Sunday, August 25, 2013

ಪೂರ್ತಿ ಮೌನಿಯಾಗಿ ....ಅವತ್ತದು "ಡಬಲ್ ಎಸ್ " ನಿಲಯ .....ಬರಿಯ ಸಂತೋಷವೇ ಆ ಮನೆಯ ಸಂಪತ್ತು .ಯಾವತ್ತೂ ನಗೋ ,ಎಲ್ಲರನೂ ನಗಿಸೋ ,ಬದುಕ ಬಗೆಗೆ ತೀರಾ ವ್ಯಾಮೋಹ ಹೊಂದಿರೋ ಹುಡುಗಿ ಅವಳು!
ಬದುಕ ಪ್ರೀತಿಯ ಕಲಿಸಿಕೊಟ್ಟ ಇದೇ ಗೆಳತಿ ಕಾರಣ ಹೇಳದೇ ಬದುಕಿಂದಲೇ ಎದ್ದು ಹೋದುದರ ಬಗೆಗೆ ಕಾರಣ ಹುಡುಕ ಹೊರಟು ವಾರಗಳೇ ಸಂದವು ...ಸಿಗದಿದ್ದ ಕಾರಣಕ್ಕೆ ಕಣ್ಣ ಹನಿ ತನ್ನಿರುವ ತೋರಿಸ ಬಂದು ,ಅದ್ಯಾಕೋ ಹೇಳಲಾಗದ ಭಾವದೊಂದಿಗೆ ನೆಲ ತಲುಪಿದ್ದೂ ಆಗಿದೆ .

ಮನೆಯ ಪ್ರೀತಿ,ಮನೆಯವರ ನಡುವಿನ ಆತ್ಮೀಯತೆಯ ಕುರುಹನ್ನೂ ಅರಿಯದ ನಂಗೆ ಈ ಬಂಧಗಳ ಮೊದಲ ಅನುಭವವಾದುದ್ದೂ ನಿನ್ನಿಂದಲೇ !ಬದುಕಂದ್ರೆ ಹಾಸ್ಟೆಲ್ ,ಓದು ಮತ್ತು ನನ್ನಲ್ಲೇ ಮಾತಾಡಿಕೊಳ್ಳೋ ನಾನು ಅಂತಿದ್ದ ನಂಗೆ ಬದುಕಂದ್ರೆ ಪ್ರೀತಿ,ಬದುಕಂದ್ರೆ ಅಪ್ಪ,ಪ್ರೀತಿ ಅಂದ್ರೆ ಅಣ್ಣ ಅಂತೆಲ್ಲಾ ಏನೇನೋ ಭಾವಗಳ ತುಂಬಿದ್ದ ಹುಡುಗಿ ನೀನು .
 "ಡಬಲ್ ಎಸ್" ನಿಲಯಕ್ಕೆ ಪ್ರೀತಿಯಿಂದ ಆಹ್ವಾನಿಸಿದ್ದ ಗೆಳತಿ ನಿನ್ನ ಸುಂದರ ಮನೆಯ ಮನಸ್ಸುಗಳಿಗೂ ಅಷ್ಟೇ ಪ್ರೀತಿಯ ಆಹ್ವಾನವ ನೀಡಿದ್ದೆಯಲ್ಲೇ .
ನಿನ್ನ ,ಅಣ್ಣನ ಹೆಸರುಗಳು ಎಸ್ ಇಂದ ಶುರುವಾದಾಗಲೇ ಇರಬೇಕು ನಿಮ್ಮನೆಯಲ್ಲಿ ಸಂತಸದ ವಾತಾವರಣ ಇರೋಕೆ ...ನನ್ನ ಹೆಸರೂ """"ಎಸ್" ಇಂದ ಬರೋದಕ್ಕೇ ಇರಬೇಕೇನೋ ಮತ್ತೆ ನಿನ್ನ ಆ ಖುಷಿಯ ಅರಮನೆ "ತ್ರಿಬಲ್ ಎಸ್" ಆಗಿದ್ದು !

ಗೆಳತಿಯಾಗಿದ್ದು ಬರಿಯ ಮುಗುಳ್ನಗೆಯಿಂದ ..ದಿನವೂ ಎದುರು ಸಿಕ್ಕಾಗ ಪರಿಚಯದ ನಗುವ ಬಿಟ್ಟರೆ ಅದರಾಚೆಗಿನ ಒಂದು ಮಾತು ಆಡಿರಲಿಲ್ಲ ನಾ ನಿನ್ನೊಟ್ಟಿಗೆ .ಅದ್ಯಾಕೋ ಮಾತಾಡದೇ ನೀ ನನಗೆ ಆಪ್ತಳಾಗಿದ್ದೆ ..ನನ್ನೊಂದಿಷ್ಟು ನೋವುಗಳ ನಾ ನಿನ್ನೊಂದಿಗೆ ಕಣ್ಣಿನಲ್ಲೇ ಹೇಳಿಕೊಂಡಿದ್ದೆ ..ನೀನೂ ಅದಕ್ಕೆ ಕಣ್ಣಿನಲೇ ಸಾಂತ್ವಾನಿಸಿದ್ದೆ ಕೂಡಾ ...ಬರಿಯ ನಗು ಜೀವದ ಗೆಳತಿಯನ್ನಾಗಿಸಿದ್ದು ಮಾತ್ರ ವರ್ಷಗಳ ಈಚೆಗೆ .ದಿನಕ್ಕೊಂದು ತಾಸು ಮಾತಾಡಿಲ್ಲ ಅಂದ್ರೆ ಏನೋ ಕಳೆದುಹೋದ ಭಾವವಿತ್ತು ..ಅದೆಷ್ಟು ಸಲ ನಾ ನಿನ್ನ ಮನೆಗೆ ಬಂದಿದ್ದೆ ಅನ್ನೋಕೆ ಲೆಕ್ಕವಿಲ್ಲ ...ನಿನ್ನನ್ನು ಇಷ್ಟ ಪಡೋ ಅಷ್ಟೇ ನನ್ನನ್ನೂ ಪ್ರೀತಿ ಮಾಡ್ತಿದ್ರು ನಿನ್ನಪ್ಪ ಅಮ್ಮ ,ನಿನ್ನಲ್ಲಿ ತರ್ಲೆ ಮಾಡೋ ಅಷ್ಟೇ ಸಲುಗೆಯ ನಂಗೂ ಕೊಟ್ಟಿದ್ದ ಅಣ್ಣ ..ಅಂತೂ ನಿಮ್ಮನೆಯ ಸದಸ್ಯರಲ್ಲಿ ನಾನೂ ಒಬ್ಬಳಾಗಿ ಹೋದೆ ಅನ್ನೋದು ನನ್ನ ಜೀವಮಾನದ ಖುಷಿ .

ನಿನ್ನಿಂದ ನಾ ಕಲಿತುಕೊಂಡಿದ್ದು ನನ್ನಿಡೀ ಬದುಕ ನಡೆಸೋ ಅಷ್ಟಿದೆ ..ಕೆಲವೊಮ್ಮೆ ಅರ್ಥವಾಗದ ನನ್ನದೇ ಮೂಡ್ ಗಳ ಬದಲಿಸಿದ್ದು ನೀ...ಯಾವತ್ತೂ ಮಾಸದ ಮುಗುಳ್ನಗು ನಿನ್ನ ಸ್ಥಿಗ್ದ ಮುಖದಲ್ಲಿ ನೋಡೋದೇ ನಂಗೆ ಖುಷಿ ...ಇರೋ ಬೇಸರಗಳೆಲ್ಲಾ ನಿನ್ನ ನೋಡಿದ ತಕ್ಷಣ ಮಾಯವಾಗುತ್ತಿದ್ದವಲ್ಲೇ ಗೆಳತಿ...ಒಂದಿನಿತೂ ಬೇಸರಿಸದೇ ಎಲ್ಲರ ಬೇಸರಗಳ ಕಿವಿಯಾಗಿ ತೀರಾ ಫ್ರೌಡೆಯಾಗಿ ಮಾತಾಡೋ ಈ ಮುದ್ದು ಗೆಳತಿ ನನ್ನ ಜೀವದ ಗೆಳತಿ ಅನ್ನೋ ಹೆಮ್ಮೆ ನಂದಾಗಿತ್ತು ..
ಅಕ್ಕನಾಗಿ ,ಗೆಳತಿಯಾಗಿ,ಒಮ್ಮೊಮ್ಮೆ ಅಮ್ಮನಾಗಿ ಎದುರು ಕೂತು ಪ್ರೀತಿಸೋ ಆಸ್ಥೆವಹಿಸೋ ,ಬದುಕ ಪ್ರೀತಿಯ ಬೆಳೆಸಿಕೊಟ್ಟ ಇದೇ ಗೆಳತಿ ಇವತ್ಯಾಕೋ ತೀರಾ ಮೌನಿಯಾಗಿ ಬಿಕ್ಕುತ್ತಿದ್ದಂತನಿಸಿದೆ ನಂಗೆ .
ನಿನ್ನ ಇಲ್ಲದಿರುವಿಕೆಯ ಕ್ಷಣವನ್ನೂ ಊಹಿಸದ ನಾನಿವತ್ತು ಇದೇ ಸತ್ಯವ ಅರಗಿಸಿಕೊಳ್ಳಬೇಡವೇ ಹುಡುಗಿ ?...

ಬದುಕಿಂದ ಎದ್ದು ಹೋಗೋ ಅಷ್ಟು ಜರೂರತ್ತೇನಿತ್ತು ನನ್ನ ಗೆಳತಿಗೆ ?....ನನ್ನೀ ಪ್ರಶ್ನೆಗೆ ಉತ್ತರಿಸಲೇ ಬೇಕಿದೆ ನೀನು .

ನಿನ್ನೆದುರು ಕೂತು ಮಾತಾಡಿ ವಾರವಾದವು ! ಮನೆ ತೀರಾ ಸೊರಗಿದೆ ..ಅಪ್ಪ ಅಮ್ಮ ಕಣ್ಣಂಚಲ್ಲಿ ಮಾತ್ರಾ ಮಾತಾಡುತ್ತಿದ್ದಾರೆ ....ನಗುವೇ ತಾನು ಅಂತಿಪ್ಪ ಅಣ್ಣ ಕೂಡಾ  ಕೈ ಹಿಡಿದು ಬಿಕ್ಕಿ ಬಿಕ್ಕಿ ಅತ್ತಾಗ ಮಾತ್ರ ನಿನ್ನೆಡೆಗೆ ತೀರಾ ಕೋಪ ಬಂದಿತ್ತು
 ನೀ ಯಾವುದೋ ಅರಿಯದ ಕಾರಣಕ್ಕೆ ಬದುಕಿಂದಲೇ ಎದ್ದು ಹೋದೆ ಅನ್ನೋದ ನೋಡಿ ಅರಗಿಸಿಕೊಳ್ಳಲಾಗದೇ  ಕಣ್ಣೀರ ಕಟ್ಟೆ ಒಡೆದುಹೋಗಿದೆ. ಕ್ಯಾಂಪಸ್ ನಲ್ಲಿ ಎಲ್ಲರೂ ಮುಖದ ತುಂಬಾ ಪ್ರಶ್ನೆಗಳ ತೋರೋ ಭಾವ ಭಯ ಆಗುತ್ತೆ ಕಣೇ.... ಅವರಂದುಕೊಂಡಂತೆ ನೀನಿಲ್ಲ ಅನ್ನೋದು ತೀರಾ ಹತ್ತಿರದಿಂದ ನಿನ್ನ ನೋಡಿರೋ ನಮಗೆಲ್ಲಾ ಗೊತ್ತು ..ಪ್ರೀತಿ ಪ್ರೇಮದ ಗೋಜಿಗೆ ಹೋಗದ ಹುಡುಗಿಯನ್ನ ಪ್ರೀತಿಯಲ್ಲಿ ಕೈ ಸುಟ್ಟುಕೊಂಡ್ಲು ಅನ್ನಿಸುತ್ತೆ ಅಂತ ಆಡಿಕೊಳ್ಳೋ ಮಾತುಗಳ ಕೇಳಿದಾಗಲ್ಲೆಲ್ಲಾ ಮನ ಭಾರವಾಗುತ್ತೆ ಹುಡುಗಿ ...

ನಿನ್ನ ಮನದ ದ್ವಂದ್ವಗಳೇನು ಅನ್ನೋದನ್ನ ಅರಿಯೋ ಪ್ರಯತ್ನವ ನಾ ಇನಿತೂ ಮಾಡಲಿಲ್ಲವೇ ಅನ್ನೋ ಒಂದೆ ಪ್ರಶ್ನೆಯ ವಾರದಿಂದ ಕೇಳಿ ಕೇಳಿ ಮನ ನಡುಗುತ್ತಿದೆ .....ನೀ ನನ್ನ ತೀರಾ ತಪ್ಪಿತಸ್ಥಳಂತೆ ಮಾಡಿದ್ದಂತೂ ಸುಳ್ಳಲ್ಲ .....ಸ್ವಲ್ಪವೆ ಬೇಸರವಿದ್ರೂ ಗುರುತಿಸಿ ಸರಿಪಡಿಸೋ ತನಕ ಸುಮ್ಮನಿರದ ಮನೆತುಂಬಾ ಓಡಾಡಿಕೊಂಡು ಗೋಳುಹೊಯ್ಕೊಳೋ ಈ ಮುದ್ದು ಗೌರಿಯ ಇಷ್ಟು ದೊಡ್ಡ ಗೊಂದಲಗಳು ನಂಗೆ ಅಣ್ಣಂಗೆ ಅರ್ಥವಾಗಲೇ ಇಲ್ವಲ್ಲೆ .

ಯಾಕೇ ಹುಡುಗಿ ಮನದ ಭಾರವ ಹರವದೇ ,ಯಾರಲ್ಲೂ ಹೇಳದೇ ಹತ್ತು ಪ್ರಶ್ನೆಗಳ ಹಾಗೆಯೇ ಉಳಿಸಿ ಹೊರಟುಹೋದೆ ನೀ ?....
ಬದುಕ ಬಗೆಗೆ ತೀರಾ ವ್ಯಾಮೋಹ ಒಳ್ಳೆಯದಲ್ಲ ಅಂತ ಅದ್ಯಾವತ್ತೋ ಹೇಳಿದ್ದ ನಂಗೆ ಗಂಟೆಗಳ ಕಾಲ ವ್ಯಾಮೋಹ ಮತ್ತು ಪ್ರೀತಿಯ ನಡುವಿನ ಅಂತರವ ಬಿಡಿಸಿಟ್ಟಿದ್ದ ಹುಡುಗಿ ನೀನೇನಾ ಅನ್ನೋದು ಗೋಜಲು ...ತೀರಾ ವಿಭಿನ್ನವಾಗಿ ,ಫ್ರೌಡವಾಗಿ ಎದುರು ನಿಲ್ಲೋ ಗೆಳತಿ ಇನ್ಯಾವತ್ತೂ ಎದುರು ಬರಲಾರಳು ಅನ್ನೊ ವಾಸ್ತವವ ಅರಿಗಿಸಿಕೊಳ್ಳೋ ಶಕ್ತಿ ನಂಗಿಲ್ಲ ಕಣೆ ...

ನೀನಿಲ್ಲದೇ ನಾನಿರಲ್ಲ ಅನ್ನೋ ಸ್ಪಷ್ಟ ಅರಿವಿದ್ದೂ ನನ್ನನ್ನಿಲ್ಲಿ ಬಿಟ್ಟು ಎದ್ದುಹೋದೆಯಲ್ಲ ..
ನಿಜ ಹೇಳು...ಹೋಗೋವಾಗ ಒಮ್ಮೆಯೂ ನನ್ನ ನೆನಪಾಗಲಿಲ್ವಾ ನಿಂಗೆ ? ನೆನಪಾಗಿದ್ದರೆ ನೀ ಖಂಡಿತ ಹೀಗೆ ಮಾಡ್ತಿರಲಿಲ್ಲ ..ಯಾಕಂದ್ರೆ ನನ್ನ ಗೆಳತಿ ಯಾವತ್ತೂ ನನ್ನ ಒಂಟಿತನಗಳ,ಒಬ್ಬಂಟಿ ಭಾವಗಳ ಜೊತೆಗಾರ್ತಿ.
ವಿಷಯ ಏನೇ ಇರಲಿ .....ನೀನದ ಹೇಳೋ ಸಣ್ಣ ಪ್ರಯತ್ನವ ಮಾಡದೇ ಬದುಕಿಗೆ ಸೋತಿದ್ದು ಮಾತ್ರ ವಿಷಾದ !

ನೀನೇನೋ ಕಾರಣ ಹೇಳದೇ (ಇಲ್ಲದೇ) ಹೊರನಡೆದೆ ..ಆದರೆ ಶಾಶ್ವತ ನೋವೊಂದ ನನ್ನಲ್ಲಿ ಬಿಟ್ಟು ಎದ್ದುಹೋದೆಯಲ್ಲೇ ....ಜೊತೆಗೊಂದಿಷ್ಟು ಜವಾಬ್ದಾರಿಗಳ ಹೊರಿಸಿ ...
ನಾನಿನ್ನು ಅಪ್ಪ ಅಮ್ಮಂಗೆ ಅದೇ ಪುಟ್ಟ ,ಫ್ರೌಡ ಮಗಳಾಗಬೇಕಿದೆ ..ಅಣ್ಣಂಗೆ ಮುದ್ದಿನ ಪುಟ್ಟಿಯಾಗಬೇಕಿದೆ ..ಕ್ಯಾಂಪಸ್ನಲ್ಲಿ ನಗುಮೊಗದ ,ಸ್ನೇಹದ ಹುಡುಗಿಯಾಗಬೇಕಿದೆ..
ಜೊತೆಗೆ ನನ್ನೆಲ್ಲಾ ಮನದ ಭಾವಗಳ ನನಗಿಂತ ಜಾಸ್ತಿ ಅರ್ಥೈಸಿಕೊಳೋ ನನ್ನ ಗೆಳತಿಯೂ ಆಗಬೇಕಿದೆ ...

ಮತ್ತೇ ಈ "ತ್ರಿಬಲ್ ಎಸ್" ನಿಲಯವ "ಡಬಲ್ ಎಸ್" ಮಾಡೋ ಇರಾದೇ ನಂಗಂತೂ ಇಲ್ಲ ...ಯಾಕಂದ್ರೆ ನೀನಿಲ್ಲದೆಯೂ ನಿನ್ನ ನೆನಪುಗಳು ಜೋಪಾನವಾಗಿದೆ ಇಲ್ಲಿ ...
ಕಟ್ಟಿಕೊಂಡ ಕಣ್ಣೀರ ಕಟ್ಟೆ ಒಡೆಯೋಕೂ ಮುನ್ನ ಜೋಪಾನ ಮಾಡಬೇಕಿದೆ ನಾನದನ್ನ ...ಯಾಕಂದ್ರೆ I love my sad tears too !!

ಬದುಕಿಗೊಂದು ಬದುಕ ಪ್ರೀತಿ ಕಲಿಸಿದಿ ಗೆಳತಿ ತನ್ನದೇ ಬದುಕಿಂದ ತಾನಾಗೇ ಎದ್ದು ಹೋದುದ್ದರ ಕಾರಣ ಮಾತ್ರ ಕಾರಣವಾಗೇ ಉಳಿದು ಹೋಯ್ತು ...
ಸಾಧ್ಯವಾದರೆ ಪ್ರಶ್ನೆಗಳಿಗೆ ಉತ್ತರಿಸಿ ಹೋಗು ..
ಜೊತೆಗೆ ....
ಬದುಕೇ ಇಲ್ಲದ ಬದುಕ ಪ್ರೀತಿಯ ಸಾಧ್ಯತೆಯ ಕೂಡಾ ...

27 comments:

 1. ಭಾವ, ಭಾವನೆಗಳ ಮಹಾಪೂರಕ್ಕೆ ಕೊಚ್ಚಿ ಹೋಗಿರಬೇಕು ನಿಮ್ಮ ಮೂರನೇ "ಎಸ್..................
  ಬದುಕು ಸಂಕೀರ್ಣ ಪಯಣದಲ್ಲಿ ಯಾರು ಯಾರೋ ಬಂದು ಹೋಗುವರು...
  ಕೊನೆವರೆಗೂ ಜೊತೆಯಲಿರುವವರು ಮಾತ್ರ ಅಲ್ಪ. ಅದೇ ಬದುಕಿನ ವ್ಯಂಗ್ಯ ಕೂಡಾ.....................................

  ReplyDelete
  Replies
  1. ನಿಜ ಜಿತೇಂದ್ರಣ್ಣಾ ...
   ಬದುಕ ವಿಪರ್ಯಾಸವೇ ಅದೇನೋ ...
   ನಿರುಪಾಯಿಯ ಭಾವವೊಂದ ನೀವೋದ ಬಂದಿದ್ದು ಖುಷಿ ಆಯ್ತು .

   ಭಾವಗಳ ತೇರಲ್ಲಿ ಮತ್ತೆ ಜೊತೆಯಾಗ್ತೀನಿ

   Delete
 2. Replies
  1. ಬರೆದ ಭಾವವೊಂದ ನೀವೋದ ಬಂದಿದ್ದು ಖುಷಿ ಆಯ್ತು .

   ಥಾಂಕ್ ಯು ..

   Delete
 3. ಈ ತ್ರಿಬಲ್ ಮತ್ತು ಡಬಲ್ Sಗಳ ಸುತ್ತ ನಡೆಯುವ ಕಥನ ಭಾವ ತೀವ್ರತೆಯ ಸಂಚಯ.

  ಹಲವು ಬಂದಾಗಳೇ ಹಾಗೆ ಅವು ಹೇಳದೇ ಕೇಳದೇ ಮುನ್ಸೂಚನೆಯನ್ನೂ ಕೊಡದೇ ನಮ್ಮಿಂದ ಕಳಚಿಕೊಳ್ಳುವಾಗ ಮತ್ತು ಆ ನಂತರದ ದಿನಗಳಲ್ಲಿ ಅದರಿಂದ ಆದ ಮನಸ್ಸಿನ ಗಾಯ ಎರಡೂ ಹೇಳಿಕೊಳ್ಳಲೂ ಆಗದ ಘಾತಗಳೇ.

  ReplyDelete
  Replies
  1. ಧನ್ಯವಾದ ಬದರಿ ಸರ್ .

   ಬಿಟ್ಟು ಕೊಡಲಾಗದ ,ಹಾಗೆಯೇ ತೊರೆದೂ ಹೋಗಲಾಗದ ಅದೆಷ್ಟೋ ಬಂಧಗಳಲ್ಲೇ ಬಂಧಿಯಾಗಿರೋ ಭಾವವೊಂದ ನೀವೋದ ಬಂದಿದ್ದು ನನ್ನ ಖುಷಿ :)

   ಭಾವಗಳ ತೇರಲ್ಲಿ ಮತ್ತೆ ಜೊತೆ ಸಿಕ್ತೀನಿ ಇನ್ನೊಂದು ಭಾವದೊಂದಿಗೆ

   Delete
 4. My question is,when you can write and express such feeling about virtual friend in such a emotional way,how hard it will be,if it is real incident or real character..anyhow,good writeup..kepp it up..

  ReplyDelete
  Replies
  1. thank you ji.
   Fighting with the feelings is the most difficult battle ever .
   some times something which is difficult to forget comes in this way :(
   thanks for the words

   Delete
 5. Nice.. now a days am also searching reason for my sister left me.. any way thanks. wt i feeling u completely write in this story.. waiting for my sis back in my life.

  ReplyDelete
  Replies
  1. ಧನ್ಯವಾದ ಹೇಳೋಕೂ ಆಗದ ಗೊಂದಲ ನಂದು .
   I can only tell the gone one will never lose their spot in your heart either by the memory .

   Life at times ,demands!

   Nobody can take away your pain, so never let anybody take away your happiness.
   sorry for overloading you

   Delete
  2. "Nobody can take away your pain, so never let anybody take away your happiness...."

   Super words BP...

   Delete
 6. ವಾಸ್ತವವಾಗಿಯೂ ಸಹ S ನಿಂದ ಆರಂಭವಾಗುವ ಹೆಸರುಗಳೇ ಹೆಚ್ಚು.. ಆತ್ಮೀಯತೆ, ಸ್ನೇಹ, ಗೆಳೆತನ, ಪ್ರೀತಿ ಪ್ರತಿಯೊಂದು ಆರಂಭವಾಗೋದಕ್ಕೆ ಮೊಗದಲ್ಲೋಂಚೂರು ನಗುವಿನ ಅವಶ್ಯಕತೆ ಇದ್ದೇ ಇರುತ್ತದೆಯಲ್ಲೆ.. ಭಾವನೆಗಳ ಮಾಹಾಪೂರವೇ ಹರಿದಿದೆ.. ಭಾವನೆಗಳ ಸಾಗರದಲ್ಲಿ ಕೊಚ್ಚಿಹೋಗುವ ಮುನ್ನ ಬದುಕು ನಮ್ಮನ್ನು ನೋಡಿ ನಗದೇ ಹೋದರೆ ಸಾಕಪ್ಪ..ಹಾಗೆ ಬಾಳೋದು ಮುಖ್ಯ ಬಿಟ್ಟು ಹೋದ, ಕಳೆದುಹೋದ, ಚಿಕ್ಕ ಕಾರಣಕ್ಕೆ ಪ್ರೀತಿಸಿದವರನ್ನೆ ಬಿಟ್ಟುಹೋದವರೆಷ್ಟೊ ಜನ, ಅತಿಯಾದ ಭಾವನೆಗಳ ಸಾಗರದೊಳಗೆ ತೇಲಾಡೋದು ಹಾರಾಡೋದು ಅಪಾಯಕರ, ಸುಳಿ ಎಲ್ಲಿದೆ ಅಂತ ಗೊತ್ತಾಗೋದೆ ಇಲ್ಲ.. ಹುಷಾರಾಗಿರು ಹುಡುಗಿ..!

  ReplyDelete
  Replies
  1. ಥಾಂಕ್ ಯು ಮನಸ್ವಿ ...

   ತುಂಬಾ ದಿನಗಳ ನಂತರ ಮತ್ತೆ ನಿರುಪಾಯದ ಭಾವಗಳ ಹಾಗೇ ಸುಮ್ನೆ ಓದೋಕೆ ಬಂದ್ರಿ !

   ನಿಜ... ಒಂದಿಷ್ಟು ಭಾವ ಬಂಧಗಳಲಿ ಮುಳುಗಿ ಹೋಗಿ ಬದುಕೆಲ್ಲಿ ಅಣುಕಿಸಿ ಬಿದುವುದೋ ಅನ್ನೋ ಗೊಂದಲ ನಂಗೂ ಇದೆ.ಕಾಣೆಯಾದ ಅದೆಷ್ಟೋ ಬದುಕ ಭಾವಗಳ ಜೊತೆ ಹಠಕ್ಕೆ ಬಿದ್ದು ಕೊನೆಗೂ ಕಣ್ಣಂಚು ಮಾತ್ರಾ ಮಾತಾಡಿದ್ದಿದೆ ..


   ಜೊತೆಯಲ್ಲಿರೋ ಬಂಧಗಳು ಬಿಟ್ಟು ಹೋಗದಿರಲಿ ಅನ್ನೋ ಆಶಯದಲ್ಲಿ...

   ಸೂಕ್ಷ್ಮದ ಭಾವವೊಂದ ಸಲೀಸಾಗಿ ವರ್ಗಾಯಿಸಿದ್ದಕ್ಕೊಂದು ಶರಣು.

   Delete
 7. ಇದೇ ಭಾವವನ್ನು ಹುಡುಗಿಯನ್ನು ಸಾರಥಿಯನ್ನಾಗಿಸಿ ನಿರೂಪಿಸಿದ್ದರೆ ಚೆನ್ನಾಗಿತ್ತೇನೋ....ಒಳ್ಳೇದಾಗ್ಲಿ..ಬರೀತಾ ಇರಿ...ಡಬಲ್ ಎಸ್ ಗಳ ಪ್ರಯೋಗ ಹಿಡಿಸಿತು....::)

  ReplyDelete
  Replies
  1. ಥಾಂಕ್ ಯು ಚಿನ್ಮಯಣ್ಣಾ ...

   ಕಥೆಯ ಸಾರಥಿಯೂ ಹುಡುಗಿಯೇ ..ದುರಂತ ನಾಯಕಿಯೂ ಹುಡುಗಿಯೇ ...!!

   ಅನಿಸಿಕೆ ಹೇಳಿದ್ದಕ್ಕೆ ,ಭಾವ ಇಷ್ಟವಾದುದ್ದಕ್ಕೊಂದು ನಮನ :)

   ಭಾವಗಳ ಸಂತೆಯಲ್ಲಿ ಮತ್ತೆ ಜೊತೆಯಾಗ್ತೀನಿ

   Delete
 8. This comment has been removed by the author.

  ReplyDelete
 9. ಹೇಳದೆ ಕೇಳದೆ ಕೆಲವರು ಬದುಕಿಂದ ಮರೆಯಾಗ್ತ್ವಪ್ಪ.... ಅದುಕ್ಕೆ ನನ್ನ ಫ್ರೆಂಡ್ ಒಬ್ಳಿದ್ದ...She says " Please tell me once before moving out of my life " :)
  ಬರಹಕ್ಕೆ ಬಹಳ ಸಾಮರ್ಥ್ಯ ಇದ್ದು ಅನ್ತ... ಅವ್ಳು ಇದ್ನ ಓದಿದರೆ ಚೊಲೊ ಇರ್ತು :)
  "ಬದುಕಿಗೊಂದು ಬದುಕ ಪ್ರೀತಿ ಕಲಿಸಿದಿ ಗೆಳತಿ"- ಈ ಮಾತಿಗಾದ್ರು ಬರಲೇ ಬೇಕು ಅವಳು !

  ReplyDelete
  Replies
  1. ಥಾಂಕ್ ಯು ಜಿ...

   ನಿಜ ...ಹೇಳದೇ ಬದುಕ ಭಾವಗಳಿಗೆ ಜೊತೆಗಯಾಗಿ ಕೊನೆಗೊಮ್ಮೆ ಕಾರಣವನೂ ಹೇಳದೇ ಹಾಗೆಯೆ ಎದ್ದು ಹೋಗೋ ಜನರ ಮೇಲೇ ನಂಗೂ ಹೇಳಲಾರದ ಬೇಸರಗಳಿವೆ .

   ಭಾವವ ಇಷ್ಟಪಟ್ಟಿದ್ದು ಖುಷಿ ಆಯ್ತು ..
   ಭಾವಗಳ ತೇರಲ್ಲಿ ಮತ್ತೆ ಜೊತೆಯಾಗ್ತೀನಿ

   Delete
 10. S S S ಒಂದು ಹಿಂದಿ ಡ್ಯಾನ್ಸ್ ಶೋನಲ್ಲಿ ಒಬ್ಬ ಜಡ್ಜ್ ರಿತೇಶ್ ದೇಶಮುಖ್ S S S ಅಂದ್ರೆ ಸೂಪರಾಗಿತ್ತು ಅಂತ. ಆ ತ್ರಿಪ್ಪಲ್ S ಗಾಗಿ ಎಲ್ಲಾ ಸಖತ್ತಾಗೇ ಮಾಡ್ತಿದ್ದ. ಆ ೨s, 3s ನೀನೇ ಬರ್ದು ಬಿಟ್ಟಿದೆ. ಇನ್ನೆಂತ ಹೇಳದು ? :-)

  ReplyDelete
  Replies
  1. ಧನ್ಯವಾದ ಪ್ರಶಸ್ತಿ ...

   ಎಸ್ ಅನ್ನೋದು ಇಷ್ಟ ಆಯ್ತು ಅನ್ನೋದನ್ನ ಅದೇ ಹಿಂದಿ ಪ್ರೊಗ್ರಾಮ್ ಲಿ ನಾನೂ ನೋಡಿದ್ದೆ ..

   ಆದರೆ ಆ ಎಸ್ ನಾ ನೀವಿಲ್ಲಿ ಹೀಗೆ ಹೇಳಿದ್ದು ನಂಗಿಷ್ಟ ಆಯ್ತು :)

   ಭಾವಗಳ ಸಂತೆಯಲ್ಲಿ ಮತ್ತೆ ಜೊತೆಯಾಗ್ತಿರೋಣ

   Delete
 11. ಭಾವನೆಗಳ ಬೆನ್ನೇರಿ ಹೊರಟ ಪ್ರತಿ ಭಾವುಕರಿಗೆ ಭಾವನೆಗಳು ಅರ್ಥವಾಗುವುದು. ಚಂದದ ನಿರೂಪಣೆ.

  ReplyDelete
  Replies
  1. ಥಾಂಕ್ ಯು ಜಿ.
   ನಿರುಪಾಯಕ್ಕೆ ಸ್ವಾಗತ ..
   ಬರೆದ ಭಾವವೊಂದು ಸ್ವಲ್ಪ ಮಟ್ಟಿಗಾದ್ರೂ ಮನ ತಟ್ಟಿದೆ ಅಂದ್ರೆ ಅದೆನ್ನ ಖುಷಿ..
   ಭಾವಗಳ ತೇರಲ್ಲಿ ಮತ್ತೆ ಜೊತೆಯಾಗ್ತೀನಿ

   Delete
 12. namma atmiyaru nammannella bittu helade kelade hodaga aguva manada noorentu bhavagalannu ati sundaravagi henedideera...

  lekhaki patta dukhada pratiphalavagi nanna kannalli naalku hani bandavu... good baraha bhavya..

  ReplyDelete
  Replies
  1. ಧನ್ಯವಾದ ..
   ಇಷ್ಟವಾಗದ ದುಃಖವೊಂದ ಓದಿ ಕಣ್ಣ ಹನಿಗಳ ನೀವು ಮಾತಾಡಿದ್ದು ನಾ ತಂದ ಭಾವಗಳ ಶಬ್ಧಕ್ಕೊಂದು ಸಾರ್ಥಕ್ಯದ ಭಾವವ ಕೊಟ್ಟಿದ್ದು ಸುಳ್ಳಲ್ಲ.

   ಅಂದ ಹಾಗೇ ,ಪುಟಾಣಿ ಗೆಳತಿಯ ಹೆಸರು ಭಾಗ್ಯಾ :) .
   ಹೆಸರಲ್ಲೇನಿದೆ ಅಂದ್ರಾ ? ...

   ಭಾವಗಳ ವಿನಿಮಯದಲ್ಲಿ ಮತ್ತೆ ಮತ್ತೆ ಸಿಕ್ತಿರ್ತೀನಿ

   Delete
 13. ನಿರ್ಧಾರಗಳು ಪ್ರಶ್ನೆಗೂ ಸಿಗೋಲ್ಲ ಉತ್ತರಕ್ಕೆ ಕಾಯೋಲ್ಲ.. ಮನಪಟಲದಲ್ಲಿ ಮೂಡಿದ ಚಿತ್ರಗಳು ಸ್ಪಷ್ಟ ರೀತಿಯಲ್ಲಿ ಕಾಣದೆ ಹೋದಾಗ ತೆಗೆದುಕೊಳ್ಳುವ ನಿರ್ಧಾರಗಳಿಗೆ ತುಂಬಾ ಶಕ್ತಿ ಇರುತ್ತದೆ.. ಹಾಗೆಯೇ ದುರ್ಬಲವಾಗಿರುತ್ತದೆ. ಆ ಕ್ಷಣದಲ್ಲಿ ಯಾವುದರ ಭಾರ ಹೆಚ್ಚುತದೆಯೋ ಆ ಕಡೆ ನಿರ್ಧಾರಗಳು ವಾಲುತ್ತವೆ. ಸ್ನೇಹದ ಮೆಟ್ಟಿಲುಗಳಲ್ಲಿ ಜೊತೆಯಾದವರು ಕೆಲ ಮೆಟ್ಟಿಲು ಹತ್ತಿದ ಮೇಲೆ ಕಾಣದೆ ಇರದೇ ಹೋದರೆ ಆಗುವ ತಳಮಳ ನಿನ್ನ ಲೇಖನದಲ್ಲಿ ಸುಂದರವಾಗಿ ಮೂಡಿಬಂದಿದೆ. ಸೂಪರ್ ಬಿ ಪಿ

  ReplyDelete
  Replies
  1. ಥಾಂಕ್ ಯು ಶ್ರೀಕಾಂತಣ್ಣಾ ...

   ನಿಜ ಆ ಕ್ಷಣಕ್ಕೆ ಸರಿ ಅನಿಸೋ ನಿರ್ಧಾರಗಳು ಆಮೇಲೆ ಬೆರೆಯವರ ಬದುಕ ಪೂರ್ತಿ ಕಾಡ ಬರುತ್ತೆ ಅನ್ನೋದು ಸತ್ಯ .
   ದುರ್ಬಲ ನಿರ್ಧಾರಗಳಿಗೆ ನಂದೂ ಒಂದು ಬೇಸರದದ ಧಿಕ್ಕಾರವಿದೆ.

   ಬಿಡುವಿರದ ಸಮಯದಲ್ಲೂ ಬಿಡುವು ಮಾಡಿಕೊಂಡು ಈ ಭಾವವ ನೀವೋದ ಬಂದಿದ್ದು ಖುಶಿ ಆಯ್ತು.
   ಭಾವಗಳ ತೇರಲ್ಲಿ ಯಾವಾಗ್ಲೂ ಸಿಕ್ತಿರ್ತೀನಿ

   Delete
 14. ® ಲೇಖನಗಳನ್ನೂ ನೋಡಿ ತುಂಬಾ ಸಂತೋಷವಾಯಿತು.
  visit my site

  http://spn3187.blogspot.in/

  Also say Your Friends
  Find me

  ReplyDelete