Wednesday, November 13, 2013

ಮನಸ್ವೀ...,


ಕಳೆದು ಹೋಯ್ತಲ್ಲೋ ನಾಲ್ಕು ವಸಂತಗಳು ...

ಅವತ್ತು ಮನೆಯಲ್ಲಿ ಮೊದಲ ಮೊಮ್ಮಗಳ ಮದುವೆ ಸಂಭ್ರಮ!ಮನೆಯೂ ಮದುಮಗಳಂತೆ ಸಿಂಗಾರವಾಗಿತ್ತು.ಎಲ್ಲರಿಗೂ ಸಡಗರ...
ಪ್ರೀತಿಯ ಮನೆಯ ದೊಡ್ಡಕ್ಕ ನಿನ್ನರಸಿಯಾಗೋ ಖುಷಿ ನಿಂದಾಗಿದ್ರೆ ಅವಳಿಗಿನ್ನು ಪ್ರತಿ ದಿನ ಕಾಟ ಕೊಡೋಕೆ ,ಮಾತಾಡೋಕೆ,ಜಗಳವಾಡೋಕೆ ಆಗಲ್ವಲ್ಲಾ ಅನ್ನೋ ಬೇಜಾರು ನಮ್ಮಗಳಿಗೆ.ಆದರೂ ಏನೋ ಒಂದಿಷ್ಟು ಖುಷಿಗಳು ...ಅಕ್ಕನ ಜೊತೆ ನೀನೂ ಸಿಕ್ತೀಯ ತರಲೆ ಮಾಡೋಕೆ,ಕಾಟ ಕೊಡೋಕೆ ಅಂತೆಲ್ಲಾ ಏನೇನೋ ...ಆದರೂ ಮನದಲ್ಲೊಂದು ಅಳುಕು ..ಅಕ್ಕನೊಟ್ಟಿಗೆ ಏನೋ ಸ್ವಂತ ಅಕ್ಕನಂತೆಯೇ ಇರೋ ಸಲಿಗೆ,ಮಾತು,ಮಸ್ತಿ ಎಲ್ಲವೂ..ಆದರೆ ನೀ ಹೇಗಿರ್ತೀಯೋ ಏನೋ ಅನ್ನೋ ತರಹದ್ದು ಒಂದಿಷ್ಟು ಭಾವಗಳು ...ಏನೇ ಆದ್ರೂ ಅವತ್ತಲ್ಲಿ ಮುದ್ದು ಅಕ್ಕನ ಮದುವೆ ಸಂಭ್ರಮ .

ಮದುವೆಗೆ ಜೊತೆಯಾಗಿದ್ದ ೧೦ನೇ ಕ್ಲಾಸಿನ ಪರೀಕ್ಷೆಗಳಿಗೊಂದಿಷ್ಟು ಬೈದು ಜೊತೆಯಾಗಿದ್ದೆ ನಾ ಎಲ್ಲರನೂ...ಅಕ್ಕನಲ್ಲಿ ಮಾಡಿದ್ದ ಕೀಟಲೆಗಳಿಗೆ ಲೆಕ್ಕವಿರಲಿಲ್ಲ ..ಅವಳ ಈ ರಾಜಕುಮಾರನ ಬಗೆಗೆ ತುಸು ಜಾಸ್ತಿ ಅನ್ನೋ ಅಷ್ಟು ಕಾಲೆಳೆದಿದ್ವಿ ನಾವುಗಳು.
ಇಡೀ ಮನೆಯಲ್ಲಿ ಗಲಾಟೆ,ಮಾತು,ಹರಟೆ,ಒಂದಿಷ್ಟು ಭರದ ಕೆಲಸಗಳು..

ಅಜ್ಜ ಅಜ್ಜಿಗೆ ಮೊಮ್ಮಗಳ ಮದುವೆ ಗಡಿಬಿಡಿ,ಅಪ್ಪ ದೊಡ್ಡಪ್ಪಂಗೆ ಇನ್ನೂ ಪುಟ್ಟಿಯಾಗಿರೋ ಈ ಹುಡುಗಿ ಇಷ್ಟು ಬೇಗ ಮದುವೆಗೆ ಬಂದ್ಲಾ ಅನ್ನೋ ಆಶ್ಚರ್ಯ ಆದ್ರೆ ನನ್ನಮ್ಮ ,ದೊಡ್ದಮ್ಮಂಗೆ ಮುದ್ದು ಮಗಳಿಗೆ ನಾಳೆಯಿಂದ ಈ ಮನೆ ತವರು ಮನೆಯಾಗಿ ಬಿಡುತ್ತಲ್ಲ ಅನ್ನೋ ಬೇಸರ..ಇನ್ನು ನಂಗೆ, ಎರಡನೇ ಅಕ್ಕಂಗೆ ಈ ಅಕ್ಕ ಜೊತೆ ಇರಲ್ವಲ್ಲಾ ಇನ್ನು ಯಾವಾಗ್ಲೂ ಬಾವನ ಜೊತೆ ಇರ್ತಾಳಲ್ವಾ ಅಂತ ನಿನ್ನ ಮೇಲೊಂದು ಸಣ್ಣ ಹೊಟ್ಟೆಕಿಚ್ಚಾದ್ರೆ ಮೊದಲ ಬಾರಿ ಸೀರೆ ಉಡೋ ಖುಷಿ ಇನ್ನೊಂದು ಕಡೆ..ತಮ್ಮನಿಗೇನೋ ಸಂಭ್ರಮ ಎಲ್ಲರೂ ಅವನನ್ನಪ್ಪಿ ಮುದ್ದು ಮಾಡಿ ಮಾತಾಡ್ತಾರಲ್ಲಾ ಅಂತಾ. ಇನ್ನು ನಿನ್ನೀ ಹೆಂಡತಿಯದು ಒಂದಿಷ್ಟು ಟೆನ್ಷನ್ಸ್ !

ಕೊನೆಗೂ ಜೊತೆಯಾದೆ ಮಾರಾಯ ನೀ ನನ್ನಕ್ಕನಿಗೆ ಅವತ್ತಿದೆ ದಿನ..ಬೇರೆ ಯಾವ ಹುಡುಗನನ್ನೂ ನೋಡೋಕೆ ಬಿಡದೆ ಮೊದಲ ಹುಡುಗನೇ ಸರಿಯಾಗಿ ಪಾಪ ನನ್ನಕ್ಕ ಕೊನೆಗೂ ಸಿಕ್ಕಿದ್ಲು ನೋಡು ನಿಂಗೆ ..ಪುಣ್ಯ ಮಾಡಿದ್ದೆ ನೀ :ಫ್ ;)

ನಂತರದ್ದೆಲ್ಲಾ ಬಿಡು ಶಬ್ಧಕ್ಕೆ ದಕ್ಕದ ಭಾವ.
ಹೀಗೊಬ್ಬ ಬಾವ ಇರ್ತಾನೆ ಅನ್ನೋದರ ಸಣ್ಣ ಕಲ್ಪನೆಯೂ ಇರಲಿಲ್ಲ ನಮ್ಮಗಳಿಗೆ.ಬರಿಯ ಅಕ್ಕನ ಗಂಡನಾಗಿರದೇ ಈ ಮನೆಯ ಮುದ್ದು ಮೊಮ್ಮಕ್ಕಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದೆ(ಹೊಟ್ಟೆಕಿಚ್ಚಿದೆ..ಪ್ರೀತಿಯಲ್ಲಿ ನಿಂಗೂ ಒಂದು ದೊಡ್ಡ ಪಾಲು ಇದೆಯಲ್ಲಾ ಅಂತಾ :ಫ್ ) .

ಅದೆಷ್ಟು ಚಂದದ ಭಾವಗಳ ಕಟ್ಟಿಕೊಟ್ಟು ಬಿಟ್ಟೆ ಅಲ್ವಾ ನೀ ? ಇರದಿದ್ದ ಅಣ್ಣನ ಕೊರತೆ ನೀಗಿಸಿದೆ ನಮ್ಮಗಳಿಗೆ.ಜೊತೆಗೆ ಆಡೋಕೆ ಯಾರೂ ಇಲ್ಲ ನಂಗೆ ಅಂತ ಮುಖ ಊದಿಸಿ ಕೂರೋ ತಮ್ಮನಿಗೆ ಚಂದದ ಗೆಳೆಯನಾದೆ.ಅಜ್ಜನಲ್ಲಿ ಹಠ ಮಾಡಿ ಕ್ರಿಕೆಟ್ ಆಡೋ ತಮ್ಮನಿಗೆ ನೀ ಬಂದ ಮೇಲೆ ಅಜ್ಜನ ಜೊತೆ ಕ್ರಿಕೆಟ್ ಆಡಿದ ನೆನಪಿಲ್ವಂತೆ ! ಅಜ್ಜನದೊಂದು ಮುದ್ದು ಆರೋಪ ಇದೆ ನೋಡು ,ನೀ ಬಂದ ಮೇಲೆ ಅಜ್ಜನಿಗೆ ಕೆಲಸವಿಲ್ವಂತೆ.ಯಾಕಂದ್ರೆ ತಮ್ಮ ರಜಾದಲ್ಲರ್ಧ ದಿನ ನಿನ್ನೊಟ್ಟಿಗೆ ಇರ್ತಾನಂತೆ:)

ಅಜ್ಜಿಯ ಮಾತಿಗೆ ಕೂರಿಸಿ ಅಜ್ಜ ಅಜ್ಜಿಯ ಆ ದಿನಗಳ ನೆನಪಿಸಿ ಕಾಲೆಳೆದು ಅವರಿಬ್ಬರೂ ಮನ ಬಿಚ್ಚಿ ನಗೋ ತರ ಮಾಡೋಕಾಗೋದು ತಮ್ಮನ ಬಿಟ್ರೆ ಬಹುಶಃ ನಿನ್ನಿಂದ ಮಾತ್ರ ಸಾಧ್ಯವೇನೋ(ಮೊಮ್ಮಗಂದಿರಿಬ್ಬರಿಗೆ).
ಇನ್ನು ದೊಡ್ಡಪ್ಪ -ದೊಡ್ಡಮ್ಮ, ಅಪ್ಪ-ಅಮ್ಮಂಗೆ ನೀ ದೊಡ್ದ ಮಗನಾಗಿಬಿಟ್ಟಿದ್ದೀಯ ನೋಡು!
ಈ ಮನೆಯಲ್ಲೂ ಪ್ರೀತಿಯ ದೊಡ್ಡ ಪಾಲು ..ಆ ಮನೆಯ ಪ್ರೀತಿಗೆಲ್ಲ ವಾರಸುದಾರ ನೀನೊಬ್ಬನೆ ..ಸಿಗಬೇಕಾದುದ್ದೇ ನಿಂಗೀ ಪ್ರೀತಿ.ಎಲ್ಲರನೂ ಅಷ್ಟು ಇಷ್ಟ ಪಡೋ,ಬಂಧಗಳನಷ್ಟು ಚಂದದಿ ಸಲಹೋ ನಿಂಗೆ ಎರಡೂ ಕಡೆಯ ಚಂದದ ಮುದ್ದು ಭಾವವ ಕೊಡೋ ಮೊಮ್ಮಗನ ಪಾತ್ರ ಸಿಕ್ಕಿದೆಯಲ್ಲೋ ಬಾವಯ್ಯ ..

ನಿನ್ನ ಪ್ರೀತಿ ಮಾಡೋ ಭರದಲ್ಲಿ ಮನೆ ಮಗಳೇ ಇಲ್ಲಿ ಸ್ವಲ್ಪ ಕಡಿಮೆ ಪ್ರೀತಿ ಮಾಡಿಸಿಕೊಳ್ತಾಳಲ್ಲೋ ..ಎಲ್ಲರೂ ಮೊದಲು ಕೇಳೋದು ನಿನ್ನ ಬಗೆಗೆ..ಅಮೇಲವಳನ್ನ ವಿಚಾರಿಸಿಕೊಳ್ಳೋದು! ಈ ಬಗ್ಗೆ ನನ್ನಕ್ಕನೂ ಮಧುರ ಆರೋಪ ಮಾಡ್ತಾಳೆ ಅಳಿಯನೇ ಮೊದಲು ನೆನಪಾಗೋದು ನಿಮ್ಮಗಳಿಗೆ ಅಂತಾ ..ನಾನೂ ಅದೆಷ್ಟೋ ಸಾರಿ ಬೈಸಿಕೊಂಡಿದ್ದೀನಿ ಬಾವ ಮಾತ್ರ ನೆನಪಾಗೋದಲ್ವಾ ಅಂತಾ!(ಈಗಲೂ ಸಹ ವಿಷ್ ಮಾಡೋಕಂತ ನಿನ್ನ ನಂಬರ್ ಗೆ ಫೋನ್ ಮಾಡಿದ್ದಕ್ಕೊಂದು ರೆಡಿ ಇದ್ದ ಅದೇ ಡೈಲಾಗ್ ಬಿತ್ತು ನಂಗೆ)

 

ನಿಜ ಕಣೋ ಬಾವ...ಅದೆಷ್ಟು ಪ್ರೀತಿಯ ಮನೆ(ಮನ) ಅಲ್ವಾ ನಿಂದು ..ನನ್ನಕ್ಕ ಅಲ್ಲಿ ತುಂಬಾ ಖುಷಿಯಾಗಿದ್ದಾಳೆ ಅನ್ನೋದರ ಅರಿವು ಸಿಕ್ಕಾಗಲೆಲ್ಲಾ ನಮ್ಮಗಳ ಮನವೂ ಖುಷಿಸುತ್ತೆ.
ಜೊತೆಗೆ ಈ ಖುಷಿಗೆ ಮತ್ತೊಂದು ಕಾರಣ ಅನ್ನೋ ತರಹ ಮುದ್ದು ಪುಟ್ಟಿ ಕೂಡಾ ಜೊತೆಯಾಗಿ ಎರಡು ವರ್ಷಗಳಾದ್ವು.ನಿನ್ನೆ ಮೊನ್ನೆ ಅವಳ ಬರುವಿಕೆಯ ಎಲ್ಲರೂ ಕಾದ ನೆನಪು!ಅದೆಷ್ಟು ಬೇಗ ವರ್ಷಗಳಾಗಿ ಬಿಟ್ವು ..ಬಹುಶಃ ನಿಮ್ಮಗಳ ಈ ಪ್ರೀತಿ,ಜೊತೆಯಾಗಿರೋ ಭಾವ,ಜೊತೆಗೆ ಈ ಮುದ್ದು ಪುಟ್ಟಿಯ ಮುದ್ದು ಮುದ್ದು ನಡೆ,ಮಾತುಗಳಲ್ಲಿ ನಮಗೆ ವರ್ಷ ಕಳೆದುಹೋಗ್ತಿರೋದರ ಅರಿವು ಸಿಗ್ತಿಲ್ವೇನೊ!ಈ ಪುಟ್ಟಿಯೂ ನಿಮ್ಮಿಬ್ಬರಂತೇ ಎರಡೂ ಮನೆಯ ,ಎಲ್ಲರ ಮನಸ್ಸುಗಳ ಏಕೈಕ ರಾಜಕುಮಾರಿ :)

ಇನ್ನು ಈ ಪ್ರೀತಿ ಸ್ನೇಹದ ಹೊರತು ನೀನಂದ್ರೆ ನನ್ನಲ್ಲೊಂದಿಷ್ಟು ಬದುಕಿದೆ..
ನನ್ನ ಅದೆಷ್ಟೋ ಪ್ರಶ್ನೆಗಳ ಉತ್ತರ (my searching machine ...you can name as my google ) :ಫ್ .ನಂಗೆ ಬಗೆಹರಿಯದ ಅದೆಷ್ಟೋ ಸಾಫ್ಟ್ ವೇರ್ ಗಳ ಬಗೆಗೆ ಮಾಹಿತಿ ಕೊಡೋ ,ಏನೂ ತಿಳಿಯದಿದ್ದ ಆ ದಿನಗಳಲ್ಲಿ ಒಂದಿಷ್ಟು Apps ಗಳ ಪರಿಚಯಿಸಿ ,ಹೇಳಿಕೊಟ್ಟು ಇವತ್ತೊಂದು ವೆಬ್ ಡಿಸೈನ್ ಮಾಡೋವಷ್ಟು ಕಾನ್ಫಿಡೆನ್ಸ್ ಮೂಡಿಸಿರೋ,ಮಾತಂದ್ರೆ ಅಲರ್ಜಿ ಅಂತಿದ್ದವಳಿಗೆ ಬೈದು ಮಾತಾಡೋದನ್ನ, ಇವತ್ತು ಮಾತಿಲ್ಲದಿದ್ದರೇನೋ ಬೇಜಾರು ಅನ್ನೋ ಅಷ್ಟು ಬದಲಾಯಿಸಿರೋ ,
ತೀರಾ ಅನ್ನಿಸೋ ಬೇಸರಗಳಿಗೆ ಕಿವಿಯಾಗೋ , ಯಾವಾಗಲೂ ನಗಿಸೋ ,ಮಾಡಿದ ತಪ್ಪುಗಳಿಗೆ ಕಿವಿ ಹಿಂಡಿ ಸರಿ ಮಾಡೋ,ಸಣ್ಣ ಸಣ್ಣ ವಿಷಯಕ್ಕೂ ತೀರಾ ಅನ್ನೋ ಅಷ್ಟು ಜಗಳವಾಡೋ ,ನಿಮ್ಮನೆಗೆ ಬರದಿದ್ದರೆ ದೊಡ್ಡ ದೊಡ್ದ ಮಾತುಗಳಲ್ಲಿ "ನಾವ್ಯಾರು ನಿಂಗೆ ನೆನಪಿರಲ್ಲ ಅಲ್ವಾ..ಮರೆತುಬಿಟ್ಟೆ ಅಲ್ವಾ ,ಚಿಕ್ಕಮಗಳೂರ ನೆನಪಲ್ಲಿ ನಾವೆಲ್ಲಾ ಮರೆವು " ಅಂತ ಹೇಳೋ,ಕಾಳಜಿಸೋ ,ಬೇಸರಿಸೋ,ಕೋಪಮಾಡಿಕೊಳ್ಳೋ,ಸಣ್ಣ ಗೆಲುವಿಗೂ ಬೆನ್ನು ತಟ್ಟೋ ,ದೊಡ್ಡದೊಂದು ಅಭಿನಂದನೆ ಹೇಳೋ ..ಇನ್ನೂ ಅದೆಷ್ಟೋ ಭಾವಗಳ ಜೊತೆ ಇರೋ,ಕನಸುಗಳಿಗೆ ನೀರೆರೆದು ಪೋಷಿಸೋ ,ಸೋತಾಗ ಧೈರ್ಯ ತುಂಬೋ,ಬೀಗೋವಾಗ ಗುದ್ದಿ ಬೀಗೋ ಗುಣಗಳ ಕಡಿಮೆಯಾಗಿಸೋ..... ಅಣ್ಣ,ಗೆಳೆಯ,ಆತ್ಮೀಯ ,ಮುದ್ದಕ್ಕನ ಮುದ್ದು ಗಂಡ ಈ ಬಾವ :)

ಇರಲಿ ಹೀಗೊಂದು ಚಂದದ ಭಾವ ಬಂಧ ಈ ಬಾವನೊಡನೆ,ಮನಸ್ವಿಯ ಜೊತೆ ಯಾವಾಗಲೂ.

ನಿನ್ನೊಟ್ಟಿಗೆ ಮಾಡಿದ್ದ ಅದೆಷ್ಟೋ ಕಿಲಾಡಿತನಗಳಿವೆ ..ನೀನೂ ನಮ್ಮೊಟ್ಟಿಗೆ ಸೇರಿದಾಗ ನಮ್ಮಗಳ ತರಹವೇ ಆಡೋ ಒಂದಿಷ್ಟು ತರಲೆಗಳಿವೆ...ಅಕ್ಕ ಬಂದು ಜೋರು ಮಾಡಿ ಪುಟ್ಟಿ ಮಲಗಿದ್ದಾಳೆ ಅನ್ನೋ ತನಕವೂ ನಮ್ಮಗಳ ಮನೆ ಹಂಚು ಹಾರಿಸೋ ಕೆಲಸ ಸಾಗ್ತಾನೆ ಇರುತ್ತೆ ಜೊತೆ ಸೇರಿದ್ದಾಗ...ಅಕ್ಕನಿಗೆ ಕಾಲೆಳೆದು ,ಗೋಳು ಹೊಯ್ಯೋ ನಿನ್ನಲ್ಲಿ ಕಳಿಸಿಕೊಡೋ ಅವಳನ್ನ ಮನೆಗೆ ಅಂದ್ರೆ ಮಾತ್ರ "ನೀನೇ ಬಾ ನಮ್ಮನೆಗೆ ,ನಿನ್ನಕ್ಕನ ಕಳಿಸಿದ್ರೂ ನನ್ನ ಮಗಳನ್ನಂತೂ ಕಳಿಸಲ್ಲ "ಅನ್ನೋ ಸಿದ್ಧ ಉತ್ತರವೊಂದು ಯಾವಾಗ್ಲೂ ರೆಡಿ ಇರುತ್ತೆ !! ಹಾಗಾಗಿ ನಿಮಗಿಬ್ಬರಿಗಲ್ಲದಿದ್ರೂ ಮಗಳಿಗೆ ಸೋತು ನಾವುಗಳೂ ಅರ್ಧ ರಜೆಯನ್ನ ನಿಮ್ಮನೆಯಲ್ಲಿ ಕಳೆಯಲೇ ಬೇಕಿರುತ್ತೆ.ಮತ್ತೆ ನಿಂದದೇ ಆರೋಪದ ಪಟ್ಟಿ ಸಿದ್ದವಿರುತ್ತೆ ಮತ್ತೊಮ್ಮೆ ನಾ ಮನೆಗೆ ಬರೋ ಹೊತ್ತಿಗೆ "ಈ ಹುಡುಗಿ ದೊಡ್ಡೋಳಾಗಿದಾಳೆ ,ಇವಳಿಗೆ ನಾವುಗಳು ನೆನಪೂ ಇರಲ್ಲ" ಅಂತಿನ್ನೇನೇನೋ ಬ್ಲಾ ಬ್ಲಾ ಮಾತುಗಳು ಮತ್ತೆ ನಿಮ್ಮನೆ ಕಡೆಗೆ ಎಳೆದುಕೊಂಡು ಹೋಗುತ್ತೆ ನನ್ನನ್ನ
(ಈ ಮಾತುಗಳಿಗೆ ನೀ ಅಜ್ಜ ಅಜ್ಜಿಯಲ್ಲಿ ಬೈಸಿಕೊಳ್ತೀಯ ಯಾವಾಗ್ಲೂ ...ಅರ್ಧ ರಜೆ ನಿಮ್ಮನೆಯಲ್ಲೇ ಇರ್ತಾಳೆ ಅವ್ಳು ..ನಮ್ಮಗಳಿಗೂ ಬಿಡೋ ಸ್ವಲ್ಪ ಮಾತುಗಳಾಡೋಕೆ ಅವಳೊಟ್ಟಿಗೆ ಅನ್ನೋ ಅವರ ಬೇಸರಕ್ಕೆ).

ಏನೇ ಆಗಲಿ ಬಾವ...ಒಂದಿಷ್ಟು ಹುಸಿ ಮುನಿಸು ,ನೀ ಕಾಲೆಳೆಯೋ ನನ್ನ ಚಂದದ ಕನಸ ಹುಡುಗ,ಒಂದಿಷ್ಟು ಆತ್ಮೀಯತೆ,ತೀರಾ ಆಗೋ ಸಲುಗೆ ಕೊನೆಗೆ ನನ್ನ ಆ ಕನಸ ಹುಡುಗನನ್ನ ನೀ ಪಾಪ ಅಂದು ಒಂದಿಷ್ಟು ಆಡಿಕೊಂಡ ಮೇಲೆ ನನ್ನ ಸಿಟ್ಟಲ್ಲಿ ಮುಗಿದು ,ಅಕ್ಕನ ಮುದ್ದಲ್ಲಿ ಮತ್ತೆ ಶುರುವಾಗಿ ಮತ್ತದೇ ದಿನಚರಿ ಮುಂದುವರೆಯೋವಾಗ ಏನೋ ಒಂದಿಷ್ಟು ಖುಷಿಗಳು ನನ್ನೊಳಹೊಕ್ಕ ಅನುಭವ.

ನಂಗತೀ ಇಷ್ಟ ನಿಮ್ಮಗಳ ಪ್ರೀತಿ...

ಮುದ್ದಿಸೋ ಅಕ್ಕ,ಪ್ರತಿಯ ಹೆಜ್ಜೆಯಲ್ಲೂ ಬದುಕ ಹೇಳಿಕೊಡೋ ಬಾವ,ಅಲ್ಲಿಂದಲೇ ನನ್ನೆಲ್ಲಾ ಭಾವಗಳಿಗೂ ಸಾಥ್ ನೀಡೋ ಇದೇ ಅಕ್ಕನ ಪಡಿಯಚ್ಚು ಇನ್ನೊಂದು ಅಕ್ಕ,ಪ್ರೀತಿ ಮಾಡೋ ಅಣ್ಣನಾಗೋ ತಮ್ಮ , ಪ್ರೀತಿಯ ಅರಮನೆಯ ಈ ಮುದ್ದು ದೊಡ್ದಕ್ಕ -ಬಾವಂಗೆ ಇಲ್ಲಿಂದೊಂದು ಶುಭಾಶಯ ಹೇಳ ಬಂದೆ ನಾನಿವತ್ತು ಈ ಅಕ್ಕನ ತವರು ಮನೆಯ ಕಡೆಯಿಂದ :)

ಚಂದದ ದಾಂಪತ್ಯದ ಒಲವಲ್ಲಿ,
ಸ್ನೇಹದ ಸಲುಗೆಯ ಸೆಲೆಯಲ್ಲಿ,
ಪ್ರೀತಿಸೋ ಜೀವಗಳ ಆಶಯಗಳಲ್ಲಿ,
ಮುದ್ದು ಪುಟ್ಟಿಯ ನಗುವಲ್ಲಿ,
ಅಜ್ಜಾ ಅಜ್ಜಿಯ ಕಣ್ರೆಪ್ಪೆಯ ಜೋಪಡಿಯಲ್ಲಿ,
ಅಪ್ಪ ಅಮ್ಮನ ಬದುಕ ಕನಸುಗಳಲ್ಲಿ,
ಇರಲಿರಲಿ ಈ ಒಲವ ಪ್ರೀತಿ ಚಿರಕಾಲ ಹೀಗೇ .
ನಗುತಿರಿ ಯಾವತ್ತೂ ...ತಬ್ಬಿರೋ ಈ ಬಂಧಗಳ ಜೊತೆ.....

ಪ್ರೀತಿಯಿಂದ ,
ನಿಮ್ಮನ್ನ ಪ್ರೀತಿಸೋ ಮನೆ ಮಂದಿ

20 comments:

 1. ಬಟ್ಟೆಯನ್ನು ನೆನೆಸಿದಾಗ ಅದರ ಕೊಳೆ ಬಿಟ್ಟುಕೊಂಡು ಶುಭ್ರವಾಗುವ ಹಾಗೆ.. ಸುಮಧುರ ಮನಸ್ಸಿನ ಮಾನವ ಜೀವಿಯನ್ನು ನೆನೆಸಿಕೊಂಡು ಬರಹವನ್ನು ಅರಳಿಸಿದಾಗ ಭಾವವು ಶುಬ್ರ ಆಕಾಶದಂತಾಗಿರುತ್ತದೆ.
  ಮನದಲ್ಲಿ ಸುಂದರ ಆಶ್ರಯ ಕೊಡುವ ಸುಮಧುರ ಮನಸ್ಸಿನ ಮನೆಯ ಮಂದಿಯ ಜೊತೆ ಮನೆಯವರಾಗಿಯೇ ಬಿಡುವ ಅಳಿಯ, ಭಾವ, ಸೊಸೆ, ನಾದಿನಿಯರು ಇವರೆಲ್ಲ ಒಂದು ಜೇನುಗೂಡಿನ ಸಿಹಿಯನ್ನು ಮರಳಿ ತರುತ್ತಾರೆ. ಅಂಥಹ ಒಂದು ಸುಮಧುರ "ಭಾವ"ನ ಬಗ್ಗೆ "ಭಾವ"ಜೀವಿಯಿಂದ "ಭಾವ" ಸೂಸುವ ಪದಗಳ ಮೂಲಕ ಒಂದು ಸುಂದರ "ಭಾವ" ಕಟ್ಟಿಕೊಡುವ ನಿನ್ನ "ಭಾವ" ತುಂಬಿದ ಬರಹಕ್ಕೆ ನನ್ನ ನಮನಗಳು. ಸೂಪರ್ ಇದೆ ಬಿಪಿ ಇಷ್ಟವಾಗುತ್ತದೆ ಈ ಲೇಖನ. ಮಾನವ ಸಂಘಜೀವಿ.. ಎನ್ನುವುದಕ್ಕೆ ಉತ್ತಮ ಉದಾಹರಣೆ ಈ ಲೇಖನ. ಹಾಟ್ಸ್ ಆಫ್

  ReplyDelete
 2. ಭಾಗ್ಯ,

  ನಂದೇ ಮೊದಲ ಕಮೆಂಟ್, ಮೊದಲ ಬಾರಿ ಎನ್ನಿಸುತ್ತದೆ. :D

  ಇಷ್ಟ ಆಯ್ತು ಈ ಬರಹ, ಭಾವ, ಪ್ರೀತಿ ಎಲ್ಲ. ನಿಮ್ಮ ಅಕ್ಕನಿಗೂ-ಭಾವನಿಗೂ ಶುಭಾಷಯಗಳು ನನ್ನ ಕಡೆಯಿಂದಲೂ.

  ಒಂದು ಸಣ್ಣ ಅಸೂಯೆ ಆಯ್ತೇ ಭಾಗ್ಯ, ನಿಮ್ಮ ಮನೆಯ ಬಗ್ಗೆ, ಆ ಪ್ರೀತಿಯ ಬಗ್ಗೆ. ಅವಿಭಕ್ತ ಕುಟುಂಬದ ಪರಿಚಯ ಅಷ್ಟಾಗಿ ಇರದವರು ಏನೇನನ್ನೆಲ್ಲಾ ಕಳೆದುಕೊಳ್ಳುತ್ತಾರೆ ಎನಿಸಿದ್ದು ಸತ್ಯ. ಇರಲಿ ಈ ಬಂಧ ಎಂದೆಂದಿಗೂ. :)

  ಬರೀತಿರಿ. :)

  ReplyDelete
  Replies
  1. ಸುಬ್ಬು ಆಕಾಶ ನೋಡೋಕೆ ನೂಕು ನುಗ್ಗಲೇ ಅಂತಾರೆ.. ನಮ್ಮೆಲ್ಲರ ಪ್ರೀತಿಯ ಪುಟ್ಟಿ ಭಾಗ್ಯ ಬರೆಯುವ ಲೇಖನಗಳು ಒಂದಕ್ಕಿಂತ ಒಂದು ಸೊಗಸು.. ಆಗಸದಿಂದ ಹೊರಟೆ ಮಳೆ ಹನಿ ಯಾವುದು ಮೊದಲು ಭೂಮಿಯನ್ನು ಸೇರಿದರು... ಅದರ ಕಾರ್ಯ ಒಂದೇ.. ಭೂಮಿಯನ್ನು ಫಲವತ್ತತೆ ಗೊಳಿಸುವುದು ಮತ್ತು ಹಸನಾಗಿಸಿ ಭರವಸೆಯ ಬೆಳೆಯನ್ನು ತೆಗೆಸುವುದು. ನಮ್ಮೆಲ್ಲರ ಪ್ರೋತ್ಸಾಹ ನಮ್ಮೆಲ್ಲರ ಭಾಗ್ಯ ಪುಟ್ಟಿಯ ಬೆಳವಣಿಗೆಯಾಗಿರುವ ಬರವಣಿಗೆಯ ಸಂಖ್ಯೆಗಳ ಎಲ್ಲೆಯನ್ನು ದಾಟಿ ಮುದನೀದುತ್ತಿದೆ..ನಾವೆಲ್ಲರೂ ಒಂದೇ ಕುಟುಂಬದ ಬಳ್ಳಿಗಳು ಯಾರು ಮೊದಲಾದರೂ ಪ್ರೋತ್ಸಾಹದ ನುಡಿ ನೀಡುತ್ತಿರುವ ನಾವೆಲ್ಲರೂ ಒಂದೇ.. ಏನಂತೀರ!!!

   Delete
 3. ಅಕ್ಕನಿಗೆ ತಂಗೆಯೊಬ್ಬಳು ಬರಹದಲ್ಲಿ ಕೊಡಬಹುದಾದ ಉತ್ತಮ ಉಡುಗೊರೆ. ಎಂತಹ ಚಂದದ ಬರಹ ಭಾಗ್ಯ.
  ಬಹಳ ಸುಖಮಯ, ಚೆಂದದ ಕುಟುಂಬ...:)
  ಮುದ್ದುಮುದ್ದಾಗಿ ಭಾವಗಳಲ್ಲೆ ಬದುಕ ಉಣಬಡಿಸುವ ನಿನ್ನ ಚೆಂದದ ಬರಹಗಳು ಕಾಲಾಂತರವಾಗಿ ಅಂದಗೊಳ್ಳುತ್ತಿವೆ...;)
  Beautifully expressed in words :)

  ReplyDelete
 4. ನಿನ್ನ ಅಕ್ಕ - ಬಾವರಿಗೆ ನನ್ನದೂ ಶುಭಾಶಯ ತಿಳಿಸು...
  ನಗುವೂ - ನಲಿವೂ ಜೊತೆಯಾಗಿ, ಬೆಸೆದ ಬಂಧ ಜನ್ಮಾಂತರಗಳಲೂ ಟಿಸಿಲೊಡೆಯುತ್ತ, ಚಿಗುರುತ್ತ, ಹಸಿರಾಗಿರಲಿ ಸದಾ...
  ಶುಭಾಶಯಗಳು...:)

  ReplyDelete
 5. ಭಾಗ್ಯಾ....
  ಅಕ್ಕನಿಗೆ ಇದಕ್ಕಿಂತಲೂ ಉಡುಗೊರೆ ಬೇಕಾ....?
  ತುಂಬಾ ಖುಷಿ ಪಟ್ಟಾರು..... ತೋರಿದ ಪ್ರೀತಿಯನ್ನು
  ತೋರಿದ್ದಕ್ಕಿಂತಲೂ ಚನ್ನಾಗಿ ಬರೆಯುತ್ತೀಯಾ......
  ನೂರ್ಕಾಲ ಿರಲಿ ಈ ಖುಷಿ.....

  ಶುಕ್ರಿ..ಯಾ.........

  ReplyDelete
 6. ಕೌಟಂಬಿಕ ಪ್ರೀತಿ ಕೊಡುವ ಸುಖಕ್ಕಿಂತ ದೊಡ್ಡದು ಯಾವುದಿದೆ ಅಲ್ಲವಾ? ಪ್ರೀತಿ ಹಂಚಿಕೊಂಡ ರೀತಿ ಕೂಡ ಚಂದಚಂದ. ಬರಹ ಆಪ್ತ. ಶುಭಾಶಯಗಳು.

  ReplyDelete
 7. ಧನ್ಯ......... ಕೆಲವು ಕಡೆ ಉತ್ಪ್ರೇಕ್ಷೆ ಜಾಸ್ತಿ ಆಯ್ತು... ಮಾತಿಗಿಂತ ಮೌನವಾಗಿ ಇರೋ ನೀನು ಬದಲಾಗಿದ್ದು ನನ್ನಂದಿಲೋ ಅಥವಾ ಚಿಕ್ಕಮಗಳೂರಿನ ಮಹಿಮೆಯೋ ಗೊತ್ತಿಲ್ಲ...ಇನ್ನು ನನ್ನ ಮಗಳಿಗೆ ಎರಡು ವರ್ಷ ತುಂಬಿದೆ, ಮನೆಗೆ ಹೋಪಾನ! ಪದವನ್ನು ಹೇಳ್ಕೊಡ್ತಾ ಇದ್ದೀನಿ ಅಜ್ಜನಮನೆಯಲ್ಲಿ ಹೇಳಲಿ ಅಂತ!.. ತವರುಮನೆಗೆ ನಿಮಕ್ಕ ಹೋದರೆ ವಾಪಸ್ ಬರೋದು ಕಷ್ಟ, ಇರ್ಲಿ ಬಿಡು ಅಂತಿದ್ರಲ್ವ!! ನಿಮ್ಮೆಲ್ಲರ ಪ್ರೀತಿ ಸದಾ ಹೀಗೆ ಇರಲಿ, ನಿಮಕ್ಕ ಇನ್ನೂ ಓದಿಲ್ಲ, ಓದೋಕೆ ಹೇಳ್ತೀನಿ.. ಇಷ್ಟು ಚಂದದ ಶುಭಾಶಯದ ನಿರೀಕ್ಷೆ ನನಗಂತೂ ಇರಲಿಲ್ಲ, ನೀ ಹೇಳಿದ್ದೆ ಫೋನಿನಲ್ಲಿ ಬರಿಬೇಕು ಅಂತಿದ್ದಿ ಅಂತ! ಇಷ್ಟೆಲ್ಲಾ ಬರೆದುಬಿಡ್ತೀಯ ಅಂತ ಅಂದುಕೊಂಡಿರಲೇ ಇಲ್ಲ... ಅಲ್ದೆ ಎಂತೆಂತೋ ಬರದ್ಯಲೆ!............. :ಫ್

  ReplyDelete
 8. ಚಂದದ ಭಾವಗಳ ಗುಚ್ಛ ...

  ReplyDelete
 9. ಬಾವನ ಬಗ್ಗೆ ಸಖತ್ತಾದ ಭಾವಗಳ ಸಂಗ್ರಹದ ಬರಹ ಭಾಗ್ಯ.. ನೋಡು ನಿನ್ನ ಪೋಸ್ಟಿಗೆ ಕಾಮೆಂಟ್ ಹಾಕೋಕೆ ಕ್ಯೂನೆ ಇದ್ದು :-)

  ನಿಮ್ಮಕ್ಕ ಭಾವ, ಭಾವನ ಮಗಳಿಗೆ ಏನಾದ್ರೂ ಗಿಫ್ಟ್ ಕೊಡಾದಾದ್ರೆ ಇದೇ ಬೆಸ್ಟ್ ಗಿಫ್ಟ್ ಅನುಸ್ತು :-)
  ಇಷ್ಟ ಆತು ಬರಹ

  ReplyDelete
 10. This comment has been removed by the author.

  ReplyDelete
 11. ತುಂಬಾ ಚೆನ್ನಾಗಿದೆ ತಂಗಿ............. ನಿನ್ನ ಒಲವಿನ ಉಡುಗೊರೆ.......

  ReplyDelete
 12. ನನ್ನ ಕಡೆಯಿಂದಲೂ ಶುಭಾಶಯಗಳು ಅಕ್ಕಾ ಬಾವಂಗೆ...
  ಪ್ರೀತಿ ನೂರ್ಮಡಿಸಲಿ.. ಭಾಂದವ್ಯ ಚಿರಕಾಲವಿರಲಿ... ಚಂದದ ಬರಹ ಅಂತ ಮತ್ತೆ ಹೇಳ್ಬೇಕಿಲ್ಲಾ ತಾನೇ.. ?

  ReplyDelete
 13. ನಿಮ್ಮ ಬರಹ ಶೈಲಿ ಚೆನ್ನಾಗಿದೆ..

  ReplyDelete
 14. ಈ ನನ್ನ ಪುಟ್ ಪುಟಾಣಿಯ ದೊಡ್ಡಕ್ಕನಿಗೆ, ಭಾವನಿಗೆ ಆತ್ಮೀಯ ಶುಭಾಶಯಗಳು..
  ಚಿರ ಕಾಲ ಇರಲಿ ಪ್ರೀತಿ.. ಎರಡು ವರುಷದ ಪುಟಾಣಿಯ ಗೆಜ್ಜೆಸದ್ದು ಖುಷಿಯಾಗಿ ಮನೆ ಮನ ಬೆಳಗಲಿ ..

  ಅದ್ಭುತ ಉಡುಗೊರೆ ಅಕ್ಕಾ , ಭಾವನಿಗೆ ..

  A Big Hug for you my dear ..:)

  ReplyDelete
 15. ವಾಹ್! ಅಕ್ಕ-ಬಾವನಿಗೆ ತಂಗಿ ಬರೆದ ಭಾವನಾತ್ಮಕ ಸಾಲುಗಳು ಎದೆಯ ಕದವ ತಟ್ಟಿ ಬಡಿದೆಬ್ಬಿಸಿದಂತಿದೆ... ನಿಜವಾಗಿ ಲೇಖನ ಓದುತ್ತಿದ್ದರೆ ಭಾವಗಳ ವರ್ಷಧಾರೆಯೇ ಆಗುತ್ತಿದ್ದ ಅನುಭವ! ಬರಿ ಮನವನ್ನು ಹಸಿಗೊಳಿಸುವಂಥದ್ದಲ್ಲ... ಓದುಗನನ್ನು ಸಂಪೂರ್ಣ ಮುಳುಗಿಸಿ ಬಿಡುವ ಮಗ್ನನಾಗಿಸುವ ಲೇಖನ ಇದು... ಸಂಬಂಧಗಳ ಸುಮಧುರ ಕ್ಷಣಗಳು ಹೀಗೆ ಸಿಹಿಯನ್ನು ಹಂಚುತ್ತಿರಲಿ ಎಂದು ಆಶಿಸುವೆ...

  ReplyDelete
 16. so sweet..... ಭಾವನಾತ್ಮಕ... ಮನಸುಗಳು ಹೀಗೆ ಇರಲಿ.... ಪ್ರೀತಿ ತು೦ಬಿರಲಿ...

  ReplyDelete
 17. ಬಹಳ ಚೆಂದದ ಬರಹ ಭಾಗ್ಯ.. ಭಾವನ ಕುರಿತಾಗಿನ ಈ ಭಾವಗಳು ಎಲ್ಲಾ ನಾದಿನಿಯರಲ್ಲೂ ಇರಲಿ.. ನಾದಿನಿಯರಲ್ಲಿ ಇಂಥಾ ಪ್ರೀತಿಯನ್ನ ಹುಟ್ಟಿಸುವ ಭಾವ ಎಲ್ಲಾ ಭಾವರಲ್ಲೂ ಇರಲಿ. :) :)

  ReplyDelete
 18. ನನ್ನಕ್ಕ ಬಾವಂಗೆ ನೀವಿತ್ತ ಪ್ರೀತಿಯ ಹಾರೈಕೆ ,ಶುಭಾಶಯಗಳಿಗೆ ಶರಣು.
  ಇರಲಿರಲಿ ಈ ಬಂಧ ಚಿರಕಾಲ ಹೀಗೇ

  ReplyDelete