Tuesday, March 1, 2016

ದೇವರ ನಾಡಲ್ಲಿ...

ನಾಲ್ವರು ಹುಡುಗೀರು.  ಯಾವಾಗಲೂ ಕೀಟಲೆ ಮಾಡ್ತಾ, ಪಕ್ಕಾ ಹುಡುಗರ ತರಹ ಹೇಗ್ ಹೇಗೋ ಇದ್ದುಬಿಡೋ, ಮನೆಯಲ್ಲೆಲ್ಲಾ "ನಿಜ್ವಾಗ್ಲೂ ಕೆಲಸವಿಲ್ವಾ ನಿಮಗೆ" ಅಂತೆಲ್ಲಾ ದಿನಕ್ಕೈದು ಬಾರಿ ಬೈಸಿಕೊಂಡು, ಅದಕ್ಕೂ ತಲೆ ಕೆಡಿಸಿಕೊಳ್ಳದೆ, ಮೇಕಪ್ , ಸನ್ ಬರ್ನ್ ಗಳ ಹಾವಳಿಯಿಲ್ಲದೇ ಸುಮ್ಮ ಸುಮ್ಮನೇ ಅಲೆದಾಡೋ ಬದುಕದು. ಅದರಲ್ಲೂ 'ಕೊನೆಯ ಸೆಮ್' ಅನ್ನೋ ತಲೆಪಟ್ಟಿ ಬಿದ್ದ ಮೇಲೆ ಅಲೆದಾಟಗಳೇ ಬದುಕು ಅನ್ನಿಸಿ ಬಿಟ್ಟು ಓಡಾಡ್ತಿರೋ ಒಂದಿಷ್ಟು ಚಂದ ಚಂದದ ಊರುಗಳಿವೆ. 
ತೀರಾ ಇಷ್ಟವಾಗೋ ಅಲೆದಾಟಗಳ ದಾಖಲಿಸೋ ಮನಸ್ಸಾಗ್ತಿದೆ. 

                    
Kerala , You are loved and we are lovable.

ಒಂದಿಷ್ಟು ಖುಷಿ, ಒಂದಿಷ್ಟು ಕಾತರತೆ, ಮತ್ತೊಂದಿಷ್ಟು ಹೊಸತನಗಳ ಹುಡುಕಾಟದಲ್ಲೇ ಅದೊಂದು ಅಪರಿಚಿತತೆಯ ಭಾವ ತಾಗುತ್ತಲ್ಲಾ, ಅಂತಹುದ್ದೇ ಒಂದು ಭಾವ ಕೈ ಸೋಕಿದ್ದು ಮತ್ತದೇ ಕಡಲೂರಲ್ಲಿ. ಈಗೆಲ್ಲಾ ಕಡಲಂದ್ರೆ ತುಸು ಜಾಸ್ತಿಯೇ ಪ್ರೀತಿ ನಂಗೆ  ಥೇಟ್ ಕಡಲೂರ ಆ ಹುಡುಗನಂತೆಯೇ. ಅದರಲ್ಲೂ ಬಿಟ್ಟು ಬಿಡದೇ ನೋಡಿದ್ದ ಒಂದಿಷ್ಟು ಮಲಯಾಳಿ ಮೂವಿಗಳು, ಅಲ್ಲೆಲ್ಲಾ ಕಾಣ ಸಿಗ್ತಿದ್ದ ಸಮುದ್ರ, ಬೋಟ್ ಹೌಸ್ ಗಳು, ಹಿನ್ನೀರು, ತೀರದಲ್ಲೆಲ್ಲಾ ಬಾಗಿ ನಿಲ್ಲೋ ತೆಂಗಿನ ಮರಗಳು ಎಲ್ಲವೂ ನಮ್ಮನ್ನಲ್ಲಿಯ ತನಕ ಎಳೆದುಕೊಂಡು ಹೋಗಿತ್ತು.

ಅದೊಂದು ಅನಿಶ್ಚಿತತೆಯ ಜೊತೆ ಹೊರಟಿದ್ದು 'ದೇವರ' ನಾಡಿಗೆ.... 

ಗೋವಾದಿಂದ ಶುರುವಾದ ಪ್ಲಾನ್ ಪಾಂಡಿಚೇರಿಯ ದಾಟಿ ಬಂದು ತಲುಪಿದ್ದು ಕೇರಳಕ್ಕೆ. ಜೊತೆಯಾದದ್ದು ಮತ್ತೆ ಮೂವರು ಕ್ರೇಜಿ ಗೆಳತಿಯರು. ಅದೊಂದು ಪಕ್ಕಾ ಅನ್ ಪ್ಲಾನ್ಡ್ ಟ್ರಿಪ್. ಇನ್ನೂ ವೇಟಿಂಗ್ ಲಿಸ್ಟ್ ಅಲ್ಲೇ ಇದ್ದ ಟ್ರೈನ್ ಟಿಕೇಟ್, ಯಾವ ಯಾವ ಜಾಗಗಳ ನೋಡಬೇಕನ್ನೋದೂ ತಿಳಿಯದ, ಅಸಲು ಎಷ್ಟು ದಿನದ ಟ್ರಿಪ್ ಅನ್ನೋದೇ ಖಾತರಿಯಾಗಿರದ ಭಾವವ ಹೊತ್ತು ಪಯಣ ಹೊರಟಿತ್ತು. ನಮ್ಮದಿಷ್ಟು ನಗು, ಗಲಾಟೆ, ಗದ್ದಲ, ಮಾತಿನ ಜೊತೆ ಪಕ್ಕದಲ್ಲಿ ಕೂತಿದ್ದವರು ಕೂಡಾ 'ಹ್ಯಾಪಿ ಕೇರಳ' ಅಂತ ಬೀಳ್ಕೊಡೋ ಹೊತ್ತಿಗೆ ಎರ್ನಾಕುಲಂ ತಲುಪಿಯಾಗಿತ್ತು.
ಆಗ ಶುರುವಾಗಿತ್ತು ನಮ್ಮದಿಷ್ಟು ಪ್ಲಾನ್ ಗಳು. ಫೋರ್ಟ್ ಕೊಚ್ಚಿಯ ನೋಡೋಕೆ ಹೋಗೋದೋ ಅಥವಾ ವೈಪಿನ್ ಮೂಲಕ ಆ ಕಡಲ ಮಧ್ಯ ನಡೆಯೋದೋ ಅನ್ನೋ ಗೊಂದಲದಲ್ಲಿಯೇ ಮುಖ ಮಾಡಿದ್ದು ಕೊಚ್ಚಿಯ ಕಡಲ ಕಡೆಗೆ.  ಬೆಳಿಗ್ಗೆ ಏಳಕ್ಕೇ ತಡೆಯೋಕಾಗದ ಸೆಕೆಯಲ್ಲಿ ಮಧ್ಯಾಹ್ನ ಹೇಗಿರೋದು ಭಗವಂತ ಅನ್ನೋ ಭಾವವೊಂದು ಬೇಸರ ಮೂಡಿಸೋಕೆ ಶುರುವಿಟ್ಟಿತ್ತು. ಆ ಊರ ಅಪ್ಪಮ್(ದೋಸೆ ತರಹದ್ದು) ರುಚಿ ಇನ್ನೂ ಬಾಯಲ್ಲಿರೋವಾಗಲೇ, ಮರೈನ್ ಡ್ರೈವ್ ಹೆಸರಲ್ಲಿ ಗಂಟೆಗಟ್ಟಲೇ ಕಾದಿದ್ದ ಬೋಟ್ ಕೊನೆಗೂ ನಿಧಾನವಾಗಿ ಹೊರಟಾಗ ಅದೊಂದು ನಿಟ್ಟುಸಿರು.  ಕಡಲ ಮಧ್ಯವಿರೋ ಆ ಚಂದದ ಪ್ಯಾಲೇಸ್, ಅದೊಂದಿಷ್ಟು ಚಂದ ಚಂದದ ಚರ್ಚ್ ಗಳು, ಲುಲು ಮಾಲ್ ದಾಟಿ ಬಂದು ನಿಂತಿದ್ದು ನನ್ನಿಷ್ಟದ ಕಡಲ ತೀರಕೆ. 

St Anthony church ,
Way from Ernakulam to Fort Cochin, PC: Archana


ಮುಳುಗೋ ಸೂರ್ಯನನ್ನ ಸೆರೆ ಹಿಡಿಯೋ ಕೆಲಸದಲ್ಲಿ ಗೆಳತಿ ನಿಂತಿದ್ರೆ ನಾ ಕಡಲ ಅಲೆಗಳ ಜೊತೆ ಮಾತಿಗೆ ಕೂತಿದ್ದೆ. ಅಲ್ಲಿರೋ ಕನ್ನಡದವರನ್ನೆಲ್ಲಾ ಮಾತಾಡಿಸಿ, ಅವರ ಬಳಿಯೆಲ್ಲಾ 'ನಾಲ್ಕೇ ಜನ ಹುಡುಗೀರು ಬಂದಿದ್ದಾ, ಕ್ರೇಜಿ ಗರ್ಲ್ಸ್' ಅಂತೆಲ್ಲಾ ಹೇಳಿಸಿಕೊಂಡು ಬರೋ ಹೊತ್ತಿಗೆ ಆ ಊರ ಸೆಕೆ ಕೂಡಾ ಅಭ್ಯಾಸವಾದಂತಿತ್ತು. 

 ಜಗಮಗಿಸೋ ಆ ದೀಪಗಳ ಕೆಳಗೆ ಇಡೀ ಊರು ಗೊತ್ತೇನೋ ಅನ್ನೋ ತರಹ ಮಧ್ಯ ರಾತ್ರಿಯ ತನಕ ಸುಸ್ತೇ ಆಗದಂತೆ ಓಡಾದಿದ್ದಿದೆ. ಆ ಊರ ನೆನಪನ್ನೆಲ್ಲಾ ಜೋಡಿಸಿಕೊಂಡು ಮಾತಿಗೆ ಕೂತಿದ್ದಾಗ ಕಾಡಿದ್ದು Alleppey. 
ಚಂದ ಚಂದದ ಬೋಟ್ ಹೌಸ್ ಗಳು, ಹಿನ್ನೀರ ಮಧ್ಯದ ಓಡಾಟ ಎಲ್ಲವೂ ಮೋಡಿ ಮಾಡಿದಂತಿತ್ತು. ಮತ್ತೆ ಮರುದಿನದ ಹಾದಿ ಹಿಡಿದಿದ್ದು ಅಲೇಪಿ ಕಡೆಗೆ. ಅದೊಂದು ಬೋಟ್ ಹಿಡಿದು ಐದಾರು ತಾಸು ಹಿನ್ನೀರ ಮಧ್ಯ ಕಳೆದು ಹೋಗಿದ್ದವರಿಗೆ ಆ ಊರ ಬಿಟ್ಟು ಬರೋ ಮನಸ್ಸೇ ಆಗಿರಲಿಲ್ಲ. ಪಕ್ಕದಲ್ಲೇ ಸಾಗೋ ಇನ್ನೊಂದಿಷ್ಟು ಬೋಟ್ ಗಳ ಜೊತೆ, ಮಧ್ಯದಲ್ಲೆಲ್ಲೋ ಕುಡಿದ ಆ ಸಿಹಿ ಸಿಹಿ ಎಳನೀರು, ಬೋಟ್ ಅಣ್ಣನ ಬಳಿ ಬನಾನ ಫ್ರೈ ಬೇಕಂತ ಹಠ ಹಿಡಿದ ಪರಿ, ಟೇಸ್ಟ್  ಮಾಡಿದ್ದ TODDY (unofficial Kerala drink) ಎಲ್ಲವೂ ಸೇರಿ ಮತ್ತೊಂದು ಸಂಜೆ ಸರಿದು ಹೋಗೋಕೆ ರೆಡಿಯಾಗಿತ್ತು. ಮತ್ತೆ ಮುಳುಗೋ ಕೆಂಪು ಕೆಂಪು ಸೂರ್ಯನನ್ನ ನೋಡೋಕೆ Alleppey Beach ಸಿದ್ಧಗೊಂಡಂತಿತ್ತು. 

                                                      ದಿನಮಣಿ ಮುಗಿಯೋ ಹೊತ್ತಿಗೆ 
                                                   Alleppey Beach, PC: Archana
                                                    


ತೀರಾ ದೊಡ್ಡವೆನಿಸೋ ಸಮುದ್ರ, ಗಜಿಬಿಜಿ ಅನ್ನೋವಷ್ಟು ಜನಗಳ ಮಧ್ಯವೂ ಚಂದ ಅನ್ನಿಸೋ ತೀರವದು. ಸಂಜೆ ಸರಿದು ಕತ್ತಲಾಗಿ  ನಾವಲ್ಲಿಂದ ಹೊರಟಾಗ ಕಳೆದು ಹೋಗಿದ್ದ ಇನ್ನಿಬ್ಬರು ಗೆಳತಿಯರು. ಆ ಜನಗಳ ಮಧ್ಯ ಹುಡುಕ ಹೊರಟು ನಾವೂ ಕಳೆದು ಹೋಗಿ .... ಕೊನೆಗೂ ಅಲ್ಲೆಲ್ಲೋ ಜೊತೆಯಾಗಿ ಮತ್ತೆ ಆ ಹೊಸ ಊರ ಸುತ್ತೋಕೆ ಹೊರಟಾಗಿತ್ತು. 
Alleppey ಹಿನ್ನೀರು ಮತ್ತೊಂದು ದಿನ ನಮ್ಮನ್ನಲ್ಲಿಯೇ ಇರಿಸಿಕೊಂಡಿತ್ತು. ಆದರೆ ಮತ್ತೆ ಬೋಟ್ ಗೆ ಅಷ್ಟು ದುಡ್ಡು ಕೊಡೋ ಇಷ್ಟವಿಲ್ಲದೆ ಆಯ್ದುಕೊಂಡಿದ್ದು ferry drive. ಆ ಕಡಲ ಸಾರಿಗೆಗೆ, ಮಧ್ಯ ಮಧ್ಯ ಸಿಗ್ತಿದ್ದ ferry station ಗಳ  ನೋಡ್ತಾ ಕೂತಿದ್ದವರಿಗೆ ಅಲ್ಲಿಯವರ ಓಡಾಟದ ಬದುಕು, ಆ ಕಷ್ಟಗಳು ಅರ್ಥವಾದಂತಿತ್ತು. ಹಿನ್ನೀರ ದಡದಲ್ಲೆಲ್ಲಾ ಪ್ರತಿ ಮನೆಯ ಎದುರೂ  ಒಂದೊಂದು ದೋಣಿ, ಓಡಾಟಕ್ಕೆಲ್ಲಾ ಅದೇ ಅವರ ಸಾರಿಗೆ. ಆಗಾಗ ಬರೋ ಒಂದೊಂದು ferry. 
ಎರಡನೇ ದಿನದ ಅಲೆಪೀ ಬೇರೆಯದೇ ರೀತಿ ಕಾಣಿಸಿತ್ತು ನಮಗಲ್ಲಿ. ಅದೊಂದು ಕೌತುಕವ ಹೊತ್ತುಕೊಂಡು ಮತ್ತೆ ಮರಳಿಯಾಗಿತ್ತು ರೂಮಿಗೆ. 

     
Sail away from the safe harbor. Explore, Dream, Discover.

ಸಹಿಸೋಕಾಗದ ಸೆಕೆ, ಮತ್ತೆ ಮತ್ತೆ ಬೇಕನ್ನಿಸೋ ಎಳನೀರು, ಬಾಯಲ್ಲಿ ನೀರೂರಿಸೋ ಪರೋಟ, ನಿರಾಸೆ ಮೂಡಿಸೋ ಬನಾನ ಫ್ರೈ, ಅಪ್ಪಮ್ ಘಮ, TODDYಯ ಹ್ಯಾಂಗ್ ಓವರ್, ತೀರಾ ಚಂದವೆನ್ನಿಸೋ ಸಮುದ್ರಗಳು, ಆ ಊರಲ್ಲೇ ಮತ್ತೆ ಮತ್ತೆ ಇರಬೇಕನ್ನೋ  ತರಹದ ಮೋಡಿ ಮಾಡೋ ಹಿನ್ನೀರು, ferry ಡ್ರೈವ್, marine ಡ್ರೈವ್, ಮುಗಿಯದ ಮಾತುಗಳು, ಅದೊಂದಿಷ್ಟು ತಲೆಹರಟೆಗಳು ಎಲ್ಲದರ ಜೊತೆ ಮತ್ತೆ ಮರಳಿಯಾಯ್ತು ನಮ್ಮ ಲೋಕಕ್ಕೆ. 
Much love, 
Bye bye Kerala.

ಇನ್ನೊಂದಿಷ್ಟು ಕಪಿ ತನಗಳು, ಮತ್ತೊಂದಿಷ್ಟು adventure ಗಳು ನಮಗಾಗಿ ಕಾಯ್ತಿವೆ. 
ಮತ್ತೊಂದು ಊರು, ಮತ್ತಿಷ್ಟು ಅಲೆದಾಟಗಳ ಹುಡುಕಾಟದಲ್ಲಿ... 


Saturday, February 6, 2016

ಬದುಕ ಪ್ರೀತಿಗೆ…ಅದರ ರೀತಿಗೆ



ಅದೊಂದು ಸಂಜೆ ಮನೆಯೆದುರು ಶಟಲ್ ಆಡ್ತಾ ಇದ್ದೆ.ಅಲ್ಲೊಂದು ಜೋಡಿ ಕಂಗಳು ಒಂದು ವಾರದಿಂದ ನಾವು ಆಟ ಆಡೋದನ್ನ ನೋಡ್ತಾ ನಗುತಿತ್ತು.ನಾನೋ ಎಲ್ಲರನ್ನೂ ಮಾತಾಡಿಸಬೇಕನ್ನೋ, ಅಕ್ಕ ಪಕ್ಕದವರನ್ನೆಲ್ಲಾ ಫ್ರೆಂಡ್ಸ್ ಮಾಡ್ಕೋಬೇಕು ಅಂತನ್ನೋ category ಅವ್ಳು. ಆ ಮುಗ್ಧ ಕಂಗಳ ಜೊತೆ ಮಾತಿಗೆ ಕೂರಲೇ ಬೇಕಂತ ನಿರ್ಧರಿಸಿ ಸುಮ್ಮನೆ ಎದುರು ಮನೆಯ ಗೇಟ್ ದಾಟಿ ಒಳಗಡೆ ಹೋದೆ ಬರ್ತೀಯಾ ಪುಟ್ಟಾ ಆಟ ಆಡೋಣ ಅಂತ ಕೇಳಿಕೊಂಡು .ಅವ ಸುಮ್ಮನೆ ನಕ್ಕು ನೀವು ಆಟ ಆಡೋದನ್ನ ನೋಡೋದೆ ಖುಷಿ ನಂಗೆ ಇಲ್ಲೇ ಕೂತು ನೋಡ್ತೀನಿ ಅಂತಂದ.ಯಾಕೋ ಆಶ್ಚರ್ಯ ಅನಿಸಿಬಿಟ್ತು ಆ ಪುಟ್ಟ ಪೋರನ ಮಾತು.ಆದರೂ ಅವನ ಜೊತೆ ಆಟ ಆಡಲೇಬೇಕಂತ ನಿರ್ಧರಿಸಿ ಬಂದಿದ್ದವಳಿಗೆ ಅಷ್ಟು ಬೇಗ ಮಾತಲ್ಲಿ ಸೋಲೋ ಮನಸಿರಲಿಲ್ಲ. ನೀ ಈಗ ಆಟ ಆಡೋಕೆ ಬರ್ತೀಯ ಅಷ್ಟೇ ಅಂತಂದು ಎದ್ದು ನಿಲ್ಲಿಸೋಕೆ ಹೋದೆ. ಆಗಲೇ ತಿಳಿದಿದ್ದು ಅವ ಎದ್ದುನಿಲ್ಲೋಕಾಗಲ್ಲ ,ಅವನ ಕಾಲುಗಳಿಗೆ ಆ ಶಕ್ತಿಯಿಲ್ಲ ಅನ್ನೋ ವಾಸ್ತವ!.

ಅರ್ಧ ಗಂಟೆಯ ಮುಂಚಿನ ಪರಿಚಯ.ಕಣ್ಣಲ್ಲಿ ನಿಲ್ಲಿಸೋಕಾಗದಷ್ಟು ನೀರು! ಹಹ್! ಮುಗ್ಧತೆಯನ್ನ ಮಾತ್ರ ತುಂಬಿಕೊಂಡಿರೋ ಆ ಪುಟ್ಟ ಕಂಗಳಿಗೆ,ಆ ಚಿಕ್ಕ ಚಿಕ್ಕ ಕಾಲ್ಗಳಿಗೆ ಅದ್ಯಾಕೆ ಆ ತರಹದ್ದೊಂದು ದುಃಖ ಖಾಯಂ ಆಯ್ತು ಅನ್ನೋ ಪ್ರಶ್ನೆಯ ಪ್ರತಿಬಿಂಬ ಅವನಮ್ಮನ ಕಣ್ಣಲ್ಲಿ.

ಜಗದೆಲ್ಲಾ ಕೌತುಕಗಳ ತುಂಬಿಕೊಂಡಿರೋ ಕಂಗಳವು. ಏನೋ ಒಂದು ಆಕರ್ಷಣೆ ಇದೆ ಆ ಕಂಗಳಲ್ಲಿ. ನಡೆಯೋಕೇ ಆಗದಿದ್ರೂ ಎದ್ದು ನಿಲ್ತಾನೆ ಅವ.ಅಮ್ಮ ಹೋಗಿ ಕೈ ಹಿಡಿದುಕೊಂಡ್ರೆ ಎಷ್ಟು ದಿನ ಅಂತ ಕೈ ಹಿಡಿದುಕೊಂಡಿರ್ತೀಯ ಅಮ್ಮಾ ಕೊನೆಪಕ್ಷ ನಾ ಎದ್ದು ನಿಲ್ಲೋಕಾದ್ರೂ ಅವಕಾಶ ಕೊಡು ಅಂತಾನೆ! ಸ್ನಾನ ಮಾಡಿಸಿಕೊಡ್ತೀನಿ ಕಣೋ ಅಂತಂದ್ರೆ ನಾ ದೊಡ್ದವನಾಗಿದೀನಿ ನನ್ನ ಕೆಲಸಗಳ ನಂಗೆ ಮಾಡಿಕೊಳ್ಳೋಕೆ ಬಿಡಿ ಅಂತಾನೆ. ಅಪ್ಪ ಎತ್ತಿಕೊಳ್ಳೋಕೆ ಹೋದ್ರೆ ನಂಗೊಂದು ಸ್ಟಿಕ್ ಕೊಡಿಸಿ ಯಾವಾಗಲೂ ಎತ್ತಿಕೊಳ್ಳೋಕೆ ನಿಮಗೂ ಕಷ್ಟ ಆಗುತ್ತೆ ಅಂತಾನೆ. ಅರೆರೆ ಅವ ಪುಟ್ಟ ಹುಡುಗನೋ ದೊಡ್ಡ ಗೆಳೆಯನೋ ಅನ್ನೋ ಪ್ರಶ್ನೆ ನಂಗೆ .

ತನ್ನಿಂದ ಯಾರಿಗೂ ನೋವಾಗದಿರಲಿ ಬದಲು ಅಪ್ಪ ಅಮ್ಮನ ಬದುಕಿಗೆ ತಾನೇ ಊರುಗೋಲಾಗ ನಿಲ್ಲುವಂತಾಗಲಿ ಅಂತನ್ನೋ ಆ ಒಂಭತ್ತರ ಪೋರನಲ್ಲಿ ನಂಗೊಬ್ಬ ಪ್ರಬುದ್ಧ ಗೆಳೆಯ ಕಾಣ್ತಾನೆ. ಕಾಲಿಲ್ಲದ್ದು,ನಡೆಯೋಕಾಗದೇ ಇದ್ದಿದ್ದು, ಶಾಲೆಯಲ್ಲಿ ಯಾರೂ ಮಾತಾಡಿಸದೇ ಇದ್ದಿದ್ದು, ಎಲ್ಲರ ತರಹ ಆಟ ಆಡೋಕಾಗದೆ ಇದ್ದಿದ್ದು,ಅಮ್ಮನ ಜೊತೆಗೆ ಜಾತ್ರೆಗೆ ಹೋಗೋಕಾಗದೇ ಹೋದುದ್ದು, ಅಪ್ಪನ ಹೊಸ ಬೈಕ್ ಅಲ್ಲಿ ಕೂರೋಕಾಗದೇ ಹೋಗಿದ್ದು, ಪಕ್ಕದಲ್ಲೇ ಇರೋ ವಸ್ತುವ ತೆಗೆದುಕೊಳ್ಳೋಕೂ ಅಮ್ಮನ ಸಹಾಯ ಬೇಕಿರೋದು ಯಾವುದೂ ಅವನ ಬೇಸರಗಳೇ ಅಲ್ಲ. ಇದ್ಯಾವ ನೋವೂ ಅವನನ್ನ ಕಾಡ್ತಿಲ್ಲ. ಬದಲು ಈ ’ಇಲ್ಲ’ ಅನ್ನೋ ಕೊರಗು ಅವನಲ್ಲೊಂದು ಅದಮ್ಯ ಆತ್ಮವಿಶ್ವಾಸವ ಹುಟ್ಟಿ ಹಾಕಿದೆ. ಅವನ ಕಂಗಳಲ್ಲಿ ನಾ ಆ ಬದುಕ ಪ್ರೀತಿಯ ಇಂಚಿಂಚನ್ನೂ ಗ್ರಹಿಸಿದ್ದೀನಿ. ಅವನ ಈ ಬದುಕ ರೀತಿಯ ಬಗೆಗೆ ನಂಗೆ ತುಂಬಾ ಖುಷಿ ಇದೆ.ಜೊತೆಗೆ ಅವ ನನ್ನ ಪುಟಾಣಿ ಗೆಳೆಯ ಅನ್ನೋ ಹೆಮ್ಮೆಯಿದೆ.

ಅವ ಪ್ರೀತಿಯಿಂದ ’ಅಕ್ಕಾ’ ಅಂದ್ರೆ ನಂಗೆ ದೂರದ ಊರಲ್ಲಿರೋ ನನ್ನ ತಮ್ಮ ನೆನಪಾಗ್ತಾನೆ. ಅವ ಸುಳ್ಳು ಸುಳ್ಳೇ ಹಠ ಮಾಡೋವಾಗ ನಂಗೆ ನೋವೇ ಇಲ್ಲ ಅನ್ನೋ ಹಾಗೆ ನಕ್ಕುಬಿಡ್ತೀನಿ ನಾ. ಅದು ನನ್ನಕ್ಕ ಅಂದ್ರೆ ಅಂತ ಮುದ್ದು ಮಾಡಿಕೊಳ್ತಾನೆ ಆಗೆಲ್ಲಾ. ಬಂಧ ಬೆಸೆದಿರೋದು ಬರೀ ಅವನ ಜೊತೆ ಮಾತ್ರ ಅಲ್ಲ. ಅವನಮ್ಮ ನಂಗೊಬ್ಬ ಹೆಣ್ಣು ಮಗಳಿರದ ಕೊರತೆಯ ನೀ
ನೀಗಿಸಿಬಿಟ್ಟೆ ಅಂತ ಎದೆಗವಚಿಕೊಳ್ತಾಳೆ. ಅವನ ಟೀಚರ್ಸ್ ಗಳು ಚಂದ ಚಂದದ ಪದ್ಯ ಬರೀತೀಯ ಅವ ಅಷ್ಟೇ ಚಂದದಿ ಕಂಪೋಸ್ ಮಾಡ್ತಾನೆ ಅಂತ ಕೆನ್ನೆ ಹಿಂಡಿ ಹೋಗ್ತಾರೆ. ಒಮ್ಮೆ ನಾನವನ ಅಕ್ಕ ಆದ್ರೆ ಒಮ್ಮೊಮ್ಮೆ ಅವ ನನ್ನ ಅಣ್ಣ ಆಗ್ತಾನೆ. ನಾ ಸುಮ್ಮನೆ ವಯೋಲಿನ್ ಹೇಳಿಕೊಡ್ತೀನಿ ಬಾರೋ ಅಂತಂದ್ರೆ ಗುರು ದಕ್ಷಿಣೆ ಅಂತ ನಾನೂ ನಿಂಗೆ ತಬಲ ಕಲಿಸಿಕೊಡ್ತೀನಿ ಅಂತಾನೆ. ಅಂದಹಾಗೆ ಈಗವ ನನ್ನ ತಬಲ ಗುರು ಕೂಡಾ!

ದಾರಿಯ ಮಧ್ಯದ ಅನಿರೀಕ್ಷಿತ ಸೋಲಿಗೆ ಕಂಗಾಲಾಗಿ ಕೂತಿದ್ದಾಗ ಸಿಕ್ಕ ಪುಟ್ಟ ಜೀವ ಅದು. ಬರೀ ಎದ್ದು ನಿಲ್ಲೋದನ್ನಷ್ಟೇ ಅಲ್ಲ ನಿಂತು ತಲೆಯೆತ್ತಿ ನಡೆಯೋದನ್ನೂ ಹೇಳಿಕೊಟ್ಟುಬಿಟ್ಟಿದ್ದಾನೆ. ಇನ್ನೇನಿದ್ದರೂ ನಿಲ್ಲದ ನಡಿಗೆ ಮಾತ್ರ. ಆ ನಡಿಗೆಯ ಸಂಪೂರ್ಣ ಖುಷಿ ಮಾತ್ರ ನನ್ನದು. ಬದುಕ ಜೊತೆಗಿನ ಯಾವುದೋ ಚಿಕ್ಕ ಚಿಕ್ಕ ಮನಸ್ತಾಪಗಳಿಗೆ ಬದುಕೇ ಕೊನೆಯಾಯ್ತು ಅಂತ ಕೊರಗೋ ನಮ್ಮಗಳಿಗೆ ಅವ ಅಲ್ಲಿ ಸುಮ್ಮನೆ ಕೂತು ಅದೆಷ್ಟು ಆತ್ಮಸ್ಥೈರ್ಯವ ರವಾನಿಸಿಬಿಡ್ತಾನೆ. ಅವನೊಳಗಿರೋ ಆ ಚೈತನ್ಯಕ್ಕೆ ನನ್ನದೊಂದು ಪ್ರೀತಿಯ ನಮನ.

ಆಗೆಲ್ಲಾ ಬೋರು ಅನ್ನುತ್ತಿದ್ದ ಸಂಜೆಗಳು ಈಗವನ ಜೊತೆ ಬಣ್ಣ ಬಣ್ಣವಾಗಿ ಕಾಣುತ್ತೆ. ಆಗಲೇ ಗಂಟೆ ಎಂಟಾಯ್ತು ಕಣೋ ಹೊರಡ್ತೀನಿ ಅಂತ ನಾ ಹೊರಟರೆ ಮತ್ತೆ ನಾಳೆ ಸಂಜೆ ಬೇಗ ಬಾ ಅಂತ ಕಳಿಸಿಕೊಡ್ತಾನೆ ಅವ.

ಒಂಟೊಂಟಿ ಅನ್ನೊಸೋ ಭಾವಗಳ್ಯಾವುವೂ ಕಾಡ್ತಿಲ್ಲ ಬದಲು ಸಂಜೆಗಳನ್ನ ತುಂಬಾ ಪ್ರೀತಿಸೋಕೆ ಶುರು ಮಾಡಿದ್ದೀನಿ.

ಒಂದಿಷ್ಟು ’ಇಲ್ಲ’ಗಳ ನಡುವೆಯೂ ಬದುಕ ಎಲ್ಲಾ ಖುಷಿಗಳು ನನ್ನೀ ಮುದ್ದು ಗೆಳೆಯನಿಗೆ ದಕ್ಕಲಿ. ಆ ಖುಷಿಗಳಲ್ಲಿ ಅವನ ಬದುಕ ಗೆಲುವಿರಲಿ. ಆ ಗೆಲುವ ಜೊತೆಗಿನ ಅವನ ಆತ್ಮವಿಶ್ವಾಸ ಭವಿಷ್ಯದಲ್ಲವನ ಕಾಯಲಿ. ಸುಮ್ಮನೆ ಪರಿಚಯವಾದ ಈಗ ಬರಿಯ ಪರಿಚಯವಲ್ಲದ ಈ ಆತ್ಮೀಕ ಪ್ರೀತಿಗೆ, ಇರಲಿ ನಿಮ್ಮದೂ ಒಂದು ಶುಭ ಹಾರೈಕೆ.

ಅವನಲ್ಲಿರೋ ಬದುಕ ಪ್ರೀತಿಗೆ,ಅದರ ರೀತಿಗೆ..ಕಣ್ಣ ಹನಿಗಳೇ ಕಾಣಿಕೆ.

(ಪಂಜು ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿತ್ತು . ಲಿಂಕ್ ಗಾಗಿ http://www.panjumagazine.com/?p=9592)