Friday, April 10, 2015

ದಕ್ಕೋ ನೆನಪುಗಳ ಜಾಗಕ್ಕೆ...


         ಒಮ್ಮೊಮ್ಮೆ ಕೊನೆಯೇ ಇಲ್ಲದಂತೆ ಹರಡಿರೋ ಚುಕ್ಕೆಗಳ ವಿಸ್ತಾರ. ಇನ್ನೊಮ್ಮೆ ಉದ್ದಕೂ ಹಗಲು. ಕೆಳಗೆ ಮೇಲೆ ಬದಿಯಲ್ಲಿ ಎಲ್ಲೆಲ್ಲೂ ಆಕಾಶ. ಇತ್ತೀಚಿಗೆ ಮತ್ತೆ ಮೊದಲಿನಿಂದ ಬದುಕಬೇಕನಿಸ್ತಿದೆ ನಂಗೆ. ಯಾರನ್ನೂ ಕೇಳದೇ  ಬರಿಯ ನಾ ಮಾತ್ರ ಅತೀ ಅನ್ನಿಸೋ ನನ್ನದೇ ಭಾವಗಳ ಜೊತೆ ಅರೆಕ್ಷಣ ಕಳೆದುಹೊಗಬೇಕನಿಸ್ತಿದೆ. 

ಅದಕ್ಕೇ ಏನೋ ತೀರಾ ಇಷ್ಟ ಪಡೋ ಅದೆಷ್ಟೋ ನೆನಪುಗಳ ಇರಿಸಿಕೊಂಡಿರೋ ಅದೇ ಜಾಗ ಮತ್ತೆ ಮತ್ತೆ ಕಾಡ್ತಿದೆ. 

        ಅವನೊಬ್ಬನಿದ್ದಾನೆ. ಬದುಕಲ್ಲಿ ಯಾವ ಭಾವೂಕತೆಗಳಿಗೂ ಜಾಗ ಕೊಡದೆ ತನ್ನೊಳಗೆ ಯಾರನ್ನೂ ಬಿಟ್ಟುಕೊಳ್ಳದೇ ತನ್ನ ಪಾಡಿಗೆ ತಾನಿರೋ ಅರ್ಥವೇ ಆಗದ ಹುಡುಗ.ಆದರೂ ಅವ ಅಂದ್ರೆ ಬದುಕ ಮೊದಲ ಪ್ರೀತಿ.

ಅವಳು - ಈಗಲೂ ಆಕಾಶದಲ್ಲೊಂದು ವಿಮಾನ ಹಾರಿದ್ರೆ ಬೆರಗುಗಣ್ಣಿನಿಂದ ಟಾಟಾ ಮಾಡೋವಷ್ಟು ಮುಗ್ಧತೆಯ ಉಳಿಸಿಕೊಂಡಿರೋ ಜೀವದ ಗೆಳತಿ.ಜೊತೆಗೆ ಅವಳಷ್ಟು ಭಾವುಕಳಲ್ಲದ,ಅವನಷ್ಟು ಪ್ರಾಕ್ಟಿಕಲ್ ಅಲ್ಲದ ಆದರೂ ಅವರಿಬ್ಬರೂ ಯಾವಾಗಲೂ ಜೊತೆಯಿರಬೇಕನ್ನೋ ನಾ.ಬೇಸರಗಳೆಲ್ಲಾ ಮರೆತುಹೋಗೋವಷ್ಟು ಪ್ರೀತಿ ಅವರಂದ್ರೆ .  

   ಮೊದ ಮೊದಲ ಆ ದಿನಗಳಲ್ಲಿ  ಮೂವರೂ ಸಂಜೆಯ ಕೆಂಪು ಕೆಂಪು ಸೂರ್ಯನ ನೋಡ್ತಾ ಅದೆಷ್ಟೋ ಕನಸುಗಳಿಗೆ ಬಣ್ಣ ತುಂಬಿದ್ದು ಇದೇ ಜಾಗದಲ್ಲೇ ಅಲ್ವಾ.ಲೆಕ್ಕ ತಪ್ಪೋವಷ್ಟು ಚಂದ ಚಂದದ ಅದೇ ಕನಸುಗಳನ್ನ ಜತನದಿಂದ ಎತ್ತಿಟ್ಟಿದ್ದೆ. ಯಾಕೋ ಮತ್ತೆ ಅವುಗಳ ಜೊತೆ ಮನಸ ಬಿಚ್ಚಿ ಮಾತನಾಡಬೇಕನಿಸ್ತಿದೆ ಅಂತಂದಿದ್ದಕ್ಕೆ  ಅವ  ನಕ್ಕು "ಅದ್ಯಾವುದೋ ಹಳೆ ಕನಸುಗಳಂತೆ,ಮಾತಂತೆ,ನೀನುಂಟು ಅವಳುಂಟು ಅವಳ ಪಕ್ಕ ಕೂತಿದ್ರೆ ನಿಂಗೆ ನನ್ನ ನೆನಪಾದ್ರೂ ಎಲ್ಲಿರುತ್ತೆ ಹೇಳು.. ಇರು ನಿನ್ನ ಎರಡನೇ ಪ್ರೀತಿಗೆ ನಾನೇ ಫೋನ್ ಮಾಡ್ತೀನಿ ಅದೆಷ್ಟು ಗಂಟೆ ಬೇಕಿದ್ರೂ ಕನಸು ಕಾಣಿ "  ಅಂತ ಆಡಿಕೊಂಡು ಎದ್ದು ಹೋಗಿಬಿಟ್ಟ.

            ಅವ ಯಾವಾಗಲೂ ಹಾಗೆಯೇ ಅಲ್ವಾ ,ನನ್ನ ಅವಳ ಕನಸ  ಪ್ರಪಂಚದೊಳಕ್ಕೆ ಅವ ಯಾವತ್ತೂ ಬರಲೇ ಇಲ್ಲ. ನಾವೇ ಬಲವಂತದಿಂದ ಜೊತೆ ಕೂರಿಸಿಕೊಳ್ತಿದ್ವಿ .  ಸ್ನೇಹಕ್ಕೆ ಜೊತೆಯಿದ್ದ ಬದುಕಿಗೆ ಜೊತೆಯಾಗ್ತೀಯ ಅಂತ ಕೇಳಿದಕ್ಕೆ ಹಮ್ ಅನ್ನೋ ಅನಿವಾರ್ಯವೇನೂ  ಇರಲಿಲ್ಲ ಆದರೂ ಕೇಳದೇ ಕೆನ್ನೆ ಹಿಂಡೋವಷ್ಟು ಸಲುಗೆ ಪಡೆದಿದ್ದ ಅವನಲ್ಲಿ ಕಳೆದು ಹೋಗಿದ್ದೆ. ಅವನ ಜೋಡಿ ಹೆಜ್ಜೆಗುರುತುಗಳಲ್ಲಿ ನಾ ಕಳೆದು ಹೋಗಿ ತುಂಬಾ ಕಾಲವೇ ಆಯ್ತು. ಆಮೇಲೆಲ್ಲಾ ಮೂವರೂ ಅವರವರ ಬದುಕ ಜೊತೆ ಬ್ಯುಸಿ ಆಗಿ ಅಗತ್ಯ ಅನಿವಾರ್ಯಗಳೆಲ್ಲಾ ಬದಲಾಗಿ ಯಾಕೋ ನಮ್ಮಗಳ ಆ ಸಂಜೆಯ ಜಾಗಕ್ಕೆ ಹೋಗೋಕೆ ಆಗಿರಲಿಲ್ಲ.  

         ಒಮ್ಮೊಮ್ಮೆ ಗೆಲುವು ಕೊಡೋ    energy ದೊಡ್ದದೆನಿಸಿದ್ರೆ ಅದೆಷ್ಟೋ ಬಾರಿ ಅದೇ ಗೆಲುವು ನಮ್ಮಿಬ್ಬರ ಮಧ್ಯ ದೊಡ್ಡದೊಂದು ಅಂತರ ಮೂಡಿಸಿ ಆ ಕಡೆ ಖುಷಿ  ಪಡೋಕೂ ಆಗದ ಪೂರ್ತಿಯಾಗಿ ಅಭಿವ್ಯಕ್ತ ಪಡಿಸೋಕೂ ಆಗದ ಅವ್ಯಕ್ತ ನಿಟ್ಟುಸಿರೊಂದನ್ನ ನನ್ನೊಳಗೇ ಇರಿಸಿಬಿಟ್ಟಿದೆ . ಬದುಕಿಗೊಂದು purpose ಸಿಗುತ್ತಿದೆ ಅನಿಸೋವಾಗಲೇ ಮನಸ್ಯಾಕೋ ಗಾಬರಿಯಾದಂತೆನಿಸಿಬಿಡುತ್ತೆ . ಅರೇ ಕ್ಷಣ ಎಲ್ಲವೂ  ಸ್ಥಬ್ದ .  

            ನೀ ತುಂಬಾ ಬದಲಾಗಿದ್ದಿ ಅಂತ ಅವನಂದಾಗ ನನ್ನದೂ ಅದೇ ಪ್ರತಿದ್ವನಿ.ಹತ್ತಿರ ಇರ್ತೀನಿ ಅಂದಾಗ ಸೇರಿಸಿಕೊಳ್ಳದೇ ದೂರ ಹೋಗ್ತೀನಿ ಅಂದಾಗ ಅದಕ್ಕೂ ಬಿಟ್ಟು ಕೊಡದೇ ಅದೊಂದು ಅಂತರವ ಇವತ್ತಿಗೂ ಕಾಯ್ದು ಕೊಂಡಿರೋ ಅವ ಈಗೀಗ ಒಗಟು. 

ಆಗೆಲ್ಲಾ ದಿನಕ್ಕೆ ನಾಲ್ಕು ಬಾರಿ ಮಾತಾಡ್ತಿದ್ದ ಅವಳು ಈಗೀಗ ವಾರಕ್ಕೊಮ್ಮೆಯೂ ಸಿಗದೇ ಕಾಯಿಸೋವಾಗ ಒಳಗೆಲ್ಲಾ ಖಾಲಿ ಖಾಲಿ . ಇಷ್ಟಕ್ಕೂ ಜೊತೆಯಿರೋ ಭಾವವಾದರೂ ಎಂತದ್ದು.ಬದುಕ ಜೊತೆ ಕಳೆದು ಹೋಗಿರೋ ಅವರ ಮೇಲೆ ಸುಮ್ಮ ಸುಮ್ಮನೇ ರೇಗಿ ನಾನೇನೋ ನಿರಾಳ ಆದರೆ  ಪ್ರೀತಿಯನ್ನೆಲ್ಲಾ ನಂಗೆ ಮಾತ್ರ ಕೊಟ್ಟು ಆಮೇಲೂ ನನ್ನೆಡೆಗೆ ಕಾಳಜಿಯಿಲ್ಲ ಅಂತ ಬೈಸಿಕೊಳ್ಳೋ ಅವರಿಬ್ಬರೂ ಪಾಪ ಅನ್ನಿಸಿಬಿಡ್ತಾರೆ . ಜೊತೆಗೆ ನಾನಲ್ಲದ ನಾ ಕೂಡಾ.

ನನ್ನರಿವಿಗೂ ಬರೋವಷ್ಟು ಮಾತು ಕಡಿಮೆ ಮಾಡಿರೋ ನಂಗೆ ವಯಸ್ಸಿಗೆ ಮೀರಿದ ಗಾಂಭೀರ್ಯ ನಿಂದು  ಅಂತ ಅವಳು ಹೇಳೋವಾಗ ಕಡಲಲ್ಲೂ ಉಳಿಯಲಾಗದ ದಡದಲ್ಲೂ ನಿಲ್ಲಲಾಗದ ತಳಮಳ ಈಗೀಗ .ಆದರೆ  ನಗು ಮರೆತು ಹೋದ ಮೇಲೂ ಅಷ್ಟೇ ಚಂದದಿ ನಗೋ ಅವರಿಬ್ಬರ ಪ್ರೀತಿಯಿದೆ ಅನ್ನೋ ಸಮಾಧಾನ . 

ಕಾಡೋ ನೋವುಗಳನ್ನ ಕೂಡಾ ಇನ್ನಿಲ್ಲದಂತೆ ಪ್ರೀತಿಸೋದನ್ನ ಕಲಿತಿದ್ದೀನಿ. 

     ಆ ತಿರುವಲ್ಲಿ ಅವಳು ನಗುತ್ತಾ ಬರ್ತಿದ್ದಾಳೆ. ಇನ್ನೇನು ಹತ್ತಿರ ಬಂದುಬಿಡ್ತಾಳೆ. ಬರೋಕೂ ಮುಂಚೆ ಬೇಸರಗಳನ್ನೆಲ್ಲಾ ಮೂಟೆಕಟ್ಟಿ ಯಾರೂ ಇಲ್ಲದಿರೋ ಏಕಾಂತದಲ್ಲಿ ಜೋಪಾನ ಮಾಡಬೇಕಿದೆ. ಯಾಕಂದ್ರೆ ನನ್ನ ಬೇಸರಗಳ ಸಣ್ಣ  ಸುಳಿವು ಸಿಕ್ಕರೂ ಇವತ್ತಿನ ಈ ಸಂಜೆಯ ಅವಳ ನಗುವಿಗೆ ರಜ.. 

ಅವ ಮತ್ತೆ ಫೋನಾಯಿಸೋಕೂ ಮುಂಚೆ ಕನಸ ವಾಸ್ತವದೊಳಕ್ಕೆ ಅವಳೊಟ್ಟಿಗೆ ಒಂದಿಷ್ಟು ಹೊತ್ತ ಕಳೆಯಬೇಕಿದೆ... 

ನಾ ನಾನಾಗಿ ಅದೇ ನೆನಪ ಜಾಗದಲ್ಲಿ .

12 comments:

 1. " ಲೆಕ್ಕ ತಪ್ಪೋವಷ್ಟು ಚಂದ ಚಂದದ ಅದೇ
  ಕನಸುಗಳನ್ನ ಜತನದಿಂದ ಎತ್ತಿಟ್ಟಿದ್ದೆ. ಯಾಕೋ ಮತ್ತೆ
  ಅವುಗಳ ಜೊತೆ ಮನಸ ಬಿಚ್ಚಿ ಮಾತನಾಡಬೇಕನಿಸ್ತಿದೆ.. "
  ಒಮ್ಮೆಮ್ಮೆ ನನ್ನೆಲ್ಲಾ ಭಾವಗಳನ್ನ ನಿಂಗೆ ರವಾನಿಸಿ ನೀ ಅವನ್ನೆಲ್ಲಾ ಪದದ ರೂಪಕ್ಕಿಳಿಸಿದ್ದಿಯೇನೋ ಎಂಬ ಅನುಮಾನ ಕಣೇ ನನ್ನೊಳಗೆ.. :*

  ReplyDelete
  Replies
  1. ಲಹರೀ ನಿನ್ನದೆಲ್ಲಾ ಭಾವಗಳು ನನ್ನದೇ ಅಲ್ವೇನೆ ..
   ಮೊದಲ ಸಲ ನಿರುಪಾಯಕ್ಕೆ ಬಂದಿದ್ದೀಯ ಅನ್ನೋ ಖುಷಿ ಜಾಸ್ತಿಯೇ ಇದೆ.
   ಜೊತೆಗೆ ಅದದೇ ಭಾವಗಳ ಜೊತೆಗಿನ ಮುದ್ದು ಮುದ್ದು ಗೆಳೆತನ ಒಂದು ಸಿಕ್ಕ ದೊಡ್ಡದೊಂದು ಪ್ರೀತಿಯಿದೆ.
   ಮಾತಲ್ಲಿ ಹೇಳೋಕಾಗದ ಭಾವಗಳಿಗೆಲ್ಲಾ ಇಳಿ ಸಂಜೆಯಲ್ಲಿ ಕೂತು ಬಣ್ಣ ತುಂಬೋಣ :)
   ಭಾವಗಳ ತೇರಲ್ಲಿ ಮತ್ತೆ ಮತ್ತೆ ಜೋತೆಯಾಗ್ತೀನಿ

   Delete
 2. 'ಬದುಕಿಗೊಂದು purpose ಸಿಗುತ್ತಿದೆ ಅನಿಸೋವಾಗಲೇ ಮನಸ್ಯಾಕೋ ಗಾಬರಿಯಾದಂತೆನಿಸಿಬಿಡುತ್ತೆ' ವಾಸ್ತವಕೆ ಹಿಡಿದ ಕನ್ನಡಿ.

  ReplyDelete
  Replies
  1. ಬದರಿ ಸರ್ ... ಬ್ಲಾಗ್ ಕಾಣೆಯಾಗಿದೆ ಅಂತ ಹೆಸರು ಹಾಕಿ ಮತ್ತೆ ಬರೆಯೋಕೆ ಕೂರಿಸಿದಕ್ಕೆ ಧನ್ಯವಾದ.
   ಯಾವಾಗಲೂ ಎಲ್ಲರ ಬ್ಲಾಗ್ ಅನ್ನೂ ಪ್ರೀತಿಯಿಂದ ಓದೋ ನಿಮ್ಮನ್ನ ನೋಡೋವಾಗ ಖುಷಿಯಾಗುತ್ತೆ ನಂಗೆ.
   ಭಾವಗಳ ವಿನಿಮಯದಲ್ಲಿ ಮತ್ತೆ ಮತ್ತೆ ಸಿಕ್ತೀನಿ

   Delete
 3. ​ ಈ ಪುಟ್ಟ ಮುಗ್ಧ ಹುಡುಗಿಯ ಮನಸಿನೊಳಗೆ ಎಷ್ಟೆಲ್ಲಾ ಭಾವನೆಗಳ , ಕನಸುಗಳ ಬಚ್ಚಿಟ್ಟುಕೊಂಡಿದೆ ಎನ್ನೋದೇ ಅಚ್ಚರಿ . ನಿಜಕ್ಕೂ ನಿನ್ನ ಭಾವನಾ ಲೋಕದೊಳಗೆ ಹೊಕ್ಕಿ ಬಂದೆ . ಖುಷಿಯಾಯ್ತು ಪುಟ್ಟಿ ಸುಂದರ ಬರಹ .

  ReplyDelete
  Replies
  1. ಅಣ್ಣ ಧನ್ಯವಾದ ಭಾವವೊಂದನ್ನ ಓದಿದ್ದಕ್ಕೆ .ತುಂಬಾ ದಿನಗಳ ನಂತರ ನಿರುಪಾಯಕ್ಕೆ ಬಂದ್ರಿ ನೀವು
   ಭಾವಗಳ ವಿನಿಮಯದಲ್ಲಿ ಮತ್ತೆ ಜೊತೆ ಸಿಕ್ತೀನಿ ..

   Delete
 4. ಜೀವನದಲ್ಲಿ ಪ್ರವಾಹ ತುಂಬಿ ಹರಿಯುವ ನದಿಯ ದಡದಲ್ಲಿ ಬಂದು ನಿಂತು ಬಿಡುತ್ತೇವೆ. ಅಲ್ಲಿ ಸಿಕ್ಕುವ ಸಹಪಯಣಿಗರು ಅಣ್ಣನಾಗಿ, ತಮ್ಮನಾಗಿ, ತಂದೆಯಾಗಿ, ಅಮ್ಮನಾಗಿ, ಅಕ್ಕನಾಗಿ, ತಂಗಿಯಾಗಿ,ಕೆಲವೊಮ್ಮೆ ಪ್ರಿಯಕರ ಅಥವಾ ಪ್ರಿಯತಮೆ, ಗೆಳೆಯ ಗೆಳತಿ ಏನೂ ಬೇಕಾದರೂ ಅಥವಾ ಯಾರೂ ಬೇಕಾದರೂ ಆಗಬಹುದು. ಆ ಕ್ಷಣ ಅಥವಾ ಆ ಘಳಿಗೆಯನ್ನು ಆಸ್ವಾದಿಸಬೇಕು, ಅಯ್ಯೋ ಪ್ರವಾಹ ತುಂಬಿದ ನದಿ ಮೊದಲು ದಾಟಿ ನಂತರ ಮಾತಾಡುತ್ತೇನೆ, ಅಥವಾ ಆ ಘಳಿಗೆಯನ್ನು ರಮಣೀಯವಾಗಿ ಮಾಡಿಕೊಳ್ಳುತ್ತೇನೆ ಅಂದುಕೊಂಡರೆ ಅಷ್ಟೊತ್ತಿಗೆ ದಡ ಬಂದು ಬಿಟ್ಟಿರುತ್ತೆ ಇಲ್ಲವೇ ಅವರ ಅವಶ್ಯಕತೆಗಳು ಬದಲಾಗಿಬಿಟ್ಟಿರುತ್ತವೆ. ನಾವು ನಾವಾಗಿ ಇರಬೇಕು ಜೊತೆಯಲ್ಲಿಯೇ ಸಿಕ್ಕ ಅವಕಾಶವನ್ನು ಆನಂದದ ರೂಪದಲ್ಲಿ ಪ್ರತಿಫಲಿಸಿಕೊಳ್ಳಬೇಕು. ಆಗ ಜೀವನ ಒಂದು ಸುಮಧುರ ಪಯಣ.

  ಎಂಥಹ ಮುದ್ದಾದ ಬರಹ, ಹೇಳುತ್ತಾ, ಓದುತ್ತಾ ಹೋದ ಹಾಗೆ ಒಂದು ತೆರನಾದ ಪುಟಕ್ಕೆ ಹೊರಳುತ್ತದೆ. ಸೂಪರ್ ಮಗಳೇ ಸೂಪರ್..ಬರೆದ ರೀತಿ ಇಷ್ಟವಾಗುತ್ತದೆ

  ReplyDelete
  Replies
  1. ಧನ್ಯವಾದ ಅಣ್ಣ ..
   ಬರಹದಲ್ಲಿ ಇಟ್ಟೆಲ್ಲಾ ಭಾವಗಳಿವೆಯ ಅನ್ನೋದು ನಿಮ್ಮ ಅನಿಸಿಕೆ ನೋಡೋ ತನಕ ನನ್ನರಿವಿಗೂ ಬಂದಿರಲ್ಲ.
   ಇಷ್ಟವಾಯ್ತು
   ಮತ್ತೆ ಸಿಗೋಣ

   Delete
 5. ಭಾಗ್ಯ ಭಟ್ಟರೇ ಪದಗಳನ್ನು ನಿಮ್ಮ ಪುಟಗಳಲಿ ಭಟ್ಟಿ ಇಳಿಸುವ ರೀತಿ ಚೆಂದವಿದೆ..

  ReplyDelete
 6. ಬರಹ ಚಂದ. ಬರಹಗಳು ಹೆಚ್ಚು ಹೆಚ್ಚಾಗಿ ಬರುತ್ತಿರಲಿ :)

  ReplyDelete
 7. ಇಷ್ಟವಾಯಿತು ಎಂದಷ್ಟೇ ಹೇಳಬಲ್ಲೆ...

  ReplyDelete
 8. ಭಾವಗಳಿಂದೆಷ್ಟು ಕಾಡಿಸಿಕೊಂಡು ಬರೆದದ್ದೋ......
  ಇಲ್ಲಾ ಭಾವಗಳನ್ನು ಕಡೆದು ಬರೆದದ್ದೋ.....
  ನಾ ಏನು ಹೇಳಲೂ ನಿರುಪಾಯಿ.......

  ಚಂದ.....

  ReplyDelete