Thursday, May 23, 2013

ಬಾನ ಮಾಳಿಗೆಯಲ್ಲಿ ಬಾಳ ಚಂದಿರ ಜೊತೆಯಾಗಿ.



ಒಂಟಿತನದ, ಕತ್ತಲೆಯ ಭಾವದ ಜೊತೆಗಾರನಾದ ಅವನ ಮೇಲೆ ಅವಳಿಗ್ಯಾಕೋ ಒಲವ ಮೋಹ....ಅವನವಳ ಗೆಳೆಯ ,ಇನಿಯ ,ಪ್ರೀತಿ ,ಸಿಟ್ಟು.ಬೇಸರ.

ಎಲ್ಲಾ ಭಾವಗಳ ಏಕೈಕ ಸಂಗಾತಿ ಎಂದರೆ ಸರಿಯಾದೀತೇನೋ ...

ಅವಳ ಅದೆಷ್ಟೋ ನೀರವ ರಾತ್ರಿಗಳಿಗೆ ಕಿವಿಯಾದವನವನು  .ಅದೆಷ್ಟೋ ಬೇಸರಗಳ ಒಡೆಯ ,ಹಲ ಅತಿಶಯದ ಕನಸುಗಳ ಗೆಳೆಯ ....

ಪ್ರೀತಿ ಕಂಗಳ ಸರದಾರನೀ ಕನಸುಗಾರ :)

ಅವಳ ಕೆಲ ಗುಟ್ಟುಗಳೂ ಅವನ ಜೋಪಡಿಯಲ್ಲಿ ಜೋಪಾನವಾಗಿವೆಯೇನೋ ...!






ಭಾವಕ್ಕೆ ಜೊತೆಯಾಗಿ -

ದೂರಾದ ನೋವ ಭಾವವನ್ನ ಸಂಜೆಯ ಕತ್ತಲಲ್ಲಿ ಮಹಡಿಯಲ್ಲಿ ಕೂತು ಮಾತಾಡೋದು ಅವಳಿಗ್ಯಾಕೋ ಇಷ್ಟ ..ಒಂದರ್ಧ ಗಂಟೆ ಮನದೊಂದಿಗೆ ಮಾತಾಡೋಕೆ ಬೆಳಿಗ್ಗೆ ಇಂದ ಸಂಜೆ ಆಗೋದನ್ನೆ ಕಾಯೋಳು ಅವಳು ...ಕತ್ತಲ ರಾತ್ರಿಗಳಲ್ಲೂ ಮೋಡಗಳ ಮರೆಯಲ್ಲಿ ಅವನನ್ನ ಹುಡುಕುತ್ತಾ ಕೂರೋ ಹುಚ್ಚು ಮನ ಅವಳದ್ದು ..ಅವತ್ತು ಅವನಿಲ್ಲ ಅಂತ ಗೊತ್ತಿದ್ದರೂ ಮತ್ತವನನ್ನೇ ಹುಡುಕೋ ಧಾವಂತದ ಹುಡುಗಿ ಅವಳು ...

 

ಇಂಥದ್ದೇ ಅದೆಷ್ಟೋ ಸಾವಿರ ಭಾವಗಳ ಹಕ್ಕುದಾರ ಅವನು ..ನಗು ಮೊಗದಿ ಎಲ್ಲರನೂ ಮೋಡಿ ಮಾಡೋ ಚೆನ್ನಿಗ..."ನನ್ನ ಹುಡುಗ ನಿನ್ನಂತೇ ಇರಬೇಕು ಕಣೋ " ಅನ್ನೋ ಅದೆಷ್ಟೋ ಹುಡುಗಿಯರ ಮನಸ ಹುಡುಗ ಅವಳ ಈ ಕನಸ ಸುಂದರ :)

ಪುಟ್ಟುವಿಗೆ ಮಾಮ ...ಅವನಮ್ಮನಿಗೆ ಮಗನನ್ನ ಊಟ ಮಾಡಿಸೋಕೇ ಅಂತಾನೇ ಬಂದ ಗೆಳೆಯ .....

ಹುಡುಗರಿಗೆ ಪ್ರೇಮ ಕವಿ ..ಗೆಳತಿಯರಿಗೆ ಮೊದಲ ಗೆಳೆಯ...ಅಜ್ಜ ಅಜ್ಜಿಗೆ ವಾಕಿಂಗ್ ಫ್ರೆಂಡ್  ....ಅದೆಷ್ಟೋ ಬೇಸರಿಸೋ ಮುಸ್ಸಂಜೆಗಳ ನೆಚ್ಚಿನ ಮಿತ್ರ ....
ಬೆಳದಿಂಗಳ ಸಜ್ಜನಿಕ .ಜ಼ಗದೆಲ್ಲ ಮಧುರ ಭಾವಗಳ ಒಡೆಯ ಈ ಕ್ಷಣ ಮನವನ್ನಾಳಿದ ಸೊಬಗು :)


ಕಾರ್ಮೋಡದೊಳಗೂ ನುಸುಳೋ ಪರಿಣಿತ .

ನೋವನ ಮುದುಡಿಸೋ ನಲಿವಿನ ಧೀಮಂತ .

ಅವನೇ ಇವನು ...

ಯಾರಿವನು ?

ಮುನಿಸಿಕೊಂಡ ನಕ್ಷತ್ರ ಬಾನ ಮಾಳಿಗೆಯಲ್ಲಿ ಕುಳಿತುಕೊಂಡರೆ ಅದನ್ನೂ ಸ್ಪರ್ಶಿಸಿ ಕಾಂತಿ ಕೊಡೋ ಅದೇ ಬಾನ ಚಂದಿರನಿವನು ....


                      

                                               ಫೋಟೋ ಕ್ರೆಡಿಟ್ಸ್ :ಬಾಲಣ್ಣ  (ನಿಮ್ಮೊಳಗೊಬ್ಬ ಬಾಲು)




ಅವಳ ಮನಕ್ಕೆ ಅವನು -

ಕಣ್ಣ ಕನಸ ಹೊರಹಾಕದವಳಿಗೆ

ಕಣ್ಣಿನಲೇ ಮಾತು ಕಲಿಸೋನು.

ಭಾವ ಹಂಚಿಕೊಳ ಬರದವಳಿಗೆ

ಭಾವಗಳ ಬದುಕ ತಿಳಿಸೋನು .

ಯಾರಿವನು ?

ನೀನಾ?

ಅವನಾ?



                                   

                                             

                                             ಫೋಟೋ ಕ್ರೆಡಿಟ್ಸ್ :ಬಾಲಣ್ಣ(ನಿಮ್ಮೊಳಗೊಬ್ಬ ಬಾಲು)




ಬದುಕ ಪಯಣದಲ್ಲೊಂದು ಖಾಯಂ ಸಹ ಪಯಣಿಗನ ಹುಡುಕಾಟದಲ್ಲಿರೋ ಅವಳಿಗೆ ..
ಕನಸುಗಳಿಗೆ ಜೊತೆಯಾಗೋ ನೀರವ ರಾತ್ರಿಗಳ ಸಮಾಧಾನೀ ಗೆಳೆಯನಾದ ಬಾನ ಚಂದಿರನೇ ಬಾಳ ಚಂದಿರನಾದಂತೆ ಭಾಸವಾಗಿ...
ಅವಳದೇ ಕನಸುಗಳ ಸುತ್ತಾ ನನ್ನದೊಂದು ಸುತ್ತು  :)


(ಬಾಲಣ್ಣ ,ಸುಂದರ ಚಂದಿರನನ್ನು ನಿಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಕ್ಕೆ ಮೊದಲ ಧನ್ಯವಾದ ನಿಮಗೆ .ನಿಮ್ಮ ಸುಂದರ ಚಂದಿರ ಎಂತಹವರನ್ನೂ ಮೋಡಿ ಮಾಡೋ ತರ ಇದೆ :)

ಬಲು ಸುಂದರ ನಿಮ್ಮೂರಿನ ಚಂದಿರನನ್ನು ತಂದು ಕೈಯಲ್ಲಿರಿಸಿದ್ದೀರಿ .ಎಲ್ಲರಿಗೂ ಇಷ್ಟವಾಗೋ ಚಂದಿರ ನಿಮ್ಮಿಂದ ಇನ್ನೂ ಸುಂದರವಾಗಿ ಕಂಡ ಇವತ್ತು ...ಥಾಂಕ್ಸ್ ಜಿ )

Thursday, May 16, 2013

ಮನೋ ವ್ಯಾಪಾರಿ ನಾ ....


ಬಾಳ ಸಂತೆಯಲ್ಲಿ ಜೀವದಾಳದ ಭಾವಗಳು ಹರಾಜಿಗಿವೆ !

ಕೊಂಡುಕೊಳ್ಳೋರಿಲ್ಲದೇ ,ಹಾಗೇ ಬಿಟ್ಟು ಎದ್ದು ಹೋಗಲೂ ಆಗದೇ ,ಕೈ ಬಿಡೋ ಅಸಹಾಯಕತೆಗಾಗಿ ನನ್ನದೇ ಮನವನ್ನ ನಲುಗಿಸುತ್ತಾ ........

ನನ್ನವರ ಮನಸ್ಸುಗಳನ್ನೂ ನಲುಗಿಸ ಬರುತ್ತಿರೋ ಭಾವ ಗಳ ಹರಾಜಿದು .....


                             



ತುಂಬಾ ಕಡಿಮೆ ಬೆಲೆಯ ವಸ್ತು ...ಬೆಲೆ ತೆರದೇ ಪಡೆಯಬಹುದಾದದ್ದು ....ಒಂಚೂರು ಸಮಯ ,ಒಂದಿಷ್ಟು ಒಲುಮೆ ,ಸ್ವಲ್ಪ ಆತ್ಮೀಯತೆಗೆ ದಕ್ಕೋ ವಸ್ತು ...

ಆದರೆ ಪಡೆದಾದ ಮೇಲೆ ಮಾತ್ರ ತಕ್ಕ ಬೆಲೆ ತೆರಲೇ ಬೇಕು .ಜೋಪಾನ ಮಾಡೋ ಕೆಲಸ !

ನೋವಿಗೆ ಕಣ್ಣ ಹನಿ ಜೊತೆಯಾದೀತು ಅಥವಾ ಕೈ ಹಸ್ತ ಜೊತೆಯಾದೀತು....ನಲಿವಿಗೆ ಕಿರು ನಗು ಜೊತೆಯಾದೀತು ಅಥವಾ ಅರ್ಥವಾಗದ ದೊಡ್ಡದೊಂದು ನಗುವೇ ಜೊತೆ ಸೇರೀತು ...
ಜೊತೆಯಾಗೋದಂತೂ ನಿಜ !!

ಭಾವವೊಂದೆ...
ಜೊತೆಯಾಗಿ ನಾವೂ ಇದ್ದೀವಿ ..ನಮ್ಮದೂ ಕೂಡಾ ನಿನ್ನದೇ ಹಾದಿ ...ಒಟ್ಟಿಗೇ ನಡೆಯೋಣ ಬಾ ಅಂತ ಕರೆಯೋ ಭಾವ .!

ಇದು ಪ್ರೀತಿಸೋ ಮನಗಳೊಟ್ಟಿಗೆ ,ಆಧರಿಸೋ ಮನಸ್ಸುಗಳೊಟ್ಟಿಗಿನ ನಡುವಣದ ಒಪ್ಪಂದ......
ಸಾಕ್ಷ ಸಹಿ ಹಾಕದೇ ನಡೆಯೋ ಮನಸ ಒಡಂಬಡಿಕೆ ....

ಹೇಳಿಕೊಂಡ ಪ್ರೀತಿಯ ಭಾವ ....ಹಂಚಿಕೊಂಡ ನೋವ ಅನುಭವ...ನೀಡೋ ಸಾಂತ್ವಾನ ...ಕಣ್ಣೀರೊರೆಸೋ ಆತ್ಮೀಯ ಕೈ ...

ನಾವೂ ಇದ್ದೀವಿ ಜೊತೆ ಅನ್ನೋ ಭಾವದ ಭರವಸೆ !

ಕೈ ಚಾಚೋ ಆಮಂತ್ರಣದ ಸಂಕೋಲೆ ....ಆಮಂತ್ರಣವಿಲ್ಲದ ಮನೆ (ಮನ)ಯಲ್ಲಿ ಅತೀ ಆಮಂತ್ರಿತನಂತೆ ,ಇಷ್ಟದ ಬಂಧುವಂತೆ ಸತ್ಕರಿಸೋ ಆ ಪರಿ .....

ಭಾವದಾಚೆಗೂ ಹೊರಳೋ ಬದುಕ ಪ್ರೀತಿ .

ಕಣ್ಣ ಭಾಷೆಯನ್ನೂ ಬಿಡದೇ ಅರ್ಥಮಾಡಿಕೊಳ್ಳೋ ಜಾಣತನ .....

ನಿಮ್ಮಗಳ ಮನದಲ್ಲಿನ ಲಾಲಿಪಾಪ್ ಪುಟ್ಟಿ ಅನ್ನೋ ಪ್ರೀತಿಯ ಪುಟ್ಟ ಭಾವ :)

ಗುರುತಿಸೋ ಸಣ್ಣ ನೋವ ಭಾವ ..ಎದುರು ಏನಾಯ್ತೇ ಗೆಳತಿ ಅಂತ ಕೇಳದಿದ್ದರೂ ಆಮೇಲೊಮ್ಮೆ ಯಾಕೋ ಪುಟ್ಟಾ ಬೆಳಿಗ್ಗೆ ಸಪ್ಪೆಯಾಗಿದ್ದೆ ಅಂತ ವಿಚಾರಿಸೋ ನಿನ್ನೇ ಮೊನ್ನೆ ಮಾತಾಡಿದ್ದ ಅದೇ ಗೆಳೆಯ ....!!

 

ಆತ್ಮೀಯತೆಯಂದ್ರೆ ಇದಾ ?.....ಉತ್ತರ ಹುಡುಕೋಕೆ ಹೊರಟಿಲ್ಲ ನಾ ....ಮಾರಾಟಕ್ಕಿಟ್ಟಿರೋದರ ಬಗ್ಗೆ ಜಾಸ್ತಿ ವ್ಯಾಮೋಹ ಒಳ್ಳೆಯದಲ್ಲ !!

ನನ್ನವರಾಗಿ ಆಧರಿಸೋ ,ಖುಷಿಸೋ ,ದುಃಖಿಸೋ ,ಸ್ನೇಹಿಸೋ ನಿಮ್ಮ ಅಪ್ಪಟ ಪ್ರೀತಿಯ ಭಾವಕ್ಕೊಂದು ನಮನ ....

ಈ ಪ್ರೀತಿ ಸಮ್ಮೋಹವಲ್ಲ ...ವ್ಯಾಮೋಹವೂ ಅಲ್ಲ ...ಮುಖ ನೋಡದೇ ಮೂಡಿದ್ದ ಮನಸ್ಸಿನ ಬಂಧ ...ಹತ್ತಿರದ ಬಂಧುವಾಗಿ ಜೊತೆಯಾಗಿ ಕೊನೆಯತನಕ ಕರೆದೊಯ್ಯೋ ಹೇಳಲಾಗದ ಅನುಭವಕ್ಕೆ ಬಂದಿರೋ ಶಬ್ಧ ಸಿಗದ ಶಬ್ಧ ...
ನೀವೇ ನಾಮಕರಿಸಬಿಡಿ ...

ಕೊನೆಯ ತನಕ ಜತನ ಮಾಡಿಯೇನು ನಾನದನ್ನ !

ಭಾವಗಳನ್ನ ಹರಾಜಿಗಿಡದೇ ಜೋಪಾನ ಮಾಡಿದ್ದರೂ ಅದೆಲ್ಲೋ ಧುತ್ತನೆ ಹಾರಿ ನಿಮ್ಮಲ್ಲಿ ,ನಿಮ್ಮ ತೆಕ್ಕೆಯಲ್ಲಿ ಜೋಪಾನವಾಗಿದೆ !

ಕ್ಷಣವೊಂದಕ್ಕೆ ಮನೋ ವ್ಯಾಪಾರಿ ನಾನು ಎಂತೆನಿಸಿ ...ಮತ್ತೊಂದು ಕ್ಷಣಕ್ಕೆ ಬೇರೆ ಯಾರೊಂದಿಗೋ ವ್ಯವಹರಿಸಿದ್ದಲ್ಲ ,ನನ್ನವರಿಗೇ ವ್ಯಾಪಾರ ಮಾಡಿದ್ದೆಂದು ಸಮಾಧಾನಿಸಿ ...

ಮತ್ತದೇ ಬದುಕಲ್ಲಿ ಹಾಗೆಯೇ ಪಯಣಿಸುತ್ತಾ .....

 

               



ಮಧ್ಯ ಬರೋ ದಲ್ಲಾಳಿ ಯಾರೋ ತಿಳಿಯದು....

ಆದರೇ...

ಮನದ ಭಾವಗಳ ವ್ಯಾಪಾರಿ ನಾ......

ಹರಾಜಿನಲ್ಲಿ ಬಾಚಿಕೊಂಡ ಭಾವಕ್ಕೆಲ್ಲಾ ಹಕ್ಕುದಾರರು ನೀವೇ ....

ಹಕ್ಕುಗಳನ್ನ ಕಾಯ್ದಿರಿಸಲಾಗಿದೆ  !!

Sunday, April 28, 2013

ನೀನಿಲ್ಲದೇ ....



ಅವತ್ತೇ ಹೇಳಿದ್ದಳು ಅವಳವನಿಗೆ ...
"ಬದುಕಲ್ಲಿ ಕಳಕೊಂಡಿದ್ದನ್ನ ಮಾತ್ರ ಹುಡುಕು..ಸಿಗದಿದ್ದ ಪ್ರೀತಿಯನ್ನೇಕೆ ಕಳಕೊಂಡ ಪ್ರೀತಿ ಅನ್ನುತ್ತೀಯಾ !ಸಿಗದೇ ಕಳೆದು ಹೋದುದರ ಬಗ್ಗೆ ನಿನಗಿರೋ ಅತಿಯಾದ ವ್ಯಾಮೋಹಕ್ಕೆ ನನ್ನಲ್ಲಿ ಯಾವ ಶಬ್ಧವೂ ಇಲ್ಲ ...
ಗೆಳೆಯಾ, ಬೇಸರಿಸದಿರು ..ನಾ ನಿನ್ನವಳಲ್ಲ "

ಬದುಕ ಪ್ರಶ್ನೆಗೆ ನೇರಾ ನೇರಾ ಉತ್ತರ ಕೊಟ್ಟಿದ್ದ ಅವಳ ಬಗೆಗೊಂದು ಆಶ್ಚರ್ಯದ ನೋಟ ನಂಗೆ ಮೂಡಿದ್ದು ಸಹಜ ಅನ್ನೋ ಭಾವ ನಂದು ...

ವರ್ಷವೊಂದರ ಹಿಂದಿನ ಮಾತು ....

ಅವಳಂದ್ರೆ ......
ಮೌನ ಗೌರಿ ! ತನ್ನ ಪಾಡಿಗೆ ತಾನಾಯ್ತು ,ತನ್ನ ಓದಾಯ್ತು ಅಂತಿದ್ದವಳು...ಹೀಗೆಯೇ ಇರಬೇಕೆಂಬ ಕಟ್ಟುಪಾಡುಗಳೂ ಇಲ್ಲದೇ ,ಹೇಗೋ ಇದ್ದರಾಯ್ತು ಅನ್ನೋ ಉದಾಸೀನ ಭಾವವೂ ಇಲ್ಲದೇ .....

ಬದುಕ ಬಗೆಗೆ ಯಾವುದೇ ಬೇಸರವಿಲ್ಲದೇ ,ಬದುಕ ರೇಸ್ ನಲ್ಲಿ ಮುಂದೆಯೆ ಇರಬೇಕೆಂಬ ಧಾವಂತವೂ ಇಲ್ಲದೇ ,ಬದುಕೊಂದಿಗೆ ಯಾವುದೇ ನಿರೀಕ್ಷೆ ಇಲ್ಲದೆ ಇದ್ದ ಸಾದಾ ಸೀದಾ ಹುಡುಗಿ ಅವಳು....

ಸೌಮ್ಯ ಸ್ವಭಾವ ,ಸ್ನೇಹದ ಕುರುಹು ಸಿಕ್ಕರೂ ಸ್ವಲ್ಪ ಆತ್ಮೀಯತೆ ತೋರಿದ್ರೂ ಅವರನ್ನ ಹಚ್ಚಿಕೊಳ್ಳೋ ಅಷ್ಟು ಭಾವ ಜೀವಿ ..

ಪ್ರೀತಿ ಪ್ರೇಮದ ಬಗ್ಗೆ ವಯೊ ಸಹಜ ಕುತೂಹಲ ಬಿಟ್ರೆ ಬೇರೆ ಯಾವ ಮಧುರ ಭಾವಗಳೂ ಮೂಡಿರದ ಮನವದು ....ಪ್ರೀತಿಯ ನಿವೇದನೆ ಮಾಡಿಕೊಂಡಿದ್ದ ಅದೆಷ್ಟೋ ಹುಡುಗರಿಗೆ ಅವಳ ಮೌನವೆ ಉತ್ತರವಾಗಿ ಆ ಮೌನವೇ ಬೇಸರ ತರಿಸಿ ಅವರ್ಯಾರೂ ಅವಳ ತಂಟೆಗೆ ಬರದೇ ಸುಮ್ಮನಾಗುತ್ತಿದ್ದರು ...

ಇಂತದ್ದೇ ಒಂದು ಸಂದರ್ಭದಲ್ಲಿ ಮಾತಾಡಿಸಿದ್ದ ಹುಡುಗ ಅವನು ....

ಸ್ವಲ್ಪ ಆತ್ಮೀಯತೆಗೆ ಮಾರು ಹೋಗುತ್ತಿದ್ದ ಹುಡುಗಿಗೆ ಅವನ ಪ್ರೀತಿಯ ಆತ್ಮೀಯತೆಗೆ ಮಾತೆ ಬರುತ್ತಿರಲಿಲ್ಲ !...ತನಗಿಂತ ಅವಳನ್ನೇ ಹೆಚ್ಚು ಇಷ್ಟಪಡೊ ಹುಡುಗ ಅವನು ...!


                           




ಸ್ನೇಹದ ಸಲುಗೆಯಲ್ಲಿ ಆತ್ಮೀಯತೆಯ ಮಾತಲ್ಲಿ ಕಳೆದು ಹೋಗಿದ್ದಳು ...ಬದುಕಲ್ಲಿ ಒಂದಿಷ್ಟು ಬದಲಾದ ಭಾವಗಳ ಅನುಭವ ಆಗುತ್ತಿತ್ತು ...ಬದುಕ ಬಗೆಗೆ ನಿರೀಕ್ಷೆ ಒಂದು ಮೂಡಿತ್ತು ..

ತನಗಾಗಿ ಒಬ್ಬ ಆತ್ಮೀಯನಿರೋ ಭಾವ ಬಲವಾಗಿತ್ತು ....ಮನದ ಮಾತು ಕೇಳೋಕೆ ಒಂದು ಸುಂದರ ಮನವಿತ್ತು ...ಅಳುವ ಕಂಗಳಿಗೇ ಸಮಾಧಾನಿಸೋ ಕೈ ಒಂದಿತ್ತು ...ನೋವ ಭಾವಕ್ಕೆ ಜೊತೆಯಾಗೋ ತೋಳಿತ್ತು ....ಅದೆಷ್ಟೋ ಬಾರಿ ಆ ತೋಳಲ್ಲಿ ಮುಖ ಹುದುಗಿಸಿ ಕಳೆದ ಒಂಟಿ ತನದ ನೆಮ್ಮದಿಯಿತ್ತು .....

ಅಲ್ಲೊಂದು ನಿಶ್ಕಲ್ಮಶ ಪ್ರೀತಿಯ ಸ್ನೇಹವಿತ್ತು ...ಸ್ನೇಹದ ಸಲುಗೆಯಿತ್ತು ..ಸ್ನೇಹಿತನ ಪ್ರೀತಿಯಿತ್ತು ...ಪ್ರೀತಿಯಲ್ಲೊಂದು ಕಾಳಜಿಯಿತ್ತು ...

ಬಹುಶಃ ಬದುಕಿಗೆ ಬೇಕಾದ ಎಲ್ಲಾ ಭಾವಗಳೂ ಅಲ್ಲಿದ್ದವೇನೋ .....ಕಳಕೊಂಡ ಬದುಕ ಪ್ರೀತಿ ಮತ್ತವಳಿಗೆ ದಕ್ಕಿತ್ತು !

ಯಾರಿಗೂ ಕಾಯದ ಕಾಲ ಹೀಗೇ ಸಾಗಿತ್ತು ...

ಅಂತದ್ದೇ ಒಂದು ದಿನ ...

ಮುಸ್ಸಂಜೆಯ ತಂಗಾಳಿಗೆ ಮೈಯೊಡ್ದಿ ಅವನು ಹೇಳಿದ್ದ ...

ಗೆಳತಿ ....ತುಂಬಾ ದಿನದಿಂದ ಬಚ್ಚಿಟ್ಟುಕೊಂಡ ಭಾವ ಇದು ...ನಂಗೇ ಗೊತ್ತಿಲ್ಲದೇ ನಾ ನಿನ್ನೆಡೆಗೆ ವಾಲಿದ್ದೇನೆ...ಹೇಳೋಕೆ ಧೈರ್ಯ ಇಲ್ಲದೇ ಹೇಳದೆ ಇರಲೂ ಅಗದೇ ಅದೆಷ್ಟೋ ನೀರವ ರಾತ್ರಿಗಳು ಸಂದ ಮೇಲೆ ಇವತ್ತು .... ..ಇವತ್ತು..ನಿನ್ನೆದುರು ಮಂಡಿಯೂರಿ ಕೇಳ ಬಂದೆ ...ನೀ ನನ್ನ ಜೀವದ ಗೆಳತಿ ...ಜೀವನದ ಸಂಗಾತಿಯಾಗು ಬಾ ......

ಅಲೆಯೊಂದಕ್ಕೆ ಮುಖವೊಡ್ಡಿ ಖುಷಿಸುತ್ತಿರೋವಾಗ ಬಂದ ಅದೇ ಅಲೆಗೆ ಕೊಚ್ಚಿ ಹೋದ ಭಾವ ಅವಳದ್ದು !!

ತುಂಬಾನೇ ಇಷ್ಟ ಪಡೋ ಅಲೆಯೊಂದು ಅವಳನ್ನೆ ಎಳೆದುಕೊಂಡು ಹೋಗಿತ್ತಲ್ಲಿ ...

ಸ್ವಚ್ಚ ಸುಂದರ ಪರಿಶುದ್ದ ಸ್ನೇಹ ನಮ್ಮದೆಂಬ ಅವಳ ಮನದ ಭಾವವನ್ನೂ ಕೊಚ್ಚಿ ಹೋಗೋ ಅಷ್ಟು ಶಕ್ತಿ ಹೊಂದಿದ್ದ ಆ ಅಲೆಯನ್ನು ನೋಡಿ ಕ್ಷಣವೊಂದಕ್ಕೆ ಅವಳೂ ನಿಬ್ಬೆರಳಾಗಿದ್ದಳು...

ಆಗಷ್ಟೇ ಪಡಕೊಂಡ ಸ್ನೇಹವಲ್ಲದ ಪ್ರೇಮದ ಪ್ರೀತಿ ಅವಳ ಬದುಕ ಪ್ರೀತಿಯನ್ನ ಅಕ್ಷರಶಃ ಕೊಂದಿತ್ತು ...

ಸ್ನೇಹಕ್ಕೂ ಮೀರಿದ ಪ್ರೀತಿಯ ಭಾವ ಅವಳಿಗ್ಯಾವತ್ತೂ ಅನುಭವವಾಗಿರಲೇ ಇಲ್ಲ ...ಅವನಿಗಾ ಭಾವ ಬರೋ ತರ ತಾನ್ಯಾವತ್ತು ನಡಕೊಂಡೆ ಅಂತ ಒಬ್ಬಂಟಿಯಾಗಿ ಕೂತು ಅದೆಷ್ಟೋ ಮುಸ್ಸಂಜೆಯಲ್ಲಿ ತನ್ನನ್ನೇ ತಾ ಪ್ರಶ್ನಿಸಿಕೊಂಡಳು .....ಅದು ಅವ ಅಂದುಕೊಂಡ ಭಾವ ಕಣೇ ನೀನ್ಯಾಕೆ ಅಷ್ಟು ಬೇಸರ ಮಾಡ್ತೀಯಾ ಆ ಭಾವಕ್ಕೆ ಅಂತ ಸಂತೈಸ ಬರೋ ಮನವನ್ನ ದೂರ ಕಳಿಸಿ ಕಳಿಸಿ ತನ್ನನ್ನ ತಾ ಕೇಳುತ್ತಿದ್ದಳು ...

ಕೊನೆಗೊಮ್ಮೆ ಸಿಕ್ಕ ಉತ್ತರ ಮಾತ್ರ ಅವಳನ್ನ ಮಂಕಾಗಿಸಿತ್ತು ...


                                 




"ಹುಚ್ಚು ಹುಡುಗಿ ...ಹುಡುಗನೊಟ್ಟಿಗಿನ ಸ್ನೇಹ ತುಂಬಾ ದಿನ ಪರಿಶುದ್ಧ ಸ್ನೇಹವಾಗಿ ಉಳಿಯಲ್ಲ ಕಣೇ ...ಸ್ನೇಹ ಕಾರಣವಿಲ್ಲದೇ ಪ್ರೀತಿಯಾಗಿ ಹೋಗುತ್ತೆ ...ನಿನ್ನೀ ಸ್ನೇಹದ ಸಲುಗೆಯೇ ,ಆತ್ಮೀಯತೆಯ ಭಾವವೆ ಅವನಿಗೆ ನಿನ್ನದೂ ಪ್ರೀತಿ ಅನ್ನಿಸಿರಬಹುದು ....ನೀ ಹಂಚಿಕೊಂಡ ನಿನ್ನ ದುಃಖ ,ತಲೆಯಿರಿಸಿ ಅತ್ತ ಕಣ್ಣ ಹನಿ ಅವನ ಎದೆಗೆ ನಿನ್ನ ಮಧುರ ಪ್ರೀತಿಯ ಅನುಭವ ನೀಡಿದೆ ಗೆಳತಿ ....ಬೇಸರಿಸದಿರು ....ಅವನ ಪ್ರೀತಿಯನ್ನ ಒಪ್ಪಿ ಅಪ್ಪಿಕೊಂಡುಬಿಡು ಒಮ್ಮೆ " ಮಾತಾಡಿದ ಮನವನ್ನ ಧಿಕ್ಕರಿಸಿ ಅಂದಿನಿಂದ ಮನದ ಮಾತನ್ನ ಕೇಳೋದನ್ನ ಬಿಟ್ಟಿದ್ದಳು ....

ಅದೇ ಮುಸ್ಸಂಜೆಯಲ್ಲಿ ಒಬ್ಬಂಟಿಯಾಗಿ ಬಿಕ್ಕಿ ಬಿಕ್ಕಿ ಅತ್ತಾಗ ಸಂತೈಸ ಬರೋಕೆ ಅವನಿರಲಿಲ್ಲ ..ಕಣ್ಣೀರ ಹನಿಯಾಗಿ ಕೈ ಇಂದ ಜಾರಿ ಹೋಗಿದ್ದ ...

ಮತ್ತದೇ ವರ್ಷದ ಹಿಂದಿನ ಬದುಕಿನೆಡೆಗೆ ಫ಼ೆದರ್ ಲೈಟ್ ಆಗಿರೋ ಬದುಕಿನೆಡೆಗೆ ಮುಖ ಮಾಡಿದ್ದಳು ..ಸ್ನೇಹದ ಆತ್ಮೀಯತೆಯೊಂದನ್ನು ಕಳಕೊಂಡ ಭಾರದ ಮನದೊಂದಿಗೆ ....

ಮೊದಲೇ ಮಿತಭಾಷಿಯಾಗಿದ್ದ ಅವಳು ಈಗ ಅಕ್ಷರಶಃ ಮೌನಿ...

ಹುಡುಗರನ್ನ ನೋಡೋಕೂ ಭಯ ಪಡೋ ಹುಡುಗಿಯಾಗಿ ಬಿಟ್ಟಿರೋ ಈ ಹುಡುಗಿ ...ಹುಡುಗು ಬುದ್ದಿಯಿಲ್ಲ ....ಎಲ್ಲಾ ಭಾವಕ್ಕೂ ಒಂದೆ ಭಾವ ...ಮೌನದ ಸತ್ವ ಇಲ್ಲದ ನಗು ಮಾತ್ರ ಅವಳದೆನ್ನೋ ತರದ ಭಾವ ...

ಕಳಕೊಂಡ ಸ್ನೇಹವನ್ನ ಹುಡುಕಿ ಎಲ್ಲೂ ಸಿಗದೆ ಕೊನೆಗೆ ಪ್ರೀತಿ ಒಪ್ಪಿ ಕೊಳ್ಳದಿರೋದೆ ತಪ್ಪು ಅಂತ ಕೂಗಿ ಕೂಗಿ ಹೇಳೋ ಮನದ ಮೇಲೂ ಬೇಸರವೆನೆಸಿ ...ಸ್ನೇಹದ ಮುಖವಾಡದ ಹುಡುಗನ ಮೇಲೆ ಕರುಣೆ ತೋರಿ ....ಇನಿಯನಾಗಿ ಕಾಣದ ಪ್ರೀತಿ ಸ್ನೇಹದ ಪರಿಯನ್ನೇ ನೀಡೋ ಪರಿಯನ್ನ ದಿಟ್ಟಿಸಿ.....ಮತ್ತದೇ ನೀರವ ಸಂಜೆಗಳಲ್ಲಿ ಬರದಿದ್ದ ಚಂದಿರನನ್ನು ಹುಡುಕುತ್ತಾ ಮೂಕವಾಗಿ ರೋದಿಸೋ ಅವಳ ಬಗ್ಗೆ ಮರುಕವಿದೆ ...

 

ಈಗಲೂ ಗೆಳೆಯನಾಗಿ ಬಂದಿದ್ದ ಅವನ ಬಗ್ಗೆ ಅವಳಿಗೆ ಸ್ವಚ್ಚ ಸ್ನೇಹದ ಪ್ರೀತಿಯಿದೆ ....ಸ್ನೇಹಿತೆಯಾಗಿ ಆಧರಿಸೋ ಮನವಿದೆ ...ಪ್ರೀತಿಯ ಸ್ಪರ್ಶದ ಆಶಯವಿದೆ ....

ತಲೆ ನೇವರಿಸೋ ಆಸೆಯಿದೆ ..

ಕನಸಲ್ಲಿ ರಾಜಕುಮಾರನಾಗಿ ಅದೇ ಹುಡುಗ ಬಂದಾಗ ಬದುಕಿನಿಂದ ಎದ್ದು ಹೋಗೋ ಅಷ್ಟು ಅಸಹನೀಯ ಭಾವವಿದೆ ಆ ಪ್ರೀತಿಯ ಬಗ್ಗೆ ....

ತಲೆಗೊಂದು ಮೊಟಕಿ ನೀ ನನ್ನ ಗೆಳೆಯ ಕಣೋ ...ಮಧುರ ಪ್ರೀತಿಯನ್ನ ಕೊಡೋ ಇನಿಯನಾಗ್ತೀನಿ ಅನ್ನೋ ಹಟ ಬಿಟ್ಟು ಮೃದು ಮಧುರ ಗೆಳೆತನವನ್ನ ಮರಳಿ ಕೊಡ್ತೀನಿ ಅಂತ ಹೇಳೋ ಅವನ ಒಂದು ಮಾತಿಗಾಗಿ ಕಾಯ್ತಾ ...

ಮತ್ತದೇ ಭಾವಕ್ಕೆ ಭಾವವಾಗೋ ಗೆಳೆಯನ ನಿರೀಕ್ಷೆ ಮಾಡೋ ಹುಚ್ಚು ಮನಸ್ಸಿದೆ .....

ಈ ಹುಡುಗಾ ಪರಿಚಿತನಾ ....????...ಪೂರ್ತಿಯಾಗಿ ಅಪರಿಚಿತನಾ ???

ಅವತ್ತು .....ಪರಿಚಿತನಾಗಿದ್ದ ಅಪರಿಚಿತ..... ಇವತ್ತು ....ಅಪರಿಚಿತನಂತಿರೋ ಪರಿಚಿತ !!

(ಅಕ್ಷರ ಅವೇ ...ಅದ್ರೂ ಅಪರಿಚಿತನಾಗೋ ಅತೀ ಪರಿಚಿತನ ನೋವ ಭಾವ ಅವಳಿಗೆ ಮಾತ್ರಾ ಗೊತ್ತೇನೊ )

 

Monday, April 22, 2013

ಮಂಜಾದ ಬದುಕು ....!


ಸುಮ್ಮನೆ ನೋಡಿದ್ದ ಮೊನ್ನೆಯ ಫೋಟೋ ಅದು ....ಒಂದಿಷ್ಟು ದುಃಖ ,ಹೇಳಲಾಗದ ಬೇಸರ , ಅಸಹಾಯಕತೆಯ ವಿಧಿಯ ಬದುಕಿದು ಅನ್ನೋ ಭಾವಕ್ಕೆ ...ಅದೇನೋ ಸ್ಪಷ್ಟವಾಗಿರದ ಭಾವವನ್ನ ಕೇಳೋಕೆ ಶಬ್ದ ಸಿಗದೆ ಕಷ್ಟ ಪಟ್ಟು ಕೇಳಿದ್ದೆ
"
ಬದುಕು ನಾವಂದುಕೊಂಡಂತಿಲ್ಲ ಗೆಳತಿ....ಒಮ್ಮೆ ಹೊರ ಬಂದು ನೋಡು ದುಃಖಿಸೋ ಇಳಿ ಜೀವಗಳೆಷ್ಟಿವೆಯೆಂದು "ಎಂದು ಹೇಳಿ ಇನ್ನೂ ಗೋಜಲು ಮಾಡಿದ್ದ ಭಾವ ಗೊಂಚಲಿನಲ್ಲಿ ಶ್ರೀವತ್ಸ ಕಂಚಿಮನೆ ...
ನಿನ್ನೀ "ಮಂಜಾದ ಬದುಕು " ನಾ ನೋಡಿರದ ಬದುಕನ್ನ ಕಣ್ಣ ಮುಂದಿಟ್ಟಿದೆ ..

ದುಸ್ತರ ಬದುಕಿನ ಸುತ್ತ......


ಮುರುಕು ಮನೆಯೆದುರು ಒಂಟಿಯಾಗಿ ಬಿಕ್ಕುತ್ತಿರೋ ಜೀವ

ಸಂಗಾತಿಯ ಅಗಲುವಿಕೆ ನೀಡಿದ ಒಂಟಿತನದ ನೋವ ....

ಹಾಯಿ ದೂರ ನೋಡೋ ದಾರಿಯಲ್ಲೊಂದು ಭರವಸೆಯ ನಿರೀಕ್ಷೆ
ಎಂದಿನಂತೆ ಮುಂದುವರೆಯೋ ಒಪ್ಪತ್ತೂಟದ ನಿರಾಸೆ ...


ಕೊಲ್ಮಿಂಚಿನ ಅಂಚಿಂದ ಕಾರ್ಗತ್ತಲೆಯ ಕೂಪದಲ್ಲಿ....

ನನ್ನೊಟ್ಟಿಗೆ ನನ್ನ ಬೆಕ್ಕೂ ಕಣ್ಣೀರಿಡುತ್ತಿದೆ ನನ್ನರಮನೆಯಲ್ಲಿ...
ಇಬ್ಬರ ಬೇಸರಕ್ಕೂ ....
ನಿನ್ನ ಖುಷಿಗೂ ...

ನನ್ನ ಕಲ್ಪನೆಯ ಬದುಕು ಇವರ ವಾಸ್ತವದ ಬದುಕಲ್ಲಿ ಕಳೆದೋದ ಭಾಸ ...
ವಾಸ್ತವಕ್ಕೂ ಕಲ್ಪನೆಗೂ ನಡುವೆ ಇರೋ ಆಭಾಸ ...

ಬದುಕೆ ..

ನಿನಗದೆಷ್ಟು ಧಾರಾಳ ತನ !!!

ನಾ ನನ್ನ ಮನೆಯ ಯಜಮಾನಿಯಾಗಿ ಮೆರೆಯಬೇಕೆಂದು ಕೇಳಿರಲಿಲ್ಲ ...
ಸಾಲು ಸಾಲು ದುಃಖಗಳ ಯಜಮಾನಿಯಾಗಿ ಮಾಡಿರೋ ನಿನ್ನೀ ಧಾರಾಳ ಪ್ರೀತಿಗೊಂದು ಪ್ರೀತಿಯ ನಮನ ...

ಖುಷಿಸೋ ಜೀವನ ಕೇಳಿರಲಿಲ್ಲ ನಿನ್ನ ನಾ ...
ಅತೀ ಪ್ರೀತಿಯ ಜೀವನ ಕೊಟ್ಟಿರೋ ನಿನ್ನ ಜೀವನ ಪ್ರೀತಿಗೊಂದು ಶರಣು .....


ಅತೀ ನಿರಾಸೆಯ ಸಾಲು ಸಾಲು ಸುಖಗಳ ಇಳಿ ವಯಸ್ಸಿನ ಸಂತುಷ್ಟ ಬದುಕು ನನ್ನದೆಂಬ ಹೆಮ್ಮೆ ನಂದು ...
ಬದುಕೇ ..ನೀ ಕೊಟ್ಟ ಬದುಕಿಗೆ ಭರವಸೆಯ ಅಂತರದ ಪ್ರೀತಿ ಮಾತ್ರ ನಂದು

 

 
(ಗೋದಾವರಿ ನದೀ ತೀರದಲ್ಲಿರೋ ಅಜ್ಜಿಯ ಪುಟ್ಟ ಪುಟ್ಟ ತೆಂಗಿನ ಕಾಯಿಗೆ ,ಬಿಸಿಲ ಬೇಗೆಗೆ ಬಾಯಾರಿಸೋ ನೀರು ..ಸಣ್ಣ ಸಣ್ಣ ಸ್ವೀಟ್ ಪ್ಯಾಕೆಟ್ ಗಳು ....ಬರಿಯ ಒಪ್ಪತ್ತಿನ ಊಟಕ್ಕಾಗಿ ಇಳಿ ವಯಸ್ಸಲ್ಲಿ ದಾರಿಯುದ್ದಕ್ಕೂ ನೋಡೋ ಕಣ್ಣುಗಳ ನೋವು
ಕ್ಷಣವೊಂದಕ್ಕೆ ನೋವು ,ಬೇಸರವಾಯ್ತು ...ಇಳಿ ವಯಸ್ಸಿನ ನೋವಿಗೆ ಮನ ಹಿಂಡಿದ್ದು ಸುಳ್ಳಲ್ಲ)
ಬದುಕಿನ ಇನ್ನೊಂದು ನೋವಿನ ಭಾವವನ್ನ ತೋರಗೊಟ್ಟಿದ್ದು ನಿನ್ನೀ "ಮಂಜಾದ ಬದುಕು "
ಥಾಂಕ್ಸ್ ಶ್ರೀವತ್ಸಾ ಜಿ

Saturday, April 13, 2013

ಬೇಯುವ ಧಗೆಯಲ್ಲೊಂದು ಹಸುರಾದ ನೆನಪು ...


(ಮತ್ತದೇ ಹಳೇ ...ಪುಟ್ಟ ಹಳ್ಳಿ ಹುಡುಗಿಯ ಮಾತಾಗಿ )


ಮನದ ಧಗೆ... ಬಿಸಿಲ ಕಾವು ....ಬೆಳಗಿನ ಸೂರ್ಯನೊಂದಿಗೇ ಜಾಗ ಇರದಿದ್ದರೂ ಮನ ಸೇರೋ ಬೆವರು!!

 ....ಕಾಡೋ ಭಾವದೊಂದಿಗೆ ಮನದೊಳಗೆ ಹಾದು ಹೋಗೋ ಸೆಕೆಯ ಸಿಟ್ಟು....

ಬಿಸಿಲ ಪಯಣದಲ್ಲೊಂದು ಖಾಯಂ ಸಹ ಪಯಣಿಗನ ಹುಡುಕಾಟ ....

ಮನ ಸುಟ್ಟಿದ್ದು ಸಾಲದೇ ಮೈಯನ್ನೂ ಸುಡ ಬರುತ್ತಿರೊ ಹತಾಶೆಯ ಬೇಗೆ......

ಬೇಯುವ ಬಿಡದೇ ಕಾಡುವ ಉರಿ ಬಿಸಿಲು....

ಮಾತೇ ಬರದಂತೆ ಬಾಯಾರಿಸೋ ಧಗೆ...

ಜೊತೆಗೆ ಕಾಡೋ ಒಂದಿಷ್ಟು ನಿನ್ನೆ ಮೊನ್ನೆಯ ನೆನಪು .....

ಎಲ್ಲವೂ ಸೇರಿ ಸಹಿಸಿಕೊಳ್ಳೋದು ಕಷ್ಟ ಆಗಿ ....ಸಹಿಸಲೇ ಬೇಕಾದ ಅನಿವಾರ್ಯತೆಗಾಗಿ ಒಂದು ಅನಿವಾರ್ಯತೆಯ ಮಾತು ....

ಬೆಳಿಗ್ಗೆ ಬೇಗ ಏಳೋ ಅಭ್ಯಾಸವೇ ಇಲ್ಲದಿರೋರು ಕೂಡಾ ೭ ಗಂಟೆಗೂ ಜಾಸ್ತಿ ನಿದ್ದೆ ಮಾಡೊಲ್ಲ ...ರಾತ್ರಿ ನಿದ್ದೆನೂ ಬರಲ್ಲ ....ಕನಸಲ್ಲಿ ರಾಜಕುಮಾರನೂ ಇರಲ್ಲ ...

ಕ್ಲಾಸ್ ನಲ್ಲಿ ಕೂತು ಬೋರಿಂಗ್ ಪಾಠ ಕೇಳೋಕೇ ನಿಜಕ್ಕೂ ಕಷ್ಟ ಆಗ್ತಿದೆ ..ಮೊದಲಾದ್ರೆ ಬೇಸಿಗೇ ರಜಾ ಇರ್ತಿತ್ತು ನಮ್ಮ ತರ್ಲೆ ಗಳನ್ನ ಸಹಿಸಿಕೊಂಡು ..ಈಗ ತರ್ಲೆ ಮಾಡೋರೂ ಇಲ್ಲ ...ಸಹಿಸಿಕೊಳ್ಳೋರೂ ಇಲ್ಲ ..

.


ಅದ್ಯಾಕೋ ಬೇಸಿಗೆ ರಜಾದ ಮನೆಯಲ್ಲಿನ ಆ ಮಜಾದ ಭಾವಗಳು ಇವತ್ತಿನ ಈ ಬಿಸಿಲ ಝಳಕ್ಕೆ ತಣ್ಣಗಿನ ನೀರಲ್ಲಿ ಸ್ನಾನ ಮಾಡೋಕಂತ ಮೇಲೆ ಬಂದಂತಿದೆ

ಯಾರಿಗ್ ಹೇಳೋಣಾ ನಮ್ಮ ಪ್ರಾಬ್ಲಮ್ ನಾ ....

 

ರಜಾ ಶುರು ಆದ್ರೆ ಬೆಟ್ಟಾ ತಿರ್ಗೋದು ...ಅಮ್ಮ ದೊಡ್ಡಮ್ಮನ ಬೈಗುಳದ ಮಧ್ಯೆನೂ ...ಮಾವಿನ ಕಾಯಿ ,ಊರಲ್ಲಿರೋ ಮುಳ್ಳೆ ಹಣ್ಣು ,ನೇರಳೆ ಹಣ್ಣು ,ಕೌಳಿ ಹಣ್ಣೂ ಕೂಡಾ ನಮ್ಮನ್ನ ಮಿಸ್ ಮಾಡ್ಕೊಳ್ತಾ ಇದ್ಯಂತೆ ಈಗ ...ಆ ಗೇರನ್ನ ಸುಡೋಕೆ ಹೋಗಿ ಕೈ ಸುಟ್ಟುಕೊಳ್ಳೋದು ,ಮಾವಿನ ಹುಳಿ ಜಾಸ್ತಿ ಆಗಿ ಮುಖ ದಪ್ಪ ಆಗೋದು ...ರಜಾ ಬಂದ್ರೆ ನಮ್ಮ ಹಿಂದೆನೇ ಓಡೋ ಅಪ್ಪ ಅಮ್ಮನನ್ನ ನೆನೆಸ್ಕೊಂಡ್ರೆ ಈಗ್ಲೂ ನಗೂ ತಡ್ಯೋಕಾಗಲ್ಲ :)ರಜಾ ಬರ್ದೆ ಇರ್ಲಿ ಅಂತ ದೇವ್ರನ್ನ ಕೇಳೋ ಅಷ್ಟು ಕಾಟ ಕೊಡ್ತಿದ್ವಿ ಅಂದ್ರೆ just imagine

:)

೧ ರೂಪಾಯಿ ಪೆಪ್ಸಿ ಗೆ ಒಂದು ಕಿಲೋಮೀಟರ್ ದೂರ ಅಜ್ಜನೊಟ್ಟಿಗೆ ಹೋಗೋದು...ಅದೂ ಸರಿಯಾಗಿ ಸೂರ್ಯ ನೆತ್ತಿಗೆ ಬರೋ ಸಮಯಕ್ಕೆ :) ಯಾಕಂದ್ರೆ ನಮ್ಮ ಓಡಾಟ ಮುಗಿಯೋದೆ ಸೂರ್ಯನ ಸುಡು ನೋಟ ನಮ್ಮ ಮೇಲೆ ಬಿದ್ದಾಗ ತಾನೆ ....ಅಜ್ಜ ನಾ ಕರೆದಲ್ಲೆಲ್ಲಾ ಬೇಸರಿಸದೇ ಬರೋರು ಅನ್ನೋದು ಪಕ್ಕಾ ಗೊತ್ತಿತ್ತು ...ಹೀಗಾಗೆ ನನ್ನೆಲ್ಲಾ ಕಿಲಾಡಿಗಳಿಗೂ ಅಜ್ಜನೇ ಬೈಸಿಕೊಳ್ಳೋದು :) ಇದು ೨ ತಿಂಗಳ ರಜಾದಲ್ಲಿ ಒಂದುವರೆ ತಿಂಗಳ ಖಾಯಂ routine ..

.ಅದ್ಯಾಕೋ ಆ ಚಿಲ್ಲು ಚಿಲ್ಲು ಭಾವಗಳೇ ಮೊದಲು ಮನಸ್ಸಿಗೆ ಮೂಡೋದು ..ಅದೇ ತುಂಬಾ ಇಷ್ಟ ಆಗೋದು :)

 

ಒಂದು ದಿನ ಬೆಟ್ಟ ನಮ್ಮ target ಆದ್ರೆ ಇನ್ನೊಂದು ದಿನ ಹೊಳೆ ....

ಮಧ್ಯಾಹ್ನ ಅಪ್ಪನ ಕೋಲು ಮತ್ತವನ ಕಾಲು ಕಾಣೋ ತನಕಾನೂ ಅಲ್ಲಿಯೆ ನಮ್ಮ ಬೀಡು ..ಮನೆಗೆ ಬಂದು ಒಂದಿಷ್ಟು ಮಂತ್ರಾಕ್ಷತೆ ಹಾಕಿಸಿಕೊಂಡು ಊಟ ಮಾಡೋವಾಗ್ಲೂ ನಿಲ್ಲದ ಅಮ್ಮ ,ದೊಡ್ಡಮ್ಮನ ಮಾತಿನ ಛಾಟಿಗೆ ಮತ್ತೆ ನಮ್ಮ ಸಹಾಯಕ್ಕೆ ಬರೋದು ಮುದ್ದು ಅಜ್ಜ ..."ಈಗ ಆಡ್ದೆ ಇನ್ಯಾವಾಗ ಆಡ್ತಾರೆ ..ಬಿಡಿ ಪಾಪ ರಜಾದಲ್ಲೂ ಮನೆನಲ್ಲೇ ಕೂರಿಸಬೇಡಿ "ಅಂತ ಪ್ರೀತಿ ಮಾಡ್ತಾರೆ :)ಪಾಪ ನನ್ನಜ್ಜ ....

ಲಗೋರಿ ಆಟ ಆಡಿ ಬೀಳೋದು ,ಸಣ್ಣ ಸಣ್ಣ ಹೊಡೆದಾಟ ,ಸಿಟ್ಟು ಮಾಡಿಕೊಂಡು ಆಟ ಬಿಟ್ಟು ಮನೆಗೆ ಬರೋದು ...ಅಮ್ಮನ ಬಳಿ ಇಷ್ಟುದ್ದದ complaint ಹೇಳೋದು ...ಅಮ್ಮ ಮಾಡಿಟ್ಟಿರೋ ಚಿಪ್ಸ್ ನಾ ಎರಡೇ ದಿನಕ್ಕೆ ಖಾಲಿ ಮಾಡೋದು, ಮತ್ತೆ ಮರುದಿನ ಹೋಗಿ ಅಮ್ಮಾ ತಿನ್ನೋಕೆ ಕೊಡು ಅನ್ನೋದು ....
                  

ಒಂದಿಷ್ಟು ಚಿಕ್ಕ ಚಿಕ್ಕ ಖುಷಿಗಳು ....

ಇನ್ನು ಅಜ್ಜನ ಮನೆಗಂತ ಹೋದ್ರೆ ಮುಗಿದೇ  ಹೋಯ್ತು ..ನನ್ನದೇ ಅಧಿಪತ್ಯ ಅಲ್ಲಿ ...ಏನ್ ಮಾಡಿದ್ರೂ ಯಾರೂ ಕೇಳೊರಿಲ್ಲ ...ಜೋರು ಮಾಡೋ ಅಮ್ಮನಿರಲ್ಲ...ಬೈಯ್ಯೊ ಅಪ್ಪ ಇರಲ್ಲ ...ಎಷ್ಟೆ ಹೊತ್ತಿಗೆ ಮನೆಗೆ ಹೋದ್ರು ಪ್ರೀತಿಯ ಊಟ ಬಡಿಸೊ ಅತ್ತೆ ,ಪಕ್ಕ ಕೂತು ಮಾತಾಡೋ ಮಾವ .... ಪಕ್ಕಾ ಅಣ್ಣಂದಿರಂತೆ ಗೋಳು ಹೊಯ್ಕೊಳೋ ಬಾವಂದಿರು....ಅವರೊಟ್ಟಿಗೆ ನೋಡೋ ಕ್ರಿಕೆಟ್ ...ಸುತ್ತೋ ಬೆಟ್ಟ ಗುಡ್ಡ ....ನಾ ಹೇಳಿದಂತೆ ಕೇಳೋ ಆಟದ ರೂಲ್ಸ್ .ಮಾವ ನಂಗತ ತರೋ ಚಾಕ್ಲೆಟ್ಸ್ ...ನಂಗೆ ಮಾತ್ರ ಸಿಗೋ ದೊಡ್ಡ ಪಾಲಿನ ನೇರಳೆ ಹಣ್ಣು :)..ವಾಹ್ !!

really missing something :(

ಈಗ ಮನೆಗೆ ಹೋದ್ರೆ ಅದೇ ಮುದ್ದು ತೋರೋ ಅಜ್ಜ ಇದ್ದಾರೆ ...ಉಳಿದವರೆಲ್ಲರದೂ ಬದಲಾದ ಭಾವ....ಕೆಲಸ ಮಾಡಿ ಕೊಡ್ತೀನಿ ಕೊಡಮ್ಮ ಅಂದ್ರೆ ಬೇಡ ಪುಟ್ಟಿ ಸುಮ್ಮನೆ ಕೂತುಕೊಂಡು ಮಾತಾಡು ಅನ್ನೊ ಅಮ್ಮ ! ತರ್ಲೆ ಮಾಡಿದ್ರೂ ಬೈಯದೇ ನಕ್ಕು ಬಿಡೋ ಅಪ್ಪ !...ಅಪ್ಪ ಅಮ್ಮನಂತೆ ಪ್ರೀತಿ ಮಾಡೋ ದೊಡ್ಡಪ್ಪ ದೊಡ್ದಮ್ಮ....ಹತ್ತಿರ ಕೂರಿಸಿಕೊಂಡು ಕಣ್ಣೀರಾಗೋ ಅಜ್ಜಿ ...ತರ್ಲೆ ತಮ್ಮ ಕೂಡಾ ಹೊಡೆದಾಡೋಕೆ ಬರಲ್ಲ ...ನಾನೂ ಆಟಕ್ಕೆ ಬರ್ತೀನಿ ಅಂದ್ರೆ ಹೋಗಕ್ಕ ನೀ ದೊಡ್ಡವಳಾಗಿದ್ದೀಯಾ ಅಂದು ಆಟಕ್ಕೇ ಸೇರಿಸಿಕೊಳ್ಳಲ್ಲ :(

ದೊಡ್ಡವಳಾದ್ರೆ ಆಟ ಆಡ್ಬಾರ್ದಾ :(

....ರಜಾ ಅಂದ್ರೆ ಮನೆ ಒಂದು ರಣರಂಗ ಆಗ್ತಿತ್ತು ಆಗ ,ಮನೆಯಲ್ಲಿ ಒಬ್ಬೊಬರಿಗೆ ಒಂದು ಟೀವಿ ಬೇಕಿತ್ತು ರಾತ್ರಿ ..ಆದರಿವತ್ತು ತಮ್ಮ ಮಾತ್ರ ಬೇಸಿಗೆ ರಜಾ ಅಂತ ಮನೆಯಲ್ಲಿರೋದು ...ಕಾರುಬಾರೆಲ್ಲ ಅವಂದೆ ... IPL ಬಿಟ್ಟು ಬೇರೆ ಏನನ್ನೂ ನೋಡೋಕೆ ಬರದ ಪ್ರಾಣಿ ಅದು..ಪಾಪ ಅವನೇನು ಮಾಡಿಯಾನು ....ದಿನಕ್ಕೊಂದು ಫೋನ್ ಮಾಡಿ "ಅಕ್ಕಾ holidays are too boaring" ಅಂತ ಹೇಳ್ತಾನೆ !!ನಾ ಖುಷಿಸುತ್ತಿದ್ದ ರಜಾ ಇವತ್ತು ಬೇಜಾರಾಗೋ ಅಷ್ಟು ಬದಲಾಗೋಯ್ತಾ ??!! ಬರಿಯ ಏಳೆಂಟು ವರ್ಷಕ್ಕೆ !!!


ಮನೆ ಪ್ರಶಾಂತವಾಗಿದೆ ...ಅವತ್ತಿನ ಯುದ್ದವಿಲ್ಲ..ಕಿಲಾಡಿ ಮಾಡೋ ಮಕ್ಕಳಿಲ್ಲ ...ಕಿರುಚಿ ಹಾರಾಡಿ ಗೋಳು ಹೊಯ್ಯೋರಿಲ್ಲ ...ಆದರೆ ...ಅವರ ಮನಸ್ಸಲ್ಲೂ ಕೂಡಾ ಎನೋ ತಳಮಳ ಸ್ಪಷ್ಟವಾಗಿ ಕಂಡಿತ್ತು ಇವತ್ತು ..."ಇದ್ಯಾಕೋ ಬೇಸಿಗೆ ರಜಾ ಅಂತಾನೆ ಅನಿಸ್ತಿಲ್ಲ ಪುಟ್ಟಿ "ಅನ್ನೊ ಅಮ್ಮನ ಈ ಮಾತು ಇಷ್ಟು ಭಾವವನ್ನಿಲ್ಲಿ ಹೇಳೋ ತರ ಮಾಡಿದ್ದು ..

 

ನಂಗದೇ ಪುಟ್ಟ ಹಳ್ಳಿಯ ಹುಡುಗಿಯಾಗಿರೋದೆ ಇಷ್ಟ ...ಅಜ್ಜ ಅಜ್ಜಿಯ ಮುದ್ದಿನ ಮೊಮ್ಮಗಳಾಗಿ ,ಅಮ್ಮ ಬೈಯದೇ ಯಾವೊಂದು ಕಡ್ಡಿಯನ್ನೂ ಅಲ್ಲಾಡಿಸದ ಸೋಂಬೇರಿ ಮಗಳಾಗಿ,ಅಪ್ಪನ ಜೋರಿಗೆ ಮಾತ್ರ ಹೆದರೋಳಾಗಿ ,ದೊಡ್ಡಪ್ಪ ದೊಡ್ಡಮ್ಮನ ತರ್ಲೆ ಪುಟ್ಟಿಯಾಗಿ,.....

ಮಾವ ಅತ್ತೆಗೆ ಮಗಳಾಗಿ ,ಬಾವಂದಿರಿಗೆ ಗೋಳು ಹೊಯ್ಯೋ ತಂಗಿಯಾಗಿ ,ನನ್ನದೇ domination ನಡಿಸೋ ಬಜಾರಿಯಾಗಿ,ಬೆಟ್ಟ ಸುತ್ತಿ,ಹೊಟ್ಟೆ ತುಂಬೋ ಅಷ್ಟು ಹಣ್ಣು ತಿನ್ನೋ ಅದೇ ಪುಟ್ಟ ಹಳ್ಳಿಯ ಪುಟ್ಟ ಹುಡುಗಿಯಾಗಿರೋದೇ ನಂಗಿಷ್ಟ :(

ಹೌದು ನಂಗದೆ ಪುಟ್ಟ ಹಳ್ಳಿಯ ಪ್ರೀತಿಯ ಪುಟ್ಟಿಯಾಗಿರೋದೆ ಇಷ್ಟ :(





ಬದುಕ ಬಸ್ಸಿನಲ್ಲಿ ಮಸ್ತಿಯ,ತಲೆಬಿಸಿ ಇರದ ಈ ನಿಲ್ದಾಣದಲ್ಲೊಂದು ಕಾಯಂ ತಂಗುದಾಣವಿರಬೇಕಿತ್ತು ಅಲ್ವಾ??....ಬಿಸಿಲ ಕಾವಿರಲ್ಲ ...ಮನದಲ್ಲೊಂದೂ ನೋವಿರಲ್ಲ ....ಸುಸ್ತಿನ ಭಾವ ಇರಲ್ಲ ....

ನಾನಂತು ನನ್ನ ಟಿಕೇಟ್ ನಾ ಈ ಸ್ಟಾಪ್ ಗೆ ರಿಸರ್ವ್ ಮಾಡ್ತಿದ್ದೆ ಕಣ್ರೀ....ಪರ್ಮನೆಂಟ್ ಆಗಿ :)

ನನ್ನನ್ನ ಪ್ರೀತಿಸೋ ,ಇಷ್ಟ ಪಡೋರು ಮಾತ್ರಾ ಇರೋ ಮತ್ತದೇ ನಿಲ್ದಾಣಕ್ಕೆ .....




 

Sunday, April 7, 2013

ಮುಸ್ಸಂಜೆಯ ಮುಜುಗರ !



ವರ್ಷವೊಂದು ಕಳೀತು....!

ಲೀಕ್ ಆದ ಪೇಪರ್,ಬಿಡದೇ ಕಾಡಿದ್ದ ಟೆನ್ಷನ್,ಮನೆಯವರ ಅತೀಯಾಗಿದ್ದ ಕಾಳಜಿ ,ಮುಗಿಯದ ಸಾಲು ಸಾಲು ನಿರೀಕ್ಷೆ !!

ಅವತ್ತಿದೇ ದಿನ ಅಂತೂ ಇಂತೂ ಮುಗಿದ ಪರೀಕ್ಷೆಗೆ ಪಟ್ಟ ಸಣ್ಣದೊಂದು ಖುಷಿ ಇತ್ತು ....

ಹೇಳಲಾಗದ ,ತೋರಲಾಗದ ಭಾವ ಬೇಸರ ತರಿಸಿತ್ತು !

ವರ್ಷದ ಹಿಂದಿನ ಭಾವವೇ ಎನೋ ಕಳೆದೊಂದು ತಿಂಗಳಿನಿಂದ ಮತ್ತದೇ ಗೊಂದಲ,ಗೋಜಲಿನ ಭಾವ ಮೂಡಿಸುತ್ತಿದೆ ...

ಇವತ್ತಿನ ಮುಸ್ಸಂಜೆಯ ಭಾವವೂ ಕೂಡಾ ಹೇಳಲಾಗದ ಭಾವಕ್ಕೆ ಹೊರತಾಗಿಲ್ಲ ...
ಮನ  ಜಾತ್ರೆಯಾಗಿದೆ.....ನೆನಪುಗಳ ತೇರಲ್ಲಿ ತನ್ನವರು ದೂರಾದ ಭಾವದಲ್ಲಿ ಕೊರಗ ಹತ್ತಿದೆ ,





ವರ್ಷದ ಹಿಂದಿನ ಮಾತು...


ಅಲ್ಲಿ ಪುಟ್ಟದೊಂದು ಅಡ್ಡವಿತ್ತು ....

ಅವಳವರೆನ್ನುವವರು ತುಂಬಾ ಮಂದಿ ಇದ್ದರು....ಕೀಟಲೆಗಳನ್ನೆಲ್ಲಾ ಸಹಿಸಿಕೊಳ್ಳೋರಿದ್ದರು .....ಹಟ ಮಾಡಿದ್ರೆ ರಮಿಸೋರಿದ್ದರು...ಕಣ್ಣೀರನ್ನು ಒರೆಸೊ ಕೈಗಳಿತ್ತು ....ಜಗಳ ಮಾಡೋಕೆ ಅಂತಾನೆ ತಮ್ಮನಿದ್ದ:)...ಮಾತುಗಳನ್ನ ಕೇಳೋ ಕಿವಿಗಳಿತ್ತು.....ತಮಾಷೆ ಮಾಡೋ ,ನಗಿಸೋ ಆತ್ಮೀಯರಿದ್ದರು .....

ಪ್ರೀತಿಯ ಮನೆ ಇತ್ತು .... ಮನದಲ್ಲೊಂದು ಅರಮನೆಯಿತ್ತು ... ಅದಕ್ಕೆ ಅವಳದ್ದೇ ಅಧಿಪತ್ಯ ಇತ್ತು ... ಚಿಲ್ಲು ಚಿಲ್ಲು ಕನಸುಗಳಿತ್ತು .... committed ಮಂದಿಗೆ ಗೋಳು ಹೊಯ್ಯೋ ಸಲುಗೆಯಿತ್ತು....
ಮಾಡೋಕೆ ಕೀಟಲೆಗಳಿದ್ದವು....ಆಡೋಕೆ ಓರಿಗೆಯವರಿದ್ದರು.....ಮಾತಾಡೋಕೆ ಬಾಯಿ ನೋಯೋ ಅಷ್ಟು ಮಾತುಗಳಿದ್ದವು....

 

ಈಗಲೂ ಇವುಗಳೆಲ್ಲವೂ ಇದೆ ...ಆದರೆ......ಅಂತರವನ್ನು ಕಾಯ್ದುಕೊಂಡು......ಅಂತರದ ದೂರದಲ್ಲಿ !!!

ಏನನ್ನೋ ಕಳಕೊಂಡ ಭಾವ ;(

ವರ್ಷ ಒಂದರಲ್ಲೇ ಬದಲಾದ ನೂರೆಂಟು ಭಾವ....ವರ್ಷವೊಂದರ ಹಿಂದಿದ್ದ ಸಮಾಜ ಪೂರ್ತಿ ಬದಲಾದ ಅನುಭಾವ....ಎನೋ ಹೇಳಲಾಗದ ಅನುಭವ ....

ಪ್ರೀತಿ ತುಂಬಿದ ಸ್ನೇಹದ ಅಡ್ದ ದೂರಾದ ನೋವಾ ? ಅಥವಾ ಅವಳನ್ನೇ ಪೂರ್ತಿಯಾಗಿ ಬದಲಾಯಿಸಿತ್ತಾ ಆ ಹವಾ ?  ಅಥವಾ ಬಿಸಿಲ ಕಾವಾ ??

ತಿಳಿಯದ ಗೊಂದಲ ನಂದು ......

ಎಲ್ಲವನ್ನೂ ತಾಳ್ಮೆಯಿಂದ ಕೇಳುತ್ತಿದ್ದ ಅವರಿಂದು ದಿನಕ್ಕೆ ಫೋನ್ ಮಾಡಿ ಊಟ ಆಯ್ತ,?ತಿಂಡಿ ಆಯ್ತ?ಕ್ಲಾಸ್ ಹೆಂಗ್ ಇತ್ತು? ಅಂತ ಪಾಪುವಿಗೆ ಕೇಳೋ ತರ ಕೇಳ್ತಾರೆ ...ಇದಕ್ಕಿಂತ ಆಚೆಯ ಒಂದು ಮಾತೂ ಇಲ್ಲ ......ಯಾವಾಗಲೂ ಜಗಳ ಮಾಡೊ ತಮ್ಮ ಕೂಡಾ "ನನಗಿನ್ನು ತಿಂಗಳು ರಜಾ ಅಕ್ಕ .. ನೀನಿಲ್ಲದ ರಜಾ ನಿಜಕ್ಕೂ boar ಮನೆಗೆ ಬಾ ಪ್ಲೀಸ್ "ಅಂತ matured ಆಗಿ ಮಾತಾಡ್ತಾನೆ !!....

.ಮನೆ ವರ್ಷಕ್ಕೊಮ್ಮೆ ಹೋಗೋ ಅತಿಥಿಯ ಅನುಭವ ನೀಡುತ್ತೆ! ....

ಪ್ರಸ್ತುತ ಸಿಗದೇನೇ ಕಳೆದು ಹೋದ ಒಲವ ಬಗ್ಗೆ ಬೇಸರವೂ ಇದೆ...

ಹಟ ಮಾಡೋದು ಮರೆತೇ ಹೊಗಿದೆ ಅಕ್ಷರಶಃ .......ಸಲುಗೆಯ ಸ್ನೇಹ ನನ್ನದೇ ಅಗಿತ್ತಾ ಅನ್ನೊ ಭಾವ ಮೂಡೋ ಅಷ್ಟು ಅಂತರದಲ್ಲಿದೆ ಜೀವದ ಸ್ನೇಹಿತರ ಬಳಗ !

ಅಂತರ ಮೂಡಿದ್ದಂತೂ ನಿಜ ...ಮೂಡಿಸಿದ್ದು ಯಾರೆಂದು ಒಂದೆರಡು ಕ್ಷಣ ಯೋಚಿಸಿ ಗೊಂದಲದಲ್ಲಿ ಬಿದ್ದೆ ....ಉತ್ತರ ಸಿಗದ ಗೊಂದಲ ...ಕಳಕೊಂಡ ಭಾವವನ್ನಿಲ್ಲಿ ಹೇಳೋಕೆ ಕಷ್ಟ ಆಗ್ತಿದೆ

 dreams ಗಳನ್ನ aim ಗಳಾಗಿ ಮಾಡಿಕೊಂಡು ಖುಷಿ ಪಟ್ಟಿದ್ದಾಗಿದೆ ...ನಾವೇ ಇಷ್ಟ ಪಟ್ಟು ಆರಿಸಿಕೊಂಡ ಭಾವ...ಈಗಲೂ ಇಷ್ಟವಾಗೊ ಭಾವ..ಅದರೂ ಇವತ್ತಿನ ಸಂಜೆಗೆ ಮಾತ್ರ ಮುಜುಗರ ಮೂಡಿಸುತ್ತಿರೋ ಭಾವ.......ನಿರಾಶೆಯ ನೋವ ಭಾವ....ಕಣ್ಣಂಚಿನ ಬೇಸರದ ಭಾವ......ಕೋಲ್ಮಿಂಚಿನ ಭಾವ...ಒಂದು ಕ್ಷಣಕ್ಕೆ ಹೆಪ್ಪಾದ ಕನಸುಗಳ ಕನಸಿನ ಭಾವ......ಭಾವನೆಗಳ ಮಧ್ಯ ತೂರಿ ಬರುತ್ತಿರೊ ಭಾವ..

.ಭಾವ ಭಾವನೆಗಳ ನಡುವಿನ ಗೊಂದಲದ ಭಾವ...

 

ಕಳೆದೊಂದು ತಿಂಗಳಿನಿಂದ ಸಾಲು ಸಾಲಾಗಿ ಕಾಡುತ್ತಿರೊ ಭಾವ ....ಇಷ್ಟವಾಗದ ಕಷ್ಟ ಪಟ್ಟು ದೂರ ಮಾಡ್ತಿದ್ದ ಭಾವ ಮುಸ್ಸಂಜೆಗ್ಯಾಕೊ ಇಷ್ಟವಾದಂತಿದೆ ....ಆದರಿದು ಇವತ್ತಿನ ಸಂಜೆಗೆ ಮಾತ್ರ ಮೀಸಲು ಎಂಬ ಧೈರ್ಯ ನಂದು .... ನಾಳೆಯ ಸುಪ್ರಭಾತಕ್ಕೆ ಮತ್ತದೇ ಹೊಸ ಕನಸುಗಳಿವೆ ....ನನ್ನದೇ ಸರ್ವಾಧಿಕಾರದ ಹೇಳಿದ್ದನ್ನೆಲ್ಲಾ ಆಲಿಸೋ ಸುಂದರ ಮನಸ್ಸಿದೆ.. ಖುಷಿಸೋ ಅಡ್ಡವಿದೆ .... ಕಾಲೆಳೆಯೊ ಹೊಸ ಸ್ನೇಹಿತರಿದ್ದಾರೆ ಅನ್ನೋ ಪ್ರಾಮಾಣಿಕ ಭಾವ ನಂದು.....

ಆದರೂ ಯಾಕೊ ನೆನಪುಗಳ ಹಾಳೆಯಲ್ಲಿನ ಪ್ರೀತಿ ತುಂಬಿದ ವರ್ಷದ ಹಿಂದಿನ ಭಾವವೇ ಅತೀ ಇಷ್ಟ ಆಗ್ತಿರೋ ಅನುಭವ ಇವತ್ತು .......

ಕಳೆದು ಹೋದ ಎಲ್ಲಾ ’ಇಲ್ಲ’ ಗಳನ್ನ ಸೇರಿಸಿ ಹುಡುಕ ಹೊರಟ ಭಾವ......

ಸಿಕ್ಕಿದ್ದರ ಬಗ್ಗೆ ಅರಿವಿಲ್ಲದ ಕಳ ಕೊಂಡರ ಬಗೆಗಿರುವ ಅತಿಯಾದ ವ್ಯಾಮೋಹ....

ಇರುವುದೆಲ್ಲವ ಬಿಟ್ಟು ಇರದುದರೆಡೆಗಿನ ಬಗೆಗಿನ ತುಡಿತ ...

ಅಸಲು ಈ ಭಾವ ನಾಳೆಯ ಖುಷಿಯನ್ನು ಕೊಲ್ಲದಿರಲಿ ಎಂಬ ಇಂಗಿತ


(ಭಾವ ಅವಳದು ಎಂದು ಹೇಳೋಕೆ ಹೋಗಿ ಪೂರ್ತಿಯಾಗಿ ಸೋತಿದ್ದೇನೆ ನಿಮ್ಮೆದುರು .... ಅವಳಿಂದ ಶುರುವಾದ ಭಾವ ಎರಡನೇ ಲೈನ್ ಗೆ ನನ್ನ ಭಾವವಾಗಿ ಕಾಡ ಹತ್ತಿದೆ ...ಭಾವಗಳು ನನ್ನದೇ ಅನ್ನೋ ಸಣ್ಣ ಅನುಮಾನ ನಂಗೆ.....ಸುಮ್ಮನೆ ಮನದ ಬೇಸರಕ್ಕೊಂದಿಷ್ಟು ಮಾತುಗಳು .... ನೀವು ಬೇಸರಿಸದಿರಿ .....)

Wednesday, March 20, 2013

ನಮ್ ಹುಡುಗ್ರು .


                    ಬರೀ ನಿನ್ನ ಗೆಳತಿಯರ ಬಗ್ಗೆನೇ ಬರೀ .... ನಾವೆಲ್ಲಾ ನಿಂಗೆ ಏನೂ ಅಲ್ಲ ಅಲ್ವಾ ?ಎಂದು ಹುಸಿ ಕೋಪ ಮಾಡೋ ಗೆಳೆಯರಿಗಾಗಿ :)


ದೊಡ್ಡ ಗುಂಪು .... ಬರಿಯ ಮಾತು ,ಮಸ್ತಿ ,ಹರಟೆ ,ತುಂಟಾಟ ,ಜಗಳ ,ಹುಸಿ ಕೋಪ ,ಪಾರ್ಟಿ ,treats ಇಷ್ಟೇ ಗೊತ್ತಿರೋ ಗ್ರೂಪ್ ಇದು ..

. ಅಪ್ಪಿ ತಪ್ಪಿ syllabus ವಿಷಯಗಳನ್ನ ಮಾತಾಡೋ ಜಾಯಮಾನದವರಲ್ಲ :)

ಕಾಲೇಜ್ ನ ಗಾಸಿಪ್ ಗಳು ಬೇಕೆಂದ್ರೆ ನಮ್ಮ ಪಕ್ಕಾ source ಗಳು ಈ ತರ್ಲೆಗಳೇ .... ಪಾರ್ಕಿಂಗ್ ಪ್ಲೇಸ್ನಲ್ಲಿ ವೀಲಿಂಗ್ ಮಾಡ್ತಾ ಜಗತ್ತಿನ ವಿಷಯಗಳನ್ನೆಲ್ಲಾ ಒಮ್ಮೆ ಸುತ್ತಿ ಬರ್ತಾರೆ .... ಬಹುಷಃ ಕಾಲೇಜ್ ಗಿಂತ ಹೆಚ್ಚಾಗಿ ಇವರ ಕ್ಲಾಸೆಸ್ ಆಗೋದು ಕ್ಯಾಂಟೀನಲ್ಲಿ ಅನ್ನೋದೂ ಜಗತ್ತಿಗೇ ಗೊತ್ತಿರೋ ಸತ್ಯ ಬಿಡಿ :)

ಇವರೊಟ್ಟಿಗೆ ಮಾಡಿದ ಜಗಳಗಳೆಷ್ಟೋ .... ಮಾಡಿದ ಪಾರ್ಟಿ ಗಳಿಗೆ ಲೆಕ್ಕಾನೆ ಇಲ್ಲ .... ಇವರ ಮನೆಯಲ್ಲಿ ನಡಿಯೋ functions ಗಳು ನಮ್ಮ ಮನೆಯಲ್ಲಿ ನಡೆದಂತೆಯೇ ಅನಿಸೋದು ..... ಮನೆಯಲ್ಲಿ ಅಮ್ಮ ಮಾಡಿಟ್ಟ ಸ್ವೀಟ್ಸ್ ಗಳನ್ನ ನನ್ಗಿಂತ ಜಾಸ್ತಿ ಇವ್ರೆ ಖಾಲಿ ಮಾಡೋದು ....

 ಇಷ್ಟೇ ಆತ್ಮೀಯತೆ ,ಸ್ನೇಹ ನಮ್ಮ ನಡುವೆ ಇರೋದು !!

ಟ್ರೆಕ್ಕಿಂಗ್  ಅಂತ ಹೋಗೋವಾಗ ಒತ್ತಾಯ ಮಾಡೋ ಮೊದಲ ಕಾರಣ ಏನಂದ್ರೆ ಆಂಟಿ ,ಅಂಕಲ್ ಹತ್ರ ಪರ್ಮಿಷನ್ ಕೇಳೋಕೆ ನಾವ್ ಬೇಕು .... ಇಲ್ಲ ಅಂದ್ರೆ ಈ ಕೋತಿ ಹುಡುಗರನ್ನ ಮಾತ್ರಾ ಕಳ್ಸೋಕೆ ಒಪ್ಪಲ್ಲ ಅವ್ರು ... ಪರ್ಮಿಷನ್ ಸಿಗೋದೇ ತಡ ನಮ್ಮನ್ನ ಹಿಂದೆ ಬಿಟ್ಟು ಹೋಗೋದೊಂದೇ ಗೊತ್ತು ಅಲ್ವಾ ನಿಮ್ಗೆ ?:( ಇರ್ಲಿ ಇರ್ಲಿ ನಮ್ಗೂ ಕಾಲ ಬರುತ್ತೆ

ನಿಮ್ಮಲ್ಲಿ ಬತ್ತಿಯ ಹೊಗೆಯಿದೆ ...
. brandnes froster ಅಂತ ನೀವೇ ಇಟ್ಟುಕೊಂಡ ತೀರ್ಥದ ಸ್ವಾದವಿದೆ :)..
.ಜಿಮ್ ಗೆ ಹೋಗಿ six pack ತೋರ್ಸೋ craze ಇದೆ ....
  ಕಿಲೋ ಮೀಟರ್ ದೂರ ಇದ್ರೂ ತಾಕೋ perfume ನಾ smell ಇದೆ ....
ಲೋ ಮಗಾ ಅಲ್ನೋಡೋ ಫಿಗರ್ ಅನ್ನೋ ಭಂಡತನವಿದೆ ...
 spikes ,ಲೋವೆಸ್ಟ್ ಹಾಕ್ಕೊಂಡು VIP ಬ್ರಾಂಡ್ ತೋರ್ಸೋ ಹುಚ್ಚಿದೆ 
ವೀಲಿಂಗ್ ಅಂತ ಮಾಡೋ ನೂರಾರು ಸ್ಕೋಪ್ ಗಳಿವೆ :)....

 ಹುಡ್ಗೀರ ಒಂದೇ ಸ್ಮೈಲ್ ಗೆ ಕಳೆದೊಗೋ ಮುಗ್ಧ ಮನಸ್ಸೂ ಇದೆ ಕಣ್ರೋ ನಿಮ್ಗೆ :)

 impress ಮಾಡೋಕೆ ಇಷ್ಟೊಂದು ಕಷ್ಟ ಪಡ್ಬೇಕಲ್ಲೋ ನೀವು .... ಪಾಪ ಹುಡ್ಗರು :)

.... ಹುಳುಕನ್ನೋ ಶಬ್ದ ನಿಮ್ಮ ಡಿಕ್ಷನರಿ ನಲ್ಲೇ ಇಲ್ಲ .... ಸ್ನೇಹಕ್ಕೆ ಜೀವ ಕೊಡ್ತೀರ .... ಹಾಗೇನೆ ದ್ವೇಷಕ್ಕೆ ಜೀವನ ಪೂರ್ತಿ ದ್ವೇಷ ಮಾಡ್ತೀರ .... ಗೆಳೆಯನ ಜಗಳ ಬಿಡಿಸೋಕೆ ಹೋಗಿ ಕೆಟ್ಟವರಾಗ್ತೀರ ... ನಿಮ್ಮ propose reject ಮಾಡಿದ್ದ ಹುಡುಗಿ ಬಗ್ಗೇನೂ ಅಷ್ಟೊಂದು ತಲೆ ಕೆಡಿಸಿಕೊಂಡಿರಲ್ಲ ... ಆದರೆ ಪ್ರೀತಿಯಲ್ಲಿ ಸೋತು ಬಂದ ಗೆಳತಿಗೆ ಮಾತ್ರ ತುಂಬಾ ಫೀಲ್ ಮಾಡ್ಕೊಂತೀರ !

ಅಪ್ಪಟ ಪೋಲಿಗಳಾದ್ರು ನಿಮ್ಮೊಳಗಿರೋ ಪರಿಶುದ್ದ ಮನಸ್ಸು ,ಜಗತ್ತನ್ನೇ ಗೆಲ್ಲೋ ಉತ್ಸಾಹ ,ತೋರಿಕೆಯ ಮುಖವಾಡವಿರದ ಪ್ರೀತಿ ,ಹುಡುಗರೆಂಬ ಅಹಂ ,ತುಂಟತನ ,ಎಲ್ಲವೂ ನಂಗಿಷ್ಟ :)

 ಇವಾಗ್ಲೂ ನಗು ಬರುತ್ತೆ .... ರೋಡ್ ನಲ್ಲಿ ಸುಮ್ ಸುಮ್ನೆ ಕೈ ಹಿಡ್ಕೊಳೋ ನಿಮ್ಮ ಪಾಡನ್ನ ನೋಡಿ .... ಯಾಕೋ ಗೂಬೆ ಅಂದ್ರೆ ಎದಿರು ಬರ್ತಿರೋ ಹುಡ್ಗೀನಾ ತೋರ್ಸಿ ಅವಳ್ಗೆ ಪ್ರೊಪೋಸ್ ಮಾಡಿದ್ದೆ .... ಬಟ್ :(
ಈಗ ''ನಿನಗಿಂತ ಚೆನ್ನಾಗಿರೋ ಹುಡ್ಗಿ ಇದಾಳೆ'' ಅಂತ ತೋರ್ಸೊಕೆ :)ಅಂತ ನೈಸ್ ಹೊಡಿತೀರ .... ನಾವೇನೋ ಪಾಪ ಕೊಡ್ಲಿ ಸ್ಕೋಪ್ ಅಂತ ಸುಮ್ನಾಗ್ತೀವಿ :)
ಕೋತಿ ಕಣ್ರೋ ನೀವು .... ನಿಮಗೆ ಬೇಕಾದಾಗ ಬೇಕಾದ ಪಟ್ಟ ಕೊಟ್ಬಿಡ್ತೀರ ....

 ಕುಶಿಯಾದಾಗ ಪಾರ್ಟಿ ಮಿಡ್ ನೈಟ್ ತನಕ !! ,ಬೇಜಾರಾದಾಗ ಫಿಲೋಸೋಪಿ ಹೇಳ್ತೀರ ,ನೋವಾದಾಗ ಅಣ್ಣನಂತೆ ಸಮಾಧಾನ ಮಾಡ್ತೀರ .... ಮಾರ್ಕ್ಸ್ ಕಡ್ಮೆ ಬಂದ ಬೇಜಾರಲ್ಲಿ ನಾವಿದ್ರೆ .... ಪಾಸ್ ಆಗಿದ್ದಕ್ಕೆ ಪಾರ್ಟಿ ಕೊಡ್ಸ್ತೀವಿ ಬನ್ನಿ ಅಂತ ಕರೀತೀರ .... :)

ಎಲ್ಲವನ್ನೂ ಕೂಲ್ ಆಗಿ ತಗೊಳೋ ನಿಮ್ಮ ಈ ಸ್ವಭಾವಾನೇ ನಂಗೆ ತುಂಬಾ ಇಷ್ಟ ಆಗೋದು 


ಪ್ರತಿ valentince ಡೇ ದಿನ propose ಮಾಡ್ಬಿಟ್ಟು ಹತ್ತು ವರ್ಷದಿಂದ ಹೇಳ್ತಿದೀವಿ ಈ ಬಾರಿ ಆದ್ರು ಒಪ್ಗೊಳೆ ಅಂತ ರೆಗಿಸ್ತಾರೆ .... ಪ್ರೀತಿ ಬಗ್ಗೆ ದಿನ ಪೂರ್ತಿ ಮಾತಾಡ್ತೀವಿ ಬಿಟ್ರೆ ಯಾರೊಬ್ರು ಅದರ ತಂಟೆಗೆ ಹೋಗಲ್ಲ .... ನಮ್ಮ ನಡುವೆ ಇರೋದು ಶುದ್ದ ಸ್ವಚ್ಛ ಸ್ನೇಹ ...

. ಒಂದಷ್ಟು ತಮಾಷೆ ,non stop ಮಸ್ತಿ ,ಜಾಸ್ತಿ ಅನ್ಸೋ ಅಷ್ಟು ಕೀಟಲೆ ,ಹೆಚ್ಚಾಗೋ ಆಟ ,ತುಂಬಾ ಕಡ್ಮೆ ಆಗೋ ಪಾಠ ,ಕ್ಲಾಸ್ ನಲ್ಲಿ ಮಾಡೋ ತರ್ಲೆ ,ಕಿಲಾಡಿಗಳು ..... 

ನಿಮ್ಮ ಈ ಹೊಸ ಹೊಸ ತುಂಟಾಟಗಳಿಗೆ ನನ್ನದೊಂದು ದೊಡ್ಡ ಹಾ ಹಾ :)

ಕಾಲೆಸ್ತ್ರೋಲ್ (ಕೊಬ್ಬು )ಕಡ್ಮೆ ಮಾಡ್ಕೊಂಡು  ಮಾತಾಡಿ ,ಮತ್ತದೇ ಎವರ್ ಮಸ್ತಿ ಯ ಮನೆಯಲ್ಲಿಯೇ  ಅಪ್ಪ ಅಮ್ಮನೊಟ್ಟಿಗೆ 
ಸಿಟ್ಟು ಪ್ರದರ್ಶನ ಮಾಡುತ್ತಾ ,roaming ಮಾಡ್ತಾ ಇರೋ unlimited ಖುಷಿಯ ಲೈಫ್ ಗೆ ಒಮ್ಮೆ ಹೋಗಿ ಬರೋಣ ಕಣ್ರೋ ... ಪ್ಲೀಸ್

 ಸ್ನೇಹಿತರ ದೊಡ್ಡ ಗುಂಪನ್ನೊಮ್ಮೆ ನೆನಪಿಸಿಕೊಂಡು ...
. ಭವಿಷ್ಯದೆಡೆಗೆ ಮುಖಮಾಡಿ ಎಲ್ಲರೂ ಚದುರಿ ಹೋಗಿ  ಆರೆಂಟು ತಿಂಗಳುಗಳೇ ಆಯ್ತು ....
 ಆ ದಿನಗಳನ್ನೊಮ್ಮೆ ನೆನಪಿಸಿಕೊಂಡು ....

ಕಳೆದ colourfull ದಿನಗಳ ನೆನಪಿನೊಟ್ಟಿಗೆ ....
ಎಲ್ಲದಕ್ಕೂ ಖುಷಿಸೋ ಗೆಳೆಯರಿಗಾಗಿ ....
ಪ್ರೀತಿಯಿಂದ ....

Friday, March 8, 2013

ಮತ್ತೆ ಬಂದಿದೆ ಮಹಿಳೆಗೊಂದು ದಿನ !!

ಹಾಗೆ ನೋಡಿದ್ರೆ ಎಲ್ಲಾ ದಿನವೂ ಮಹಿಳೆಯರ ದಿನವೇ ....
 ಬೆಳಿಗ್ಗೆ ಎದ್ದು ಬಾಗಿಲಿಗೆ ನೀರು ಬಿಟ್ಟು  ರಂಗೋಲಿ ಹಾಕೋದ್ರಿಂದ ಶುರು ಆಗಿ ರಾತ್ರಿ ಅರೆ ಊಟ ಮಾಡಿ ಮಗುವನ್ನು ಮಲಗಿಸಲು ಹೋಗೋ ತನಕ ಅದು ಅವಳಿಗೇ ಮೀಸಲಾದ ದಿನ ... ಅವಳದ್ದೇ  ದಿನಗಳೇ...

 ಬಿಡುವಿಲ್ಲದ ದಿನಚರಿ ....

ಕೆಲವೊಂದಿಷ್ಟು ಕನಸುಗಳು ... ಕಣ್ಣ ಮುಂದಿನ ಗುರಿ .... ಹೆಗಲ ಮೇಲೆ ಬೆಟ್ಟದಷ್ಟು ಜವಾಬ್ದಾರಿಗಳು ... ಅತ್ತೆ ಮಾವಂದಿರ ಮೇಲಿನ ಕಾಳಜಿ ,ಅಪ್ಪ ಅಮ್ಮನ ಮರೆಯಲಾರದ ವಾತ್ಸಲ್ಯ ,ಮಮತೆಯ ಮಡಿಲಿನ ಸಾರ್ಥಕ್ಯ ... ಸದಾ ನಗುವಿನ ಮುಖ :)
ಬ್ಯುಸಿ ಆಗಿರುವ ಈ ಮಹಿಳೆ ಯಾವ ಪ್ರಧಾನಿಗೂ ಕಮ್ಮಿ ಇಲ್ಲ ...
ತನ್ನ ತನಗಳನ್ನ ಸಂಭಂದಿಗಳಿಗಾಗಿ ಮೀಸಲಿಡೋ ಏಕೈಕ ವ್ಯಕ್ತಿ ಅವಳು ...
ಜಾರುವ ಕಣ್ಣ ಹನಿಗಳನ್ನೋರೆಸಿಕೊಳ್ಳುತ್ತಾ ಬಾಲಿಶ ನಗುವನ್ನು ಸೂಸೋ ನಿಷ್ಕಲ್ಮಶ ವ್ಯಕ್ತಿತ್ವ ...
ಸದಾ ಹಸನ್ಮುಖಿ ....

ಬಾಲ್ಯದಲ್ಲಿ ಅಪ್ಪನ ಮುದ್ದಿನ ಮಗಳು ,ಬೆಳೆಯುತ್ತಾ ಸಮಾಜ ದಿಟ್ಟಿಸೋ ಹುಡುಗಿ ,ಕೆಲವೊಂದಿಷ್ಟು ಮಾತುಗಳನ್ನು ಎದುರಿಸಿಯೂ ಒಳ್ಳೆಯ ಕೆಲಸವನ್ನು ಹಿಡಿಯೋ ಪ್ರೌಡೆ .... ನಂತರ ಮದುವೆಯಾಗೊ ಹುಡುಗನ ಮೇಲೆ ಹರಿಯೋ ಪ್ರೀತಿ ... ಅತ್ತೆ ಮಾವಂದಿರ ಮುದ್ದಿನ ಸೊಸೆ ... ಅಪ್ಪ ಅಮ್ಮನ ಕಣ್ಮಣಿ .... ಕೆಲವೊಂದಿಷ್ಟು ಜವಾಬ್ದಾರಿಗಳು ....ಕೆಲಸಕ್ಕೆಂದು ಓಡೋ ಧಾವಂತ ... ಅಮ್ಮನಾಗೋ ಖುಷಿ ...
 ತನ್ನದೇ ಅದ ಹೊಸ ಪ್ರಪಂಚದ ರಾಣಿ ....ಪ್ರಧಾನಿಗಿಂತಲೂ ದೊಡ್ಡ ಪಟ್ಟ ನಿನ್ನದು

 ಎಲ್ಲರನ್ನೂ ಎಲ್ಲವನ್ನೂ ನಗು ನಗುತಾ ನಿಭಾಯಿಸೋ ನಿನ್ನೀ ತಾಳ್ಮೆಗೆ ನನ್ನದೊಂದು ನಮನ ಗೆಳತಿ ...

ಓ ಕ್ಷಮಯಾ ಧರಿತ್ರಿ ,

ಪ್ರೀತಿ ಎಂದರೆ ನೀ ....
ಮಮತೆಯ ಪ್ರತಿರೂಪ ನೀ ...
ಧನ್ಯತೆಯ ಭಾವ ನೀ ...
ಮಾತು -ಧಾತುವಿನ ಸಮ್ಮಿಲನ ನೀ ...
ನಿನ್ನೀ ಸುಸಂಸ್ಕೃತ ಬದುಕಿಗೆ ,
ಗೌರವದ ಜೀವನ ಪ್ರೀತಿಗೊಂದು ನಮಸ್ಕಾರ ...

ಹೀಗೆಯೇ ಎಲ್ಲರನ್ನು ಪ್ರೀತಿಸೋ ನಿನ್ನ ಗುಣ ಸಮಾಜಕ್ಕೆ ಮಾದರಿಯಾಗಲಿ .... ಎಲ್ಲರೂ ನಮ್ಮವರೇ ತಾನೇ ... ಆದರಿಸೋ ಗೌರವಿಸೋ 'ನೀನು ನನ್ನಮ್ಮ ....
 ನನ್ನ ಪ್ರೀತಿಯ ಅಕ್ಕ ....
 ನಗುವನ್ನು ಹಂಚಿಕೊಳ್ಳೋ ಆತ್ಮೇಯೆ ....
 ದುಃಖವನ್ನೂ ನಗುವಾಗಿ ಮಾರ್ಪಡಿಸೋ ಗೆಳತಿ ...
. ಶುದ್ಧ ತರಲೆ ಮಾಡೋ ತಂಗಿ .
.ಮುಗ್ಧ ಮನಸ್ಸಿನ ಸ್ವಚ್ಚಂದ ಕೂಸು ..
 ಸಮಾಜದ ಹುಳುಕುಗಳನ್ನ ನಾಶ ಮಾಡೋ ಶಕ್ತಿ ಉಳ್ಳ ಜಗದ್ಮಾತೆ ....

 ನೀ ಒಬ್ಬ ಹೆಣ್ಣು ....

 ಹೆಮ್ಮೆ ಪಡು ಗೆಳತಿ ನೀ ಹೆಣ್ಣೆಂದು ....
ನಿನ್ನ ಸಮಾಜ ನಿಂತಿರೋದು ನಿನ್ನ ಮೇಲೆ ...


ಮಹಿಳೆ  .... ಪ್ರೀತಿ .... ಒಲುಮೆ .... ಕರುಣೆ ... ಕ್ಷಮೆ ....
ಎಲ್ಲದ್ದಕ್ಕೂ ಅರ್ಥ   ಒಂದೇ .... ಹೆಣ್ಣು :)

(on the onset of world women's day ,here is the dedication for all proud and happy womens:)...lets respect her feelings....lets feel her thoughts....)

(

ಪಂಜುವಿನಲ್ಲಿ ನನ್ನದೊಂದು ಪುಟ್ಟ ಲೇಖನ ....... ಪಂಜು ಬಳಗಕ್ಕೆ ಧನ್ಯವಾದ ....
ನಿಮ್ಮೀ ಪ್ರೋತ್ಸಾಹಕ್ಕೆ ನಾ ಆಭಾರಿ
http://www.panjumagazine.com/?p=1305)

Saturday, March 2, 2013

ಪೆನಾಲ್ಟಿ


ಅವಳದ್ದು ಮಧುರ ಪ್ರೀತಿ ... ಬಹುಷಃ ಅವನದ್ದು ಬಾಲಿಶ ಪ್ರೀತಿಯಾಗಿದ್ದೀತು !ಅಥವಾ ಆಕೆ ನಾಮಕರಣ ಮಾಡಿಕೊಂಡಿದ್ದ "ಪ್ರೀತಿ"ಅದಾಗಿರದೆ ಇದ್ದೀತು ...

 ಅವಳು ಬದುಕಿನ ಬಗೆಗೆ ತೀರಾ ನಿರೀಕ್ಷೆ ಇಟ್ಟು ಕೊಂಡವಳು .. ಅವನು ಎಲ್ಲವನ್ನೂ ಫೆದರ್ ಲೈಟ್ ಎಂದು ಹೇಳೋನು ... ಅವಳದ್ದು ಸಾದಾ ಸೀದಾ ಬದುಕು ... ಅವನು 'royal ಲೈಫ್ 'ಲೀಡ್ ಮಾಡೋನು ..

 ಚಿಕ್ಕ ಚಿಕ್ಕ ಖುಶಿಗಳನ್ನ ಅನುಭವಿಸೋ ಮನವಿದು ... ಆಕಾಶವನ್ನೇ ಕೈಗಿತ್ತರೂ ಕುಶಿ ಪಡದ ಮನ ಅದು .. !!

ಅದೇಕೋ ತುಂಬಾ ಇಷ್ಟವಾಗಿದ್ದ ಒಲವು  ... ಅವಳೇ ತನ್ನೊಲವ ನಿವೇದನೆಯನ್ನೂ ಮಾಡಿಕೊಂಡಿದ್ದಳು (ಅದು ಪ್ರೀತಿ ಎಂದು ಖಾತ್ರಿಯಾದ ಮೇಲೇ )... ಅವನೂ ಪ್ರೀತಿಯ ಸಮ್ಮತಿಯನ್ನೆ ನೀಡಿದ್ದ ''ಇಷ್ಟು ದಿನ ಬೇಕಾಯ್ತೇನೆ ಹುಡುಗಿ'' ಎಂದು ತಲೆಗೊಂದು ಮೊಟಕಿ ...

ಅವರಿಬ್ಬರದ್ದು ಬರಿಯ ಸ್ನೇಹವಲ್ಲ ಎಂದು ನಂಗೂ ಗೊತ್ತಿತ್ತು ... ಹರೆಯದ ಪ್ರೀತಿ ,ಪ್ರೇಮವನ್ನು ಕಡಾಖಂಡಿತವಾಗಿ ನಿರಾಕರಿಸೋ ಅವಳು ಅದ್ ಹೇಗೆ ಅವನ ಪ್ರೀತಿಗೆ ಸೋತು ಶರಣಾದಳೋ ಕಾಣೆ  !...
ಪ್ರೀತಿಪರವಶೆಯಲ್ಲಿ ,ಅವನ ಸಾಮಿಪ್ಯದಲ್ಲಿ ನಿಜಕ್ಕೊ ಖುಷಿಪಡುತ್ತಿದ್ದಳು ... ಮಾತೇ ಆಡದೇ ಮೌನದ ಚಿಪ್ಪಾಗಿದ್ದ ಅವಳು ಮಾತಾಡೋದನ್ನ ಕಲಿತಿದ್ದಳು ... ನಗೋದನ್ನ ಕಲಿತಿದ್ದಳು (ಈಗ ಅಳುವಿನಲ್ಲಿಯೂ! )... ಅವಳ ಈ ಖುಷಿಗಳ ರೂವಾರಿ ಅವನೆಂಬುದು ತಿಳಿದಿತ್ತು ..!ಕೈ ಹಿಡಿದು ಈ ಪುಟ್ಟ ಕೈ ನಂದೇ ಇದನ್ಯಾವತ್ತೂ ಬಿಡೋ ಪ್ರಶ್ನೆ ಇಲ್ಲ ಎಂದು ಅವನೆದೆಗೆ ಅವಳ ಕೈ ಇಟ್ಟು ಹೇಳಿದ್ದ ಹುಡುಗ ಅವನು ...

ಈಚೆಗೆ ಅವನಿಗಿಷ್ಟವಾಗದ ಅವಳ ಇಷ್ಟಗಳು ಅವಳಿಗೂ ಇಷ್ಟವಾಗುತ್ತಿರಲಿಲ್ಲ !ಇಷ್ಟಗಳಲ್ಲಿ ಬದಲಾವಣೆಯಾಗಿತ್ತು ... ಅವನ ಹಟಕ್ಕೆ ಅದು ಅನಿವಾರ್ಯವಾಗಿತ್ತು .. ಯಾವಾಗಲೂ ಸಿಂಪಲ್ ಇಷ್ಟ ಪಡೋ ಅವಳು ಇವನ ಸ್ಪೈಕ್ ,ಲೋವೆಸ್ಟ್ ಗಳನ್ನ ಇಷ್ಟ ಪಡೋಕೆ ಶುರು ಮಾಡಿದ್ದಳು !ನನ್ನ ಹುಡುಗ ಹೇಗಿರಬೇಕೆಂದು ಮೊದಲು ಹೇಳಿದ್ದ ಅವಳ ಈ ಹುಡುಗ dead opposit !!...

 ಅದರೂ ಅವಳ ಪ್ರೀತಿ ಅದು .... ಮಧುರ ಒಲವು

ಮಾತಿನಲ್ಲೇ ಸದಾ ಮುಳುಗಿರುತಿದ್ದ ನನಗೆ ಅವಳ ಗೆಳೆತನ ಆದದ್ದು ಹೇಗೆ ಎಂಬುದು ನನಗಿಂದೂ ತಿಳಿದಿಲ್ಲ ... ನಮ್ಮ ತರಲೆಗಳಿಗೆಲ್ಲ ಅವಳ ಮಂದಹಾಸವನ್ನು ಬಿಟ್ಟು ಬೇರೇನನ್ನೂ ಎದುರ ನೋಡೋ ಹಾಗಿರಲಿಲ್ಲ ... ಅಷ್ಟು ಸೌಮ್ಯ ಅವಳು ... ಎಲ್ಲರನ್ನೂ ಪ್ರೀತಿ ಮಾಡೋ ,ಇಷ್ಟ ಪಡೋ ಅವಳಿಗೆ ಅವನೂ ತುಂಬಾನೇ ಇಷ್ಟವಾಗಿದ್ದ ..

ಅವನ ಪ್ರೀತಿ ,ಆತ್ಮೀಯತೆಗೆ ಸೋತಿದ್ದಳು ... ಪ್ರೀತಿಯ ಸೆಳೆತಕ್ಕೆ ಅದಾಗಲೇ ಸಿಲುಕಿದ್ದಳು ... ಅವನೊಟ್ಟಿಗೆ ಈಜಿ ದಡ ಸೇರುವ ಭರವಸೆಯೊಂದಿಗೆ....  .ಆದರೆ... ?? ..

 ಮೊದಲ ಒಲವು ,ಮೊದಲ ಭರವಸೆ ,ತನ್ಮಯಳಾಗಿ ನೋಡಿದ್ದ ಅವನ ಮುದ್ದು ಮುಖ ... ಪ್ರೀತಿಯ ಮೊದಲ ಸಲುಗೆಯ ಸ್ಮೃತಿ ಮರೆಯೋಕೂ ಮುಂಚೆನೇ ಆ ಪ್ರೀತಿ ಮುರಿದು ಬಿದ್ದಿತ್ತು ... ಅವಳ ಮುಗ್ದ ಮನವೂ ಮಗುಚಿ ಬಿದ್ದಿತ್ತು .. !!!

. ಒಲವಿನ ಹುಡುಗ ಅದ್ಯಾಕೋ ಮುನಿಸಿಕೊಂಡಿದ್ದ ...

 ನೀ ನನ್ನ ಪ್ರೀತಿ ಅಲ್ಲವೆಂದು ಮುಖಕ್ಕೆ ಹೊಡೆದಂತೆ ಹೇಳಿದ್ದ ...ಅವಳ ಮುಗ್ದ ಪ್ರೀತಿಗೆ 'ಪಾಪು ಕಣೆ ನೀನು ... ನಿನ್ನನ್ನ ಇಷ್ಟ ಪಡ್ಬಾರ್ದಿತ್ತು ನಾನು ... ನನ್ನ ಕನಸಿನ ಹುಡುಗಿ ನೀನಲ್ಲ 'ಎಂದು ಕಾರಣ ಬೇರೆ  ಹೇಳಿದ್ದ !!!ಅವನ ಒಲವು ಕವಲೊಡೆದಿದ್ದು ನಿಜವಾಗಿತ್ತು ....  ಪ್ರೀತಿಯ ನವಿರು ಭಾವಗಳನ್ನ ಪ್ರತಿಫಲಿಸಬೇಕಿದ್ದ ಅವನ ಕಂಗಳಲ್ಲಿ ದಿವ್ಯ ನಿರ್ಲಕ್ಷ ಮಾತ್ರ ಕಾಣುತ್ತಿತ್ತು ...
ಹಠ ಹಿಡಿದು ಪಡೆಯೋ ಪ್ರೀತಿಗೆ ಅರ್ಥವಿಲ್ಲವೆಂಬುದು ಅವಳಿಗೆ ಗೊತ್ತು ...

 ನಗುವುದನ್ನು ಮಾತನ್ನು ಕಲಿಸಿ ಈಗ ನನ್ನ ಗೆಳತಿಯನ್ನ ಮೂಕಿಯನ್ನಾಗಿ ಮಾಡಿ ,ನಗುವನ್ನೇ ಮರೆಸಿ ಹೋದ ನಿನ್ನೆಡೆಗೆ ನನ್ನ ಬೇಸರವಿದೆ ಗೆಳೆಯ ...

ಅವಳ ಮನಸಿನ ಮಧುರ ಭಾವಗಳೊಂದಿಗೆ  ನಿನ್ನ ಭಾವನೆಗಳನ್ನ ಸೇರಿಸಲೇ ಬಾರದಿತ್ತು ನೀನು ... ತಪ್ಪು ಯಾರದ್ದೋ ನಾ ಕಾಣೆ ... ಮನ ಮುರಿದಿದ್ದು ಮಾತ್ರ  ಸತ್ಯ ... ಮೊದಲೇ ಪ್ರೀತಿಯೆಡೆಗೆ ತಿರಸ್ಕಾರವಿದ್ದ ಅವಳಿಗೆ ಇನ್ನು ಪ್ರೀತಿಯೆಡೆಗೆ ಅಸಹ್ಯ ಮೂಡಿದ್ರೆ ಅದಕ್ಕೆ ಕಾರಣ ನೀನಾಗ್ತೀಯ ಅಂತ ಹೇಳಬಲ್ಲೆ ...


ಅವಳ ಪ್ರೀತಿ ನೀನು ಕಣೋ ... ಭಾವನೆಗಳೊಂದಿಗೆ ಆಟ ಆಡದಿರು ....

ವರ್ಷದ ಮೊದಲ ಮಳೆಯಲ್ಲಿ ಯಾವಾಗಲೂ ಕುಣಿದು ಖುಶಿಸೋ ಗೆಳತಿ ಇವತ್ತು ಮಳೆಯಲ್ಲಿ ಸುಮ್ಮನೆ ಹನಿಗಳಿಗೆ ಮುಖವೊಡ್ಡಿ ನಿಂತಿದ್ದಾಳೆ .... ಗೆಳೆಯನ ನೆನಪಿಗೊಂದು ಅಶ್ರುತರ್ಪಣ ಬಿಟ್ಟು ಬರಲಿ ಎಂದು ನಾನೂ ಸುಮ್ಮನಿದ್ದೆ ...

ಸಾಧ್ಯ ಆದ್ರೆ ನನ್ನ ಹಳೆ ಗೆಳತಿಯನ್ನು ಮತ್ತೇ ನೋಡಬೇಕೆಂದಿದ್ದೆ ... ಆದರೆ  ಎಲ್ಲರನ್ನೂ ಇಷ್ಟ ಪಡುತ್ತಿದ್ದ ಅವಳು ಈಗ ಅವಳನ್ನೂ ಇಷ್ಟಪಡುತ್ತಿಲ್ಲ !!... ಕನಸಿನ ಪುಟ್ಟ ಮನೆ ಅಡಿಪಾಯ ಹಾಕೋಕೂ ಮೊದಲೇ ನಿಂತಿದ್ದು ...

 ಅವಳ ಪ್ರೀತಿಗೆ ಅವಳು ತೆತ್ತ ಪೆನಾಲ್ಟಿ ಮಾತ್ರ ಅವಳ ಪ್ರೀತಿಯ ಅವನು !!!

ಅವಳ ಗೊಂದಲದ ಪ್ರಶ್ನೆಗಳಿಗೆ ಉತ್ತರ ಕೊಡೊ ಪ್ರಯತ್ನ ಮಾಡದಿರು ಗೆಳೆಯ ... ಮತ್ತೇ ಒಲವಾದೀತು ನಿನಗೆ ... ಅಥವಾ ಬಿರುಕು ಬಿಟ್ಟ ಅವಳ ಹೃದಯ ಒಡೆದೀತು ಜೋಕೆ !!!

ಪ್ರೀತಿಯಲ್ಲಿ ಸೋತ  ಹುಡುಗಿಯಿಂದ.....ಕಣ್ಣೀರಿನ ರುವಾರಿಯಾದ ಅವಳ ಪ್ರೀತಿಯೆಡೆಗೆ ....


ನಿನ್ನೆಡೆಗೆ ಇನ್ನೂ ಒಲವಿದೆ .... ಯಾಕಂದ್ರೆ ನೀನವಳ ಮೊದಲ ಪ್ರೀತಿ ... (ಕೊನೆಯ ಪ್ರೀತಿ ಸಹ )
 

Thursday, February 14, 2013

ನನ್ನೆದೆಯ ಬೀದಿಯಲೀಗ ನಿನ್ನೊಲವ ಮೆರವಣಿಗೆ ....


ಪ್ರೀತಿಯ ಮುದ್ದು ...
                       'ಒಲವೇ ನೀನೊಲಿದಾ ಕ್ಷಣದಿಂದಲೇ ...'ಇವತ್ಯಾಕೋ ನಾನು ನಾನಾಗಿಲ್ಲ ಗೆಳೆಯ ..ಎಲ್ಲೋ ಇರಬೇಕಿದ್ದ ನೀನು ನನ್ನೊಳಗೆ ಬಂದುಬಿಟ್ಟಿದ್ದೀಯಾ ! ಅದ್ಯಾವ ಪರಿ ಮನದೊಳಗೆ ಇಳಿದ್ಯೋ ನಾ ಕಾಣೆ ..ಆದರೆ ನಾ ಮಾತ್ರ ನಿನ್ನಲ್ಲಿ ಕಳೆದೇ ಹೋಗಿದ್ದೇನೆ ..ಹುಡುಕ ಹೊರಟರೂ ಸಿಗುವುದಿಲ್ಲಾ ಬಿಡು ...
ಹೀಗೊಬ್ಬ ಗೆಳೆಯನ ನಿರೀಕ್ಷೆ ಮಾಡಿರಲಿಲ್ಲ ..ಅನಿರೀಕ್ಷಿತವಾಗಿ ಮಾತನಾಡಿದ್ದೆ ಅವತ್ತಿನ ಸೋನೇ ಮಳೆಯಲ್ಲಿ ..ಬೆಚ್ಚಗಿನ ಕೊಡೆ ಹಿಡಿದಿದ್ದೆ ತೊಯುತ್ತಿದ್ದ ಹುಡುಗಿಗೆ ..ಆತ್ಮೀಯನಾದೆ ..ಕಡೆಗೊಂದು ದಿನ ಮುದ್ದು ಮುದ್ದಾಗಿ propose ನೂ ಮಾಡಿದ್ದೆ ..

'whenever you look into my eyes ,i forgot everything..
you made me to think of you hundred times a day
yes,im here to confess my love
I want to feel the warmth of your hand in the evening breeze
Iwant to feel the rain drop slowly sliding from your face..
Tell me dear ..will you be mine forever?'

 ಕಳೆದ ಇದೇ ದಿನ ಸಮುದ್ರ ದಂಡೆಯಲ್ಲಿ ನಿಂತು ಮಂಡಿಯೂರಿ ಹೀಗೆ ಕೇಳಿದ್ದೆ ...ನನ್ನೊಲವು ,ಪ್ರೀತಿ ಎಲ್ಲವೂ ನೀನಾಗಿದ್ದೆ ...

ಹುಚ್ಚು ಕೋಡಿ  ಮನಸು ಅದು ಹದಿನಾರರ  ವಯಸು ..ಹದಿನಾರು ದಾಟಿ ಬದುಕು ಕಟ್ಟಿಕೊಂಡ ಮೇಲೂ ಹರೆಯದ ಪ್ರೀತಿಯ ಪ್ರವಾಹ ಹೀಗೆಯೇ ಇದೆ ..ಸಾಗರ ಸೇರುವ ನದಿಯಂತೆ ಈ ಮನಸ್ಸಿಗೆ ನಿನ್ನ ಸೇರುವ ತವಕ ..ನಿನ್ನ ಮಡಿಲಲ್ಲಿ ಮಗುವಾಗಿ ಜಗವ ಮರೆವ ಬಯಕೆ ..ಹೀಗೆ ಹತ್ತಾರು ಆಸೆ ..ನೂರೆಂಟು ಕನಸು ಕಣೋ .....ಅದೇನೂ  ಮೋಡಿ  ಮಾಡಿದ್ದೀಯೋ ನಾ ಕಾಣೆ  ..ಮಗಳ ಬಗ್ಗೆ ಕೇಳೋಕೂ ಮುಂಚೆ ನಿನ್ನ ಬಗ್ಗೆ ಕೇಳುತ್ತಾರೆ ಅಪ್ಪ ಅಮ್ಮ ..ಇದೊಂದು ಮಧುರ ಹೊಟ್ಟೆಕಿಚ್ಚು ನಿನ್ನ ಮೇಲೆ


        ಸಮುದ್ರ ತೀರದಲ್ಲಿ ಅಲೆಗಳಿಗೆ ಮುತ್ತಿಕ್ಕುತ್ತಾ ಕಂಡ ಕನಸುಗಳಿಗೆ ಲೆಕ್ಕಾನೆ ಇಲ್ಲ ..ಜೊತೆಯಾಗಿ ನಕ್ಕಿದ್ದೆಷ್ಟೋ ,ಕೂಡಿ  ಹರಟಿದ್ದೆಷ್ಟೋ ...ನನ್ನೀ ಹುಸಿಮುನಿಸಿಗೆ ನಿನ್ನ ಒಲವೇ ಉತ್ತರ .. ಅವತ್ತು ನೀ ಕಣ್ಣಲ್ಲಿ ಕಣ್ಣಿಟ್ಟು 'ಜೀವದ ಗೆಳತಿ ..ಜೀವನದ ಸಂಗಾತಿಯಾಗು ಬಾ ' ಎಂದು ಪ್ರೀತಿಯಿಂದ  ಆಮಂತ್ರಿಸಿದಾಗ ಸಣ್ಣಗೆ ಕಂಪಿಸಿದ್ದೆ .. ಪ್ರೀತಿ ನೀನು ಕಣೋ ..ನಿನ್ನ  ತೋಳಿನಲ್ಲಿ ಮಲಗಿ  ನಕ್ಷತ್ರ ಎಣಿಸುತ್ತಾ ನನ್ನ ಚಂದಿರ ನೀನು ಅಂದಿದ್ದು ..ಮತ್ತೆ  ಈ ರಾತ್ರಿಯ ನೀರವತೆ ನಿನ್ನ ಕನವರಿಕೆಯನ್ನ ಜಾಸ್ತಿ ಮಾಡಿದೆ ..ನನ್ನಿಂದ ಆರೆಂಟು ತಾಸಿನ  ದೂರ ಇರುವ ನಿನ್ನೊಲವಿಗೋ ಹೀಗೆಯೇ ಅನಿಸುತ್ತಿದೆ ಎಂದು ಗೊತ್ತು ಗೆಳೆಯಾ .. ನಿನ್ನೆಡೆಗಿನ ವ್ಯಾಮೋಹ ದಿನೇ ದಿನೇ ಪ್ರೀತಿಯ ಪರವಶೆಯಲ್ಲಿ ತೋಯುತ್ತಿದೆ ..ಮಲಗಬೇಕೆಂದು ಹಾಸಿಗೆ ಸೇರಿದವಳಿಗೆ ನಿದ್ದೆ ಮಾಡೋಕೂ ಬಿಡ್ತಿಲ್ಲಾ ನೀನು ..
ನೆನಪುಗಳ ಬೆಚ್ಚಗಿನ ಹಾಸಿಗೆಯಲ್ಲಿ ಮಲಗಿ ಮಧುರ ಕನಸ್ಸೊಂದನ್ನು ಕಾಣಬೇಕಿದೆ ...
ನಿನ್ನ ಬಿಸಿಯುಸಿರಿಗೆ ನನ್ನೀ ಮುಂಗುರುಳು ನಾಚಿ ನೀರಾದ ಭಾವ ..ಕೆಂಪಾದ ಕೆನ್ನೆಗೇನೋ ಹಿತವಾದ ಭಾವ ..ಗಲ್ಲದಂಚಿನ ಮಚ್ಚೆಯ ಸವರಿ ಮೆಲ್ಲಗೆ ಮುತ್ತಿಟ್ಟ ಭಾವ ...

ಅಂದು ನೀನಾಡಿದ ಈ ಪಿಸು ಮಾತಿಗೆ ಮತ್ತೆ ನಿದ್ದೆಗೆ ಜಾರಬೇಕೆಂದು ಅನಿಸುತ್ತಿದೆ ಗೆಳೆಯ ...

  ' ಕಣ್ಮುಚ್ಚು ನನ ಗೆಳತಿ 
                     ಕನಸಲ್ಲಿ ಬರುವೆ ...
     ನಿದ್ದೆಯಲೂ ನಾಚಿ ಕೆಂಪಾಗುವ ನಿನ ಮೊಗವಾ ಕಂಡು
                                  ನಾ ಜಗವಾ ಮರೆವೆ .....'

ನಿನ್ನ  ಪ್ರೀತಿಯನ್ನ ಪ್ರೀತಿಯಿಂದ  ಜತನ ಮಾಡುತ್ತಾಳೆ ಈ ನಿನ್ನ ಪ್ರೀತಿ ...
                                                        ಪ್ರೀತಿಯ ಭರವಸೆಯೊಂದಿಗೆ ...
                                                                                        ಪ್ರೀತಿಯ ನಿನ್ನವಳು ...