
      True love is neither physical nor romantic. True
      love is an acceptance of all that is, has been, will
      be, and will not be.
      ಈ ತರದ ಒಂದು ಮಧುರ ಭಾವ ಅವಳದ್ದಿದ್ದೀತು .
      ಆ ಪ್ರೀತಿಯನ್ನ ಮನದಲ್ಲೇ ಪೂಜಿಸೋ ಅವಳಿಗೆ ಇನ್ನೊಂದು ಪ್ರೀತಿಯ ಅನುಮೋದಿಸೋಕೆ ಅಥವಾ ಅನುಸರಿಸೋಕೆ ಕಷ್ಟವಾದೀತು .

      ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದ

      Delete
  7. ಹೊಟ್ಟೆ ಕಿಚ್ಚಾಗುತ್ತೆ ಕಣೋ ನಿನ್ನ ಮೇಲೆ ..ಮನಸ್ಸಿನ ಮೇಲೆ ಸರ್ವಾಧಿಕಾರಿಯಾಗಿ ಮೆರೆದು ಈಗ ನಿನಗಿದು ಸಂಬಂಧಿಸಿದ್ದೇ ಅಲ್ಲಾ ಅನ್ನೋ ತರ ಹೊರ ನಡೆದೆಯಲ್ಲೋ ..ಪೂರ್ತಿಯಾಗಿ ನಿನ್ನದಾಗಿದ್ದನ್ನ ಬಿಟ್ಟು ಹೋಗೋವಾಗ ಸ್ವಲ್ಪವೂ ಬೇಸರವಾಗಲಿಲ್ವಾ ನಿಂಗೆ ? ತುಂಬಾ ಚನ್ನಾಗಿದೆ..ಮನಸ್ಸಿಗೆ ತುಂಬಾ ನಾಟಿದ ಮಾತಿದು.

    ReplyDelete
    Replies
    1. ಥಾಂಕ್ ಯು ..
      ನಿರುಪಾಯಕ್ಕೆ ಸ್ವಾಗತ .
      ಪ್ರೀತಿಯ ಭಾವವೊಂದ ನೀವಿಷ್ಟಪಟ್ಟಿದ್ದು ಖುಷಿ ಆಯ್ತು .
      ಮತ್ತೆ ಸಿಗೋಣ

      Delete
  8. Replies
    1. ಧನ್ಯವಾದ ಸುಗುಣಾ ಮೇಡಂ .
      ಭಾವಗಳ ತೇರಲ್ಲಿ ಮತ್ತೆ ಸಿಗೋಣ

      Delete
  9. ನಾವು ಪ್ರೀತಿಸುವವರಿಗಿಂತ ನಮ್ಮ ಪ್ರೀತಿಸುವವರು ನಮ್ಮ ಜೊತೆಯಾದರೆ
    ಅಲ್ಲಿ ಸಂತೋಷ ಹೆಚ್ಚಿರುತ್ತದೆಯಂತೆ....
    ಒಂಟೊಂಟಿ ಅನ್ನಿಸಿದಾಗ ಸಿಕ್ಕಿದ ಪ್ರೀತಿ....... ಅದು ಮೊದ ಮೊದಲ ಅನುಭವ...
    ಮೊದ ಮೊದಲ ಅನುಭವದಲ್ಲಿ ಎಲ್ಲವೂ ಸ್ವಲ್ಪ ಜಾಸ್ತಿಯೇ..... ಪ್ರೀತಿ... ಒಲವು...
    ನೆನಪು....
    ಸವಿ ಸವಿ ನೆನಪು ಸಾವಿರ ನೆನಪು.....
    ಸಾವಿರ ಕಾಲಕೂ ಮರೆಯದ ನೆನಪೂ.... ನೆನಪಾಗ್ತಿದೆ...

    ಆದ್ದರಿಂದ ಒಂದು ಪ್ರೀತಿಯನ್ನು ತೊರೆದು ಇನ್ನೊಂದಕ್ಕೆ ಮಣೆ ಹಾಕುವುದು ಕಷ್ಟವೇ...
    ಆದರೆ ಇಲ್ಲಿ ನಾನು ಸಂಧ್ಯಾ ಶ್ರೀಯವರ ವಾದವನ್ನು ಒಪ್ಪುತ್ತೇನೆ...
    ಅವನು ಬೇರೊಂದುಕಡೆ ಕಂಡುಕೊಂಡ ಪ್ರೀತಿಯಲ್ಲಿ ಸುಖವಾಗಿದ್ದಾನೆಂದರೆ
    ಅದು ಅವಳಿಗೇಕಿಲ್ಲ...

    ಎಂದಿನಂತೆ ಮೃದುವಾದ ಭಾವ ಬರಹ... ಚನ್ನಾಗಿದೆ...

    ReplyDelete
    Replies
    1. ಧನ್ಯವಾದ ರಾಘವ್ ಜಿ .
      ಎಂದಿನಂತೆ ಆತ್ಮೀಯ ಪ್ರತಿಕ್ರಿಯೆ .

      ಆದರೆ ಅವ ಎದ್ದು ಹೋದ ಪ್ರೀತಿ ಅವಳಿಗ್ಯಾಕೆ ಅಂತ ಹೇಳೋದು ಕಷ್ಟವೇನೋ .
      ಆ ಮಧುರ ಒಲವಲ್ಲಿ ದೊಡ್ಡ ಪಾಲು ಅವಳದೇ ಇರಬೇಕಾದಾಗ ಎದ್ದು ಹೋಗೋದು ,ಮರೆತು ಬಿಡೋದು ಸುಲಭದ ಮಾತಲ್ಲ ಅಲ್ವಾ ?

      ಅದವಳ ಪ್ರೀತಿ ,ಅವನವಳ ಹುಡುಗ ..ಇಷ್ಟೇ ಅವಳಿಗೆ ತಿಳಿದಿದ್ದು .

      ಪ್ರೀತಿ ಇಲ್ಲದ ಮೇಲೆಯೂ .....ಪ್ರೀತಿಯೆ ಅವಳುಸಿರು :)

      ಶ್ರೀಕಾಂತಣ್ಣನ ಭಾವವನ್ನೂ ಓದಿ ನೀವಿಷ್ಟಪಟ್ಟಿದ್ದು ಖುಷಿ ಆಯ್ತು .
      ಇನ್ನೊಂದು ಭಾವದಲ್ಲಿ ಮತ್ತೆ ಜೊತೆ ಸಿಗೋಣ

      Delete
  10. Tumba uttama baraha... Keep writing well article.

    ReplyDelete
    Replies
    1. ಧನ್ಯವಾದ .ನೀವೋದಿ ಇಷ್ಟಪಟ್ಟಿದ್ದು ಖುಷಿ ಆಯ್ತು
      ನಿರುಪಾಯಕ್ಕೆ ಸ್ವಾಗತ .

      Delete
  11. Replies
    1. ಥಾಂಕ್ ಯು ಸರ್ .
      ನೀವೋದಲು ಬಂದಿದ್ದು ಖುಶಿ ಆಯ್ತು .
      ನಿರುಪಾಯದ ಇನ್ನೊಂದು ಭಾವದಲ್ಲಿ ಮತ್ತೆ ಜೊತೆಯಾಗ್ತೀನಿ

      Delete
  12. ಮುದ್ದಕ್ಕಾ..
    ನಿನ್ನ ಭಾವ ಬರಹದ ಬಗ್ಗೆ ಎರಡು ಮಾತಿಲ್ಲ.. ಇಷ್ಟ ವಾಯಿತು.. ಬಹುಶಃ ಪ್ರೇಮ ಬರಹಗಳಲ್ಲಿ ನಿನ್ನ ಮೀರಿಸುವುದು ಸುಲಭದ ಮಾತಲ್ಲ..
    ನೆನ್ನೆಗಳು ನೆನಪಲ್ಲಿ ಇರಲಿ, ನಾಳೆಗಳಲ್ಲಿ ಭರವಸೆ, ಕನಸುಗಳಿರಲಿ...
    ತುಂಬಾ ತುಂಬಾ ಮನಸ್ಸಿಗೆ ತಟ್ಟಿತು...

    ReplyDelete
    Replies
    1. ಥಾಂಕ್ ಯು ಸುಷ್ಮಕ್ಕಾ ....

      ಪ್ರೇಮ ಬರಹಗಳ ಒಡತಿ ,ಕನಸುಕಂಗಳ ಹುಡುಗಿ ನಂಗೀ ಮಾತು ಹೇಳಿದ್ದು ಹಿಡಿಸಲಾರದಷ್ಟು ಖುಷಿ ಆಯ್ತು

      ನಿನ್ನೆಗಳ ಕನಸಲ್ಲಿ ಇರಲಿ ನಾಳೆಗಳ ಭರವಸೆ ...ವಾಹ್ ಎಂಥಾ ಮಾತು ಅಕ್ಕಯ್ಯ .
      ಖುಷಿ ಆಯ್ತು.

      ಭಾವಗಳ ’ವಿನಿ’ಮಯದಲ್ಲಿ ಮತ್ತೆ ಜೊತೆಯಾಗೋಣ ;) ;)

      Delete
  13. ಬೆಂಕಿ ತನ್ನ ಜಾಗವನ್ನು ಸುಟ್ಟುಕೊಂಡು ನಂತರ ಉಳಿದ ಜಾಗವನ್ನು ಸುಡುತ್ತದೆ ಹಾಗೆಯೇ ಪ್ರೀತಿ ಒಳಗೆ ಇದ್ದ ಮೇಲೆ ಅದು ಕಾಡುವ ಕಾರುವ ಭಾವ ಅನುಭವಿಸಿದರಿಗೆ ಮಾತ್ರ ಗೊತ್ತು. ಕಾರಣಗಳು ಹಲವಾರು, ಪರಿಸ್ಥಿತಿಯ ಒತ್ತಡ ಎಲ್ಲವು ಮನುಜನನ್ನು ತೃಣ ಸಮಾನ ಮಾಡಿಬಿಡುತ್ತದೆ. ಪ್ರೀತಿ ಇಲ್ಲದ ಮೇಲೆ ಏನಾಗುತ್ತೆ ಅಂದ್ರೆ ಪ್ರೀತಿ ಅಲ್ಲೇ ಇರುತ್ತೆ ಅಷ್ಟೇ.. ಬೂದಿಯ ಕೆಳಗೆ ಕೆಂಡವಿದ್ದಂತೆ ಸ್ವಲ್ಪ ಪುಟವಿಡಬೇಕು ಅಷ್ಟೇ. ಪ್ರೀತಿಯ ತಹ ತಹಿಕೆ ಸುಂದರವಾಗಿ ಅಭಿವ್ಯಕ್ತ ಗೊಂಡಿದೆ. ಸಲಾಂ ನಿನ್ನ ಬರಹಕ್ಕೆ!

    ReplyDelete
    Replies
    1. ಶ್ರೀಕಾಂತಣ್ಣ ,
      ಮೊದಲ ಧನ್ಯವಾದ ನಿಮಗೆ ...
      ಬೇಸರ ತರಿಸೋ ನನ್ನ ಭಾವವೊಂದನ್ನ ಮುದ ತರಿಸಿ ಹಾಡುಗಳ ಸಾಥ್ ಕೊಟ್ಟು ಚಂದ ಕಾಣಿಸಿದ್ದೀರಿ .
      ನಿಮ್ಮ ಭಾವವೇ ನಂಗೆ ತುಂಬಾ ಖುಷಿ ಆಯ್ತು .

      ನಿಜ ..ಪ್ರೀತಿ ಅಲ್ಲೇ ಇರುತ್ತೆ ..ಮನದಲ್ಲಿ,ಹೆಸರಲ್ಲಿ ,ನೆನಪಲ್ಲಿ.
      ಕೊನೆಯ ತನಕ ಹಾಗೇ ಇರುತ್ತೇನೊ .

      ಆತ್ಮೀಯ ಪ್ರತಿಕ್ರಿಗೆಗೆ ಶರಣು .
      ಭಾವಗಳ ಸಂತೆಯಲ್ಲಿ ಮತ್ತೆ ಜೊತೆಯಾಗ್ತೀನಿ

      Delete
  14. ಭಾವನೆಗಳ ಭಾವಸಾಗರದಲ್ಲಿ ಮಿಂದ ಹಾಗಾಯಿತು. ಸುಂದರವಾಗಿ ಮೂಡಿಬಂದಿದೆ ಸಾಲುಗಳು. ಆ ಮನಸಿನ ನಿಸ್ಸಹಾಯಕತೆ ಮನ ಮುಟ್ಟುವ ಹಾಗಿದೆ. ಬಹಳ ಸರಳವಾದ ಪದಗಳಲ್ಲಿ ಮನಸ್ಸಿನ ಗಂಭೀರವಾದ ಮಾತುಗಳನ್ನು ಸುಲಭವಾಗಿ ಹೇಳಿದ ಹಾಗಿದೆ. :)

    ReplyDelete
    Replies
    1. ಥಾಂಕ್ ಯು ಅಕ್ಕಾ .
      ನಿರುಪಾಯದ ಹೊಸ ಅತಿಥಿಗೆ ಸ್ವಾಗತ :)

      ಈ ಭಾವವನ್ನ ನೀವೊದಲು ಬಂದಿದ್ದು ತುಂಬಾ ಖುಷಿ ಆಯ್ತು

      Delete
  15. ನಿಜವಾಗಲೂ ಪ್ರೀತಿಸಿದವರು ಕೂಡ ಇಹ್ಸ್ತು ಭಾವ ಪೂರ್ಣವಾಗಿ ಪ್ರೀತಿಯ ಓಲೈಕೆಯನ್ನು ಬರೆಯಲು ಸಾಧ್ಯವಿಲ್ಲ ಅನ್ನುವುದು ನನ್ನ ಭಾವನೆ .. "ಪ್ರೀತಿ ಇಲ್ಲ ಮೆಲೆ ಹೂವು ಅರಳೀತು ಹೇಗೆ ? " ಎನ್ನುವ ಕವಿ ವಾಣಿಯಂತೆ ಮನಸ್ಸಿನ ಆಳದಲ್ಲಿ ಇಷ್ಟು ನಿಷ್ಕಲ್ಮಷ ಪ್ರೀತಿಯ ಭಾವ ಇಲ್ಲದೆ ಇಷ್ಟು ಸಲೀಸಾಗಿ ಪದಗಳು ಹೊರ ಹೊಮ್ಮುವುದಿಲ್ಲ .. ಒಳ್ಳೆಯ ಬರಹ ಭಾಗ್ಯ ..

    ReplyDelete
  16. ಥಾಂಕ್ ಯು ಗಿರೀಶ್ ಜಿ
    ನಿರುಪಾಯದ ಈ ಭಾವ ನಿಮಗಿಷ್ಟವಾಗಿದ್ದು ಖುಷಿ ಆಯ್ತು .

    ಪ್ರೀತಿ ಇಲ್ಲದ ಮೇಲೂ ...ಪ್ರೀತಿಯೆ ನನ್ನುಸಿರು .

    ಭಾವದ ತೀವ್ರತೆಯನ್ನ ಬರಿಯ ಶಬ್ಧಗಳಲ್ಲಿ ತರೋ ಪ್ರಯತ್ನವಷ್ಟೇ ನನ್ನದು :)

    ಇನ್ನೊಂದು ಭಾವಗಳ ತೇರಲ್ಲಿ ಜೊತೆಯಾಗ್ತೀನಿ

    ReplyDelete

  17. ನನ್ನ ಪ್ರೀತಿ ಸತ್ತಿಲ್ಲ ,ಒಲವು ಕವಲೊಡೆಯಲ್ಲ ..
    ಬೆಚ್ಚಗಿದ್ದೀಯ ಕಣೋ ನೀನಿಲ್ಲಿ ..ನೆನಪಲ್ಲಿ ..ಮನಸಲ್ಲಿ .
    ಮೇಲಿನ ಸಾಲು ಹೇಳುವ ಪ್ರಸಂಗ ಬದುಕಿನಲಿ ಹಲವರದ್ದಾಗಿದ್ದಿರಬಹುದು...........
    ಅದು ಭಾವ ಜೀವಿಗಳನ್ನು ತುಂಬಾ ಕಾಡುತ್ತದೆ. ಉತ್ಕಟ ಭಾವಸ್ರಾವ.....................

    ReplyDelete
    Replies
    1. ಧನ್ಯವಾದ ಜೀತೆಂದ್ರಣ್ಣಾ ...
      ನಿರುಪಾಯದ ಭಾವ ಮನ ಮುಟ್ಟೋವಲ್ಲಿ ಯಶಸ್ವಿ ಆದ್ರೆ ನಾ ಬರೆದಿದ್ದು ಸಾರ್ಥಕ .
      ಶ್ರೀಕಾಂತಣ್ಣನ ಭಾವವನ್ನೂ ಒಮ್ಮೆ ಓದಿ ನೋಡಿ ...ಖಂಡಿತ ಮೋಡಿ ಮಾಡುತ್ತೆ ನಿಮ್ಮನ್ನದು ..

      ಭಾವಗಳ ಸಂತೆಯಲ್ಲಿ ಮತ್ತೆ ಜೊತೆಯಾಗ್ತೀನಿ

      Delete
  18. ನವಿರಾದ ನವಿಲುಗರಿಯಂಥ ಬರವಣಿಗೆ ,ಶುಭವಾಗಲಿ ನಿಮಗೆ !

    ReplyDelete
    Replies
    1. ಥಾಂಕ್ ಯು ಸರ್ ...
      ನನ್ನ ಬ್ಲಾಗ್ ಗೆ ಸ್ವಾಗತ ...
      ಭಾವಗಳನ್ನ ನೀವಿಷ್ಟ ಪಟ್ಟು ಓದೋಕೆ ಬಂದಿದ್ದು ಖುಷಿ ಆಯ್ತು ...

      ಭಾವಗಳ ತೇರಲ್ಲಿ ಮತ್ತೆ ಸಿಗೋಣ

      Delete
  19. ಯಾವ್ಯಾವುದೋ ಲಿಂಕ್ಗಳಿಂದ ಇಲ್ಲಿಗೆ ಬಂದು ಮುಟ್ಟಿದ ನನಗೆ ಇದೊಂದು ಲೇಖನ ನಿನ್ನ ಎಲ್ಲ ಲೇಖನಗಳನ್ನೂ ಓದಲು ಪ್ರೇರೇಪಿಸಿದ್ದಂತೂ ಸುಳ್ಳಲ್ಲ.. ಪಾತ್ರಗಳಲ್ಲೆಲ್ಲೋ ನನ್ನ ನಾ ಕಂಡು, ಓದುತ್ತಾ ಹೋದಂತೆ ಕೊನೆಯಲ್ಲಿ ಕಣ್ಣಂಚಿನಿಂದ ನೀರು ಚಿಮ್ಮಿದ್ದೂ ಅಷ್ಟೇ ಸತ್ಯ..
    ಮಣ್ಣು ಪಾಲಾಗಿಹ ಕನಸು ಆಸೆಗಳನ್ನು
    ಹೆಕ್ಕಿ ತರುವವರು ಯಾರು?
    ಒಳಗೊಳಗೆ ಧುಮ್ಮಿಕ್ಕಿ ಹರಿದ ಭಾವಗಳೆಲ್ಲ
    ಅಲ್ಲಿಯೇ ಚೂರು ಚೂರು... ಸಾಲುಗಳು ನೆನಪಾದವು..
    ಮನ ಮುಟ್ಟಿದ ಬರಹ... keep writing..:)

    ReplyDelete
    Replies
    1. ಥಾಂಕ್ ಯು ಸಿಂಧು ಅಕ್ಕಾ ..
      ನಿರುಪಾಯದ ಭಾವವೊಂದ ನೀವೋದ ಬಂದಿದ್ದು ನನ್ನ ಖುಷಿ ...
      ಪ್ರೀತಿ ಪ್ರೋತ್ಸಾಹ ಹೀಗೆ ಇರ್ಲಿ ..

      ಅಂದ ಹಾಗೇ ನೀವು ಹೇಳಿದ ಈ ಸಾಲುಗಳು ನಂಗೂ ಹತ್ತಿರ ಅನ್ನಿಸ್ತು ...
      ಅಗೈನ್ ,ಥಾಂಕ್ಸ್ ಫ಼ಾರ್ ಕಮಿಂಗ್ .
      ಬರ್ತಿರಿ ..

      ಭಾವಗಳ ತೇರಲ್ಲಿ ಮತ್ತೆ ಮತ್ತೆ ಜೊತೆಯಾಗ್ತಿರೋಣ

      Delete
  20. ಭಾಗ್ಯ..

    ಭಾವದ ಅಲೆಯಲ್ಲಿ ನಮ್ಮನ್ನು ತೇಲಿಸಿದ್ದಕ್ಕೆ ಧನ್ಯವಾದಗಳು...

    ಬರವಣಿಗೆ..
    ಮತ್ತು ಅದರ ಬಹಳ ಇಷ್ಟವಾಯ್ತು...

    ReplyDelete
    Replies
    1. ಥಾಂಕ್ ಯು ಪ್ರಕಾಶಣ್ಣ ...
      ಹೊಸ ಪ್ರಯತ್ನ ಶ್ರೀಕಾಂತಣ್ಣಂದು ..
      ಇಬ್ಬರ ಭಾವಗಳನ್ನೂ ನೀವಿಷ್ಟ ಪಟ್ಟಿದ್ದು ಖುಷಿ ಆತು :)

      ತುಂಬಾ ದಿನಗಳ ನಂತರ ನಿರುಪಾಯಕ್ಕೆ ಬಂದಿದ್ದು ಕೂಡಾ

      Delete



  21. ನೀ ನನ್ನ ಬಿಟ್ಟು ಹೋಗಿದ್ದು ಸಣ್ಣ ಬೇಸರ ನನ್ನ ಮಟ್ಟಿಗೆ ...ನೀ ನೀನಾಗಿ ನನ್ನೊಟ್ಟಿಗಿಲ್ಲ ಅಷ್ಟೆ ..
    ನೆನಪಾಗಿ ,ಕನಸಾಗಿ,ಪ್ರೀತಿಯಾಗಿ,ಆತ್ಮ ಸಂಗಾತಿಯಾಗಿ ನಾ ಯಾವತ್ತೋ ಜೋಪಾನ ಮಾಡಿದ್ದೇ ನಿನ್ನ ! ಈಗಲೂ ಬೆಚ್ಚಗೆ ಇದ್ದೀಯ ನೀ ನನ್ನೊಳಗೆ .


    ನನ್ನ ಹಿಂದಿನ ಪ್ರೀತಿಯನ್ನು ನೆನಪಿಸಿದ ನಿಮಗೆ ಕೋಟಿ ವಂದನೆಗಳು

    ReplyDelete
  22. ಹುತ್ತಮರೀತಿಯಲ್ಲಿ ನಿಮ್ಮ ಮಾತುಗಳು ಮೂಡಿವೆ ನಿಮ್ಮ ನೋವೀನ ಹ್ರುದಯ ಪ್ರಕ್ರುತಿಯಕಡೆ ಹಾರಬೇಕು ಅನ್ನೋದೆ ನನ್ನ ಆಸೆ

    ReplyDelete
  23. ಹುತ್ತಮರೀತಿಯಲ್ಲಿ ನಿಮ್ಮ ಮಾತುಗಳು ಮೂಡಿವೆ ನಿಮ್ಮ ನೋವೀನ ಹ್ರುದಯ ಪ್ರಕ್ರುತಿಯಕಡೆ ಹಾರಬೇಕು ಅನ್ನೋದೆ ನನ್ನ ಆಸೆ

    ReplyDelete
  24. ಹೃದಯದ ಭಾವನೆ ಅ ಮುಖ ರೋದನೇ ತುಂಬಾ ಚೆನ್ನಾಗಿದೆ ಪ್ರಕೃತಿಯ ನಿಸರ್ಗದಲ್ಲಿ ಇರಿ

    ReplyDelete