ಮಂಜು ಮುಸುಕಿದ ಹಾದಿಯಲಿ ಮತ್ತದೇ ಮೌನದ ಒಬ್ಬಂಟಿ ಪಯಣದ ಜೊತೆಗೆ ಕನಸಿನೂರಿನ ಮನದ ಭಾವದ ಸಂತೆಯ ಮಾತೊಂದ ಹೇಳಬಂದೆ ನಾ....ಕೊನೆಗೂ ನಿನಗೆ ಪೂರ್ತಿಯಾಗಿ ಸೋತು....
ಮುದ್ದು ಗೆಳೆಯಾ,
ಆಶ್ಚರ್ಯವಾದೀತು ನಿನಗೀ ಸಂಭೋದನೆ .ವರ್ಷಗಳ ಹಿಂದೆ ನೀ ಬಯಸಿದ್ದ ನಿನ್ನದೇ ಹುಡುಗಿಯ ಭಾವವಿದು ಕಣೋ .ಇಷ್ಟದ ವಿಷಯದ ಬಗೆಗೆ ಒಂದೇ ಒಂದು ಮಾತಾಡು ಸಾಕು ಅಂತ ಪರಿ ಪರಿಯಾಗಿ ಬಿಕ್ಕಿದ್ದ ನಿನ್ನ ಮನಕ್ಕೊಂದು ಮುಷ್ಕರದ ನಡುವೆಯೂ ಮೌನವ ಮಾತ್ರ ಬಿಟ್ಟು ಅತೀ ಕಷ್ಟದಿಂದ ನಿನ್ನಿಂದೆದ್ದು (ನಿನ್ನ ಬದುಕಿಂದ) ಬಂದ ಅದೇ ಮೌನದ ಗೆಳತಿಯ ಭಾವವಿದು.
ಆದರೆ ನಿಂಗಿವತ್ತಿಲ್ಲಿ ಇದ ಕೇಳೋ ಮನವಿಲ್ಲದೇ ಇದ್ದೀತು ! ಆದರೂ ಮೌನದ ಮಾತೊಂದು ಮುರಿದು ನಾ ಮಾತಾಡಬಂದೆ ಅದೆಷ್ಟೋ ದಿನಗಳ ನಂತರ ಮತ್ತದೇ ಮೌನದ ಅರಮನೆಗೆ .ಇವತ್ತೀ ಭಾವವ ಹೇಳೋಕೆ ಧೈರ್ಯ ಬಂದಿದ್ದು ಮಾತ್ರ ನಿನ್ನ ವರ್ಷದ ಹಿಂದಿದ್ದ ಅದೇ ಕಾಳಜಿ ,ಪ್ರೀತಿಯ ಕಂಗಳ ಮತ್ತಿವತ್ತು ನೋಡಿದ ಮೇಲೆ .
ಅದೆಷ್ಟು ಚಂದದ ಪ್ರೀತಿಯ ನಿವೇದನೆ ಮಾಡಿಕೊಂಡಿದ್ದೆ ..ನಿನ್ನದೇ ಕನಸುಗಳ,ನಿನ್ನ ಪುಟ್ಟ ಅರಮನೆಗೆ ಪ್ರೀತಿಯಿಂದ ಆಹ್ವಾನಿಸಿದ್ದ ಈ ಮುದ್ದು ರಾಜಕುಮಾರನ ಪ್ರೀತಿಯ ಅವತ್ತು ಒಪ್ಪಿಕೊಳ್ಳೋ ಮನಸು ,ಧೈರ್ಯ ಎರಡೂ ಇರಲಿಲ್ಲ ನಂಗೆ .ಗೋಗರೆದು ಕೇಳಿದ್ದ ಪ್ರೀತಿಯ ಚೂರನ್ನೂ ನಿನಗೆ ಕೊಡೋಕೆ ಇರದ ನನ್ನದೇ ಮನದ ಬಗೆಗೆ ನಂಗಿವತ್ತೂ ಬೇಜಾರಿದೆ .
ನಾ ಕಂಡ ಕನಸ ಬದುಕು ಎದುರುಗಿದೆ ಕಣೇ ..ಆದರೂ ನೀನಿಲ್ಲದ (ಸಿಗದ) ನೋವು ದಿನ ಕಾಡುತ್ತೆ ಅಂತ ತೀರಾ ಕೇಳದ ಸ್ವರದಲ್ಲಿ ಅವತ್ತಿದೇ ರಾತ್ರಿ ಬಿಕ್ಕಿದ್ದ ನಿನ್ನ ಧ್ವನಿಗೆ ಸ್ವಲ್ಪ ಮಟ್ಟಿಗೆ ಮನ ಕರಗಿದ್ದು ಸುಳ್ಳಲ್ಲ .ಆದರೆ ನಿನ್ನೆದುರು ನಾ ಸೋಲಲಾರೆ ಅನ್ನೋ ಹಠವೇ ಮನದ ಮಾತೊಂದ ಆಲಿಸೋಕೂ ಮುಂಚೆಯೇ ಆ ಸಣ್ಣ ಒಲವನ್ನ ತಳ್ಳಿಹಾಕಿತ್ತು .
ಚಂದದ ಬದುಕು,ಬಣ್ಣ ಬಣ್ಣದ ಕನಸುಗಳು,ಪ್ರೀತಿಸೋ ಮನೆ ಎಲ್ಲವುಗಳ ಮುಂದೆಯೂ ಎದ್ದು ಕಾಣೋದು ನಿನ್ನ ಮುಖ ಅಂತ ದಿನೇ ದಿನೇ ಭಾವುಕನಾಗಿ ನುಡಿಯೋ ನಿನಗೆಲ್ಲಿ ಪೂರ್ತಿಯಾಗಿ ಕಳೆದು ಹೋಗ್ತೀನೋ ಅನ್ನೋ ಭಯಕ್ಕೆ ಏನೋ ನಿನ್ನ ನಾ ಪೂರ್ತಿಯಾಗಿ ನಿರ್ಲಕ್ಷಿಸತೊಡಗಿದ್ದೆ .
"ನಿನ್ನ ಬಿಚ್ಚುನುಡಿಯಲ್ಲಿ ಕಂಡೆ
ವಾಸ್ತವಿಕತೆಯನ್ನಾ...
ನಿನ್ನ ಮುಗುಳ್ನಗೆಯಲ್ಲಿ ಕಂಡೆ
ಸಣ್ಣ ಪ್ರೀತಿಯ ಸೆಲೆಯನ್ನಾ ..."
ಹೀಗೇ ಏನೇನೋ ಸಾಲುಗಳ ಗೀಚಿಬಿಟ್ಟಿದ್ದೆಯಲ್ಲೋ ಹುಡುಗ ..ಮನದ ಭಾವಗಳ ಮುಚ್ಚಿಟ್ಟುಕೊಳ್ಳೋ ಶತ ಪ್ರಯತ್ನದಲ್ಲಿ ಸೋತೆ ಅನಿಸಿದಾಗಲೆಲ್ಲಾ ನಿನ್ನ ಮೇಲಿನ ನನ್ನ ಸಿಟ್ಟು ತಿರುಗೋದು ಮುಖದ ಮಂದಹಾಸದ ಕಡೆಗೆ ! ನಗು ಅನ್ನೋ ಪದವೇ ಮುಖದಲ್ಲಿ ಸುಳಿಯೋಕೆ ಬಿಟ್ಟಿರಲಿಲ್ಲ ! ಯಾಕೋ ಹುಡುಗ ನಿನ್ನನ್ನಷ್ಟು ದ್ವೇಷಿಸಬಂದೆ !
ನಾನೇ ಕಟ್ಟಿಕೊಂಡ ನನ್ನದೇ ಮನದ ಬೇಲಿಯ ದಾಟಿಯೂ ನೀ ಬಂದಿದ್ದೆ ನೋಡು ..ಅದೇ ಇದ್ದೀತು ಈ ತರದ ಭಯಂಕರ ದ್ವೇಷದ ಕಾರಣ
ಕೊನೆಗೊಮ್ಮೆ ಭಾವಗಳೇ ಇಲ್ಲದ ಹುಡುಗಿ ನೀ ಅಂತ ಧಿಕ್ಕರಿಸಿ ಎದ್ದು ಹೊರ ನಡೆದಿದ್ದೆ ನೀ ...
ಮನಸ್ಸಿನ ಮೇಲೆ ನಡೆದು ತೀರಾ ಬೇಕೆಂದಾದ ಹೊರ ಹೋಗಿದ್ದ ನಿನ್ನ ಮೇಲೆ ನಂಗಾಗಿದ್ದ ನಿರಾಸೆ ಅಷ್ಟಿಷ್ಟಲ್ಲ :( ಸ್ವಲ್ಪ ಸ್ವಲ್ಪವಾಗಿ ನಿನ್ನತ್ತ ವಾಲುತ್ತಿದ್ದ ಮನಕ್ಕೆ ಮೌನದ ಮುಖವಾಡ ಹಾಕಿ ಪಕ್ಕಕ್ಕೆ ಸರಿಸಿದ್ದೆ ಅಷ್ಟೇ ...ಅದೂ ಒಂದಿಷ್ಟು ಹೇಳಲಾಗದ ನನ್ನದೇ ಪರಿಸ್ಥಿತಿಗಳಿಗೆ ಕಟ್ಟುಬಿದ್ದು ...ಆದರಲ್ಲೊಂದು ದೊಡ್ಡ ಒಲವಿತ್ತು ಅನ್ನೋದ ನೀ ಅರ್ಥ ಮಾಡಿಕೊಳ್ಳೋಕೆ ಸೋತಿದ್ದೆ ...ಯಾವತ್ತೂ ಸೋಲದ ನಾನೂ ನಿನ್ನೆದುರು ಸೋಲಲೇ ಬಾರದೆಂಬ ಹಠದಲ್ಲಿ ಪೂರ್ತಿಯಾಗಿ ಸೋತು ಹೋಗಿದ್ದ ನೀ ಎದ್ದು ಹೋದ ಆ ದಿನ .
ನಿನ್ನ ಪ್ರೀತಿಯ ಅರಿವು ನಂಗಾಗಿದ್ದು ನೀ ಎದ್ದು ಹೋದ ಮೇಲೆ ...ದಿನವೂ ಮಾತಾಡೋ ಕೆ ನೀನಿದ್ದೆ....ನಾ ಮಾಡಿದ್ದ ಅದೆಷ್ಟೋ ಬೇಸರಗಳ ನಂತರವೂ ಮತ್ತದೇ ಮಧುರ ಭಾವಗಳ ಹೊತ್ತು ಮಾತಾಡೋಕೆ ಬರುತ್ತಿದೆಯಲ್ಲ ಅನ್ನೋದ ನೆನಸಿಕೊಂಡ್ರೆ ನಾ ಮಾಡಿದ್ದ ತಪ್ಪು ,ಬೇಸರಗಳ ಮುಜುಗರ ಕಾಡುತ್ತಿತ್ತು ..
ಆದರೂ ಮಾಡಿದ್ದ ಅದೆಷ್ಟೋ ಬೇಸರಗಳ ನಂತರವೂ ಇವತ್ತು ಎದುರು ಮಾತಾಡಬಂದೆ ನೋಡು ...attitude ಅಂದ್ರೆನೇ ನೀನು ಅಂತಿದ್ದ ಹುಡುಗ ಇಷ್ಟು ಬೇಸರಗಳ ನಂತರವೂ ನನ್ನಲ್ಲಿ ಮಾತಾಡ ಬಂದಿದ್ದಕ್ಕೊಂದು ಶರಣು ಕಣೋ ಗೆಳೆಯ.
ಆದರೆ ಇವತ್ತು ನಿನ್ನ ಕಂಗಳಲಿ ಪ್ರೀತಿಯ ಭಾವವೊಂದ ಹುಡುಕಿ ಸೋತೆ ನಾ ...ವರ್ಷಗಳ ಹಿಂದೆ ನಿನ್ನ ಬಿಟ್ಟು ಇನ್ನೇನೂ ಇರದಿದ್ದುದು ಇದೇ ಕಣ್ಣಲ್ಲೇ ಕಣೇ ಅಂತ ನಿನ್ನ ಪ್ರತಿನಿಧಿಸಿ ಅಣುಕಿಸಿತ್ತು ನಿನ್ನೀ ಕಂಗಳು ...
ಪ್ರೀತಿ ಕಂಗಳಲ್ಲಿ ದಿವ್ಯ ನಿರ್ಲಕ್ಷವೂ ಇರಲಿಲ್ಲವಲ್ಲೋ ಹುಡುಗ ! ಸ್ವಲ್ಪ ಸಮಾಧಾನವಾಗಿದ್ದು ಇಲ್ಲಿಯೇ .
ಮೌನದ ಭಾವವೊಂದ ಮನಬಿಚ್ಚಿ ಹೇಳೋಕೆ ಬಂದ ನಂಗೆ ನಿನ್ನ ಕಂಗಳಲ್ಲಿನ ತಟಸ್ಥ ಮೌನವ್ಯಾಕೋ ಸಹ್ಯವಾಗಲೇ ಇಲ್ಲ ..ನೀ ನನ್ನ ಕಣ್ಣಂಚ ಭಾವಗಳಿಗೆ ಸಂಭಂದಿಸಿದವನೇ ಅಲ್ಲ ಅನ್ನೋ ತರ ದೂರದ ತಿರುವು ನೋಡಿ ನಿನ್ನ ಮೌನ ಸಾಧಿಸಿದೆ .. ನಿನ್ನ ಮೌನ ಸಾಮ್ರಾಜ್ಯದ ಗೋಡೆಯ ಹಾರಿ ಬರೋ ಸಣ್ಣ ಪ್ರಯತ್ನ ಮಾಡದೇ ಹಾಗೆ ಕೈ ಕಟ್ಟಿ ಕುಳಿತುಬಿಟ್ಟೆ ..
ಇನ್ನೊಮ್ಮೆ ಪ್ರೀತಿಯ ನಿವೇದನೆ ಮಾಡಿಕೊಂಡು ಬಿಡೋ ..ಕಣ್ಮುಚ್ಚಿ ನಿನ್ನ ತೋಳಂಚ ಸೇರಿಬಿಟ್ಟೇನು ...
ನನ್ನ ಮೌನಕ್ಕೆ ನಿನ್ನ ಮೌನದ ಸಾಥ್ ಬೇಡ ಮುದ್ದು ...ಪರವಾನಿಗೆ ಪಡೆಯದೇ ಪ್ರೀತಿಯ ಹೇಳಿಕೊಂಡು ಈಗ ಎಲ್ಲವ ಮರೆತು ನಿನ್ನಷ್ಟಕ್ಕೆ ನೀನಿರೋ ತರ ಭಾವಗಳ ತೋರ್ಪಡದೇ ಇರಬಲ್ಲೆ ಅನ್ನೋ ಭ್ರಮೆಯ ಬಿಟ್ಟು ಬಿಡು ...ಯಾಕಂದ್ರೆ ನಿನ್ನ ನಾಜೂಕು ಭಾವಗಳೆ ನನ್ನ ಬದುಕ ಚಿತ್ತಾರವಾದೀತು...ನಿನ್ನ ಪ್ರೀತಿಗೆ ಅವಳ ಎರಡರಷ್ಟು ಹಠ ತೋರಿದ್ದ ಅದೇ ಹುಡುಗಿಯಾಗಿ ಮತ್ತೆ ಕೇಳ್ತೀನಿ ಕಣೋ ...ಮತ್ತೊಮ್ಮೆ ಹೇಳಿಬಿಡು " you are my world ".
ಆದರೂ ಇವತ್ತಿನ ನಿನ್ನ ಬಿರುನಡೆಯಲ್ಲಿ ಕಂಡೆ
ಧೃಡತೆಯ ನಾ..
ಈ ತಿರುವಲ್ಲಿ ಮೌನವ ಗೆಲ್ಲೋಕೆ ಹೋಗಿ ಬದುಕಿಗೆ ಬೆನ್ನು ಮಾಡಿ ಕೊನೆಗೂ ನನ್ನ ಸೋಲಿಸಿ ಹೋದ ನಿನ್ನನ್ನೇ ಇನ್ನೊಂದು ತಿರುವಿನಲ್ಲಿ ನಿರೀಕ್ಷಿಸುತ್ತಾ ....
ನಿನ್ನವಳು.











