Thursday, October 30, 2014

ನೆನಪ ಜೋಳಿಗೆಯಿಂದ...
   ಅದೆಷ್ಟೋ ದಿನಗಳ ನಂತರ ಒಂದು ನೆನಪೆದ್ದಿದೆ ಎದೆಯೊಳಗಿಂದ.
ಅವನ ಹೆಸರಲ್ಲಿ ನಾ ಇರಿಸಿಕೊಂಡಿರೋ ಒಂದಿಷ್ಟು ಮುಗ್ಧ ನೆನಪುಗಳು ಮರೆವ ಮುಸುಕಿಲ್ಲದೆ ಎದುರು ನಿಂತುಬಿಟ್ಟಿದೆ.ವರುಷದ ನಂತರದ ಈ ಮುಖಾಮುಖಿಗೆ ಒಂದಿಷ್ಟು ಕಣ್ಣಹನಿಗಳು ಜೊತೆ ಸೇರೀತಷ್ಟೇ.
ಇನ್ನೇನಿದ್ದರೂ ನೆನಪು..ಮುನಿಸು...ನಾನು ..ಅವನು.
ಪಯಣ ದಕ್ಕೋ ನೆನಪುಗಳ ಜಾಗಕ್ಕೆ.

       ಬದುಕ ಪಯಣ ಇನ್ನು ಸ್ವಲ್ಪವೇ ಸ್ವಲ್ಪ ದಿನ ಅನ್ನೋದು ಗೊತ್ತಾದ ಮೇಲೂ ಅವ ಬದುಕಿದ್ದ ರೀತಿಯಿದೆಯಲ್ಲಾ ಮತ್ತೆ ಮತ್ತೆ ಒಲವಾಗಿಬಿಡುತ್ತೆ ನಂಗಾ ಬದುಕ ಪ್ರೀತಿಯ ಬಗೆಗೆ.
ಅವ ವಾಸ್ತವವಾಗಿ ಜೊತೆಯಿಲ್ಲದ ನೋವಿಗೆ ಅವರುಗಳು ಇವತ್ತು  ಇಟ್ಟಿರೋ ಹೆಸರು ವರ್ಷದ ಕಾರ್ಯ!
ಇಲ್ಲೆಲ್ಲೋ ಪಕ್ಕ ಕೂತು ನಕ್ಕಂತೆ,ಸುಮ್ಮ ಸುಮ್ಮನೆ ಕಿವಿ ಹಿಂಡಿದಂತೆ,ಮಧ್ಯ ರಾತ್ರಿ ಫೋನ್ ಮಾಡಿ ನಿದ್ದೆ ಮಾಡ್ತಿದ್ಯಾ ಅಂತ ತರ್ಲೆ ಮಾಡಿದಂತೆ,ಪೀಡಿಸಿ ಕಾಡಿಸಿ ಕೊನೆಗೂ ನಗಿಸಿಯೇ ಹೊರಟಂತೆ ,ಜೊತೆಯಿದ್ದಾನೆ ನನ್ನೊಳಗೆ.
ಹಃ! ಇಷ್ಟಾಗ್ಯೂ ಅವ ಜೊತೆಯಿಲ್ಲದ ನೋವು ತುಸು ಜಾಸ್ತಿ ಕಾಡ್ತಿದೆ ನನ್ನನ್ನಿವತ್ತು.

             ಬದುಕು ಕವಲಾಗಿ ಕನಸುಗಳ ಬೆನ್ನತ್ತಿ ಇಬ್ಬರೂ ಬೇರೆ ಬೇರೆಯದೇ ದಾರಿಯಲ್ಲಿ ಹೊರಟಾಗಿತ್ತು.ಮೊದಲಿನಿಂದಲೂ ಮನೆಯಿಂದ ದೂರವೇ ಇರ್ತಿದ್ದ ನಂಗೆ ಊರಲ್ಲಿದ್ದುಕ್ಕೊಂಡು ಎಲ್ಲರೂ ಪ್ರೀತಿಯಿಂದ ಮಾತನಾಡೋ ಎಲ್ಲರಿಗೂ ಆಪ್ತನಾಗಿದ್ದ ಗೆಳೆಯನ ಬಗೆಗೊಂದು ಸಣ್ಣ ಹೊಟ್ಟೆಕಿಚ್ಚು ಆಗಷ್ಟೇ ಶುರುವಾಗಿತ್ತು.ಅದೆಷ್ಟೋ ಬಾರಿ ಅವನಿಗೆ ಕಾಡಿದ್ದಿದೆ ಬೇರೆ ಎಲ್ಲಾದ್ರೂ ಹೋಗು ಓದೋಕೆ ಅಂತೆಲ್ಲಾ.ಯಾವಾಗಲೂ ಅವನ ಸಿದ್ಧ ಉತ್ತರ ಅಪ್ಪ ಅಮ್ಮನ ಜೊತೆಯಲ್ಲಿ ಕಲಿಯೋ ಓದು ಇನ್ನೆಲ್ಲೂ ಸಿಗಲಾರದು ಕಣೇ ಖುಷಿ ಇದೆ ಇದೇ ಊರಲ್ಲಿ ಅಂತ.ನನ್ನದೇ ವಯಸ್ಸಿನ ಅವನ ನೋಡೋವಾಗಲೆಲ್ಲಾ ಅವನಲ್ಲಿನ maturityಯ ಬಗ್ಗೆ ಹೆಮ್ಮೆಯನಿಸೋದು.ಯಾವಾಗಲೂ ಅಪ್ಪ,ಅಮ್ಮ ,ತೋಟ ಅಂತ ಜವಾಬ್ದಾರಿಗಳ ಜೊತೆಗೆ ಬದುಕುತ್ತಿದ್ದ ಗೆಳೆಯನ ಕನಸುಗಳ ಬಗೆಗೆ ನನ್ನಲ್ಲೊಂದು ಖುಷಿಯಿತ್ತು.
ನನ್ನೊಳಗಿನ ನನ್ನ ಅಸ್ತಿತ್ವದ ಪರಿಚಯ ನಂಗಾಗಿದ್ದೂ ಅವನಿಂದಲೇ.

ಇಂತಿಪ್ಪ ಗೆಳೆಯ ಅದೊಂದು ದಿನ ತೀರಾ normal ಆಗಿ ಇನ್ನೊಂದು ಸ್ವಲ್ಪ ದಿನ ಮಾತ್ರ ಜೊತೆಯಿರ್ತೀನಿ ಆಮೇಲಿನ ನನ್ನಪ್ಪ ಅಮ್ಮನ ನಗುವಿಗೆಲ್ಲಾ ನೀ ಕಾರಣವಾಗ್ತೀಯ ಅಲ್ವಾ ಅಂತ ಭಾವೂಕನಾಗಿ ಕೇಳ್ತಿದ್ರೆ ಮನದಲ್ಲೊಂದು ಸಂದೇಹ ಬೇಡವೆಂದರೂ ನಲುಗಿಸಿಬಿಟ್ಟಿತ್ತು ನನ್ನನ್ನ.ಅವ ಹೇಳಿದ್ದು ತಮಾಷೆಯಾಗಿರಲಿ ಅಂತ ಅದೆಷ್ಟೋ ಬಾರಿ ಕೇಳಿಕೊಂಡಿದ್ದೆ ನಾ..ಮತ್ತೆ ಮತ್ತೆ ತೋರಿಸಿಬಿಡ್ತಾನೆ ಅವ ನನ್ನೆಡೆಗೆ ಅವನಿಗಿರೋ ನಿರಾಕರಣೆಯನ್ನ!
ಮತ್ತೆ ಮನಸು ಪಥ ಬದಲಿಸಿರೋ ಸೂಚನೆ.

            ಬದುಕಂದ್ರೆ ಹೀಗೆಯೇ ಇರಬೇಕೆಂದು ಕಟ್ಟುಪಾಡು ಹಾಕಿಕೊಳ್ಳೋ ನಂಗೆ ಅದು ಹೇಗಿದ್ರೂ ಅದನ್ನೇ ಬದುಕಾಗಿ ನೋಡೋ ಗೆಳೆಯ ಸಿಕ್ಕಿದ್ದ.ಸಣ್ಣ ಸಣ್ಣ ನೋವಿಗೂ ತೀರಾ ಅನ್ನೋವಷ್ಟು ಬೇಸರಿಸ್ತಿದ್ದ ನನ್ನೆದುರು ಅವನ ನೋವಿನ ಬದುಕ ಹರವಿಟ್ಟು ಜೊತೆಗೊಂದು ನಗುವ ತೊಡಿಸಿದ್ದ ಅವ.ನನ್ನೆಲ್ಲಾ ಸಿಟ್ಟುಗಳಿಗೂ ಅಕ್ಷರಶಃ ಅವನೇ ಸಮಾಧಾನವಾಗ್ತಿದ್ದ.ಚಿಕ್ಕವಳಿದ್ದಾಗ ನಾ ಬಿದ್ದು ಕಾಲಲ್ಲಿ ರಕ್ತ ಸೋರ್ತಿದ್ರೆ ಅವ ಬಿಕ್ಕಿ ಬಿಕ್ಕಿ ಅತ್ತಿದ್ದ ನೆನಪಿದೆ ನಂಗೆ.ಯಾವಾಗಲೂ ಹಾಗೆಯೇ ನನ್ನ ಮುಗಿಯದ ಬೇಸರಗಳಿಗೆ ಅವನೇ ಜಾಸ್ತಿ ಕೊರಗ್ತಾನೆ ಅನಿಸಿಬಿಡುತ್ತೆ.

ಅವನೆನ್ನ ಅಣ್ಣನಲ್ಲ ,ಓರಿಗೆಯ ಗೆಳೆಯ ಮಾತ್ರ.ಜೊತೆಗೆ ಓದಿಯೂ ಇಲ್ಲ ಜೊತೆ ಜೊತೆಗೆ ಆಡಿಯೂ ಇಲ್ಲ.ಆದರೂ ಎಲ್ಲೋ ಅಪರೂಪಕ್ಕೆ ಮಾತಿಗೆ ಕೂರ್ತಿದ್ದ ಇಬ್ಬರಲ್ಲೂ ಒಂದು ಚಂದದ ಬಂಧ ಬೆಸೆದಿದ್ದು ಹೇಗೆ ಅನ್ನೋ ಆಶ್ಚರ್ಯ.ಬೆಸೆದಿದ್ದ ಬಂಧವೊಂದನ್ನ ಅಷ್ಟೇ ಚಂದದಿ ಸಲುಹೋ ಅಂತದ್ದೇ ಗೆಳೆಯ ಇನ್ನೆಲ್ಲೂ ಜೊತೆ ಸಿಗಲಾರ.

ಹೇಳೋಕೂ ಮುಂಚೆಯೇ ಅರ್ಥವಾಗ್ತಿದ್ದ ಮನದ  ಭಾವಗಳು,ಗೊತ್ತಿದ್ದೋ ಗೊತ್ತಿಲ್ಲದೆಯೋ ಅವ ಹೇಳೋ ಸಮಾಧಾನಗಳಿಗೆ ತಣ್ಣಗಾಗ್ತಿದ್ದ ಎದೆಯ  ತಲ್ಲಣಗಳು.ಬದುಕು ಯಾರನ್ನೂ ಸೋಲೋಕೆ ಬಿಡಲ್ಲ ನೀ ಎದ್ದು ನಿಲ್ಲಬೇಕಷ್ಟೇ ಅಂತ ಅವ ಹೇಳೋವಾಗ ಸಿಕ್ತಿದ್ದ ಬದುಕ ಭರವಸೆಗಳು  ಸಿಗಲಾರದು ಮುಂದೆಲ್ಲಿಯೂ.
ನನ್ನವನಿಗೂ ಸಣ್ಣದೊಂದು ಅಸೂಯೆ ಹುಟ್ಟೋವಷ್ಟು ಚಂದದ ಗೆಳೆತನ ಅದು.

                     ಬಹುಶಃ ಅವ ಸಲುಹಿದ್ದ ಗೆಳೆತನವೇ ಮೂಲವಿದ್ದೀತು ನಿನ್ನೆಡೆಗೆ ಪ್ರೀತಿಯಾಯ್ತು ಅನ್ನೋ ಗೆಳೆಯರಿಗಿಂತ ನಿನ್ನ ಸ್ನೇಹದೆಡೆಗೆ ಒಲವಾಯ್ತು ಅನ್ನೋ ಗೆಳೆಯರೇ ಜಾಸ್ತಿ ಇಷ್ಟವಾಗೋದು ನಂಗೆ.
ಅವನಿಲ್ಲದೇ ಬದುಕೋದನ್ನ ಕಲಿತಾಗಿದೆ.ಒಂದಿಷ್ಟು ಆತ್ಮೀಕ ಗೆಳೆತನಗಳು ಕೈ ತಾಕಿದ್ರೂ ಅವನಿಲ್ಲದ ಕೊರತೆ ಸ್ಪಷ್ಟವಾಗಿ ಕಾಡ್ತಿದೆ.
ದಕ್ಕಿದ ಅದೆಷ್ಟೋ ಗೆಲುವುಗಳಿಗೆ,ಅನಿರೀಕ್ಷಿತ ಖುಷಿಗಳಿಗೆ ನನಗಿಂತಲೂ ಜಾಸ್ತಿ ಖುಷಿಸುತ್ತಿದ್ದ ಅವನನ್ನೋ ಅವ ಬದುಕಿಂದ ಎದ್ದು ಹೋದ ಮೇಲಿನ ಆ ನೋವಿಗೆ ಇವತ್ತು ಕಣ್ಣ ಪರದೆ ಮಂಜಾಗಿದೆ.
ಒಳಗಿರೋ ವ್ಯಕ್ತಿತ್ವವೊಂದನ್ನ ಪೋಷಿಸಿದ್ದು ಅವ.ಜೊತೆಯಿರೋ ನಗುವ ಉಡುಗೊರೆಯೂ ಅವನದ್ದೇ.ಕನಸುಗಳು ಇನ್ನೇನು ಕೈಗೆಟಕೋ ದೂರದಲ್ಲಿದೆ.ಬದುಕ ಪಯಣ ಈಗಷ್ಟೇ ಶುರುವಾಗಿದೆ.

ನಂಗೊತ್ತು ಗಾವುದ ಗಾವುದ ದೂರ ಸಾಗಿರೋ ಅವ ಮತ್ತೆಂದೂ ವಾಪಸ್ಸಾಗಲಾರ. ಆದರೆ ಅವನ ನೆನಪುಗಳ ಜೊತೆ ನಗುವ ಜೊತೆ ಖುಷಿಯಾಗಿರು ಅಂತೆಲ್ಲ ನಂಗೆ ನಾನೇ ಹೇಳಿಕೊಳ್ಳೋದು ಮನವ ನಂಬಿಸಿಕೊಳ್ಳೋ ಇನ್ನೊಂದು ದಾರಿಯಷ್ಟೇ.
ಮನಸು ಆರ್ದ್ರವಾದಾಗ,ಮುಸ್ಸಂಜೆಗಳು ಬೇಸರವೆನಿಸಿದಾಗ,ಅವ್ಯಕ್ತ ಖುಷಿಗಳನ್ನ ಮನದ ಜೋಳಿಗೆಯಲ್ಲಿ ಜೋಪಾನ ಮಾಡಬೇಕಿರೋವಾಗ,ಮಾತು ಗದ್ದಲ ಎಬ್ಬಿಸಿದಾಗ,ಸಿಟ್ಟು ಕಣ್ಣೀರಾಗಿ ಬದಲಾದಾಗ...ಮತ್ತೆ ಮಾತಿಗೆ ಕೂತುಬಿಡ್ತೀನಿ ಅವನೊಟ್ಟಿಗೆ  ಮತ್ತದೇ ದಕ್ಕೋ ನೆನಪುಗಳ ಜಾಗದಲ್ಲಿ.


ಬದುಕ ಗೆಳೆಯ ಕಲಿಸಿಕೊಟ್ಟ ಬದುಕ ಪ್ರೀತಿ,ಅವ ಹರವಿಟ್ಟ ಖುಷಿಯ ರೀತಿ ಜೊತೆಯಿರಲಿ ಯಾವತ್ತಿಗೂ.
ನೆನಪಲ್ಲಿ ಅವನ ನೆನದು...