Sunday, April 28, 2013

ನೀನಿಲ್ಲದೇ ....ಅವತ್ತೇ ಹೇಳಿದ್ದಳು ಅವಳವನಿಗೆ ...
"ಬದುಕಲ್ಲಿ ಕಳಕೊಂಡಿದ್ದನ್ನ ಮಾತ್ರ ಹುಡುಕು..ಸಿಗದಿದ್ದ ಪ್ರೀತಿಯನ್ನೇಕೆ ಕಳಕೊಂಡ ಪ್ರೀತಿ ಅನ್ನುತ್ತೀಯಾ !ಸಿಗದೇ ಕಳೆದು ಹೋದುದರ ಬಗ್ಗೆ ನಿನಗಿರೋ ಅತಿಯಾದ ವ್ಯಾಮೋಹಕ್ಕೆ ನನ್ನಲ್ಲಿ ಯಾವ ಶಬ್ಧವೂ ಇಲ್ಲ ...
ಗೆಳೆಯಾ, ಬೇಸರಿಸದಿರು ..ನಾ ನಿನ್ನವಳಲ್ಲ "

ಬದುಕ ಪ್ರಶ್ನೆಗೆ ನೇರಾ ನೇರಾ ಉತ್ತರ ಕೊಟ್ಟಿದ್ದ ಅವಳ ಬಗೆಗೊಂದು ಆಶ್ಚರ್ಯದ ನೋಟ ನಂಗೆ ಮೂಡಿದ್ದು ಸಹಜ ಅನ್ನೋ ಭಾವ ನಂದು ...

ವರ್ಷವೊಂದರ ಹಿಂದಿನ ಮಾತು ....

ಅವಳಂದ್ರೆ ......
ಮೌನ ಗೌರಿ ! ತನ್ನ ಪಾಡಿಗೆ ತಾನಾಯ್ತು ,ತನ್ನ ಓದಾಯ್ತು ಅಂತಿದ್ದವಳು...ಹೀಗೆಯೇ ಇರಬೇಕೆಂಬ ಕಟ್ಟುಪಾಡುಗಳೂ ಇಲ್ಲದೇ ,ಹೇಗೋ ಇದ್ದರಾಯ್ತು ಅನ್ನೋ ಉದಾಸೀನ ಭಾವವೂ ಇಲ್ಲದೇ .....

ಬದುಕ ಬಗೆಗೆ ಯಾವುದೇ ಬೇಸರವಿಲ್ಲದೇ ,ಬದುಕ ರೇಸ್ ನಲ್ಲಿ ಮುಂದೆಯೆ ಇರಬೇಕೆಂಬ ಧಾವಂತವೂ ಇಲ್ಲದೇ ,ಬದುಕೊಂದಿಗೆ ಯಾವುದೇ ನಿರೀಕ್ಷೆ ಇಲ್ಲದೆ ಇದ್ದ ಸಾದಾ ಸೀದಾ ಹುಡುಗಿ ಅವಳು....

ಸೌಮ್ಯ ಸ್ವಭಾವ ,ಸ್ನೇಹದ ಕುರುಹು ಸಿಕ್ಕರೂ ಸ್ವಲ್ಪ ಆತ್ಮೀಯತೆ ತೋರಿದ್ರೂ ಅವರನ್ನ ಹಚ್ಚಿಕೊಳ್ಳೋ ಅಷ್ಟು ಭಾವ ಜೀವಿ ..

ಪ್ರೀತಿ ಪ್ರೇಮದ ಬಗ್ಗೆ ವಯೊ ಸಹಜ ಕುತೂಹಲ ಬಿಟ್ರೆ ಬೇರೆ ಯಾವ ಮಧುರ ಭಾವಗಳೂ ಮೂಡಿರದ ಮನವದು ....ಪ್ರೀತಿಯ ನಿವೇದನೆ ಮಾಡಿಕೊಂಡಿದ್ದ ಅದೆಷ್ಟೋ ಹುಡುಗರಿಗೆ ಅವಳ ಮೌನವೆ ಉತ್ತರವಾಗಿ ಆ ಮೌನವೇ ಬೇಸರ ತರಿಸಿ ಅವರ್ಯಾರೂ ಅವಳ ತಂಟೆಗೆ ಬರದೇ ಸುಮ್ಮನಾಗುತ್ತಿದ್ದರು ...

ಇಂತದ್ದೇ ಒಂದು ಸಂದರ್ಭದಲ್ಲಿ ಮಾತಾಡಿಸಿದ್ದ ಹುಡುಗ ಅವನು ....

ಸ್ವಲ್ಪ ಆತ್ಮೀಯತೆಗೆ ಮಾರು ಹೋಗುತ್ತಿದ್ದ ಹುಡುಗಿಗೆ ಅವನ ಪ್ರೀತಿಯ ಆತ್ಮೀಯತೆಗೆ ಮಾತೆ ಬರುತ್ತಿರಲಿಲ್ಲ !...ತನಗಿಂತ ಅವಳನ್ನೇ ಹೆಚ್ಚು ಇಷ್ಟಪಡೊ ಹುಡುಗ ಅವನು ...!


                           
ಸ್ನೇಹದ ಸಲುಗೆಯಲ್ಲಿ ಆತ್ಮೀಯತೆಯ ಮಾತಲ್ಲಿ ಕಳೆದು ಹೋಗಿದ್ದಳು ...ಬದುಕಲ್ಲಿ ಒಂದಿಷ್ಟು ಬದಲಾದ ಭಾವಗಳ ಅನುಭವ ಆಗುತ್ತಿತ್ತು ...ಬದುಕ ಬಗೆಗೆ ನಿರೀಕ್ಷೆ ಒಂದು ಮೂಡಿತ್ತು ..

ತನಗಾಗಿ ಒಬ್ಬ ಆತ್ಮೀಯನಿರೋ ಭಾವ ಬಲವಾಗಿತ್ತು ....ಮನದ ಮಾತು ಕೇಳೋಕೆ ಒಂದು ಸುಂದರ ಮನವಿತ್ತು ...ಅಳುವ ಕಂಗಳಿಗೇ ಸಮಾಧಾನಿಸೋ ಕೈ ಒಂದಿತ್ತು ...ನೋವ ಭಾವಕ್ಕೆ ಜೊತೆಯಾಗೋ ತೋಳಿತ್ತು ....ಅದೆಷ್ಟೋ ಬಾರಿ ಆ ತೋಳಲ್ಲಿ ಮುಖ ಹುದುಗಿಸಿ ಕಳೆದ ಒಂಟಿ ತನದ ನೆಮ್ಮದಿಯಿತ್ತು .....

ಅಲ್ಲೊಂದು ನಿಶ್ಕಲ್ಮಶ ಪ್ರೀತಿಯ ಸ್ನೇಹವಿತ್ತು ...ಸ್ನೇಹದ ಸಲುಗೆಯಿತ್ತು ..ಸ್ನೇಹಿತನ ಪ್ರೀತಿಯಿತ್ತು ...ಪ್ರೀತಿಯಲ್ಲೊಂದು ಕಾಳಜಿಯಿತ್ತು ...

ಬಹುಶಃ ಬದುಕಿಗೆ ಬೇಕಾದ ಎಲ್ಲಾ ಭಾವಗಳೂ ಅಲ್ಲಿದ್ದವೇನೋ .....ಕಳಕೊಂಡ ಬದುಕ ಪ್ರೀತಿ ಮತ್ತವಳಿಗೆ ದಕ್ಕಿತ್ತು !

ಯಾರಿಗೂ ಕಾಯದ ಕಾಲ ಹೀಗೇ ಸಾಗಿತ್ತು ...

ಅಂತದ್ದೇ ಒಂದು ದಿನ ...

ಮುಸ್ಸಂಜೆಯ ತಂಗಾಳಿಗೆ ಮೈಯೊಡ್ದಿ ಅವನು ಹೇಳಿದ್ದ ...

ಗೆಳತಿ ....ತುಂಬಾ ದಿನದಿಂದ ಬಚ್ಚಿಟ್ಟುಕೊಂಡ ಭಾವ ಇದು ...ನಂಗೇ ಗೊತ್ತಿಲ್ಲದೇ ನಾ ನಿನ್ನೆಡೆಗೆ ವಾಲಿದ್ದೇನೆ...ಹೇಳೋಕೆ ಧೈರ್ಯ ಇಲ್ಲದೇ ಹೇಳದೆ ಇರಲೂ ಅಗದೇ ಅದೆಷ್ಟೋ ನೀರವ ರಾತ್ರಿಗಳು ಸಂದ ಮೇಲೆ ಇವತ್ತು .... ..ಇವತ್ತು..ನಿನ್ನೆದುರು ಮಂಡಿಯೂರಿ ಕೇಳ ಬಂದೆ ...ನೀ ನನ್ನ ಜೀವದ ಗೆಳತಿ ...ಜೀವನದ ಸಂಗಾತಿಯಾಗು ಬಾ ......

ಅಲೆಯೊಂದಕ್ಕೆ ಮುಖವೊಡ್ಡಿ ಖುಷಿಸುತ್ತಿರೋವಾಗ ಬಂದ ಅದೇ ಅಲೆಗೆ ಕೊಚ್ಚಿ ಹೋದ ಭಾವ ಅವಳದ್ದು !!

ತುಂಬಾನೇ ಇಷ್ಟ ಪಡೋ ಅಲೆಯೊಂದು ಅವಳನ್ನೆ ಎಳೆದುಕೊಂಡು ಹೋಗಿತ್ತಲ್ಲಿ ...

ಸ್ವಚ್ಚ ಸುಂದರ ಪರಿಶುದ್ದ ಸ್ನೇಹ ನಮ್ಮದೆಂಬ ಅವಳ ಮನದ ಭಾವವನ್ನೂ ಕೊಚ್ಚಿ ಹೋಗೋ ಅಷ್ಟು ಶಕ್ತಿ ಹೊಂದಿದ್ದ ಆ ಅಲೆಯನ್ನು ನೋಡಿ ಕ್ಷಣವೊಂದಕ್ಕೆ ಅವಳೂ ನಿಬ್ಬೆರಳಾಗಿದ್ದಳು...

ಆಗಷ್ಟೇ ಪಡಕೊಂಡ ಸ್ನೇಹವಲ್ಲದ ಪ್ರೇಮದ ಪ್ರೀತಿ ಅವಳ ಬದುಕ ಪ್ರೀತಿಯನ್ನ ಅಕ್ಷರಶಃ ಕೊಂದಿತ್ತು ...

ಸ್ನೇಹಕ್ಕೂ ಮೀರಿದ ಪ್ರೀತಿಯ ಭಾವ ಅವಳಿಗ್ಯಾವತ್ತೂ ಅನುಭವವಾಗಿರಲೇ ಇಲ್ಲ ...ಅವನಿಗಾ ಭಾವ ಬರೋ ತರ ತಾನ್ಯಾವತ್ತು ನಡಕೊಂಡೆ ಅಂತ ಒಬ್ಬಂಟಿಯಾಗಿ ಕೂತು ಅದೆಷ್ಟೋ ಮುಸ್ಸಂಜೆಯಲ್ಲಿ ತನ್ನನ್ನೇ ತಾ ಪ್ರಶ್ನಿಸಿಕೊಂಡಳು .....ಅದು ಅವ ಅಂದುಕೊಂಡ ಭಾವ ಕಣೇ ನೀನ್ಯಾಕೆ ಅಷ್ಟು ಬೇಸರ ಮಾಡ್ತೀಯಾ ಆ ಭಾವಕ್ಕೆ ಅಂತ ಸಂತೈಸ ಬರೋ ಮನವನ್ನ ದೂರ ಕಳಿಸಿ ಕಳಿಸಿ ತನ್ನನ್ನ ತಾ ಕೇಳುತ್ತಿದ್ದಳು ...

ಕೊನೆಗೊಮ್ಮೆ ಸಿಕ್ಕ ಉತ್ತರ ಮಾತ್ರ ಅವಳನ್ನ ಮಂಕಾಗಿಸಿತ್ತು ...


                                 
"ಹುಚ್ಚು ಹುಡುಗಿ ...ಹುಡುಗನೊಟ್ಟಿಗಿನ ಸ್ನೇಹ ತುಂಬಾ ದಿನ ಪರಿಶುದ್ಧ ಸ್ನೇಹವಾಗಿ ಉಳಿಯಲ್ಲ ಕಣೇ ...ಸ್ನೇಹ ಕಾರಣವಿಲ್ಲದೇ ಪ್ರೀತಿಯಾಗಿ ಹೋಗುತ್ತೆ ...ನಿನ್ನೀ ಸ್ನೇಹದ ಸಲುಗೆಯೇ ,ಆತ್ಮೀಯತೆಯ ಭಾವವೆ ಅವನಿಗೆ ನಿನ್ನದೂ ಪ್ರೀತಿ ಅನ್ನಿಸಿರಬಹುದು ....ನೀ ಹಂಚಿಕೊಂಡ ನಿನ್ನ ದುಃಖ ,ತಲೆಯಿರಿಸಿ ಅತ್ತ ಕಣ್ಣ ಹನಿ ಅವನ ಎದೆಗೆ ನಿನ್ನ ಮಧುರ ಪ್ರೀತಿಯ ಅನುಭವ ನೀಡಿದೆ ಗೆಳತಿ ....ಬೇಸರಿಸದಿರು ....ಅವನ ಪ್ರೀತಿಯನ್ನ ಒಪ್ಪಿ ಅಪ್ಪಿಕೊಂಡುಬಿಡು ಒಮ್ಮೆ " ಮಾತಾಡಿದ ಮನವನ್ನ ಧಿಕ್ಕರಿಸಿ ಅಂದಿನಿಂದ ಮನದ ಮಾತನ್ನ ಕೇಳೋದನ್ನ ಬಿಟ್ಟಿದ್ದಳು ....

ಅದೇ ಮುಸ್ಸಂಜೆಯಲ್ಲಿ ಒಬ್ಬಂಟಿಯಾಗಿ ಬಿಕ್ಕಿ ಬಿಕ್ಕಿ ಅತ್ತಾಗ ಸಂತೈಸ ಬರೋಕೆ ಅವನಿರಲಿಲ್ಲ ..ಕಣ್ಣೀರ ಹನಿಯಾಗಿ ಕೈ ಇಂದ ಜಾರಿ ಹೋಗಿದ್ದ ...

ಮತ್ತದೇ ವರ್ಷದ ಹಿಂದಿನ ಬದುಕಿನೆಡೆಗೆ ಫ಼ೆದರ್ ಲೈಟ್ ಆಗಿರೋ ಬದುಕಿನೆಡೆಗೆ ಮುಖ ಮಾಡಿದ್ದಳು ..ಸ್ನೇಹದ ಆತ್ಮೀಯತೆಯೊಂದನ್ನು ಕಳಕೊಂಡ ಭಾರದ ಮನದೊಂದಿಗೆ ....

ಮೊದಲೇ ಮಿತಭಾಷಿಯಾಗಿದ್ದ ಅವಳು ಈಗ ಅಕ್ಷರಶಃ ಮೌನಿ...

ಹುಡುಗರನ್ನ ನೋಡೋಕೂ ಭಯ ಪಡೋ ಹುಡುಗಿಯಾಗಿ ಬಿಟ್ಟಿರೋ ಈ ಹುಡುಗಿ ...ಹುಡುಗು ಬುದ್ದಿಯಿಲ್ಲ ....ಎಲ್ಲಾ ಭಾವಕ್ಕೂ ಒಂದೆ ಭಾವ ...ಮೌನದ ಸತ್ವ ಇಲ್ಲದ ನಗು ಮಾತ್ರ ಅವಳದೆನ್ನೋ ತರದ ಭಾವ ...

ಕಳಕೊಂಡ ಸ್ನೇಹವನ್ನ ಹುಡುಕಿ ಎಲ್ಲೂ ಸಿಗದೆ ಕೊನೆಗೆ ಪ್ರೀತಿ ಒಪ್ಪಿ ಕೊಳ್ಳದಿರೋದೆ ತಪ್ಪು ಅಂತ ಕೂಗಿ ಕೂಗಿ ಹೇಳೋ ಮನದ ಮೇಲೂ ಬೇಸರವೆನೆಸಿ ...ಸ್ನೇಹದ ಮುಖವಾಡದ ಹುಡುಗನ ಮೇಲೆ ಕರುಣೆ ತೋರಿ ....ಇನಿಯನಾಗಿ ಕಾಣದ ಪ್ರೀತಿ ಸ್ನೇಹದ ಪರಿಯನ್ನೇ ನೀಡೋ ಪರಿಯನ್ನ ದಿಟ್ಟಿಸಿ.....ಮತ್ತದೇ ನೀರವ ಸಂಜೆಗಳಲ್ಲಿ ಬರದಿದ್ದ ಚಂದಿರನನ್ನು ಹುಡುಕುತ್ತಾ ಮೂಕವಾಗಿ ರೋದಿಸೋ ಅವಳ ಬಗ್ಗೆ ಮರುಕವಿದೆ ...

 

ಈಗಲೂ ಗೆಳೆಯನಾಗಿ ಬಂದಿದ್ದ ಅವನ ಬಗ್ಗೆ ಅವಳಿಗೆ ಸ್ವಚ್ಚ ಸ್ನೇಹದ ಪ್ರೀತಿಯಿದೆ ....ಸ್ನೇಹಿತೆಯಾಗಿ ಆಧರಿಸೋ ಮನವಿದೆ ...ಪ್ರೀತಿಯ ಸ್ಪರ್ಶದ ಆಶಯವಿದೆ ....

ತಲೆ ನೇವರಿಸೋ ಆಸೆಯಿದೆ ..

ಕನಸಲ್ಲಿ ರಾಜಕುಮಾರನಾಗಿ ಅದೇ ಹುಡುಗ ಬಂದಾಗ ಬದುಕಿನಿಂದ ಎದ್ದು ಹೋಗೋ ಅಷ್ಟು ಅಸಹನೀಯ ಭಾವವಿದೆ ಆ ಪ್ರೀತಿಯ ಬಗ್ಗೆ ....

ತಲೆಗೊಂದು ಮೊಟಕಿ ನೀ ನನ್ನ ಗೆಳೆಯ ಕಣೋ ...ಮಧುರ ಪ್ರೀತಿಯನ್ನ ಕೊಡೋ ಇನಿಯನಾಗ್ತೀನಿ ಅನ್ನೋ ಹಟ ಬಿಟ್ಟು ಮೃದು ಮಧುರ ಗೆಳೆತನವನ್ನ ಮರಳಿ ಕೊಡ್ತೀನಿ ಅಂತ ಹೇಳೋ ಅವನ ಒಂದು ಮಾತಿಗಾಗಿ ಕಾಯ್ತಾ ...

ಮತ್ತದೇ ಭಾವಕ್ಕೆ ಭಾವವಾಗೋ ಗೆಳೆಯನ ನಿರೀಕ್ಷೆ ಮಾಡೋ ಹುಚ್ಚು ಮನಸ್ಸಿದೆ .....

ಈ ಹುಡುಗಾ ಪರಿಚಿತನಾ ....????...ಪೂರ್ತಿಯಾಗಿ ಅಪರಿಚಿತನಾ ???

ಅವತ್ತು .....ಪರಿಚಿತನಾಗಿದ್ದ ಅಪರಿಚಿತ..... ಇವತ್ತು ....ಅಪರಿಚಿತನಂತಿರೋ ಪರಿಚಿತ !!

(ಅಕ್ಷರ ಅವೇ ...ಅದ್ರೂ ಅಪರಿಚಿತನಾಗೋ ಅತೀ ಪರಿಚಿತನ ನೋವ ಭಾವ ಅವಳಿಗೆ ಮಾತ್ರಾ ಗೊತ್ತೇನೊ )

 

24 comments:

 1. ಭಾಗ್ಯಾ -
  ಭಿನ್ನ ಲಿಂಗದ ಸ್ನೇಹವೊಂದು ಪ್ರೇಮವಾಗಿ ಬದಲಾಗಬಾರದೆಂತಿಲ್ಲ...
  ಪ್ರೇಮವೂ ಒಂದು ಗೆಳೆತನವೇ..ಆದರೆ ಗೆಳೆತನವೇ ಪ್ರೇಮವಲ್ಲ...
  ಗೆಳೆತನವೊಂದು ಬರೀ ಮಧುರ ಗೆಳೆತನವಾಗಿಯೇ ಚಿರಕಾಲವೂ ದಕ್ಕುವ ಸೊಬಗೇ ಬೇರೆ...
  ಸ್ನೇಹವನ್ನು ಪ್ರೇಮವಾಗಿ ಭಾವಿಸದ್ದರಿಂದಾದ ತೊಳಲಾಟಗಳನ್ನು ಮತ್ತು ಮನಸಿನ ಪರಿಚಿತ ದಿಢೀರನೇ ಅಪರಿಚಿತನಾಗೋದರ ವೇದನೆಯನ್ನು ಬರಹದಲ್ಲಿ ಚಂದಾಗಿ ಹೇಳಿದ್ದೀಯಾ...
  ಯಾಕೋ ಕೊನೆಯ ನಾಕು ಸಾಲುಗಳು ತುಂಬ ಮನಸ ತಾಕಿದವು...

  ReplyDelete
  Replies
  1. ನಿಜ ಶ್ರೀವತ್ಸ ...
   ಪ್ರೀತಿಸೋ ಹುಡುಗ ಒಳ್ಳೆಯ ಗೆಳೆಯ ಆದಾನು ..ಆದರೆ ಒಳ್ಳೆಯ ಗೆಳೆಯ ಇನಿಯನಾಗಿ ಬರುವೆ ಗೆಳತಿ ಅಂತ ಹೇಳಬಾರದಿತ್ತು ಇಲ್ಲಿ ಅನ್ನೋದು ನನ್ನ ಭಾವ ...
   ಈಗ ....ಅಪರಿಚಿತನಂತಿರೋ ಪರಿಚಿತ ಅವನು !!
   ಬರ್ತಾ ಇರು ...

   Delete
 2. ಅನುಭವ ಚಿತ್ರದ "ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ" ಹಾಡು ನೆನಪಾಯಿತು. ಬದುಕಲ್ಲಿ ಕೆಲವೊಮ್ಮೆ ತೆಗೆದುಕೊಳ್ಳುವ ನಿರ್ಧಾರ ಮೇಣದ ಬತ್ತಿಯನ್ನು ಆರಿಸಿಬಿಡುತ್ತೆ.. ಕೆಲವೊಮ್ಮೆ ಒಂದು ಸಣ್ಣ ಕಿಡಿಯಿಂದ ದೀಪ ಹೊತ್ತಿ ಕೊಳ್ಳುತ್ತದೆ. ಗೆಳತಿಯ "ಮೌನ" ಮನದ ಮಾತನ್ನು ಧಿಕ್ಕರಿಸಿದ್ದಕ್ಕಾಗಿಯೋ ಅಥವಾ ತನ್ನ ಜೀವನದ ಮೌಲ್ಯಗಳನ್ನು ಪ್ರಶ್ನೆಯಾಗಿ ನೋಡಿದ್ದಕ್ಕಾಗಿಯೋ ಅನ್ನುವ ಗೊಂದಲ ಮೌನದಲ್ಲೂ ಇದೆ ಮಾತಿನಲ್ಲೂ ಇದೆ.

  ಸುಂದರ ಲೇಖನ ಬಿ ಪಿ. ಈ ಚಿಕ್ಕವಯಸ್ಸಿನಲ್ಲಿ ಭಾವ, ಹತಾಶೆ, ಮೌನ, ನೋವು, ನಲಿವು ಎನ್ನುವ ನೂರಾರು ಭಾವಗಳನ್ನು ದುಡಿಸಿಕೊಳ್ಳುವ ರೀತಿ ಇಷ್ಟವಾಯಿತು. ಸುಂದರ ಬರಹ ಮುಂದುವರೆಯಲಿ. ಭಾವ ನಿನ್ನದು ಬರಹ ನಿನ್ನದು..

  ReplyDelete
  Replies
  1. ಥಾಂಕ್ಸ್ ಶ್ರೀಕಾಂತಣ್ಣ ...
   ನಿಜ ಗೊಂದಲ ಇನ್ನೂ ಇದೆ ..ಆದರೆ ಪ್ರೀತಿಯೆಡೆಗಲ್ಲ ...ಅವಳೆಡೆಗೇ ಅವಳ ಗೊಂದಲ ...
   ತನ್ನೆಡೆಗಿನ ಒಂದಿಷ್ಟು ಪ್ರಶ್ನೆಗಳೆಟ್ಟಿಗೆ ಮೌನ ಮಾತ್ರ ಅವಳಿಗಿಲ್ಲಿ ದಕ್ಕಿದ್ದು !!
   ಖುಷಿ ಆಯ್ತು ..ಬರ್ತಾ ಇರಿ

   Delete
 3. ಚೆಂದಿದ್ದು ಭಾಗ್ಯ.

  ಈ ರೀತಿಯ ಸ್ನೇಹವನ್ನೆಲ್ಲಾ ಪ್ರೀತಿಯಂತಾ ಹೋದ್ರೆ ಹುಡುಗರಿಗೆ ಹುಡುಗರು , ಹುಡುಗಿಯರಿಗೆ ಹುಡುಗಿಯರು ಮಾತ್ರ ಸ್ನೇಹಿತರಾಗಲು ಸಾಧ್ಯ !

  ಜೀವನಕ್ಕೆ ಮತ್ತೊಂದು ಸಾರಿ ಹತ್ತಿರ ಬಂದ ಕತೆ. ಹುಡುಗ-ಹುಡುಗಿಯ ದನಿ ನಮ್ಮ ಮನಸ್ಸಿನದೇ ಅನಿಸುವಂತ ಭಾವ. ಸ್ನೇಹವನ್ನು ಪ್ರೀತಿಯೆಂದು ಭಾವಿಸುವವರು ಕಳಕೊಂಡ ಸ್ನೇಹಗಳೆಷ್ಟೆಂದು, ಅದರ ದುಃಖವೇನೆಂದು ಅವರೇ ಹೇಳಲು ಸಾಧ್ಯ.
  ಪರಿಚಿತ ಅಪರಿಚಿತನಾಗಿಯೇ ಉಳಿದುಬಿಡುವ ನೋವು ನೀವೇ ಹೇಳುವಂತ ಅಸಹನೀಯ..
  ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು ಎನ್ನೋ ಪ್ರಿಯಕರ ದೂರಾದ ವಿರಹಕ್ಕಿಂತ ಸ್ನೇಹಿತನೊಬ್ಬ ಪ್ರೀತಿಯ ಆಹ್ವಾನ ನೀಡಿ ಅದು ಅದಾಗಿಲ್ಲವೆಂಬ ನಿರಾಕರಣೆಯೊಂದಿಗೆ ಸ್ನೇಹವನ್ನೂ ಕಳೆದುಕೊಂಡ ಪರಿ ಮೇಲೆನೋ.
  ಪ್ರೀತಿ ಕೈಕೊಟ್ಟರೆ ಇನ್ನೊಬ್ಬರ ಪ್ರೀತಿ ಅದನ್ನು ಮರೆಸಬಹುದೇನೋ.. ಆದರೆ ಸ್ನೇಹವೇ ಕೈಕೊಟ್ಟರೆ.. ಯಾವ ಸ್ನೇಹವನ್ನೂ ನಂಬಲಾಗದಂತಹ ಪರಿಸ್ಥಿತಿಗೆ ಬಂದ ಜೀವನಕ್ಕೆ ತನ್ನನ್ನು ಅಭಿಮುಖಿಯನ್ನಾಗಿಸಿಕೊಂಡ ಕಥಾನಾಯಕಿಯ ಕತೆ ಸಹಜ ಜೀವನ ಗಾಥೆ ಅನಿಸಿತು.

  ಮತ್ತೊಮ್ಮೆ ಪಾತ್ರಗಳ ಒಳಹೊಕ್ಕು ಬರೆದಿದ್ದಕ್ಕೆ ಅಭಿನಂದನೆ ಭಾಗ್ಯ :-)

  ReplyDelete
  Replies
  1. ನಿಜ ಪ್ರಶಸ್ತಿ ಜಿ :)
   ಹೀಗೆ ಆಗಿದ್ರೆ ಹುಡುಗ ಹುಡುಗಿ ಸ್ನೇಹಿತರಾಗಿ ಉಳಿತಾನೆ ಇರ್ಲಿಲ್ವೇನೊ ...
   ಸ್ನೇಹಿತೆಯ ಸ್ನೇಹಕ್ಕೊಂದು ಅರ್ಥವೇ ಇರ್ತಿರ್ಲ್ವೇನೋ ..
   ಇಷ್ಟ ಪಟ್ಟಿದ್ದಕ್ಕೆ ಆಭಾರಿ ..ಬರ್ತಾ ಇರಿ

   Delete
 4. ಛೇ. ಹಿಂದಿನ ಸಲ ನೋಡುವಾಗ ಯಾರ್ದೂ ಕಮೆಂಟುಗಳಿರ್ಲಿಲ್ಲ. ಈ ಬಾರಿಯಾದ್ರೂ ನಂದೇ ಮೊದ್ಲ ಕಮೆಂಟು ಅಂತ ಖುಷಿಯಾಗೋ ಹೊತ್ತಿಗೆ ಶ್ರೀವತ್ಸಾಜೀ ಮತ್ತು ಮಂಜುನಾಥ್ ಜೀ ಅವರ ಕಮೆಂಟುಗಳಾಗಿಬಿಟ್ಟಿವೆ :-(

  ಸಖತ್ ಬರಹಕ್ಕೆ ಮತ್ತೊಮ್ಮೆ ಅಭಿನಂದನೆ ಜೀ :-) :-)

  ReplyDelete
  Replies
  1. ಹಾ ಹಾ ...ಪ್ರಶಸ್ತಿ ಜಿ ಮುಂದಿನ ಬಾರಿ ಮೊದಲ ಲಿಂಕ್ ನಿಮ್ಗೇ ಸಿಗುತ್ತೆ ಬಿಡಿ ಅದಕ್ಯಾಕೆ ಬೇಸರ ..
   ಖುಷಿ ಅಂದ್ರೆ ಮೊದಲ ಕಾಮೆಂಟ್ ನಿಮ್ಮದಿರಬೇಕಿತ್ತು ಅಂದ್ರಲ್ವಾ ಅಷ್ಟು ಸಾಕು ಬಿಡಿ ;)
   ಮತ್ತೊಮ್ಮೆ ಥಾಂಕ್ ಯು ಜಿ ...
   ಇಷ್ಟ ಪಟ್ಟು ಹೀಗೆ ಬರ್ತಾ ಇರಿ ತಪ್ಪು ಒಪ್ಪುಗಳನ್ನ ತಿಳಿಸಿಕೊಡೊದಕ್ಕೆ :)

   Delete
 5. ವಿರುದ್ದ ಲಿಂಗಿಗಳಲ್ಲಿ ಸ್ನೇಹ ಮತ್ತು ಪ್ರೇಮ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಹಲವರು ವ್ಯಕ್ತ ಪಡಿಸುತ್ತಾರೆ , ಹಲವರು ವ್ಯಕ್ತಗೊಳಿಸುವುದಿಲ್ಲಾ. ಹಾಗಂತ ಶುದ್ದ ಸ್ನೇಹ ಇರಬಾರದೆಂದಿಲ್ಲಾ. ,,,,,,
  ReplyDelete
  Replies
  1. ನಿಜ ಜೀತೆಂದ್ರಣ್ಣ ...
   ಆದ್ರೂ ಪ್ರೇಮಕ್ಕೂ ಮೀರಿದ ಸ್ನೇಹದ ಸಲುಗೆಯೊಂದು ಅಲ್ಲಿರಬೇಕಿತ್ತು ಅನ್ನೋದು ನನ್ನ ಭಾವ ....
   ನಿಶ್ಕಲ್ಮಶ ಪ್ರೀತಿ ಸ್ನೇಹಕ್ಕಿದೆ ...ಪ್ರೇಮದ ಮುಖವಾಡಕ್ಕಿದ್ಯೋ ಇಲ್ವೊ ನಂಗೊತ್ತಿಲ್ಲ :)
   ಥಾಂಕ್ಸ್ ..ಬರ್ತಾ ಇರಿ

   Delete
 6. ಚೆನಾಗಿದ್ದು ಗೆಳತಿ ... ನಂಗೆ ಗೊತ್ತಿರೋ ಹಂಗೆ ಇದು ಎಲ್ಲರ ಜೀವನದಲ್ಲೂ ಒಂದ್ಸಲ ಆಪ ಕಥೆ ..... ಕೆಲವ್ರು ಫ್ರೆಂಡ್ಶಿಪ್ ಗೆ ಬೆಲೆ ಕೊಟ್ಟು ಮನಸಲ್ಲೇ ಇಟ್ಕತ್ತ ..ಕೆಲವ್ರು ತಾಳಕಾಗ್ದೆ ಹೊರಗೆ ಬಿಟ್ಕೊಡ್ತಾ ...ಕೊನೆ ಪರಿಣಾಮ ಮಾತ್ರ ಹಿಂಗೆಯ !!!

  ReplyDelete
  Replies
  1. ಹಮ್ ಆದರ್ಶ ...
   ಆದ್ರೂ ಯಾಕೆ ಸ್ನೇಹದ ಮಧ್ಯ ಪ್ರೇಮ ಅನ್ನೋದು ಬತ್ತೋ ನಂಗ್ ಗೊತ್ತಿಲ್ಲೆ...ಪ್ರೇಮಿಯಾಗಿ ಯಾವತ್ತೂ ಕಲ್ಪನೆ ಮಾಡಿರದ ಸ್ನೇಹಿತ ಕೈ ಹಿಡಿದು ಗೆಳತಿ ನೀ ನನ್ನ ಜೀವನದ ಸಂಗಾತಿಯಾಗು ಬಾ ಅಂತ ಅದ್ಯಾಕೆ ಹೇಳ್ತ್ನೋ ಗೊತ್ತಿಲ್ಲೆ ...
   ಆದರೆ ಆ ಪ್ರೇಮದ ನಿವೇದನೆಯ ಒಂದೆ ಮಾತಿಗೆ ಸ್ನೇಹಾನೂ ಮುರಿದು ಬೀಳ್ತು ...ಮನಕ್ಕೊಂದಿಷ್ಟು ಬೇಸರದ ಜೊತೆಗೆ ಅಷ್ಟೂ ದಿನದ ಆತ್ಮೀಯ ಸ್ನೇಹಕ್ಕೂ ಪೆಟ್ಟು ಬೀಳ್ತು ಅಂತ ಮಾತ್ರ ಹೇಳಬಲ್ಲೆ ನಾ ..
   ಥಾಂಕ್ಸ್ ...ಬರ್ತಾ ಇರು

   Delete
 7. ಭಾಗ್ಯ...
  ನೀ ಹೇಳಿದ ಆ ಮಿತಭಾಷಿ ಹುಡುಗಿಯ ಒಳತೋಟಿಗಳು ಏನೆನಿದ್ದಾವೋ ಕಾಣೆ.. ವಯೋಸಹಜ ಆಕಾಂಕ್ಷೆಗಳನ್ನು ಮಿರಿ ನಿಂತಿರುವ ಆ ಹುಡುಗಿಯ ಒಳಗೆ ಎಂತಹ ಪ್ರಬುದ್ದ ಚಿಂತನೆಗಳಿರಬೇಕು ಅಲ್ಲವಾ..?
  ಆ ಹುಡುಗಿ ಕೂಡ ನಿನ್ನ ಬರಹದಷ್ಟೇ ಇಷ್ಟವಾದಳು.. :)

  ReplyDelete
  Replies
  1. ನಿಜ ಸುಷ್ಮಕ್ಕ....ಅಷ್ಟು ಪ್ರಬುದ್ಧ ಆಲೋಚನೆಯ ಆ ಹುಡುಗಿಗೊಂದು ನಮನ ...
   ಸ್ನೇಹವ ಪ್ರೇಮವಾಗಿ ಪರಿಭಾವಿಸಿದ ಗೊಂದಲದಲ್ಲಿ ಕಳಚಿಹೋದ ಸವಿ ಸ್ನೇಹದ ಕೊಂಡಿಯೊಂದ ಮತ್ತೆ ಬೆಸೆಯುವಾಸೆಯಲಿ...
   ಗೆಳೆಯನ ಹೆಜ್ಜೆ ಸದ್ದಿಗಾಗಿ ಕಿವಿಯ ತೆರೆದಿಟ್ಟು ಕೂತ ಮೌನಗೌರಿಯ ಮನದ ಮಾತುಗಳು...

   ನನ್ನಷ್ಟೇ ಅವಳನ್ನೂ ಇಷ್ಟ ಪಟ್ಟಿದ್ದು ನನ್ನ ಖುಷಿ... ನಾನೇ ಅವಳಾಗಬಾರದಿತ್ತೇ ಅನ್ನೋ ಸಣ್ಣ jolus ಕೂಡಾ ;)
   ಬರ್ತಾ ಇರಿ ..ನಮಸ್ತೆ

   Delete
 8. ಚೆಂದದ ಬರಹ ಭಾಗ್ಯಾ...
  ಸ್ನೇಹ-ಪ್ರೀತಿ..ಅವುಗಳ ನಡುವಿನ ಗೊಂದಲ ಚೆನ್ನಾಗಿ ಮೂಡಿ ಬಂದಿದೆ...
  ಇಷ್ಟು ಸಣ್ಣ ವಯಸ್ಸಿಗೇ ಅಂಥಹ ವಿಷಯಗಳೆಲ್ಲಾ ಅದು ಹೇಗೆ ಬರುವುದೋ ನಾ ಕಾಣೆ...
  ಇರಲಿ ಒಳ್ಳೆಯ ಪ್ರಯತ್ನ...
  ಒಳ್ಳೆದಾಗ್ಲಿ...
  ಬರೀತಾ ಇರಿ...
  (ಇದ್ ಹಂಗೆ ಸುಮ್ನೆ...ಬೇರೇ ಎಲ್ಲಿಗೋ ಅಂತಾ ಬರ್ದಿಟ್ಟಿದ್ದು...ಇಲ್ಲಿಗೆ ಸರಿ ಅನ್ಸ್ತು...ಸ್ವಲ್ಪ ಅದಲು ಬದಲು ಮಾಡಿ..)
  ಗೊಂದಲದ ಗಂಜಿಯಲಿ ಬೆಂದಿಪ್ಪೆಯಾ ಗೆಳತಿ..
  ಸ್ನೇಹದುದಕದಲಿ ಮುಳುಗಲೊಲ್ಲದೆ...
  ಪ್ರೀತಿಯಾ ಬಲದಲ್ಲಿ ಈಜಲೊಲ್ಲದೆ....


  ನಮಸ್ತೆ :)

  ReplyDelete
  Replies
  1. ಥಾಂಕ್ಸ್ ಚಿನ್ಮಯ್ ಜಿ ....
   ನಿಜ ಮುಳುಗಲೂ ಆಗದ ,ಈಜಲೂ ಸಾಧ್ಯವಾಗದ ಅಸಹಾಯಕತೆಯ ಗೊಂದಲ ಅವಳದು ...
   ಬರ್ತಾ ಇರಿ ..
   ನಮಸ್ತೆ

   Delete
 9. ಪ್ರೇಮ ಹೀಗೇ ಮೂಡುತ್ತೆ ಅನ್ನೋಕೆ ಭಾಷ್ಯವೇ ಇಲ್ಲ.....
  ಎಲ್ಲರಿಗೂ ಇದು ಮೊದಲು ಅಕಲ್ಪಿತವೇ....
  ನಾನು ಹಾಗೆ ನಡೆದುಕೊಳ್ಳಲೇ ಇಲ್ಲಾ ಅವನೊಂದಿಗೆ ಎಂದರೆ
  ಅವನ ಪ್ರೀತಿಗೆ ಅದು ಕಾರಣವೇ ಅಲ್ಲದಿರಬಹುದು....
  ಎಷ್ಟೆಷ್ಟೋ ಹುಡುಗರು ಪ್ರೀತಿ ಬಚ್ಚಿಡೋದು ಇದಕ್ಕೇನೇ ಭಾಗ್ಯಾ.....
  ಎಲ್ಲಿ ಇರೋ ಸ್ನೇಹವನ್ನೂ ಕಳೆದುಕೊಂಡು ಬಿಡುತ್ತೆವೇನೋ ಅಂದುಕೊಂಡು....
  ಪ್ರೀತಿ ಹೇಳಿಯಾಗಿಬಿಟ್ಟಿದೆ.... ಮತ್ತೊಮ್ಮೆ ಹೋಗಿ ತಲೆಯ ಮೇಲೆ ಮೊಟಕಿ
  ಸರಿ ಮತ್ತೊಮ್ಮೆ ಗೆಳೆಯರಾಗಿ ಬಿಡೋಣ ಅಂತ ಹೇಗೆ ಹೇಳಿಯಾನು....
  ಆ ನಾಟಕದ ಅಂಕ ಇಷ್ಟವಾಗದೇ ಹೋಯಿತೇನೋ....

  ಇಬ್ಬರ ಎದೆಯಲ್ಲೂ ಮಂಥನದ ಕಡಗೋಲು...

  ಇಷ್ಟವಾಯಿತು ಬರಹ...
  ಕಷ್ಟವೂ ಆಯಿತು.....

  ಶುಕ್ರಿಯಾ ಜೀ....
  ReplyDelete
  Replies
  1. ಥಾಂಕ್ಸ್ ರಾಘವ್ ಜಿ ..
   ಕಾರಣವೇ ಇಲ್ಲದೆ ಪ್ರೀತಿ ಹೇಗೆ ಆದೀತು ?
   ಆದರೂ ಪ್ರೇಮಿಯಾಗಿ ನಾ ನಿನ್ನವಳಲ್ಲ ಕಣೋ ಅನ್ನೋ ಅವಳ ಮಾತನ್ನವನು ಒಪ್ಪಿಕೊಳ್ಳಬಹುದಿತ್ತು ಅಲ್ವಾ ??
   ಅವರವರ ಭಾವಕ್ಕೆ ಅಂತೀರಾ :)
   ಬರ್ತಾ ಇರಿ
   ಶುಕ್ರಿಯಾ

   Delete
 10. ತುಂಬಾ ಚೆನ್ನಾಗಿದೆ...

  ReplyDelete
  Replies
  1. ಥಾಂಕ್ಸ್ ...ನನ್ನ ಬ್ಲಾಗ್ ಗೆ ಸ್ವಾಗತ
   ಬರ್ತಾ ಇರಿ :)

   Delete
 11. like it ...like it...

  ಪ್ರತಿಬಾರಿ ಚಂದದ ಸಾಲುಗಳನ್ನು ಅದೆಷ್ಟು ಚೆನ್ನಾಗಿ ಪೋಣಿಸುತ್ತಿ, ಪುಟ್ಟ ಹುಡುಗಿ...

  keep writing.. :)

  ReplyDelete
  Replies
  1. ಥಾಂಕ್ಸ್ ಸುಮತಿ
   ಸಾಲುಗಳು ಇಷ್ಟ ವಾಗಿ ಭಾವ ಲೈಕ್ ಆದ್ರೆ ನಂಗದೇ ಖುಷಿ ...
   ಬರ್ತಾ ಇರಿ :)

   Delete
 12. ತಡವಾಗಿ ಪ್ರತಿಕ್ರಿಯಿಸಿದ್ದೇನೆ ಕ್ಷಮೆ ಇರಲಿ, ಸ್ನೇಹ ಮತ್ತು ಪ್ರೀತಿಗಳ ನಡುವೆ ತೆಳು ಗೆರೆ ಇದೆ. ಇಬ್ಬರೂ ಅದನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದರ ಮೇಲೆ ಸಂಬಂಧದ ಉಳಿವು ಇದೆ.

  ಆದರೂ, "ಇವತ್ತು..ನಿನ್ನೆದುರು ಮಂಡಿಯೂರಿ ಕೇಳ ಬಂದೆ ...ನೀ ನನ್ನ ಜೀವದ ಗೆಳತಿ ...ಜೀವನದ ಸಂಗಾತಿಯಾಗು ಬಾ ......" ಎನ್ನುವ ಆತನ ಬೇಡಿಕೆಯಲ್ಲಿ ಪ್ರಾಮಾಣಿಕೆ ಕಾಣಿಸುತ್ತಿದೆ.

  ಹೂರಣಕ್ಕೆ 50 ಅಂಕಗಳು, ಶೈಲಿಗೆ ಉಳಿದ 50 ಅಂಕಗಳು.

  ReplyDelete
  Replies
  1. ಥಾಂಕ್ಸ್ ಬದರಿ ಸರ್ ..
   ನಿಮ್ಮಿಂದ ನೂರಂಕ ಸಿಕ್ಕ ಖುಷಿ ನಂದು :)
   ಪ್ರಾಮಾಣಿಕ ಪ್ರೀತಿ ಅವನದಿರಬಹುದು ...ಅಷ್ಟೇ ಪ್ರಾಮಾಣಿಕ ಸ್ನೇಹ ಅವಳದೂ ಅಗಿರಬಹುದು ...
   ಸ್ನೇಹ ಪ್ರೀತಿಯ ನಡುವಿನ ಗೊಂದಲ ಮಾತ್ರ ಇಬ್ಬರದೂ :)
   ಖುಷಿ ಆಯ್ತು ..ಬರ್ತಾ ಇರಿ

   Delete