Sunday, April 28, 2013

ನೀನಿಲ್ಲದೇ ....ಅವತ್ತೇ ಹೇಳಿದ್ದಳು ಅವಳವನಿಗೆ ...
"ಬದುಕಲ್ಲಿ ಕಳಕೊಂಡಿದ್ದನ್ನ ಮಾತ್ರ ಹುಡುಕು..ಸಿಗದಿದ್ದ ಪ್ರೀತಿಯನ್ನೇಕೆ ಕಳಕೊಂಡ ಪ್ರೀತಿ ಅನ್ನುತ್ತೀಯಾ !ಸಿಗದೇ ಕಳೆದು ಹೋದುದರ ಬಗ್ಗೆ ನಿನಗಿರೋ ಅತಿಯಾದ ವ್ಯಾಮೋಹಕ್ಕೆ ನನ್ನಲ್ಲಿ ಯಾವ ಶಬ್ಧವೂ ಇಲ್ಲ ...
ಗೆಳೆಯಾ, ಬೇಸರಿಸದಿರು ..ನಾ ನಿನ್ನವಳಲ್ಲ "

ಬದುಕ ಪ್ರಶ್ನೆಗೆ ನೇರಾ ನೇರಾ ಉತ್ತರ ಕೊಟ್ಟಿದ್ದ ಅವಳ ಬಗೆಗೊಂದು ಆಶ್ಚರ್ಯದ ನೋಟ ನಂಗೆ ಮೂಡಿದ್ದು ಸಹಜ ಅನ್ನೋ ಭಾವ ನಂದು ...

ವರ್ಷವೊಂದರ ಹಿಂದಿನ ಮಾತು ....

ಅವಳಂದ್ರೆ ......
ಮೌನ ಗೌರಿ ! ತನ್ನ ಪಾಡಿಗೆ ತಾನಾಯ್ತು ,ತನ್ನ ಓದಾಯ್ತು ಅಂತಿದ್ದವಳು...ಹೀಗೆಯೇ ಇರಬೇಕೆಂಬ ಕಟ್ಟುಪಾಡುಗಳೂ ಇಲ್ಲದೇ ,ಹೇಗೋ ಇದ್ದರಾಯ್ತು ಅನ್ನೋ ಉದಾಸೀನ ಭಾವವೂ ಇಲ್ಲದೇ .....

ಬದುಕ ಬಗೆಗೆ ಯಾವುದೇ ಬೇಸರವಿಲ್ಲದೇ ,ಬದುಕ ರೇಸ್ ನಲ್ಲಿ ಮುಂದೆಯೆ ಇರಬೇಕೆಂಬ ಧಾವಂತವೂ ಇಲ್ಲದೇ ,ಬದುಕೊಂದಿಗೆ ಯಾವುದೇ ನಿರೀಕ್ಷೆ ಇಲ್ಲದೆ ಇದ್ದ ಸಾದಾ ಸೀದಾ ಹುಡುಗಿ ಅವಳು....

ಸೌಮ್ಯ ಸ್ವಭಾವ ,ಸ್ನೇಹದ ಕುರುಹು ಸಿಕ್ಕರೂ ಸ್ವಲ್ಪ ಆತ್ಮೀಯತೆ ತೋರಿದ್ರೂ ಅವರನ್ನ ಹಚ್ಚಿಕೊಳ್ಳೋ ಅಷ್ಟು ಭಾವ ಜೀವಿ ..

ಪ್ರೀತಿ ಪ್ರೇಮದ ಬಗ್ಗೆ ವಯೊ ಸಹಜ ಕುತೂಹಲ ಬಿಟ್ರೆ ಬೇರೆ ಯಾವ ಮಧುರ ಭಾವಗಳೂ ಮೂಡಿರದ ಮನವದು ....ಪ್ರೀತಿಯ ನಿವೇದನೆ ಮಾಡಿಕೊಂಡಿದ್ದ ಅದೆಷ್ಟೋ ಹುಡುಗರಿಗೆ ಅವಳ ಮೌನವೆ ಉತ್ತರವಾಗಿ ಆ ಮೌನವೇ ಬೇಸರ ತರಿಸಿ ಅವರ್ಯಾರೂ ಅವಳ ತಂಟೆಗೆ ಬರದೇ ಸುಮ್ಮನಾಗುತ್ತಿದ್ದರು ...

ಇಂತದ್ದೇ ಒಂದು ಸಂದರ್ಭದಲ್ಲಿ ಮಾತಾಡಿಸಿದ್ದ ಹುಡುಗ ಅವನು ....

ಸ್ವಲ್ಪ ಆತ್ಮೀಯತೆಗೆ ಮಾರು ಹೋಗುತ್ತಿದ್ದ ಹುಡುಗಿಗೆ ಅವನ ಪ್ರೀತಿಯ ಆತ್ಮೀಯತೆಗೆ ಮಾತೆ ಬರುತ್ತಿರಲಿಲ್ಲ !...ತನಗಿಂತ ಅವಳನ್ನೇ ಹೆಚ್ಚು ಇಷ್ಟಪಡೊ ಹುಡುಗ ಅವನು ...!


                           
ಸ್ನೇಹದ ಸಲುಗೆಯಲ್ಲಿ ಆತ್ಮೀಯತೆಯ ಮಾತಲ್ಲಿ ಕಳೆದು ಹೋಗಿದ್ದಳು ...ಬದುಕಲ್ಲಿ ಒಂದಿಷ್ಟು ಬದಲಾದ ಭಾವಗಳ ಅನುಭವ ಆಗುತ್ತಿತ್ತು ...ಬದುಕ ಬಗೆಗೆ ನಿರೀಕ್ಷೆ ಒಂದು ಮೂಡಿತ್ತು ..

ತನಗಾಗಿ ಒಬ್ಬ ಆತ್ಮೀಯನಿರೋ ಭಾವ ಬಲವಾಗಿತ್ತು ....ಮನದ ಮಾತು ಕೇಳೋಕೆ ಒಂದು ಸುಂದರ ಮನವಿತ್ತು ...ಅಳುವ ಕಂಗಳಿಗೇ ಸಮಾಧಾನಿಸೋ ಕೈ ಒಂದಿತ್ತು ...ನೋವ ಭಾವಕ್ಕೆ ಜೊತೆಯಾಗೋ ತೋಳಿತ್ತು ....ಅದೆಷ್ಟೋ ಬಾರಿ ಆ ತೋಳಲ್ಲಿ ಮುಖ ಹುದುಗಿಸಿ ಕಳೆದ ಒಂಟಿ ತನದ ನೆಮ್ಮದಿಯಿತ್ತು .....

ಅಲ್ಲೊಂದು ನಿಶ್ಕಲ್ಮಶ ಪ್ರೀತಿಯ ಸ್ನೇಹವಿತ್ತು ...ಸ್ನೇಹದ ಸಲುಗೆಯಿತ್ತು ..ಸ್ನೇಹಿತನ ಪ್ರೀತಿಯಿತ್ತು ...ಪ್ರೀತಿಯಲ್ಲೊಂದು ಕಾಳಜಿಯಿತ್ತು ...

ಬಹುಶಃ ಬದುಕಿಗೆ ಬೇಕಾದ ಎಲ್ಲಾ ಭಾವಗಳೂ ಅಲ್ಲಿದ್ದವೇನೋ .....ಕಳಕೊಂಡ ಬದುಕ ಪ್ರೀತಿ ಮತ್ತವಳಿಗೆ ದಕ್ಕಿತ್ತು !

ಯಾರಿಗೂ ಕಾಯದ ಕಾಲ ಹೀಗೇ ಸಾಗಿತ್ತು ...

ಅಂತದ್ದೇ ಒಂದು ದಿನ ...

ಮುಸ್ಸಂಜೆಯ ತಂಗಾಳಿಗೆ ಮೈಯೊಡ್ದಿ ಅವನು ಹೇಳಿದ್ದ ...

ಗೆಳತಿ ....ತುಂಬಾ ದಿನದಿಂದ ಬಚ್ಚಿಟ್ಟುಕೊಂಡ ಭಾವ ಇದು ...ನಂಗೇ ಗೊತ್ತಿಲ್ಲದೇ ನಾ ನಿನ್ನೆಡೆಗೆ ವಾಲಿದ್ದೇನೆ...ಹೇಳೋಕೆ ಧೈರ್ಯ ಇಲ್ಲದೇ ಹೇಳದೆ ಇರಲೂ ಅಗದೇ ಅದೆಷ್ಟೋ ನೀರವ ರಾತ್ರಿಗಳು ಸಂದ ಮೇಲೆ ಇವತ್ತು .... ..ಇವತ್ತು..ನಿನ್ನೆದುರು ಮಂಡಿಯೂರಿ ಕೇಳ ಬಂದೆ ...ನೀ ನನ್ನ ಜೀವದ ಗೆಳತಿ ...ಜೀವನದ ಸಂಗಾತಿಯಾಗು ಬಾ ......

ಅಲೆಯೊಂದಕ್ಕೆ ಮುಖವೊಡ್ಡಿ ಖುಷಿಸುತ್ತಿರೋವಾಗ ಬಂದ ಅದೇ ಅಲೆಗೆ ಕೊಚ್ಚಿ ಹೋದ ಭಾವ ಅವಳದ್ದು !!

ತುಂಬಾನೇ ಇಷ್ಟ ಪಡೋ ಅಲೆಯೊಂದು ಅವಳನ್ನೆ ಎಳೆದುಕೊಂಡು ಹೋಗಿತ್ತಲ್ಲಿ ...

ಸ್ವಚ್ಚ ಸುಂದರ ಪರಿಶುದ್ದ ಸ್ನೇಹ ನಮ್ಮದೆಂಬ ಅವಳ ಮನದ ಭಾವವನ್ನೂ ಕೊಚ್ಚಿ ಹೋಗೋ ಅಷ್ಟು ಶಕ್ತಿ ಹೊಂದಿದ್ದ ಆ ಅಲೆಯನ್ನು ನೋಡಿ ಕ್ಷಣವೊಂದಕ್ಕೆ ಅವಳೂ ನಿಬ್ಬೆರಳಾಗಿದ್ದಳು...

ಆಗಷ್ಟೇ ಪಡಕೊಂಡ ಸ್ನೇಹವಲ್ಲದ ಪ್ರೇಮದ ಪ್ರೀತಿ ಅವಳ ಬದುಕ ಪ್ರೀತಿಯನ್ನ ಅಕ್ಷರಶಃ ಕೊಂದಿತ್ತು ...

ಸ್ನೇಹಕ್ಕೂ ಮೀರಿದ ಪ್ರೀತಿಯ ಭಾವ ಅವಳಿಗ್ಯಾವತ್ತೂ ಅನುಭವವಾಗಿರಲೇ ಇಲ್ಲ ...ಅವನಿಗಾ ಭಾವ ಬರೋ ತರ ತಾನ್ಯಾವತ್ತು ನಡಕೊಂಡೆ ಅಂತ ಒಬ್ಬಂಟಿಯಾಗಿ ಕೂತು ಅದೆಷ್ಟೋ ಮುಸ್ಸಂಜೆಯಲ್ಲಿ ತನ್ನನ್ನೇ ತಾ ಪ್ರಶ್ನಿಸಿಕೊಂಡಳು .....ಅದು ಅವ ಅಂದುಕೊಂಡ ಭಾವ ಕಣೇ ನೀನ್ಯಾಕೆ ಅಷ್ಟು ಬೇಸರ ಮಾಡ್ತೀಯಾ ಆ ಭಾವಕ್ಕೆ ಅಂತ ಸಂತೈಸ ಬರೋ ಮನವನ್ನ ದೂರ ಕಳಿಸಿ ಕಳಿಸಿ ತನ್ನನ್ನ ತಾ ಕೇಳುತ್ತಿದ್ದಳು ...

ಕೊನೆಗೊಮ್ಮೆ ಸಿಕ್ಕ ಉತ್ತರ ಮಾತ್ರ ಅವಳನ್ನ ಮಂಕಾಗಿಸಿತ್ತು ...


                                 
"ಹುಚ್ಚು ಹುಡುಗಿ ...ಹುಡುಗನೊಟ್ಟಿಗಿನ ಸ್ನೇಹ ತುಂಬಾ ದಿನ ಪರಿಶುದ್ಧ ಸ್ನೇಹವಾಗಿ ಉಳಿಯಲ್ಲ ಕಣೇ ...ಸ್ನೇಹ ಕಾರಣವಿಲ್ಲದೇ ಪ್ರೀತಿಯಾಗಿ ಹೋಗುತ್ತೆ ...ನಿನ್ನೀ ಸ್ನೇಹದ ಸಲುಗೆಯೇ ,ಆತ್ಮೀಯತೆಯ ಭಾವವೆ ಅವನಿಗೆ ನಿನ್ನದೂ ಪ್ರೀತಿ ಅನ್ನಿಸಿರಬಹುದು ....ನೀ ಹಂಚಿಕೊಂಡ ನಿನ್ನ ದುಃಖ ,ತಲೆಯಿರಿಸಿ ಅತ್ತ ಕಣ್ಣ ಹನಿ ಅವನ ಎದೆಗೆ ನಿನ್ನ ಮಧುರ ಪ್ರೀತಿಯ ಅನುಭವ ನೀಡಿದೆ ಗೆಳತಿ ....ಬೇಸರಿಸದಿರು ....ಅವನ ಪ್ರೀತಿಯನ್ನ ಒಪ್ಪಿ ಅಪ್ಪಿಕೊಂಡುಬಿಡು ಒಮ್ಮೆ " ಮಾತಾಡಿದ ಮನವನ್ನ ಧಿಕ್ಕರಿಸಿ ಅಂದಿನಿಂದ ಮನದ ಮಾತನ್ನ ಕೇಳೋದನ್ನ ಬಿಟ್ಟಿದ್ದಳು ....

ಅದೇ ಮುಸ್ಸಂಜೆಯಲ್ಲಿ ಒಬ್ಬಂಟಿಯಾಗಿ ಬಿಕ್ಕಿ ಬಿಕ್ಕಿ ಅತ್ತಾಗ ಸಂತೈಸ ಬರೋಕೆ ಅವನಿರಲಿಲ್ಲ ..ಕಣ್ಣೀರ ಹನಿಯಾಗಿ ಕೈ ಇಂದ ಜಾರಿ ಹೋಗಿದ್ದ ...

ಮತ್ತದೇ ವರ್ಷದ ಹಿಂದಿನ ಬದುಕಿನೆಡೆಗೆ ಫ಼ೆದರ್ ಲೈಟ್ ಆಗಿರೋ ಬದುಕಿನೆಡೆಗೆ ಮುಖ ಮಾಡಿದ್ದಳು ..ಸ್ನೇಹದ ಆತ್ಮೀಯತೆಯೊಂದನ್ನು ಕಳಕೊಂಡ ಭಾರದ ಮನದೊಂದಿಗೆ ....

ಮೊದಲೇ ಮಿತಭಾಷಿಯಾಗಿದ್ದ ಅವಳು ಈಗ ಅಕ್ಷರಶಃ ಮೌನಿ...

ಹುಡುಗರನ್ನ ನೋಡೋಕೂ ಭಯ ಪಡೋ ಹುಡುಗಿಯಾಗಿ ಬಿಟ್ಟಿರೋ ಈ ಹುಡುಗಿ ...ಹುಡುಗು ಬುದ್ದಿಯಿಲ್ಲ ....ಎಲ್ಲಾ ಭಾವಕ್ಕೂ ಒಂದೆ ಭಾವ ...ಮೌನದ ಸತ್ವ ಇಲ್ಲದ ನಗು ಮಾತ್ರ ಅವಳದೆನ್ನೋ ತರದ ಭಾವ ...

ಕಳಕೊಂಡ ಸ್ನೇಹವನ್ನ ಹುಡುಕಿ ಎಲ್ಲೂ ಸಿಗದೆ ಕೊನೆಗೆ ಪ್ರೀತಿ ಒಪ್ಪಿ ಕೊಳ್ಳದಿರೋದೆ ತಪ್ಪು ಅಂತ ಕೂಗಿ ಕೂಗಿ ಹೇಳೋ ಮನದ ಮೇಲೂ ಬೇಸರವೆನೆಸಿ ...ಸ್ನೇಹದ ಮುಖವಾಡದ ಹುಡುಗನ ಮೇಲೆ ಕರುಣೆ ತೋರಿ ....ಇನಿಯನಾಗಿ ಕಾಣದ ಪ್ರೀತಿ ಸ್ನೇಹದ ಪರಿಯನ್ನೇ ನೀಡೋ ಪರಿಯನ್ನ ದಿಟ್ಟಿಸಿ.....ಮತ್ತದೇ ನೀರವ ಸಂಜೆಗಳಲ್ಲಿ ಬರದಿದ್ದ ಚಂದಿರನನ್ನು ಹುಡುಕುತ್ತಾ ಮೂಕವಾಗಿ ರೋದಿಸೋ ಅವಳ ಬಗ್ಗೆ ಮರುಕವಿದೆ ...

 

ಈಗಲೂ ಗೆಳೆಯನಾಗಿ ಬಂದಿದ್ದ ಅವನ ಬಗ್ಗೆ ಅವಳಿಗೆ ಸ್ವಚ್ಚ ಸ್ನೇಹದ ಪ್ರೀತಿಯಿದೆ ....ಸ್ನೇಹಿತೆಯಾಗಿ ಆಧರಿಸೋ ಮನವಿದೆ ...ಪ್ರೀತಿಯ ಸ್ಪರ್ಶದ ಆಶಯವಿದೆ ....

ತಲೆ ನೇವರಿಸೋ ಆಸೆಯಿದೆ ..

ಕನಸಲ್ಲಿ ರಾಜಕುಮಾರನಾಗಿ ಅದೇ ಹುಡುಗ ಬಂದಾಗ ಬದುಕಿನಿಂದ ಎದ್ದು ಹೋಗೋ ಅಷ್ಟು ಅಸಹನೀಯ ಭಾವವಿದೆ ಆ ಪ್ರೀತಿಯ ಬಗ್ಗೆ ....

ತಲೆಗೊಂದು ಮೊಟಕಿ ನೀ ನನ್ನ ಗೆಳೆಯ ಕಣೋ ...ಮಧುರ ಪ್ರೀತಿಯನ್ನ ಕೊಡೋ ಇನಿಯನಾಗ್ತೀನಿ ಅನ್ನೋ ಹಟ ಬಿಟ್ಟು ಮೃದು ಮಧುರ ಗೆಳೆತನವನ್ನ ಮರಳಿ ಕೊಡ್ತೀನಿ ಅಂತ ಹೇಳೋ ಅವನ ಒಂದು ಮಾತಿಗಾಗಿ ಕಾಯ್ತಾ ...

ಮತ್ತದೇ ಭಾವಕ್ಕೆ ಭಾವವಾಗೋ ಗೆಳೆಯನ ನಿರೀಕ್ಷೆ ಮಾಡೋ ಹುಚ್ಚು ಮನಸ್ಸಿದೆ .....

ಈ ಹುಡುಗಾ ಪರಿಚಿತನಾ ....????...ಪೂರ್ತಿಯಾಗಿ ಅಪರಿಚಿತನಾ ???

ಅವತ್ತು .....ಪರಿಚಿತನಾಗಿದ್ದ ಅಪರಿಚಿತ..... ಇವತ್ತು ....ಅಪರಿಚಿತನಂತಿರೋ ಪರಿಚಿತ !!

(ಅಕ್ಷರ ಅವೇ ...ಅದ್ರೂ ಅಪರಿಚಿತನಾಗೋ ಅತೀ ಪರಿಚಿತನ ನೋವ ಭಾವ ಅವಳಿಗೆ ಮಾತ್ರಾ ಗೊತ್ತೇನೊ )

 

Monday, April 22, 2013

ಮಂಜಾದ ಬದುಕು ....!


ಸುಮ್ಮನೆ ನೋಡಿದ್ದ ಮೊನ್ನೆಯ ಫೋಟೋ ಅದು ....ಒಂದಿಷ್ಟು ದುಃಖ ,ಹೇಳಲಾಗದ ಬೇಸರ , ಅಸಹಾಯಕತೆಯ ವಿಧಿಯ ಬದುಕಿದು ಅನ್ನೋ ಭಾವಕ್ಕೆ ...ಅದೇನೋ ಸ್ಪಷ್ಟವಾಗಿರದ ಭಾವವನ್ನ ಕೇಳೋಕೆ ಶಬ್ದ ಸಿಗದೆ ಕಷ್ಟ ಪಟ್ಟು ಕೇಳಿದ್ದೆ
"
ಬದುಕು ನಾವಂದುಕೊಂಡಂತಿಲ್ಲ ಗೆಳತಿ....ಒಮ್ಮೆ ಹೊರ ಬಂದು ನೋಡು ದುಃಖಿಸೋ ಇಳಿ ಜೀವಗಳೆಷ್ಟಿವೆಯೆಂದು "ಎಂದು ಹೇಳಿ ಇನ್ನೂ ಗೋಜಲು ಮಾಡಿದ್ದ ಭಾವ ಗೊಂಚಲಿನಲ್ಲಿ ಶ್ರೀವತ್ಸ ಕಂಚಿಮನೆ ...
ನಿನ್ನೀ "ಮಂಜಾದ ಬದುಕು " ನಾ ನೋಡಿರದ ಬದುಕನ್ನ ಕಣ್ಣ ಮುಂದಿಟ್ಟಿದೆ ..

ದುಸ್ತರ ಬದುಕಿನ ಸುತ್ತ......


ಮುರುಕು ಮನೆಯೆದುರು ಒಂಟಿಯಾಗಿ ಬಿಕ್ಕುತ್ತಿರೋ ಜೀವ

ಸಂಗಾತಿಯ ಅಗಲುವಿಕೆ ನೀಡಿದ ಒಂಟಿತನದ ನೋವ ....

ಹಾಯಿ ದೂರ ನೋಡೋ ದಾರಿಯಲ್ಲೊಂದು ಭರವಸೆಯ ನಿರೀಕ್ಷೆ
ಎಂದಿನಂತೆ ಮುಂದುವರೆಯೋ ಒಪ್ಪತ್ತೂಟದ ನಿರಾಸೆ ...


ಕೊಲ್ಮಿಂಚಿನ ಅಂಚಿಂದ ಕಾರ್ಗತ್ತಲೆಯ ಕೂಪದಲ್ಲಿ....

ನನ್ನೊಟ್ಟಿಗೆ ನನ್ನ ಬೆಕ್ಕೂ ಕಣ್ಣೀರಿಡುತ್ತಿದೆ ನನ್ನರಮನೆಯಲ್ಲಿ...
ಇಬ್ಬರ ಬೇಸರಕ್ಕೂ ....
ನಿನ್ನ ಖುಷಿಗೂ ...

ನನ್ನ ಕಲ್ಪನೆಯ ಬದುಕು ಇವರ ವಾಸ್ತವದ ಬದುಕಲ್ಲಿ ಕಳೆದೋದ ಭಾಸ ...
ವಾಸ್ತವಕ್ಕೂ ಕಲ್ಪನೆಗೂ ನಡುವೆ ಇರೋ ಆಭಾಸ ...

ಬದುಕೆ ..

ನಿನಗದೆಷ್ಟು ಧಾರಾಳ ತನ !!!

ನಾ ನನ್ನ ಮನೆಯ ಯಜಮಾನಿಯಾಗಿ ಮೆರೆಯಬೇಕೆಂದು ಕೇಳಿರಲಿಲ್ಲ ...
ಸಾಲು ಸಾಲು ದುಃಖಗಳ ಯಜಮಾನಿಯಾಗಿ ಮಾಡಿರೋ ನಿನ್ನೀ ಧಾರಾಳ ಪ್ರೀತಿಗೊಂದು ಪ್ರೀತಿಯ ನಮನ ...

ಖುಷಿಸೋ ಜೀವನ ಕೇಳಿರಲಿಲ್ಲ ನಿನ್ನ ನಾ ...
ಅತೀ ಪ್ರೀತಿಯ ಜೀವನ ಕೊಟ್ಟಿರೋ ನಿನ್ನ ಜೀವನ ಪ್ರೀತಿಗೊಂದು ಶರಣು .....


ಅತೀ ನಿರಾಸೆಯ ಸಾಲು ಸಾಲು ಸುಖಗಳ ಇಳಿ ವಯಸ್ಸಿನ ಸಂತುಷ್ಟ ಬದುಕು ನನ್ನದೆಂಬ ಹೆಮ್ಮೆ ನಂದು ...
ಬದುಕೇ ..ನೀ ಕೊಟ್ಟ ಬದುಕಿಗೆ ಭರವಸೆಯ ಅಂತರದ ಪ್ರೀತಿ ಮಾತ್ರ ನಂದು

 

 
(ಗೋದಾವರಿ ನದೀ ತೀರದಲ್ಲಿರೋ ಅಜ್ಜಿಯ ಪುಟ್ಟ ಪುಟ್ಟ ತೆಂಗಿನ ಕಾಯಿಗೆ ,ಬಿಸಿಲ ಬೇಗೆಗೆ ಬಾಯಾರಿಸೋ ನೀರು ..ಸಣ್ಣ ಸಣ್ಣ ಸ್ವೀಟ್ ಪ್ಯಾಕೆಟ್ ಗಳು ....ಬರಿಯ ಒಪ್ಪತ್ತಿನ ಊಟಕ್ಕಾಗಿ ಇಳಿ ವಯಸ್ಸಲ್ಲಿ ದಾರಿಯುದ್ದಕ್ಕೂ ನೋಡೋ ಕಣ್ಣುಗಳ ನೋವು
ಕ್ಷಣವೊಂದಕ್ಕೆ ನೋವು ,ಬೇಸರವಾಯ್ತು ...ಇಳಿ ವಯಸ್ಸಿನ ನೋವಿಗೆ ಮನ ಹಿಂಡಿದ್ದು ಸುಳ್ಳಲ್ಲ)
ಬದುಕಿನ ಇನ್ನೊಂದು ನೋವಿನ ಭಾವವನ್ನ ತೋರಗೊಟ್ಟಿದ್ದು ನಿನ್ನೀ "ಮಂಜಾದ ಬದುಕು "
ಥಾಂಕ್ಸ್ ಶ್ರೀವತ್ಸಾ ಜಿ

Saturday, April 13, 2013

ಬೇಯುವ ಧಗೆಯಲ್ಲೊಂದು ಹಸುರಾದ ನೆನಪು ...


(ಮತ್ತದೇ ಹಳೇ ...ಪುಟ್ಟ ಹಳ್ಳಿ ಹುಡುಗಿಯ ಮಾತಾಗಿ )


ಮನದ ಧಗೆ... ಬಿಸಿಲ ಕಾವು ....ಬೆಳಗಿನ ಸೂರ್ಯನೊಂದಿಗೇ ಜಾಗ ಇರದಿದ್ದರೂ ಮನ ಸೇರೋ ಬೆವರು!!

 ....ಕಾಡೋ ಭಾವದೊಂದಿಗೆ ಮನದೊಳಗೆ ಹಾದು ಹೋಗೋ ಸೆಕೆಯ ಸಿಟ್ಟು....

ಬಿಸಿಲ ಪಯಣದಲ್ಲೊಂದು ಖಾಯಂ ಸಹ ಪಯಣಿಗನ ಹುಡುಕಾಟ ....

ಮನ ಸುಟ್ಟಿದ್ದು ಸಾಲದೇ ಮೈಯನ್ನೂ ಸುಡ ಬರುತ್ತಿರೊ ಹತಾಶೆಯ ಬೇಗೆ......

ಬೇಯುವ ಬಿಡದೇ ಕಾಡುವ ಉರಿ ಬಿಸಿಲು....

ಮಾತೇ ಬರದಂತೆ ಬಾಯಾರಿಸೋ ಧಗೆ...

ಜೊತೆಗೆ ಕಾಡೋ ಒಂದಿಷ್ಟು ನಿನ್ನೆ ಮೊನ್ನೆಯ ನೆನಪು .....

ಎಲ್ಲವೂ ಸೇರಿ ಸಹಿಸಿಕೊಳ್ಳೋದು ಕಷ್ಟ ಆಗಿ ....ಸಹಿಸಲೇ ಬೇಕಾದ ಅನಿವಾರ್ಯತೆಗಾಗಿ ಒಂದು ಅನಿವಾರ್ಯತೆಯ ಮಾತು ....

ಬೆಳಿಗ್ಗೆ ಬೇಗ ಏಳೋ ಅಭ್ಯಾಸವೇ ಇಲ್ಲದಿರೋರು ಕೂಡಾ ೭ ಗಂಟೆಗೂ ಜಾಸ್ತಿ ನಿದ್ದೆ ಮಾಡೊಲ್ಲ ...ರಾತ್ರಿ ನಿದ್ದೆನೂ ಬರಲ್ಲ ....ಕನಸಲ್ಲಿ ರಾಜಕುಮಾರನೂ ಇರಲ್ಲ ...

ಕ್ಲಾಸ್ ನಲ್ಲಿ ಕೂತು ಬೋರಿಂಗ್ ಪಾಠ ಕೇಳೋಕೇ ನಿಜಕ್ಕೂ ಕಷ್ಟ ಆಗ್ತಿದೆ ..ಮೊದಲಾದ್ರೆ ಬೇಸಿಗೇ ರಜಾ ಇರ್ತಿತ್ತು ನಮ್ಮ ತರ್ಲೆ ಗಳನ್ನ ಸಹಿಸಿಕೊಂಡು ..ಈಗ ತರ್ಲೆ ಮಾಡೋರೂ ಇಲ್ಲ ...ಸಹಿಸಿಕೊಳ್ಳೋರೂ ಇಲ್ಲ ..

.


ಅದ್ಯಾಕೋ ಬೇಸಿಗೆ ರಜಾದ ಮನೆಯಲ್ಲಿನ ಆ ಮಜಾದ ಭಾವಗಳು ಇವತ್ತಿನ ಈ ಬಿಸಿಲ ಝಳಕ್ಕೆ ತಣ್ಣಗಿನ ನೀರಲ್ಲಿ ಸ್ನಾನ ಮಾಡೋಕಂತ ಮೇಲೆ ಬಂದಂತಿದೆ

ಯಾರಿಗ್ ಹೇಳೋಣಾ ನಮ್ಮ ಪ್ರಾಬ್ಲಮ್ ನಾ ....

 

ರಜಾ ಶುರು ಆದ್ರೆ ಬೆಟ್ಟಾ ತಿರ್ಗೋದು ...ಅಮ್ಮ ದೊಡ್ಡಮ್ಮನ ಬೈಗುಳದ ಮಧ್ಯೆನೂ ...ಮಾವಿನ ಕಾಯಿ ,ಊರಲ್ಲಿರೋ ಮುಳ್ಳೆ ಹಣ್ಣು ,ನೇರಳೆ ಹಣ್ಣು ,ಕೌಳಿ ಹಣ್ಣೂ ಕೂಡಾ ನಮ್ಮನ್ನ ಮಿಸ್ ಮಾಡ್ಕೊಳ್ತಾ ಇದ್ಯಂತೆ ಈಗ ...ಆ ಗೇರನ್ನ ಸುಡೋಕೆ ಹೋಗಿ ಕೈ ಸುಟ್ಟುಕೊಳ್ಳೋದು ,ಮಾವಿನ ಹುಳಿ ಜಾಸ್ತಿ ಆಗಿ ಮುಖ ದಪ್ಪ ಆಗೋದು ...ರಜಾ ಬಂದ್ರೆ ನಮ್ಮ ಹಿಂದೆನೇ ಓಡೋ ಅಪ್ಪ ಅಮ್ಮನನ್ನ ನೆನೆಸ್ಕೊಂಡ್ರೆ ಈಗ್ಲೂ ನಗೂ ತಡ್ಯೋಕಾಗಲ್ಲ :)ರಜಾ ಬರ್ದೆ ಇರ್ಲಿ ಅಂತ ದೇವ್ರನ್ನ ಕೇಳೋ ಅಷ್ಟು ಕಾಟ ಕೊಡ್ತಿದ್ವಿ ಅಂದ್ರೆ just imagine

:)

೧ ರೂಪಾಯಿ ಪೆಪ್ಸಿ ಗೆ ಒಂದು ಕಿಲೋಮೀಟರ್ ದೂರ ಅಜ್ಜನೊಟ್ಟಿಗೆ ಹೋಗೋದು...ಅದೂ ಸರಿಯಾಗಿ ಸೂರ್ಯ ನೆತ್ತಿಗೆ ಬರೋ ಸಮಯಕ್ಕೆ :) ಯಾಕಂದ್ರೆ ನಮ್ಮ ಓಡಾಟ ಮುಗಿಯೋದೆ ಸೂರ್ಯನ ಸುಡು ನೋಟ ನಮ್ಮ ಮೇಲೆ ಬಿದ್ದಾಗ ತಾನೆ ....ಅಜ್ಜ ನಾ ಕರೆದಲ್ಲೆಲ್ಲಾ ಬೇಸರಿಸದೇ ಬರೋರು ಅನ್ನೋದು ಪಕ್ಕಾ ಗೊತ್ತಿತ್ತು ...ಹೀಗಾಗೆ ನನ್ನೆಲ್ಲಾ ಕಿಲಾಡಿಗಳಿಗೂ ಅಜ್ಜನೇ ಬೈಸಿಕೊಳ್ಳೋದು :) ಇದು ೨ ತಿಂಗಳ ರಜಾದಲ್ಲಿ ಒಂದುವರೆ ತಿಂಗಳ ಖಾಯಂ routine ..

.ಅದ್ಯಾಕೋ ಆ ಚಿಲ್ಲು ಚಿಲ್ಲು ಭಾವಗಳೇ ಮೊದಲು ಮನಸ್ಸಿಗೆ ಮೂಡೋದು ..ಅದೇ ತುಂಬಾ ಇಷ್ಟ ಆಗೋದು :)

 

ಒಂದು ದಿನ ಬೆಟ್ಟ ನಮ್ಮ target ಆದ್ರೆ ಇನ್ನೊಂದು ದಿನ ಹೊಳೆ ....

ಮಧ್ಯಾಹ್ನ ಅಪ್ಪನ ಕೋಲು ಮತ್ತವನ ಕಾಲು ಕಾಣೋ ತನಕಾನೂ ಅಲ್ಲಿಯೆ ನಮ್ಮ ಬೀಡು ..ಮನೆಗೆ ಬಂದು ಒಂದಿಷ್ಟು ಮಂತ್ರಾಕ್ಷತೆ ಹಾಕಿಸಿಕೊಂಡು ಊಟ ಮಾಡೋವಾಗ್ಲೂ ನಿಲ್ಲದ ಅಮ್ಮ ,ದೊಡ್ಡಮ್ಮನ ಮಾತಿನ ಛಾಟಿಗೆ ಮತ್ತೆ ನಮ್ಮ ಸಹಾಯಕ್ಕೆ ಬರೋದು ಮುದ್ದು ಅಜ್ಜ ..."ಈಗ ಆಡ್ದೆ ಇನ್ಯಾವಾಗ ಆಡ್ತಾರೆ ..ಬಿಡಿ ಪಾಪ ರಜಾದಲ್ಲೂ ಮನೆನಲ್ಲೇ ಕೂರಿಸಬೇಡಿ "ಅಂತ ಪ್ರೀತಿ ಮಾಡ್ತಾರೆ :)ಪಾಪ ನನ್ನಜ್ಜ ....

ಲಗೋರಿ ಆಟ ಆಡಿ ಬೀಳೋದು ,ಸಣ್ಣ ಸಣ್ಣ ಹೊಡೆದಾಟ ,ಸಿಟ್ಟು ಮಾಡಿಕೊಂಡು ಆಟ ಬಿಟ್ಟು ಮನೆಗೆ ಬರೋದು ...ಅಮ್ಮನ ಬಳಿ ಇಷ್ಟುದ್ದದ complaint ಹೇಳೋದು ...ಅಮ್ಮ ಮಾಡಿಟ್ಟಿರೋ ಚಿಪ್ಸ್ ನಾ ಎರಡೇ ದಿನಕ್ಕೆ ಖಾಲಿ ಮಾಡೋದು, ಮತ್ತೆ ಮರುದಿನ ಹೋಗಿ ಅಮ್ಮಾ ತಿನ್ನೋಕೆ ಕೊಡು ಅನ್ನೋದು ....
                  

ಒಂದಿಷ್ಟು ಚಿಕ್ಕ ಚಿಕ್ಕ ಖುಷಿಗಳು ....

ಇನ್ನು ಅಜ್ಜನ ಮನೆಗಂತ ಹೋದ್ರೆ ಮುಗಿದೇ  ಹೋಯ್ತು ..ನನ್ನದೇ ಅಧಿಪತ್ಯ ಅಲ್ಲಿ ...ಏನ್ ಮಾಡಿದ್ರೂ ಯಾರೂ ಕೇಳೊರಿಲ್ಲ ...ಜೋರು ಮಾಡೋ ಅಮ್ಮನಿರಲ್ಲ...ಬೈಯ್ಯೊ ಅಪ್ಪ ಇರಲ್ಲ ...ಎಷ್ಟೆ ಹೊತ್ತಿಗೆ ಮನೆಗೆ ಹೋದ್ರು ಪ್ರೀತಿಯ ಊಟ ಬಡಿಸೊ ಅತ್ತೆ ,ಪಕ್ಕ ಕೂತು ಮಾತಾಡೋ ಮಾವ .... ಪಕ್ಕಾ ಅಣ್ಣಂದಿರಂತೆ ಗೋಳು ಹೊಯ್ಕೊಳೋ ಬಾವಂದಿರು....ಅವರೊಟ್ಟಿಗೆ ನೋಡೋ ಕ್ರಿಕೆಟ್ ...ಸುತ್ತೋ ಬೆಟ್ಟ ಗುಡ್ಡ ....ನಾ ಹೇಳಿದಂತೆ ಕೇಳೋ ಆಟದ ರೂಲ್ಸ್ .ಮಾವ ನಂಗತ ತರೋ ಚಾಕ್ಲೆಟ್ಸ್ ...ನಂಗೆ ಮಾತ್ರ ಸಿಗೋ ದೊಡ್ಡ ಪಾಲಿನ ನೇರಳೆ ಹಣ್ಣು :)..ವಾಹ್ !!

really missing something :(

ಈಗ ಮನೆಗೆ ಹೋದ್ರೆ ಅದೇ ಮುದ್ದು ತೋರೋ ಅಜ್ಜ ಇದ್ದಾರೆ ...ಉಳಿದವರೆಲ್ಲರದೂ ಬದಲಾದ ಭಾವ....ಕೆಲಸ ಮಾಡಿ ಕೊಡ್ತೀನಿ ಕೊಡಮ್ಮ ಅಂದ್ರೆ ಬೇಡ ಪುಟ್ಟಿ ಸುಮ್ಮನೆ ಕೂತುಕೊಂಡು ಮಾತಾಡು ಅನ್ನೊ ಅಮ್ಮ ! ತರ್ಲೆ ಮಾಡಿದ್ರೂ ಬೈಯದೇ ನಕ್ಕು ಬಿಡೋ ಅಪ್ಪ !...ಅಪ್ಪ ಅಮ್ಮನಂತೆ ಪ್ರೀತಿ ಮಾಡೋ ದೊಡ್ಡಪ್ಪ ದೊಡ್ದಮ್ಮ....ಹತ್ತಿರ ಕೂರಿಸಿಕೊಂಡು ಕಣ್ಣೀರಾಗೋ ಅಜ್ಜಿ ...ತರ್ಲೆ ತಮ್ಮ ಕೂಡಾ ಹೊಡೆದಾಡೋಕೆ ಬರಲ್ಲ ...ನಾನೂ ಆಟಕ್ಕೆ ಬರ್ತೀನಿ ಅಂದ್ರೆ ಹೋಗಕ್ಕ ನೀ ದೊಡ್ಡವಳಾಗಿದ್ದೀಯಾ ಅಂದು ಆಟಕ್ಕೇ ಸೇರಿಸಿಕೊಳ್ಳಲ್ಲ :(

ದೊಡ್ಡವಳಾದ್ರೆ ಆಟ ಆಡ್ಬಾರ್ದಾ :(

....ರಜಾ ಅಂದ್ರೆ ಮನೆ ಒಂದು ರಣರಂಗ ಆಗ್ತಿತ್ತು ಆಗ ,ಮನೆಯಲ್ಲಿ ಒಬ್ಬೊಬರಿಗೆ ಒಂದು ಟೀವಿ ಬೇಕಿತ್ತು ರಾತ್ರಿ ..ಆದರಿವತ್ತು ತಮ್ಮ ಮಾತ್ರ ಬೇಸಿಗೆ ರಜಾ ಅಂತ ಮನೆಯಲ್ಲಿರೋದು ...ಕಾರುಬಾರೆಲ್ಲ ಅವಂದೆ ... IPL ಬಿಟ್ಟು ಬೇರೆ ಏನನ್ನೂ ನೋಡೋಕೆ ಬರದ ಪ್ರಾಣಿ ಅದು..ಪಾಪ ಅವನೇನು ಮಾಡಿಯಾನು ....ದಿನಕ್ಕೊಂದು ಫೋನ್ ಮಾಡಿ "ಅಕ್ಕಾ holidays are too boaring" ಅಂತ ಹೇಳ್ತಾನೆ !!ನಾ ಖುಷಿಸುತ್ತಿದ್ದ ರಜಾ ಇವತ್ತು ಬೇಜಾರಾಗೋ ಅಷ್ಟು ಬದಲಾಗೋಯ್ತಾ ??!! ಬರಿಯ ಏಳೆಂಟು ವರ್ಷಕ್ಕೆ !!!


ಮನೆ ಪ್ರಶಾಂತವಾಗಿದೆ ...ಅವತ್ತಿನ ಯುದ್ದವಿಲ್ಲ..ಕಿಲಾಡಿ ಮಾಡೋ ಮಕ್ಕಳಿಲ್ಲ ...ಕಿರುಚಿ ಹಾರಾಡಿ ಗೋಳು ಹೊಯ್ಯೋರಿಲ್ಲ ...ಆದರೆ ...ಅವರ ಮನಸ್ಸಲ್ಲೂ ಕೂಡಾ ಎನೋ ತಳಮಳ ಸ್ಪಷ್ಟವಾಗಿ ಕಂಡಿತ್ತು ಇವತ್ತು ..."ಇದ್ಯಾಕೋ ಬೇಸಿಗೆ ರಜಾ ಅಂತಾನೆ ಅನಿಸ್ತಿಲ್ಲ ಪುಟ್ಟಿ "ಅನ್ನೊ ಅಮ್ಮನ ಈ ಮಾತು ಇಷ್ಟು ಭಾವವನ್ನಿಲ್ಲಿ ಹೇಳೋ ತರ ಮಾಡಿದ್ದು ..

 

ನಂಗದೇ ಪುಟ್ಟ ಹಳ್ಳಿಯ ಹುಡುಗಿಯಾಗಿರೋದೆ ಇಷ್ಟ ...ಅಜ್ಜ ಅಜ್ಜಿಯ ಮುದ್ದಿನ ಮೊಮ್ಮಗಳಾಗಿ ,ಅಮ್ಮ ಬೈಯದೇ ಯಾವೊಂದು ಕಡ್ಡಿಯನ್ನೂ ಅಲ್ಲಾಡಿಸದ ಸೋಂಬೇರಿ ಮಗಳಾಗಿ,ಅಪ್ಪನ ಜೋರಿಗೆ ಮಾತ್ರ ಹೆದರೋಳಾಗಿ ,ದೊಡ್ಡಪ್ಪ ದೊಡ್ಡಮ್ಮನ ತರ್ಲೆ ಪುಟ್ಟಿಯಾಗಿ,.....

ಮಾವ ಅತ್ತೆಗೆ ಮಗಳಾಗಿ ,ಬಾವಂದಿರಿಗೆ ಗೋಳು ಹೊಯ್ಯೋ ತಂಗಿಯಾಗಿ ,ನನ್ನದೇ domination ನಡಿಸೋ ಬಜಾರಿಯಾಗಿ,ಬೆಟ್ಟ ಸುತ್ತಿ,ಹೊಟ್ಟೆ ತುಂಬೋ ಅಷ್ಟು ಹಣ್ಣು ತಿನ್ನೋ ಅದೇ ಪುಟ್ಟ ಹಳ್ಳಿಯ ಪುಟ್ಟ ಹುಡುಗಿಯಾಗಿರೋದೇ ನಂಗಿಷ್ಟ :(

ಹೌದು ನಂಗದೆ ಪುಟ್ಟ ಹಳ್ಳಿಯ ಪ್ರೀತಿಯ ಪುಟ್ಟಿಯಾಗಿರೋದೆ ಇಷ್ಟ :(

ಬದುಕ ಬಸ್ಸಿನಲ್ಲಿ ಮಸ್ತಿಯ,ತಲೆಬಿಸಿ ಇರದ ಈ ನಿಲ್ದಾಣದಲ್ಲೊಂದು ಕಾಯಂ ತಂಗುದಾಣವಿರಬೇಕಿತ್ತು ಅಲ್ವಾ??....ಬಿಸಿಲ ಕಾವಿರಲ್ಲ ...ಮನದಲ್ಲೊಂದೂ ನೋವಿರಲ್ಲ ....ಸುಸ್ತಿನ ಭಾವ ಇರಲ್ಲ ....

ನಾನಂತು ನನ್ನ ಟಿಕೇಟ್ ನಾ ಈ ಸ್ಟಾಪ್ ಗೆ ರಿಸರ್ವ್ ಮಾಡ್ತಿದ್ದೆ ಕಣ್ರೀ....ಪರ್ಮನೆಂಟ್ ಆಗಿ :)

ನನ್ನನ್ನ ಪ್ರೀತಿಸೋ ,ಇಷ್ಟ ಪಡೋರು ಮಾತ್ರಾ ಇರೋ ಮತ್ತದೇ ನಿಲ್ದಾಣಕ್ಕೆ .....
 

Sunday, April 7, 2013

ಮುಸ್ಸಂಜೆಯ ಮುಜುಗರ !ವರ್ಷವೊಂದು ಕಳೀತು....!

ಲೀಕ್ ಆದ ಪೇಪರ್,ಬಿಡದೇ ಕಾಡಿದ್ದ ಟೆನ್ಷನ್,ಮನೆಯವರ ಅತೀಯಾಗಿದ್ದ ಕಾಳಜಿ ,ಮುಗಿಯದ ಸಾಲು ಸಾಲು ನಿರೀಕ್ಷೆ !!

ಅವತ್ತಿದೇ ದಿನ ಅಂತೂ ಇಂತೂ ಮುಗಿದ ಪರೀಕ್ಷೆಗೆ ಪಟ್ಟ ಸಣ್ಣದೊಂದು ಖುಷಿ ಇತ್ತು ....

ಹೇಳಲಾಗದ ,ತೋರಲಾಗದ ಭಾವ ಬೇಸರ ತರಿಸಿತ್ತು !

ವರ್ಷದ ಹಿಂದಿನ ಭಾವವೇ ಎನೋ ಕಳೆದೊಂದು ತಿಂಗಳಿನಿಂದ ಮತ್ತದೇ ಗೊಂದಲ,ಗೋಜಲಿನ ಭಾವ ಮೂಡಿಸುತ್ತಿದೆ ...

ಇವತ್ತಿನ ಮುಸ್ಸಂಜೆಯ ಭಾವವೂ ಕೂಡಾ ಹೇಳಲಾಗದ ಭಾವಕ್ಕೆ ಹೊರತಾಗಿಲ್ಲ ...
ಮನ  ಜಾತ್ರೆಯಾಗಿದೆ.....ನೆನಪುಗಳ ತೇರಲ್ಲಿ ತನ್ನವರು ದೂರಾದ ಭಾವದಲ್ಲಿ ಕೊರಗ ಹತ್ತಿದೆ ,

ವರ್ಷದ ಹಿಂದಿನ ಮಾತು...


ಅಲ್ಲಿ ಪುಟ್ಟದೊಂದು ಅಡ್ಡವಿತ್ತು ....

ಅವಳವರೆನ್ನುವವರು ತುಂಬಾ ಮಂದಿ ಇದ್ದರು....ಕೀಟಲೆಗಳನ್ನೆಲ್ಲಾ ಸಹಿಸಿಕೊಳ್ಳೋರಿದ್ದರು .....ಹಟ ಮಾಡಿದ್ರೆ ರಮಿಸೋರಿದ್ದರು...ಕಣ್ಣೀರನ್ನು ಒರೆಸೊ ಕೈಗಳಿತ್ತು ....ಜಗಳ ಮಾಡೋಕೆ ಅಂತಾನೆ ತಮ್ಮನಿದ್ದ:)...ಮಾತುಗಳನ್ನ ಕೇಳೋ ಕಿವಿಗಳಿತ್ತು.....ತಮಾಷೆ ಮಾಡೋ ,ನಗಿಸೋ ಆತ್ಮೀಯರಿದ್ದರು .....

ಪ್ರೀತಿಯ ಮನೆ ಇತ್ತು .... ಮನದಲ್ಲೊಂದು ಅರಮನೆಯಿತ್ತು ... ಅದಕ್ಕೆ ಅವಳದ್ದೇ ಅಧಿಪತ್ಯ ಇತ್ತು ... ಚಿಲ್ಲು ಚಿಲ್ಲು ಕನಸುಗಳಿತ್ತು .... committed ಮಂದಿಗೆ ಗೋಳು ಹೊಯ್ಯೋ ಸಲುಗೆಯಿತ್ತು....
ಮಾಡೋಕೆ ಕೀಟಲೆಗಳಿದ್ದವು....ಆಡೋಕೆ ಓರಿಗೆಯವರಿದ್ದರು.....ಮಾತಾಡೋಕೆ ಬಾಯಿ ನೋಯೋ ಅಷ್ಟು ಮಾತುಗಳಿದ್ದವು....

 

ಈಗಲೂ ಇವುಗಳೆಲ್ಲವೂ ಇದೆ ...ಆದರೆ......ಅಂತರವನ್ನು ಕಾಯ್ದುಕೊಂಡು......ಅಂತರದ ದೂರದಲ್ಲಿ !!!

ಏನನ್ನೋ ಕಳಕೊಂಡ ಭಾವ ;(

ವರ್ಷ ಒಂದರಲ್ಲೇ ಬದಲಾದ ನೂರೆಂಟು ಭಾವ....ವರ್ಷವೊಂದರ ಹಿಂದಿದ್ದ ಸಮಾಜ ಪೂರ್ತಿ ಬದಲಾದ ಅನುಭಾವ....ಎನೋ ಹೇಳಲಾಗದ ಅನುಭವ ....

ಪ್ರೀತಿ ತುಂಬಿದ ಸ್ನೇಹದ ಅಡ್ದ ದೂರಾದ ನೋವಾ ? ಅಥವಾ ಅವಳನ್ನೇ ಪೂರ್ತಿಯಾಗಿ ಬದಲಾಯಿಸಿತ್ತಾ ಆ ಹವಾ ?  ಅಥವಾ ಬಿಸಿಲ ಕಾವಾ ??

ತಿಳಿಯದ ಗೊಂದಲ ನಂದು ......

ಎಲ್ಲವನ್ನೂ ತಾಳ್ಮೆಯಿಂದ ಕೇಳುತ್ತಿದ್ದ ಅವರಿಂದು ದಿನಕ್ಕೆ ಫೋನ್ ಮಾಡಿ ಊಟ ಆಯ್ತ,?ತಿಂಡಿ ಆಯ್ತ?ಕ್ಲಾಸ್ ಹೆಂಗ್ ಇತ್ತು? ಅಂತ ಪಾಪುವಿಗೆ ಕೇಳೋ ತರ ಕೇಳ್ತಾರೆ ...ಇದಕ್ಕಿಂತ ಆಚೆಯ ಒಂದು ಮಾತೂ ಇಲ್ಲ ......ಯಾವಾಗಲೂ ಜಗಳ ಮಾಡೊ ತಮ್ಮ ಕೂಡಾ "ನನಗಿನ್ನು ತಿಂಗಳು ರಜಾ ಅಕ್ಕ .. ನೀನಿಲ್ಲದ ರಜಾ ನಿಜಕ್ಕೂ boar ಮನೆಗೆ ಬಾ ಪ್ಲೀಸ್ "ಅಂತ matured ಆಗಿ ಮಾತಾಡ್ತಾನೆ !!....

.ಮನೆ ವರ್ಷಕ್ಕೊಮ್ಮೆ ಹೋಗೋ ಅತಿಥಿಯ ಅನುಭವ ನೀಡುತ್ತೆ! ....

ಪ್ರಸ್ತುತ ಸಿಗದೇನೇ ಕಳೆದು ಹೋದ ಒಲವ ಬಗ್ಗೆ ಬೇಸರವೂ ಇದೆ...

ಹಟ ಮಾಡೋದು ಮರೆತೇ ಹೊಗಿದೆ ಅಕ್ಷರಶಃ .......ಸಲುಗೆಯ ಸ್ನೇಹ ನನ್ನದೇ ಅಗಿತ್ತಾ ಅನ್ನೊ ಭಾವ ಮೂಡೋ ಅಷ್ಟು ಅಂತರದಲ್ಲಿದೆ ಜೀವದ ಸ್ನೇಹಿತರ ಬಳಗ !

ಅಂತರ ಮೂಡಿದ್ದಂತೂ ನಿಜ ...ಮೂಡಿಸಿದ್ದು ಯಾರೆಂದು ಒಂದೆರಡು ಕ್ಷಣ ಯೋಚಿಸಿ ಗೊಂದಲದಲ್ಲಿ ಬಿದ್ದೆ ....ಉತ್ತರ ಸಿಗದ ಗೊಂದಲ ...ಕಳಕೊಂಡ ಭಾವವನ್ನಿಲ್ಲಿ ಹೇಳೋಕೆ ಕಷ್ಟ ಆಗ್ತಿದೆ

 dreams ಗಳನ್ನ aim ಗಳಾಗಿ ಮಾಡಿಕೊಂಡು ಖುಷಿ ಪಟ್ಟಿದ್ದಾಗಿದೆ ...ನಾವೇ ಇಷ್ಟ ಪಟ್ಟು ಆರಿಸಿಕೊಂಡ ಭಾವ...ಈಗಲೂ ಇಷ್ಟವಾಗೊ ಭಾವ..ಅದರೂ ಇವತ್ತಿನ ಸಂಜೆಗೆ ಮಾತ್ರ ಮುಜುಗರ ಮೂಡಿಸುತ್ತಿರೋ ಭಾವ.......ನಿರಾಶೆಯ ನೋವ ಭಾವ....ಕಣ್ಣಂಚಿನ ಬೇಸರದ ಭಾವ......ಕೋಲ್ಮಿಂಚಿನ ಭಾವ...ಒಂದು ಕ್ಷಣಕ್ಕೆ ಹೆಪ್ಪಾದ ಕನಸುಗಳ ಕನಸಿನ ಭಾವ......ಭಾವನೆಗಳ ಮಧ್ಯ ತೂರಿ ಬರುತ್ತಿರೊ ಭಾವ..

.ಭಾವ ಭಾವನೆಗಳ ನಡುವಿನ ಗೊಂದಲದ ಭಾವ...

 

ಕಳೆದೊಂದು ತಿಂಗಳಿನಿಂದ ಸಾಲು ಸಾಲಾಗಿ ಕಾಡುತ್ತಿರೊ ಭಾವ ....ಇಷ್ಟವಾಗದ ಕಷ್ಟ ಪಟ್ಟು ದೂರ ಮಾಡ್ತಿದ್ದ ಭಾವ ಮುಸ್ಸಂಜೆಗ್ಯಾಕೊ ಇಷ್ಟವಾದಂತಿದೆ ....ಆದರಿದು ಇವತ್ತಿನ ಸಂಜೆಗೆ ಮಾತ್ರ ಮೀಸಲು ಎಂಬ ಧೈರ್ಯ ನಂದು .... ನಾಳೆಯ ಸುಪ್ರಭಾತಕ್ಕೆ ಮತ್ತದೇ ಹೊಸ ಕನಸುಗಳಿವೆ ....ನನ್ನದೇ ಸರ್ವಾಧಿಕಾರದ ಹೇಳಿದ್ದನ್ನೆಲ್ಲಾ ಆಲಿಸೋ ಸುಂದರ ಮನಸ್ಸಿದೆ.. ಖುಷಿಸೋ ಅಡ್ಡವಿದೆ .... ಕಾಲೆಳೆಯೊ ಹೊಸ ಸ್ನೇಹಿತರಿದ್ದಾರೆ ಅನ್ನೋ ಪ್ರಾಮಾಣಿಕ ಭಾವ ನಂದು.....

ಆದರೂ ಯಾಕೊ ನೆನಪುಗಳ ಹಾಳೆಯಲ್ಲಿನ ಪ್ರೀತಿ ತುಂಬಿದ ವರ್ಷದ ಹಿಂದಿನ ಭಾವವೇ ಅತೀ ಇಷ್ಟ ಆಗ್ತಿರೋ ಅನುಭವ ಇವತ್ತು .......

ಕಳೆದು ಹೋದ ಎಲ್ಲಾ ’ಇಲ್ಲ’ ಗಳನ್ನ ಸೇರಿಸಿ ಹುಡುಕ ಹೊರಟ ಭಾವ......

ಸಿಕ್ಕಿದ್ದರ ಬಗ್ಗೆ ಅರಿವಿಲ್ಲದ ಕಳ ಕೊಂಡರ ಬಗೆಗಿರುವ ಅತಿಯಾದ ವ್ಯಾಮೋಹ....

ಇರುವುದೆಲ್ಲವ ಬಿಟ್ಟು ಇರದುದರೆಡೆಗಿನ ಬಗೆಗಿನ ತುಡಿತ ...

ಅಸಲು ಈ ಭಾವ ನಾಳೆಯ ಖುಷಿಯನ್ನು ಕೊಲ್ಲದಿರಲಿ ಎಂಬ ಇಂಗಿತ


(ಭಾವ ಅವಳದು ಎಂದು ಹೇಳೋಕೆ ಹೋಗಿ ಪೂರ್ತಿಯಾಗಿ ಸೋತಿದ್ದೇನೆ ನಿಮ್ಮೆದುರು .... ಅವಳಿಂದ ಶುರುವಾದ ಭಾವ ಎರಡನೇ ಲೈನ್ ಗೆ ನನ್ನ ಭಾವವಾಗಿ ಕಾಡ ಹತ್ತಿದೆ ...ಭಾವಗಳು ನನ್ನದೇ ಅನ್ನೋ ಸಣ್ಣ ಅನುಮಾನ ನಂಗೆ.....ಸುಮ್ಮನೆ ಮನದ ಬೇಸರಕ್ಕೊಂದಿಷ್ಟು ಮಾತುಗಳು .... ನೀವು ಬೇಸರಿಸದಿರಿ .....)