Thursday, April 30, 2015

ಸಂಘರ್ಷಿಣಿ ...


             ಭೋರ್ಗರೆವ ಸಮುದ್ರ ಅದು.ಅದಕ್ಕೂ ಪುರುಷತ್ವದ ಹಮ್ಮು.ನಾನೋ ಅಲ್ಲೇ ಎಲ್ಲೋ ಕೂತು  ರಾತ್ರಿಯಿಡೀ ನಕ್ಷತ್ರ ಎಣಿಸಿದ್ದಿದೆ. ಕನಸುಗಳನ್ನ ಎಣಿಸೋಕಾಗದೇ ಹಾಗೆಯೇ ರಾಶಿ ಹಾಕಿದ್ದಿದೆ.ಕಡಲಂದ್ರೆ 'ಸ್ಪಟಿಕ' ನೆನಪಾಗ್ತಾಳೆ... ಹೀಗಾಗಿಯೇ ಏನೋ ಕಡಲ ಜೊತೆಗಿನ ನಂಟು,ನೆನಪು,ಪ್ರೀತಿ ಎಲ್ಲವೂ ದೊಡ್ಡದಿದೆ.

             ಅದೆಷ್ಟು ನಿರ್ಬಂಧಿತ ಬದುಕು ಅವಳದ್ದು.ವಾರದ ಕೊನೆಯಲ್ಲಿ ನನ್ನ ಜೊತೆ ಒಂದರ್ಧ ಗಂಟೆ ಮಾತಿಗೆ ಕೂತರೆ ಇಡೀ ವಾರದ ಮಾತು ಮುಗಿಯಬೇಕು. ಆಮೇಲೊಂದು ನಿಮಿಷವೂ ಅಲ್ಲಿರದೆ ಮನೆಯ ಕಡೆ ಹೊರಡಬೇಕಿತ್ತು.ಬದುಕ ಬಗೆಗೆ ಕಾತರ ನಿರೀಕ್ಷೆಗಳೇನೂ ಇಲ್ಲದೆ ಎಲ್ಲವನ್ನೂ ಒಪ್ಪೋ  ಎಲ್ಲದನ್ನೂ ಅಪ್ಪೋ ಅವಳಂದ್ರೆ ಮುಗಿಯದ ಕುತೂಹಲ. ತಿಂಗಳಿಗೆ ಆ ಮೂರು ದಿನ ಹೊರಗಡೆ ಕೂರಲೇಬೇಕಿದ್ದ ಅವಳ ಮನೆಯ ಆ ರೀತಿಗಳ ವಿರುದ್ದ ಅದೆಷ್ಟು ಬಾರಿ ಮಾತಾಡಿದ್ದೆ ನಾ. ಅವಳೋ ಎಲ್ಲವನ್ನೂ ಪ್ರೀತಿಯಿಂದಲೇ ಸಹಿಸಿಕೊಳ್ಳೋ, ಜಾಸ್ತಿ ಅನಿಸೋವಷ್ಟು ಒಳ್ಳೆಯತನವಿರೋ ಹುಡುಗಿ. 
         
          ಸಣ್ಣ ಸಣ್ಣದಕ್ಕೂ ಮನೆಯವರ ಅನುಮತಿ ಕೇಳೋ ಅವಳಿಗೆ ಯಾವುದಕ್ಕೂ ಏನೂ ಕೇಳದ ಹೇಗ್ ಹೇಗೋ ಬದುಕೋ ನಾ ಗಂಟು ಬಿದ್ದಿದ್ದೆ  ಒಮ್ಮೆಯಾದರೂ ನನ್ನೂರಿಗೆ ಬಾ ಅಂತ.ಮನೆಯಲ್ಲೊಮ್ಮೆ ಕೇಳಿ ಆಮೇಲೆ ಹೇಳ್ತೀನಿ ಅಂದಿದ್ದವಳು ಇವತ್ತಿಗೂ ಏನೂ ಹೇಳದೆ ಸುಮ್ಮನಿದ್ದಾಳೆ.  ಅವಳ ಜೊತೆಯಲ್ಲಿ ನಮ್ಮನೆಯ ಮಹಡಿಯ ಮೇಲೆ ಕೂತು ಮತ್ತೆ ಹುಚ್ಚುಚ್ಚು ಕನಸು ಕಟ್ಟೋ,ಹೆಚ್ಚೆಚ್ಚು ನಕ್ಷತ್ರ ಎಣಿಸೋ ಆಸೆ ಇನ್ನೂ ಹಾಗೆಯೇ ಉಳಿದಿದೆ. 
  
            'ಎದೆಗೊರಗಿ ಕೂತರೆ ಆಹ್! ಅನಿಸಬೇಕು. ಅಂತಹ ಹುಡುಗ ಬೇಕು ಕಣೆ ಬದುಕಿಗೆ' ಅಂತೆಲ್ಲ ಹೇಳಿ ನಂಗೂ ಅಂತಹುದ್ದೆ ಹುಡುಗ ಬೇಕು ಅನ್ನಿಸೋವಷ್ಟು ಹುಚ್ಚು ಹಿಡಿಸಿದ್ದವಳು ಅವಳು. ಅವತ್ತೇ ಹೇಳಿದ್ದೆ ಅವಳಿಗೆ  ನಿನಗೇನಾದರೂ ಆ ಹುಡುಗ ಸಿಕ್ಕರೆ ಖಂಡಿತ ಹಾರಿಸಿಕೊಂಡು ಹೋಗ್ತೀನಿ ನೋಡು ಅಂತ. ನಕ್ಕು 'ನಂಗೆ  ರಾಧೆ ಕೂಡಾ ಇಷ್ಟವೇ ಕಣೆ ಗೆಳತಿ, ನನ್ನೀ ರುಕ್ಮಿಣಿಗಾಗಿ ನಾ ರಾಧೆಯಾಗೋಕೆ ರೆಡಿ' ಅಂತ ಕೆನ್ನೆ ತಟ್ಟಿ ಹಣೆಗೊಂದು ಹೂಮುತ್ತನ್ನಿತ್ತವಳನ್ನ ನೋಡಿ ಕಣ್ಣಂಚು ಒದ್ದೆಯಾಗಿತ್ತು ಅವತ್ತು. ನಾನಂದ್ರೆ ಅವಳಿಗೆ ರಾಧೆಯಷ್ಟೇ ಪ್ರೀತಿ. ಆಮೇಲೆಲ್ಲಾ ಅವಳಿಗೆ ಯಯಾತಿ, ದೇವಯಾನಿ, ರಾಧೆ  ಇಷ್ಟವಾದ್ರೆ ನಂಗೆ ಹಿಮವಂತ, ಶರ್ಮಿಷ್ಠೆಯ ಪಾತ್ರಗಳು ತುಂಬಾ ಇಷ್ಟವಾಗ್ತಿದ್ವು.  ಅವಳಿಷ್ಟ ಪಡೋ ಹುಡುಗ ಸಿಕ್ಕಿದ್ದ ಕೂಡಾ. ಬದುಕಿಗೆ ಅವ  ಸಿಕ್ಕ ಮೇಲೆ ಬದುಕೆಷ್ಟು ಚಂದವಲ್ವೇನೆ ಅಂತ ಕೇಳಿದ್ದವಳ ತೋಳು ತಬ್ಬಿ ಬಿಕ್ಕಿದ್ದವಳು ಅವಳು. ಮತ್ತೆ ಮನೆಯವರ ಅನುಮತಿಗೆ ಕಾದು, ಬದುಕಾಗಿ ಪ್ರೀತಿಸಿದವನನ್ನು ತೊರೆಯೋವಾಗಿನ  ಅವಳ ತಳಮಳಗಳು, ಬೇಸರಗಳು ಅರ್ಥವಾಗ್ತಿದ್ರೂ ಏನೂ ಹೇಳೋಕೆ ತೋಚದ ಸಂದಿಗ್ಧ. ಹೇಳಿದಂತೆಯೇ ರಾಧೆಯ ಆ ಕೃಷ್ಣನನ್ನು ಬಿಟ್ಟುಕೊಟ್ಟಿದ್ಲು ನಂಗಾಗಿ. 

             ನಾ ಅವನ ಬದುಕಿಗೆ ಬರೋಕೂ ಮುಂಚೆಯೂ ಅವಳಿದ್ಲು. ನಾ ಬಂದ ಮೇಲೆಯೂ ಅವಳೇ ಕನವರಿಕೆಯ ಬದುಕಾಗಿಬಿಟ್ಟಿದ್ದಾಳೆ. ಈಗಲೂ ಅವನ ರಾಯಲ್ ಎನ್ಫಿಲ್ದ್ ನ ಹಿಂದಿನ ಸೀಟ್ ಅಲ್ಲಿ ಕೂರೋವಾಗ ಆ ಜಾಗ ಅವಳದ್ದೇನೋ ಅಂತನಿಸುತ್ತೆ.ನಂಗೇ ಪ್ರೀತಿಯಾಗೋ ನನ್ನ ಉದ್ದ ಕೂದಲು ಈಗೀಗ ಅವನಿಗೆ ಅವಳ ನೆನಪಿಸೋ ಇನ್ನೊಂದು  ಭಾವ ಅಷ್ಟೇ ಏನೋ ಅನಿಸಿಬಿಡುತ್ತೆ.  ಮರಳ ದಂಡೆಯ ಮೇಲೆ ಕಟ್ಟೋ ಆ ಗುಬ್ಬಚ್ಚಿ ಗೂಡು,ಜೊತೆ ಹಾಕೋ ಪ್ರತಿ ಹೆಜ್ಜೆಯಲ್ಲೂ ಅವಳ ಸುಳಿವು. ಅವ ಅಂದ್ರೆ ಹೂಕಂಪನದ ಬದಲು ಒಂದು ಅತೀ ಆತ್ಮೀಯ ಭಾವ ನನ್ನನ್ನ ಬಂಧಿಸುತ್ತೆ  . ಅವ 'ನೀ ನನ್ನ ಆತ್ಮೀಯ ಗೆಳತಿ'ಅಂದಾಗ ಮನ ಸಂಭ್ರಮಿಸೋ ಕಡಲಾಗುತ್ತೆ. 

         ಬರೀ ಪ್ರೀತಿಸಿಕೊಂಡು ಮಾತ್ರ ಗೊತ್ತಿರೋ ಹುಡುಗಿಗೆ ಪೂರ್ತಿಯಾಗಿ ಯಾರನ್ನೂ ಪ್ರೀತಿಸಿ ಗೊತ್ತಿಲ್ಲ. ಅವ ಕೂಡಾ ನನ್ನನ್ನ ಇಡಿಯಾಗಿ ಪ್ರೀತಿಸಲಾರನೇನೋ. ಆದರೆ ನಂಗೋ ಅವಳು ನನ್ನ ಪ್ರೀತಿಸಿದಂತೆಯೇ ನನ್ನನ್ನ ನಾನಾಗಿ ಪ್ರೀತಿಸೋ ಹುಡುಗ ಬೇಕು. ಬದಲಾಗ್ತಿರೋ ನನ್ನದೇ ಭಾವಗಳ  ಮಧ್ಯೆ ಅವನ ರುಕ್ಮಿಣಿಯಾಗೋದು  ಅಂತ  ಅವಳಿಗೆ ಹೇಳಬೇಕೆಂದುಕೊಂಡಿದ್ದೀನಿ. ಅತ್ತ ಅವಳು ದೇವಯಾನಿ ಆಗ್ತಿದ್ರೆ ಇತ್ತ ಶರ್ಮಿಷ್ಠೆ ನನ್ನನ್ನಾವರಿಸಿಕೊಳ್ತಿದಾಳೆ. ಇಬ್ಬರ ಮಧ್ಯ ಯಯಾತಿ ಎಲ್ಲಿ ಕಳೆದು ಹೋದ ಅನ್ನೋದನ್ನ ಹುಡುಕಬೇಕಿದೆ. 

ಯಾಕೋ ಈಗೀಗ ಈ ರಾಧೆಯನ್ನ ಇನ್ನಿಲ್ಲದಂತೆ ಪ್ರೀತಿಸಬೇಕನ್ನಿಸ್ತಿದೆ . 
               

9 comments:

 1. This comment has been removed by the author.

  ReplyDelete
 2. ಹಿಮವಂತ...... ಮತ್ತೊಮ್ಮೆ ನೆನಪಾಗಿಸಿಬಿಟ್ಟೆ...

  ಚಂದದ ಬರಹ......

  ReplyDelete
 3. ರಾಧೆ ರುಕ್ಮಿಣಿ ದೇವಯಾನಿ ಶರ್ಮಿಷ್ಠೆ! ಅವನೊಬ್ಬ ಹಿಮವಂತ.. ಮತ್ತೆ ಮತ್ತೆ ನೆನಪಾಗುವ ಯಯಾತಿ! ಜೋಪಡಿಯ ಈ ಗೋಪಿಕೆಯ ಸದಾ ಕಾಡುವ ಮಾಧವ.. ಬರಹಗಳು ಬದಲಾದರೂ ಭಾವ ಒಂದೇ ಅಲ್ಲವೇನೆ ಗೆಳತಿ.. :* ಹಿಂಗೇ ಬರೀತಿರು.. ಚಂದ ಇದೆ :) :)

  ReplyDelete
 4. ಎಲ್ಲೋ ತೇಲಿಸಿಬಿಟ್ಟ ಬರಹ...

  ReplyDelete
 5. ಶರ್ಮಿಷ್ಠೆ, ದೇವಯಾನಿ, ಯಯಾತಿಯರ ಮತ್ತೆ ನೆನಪಿಸಿದೆ ನೀ... ಆ ಮೂವರ ಜತೆಗೆ ಆ ಮೂವರ ಭಾವಾಂಶಗಳ ಒಡನಾಡಿಯಾಗಿಯೂ ಮೂವರನ್ನೂ ಮೀರಿ ನಿಂತವನೊಬ್ಬನಿದ್ದನಲ್ಲ ನೈಜ ಪ್ರೇಮಯೋಗಿ 'ಕಚ' ಅವನೂ ನೆನಪಾಗಿ ಕಾಡುತಿದ್ದಾನೆ ನನ್ನನೀಗ...❤
  ತುಂಬಾ ಚಂದದ ಭಾವ ಬರಹ ಕಣೇ...❤ ❤

  ReplyDelete
 6. koneya ondashTu saalugaLu tumbaanE kaaDtaave.. saahitya kRushhi munduvareyali (y) :)

  ReplyDelete