Saturday, April 13, 2013

ಬೇಯುವ ಧಗೆಯಲ್ಲೊಂದು ಹಸುರಾದ ನೆನಪು ...


(ಮತ್ತದೇ ಹಳೇ ...ಪುಟ್ಟ ಹಳ್ಳಿ ಹುಡುಗಿಯ ಮಾತಾಗಿ )


ಮನದ ಧಗೆ... ಬಿಸಿಲ ಕಾವು ....ಬೆಳಗಿನ ಸೂರ್ಯನೊಂದಿಗೇ ಜಾಗ ಇರದಿದ್ದರೂ ಮನ ಸೇರೋ ಬೆವರು!!

 ....ಕಾಡೋ ಭಾವದೊಂದಿಗೆ ಮನದೊಳಗೆ ಹಾದು ಹೋಗೋ ಸೆಕೆಯ ಸಿಟ್ಟು....

ಬಿಸಿಲ ಪಯಣದಲ್ಲೊಂದು ಖಾಯಂ ಸಹ ಪಯಣಿಗನ ಹುಡುಕಾಟ ....

ಮನ ಸುಟ್ಟಿದ್ದು ಸಾಲದೇ ಮೈಯನ್ನೂ ಸುಡ ಬರುತ್ತಿರೊ ಹತಾಶೆಯ ಬೇಗೆ......

ಬೇಯುವ ಬಿಡದೇ ಕಾಡುವ ಉರಿ ಬಿಸಿಲು....

ಮಾತೇ ಬರದಂತೆ ಬಾಯಾರಿಸೋ ಧಗೆ...

ಜೊತೆಗೆ ಕಾಡೋ ಒಂದಿಷ್ಟು ನಿನ್ನೆ ಮೊನ್ನೆಯ ನೆನಪು .....

ಎಲ್ಲವೂ ಸೇರಿ ಸಹಿಸಿಕೊಳ್ಳೋದು ಕಷ್ಟ ಆಗಿ ....ಸಹಿಸಲೇ ಬೇಕಾದ ಅನಿವಾರ್ಯತೆಗಾಗಿ ಒಂದು ಅನಿವಾರ್ಯತೆಯ ಮಾತು ....

ಬೆಳಿಗ್ಗೆ ಬೇಗ ಏಳೋ ಅಭ್ಯಾಸವೇ ಇಲ್ಲದಿರೋರು ಕೂಡಾ ೭ ಗಂಟೆಗೂ ಜಾಸ್ತಿ ನಿದ್ದೆ ಮಾಡೊಲ್ಲ ...ರಾತ್ರಿ ನಿದ್ದೆನೂ ಬರಲ್ಲ ....ಕನಸಲ್ಲಿ ರಾಜಕುಮಾರನೂ ಇರಲ್ಲ ...

ಕ್ಲಾಸ್ ನಲ್ಲಿ ಕೂತು ಬೋರಿಂಗ್ ಪಾಠ ಕೇಳೋಕೇ ನಿಜಕ್ಕೂ ಕಷ್ಟ ಆಗ್ತಿದೆ ..ಮೊದಲಾದ್ರೆ ಬೇಸಿಗೇ ರಜಾ ಇರ್ತಿತ್ತು ನಮ್ಮ ತರ್ಲೆ ಗಳನ್ನ ಸಹಿಸಿಕೊಂಡು ..ಈಗ ತರ್ಲೆ ಮಾಡೋರೂ ಇಲ್ಲ ...ಸಹಿಸಿಕೊಳ್ಳೋರೂ ಇಲ್ಲ ..

.


ಅದ್ಯಾಕೋ ಬೇಸಿಗೆ ರಜಾದ ಮನೆಯಲ್ಲಿನ ಆ ಮಜಾದ ಭಾವಗಳು ಇವತ್ತಿನ ಈ ಬಿಸಿಲ ಝಳಕ್ಕೆ ತಣ್ಣಗಿನ ನೀರಲ್ಲಿ ಸ್ನಾನ ಮಾಡೋಕಂತ ಮೇಲೆ ಬಂದಂತಿದೆ

ಯಾರಿಗ್ ಹೇಳೋಣಾ ನಮ್ಮ ಪ್ರಾಬ್ಲಮ್ ನಾ ....

 

ರಜಾ ಶುರು ಆದ್ರೆ ಬೆಟ್ಟಾ ತಿರ್ಗೋದು ...ಅಮ್ಮ ದೊಡ್ಡಮ್ಮನ ಬೈಗುಳದ ಮಧ್ಯೆನೂ ...ಮಾವಿನ ಕಾಯಿ ,ಊರಲ್ಲಿರೋ ಮುಳ್ಳೆ ಹಣ್ಣು ,ನೇರಳೆ ಹಣ್ಣು ,ಕೌಳಿ ಹಣ್ಣೂ ಕೂಡಾ ನಮ್ಮನ್ನ ಮಿಸ್ ಮಾಡ್ಕೊಳ್ತಾ ಇದ್ಯಂತೆ ಈಗ ...ಆ ಗೇರನ್ನ ಸುಡೋಕೆ ಹೋಗಿ ಕೈ ಸುಟ್ಟುಕೊಳ್ಳೋದು ,ಮಾವಿನ ಹುಳಿ ಜಾಸ್ತಿ ಆಗಿ ಮುಖ ದಪ್ಪ ಆಗೋದು ...ರಜಾ ಬಂದ್ರೆ ನಮ್ಮ ಹಿಂದೆನೇ ಓಡೋ ಅಪ್ಪ ಅಮ್ಮನನ್ನ ನೆನೆಸ್ಕೊಂಡ್ರೆ ಈಗ್ಲೂ ನಗೂ ತಡ್ಯೋಕಾಗಲ್ಲ :)ರಜಾ ಬರ್ದೆ ಇರ್ಲಿ ಅಂತ ದೇವ್ರನ್ನ ಕೇಳೋ ಅಷ್ಟು ಕಾಟ ಕೊಡ್ತಿದ್ವಿ ಅಂದ್ರೆ just imagine

:)

೧ ರೂಪಾಯಿ ಪೆಪ್ಸಿ ಗೆ ಒಂದು ಕಿಲೋಮೀಟರ್ ದೂರ ಅಜ್ಜನೊಟ್ಟಿಗೆ ಹೋಗೋದು...ಅದೂ ಸರಿಯಾಗಿ ಸೂರ್ಯ ನೆತ್ತಿಗೆ ಬರೋ ಸಮಯಕ್ಕೆ :) ಯಾಕಂದ್ರೆ ನಮ್ಮ ಓಡಾಟ ಮುಗಿಯೋದೆ ಸೂರ್ಯನ ಸುಡು ನೋಟ ನಮ್ಮ ಮೇಲೆ ಬಿದ್ದಾಗ ತಾನೆ ....ಅಜ್ಜ ನಾ ಕರೆದಲ್ಲೆಲ್ಲಾ ಬೇಸರಿಸದೇ ಬರೋರು ಅನ್ನೋದು ಪಕ್ಕಾ ಗೊತ್ತಿತ್ತು ...ಹೀಗಾಗೆ ನನ್ನೆಲ್ಲಾ ಕಿಲಾಡಿಗಳಿಗೂ ಅಜ್ಜನೇ ಬೈಸಿಕೊಳ್ಳೋದು :) ಇದು ೨ ತಿಂಗಳ ರಜಾದಲ್ಲಿ ಒಂದುವರೆ ತಿಂಗಳ ಖಾಯಂ routine ..

.ಅದ್ಯಾಕೋ ಆ ಚಿಲ್ಲು ಚಿಲ್ಲು ಭಾವಗಳೇ ಮೊದಲು ಮನಸ್ಸಿಗೆ ಮೂಡೋದು ..ಅದೇ ತುಂಬಾ ಇಷ್ಟ ಆಗೋದು :)

 

ಒಂದು ದಿನ ಬೆಟ್ಟ ನಮ್ಮ target ಆದ್ರೆ ಇನ್ನೊಂದು ದಿನ ಹೊಳೆ ....

ಮಧ್ಯಾಹ್ನ ಅಪ್ಪನ ಕೋಲು ಮತ್ತವನ ಕಾಲು ಕಾಣೋ ತನಕಾನೂ ಅಲ್ಲಿಯೆ ನಮ್ಮ ಬೀಡು ..ಮನೆಗೆ ಬಂದು ಒಂದಿಷ್ಟು ಮಂತ್ರಾಕ್ಷತೆ ಹಾಕಿಸಿಕೊಂಡು ಊಟ ಮಾಡೋವಾಗ್ಲೂ ನಿಲ್ಲದ ಅಮ್ಮ ,ದೊಡ್ಡಮ್ಮನ ಮಾತಿನ ಛಾಟಿಗೆ ಮತ್ತೆ ನಮ್ಮ ಸಹಾಯಕ್ಕೆ ಬರೋದು ಮುದ್ದು ಅಜ್ಜ ..."ಈಗ ಆಡ್ದೆ ಇನ್ಯಾವಾಗ ಆಡ್ತಾರೆ ..ಬಿಡಿ ಪಾಪ ರಜಾದಲ್ಲೂ ಮನೆನಲ್ಲೇ ಕೂರಿಸಬೇಡಿ "ಅಂತ ಪ್ರೀತಿ ಮಾಡ್ತಾರೆ :)ಪಾಪ ನನ್ನಜ್ಜ ....

ಲಗೋರಿ ಆಟ ಆಡಿ ಬೀಳೋದು ,ಸಣ್ಣ ಸಣ್ಣ ಹೊಡೆದಾಟ ,ಸಿಟ್ಟು ಮಾಡಿಕೊಂಡು ಆಟ ಬಿಟ್ಟು ಮನೆಗೆ ಬರೋದು ...ಅಮ್ಮನ ಬಳಿ ಇಷ್ಟುದ್ದದ complaint ಹೇಳೋದು ...ಅಮ್ಮ ಮಾಡಿಟ್ಟಿರೋ ಚಿಪ್ಸ್ ನಾ ಎರಡೇ ದಿನಕ್ಕೆ ಖಾಲಿ ಮಾಡೋದು, ಮತ್ತೆ ಮರುದಿನ ಹೋಗಿ ಅಮ್ಮಾ ತಿನ್ನೋಕೆ ಕೊಡು ಅನ್ನೋದು ....
                  

ಒಂದಿಷ್ಟು ಚಿಕ್ಕ ಚಿಕ್ಕ ಖುಷಿಗಳು ....

ಇನ್ನು ಅಜ್ಜನ ಮನೆಗಂತ ಹೋದ್ರೆ ಮುಗಿದೇ  ಹೋಯ್ತು ..ನನ್ನದೇ ಅಧಿಪತ್ಯ ಅಲ್ಲಿ ...ಏನ್ ಮಾಡಿದ್ರೂ ಯಾರೂ ಕೇಳೊರಿಲ್ಲ ...ಜೋರು ಮಾಡೋ ಅಮ್ಮನಿರಲ್ಲ...ಬೈಯ್ಯೊ ಅಪ್ಪ ಇರಲ್ಲ ...ಎಷ್ಟೆ ಹೊತ್ತಿಗೆ ಮನೆಗೆ ಹೋದ್ರು ಪ್ರೀತಿಯ ಊಟ ಬಡಿಸೊ ಅತ್ತೆ ,ಪಕ್ಕ ಕೂತು ಮಾತಾಡೋ ಮಾವ .... ಪಕ್ಕಾ ಅಣ್ಣಂದಿರಂತೆ ಗೋಳು ಹೊಯ್ಕೊಳೋ ಬಾವಂದಿರು....ಅವರೊಟ್ಟಿಗೆ ನೋಡೋ ಕ್ರಿಕೆಟ್ ...ಸುತ್ತೋ ಬೆಟ್ಟ ಗುಡ್ಡ ....ನಾ ಹೇಳಿದಂತೆ ಕೇಳೋ ಆಟದ ರೂಲ್ಸ್ .ಮಾವ ನಂಗತ ತರೋ ಚಾಕ್ಲೆಟ್ಸ್ ...ನಂಗೆ ಮಾತ್ರ ಸಿಗೋ ದೊಡ್ಡ ಪಾಲಿನ ನೇರಳೆ ಹಣ್ಣು :)..ವಾಹ್ !!

really missing something :(

ಈಗ ಮನೆಗೆ ಹೋದ್ರೆ ಅದೇ ಮುದ್ದು ತೋರೋ ಅಜ್ಜ ಇದ್ದಾರೆ ...ಉಳಿದವರೆಲ್ಲರದೂ ಬದಲಾದ ಭಾವ....ಕೆಲಸ ಮಾಡಿ ಕೊಡ್ತೀನಿ ಕೊಡಮ್ಮ ಅಂದ್ರೆ ಬೇಡ ಪುಟ್ಟಿ ಸುಮ್ಮನೆ ಕೂತುಕೊಂಡು ಮಾತಾಡು ಅನ್ನೊ ಅಮ್ಮ ! ತರ್ಲೆ ಮಾಡಿದ್ರೂ ಬೈಯದೇ ನಕ್ಕು ಬಿಡೋ ಅಪ್ಪ !...ಅಪ್ಪ ಅಮ್ಮನಂತೆ ಪ್ರೀತಿ ಮಾಡೋ ದೊಡ್ಡಪ್ಪ ದೊಡ್ದಮ್ಮ....ಹತ್ತಿರ ಕೂರಿಸಿಕೊಂಡು ಕಣ್ಣೀರಾಗೋ ಅಜ್ಜಿ ...ತರ್ಲೆ ತಮ್ಮ ಕೂಡಾ ಹೊಡೆದಾಡೋಕೆ ಬರಲ್ಲ ...ನಾನೂ ಆಟಕ್ಕೆ ಬರ್ತೀನಿ ಅಂದ್ರೆ ಹೋಗಕ್ಕ ನೀ ದೊಡ್ಡವಳಾಗಿದ್ದೀಯಾ ಅಂದು ಆಟಕ್ಕೇ ಸೇರಿಸಿಕೊಳ್ಳಲ್ಲ :(

ದೊಡ್ಡವಳಾದ್ರೆ ಆಟ ಆಡ್ಬಾರ್ದಾ :(

....ರಜಾ ಅಂದ್ರೆ ಮನೆ ಒಂದು ರಣರಂಗ ಆಗ್ತಿತ್ತು ಆಗ ,ಮನೆಯಲ್ಲಿ ಒಬ್ಬೊಬರಿಗೆ ಒಂದು ಟೀವಿ ಬೇಕಿತ್ತು ರಾತ್ರಿ ..ಆದರಿವತ್ತು ತಮ್ಮ ಮಾತ್ರ ಬೇಸಿಗೆ ರಜಾ ಅಂತ ಮನೆಯಲ್ಲಿರೋದು ...ಕಾರುಬಾರೆಲ್ಲ ಅವಂದೆ ... IPL ಬಿಟ್ಟು ಬೇರೆ ಏನನ್ನೂ ನೋಡೋಕೆ ಬರದ ಪ್ರಾಣಿ ಅದು..ಪಾಪ ಅವನೇನು ಮಾಡಿಯಾನು ....ದಿನಕ್ಕೊಂದು ಫೋನ್ ಮಾಡಿ "ಅಕ್ಕಾ holidays are too boaring" ಅಂತ ಹೇಳ್ತಾನೆ !!ನಾ ಖುಷಿಸುತ್ತಿದ್ದ ರಜಾ ಇವತ್ತು ಬೇಜಾರಾಗೋ ಅಷ್ಟು ಬದಲಾಗೋಯ್ತಾ ??!! ಬರಿಯ ಏಳೆಂಟು ವರ್ಷಕ್ಕೆ !!!


ಮನೆ ಪ್ರಶಾಂತವಾಗಿದೆ ...ಅವತ್ತಿನ ಯುದ್ದವಿಲ್ಲ..ಕಿಲಾಡಿ ಮಾಡೋ ಮಕ್ಕಳಿಲ್ಲ ...ಕಿರುಚಿ ಹಾರಾಡಿ ಗೋಳು ಹೊಯ್ಯೋರಿಲ್ಲ ...ಆದರೆ ...ಅವರ ಮನಸ್ಸಲ್ಲೂ ಕೂಡಾ ಎನೋ ತಳಮಳ ಸ್ಪಷ್ಟವಾಗಿ ಕಂಡಿತ್ತು ಇವತ್ತು ..."ಇದ್ಯಾಕೋ ಬೇಸಿಗೆ ರಜಾ ಅಂತಾನೆ ಅನಿಸ್ತಿಲ್ಲ ಪುಟ್ಟಿ "ಅನ್ನೊ ಅಮ್ಮನ ಈ ಮಾತು ಇಷ್ಟು ಭಾವವನ್ನಿಲ್ಲಿ ಹೇಳೋ ತರ ಮಾಡಿದ್ದು ..

 

ನಂಗದೇ ಪುಟ್ಟ ಹಳ್ಳಿಯ ಹುಡುಗಿಯಾಗಿರೋದೆ ಇಷ್ಟ ...ಅಜ್ಜ ಅಜ್ಜಿಯ ಮುದ್ದಿನ ಮೊಮ್ಮಗಳಾಗಿ ,ಅಮ್ಮ ಬೈಯದೇ ಯಾವೊಂದು ಕಡ್ಡಿಯನ್ನೂ ಅಲ್ಲಾಡಿಸದ ಸೋಂಬೇರಿ ಮಗಳಾಗಿ,ಅಪ್ಪನ ಜೋರಿಗೆ ಮಾತ್ರ ಹೆದರೋಳಾಗಿ ,ದೊಡ್ಡಪ್ಪ ದೊಡ್ಡಮ್ಮನ ತರ್ಲೆ ಪುಟ್ಟಿಯಾಗಿ,.....

ಮಾವ ಅತ್ತೆಗೆ ಮಗಳಾಗಿ ,ಬಾವಂದಿರಿಗೆ ಗೋಳು ಹೊಯ್ಯೋ ತಂಗಿಯಾಗಿ ,ನನ್ನದೇ domination ನಡಿಸೋ ಬಜಾರಿಯಾಗಿ,ಬೆಟ್ಟ ಸುತ್ತಿ,ಹೊಟ್ಟೆ ತುಂಬೋ ಅಷ್ಟು ಹಣ್ಣು ತಿನ್ನೋ ಅದೇ ಪುಟ್ಟ ಹಳ್ಳಿಯ ಪುಟ್ಟ ಹುಡುಗಿಯಾಗಿರೋದೇ ನಂಗಿಷ್ಟ :(

ಹೌದು ನಂಗದೆ ಪುಟ್ಟ ಹಳ್ಳಿಯ ಪ್ರೀತಿಯ ಪುಟ್ಟಿಯಾಗಿರೋದೆ ಇಷ್ಟ :(

ಬದುಕ ಬಸ್ಸಿನಲ್ಲಿ ಮಸ್ತಿಯ,ತಲೆಬಿಸಿ ಇರದ ಈ ನಿಲ್ದಾಣದಲ್ಲೊಂದು ಕಾಯಂ ತಂಗುದಾಣವಿರಬೇಕಿತ್ತು ಅಲ್ವಾ??....ಬಿಸಿಲ ಕಾವಿರಲ್ಲ ...ಮನದಲ್ಲೊಂದೂ ನೋವಿರಲ್ಲ ....ಸುಸ್ತಿನ ಭಾವ ಇರಲ್ಲ ....

ನಾನಂತು ನನ್ನ ಟಿಕೇಟ್ ನಾ ಈ ಸ್ಟಾಪ್ ಗೆ ರಿಸರ್ವ್ ಮಾಡ್ತಿದ್ದೆ ಕಣ್ರೀ....ಪರ್ಮನೆಂಟ್ ಆಗಿ :)

ನನ್ನನ್ನ ಪ್ರೀತಿಸೋ ,ಇಷ್ಟ ಪಡೋರು ಮಾತ್ರಾ ಇರೋ ಮತ್ತದೇ ನಿಲ್ದಾಣಕ್ಕೆ .....
 

26 comments:

 1. ಚಾರಣಕ್ಕೆ ಹೊರಟಾಗ ಬೆಟ್ಟ ಕಷ್ಟ ಎನ್ನಿಸುತ್ತದೆ. ಹತ್ತುತ್ತಾ ಹೋದಹಾಗೆ ತಂಪಾದ ಗಾಳಿ ಬೀಸಿದ ಹಾಗೆ ಹಾಯ್ ಎನ್ನಿಸುತ್ತದೆ. ಇಳಿದು ಬಂದ ಮೇಲೆ ಅದನ್ನೇ ಮೆಲುಕು ಹಾಕುತ್ತಾ ಅದರ ಬಗ್ಗೆ ಮಾತಾಡುವ ಶೈಲಿಯಂತೆ ಇದೆ ಈ ಲೇಖನ. "ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮಾಸಿಲ್ಲ" ಎನ್ನುವ ಶುಭಮಂಗಳ ಚಿತ್ರದ ಗೀತೆ ನೆನಪಿಗೆಬಂತು . ಸೊಗಸಾಗಿದೆ ಬಾಲ್ಯದ ಬಾಲವಿಲ್ಲದ ಹನುಮಂತನ ವರ್ಣನೆ. ಬಾಲ್ಯದ ದಿನಗಳು ನೆನಪಿಗೆ ಬಂದವು. ಸೂಪರ್ ಲೇಖನ ಬಿ ಪಿ. ಇಷ್ಟವಾಯಿತು.

  ReplyDelete
  Replies
  1. ಧನ್ಯವಾದ ಶ್ರೀಕಾಂತಣ್ಣ ..ಇಷ್ಟವಾಯ್ತೀ ಪ್ರತಿಕ್ರಿಯೆ ...
   ಸುಮ್ಮನೆ ಹಿಂತಿರುಗಿ ನೋಡಬಹುದಷ್ಟೆ ..ಹಿಂದೆ ಹೋಗೋಕಂತೂ ಸಾದ್ಯವಿಲ್ಲ :) ಸುಮ್ಮನೆ ಆ ನಿನ್ನೆಯ ನೆನಪನ್ನ ನೆನಪು ಮಾಡಿಕೊಂಡೆ ಅಷ್ಟೇ :) ಆ ಬೇಸಿಗೆಯ ನೆನಪಾಯ್ತು ..ಅದನ್ನೇ ಹೇಳ ಹೊರಟು ಬಾಲವಿಲ್ಲದ ಕಪಿಯಾದೆ ನಿಮ್ಮೆದುರು :)
   ಬಾಲ್ಯದ ಕಪಿ ಚೇಷ್ಟೆಗಳು ಇನ್ನೂ ಇತ್ತು ಹೇಳೋಕೆ ...ಅದನ್ನೆಲ್ಲಾ ಹೇಳಿದ್ರೆ ನೀವು ಖಂಡಿತಾ ಬಾಲವಿರದ ಹನುಮಂತ ಅನ್ನೋಕೆ ಯೋಚ್ನೆ ಮಾಡ್ತಿದ್ರೇನೋ :)
   ಬರ್ತಾ ಇರಿ ..
   ನಮಸ್ತೆ

   Delete
 2. ಏನೇ ಹೆಣ್ಣೇ..!!! ಹೊಟ್ಟೆಕಿಚ್ಚಾಗುತ್ತಿದೆ ,..!! ಅಷ್ಟು ಚೆನ್ನಾಗಿದೆ. ಮತ್ತದೇ ಹಳೆ ನೆನಪುಗಳಿಗೆ ಬೇಡಾ ಬೇಡಾ ಅಂದ್ರು ಕರ್ಕೊಂಡು ಹೋಗಿ ಬಿಡ್ತೀಯ... ಬರೋ ಮನಸ್ಸಿರಲ್ಲ. ಆದರೆ ವಯಸ್ಸು ಕೈ ಹಿಡಿದು ಎಳೆದುಕೊಂಡು ಬರುತ್ತೆ.

  ರಜಾ ದಿನಗಳಲ್ಲಿ ಮನೆಯಲ್ಲಿದ್ದೆ ಗೊತ್ತಿರಲಿಲ್ಲ. ಗುಡ್ಡ ಬೆಟ್ಟಗಳ ಹತ್ತೋದು ಸುತ್ತೋದು ( ಈಗ ಅದು ಟ್ರೆಕಿಂಗ್ ಆಗಿದೆ ..!!) ಮರ ಹತ್ತುವ ಸಾಹಸಗಳು.. ಅಬ್ಬಾ ಒಂದೇ... ಎರಡೇ.. ಹನ್ನೆರಡು ಗಂಟೆ ಬಿಸಿಲಲ್ಲಿ ಐಸ್ ಕ್ಯಾಂಡಿಯವನಿಗಾಗಿ ಕಾಯೋದು. ಮಧ್ಯಾಹ್ನ ಮಲಗೊಕು ಬಿಡಲ್ಲ ಅಂತ ಅಪ್ಪ ಅಮ್ಮಂದಿರ ಹತ್ತಿರ ಬೈಸಿಕೊಳ್ಳೋದು. ನಿಮ್ಮ ಮನೆ ಬ್ಯಾಣದ ಬಾಡಿಗೆ ಹುಡುಗರ ಕಂಡ್ಯನೋ ಅಂತ ಅಕ್ಕ ಪಕ್ಕದ ಮನೆಯವರ ಕೇಳಿಕೊಂಡು , ಪಕ್ಕ ಕಳೆದು ಹೋದ ದನ ಹುಡುಕುವಂತೆ ಬರುತ್ತಿದ್ದ ಅಪ್ಪ, ಕಾಕ , ಅಥವಾ ಮಾವಂದಿರು ...
  ಓದುತ್ತ ಓದುತ್ತ ಯಾಕೋ ಕುಂಬ್ರಿಗುಡ್ಡ , ಆನಂಗಿವಾರೆ , ಚಪ್ಪರಕಲ್ಲು, ಮುಳ್ಳೇಹಣ್ಣು ಬೆಟ್ಟಗಳೆಲ್ಲ ಕೈ ಬೀಸಿ ಕರೆದಂತಾಯ್ತು...

  ReplyDelete
  Replies
  1. ಸಂಧ್ಯಕ್ಕಾ ನೆನಪುಗಳನ್ನ ನೆನಪಾಗಿಸುವಲ್ಲಿಯೂ ಎನೋ ಖುಷಿ ಇದ್ದು ಅಲ್ದಾ ??
   ನಂಗ್ಯಾಕೋ ಗೊತ್ತಿಲ್ಲ ನೆನಪಿನ ಬುತ್ತಿಯಲ್ಲಿನ ಬಾಲ್ಯದ ನೆನಪೇ ತುಂಬಾ ಇಷ್ಟ ಆಗೋದು ..ಹೀಗಾಗೆ ಈ ಭಾವವೇ ಪದೇ ಪದೇ ನನ್ನ "ನಿರುಪಾಯ"ದಲ್ಲೂ ಕಾಣಸಿಗೋದು ...
   ಯಾಕಪ್ಪ ಈ ಹುಡುಗಿ ಬರೀ ಮನೆ ,ಅಜ್ಜ ,ಬಾಲ್ಯ ಅಂತ ಒಂದೇ ಭಾವ ಬರೀತಾಳೆ ಅನಿಸೀತು ...ಆದರೆ ನಂಗೂ ಗೊತ್ತಿಲ್ಲ .ನನ್ನ ಅತೀಯಾಗಿ ಕಾಡೋ ಭಾವ ಅಂದ್ರೆ ಇವೇ ....
   ನಿಜ ..ನಾನೂ ಅಪ್ಪ,ದೊಡ್ಡಪ್ಪನ ಹತ್ರ ಬೈಸಿಕೊಂಡಿದ್ದೆ ಎಲ್ಲಿ ಹುಡುಕಿದ್ರೂ ಸಿಗದೇ ಇರೋದಕ್ಕೆ ...ಆಟದ ತಲೆಯಲ್ಲಿ ಮಧ್ಯಾನ ಊಟಕ್ಕೂ ಮನೆ ಸೇರದೆ ಹೊಳೆಯಲ್ಲಿ ಆಟ ಆಡ್ತಾ ಇರೋಳನ್ನ ಸಂಜೆ ಸುಮಾರಿಗೆ ಉಸ್ಸಪ್ಪಾ ಅಂತ ನಿಟ್ಟುಸಿರು ಬಿಟ್ಟ ಅಪ್ಪನ ಸಿಟ್ಟಿನ ಮುಖ ಎಚ್ಚರಿಸುತ್ತು ...ಅದೇ ಮೊದಲು (ಕೊನೆ ಕೂಡಾ )ನನ್ನಪ್ಪ ನನ್ನ ಹೊಡೆದಿದ್ದು ..
   ಆದರೂ ಈ "ಬೇಸಿಗೆ ರಜಾ "ಒಂತರ ಮಜಾ ಅಲ್ವಾ ??
   ಜಾಸ್ತಿ ಹೊಟ್ಟೆಕಿಚ್ಚು ಪಡಬೇಡಿ ...ಹೊಟ್ಟೆನಲ್ಲಿ ಕಚ್ಚಿಪಾಯಿ ಬರುತ್ತೆ ಆಮೇಲೆ ...
   ಹೇಳಿರದ ತುಂಟಾಟವನ್ನು ಮತ್ತೆ ಹೇಳೋ ತರ ಮಾಡ್ತು ನಿಮ್ಮ ಈ ಮಾತು ....ಆತ್ಮೀಯ ಪ್ರತಿಕ್ರಿಯೆಗೆ ಶರಣು ...

   Delete
 3. ಮೊದಲ ಬಾರಿಗೆ ನಿನ್ನ ಬರವೊಂದು ನನ್ನನ್ನ ಭಾವುಕನನ್ನಾಗಿಸ್ತು ಕೂಸೆ....
  ನೀ ಮನೆಗೆ ಹೋಗದಿದ್ದುದ್ದೂ ಸಾರ್ಥಕವಾಯ್ತು!!!!!...
  ಹಮ್..ನಾವುಗಳು ನಮ್ಮ ರಜಾದಲ್ಲಿನ ಕೆಟ್ಟ ತಲೆಹರಟೆಗಳು...
  ಮಧ್ಯಾನ್ಹ ಊಟವಾದ ಮೇಲೆ ಶುರುವಾಗುತ್ತಿದ್ದ ನಮ್ಮ ಕ್ರಿಕೆಟ್,ಸೂರ್ಯ ಇಳಿಯುವ ಹೊತ್ತಿಗಾಗಲೇ ಜಗಳದ ರೂಪಕ್ಕೆ ಬಂದು ಬಿಡುತ್ತಿತ್ತು....
  ಊರಿನಲ್ಲಿದ್ದ ಮೂರು,ಮತ್ತೊಂದು ಜನ ಹುಡುಗರೊಂದಿಗೆ ದಿನಾ ಜಗಳ...ಬೆಳಿಗ್ಗೆ ಮತ್ತೆ ಎಲ್ಲಾ ಒಂದು...
  ಕದ್ದು ತಿನ್ನುತ್ತಿದ್ದ ಮಾವಿನಕಾಯಿಗೆ ಲೆಕ್ಕವಿಲ್ಲ...
  ಜೊತೆಗೆ ಬೆಳಿಗ್ಗೆ ಅಪ್ಪನ ಜೊತೆಗೆ ಹಲಸಿಹಣ್ಣೇ ನನಗೆ ತಿಂಡಿ....ಅದಕ್ಕೊಂದಿಷ್ಟು ಉಪ್ಪು,ಹುಳಿ,ಖಾರದ ಸಾಥ್..
  ಉಳಿದದ್ದೆಲ್ಲಾ ಬಹುಷಃ ನಿನ್ನ ಬರಹದ ಪುನರಾವರ್ತನೆಯೇ...
  ತಂಗಿಯ ಜೊತೆಗಿನ ಜಗಳ...ಅಮ್ಮನ ಮಧ್ಯಸ್ಥಿಕೆ!!!!!
  ಹಾಂ ಮತ್ತೊಂದು ವಿಷಯ ನೆನಪಾಯ್ತು..
  ನಮಗೆ ಪ್ರತಿ ರಜಾದಲ್ಲೂ ಶುದ್ಧ ಬರಹ ಬರೆಯಲಿಕ್ಕೆ ಕೊಡುತ್ತಿದ್ದರು...ದಿನಾ ಒಂದು ಪುಟ ಬರೆಯಿರಿ ಅಂತಾ...ಅದು ನಮಗೆ ನೆನಪಾಗುತ್ತಿದ್ದುದೇ ಶಾಲೆ ಶುರುವಾಗಲು ಒಂದು ವಾರಕ್ಕೆ ಮುಂಚೆ...ಆಮೇಲೆ ಎದ್ದು ಬಿದ್ದು ಗೀಚುವುದು...ಬಹುಷಃ ಇಂಜಿನಿಯರಿಂಗ್ ನ ಕೊನೆಯ ಕ್ಷಣದ ಓದುವಿಕೆಯ ಚಟಕ್ಕೆ ಅದೇ ವಿಶ್ವಾಸ ನಾಂದಿಯಾಗಿತ್ತೇನೋ...
  ಹಮ್...
  ಅದೇನೋ ಗೊತ್ತಿಲ್ಲ...ಈ ಬರಹ ಬರಿ ಬರಹವಾಗಿ ಉಳಿದಿಲ್ಲ ನನ್ನ ಮಟ್ಟಿಗೆ...
  ನನ್ನ ಹಳೆಯ ಲಟೂರಿ ನೆನಪುಗಳ ಬೀಗ ತೆಗೆದ ಕೀಲಿ ಕೈಯ್ಯಾಯಿತೇನೋ...ಗೊತ್ತಿಲ್ಲ...
  ಧನ್ಯವಾದಗಳು....
  ಬರೆಯುತ್ತಿರಿ..
  ನಮಸ್ತೆ :)

  ReplyDelete
  Replies
  1. ನಿಜ ಚಿನ್ಮಯಣ್ಣ ....ನಾನೂ ಹುಡುಗರ ತರಾನೇ ಆಡ್ತಿದ್ದೆ ಅಂತ ಆಯ್ತು :)
   ಹಲಸಿನ ಹಣ್ಣು ,ಮಾವಿನ ಹಣ್ಣು ನಂಗಷ್ಟೊಂದಾಗಿ ಆಗಲ್ಲ ...ಬಿಟ್ರೆ ನಿಮ್ಮ ಮೇಲಿನ ಎಲ್ಲಾ ಭಾವಕ್ಕೂ ನಂದೊಂದು ಜೈ :)
   ಖುಷಿ ಪಡಿ ವಾರದ ಹಿಂದೆ ಆದ್ರೂ ನೆನಪಾಗೊ ಶುದ್ಧ ಬರಹಕ್ಕೆ ...ನಂಗದು ನೆನಪಾಗ್ತಿದ್ದಿದ್ದು ಹಿಂದಿನ ದಿನ ಪಾಠೀ ಚೀಲ ಹುಡುಕೋವಾಗ ...ನಂಗದನ್ನ ಬರೆಯೋಕೆ ಸಹಾಯ ಮಾಡ್ತಿದ್ದಿದ್ದೂ ಕೂಡಾ ಅಜ್ಜನೇ :)..
   ಹಮ್ !!ಒಂದಿಷ್ಟು ಭಾವಗಳನ್ನ ನಾ ಹೇಳೋಕೆ ಮರೆತೆ ..ನೀವು ಸೇರಿಸಿದಿರಿ ಅವನ್ನೂ ..
   ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದ ...
   [ಮನೆಗೆ ಹೋಗದೆ ಇರೋದಕ್ಕೆ ಎನೋ ಈ ಭಾವ ಬರೆಯೋಕೆ ಬಂದಿದ್ದು ....badly missing these days :( ]

   Delete
 4. ಹೂಂನಮ್ಮಾ ಭಾಗ್ಯಾ, ನನಗೂ ನಿನ್ನ ಹಳ್ಳಿ ಇನ್ನೊಂದಷ್ಟು ವರ್ಷಗಳ ಹಿಂದೆ ಇತ್ತಲ್ಲಾ, ಅದೇ ಹಳ್ಳಿಯ ಅದೇ ಬಿಸಿಲು ಬಿಸಿಲೆನಿಸದ ಬಿದ್ದ ಗಾಯದ ಏಟು ನೋವೆನಿಸದ, ಬಯ್ಗುಳ-ಹೊಡೆತಗಳು ಮುನಿಸು ತಾರದ ...ಹೀಗೇ ಇನ್ನೂ ಅದೆಷ್ಟೋ ಗುಣವಿಶೇಷಗಳ ಒಡತಿಯಾದ, ಬೇಸಿಗೆರಜೆಗಾಗಿ ಕಾದುಕೂತಿರುತಿದ್ದ ಪುಟ್ಟ ಹುಡುಗಿಯಾಗಿರಲಿಕ್ಕೆ ಇಷ್ಟ. ಆದ್ರೆ ಬೇಸಿಗೆ ರಜೆ ಬಂತಲ್ಲಪ್ಪಾ ಅಂತ ಕೊರಗುವ ಪುಟಾಣಿ ಹುಡುಗಿಯೊಬ್ಬಳ ಅಮ್ಮ ಆಗಿಯೇ ಬಿಟ್ಟಿದ್ದೇನಲ್ಲಾ.. ಏನು ಮಾಡೊದು... ಇನ್ನೊಂದು ಜನ್ಮಕ್ಕೆ ಕಾಯೋಣ, ಆಗದಾ....

  ReplyDelete
  Replies
  1. ಖಂಡಿತಾ ಅಕ್ಕ :)ಅದ್ಯಾಕೆ ಬೇಸಿಗೆ ರಜ ಬೇಜಾರು ಅಂತಾರೋ ನಂಗಂತೂ ಗೊತ್ತಾಗ್ತಿಲ್ಲ ...ನಾ ನನ್ನ ತಮ್ಮಂಗೂ ಇವತ್ತದನ್ನೆ ಹೇಳ್ದೆ ..ಬಾ ಅದಲು ಬದಲಾಗೋಣ ಇಬ್ರೂ ಅಂತ :)
   ಅವತ್ತವರ ಬೈಗುಳ ತುಂಟಾಟವಾಗಿತ್ತು ..ಅಮ್ಮ ದೊಡ್ಡಮ್ಮ ಹೇಳೋ ಬಿಸಿಲಲ್ಲಿ ಓಡಾಡಬೇಡ ಕಪ್ಪಗಾಗ್ತೀಯ ಅನ್ನೋ ಮಾತು ಕಿವಿ ತಾಕುತ್ತಲೇ ಇರಲಿಲ್ಲ ...
   ಆದರಿವತ್ತು ಗ್ಲಾಮರ್ ಹಾಳಾಗುತ್ತೆ ಅನ್ನೋ ಈ ಪುಟ್ಟ ಪೋರರ ಮಾತು ಕೇಳಿ ನಂಗಂತೂ ಮಾತು ಬರ್ತಾ ಇಲ್ಲ :)...
   ಮತ್ತದೇ ನೆನಪಿನ ಊರಿಗೆ ಮುಂದಿನ ಜನ್ಮದಲ್ಲಿ ನಿಮ್ಮೊಟ್ಟಿಗೇ ನಂಗೂ ಒಂದು ಟಿಕೆಟ್ ಕಾಯ್ದಿರಿಸಿ :)
   ಚಂದದ ಪ್ರತಿಕ್ರಿಯೆಗೆ ಧನ್ಯವಾದ

   Delete
 5. ಭಾಗ್ಯಮ್ಮ ನನ್ನ ಬಾಲ್ಯಕ್ಕೆ ಕೊಂಡಯ್ದೆ ನೀನು..........
  ಹಂ ಮರಳ ಬಾರದ ಆ ಬಾಲ್ಯ, ಆ ರಜೆ ಮಜ.... ಈಗ ಮಾಡಲು ಕೆಲ್ಸ ಇಲ್ಲದ ದಿಗಳಲ್ಲಿ ಬೋರು ಅಂತ ಸುಮ್ನೆ ಕಾಲ ಕಳೆದು ಬಿಡ್ತು.
  ನನ್ನ ಶಾಲೆಯ ದಿನಗಳಲ್ಲಿ ಪ್ರತಿ ಶನಿವಾರ ಒಬ್ಬನೆ ೫ ಕಿ.ಮೀ ನಡೆದು ಅತ್ತೆ ಮನೆ ಸೇರಿದರೆ ಬರವುದ ಸೋಮವಾರ ಮುಂಜಾನೆಯೇ...
  ಅಲ್ಲಿ ಹೊಳೆ ಊಟ, ಬಾಳೆ ದಿಂಡಿನ ತೆಪ್ಪ, ಈಜು. ಎಮ್ಮೆ ಮೇಲೆ ಸವಾರಿ.. ಒಂದೇ ಎರಡೇ.......

  ತುಂಬಾ ಲವಲವಿಕೆಯ ಬರಹ ಭಾಗ್ಯ . ಧನ್ಯವಾದಗಳು....

  ReplyDelete
  Replies
  1. ಬಾಲ್ಯ ಅಂದ್ರೆನೇ ಲವಲವಿಕೆ ಅಲ್ವಾ ??ಸುಸ್ತು ,ಬೇಸರದ ಸೋಂಕಿಲ್ಲದೇ ನಮ್ಮ ರಾಜ್ಯಕ್ಕೆ ನಾವೇ ಸರ್ವಾಧಿಕಾರಿಗಳಾಗಿ ಮೆರೆದ ಆ ದಿನಗಳನ್ನೊಮ್ಮೆ ನೆನಸಿಕೊಂಡು ಖುಷಿ ಪಡೋಣ ಬನ್ನಿ:)
   ನೀವೂ ತುಂಬಾ ತರ್ಲೆ ಮಾಡಿದ್ರಿ ಅಂತ ಆಯ್ತಲ್ವಾ ...ಎಮ್ಮೆ ಸವಾರಿ ಎಲ್ಲಾ ಮಾಡಿಲ್ಲಪ್ಪ ನಾವು :)
   ಬರ್ತಾ ಇರಿ ..ನಮಸ್ತೆ

   Delete
 6. ಸಖತ್ತಾಗಿದ್ದು . ನಾನೂ ಬಾಲ್ಯದ ಲಗೋರಿ, ಮರದ ಬ್ಯಾಟು - ರಾಪರ್ ಕಿತ್ತ ಬಾಲಿನ ಕ್ರಿಕೆಟ್ಟು, ಗುಡ್ಡೆ ಗೇರು, ಕೌಳಿ ಮಟ್ಟಿಗಳನ್ನು ಈಗ್ಲೂ ಮಿಸ್ ಮಾಡ್ಕತ್ತಿದ್ದಿ :-(

  ಕೆಲ ಸಲ ಅನುಸೋದು. ನಾವು ಪ್ರಪಂಚದಲ್ಲಿರೋ ಎಲ್ಲದನ್ನೂ ತಿಳ್ಕೋತೀವಿ ಅಂತ ಹೊರಡೋಕಿಂತ ಅಮಾಯಕರಾಗೇ ಇದ್ರೆ ಎಷ್ಟೋ ಸಂತೋಷಗಳು ಮಿಸ್ ಆಗೋದು ತಪ್ಪತ್ತಾ ಅಂತ. ದೊಡ್ದವಳಾಗಿದೀಯ ಆಟಕ್ಕೆ ಬರಬೇಡ ಅನ್ನೋ ತಮ್ಮ, ಕೆಲಸ ಮಾಡಲ್ಲ ಅಂತ ಬೈತಿದ್ದ ಅಮ್ಮ ಸುಮ್ನಿರು ಮಾತಾಡು ಅನ್ನೋದು, ಹಿಂದೆಯೇ ಓಡುತ್ತಿದ್ದ ಅಪ್ಪ ಈಗ ಚೇಷ್ಟೆಗೂ ಬಯ್ಯದಿರೋದು .. ಎಲ್ಲಾ ಓದಿದಾಗ ಮತ್ತದೇ ಮಾತು ನೆನಪಾಯಿತು..

  ReplyDelete
  Replies
  1. ನಿಜ ಪ್ರಶಸ್ತಿ .....ದೊಡ್ಡವಳಾಗಿದೀಯಾ ಅಂತ ಹೇಳೋ ಅವ್ರು ಯಾಕೆ ಆ ಪುಟ್ಟ ಪುಟ್ಟ ಖುಷಿಗಳನ್ನ ಮತ್ತೆ ಪಡೆಯೋಕೆ ಅಡ್ಡವಾಗ್ತಾರೋ ಗೊತ್ತಿಲ್ಲ..
   ."ದೊಡ್ಡವರಾಗಿದ್ದೀವಿ "ಅನ್ನೋ ಕೋಡು ನಂಗೆ ಖುಷಿ ಅಂತೂ ನೀಡಿಲ್ಲ ..
   ನಿಮ್ಮ ಮತ್ತದೇ ಹಳ್ಳಿ ಹುಡುಗನಾಗಿ ಹೇಳಿದ ಮಾತುಗಳು ಇಷ್ಟ ಆದ್ವು ....ಚಂದದ ಪ್ರತಿಕ್ರಿಯೆ
   ಬರ್ತಾ ಇರಿ ...ನಮಸ್ತೆ

   Delete
 7. ಜಡ್ಡುಗಟ್ಟಿದ್ದ ನನ್ನ ಮನಸ್ಸು ಇದೀಗ ತುಸು ಉತ್ಸಾಹಕ್ಕೆ ಬಿದ್ದು, ನೆನಪುಗಳ ಪರಿಷೆಯನ್ನು ಹರಡಿಕೊಂಡು ಕುಳಿತುಕೊಂಡಿತು.

  ನೀವು ಬರೆದಂತೆ ನನಗೂ ಅದೇ ಹಳ್ಳಿಯ ಹುಡುಗನಾಗೋ ಅತೀವ ಆಸೆ, ಆದರೆ ಮರಳಿ ಮಣ್ಣಿಗೆ ಸುಲಭವಾದ ನಿರ್ಧಾರವಲ್ಲ. ಈಗ ನನ್ನ ಹಳ್ಳಿಯಲ್ಲಿ ನನ್ನ ಬೇರುಗಳೂ ಉಳಿದಿಲ್ಲ. ಸುತ್ತಲ ಬೆಟ್ಟಗಳನ್ನು ಮುಂಚಿನಂತೆ ಸಲೀಸಾಗಿ ಏರಿ ಮಜ್ಜಿಗೆ ಹಣ್ಣುನ್ನು ಕಿತ್ತು ಜೇಬು ತುಂಬಿಸಿಕೊಳ್ಳಲು ಬರುವುದು ಇಲ್ಲ. ನನ್ನ ಪಟಾಲಮು ಇಬ್ರಾಹಿಂ, ಪುಟ್ಟೂ, ಪದ್ದೂ, ಮೀನಾಕ್ಷೀ ಮತ್ತು ಇಂದಿರ ಅಲ್ಲಿಂದ ಯಾವತ್ತೋ ಕಾಲು ಕಿತ್ತಾಗಿದೆ. ಆದರೂ, ನನಗೆ ಹಳ್ಳಿಯ ವ್ಯಾಮೋಹ ತುಸುವೂ ಮಾಸಿಲ್ಲ.

  ಅಂದಹಾಗೆ, "ಕನಸಲ್ಲಿ ರಾಜಕುಮಾರನೂ ಇರಲ್ಲ ..." ಅನ್ನುವ ಮಾತು ಯಾಕೋ ಬೇಸರ ತರಿಸಿತು! :-D ಬೇಗನೇ ಅಂತಹ ರಾಜಕುಮಾರನು ಎತ್ತರದ ಶ್ವೇತಾಶ್ವದ ಮೇಲೆ ಕೆನೆಯುತ್ತಾ ಬರಲಿ...

  ReplyDelete
  Replies
  1. ಥಾಂಕ್ಸ್ ಬದರಿ ಸರ್ ...
   ಹಿಂದೆ ಹೋಗೋಕಂತೂ ಸಾಧ್ಯ ಇಲ್ಲ..ನೆನಪಿಸಿಕೊಂಡಾದ್ರೂ ಖುಷಿ ಪಡೋಣ ...ಮತ್ತದೇ ಹಳ್ಳೀ ಹುಡುಗ ಆಗಿರೋ ಬಯಕೆ ನಿಮ್ದೂ ಕೂಡಾ ಅಂದಿದ್ದು ಇಷ್ಟ ಆಯ್ತು ....
   ಅಂದ ಹಾಗೆ ಕನಸಿನ ಹುಡುಗ ಬಿಳಿ ಕುದುರೆ ಏರಿ ಬರಲಿ ಅನ್ನೋ ನಿಮ್ಮ ಹಾರೈಕೆಗೊಂದು ಶರಣು :)
   ಆತ್ಮೀಯ ಪ್ರತಿಕ್ರಿಯೆಗೆ ಆಭಾರಿ ..
   ಬರ್ತಾ ಇರಿ ..ನಮಸ್ತೆ

   Delete
 8. ಪುಟ್ಟ ಹುಡುಗಿ, ಮತ್ತೆ ನನ್ನ ಅಜ್ಜನ ಮನೇನೂ ನೆನಪು ಮಾಡಿಬಿಟ್ಟೆ. ಆದ್ರೆ ಸತ್ಯಕ್ಕೂ ನಾನು ಇಷ್ಟು ಮಜಾ ಮಾಡಿರಲಿಲ್ಲ. ಇದರ ಕಾಲುಭಾಗದಷ್ಟು ಅಂತ ಒಪ್ಪಿಕೊಳ್ತೇನೆ. ಹಿಂದಿನ ಚಂದದ ನೆನಪಿಗೆ ನನ್ನನ್ನು ಕರಕೊಂಡು ಹೋಗಿದ್ದಕೆ thanku :))

  ReplyDelete
  Replies
  1. ಥಾಂಕ್ಸ್ ಸುಮತಿ :)
   ಅಜ್ಜನ ಮನೆಯ ಸಾಲು ಸಾಲು ನೆನಪುಗಳು ಇನ್ನೂ ಇತ್ತು ಹೇಳೋಕೆ ..ಇನ್ ಯಾವಾಗ್ಲಾದ್ರೂ ಆ ನೆನಪನ್ನೂ ಹೇಳಿ ಬಿಡೋಣ ಬಿಡಿ (ಸುಮ್ಮನೆ ಯಾಕ್ ಅದ್ನ್ ಒಂದ್ ಉಳ್ಸೋದು ಅಂತ)
   ಹಮ್ ಬಾಲ್ಯದ ಕಿಲಾಡಿಗಳೇ ಹಾಗೆ ಅಲ್ವಾ ..ನಾನೇ ಜಾಸ್ತಿ ಮಾಡಿದ್ದು ಅಂದುಕೊಂಡ್ರೆ ಈ ಮೇಲಿನವರೆಲ್ಲಾ ನನ್ನ ಹತ್ತು ಪಟ್ಟು ಮಾಡಿದಾರೇ ಅನ್ಸುತ್ತೆ :)
   ಇಷ್ಟವಾಯ್ತೀ ಪ್ರತಿಕ್ರಿಯೆ

   Delete
 9. "ಮನದ ಧಗೆ........... ಜೊತೆಗೆ ಕಾಡೋ ಒಂದಿಷ್ಟು ನಿನ್ನೆ ಮೊನ್ನೆಯ ನೆನಪು"- ಮೊದಲನೆಯ ಪ್ಯಾರಾಗ್ರಾಫ್ ನಲ್ಲಿನ ಉಪಮಾನ ಉಪಮೇಯಗಳು ತುಂಬಾ ಹಿಡಿಸಿತು. ಇನ್ನು ಸಹಿಸಲಾರದ ಅನಿವಾರ್ಯತೆಗಳು ಅದೆಷ್ಟೋ ಇದೆ ಬಿಡಿ.
  "ರಜಾ ಶುರು ಆದ್ರೆ ಬೆಟ್ಟಾ ತಿರ್ಗೋದು.......... ಅದೇ ತುಂಬಾ ಇಷ್ಟ ಆಗೋದು" -ರಜೆಯ ಮಜಾ ಚೆನ್ನಾಗಿ ವರ್ಣಿಸಿದ್ದೀರ. ಹಾಗೆ ಹೇಳುತ್ತಾ ಹೋದರೆ ಶಬ್ಧಗಳು ಸಾಲದೇನೋ ಅಲ್ಲವೇ?
  "ಅದೂ ಸರಿಯಾಗಿ ಸೂರ್ಯ ನೆತ್ತಿಗೆ ಬರೋ ಸಮಯಕ್ಕೆ :) ಯಾಕಂದ್ರೆ ನಮ್ಮ ಓಡಾಟ ಮುಗಿಯೋದೆ ಸೂರ್ಯನ ಸುಡು ನೋಟ ನಮ್ಮ ಮೇಲೆ ಬಿದ್ದಾಗ ತಾನೆ"- ಇಲ್ಲಿ ಸ್ವಲ್ಪ ಗೊಂದಲವಾಯಿತು, "ನಮ್ಮ ಓಡಾಟ ಮುಗಿಯೋದೆ" ಇಲ್ಲಿ ಬಹುಶಃ "ನಮ್ಮ ಓಡಾಟ ಶುರುವಾಗೋದೇ" ಇರಬೇಕೇನೋ.
  ಮುಂದೆ ಮಂತ್ರಾಕ್ಷತೆ, ಜಗಳ, ಕಂಪ್ಲೇಂಟ್, ಚಿಪ್ಸ್ ತಿನ್ನೋದು ಇವೆಲ್ಲ ಬರೀ ಹುಡುಗರಲ್ಲಿ ಮಾತ್ರ ಅಂದುಕೊಂಡಿದ್ದೆ ನೀವು ಅದರಲ್ಲಿ ಮುಂದುವರೆದಿದ್ದೀರ ಅಂತ ಆಯ್ತು.
  ರಜೆಯಲ್ಲಿ ಅಜ್ಜನ ಮನೆಯ ನೆನಪು ಮಾತ್ರ ಎಂದಿಗೂ ಮರೆಯಲಾಗದಂತದ್ದು.
  ನಾವು ದೊಡ್ಡವರಾದಂತೆ, ನಮ್ಮ ಹುಡುಗಾಟ ನಿಂತಾಗ ಮನೆಯವರಿಗೂ ಏನೋ ಕಳೆದುಕೊಂಡ ಅನುಭವ ಬರುವುದಂತೂ ನಿಜ.
  "ನಂಗದೇ ಪುಟ್ಟ ಹಳ್ಳಿಯ.............. ಹೌದು ನಂಗದೆ ಪುಟ್ಟ ಹಳ್ಳಿಯ ಪ್ರೀತಿಯ ಪುಟ್ಟಿಯಾಗಿರೋದೆ ಇಷ್ಟ" ಇದು ಬಹುತೇಕ ಎಲ್ಲರ ಆಸೆಯೂ ಹೌದು.

  ಒಟ್ಟಿನಲ್ಲಿ ಬರಹ ಮತ್ತೆ ನಮ್ಮನ್ನ ಮತ್ತೆ ಬಾಲ್ಯಕ್ಕೆ ಕರೆದೊಯ್ದಿದ್ದಂತೂ ನಿಜ. ನಾನೂ ಕೂಡ ಇಂಥಹ ಅದೆಷ್ಟೋ ನೆನಪುಗಳನ್ನ ಹೊತ್ತು ಸಾಗುತ್ತಿದ್ದೇನೆ. ನಮ್ಮ ಓಣಿಯಲ್ಲಿ ಎಲ್ಲೆಲ್ಲಿ ಲೈಟಿನ ಮತ್ತು ಫೋನ್ ಕಂಭಗಳಿದ್ದವೋ ಅಲ್ಲೆಲ್ಲ ಕ್ರಿಕೆಟ್ ಆಡಿಬಿಟ್ಟಿದ್ದೇವೆ, ಒಂದು ದಿನ ತಪ್ಪಿ ಎಲ್ಲಾದರೂ ಸುಡುಬಿಸಿಲಿನಲ್ಲಿ ಮನೆಯಲ್ಲಿದ್ದರೆ ಹೋಗ್ರೋ ಬಿಸಿಲು ಹಾಳಾಗ್ತಾ ಇದೆ ಅಂತ ಬಯ್ಯೋರು. ನಮ್ಮ ಸರ್ ಅಂತೂ ನಮಗೆ ರಥಬೀದಿಯ ರೌಡಿಗಳು ಅಂತಲೇ ಕರೆಯುತ್ತಿದ್ದರು. ಹೀಗೆ ಅದೆಷ್ಟು ನೆನಪುಗಳಿದೆಯೋ..

  ನಿಮ್ಮ ಬಗ್ಗೆ ಒಂದು ಕಂಪ್ಲೇಂಟ್ ಇದೆ.. ಹೀಗೆ ಪ್ರತಿ ಬಾರಿ ಹಳೆ ದಿನಗಳನ್ನ ನೆನಪಿಸಿ ಹೊಟ್ಟೆ ಉರಿಸ್ತ ಇರ್ತೀರಾ. ಹಳೆ ನೆನಪುಗಳೆನೋ ಮನಸಿಗೆ ಖುಶಿ ನೀಡುತ್ತೆ ಅದೇನೋ ನಿಜ, ಆದರೆ ಕೆಲವೊಮ್ಮೆ ನಾವು ಮತ್ತೆ ಅಂಥಹ ದಿನಗಳನ್ನ ಮತ್ತೆ ಕಾಣಲು ಸಾಧ್ಯವಿಲ್ಲ ಅನ್ನುವ ದುಃಖ ಬೇರೆ.

  ಬಾಲ್ಯದ ನೆನಪುಗಳ ಅಲೆಯಲ್ಲಿ ಸಿಕ್ಕು ,
  ನಮ್ ಹುಡುಗ್ರ ಗೋಳಾಟ ಕಂಡು ,
  ಮುಸ್ಸಂಜೆಯ ಮುಜುಗರದ ಭಾವದಲಿ ಮಿಂದು ,
  ಬೇಯುವ ಧಗೆಯಲಿ ನೆನಪ ಹಸಿರಾಗಿಸಿ ಜೀವ ಹಿಂಡುತಿರೆ ,
  ನೀ ಹೀಗೆ ಕಾಡಿದರೆ ನಾನಂತು ನಿರುಪಾಯ..
  ನೀ ಹೀಗೆ ಕಾಡಿದರೆ ನಾನಂತು ನಿರುಪಾಯ...

  ಶುಭವಾಗಲಿ.

  ReplyDelete
  Replies
  1. ಮೊದಲಿಗೆ ನಿಮ್ಮೀ ಆತ್ಮೀಯ ಪ್ರತಿಕ್ರಿಯೆಗೊಂದು ಶರಣು ...
   ನಿಜ ಅನಿವಾರ್ಯತೆಗಳೊಂದಿಗೆ ಬದುಕೋದೇ ಜೀವ್ನ ಅಲ್ವಾ ??
   ಸೂರ್ಯ ನೆತ್ತಿಗೆ ಬರೋ ತನ್ಕ ಆಟ ಆಡ್ತಿದ್ವಿ ಆಮೆಲೆ ಹೊಟ್ಟೆ ಕೇಳಬೇಕಲ್ವಾ ..ಅದು ಸುಮ್ನೆ ಇದ್ರೂ ಅಪ್ಪ ,ದೊಡ್ಡಪ್ಪ ಕೋಲು ಹಿಡ್ಕೊಂಡು ಬರೋರು ..ಗೊಂದಲದಲ್ಲಿ ಬರೆದಿದ್ದಲ್ಲ ಅದು ...ಹುಡುಗರ ತರಾನೇ ಆಡ್ತಿದ್ವಿ ಕೂಡಾ ..why should only boys have fun ಅನ್ನೋ ಭಾವದಲ್ಲಿ :)
   ನಿರುಪಾಯದಲ್ಲಿ ತುಂಬಾ ಕಾಡೋ ಭಾವ ಅಂದ್ರೆ ನಿನ್ನೆ ನಿನ್ನೆ ಕಳೆದು ಹೋದ ಬಾಲ್ಯ ,ಪ್ರೀತಿಯ ಮನೆ,ಮುದ್ದು ಮಾಡೋ ಅಜ್ಜ ,ಹದಿನೆಂಟು ವರ್ಷದ ಭಾವ ತುಂಬಾ ಒಂಟಿಯಾದಗ ಹೊರ ಬರುತ್ತೆ ಅಷ್ಟೆ ...
   ಈ ಭಾವಗಳು ನಿಮ್ಮನ್ನ ಕಾಡಿ ಬೇಸರ ಮೂಡಿಸಿದ್ದರೆ ಕ್ಷಮೆ ಇರಲಿ ಗೆಳೆಯಾ ...
   ತಪ್ಪು ಒಪ್ಪುಗಳನ್ನ ಹೇಳಿದ್ದಕ್ಕೆ ಖುಷಿ ಆಯ್ತು ..ಬರ್ತಾ ಇರಿ ನ್..ನಮಸ್ತೆ

   Delete
 10. ಮುದ್ದು ತಂಗೀsssss...
  ನೀನು ಮಾತ್ರ ಬೇಸಿಗೆ ರಜೆಯ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡು ನಮಗೆ ಕೂತು ಹೇಳಲಿಲ್ಲ.. ನಮ್ಮನ್ನೂ ಬಾಲ್ಯಕ್ಕೆ ಕರೆದುಕೊಂಡು ಹೋದೆ.. ಅಲ್ಲಿರೋ ಒಂದಷ್ಟು ತುಂಟಾಟ, ಮುಗ್ದತೆ, ನಲಿವುಗಳ ನೆನಪು ಮಾಡಿ ಮನಸ್ಸು ಬೆಚ್ಚಗಾಗಿಸಿದೆ.. ನಿನ್ನ ಬರಹ ಓದಿದ ಮೇಲೆ ಮನಸ್ಸೀಗ ಹಚ್ಚ ಹಸುರು..

  ಮತ್ತೆ ನಿನ್ನ ಬರವಣಿಗೆಯ ಶೈಲಿ ತುಂಬಾ ಹಿಡಿಸಿತು ಅನ್ನುವುದಕ್ಕೆ ನಾ ಮರೆಯುವುದಿಲ್ಲ..
  ಸಿಕ್ಕಾ ಪಟ್ಟೆ ಇಷ್ಟ ಪಟ್ಟೆ...

  ReplyDelete
  Replies
  1. ಥಾಂಕ್ಸ್ ಮುದ್ದಕ್ಕಾ ......ನನ್ನೊಟ್ಟಿಗೆ ನೀವೂ ಬಾಲ್ಯಕ್ಕೆ ಬಂದಿದ್ರಿ ಅಂತಾದ್ರೆ ನಾ ಬರೆದದ್ದು ಸಾರ್ಥಕ :)
   ಬಾಲ್ಯದ ಮಸ್ತಿ ,ಆ ನಲಿವು ಇವತ್ತಿನ ವೀಕ್ ಎಂಡ್ ಟ್ರಿಪ್ಸ್ ನಲ್ಲಿ ಸಿಗಲ್ಲ ಅಲ್ವಾ ?? ಆ ಮುಗ್ಧತೆಯ ಒಂದು ಭಾಗ ಕೂಡಾ ಹುಡುಕ ಹೊರಟ್ರೂ ಸಿಗಲ್ಲ ಅಲ್ವಾ ...
   ಬರ್ತಾ ಇರಿ ...ನಮಸ್ತೆ

   Delete
 11. Nice write up Bhagya... Childhood memories are always fill in our mind like a green forest..
  When the life move on,sometimes have to miss many things in our life..In the meantime,will explore to new things too...Even it happens for every one....
  Keep writing..and i like this word "ಮನದ ಧಗೆ... "

  ReplyDelete
  Replies
  1. ಥಾಂಕ್ಸ್ ಗಿರೀಶ್ ...ನನ್ನ ಬ್ಲಾಗ್ ಗೆ ಸ್ವಾಗತ ....yea you r extly right ..these are the ever enjoying memories which made us to feel happy as though the years rolled on...
   thanks for coming...

   Delete
 12. ಮತ್ತೆ ಬರಲಾರದ ಆ ದಿನಗಳು ಮನದಂಗಳದ ನೆನಪುಗಳಲಿ ಶಾಶ್ವತ...
  ಕಾಲನ ಓಘಕ್ಕೆ ಸಿಲುಕಿ ಓಡಲೇ ಬೇಕಾಗಿ ಅಲ್ಲಿಯೇ ನಿಲ್ಲಲಾರದ ನಾವು ಅಂದಿನ ಆ ನೆನಪುಗಳಲ್ಲಾದರೂ ಈಜಾಡಿ ಹಗುರಾಗೋಣ...
  ಮತ್ತೆ ಆ ದಿನಗಳಿಗೆ ಒಯ್ದ ನಿನ್ನ ಬರಹಕ್ಕೆ ಶರಣು ಕಣೇ...
  ಬರಹ ಖುಷಿನೀಡಿತು...

  ReplyDelete
  Replies
  1. ಥಾಂಕ್ಸ್ ಶ್ರೀವತ್ಸ ...
   ನನ್ನದು ಅದೇ ಭಾವ ಕಣೋ ...ಆ ದಿನಗಳ ನೆನಪಿನ ಖುಷಿ ಇದೆ ಅಲ್ವಾ ಅನ್ನೋ ಪುಟ್ಟ ಸಮಾಧಾನ ...
   ಆದರೂ ಅದೇ ದಿನಗಳೆ ಶಾಶ್ವತವಾಗಿರಬಾರದಿತ್ತೇ ಅನ್ನೋ ಸಣ್ಣ ಅಸಮಾಧಾನ ...
   ಇವೆಲ್ಲದರ ಸಮಾಗಮದಲ್ಲಿ ಒಂದಿಷ್ಟು ಪ್ರಶ್ನೆ ಕಾಡಿದ್ದಂತೂ ಸುಳ್ಳಲ್ಲ ...
   ಬರ್ತಾ ಇರು ...
   ನಮಸ್ತೆ

   Delete
 13. ಒಂದು ರೀತಿ ಇಂಗ್ಲಿಷ್ ಕ್ಲಾಸಿಕ್ ಕಾದಂಬರಿ ಓದಿದ್ ಅನುಭವ ಕೊಡ್ತು ನಿನ್ನ ಲೇಖನಗಳು. ಚೆಂದ ಇದ್ದು ಗೆಳತಿ ...
  ಹಳ್ಳಿಮನೆಯ ನೆನಪುಗಳು ಎಂದಿಗೂ ನಿತ್ಯ ನಿರಂತರ .... :)

  ReplyDelete
 14. ಥಾಂಕ್ಸ್ ಜಿ ...
  ಬರ್ತಾ ಇರಿ ..ನಮಸ್ತೆ

  ReplyDelete