Thursday, February 27, 2014

ನಡೆದಷ್ಟೂ ದೂರಕೆ...

ಕತ್ತಲ ಬೆಳಕಲ್ಲಿ ಮನ ಮಾತಾದಾಗ....

ಸಂದು ಹೋದವಲ್ಲೆ ಗೆಳತೀ ಬದುಕಲ್ಲಿಷ್ಟು ವರ್ಷಗಳು ಸದ್ದಿಲ್ಲದೆ...ಗದ್ದಲವನ್ನೂ ಮಾಡದೇ!!

ಬದುಕೇ ಯಾಕಿಷ್ಟು ಕಾಡಿದೆ ನೀ ನನ್ನ ಅಂತ ನಿನ್ನೆಯ ರಾತ್ರಿ ಪ್ರಶ್ನಿಸಿದಾಗ ಚಂದಿರನ ನೋಡುತ್ತಾ ನಗುತ್ತಿದ್ದ ನನ್ನ ಕಣ್ಣಂಚೂ ಒದ್ದೆ ಒದ್ದೆ.ನಿಜವಲ್ವಾ,ಒಳಗಿರೋ ಒಡೆದ ಮನಸ್ಸುಗಳ ಕೂಡಿಸಿ ಕೂಡಿಸಿ ಅವು ಮತ್ತೆ ಮತ್ತೆ ಕಳಚಿ ಬೀಳೋವಾಗಲೆಲ್ಲಾ ನಿನ್ನೊಳಗೆನೋ ಹೇಳಲಾಗದ ಸಂಕಟ.ಬದುಕು ನಿನ್ನ ಖುಷಿಯನ್ನೆಲ್ಲಾ ತನ್ನಲ್ಲೇ ಇರಿಸಿಕೊಂಡು ನಿನಗಿಷ್ಟು ನೋವ ಮಾತ್ರ ಕೊಟ್ಟು ಆ ತಿರುವಲ್ಲಿ ಕೈ ಬೀಸಿ, ತಿರುಗಿಯೂ ನೋಡದೇ ಹೊರಟುಹೋದಾಗ ಅದೆಷ್ಟು ಚಂದದಿ ಬೀಳ್ಕೊಟ್ಟೆ ನೀ! ನಿನ್ನೊಳಗಿರೋ ಬದುಕ ಪ್ರೀತಿಯ ಅರಿವು ನನ್ನ ಸೋಕಿದ್ದು ,ನಿನ್ನೆಡೆಗೆ ನನ್ನ ಎಳೆದುಕೊಂಡುಬಂದಿದ್ದು ಅಲ್ಲಿಂದಲೇ.


ಕನಸುಗಳನ್ನೆಲ್ಲಾ ಮೂಟೆಕಟ್ಟಿ ಮುಲಾಜಿಲ್ಲದೇ ಮೂಲೆಯಲ್ಲೆಸೆದಿರೋ ನಿನ್ನೆಡೆಗೆ ನನ್ನ ಬದುಕ ಪೂರ್ತಿಯಿರೋ ಬೇಸರ. ಇವತ್ತಲ್ಲವರ ಕನಸುಗಳ ಆಳಾಗಿ ದುಡಿತಿರೋ ನಿನ್ನ ವಾಸ್ತವದ ಬದುಕ ಬಗೆಗಿಷ್ಟು ಅನುಕಂಪ.ಇರೋ ಅದೆಷ್ಟೋ ಬೇಸರಗಳ ನಂತರವೂ ಅವರ ಕನಸುಗಳನ್ನ ನಿನ್ನ ಹೆಗಲೇರಿಸಿಕೊಂಡು ಧಾವಂತದಿಂದ ಹೊರಟಿರೋ ನಿನ್ನ ಮೇಲೆ ನನ್ನದೊಂದಿಷ್ಟು ಅಕಾರಣದ ಪ್ರೀತಿ..

ಹುಚ್ಚುಚ್ಚು ಕನಸು ಕಾಣ್ತಿದ್ದ ನಂಗೆ ಕನಸಂದ್ರೆ ಹೀಗೆಯೇ ಇರಬೇಕೆಂದು ಹೇಳಿಕೊಟ್ಟವಳು ನೀನು.ಈಗದೆಷ್ಟು ಚಂದದ ಕನಸ ಕಟ್ಟಿದ್ದೇನಲ್ವಾ?ಬಿಟ್ಟುಬಿಡು ಮಹರಾಯ್ತಿ ಇದ ಬೆಳೆಯೋಕೆ..ನೀರೆರೆದು ಪೋಷಿಸೋ ಜವಾಬ್ದಾರಿ ನಂದು.

ಪ್ರೀತಿಸೋ ಅದೆಷ್ಟೋ ಜೀವಗಳನ್ನ ನೋಯಿಸಿ ಬೇಕಂತಲೇ ದೂರಾಗಿಸಿಕೊಂಡು ನೀನೇನೋ ಆರಾಮಾಗಿದ್ದೀಯ.ನನ್ನ ನಿನಗಿಂತಲೂ ಜಾಸ್ತಿ ಇಷ್ಟಪಡೋ ಅವರನ್ನ ನನ್ನಿಂದ ದೂರಾಗಿಸಿದ ಪಾಪಪ್ರಜ್ನೆ ನಿನ್ನನ್ನೊಮ್ಮೆಯೂ ಸೋಕಿಲ್ಲವಲ್ಲೇ!ನಿಜ ಹೇಳು,ನಿನ್ನೊಳಗೆ ಪ್ರೀತಿಗಿನಿತೂ ಜಾಗವಿಲ್ಲವಾ ಅಥವಾ ಮತ್ತೆ ನಿನ್ನದೇ ಸ್ವಾರ್ಥಕ್ಕೆ ಅಲ್ಲವರಿಗೂ ನೋವು ಕೊಡ್ತಿರೋದಾ? ಪ್ರೀತಿ ಅಂತನಿಸದ ಬದಲಾಗಿ ಅಸಹ್ಯ ಅಂತ ಅಂತನಿಸಿಹೋದ ಅಲ್ಯಾರದೋ ಬಲವಂತದ ಪ್ರೀತಿಯ ರೀತಿಗೆ ನೀ ನಲುಗಿ,ಮುದುಡಿ ಕೂತಾಗಲೂ ನನ್ನ ಮಾತಾಡಿಸೋಕೆ ಬಂದಿಲ್ಲವಲ್ಲೆ...ನಾನಷ್ಟು ದೂರಾಗಿಹೋದೆ ನಿನ್ನಿಂದ ಅನ್ನೋದ್ಯಾಕೋ ಸಹ್ಯವಾಗುತ್ತಿಲ್ಲ....ಅಂತರವನ್ನು ಕಾಯ್ದುಕೊಂಡ ಅಂತರದ ದೂರ!!ಈ ಮಾತು ಬಂದಾಗಲೆಲ್ಲಾ ನನ್ನೊಡನೆ ಮಾತು ಬಿಟ್ಟು ಎದ್ದು ಹೋಗಿಬಿಡ್ತೀಯಲ್ವಾ ನೀ...ಬಿಕ್ಕಿ ಬಿಕ್ಕಿ ಅಳಬೇಕೆಂದುಕೊಳ್ತೀನಿ.ಆದರೆ ನನ್ನ ಕಣ್ಣೀರಿಗೆ ನಿನ್ನಲ್ಯಾವ ಭಾವ ಬದಲಾವಣೆ ಆಗಲಾರದು ಅನ್ನೋದರ ಅರಿವಾದ ಮೇಲೆ ಪೂರ್ತಿಯಾಗಿ ನಿಲ್ಲಿಸಿಬಿಟ್ಟೆನೇನೋ ನಾ ಅಳೋದನ್ನ ಪೂರ್ತಿಯಾಗಿ ನಿನ್ನ ಮೂಗಿನ ನೇರಕ್ಕೆ ಮಾತಾಡೋ ನಿನ್ನೆಡೆಗೊಂದು ತಿರಸ್ಕಾರದ ನೋಟ ಬೀರಿ.

 
ಎಷ್ಟು ದಿನಗಳಾದವಲ್ವಾ ನಿನ್ನಲ್ಲಿ ಮುಖ ಹುದುಗಿಸಿ ನಾ ಹಗುರಾಗಿ....

ಸುಮ್ಮನೆ ನಿನ್ನ ಪಾಡಿಗೆ ನೀನಿದ್ದ ಆ ದಿನಗಳೆಷ್ಟು ಚಂದವಿದ್ದವಲ್ವಾ...ಆದರೀಗ ಬೆಳಿಗ್ಗೆಯಿಂದ ಸಂಜೆಯ ತನಕ ಕಾಲಿಗೆ ಗಾಲಿ ಕಟ್ಟಿಕೊಂಡು ಬದುಕ ರೇಸ್ ನಲ್ಲಿ ಮುಂದೆಯೇ ಇರಬೇಕೆಂದು ಎದುರುಸಿರು ಬಿಡುತ್ತಾ ನೀ ಓಡೋವಾಗಲೆಲ್ಲಾ ನಾನಿಲ್ಲಿ ತೀರಾ ಒಂಟಿ ಅನಿಸಿಬಿಡುತ್ತೆ.ಒಂಟಿತನ ಇನ್ನೂ ಪೂರ್ತಿಯಾಗಿ ಅಭ್ಯಾಸವಾಗಿಲ್ಲ ನಂಗೆ.ಭಾವಗಳ ಜೊತೆಗಿನ ಬದುಕಲ್ಲಿ ನನ್ಯಾವ ಭಾವವನ್ನೂ ಮುಟ್ಟಿಯೂ ನೋಡದೇ ಹೊರಟುಬಿಡೋ ನಿನ್ನ ನೋಡೋವಾಗಲೆಲ್ಲಾ ನಾನಿರಬಾರದಿತ್ತು ನಿನ್ನೊಟ್ಟಿಗೆ ಅಂದುಕೊಳ್ತೀನಿ.ಮರು ಕ್ಷಣಕ್ಕೆ ಅನಿಸಿಬಿಡುತ್ತೆ ನೀನಿಲ್ಲದಿದ್ದರೆ ನನ್ನ ಅಸ್ತಿತ್ವವೇ ಇರುತ್ತಿರಲಿಲ್ಲವೇನೋ.

ಯಾವಾಗಲೂ ಗೊಂದಲವಾಗೇ ಉಳಿಯೋ ನಿನ್ನಲ್ಲಿ ನನ್ನದೊಂದು ನಿವೇದನೆ:ನಿನ್ನೊಳಗಿನ ಗೊಂದಲಗಳೆಲ್ಲಾ ಸರಿದ ಮೇಲಾದ್ರೂ ನನ್ನನ್ನೊಮ್ಮೆ ಮುಟ್ಟಿ ಹೋಗು,ಬಿಚ್ಚಿಕೊಂಡೀತು ನಿನ್ನೊಳಗಿನ ನನ್ನ ಮನ.

ಯಾವಾಗಲೂ ಬಾಗಿಲಿಂದಾಚೆಯೇ ನಿಲ್ಲಿಸೋ ನೀ ಇವತ್ತಲ್ಲೊಂದು ಗೋಡೆ ಮಾಡಿಕೊಂಡು ನಾ ಇಣುಕಿಯೂ ನೋಡದ ತರಹ ಮಾಡಿರೋವಾಗ ನನಗೆಷ್ಟು ದುಃಖವಾಗಿದ್ದೀತು ಯೋಚಿಸಿ ನೋಡು ಒಮ್ಮೆ.
ಕನ್ನಡಿಯಲ್ಲಿನ ನಿನ್ನೊಳಗೂ ನಾ ಅಪರಿಚಿತೆಯಾಗಿಯೇ ಉಳಿದುಬಿಡ್ತೀನೇನೋ ಶಾಶ್ವತವಾಗಿ ಅನ್ನೋ ಭಯ ನಂದು.
ಒಳಗೆಲ್ಲೋ ಮುದುಡಿ ಕುಳಿತಿರೋ ನನ್ನ ಮತ್ತೆ ನೀನಾಗಿ ಮಾತಾಡಿಸಬರ್ತೀಯ ಅನ್ನೋ ನಿರೀಕ್ಷೆಯಲ್ಲಿ...

ಇಂತಿ,
ನಿನ್ನತೀ ಪರಿಚಿತೆ.