Thursday, February 27, 2014

ನಡೆದಷ್ಟೂ ದೂರಕೆ...

ಕತ್ತಲ ಬೆಳಕಲ್ಲಿ ಮನ ಮಾತಾದಾಗ....

ಸಂದು ಹೋದವಲ್ಲೆ ಗೆಳತೀ ಬದುಕಲ್ಲಿಷ್ಟು ವರ್ಷಗಳು ಸದ್ದಿಲ್ಲದೆ...ಗದ್ದಲವನ್ನೂ ಮಾಡದೇ!!

ಬದುಕೇ ಯಾಕಿಷ್ಟು ಕಾಡಿದೆ ನೀ ನನ್ನ ಅಂತ ನಿನ್ನೆಯ ರಾತ್ರಿ ಪ್ರಶ್ನಿಸಿದಾಗ ಚಂದಿರನ ನೋಡುತ್ತಾ ನಗುತ್ತಿದ್ದ ನನ್ನ ಕಣ್ಣಂಚೂ ಒದ್ದೆ ಒದ್ದೆ.ನಿಜವಲ್ವಾ,ಒಳಗಿರೋ ಒಡೆದ ಮನಸ್ಸುಗಳ ಕೂಡಿಸಿ ಕೂಡಿಸಿ ಅವು ಮತ್ತೆ ಮತ್ತೆ ಕಳಚಿ ಬೀಳೋವಾಗಲೆಲ್ಲಾ ನಿನ್ನೊಳಗೆನೋ ಹೇಳಲಾಗದ ಸಂಕಟ.ಬದುಕು ನಿನ್ನ ಖುಷಿಯನ್ನೆಲ್ಲಾ ತನ್ನಲ್ಲೇ ಇರಿಸಿಕೊಂಡು ನಿನಗಿಷ್ಟು ನೋವ ಮಾತ್ರ ಕೊಟ್ಟು ಆ ತಿರುವಲ್ಲಿ ಕೈ ಬೀಸಿ, ತಿರುಗಿಯೂ ನೋಡದೇ ಹೊರಟುಹೋದಾಗ ಅದೆಷ್ಟು ಚಂದದಿ ಬೀಳ್ಕೊಟ್ಟೆ ನೀ! ನಿನ್ನೊಳಗಿರೋ ಬದುಕ ಪ್ರೀತಿಯ ಅರಿವು ನನ್ನ ಸೋಕಿದ್ದು ,ನಿನ್ನೆಡೆಗೆ ನನ್ನ ಎಳೆದುಕೊಂಡುಬಂದಿದ್ದು ಅಲ್ಲಿಂದಲೇ.


ಕನಸುಗಳನ್ನೆಲ್ಲಾ ಮೂಟೆಕಟ್ಟಿ ಮುಲಾಜಿಲ್ಲದೇ ಮೂಲೆಯಲ್ಲೆಸೆದಿರೋ ನಿನ್ನೆಡೆಗೆ ನನ್ನ ಬದುಕ ಪೂರ್ತಿಯಿರೋ ಬೇಸರ. ಇವತ್ತಲ್ಲವರ ಕನಸುಗಳ ಆಳಾಗಿ ದುಡಿತಿರೋ ನಿನ್ನ ವಾಸ್ತವದ ಬದುಕ ಬಗೆಗಿಷ್ಟು ಅನುಕಂಪ.ಇರೋ ಅದೆಷ್ಟೋ ಬೇಸರಗಳ ನಂತರವೂ ಅವರ ಕನಸುಗಳನ್ನ ನಿನ್ನ ಹೆಗಲೇರಿಸಿಕೊಂಡು ಧಾವಂತದಿಂದ ಹೊರಟಿರೋ ನಿನ್ನ ಮೇಲೆ ನನ್ನದೊಂದಿಷ್ಟು ಅಕಾರಣದ ಪ್ರೀತಿ..

ಹುಚ್ಚುಚ್ಚು ಕನಸು ಕಾಣ್ತಿದ್ದ ನಂಗೆ ಕನಸಂದ್ರೆ ಹೀಗೆಯೇ ಇರಬೇಕೆಂದು ಹೇಳಿಕೊಟ್ಟವಳು ನೀನು.ಈಗದೆಷ್ಟು ಚಂದದ ಕನಸ ಕಟ್ಟಿದ್ದೇನಲ್ವಾ?ಬಿಟ್ಟುಬಿಡು ಮಹರಾಯ್ತಿ ಇದ ಬೆಳೆಯೋಕೆ..ನೀರೆರೆದು ಪೋಷಿಸೋ ಜವಾಬ್ದಾರಿ ನಂದು.

ಪ್ರೀತಿಸೋ ಅದೆಷ್ಟೋ ಜೀವಗಳನ್ನ ನೋಯಿಸಿ ಬೇಕಂತಲೇ ದೂರಾಗಿಸಿಕೊಂಡು ನೀನೇನೋ ಆರಾಮಾಗಿದ್ದೀಯ.ನನ್ನ ನಿನಗಿಂತಲೂ ಜಾಸ್ತಿ ಇಷ್ಟಪಡೋ ಅವರನ್ನ ನನ್ನಿಂದ ದೂರಾಗಿಸಿದ ಪಾಪಪ್ರಜ್ನೆ ನಿನ್ನನ್ನೊಮ್ಮೆಯೂ ಸೋಕಿಲ್ಲವಲ್ಲೇ!ನಿಜ ಹೇಳು,ನಿನ್ನೊಳಗೆ ಪ್ರೀತಿಗಿನಿತೂ ಜಾಗವಿಲ್ಲವಾ ಅಥವಾ ಮತ್ತೆ ನಿನ್ನದೇ ಸ್ವಾರ್ಥಕ್ಕೆ ಅಲ್ಲವರಿಗೂ ನೋವು ಕೊಡ್ತಿರೋದಾ? ಪ್ರೀತಿ ಅಂತನಿಸದ ಬದಲಾಗಿ ಅಸಹ್ಯ ಅಂತ ಅಂತನಿಸಿಹೋದ ಅಲ್ಯಾರದೋ ಬಲವಂತದ ಪ್ರೀತಿಯ ರೀತಿಗೆ ನೀ ನಲುಗಿ,ಮುದುಡಿ ಕೂತಾಗಲೂ ನನ್ನ ಮಾತಾಡಿಸೋಕೆ ಬಂದಿಲ್ಲವಲ್ಲೆ...ನಾನಷ್ಟು ದೂರಾಗಿಹೋದೆ ನಿನ್ನಿಂದ ಅನ್ನೋದ್ಯಾಕೋ ಸಹ್ಯವಾಗುತ್ತಿಲ್ಲ....ಅಂತರವನ್ನು ಕಾಯ್ದುಕೊಂಡ ಅಂತರದ ದೂರ!!ಈ ಮಾತು ಬಂದಾಗಲೆಲ್ಲಾ ನನ್ನೊಡನೆ ಮಾತು ಬಿಟ್ಟು ಎದ್ದು ಹೋಗಿಬಿಡ್ತೀಯಲ್ವಾ ನೀ...ಬಿಕ್ಕಿ ಬಿಕ್ಕಿ ಅಳಬೇಕೆಂದುಕೊಳ್ತೀನಿ.ಆದರೆ ನನ್ನ ಕಣ್ಣೀರಿಗೆ ನಿನ್ನಲ್ಯಾವ ಭಾವ ಬದಲಾವಣೆ ಆಗಲಾರದು ಅನ್ನೋದರ ಅರಿವಾದ ಮೇಲೆ ಪೂರ್ತಿಯಾಗಿ ನಿಲ್ಲಿಸಿಬಿಟ್ಟೆನೇನೋ ನಾ ಅಳೋದನ್ನ ಪೂರ್ತಿಯಾಗಿ ನಿನ್ನ ಮೂಗಿನ ನೇರಕ್ಕೆ ಮಾತಾಡೋ ನಿನ್ನೆಡೆಗೊಂದು ತಿರಸ್ಕಾರದ ನೋಟ ಬೀರಿ.

 
ಎಷ್ಟು ದಿನಗಳಾದವಲ್ವಾ ನಿನ್ನಲ್ಲಿ ಮುಖ ಹುದುಗಿಸಿ ನಾ ಹಗುರಾಗಿ....

ಸುಮ್ಮನೆ ನಿನ್ನ ಪಾಡಿಗೆ ನೀನಿದ್ದ ಆ ದಿನಗಳೆಷ್ಟು ಚಂದವಿದ್ದವಲ್ವಾ...ಆದರೀಗ ಬೆಳಿಗ್ಗೆಯಿಂದ ಸಂಜೆಯ ತನಕ ಕಾಲಿಗೆ ಗಾಲಿ ಕಟ್ಟಿಕೊಂಡು ಬದುಕ ರೇಸ್ ನಲ್ಲಿ ಮುಂದೆಯೇ ಇರಬೇಕೆಂದು ಎದುರುಸಿರು ಬಿಡುತ್ತಾ ನೀ ಓಡೋವಾಗಲೆಲ್ಲಾ ನಾನಿಲ್ಲಿ ತೀರಾ ಒಂಟಿ ಅನಿಸಿಬಿಡುತ್ತೆ.ಒಂಟಿತನ ಇನ್ನೂ ಪೂರ್ತಿಯಾಗಿ ಅಭ್ಯಾಸವಾಗಿಲ್ಲ ನಂಗೆ.ಭಾವಗಳ ಜೊತೆಗಿನ ಬದುಕಲ್ಲಿ ನನ್ಯಾವ ಭಾವವನ್ನೂ ಮುಟ್ಟಿಯೂ ನೋಡದೇ ಹೊರಟುಬಿಡೋ ನಿನ್ನ ನೋಡೋವಾಗಲೆಲ್ಲಾ ನಾನಿರಬಾರದಿತ್ತು ನಿನ್ನೊಟ್ಟಿಗೆ ಅಂದುಕೊಳ್ತೀನಿ.ಮರು ಕ್ಷಣಕ್ಕೆ ಅನಿಸಿಬಿಡುತ್ತೆ ನೀನಿಲ್ಲದಿದ್ದರೆ ನನ್ನ ಅಸ್ತಿತ್ವವೇ ಇರುತ್ತಿರಲಿಲ್ಲವೇನೋ.

ಯಾವಾಗಲೂ ಗೊಂದಲವಾಗೇ ಉಳಿಯೋ ನಿನ್ನಲ್ಲಿ ನನ್ನದೊಂದು ನಿವೇದನೆ:ನಿನ್ನೊಳಗಿನ ಗೊಂದಲಗಳೆಲ್ಲಾ ಸರಿದ ಮೇಲಾದ್ರೂ ನನ್ನನ್ನೊಮ್ಮೆ ಮುಟ್ಟಿ ಹೋಗು,ಬಿಚ್ಚಿಕೊಂಡೀತು ನಿನ್ನೊಳಗಿನ ನನ್ನ ಮನ.

ಯಾವಾಗಲೂ ಬಾಗಿಲಿಂದಾಚೆಯೇ ನಿಲ್ಲಿಸೋ ನೀ ಇವತ್ತಲ್ಲೊಂದು ಗೋಡೆ ಮಾಡಿಕೊಂಡು ನಾ ಇಣುಕಿಯೂ ನೋಡದ ತರಹ ಮಾಡಿರೋವಾಗ ನನಗೆಷ್ಟು ದುಃಖವಾಗಿದ್ದೀತು ಯೋಚಿಸಿ ನೋಡು ಒಮ್ಮೆ.
ಕನ್ನಡಿಯಲ್ಲಿನ ನಿನ್ನೊಳಗೂ ನಾ ಅಪರಿಚಿತೆಯಾಗಿಯೇ ಉಳಿದುಬಿಡ್ತೀನೇನೋ ಶಾಶ್ವತವಾಗಿ ಅನ್ನೋ ಭಯ ನಂದು.
ಒಳಗೆಲ್ಲೋ ಮುದುಡಿ ಕುಳಿತಿರೋ ನನ್ನ ಮತ್ತೆ ನೀನಾಗಿ ಮಾತಾಡಿಸಬರ್ತೀಯ ಅನ್ನೋ ನಿರೀಕ್ಷೆಯಲ್ಲಿ...

ಇಂತಿ,
ನಿನ್ನತೀ ಪರಿಚಿತೆ.
  

9 comments:

 1. ಭಾಗ್ಯಾ -

  ಸೋಲು – ಗೆಲುವು – ನೋವು – ನಲಿವು ಅಂತ ಎದುರಾಗೋ ಎಲ್ಲ ಘಳಿಗೆಯಲ್ಲೂ ನಾವು ಮೊದಲು ಮಾತಾಡಿಸಬೇಕಾದ್ದು ನಮ್ಮದೇ ಮನವನಲ್ಲವಾ.?? ಸಮಾಧಾನಿಸಬೇಕಾದದ್ದೂ ಅದನ್ನೇ ತಾನೆ.?? ಹೌದು ಅದ ಮಾತಾಡಿಸುವುದು ಅಷ್ಟು ಸುಲಭವಲ್ಲ... ಮಾತಾಡಿಸಿದರೂ ಅದರ ಮಾತ ಅರಗಿಸಿಕೊಳ್ಳುವುದು ಇನ್ನೂ ಕಷ್ಟ ಕಷ್ಟ... ಹಾಗಂತ ಮಾತಾಡಿಸದೇ ಇರುವುದೆಷ್ಟು ಸರಿ.?? ಮನಸಿನ ಮಾತ ಪ್ರಾಮಾಣಿಕವಾಗಿ ಆಲಿಸುತ್ತ ಹೋದಷ್ಟೂ ನಾವು ನಮ್ಮ ಬದುಕಿಗೂ ಪ್ರಾಮಾಣಿಕರಾಗುತ್ತ ಹೋಗುತ್ತೇವೆ ಅಂತನ್ನಿಸುತ್ತೆ ನಂಗೆ... ಮನಸು ಮಂಜಾಗದೆ ಮಾತಾಗಿ ನಗುತಿರಲಿ...

  ಇನ್ನು ಎಲ್ಲರೂ ಅಷ್ಟಿಷ್ಟು ಇನ್ಯಾರದೋ ಕನಸಿಗೆ ಹೆಗಲ ಕೊಟ್ಟು ಹೈರಾಣಾಗುವವರೇ... ಆ ಅವರ ಕನಸುಗಳ ನಡು ನಡುವೆಯೇ ನಮ್ಮವೂ ಒಂದಿಷ್ಟು ಪುಟ್ಟ ಪುಟ್ಟ ಕನಸುಗಳಿಗೆ ನಾವೇ ಪ್ರಜ್ಞಾಪೂರ್ವಕವಾಗಿ ತಾವು ನೀಡಬೇಕಷ್ಟೇ... ಅವರ ದೊಡ್ಡ ಕನಸಿನ ಜತೆ ಜತೆಗೆ ನಮ್ಮ ಪುಟ್ಟ ಪುಟ್ಟ ಕನಸುಗಳನೂ ಆಸ್ತೆಯಿಂದ ಸಲಹಿಕೊಂಡು ಆ ತೀರಕೆ ಕರೆದೊಯ್ಯಬೇಕಷ್ಟೇ... ಹಾಗಾದಲ್ಲಿ ಈ ಪುಟ್ಟ ಕನಸೂ ಬೆಟ್ಟದಷ್ಟು ಖುಷಿಯ ನೀಡುವ ಕಾಲವೊಂದು ಬಂದೇ ಬರುತ್ತೆ...

  ಏನೋ ಹಿಂಗೆಲ್ಲ ಅನ್ನಿಸಿತು... ಚಂದದ ಭಾವ ಬರಹ...

  ReplyDelete
 2. ಬದುಕೇ ಹಾಗೆ ಅದು ಅಮೂರ್ತ ಕನ್ನಡಿ. ಕೈಗೆಟುಕುವ ಭ್ರಮೆಗೆ ನಮ್ಮನ್ನು ಕೆಡವಿ ಕೈ ತಪ್ಪಿಸಿಬಿಡುತ್ತದೆ. ಪ್ರೀತಿಯೂ ಹಲವೊಮ್ಮೆ ಆಕಾಶ ದೀಪ!

  ReplyDelete
 3. ನಿಮ್ಮ ಬಾವನೆಗಳಿಗೆ ಬಣ್ಣ ಹಚ್ಚಿ ಬರಿಯೋ ಪದಗಳು ತುಂಬಾನೇ ಮುದ್ದಾಗಿ ಅರ್ಥ ಪೂರ್ಣವಾಗಿ ಬರೀತೀರಾ ಗೆಳತಿ

  ReplyDelete
 4. ಇರುವುದೆಲ್ಲವ ಬಿಟ್ಟು ಇರದುದರ ಹಂಬಲಿಸಿ ಹಠಕ್ಕೆ ಬಿದ್ದು ಓಡುತ್ತಿರುವ ಒಂದು ಜೀವದ ಮೇಲೆ ಪ್ರೀತಿಯ ನಿರೀಕ್ಷೆಯಿಂದ ಕಾಯುತ್ತಿರುವ ಇನ್ನೊಂದು ಜೀವದ ಚಿತ್ರಣ ಭಾವನೆಗಳ ಮಹಾಪೂರದಂತಿದೆ..

  ReplyDelete
 5. ಅವಳು ಓದಿ ಮತ್ತೆ ಮರಳಿ ಬರುವಷ್ಟು ಪ್ರಭಾವಿ ಬರಹ :)
  ಬದುಕಿನ ಮಾಯೆಗಳಲ್ಲಿ ಪ್ರೀತಿ ಮಾಸದಿರಲಿ ಎಂಬುದೇ ಆಶಯ ಅಲ್ಲವೇ ಭಾಗ್ಯ ?
  ಚೆಂದದ ಬರಹ :)

  ReplyDelete
 6. ಪುಟ್ಟಿ
  ಸಂಬಂಧಗಳೇ ಹಾಗೆ ... ಬದುಕಿನ ಸಂಧಿಗಳಳಲ್ಲಿ ಎಲ್ಲೋ ಒಂದು ಕಡೆ ಕೈ ಜಾರಿ ಬಿಡುತ್ತವೆ .. ಆದರೇ ಅವುಗಳ ತೀವ್ರತೆ ಮಾತ್ರ ಬದುಕ ತುಂಬಾ ಕಾಡುತ್ತೆ ... ಮರಳಿ ಬರಲಿ ಆಕೆ..

  ಚಂದ ...

  ReplyDelete
 7. ಒಳಗಿರೋ ಒಡೆದ ಮನಸ್ಸುಗಳ ಕೂಡಿಸಿ ಕೂಡಿಸಿ ಅವು ಮತ್ತೆ ಮತ್ತೆ ಕಳಚಿ ಬೀಳೋವಾಗಲೆಲ್ಲಾ ನಿನ್ನೊಳಗೆನೋ ಹೇಳಲಾಗದ ಸಂಕಟ......

  ತುಂಬಾ ಇಷ್ಟವಾದ ಸಾಲು.... ಬಹಳ ಚೆನ್ನಾಗಿ ಬರಿತ್ತೀರಿ....

  ReplyDelete
 8. ಕುದಿಯುತ್ತಿರುವ ಹಂಡೆಯಲ್ಲಿ ಅದರ ಶಾಖ ಮೊದಲು ಒಳಗೆ ಬೀರಿ ಆಮೇಲೆಯೇ ಅದು ಹೊರಕ್ಕೆ ತಾಕುವುದು. ನೀರು ಕುಡಿದಷ್ಟು ಹಂಡೆಗೆ ಬಿಸಿ.. ಒಳಗಿರುವ ತುಮುಲಗಳನ್ನು ಭಾವ ತುಂಬಿದ ಪದಗಳಲ್ಲಿ ಹೊಮ್ಮಿಸಿರುವ ರೀತಿ ಇಷ್ಟವಾಯಿತು.. ಇನ್ನೊಂದು ಸುಂದರ ಬರಹ ಮಗಳೇ ಸೂಪರ್

  ReplyDelete
 9. ಅಂತರವನ್ನು ಕಾಯ್ದುಕೊಂಡ ಅಂತರದ ದೂರ!!....ಕಾಡುವ ಸಾಲು... :) ಯಾಂತ್ರಿಕ ಜೀವನದ ಅಂಚಿನಲ್ಲೂ ಪ್ರೀತಿಯ ಸಿಂಚನವಿದ್ದರೆ ಬದುಕನ್ನ ನೆಚ್ಚಬಹುದು,ಮೆಚ್ಚಬಹುದು...ನನ್ನ ಅಸ್ತಿತ್ತ್ವಕ್ಕೆ ನಿನ್ನ ವ್ಯಕ್ತಿತ್ತ್ವ ಕಾರಣ..ನೀನು ಈ ಎಲ್ಲ ಭಾವಗಳ ಜೀವತಂತಿ...ಮೀಟುವ ಬೆರಳೂ ನೀನೇ,ನರಳಿದಾ ಕಂಪನವೂ ನಿನೇ,ಹೊರಡುವ ಸ್ವರವೂ ನೀನೇ..ಎಂಬೆಲ್ಲಾ ಭಾವಗಳ ಗುಚ್ಛ,"ನಡೆದಷ್ಟೂ ದೂರಕೆ".... :) :) :)

  ReplyDelete