Tuesday, March 1, 2016

ದೇವರ ನಾಡಲ್ಲಿ...

ನಾಲ್ವರು ಹುಡುಗೀರು.  ಯಾವಾಗಲೂ ಕೀಟಲೆ ಮಾಡ್ತಾ, ಪಕ್ಕಾ ಹುಡುಗರ ತರಹ ಹೇಗ್ ಹೇಗೋ ಇದ್ದುಬಿಡೋ, ಮನೆಯಲ್ಲೆಲ್ಲಾ "ನಿಜ್ವಾಗ್ಲೂ ಕೆಲಸವಿಲ್ವಾ ನಿಮಗೆ" ಅಂತೆಲ್ಲಾ ದಿನಕ್ಕೈದು ಬಾರಿ ಬೈಸಿಕೊಂಡು, ಅದಕ್ಕೂ ತಲೆ ಕೆಡಿಸಿಕೊಳ್ಳದೆ, ಮೇಕಪ್ , ಸನ್ ಬರ್ನ್ ಗಳ ಹಾವಳಿಯಿಲ್ಲದೇ ಸುಮ್ಮ ಸುಮ್ಮನೇ ಅಲೆದಾಡೋ ಬದುಕದು. ಅದರಲ್ಲೂ 'ಕೊನೆಯ ಸೆಮ್' ಅನ್ನೋ ತಲೆಪಟ್ಟಿ ಬಿದ್ದ ಮೇಲೆ ಅಲೆದಾಟಗಳೇ ಬದುಕು ಅನ್ನಿಸಿ ಬಿಟ್ಟು ಓಡಾಡ್ತಿರೋ ಒಂದಿಷ್ಟು ಚಂದ ಚಂದದ ಊರುಗಳಿವೆ. 
ತೀರಾ ಇಷ್ಟವಾಗೋ ಅಲೆದಾಟಗಳ ದಾಖಲಿಸೋ ಮನಸ್ಸಾಗ್ತಿದೆ. 

                    
Kerala , You are loved and we are lovable.

ಒಂದಿಷ್ಟು ಖುಷಿ, ಒಂದಿಷ್ಟು ಕಾತರತೆ, ಮತ್ತೊಂದಿಷ್ಟು ಹೊಸತನಗಳ ಹುಡುಕಾಟದಲ್ಲೇ ಅದೊಂದು ಅಪರಿಚಿತತೆಯ ಭಾವ ತಾಗುತ್ತಲ್ಲಾ, ಅಂತಹುದ್ದೇ ಒಂದು ಭಾವ ಕೈ ಸೋಕಿದ್ದು ಮತ್ತದೇ ಕಡಲೂರಲ್ಲಿ. ಈಗೆಲ್ಲಾ ಕಡಲಂದ್ರೆ ತುಸು ಜಾಸ್ತಿಯೇ ಪ್ರೀತಿ ನಂಗೆ  ಥೇಟ್ ಕಡಲೂರ ಆ ಹುಡುಗನಂತೆಯೇ. ಅದರಲ್ಲೂ ಬಿಟ್ಟು ಬಿಡದೇ ನೋಡಿದ್ದ ಒಂದಿಷ್ಟು ಮಲಯಾಳಿ ಮೂವಿಗಳು, ಅಲ್ಲೆಲ್ಲಾ ಕಾಣ ಸಿಗ್ತಿದ್ದ ಸಮುದ್ರ, ಬೋಟ್ ಹೌಸ್ ಗಳು, ಹಿನ್ನೀರು, ತೀರದಲ್ಲೆಲ್ಲಾ ಬಾಗಿ ನಿಲ್ಲೋ ತೆಂಗಿನ ಮರಗಳು ಎಲ್ಲವೂ ನಮ್ಮನ್ನಲ್ಲಿಯ ತನಕ ಎಳೆದುಕೊಂಡು ಹೋಗಿತ್ತು.

ಅದೊಂದು ಅನಿಶ್ಚಿತತೆಯ ಜೊತೆ ಹೊರಟಿದ್ದು 'ದೇವರ' ನಾಡಿಗೆ.... 

ಗೋವಾದಿಂದ ಶುರುವಾದ ಪ್ಲಾನ್ ಪಾಂಡಿಚೇರಿಯ ದಾಟಿ ಬಂದು ತಲುಪಿದ್ದು ಕೇರಳಕ್ಕೆ. ಜೊತೆಯಾದದ್ದು ಮತ್ತೆ ಮೂವರು ಕ್ರೇಜಿ ಗೆಳತಿಯರು. ಅದೊಂದು ಪಕ್ಕಾ ಅನ್ ಪ್ಲಾನ್ಡ್ ಟ್ರಿಪ್. ಇನ್ನೂ ವೇಟಿಂಗ್ ಲಿಸ್ಟ್ ಅಲ್ಲೇ ಇದ್ದ ಟ್ರೈನ್ ಟಿಕೇಟ್, ಯಾವ ಯಾವ ಜಾಗಗಳ ನೋಡಬೇಕನ್ನೋದೂ ತಿಳಿಯದ, ಅಸಲು ಎಷ್ಟು ದಿನದ ಟ್ರಿಪ್ ಅನ್ನೋದೇ ಖಾತರಿಯಾಗಿರದ ಭಾವವ ಹೊತ್ತು ಪಯಣ ಹೊರಟಿತ್ತು. ನಮ್ಮದಿಷ್ಟು ನಗು, ಗಲಾಟೆ, ಗದ್ದಲ, ಮಾತಿನ ಜೊತೆ ಪಕ್ಕದಲ್ಲಿ ಕೂತಿದ್ದವರು ಕೂಡಾ 'ಹ್ಯಾಪಿ ಕೇರಳ' ಅಂತ ಬೀಳ್ಕೊಡೋ ಹೊತ್ತಿಗೆ ಎರ್ನಾಕುಲಂ ತಲುಪಿಯಾಗಿತ್ತು.
ಆಗ ಶುರುವಾಗಿತ್ತು ನಮ್ಮದಿಷ್ಟು ಪ್ಲಾನ್ ಗಳು. ಫೋರ್ಟ್ ಕೊಚ್ಚಿಯ ನೋಡೋಕೆ ಹೋಗೋದೋ ಅಥವಾ ವೈಪಿನ್ ಮೂಲಕ ಆ ಕಡಲ ಮಧ್ಯ ನಡೆಯೋದೋ ಅನ್ನೋ ಗೊಂದಲದಲ್ಲಿಯೇ ಮುಖ ಮಾಡಿದ್ದು ಕೊಚ್ಚಿಯ ಕಡಲ ಕಡೆಗೆ.  ಬೆಳಿಗ್ಗೆ ಏಳಕ್ಕೇ ತಡೆಯೋಕಾಗದ ಸೆಕೆಯಲ್ಲಿ ಮಧ್ಯಾಹ್ನ ಹೇಗಿರೋದು ಭಗವಂತ ಅನ್ನೋ ಭಾವವೊಂದು ಬೇಸರ ಮೂಡಿಸೋಕೆ ಶುರುವಿಟ್ಟಿತ್ತು. ಆ ಊರ ಅಪ್ಪಮ್(ದೋಸೆ ತರಹದ್ದು) ರುಚಿ ಇನ್ನೂ ಬಾಯಲ್ಲಿರೋವಾಗಲೇ, ಮರೈನ್ ಡ್ರೈವ್ ಹೆಸರಲ್ಲಿ ಗಂಟೆಗಟ್ಟಲೇ ಕಾದಿದ್ದ ಬೋಟ್ ಕೊನೆಗೂ ನಿಧಾನವಾಗಿ ಹೊರಟಾಗ ಅದೊಂದು ನಿಟ್ಟುಸಿರು.  ಕಡಲ ಮಧ್ಯವಿರೋ ಆ ಚಂದದ ಪ್ಯಾಲೇಸ್, ಅದೊಂದಿಷ್ಟು ಚಂದ ಚಂದದ ಚರ್ಚ್ ಗಳು, ಲುಲು ಮಾಲ್ ದಾಟಿ ಬಂದು ನಿಂತಿದ್ದು ನನ್ನಿಷ್ಟದ ಕಡಲ ತೀರಕೆ. 

St Anthony church ,
Way from Ernakulam to Fort Cochin, PC: Archana


ಮುಳುಗೋ ಸೂರ್ಯನನ್ನ ಸೆರೆ ಹಿಡಿಯೋ ಕೆಲಸದಲ್ಲಿ ಗೆಳತಿ ನಿಂತಿದ್ರೆ ನಾ ಕಡಲ ಅಲೆಗಳ ಜೊತೆ ಮಾತಿಗೆ ಕೂತಿದ್ದೆ. ಅಲ್ಲಿರೋ ಕನ್ನಡದವರನ್ನೆಲ್ಲಾ ಮಾತಾಡಿಸಿ, ಅವರ ಬಳಿಯೆಲ್ಲಾ 'ನಾಲ್ಕೇ ಜನ ಹುಡುಗೀರು ಬಂದಿದ್ದಾ, ಕ್ರೇಜಿ ಗರ್ಲ್ಸ್' ಅಂತೆಲ್ಲಾ ಹೇಳಿಸಿಕೊಂಡು ಬರೋ ಹೊತ್ತಿಗೆ ಆ ಊರ ಸೆಕೆ ಕೂಡಾ ಅಭ್ಯಾಸವಾದಂತಿತ್ತು. 

 ಜಗಮಗಿಸೋ ಆ ದೀಪಗಳ ಕೆಳಗೆ ಇಡೀ ಊರು ಗೊತ್ತೇನೋ ಅನ್ನೋ ತರಹ ಮಧ್ಯ ರಾತ್ರಿಯ ತನಕ ಸುಸ್ತೇ ಆಗದಂತೆ ಓಡಾದಿದ್ದಿದೆ. ಆ ಊರ ನೆನಪನ್ನೆಲ್ಲಾ ಜೋಡಿಸಿಕೊಂಡು ಮಾತಿಗೆ ಕೂತಿದ್ದಾಗ ಕಾಡಿದ್ದು Alleppey. 
ಚಂದ ಚಂದದ ಬೋಟ್ ಹೌಸ್ ಗಳು, ಹಿನ್ನೀರ ಮಧ್ಯದ ಓಡಾಟ ಎಲ್ಲವೂ ಮೋಡಿ ಮಾಡಿದಂತಿತ್ತು. ಮತ್ತೆ ಮರುದಿನದ ಹಾದಿ ಹಿಡಿದಿದ್ದು ಅಲೇಪಿ ಕಡೆಗೆ. ಅದೊಂದು ಬೋಟ್ ಹಿಡಿದು ಐದಾರು ತಾಸು ಹಿನ್ನೀರ ಮಧ್ಯ ಕಳೆದು ಹೋಗಿದ್ದವರಿಗೆ ಆ ಊರ ಬಿಟ್ಟು ಬರೋ ಮನಸ್ಸೇ ಆಗಿರಲಿಲ್ಲ. ಪಕ್ಕದಲ್ಲೇ ಸಾಗೋ ಇನ್ನೊಂದಿಷ್ಟು ಬೋಟ್ ಗಳ ಜೊತೆ, ಮಧ್ಯದಲ್ಲೆಲ್ಲೋ ಕುಡಿದ ಆ ಸಿಹಿ ಸಿಹಿ ಎಳನೀರು, ಬೋಟ್ ಅಣ್ಣನ ಬಳಿ ಬನಾನ ಫ್ರೈ ಬೇಕಂತ ಹಠ ಹಿಡಿದ ಪರಿ, ಟೇಸ್ಟ್  ಮಾಡಿದ್ದ TODDY (unofficial Kerala drink) ಎಲ್ಲವೂ ಸೇರಿ ಮತ್ತೊಂದು ಸಂಜೆ ಸರಿದು ಹೋಗೋಕೆ ರೆಡಿಯಾಗಿತ್ತು. ಮತ್ತೆ ಮುಳುಗೋ ಕೆಂಪು ಕೆಂಪು ಸೂರ್ಯನನ್ನ ನೋಡೋಕೆ Alleppey Beach ಸಿದ್ಧಗೊಂಡಂತಿತ್ತು. 

                                                      ದಿನಮಣಿ ಮುಗಿಯೋ ಹೊತ್ತಿಗೆ 
                                                   Alleppey Beach, PC: Archana
                                                    


ತೀರಾ ದೊಡ್ಡವೆನಿಸೋ ಸಮುದ್ರ, ಗಜಿಬಿಜಿ ಅನ್ನೋವಷ್ಟು ಜನಗಳ ಮಧ್ಯವೂ ಚಂದ ಅನ್ನಿಸೋ ತೀರವದು. ಸಂಜೆ ಸರಿದು ಕತ್ತಲಾಗಿ  ನಾವಲ್ಲಿಂದ ಹೊರಟಾಗ ಕಳೆದು ಹೋಗಿದ್ದ ಇನ್ನಿಬ್ಬರು ಗೆಳತಿಯರು. ಆ ಜನಗಳ ಮಧ್ಯ ಹುಡುಕ ಹೊರಟು ನಾವೂ ಕಳೆದು ಹೋಗಿ .... ಕೊನೆಗೂ ಅಲ್ಲೆಲ್ಲೋ ಜೊತೆಯಾಗಿ ಮತ್ತೆ ಆ ಹೊಸ ಊರ ಸುತ್ತೋಕೆ ಹೊರಟಾಗಿತ್ತು. 
Alleppey ಹಿನ್ನೀರು ಮತ್ತೊಂದು ದಿನ ನಮ್ಮನ್ನಲ್ಲಿಯೇ ಇರಿಸಿಕೊಂಡಿತ್ತು. ಆದರೆ ಮತ್ತೆ ಬೋಟ್ ಗೆ ಅಷ್ಟು ದುಡ್ಡು ಕೊಡೋ ಇಷ್ಟವಿಲ್ಲದೆ ಆಯ್ದುಕೊಂಡಿದ್ದು ferry drive. ಆ ಕಡಲ ಸಾರಿಗೆಗೆ, ಮಧ್ಯ ಮಧ್ಯ ಸಿಗ್ತಿದ್ದ ferry station ಗಳ  ನೋಡ್ತಾ ಕೂತಿದ್ದವರಿಗೆ ಅಲ್ಲಿಯವರ ಓಡಾಟದ ಬದುಕು, ಆ ಕಷ್ಟಗಳು ಅರ್ಥವಾದಂತಿತ್ತು. ಹಿನ್ನೀರ ದಡದಲ್ಲೆಲ್ಲಾ ಪ್ರತಿ ಮನೆಯ ಎದುರೂ  ಒಂದೊಂದು ದೋಣಿ, ಓಡಾಟಕ್ಕೆಲ್ಲಾ ಅದೇ ಅವರ ಸಾರಿಗೆ. ಆಗಾಗ ಬರೋ ಒಂದೊಂದು ferry. 
ಎರಡನೇ ದಿನದ ಅಲೆಪೀ ಬೇರೆಯದೇ ರೀತಿ ಕಾಣಿಸಿತ್ತು ನಮಗಲ್ಲಿ. ಅದೊಂದು ಕೌತುಕವ ಹೊತ್ತುಕೊಂಡು ಮತ್ತೆ ಮರಳಿಯಾಗಿತ್ತು ರೂಮಿಗೆ. 

     
Sail away from the safe harbor. Explore, Dream, Discover.

ಸಹಿಸೋಕಾಗದ ಸೆಕೆ, ಮತ್ತೆ ಮತ್ತೆ ಬೇಕನ್ನಿಸೋ ಎಳನೀರು, ಬಾಯಲ್ಲಿ ನೀರೂರಿಸೋ ಪರೋಟ, ನಿರಾಸೆ ಮೂಡಿಸೋ ಬನಾನ ಫ್ರೈ, ಅಪ್ಪಮ್ ಘಮ, TODDYಯ ಹ್ಯಾಂಗ್ ಓವರ್, ತೀರಾ ಚಂದವೆನ್ನಿಸೋ ಸಮುದ್ರಗಳು, ಆ ಊರಲ್ಲೇ ಮತ್ತೆ ಮತ್ತೆ ಇರಬೇಕನ್ನೋ  ತರಹದ ಮೋಡಿ ಮಾಡೋ ಹಿನ್ನೀರು, ferry ಡ್ರೈವ್, marine ಡ್ರೈವ್, ಮುಗಿಯದ ಮಾತುಗಳು, ಅದೊಂದಿಷ್ಟು ತಲೆಹರಟೆಗಳು ಎಲ್ಲದರ ಜೊತೆ ಮತ್ತೆ ಮರಳಿಯಾಯ್ತು ನಮ್ಮ ಲೋಕಕ್ಕೆ. 
Much love, 
Bye bye Kerala.

ಇನ್ನೊಂದಿಷ್ಟು ಕಪಿ ತನಗಳು, ಮತ್ತೊಂದಿಷ್ಟು adventure ಗಳು ನಮಗಾಗಿ ಕಾಯ್ತಿವೆ. 
ಮತ್ತೊಂದು ಊರು, ಮತ್ತಿಷ್ಟು ಅಲೆದಾಟಗಳ ಹುಡುಕಾಟದಲ್ಲಿ... 


Saturday, February 6, 2016

ಬದುಕ ಪ್ರೀತಿಗೆ…ಅದರ ರೀತಿಗೆಅದೊಂದು ಸಂಜೆ ಮನೆಯೆದುರು ಶಟಲ್ ಆಡ್ತಾ ಇದ್ದೆ.ಅಲ್ಲೊಂದು ಜೋಡಿ ಕಂಗಳು ಒಂದು ವಾರದಿಂದ ನಾವು ಆಟ ಆಡೋದನ್ನ ನೋಡ್ತಾ ನಗುತಿತ್ತು.ನಾನೋ ಎಲ್ಲರನ್ನೂ ಮಾತಾಡಿಸಬೇಕನ್ನೋ, ಅಕ್ಕ ಪಕ್ಕದವರನ್ನೆಲ್ಲಾ ಫ್ರೆಂಡ್ಸ್ ಮಾಡ್ಕೋಬೇಕು ಅಂತನ್ನೋ category ಅವ್ಳು. ಆ ಮುಗ್ಧ ಕಂಗಳ ಜೊತೆ ಮಾತಿಗೆ ಕೂರಲೇ ಬೇಕಂತ ನಿರ್ಧರಿಸಿ ಸುಮ್ಮನೆ ಎದುರು ಮನೆಯ ಗೇಟ್ ದಾಟಿ ಒಳಗಡೆ ಹೋದೆ ಬರ್ತೀಯಾ ಪುಟ್ಟಾ ಆಟ ಆಡೋಣ ಅಂತ ಕೇಳಿಕೊಂಡು .ಅವ ಸುಮ್ಮನೆ ನಕ್ಕು ನೀವು ಆಟ ಆಡೋದನ್ನ ನೋಡೋದೆ ಖುಷಿ ನಂಗೆ ಇಲ್ಲೇ ಕೂತು ನೋಡ್ತೀನಿ ಅಂತಂದ.ಯಾಕೋ ಆಶ್ಚರ್ಯ ಅನಿಸಿಬಿಟ್ತು ಆ ಪುಟ್ಟ ಪೋರನ ಮಾತು.ಆದರೂ ಅವನ ಜೊತೆ ಆಟ ಆಡಲೇಬೇಕಂತ ನಿರ್ಧರಿಸಿ ಬಂದಿದ್ದವಳಿಗೆ ಅಷ್ಟು ಬೇಗ ಮಾತಲ್ಲಿ ಸೋಲೋ ಮನಸಿರಲಿಲ್ಲ. ನೀ ಈಗ ಆಟ ಆಡೋಕೆ ಬರ್ತೀಯ ಅಷ್ಟೇ ಅಂತಂದು ಎದ್ದು ನಿಲ್ಲಿಸೋಕೆ ಹೋದೆ. ಆಗಲೇ ತಿಳಿದಿದ್ದು ಅವ ಎದ್ದುನಿಲ್ಲೋಕಾಗಲ್ಲ ,ಅವನ ಕಾಲುಗಳಿಗೆ ಆ ಶಕ್ತಿಯಿಲ್ಲ ಅನ್ನೋ ವಾಸ್ತವ!.

ಅರ್ಧ ಗಂಟೆಯ ಮುಂಚಿನ ಪರಿಚಯ.ಕಣ್ಣಲ್ಲಿ ನಿಲ್ಲಿಸೋಕಾಗದಷ್ಟು ನೀರು! ಹಹ್! ಮುಗ್ಧತೆಯನ್ನ ಮಾತ್ರ ತುಂಬಿಕೊಂಡಿರೋ ಆ ಪುಟ್ಟ ಕಂಗಳಿಗೆ,ಆ ಚಿಕ್ಕ ಚಿಕ್ಕ ಕಾಲ್ಗಳಿಗೆ ಅದ್ಯಾಕೆ ಆ ತರಹದ್ದೊಂದು ದುಃಖ ಖಾಯಂ ಆಯ್ತು ಅನ್ನೋ ಪ್ರಶ್ನೆಯ ಪ್ರತಿಬಿಂಬ ಅವನಮ್ಮನ ಕಣ್ಣಲ್ಲಿ.

ಜಗದೆಲ್ಲಾ ಕೌತುಕಗಳ ತುಂಬಿಕೊಂಡಿರೋ ಕಂಗಳವು. ಏನೋ ಒಂದು ಆಕರ್ಷಣೆ ಇದೆ ಆ ಕಂಗಳಲ್ಲಿ. ನಡೆಯೋಕೇ ಆಗದಿದ್ರೂ ಎದ್ದು ನಿಲ್ತಾನೆ ಅವ.ಅಮ್ಮ ಹೋಗಿ ಕೈ ಹಿಡಿದುಕೊಂಡ್ರೆ ಎಷ್ಟು ದಿನ ಅಂತ ಕೈ ಹಿಡಿದುಕೊಂಡಿರ್ತೀಯ ಅಮ್ಮಾ ಕೊನೆಪಕ್ಷ ನಾ ಎದ್ದು ನಿಲ್ಲೋಕಾದ್ರೂ ಅವಕಾಶ ಕೊಡು ಅಂತಾನೆ! ಸ್ನಾನ ಮಾಡಿಸಿಕೊಡ್ತೀನಿ ಕಣೋ ಅಂತಂದ್ರೆ ನಾ ದೊಡ್ದವನಾಗಿದೀನಿ ನನ್ನ ಕೆಲಸಗಳ ನಂಗೆ ಮಾಡಿಕೊಳ್ಳೋಕೆ ಬಿಡಿ ಅಂತಾನೆ. ಅಪ್ಪ ಎತ್ತಿಕೊಳ್ಳೋಕೆ ಹೋದ್ರೆ ನಂಗೊಂದು ಸ್ಟಿಕ್ ಕೊಡಿಸಿ ಯಾವಾಗಲೂ ಎತ್ತಿಕೊಳ್ಳೋಕೆ ನಿಮಗೂ ಕಷ್ಟ ಆಗುತ್ತೆ ಅಂತಾನೆ. ಅರೆರೆ ಅವ ಪುಟ್ಟ ಹುಡುಗನೋ ದೊಡ್ಡ ಗೆಳೆಯನೋ ಅನ್ನೋ ಪ್ರಶ್ನೆ ನಂಗೆ .

ತನ್ನಿಂದ ಯಾರಿಗೂ ನೋವಾಗದಿರಲಿ ಬದಲು ಅಪ್ಪ ಅಮ್ಮನ ಬದುಕಿಗೆ ತಾನೇ ಊರುಗೋಲಾಗ ನಿಲ್ಲುವಂತಾಗಲಿ ಅಂತನ್ನೋ ಆ ಒಂಭತ್ತರ ಪೋರನಲ್ಲಿ ನಂಗೊಬ್ಬ ಪ್ರಬುದ್ಧ ಗೆಳೆಯ ಕಾಣ್ತಾನೆ. ಕಾಲಿಲ್ಲದ್ದು,ನಡೆಯೋಕಾಗದೇ ಇದ್ದಿದ್ದು, ಶಾಲೆಯಲ್ಲಿ ಯಾರೂ ಮಾತಾಡಿಸದೇ ಇದ್ದಿದ್ದು, ಎಲ್ಲರ ತರಹ ಆಟ ಆಡೋಕಾಗದೆ ಇದ್ದಿದ್ದು,ಅಮ್ಮನ ಜೊತೆಗೆ ಜಾತ್ರೆಗೆ ಹೋಗೋಕಾಗದೇ ಹೋದುದ್ದು, ಅಪ್ಪನ ಹೊಸ ಬೈಕ್ ಅಲ್ಲಿ ಕೂರೋಕಾಗದೇ ಹೋಗಿದ್ದು, ಪಕ್ಕದಲ್ಲೇ ಇರೋ ವಸ್ತುವ ತೆಗೆದುಕೊಳ್ಳೋಕೂ ಅಮ್ಮನ ಸಹಾಯ ಬೇಕಿರೋದು ಯಾವುದೂ ಅವನ ಬೇಸರಗಳೇ ಅಲ್ಲ. ಇದ್ಯಾವ ನೋವೂ ಅವನನ್ನ ಕಾಡ್ತಿಲ್ಲ. ಬದಲು ಈ ’ಇಲ್ಲ’ ಅನ್ನೋ ಕೊರಗು ಅವನಲ್ಲೊಂದು ಅದಮ್ಯ ಆತ್ಮವಿಶ್ವಾಸವ ಹುಟ್ಟಿ ಹಾಕಿದೆ. ಅವನ ಕಂಗಳಲ್ಲಿ ನಾ ಆ ಬದುಕ ಪ್ರೀತಿಯ ಇಂಚಿಂಚನ್ನೂ ಗ್ರಹಿಸಿದ್ದೀನಿ. ಅವನ ಈ ಬದುಕ ರೀತಿಯ ಬಗೆಗೆ ನಂಗೆ ತುಂಬಾ ಖುಷಿ ಇದೆ.ಜೊತೆಗೆ ಅವ ನನ್ನ ಪುಟಾಣಿ ಗೆಳೆಯ ಅನ್ನೋ ಹೆಮ್ಮೆಯಿದೆ.

ಅವ ಪ್ರೀತಿಯಿಂದ ’ಅಕ್ಕಾ’ ಅಂದ್ರೆ ನಂಗೆ ದೂರದ ಊರಲ್ಲಿರೋ ನನ್ನ ತಮ್ಮ ನೆನಪಾಗ್ತಾನೆ. ಅವ ಸುಳ್ಳು ಸುಳ್ಳೇ ಹಠ ಮಾಡೋವಾಗ ನಂಗೆ ನೋವೇ ಇಲ್ಲ ಅನ್ನೋ ಹಾಗೆ ನಕ್ಕುಬಿಡ್ತೀನಿ ನಾ. ಅದು ನನ್ನಕ್ಕ ಅಂದ್ರೆ ಅಂತ ಮುದ್ದು ಮಾಡಿಕೊಳ್ತಾನೆ ಆಗೆಲ್ಲಾ. ಬಂಧ ಬೆಸೆದಿರೋದು ಬರೀ ಅವನ ಜೊತೆ ಮಾತ್ರ ಅಲ್ಲ. ಅವನಮ್ಮ ನಂಗೊಬ್ಬ ಹೆಣ್ಣು ಮಗಳಿರದ ಕೊರತೆಯ ನೀ
ನೀಗಿಸಿಬಿಟ್ಟೆ ಅಂತ ಎದೆಗವಚಿಕೊಳ್ತಾಳೆ. ಅವನ ಟೀಚರ್ಸ್ ಗಳು ಚಂದ ಚಂದದ ಪದ್ಯ ಬರೀತೀಯ ಅವ ಅಷ್ಟೇ ಚಂದದಿ ಕಂಪೋಸ್ ಮಾಡ್ತಾನೆ ಅಂತ ಕೆನ್ನೆ ಹಿಂಡಿ ಹೋಗ್ತಾರೆ. ಒಮ್ಮೆ ನಾನವನ ಅಕ್ಕ ಆದ್ರೆ ಒಮ್ಮೊಮ್ಮೆ ಅವ ನನ್ನ ಅಣ್ಣ ಆಗ್ತಾನೆ. ನಾ ಸುಮ್ಮನೆ ವಯೋಲಿನ್ ಹೇಳಿಕೊಡ್ತೀನಿ ಬಾರೋ ಅಂತಂದ್ರೆ ಗುರು ದಕ್ಷಿಣೆ ಅಂತ ನಾನೂ ನಿಂಗೆ ತಬಲ ಕಲಿಸಿಕೊಡ್ತೀನಿ ಅಂತಾನೆ. ಅಂದಹಾಗೆ ಈಗವ ನನ್ನ ತಬಲ ಗುರು ಕೂಡಾ!

ದಾರಿಯ ಮಧ್ಯದ ಅನಿರೀಕ್ಷಿತ ಸೋಲಿಗೆ ಕಂಗಾಲಾಗಿ ಕೂತಿದ್ದಾಗ ಸಿಕ್ಕ ಪುಟ್ಟ ಜೀವ ಅದು. ಬರೀ ಎದ್ದು ನಿಲ್ಲೋದನ್ನಷ್ಟೇ ಅಲ್ಲ ನಿಂತು ತಲೆಯೆತ್ತಿ ನಡೆಯೋದನ್ನೂ ಹೇಳಿಕೊಟ್ಟುಬಿಟ್ಟಿದ್ದಾನೆ. ಇನ್ನೇನಿದ್ದರೂ ನಿಲ್ಲದ ನಡಿಗೆ ಮಾತ್ರ. ಆ ನಡಿಗೆಯ ಸಂಪೂರ್ಣ ಖುಷಿ ಮಾತ್ರ ನನ್ನದು. ಬದುಕ ಜೊತೆಗಿನ ಯಾವುದೋ ಚಿಕ್ಕ ಚಿಕ್ಕ ಮನಸ್ತಾಪಗಳಿಗೆ ಬದುಕೇ ಕೊನೆಯಾಯ್ತು ಅಂತ ಕೊರಗೋ ನಮ್ಮಗಳಿಗೆ ಅವ ಅಲ್ಲಿ ಸುಮ್ಮನೆ ಕೂತು ಅದೆಷ್ಟು ಆತ್ಮಸ್ಥೈರ್ಯವ ರವಾನಿಸಿಬಿಡ್ತಾನೆ. ಅವನೊಳಗಿರೋ ಆ ಚೈತನ್ಯಕ್ಕೆ ನನ್ನದೊಂದು ಪ್ರೀತಿಯ ನಮನ.

ಆಗೆಲ್ಲಾ ಬೋರು ಅನ್ನುತ್ತಿದ್ದ ಸಂಜೆಗಳು ಈಗವನ ಜೊತೆ ಬಣ್ಣ ಬಣ್ಣವಾಗಿ ಕಾಣುತ್ತೆ. ಆಗಲೇ ಗಂಟೆ ಎಂಟಾಯ್ತು ಕಣೋ ಹೊರಡ್ತೀನಿ ಅಂತ ನಾ ಹೊರಟರೆ ಮತ್ತೆ ನಾಳೆ ಸಂಜೆ ಬೇಗ ಬಾ ಅಂತ ಕಳಿಸಿಕೊಡ್ತಾನೆ ಅವ.

ಒಂಟೊಂಟಿ ಅನ್ನೊಸೋ ಭಾವಗಳ್ಯಾವುವೂ ಕಾಡ್ತಿಲ್ಲ ಬದಲು ಸಂಜೆಗಳನ್ನ ತುಂಬಾ ಪ್ರೀತಿಸೋಕೆ ಶುರು ಮಾಡಿದ್ದೀನಿ.

ಒಂದಿಷ್ಟು ’ಇಲ್ಲ’ಗಳ ನಡುವೆಯೂ ಬದುಕ ಎಲ್ಲಾ ಖುಷಿಗಳು ನನ್ನೀ ಮುದ್ದು ಗೆಳೆಯನಿಗೆ ದಕ್ಕಲಿ. ಆ ಖುಷಿಗಳಲ್ಲಿ ಅವನ ಬದುಕ ಗೆಲುವಿರಲಿ. ಆ ಗೆಲುವ ಜೊತೆಗಿನ ಅವನ ಆತ್ಮವಿಶ್ವಾಸ ಭವಿಷ್ಯದಲ್ಲವನ ಕಾಯಲಿ. ಸುಮ್ಮನೆ ಪರಿಚಯವಾದ ಈಗ ಬರಿಯ ಪರಿಚಯವಲ್ಲದ ಈ ಆತ್ಮೀಕ ಪ್ರೀತಿಗೆ, ಇರಲಿ ನಿಮ್ಮದೂ ಒಂದು ಶುಭ ಹಾರೈಕೆ.

ಅವನಲ್ಲಿರೋ ಬದುಕ ಪ್ರೀತಿಗೆ,ಅದರ ರೀತಿಗೆ..ಕಣ್ಣ ಹನಿಗಳೇ ಕಾಣಿಕೆ.

(ಪಂಜು ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿತ್ತು . ಲಿಂಕ್ ಗಾಗಿ http://www.panjumagazine.com/?p=9592)

Monday, October 19, 2015

ಮನಸು ಮುನಿಸುಗಳ ನಡುವೆ...

                   ಲೆಕ್ಕ ತಪ್ಪೋವಷ್ಟು ಖುಷಿಗಳು, ದಕ್ಕಿರೋ ಒಂದಿಷ್ಟು ಚಂದದ ಗೆಲುವುಗಳು, ಬಾಯಿ ನೋಯೋವಷ್ಟು ಮಾತುಗಳು ಎಲ್ಲದರ ಆಚೆ ನಂಗವನ ನೆನಪು ಈ ಇಳಿ ಸಂಜೆಗೆ ಅಂತೆಲ್ಲಾ ಸ್ಪಟಿಕ ಹೇಳ್ತಿದ್ರೆ ಇಷ್ಟಾಗ್ಯೂ ಮಂಡಿಯೂರದ ನಿನ್ನ ಮನಸ ಬಗೆಗೆ ನಂಗಿನಿತು ಮುನಿಸು ಅಂತಂದು ಅವಳ ಸಂಜೆಯನ್ನ ಅವಳಿಗೇ ಬಿಟ್ಟು ಎದ್ದು ಬಂದಾದ ಮೇಲ್ಯಾಕೋ ನಂಗವಳು ಪ್ರೀತಿಸೋ ಬಗೆ ಕಾಡ್ತಿದೆ. 

                   ಬದುಕ ಭಾಗವಾಗಿ ಬಿಟ್ಟಿರೋ ಹುಡುಗ ಅದ್ಯಾವುದೋ ಮುನಿಸಿಗೆ ಮತ್ತೆ ನಿನ್ನ ಬದುಕಿಗೆ ಬರಲಾರೆ ಅಂತಂದಾದ ಮೇಲೂ ಅಷ್ಟೇ ಇಷ್ಟಪಡೋ ಅವಳ ಬಗೆಗೆ ಕುತೂಹಲ ಮೂಡೋಕೂ ಮುಂಚೆಯೇ ಅವಳ ಹಠಗಳನ್ನೆಲ್ಲಾ ಪ್ರೀತಿಯಿಂದಲೇ ಸಹಿಸಿಕೊಳ್ತಿದ್ದ ಆ ಕಡಲೂರ ಹುಡುಗನ  ಬಗೆಗಿಷ್ಟು  ಆತ್ಮೀಯತೆ  ಮೂಡಿಬಿಟ್ಟಿರುತ್ತೆ ನನ್ನಲ್ಲಿ.  ಜೊತೆಗೆ ಹೀಗೆಲ್ಲಾ ಪ್ರೀತಿಸೋಕೆ ಸಾಧ್ಯವಾ ಅನ್ನೋ ಪ್ರಶ್ನೆ ಕೂಡಾ. ಸಣ್ಣ ಸಣ್ಣದಕ್ಕೂ ಬೆಟ್ಟದಷ್ಟು ಖುಷಿ ಪಡೋ ಹುಡುಗಿ, ಆ ಭಾವಗಳನ್ನೆಲ್ಲಾ ಮುಟ್ಟಿಯೂ ನೋಡದೇ ಹೊರಟುಬಿಡೋ ಹುಡುಗ ಆದರೂ ಚಂದ ಅನ್ನಿಸೋವಷ್ಟು ಖುಷಿಯಿದೆ ನಂಗಾ ಪ್ರೀತಿಯ ಬಗೆಗೆ. 

                    ಅದೊಂದಿಷ್ಟು ಮುನಿಸುಗಳ ಮಧ್ಯ ಪ್ರೀತಿಯ ಮನಸೆಲ್ಲೋ ಮುದುಡಿ ಕೂತಿದೆ ಅಂತನಿಸಿ ಕಾರಣವ ಹುಡುಕ ಹೊರಟವಳಿಗೆ ಅವರಿಬ್ಬರೂ ಗೊಂದಲವಾಗೇ ಉಳಿದುಬಿಟ್ಟಿದ್ದಾರೆ. ಅವಳದಿಷ್ಟು ಅನಿವಾರ್ಯತೆಗಳ ಜೊತೆ ಕಳೆದು ಹೋಗಿರೋ ಹುಡುಗಿಗೆ  ಸುರಿಯೋ ಮಳೆ, ಬೀಳೋ ಮಂಜು, ಅವನಿಷ್ಟದ ಆ ಹಾದಿ, ಆ  ಜೋಡಿ ನಕ್ಷತ್ರ  ಊಹುಂ! ಯಾವುದೂ ಅಷ್ಟಾಗಿ ಕಾಡ್ತಿಲ್ಲ ಅನ್ನೋದೇ ಕಳವಳ ನಂಗೆ. ಬದುಕು ಹೇಗಿದ್ರೂ ಇಡಿ ಇಡಿಯಾಗಿ ಪ್ರೀತಿಸೋ ಅವಳನ್ನ ಇವೆಲ್ಲವೂ ಮತ್ತೆ ಮತ್ತೆ ಕಾಡಲಿ ಅನ್ನೋ ಕಾತರತೆ. ಇನ್ನು ಅವನೋ ಮುಳುಗಿ ಹೋಗಿದ್ದಾನೆ ಆ ದೂರದ ಜನ ಜಂಗುಳಿಯ ಅದ್ಯಾವುದೋ ಬೀದಿಯಲ್ಲಿ. ಯಾರ ದೃಷ್ಟಿ ತಗುಲೇತೋ ಅಂತ ಕೇಳಿಬಿಡಲಾ ಅಂದು ಕೊಳ್ಳುವ ಹೊತ್ತಿಗೇ ಅವ ಅಲ್ಲಿ ಮಗ್ಗುಲು ಬದಲಿಸಿರೋ ಸೂಚನೆ. ಪ್ರಶ್ನೆಗಳನ್ನೆಲ್ಲಾ ಹಾಗೆಯೇ ಇಟ್ಟುಕೊಂಡು ಅದೊಂದು ಅರ್ಥವಾಗದ ನಿಟ್ಟುಸಿರ ಜೊತೆ ಸುಮ್ಮನಾಗಿಬಿಡ್ತೀನಿ. 
ಮತ್ತೆ ಸಂಜೆಗಳು ಬೇಸರ ಅಂತನ್ನಿಸೋಕೆ ಶುರುವಾಗುತ್ತೆ. 
                       ಸೂರ್ಯ ಮುಳುಗೋ ಘಳಿಗೆಯಲ್ಲಿ ನೆನಪುಗಳ ಜೊತೆ ಅವಳೊಬ್ಬಳನ್ನೇ  ಬಿಟ್ಟು ಬಂದವಳಿಗೆ ಅದ್ಯಾಕೋ  ಮಾತಾಡಿಸೋ ಮನಸ್ಸಾಗಿ 'ಅವ ಬದುಕಿಗೆ ಬಂದ್ರೆ ಬದುಕು ಮತ್ತಷ್ಟು ಚಂದವಿರುತ್ತೇನೋ ಅಲ್ವೇನೆ?' ಅಂತಂದು ಟೈಪಿಸಿದ್ದವಳಿಗೆ ರಿಸೀವ್ ಆದ ಅವಳ ಮೆಸೇಜ್ ನೋಡಿ ಖುಷಿ ಪಡಲಾ ಬೇಸರಿಸಲಾ ಅನ್ನೋ ಗೊಂದಲ ಕಾಡ್ತಿದೆ. 
"ಕನಸು ಗಗನಯಾಮಿ- ಅವ ಬೇಲಿಯಾಚೆಗಿನ ನಗು. ಬೇಲಿ ಮರೆಯಿಂದ ಇಣುಕೋ ನಗೆಯ ಸೋಕಿದ ಗಾಳಿಗೆ ತೋಳ್ದೆರೆದ ಹಸುಳೆ ನಾ". 
ಟೈಪಿಸಿರೋ "ಅವ  ಬದುಕಿಗೆ ...... " ಮೆಸೇಜ್ ಡ್ರಾಪ್ಟ್ ಗೆ ಸೇರಿ ಅದೆಷ್ಟೋ ಸಮಯವಾಯ್ತಲ್ಲ ಅನ್ನೋ ಭಾವ ಕತ್ತಲಾವರಿಸಿ ಮೂಡಿರೋ ಜೋಡಿ ನಕ್ಷತ್ರಗಳು ನನ್ನ ಅಣುಕಿಸುತ್ತಿವೆಯೇನೋ ಅಂತನಿಸೋವಾಗ ಅರಿವಾಯ್ತು. 
ಮತ್ತೆ ಟೈಪಿಸ್ತಿದೀನಿ ನಾ ... 
ಒಲವು ಕವಲೊಡೆಯದಿರಲಿ, ನಿಲುವು ಮಾಸದಿರಲಿ, ಅವ ಅನ್ನೋ ನಗು ಕೈ ತಾಕಲಿ. 
ನಂಗೊತ್ತು ಅರ್ಥವೇ ಆಗದ ತರಹ ನಕ್ಕು ಸುಮ್ಮನಾಗ್ತಾಳೆ ಅವಳು. 
ಮನಸು ಮುನಿಸುಗಳ ನಡುವೆ ಪ್ರೀತಿ ನಲುಗದಿರಲೇ ಮುದ್ದಮ್ಮಾ. 

Saturday, July 11, 2015

ಮತ್ತೆ ಕಾಡಿದೆ ಕಂದನ ಕನವರಿಕೆ ...ಆಗಲೇ ಎರಡು ವರುಷಗಳಾದವು !! ಕಾಲೇಜಿನ ಯಾವುದೋ ಪ್ರೋಗ್ರಾಮ್ ಗೆ ಸೀರೆಯುಟ್ಟು ಹೋಗಬೇಕಿದ್ದ ಅನಿವಾರ್ಯ ಒಂದುಕಡೆ ಆದ್ರೆ ಅದ ಉಡೋಕೂ ಬರದ ನಂಗೆ ತೀರಾ materialistic ಅನ್ನಿಸೋ ಈ ಜನಗಳ ಕೇಳೋ ಮನಸ್ಸಿರಲಿಲ್ಲ. ಗೊತ್ತಾಗದೆ ಸುಮ್ಮನೆ ಕೂತಿದ್ದವಳಿಗೆ ಅದೇ ಬೀದಿಯ ಕೊನೆಯ ಮನೆಯಲ್ಲಿರೋ ಅವಳ ನೆನಪಾಗಿತ್ತು.

ಖುಷಿಯಿಂದಲೇ ಸೀರೆ ಉಡಿಸಿ "ದೃಷ್ಟಿಯಾಗುತ್ತಲ್ಲೇ ನಂದೇನೆ,ಅಲ್ಯಾವ ಹುಡುಗ ಪ್ರೀತಿಯಲ್ಲಿ ಬೀಳ್ತಾನೋ ಗೊತ್ತಿಲ್ಲ ನೋಡು " ಅಂತ ಕಣ್ಣು ಮಿಟುಕಿಸಿ ಹಣೆಗೆ ಮುತ್ತಿಟ್ಟಿದ್ದ ಅವಳು ಆಗಲೇ ನನ್ನಲ್ಲೇನೋ ಭಾವವ ಕಟ್ಟಿಕೊಟ್ಟು ಬಿಟ್ಟಿದ್ದಳು.

ಬದುಕ ಅನಿವಾರ್ಯತೆಗಳಿಗೆ ಸಾವಿರ ಮೈಲಿ ಆಚೆಯ ಊರಿಂದ ಈ ಊರಿಗೆ ಬಂದಿರೋ ಗೆಳತಿ ಅವಳು. ಜೊತೆಗೆ ಬದುಕ ಪ್ರೀತಿಗಳನ್ನೆಲ್ಲ ಅವಳಿಗೆ ಮಾತ್ರ ಕೊಡೊ ಅವ. ಇಬ್ಬರದ್ದೂ ಒಂದು ಪುಟ್ಟ ಚಂದದ ಮನೆ.ಕನ್ನಡ ಅರ್ಥವೇ ಆಗದ ಅವಳಿಗೆ ಹಿಂದಿ ಮಾತನಾಡೋಕೆ ಬರದ ನಾ ಹೇಗೆ ಗೆಳತಿಯಾದ್ನೋ ಗೊತ್ತಿಲ್ಲ.ಈಗಂತೂ ಗಂಟೆಗಟ್ಟಲೆ ಮಾತಾಡೋ ಅವಳು ಅಕ್ಕ ಅನಿಸಿಬಿಟ್ಟಿದ್ದಾಳೆ.

ಇಂತಿದ್ದ ಅವಳು ಅದೊಂದು ದಿನ ತುಂಬಾ ಖುಷಿಯಿಂದ ಒಡಲಲ್ಲಿ ಹೊಸದೊಂದು ಜೀವ ಬೆಳಿತಿರೋ ಮಾತು ಹೇಳಿದ್ದಾಗ ಅಕ್ಷರಶಃ ಕುಣಿದಿದ್ದೆ ನಾ.ಆಗಲೇ ಅಮ್ಮನ ಕಳೆ ಮುಖದಲ್ಲಿ ನೋಡು ಅಂದಿದ್ದವಳಿಗೆ ಇನ್ನಾರು ತಿಂಗಳು ಅಂತ ಹೇಳಿದ್ದವಳು ಅವಳು. ಆ ಆರು ತಿಂಗಳಲ್ಲಿ ಅವಳಷ್ಟೇ ಕನಸು ಕಟ್ಟಿದ್ದೆ ನಾನೂ. ಅವಳು ಪಾಪುವಿಗೆ ಸ್ನಾನ ಮಾಡಿಸೋವಾಗ ಪಕ್ಕ ನಿಂತು ನೋಡಬೇಕು, ಆಗಷ್ಟೇ ನಿದ್ದೆಯಿಂದೆದ್ದ ಆ ಪುಟ್ಟ ಕಂದನ ಎತ್ತುಕೊಂಡು ಆಡಿಸಬೇಕು,ಅದರ ಅಳು,ನಗು ಎಲ್ಲವನ್ನೂ ನೋಡಬೇಕು,ಚಂದ ಚಂದದ ಅಂಗಿ ಹಾಕಿ ಖುಷಿಸಬೇಕು,ನಿದ್ದೆಯಲ್ಲಿ ಬೆಚ್ಚಿ ಮರು ಕ್ಷಣಕ್ಕೆ ಅದೇ ನಿದ್ದೆಯಲ್ಲಿ ನಗೋ ಪಾಪುವ ಪಕ್ಕ ಇಡೀ ದಿನ ಕೂರಬೇಕು, ಅವಳು ಅವನು ಅನ್ನೋ ಅನನುಭವಿ ಅಪ್ಪ ಅಮ್ಮ ಆ ಕಂದಂಗೆ ಎಣ್ಣೆ ಹಚ್ಚುವಾಗ ಅವರಿಬ್ಬರಿಗೂ ಆಡಿಕೊಂಡು ನಗಬೇಕು ಹೀಗೆ ಏನೇನೋ ಭಾವಗಳು ನನ್ನೊಳಗೂ ಹರಿದಾಡಿದ್ವು.

ಅದೆಷ್ಟೋ ದಿನ ಅವಳಿಗೆ ಕಾಡಿದ್ದಿದೆ ಪಾಪು ಎಲ್ಲಿ ಓಡಾಡ್ತಿದೆ ತೋರಿಸು ಅಂತೆಲ್ಲ. ಅವಳೋ ಹೊಟ್ಟೆಯ ಮೇಲೆ ನನ್ನ ಕೈ ಇರಿಸಿ ಇದು ಪಾಪುವಿನ ತಲೆ ನೋಡು ಅಂತೆಲ್ಲ ಹೇಳಿ ನಂಗೂ ಆ ಪುಟ್ಟ ಓಡಾಟದ ಫೀಲ್ ಮೂಡಿಸಿದ್ದಿದೆ. ವಾಹ್ ಅದೆಷ್ಟು ಚಂದವಲ್ವೇನೆ ಈ ಪುಟ್ಟ ಓಡಾಟದ ಅನುಭವ ಅಂದಿದ್ದವಳ ತಬ್ಬಿ 'ಅಮ್ಮ' ಆಗೋ ಖುಷಿ ಅದೇ ಕಣೆ ಪುಟ್ಟಿ ಅಂದಿದ್ದವಳು ಅವಳು.

ದಿನಗಳ ಲೆಕ್ಕ ಹಾಕಿ ಕೂತಿದ್ದವಳಿಗೆ ಇನ್ನೊಂದು ತಿಂಗಳಲ್ಲಿ ಹೊಸ ಅತಿಥಿಯ ಆಗಮ ಆಗುತ್ತಲ್ಲೇ ಅಂದಿದ್ದೆ ನಾ. ಅಮ್ಮ ನೆನಪಾಗ್ತಿದಾರೆ ಅಂತ ಅತ್ತು ಮರು ಕ್ಷಣಕ್ಕೆ ನಂಗೊಬ್ಬ princess ಬೇಕು ಕಣೆ ನಾನಂತೂ ನನ್ನಮ್ಮನ ತರಹ ಮನೆಯಿಂದ ಅವಳನ್ನ ದೂರ ಮಾಡಲಾರೆ ಅಂತೆಲ್ಲ ಹೇಳಿ ಮತ್ತೆ ಕನಸಿಗೆ ಜಾರಿದ್ದಳು.ದಿನ ಕಳೆದಂತೆಲ್ಲ ಅವಳ ಗೊಂದಲ,ಗಾಬರಿಗಳೆಲ್ಲಾ ಅರ್ಥ ಆಗ್ತಿದ್ರೂ ಏನೂ ಹೇಳೋಕೆ ತೋಚದ ಸ್ಥಿತಿ ನಂದು.

ಅದೊಂದು ಸಂಜೆ ಗಾಬರಿಯಿಂದ ಫೋನಾಯಿಸಿದ್ದ ಅವನ ಮಾತು ಮುಗಿಯೋಕೂ ಮುಂಚೆಯೇ ಕಣ್ಣ ಹನಿ ಕೆನ್ನೆಯಿಂದ ಜಾರಿತ್ತು.ಬದುಕ ಬೇಸರಗಳನ್ನೆಲ್ಲಾ ತನ್ನೊಳಗೆ ಇರಿಸಿಕೊಂಡವಳಿಗೆ "ಬದುಕೇ ಯಾಕಿಷ್ಟು ಬೇಸರಗಳ ಬಿಟ್ಟು ಹೋದೆ?" ಅಂತ ಮತ್ತೆ ಮತ್ತೆ ಕೇಳಿಕೊಳ್ಳೋ ತರಹ ಮಾಡಿತ್ತು. ಎಂಟು ತಿಂಗಳಲ್ಲಿ ಎಣಿಸೋಕಾಗದಷ್ಟು ಕನಸ ನೇಯ್ದಿದ್ದವಳಿಗೆ ಇನ್ಯಾವತ್ತೂ ಸದ್ದು ಮಾಡದ ಅವಳ ಕಂದಮ್ಮ ಶಾಶ್ವತ ಕನಸಾಗಿಬಿಟ್ಟಿದ್ದಳು.ನನ್ನೊಳಗೂ ಒಂದಿಷ್ಟು ಬೇಸರ,ಅವನಲ್ಲೂ ಒಂದಿಷ್ಟು ಕನವರಿಕೆ...

ಬದುಕ ಅನಿವಾರ್ಯತೆಗಳ ಜೊತೆ ಜೊತೆಗೆ ಎಲ್ಲವನ್ನೂ ಮರೆತು ಮತ್ತೆ ವಾಸ್ತವಕ್ಕೆ ಬಂದಿದ್ದವಳ ಜೊತೆಗಿನ ಬಂಧ ಮತ್ತೂ ಜಾಸ್ತಿಯಾಗಿತ್ತು. ಅವಳಿಗೂ ಮಲೆನಾಡ ಹುಚ್ಚು ಹಿಡಿಸಿದ್ದ ನಾ ಅವನ ,ಅವಳ ಪ್ರಪಂಚದೊಳಗೆ ಯಾವತ್ತೋ ಸೇರಿಹೋಗಿದ್ದೆ.

ಈಗೆಲ್ಲ ಅವಳಂದ್ರೆ ನೆನಪ ಕಂಪು...
ಒಂದಿಷ್ಟು ದಿನದಿಂದ ನನ್ನದೇ ಭಾವಗಳ ಜೊತೆ ಕಳೆದು ಹೋಗಿದ್ದವಳಿಗೆ ಇವತ್ಯಾಕೋ ಅವಳ ನೆನಪಾಗ್ತಿದೆ. ಜೊತೆಗೆ ಇನ್ನೂ ಅಸ್ತಿತ್ವ ಇರದ ಅವಳ ಕಂದಮ್ಮ ಕೂಡಾ. ಮತ್ತೆ ಅವಳು ಸುರಿಸುವ ಸ್ನೇಹ,ಪ್ರೀತಿಯ ಮಳೆಯಲ್ಲಿ ಸುಮ್ಮನೆ ನೆನೆಯಬೇಕನ್ನಿಸ್ತಿದೆ...

Friday, May 29, 2015

ಇಲ್ಲೇ ಇಲ್ಲೇ ಎಲ್ಲೋ ...


   ಇಡೀ ಬೀದಿಯವರನ್ನೆಲ್ಲಾ ಫ್ರೆಂಡ್ ಮಾಡಿಕೊಳ್ಳೊ ನಂಗೆ ಯಾಕಷ್ಟು ಹಚ್ಚಿಕೊಳ್ತೀಯ ಎಲ್ಲರನ್ನೂ ಅಂತೆಲ್ಲಾ ಗೆಳತಿ ಬೈದಿದ್ದಿದೆ.ಅದ್ಯಾಕೋ ಗೊತ್ತಿಲ್ಲ ಸುಮ್ಮನೆ ಕೂತಾಗಲೆಲ್ಲ ಬದುಕು ಯಾಕಿಷ್ಟು ಬೇಸರಗಳ ಬಿಟ್ಟು ಹೋಯ್ತು ನನ್ನೊಳಗೆ ಅಂತ ಯೋಚಿಸೋಕೆ ಶುರುವಿಡ್ತೀನಿ. ಕಣ್ಣಂಚು ಮುಷ್ಕರ ಹೂಡೋವಾಗಲೆಲ್ಲ ಮನ ಸಂಕಟಪಡುತ್ತೆ. ಹಾಗಾಗಿಯೇ ಏನೋ ಮಾತು ,ನಗುವಿನ ಜೊತೆ ಜಾಸ್ತಿಯಾಗಿ ಇದ್ದುಬಿಡ್ತೀನಿ ಈಗೀಗ.

ನಗು ಕಹಿ ಅನಿಸೋವಾಗ ಮಾತ್ರ ನೆನಪುಗಳ ಸಾಂಗತ್ಯ ನಂದು.

     ಅವರೊಬ್ಬರಿದ್ದಾರೆ,ನಂಗೇನೂ ಅಲ್ಲದ ಆದರೂ ಎಲ್ಲವೂ ಆಗಿಬಿಡೋ ಅಂತಹವರು. ಇಂತಹುದೇ ಅದೆಷ್ಟೋ ರಾತ್ರಿಗಳಲ್ಲಿ ಅರೆ ಬರೆ ನಿದ್ದೆ ಮಾಡ್ತಾ ತೂಕಡಿಸುತ್ತಾ ಪುಸ್ತಕದ ಮುಂದೆ ಕೂರುತ್ತಿದ್ದವಳನ್ನ ಅದೆಂತಹುದ್ದೋ ಒಂದು ತರಹದ ಬೆಲ್ ಮಾಡಿ ಎಬ್ಬಿಸಿ ಹೋಗ್ತಿದ್ದವರು.
ಇವತ್ಯಾಕೋ ಅಚಾನಕ್ಕಾಗಿ ನಂಗವರ ನೆನಪಾಗ್ತಿದೆ.

       ಮೊದ ಮೊದಲೆಲ್ಲ ಒಂದಿಷ್ಟು ಭಯವಾಗ್ತಿತ್ತು ಮಧ್ಯ ರಾತ್ರಿ ಅದೇನೋ ಶಬ್ದ ಮಾಡ್ತಾ ಗಸ್ತು ತಿರುಗೋ ಅವರನ್ನ ನೋಡೋವಾಗ.ನನ್ನ ರೂಮಿನ ಲೈಟ್ ಹಾಕಿರುತ್ತಿದ್ದ ಕಾರಣಕ್ಕೋ ಏನೋ ಗೊತ್ತಿಲ್ಲ ಆ ಮನೆಯೆದುರು ಬಂದಾಗ ಮಾತ್ರ ತುಂಬಾ ಸಲ ಬೆಲ್ ಮಾಡಿ ಹೋಗುತ್ತಿದ್ದ ಅವರನ್ನ ಅದ್ಯಾಕೋ ಒಂದು ದಿನ ಕುತೂಹಲ ತಡೆಯೋಕಾಗದೆ ನೋಡಲೇ ಬೇಕಂತ ನಿರ್ಧರಿಸಿ ರಸ್ತೆಗೆ ಮುಖ ಮಾಡಿಕೊಂಡಿದ್ದ ನನ್ನದೇ ರೂಮಿನ ಕರ್ಟನ್ ಸರಿಸಿದ್ದೆ.
ಅಲ್ಲಿಂದ ಶುರುವಾಯ್ತು ಅದೆಂತಹುದ್ದೋ ಒಂದು ಬಂಧ.

       ಮೊದಲೇ ನಾ ಪರೀಕ್ಷೆಗೆ ಓದೋಕೆ ಶುರು ಮಾಡೋದೇ ರಾತ್ರಿ ಆದ ಮೇಲೆ. ಅದರಲ್ಲೂ ಸರಿ ರಾತ್ರಿಗೆ ಅವರು ಬರ್ತಾರೆ ಸುಮ್ಮನೊಂದು ನಗು ಒಂದಿಡೀ ದಿನದ ಖುಷಿಯ ಅಡಗಿಸಿಟ್ಟುಕೊಂಡಿರುತ್ತೆ ಅನ್ನೋ ಕಾರಣಕ್ಕೆ ಮತ್ತೂ ತಡವಾಗಿ ಓದು ಶುರುವಿಟ್ಟುಕೊಂಡಿದ್ದೀನಿ. ದಿನವೂ ಬೀದಿಯಲ್ಲಿ ನಿಂತು ಒಂದು ಬೆಲ್,ಒಂದು ನಗು ಇಷ್ಟೇ ನಮ್ಮಿಬ್ಬರ ಗೆಳೆತನ. ಒಂದು ಟೋಪಿ ,ಒಂದು ಬೆಲ್,ಕೈಯಲ್ಲೊಂದು ಕೋಲು ಒಂದು ದಿನವೂ ಬಿಡದೆ ಚಳಿ ಮಳೆ ಅನ್ನದೆ ಗಸ್ತು ತಿರುಗೋ ಈ ಗೂರ್ಖಾ ಅದ್ಯಾವಾಗ 'ಗೂರ್ಖಾ ತಾತ' ಆದ್ರೊ ಗೊತ್ತಿಲ್ಲ!

      ಒಂದೊಂದು ಬಾರಿ ನಾ ಬೇಗ ಮಲಗಿದಾಗಲೆಲ್ಲ ತುಂಬಾ ಬಾರಿ ಬೆಲ್ ಮಾಡಿ ಆಮೇಲೂ ನಾ ಏಳದೇ ಹೋದರೆ ಮರು ದಿನ ಅದೇ ದಾರಿಯಲ್ಲಿ ಐದತ್ತು ಬಾರಿ ಓಡಾಡಿ ಕೊನೆಗೂ ನಾ ಮುಖ ತೋರಿಸಿದ ಮೇಲೆಯೇ ಹೊರಡೋ ಅವರಂದ್ರೆ ನಂಗಿನಿತು ಆಶ್ಚರ್ಯ. ಒಮ್ಮೊಮ್ಮೆ ಸುಮ್ಮನೆ ಕಿಚಾಯಿಸೋಕಂತಾನೆ ಲೈಟ್ ಆಫ್ ಮಾಡಿ ಅವರ ಮುಖದ ಬದಲಾವಣೆಗಳನ್ನ ಕತ್ತಲಲ್ಲಿ ಕೂತು ನೋಡಿದ್ದಿದೆ. ಆಮೇಲೆ ಪಾಪ ಅಂತನಿಸಿ ಲೈಟ್ ಆನ್ ಮಾಡಿ ಒಮ್ಮೆ ನಕ್ಕು ಅವರನ್ನ ಕಳುಹಿಸಿದ್ದಿದೆ.
ಬೀದಿಯವರಿಗೆಲ್ಲ ಅವರಂದ್ರೆ ಮಕ್ಕಳು ಮನೆ ಇಂದ ಹೊರ ಹಾಕಿದ ತಿರಸ್ಕೃತ,ತಲೆ ಸರಿ ಇಲ್ಲದ ವೃದ್ದ. ನಂಗೋ ಅವರಂದ್ರೆ ಅದೇನೋ ಮಾತಿಗೆ ಸಿಕ್ಕದ ಶಬ್ಧಗಳಿಗೆ ನಿಲುಕದ ಅವ್ಯಕ್ತ ಭಾವ. ನನ್ನ ನೋಡಿದ್ರೆ ಅವರಿಗೆ ಬಹುಶಃ ಮೊಮ್ಮಗಳ ನೆನಪಾಗುತ್ತೇನೋ.ನಂಗಂತೂ ಮಧ್ಯ ರಾತ್ರಿ ಆ ಬೀದಿಯಲ್ಲಿ ನಿಂತು ಸುಮ್ಮನೊಂದು ನಗುವಿಗಾಗಿ ಕಾಯೋ ಅವರನ್ನ ನೋಡೋವಾಗಲೆಲ್ಲ ನನ್ನಜ್ಜನ ದೊರೆಸಾನಿ ನೆನಪಾಗ್ತಾಳೆ.

         ಪ್ರತೀ ಬಾರಿಯ ರಿಸಲ್ಟ್ ಬಂದಾಗಲೂ ನಾ ಹಠ ಮಾಡಿ ಅವರಿಗಿಷ್ಟು ಹಣ್ಣು ಕೊಟ್ಟರೆ ತಲೆ ಸವರಿ ಮರು ದಿನ ನನಗೊಂದು ಪೆಪ್ಪರ್ಮೆಂಟ್ ಕೊಟ್ಟು ಹೋಗ್ತಾರೆ.ಆಗೆಲ್ಲ ಖುಷಿಯ ಹಕ್ಕಿಗೆ ರೆಕ್ಕೆ ಬಂದಂತಾಗುತ್ತೆ. ಮತ್ತೆ ಮುಂದಿನ ರಿಸಲ್ಟ್ ತನಕ ಅವರ ಜೊತೆಗೆ ಮಾತಿಲ್ಲ. ಅದಕ್ಕಾಗಿಯೇ ಏನೋ ಮೊದಲ ಸ್ಥಾನವನ್ನ ಬೇರೆಯವರಿಗೆ ಬಿಟ್ಟುಕೊಡೋ ಮನಸ್ಸಾಗಲ್ಲ.
ಕಳೆದ ಬಾರಿಯೂ ಅಷ್ಟೇ ಹಠ ಮಾಡಿ ಅವರಿಗೊಂದು ಸ್ವೆಟರ್ ಕೊಡಿಸಿ ಹಾಕಿಕೊಳ್ಳಲೇ ಬೇಕು ಅಂದಿದ್ದೆ. ಮರುದಿನ ಅವರನ್ನ ನೋಡಿದಾಗ ಆಗಿದ್ದ ಖುಷಿ ಇದೆಯಲ್ಲ ವಾಹ್! ಯಾವಾಗಲೂ ಗಲಾಟೆ ಮಾಡಿಯಾದ್ರೂ ಸರಿ ಬೇಕೆಂದಿದ್ದನ್ನ ಪಡೆದೇ ತೀರೋ ನಂಗೆ ಕೊಡೋದರಲ್ಲಿಷ್ಟು ಸಂಭ್ರಮವಿದೆ ಅನ್ನೋದು ತಿಳಿದಿದ್ದೆ ಅವತ್ತು.

        ಈಗೊಂದಿಷ್ಟು ದಿನದಿಂದ ಮನೆ ಬದಲಾಗಿದೆ. ಬೀದಿ ಬದಲಾಗಿದೆ.ಮನಸ್ಸುಗಳೂ ಬದಲಾಗಿವೆ.ಮತ್ತೊಂದು ಪರೀಕ್ಷೆಗಳ ಸಂತೆ ಎದುರಾಗಿದೆ. ಸರಿ ರಾತ್ರಿಯಲ್ಲಿ ತೂಕಡಿಸುತ್ತಾ ಕೂರೋ ಈ ದಿನಗಳಲ್ಲಿ ಗೂರ್ಖಾ ತಾತ ನೆನಪಾಗ್ತಿದಾರೆ.ಅವರ ಜೊತೆಗೊಮ್ಮೆ ಮಾತನಾಡಲೇ ಬೇಕನ್ನೋ ಹಪಾಹಪಿ ಜಾಸ್ತಿಯಾಗಿದೆ.

ಇದನ್ನೆಲ್ಲಾ ನಾ 'ಅವ 'ನಿಗೆ ಹೇಳಿದ್ರೆ 'ನಿನ್ನೊಳಗೊಂದು ಅದ್ಭುತ ಭಾವೂಕ ಮನಸ್ಸಿದೆ ಕಣೆ ಸಲುಹಿಬಿಡು  ಅದು ಇದ್ದಂತೆಯೇ' ಅಂದುಬಿಡ್ತಾನೆ.
ಮತ್ತೆ ನನ್ನೊಳಗೆ ಗೊಂದಲಕ್ಕೆ ಶುರುವಿಟ್ಟಿದೆ. ಭಾವೂಕತೆಯ ಲೇಶವೂ ಇಲ್ಲದಂತೆ ಇಲ್ಲೆಲ್ಲಿಂದಲೋ ಇದೇ ಮನಸ್ಸಲ್ಲವಾ ಅವನನ್ನ ದೂರ ಕಳುಹಿಸಿದ್ದು.

Sunday, May 17, 2015

ಕಲೆಯ ಬೀದಿಯಲ್ಲೊಂದು ಹುಡುಗಾಟದ ಹುಡುಕಾಟ...ಹಸಿರ ನಾಡಲ್ಲಿ, ಕಾಫೀ ಘಮದಲ್ಲಿ, ಸುರಿವ ತುಂತುರು ಮಳೆಯಲ್ಲಿ, ಬೀಳೋ ಮಂಜು ಹನಿಗಳ ಜೊತೆ ಆಟವಾಡೋ ತವಕದಲ್ಲಿ.

ಎಲ್ಲವೂ ಇದೆ ಈ ಊರಲ್ಲಿ. ಖುಷಿಯಾದಾಗ ಕುಣಿಯೋಕೆ, ಬೇಜಾರಾದಾಗ ಸುಮ್ಮನೇ ಕೂರೋಕೆ, ಪ್ರಶಾಂತವಾಗಿ ಮನದೊಟ್ಟಿಗೆ ಮಾತಾಡೋಕೆ, ವಾರಾಂತ್ಯಕ್ಕೊಂದು ಚಂದದ ಅಪ್ಪುಗೆಯ ವಿದಾಯ ಹೇಳೋಕೆ, ಸ್ನೇಹಿತರ ಜೊತೆ ಮಸ್ತಿ ಮಾಡೋಕೆ. ..ಎಲ್ಲಾ ಭಾವಗಳಿಗೂ ಸಾಥ್ ನೀಡೋಕೆ ಬೇರೆ ಬೇರೆಯದೇ ಸ್ಥಳಗಳಿವೆ ಇಲ್ಲಿ ಎಲ್ಲಾ ಭಾವಗಳನ್ನೂ ಅದರದರದೇ ರೀತಿ ಜೋಪಾನ ಮಾಡೋಕೆ. ..ಪ್ರಕೃತಿಯ ಜೊತೆಗಿನ ಒಡನಾಡಿಗಳಿಗೆ ತೀರಾ ಖುಷಿ ಆಗೋ ತರಹದ ಚಂದದ ಪರಿಸರವಿದೆ ಇಲ್ಲಿ, ಕಲೆಯ ಇಷ್ಟಪಡೋ ಕವಿತ್ವದ ಮನಗಳು ಆಸ್ವಾದಿಸಬಹುದಾದ ಕಲಾ ಸಾಮ್ರಾಜ್ಯವಿದೆ ಇಲ್ಲಿ.ಕಲೆಯ ಇಷ್ಟಪಡದ ವ್ಯಕ್ತಿಯಿಲ್ಲ. ..ಕಲೆಯ ಆಸ್ವಾದಿಸದ ಮನವಿಲ್ಲ. ..ಅದರಲ್ಲೂ ಅಂಚು ಅಂಚಲ್ಲೂ ಕಲಾಕಾರನ ಕಲಾತ್ಮಕ ಮನವೇ ಬಿಚ್ಚಿಕೊಳ್ಳೋ ಬೇಲೂರು, ಹಳೆಬೀಡಿನಂತಹ ಚಂದದ ಕಲೆಯ ಊರಲ್ಲಿ ಎಂತಹ ಜಿಡ್ಡು ಮನಸ್ಸು ಕೂಡಾ ಕಲಾತ್ಮಕತೆಯ ಸೋಗಲ್ಲಿ ಮಿಂದೇಳಲೇ ಬೇಕು. …

ಹೌದು. ಕಲೆಯ ಬೀದಿಯ ಮೆರವಣಿಗೆ ಸಾಗ್ತಿರೋದು ಚಂದದ ಊರಾದ ಬೇಲೂರ ಕಡೆಗೆ.

ಸೇರೋದು ಹಾಸನಕ್ಕಾದ್ರೂ ಚಿಕ್ಕಮಗಳೂರಿನಿಂದ ಬರಿಯ ಅರ್ಧ ಗಂಟೆಯ ಹಾದಿ. ..ಮಾಗಡಿ ಹ್ಯಾಂಡ್ ಪೋಸ್ಟ್ ರಸ್ತೆಯಲ್ಲಿ ಚಂದದ ದಾರಿಯನ್ನ ನೋಡ್ತಾ ಹೋಗ್ತಿದ್ರೆ ಬೇಲೂರು ಬಂದಿದ್ದರ ಅರಿವೂ ಆಗಲ್ಲ. ..ಅಷ್ಟು ಹತ್ತಿರ ಈ ಊರು ಚಿಕ್ಕಮಗಳೂರಿಗೆ. ಇನ್ನು ಬೆಂಗಳೂರಿಗರಿಗೆ ಬರಿಯ ನಾಲ್ಕು ಗಂಟೆಯ ಹಾದಿಯಷ್ಟೆ !.ಚಿಕ್ಕಮಗಳೂರಿಂದ ೨೪ ಕಿ.ಮೀ ದೂರದಲ್ಲಿರೋ ಬೇಲೂರನ್ನ ನೋಡೋಕೆ ಹೋದುದ್ದು ಸ್ನೇಹಿತರ ಒತ್ತಾಯಕ್ಕೆ.ಆದರೆ ಅವರಷ್ಟು ಒತ್ತಾಯ ಮಾಡದಿದ್ರೆ ಖಂಡಿತ ಹೀಗೊಂದು ಶಿಲ್ಪಕಲೆಗಳ ಊರನ್ನ ನೋಡೋದು ತಡವಾಗ್ತಿತ್ತೇನೋ.

ಬೇಲೂರಿನ ಬಸ್ ಸ್ಟಾಂಡ್ ನಿಂದ ಬರಿಯ ಒಂದೈದು ನಿಮಿಷಕ್ಕೆ ಸಿಗೋ ಬೇಲೂರನಾಥನ ದ್ವಾರ ಕಲೆಯ ಬೀದಿಯ ಸ್ವಾಗತಕ್ಕೆಂದು ತಲೆ ಎತ್ತಿ ನಿಂತಿರುತ್ತೆ.

ಚನ್ನಕೇಶವನ ಸನ್ನಿಧಿಯಲ್ಲಿ ತಲೆಬಾಗಿ ಕುಳಿತರೆ ಕಲೆಯ ಸೊಗಡು ಕಲೆಗಾರನ ಭಾವಗಳೇ ಕಣ್ಣೆದುರು ತೆರೆದಿಟ್ಟಂತೆ ಭಾಸವಾಗುತ್ತೆ.

ಇಡಿಯ ದೇವಾಲಯವ ಬರಿಯ ಕಲ್ಲಿಂದ ಅಷ್ಟು ಚಂದದಿ ಕೆತ್ತೋವಾಗ ನಿಜಕ್ಕೂ ಆಶ್ಚರ್ಯವಾಗುತ್ತೆ.

ಗಟ್ಟಿ ಕಲ್ಲನ್ನೇ ಕೆತ್ತಿ ಇಷ್ಟು ಚಂದದ ಮನ ಮುಟ್ಟೋ ಶಿಲೆಗಳ ಮಾಡೋವಾಗ ಮೃದು ಮನವ ಅದೆಷ್ಟು ಚಂದದಿ ಕೆತ್ತಬಹುದಲ್ವಾ ಅನಿಸಿಬಿಡುತ್ತೆ. ಬೇಲೂರ ದೇವಾಲಯವ ಎದುರು ನಿಂತು ನೋಡೋವಾಗ ಒಂದು ಸಾರ್ಥಕ್ಯ ಭಾವ. ದೊಡ್ಡದಾದ ಪ್ರಾಂಗಣದ ಬುಡದಿಂದ ತುದಿಯ ತನಕ ಬರಿಯ ಕಲೆಯ ಅನಾವರಣ. ಕಲಾಕಾರನ ನಿಪುಣತೆಯೇ ಎದ್ದು ಕಾಣುತ್ತಲ್ಲಿ. ಮೊದಲ ಸಲ ಪ್ರಾಂಗಣವ ನಿಂತು ನೋಡೋವಾಗ ದಂಗು ಬಡೆದಿದ್ದೆ ನಾ. ಅಡಿಯಿರಿಸಿ ಮುಂದೆ ನಡೆದರೆ ಇಡಿಯ ದೇವಾಲಯ ಬರಿಯ ಕಲ್ಲಿಂದ ಮಾಡಿದ್ದು !

ಸುಂದರ ಕೆತ್ತನೆಗಳು ನೋಡುಗರ ಮನದಲ್ಲಿ ಹಾಗೆಯೇ ಅಚ್ಚೊತ್ತಿಬಿಡುತ್ತೆ.ಎಲ್ಲಾ ಶಿಲೆಗಳಲ್ಲೂ ಏಕತಾನತೆ, ಎಲ್ಲವುಗಳಲ್ಲೂ ವಿಭಿನ್ನತೆ. ಶೃಂಗಾರ ಶಿಲೆಗಳ ಕೆತ್ತನೆಗಳಂತೂ ಎಲ್ಲರೂ ಹುಬ್ಬೇರೋ ತರ ಮಾಡಿಬಿಡುತ್ತೆ. ವಿಧ ವಿಧದ ನಾಟ್ಯ ಭಂಗಿಗಳು. ಎಲ್ಲಾ ಶಿಲೆಗಳ ಮುಖ ಭಾವಗಳು ನೋಡುಗರ, ವೀಕ್ಷಕರಿಗೆ ಅರ್ಥವಾಗೋ ಅಷ್ಟರ ಮಟ್ಟಿಗೆ ಕಲಾಕಾರ ಮಾತಾಡುತ್ತಾನೆ ಇಲ್ಲಿ. ಬಾಲಿಕೆಯರ ನಾಟ್ಯ ಭಂಗಿಗಳ ನೋಡೋವಾಗ ಯಾವುದೋ ನಾಟ್ಯ ಶಾಲೆಯಲ್ಲಿ ಕುಳಿತಿದ್ದೇವೇನೋ ಅಂತನಿಸಿಬಿಡುತ್ತೆ. ಚಂದಾ. ..ಚಂದ. .ಈ ಶಿಲ್ಪಕಲೆಯ ಹಾದಿ.ನಾ ಬೇಲೂರಿಗೆ ಹೋದಾಗ ತುಂತುರು ಮಳೆಯಾಗುತ್ತಿತ್ತು. ಮಳೆಯಿಂದಲೇ ಏನೋ ಪ್ರಾಂಗಣ ಇನ್ನೂ ಸುಂದರ ಅನಿಸಿದ್ದು.ಒದ್ದೆಯಾದ ಮಳೆಯಲ್ಲಿ ಕಲೆಯ ಬೀದಿಯ ಒಂದಿಷ್ಟು ಭಾವಗಳು ಹಸಿ ಹಸಿಯಾಗಿ ಮಣ್ಣ ಗಂಧದಲ್ಲಿ ತೇಯ್ದು ಒದ್ದೆ ಮುದ್ದೆಯಾಗಿದ್ದಂತೂ ಸುಳ್ಳಲ್ಲ.ಈ ಶಿಲೆಗಳಲ್ಲಿ ಪ್ರೀತಿಯಿದೆ, ಕರುಣೆಯಿದೆ, ಸಂತಾಪವಿದೆ, ಗಟ್ಟಿತನವಿದೆ, ಇಷ್ಟವಾಗೋ ಭಂಗಿಗಳಿವೆ, ನಾಟ್ಯವಿದೆ, ಗಂಭೀರತೆಯಿದೆ..ಹಮ್ಮು, ಬಿಮ್ಮು ಎಲ್ಲಾ ಇದೆ…

ಒಟ್ಟಿನಲ್ಲಿ ಕಲ್ಲಿನಲ್ಲೊಂದು ಜೀವವಿದೆ ಅನ್ನೋ ಮಟ್ಟಿಗಿದು ಜೀವಂತವಾಗಿದೆ.ಯಾವಾಗಲೂ ಪ್ರವಾಸಿಗರ ದಂಡೇ ತುಂಬಿರುತ್ತಿಲ್ಲಿ. ಪ್ರವಾಸಿಗರಿಗೆ ಪ್ರೀತಿಯ ಸ್ವಾಗತ ಕೋರಿ, ಆತ್ಮೀಯವಾಗಿ ನಕ್ಕು ಇಡಿಯ ಬೇಲೂರ ಪರಿಚಯ ಮಾಡಿಸೋಕಂತಾನೇ ಅದೆಷ್ಟೋ ಗೈಡ್ ಗಳು ಕೈ ಕಟ್ಟಿ ನಿಂತಿರುತ್ತಾರಲ್ಲಿ. ಅವರುಗಳಿಗೆ ಈ ಕಲ್ಲಿನ ಕಥೆ ಹೇಳೋದ್ರಲ್ಲೆ ಜೀವನ ಸಾಗುತ್ತಂದ್ರೆ ನೀವಲ್ಲಿ ಬರೋ ಪ್ರವಾಸಿಗರ ಸಂಖ್ಯೆಯ ಲೆಕ್ಕ ಹಾಕ ಬಹುದು. ಅವರಿಗೆಲ್ಲ ಬೇಲೂರಿನ ಇಂಚಿಂಚೂ ಪರಿಚಯವಾಗಿ ಬಿಟ್ಟಿದೆ.ದಂಡಿಯಾಗಿ ಬರೋ ವಿದೇಶಿಯರಿಗೆ ತಲುಪೋ ತರದಿ ಭಾರತ ಇತಿಹಾಸ ತೆರವಿಡೋ, ಆಮೇಲೆ ಅವರುಗಳೂ ಹುಬ್ಬೇರಿಸಿ ಇಲ್ಲಿಯ ಕಲೆಯ ಪ್ರೀತಿ ಸಂಸ್ಕೃತಿಗಳ ಹೊಗಳಿಯೇ ಹೋಗೋ ತರ ಮಾಡೋ ಈ ಗೈಡ್ ಗಳ ನೋಡೋವಾಗ ನಿಜಕ್ಕೂ ಹೆಮ್ಮೆಯನಿಸುತ್ತೆ. ಪ್ರತಿಯ ಕಲ್ಲಿಗೂ ಒಂದು ಕಥೆಯಿದೆ ಅಲ್ಲಿ. ..ಹೇಳೋಕೆ ಹೋದ್ರೆ ಮುಗಿಯದ ಕಥೆಯಾಗಿಬಿಡುತ್ತಿಲ್ಲಿ ನೀವಲ್ಲಿ ನಿಂತು ಅದ ನೋಡಿ ಇತಿಹಾಸವ ಕೇಳಿದಾಗ ಮಾತ್ರ ಅರಿವಿಗೆ ಬರುತ್ತೇನೋ ಈ ಚಂದದ ಕಲೆಯ ಊರಿನ ಕಥೆ.ಮಧ್ಯಾಹ್ನ ಊಟಕ್ಕಂತ ಬೇಲೂರಿನ ಹೋಟೆಲ್ ಒಂದು ಸ್ವಾಗತಿಸುತ್ತಿತ್ತು. ..ಹೋಗಿ ಊಟಕ್ಕೆ ಕುಳಿತರೆ ಅಲ್ಲಿಯೂ ಮುಗುಳ್ನಕ್ಕು ಸ್ವಾಗತಿಸೋ ಜನ ! ಎಲ್ಲರೂ ಆತ್ಮೀಯರನಿಸಿಬಿಡುತ್ತಾರಿಲ್ಲಿ.ಬೇಲೂರು ಅಷ್ಟು ದೊಡ್ದ ಊರಲ್ಲದಿದ್ರೂ ವ್ಯವಸ್ಥಿತ ವ್ಯವಸ್ಥೆಗಳೆಲ್ಲವೂ ಇದೆ ಇಲ್ಲಿ. ಪ್ರವಾಸಿಗರಿಗೆ ಯಾವುದೇ ಕೊರತೆಯಾಗದ ರೀತಿ ಸಲಹೋ ಮನಸ್ಸಿದೆ ಇವರುಗಳಿಗೆ. ಹೋಗಿಬನ್ನಿ ನೀವೂ ಒಮ್ಮೆ, ಕಲೆಯ ರಥ ಬೀದಿಯಲ್ಲಿ ಭಾವಗಳ ಝೇಂಕಾರವಾದೀತು. ..ಬೇಲೂರಿನ ಕಲಾಕಾರನ ಭಾವಗಳಲ್ಲಿ ಮಿಂದೆದ್ದ ಮನ ಹೊರಟಿದ್ದು ಹಳೆಬೀಡಿನ ಕಲೆಯ ಬೀದಿಯ ಕಡೆಗೆ. ಬೇಲೂರಿನಿಂದ ೨೨ ಕಿ.ಮೀ ಹಾದಿಯಷ್ಟೇ. .ಹಳೆಬೀಡು ಸೇರೋದು ಹಾಸನಕ್ಕೆ.ಹೀಗಾಗಿ ಕಾಫೀ ನಾಡಿನ ಹಂಗಿಲ್ಲ ಇದಕ್ಕೆ. ಬೇಲೂರಿಂದ ಬೇಕಾದಷ್ಟು ಬಸ್ ಗಳಿವೆ ಹಳೆಬೀಡ ಕಡೆಗೆ. ಅರ್ಧ ಗಂಟೆಯ ಹಾದಿಯಲ್ಲಿ ಮತ್ತೆ ಸಿಕ್ಕಿದ್ದು ಹಳೆಬೀಡನ್ನೋ ಮತ್ತದೇ ಕಲೆಯ ಊರು. ಬಸ್ ಇಳಿದು ಎದುರು ನೋಡಿದರೆ ಕಾಣೋ ಗುಹಾಂತರದಂತಹ ದೇವಾಲಯ ಕೈ ಬೀಸಿ ಕರೆದಂತೆ ಭಾಸ.

ಬೇಲೂರಿಗಿಂತಲೂ ದೊಡ್ಡದಾದ ಹಸಿರ ಪ್ರಾಂಗಣವಿದೆ ಇಲ್ಲಿ. ಕುದುರೆ, ಆನೆ, ಸಿಂಹ ದಳಗಳು ಇಡಿಯ ದೇವಾಲಯವ ಸುತ್ತುವರೆದು ಭದ್ರ ಮಾಡಿದೆಯೇನೋ ಅನಿಸುತ್ತೆ ಇಡಿಯ ದೇವಾಲವ ನಾಲ್ಕು ಸಾಲಿನಲ್ಲಿ ಸುತ್ತುವರೆದಿರೋ ಆ ಕಲ್ಲಿನ ದಳಗಳ ನೋಡೋವಾಗ.ಇಲ್ಲೂ ಬೇಲೂರಿನ ತರಹವೇ ಆತ್ಮೀಯವಾಗಿ ಸ್ವಾಗತಿಸೋ ಗೈಡ್ ಗಳು. ಆದರೆ ಬರಿಯ ನಾಟ್ಯ ಭಂಗಿಗಳು ಮಾತ್ರವಲ್ಲದೇ ಇಡಿಯ ರಾಮಾಯಣ, ಗಣಪತಿ, ಶಿವ ಪಾರ್ವತಿಯರ ಭಾವಗಳೆಲ್ಲವೂ ಅನಾವರಣಗೊಂಡಿದೆ ಇಲ್ಲಿ.

ಎಲ್ಲಾ ಕೆತ್ತನೆಗಳಲ್ಲೂ ವಿಭಿನ್ನತೆಯಿದೆ.ಏಕಸ್ಥಾಯಿಯ ಭಾವವಿದೆ.

ಹೀಗೊಂದು ಚಂದದ ಊರಿನ ಕಲೆಯ ಸ್ವಾದವ ಸವಿಯ ಬಂದ ಪೂರ್ತಿ ಖುಷಿ ನಂಗಾಗಿತ್ತವತ್ತಲ್ಲಿ.ದೇವಾಲಯದ ಎಡಭಾಗದಲ್ಲಿರೋ ಎರಡು ಬೃಹತ್ ನಂದಿಗಳು ಶಿವನಿಗೆ ತಲೆಬಾಗಿ ಕುಳಿತಂತೆ ಅನಿಸುತ್ತಿಲ್ಲಿ. ಭಾರತ ೬ ಮತ್ತು ೭ನೇ ಬೃಹತ್ ನಂಗಿಗಳಂತೆ ಇಲ್ಲಿರೋ ನಂದಿಗಳೆರಡೂ. . ಆಭರಣ ಪ್ರಿಯೆ ಶಕುಂತಲೆಗೆ ಇವಂದ್ರೆ ತೀರಾ ಇಷ್ಟವಂತೆ. ಹಾಗಾಗಿಯೇ ಏನೋ ಇವು ಸರ್ವಾಲಂಕಾರವಾಗಿ ಕುಳಿತುಕೊಂಡಿವೆ ಇಲ್ಲಿ. ಪಾದಕ್ಕೆ ಹಾಕೋ ಆಭರಣದಿಂದ ಹಿಡಿದು ತಲೆಯ ತುದಿಯ ತನಕ ಇರೋ ಸಣ್ಣ ಸಣ್ಣ ಆಭರಣಗಳನ್ನೂ ಬಿಡದೇ ಅಲಂಕರಿಸಿರೋ ಕಲೆಯ ಈ ಮನಸ್ಸಿಗೊಂದು ನಮನ ಹೇಳಲೇಬೇಕನಿಸಿಬಿಡುತ್ತೆ. ಅದೆಷ್ಟು ಸ್ವಾಭಾವಿಕವಾಗಿ ಈ ನಂದಿಗಳೆರಡೂ ಕುಳಿತಿವೆ ಅಂತನಿಸೋ ಅಷ್ಟರ ಮಟ್ಟಿಗೆ ಕೆತ್ತಲಾಗಿದೆ ಇವುಗಳ.

ಇಷ್ಟವಾಗಲೇ ಬೇಕು ಇಲ್ಲಿಯ ಸೊಗಡು, ಒನಪು, ವೈಯಾರಗಳೆಲ್ಲವೂ. .. ಇನ್ಯಾವುದೋ ಮೂಲೆಯಲ್ಲಿ ಶಿವ ಪಾರ್ವತಿಯರ ಹೊತ್ತ ನಂದಿಯ ಮುಖದಲ್ಲೊಂದು ಅಸಹನೆಯ ಸಿಟ್ಟು ಅನಾವರಣವಾಗಿದೆ. .ಯಾಕೆಂದು ಕೇಳಿದಾಗ ಗೆಳೆಯ ಹೇಳಬಂದಿದ್ದು ಹೀಗೆ. .ನಂದಿ ಬರಿಯ ಶಿವನ ವಾಹನ. ಅದಕ್ಕಾಗಿ ಪಾರ್ವತಿಯ ಕುಳಿಸಿಕೊಂಡಿರೋ ಶಿವನಲ್ಲಿ ನಂದಿಯ ಅಸಮಾಧನವಂತೆ ಅದು. ಹೀಗೇ ಏನೇನೋ ಸಣ್ಣ ಸಣ್ಣ ಭಾವಗಳನೂ ಬಿಡದೇ ರವಾನಿಸಿಬಿಡುತ್ತೆ ಇಲ್ಲಿರೋ ಒಂದೊಂದೂ ಕಲ್ಲಿನ ಮೂರ್ತಿಗಳು. ಇಲ್ಲಿ ಯಾವುದನ್ನೂ ಅಲ್ಲಿಯೇ ಕುಳಿತು ಕೆತ್ತಿಲ್ಲ. ಎಲ್ಲೋ ಮಾಡಿ.ದೇವಾಲಯದ ಒಳಗಡೆ ಎರಡು ದೇವರ ವಿಗ್ರಹಗಳಿವೆ. .ಒಳಗಡೆಯೂ ಪ್ರತಿ ಕಲ್ಲೂ, ಪ್ರತಿಯ ವಿಗ್ರಹವೂ ಒಂದೊಂದು ಕಥೆಯ ರುವಾರಿಯಾಗಿದೆ. ಖುಷಿ ಅನುಸುತ್ತಿಲ್ಲಿ. ದೇವಾಲಯದ ಎಡಕ್ಕೆ ದೊಡ್ಡದಾದ ಕೆರೆಯಿದೆ. ಸುತ್ತ ಮುತ್ತಾ ಹಸಿರಿದೆ. ಪ್ರಶಾಂತತೆಯಿದೆ.

ಮನ ಖುಷಿಸುತ್ತಿಲ್ಲಿ. ಇತಿಹಾಸವ ಇಷ್ಟ ಪಡೋರಿಗೆ, ಅದರಲ್ಲಿ ಆಸಕ್ತಿ ಇರೋರಿಗಿದು ಒಂದು ವ್ಯಾಸಂಗ ಸ್ಥಳವೂ ಹೌದು.ಬೇಲೂರ ಶಿಲಾಬಾಲಿಕೆಯರ ನೋಡಿ, ಹಳೆಬೀಡ ನೆಲದಲ್ಲಿ ಕಲೆಯ ಆಸ್ವಾದಿಸಿ ಅಂತೂ ಆ ದಿನಕ್ಕೊಂದು ಹೊಸ ಮೆರಗು.

ಹಳೆಬೀಡಿನ ಬ್ಲಾಗ್ ಗೆಳೆಯನ ಪ್ರೀತಿಯ ಒತ್ತಾಯಕ್ಕೆ ಮುಂದಿನ ಪಯಣ ಅವನ ಮನೆಗೆ ಸಾಗಿತ್ತು ಅವತ್ತು. ಅಮ್ಮನ ಆತ್ಮೀಯ ಸತ್ಕಾರಕ್ಕೆ ಮನ ಮೂಕಗೊಂಡಿತ್ತು ಅಲ್ಲಿ.

ಆದರೂ ನೋಡೋಕೆ ಇನ್ನೂ ಜಾಗಗಳಿವೆ ನಮ್ಮೂರಲ್ಲಿ ಅಂದಿದ್ದ ಗೆಳೆಯ. ಅವತ್ಯಾಕೋ ಎಲ್ಲಾ ಜಾಗಗಳ ನೋಡೋಕೆ ಆಗಿರಲಿಲ್ಲ. .ಹೋಗಬೇಕು ಮತ್ತೊಮ್ಮೆ ಈ ಕಲೆಯ ಊರಿಗೆ.ಕಲೆಯ ಉಣಬಡಿಸೋ, ಕಲಾರಸಿಕರ ಮನ ತೃಪ್ತಗೊಳಿಸೋ ಈ ಕಲೆಯ ಊರುಗಳಲ್ಲಿ ನಿಮ್ಮದೂ ಒಂದು ಸುತ್ತಿರಲಿ. ..ಖಂಡಿತ ಎಲ್ಲರಿಗೂ ಇಷ್ಟವಾಗುತ್ತೆ ಈ ಸ್ಥಳ.

ಕಲಾ ಸೇವೆಯ ಅದೆಷ್ಟೋ ಜನರಿಗಿದು ಉತ್ತೇಜನ ಕೊಟ್ಟಂತಾಗುವುದು. ವಾರಾಂತ್ಯ ಬೇಜಾರು ಅಂತ ಕುರುಬೋ ಜನರಿಗಿದು ಒಂದು ಒಳ್ಳೆಯ ಸ್ಥಳ ಪರಿಚಯ. ಕಲಾರಾಧನೆಯ ಸ್ವಾದ, ಕಲೆಯ ಬೆಳೆಸೋ ಮಂದಿಗಿದು ಪ್ರಚೋದನೆ ಕೊಟ್ಟಂತಾಗುವುದು.

ಬರಿಯ ಕಲ್ಲಿನಲ್ಲಿ ಒಂದೊಂದು ಕಥೆಯ ಹೇಳೋ ಕಲೆಯ ಊರನ್ನ ನಾ ನೋಡಿರೋ, ಅನುಭವಿಸಿರೋ ಭಾವಗಳ ಗುಚ್ಚವಿದು.ಈ ಕಲೆಯಲ್ಲಿ ಪ್ರೀತಿಯಿದೆ. . ಆಸ್ಥೆಯಿದೆ. .ಬೆಳೆಸೋ, ಬೆಳಗಿಸೋ ಶಕ್ತಿಯಿದೆ.ಹೀಗೊಂದು ಚಂದದ ಕಲೆಯ ಬೀಡು ಕನ್ನಡಿಗರಿಗೆ ದಕ್ಕಿದೆಯಲ್ಲ ಅನ್ನೋ ಖುಷಿ.

ಮಾತು ಧಾತುವಿನ ಸಮ್ಮಿಲನದಲ್ಲಿ, ಕಲೆಯ ಬೀಡಿನ ಒಳಗಿನ ಸಂಭ್ರಮದಲ್ಲಿ ಕಳೆದು ಹೋಗಿ. ..ಮನ ಸ್ಮೃತಿ ಎಲ್ಲವೂ ಮೂಕ.

ಆಮೇಲೆ ಮೂಡೋದು ಆಶ್ಚರ್ಯ ಮಾತ್ರ

ಯಾವುದೇ ತೊಂದರೆಗಳಿಲ್ಲದೇ ಆರಾಮಾಗಿ ನೋಡಿ ಬರೋ ಈ ಸ್ಥಳ ನೋಡಿರೋ, ಸಂತಸ ಪಟ್ಟಿರೋ ಖುಷಿಯ ಪಾಲಿನೊಂದಿಗೆಬೇಲೂರು, ಹಳೆಬೀಡಿನಂತಹ ಕಲೆಯ ಬೀದಿಯಲ್ಲಿ ನೀವೂ ಓಡಾಡಿ, ಅನುಭವಿಸಿ, ಖುಷಿಸಿ, ವ್ಯವಹರಿಸಿ ಭಾವಗಳ ಝೇಂಕರಿಸಿ ಬನ್ನಿ ಅನ್ನೋ ಆಶಯದೊಂದಿಗೆ. ….


Thanks to panju


http://www.panjumagazine.com/?p=10888

Thursday, April 30, 2015

ಸಂಘರ್ಷಿಣಿ ...


             ಭೋರ್ಗರೆವ ಸಮುದ್ರ ಅದು.ಅದಕ್ಕೂ ಪುರುಷತ್ವದ ಹಮ್ಮು.ನಾನೋ ಅಲ್ಲೇ ಎಲ್ಲೋ ಕೂತು  ರಾತ್ರಿಯಿಡೀ ನಕ್ಷತ್ರ ಎಣಿಸಿದ್ದಿದೆ. ಕನಸುಗಳನ್ನ ಎಣಿಸೋಕಾಗದೇ ಹಾಗೆಯೇ ರಾಶಿ ಹಾಕಿದ್ದಿದೆ.ಕಡಲಂದ್ರೆ 'ಸ್ಪಟಿಕ' ನೆನಪಾಗ್ತಾಳೆ... ಹೀಗಾಗಿಯೇ ಏನೋ ಕಡಲ ಜೊತೆಗಿನ ನಂಟು,ನೆನಪು,ಪ್ರೀತಿ ಎಲ್ಲವೂ ದೊಡ್ಡದಿದೆ.

             ಅದೆಷ್ಟು ನಿರ್ಬಂಧಿತ ಬದುಕು ಅವಳದ್ದು.ವಾರದ ಕೊನೆಯಲ್ಲಿ ನನ್ನ ಜೊತೆ ಒಂದರ್ಧ ಗಂಟೆ ಮಾತಿಗೆ ಕೂತರೆ ಇಡೀ ವಾರದ ಮಾತು ಮುಗಿಯಬೇಕು. ಆಮೇಲೊಂದು ನಿಮಿಷವೂ ಅಲ್ಲಿರದೆ ಮನೆಯ ಕಡೆ ಹೊರಡಬೇಕಿತ್ತು.ಬದುಕ ಬಗೆಗೆ ಕಾತರ ನಿರೀಕ್ಷೆಗಳೇನೂ ಇಲ್ಲದೆ ಎಲ್ಲವನ್ನೂ ಒಪ್ಪೋ  ಎಲ್ಲದನ್ನೂ ಅಪ್ಪೋ ಅವಳಂದ್ರೆ ಮುಗಿಯದ ಕುತೂಹಲ. ತಿಂಗಳಿಗೆ ಆ ಮೂರು ದಿನ ಹೊರಗಡೆ ಕೂರಲೇಬೇಕಿದ್ದ ಅವಳ ಮನೆಯ ಆ ರೀತಿಗಳ ವಿರುದ್ದ ಅದೆಷ್ಟು ಬಾರಿ ಮಾತಾಡಿದ್ದೆ ನಾ. ಅವಳೋ ಎಲ್ಲವನ್ನೂ ಪ್ರೀತಿಯಿಂದಲೇ ಸಹಿಸಿಕೊಳ್ಳೋ, ಜಾಸ್ತಿ ಅನಿಸೋವಷ್ಟು ಒಳ್ಳೆಯತನವಿರೋ ಹುಡುಗಿ. 
         
          ಸಣ್ಣ ಸಣ್ಣದಕ್ಕೂ ಮನೆಯವರ ಅನುಮತಿ ಕೇಳೋ ಅವಳಿಗೆ ಯಾವುದಕ್ಕೂ ಏನೂ ಕೇಳದ ಹೇಗ್ ಹೇಗೋ ಬದುಕೋ ನಾ ಗಂಟು ಬಿದ್ದಿದ್ದೆ  ಒಮ್ಮೆಯಾದರೂ ನನ್ನೂರಿಗೆ ಬಾ ಅಂತ.ಮನೆಯಲ್ಲೊಮ್ಮೆ ಕೇಳಿ ಆಮೇಲೆ ಹೇಳ್ತೀನಿ ಅಂದಿದ್ದವಳು ಇವತ್ತಿಗೂ ಏನೂ ಹೇಳದೆ ಸುಮ್ಮನಿದ್ದಾಳೆ.  ಅವಳ ಜೊತೆಯಲ್ಲಿ ನಮ್ಮನೆಯ ಮಹಡಿಯ ಮೇಲೆ ಕೂತು ಮತ್ತೆ ಹುಚ್ಚುಚ್ಚು ಕನಸು ಕಟ್ಟೋ,ಹೆಚ್ಚೆಚ್ಚು ನಕ್ಷತ್ರ ಎಣಿಸೋ ಆಸೆ ಇನ್ನೂ ಹಾಗೆಯೇ ಉಳಿದಿದೆ. 
  
            'ಎದೆಗೊರಗಿ ಕೂತರೆ ಆಹ್! ಅನಿಸಬೇಕು. ಅಂತಹ ಹುಡುಗ ಬೇಕು ಕಣೆ ಬದುಕಿಗೆ' ಅಂತೆಲ್ಲ ಹೇಳಿ ನಂಗೂ ಅಂತಹುದ್ದೆ ಹುಡುಗ ಬೇಕು ಅನ್ನಿಸೋವಷ್ಟು ಹುಚ್ಚು ಹಿಡಿಸಿದ್ದವಳು ಅವಳು. ಅವತ್ತೇ ಹೇಳಿದ್ದೆ ಅವಳಿಗೆ  ನಿನಗೇನಾದರೂ ಆ ಹುಡುಗ ಸಿಕ್ಕರೆ ಖಂಡಿತ ಹಾರಿಸಿಕೊಂಡು ಹೋಗ್ತೀನಿ ನೋಡು ಅಂತ. ನಕ್ಕು 'ನಂಗೆ  ರಾಧೆ ಕೂಡಾ ಇಷ್ಟವೇ ಕಣೆ ಗೆಳತಿ, ನನ್ನೀ ರುಕ್ಮಿಣಿಗಾಗಿ ನಾ ರಾಧೆಯಾಗೋಕೆ ರೆಡಿ' ಅಂತ ಕೆನ್ನೆ ತಟ್ಟಿ ಹಣೆಗೊಂದು ಹೂಮುತ್ತನ್ನಿತ್ತವಳನ್ನ ನೋಡಿ ಕಣ್ಣಂಚು ಒದ್ದೆಯಾಗಿತ್ತು ಅವತ್ತು. ನಾನಂದ್ರೆ ಅವಳಿಗೆ ರಾಧೆಯಷ್ಟೇ ಪ್ರೀತಿ. ಆಮೇಲೆಲ್ಲಾ ಅವಳಿಗೆ ಯಯಾತಿ, ದೇವಯಾನಿ, ರಾಧೆ  ಇಷ್ಟವಾದ್ರೆ ನಂಗೆ ಹಿಮವಂತ, ಶರ್ಮಿಷ್ಠೆಯ ಪಾತ್ರಗಳು ತುಂಬಾ ಇಷ್ಟವಾಗ್ತಿದ್ವು.  ಅವಳಿಷ್ಟ ಪಡೋ ಹುಡುಗ ಸಿಕ್ಕಿದ್ದ ಕೂಡಾ. ಬದುಕಿಗೆ ಅವ  ಸಿಕ್ಕ ಮೇಲೆ ಬದುಕೆಷ್ಟು ಚಂದವಲ್ವೇನೆ ಅಂತ ಕೇಳಿದ್ದವಳ ತೋಳು ತಬ್ಬಿ ಬಿಕ್ಕಿದ್ದವಳು ಅವಳು. ಮತ್ತೆ ಮನೆಯವರ ಅನುಮತಿಗೆ ಕಾದು, ಬದುಕಾಗಿ ಪ್ರೀತಿಸಿದವನನ್ನು ತೊರೆಯೋವಾಗಿನ  ಅವಳ ತಳಮಳಗಳು, ಬೇಸರಗಳು ಅರ್ಥವಾಗ್ತಿದ್ರೂ ಏನೂ ಹೇಳೋಕೆ ತೋಚದ ಸಂದಿಗ್ಧ. ಹೇಳಿದಂತೆಯೇ ರಾಧೆಯ ಆ ಕೃಷ್ಣನನ್ನು ಬಿಟ್ಟುಕೊಟ್ಟಿದ್ಲು ನಂಗಾಗಿ. 

             ನಾ ಅವನ ಬದುಕಿಗೆ ಬರೋಕೂ ಮುಂಚೆಯೂ ಅವಳಿದ್ಲು. ನಾ ಬಂದ ಮೇಲೆಯೂ ಅವಳೇ ಕನವರಿಕೆಯ ಬದುಕಾಗಿಬಿಟ್ಟಿದ್ದಾಳೆ. ಈಗಲೂ ಅವನ ರಾಯಲ್ ಎನ್ಫಿಲ್ದ್ ನ ಹಿಂದಿನ ಸೀಟ್ ಅಲ್ಲಿ ಕೂರೋವಾಗ ಆ ಜಾಗ ಅವಳದ್ದೇನೋ ಅಂತನಿಸುತ್ತೆ.ನಂಗೇ ಪ್ರೀತಿಯಾಗೋ ನನ್ನ ಉದ್ದ ಕೂದಲು ಈಗೀಗ ಅವನಿಗೆ ಅವಳ ನೆನಪಿಸೋ ಇನ್ನೊಂದು  ಭಾವ ಅಷ್ಟೇ ಏನೋ ಅನಿಸಿಬಿಡುತ್ತೆ.  ಮರಳ ದಂಡೆಯ ಮೇಲೆ ಕಟ್ಟೋ ಆ ಗುಬ್ಬಚ್ಚಿ ಗೂಡು,ಜೊತೆ ಹಾಕೋ ಪ್ರತಿ ಹೆಜ್ಜೆಯಲ್ಲೂ ಅವಳ ಸುಳಿವು. ಅವ ಅಂದ್ರೆ ಹೂಕಂಪನದ ಬದಲು ಒಂದು ಅತೀ ಆತ್ಮೀಯ ಭಾವ ನನ್ನನ್ನ ಬಂಧಿಸುತ್ತೆ  . ಅವ 'ನೀ ನನ್ನ ಆತ್ಮೀಯ ಗೆಳತಿ'ಅಂದಾಗ ಮನ ಸಂಭ್ರಮಿಸೋ ಕಡಲಾಗುತ್ತೆ. 

         ಬರೀ ಪ್ರೀತಿಸಿಕೊಂಡು ಮಾತ್ರ ಗೊತ್ತಿರೋ ಹುಡುಗಿಗೆ ಪೂರ್ತಿಯಾಗಿ ಯಾರನ್ನೂ ಪ್ರೀತಿಸಿ ಗೊತ್ತಿಲ್ಲ. ಅವ ಕೂಡಾ ನನ್ನನ್ನ ಇಡಿಯಾಗಿ ಪ್ರೀತಿಸಲಾರನೇನೋ. ಆದರೆ ನಂಗೋ ಅವಳು ನನ್ನ ಪ್ರೀತಿಸಿದಂತೆಯೇ ನನ್ನನ್ನ ನಾನಾಗಿ ಪ್ರೀತಿಸೋ ಹುಡುಗ ಬೇಕು. ಬದಲಾಗ್ತಿರೋ ನನ್ನದೇ ಭಾವಗಳ  ಮಧ್ಯೆ ಅವನ ರುಕ್ಮಿಣಿಯಾಗೋದು  ಅಂತ  ಅವಳಿಗೆ ಹೇಳಬೇಕೆಂದುಕೊಂಡಿದ್ದೀನಿ. ಅತ್ತ ಅವಳು ದೇವಯಾನಿ ಆಗ್ತಿದ್ರೆ ಇತ್ತ ಶರ್ಮಿಷ್ಠೆ ನನ್ನನ್ನಾವರಿಸಿಕೊಳ್ತಿದಾಳೆ. ಇಬ್ಬರ ಮಧ್ಯ ಯಯಾತಿ ಎಲ್ಲಿ ಕಳೆದು ಹೋದ ಅನ್ನೋದನ್ನ ಹುಡುಕಬೇಕಿದೆ. 

ಯಾಕೋ ಈಗೀಗ ಈ ರಾಧೆಯನ್ನ ಇನ್ನಿಲ್ಲದಂತೆ ಪ್ರೀತಿಸಬೇಕನ್ನಿಸ್ತಿದೆ . 
               

Friday, April 10, 2015

ದಕ್ಕೋ ನೆನಪುಗಳ ಜಾಗಕ್ಕೆ...


         ಒಮ್ಮೊಮ್ಮೆ ಕೊನೆಯೇ ಇಲ್ಲದಂತೆ ಹರಡಿರೋ ಚುಕ್ಕೆಗಳ ವಿಸ್ತಾರ. ಇನ್ನೊಮ್ಮೆ ಉದ್ದಕೂ ಹಗಲು. ಕೆಳಗೆ ಮೇಲೆ ಬದಿಯಲ್ಲಿ ಎಲ್ಲೆಲ್ಲೂ ಆಕಾಶ. ಇತ್ತೀಚಿಗೆ ಮತ್ತೆ ಮೊದಲಿನಿಂದ ಬದುಕಬೇಕನಿಸ್ತಿದೆ ನಂಗೆ. ಯಾರನ್ನೂ ಕೇಳದೇ  ಬರಿಯ ನಾ ಮಾತ್ರ ಅತೀ ಅನ್ನಿಸೋ ನನ್ನದೇ ಭಾವಗಳ ಜೊತೆ ಅರೆಕ್ಷಣ ಕಳೆದುಹೊಗಬೇಕನಿಸ್ತಿದೆ. 

ಅದಕ್ಕೇ ಏನೋ ತೀರಾ ಇಷ್ಟ ಪಡೋ ಅದೆಷ್ಟೋ ನೆನಪುಗಳ ಇರಿಸಿಕೊಂಡಿರೋ ಅದೇ ಜಾಗ ಮತ್ತೆ ಮತ್ತೆ ಕಾಡ್ತಿದೆ. 

        ಅವನೊಬ್ಬನಿದ್ದಾನೆ. ಬದುಕಲ್ಲಿ ಯಾವ ಭಾವೂಕತೆಗಳಿಗೂ ಜಾಗ ಕೊಡದೆ ತನ್ನೊಳಗೆ ಯಾರನ್ನೂ ಬಿಟ್ಟುಕೊಳ್ಳದೇ ತನ್ನ ಪಾಡಿಗೆ ತಾನಿರೋ ಅರ್ಥವೇ ಆಗದ ಹುಡುಗ.ಆದರೂ ಅವ ಅಂದ್ರೆ ಬದುಕ ಮೊದಲ ಪ್ರೀತಿ.

ಅವಳು - ಈಗಲೂ ಆಕಾಶದಲ್ಲೊಂದು ವಿಮಾನ ಹಾರಿದ್ರೆ ಬೆರಗುಗಣ್ಣಿನಿಂದ ಟಾಟಾ ಮಾಡೋವಷ್ಟು ಮುಗ್ಧತೆಯ ಉಳಿಸಿಕೊಂಡಿರೋ ಜೀವದ ಗೆಳತಿ.ಜೊತೆಗೆ ಅವಳಷ್ಟು ಭಾವುಕಳಲ್ಲದ,ಅವನಷ್ಟು ಪ್ರಾಕ್ಟಿಕಲ್ ಅಲ್ಲದ ಆದರೂ ಅವರಿಬ್ಬರೂ ಯಾವಾಗಲೂ ಜೊತೆಯಿರಬೇಕನ್ನೋ ನಾ.ಬೇಸರಗಳೆಲ್ಲಾ ಮರೆತುಹೋಗೋವಷ್ಟು ಪ್ರೀತಿ ಅವರಂದ್ರೆ .  

   ಮೊದ ಮೊದಲ ಆ ದಿನಗಳಲ್ಲಿ  ಮೂವರೂ ಸಂಜೆಯ ಕೆಂಪು ಕೆಂಪು ಸೂರ್ಯನ ನೋಡ್ತಾ ಅದೆಷ್ಟೋ ಕನಸುಗಳಿಗೆ ಬಣ್ಣ ತುಂಬಿದ್ದು ಇದೇ ಜಾಗದಲ್ಲೇ ಅಲ್ವಾ.ಲೆಕ್ಕ ತಪ್ಪೋವಷ್ಟು ಚಂದ ಚಂದದ ಅದೇ ಕನಸುಗಳನ್ನ ಜತನದಿಂದ ಎತ್ತಿಟ್ಟಿದ್ದೆ. ಯಾಕೋ ಮತ್ತೆ ಅವುಗಳ ಜೊತೆ ಮನಸ ಬಿಚ್ಚಿ ಮಾತನಾಡಬೇಕನಿಸ್ತಿದೆ ಅಂತಂದಿದ್ದಕ್ಕೆ  ಅವ  ನಕ್ಕು "ಅದ್ಯಾವುದೋ ಹಳೆ ಕನಸುಗಳಂತೆ,ಮಾತಂತೆ,ನೀನುಂಟು ಅವಳುಂಟು ಅವಳ ಪಕ್ಕ ಕೂತಿದ್ರೆ ನಿಂಗೆ ನನ್ನ ನೆನಪಾದ್ರೂ ಎಲ್ಲಿರುತ್ತೆ ಹೇಳು.. ಇರು ನಿನ್ನ ಎರಡನೇ ಪ್ರೀತಿಗೆ ನಾನೇ ಫೋನ್ ಮಾಡ್ತೀನಿ ಅದೆಷ್ಟು ಗಂಟೆ ಬೇಕಿದ್ರೂ ಕನಸು ಕಾಣಿ "  ಅಂತ ಆಡಿಕೊಂಡು ಎದ್ದು ಹೋಗಿಬಿಟ್ಟ.

            ಅವ ಯಾವಾಗಲೂ ಹಾಗೆಯೇ ಅಲ್ವಾ ,ನನ್ನ ಅವಳ ಕನಸ  ಪ್ರಪಂಚದೊಳಕ್ಕೆ ಅವ ಯಾವತ್ತೂ ಬರಲೇ ಇಲ್ಲ. ನಾವೇ ಬಲವಂತದಿಂದ ಜೊತೆ ಕೂರಿಸಿಕೊಳ್ತಿದ್ವಿ .  ಸ್ನೇಹಕ್ಕೆ ಜೊತೆಯಿದ್ದ ಬದುಕಿಗೆ ಜೊತೆಯಾಗ್ತೀಯ ಅಂತ ಕೇಳಿದಕ್ಕೆ ಹಮ್ ಅನ್ನೋ ಅನಿವಾರ್ಯವೇನೂ  ಇರಲಿಲ್ಲ ಆದರೂ ಕೇಳದೇ ಕೆನ್ನೆ ಹಿಂಡೋವಷ್ಟು ಸಲುಗೆ ಪಡೆದಿದ್ದ ಅವನಲ್ಲಿ ಕಳೆದು ಹೋಗಿದ್ದೆ. ಅವನ ಜೋಡಿ ಹೆಜ್ಜೆಗುರುತುಗಳಲ್ಲಿ ನಾ ಕಳೆದು ಹೋಗಿ ತುಂಬಾ ಕಾಲವೇ ಆಯ್ತು. ಆಮೇಲೆಲ್ಲಾ ಮೂವರೂ ಅವರವರ ಬದುಕ ಜೊತೆ ಬ್ಯುಸಿ ಆಗಿ ಅಗತ್ಯ ಅನಿವಾರ್ಯಗಳೆಲ್ಲಾ ಬದಲಾಗಿ ಯಾಕೋ ನಮ್ಮಗಳ ಆ ಸಂಜೆಯ ಜಾಗಕ್ಕೆ ಹೋಗೋಕೆ ಆಗಿರಲಿಲ್ಲ.  

         ಒಮ್ಮೊಮ್ಮೆ ಗೆಲುವು ಕೊಡೋ    energy ದೊಡ್ದದೆನಿಸಿದ್ರೆ ಅದೆಷ್ಟೋ ಬಾರಿ ಅದೇ ಗೆಲುವು ನಮ್ಮಿಬ್ಬರ ಮಧ್ಯ ದೊಡ್ಡದೊಂದು ಅಂತರ ಮೂಡಿಸಿ ಆ ಕಡೆ ಖುಷಿ  ಪಡೋಕೂ ಆಗದ ಪೂರ್ತಿಯಾಗಿ ಅಭಿವ್ಯಕ್ತ ಪಡಿಸೋಕೂ ಆಗದ ಅವ್ಯಕ್ತ ನಿಟ್ಟುಸಿರೊಂದನ್ನ ನನ್ನೊಳಗೇ ಇರಿಸಿಬಿಟ್ಟಿದೆ . ಬದುಕಿಗೊಂದು purpose ಸಿಗುತ್ತಿದೆ ಅನಿಸೋವಾಗಲೇ ಮನಸ್ಯಾಕೋ ಗಾಬರಿಯಾದಂತೆನಿಸಿಬಿಡುತ್ತೆ . ಅರೇ ಕ್ಷಣ ಎಲ್ಲವೂ  ಸ್ಥಬ್ದ .  

            ನೀ ತುಂಬಾ ಬದಲಾಗಿದ್ದಿ ಅಂತ ಅವನಂದಾಗ ನನ್ನದೂ ಅದೇ ಪ್ರತಿದ್ವನಿ.ಹತ್ತಿರ ಇರ್ತೀನಿ ಅಂದಾಗ ಸೇರಿಸಿಕೊಳ್ಳದೇ ದೂರ ಹೋಗ್ತೀನಿ ಅಂದಾಗ ಅದಕ್ಕೂ ಬಿಟ್ಟು ಕೊಡದೇ ಅದೊಂದು ಅಂತರವ ಇವತ್ತಿಗೂ ಕಾಯ್ದು ಕೊಂಡಿರೋ ಅವ ಈಗೀಗ ಒಗಟು. 

ಆಗೆಲ್ಲಾ ದಿನಕ್ಕೆ ನಾಲ್ಕು ಬಾರಿ ಮಾತಾಡ್ತಿದ್ದ ಅವಳು ಈಗೀಗ ವಾರಕ್ಕೊಮ್ಮೆಯೂ ಸಿಗದೇ ಕಾಯಿಸೋವಾಗ ಒಳಗೆಲ್ಲಾ ಖಾಲಿ ಖಾಲಿ . ಇಷ್ಟಕ್ಕೂ ಜೊತೆಯಿರೋ ಭಾವವಾದರೂ ಎಂತದ್ದು.ಬದುಕ ಜೊತೆ ಕಳೆದು ಹೋಗಿರೋ ಅವರ ಮೇಲೆ ಸುಮ್ಮ ಸುಮ್ಮನೇ ರೇಗಿ ನಾನೇನೋ ನಿರಾಳ ಆದರೆ  ಪ್ರೀತಿಯನ್ನೆಲ್ಲಾ ನಂಗೆ ಮಾತ್ರ ಕೊಟ್ಟು ಆಮೇಲೂ ನನ್ನೆಡೆಗೆ ಕಾಳಜಿಯಿಲ್ಲ ಅಂತ ಬೈಸಿಕೊಳ್ಳೋ ಅವರಿಬ್ಬರೂ ಪಾಪ ಅನ್ನಿಸಿಬಿಡ್ತಾರೆ . ಜೊತೆಗೆ ನಾನಲ್ಲದ ನಾ ಕೂಡಾ.

ನನ್ನರಿವಿಗೂ ಬರೋವಷ್ಟು ಮಾತು ಕಡಿಮೆ ಮಾಡಿರೋ ನಂಗೆ ವಯಸ್ಸಿಗೆ ಮೀರಿದ ಗಾಂಭೀರ್ಯ ನಿಂದು  ಅಂತ ಅವಳು ಹೇಳೋವಾಗ ಕಡಲಲ್ಲೂ ಉಳಿಯಲಾಗದ ದಡದಲ್ಲೂ ನಿಲ್ಲಲಾಗದ ತಳಮಳ ಈಗೀಗ .ಆದರೆ  ನಗು ಮರೆತು ಹೋದ ಮೇಲೂ ಅಷ್ಟೇ ಚಂದದಿ ನಗೋ ಅವರಿಬ್ಬರ ಪ್ರೀತಿಯಿದೆ ಅನ್ನೋ ಸಮಾಧಾನ . 

ಕಾಡೋ ನೋವುಗಳನ್ನ ಕೂಡಾ ಇನ್ನಿಲ್ಲದಂತೆ ಪ್ರೀತಿಸೋದನ್ನ ಕಲಿತಿದ್ದೀನಿ. 

     ಆ ತಿರುವಲ್ಲಿ ಅವಳು ನಗುತ್ತಾ ಬರ್ತಿದ್ದಾಳೆ. ಇನ್ನೇನು ಹತ್ತಿರ ಬಂದುಬಿಡ್ತಾಳೆ. ಬರೋಕೂ ಮುಂಚೆ ಬೇಸರಗಳನ್ನೆಲ್ಲಾ ಮೂಟೆಕಟ್ಟಿ ಯಾರೂ ಇಲ್ಲದಿರೋ ಏಕಾಂತದಲ್ಲಿ ಜೋಪಾನ ಮಾಡಬೇಕಿದೆ. ಯಾಕಂದ್ರೆ ನನ್ನ ಬೇಸರಗಳ ಸಣ್ಣ  ಸುಳಿವು ಸಿಕ್ಕರೂ ಇವತ್ತಿನ ಈ ಸಂಜೆಯ ಅವಳ ನಗುವಿಗೆ ರಜ.. 

ಅವ ಮತ್ತೆ ಫೋನಾಯಿಸೋಕೂ ಮುಂಚೆ ಕನಸ ವಾಸ್ತವದೊಳಕ್ಕೆ ಅವಳೊಟ್ಟಿಗೆ ಒಂದಿಷ್ಟು ಹೊತ್ತ ಕಳೆಯಬೇಕಿದೆ... 

ನಾ ನಾನಾಗಿ ಅದೇ ನೆನಪ ಜಾಗದಲ್ಲಿ .

Sunday, February 8, 2015

ಕನಸಿನ ತೇರು ಹೊರಡುವ ಹೊತ್ತಿಗೆ...              ಸಂಜೆ ಐದರ ಮನಸ್ಸದು.ಗಾಳಿ ರೆಕ್ಕೆ ಕಟ್ಟಿಕೊಂಡು ಆಗಸಕ್ಕೆ ಹಾರೋ, ಕಡಲಂಚಿನ ಕೆಂಪು  ಸೂರ್ಯನನ್ನ ನೋಡ್ತಾ ಇಳಿ ಸಂಜೆಗಿಷ್ಟು ಖುಷಿಯ ಕೊಡೋ,ಮರಳ ಮನೆ ಕಟ್ಟಿ ಕನಸುಗಳನ್ನೆಲ್ಲಾ ಅದರೊಳಕ್ಕೆ ಜೋಪಾನ ಮಾಡ್ತಿದ್ದ ದಿನಗಳವು.ಬೇಸರಗಳನ್ನೆಲ್ಲಾ ಮೂಟೆ ಕಟ್ಟಿ ಯಾರೂ ಇಲ್ಲದ ಏಕಾಂತದಲ್ಲಿ ಒಬ್ಬಳೇ ಅನುಭವಿಸೋ ಖುಷಿ ಸಿಕ್ಕಾಗಿನಿಂದ ಅವನ ಮಾತಿಲ್ಲದ ಸಂಜೆಗಳ್ಯಾಕೋ ಹಿತ ಅನ್ನಿಸೋಕೆ ಶುರುವಾಗಿತ್ತು.
ಆದರವತ್ತು ಯಾವತ್ತೂ ಜೊತೆಬರದ ಅವಳು ಕೈ ಹಿಡಿದು ಜೊತೆ ಬಂದಿದ್ದು ನನ್ನ ಅದೇ ಇಷ್ಟದ ಕೆಂಪು ಕೆಂಪು ಕಡಲ ತೀರಕ್ಕೆ.ಅವಳ ಒಂದೆಳೆಯ ಕಾಡಿಗೆ ಕಂಗಳೊಳಗೆ ಇಣುಕಿದ್ದೆ ಸುಮ್ಮನೆ.ಅಲ್ಲಿರೋ ಭಾವಗಳ್ಯಾಕೋ ಅರೇ ಕ್ಷಣ ಅಲ್ಲಿಯೆ ನಿಲ್ಲಿಸಿಬಿಟ್ಟಿದ್ದವು.ಅವಳೇ ಮಾತು ಶುರುವಿಡಲಿ ಅಂತ ಕುಳಿತಿದ್ದವಳನ್ನ ಕೇಳಿದ್ದಳು ’ನಿನ್ನಲ್ಲೊಂದೂ ಸಂಜೆಯಿರಲಿಲ್ವಾ ನನ್ನೊಟ್ಟಿಗೆ ಕಳೆಯೋಕೆ?’.
 ಸದ್ದಿಲ್ಲದೇ ಗದ್ದಲ ಎಬ್ಬಿಸಿದ್ದ ಅವಳ ಮನದ ಭಾವಗಳ ಅರಿವಿದ್ದಿದ್ದಕ್ಕೋ ಅಥವಾ ಅಲ್ಲವರ ಮಾತುಗಳು ನಂಗೆ ಸಂಬಂಧಿಸಿದ್ದಲ್ಲ ಅಂತ ಮನಕ್ಕೊಂದು ಬೇಲಿ ಹಾಕಿಕೊಂಡು ನನ್ನ ಪಾಡಿಗೆ ನಾನಿದ್ದಕ್ಕೋ ಏನೋ ಅವಳ ಪ್ರಶ್ನೆಗೆ ಉತ್ತರಿಸೋ ಮನಸ್ಸಾಗಿರಲಿಲ್ಲ ನಂಗವತ್ತು.

               ಕನಸ ತೇರು ಹೊರಡುವ ಅದೇ ಹೊತ್ತಲ್ಲೇ ಕೇಳಿದ್ದೆ ನಾನವಳಿಗೆ ನಿಂಗ್ಯಾವ ತರಹದ ಹುಡುಗ ಬೇಕೆ ಅಂತಂದು.ತೀರಾ ಇಷ್ಟಪಡೋ ಹುಡುಗ ಸಿಕ್ಕಿದ್ರೆ ಸಾಕು ಅಂತಂದ ಅವಳ ಕನಸ ರಾಜಕುಮಾರನ ಹೇಳೋವಾಗ ಅಪ್ಪಿ ಮುದ್ದಿಸಿದ್ದೆ ನಾನವಳನ್ನ.ಆದರಿವತ್ತವಳ ಕಂಗಳಲ್ಲಿ ’Im rejected'ಅನ್ನೋ ಅದೆಷ್ಟೋ ಭಾವಗಳು ಅಲುಗಾಡದೇ ಕುಳಿತಿರೋವಾಗ ಮಾತು ಬರದೆ ನಾ ಮೌನಿ.ಸುಮ್ಮನೆ ಅವರೆದುರು ಸೀರೆಯುಟ್ಟು ನಿಲ್ಲೋವಾಗ,ಎಲ್ಲರೂ ನನ್ನನ್ನೇ ನೋಡ್ತಿದಾರೆ ಅನ್ನೋ ಭಾವದೆದುರು ಜಾಸ್ತಿ ಹೊತ್ತು ನಿಲ್ಲೋಕಾಗದೇ ಒಳಗಡೆ ಹೋಗೋವಾಗ,ಇನ್ನೇನು ಅವನೇ ನನ್ನ ಹುಡುಗ ಅಂತ ಅವನ ಬಗೆಗಿಷ್ಟು ಕನಸ ಕಂಡಾದ ಮೇಲೆ ಅವರಿಂದ ಬರೋ ಉತ್ತರ,ಆಮೇಲೆ ಮತ್ತೆ ನಡೆಯೋ ಅದೇ ವಧು ಪರೀಕ್ಷೆಯ ಜೊತೆ ಅದದೇ ಭಾವಗಳು.ಹುಡುಗ ಮಾತ್ರ ಬೇರೆಯಷ್ಟೆ.ಚಿತ್ರಿಸೋಕಾಗದ ಮನೋಹಂತ ಅದು.ಬಟ್ಟೆ ಬದಲಾದಂತೆ ಮನಸ್ಸೂ ಬದಲಾಗಿದ್ದರೆ ಬದುಕೆಷ್ಟು ಚಂದವಿತ್ತಲ್ವಾ.
ಲೆಕ್ಕವಿಲ್ಲದಷ್ಟು ಬಾರಿ ನಂಗೂ ಅನಿಸಿತ್ತು ಇವತ್ತವಳ ಗೊಂದಲಗಳು ನಾಳೆ ನನ್ನವೂ ಕೂಡಾ.

                 ನಂದೆಲ್ಲಾ ನಿರ್ಧಾರಗಳನ್ನೂ ನಂಗೇ ಬಿಟ್ಟು ಬಿಡೋ ಅವರೆಡೆಗೆ ನಂದೂ ತಿರಸ್ಕಾರವಿದೆ.ಆದರೆ ಅದೇ ನಿರ್ಧಾರಗಳು ನನ್ನ ಗಟ್ಟಿ ಮಾಡಿ ಬದುಕಂದ್ರೆ ಹೀಗೆಯೇ ಅಂತೆಲ್ಲಾ ಹೇಳಿಕೊಟ್ಟು ನನಗೆ ಗೊತ್ತಿಲ್ಲದ ಒಂದಿಷ್ಟು ಚಂದದ ಖುಷಿಗಳು ಆಗಾಗ ನನ್ನದೇ ದಾರಿಯಲ್ಲಿ ಭೇಟಿಯಾಗಿದ್ದಿದೆ.ಆದರೂ ನಂಗವಳಂದ್ರೆ ಯಾವುದನ್ನೂ ಪ್ರಶ್ನಿಸದ ,ತನ್ನ ಭಾವಗಳನ್ನೆಲ್ಲಾ ತನ್ನಲ್ಲೆ ಬಚ್ಚಿಟ್ಟುಕೊಳ್ಳೋ ನಂಗೆ ತೀರಾ ವಿರುದ್ಧ ಅಂತನಿಸೋ ವ್ಯಕ್ತಿತ್ವ.
                ಕಾರಣವ ಹೇಳದೇ ತಿರಸ್ಕರಿಸಿಬಿಡೋ ಈ ಹುಡುಗರೆಡೆಗೆ ನಂಗೆ ತೀರಾ ಅನ್ನೋವಷ್ಟು ಬೇಸರ ಅಂತ ಅವಳಂದಾಗ ಕಾರಣವ ಹೇಳಿ ಎದ್ದು ಹೋದ ಅವ ನೆನಪಾಗಿಬಿಡ್ತಾನೆ ನಂಗೆ.ಆದರೂ ಚಂದದ ಖುಷಿಗಳ ತಬ್ಬಿರೋ ಬದುಕ ಒಂದು ಹಂತವ ಹತ್ತಿ  ಯಾರ ಜೊತೆಗೂ ದೊಡ್ಡದೊಂದು ಮಾತೂ ಆಡದಿರೋ ತೀರಾ ಮೃದು ಅನ್ನಿಸೋ ಅವಳನ್ನ ನೋಡೋವಾಗ ನಂಗೂ ಕಾರಣವ ಹೇಳದ ಅವರುಗಳ ಮೇಲೆ ಬೇಸರವಾಗುತ್ತೆ.ಪ್ರತಿ ಬಾರಿಯೂ ಹೊಸ ನಿರೀಕ್ಷೆಗಳ ಜೊತೆ ಅವರೆದುರು ನಿಲ್ಲೋ ಅವಳನ್ನ ನೋಡೋವಾಗ ಸಂಕಟ ಅನ್ನಿಸುತ್ತೆ ಕೂಡಾ.ಹೇಳಬೇಕಂದುಕೊಳ್ತೀನಿ ತಲೆತಗ್ಗಿಸಿ ನಿಲ್ಲೋದನ್ನ ಬಿಟ್ಟು ತಲೆಯೆತ್ತಿ ಮಾತಾಡೋದನ್ನ ಕಲಿತುಬಿಡೆ ನಿನ್ನಿಷ್ಟದ ಬದುಕಾದರೂ ದಕ್ಕೀತು ಅಂತ.ಆದರೆ ನಾ ಮಾತು ಜೋಡಿಸೋಕೂ ಮುಂಚೆಯೆ ಅವಳು ಮತ್ತೆ ಸೀರೆಯುಡೋಕೆ ನಿಂತಿರುತ್ತಾಳೆ!ಮತ್ತದೆ ಅಸಹನೆ ನನ್ನಲ್ಲಿ.
           
             ಮೊದಲಿಂದಲೂ ಹಾಗೆಯೇ-  ನಾ ಯಾವಾಗಲೂ ಗುಡುಗೋ ಗುಡುಗಾದ್ರೆ ಅವಳು ಆಗೀಗ ಸುರಿಯೋ ತುಂತುರು ಮಳೆ.ನಂಗೆ ಭೋರ್ಗರೆಯೋ ಸಮುದ್ರ ಇಷ್ಟವಾಗ್ತಿದ್ರೆ ಅವಳಿಗೆ ಪ್ರಶಾಂತ ನದಿ ಇಷ್ಟ.ಅವಳು ಯಾವಾಗಲೂ ಮನೆಯಲ್ಲೇ ಇರೋ ಅವರ ಪ್ರೀತಿಯಾದ್ರೆ ನಾ ವರ್ಷಕ್ಕೊಮ್ಮೆ ಮನೆಗೆ ಹೋಗೋ ಅತಿಥಿ.ಬದುಕ ನಿರ್ಧಾರಗಳನ್ನೆಲ್ಲಾ ಅವರ ಕೈಗಿತ್ತು ಸುಮ್ಮನಿರೋ ಅವಳೆಡೆಗೆ  ನಂಗಷ್ಟು ಸಿಟ್ಟು ಕೂಡಾ.ಆದರೂ ಯಾಕೋ ಅವಳೆನ್ನ ಭಾವಗಳ ಪ್ರತಿಬಿಂಬ.ಅವಳೆಲ್ಲಾ ತಲ್ಲಣಗಳಿಗೆ ನಾ ಅಕ್ಷರವಾಗಿಬಿಟ್ರೆ ನನ್ನೆಲ್ಲಾ  ಬೇಸರಗಳಿಗೆ ಅವಳು ಕಿವಿಯಾಗಿಬಿಡ್ತಾಳೆ.ಅವಳ ಕನಸುಗಳನ್ನೆಲ್ಲಾ ನಾ ಮನೆಯಲ್ಲಿ ಜಗಳ ಮಾಡಿಯಾದ್ರೂ ಅವಳ ಕೈಗಿತ್ತು ಹೋಗ್ತೀನಿ ಆದ್ರೆ ಮತ್ತೆ ಮನೆಗೆ ಬರೋವಾಗ ಅವಳ ಕೈ ಅವರ ನಿರ್ಧಾರಗಳ ಜೊತೆ ಬೆರೆತು ಹೋಗಿರುತ್ತೆ.ನೀ ಬಿಡು ಖುಷಿಯಾಗಿದ್ದೀಯ ಬೇಸರಗಳೆಲ್ಲಾ ನಂದು ಮಾತ್ರ ಅಂತನ್ನೋ ಅವಳೆಡೆಗೆ ನನ್ನದು ನಂಗೂ ಅರ್ಥವಾಗದ ನೋಟ.
ಆದರೂ ನಾನವಳ ಭಾವಲೋಕದ ಪ್ರಶ್ನೆಗಳಿಗೆ ತೀರಾ ಪ್ರಾಕ್ಟಿಕಲ್ ಉತ್ತರ ಕೊಟ್ಟುಬಿಡ್ತೀನೇನೋ ಅನ್ನೋ ಭಯ ಶುರುವಾಗಿದೆ.ಅವಳ ಗೊಂದಲಗಳು ನನ್ನ ಸೋಕದಿರಲಿ ಅನ್ನೋ ಕಾರಣಕ್ಕೋ ಏನೋ ನಾನವಳ ಜೊತೆ ಮಾತಾಡದೇ ಇದ್ದಿದ್ದು .ಆದರವತ್ತು ನನ್ನಿಷ್ಟದ ಕಡಲ ಅಂಚಲ್ಲಿ ಅವಳು ಕೇಳಿದ್ದ ಪ್ರಶ್ನೆಯಿದೆಯಲ್ಲ ನನ್ನೆಡೆಗೆ ತೀರಾ ಅನ್ನೋವಷ್ಟು ಬೇಸರದ ಭಾವವೊಂದನ್ನ ಅಚ್ಚೊತ್ತಿ ಮರೆಯಾಗಿಬಿಡ್ತು.
ನನ್ನಲ್ಲೂ ಒಂದು ಸಂಜೆಯಿತ್ತಾ ಅವಳ ಜೊತೆ ಕಳೆಯೋಕೆ?

ಆದರೂ ಯಾಕೋ ಕನಸಿನ ತೇರು ಹೊರಡುವ ಹೊತ್ತಿಗೆ ಕೆನ್ನೆಯ ಮೇಲೆ ಕಣ್ಣೀರು.Sunday, December 14, 2014

ಕಾತರಿಸುವ....ಕಣ್ಣು ತೋಯಿಸಿಕೊಳ್ಳುವ....

ಅರೆರೆ ಹೌದಲ್ವಾ ಮತ್ತೊಂದು ಡಿಸೆಂಬರ್ ಬಂದೇ ಬಿಟ್ಟಿದೆ.ಇಬ್ಬನಿ ತುಂಬಿದ ಬೆಳಗು, ಕನಸುಗಳನ್ನೂ ಹೆಪ್ಪುಗಟ್ಟಿಸೋವಷ್ಟು ಚಳಿ,ಸಾಲು ಸಾಲು ಪರೀಕ್ಷೆಗಳು,ಯಾವಾಗಲೂ surprise package ಅನ್ನಿಸೋ ಸಾಂತಾಕ್ಲಾಸ್, ಪಕ್ಕದ ಮನೆಯ ಮುದ್ದು ಮುದ್ದು ತಮ್ಮಂದಿರ ಜೊತೆ ನಿಂತು ಅಲಂಕರಿಸೋ ಕ್ರಿಸ್ ಮಸ್ ಗಿಡ,ಮನೆಯೆದುರಿನ ಹಳದಿ ಗುಲ್ಮೊಹರ್ ಗಿಡ ಮತ್ತು ತಣ್ಣನೆಯ ಗಾಳಿ ಮೈ ಸೋಕೋವಾಗ ನೆನಪಾಗೋ ಅವ!

ಸದ್ದಿಲ್ಲದೇ ಮುಗಿಯೋವಾಗಿನ ವರ್ಷದ ಮೆಲುಕು,ಒಂದಿಷ್ಟು ಅಳು ,ಜೊತೆಗಿಷ್ಟು ನಗು.... ಡಿಸೆಂಬರ್ ಅಂದ್ರೆ ಕಾಡೋದಿಷ್ಟು.ಕನಸ ಮಣಿಗಳನ್ನೆಲ್ಲಾ ಭಾವಕ್ಕೆ ಪೋಣಿಸೋ ಭರದಲ್ಲಿ ನನ್ನೊಳಗಿರೋ ಪುಟ್ಟ ಹುಡುಗಿ ಎಲ್ಲಿ ಕಳೆದು ಹೋಗಿದ್ದಾಳೆ ಅಂತ ಹುಡುಕ್ತಿದೀನಿ...ಕಾಡೋ ನೋವುಗಳು ಕೂಡ ಒಮ್ಮೊಮ್ಮೆ ಇನ್ನಿಲ್ಲದಂತೆ ಪ್ರೀತಿಸಿಬಿಡುತ್ತೆ. ಯಾವಾಗಲೂ ನನ್ನೀ ಪಕ್ಕದ ಮನೆಯ ತಮ್ಮಂದಿರನ್ನ ನೋಡಿದ್ರೆ ತುಸು ಜಾಸ್ತಿಯೇ ಸಂಕಟವಾಗುತ್ತೆ.ದೂರದ ಕಾಫಿ ಎಸ್ಟೇಟ್ ಗೋ ಅಥವಾ ಕೆಲಸಕ್ಕೆ ಹೋಗೋ ದೊಡ್ಡವರು ಈ ಪುಟ್ಟ ಪುಟ್ಟ ಕಂದಮ್ಮಗಳನ್ನ ರೆಸಿಡೆನ್ಷಿಯಲ್ ಸ್ಕೂಲ್ ಅನ್ನೋ ತಲೆಪಟ್ಟಿಗೆ ತಂದು ಸೇರಿಸಿ ಬಿಟ್ಟು ಹೋಗಿಬಿಡ್ತಾರಲ್ವಾ.ಆದರೆ ಅವರ ಬದುಕ ಅನಿವಾರ್ಯತೆಗಳು ಏನಿವೆಯೋ ಏನೋ..ಅದನ್ನ ಪ್ರಶ್ನಿಸೋದು ತಪ್ಪಾದೀತು. ಆಮೇಲೆ ಎರಡು ವಾರಕ್ಕೊಮ್ಮೆ ಬಂದು ನೋಡಿಕೊಂಡು ಹೋಗೋವಾಗ ಅವರು ಅಳೋದನ್ನ ನೋಡೋಕಾಗದೇ ನಾನೇ ಎಷ್ಟೋ ಸಲ ಹೋಗಿ ತಬ್ಬಿಕೊಂಡಿದ್ದಿದೆ. ಅಪ್ಪ ಅಮ್ಮಂಗಾಗಿ ಕಾತರಿಸುವ ಅವರನ್ನ ನೋಡೋವಾಗಲೆಲ್ಲ ನಂಗೂ ದೂರದಲ್ಲಿರೋ ಅವರ ನೆನಪಾಗಿಬಿಡುತ್ತೆ.ಹಹ್! ಮತ್ತೆ ನಾನೂ ಕಣ್ಣು ತೋಯಿಸಿಕೊಂಡುಬಿಡ್ತೀನಿ.

ಇವರುಗಳ ಜೊತೆ ಕೂತು ಆಟ ಆಡಿ,ನಕ್ಕು ಅವರದಿಷ್ಟು ಪ್ರಶ್ನೆಗಳಿಗೆ ಉತ್ತರಿಸೋಕೆ ತಡಕಾಗಿ ಕೊನೆಗೂ ಮನೆಗೆ ಬಂದ್ರೆ ಅವತ್ತಿಗೊಂದು ನಿರಾಳತೆ ನಂಗೆ.ಒಂದು ಭಾನುವಾರವೂ ಮನೆಯಲ್ಲಿರದ ನನ್ನ ಈಗೀಗಿನ ಭಾನುವಾರಗಳೆಲ್ಲಾ ಮನೆಯಲ್ಲಿ ಕೂತು ಯಾವುದೋ ಕ್ರಾಫ್ಟ್ ಮಾಡೋದ್ರಲ್ಲೋ ,ಗಾಳಿಪಟ ಮಾಡೋದ್ರಲ್ಲೋ,ಜೊತೆ ಕೂತು ಆಟ ಆಡೋದ್ರಲ್ಲೋ ಸದ್ದಿಲ್ಲದೇ ಕಳೆದು ಹೋಗ್ತಿದೆ.ವರ್ಷದ ಹಿಂದಿನ ಇದೇ ದಿನಗಳಲ್ಲಿ ಅಲ್ವಾ ನಂಗೆ ಈ ಪುಟ್ಟ ಪುಟ್ಟ ಗೆಳೆಯರು ಜೊತೆ ಸಿಕ್ಕಿದ್ದು ,ಇವರುಗಳ ಮಾತುಗಳ ಜೊತೆ ನಾ ಕಳೆದೇ ಹೋಗಿದ್ದು...ಇಲ್ಲೊಬ್ಬ ಪುಟ್ಟ ಗೆಳೆಯನಿದ್ದಾನೆ ನಂಗೆ.ಅವನೆದುರು ಎದ್ದು ನಿಂತು ಯಾವುದೋ ಆಟ ಆಡೋಕೆ ಅಥವಾ ಏನಾದರೂ ಮಾಡೋಕೆ ತುಸು ಯೋಚಿಸ್ತೀನಿ ನಾನು.ಯಾಕಂದ್ರೆ ಒಮ್ಮೆಯೂ ಎದ್ದುನಿಲ್ಲೋಕಾಗದ ಅಸಹಾಯಕೆ ಅವನದಾಗಿರೋವಾಗ ಸಂಕಟವಾಗುತ್ತೆ ನಂಗೆ.ಅವನೋ ತೀರಾ mature ಆಗಿ ’ನಂಗೇನೂ ಬೇಸರವಿಲ್ಲ ಅಕ್ಕಾ,ನೀವು ಅವರೆಲ್ಲರ ಜೊತೆ ಆಟ ಆಡಿದ್ರೆ ನಾ ನೋಡಿ ಖುಷಿಪಡ್ತೀನಿ,ನೀವು ಎದ್ದು ನಿಂತು ಆಟ ಆಡಿ’ ಅಂತಾನೆ! ನನ್ನೊಳಗಿರೋ ತಲ್ಲಣಗಳೆಲ್ಲಾ ಮತ್ತೆ ಕಣ್ಣಂಚ ಕೊನೆಯಲ್ಲಿ ಜಾರಿ ಬಿಡುತ್ತೆ. ಸುಮ್ಮನೆ ಕೂರಲೇಬೇಕಂದ್ರೆ ನನ್ನೊಳಗೂ ಎಷ್ಟು ಕಾರಣಗಳಿವೆ ಅಲ್ವಾ...

ಎಷ್ಟು ಪ್ರಬುದ್ಧತೆಯ ಮಾತಾಡ್ತಾನೆ ಅಲ್ವಾ.

ಬೇಕಿತ್ತು ನಂಗೂ ಇಂತಹುದ್ದೇ ಒಂದು ಸಾಂಗತ್ಯ.ಬಿಡುವಿನ ಸಮಯದಲ್ಲಿ ಅವರಿಗೆ ಪಾಟ ಮಾಡೋಕೆ ಹೋಗಿ ಅವರಿಗಿಂತ ನಾ ಕಲಿತಿದ್ದೇ ಜಾಸ್ತಿಯಿದೆ ಒಂದು ವರ್ಷದಲ್ಲಿ.ಮತ್ತೆ ಮತ್ತೆ ಎದ್ದುನಿಲ್ಲಬೇಕನ್ನೋ ಭಾವವ ನನ್ನೆಡೆಗೆ ರವಾನಿಸಿಬಿಡ್ತಾನೆ ಅವ.ನೋವೇ ಇಲ್ಲದವಳಂತೆ ನಗೋದನ್ನ ಕಲಿತಿದ್ದೀನಿ.ರಾತ್ರಿಯಾಗಸಕ್ಕೆ ಮುಖ ಮಾಡಿದ್ರೆ ಇವರು ಕೇಳೋ ಅದೆಷ್ಟೋ ಪ್ರಶ್ನೆಗಳ ನೆನಪಿಸಿಕೊಂಡು ನನ್ನೊಳಗೆ ನಕ್ಕುಬಿಡ್ತೀನಿ.ತಾರೆಗಳ ಅಂಗಳದಲ್ಲಿ ಸುಮ್ಮ ಸುಮ್ಮನೆ ಅಲೆದಾಡೋ ಖುಷಿ ಸಿಕ್ಕಿದೆ.ಜೊತೆಗೆ ಅವರ ಪ್ರೀತಿಯ ’ಅಕ್ಕಾ’ ನನ್ನೆಲ್ಲಾ ಧಾವಂತಗಳ ಬದಿಗಿಟ್ಟು ನೆಮ್ಮದಿಯ ಸಂಜೆಯೊಂದನ್ನ ಕಳೆಯೋದನ್ನ ಹೇಳಿಕೊಟ್ಟಿದೆ.

ಖುಷಿಯಿದೆ ನಂಗೆ ಇವತ್ತಿನ ದಿನಗಳ ಬಗೆಗೆ.

ಮತ್ತೆ ಮನದಲ್ಲಿ ಕಂದನ ಕನವರಿಕೆ.ಅಲ್ಯಾರೋ ಹುಡುಗ ಹೇಳದೇ ಕೇಳದೆ ಇಷ್ಟವಾಗ್ತಾನೆ.ಇನ್ಯಾರೋ ಆತ್ಮೀಯ ಕಾರಣವನ್ನೂ ಹೇಳದೆ ಎದ್ದು ಹೋಗಿಬಿಡ್ತಾನೆ.ಯಾಕೋ ತಿರುವುಗಳ ನೋಡಿದಾಗಲೆಲ್ಲಾ ಎಲ್ಲಿ ಬಿದ್ದುಬಿಡ್ತೀನೇನೋ ಅನ್ನೋ ಭಯ ಶುರುವಾಗುತ್ತೆ...ಆದರೂ ಹೊಸ ದಾರಿಯ ನೋಡ ಬೇಕಂದ್ರೆ ಆ ತಿರುವ ದಾಟಲೇಬೇಕಲ್ವಾ?

ಮತ್ತೆ ಮಳೆಯಾಗಿದೆ ನನ್ನೂರಲ್ಲಿ.ಇನ್ನೇನು ಕಳೆದುಹೋಗ್ತಿರೋ ವರ್ಷವೊಂದರ ನೆನಪು ಈ ಮಳೆಗೆ ಮತ್ತೆ ರಾಡಿಯಾಗಿದೆ..ಹರವಿಡೋಣ ಅಂದ್ರೆ ಎಲ್ಲವೂ ಒದ್ದೆ ಒದ್ದೆ.

ಸ್ವಲ್ಪ ಒಣಗಲಿ ಅವೆಲ್ಲಾ ಅಷ್ಟರೊಳಗೆ ನಾ ನನ್ನ ಪುಟ್ಟ ಗೆಳೆಯರ ಜೊತೆಗೊಂದು ಐಸ್ ಕ್ರೀಮ್ ತಿಂದು ಬರ್ತೀನಿ. ಉಳಿಸಿಕೊಳ್ಳಬೇಕಿದೆ ಮುಂದಿನ ಮಳೆಗೆ ಜೊತೆ ಕೂತು ಐಸ್ ಕ್ರೀಮ್ ತಿನ್ನೋಣ ಅನ್ನೋ ಮಾತನ್ನ!

ಬಣ್ಣ ಬಣ್ಣದ ಆಕಾಶ ಬುಟ್ಟಿಗಳನ್ನ ತಂದು ಮನೆಯೆದುರು ಅಲಂಕರಿಸಿ ಕತ್ತಲಲ್ಲಿನ ಆ ಬಣ್ಣಗಳ ನೋಡಿ ಸಂಭ್ರಮಿಸೋದಿನ್ನೂ ಬಾಕಿಯಿದೆ.ಇನ್ನೇನಿದ್ದರೂ ಹೊಸ ಪುಟ... ಹೊಸ ಡೈರಿ... ಹೊಸ ಪೆನ್ನು!