Saturday, October 5, 2013

so much to say ...


     

ಬರಿಯ ಭಾವಗಳ ತೇರಲ್ಲಿ ಜೊತೆಯಾದವರು..ಭಾವಗಳ ಸಂತೆಯಲ್ಲಿ ಎಲ್ಲೋ ಒಂದೆರಡು ಭಾವಗಳ ಕೊಂಡುಕೊಳ್ಳೋಕೆ ಬಂದವರು ಹರಾಜಿನಲ್ಲಿ ಸಿಕ್ಕಿದ ಭಾವಗಳನ್ನೆಲ್ಲಾ ಬಿಡದೇ ಜೋಪಾನ ಮಾಡೋರು...ಒಂದಿಷ್ಟು ಭಾವಗಳಿಗೆ ಮೂಲವಾಗಿ ಇನ್ನೊಂದಿಷ್ಟು ಭಾವಗಳಲ್ಲಿ ಕೊನೆಯಾಗೋರು.
ನಿಜ, ಅದೆಷ್ಟೋ ಭಾವಗಳಿಗೆ ಸಾಥ್ ಕೊಟ್ಟು,ಗೊಂದಲಗಳಿಗೆ ಮಾತಾಗಿ,ಬೇಸರಗಳಿಗೆ ಕಿವಿಯಾಗಿ,ಪ್ರತಿ ಸಲವೂ ಮನವ ಸಮಾಧಾನಿಸ ಬರೋ ಚಂದದ ಸ್ನೇಹ ಬಳಗವಿದು .

ಯಾವತ್ತೂ ಶಾಶ್ವತತೆಯ ಮಾತಾಡದ ಗೆಳೆಯ ಎದುರು ನಿಂತು ಹೀಗೊಂದು ಸ್ನೇಹವನ್ನ ಕೊನೆಯ ತನಕ ಜತನ ಮಾಡ್ತೀನಿ ಪುಟಾಣಿ ಅಂತಾನೆ !

ತನ್ನ ಯಾವ ಭಾವಗಳನ್ನೂ ಹಂಚಿಕೊಂಡಿರದ ,ಆದರೂ ಅತೀ ಆತ್ಮೀಯ ಅನ್ನಿಸೋ ಹುಡುಗ ಮಧ್ಯ ರಾತ್ರಿ ಮನ ಬಿಕ್ಕೋ ಚಳಿಗೆ ಬೆಚ್ಚಗಿನ ಸಾಂತ್ವಾನ ಆಗ್ತಾನೆ .

ಅಷ್ಟಾಗಿ ಭಾವಗಳ ಹಂಚಿಕೊಂಡಿರದಿದ್ದರೂ ಅಲ್ಲೊಬ್ಬ ಹುಡುಗ ಜೀವದ ಗೆಳೆಯ ಅನಿಸಿಬಿಡ್ತಾನೆ .ಗೆಳೆತನಕ್ಕೊಂದು ಮಧುರ ನಾಮಕರಣ ಮಾಡ್ತಾನೆ.

ಮುಖವನ್ನೇ ನೋಡಿರದಿದ್ದರೂ ತೀರಾ ಪರಿಚಿತರಂತೆ ಅನಿಸಿಬಿಡ್ತಾರೆ ಕೆಲ ಮಂದಿ ...ಕಾಲೆಳೆದು ,ತಮಾಷೆ ಮಾಡಿ ,ಪೂರ್ತಿಯಾಗಿ ನಗಿಸಿ ಕೊನೆಗೆ ಹೊರಡೋವಾಗ ಈಗಷ್ಟೇ ಪರಿಚಿತರಾದ್ವಿ ಆಗ್ಲೇ ಹೊರಟುಬಿಟ್ಯಲ್ಲೆ ಹುಡುಗಿ ಅಂತ ಭಾವುಕರಾಗ್ತಾರೆ.

ತೀವ್ರತೆಯ ಅರಿವಿಲ್ಲದವರಿಗೆ ಇದೊಂದು ಸಾಮಾನ್ಯ ಭಾವವಾದೀತು ..ಆದರಿದ ದಕ್ಕಿಸಕೊಂಡವರಿಗೆ ಬದುಕ ಪೂರ್ತಿ ಜೊತೆಯಿರೋ ಮಧುರ ನೆನಪಾದೀತು.

ಯಾವತ್ತಿಗೂ ಜೊತೆ ಇರಬೇಕಿದ್ದ ನನ್ನದೆಂದ ಮನೆ ಯಾಕೋ ಮೌನದಿ ಬಿಕ್ಕುತ್ತಿದ್ದ ದಿನಗಳವು .ಮನೆಯ ಬಗೆಗೆ ಮನೆಯವರ ಬಗೆಗೆ ನನಗಿಂತ ಜಾಸ್ತಿ ಪ್ರೀತಿ ಇದ್ದ ನನ್ನಲ್ಲಿ ಕಳೆದು ಹೋದ ಆ ಪ್ರೀತಿಯನ್ನ ಅರಗಿಸಿಕೊಳ್ಳೋದು ಸಹ್ಯವಲ್ಲದ ಭಾವ ಎನಿಸಿತ್ತು.ದಿನಕ್ಕೊಮ್ಮೆ ಮಾತಾಡೋ ನನ್ನವರು ಅವರವರ ಭಾವಗಳ ಹೊಡೆದಾಟದಲ್ಲಿ ನನ್ನನ್ನ ಪೂರ್ತಿಯಾಗಿ ಮರೆತು ಹೋಗಿದ್ದರು (ಮರೆತಂತೆ ನಟಿಸುತ್ತಿದ್ದರೇನೋ).
ಹೀಗಿರೋವಾಗ ತಂಗಿ ಮುದ್ದು ಮುದ್ದು ರಗಳೆ ಮಾಡ್ತಿದಾಳೆ ..ಪುಟಾಣಿ ನೀ ನೆನಪಾದೆಹೀಗೊಂದು ಮೇಸೆಜ್ ಸರಿ ರಾತ್ರಿಗೆ ಎಚ್ಚರಿಸಿದಾಗ ಮನ ಮೂಕ ಮೂಕ .ಪ್ರೀತಿ ಅಂದ್ರೆ ಇದಾ ,ಆತ್ಮೀಯರಂದ್ರೆ ಇವರಾ? ಕಳಕೊಂಡ ಬಂಧಗಳೆದುರು ಈ ಬಂಧವ್ಯಾಕೋ ದೂರಾದ ಮನೆಯನ್ನ ಮರೆಸೋವಷ್ಟು ಹತ್ತಿರ ಅನಿಸಿದೆ ನಂಗಿಲ್ಲಿ ...ಎಲ್ಲೋ ಒಂದು ಸಣ್ಣ ಪರಿಚಯ ನನ್ನನ್ನಿಷ್ಟರ ಮಟ್ಟಿಗೆ ಹಚ್ಚಿಕೊಳ್ಳೋಕೆ ಬಂದಾಗ ನಿಜಕ್ಕೂ ನನ್ನ ಬಗೆಗೆ ನಂಗೂ ಪ್ರೀತಿಯಾಗುತ್ತೆ..ಬದುಕು ಖುಷಿ ಪಡೋಕೆ ಇನ್ನೇನು ಬೇಕು ...ವಾರಗಳಿಂದ ರಾಡಿಯಾಗಿದ್ದ ಮನ ನೀವೇನೂ ಮಾತಾಡದಿದ್ರೂ ಹಗುರಾಗಿತ್ತು ...ಕೊನೆಗೂ ಕಣ್ಣಂಚು ಸಾಂತ್ವಾನಿಸಬಂತು ನಿನ್ನೆದುರು ನನ್ನ.
ಕ್ಷಮೆ ಕೇಳ್ತೀನಿ ಗೆಳೆಯ ನಾ ನಿನ್ನ ....ಉಸಿರಗಟ್ಟಿಸುತ್ತಿದ್ದ ಭಾವವೊಂದ ನಿನ್ನೆದುರು ಹರವಿ ನಾನೇನೋ ಉಸಿರಾಡಿದೆ.ಆದರೆ ನಿನ್ನುಸಿರು ಕಷ್ಟಪಡ್ತೇನೋ ಅರಗಿಸಿಕೊಳ್ಳೋಕೆ ...
ನೀನೇನೂ ಮಾತಾಡದಿದ್ರೂ ನನ್ನ ಮನ ಹಗುರಾಯ್ತೆಂದು ಪ್ರಾಮಾಣಿಕವಾಗಿ ಹೇಳ್ತೀನಿ ನಾ ....ಈ ಅಪರೂಪದ ಗೆಳೆತನವ ಯಾವತ್ತಿಗೂ ಜೋಪಾನ ಮಾಡ್ತೀನಿ ,ನೋವುಗಳ ದಹಿಸೋ ಶಕ್ತಿ ಸಿಗಲಿ ನಿಂಗೆ ಅಂತ ಮನ ತುಂಬಿ ಅಂದ್ಯಲ್ವಾ ಇದಕ್ಕಿಂತ ಇನ್ನೇನು ಬೇಕು ನಂಗೆ ..

ಸಂತೆಯ ಮಧ್ಯೆಯೂ ಒಂಟಿ ಅನಿಸೋ ಭಾವವ ಬದಿಗಿರಿಸಿ ನಗಬೇಕಿದೆ ನಾನಾಗಿ ...ನೀ ಸಿಕ್ಕ, ನಾ ದಕ್ಕಿಸಿಕೊಂಡ ಬದುಕಿಗಾಗಿ....ವಾಸ್ತವಗಳ ಅನಾವರಣಕ್ಕಾಗಿ.
ಜೊತೆಯಿರು ಗೆಳೆಯನಾಗಿ ಯಾವತ್ತೂ... ನಿನ್ನಾ ಚಂದದ ನಗುವ ಹಂಚೋಕೆ .ಮನದ ಭಾವಗಳ ಹರವಿಕೊಳ್ಳೋಕೆ....

ಈ ಅಣ್ಣ ಜೊತೆಯಾಗಿದ್ದೂ ಭಾವಗಳ ಹರಾಜಲ್ಲೇ .... ಆದರೀಗ ನನ್ನಮ್ಮನಿಗೆ ಮಗನಾಗಿ ,ಮುದ್ದು ಅಣ್ಣನಾಗಿ ,ಕಾಲೆಳೆಯೋ ,ಕಿಚಾಯಿಸೋ ಗೆಳೆಯನಾಗಿ ,ನನ್ನೀಡಿ ಮನೆಗೆ ಪರಿಚಿತನಾಗಿ(ಒಮ್ಮೆಯೂ ಮನೆಗೆ ಬಾರದೆಯೂ)....ಶಬ್ಧಗಳಿಗೆ ಸಿಗದ ಈ ಭಾವಗಳಿಗೆ ,ಈ ಪ್ರೀತಿಗಳಿಗೆ ಮನ ಹಿಗ್ಗುತ್ತೆ ಪ್ರತಿ ಬಾರಿ ...ಯಾರೋ ಅಂದಿದ್ದ ಈ ಪ್ರೀತಿಗಳ ಬಗೆಗೆ ನಕ್ಕುಬಿಟ್ಟಿದ್ದೆ ನಾ ಒಮ್ಮೆ ..ಎಲ್ಲೋ ಮಾತಾಡೋ ,ಮಾತಲ್ಲಿ ಮನೆ ಕಟ್ಟೋ ,ಒಮ್ಮೆಯೂ ಎದುರು ನೋಡದ ಜನಗಳ ಬಗೆಗೆ ಇಷ್ಟು ಭಾವಗಳನ್ನಿಟ್ಟು ಕೊಂಡಿರೋ ನಿನ್ನ ನೋಡಿದ್ರೆ ಪಾಪ ಅನಿಸುತ್ತೆ ಅಂತಂದು ...ಆದರಿವತ್ತೀ ಭಾವ ನನ್ನ ಸೋಕಿದಾಗ ಮಾತ್ರ ಅರಿವಾಯ್ತು ನಂಗೆ ...ಮುಖ ನೋಡದೆಯೂ ಎಷ್ಟು ಚಂದದ ಬಂಧ ಬೆಸೆದಿದೆಯಲ್ಲ ಅಂತ.

ಡುಮ್ಮಕ್ಕ ಅಂತ ನೀ ನನ್ನ ರೇಗಿಸೋವಾಗೆಲ್ಲ ಮನದಲ್ಲಿರೋ ಕಲ್ಪನೆಯ ನನ್ನಣ್ಣ ನೆನಪಾಗ್ತಾನೆ ನಂಗೆ .ನನ್ನದೇ ಅಣ್ಣ ಇದ್ರೂ ನನ್ನನ್ನಿಷ್ಟು ಪ್ರೀತಿಸಲಾರನೇನೋ ...ನಡುಗೋ ಚಳಿಯಲ್ಲಿ ಅಮ್ಮನ ಕಂಡೆ ನಾ ನಿನ್ನಲ್ಲಿ ...ಗೆಳತಿಯಲ್ಲಿ ಕಣ್ಣೀರಾದೆ ನಡು ರಾತ್ರಿಲೀ ..ಕಾರಣ ಇಷ್ಟೇ ..ನಿನ್ನೀ ಕಾಳಜಿ ಕಟ್ಟಿ ಹಾಕಿತ್ತು ನನ್ನ ಕಣ್ಣಂಚಲ್ಲಿ ...ಪ್ರೀತಿಯಿಂದ ಅಳಬೇಕನಿಸೋವಾಗಲೆಲ್ಲಾ ನೆನಪಾಗೋದು ಅವಳೇ...ನಿನ್ನ ಪ್ರೀತಿಯ ಅವಳೆದುರು ಹೇಳಿದ್ದಷ್ಟೇ ...ಬೇಸರಿಸದಿರು ನೀ ಇಡೀ ರಾತ್ರಿ ನನ್ನ ಚಳಿಯಲ್ಲಿ ಕಳೆಯೋ ತರ ಮಾಡಿದೆ ಅಂತ ...ಹೀಗೊಂದು ಅಣ್ಣನ ಪ್ರೀತಿಯ ತೋರಿಸಿದ್ದಕ್ಕೆ ಬರಿಯ ಥಾಂಕ್ಸ್ ಅಂದ್ರೆ ಎಲ್ಲೀ ಭಾವವ ಕೊನೆಯಾಗಿಸಿಬಿಟ್ನೇನೋ ಅಂತನಿಸುತ್ತೆ .
ಮಾತಿಲ್ಲ ನನ್ನಲ್ಲಿ ...ಉಳಿದಿದ್ದು ಸಂತೃಪ್ತ ಮೌನ ಮಾತ್ರ ...

ಕಲಿಯಬೇಕಿದೆ ನಾನೂ ....ಸ್ನೇಹವ ಸಲಹೋಕೆ ....ಬಂಧಗಳ ಪ್ರೀತಿಸೋಕೆ .

ಇಲ್ಲೊಂದಿಷ್ಟು ಬ್ರಾಂಡೆಡ್ ಮಾತುಗಳಿವೆ ,ಒಂದಿಷ್ಟು ತಮಾಷೆಗಳಿವೆ , ಬ್ಯಾಚುಲರ್ಸ್ ಟಾಕ್ ಗಳಿವೆ....ತುಂಬಾ ದಿನಗಳ ನಂತರ ಪೂರ್ತಿಯಾಗಿ ನಕ್ಕ ಖುಷಿ ಇದೆ ... ,ಹಳೆಯ ಪ್ರೀತಿಯ ಬಗೆಗೆ ಕಣ್ಣೀರಾದ ಭಾವುಕ ಗೆಳೆಯನಿದ್ದಾನೆ ,ಸಣ್ಣದೊಂದು ಪೊಸೆಸ್ಸಿವ್ ನೆಸ್ ಇದೆ.ಹಸಿರ ಹಾದಿಯಲ್ಲಿ ಕೈ ಹಿಡಿದು ನಡೆಯೋ ಒಲವಿದೆ, ಜೊತೆಯಿರ್ತೀನಿ ಯಾವತ್ತೂ ಅನ್ನೋ ಭರವಸೆಯಿದೆ.ತೀರಾ ಅನಿಸಿದ ಕೀಟಲೆಗಳಿವೆ....ಸಣ್ಣದೊಂದು ಹುಸಿಮುನಿಸಿದೆ...ಕಣ್ಣಂಚ ಭಾವಗಳ ಅರ್ಥೈಸಿಕೊಳೋ ಮನಗಳಿವೆ,ಅರ್ಥವಾಗದ ಮೌನವಿದೆ ,ಮನ ನಲುಗಿಸೋ ಶೂನ್ಯತೆಯಿದೆ....
ಎಲ್ಲವುಗಳ ಹೊರತಾಗಿಯೂ ನಾನವರಿಗೆ ಏನೂ ಅಲ್ಲದಿದ್ದರೂ ಮೊದಲ ಭೇಟಿಯ ಖುಷಿ ಕೊನೆಯಾದಾಗ ಚಿಕ್ಕದಾದ ,ಹತ್ತಿರ ಅನಿಸಿದ ಎರಡು ಮುಖಗಳಿವೆ ...!!!

ತಿಳಿಯದ ಭಾವವೊಂದಕೆ ,ಅರಿಯದ ಸ್ನೇಹವೊಂದಕೆ,ಖುಷಿಯ ಪ್ರೀತಿಗಳಿಗೆ ,ಮನವ ಮುದ್ದಿಸೋ ಒಲವಿಗೆ ಏನೆಂದು ಹೆಸರಿಡಲಿ ?

ಕಲೆತು,ಕುಳಿತು,ಹತ್ತಿ,ಹಾರಿ,ಹರಟಿ,ಅತ್ತು,ಬೇಸರಿಸಿ,ಸಮ್ಮೋಹಿಸಿ,ಕೊನೆಗೊಮ್ಮೆ ನಕ್ಕು ....ಚಂದದ ಎಲ್ಲಾ ಭಾವಗಳು ದಿನವೊಂದರಲ್ಲಿ ಎಲ್ಲರನೂ ಒಳಹೊಕ್ಕು ,ಕಾಡಿಸಿ ,ಕಾಯಿಸಿ ,ಕೊನೆಗೂ ಸೋಲಿಸಿಯೇ ಹೊರ ಹೋದ ಈ ಭಾವಕ್ಕೆ ಏನೆಂದು ಹೆಸರಿಡಲಿ ...ನಾಮಕರಿಸಿಬಿಡಿ ನೀವೆ ...ಸಲಹ್ತೀನಿ ಕೊನೆಯ ತನಕ ನಾನದನ.

ಸಾಕಿಷ್ಟು ಪ್ರೀತಿ ಬದುಕ ಖುಷಿಸೋಕೆ...

ದಕ್ಕಲಿ ಎಲ್ಲರಿಗೂ ಇಂತದ್ದೇ ಸ್ನೇಹ ಬಳಗ .

13 comments:

  1. ಭಾವನೆಗಳ ಸುಂದರ ಗುಚ್ಛ...

    ReplyDelete
  2. ಸ್ನೇಹದ ಕಿರುಬೆರಳ ಹಿಡಿದು ಸಾಗಿದರೆ ಎಂಥ ಗಿರಿಯೂ, ಅಖಂಡ ದರಿಯೂ ಸೋತು ಕಾಲಡಿಯಲ್ಲಿ ಅಳುತ್ತವೆ...
    ಅಕ್ಕ, ತಂಗಿ, ಗೆಳತಿ, ಅಮ್ಮ, ಅಣ್ಣ, ತಮ್ಮ, ಗೆಳೆಯ - ಅರಳಿ ನಿಂತ ಭಾವ ಬಾಂಧವ್ಯಕ್ಕೆ ಹೆಸರೇನೇ ಇರಲಿ ಉಸಿರು ಮಾತ್ರ ನಡುವೆ ಹರಿಯುವ ಮಧುರ ಸ್ನೇಹಭಾವವೇ...
    ಸ್ನೇಹದ ಸಾರ್ಥಕ್ಯ ಹಾಗೂ ಔನ್ನತ್ಯ ಎರಡೂ ಅದೇ ತಾನೆ... ಬದುಕ ಖುಷಿಯಾಗಿಡೋದು...
    "ಸಾಕಿಟ್ಷು ಪ್ರೀತಿ ಬದುಕ ಖುಷಿಸೋಕೆ" ಅನ್ನೋ ಮೂಲಕ ಬದುಕ ತುಂಬ ಖುಷಿಯಾಗಿರ್ತೀನಿ ಅಂದ್ಯಲ್ಲಾ; ಇನ್ನೇನು ಬೇಕು ಬೆಸೆದುಕೊಂಡ ಸ್ನೇಹಗಳಿಗೆ... ನಗುತಲಿರು ಹೆಜ್ಜೆ ಹೆಜ್ಜೆಗೂ... ಇನ್ನಷ್ಟು, ಮತ್ತಷ್ಟು ಸ್ನೇಹದ ಗೆಜ್ಜೆಗಳು ಘಲಿರೆನ್ನಲಿ...

    ReplyDelete
  3. ee bhaavagalalli naanello kaledu hodantide putti..

    khushiyaytu odi. Madilallile tumbikondu barabekidda bhaavagalannu bogaseyashtaadaroo kattikottide ninna ee baraha,,.. nannalliye adu jopanaa endigoo,, :) :)

    ReplyDelete
  4. ಸ್ನೇಹದ ಸಾನಿಧ್ಯದಲ್ಲಿ.... ಭಾವ ಜೀವಿಗಳ ಭಾವನೆಯ ಮಡಿಲಲ್ಲಿ...
    ತೊಡಕುಗಳಿಲ್ಲದೆಯೂ ತಡೆ ತಡೆದು ಸ್ರವಿಸುವ ನಗುವ ಪ್ರೀತಿ..
    ಸ್ನೇಹಪೂರಿತರೆದುರಲ್ಲಿ ಪ್ರೀತಿಪಾತ್ರರಾದವರೆದುರಲ್ಲಿ ಧಾರೆಯಾಗೋದು ಸಹಜ....
    ಹಾಗೆಯೇ ಶಿವನ ಶಿರದಲ್ಲಿ ಗಂನಗೆಯುಕ್ಕಿದಂತೆ
    ಗಿರಿಯ ತುತ್ತ ತುದಿಯಲ್ಲಿ ಎಷ್ಟೆಲ್ಲಾ ಭಾವವುಕ್ಕಿತಲ್ಲಾ....
    ಏನನ್ನೋಣವಿದಕ್ಕೆ,,,,???

    ಹೋಗುವಾಗ ಕನಸಿನ ಬೀಜಗಳನ್ನು ಹೊತ್ತು ಹೋಗಿ
    ಗಿರಿಯ ಮೇಲೆಲ್ಲಾ ಬಿತ್ತಿ...
    ಬರುವಾಗ ನೆನಪ ಫಸಲನ್ನು ಹಿಡಿದುಬಂದ ಖುಷಿಯಿದೆಯಲ್ಲ....

    ಮತ್ತಿನ್ನೇನು......

    ReplyDelete
  5. ಪೂರ್ಣತೆಯ ಹಂಗಿಲ್ಲದೆ ಅರಳುವ ಪ್ರತಿ ಭಾವವೂ ಬಂಧವೂ ಬದುಕಿನಲ್ಲಿ ಬೆಳದಿಂಗಳೇ, ಕಾಡು ಮಲ್ಲಿಗೆಯ ಪರಿಮಳ ಕಾಡುತ್ತದೆ ಅಪರೂಪವೆನ್ನುವ ಕಾರಣಕ್ಕೇ ಇರಬಹುದಾ... ಯಾವುದೂ ಪೂರ್ಣಗೊಳ್ಳದಿರಲಿ ಭಾವದಲ್ಲಿ, ಸ್ನೇಹದಲ್ಲಿ, ಕೊನೆಗೆ ಬದುಕಿನಲ್ಲೂ...
    ಬರಹ ಇಷ್ಟವಾಯ್ತು ಅಂತಾ ಮತ್ತೆ ಹೇಳ್ಬೇಕಿಲ್ಲ ಅಲ್ವಾ..??

    ReplyDelete
  6. ಚಂದ....... ಚಂದ .......

    Typed with Panini Keypad

    ReplyDelete
  7. ಭಾವಗಳು ಮಾತಾಡಿದೆ...
    ಬದುಕು ಸ್ನೇಹದ ತೇರಲ್ಲಿ ಖುಷಿಯಾಗಿರಲಿ ಕಂದಾ....

    ReplyDelete
  8. ನಿಮ್ಮ ಬರಹಗಳು ಮನಸ್ಸಿನ ಆಳಕ್ಕೆ ಇಳಿಯುತ್ತವೆ...ಬೇಡ ಯಾವದೇ ಹೆಸರಿನ ಚೌಕಟ್ಟಲ್ಲಿ ಬಂಧಿಸೋದು ಬೇಡ ಈ ಭಾವ ನದಿಯನ್ನ...ಅದು ನಿರಂತರ ಹರಿಯುತ್ತಲಿರಲಿ ಹೀಗೆ...

    ReplyDelete
  9. ಎಂತಹ ಸುಂದರ ಲೇಖನ.... ಮನಸ್ಸು ಭಾವನೆಗಳಲ್ಲಿ ತೇಲಾಡಿತು....
    ಮಾತುಗಳೇ ಸಿಗ್ತಾ ಇಲ್ಲ... ಮನಸ್ಸಿಗೆ ಬದುಕಿಗೆ ತುಂಬಾ ಹತ್ತಿರವಾದ ಬರಹ ...
    "ನನ್ನವರು ಅವರವರ ಭಾವಗಳ ಹೊಡೆದಾಟದಲ್ಲಿ", " ಎಲ್ಲಿಂದಲೋ ಬರುವ ಆತ್ಮೀಯ ಸಂದೇಶ ".... ಎಲ್ಲಾನು ಚೊಲೊ ಇದ್ದು..


    Thank you so much for this wonderful presentation..One of the best :)

    ReplyDelete
  10. ಮೊದಲ ಅರ್ದದಷ್ಟು ಓದಿದಾಗ ಹಿತವೆನಿಸಿತು.ಚೆನ್ನಾಗಿತ್ತು ಭಾಗ್ಯ.

    ReplyDelete
  11. ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತೆ.. ಕೆಲವರನ್ನು ಆರಿಸಿಕೊಳ್ಳುತ್ತೆ ಹಾಗೆಯೇ ಗೆಳೆತನ, ಸ್ನೇಹಪರತೆ ಈ ಮಾತುಗಳು ಸವಕಲಾಗಿದ್ದರು ಅದು ಬತ್ತದ ಸಾಗರದಂತೆ.. ಅದರಲ್ಲಿ ಎಷ್ಟೇ ಉಪ್ಪು ತೆಗೆದರು some ಸಾರ ಇದ್ದೆ ಇರುತ್ತದೆ.. ಎಷ್ಟು ಸೊಗಸಾಗಿದೇ ಲೇಖನ ಸೂಪರ್ ಅನ್ನಬೇಕು ಆದರೆ ಪ್ರತಿ ಲೇಖನಕ್ಕೂ ಅದೇ ರೀತಿ ಹೇಳಿದರೆ ಏಕಾತನತೆ ಆಗಿ ಬಿಡುತ್ತೇನೋ ಅನ್ನುವ ಭಯ. ಸುಂದರವಾಗಿದೆ ಬರಹದ ಹರಿವು.. ಸೂಪರ್ ಬಿಪಿ

    ReplyDelete