Friday, June 21, 2013

ಪ್ರೀತಿ ಇಲ್ಲದ ಮೇಲೇ .....

ಪ್ರೀತಿಯ ಮುದ್ದು ,

ಬದುಕಿನ ಒಂದು ಹಂತವ ಹತ್ತಿ ಹಿಂತಿರುಗಿದಾಗ ತುಂಬಾ ಕಾಡಿದ್ದ ಸಂಗಾತಿ ನೆನಪಿದು .

ಬಾಳ ದೋಣಿಯಲ್ಲಿ ಅಂಬಿಗನ ಹುಡುಗಾಟದಲ್ಲಿದ್ದಾಗ ಸಿಕ್ಕ ಹುಡುಗ ನೀನು !

ಪ್ರೀತಿ ಪ್ರೇಮದ ಬಗೆಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿರದ ನನ್ನಲ್ಲಿ ಅದ್ಯಾಕೋ ಒಂಟಿತನದ ಭೂತ ಕಾಡ ಹತ್ತಿತ್ತು ...ಎಲ್ಲರಂತೆ ನಂಗೂ ಪ್ರೀತಿಸೋ ,ಮುದ್ದಿಸೋ ಮನವೊಂದು ಬೇಕನಿಸತೊಡಗಿತ್ತು ..

ಹುಚ್ಚು ಕನಸು ಕಾಣೋ ವಯಸಲ್ಲೇ ನೀ ನನಗೆ ಪರಿಚಯವಾಗಿದ್ದು ...ಗಂಟೆಗಟ್ಟಲೇ ಹರಟಿದ್ದು ..
ತುಂಬಾ ಕಾಲೆಯುತ್ತಿದ್ದ ಸ್ನೇಹಿತರ ಗುಂಪಲ್ಲಿ ನೀ ಯಾಕೋ ತೀರಾ ಅಪರೂಪನಾಗಿ ಕಂಡೆ ನಂಗೆ . ಆತ್ಮೀಯನಾದೆ ,ಆದರಿಸಿದೆ.ಅದೆಷ್ಟೋ ಮಾತುಗಳಿಗೆ ಕಿವಿಯಾದೆ ,ಪ್ರೀತಿಗೆ ಹೆಸರಾದೆ ,
ನನ್ನ ಬೇಸರಕ್ಕೆ ನೀ ಕೈ ಹಿಡಿದು ನೀಡೋ ಸಾಂತ್ವಾನಕ್ಕೆ ನಾ ಯಾವತ್ತೋ ಕಳೆದು ಹೋದೆ .

ತೀರಾ ಸೌಮ್ಯನಲ್ಲದ ತೀರಾ ಮಾತಾಡೋನೂ ಅಲ್ಲದ ನಿನ್ನ ಮೇಲೆ ಸಣ್ಣದೊಂದು ಒಲವಾಗಿತ್ತಲ್ಲಿ .

ಅವತ್ತದ್ಯಾವುದೋ ಹುಡುಗನ ಹೆಸರ ಹೇಳಿ ರೇಗಿಸಿದ್ದ ನಿನ್ನ ಮೇಲೆ ತೀರಾ ಸಿಟ್ಟು ಬಂದಿತ್ತು ನಂಗೆ .ಈ ಹುಡುಗ ಯಾಕೆ ಇನ್ಯಾರದೋ ಹೆಸರಿಗೆ ತನ್ನ ಹುಡುಗಿಯ ಹೆಸರ ಹೇಳಿದ್ದಾನೆ ಅನ್ನೋ ಕೋಪ ಸೀದಾ ಮನದ ಮಾತನ್ನ ನಿನ್ನೆದುರಿಗೆ ತೆರೆದಿಟ್ಟಿತ್ತು ...ನಿನ್ನನ್ನಿಲ್ಲಿ ಆರಾಧಿಸುತ್ತಿರೋ ಹುಡುಗಿಯನ್ಯಾಕೆ ಇನ್ಯಾರದೋ ಹೆಸರ ಜೊತೆಯಾಗಿಸುತ್ತೀಯಾ "ಲವ್ ಯು ಸ್ಟುಪಿಡ್ " ಅಂತ ಹೇಳಿ ಆಮೇಲೆ ನಾಲಿಗೆ ಕಚ್ಚಿ ಕೊಂಡ ನೆನಪು ನಿನ್ನೆ ಮೊನ್ನೆಯದು ಅನಿಸುತ್ತಿದೆ ಕಣೋ !
ನೀ ನಕ್ಕು ಮುದ್ದಿಸಿದ್ದೆ ನೆನಪಿದ್ಯಾ ನಿಂಗೆ ?

ಆಮೇಲಿನದು ನಂಗಿಂತ ಜಾಸ್ತಿ ಗೊತ್ತಿರೋದು ಪ್ರತಿ ದಿನದ ಸಂಜೆಯಲ್ಲಿ ಮರಳ ತೀರದಲ್ಲಿ ಕೂರುತ್ತಿದ್ದ ಅದೇ ಕಲ್ಲು ಬಂಡೆಗಳಿಗೆ ..
ನಮ್ಮಿಬ್ಬರ ಭಾವಗಳ ಏಕೈಕ ಸಂಬಂಧಿ ಎಂದರೆ ಅದೇ ಇದ್ದೀತು ...
ಆ ತೀರದಲ್ಲಿ ನಿನ್ನೊಟ್ಟಿಗೆ ನಿನ್ನ ಕಿರುಬೆರಳ ಹಿಡಿದು ದಿನವೂ ಕೂರುತ್ತಿದ್ದ ದಿನಗಳ್ಯಾಕೋ ನೆನಪಾಗಿದೆ ಕಣೋ .ಭಾವಕ್ಕೆ ಜೊತೆಯಾಗಿ ,ಬದುಕಿಗೆ ಪಾಲುದಾರನಾಗಿ ಬರುವೆ ಗೆಳತಿ ಅಂತ ನೀ ನೀಡಿದ್ದ ಭರವಸೆಯ ಆ ದಿನಗಳು ನೆನಪಾಗುತ್ತಿವೆ..ಜೊತೆಯಾಗಿ ಸುತ್ತಿದ್ದೆಷ್ಟೋ , ಎದುರು ಕೂತು ಕಣ್ಣಂಚ ಒದ್ದೆಯಾಗಿಸಿದ್ದೆಷ್ಟೋ ,ಪ್ರೀತಿಯಿಂದ ತಲೆ ಸವರಿ ನೀ ಹೇಳಿದ್ದ ಧೈರ್ಯ ,ಕಣ್ಣಲ್ಲಿ ಕಣ್ಣಿಟ್ಟು ಕೊಟ್ಟ ಭರವಸೆ ಈ ಜನ್ಮಕ್ಕಾಗುವಷ್ಟಿದೆ .
ನಮ್ಮಿಬ್ಬರ ಪ್ರತಿ ಭಾವಗಳೂ ಆ ಮರಳ ದಂಡೆಗೆ ಗೊತ್ತೇನೋ ...ಪಾರ್ಕಿನಲ್ಲಿ ಕೂತು ಮನಸೋ ಇಚ್ಚೆ ಹರಟಿದ್ವಿ ಬಿಟ್ರೆ ಅಲ್ಲಿರೋ ಜೋಡಿಗಳ ತರ ನಾವ್ಯಾವತ್ತೂ ಮಾಡಿಲ್ಲ .
ನೀನ್ಯಾವತ್ತೂ ನನ್ನ ತಬ್ಬಿಕೊಂಡಿಲ್ಲ ,ಕೈಯಲ್ಲಿ ಬೆಸೆವ ನಾನಿದ್ದೇನೆ ಜೊತೆ ಅನ್ನೋ ಕೈ,ಹಣೆಯ ಮೇಲೊಂದು ಮುತ್ತು ಬಿಟ್ಟು ಅದರಾಚೆಯ ಯಾವುದನ್ನೂ ನಿರೀಕ್ಷಿಸಿಲ್ಲ !..ನಿನ್ನ ಮೇಲಿನ ನನ್ನ ಹೆಮ್ಮೆ ಜಾಸ್ತಿಯಾಗೋದು ಇಲ್ಲೆ ಕಣೋ ....

ಎಲ್ಲರೆದುರು ಪ್ರೀತಿಯ ಪ್ರದರ್ಶನ ಮಾಡೋ,ಪ್ರೀತಿ ಅಂದ್ರೆ ಅಸಹ್ಯ ಆಗೋ ತರ ಆಡೋ ಅದೆಷ್ಟೋ ಮಂದಿಯೆದುರು ನೀ ಆದರ್ಶನಾದೆ ಅನ್ನೋ ಖುಷಿ ನಂದಾಗಿತ್ತು ಅಲ್ಲಿ !

ಆದರೆ ಇವತ್ಯಾಕೋ ನೀ ನನ್ನ ಕನವರಿಕೆಯ ಕನಸಾಗಿ ಕಾಡ ಬಂದೆ ,ಏನನ್ನೋ ಹುಡುಕುತ್ತಾ ಇದ್ದಾಗ ಸಿಕ್ಕ "ಮಿಸ್ ಯು ಸ್ವೀಟ್ ಹಾರ್ಟ್ "ನೀ ನನಗೆ ಕೊಟ್ಟಿದ್ದ ಮೊದಲ ಗ್ರೀಟಿಂಗ್ ನಿನ್ನಲ್ಲೇ ಕಳೆದುಹೋಗಿದ್ದ ನನ್ನ ಹುಡುಕ ಹೊರಟಿತ್ತು ...
ಬಿಡು ,ನೀನಿಲ್ಲದೆಯೂ ಇರಬಲ್ಲ ನಂಗೆ ನೆನಪನ್ನೂ ಕೊಡವಿ ಎದ್ದು ಬರೋದು ಅಷ್ಟು ಕಷ್ಟವಾಗಲಾರದು !
ಆದರೆ ಮುದ್ದು (ಕ್ಷಮಿಸು ನೀ ಇನ್ಯಾರದೋ ಮುದ್ದು ಆದ್ರೂ ನಂಗೆ ನೀನ್ಯಾವತ್ತೂ ನನ್ನ ಮುದ್ದು ) ಕಾರಣವೇ ಹೇಳದೆ ಎದ್ದು ಹೋದೆಯಲ್ಲೊ ನೀ .
ಭಾವಗಳ ಹೊಯ್ದಾಟವನ್ನ ನಿನ್ನಲ್ಲಿ ನಾನವತ್ತೇ ಗುರುತಿಸಿದ್ದೆ !...ಮೆಸೇಜ್ ಗೆ ಬರದ ರೀಪ್ಲೈ ,ಅಮೇಲೊಮ್ಮೆ ನೀ ಕೇಳೋ ಅರ್ಥವಿಲ್ಲದ ಪ್ರಶ್ನೆಗಳಾದ "ನಾ ಇರದಿದ್ದರೆ ನೀ ಏನು ಮಾಡ್ತೀಯ ?, ನನ್ನನ್ನ ನೆನಪಿಂದಳಿಸಿ ಬಿಡೆ ಹುಡುಗಿ "ಅನ್ನೋ ಅದೆಷ್ಟು ಅಸಂಬದ್ದ ಮಾತುಗಳಿಗೆ ಬಿಕ್ಕಿ ಬಿಕ್ಕಿ ಅತ್ತಿದ್ದೆ ..ನಿನ್ನ ನಿರ್ಧಾರಗಳ ಅರಗಿಸಿಕೊಳ್ಳೋ ಶಕ್ತಿ ನನಗವತ್ತಿರಲಿಲ್ಲ ನಿಜವಾಗ್ಯೂ ...


ಕಾಡಿಸಿ ಕಾಡಿಸಿ ಕೇಳಿದ್ದೆ .ಮನ ಹಗುರಾಗಿಸಿ ಅತ್ತು ಬಿಡೋ ನಾನಿದ್ದೀನಿ ಜೊತೆಗೆ ಅಂತದೆಷ್ಟೋ ಸಲ ಹೇಳಿದ್ದೆ .ನಂಗೇನು ಗೊತ್ತು ಶಾಶ್ವತ ಕಣ್ಣೀರೊಂದನ್ನು ನನಗೇ ಕೊಟ್ಟು (ಬಿಟ್ಟು )ಹೋಗೋ ಹುನ್ನಾರವಿದು ಅನ್ನೋದು ....!!

ಯಾಕೋ ಸಪ್ಪಗಿದ್ದೀಯಾ ? ಅನ್ನೋ ನನ್ನ ಪ್ರಶ್ನೆಗಳನ್ನ ಪ್ರಶ್ನೆಗಳನ್ನಾಗಿಯೆ ಉಳಿಸಿ ,ನೀನಿಲ್ಲದ ಜಗತ್ತೇ ಇಲ್ಲ ಅನ್ನೋ ಮನವೊಂದನ್ನು ಪೂರ್ತಿಯಾಗಿ ಬಿಟ್ಟು ಹೊರಟು ಹೋದೆ ನೀನು ..

ಕೊನೆಗೆ ನೀ ಎದ್ದೇ ಹೋದೆ ,ಮನಸ್ಸಿಂದಲ್ಲ ..ಕನವರಿಕೆಯ ಕನಸಿಂದ ಮಾತ್ರಾ

ನೆನಪುಗಳನ್ನಿಲ್ಲೇ ಬಿಟ್ಟು ಹೋಗಿದ್ದೀಯಲ್ಲೋ ಹುಡುಗಾ..ಮರೆತು ಹಾಗೇ ಹೋದೆಯೋ ಅಥವಾ ನಿನ್ನ ಪ್ರೀತಿಸಿದ ತಪ್ಪಿಗೆ ನನ್ನನ್ನದು ಕೊನೆಯ ತನಕ ಕಾಡಲಿ ಅಂತ ಬೇಕಂತಲೇ ಬಿಟ್ಟು ಹೋದೆಯೋ ನಾ ಅರಿಯೆ ...

ನೀ ನನಗೆ ಸಿಕ್ಕ ಭ್ರಮೆಯಲ್ಲಿ ಜಗತ್ತೇ ನನ್ನದು ಅಂತ ಬೀಗುತ್ತಿತ್ತಲ್ಲೋ ಈ ಹುಚ್ಚು ಮನಸ್ಸು !ಪಾಠವೊಂದ ಕಲಿಸಿದೆ ನೀ ..ಕೊನೆಯ ತನಕ ಮರೆಯದ ಅತೀ ಹತ್ತಿರವಾದ ಪಾಠವದು !ಮನ ಮಾತ್ರ ಯಾರನ್ನೂ ನಿನಗಿಂತ ಜಾಸ್ತಿ ಪ್ರೀತಿಸದಿರೆ ಹುಚ್ಚಮ್ಮ ಅಂತ ಪ್ರತಿ ದಿನ ನೆನಪಿಸುತ್ತೆ ...ನಾ ನಿನ್ನ ಪ್ರೀತಿಸಿದ ಖುಷಿಗೆ ನನ್ನದೇ ಮನ ನನ್ನ ಖುಷಿ ಕಸಿದುಕೊಂಡಂತನಿಸುತ್ತೆ ಕ್ಷಣವೊಂದಕ್ಕೆ !
 
 
ಅದಕ್ಕೂ ನನಗಿಂತ ನಿನ್ನ ಮೇಲೇ ಜಾಸ್ತಿ ವ್ಯಾಮೋಹ ನೋಡು !
ಹೊಟ್ಟೆ ಕಿಚ್ಚಾಗುತ್ತೆ ಕಣೋ ನಿನ್ನ ಮೇಲೆ ..ಮನಸ್ಸಿನ ಮೇಲೆ ಸರ್ವಾಧಿಕಾರಿಯಾಗಿ ಮೆರೆದು ಈಗ ನಿನಗಿದು ಸಂಬಂಧಿಸಿದ್ದೇ ಅಲ್ಲಾ ಅನ್ನೋ ತರ ಹೊರ ನಡೆದೆಯಲ್ಲೋ ..ಪೂರ್ತಿಯಾಗಿ ನಿನ್ನದಾಗಿದ್ದನ್ನ ಬಿಟ್ಟು ಹೋಗೋವಾಗ ಸ್ವಲ್ಪವೂ ಬೇಸರವಾಗಲಿಲ್ವಾ ನಿಂಗೆ ?
ನೀನೆ ಕಟ್ಟಿದ್ದ ಕನಸ ಮನೆ ಮಗುಚಿ ಬಿದ್ದಾಗ್ಲೂ ಒಂದಿನಿತು ದುಃಖವಾಗ್ಲಿಲ್ವಾ ?
ಅಥವಾ
 ಮುಖವಾಡದ ಪ್ರೀತಿ ಅದಾಗಿತ್ತಾ ?
ನಿಜ ಹೇಳು ..
ಹಾರಿಕೆಯ ಉತ್ತರ ಕೇಳಿ ಕೇಳಿ ಮನ ಬಿಕ್ಕುತ್ತಿದೆ ,ನೀ ನಡೆದ ಈ ಮನಸ್ಸು ಯಾರಿಗೂ ಕಾಣದಂತೆ ಆತ್ಮಹತ್ಯೆ ಮಾಡಿಕೊಂಡು ತುಂಬಾ ದಿನಗಳಾಯ್ತು !...
ಯಾರದೋ ಎದೆಯಲ್ಲಿ ಕನಸ ಸೌಧವನ್ನ ಕಟ್ಟಿ ಒಮ್ಮೆಗೇ ಅದನ್ನ ದ್ವಂಸ ಮಾಡಿ ಹಿಂದೆ ತಿರುಗಿಯೂ ನೋಡದೇ ಹೋಗೋ ಅಷ್ಟು ಕೆಟ್ಟವನಲ್ಲ ನನ್ನ ಹುಡುಗ ...ಯಾವುದೋ ಹೇಳಲಾಗದ ಅನಿವಾರ್ಯತೆಗೆ ಕಟ್ಟುಬಿದ್ದು ನೀ ಹೊರನಡೆದೆಯೇನೋ .ನನಗರ್ಥವಾದೀತು ಕಣೋ ....
ಯಾಕಂದ್ರೆ ನೀ ನನ್ನ ಪ್ರೀತಿ ..

ಬಾಳ ತೆಪ್ಪ ಹುಟ್ಟಿಲ್ಲದೇ ಹೊಯ್ದಾಡುತ್ತಿದ್ದಾಗ ಹುಟ್ಟು ಹಾಕಿದ್ದು ನೀ ಬಿಟ್ಟು ಹೋದ ಮಧುರ ನೆನಪುಗಳೇ..ಸುನಾಮಿಯಾಗದೆ ಮೃದು ಮಧುರ ನೆನಪುಗಳ ಖುಷಿಸೋ ಅಲೆಯಾಗಿ ದಡ ಸೇರಿಸಿತು ನನ್ನ ...
ಇದೇ ನಾ ನನ್ನೊಟ್ಟಿಗೆ ಮಾಡಿಕೊಂಡ ಕಾಂಪ್ರಮೈಸ್ ...

ನೀ ನನ್ನ ಬಿಟ್ಟು ಹೋಗಿದ್ದು ಸಣ್ಣ ಬೇಸರ ನನ್ನ ಮಟ್ಟಿಗೆ ...ನೀ ನೀನಾಗಿ ನನ್ನೊಟ್ಟಿಗಿಲ್ಲ ಅಷ್ಟೆ ..
ನೆನಪಾಗಿ ,ಕನಸಾಗಿ,ಪ್ರೀತಿಯಾಗಿ,ಆತ್ಮ ಸಂಗಾತಿಯಾಗಿ ನಾ ಯಾವತ್ತೋ ಜೋಪಾನ ಮಾಡಿದ್ದೇ ನಿನ್ನ ! ಈಗಲೂ ಬೆಚ್ಚಗೆ ಇದ್ದೀಯ ನೀ ನನ್ನೊಳಗೆ .

ಆದರೆ ನನ್ನ ಯಶಸ್ಸಿಗೆ ಸಂಪೂರ್ಣವಾಗಿ ಖುಷಿಸೋ ಒಂದು ಜೀವದ ಕೊರತೆ ಮತ್ತೆ ಕಾಡುತ್ತಿದೆ ನನ್ನ ,ಎದೆಯ ನಿಟ್ಟುಸಿರಾಗಿ, ಬೇಸರದ ಮುಸ್ಸಂಜೆಯಾಗಿ,ಮನದ ಕಣ್ಣೀರಾಗಿ, ಅದೇ ಮರಳು ದಂಡೆಯ ಬಂಡೆಯಾಗಿ ,ಕೈ ತಾಕೋ ಅಲೆಯಾಗಿ .
ಆದರೇ ನಾನಿನ್ಯಾವತ್ತೂ ಬೇರೊಬ್ಬ ಅಂಬಿಗನ ಹುಡುಕಾಟ ಮಾಡಲಾರೆ ..

ಯಾಕಂದ್ರೆ ನಾ ನೀನಲ್ಲ !

ನನ್ನ ಪ್ರೀತಿ ಸತ್ತಿಲ್ಲ ,ಒಲವು ಕವಲೊಡೆಯಲ್ಲ ..
ಬೆಚ್ಚಗಿದ್ದೀಯ ಕಣೋ ನೀನಿಲ್ಲಿ ..ನೆನಪಲ್ಲಿ ..ಮನಸಲ್ಲಿ .

ಇಷ್ಟು ಸಾಕು ನಂಗೆ ..ನಿನ್ನ ನೆನಪುಗಳೊಟ್ಟಿಗೆ ಬದುಕ ಸವೆದೇನು ಹೊರತು ಹುಡುಕಿ ಬಂದ ಬೇರೊಂದು ಪ್ರೀತಿಯನ್ನ ಅನುಮೋದಿಸಲಾರೆ ನಾ ...ಅನುಸರಿಸಲಾರೆ

ನಾನಿವತ್ತೂ ತಪ್ಪಿಲ್ಲದ ನನ್ನ ತಪ್ಪಿಗೆ ಮಂಡಿಯೂರಿ ಕ್ಷಮೆ ಕೇಳುತ್ತಿದ್ದೇನೆ ನಿನ್ನಲ್ಲಿ .ನೀ ನನ್ನವನಾಗದಿದ್ದರೂ ನನ್ನ ಪ್ರೀತಿಯೊಂದಿಗಿನ ಮಧುರ ಭಾವಕ್ಕೆ ಜೊತೆಯಾಗಿದ್ದೆ ಅನ್ನೋ ಕಾರಣಕ್ಕಾದರೂ ಒಮ್ಮೆ ಕ್ಷಮಿಸುಬಿಡು ನಿನ್ನ ಪ್ರೀತಿ ಮಾಡಿದ್ದ ,ಮಾಡುತ್ತಿರೋ ನಿನ್ನದೇ ಹುಡುಗಿಯನ್ನ...


(ಕಳಕೊಂಡ ಪ್ರೀತಿಯಲ್ಲಿ ಅವನದೇ ತಪ್ಪು ಅನ್ನೋಕೆ ಒದ್ದಾಡುತ್ತಿರೋ ,ತಪ್ಪಿಲ್ಲದ ತನ್ನನ್ನೂ ತಪ್ಪಾಗಿಸಿಕೊಂಡು ಕ್ಷಮೆ ಕೇಳುತ್ತಿರೋ ಹುಡುಗಿಯ ಮಾತಾಗಿ ....
ಪ್ರೀತಿಸೋ ಜೀವವೊಂದನ್ನ ಕಳಕೊಳ್ಳದಿರು ಗೆಳೆಯ ...ಇಂತದ್ದೇ ಪ್ರೀತಿ ಎಲ್ಲರಿಗೂ ದಕ್ಕಲ್ಲ ...ನಿನಗೆ ದಕ್ಕಿದ್ದ ಪ್ರೀತಿಯನ್ನ ನೀ ದೂರ ಮಾಡಿದೆ ...ಮನವೊಂದಕ್ಕೆ ಮೋಸ ಮಾಡಿದ ಪಾಪಪ್ರಜ್ಞೆಯಲ್ಲಿ ಅದ್ ಹೇಗೆ ಬದುಕುವೆಯೋ ನೀ .
ನಿನ್ನಲ್ಲಿದ್ದ ಅವಳ ಮನವನ್ನವಳು ಪೂರ್ತಿಯಾಗಿ ಹಿಂಪಡೆಯೋ ಮುನ್ನ ಅವಳವನಾಗು ನೀ ...ಕ್ಷಮಿಸಿ ಅಪ್ಪಿಯಾಳು ...)


ಶ್ರೀಕಾಂತಣ್ಣನ ಈ ಭಾವವನೂ ನೋಡಿಬಿಡಿ ಒಮ್ಮೆ

http://kantha-themagnet.blogspot.in/2013/06/blog-post.html

ಥಾಂಕ್ಸ್ ಶ್ರೀಕಾಂತಣ್ಣ ,ಮೂಡಿದ್ದ ಗೊಂದಲವೊಂದನ್ನ ಸಲೀಸಾಗಿ ಬಗೆಹರಿಸಿದ್ದಕ್ಕೆ :)

 

Friday, June 14, 2013

ನಾವಿಗನ ಹುಡುಕಾಟದಲ್ಲಿ :)


ಸಾಗರದಾ ಬೊರ್ಗರೆತ ,
ಅಲೆ ಅಲೆಯ ನೆಪ ಮಾತ್ರ.
ನೆಪ ಮಾತ್ರಕೀ ಮಿಂಚು
ಮನಮುಟ್ಟುವಾ ಸಂಚು.

ಮುಂಜಾವಿನೀ ಮಂಜು
ಮುಸ್ಸಂಜೆಯಾಗಾಸ .
ತೀರದಲ್ಲಾಯಾಸ ,
ಆಗದಿರಲಿ ವ್ಯತ್ಯಾಸ.

ನಾ ಬರದಿರಲ್ಲಿ
ಕಾಡಿ ಬೇಡದಿರೆನ್ನ ನಿನ್ನೊಳೊಂದಾಗುವಂತೆ .
ನಾನೇ ನಿನ್ನಲ್ಲಿ ಬಂದೆ
ಅಲೆಯಲ್ಲಿ ಬೆರೆತು ನಿನ್ನೊಳೊಂದಾದಂತೆ .

ನಡೆದಷ್ಟೂ ದೂರಕೆ
ಕನಸುಗಳಾ ಮೆರವಣಿಗೆ.
ಮನದ ಭಾರಕೆ
ನೆನಪಲೇ ಬರವಣಿಗೆ.

ಬಾಳ ಹಾದಿಯಲಿ ಒಂಟಿ ಪಯಣದಲಿ
ಒಬ್ಬಂಟಿ ನಡಿಗೆಯ ಬೇಸರ .
ಎಲ್ಲಿರುವೆ ಗೆಳೆಯಾ ?
ಕೈ ಹಿಡಿದು ನಡೆಸೋಕೆ ಬರುವೆಯಾ ಇನಿಯಾ?

ದೂರ ತೀರದ ಯಾನದಲಿ,
ಬಾಳ ದೋಣಿಯ ಪಯಣದಲಿ ,
ಹುಡುಕಿರುವೆ ನಾವಿಗನಾ,
ಈ ಹಡಗ ಯಜಮಾನನಾ.

 
ಫೋಟೋ ಕ್ರೆಡಿಟ್ಸ್ : ಬಾಲಣ್ಣ (ನಿಮ್ಮೊಳಗೊಬ್ಬ ಬಾಲು )
ಧನ್ಯವಾದ ಬಾಲಣ್ಣ .ಎಲ್ಲರನ್ನೂ ನೆನಪ ಅಲೆಯಲ್ಲಿ ತೇಲಿಸೋ ದಡದಲ್ಲಿರೋ ಹಾಯಿಯೊಂದರ ಸುಂದರ ಚಿತ್ರಕ್ಕೆ

 

Thursday, June 6, 2013

ಮಳೆಯ ಹುಡುಗಿಯ ಮಾತಾಗಿ...

                                               ನನ್ನೂರ ಮಳೆಯ ನೆನಪಲ್ಲಿ

ಬಿಡದೇ ಸುರಿವ ಜಿಟಿ ಜಿಟಿ ಮಳೆ ,ಮನೆಯ ತಾರಸಿಯಲ್ಲಿ ನಿಂತು ಮಳೆಹನಿಗಳಲ್ಲೇನನ್ನೋ ಹುಡುಕೋ ಹುಚ್ಚು ,ಹಾಯಿ ದೂರ ಕಾಣೋ ಹಸಿರ ಸೊಬಗು ,ಮಂಜಿನ ಅಂಗಳ ,ಮುಂಜಾನೆಯ ಮಬ್ಬು ,ಮಲೆನಾಡ ಮಳೆ ಅದು ....ವರ್ಷದಲ್ಲಾರು ತಿಂಗಳು ಬಿಡದೇ ಸುರಿವ ಮಳೆ...

ಮಳೆಗಾಲದ ಆ ಸಂಜೆಗಳಲ್ಲೇನೋ ಸೊಗಸಿತ್ತು .ಮಳೆಯಲ್ಲಿ ನೆನೆಯೋ ಹುಚ್ಚು ತುಸು ಜಾಸ್ತಿಯೇ ಇತ್ತು .!

ಜೊತೆಯಲ್ಲಿದ್ದಾಗ ಕಾಡದ ದೂರವಾದ ಮೇಲೆ ಕಾಡಿಸಿ ಕಾಡಿಸಿ ಕಾಡೋ ಭಾವಗಳ ಮೇಲೆ ತುಸು ಜಾಸ್ತಿ ಅನಿಸೋ ಅಷ್ಟು ಬೇಸರವಿದೆ ..

ವರ್ಷದ ಹಿಂದಿದ್ದ ಮಳೆಗಾಲದ ಈ ಮಳೆ ಮತ್ತೆ ಮತ್ತೆ ದೂರದ ಮನೆಯ ನೆನಪನ್ನ ಹಸಿಯಾಗಿಸಿದೆ ...

ಕನಸುಗಳ ಹುಸಿಯಾಗಿಸಿದೆ....

ಇಂತದ್ದೇ ಮಳೆ...ಕಾರ್ಮೋಡದ ಸಂಜೆಯ ತಾರಸಿಯಲ್ಲಿ ನಿಂತು ಇಷ್ಟಪಡೋ ಅದೇ ಮಳೆಹನಿಗಳಿವು. ಮಳೆಯಲ್ಲಿ ಜೊತೆಯಾಗಿ ಕುಣಿಯೋಕೆ ತಮ್ಮ ,ತಲೆಯೊರೆಸಿ ಮುದ್ದು ಮಾಡೋ ಅಮ್ಮ, ಪ್ರೀತಿ ಬೆರೆಸಿದ ಬೆಚ್ಚಗಿನ ಕಾಫಿ ಮಾಡಿಕೊಡೋಕೆ ದೊಡ್ಡಮ್ಮ ,ಮಳೆಯಲ್ಲಿ ನೆಂದು ಹುಡುಗಾಟವಾಡ್ತೀರ ಅಂತ ಮುಖ ಊದಿಸೋ ಅಪ್ಪ,ಸ್ವೆಟ್ಟರ್ ಒಳಗೊಂದು ಜಾಗ ಕೊಡೋ ಅಜ್ಜ, ಸಂಜೆಗಂತಾನೇ ಮೀಸಲಿದ್ದ ಹಪ್ಪಳ ಸಂಡಿಗೆ,ಕಂಬಳಿ ಒಣಗಿಸೋಕೆ ಮಾಡಿರೋ ಒಲೆ , ಕರೆಂಟ್ ಇಲ್ಲದ ರಾತ್ರಿಗಳಲ್ಲಿ ಒಟ್ಟಿಗೆ ಕೂತು ಹರಟೋ ಪ್ರೀತಿಯ ಮನೆಮಂದಿ,ದೊಡ್ಡ ಮನೆಯ ಪ್ರೀತಿಯಲ್ಲಿ ಸಿಗೋ ದೊಡ್ಡ ಪಾಲು ..ಮಳೆಗಾಲದ ರಾತ್ರಿಗಳಲ್ಲಿ ತಾನಾಗೇ ಆಗೋ ಕ್ಯಾಂಡಲ್ ಲೈಟ್ ಡಿನ್ನರ್ ,

ಅವತ್ತಿದ್ಯಾವುದೂ ಕಿಂಚಿತ್ತೂ ಕಾಡಿರಲಿಲ್ಲ ನನ್ನ! .

ಅನುಭವದ ಮಾತು ದೂರಾ ದೂರ...!

ಮತ್ತೆ ಕರಿತೀದೆ ದಡದ ಇನ್ನೊಂದು ತೀರ..!

ವಾರವಾದರೂ ಬರದ ಕರೆಂಟ್ ಬಗೆಗೊಂದು ಬೇಸರ,ಟೀವಿ ನೋಡೋಕೂ ಬಿಡದ ಗುಡುಗಿನ ಬಗೆಗೊಂದು ಹೇಳಲಾಗದ ಸಿಟ್ಟು ,ಪಿಯು ಮುಗಿದ ನಾಲ್ಕು ತಿಂಗಳ ಸಹ್ಯವಾಗದ ರಜಾ,೪ ಬಾರಿ ಹೇಳಿದ್ದ ವಟ ವಟ ಸುದ್ದಿಗಳನ್ನ ಇನ್ನೊಮ್ಮೆ ಹೇಳೋಕಂತ ಶುರು ಮಾಡಿದ್ರೆ "ಪುಟ್ಟಿ ಪ್ಲೀಸ್ "ಅಂತ ಮಾತಾಡೋಕೇ ಬಿಡದ ಅಮ್ಮ ದೊಡ್ಡಮ್ಮ ,ಅದೆಷ್ಟೋ ಸಲ ಓದಿ ಮುಗಿದಿದ್ದ ಅದೇ ಕಾದಂಬರಿಗಳು,ಇರದ ನೆಟ್ ವರ್ಕ್ ನಿಂದಾಗಿ ಕಾಣೆ ಆಗಿದ್ದ ಸಿಸ್ಟಮ್ ,ಫೇಸ್ಬುಕ್,ಮೊಬೈಲ್, -ಇವಷ್ಟೇ ವರ್ಷದ ಹಿಂದಿನ ಇಂತದ್ದೇ ಮಳೆಗಾಲದಲ್ಲಿ ಕಾಡೋ ಬೇಸರಗಳಾಗಿತ್ತು.

ಯಾಕೋ ಗೆಳೆಯ ,ಅಲ್ಲಿಂದ ಎದ್ದು ಬಂದ ಮೇಲೂ ಅಲ್ಲಿಯ ಭಾವ ತೀರಾ ಕಾಡುತ್ತೆ ನನ್ನ?

ಇದೂ ಮಲೆನಾಡೇ ...ಇಲ್ಲಿಯೂ ಅಂತದ್ದೇ ಮಳೆ ..ಮಳೆಯಲ್ಲಿ ನೆನೆಯೋ ಅದೇ ಹುಚ್ಚಿದೆ ..

ಇವತ್ತಿನ ಮಳೆಯಲ್ಲಿ ಖುಷಿ ಅಂದ್ರೆ ಟೆರೇಸ್ನಲ್ಲಿ ನಿಂತು ಹಾಕೋ ಒಂದಿಷ್ಟು ಸ್ಟೆಪ್ಸ್, ಮಳೆಯಲ್ಲಿ ಮಜಾ ತರೋ ರೈಡ್ craze ,ಮಳೆ ಹನಿಗಳ ಜೊತೆ ತಿನ್ನೋ ಗೋಲ್ ಗಪ್ಪಾ,,ನಾವೇ ಮಾಡಿಕೊಂಡ ಬೆಚ್ಚಗಿದೆ ಅಂದುಕೊಂಡು ಕುಡಿಯೋ ಕಾಫಿ,ಯಾವುದೂ ಅಮ್ಮ ಮಾಡಿಕೊಡೋ ಪಕೋಡಕ್ಕೆ ,ಮನೆಯಲ್ಲಿ ನೆನೆಯೋ ಮಳೆಗೆ ಪ್ರತಿಸ್ಪರ್ಧಿಯಾಗಲ್ಲ!

ಕಿಟಕಿಯಲ್ಲಿ ನಿಂತು ನೋಡೋ ಮಳೆಹನಿಗಳು ಕಣ್ಣ ಹನಿಗಳಂತನಿಸಿ ಕಿಟಕಿ ಮುಚ್ಚೋ ಅಷ್ಟು ಬೇಜಾರು,

ಹನಿಗಳ ಜೊತೆ ನೆನಪಾಗೋ ಊರ ಮಳೆ,ಮನೆಯ ಮಳೆ,

ಮಳೆಗೆ ಮನೆಯ ಮಾಡು ಸೋರದೇ ಮನೆಯವರ ಮನಸ್ಸು ಸೋರುತ್ತಿದ್ದುದರ ಬಗೆಗೊಂದು ಬೇಸರ....

ಮಳೆಗೆ ನೆನಪಾಗೋ ಒಲವ ಹುಡುಗ ...ಅದೇ ಕ್ಷಣಕ್ಕೆ ನೆನಪಾಗೋ ಅವನ ಪ್ರೀತಿ ...

ಅವನಿಗೆ ಪ್ರೀತಿ ನಿರಾಕರಿಸಿದ ಭಾವಗಳೇ ಇರದ  ಹುಡುಗಿ !!  ,ಇವನಿಗೆ ಭಾವಗಳೇ ಈ ಹುಡುಗಿಯೇನೋ ಅಂತಿಪ್ಪ ಸಣ್ಣ ಸಂಶಯ !!

ಒಟ್ಟಿನಲ್ಲಿ ಅಲ್ಲಿಂದ ಬೀಳೋ ಮಳೆ ಹನಿಗಳು ನೆಲ ತಾಕೋ ತನಕ ನನ್ನಲ್ಲೇ ಆಗೋ ಒಂದಿಷ್ಟು ದ್ವಂದ್ವಗಳು,ಗೊಂದಲಗಳಿಗೆ ಉತ್ತರ ಹುಡುಕ ಹೊರಟು ,ಸಮಾಧಾನಿಸದ ಭಾವಗಳಿಗೆ !

ಮತ್ತದೇ ನೀರವತೆಯ ಮೌನದ ಸಂಜೆಯಲ್ಲಿ ಬಿಡದೇ ಸುರಿವ ಮಳೆಯಲ್ಲಿ ಬೆಚ್ಚಗಿನ ನೆನಪೊಂದನ್ನ ಹುಡುಕುತ್ತಿರೋವಾಗ ಸಿಕ್ಕ ಕಾಡೋ ನೆನಪೊಂದ ಎತ್ತಿಕೊಂಡು.....


 


ಓ ಮನಸೇ ...

ನೀ ಹೀಗೇಕೆ ..

ಬೇಡವೆಂದರೂ ಬಂದು ಕಾಡುತ್ತೀಯಲ್ಲೇ ,

ಕಾಲೆಲೆಯೋ ಗೆಳತಿಯಾಗಿ,

ನೆನಪ ಹುಡುಗನಾಗಿ,

ಬೆಚ್ಚಗಿನ ಕನಸಾಗಿ,

ತಾಗೋ ಹತಾಶೆಯಾಗಿ....

ಕಾಡದಿರು ನನ್ನ ನೀ...

ನಾ ನಿನ್ನ ಇನಿಯನಿಲ್ಲ ...

ಬೇಡವೆಂದರೂ ಬಂದು ಬೆಚ್ಚಗಿನ ಗೂಡೊಂದ ಕಟ್ಟಿ ,ಮನದಲ್ಲೊಂದು ಮಹಲು ಮಾಡೋ ಬೆಚ್ಚಗಿನ ಕಾಡೋ ನೆನಪುಗಳ ಜತನದಿಂದ ಎತ್ತಿಡಲು ಸೋತೆನಾ ನಾ??

Sunday, June 2, 2013

ಮಳೆಯಲ್ಲಿ ತೋಯ್ದ ಮನದ ನೆನಪು... ಕಪ್ಪಾದ ನೀಲ ಬಾನು ....ಆಗಸವನ್ನೇ  ಮರೆ ಮಾಚ ಬರುತ್ತಿರೋ ಕಾರ್ಗತ್ತಲೆಯ ಕೂಪ ...ಮಟ ಮಟ ಮಧ್ಯಾಹ್ನ ಕವಿದ ಕಾರ್ಮೋಡ ..

ಸರಿಯದೇ ಹೋದ ಮೋಡ...ಮನಕ್ಕೂ ಹಿಡಿದ ಜಡ ....ಕಸಿವಿಸಿ ಮಾಡುತಿರೋ ಕಾರ್ಮೋಡ

ಅವಳೂರಲ್ಲೂ ಜಿಟಿ ಜಿಟಿ ಮಳೆ ..ಅವಳ ಮನಸ್ಥಿತಿಯೂ ಆ ಮಳೆಯೊಟ್ಟಿಗೆ ಸ್ಪರ್ಧೆಗೆ ನಿಂತಂತೆ ಭಾಸ ...
ಮಂಜು ಮಂಜಾದ ಎದುರಿಗಿರೋ ಸವೆಯದ ಹಾದಿಯ ಒಂಟಿ ಪಯಣಿಗಳಾಗಿ...
ದುಸ್ತರ ಹಾದಿಯಲ್ಲಿ ನಿರ್ಭೀತ ಗಾಂಭಿರ್ಯದೊಡಗೂಡಿ ...
ಒಂದಿಷ್ಟು ಅವಳದೇ ನೆನಪುಗಳ ಒಡತಿಯಾಗಿ ...

ನೆನಪಾದದ್ದು ಆವತ್ತಿನ ಇಂತದ್ದೇ ಮಳೆ ! ಅದೇ ಮಳೆಯಲ್ಲಿನ ಅವಳದೇ ಭಾವದಲ್ಲವಳು ಕಳೆದೇ ಹೋಗಿದ್ದಾಳೆ ..

ಮಳೆಯಲ್ಲಿ ತೋಯುತ್ತಾ ಮನೆ ಸೇರೋ ಧಾವಂತದಲ್ಲಿರೋ ಹುಡುಗಿಗೆ ಯಾರೋ ಕೊಡೆ ಹಿಡಿದಿದ್ದರು ..ಹಿಂತಿರುಗಿ ನೋಡೋಕೂ ಸಂಕೋಚವಾಗಿ ಬಿರ ಬಿರನೆ ಹೆಜ್ಜೆ ಕಿತ್ತಿದ್ದ ಹುಡುಗಿ ಅವಳು .
ಆಮೇಲೊಮ್ಮೆ ಎದುರು ಸಿಕ್ಕ ಹುಡುಗನ ಪರಿಚಯದ ನಗು ಮೂಡಿಸಿದ್ದ ಗೊಂದಲ.. ...ದಿನವೂ ಮನೆಯ ಹಾದಿಯಲ್ಲಿ ಸಾಥ್ ನೀಡೋ ಅದೇ ಗೆಳೆಯ ...ಪರಿಚಯ ಸ್ನೇಹವಾಗಿ ಪ್ರತಿ ದಿನದ ಸಂಜೆಗಾಗಿ ಕಾಯುತ್ತಾ ಕೂರೋ ದಿನಗಳು ..
ಹಂಚಿಕೊಂಡ ಅದೆಷ್ಟೋ ಬೇಸರಗಳು ,ಜೊತೆಯಾದ ಕೈ ಹಸ್ತ ,ನಡುಗುತ್ತಾ ಸಾಗೋ ದಾರಿಯಲ್ಲಿ ಅವ ನೀಡಿದ ಬೆಚ್ಚಗಿನ ಅಪ್ಪುಗೆ ಅವಳಲ್ಲೊಂದು ಭರವಸೆ ನೀಡಿತ್ತು ...ಅವನಾದರೂ ಜೊತೆಯಾದಾನು ಬಾಳ ದೋಣಿಯಲ್ಲಿ  ದಡ ತಲುಪೋ ಜೊತೆಗಾರನಾಗಿ ..ಇಂತದ್ದೇ ಕನಸುಗಳು ..
.
ನೆನಪಲ್ಲಿ ಮಾತ್ರ ಮಳೆ ಅಂದ್ರೆ ಭಯ ಹುಟ್ಟಿಸಿತ್ತು ....ಕತ್ತಲ ನೀರವತೆ ಅವಳಿಗೆ ಬೇಕಿರದ ಅವನ ನೆನಪಿಸುತ್ತಿತ್ತು.....
ಮಳೆಯ ದಿನಗಳು ಸಹ್ಯವಾಗದೇ ,ಸಹಿಸಲೇ ಬೇಕಾಗಿರೋ ಅನಿವಾರ್ಯತೆಯನ್ನು ನೆನೆದು ...ಒಂದಿಷ್ಟು ದುಗುಡವ ಹೊತ್ತ ಅನು ದಿನದ ಮಳೆಯ ದಾರಿಯ ಪಯಣ ಸಾಗಿತ್ತು

ಒಂದಿಷ್ಟು ಇಷ್ಟವಾಗದ ನೆನಪುಗಳ ತೇರಲ್ಲಿ ಅವಳೊಂಟಿ ಅನಿಸುತ್ತಿರುವಾಗಲೇ ಎದುರಾದ ಮನೆಯಿಂದಾಗಿ ನೆನಪುಗಳೂ ವಿರಮಿಸಿದ್ದವು ...
ಭಾರವಾದ ಉಸಿರ ಜೊತೆ ಮನೆಯೊಳ ಬಂದರೆ ಅಲ್ಲಿಯೂ ಅವಳನ್ನ ಆಮಂತ್ರಿಸಿದ್ದು ಕತ್ತಲು ...ಹಾಸಿಗೆ ಹಿಡಿದ ಅಮ್ಮ ,ಯಾವ ಗೋಳೂ ತನಗೆ ಸಂಭಂದಿಸಿದ್ದೇ ಅಲ್ಲಾ ಅಂತಿರೋ ಅಣ್ಣ ...ಆದರೂ ಬದುಕ ಬಗೆಗಿನ ಅವಳ ಅದೇ ವ್ಯಾಮೋಹ ಅವಳನ್ನ ಬದುಕಿಸಿದ್ದು ....ಯಜಮಾನನಿರದ ಮನೆಯ ಎಲ್ಲಾ ಜವಾಬ್ದಾರಿಗಳ ಒಡತಿಯಾಗಿ ಕತ್ತಲ ಆ ಒಂಟಿ ಪಯಣವನ್ನೂ ಖುಷಿಸೋ ಅಷ್ಟು ಪ್ರೀತಿ ಅವಳಿಗೆ ಆ ಬದುಕ ಮೇಲೇ !
ಆದರಲ್ಲಿ ಬದುಕ ಪ್ರೀತಿಯನ್ನ ಇಮ್ಮಡಿಸ ಬಂದ ಹುಡುಗ ಅದೇ ಪ್ರೀತಿಯನ್ನ ಕೊಂದು ಹೋದದ್ದು ಮಾತ್ರ ದುಸ್ತರ ... ಸಂಜೆಯ ಕೆಲಸವನ್ನ ಮುಗಿಸಿ ಪ್ರತಿದಿನವೂ ಕಣ್ಣೀರಾಗೋ ಅಮ್ಮನನ್ನ ಸಾಂತ್ವಾನಿಸಿ ಮುದ್ದಿಸಿ ತನ್ನ ರೂಮನ್ನ ಸೇರಿದರೇ ಅವತ್ತವಳು ತೃಪ್ತಳು ...


ಇವತ್ತಿನ ಮಳೆಯಲ್ಲಿ ಅವನ ಮುಖ ಮತ್ತೆ ಮತ್ತೆ ಕಾಡುತ್ತಿತ್ತು ...ತುಂಬಾ ದಿನದಿಂದ ಮೂಲೆಯಲ್ಲಿರಿಸಿರೋ ನೆನಪನ್ಯಾಕೋ ಅಪ್ಪಿ ಮುದ್ದಾಡಬೇಕನಿಸಿ ಬೇಗನೆ ರೂಮ್ ಸೇರಿದ್ದಳು ...ಕಣ್ಣಂಚಲ್ಲಿ ಜಾರದ ಹನಿಯನ್ನ ಜೋಪಾನ ಮಾಡಿ ಮತ್ತೆ ನೆನಪುಗಳಿಗೆ ಜಾರಿದ್ದಳು  ಹುಡುಗಿ .


 

ಹೌದು ಅವನವಳ ಒಲವ ಹುಡುಗ....ಪ್ರೀತಿಸಿ ,ಕಾಳಜಿಸಿ ,ಜೊತೆಯಾಗಿ ನಾನಿದ್ದೀನಿ ಅಂತ ಸಾಂತ್ವಾನಿಸಿದ ಹುಡುಗ ...
ಕನಸ ಹುಡುಗ ಎದುರು ಬಂದ ...ಈಗ ಬರಿಯ ನೆನಪಾಗಿ ಕಾಡ ಹತ್ತಿದ್ದಾನೆ !...ಅಷ್ಟು ಪ್ರೀತಿ ಮಾಡೋ ಅವ ಯಾಕೇ ಅದೇ ಒಂಟಿ ದಾರಿಯಲ್ಲಿ ಒಬ್ಬಂಟಿಯನ್ನಾಗಿಸಿ ಸರಿದು ಹೋದ..??.ಇದೆಷ್ಟನೇ ಬಾರಿಯೋ ಏನೋ ಇದೆ ಪ್ರಶ್ನೆಯನ್ನವಳು ಕೇಳಿಕೊಳ್ಳುತ್ತಿರುವುದು ...ಕಣ್ಣ ಮುಂದೆದೆ ಆ ಒಲವ ಪರಿ .ಪ್ರೀತಿಯ ಪರವಶೆ ,ಕಾಳಜಿಯ ಕೈ,ಬದುಕ ಸ್ಪೂರ್ತಿ ಕೊಡೋ ಅವನ ಒಂದೇ ನೋಟ ...ದುತ್ತನೇ ಎದುರಾದ ವಿರುದ್ದ ಭಾವ ..ಮನವನ್ನ ಕುಗ್ಗಿಸೋಕಂತಾನೇ ಬಂದಿದ್ದು ಅವನು ಅನ್ನೋ ಅವಳ ಮನ ....ಈಗ ಹೃದಯದ ಬಾಗಿಲಿಗೆ ನೆನಪಾಗಿ ಬರೋ ಹುಡುಗ ಅವನನ್ನ ನೋಡಿ ಯಾಕೆ ನೀ ಮಂಕಾಗಿ ಕೂತೆ ಅನ್ನೋ ಮನ..ಖುಷಿಸಲಾಗದ ಆ ಮಳೆಗಾಲದ ಸಂಜೆ 

ಪರಿಸ್ಥಿತಿಯ ಅನಿವಾರ್ಯ ಅಂತ ಒಂದೇ ಕಾರಣ ಹೇಳಿ ,ಅವಳ ಜವಾಬ್ದಾರಿಗಳನ್ನ ತಾಕಿಸಿಕೊಳ್ಳೋ ಒಂದು ಸಣ್ಣ ಪ್ರಯತ್ನವನ್ನೂ ಮಾಡದೇ ಕತ್ತಲ ಸಂಜೆಯಲ್ಲಿ ಕತ್ತಲಾಗೇ ಉಳಿದು ಹೋದ ಅವನ ಬಗ್ಗೆ ಅಲ್ಲೊಂದು ನೋವಿತ್ತು ...
ಕಳೆದ ನೆನಪನ್ನೆಲ್ಲಾ ಜತನ ಮಾಡ್ತಾ ಮಾಡ್ತಾ ಅವಳಿಗೆ ಅರಿವಿಲ್ಲದೇ ಅವಳ ಕಣ್ಣಂಚು ಒದ್ದೆಯಾಗಿತ್ತು ....ಕಿಟಕಿಯಲ್ಲಿ ಆ ಕತ್ತಲ ಹಾದಿಯಲ್ಯಾರೋ ಬರುತ್ತಿರೋ ತರ ಅನಿಸಿ ...ಹೌದು ...ಅವನು ಅವನೇ... ಅದೇ ಹುಡುಗ .. ಹಾದಿಯಲ್ಲಿ ಜೊತೆಯಾಗೋ ಗೆಳೆಯ ..ಒದ್ದೆಯಾದ ಕಣ್ಣಂಚಲ್ಲೂ ಅವನ ಮುದ್ದು ಮುಖ ಸ್ಪಷ್ಟವಾಗಿತ್ತವಳಿಗೆ ....ಮಂಜಾದ ನೆನಪಿನ ಹಾದಿಯಲ್ಲಿ ಅವಳ ಅವನು ಮತ್ತೆ ಹಿಂತಿರುಗಿದ್ದ ಸೂಚನೆ ನೀಡಿತ್ತು ಮನ ...

ಭಾವಗಳೇ ಇಲ್ಲದ ,ಭಾವಗಳನ್ನ ದಿಕ್ಕರಿಸಿ ಎದ್ದು ಹೋದ ಅದೇ ಅವನು ಇವತ್ಯಾಕೋ ತೀರ ಭಾವುಕನಂತೆ ,ಒಲವ ಸಹ ಪಯಣಿಗನಂತೆ ನೆನಪಾಗಿದ್ದ..ಒಲವ ಗೆಳೆಯನಾಗಿ ಕಾಡ ಹತ್ತಿದ್ದ ..ಕ್ಷಣವೊಂದಕ್ಕೆ ಪರಿಸ್ಥಿತಿಯ ಅರಿವಾಗಿ ,ತನ್ನದೇ ಜವಾಬ್ದಾರಿಗಳು ಕರೆದಂತನಿಸಿ ನೆನಪನ್ನ ಕೊಡವಿ ಕಿಟಕಿ ಮುಚ್ಚಿದ್ದಳು ...(ಮನದ ಕಿಟಕಿ ಮುಚ್ಚೋಕೆ ಮರೆತಳೇನೋ )
 ಎಲ್ಲವನ್ನ ಬದಿಗೊತ್ತಿ ಕಣ್ಣ ಮುಚ್ಚಿದರೇ   ಪ್ರೀತಿಯಿಂದ ಅವಳದೇ ಹೆಸರ ಕರೆಯುತ್ತಾ ಬಾಗಿಲ ತಟ್ಟಿದ ಸದ್ದು ....!

ಅದವಳ ಭ್ರಮೆಯಾ ?

ಕನಸಾ?

ವಾಸ್ತವವಾ?