Sunday, August 25, 2013

ಪೂರ್ತಿ ಮೌನಿಯಾಗಿ ....



ಅವತ್ತದು "ಡಬಲ್ ಎಸ್ " ನಿಲಯ .....ಬರಿಯ ಸಂತೋಷವೇ ಆ ಮನೆಯ ಸಂಪತ್ತು .ಯಾವತ್ತೂ ನಗೋ ,ಎಲ್ಲರನೂ ನಗಿಸೋ ,ಬದುಕ ಬಗೆಗೆ ತೀರಾ ವ್ಯಾಮೋಹ ಹೊಂದಿರೋ ಹುಡುಗಿ ಅವಳು!
ಬದುಕ ಪ್ರೀತಿಯ ಕಲಿಸಿಕೊಟ್ಟ ಇದೇ ಗೆಳತಿ ಕಾರಣ ಹೇಳದೇ ಬದುಕಿಂದಲೇ ಎದ್ದು ಹೋದುದರ ಬಗೆಗೆ ಕಾರಣ ಹುಡುಕ ಹೊರಟು ವಾರಗಳೇ ಸಂದವು ...ಸಿಗದಿದ್ದ ಕಾರಣಕ್ಕೆ ಕಣ್ಣ ಹನಿ ತನ್ನಿರುವ ತೋರಿಸ ಬಂದು ,ಅದ್ಯಾಕೋ ಹೇಳಲಾಗದ ಭಾವದೊಂದಿಗೆ ನೆಲ ತಲುಪಿದ್ದೂ ಆಗಿದೆ .

ಮನೆಯ ಪ್ರೀತಿ,ಮನೆಯವರ ನಡುವಿನ ಆತ್ಮೀಯತೆಯ ಕುರುಹನ್ನೂ ಅರಿಯದ ನಂಗೆ ಈ ಬಂಧಗಳ ಮೊದಲ ಅನುಭವವಾದುದ್ದೂ ನಿನ್ನಿಂದಲೇ !ಬದುಕಂದ್ರೆ ಹಾಸ್ಟೆಲ್ ,ಓದು ಮತ್ತು ನನ್ನಲ್ಲೇ ಮಾತಾಡಿಕೊಳ್ಳೋ ನಾನು ಅಂತಿದ್ದ ನಂಗೆ ಬದುಕಂದ್ರೆ ಪ್ರೀತಿ,ಬದುಕಂದ್ರೆ ಅಪ್ಪ,ಪ್ರೀತಿ ಅಂದ್ರೆ ಅಣ್ಣ ಅಂತೆಲ್ಲಾ ಏನೇನೋ ಭಾವಗಳ ತುಂಬಿದ್ದ ಹುಡುಗಿ ನೀನು .
 "ಡಬಲ್ ಎಸ್" ನಿಲಯಕ್ಕೆ ಪ್ರೀತಿಯಿಂದ ಆಹ್ವಾನಿಸಿದ್ದ ಗೆಳತಿ ನಿನ್ನ ಸುಂದರ ಮನೆಯ ಮನಸ್ಸುಗಳಿಗೂ ಅಷ್ಟೇ ಪ್ರೀತಿಯ ಆಹ್ವಾನವ ನೀಡಿದ್ದೆಯಲ್ಲೇ .
ನಿನ್ನ ,ಅಣ್ಣನ ಹೆಸರುಗಳು ಎಸ್ ಇಂದ ಶುರುವಾದಾಗಲೇ ಇರಬೇಕು ನಿಮ್ಮನೆಯಲ್ಲಿ ಸಂತಸದ ವಾತಾವರಣ ಇರೋಕೆ ...ನನ್ನ ಹೆಸರೂ """"ಎಸ್" ಇಂದ ಬರೋದಕ್ಕೇ ಇರಬೇಕೇನೋ ಮತ್ತೆ ನಿನ್ನ ಆ ಖುಷಿಯ ಅರಮನೆ "ತ್ರಿಬಲ್ ಎಸ್" ಆಗಿದ್ದು !

ಗೆಳತಿಯಾಗಿದ್ದು ಬರಿಯ ಮುಗುಳ್ನಗೆಯಿಂದ ..ದಿನವೂ ಎದುರು ಸಿಕ್ಕಾಗ ಪರಿಚಯದ ನಗುವ ಬಿಟ್ಟರೆ ಅದರಾಚೆಗಿನ ಒಂದು ಮಾತು ಆಡಿರಲಿಲ್ಲ ನಾ ನಿನ್ನೊಟ್ಟಿಗೆ .ಅದ್ಯಾಕೋ ಮಾತಾಡದೇ ನೀ ನನಗೆ ಆಪ್ತಳಾಗಿದ್ದೆ ..ನನ್ನೊಂದಿಷ್ಟು ನೋವುಗಳ ನಾ ನಿನ್ನೊಂದಿಗೆ ಕಣ್ಣಿನಲ್ಲೇ ಹೇಳಿಕೊಂಡಿದ್ದೆ ..ನೀನೂ ಅದಕ್ಕೆ ಕಣ್ಣಿನಲೇ ಸಾಂತ್ವಾನಿಸಿದ್ದೆ ಕೂಡಾ ...ಬರಿಯ ನಗು ಜೀವದ ಗೆಳತಿಯನ್ನಾಗಿಸಿದ್ದು ಮಾತ್ರ ವರ್ಷಗಳ ಈಚೆಗೆ .ದಿನಕ್ಕೊಂದು ತಾಸು ಮಾತಾಡಿಲ್ಲ ಅಂದ್ರೆ ಏನೋ ಕಳೆದುಹೋದ ಭಾವವಿತ್ತು ..ಅದೆಷ್ಟು ಸಲ ನಾ ನಿನ್ನ ಮನೆಗೆ ಬಂದಿದ್ದೆ ಅನ್ನೋಕೆ ಲೆಕ್ಕವಿಲ್ಲ ...ನಿನ್ನನ್ನು ಇಷ್ಟ ಪಡೋ ಅಷ್ಟೇ ನನ್ನನ್ನೂ ಪ್ರೀತಿ ಮಾಡ್ತಿದ್ರು ನಿನ್ನಪ್ಪ ಅಮ್ಮ ,ನಿನ್ನಲ್ಲಿ ತರ್ಲೆ ಮಾಡೋ ಅಷ್ಟೇ ಸಲುಗೆಯ ನಂಗೂ ಕೊಟ್ಟಿದ್ದ ಅಣ್ಣ ..ಅಂತೂ ನಿಮ್ಮನೆಯ ಸದಸ್ಯರಲ್ಲಿ ನಾನೂ ಒಬ್ಬಳಾಗಿ ಹೋದೆ ಅನ್ನೋದು ನನ್ನ ಜೀವಮಾನದ ಖುಷಿ .

ನಿನ್ನಿಂದ ನಾ ಕಲಿತುಕೊಂಡಿದ್ದು ನನ್ನಿಡೀ ಬದುಕ ನಡೆಸೋ ಅಷ್ಟಿದೆ ..ಕೆಲವೊಮ್ಮೆ ಅರ್ಥವಾಗದ ನನ್ನದೇ ಮೂಡ್ ಗಳ ಬದಲಿಸಿದ್ದು ನೀ...ಯಾವತ್ತೂ ಮಾಸದ ಮುಗುಳ್ನಗು ನಿನ್ನ ಸ್ಥಿಗ್ದ ಮುಖದಲ್ಲಿ ನೋಡೋದೇ ನಂಗೆ ಖುಷಿ ...ಇರೋ ಬೇಸರಗಳೆಲ್ಲಾ ನಿನ್ನ ನೋಡಿದ ತಕ್ಷಣ ಮಾಯವಾಗುತ್ತಿದ್ದವಲ್ಲೇ ಗೆಳತಿ...ಒಂದಿನಿತೂ ಬೇಸರಿಸದೇ ಎಲ್ಲರ ಬೇಸರಗಳ ಕಿವಿಯಾಗಿ ತೀರಾ ಫ್ರೌಡೆಯಾಗಿ ಮಾತಾಡೋ ಈ ಮುದ್ದು ಗೆಳತಿ ನನ್ನ ಜೀವದ ಗೆಳತಿ ಅನ್ನೋ ಹೆಮ್ಮೆ ನಂದಾಗಿತ್ತು ..
ಅಕ್ಕನಾಗಿ ,ಗೆಳತಿಯಾಗಿ,ಒಮ್ಮೊಮ್ಮೆ ಅಮ್ಮನಾಗಿ ಎದುರು ಕೂತು ಪ್ರೀತಿಸೋ ಆಸ್ಥೆವಹಿಸೋ ,ಬದುಕ ಪ್ರೀತಿಯ ಬೆಳೆಸಿಕೊಟ್ಟ ಇದೇ ಗೆಳತಿ ಇವತ್ಯಾಕೋ ತೀರಾ ಮೌನಿಯಾಗಿ ಬಿಕ್ಕುತ್ತಿದ್ದಂತನಿಸಿದೆ ನಂಗೆ .
ನಿನ್ನ ಇಲ್ಲದಿರುವಿಕೆಯ ಕ್ಷಣವನ್ನೂ ಊಹಿಸದ ನಾನಿವತ್ತು ಇದೇ ಸತ್ಯವ ಅರಗಿಸಿಕೊಳ್ಳಬೇಡವೇ ಹುಡುಗಿ ?...

ಬದುಕಿಂದ ಎದ್ದು ಹೋಗೋ ಅಷ್ಟು ಜರೂರತ್ತೇನಿತ್ತು ನನ್ನ ಗೆಳತಿಗೆ ?....ನನ್ನೀ ಪ್ರಶ್ನೆಗೆ ಉತ್ತರಿಸಲೇ ಬೇಕಿದೆ ನೀನು .

ನಿನ್ನೆದುರು ಕೂತು ಮಾತಾಡಿ ವಾರವಾದವು ! ಮನೆ ತೀರಾ ಸೊರಗಿದೆ ..ಅಪ್ಪ ಅಮ್ಮ ಕಣ್ಣಂಚಲ್ಲಿ ಮಾತ್ರಾ ಮಾತಾಡುತ್ತಿದ್ದಾರೆ ....ನಗುವೇ ತಾನು ಅಂತಿಪ್ಪ ಅಣ್ಣ ಕೂಡಾ  ಕೈ ಹಿಡಿದು ಬಿಕ್ಕಿ ಬಿಕ್ಕಿ ಅತ್ತಾಗ ಮಾತ್ರ ನಿನ್ನೆಡೆಗೆ ತೀರಾ ಕೋಪ ಬಂದಿತ್ತು
 ನೀ ಯಾವುದೋ ಅರಿಯದ ಕಾರಣಕ್ಕೆ ಬದುಕಿಂದಲೇ ಎದ್ದು ಹೋದೆ ಅನ್ನೋದ ನೋಡಿ ಅರಗಿಸಿಕೊಳ್ಳಲಾಗದೇ  ಕಣ್ಣೀರ ಕಟ್ಟೆ ಒಡೆದುಹೋಗಿದೆ. ಕ್ಯಾಂಪಸ್ ನಲ್ಲಿ ಎಲ್ಲರೂ ಮುಖದ ತುಂಬಾ ಪ್ರಶ್ನೆಗಳ ತೋರೋ ಭಾವ ಭಯ ಆಗುತ್ತೆ ಕಣೇ.... ಅವರಂದುಕೊಂಡಂತೆ ನೀನಿಲ್ಲ ಅನ್ನೋದು ತೀರಾ ಹತ್ತಿರದಿಂದ ನಿನ್ನ ನೋಡಿರೋ ನಮಗೆಲ್ಲಾ ಗೊತ್ತು ..ಪ್ರೀತಿ ಪ್ರೇಮದ ಗೋಜಿಗೆ ಹೋಗದ ಹುಡುಗಿಯನ್ನ ಪ್ರೀತಿಯಲ್ಲಿ ಕೈ ಸುಟ್ಟುಕೊಂಡ್ಲು ಅನ್ನಿಸುತ್ತೆ ಅಂತ ಆಡಿಕೊಳ್ಳೋ ಮಾತುಗಳ ಕೇಳಿದಾಗಲ್ಲೆಲ್ಲಾ ಮನ ಭಾರವಾಗುತ್ತೆ ಹುಡುಗಿ ...

ನಿನ್ನ ಮನದ ದ್ವಂದ್ವಗಳೇನು ಅನ್ನೋದನ್ನ ಅರಿಯೋ ಪ್ರಯತ್ನವ ನಾ ಇನಿತೂ ಮಾಡಲಿಲ್ಲವೇ ಅನ್ನೋ ಒಂದೆ ಪ್ರಶ್ನೆಯ ವಾರದಿಂದ ಕೇಳಿ ಕೇಳಿ ಮನ ನಡುಗುತ್ತಿದೆ .....ನೀ ನನ್ನ ತೀರಾ ತಪ್ಪಿತಸ್ಥಳಂತೆ ಮಾಡಿದ್ದಂತೂ ಸುಳ್ಳಲ್ಲ .....ಸ್ವಲ್ಪವೆ ಬೇಸರವಿದ್ರೂ ಗುರುತಿಸಿ ಸರಿಪಡಿಸೋ ತನಕ ಸುಮ್ಮನಿರದ ಮನೆತುಂಬಾ ಓಡಾಡಿಕೊಂಡು ಗೋಳುಹೊಯ್ಕೊಳೋ ಈ ಮುದ್ದು ಗೌರಿಯ ಇಷ್ಟು ದೊಡ್ಡ ಗೊಂದಲಗಳು ನಂಗೆ ಅಣ್ಣಂಗೆ ಅರ್ಥವಾಗಲೇ ಇಲ್ವಲ್ಲೆ .

ಯಾಕೇ ಹುಡುಗಿ ಮನದ ಭಾರವ ಹರವದೇ ,ಯಾರಲ್ಲೂ ಹೇಳದೇ ಹತ್ತು ಪ್ರಶ್ನೆಗಳ ಹಾಗೆಯೇ ಉಳಿಸಿ ಹೊರಟುಹೋದೆ ನೀ ?....




ಬದುಕ ಬಗೆಗೆ ತೀರಾ ವ್ಯಾಮೋಹ ಒಳ್ಳೆಯದಲ್ಲ ಅಂತ ಅದ್ಯಾವತ್ತೋ ಹೇಳಿದ್ದ ನಂಗೆ ಗಂಟೆಗಳ ಕಾಲ ವ್ಯಾಮೋಹ ಮತ್ತು ಪ್ರೀತಿಯ ನಡುವಿನ ಅಂತರವ ಬಿಡಿಸಿಟ್ಟಿದ್ದ ಹುಡುಗಿ ನೀನೇನಾ ಅನ್ನೋದು ಗೋಜಲು ...ತೀರಾ ವಿಭಿನ್ನವಾಗಿ ,ಫ್ರೌಡವಾಗಿ ಎದುರು ನಿಲ್ಲೋ ಗೆಳತಿ ಇನ್ಯಾವತ್ತೂ ಎದುರು ಬರಲಾರಳು ಅನ್ನೊ ವಾಸ್ತವವ ಅರಿಗಿಸಿಕೊಳ್ಳೋ ಶಕ್ತಿ ನಂಗಿಲ್ಲ ಕಣೆ ...

ನೀನಿಲ್ಲದೇ ನಾನಿರಲ್ಲ ಅನ್ನೋ ಸ್ಪಷ್ಟ ಅರಿವಿದ್ದೂ ನನ್ನನ್ನಿಲ್ಲಿ ಬಿಟ್ಟು ಎದ್ದುಹೋದೆಯಲ್ಲ ..
ನಿಜ ಹೇಳು...ಹೋಗೋವಾಗ ಒಮ್ಮೆಯೂ ನನ್ನ ನೆನಪಾಗಲಿಲ್ವಾ ನಿಂಗೆ ? ನೆನಪಾಗಿದ್ದರೆ ನೀ ಖಂಡಿತ ಹೀಗೆ ಮಾಡ್ತಿರಲಿಲ್ಲ ..ಯಾಕಂದ್ರೆ ನನ್ನ ಗೆಳತಿ ಯಾವತ್ತೂ ನನ್ನ ಒಂಟಿತನಗಳ,ಒಬ್ಬಂಟಿ ಭಾವಗಳ ಜೊತೆಗಾರ್ತಿ.
ವಿಷಯ ಏನೇ ಇರಲಿ .....ನೀನದ ಹೇಳೋ ಸಣ್ಣ ಪ್ರಯತ್ನವ ಮಾಡದೇ ಬದುಕಿಗೆ ಸೋತಿದ್ದು ಮಾತ್ರ ವಿಷಾದ !

ನೀನೇನೋ ಕಾರಣ ಹೇಳದೇ (ಇಲ್ಲದೇ) ಹೊರನಡೆದೆ ..ಆದರೆ ಶಾಶ್ವತ ನೋವೊಂದ ನನ್ನಲ್ಲಿ ಬಿಟ್ಟು ಎದ್ದುಹೋದೆಯಲ್ಲೇ ....ಜೊತೆಗೊಂದಿಷ್ಟು ಜವಾಬ್ದಾರಿಗಳ ಹೊರಿಸಿ ...
ನಾನಿನ್ನು ಅಪ್ಪ ಅಮ್ಮಂಗೆ ಅದೇ ಪುಟ್ಟ ,ಫ್ರೌಡ ಮಗಳಾಗಬೇಕಿದೆ ..ಅಣ್ಣಂಗೆ ಮುದ್ದಿನ ಪುಟ್ಟಿಯಾಗಬೇಕಿದೆ ..ಕ್ಯಾಂಪಸ್ನಲ್ಲಿ ನಗುಮೊಗದ ,ಸ್ನೇಹದ ಹುಡುಗಿಯಾಗಬೇಕಿದೆ..
ಜೊತೆಗೆ ನನ್ನೆಲ್ಲಾ ಮನದ ಭಾವಗಳ ನನಗಿಂತ ಜಾಸ್ತಿ ಅರ್ಥೈಸಿಕೊಳೋ ನನ್ನ ಗೆಳತಿಯೂ ಆಗಬೇಕಿದೆ ...

ಮತ್ತೇ ಈ "ತ್ರಿಬಲ್ ಎಸ್" ನಿಲಯವ "ಡಬಲ್ ಎಸ್" ಮಾಡೋ ಇರಾದೇ ನಂಗಂತೂ ಇಲ್ಲ ...ಯಾಕಂದ್ರೆ ನೀನಿಲ್ಲದೆಯೂ ನಿನ್ನ ನೆನಪುಗಳು ಜೋಪಾನವಾಗಿದೆ ಇಲ್ಲಿ ...
ಕಟ್ಟಿಕೊಂಡ ಕಣ್ಣೀರ ಕಟ್ಟೆ ಒಡೆಯೋಕೂ ಮುನ್ನ ಜೋಪಾನ ಮಾಡಬೇಕಿದೆ ನಾನದನ್ನ ...ಯಾಕಂದ್ರೆ I love my sad tears too !!

ಬದುಕಿಗೊಂದು ಬದುಕ ಪ್ರೀತಿ ಕಲಿಸಿದಿ ಗೆಳತಿ ತನ್ನದೇ ಬದುಕಿಂದ ತಾನಾಗೇ ಎದ್ದು ಹೋದುದ್ದರ ಕಾರಣ ಮಾತ್ರ ಕಾರಣವಾಗೇ ಉಳಿದು ಹೋಯ್ತು ...
ಸಾಧ್ಯವಾದರೆ ಪ್ರಶ್ನೆಗಳಿಗೆ ಉತ್ತರಿಸಿ ಹೋಗು ..
ಜೊತೆಗೆ ....
ಬದುಕೇ ಇಲ್ಲದ ಬದುಕ ಪ್ರೀತಿಯ ಸಾಧ್ಯತೆಯ ಕೂಡಾ ...

Tuesday, August 13, 2013

ಸ್ತಬ್ಧ



ಮಂಜು ಮುಸುಕಿದ ಹಾದಿಯಲಿ ಮತ್ತದೇ ಮೌನದ ಒಬ್ಬಂಟಿ ಪಯಣದ ಜೊತೆಗೆ ಕನಸಿನೂರಿನ ಮನದ ಭಾವದ ಸಂತೆಯ ಮಾತೊಂದ ಹೇಳಬಂದೆ ನಾ....ಕೊನೆಗೂ ನಿನಗೆ ಪೂರ್ತಿಯಾಗಿ ಸೋತು....

ಮುದ್ದು ಗೆಳೆಯಾ,

ಆಶ್ಚರ್ಯವಾದೀತು ನಿನಗೀ ಸಂಭೋದನೆ .ವರ್ಷಗಳ ಹಿಂದೆ ನೀ ಬಯಸಿದ್ದ ನಿನ್ನದೇ ಹುಡುಗಿಯ ಭಾವವಿದು ಕಣೋ .ಇಷ್ಟದ ವಿಷಯದ ಬಗೆಗೆ ಒಂದೇ ಒಂದು ಮಾತಾಡು ಸಾಕು ಅಂತ ಪರಿ ಪರಿಯಾಗಿ ಬಿಕ್ಕಿದ್ದ ನಿನ್ನ ಮನಕ್ಕೊಂದು ಮುಷ್ಕರದ ನಡುವೆಯೂ ಮೌನವ ಮಾತ್ರ ಬಿಟ್ಟು ಅತೀ ಕಷ್ಟದಿಂದ ನಿನ್ನಿಂದೆದ್ದು (ನಿನ್ನ ಬದುಕಿಂದ) ಬಂದ ಅದೇ ಮೌನದ ಗೆಳತಿಯ ಭಾವವಿದು.

ಆದರೆ ನಿಂಗಿವತ್ತಿಲ್ಲಿ ಇದ ಕೇಳೋ ಮನವಿಲ್ಲದೇ ಇದ್ದೀತು ! ಆದರೂ ಮೌನದ ಮಾತೊಂದು ಮುರಿದು ನಾ ಮಾತಾಡಬಂದೆ ಅದೆಷ್ಟೋ ದಿನಗಳ ನಂತರ ಮತ್ತದೇ ಮೌನದ ಅರಮನೆಗೆ .ಇವತ್ತೀ ಭಾವವ ಹೇಳೋಕೆ ಧೈರ್ಯ ಬಂದಿದ್ದು ಮಾತ್ರ ನಿನ್ನ ವರ್ಷದ ಹಿಂದಿದ್ದ ಅದೇ ಕಾಳಜಿ ,ಪ್ರೀತಿಯ ಕಂಗಳ ಮತ್ತಿವತ್ತು ನೋಡಿದ ಮೇಲೆ .

ಅದೆಷ್ಟು ಚಂದದ ಪ್ರೀತಿಯ ನಿವೇದನೆ ಮಾಡಿಕೊಂಡಿದ್ದೆ ..ನಿನ್ನದೇ ಕನಸುಗಳ,ನಿನ್ನ ಪುಟ್ಟ ಅರಮನೆಗೆ ಪ್ರೀತಿಯಿಂದ ಆಹ್ವಾನಿಸಿದ್ದ ಈ ಮುದ್ದು ರಾಜಕುಮಾರನ ಪ್ರೀತಿಯ ಅವತ್ತು ಒಪ್ಪಿಕೊಳ್ಳೋ ಮನಸು ,ಧೈರ್ಯ ಎರಡೂ ಇರಲಿಲ್ಲ ನಂಗೆ .ಗೋಗರೆದು ಕೇಳಿದ್ದ ಪ್ರೀತಿಯ ಚೂರನ್ನೂ ನಿನಗೆ ಕೊಡೋಕೆ ಇರದ ನನ್ನದೇ ಮನದ ಬಗೆಗೆ ನಂಗಿವತ್ತೂ ಬೇಜಾರಿದೆ .

ನಾ ಕಂಡ ಕನಸ ಬದುಕು ಎದುರುಗಿದೆ ಕಣೇ ..ಆದರೂ ನೀನಿಲ್ಲದ (ಸಿಗದ) ನೋವು ದಿನ ಕಾಡುತ್ತೆ ಅಂತ ತೀರಾ ಕೇಳದ ಸ್ವರದಲ್ಲಿ ಅವತ್ತಿದೇ ರಾತ್ರಿ ಬಿಕ್ಕಿದ್ದ ನಿನ್ನ ಧ್ವನಿಗೆ ಸ್ವಲ್ಪ ಮಟ್ಟಿಗೆ ಮನ ಕರಗಿದ್ದು ಸುಳ್ಳಲ್ಲ .ಆದರೆ ನಿನ್ನೆದುರು ನಾ ಸೋಲಲಾರೆ ಅನ್ನೋ ಹಠವೇ ಮನದ ಮಾತೊಂದ ಆಲಿಸೋಕೂ ಮುಂಚೆಯೇ ಆ ಸಣ್ಣ ಒಲವನ್ನ ತಳ್ಳಿಹಾಕಿತ್ತು .

ಚಂದದ ಬದುಕು,ಬಣ್ಣ ಬಣ್ಣದ ಕನಸುಗಳು,ಪ್ರೀತಿಸೋ ಮನೆ ಎಲ್ಲವುಗಳ ಮುಂದೆಯೂ ಎದ್ದು ಕಾಣೋದು ನಿನ್ನ ಮುಖ ಅಂತ ದಿನೇ ದಿನೇ ಭಾವುಕನಾಗಿ ನುಡಿಯೋ ನಿನಗೆಲ್ಲಿ ಪೂರ್ತಿಯಾಗಿ ಕಳೆದು ಹೋಗ್ತೀನೋ ಅನ್ನೋ ಭಯಕ್ಕೆ ಏನೋ ನಿನ್ನ ನಾ ಪೂರ್ತಿಯಾಗಿ ನಿರ್ಲಕ್ಷಿಸತೊಡಗಿದ್ದೆ .

"ನಿನ್ನ ಬಿಚ್ಚುನುಡಿಯಲ್ಲಿ ಕಂಡೆ

ವಾಸ್ತವಿಕತೆಯನ್ನಾ...

ನಿನ್ನ ಮುಗುಳ್ನಗೆಯಲ್ಲಿ ಕಂಡೆ

ಸಣ್ಣ ಪ್ರೀತಿಯ ಸೆಲೆಯನ್ನಾ ..."

ಹೀಗೇ ಏನೇನೋ ಸಾಲುಗಳ ಗೀಚಿಬಿಟ್ಟಿದ್ದೆಯಲ್ಲೋ ಹುಡುಗ ..ಮನದ ಭಾವಗಳ ಮುಚ್ಚಿಟ್ಟುಕೊಳ್ಳೋ ಶತ ಪ್ರಯತ್ನದಲ್ಲಿ ಸೋತೆ ಅನಿಸಿದಾಗಲೆಲ್ಲಾ ನಿನ್ನ ಮೇಲಿನ ನನ್ನ ಸಿಟ್ಟು ತಿರುಗೋದು ಮುಖದ ಮಂದಹಾಸದ ಕಡೆಗೆ ! ನಗು ಅನ್ನೋ ಪದವೇ ಮುಖದಲ್ಲಿ ಸುಳಿಯೋಕೆ ಬಿಟ್ಟಿರಲಿಲ್ಲ ! ಯಾಕೋ ಹುಡುಗ ನಿನ್ನನ್ನಷ್ಟು ದ್ವೇಷಿಸಬಂದೆ !

ನಾನೇ ಕಟ್ಟಿಕೊಂಡ ನನ್ನದೇ ಮನದ ಬೇಲಿಯ ದಾಟಿಯೂ ನೀ ಬಂದಿದ್ದೆ ನೋಡು ..ಅದೇ ಇದ್ದೀತು ಈ ತರದ ಭಯಂಕರ ದ್ವೇಷದ ಕಾರಣ


 
ಕೊನೆಗೊಮ್ಮೆ ಭಾವಗಳೇ ಇಲ್ಲದ ಹುಡುಗಿ ನೀ ಅಂತ ಧಿಕ್ಕರಿಸಿ ಎದ್ದು ಹೊರ ನಡೆದಿದ್ದೆ ನೀ ...

ಮನಸ್ಸಿನ ಮೇಲೆ ನಡೆದು ತೀರಾ ಬೇಕೆಂದಾದ ಹೊರ ಹೋಗಿದ್ದ ನಿನ್ನ ಮೇಲೆ ನಂಗಾಗಿದ್ದ ನಿರಾಸೆ ಅಷ್ಟಿಷ್ಟಲ್ಲ :( ಸ್ವಲ್ಪ ಸ್ವಲ್ಪವಾಗಿ ನಿನ್ನತ್ತ ವಾಲುತ್ತಿದ್ದ ಮನಕ್ಕೆ ಮೌನದ ಮುಖವಾಡ ಹಾಕಿ ಪಕ್ಕಕ್ಕೆ ಸರಿಸಿದ್ದೆ ಅಷ್ಟೇ ...ಅದೂ ಒಂದಿಷ್ಟು ಹೇಳಲಾಗದ ನನ್ನದೇ ಪರಿಸ್ಥಿತಿಗಳಿಗೆ ಕಟ್ಟುಬಿದ್ದು ...ಆದರಲ್ಲೊಂದು ದೊಡ್ಡ ಒಲವಿತ್ತು ಅನ್ನೋದ ನೀ ಅರ್ಥ ಮಾಡಿಕೊಳ್ಳೋಕೆ ಸೋತಿದ್ದೆ ...ಯಾವತ್ತೂ ಸೋಲದ ನಾನೂ ನಿನ್ನೆದುರು ಸೋಲಲೇ ಬಾರದೆಂಬ ಹಠದಲ್ಲಿ ಪೂರ್ತಿಯಾಗಿ ಸೋತು ಹೋಗಿದ್ದ ನೀ ಎದ್ದು ಹೋದ ಆ ದಿನ .

ನಿನ್ನ ಪ್ರೀತಿಯ ಅರಿವು ನಂಗಾಗಿದ್ದು ನೀ ಎದ್ದು ಹೋದ ಮೇಲೆ ...ದಿನವೂ ಮಾತಾಡೋ ಕೆ ನೀನಿದ್ದೆ....ನಾ ಮಾಡಿದ್ದ ಅದೆಷ್ಟೋ ಬೇಸರಗಳ ನಂತರವೂ ಮತ್ತದೇ ಮಧುರ ಭಾವಗಳ ಹೊತ್ತು ಮಾತಾಡೋಕೆ ಬರುತ್ತಿದೆಯಲ್ಲ ಅನ್ನೋದ ನೆನಸಿಕೊಂಡ್ರೆ ನಾ ಮಾಡಿದ್ದ ತಪ್ಪು ,ಬೇಸರಗಳ ಮುಜುಗರ ಕಾಡುತ್ತಿತ್ತು ..

ಆದರೂ ಮಾಡಿದ್ದ ಅದೆಷ್ಟೋ ಬೇಸರಗಳ ನಂತರವೂ ಇವತ್ತು ಎದುರು ಮಾತಾಡಬಂದೆ ನೋಡು ...attitude ಅಂದ್ರೆನೇ ನೀನು ಅಂತಿದ್ದ ಹುಡುಗ ಇಷ್ಟು ಬೇಸರಗಳ ನಂತರವೂ ನನ್ನಲ್ಲಿ ಮಾತಾಡ ಬಂದಿದ್ದಕ್ಕೊಂದು ಶರಣು ಕಣೋ ಗೆಳೆಯ.

ಆದರೆ ಇವತ್ತು ನಿನ್ನ ಕಂಗಳಲಿ ಪ್ರೀತಿಯ ಭಾವವೊಂದ ಹುಡುಕಿ ಸೋತೆ ನಾ ...ವರ್ಷಗಳ ಹಿಂದೆ ನಿನ್ನ ಬಿಟ್ಟು ಇನ್ನೇನೂ ಇರದಿದ್ದುದು ಇದೇ ಕಣ್ಣಲ್ಲೇ ಕಣೇ ಅಂತ ನಿನ್ನ ಪ್ರತಿನಿಧಿಸಿ ಅಣುಕಿಸಿತ್ತು ನಿನ್ನೀ ಕಂಗಳು ...

ಪ್ರೀತಿ ಕಂಗಳಲ್ಲಿ ದಿವ್ಯ ನಿರ್ಲಕ್ಷವೂ ಇರಲಿಲ್ಲವಲ್ಲೋ ಹುಡುಗ ! ಸ್ವಲ್ಪ ಸಮಾಧಾನವಾಗಿದ್ದು ಇಲ್ಲಿಯೇ .

ಮೌನದ ಭಾವವೊಂದ ಮನಬಿಚ್ಚಿ ಹೇಳೋಕೆ ಬಂದ ನಂಗೆ ನಿನ್ನ ಕಂಗಳಲ್ಲಿನ ತಟಸ್ಥ ಮೌನವ್ಯಾಕೋ ಸಹ್ಯವಾಗಲೇ ಇಲ್ಲ ..ನೀ ನನ್ನ ಕಣ್ಣಂಚ ಭಾವಗಳಿಗೆ ಸಂಭಂದಿಸಿದವನೇ ಅಲ್ಲ ಅನ್ನೋ ತರ ದೂರದ ತಿರುವು ನೋಡಿ ನಿನ್ನ ಮೌನ ಸಾಧಿಸಿದೆ .. ನಿನ್ನ ಮೌನ ಸಾಮ್ರಾಜ್ಯದ ಗೋಡೆಯ ಹಾರಿ ಬರೋ ಸಣ್ಣ ಪ್ರಯತ್ನ ಮಾಡದೇ ಹಾಗೆ ಕೈ ಕಟ್ಟಿ ಕುಳಿತುಬಿಟ್ಟೆ ..

ಇನ್ನೊಮ್ಮೆ ಪ್ರೀತಿಯ ನಿವೇದನೆ ಮಾಡಿಕೊಂಡು ಬಿಡೋ ..ಕಣ್ಮುಚ್ಚಿ ನಿನ್ನ ತೋಳಂಚ ಸೇರಿಬಿಟ್ಟೇನು ...


 
ನನ್ನ ಮೌನಕ್ಕೆ ನಿನ್ನ ಮೌನದ ಸಾಥ್ ಬೇಡ ಮುದ್ದು ...ಪರವಾನಿಗೆ ಪಡೆಯದೇ ಪ್ರೀತಿಯ ಹೇಳಿಕೊಂಡು ಈಗ ಎಲ್ಲವ ಮರೆತು ನಿನ್ನಷ್ಟಕ್ಕೆ ನೀನಿರೋ ತರ ಭಾವಗಳ ತೋರ್ಪಡದೇ ಇರಬಲ್ಲೆ ಅನ್ನೋ ಭ್ರಮೆಯ ಬಿಟ್ಟು ಬಿಡು ...ಯಾಕಂದ್ರೆ ನಿನ್ನ ನಾಜೂಕು ಭಾವಗಳೆ ನನ್ನ ಬದುಕ ಚಿತ್ತಾರವಾದೀತು...ನಿನ್ನ ಪ್ರೀತಿಗೆ ಅವಳ ಎರಡರಷ್ಟು ಹಠ ತೋರಿದ್ದ ಅದೇ ಹುಡುಗಿಯಾಗಿ ಮತ್ತೆ ಕೇಳ್ತೀನಿ ಕಣೋ ...ಮತ್ತೊಮ್ಮೆ ಹೇಳಿಬಿಡು " you are my world ".

ಆದರೂ ಇವತ್ತಿನ ನಿನ್ನ ಬಿರುನಡೆಯಲ್ಲಿ ಕಂಡೆ

ಧೃಡತೆಯ ನಾ..

ಈ ತಿರುವಲ್ಲಿ ಮೌನವ ಗೆಲ್ಲೋಕೆ ಹೋಗಿ ಬದುಕಿಗೆ ಬೆನ್ನು ಮಾಡಿ ಕೊನೆಗೂ ನನ್ನ ಸೋಲಿಸಿ ಹೋದ ನಿನ್ನನ್ನೇ ಇನ್ನೊಂದು ತಿರುವಿನಲ್ಲಿ ನಿರೀಕ್ಷಿಸುತ್ತಾ ....
ನಿನ್ನವಳು.

 

 

Sunday, August 4, 2013

ಸ್ನೇಹ ದಿಬ್ಬಣದಿ ...


ನಿಮಗದೆಷ್ಟು ಧಾರಾಳತನ ,
ಬೇಡವೆಂದರೂ ಬಂದು ಬೆಚ್ಚಗಿನ ಗೂಡೊಂದ ಕಟ್ಟಿ
ಮನದಲ್ಲೊಂದು ಮಹಲು ಮಾಡಿ
ನೆನಪುಗಳ ಬುತ್ತಿಯನಿಲ್ಲೇ ಬಿಟ್ಟು ಹೋಗೋ ನಲ್ಮೆಯ ಸ್ನೇಹಿತರಿಗಾಗಿ ....

 ಭಾವಗಳೆಲ್ಲವಕ್ಕೂ ಜೊತೆ ನಿಂತು ಸ್ನೇಹದ ಮೊದಲ ಪ್ರೀತಿ ತೋರೋ ಸಂತೆಯಲ್ಲಿಯೂ ಟೆಂಟ್ ಕಟ್ಟಬಲ್ಲ ಹುಡುಗಿ ,ಸಿಟ್ಟಿಗೂ ಮೈತ್ರಿ ಮಾಡಿಸೋ ,ಆಮೇಲೊಮ್ಮೆ ತಾನೇ ಸಿಟ್ಟಾಗಿ ಆ ಸಿಟ್ಟನ್ನ ಕಣ್ಣ ಹನಿಗಳ ಜೊತೆ ಮೈತ್ರಿಯಾಗಿಸೋ ಗೆಳತಿ, ಮಾಡಿದ್ದ ಅದೆಷ್ಟೋ ಬೇಸರಗಳ ನಂತರವೂ ಹಾಗೇ ಮಾತಾಡಿಸೋ ಸಾಂತ್ವಾನಿಸೋ ಮರಿ ಗೆಳೆಯ , ತೀರಾ ಪರಿಚಿತನಲ್ಲದ ಬರಿಯ ಭಾವಗಳ ತೇರಲ್ಲಿ ಜೊತೆಯಾಗಿ ಪೂರ್ತಿ ಬದುಕ ಭಾವಗಳನ್ನ ಹರವಿಟ್ಟು ಕಣ್ಣಂಚು ಮಾತಾಡೋ ತರ ಮಾಡಿದ್ದ ಸ್ನೇಹಿತ , ತಲೆಹರಟೆ ಮಾಡೋ ,ಕಾಲೆಳೆದು  ಬೇಜಾರು ಕಣೋ ಅಂದಾಗ ರಿಯಲಿಸ್ಟಿಕ್ ಆಗಿರದ ಪ್ಲಾನ್ ಗಳ ಕೊಟ್ಟು  ಫೋನ್ ನೋಡ್ಕೊಂಡು ನಗೊ ತರ ಮಾಡೋ ಈಚೆಗೆ ಪರಿಚಿತನಾಗಿ ಆತ್ಮೀಯ, ಬದುಕ ಪಯಣದಲ್ಲಿ ಒಂದಿಷ್ಟು ಕಾಲ ಜೊತೆಯಾಗಿ ಒಂದಿಷ್ಟು ನನ್ನದೇ ಭಾವಗಳ ಮೂಲವಾಗಿ ತಿರುವಿನಲ್ಲಿ ಕೈ ಮಾಡಿ ಮತ್ತೆಲ್ಲೊ ಜೊತೆಯಾಗೋ ಬರಿಯ ಸ್ನೇಹಿತನಾಗುಳಿಯದ ಆತ್ಮೀಯ , ಭಾವಗಳ ತೇರಲ್ಲಿ ಮುಖ ನೋಡದೇ ಹುಟ್ಟಿರೋ ಅದೆಷ್ಟೋ ಸ್ನೇಹ ,ಅದೆಷ್ಟೋ ಪ್ರೀತಿ.
ಆಹ್ ! ಹೀಗೊಂದು ಸ್ನೇಹದ ವ್ಯಾಖ್ಯಾನವ ಇವತ್ತಿಲ್ಲಿ ಹೇಳೋ ಭಾಗ್ಯ ನಂದೇನೋ ..




ಮಾಡೋದು ಪೂರ್ತಿ ತಲೆಹರಟೆ ,ಜೊತೆಯಲ್ಲಿದ್ದಾಗ ಮಾಸದ ನಗು ,ಬಿಡದೇ ಕಾಲೆಳೆಯೋ ಚಟ ,ಕಾಡಿಸೋ ಮುದ್ದಿಸೋ ಮನ ,ಒಂದಿಷ್ಟು ಜಗಳ ,ಒಂದಿಷ್ಟು ಖುಷಿಗಳ ಜೊತೆ ನೆನಪಾಗೋ ಭಾವವೊಂದೆ .
ತುಂಬಾ ಇಷ್ಟವಾಗೋ ಭಾವ .....ಜೊತೆಯಲ್ಲೇ ಜೊತೆಯಾಗೋ ಈ ಸ್ನೇಹ ಭಾವ.

ಯಾರೊಂದಿಗೂ ಅಷ್ಟಾಗಿ ಮಾತಾಡದ ಹುಡುಗಿ ಇಲ್ಲಿ ಮಾತ್ರ ಅವಳಲ್ಲವೇ ಅಲ್ಲ ಅನ್ನೋ ಅಷ್ಟು ಮಾತಾಡ್ತಾಳೆ ..ತೀರಾ ಮಾತಾಡೋ ಗೆಳತಿ ಕೂಡಾ ಒಮ್ಮೊಮ್ಮೆ ಮೌನಿಯಾಗ್ತಾಳೆ ..ತೀರಾ ತಲೆ ಕೆಡಿಸಿಕೊಳ್ಳೋ ವಿಷಯಕ್ಕೆ ದೊಡ್ಡದೊಂದು ಅರ್ಥವಾಗದ ನಗು ತೋರಿ ಗುಂಪಿನಲ್ಲಿ ಬೈಸಿಕೊಳ್ತಾನೆ ...ತುಂಬಾ ಕೂಲ್ ಆಗಿ ಮಾತಾಡೋ ಹುಡುಗ ಕೂಡಾ ತಪ್ಪಿಲ್ಲದ ಅವಳ ತಪ್ಪಿಗೆ ಸಿಡಕ್ತಾನೆ....ಪ್ರೀತಿಯಲ್ಲಿ ಸೋತು ಬಂದ ಗೆಳತಿಗೆ ಒಮ್ಮೊಮ್ಮೆ ಸಮಾಧಾನಿಸಿದರೆ ಒಮ್ಮೊಮ್ಮೆ ದೊಡ್ಡ ಲೆಕ್ಚರ್ ಕೊಡ್ತಾರೆ. ಮನದ ಚಿಕ್ಕ ಚಿಕ್ಕ ಭಾವಗಳ ಜೊತೆಯೂ ಹಾದಿ ಸವೆಸ್ತಾರೆ .
ಖುಷಿಯ ಮೊದಲ ಗೆಲುವ ಸಂದಾಯವಾಗೋದು ,ನೋವ ಮೊದಲ ಎಳೆಯ ಗುರುತು ಸಿಗೋದು,ಕಣ್ಣಂಚ ಭಾವದ ಕಟ್ಟೆ ಒಡೆಯೋದು  ಇಲ್ಲಿ ಮಾತ್ರವೇನೋ
ಬಹುಶಃ ಎಲ್ಲಾ ಭಾವಗಳನ್ನೂ ಮುಲಾಜಿಲ್ಲದೇ ಹಂಚಿಕೊಳ್ಳೋದು ಸ್ನೇಹದಲ್ಲಿ ಮಾತ್ರ ಸಾಧ್ಯವೇನೋ .
ಮಾಡಿಕೊಂಡ ಅದೆಷ್ಟೋ ಜಗಳಗಳ ನಂತರವೂ ಮತ್ತದೇ ತುಂಟಾಟ ,ಅದೇ ಮುದ್ದು ,ಅದೇ ಆತ್ಮೀಯತೆ ...ಖುಷಿ ಅನಿಸುತ್ತೆ  ಹೀಗೊಂದು ಸ್ನೇಹ ದಕ್ಕಿದ್ದು ...

ಮನದ ಬೇಸರಗಳ ಜೊತೆ ನೀವೂ  ಹಾದಿ ಸವೆಸಿದ್ದೀರ .ಖುಷಿಗಳ ಜೊತೆ ಡೇರಿಮಿಲ್ಕ್ ಹಂಚಿಕೊಂಡಿದ್ದೀರ ...ಮುರಿದುಬಿದ್ದ ಪ್ರೀತಿಯ ಭಾವಗಳ ಜೊತೆ ದೊಡ್ಡ ದೊಡ್ಡ ಮಾತಿನ ಅಶ್ರುತರ್ಪಣ ಬಿಟ್ಟಿದ್ದೀರ !! ಯಾಕೋ ಕಾಣೇ ..ತೀರಾ ಅರ್ಥವಾಗದ ,ಬೆರೆಯದ ಸ್ವಭಾವಗಳಲ್ಲಿ ನಾ ಒಂಟಿ ಅನಿಸೋವಾಗಲೆಲ್ಲಾ ದೂರದಿಂದಲೇ ಮಾತಾಡಿ ಇಲ್ಲೇ ಎಲ್ಲೋ ಇದ್ದೀರೇನೋ ಅನ್ನೋ  ಭಾವವೊಂದ ನನಗಾಗಿ ಹೊತ್ತು ಬಂದಿದ್ದೀರ .
ಆದ ಅದೆಷ್ಟೋ ಕ್ರಶ್ ಗಳಿಗೆ ಕಾಲೆಳೆದು ,ತಿಳಿಯದ ಗೆಳೆತನಕ್ಕೊಂದು ಸ್ನೇಹದ ಭಾವ ನೀಡಿ ,ಕಡಿಮೆ ಬಂದ ಅಂಕಗಳ ಬೇಸರಕ್ಕೆ ಧೈರ್ಯ ಹೇಳಿ ,ಪ್ರೀತಿಸೋ, ಆಸ್ಥೆ ವಹಿಸೋ ,ಕಾಳಜಿಸೋ ನಿಮಗೊಂದು ಪ್ರೀತಿಯ ಅಪ್ಪುಗೆ.

ಈ ಸ್ನೇಹಿತರ ಸ್ನೇಹ ಮಾತ್ರ ಸ್ನೇಹದ ವ್ಯಾಖ್ಯಾನವ ವ್ಯಾಖ್ಯಾನಿಸಬಲ್ಲದೇನೋ ... 
ಸಾವಿರದ ಈ ಸ್ನೇಹ ಸಾವಿರಾರು ಬಂಧ ಗಳ ಬೆಸೆಯಲಿ ..
ಸ್ನೇಹ ಚಿರಾಯುವಾಗಲಿ ..