Tuesday, December 3, 2013

ಆ ಗಿಟಾರು ಹುಡುಗ ...

ತುಂಬಾ ದಿನಗಳ ನಂತರ ಅದೊಂದು ಭಾನುವಾರದ ಮಧ್ಯಾಹ್ನ ಮಲಗಿದ್ದೆ ಸರಿಯಾಗಿ ಐದಕ್ಕೆ ಅಲಾರಾಂ ಇಟ್ಟು!ಜನ ಜಂಗುಳಿಯ ಮಧ್ಯ ನನ್ನ ನಾ ಒಂಟಿಯಾಗಿಸಿಕೊಳ್ಳೋ ಖುಷಿ ಸಿಕ್ಕ ದಿನದಿಂದ ಬದುಕಿಗೊಂದು ಪ್ರಬುದ್ಧತೆ ಬಂದಿತ್ತು.ಆದರವತ್ಯಾಕೋ ಜನರ ಮಧ್ಯ ಕಳೆದು ಹೋಗಬೇಕನ್ನಿಸಿದ ಭಾವವ ಬದಿಗೊತ್ತಿ,ಯೋಚನೆಗೂ ಜಾಗ ಬಿಡದೆ ನಿದ್ದೆ ಹತ್ತಿತ್ತು ನಂಗೆ.ಏಳೋ ಹೊತ್ತಿಗೆ ಮೊಬೈಲ್ ಗೆ ಸರಿಯಾಗಿ ಐವತ್ತು ಮಿಸ್ ಕಾಲ್ ಗಳಿದ್ದವು.ಗಾಬರಿ ಬಿದ್ದು ತಿರುಗಿ ಫೋನಾಯಿಸಿದ್ರೆ "ಗೂಬೆ ,ದೊಡ್ಡವಳಾಗಿಬಿಟ್ಟಿದ್ದೀಯ.ಕೈಗೆ ಸಿಗೋದು ಬಿಡು ಫೋನಲ್ಲಿ ಮಾತಿಗೂ ಸಿಗಲ್ಲ ನೀನು" ಅಂತ ಮುಗಿಯದ ದೊಡ್ಡ ಧ್ವನಿಯಲ್ಲಿ ಸಿಟ್ಟು ಮಾಡಿದ್ದ ಗೆಳೆಯ.

ಮೊದಲಿನಿಂದಲೂ ಅಷ್ಟೇ .ಒಂದಿಬ್ಬರು ಆತ್ಮೀಯ ಗೆಳತಿಯರನ್ನ ಬಿಟ್ರೆ ಹೆಚ್ಚಾಗಿ ನಾನಿರೋದು(ನಂಗಿರೋದು) ಗೆಳೆಯರ ಗುಂಪಲ್ಲೆ.ಬ್ಯೂಟಿ ಟಿಪ್ಸ್,ಡ್ರೆಸ್, ಗಾಸಿಪ್ಸ್, ಜಲಸ್ ಅಂತಿಪ್ಪ ಹುಡುಗಿಯರಿಗಿಂತ ನಂಗೆ ಯಾವಾಗ್ಲೂ VIP ಬ್ರಾಂಡ್ ತೋರ್ಸೋ ,ಜಾಸ್ತಿ ತಲೆ ಹರಟೆ ಮಾಡೋ ,ಯಾವಾಗ್ಲೂ ಎಲ್ಲದಕ್ಕೂ ನಗೋ, ನಾವೂ ಹೊಟ್ಟೆ ಹಿಡಿದು ನಗೋ ತರ ಮಾಡೋ ಹುಡುಗರೇ ಜಾಸ್ತಿ ಇಷ್ಟ ಆಗೋದು ..ಇಲ್ಲಿ ದಕ್ಕಿದ್ದೂ ಅಂತಹುದೇ ಪಕ್ಕಾ ಕ್ರೇಜಿ ಹುಡುಗರ ಚಂದದ ಸ್ನೇಹ ಬಳಗ.

ಕಾಲೇಜಿನ ಮೊದಲ ದಿನ ಮಾಡಿದ್ದ rag ನಿಂದ ಶುರುವಾದ ಸ್ನೇಹ ಇವತ್ತಿಲ್ಲಿ ಅವರೆಲ್ಲರ ಬಳಿ ಹೊಡೆದಾಡಿ ಮುಖ ಊದಿಸೋ ಅಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ನನ್ನೂರ ಇವರುಗಳ ಜೊತೆಗೊಂದಿಷ್ಟು ಮಾತಾಡಿದ್ದು ,ಕೂತು ತಲೆಹರಟೆ ಮಾಡಿದ್ದು ಲೆಕ್ಕವಿಲ್ಲದಷ್ಟು ,,ಸೀನಿಯರ್ಸ್ ಅಂತಾ ತುಂಬಾ ಕೊಬ್ಬು ಮಾಡ್ತಿದ್ದ ಇವರುಗಳ ಕೊಬ್ಬಿಳಿಸಿ ಗೆಳೆಯರನ್ನಾಗಿ ಮಾಡಿಕೊಳ್ಳೋಕೆ ನಾ ತೆಗೆದುಕೊಂಡಿದ್ದು ಸರಿ ಸುಮಾರು ನಾಲ್ಕಾರು ತಿಂಗಳು!..

ಆಮೇಲಾಮೇಲೆ ಗೆಳೆತನದ ಪ್ರತಿ ಸಲುಗೆಯ ಭೇಟಿಯಲ್ಲೂ ಪ್ರತಿ ಗೆಳೆಯರ ಜನುಮ ದಿನಕ್ಕೂ ಒಂದೊಂದು ಫಂಕಿ ಗಿಫ಼್ಟ್ ಹಿಡಿದು ಅಲ್ಲೊಂದಿಷ್ಟು ನಕ್ಕು ಬರೋದರ ಅಭ್ಯಾಸವಾಗಿ ಹೋಗಿದ್ದು ತುಂಬಾ ದಿನಗಳಾಯ್ತು.

ಅಲ್ಲಿ ಪ್ರತಿ ಗೆಳೆಯನ ಬರ್ತ್ ಡೇ ಕೇಕ್ ನಲ್ಲಿ ನಂಗೇ ಸಿಗೋ ಫಸ್ಟ್ ಬೈಟ್ ಗೆ ಉಳಿದವರೆಲ್ಲಾ ಮುಖ ಊದಿಸಿ ಕೂರೋವಾಗ ಏನೋ ಒಂದು ಚಂದದ ಖುಷಿ ನನ್ನೊಳಗೆ ನಂಗೆ . ಅವತ್ತು ನಾನವರ ಹುಡುಗಿಯಾಗಿ ಬಿಡ್ತಿದ್ದೆ ಅಕ್ಷರಶಃ ! ಎಲ್ಲರೂ ಇವತ್ತೂ ಆಡಿಕೊಳ್ತಾರೆ ನಿಂಗೆ ಇದಾರು ಹುಡುಗರಿದ್ದಾರಲ್ಲೆ ,ಯಾರನ್ನ ಸೆಲೆಕ್ಟ್ ಮಾಡ್ತೀಯ ನಮ್ಮೈವರಲ್ಲಿ ಅಂದುಕೊಂಡು.ಸುಮ್ಮನೆ ಅವರುಗಳ ತಲೆಹರಟೆಗೆ ನಕ್ಕು ನಾನೂ ಅಲ್ಲೊಂದಿಷ್ಟು ತರ್ಲೆ ಮಾಡೋವಾಗ ಎಲ್ಲರಿಗೂ ನಗೋದು ಮಾತ್ರ ಗೊತ್ತೆನೋ ಅನಿಸಿಬಿಡುತ್ತಿತ್ತು.

ಆದರೆ ಅವತ್ಯಾಕೋ ಆತ್ಮೀಯತೆಯ ಸಲುಗೆ ತೀರಾ ಅನ್ನಿಸಿ ನಾನಲ್ಲೊಬ್ಬ ಗೆಳೆಯಂಗೆ "ಅಪ್ಪ ಅಮ್ಮನ ದುಡ್ಡಲ್ಲಿ ಹೇಗ್ ಹೇಗೋ ಬದುಕೋ ಹುಡುಗ ಇಷ್ಟ ಆಗಲ್ಲ ನಂಗೆ" ಅಂದಿದ್ದೆ ಅವನ ಬದುಕ ಬಗ್ಗೆ!..ಅನಿಸಿತ್ತು ಆಮೇಲೆ ನಾನ್ಯಾರು ಅವನ ಬದುಕ ಬಗೆಗೆ ಪ್ರಶ್ನಿಸೋಕೆ ಅಂತ.ಆದರೆ ಆಡಿದ್ದ ಮಾತಿಗೆ ಅವ ನನ್ನ ಪೂರ್ತಿಯಾಗಿ ಬೈದು "ನನ್ನಪ್ಪ ಅಮ್ಮನೂ ಹೇಳದ ಈ ಭಾವವ ನೀ ಹೇಳಿದ್ದು ನಂಗಿಷ್ಟವಾಗಿಲ್ಲ" ಅಂತಂದು ಎದ್ದು ಹೋಗಿದ್ದ ಗೆಳೆತನದ ಸಲುಗೆಯ ಸರಿಸಿ.

ಬೇಸರವಾಯ್ತಂತಲ್ಲ ..ಆದರೂ ತುಸು ಬೇಸರಿಸಿದ್ದೆ ನಾನಲ್ಲಿ.ಆದರೆ ತಪ್ಪು ನನ್ನದೇ ಇದ್ದಾಗ್ಲೂ ಅದ ಒಪ್ಪಿಕೊಳ್ಳದ ನಾ, ಎದುರುಗಡೆಯ ವ್ಯಕ್ತಿಯೇ ಸಾರಿ ಕೇಳಬೇಕಂತ ಹಠ ಹಿಡಿಯೋ ತೀರಾ ಹಮ್ಮಿನ ಹುಡುಗಿ ಅವನಿಗೆ ಸಾರಿ ಅಂತಂದು ಸುಮ್ಮನಾಗಿಬಿಟ್ಟಿದ್ದೆ!

ಅವತ್ತಿನಿಂದ ನಂಗೀ ಇಷ್ಟದ ಗೆಳೆಯರ ಗುಂಪಲ್ಲಿ ಹೆಚ್ಚಾಗಿ ಸೇರೋಕೆ ಕಷ್ಟ ಆಗೋದು.ತೀರಾ ಅನ್ನೋ ಅಷ್ಟು ಕಂದಕವ ತಂದು ಬಿಟ್ಟಿದ್ದ ಅವ ಅಲ್ಲಿ.ಉಸಿರುಗಟ್ಟೋ ಸ್ನೇಹದಲ್ಲಿ ಯಾವತ್ತೂ ಉಳಿಯೋಕೆ ಇಷ್ಟ ಪಡದ ನಾ ಆಮೇಲವರ ಬರ್ತ್ ಡೈ ಪಾರ್ಟಿ,ಸುಮ್ಮನೊಂದು ಹ್ಯಾಂಗ್ ಔಟ್ ಏನೋ ಇಲ್ಲದ ಕಾರಣಗಳ ಹೇಳಿ ನಿಲ್ಲಿಸಿಬಿಟ್ಟಿದ್ದೆ...ಹತ್ತು ಬಾರಿ ಕರೆದಾಗ್ಲೂ ಒಮ್ಮೆಯೂ ಹೋಗದ ನನ್ನ ಅವರುಗಳು ಕರೆಯೋದೂ ಬಿಟ್ಟು ಬಿಟ್ಟಿದ್ರು ಕಾರಣವನ್ನೂ ಕೇಳದೇ!. ಅಲ್ಲಿಯೂ ಅವರುಗಳು ನನ್ನ ಕರೆಯೋದು ಪುಟ್ಟಿ ಅಂತಾನೇ..ಎಲ್ಲೋ ವಾರಕ್ಕೊಂದು ಮಿಸ್ ಯು ಮೇಸೆಜ್ ಮಾಡಿ,ತಿಂಗಳಿಗೊಮ್ಮೆ ಬದ್ಕಿದೀಯೇನೇ ಕೋತಿ ಅಂತ ಮಾತಾಡಿಸೋ ಇವರುಗಳ ಕಾಳಜಿಯ ಕಾಲೆಳೆಯೋ ಮಾತುಗಳಿಗೆ ಭಯ ಬೀಳ್ತಿದ್ದೆ ಪ್ರತಿ ಬಾರಿ ..ಎಲ್ಲಿ ಅವನ ತರಹವೇ ಇವರುಗಳಿಗೂ ಏನೋ ಹೇಳೋಕೆ ಹೋಗಿ ಎಲ್ಲಿ ಕಳೆದು ಹೋಗ್ತಾರೋ ಅನ್ನೋ ಭಯ.ಆದರೂ ಅನಿಸಿದ್ದನ್ನ ನೇರಾ ನೇರಾ ಮುಲಾಜಿಲ್ಲದೇ ಹೇಳೋ ಹುಡುಗಿಗೆ ಯಾರಿದ್ರೂ ಯಾರು ಎದ್ದು ಹೋದ್ರೂ ಅಷ್ಟೊಂದೇನೂ ಬೇಸರವಾಗ್ತಿರ್ಲಿಲ್ವೇನೋ.ಆದರೆ ಎಲ್ಲರಿಗಿಂತ ಆತ್ಮೀಯ ಅನ್ನಿಸಿ,ಅದೆಷ್ಟೋ ಭಾವಗಳ ,ಚಿಲ್ಲು ಚಿಲ್ಲು ಕನಸುಗಳ ಕೆದಕಿ ಕೇಳಿದ್ದ ಹುಡುಗ ಸಾರಿ ಅಂದ ನಂತರವೂ ಎದ್ದು ಹೋದ ಅನ್ನೋದೊಂದೆ ಬೇಸರ.

ಏನೋ ಒಂದಿಷ್ಟು ಒಂಟಿತನ ಅನಿಸಿತ್ತು ಒಂದಷ್ಟು ದಿನಗಳು ..ಒಂಟಿತನದ ಏಕಾಂತದ ಖುಷಿ ಸಿಕ್ಕ ದಿನದಿಂದ ನೆಮ್ಮದಿಯ ನಗು ಮೂಡಿತ್ತು.

ಬದುಕ ಬಗೆಗೆ ಒಂದಿಷ್ಟು ಬೇರೆಯದೇ ಭಾವಗಳಿರೋ ಹುಡುಗಿ ನಾ.ಎಲ್ಲರಲ್ಲೂ ಚಿಲ್ಲು ಚಿಲ್ಲು ಮಾತಾಡಿ ಒಂದಿಷ್ಟು ಫನ್ ಗಳ ನಂತರವೂ ಬದುಕಿನ್ನೇನೋ ಬೇರೆಯದೇ ಇದೆ ಅನ್ನೋದ ಅರಿತಿದ್ದೆ ಅಲ್ಲಿ.ಆದರೆ ಅಲ್ಯಾರಿಗೂ ಹೇಳಹೊರಡಲ್ಲ ಸಾಮಾನ್ಯದಿ .ಆದರೆ ಈ ಗೆಳೆಯ ಮಾತ್ರ ನನ್ನೆಲ್ಲ ಚೌಕಟ್ಟುಗಳ ಮೀರಿ ನನ್ನಲ್ಲಿ ಬಂದುಬಿಟ್ಟಿದ್ದ ..ಬ್ರಾಂಡೆಡ್ ಮಾತುಗಳಲ್ಲಿ ಗೊತ್ತಿರೋ ಎಲ್ಲಾ ಬ್ರಾಂಡ್ ಗಳ ಹೇಳೋದ ಬಿಟ್ರೆ ಅವುಗಳನ್ಯಾವುದನ್ನೂ ನಾ ಹಾಕಿರಲಿಲ್ಲ .ಅವನಿಗೆ ಹೇಳಿದಂತೆಯೇ ಅಪ್ಪ ಅಮ್ಮನ ದುಡ್ಡಲ್ಲಿ ತೀರಾ ಅನ್ನೋ ಅಷ್ಟು ಆಡೋದು ಸರಿ ಬೀಳ್ತಿರಲಿಲ್ಲ ನಂಗೆ.ನಾನವನಿಗೆ ಹೇಳಿದ್ದು ಅದನ್ನೆ ಅವತ್ತು.ಆದರವನಿಗೆ ಅದು ತುಂಬಾ ಹರ್ಟ್ ಆಗಿದೆಯಂತ ಗೊತ್ತಾಗಿದ್ದು ಅವ ನನ್ನ ಬಿಟ್ಟು ಹೋದ ಮೇಲೆ.ಆಮೇಲೆಲ್ಲೋ ವಾಪಸ್ಸಾದ ಗೆಳೆಯನಾಗಿ ..ಆದರೆ ಅವ ವಾಪಸ್ಸಾಗೊ ಹೊತ್ತಿಗೆ ಅಲ್ಲೊಂದು ಮುಚ್ಚಲಾಗದ ,ಸರಿಸೋಕಾಗದ ಕಂದಕವೊಂದು ಬಂದುಬಿಟ್ಟಿತ್ತು!!

ಆ ಹಳೆಯ ದಿನಗಳ ನೆನಪಿಸಿಕೊಂಡು ಸುಮ್ಮನೇ ಕೂತಿದ್ದಾಗ ಅದ್ಯಾಕೋ ಮತ್ತೆ ಇವರುಗಳನ್ನೊಮ್ಮೆ ಮಾತಾಡಿಸಿ ಬರಬೇಕನಿಸಿಬಿಟ್ಟಿತ್ತು.
ಗೊಂದಲದಲ್ಲಿ ಆ ಖುಷಿಯಲ್ಲಿ ಪಾಲುದಾರಳಾಗೋಕೆ..ಗೊತ್ತಿತ್ತು ದೊಡ್ಡ ಪಾಲು ಸಿಗೋದು ನಂಗೆ ಅಂತಂದು!

ಆದರೂ ಒಂದು ಅವ್ಯಕ್ತ ಭಾವ ಅದು.
 ಅಗೈನ್ ಮತ್ತೆ ಸಿಕ್ಕಿತ್ತು ಕೇಕ್ ನ ಮೊದಲ ಬೈಟ್...!!
ಅದೇ ಹಳೆಯ ಪ್ರೀತಿಯಿಂದ ಮಾತಾಡಿಸೋ ,ಅಷ್ಟೇ ತರಲೆ ಮಾಡೋ ಅವರುಗಳನ್ನ ಇಷ್ಟು ದಿನ ಯಾಕೆ ಮಿಸ್ ಮಾಡ್ಕೊಂಡೆ ನಾ ಅನ್ನಿಸಿಬಿಡ್ತು ಅವತ್ತಲ್ಲಿ!.ಮೂರು ತಾಸು ಕಾಫೀ ಡೇ ನಲ್ಲಿ ಮಾಡಿದ ತರಲೆ,ಮಸ್ತಿ,ಮಾತು ನಗುವಿನಿಂದಾಚೆಗೂ ನನ್ನಲ್ಲೇನೋ ಹುಡುಕಾಟ....

ನಾನವರಿಗೆ ನನ್ನೆಲ್ಲ ತರ್ಲೆಗಳ ಸಹಿಸಿಕೊಳ್ಳೋ,ತೀರಾ ಸೈಲೆಂಟ್ ಆಗಿರೋ ,ಅವನ ಮನೆಯಲ್ಲಿ ನಂಗೆ ಮನೆ ಮಗಳ ಸ್ಥಾನ ಕೊಡಿಸಿರೋ ,ಅಮ್ಮ ನೆನಪಾದಾಗಲೆಲ್ಲಾ ಮನೆಗೆ ಕರೆದು ಗಂಟೆಗಟ್ಟಲೇ ಅವನಮ್ಮನನ್ನ ನನ್ನ ಅಮ್ಮನನ್ನಾಗಿ ಮಾಡಿಬಿಡೋ ಈ ಊರ ನನ್ನ ಗೆಳೆಯನನ್ನ ಪರಿಚಯಿಸಿದಾಗ ಕಣ್ಣು ಮಿಟುಕಿಸಿ ನಂಗೆ ಮಾತ್ರ ಕೇಳೋ ತರ "ನಮ್ಮಷ್ಟು ಚೆನಾಗಿಲ್ಲ ಹುಡುಗ" ಅಂದಿದ್ರು! ನಾನೂ ಕಣ್ಣು ಮಿಟುಕಿಸಿ "ಅವ ಚೆನಾಗಿರೋಕೆ ಅವನೇನು ನನ್ನ ಹುಡುಗನಲ್ಲ " ಅಂದುಬಿಟ್ಟಿದ್ದೆ :ಫ್

ಇನ್ನು ಹುಡುಕಾಟದ ಕಾತರತೆಗೊಂದು ಕಾರಣವಿತ್ತು .ನಾ ಬೇಸರ ಮಾಡಿದ್ದ,ದೊಡ್ಡದಾಗಿ ಬದುಕ ಬಗ್ಗೆ ಹೇಳ ಹೊರಟಿದ್ದ ಆ ಗೆಳೆಯ ಕಾಣಿಸಿರಲಿಲ್ಲ ನಂಗಲ್ಲಿ.ಅವ ನನ್ನ ನೋಡಿದಾಗಲೆಲ್ಲಾ ಮುಖ ತಿರುಗಿಸಿಕೊಂಡು ಹೋಗೋವಾಗ ನೋವಿಗಿಂತ ಬೇಸರ ಕಾಡೋದು ನನ್ನ.ಅವನಿಗೆ ಬೇಸರವಾಗದಿರಲಿ ಅನ್ನೋ ಕಾರಣಕ್ಕೆ ಮಾತ್ರ ನಾನಾ ಚಂದದ ಸ್ನೇಹಿತರ ಸ್ವಲ್ಪ ಮಟ್ಟಿಗೆ ದೂರ ಮಾಡಿಕೊಂಡಿದ್ದು.

ಅವನಿಗೊಂದಿಷ್ಟು ಜಾಸ್ತಿ ಅನ್ನೋವಷ್ಟು ಬೈದಿದ್ದೆ ನಾನು .ಅವ ಹುಚ್ಚು ಹುಚ್ಚಾಗಿ ಪ್ರೀತಿಯ ಹೇಳಿಕೊಂಡಾಗ .ಸ್ನೇಹದಲ್ಲಿ ಪ್ರೀತಿ -ಪ್ರೇಮದ ಭಾವವ್ಯಾಕೋ ನಂಗೆ ಸಹ್ಯವಾಗ್ತಿರಲೇ ಇಲ್ಲ.
ತುಂಬಾ ಅನ್ನೋವಷ್ಟು ಈಗೋ, attitude ಇರೋ ಆ ಹುಡುಗ ನನ್ನ ಪೂರ್ತಿಯಾಗಿ ನಿರ್ಲಕ್ಷಿಸಿ ಗೆಳೆತನದ ಬಂಧವನ್ನೂ ಕಳಚಿಕೊಂಡು ಹೋಗಿದ್ದ .
After all, that was a stupid CRUSH ಅಂದುಕೊಂಡು ಸುಮ್ಮನಾಗಿದ್ದೆ ನಾನೂನೂ.

ಮತ್ತೆ ಆ ಮುದ್ದು ಗೆಳೆಯ ಬೇಸರಿಸ್ತಾನೇನೋ ನನ್ನ ನೋಡಿ ಅಂದುಕೊಂಡ್ರೆ ಅವನವತ್ತಲ್ಲಿ ಬಂದಿರಲೇ ಇಲ್ಲ !!

ನನ್ನದೇ ಮನವನ್ನ ಓದಿದೋರ ತರಹ ಅಲ್ಲೊಬ್ಬ ಗೆಳೆಯ ,ಆ ಹುಡುಗನೂ ನಿನ್ನ ತರಹವೇ ಕೈಗೆ ಸಿಕ್ತಿಲ್ಲ.ಹಾಸ್ಟೆಲ್ ನಲ್ಲೂ ತಾನಾಯ್ತು ತನ್ನ ರೂಮಾಯ್ತು ಅನ್ನೋ ತರಹ ತೀರಾ ಬ್ಯುಸಿ ಆಗಿ ಇದ್ದು ಬಿಡ್ತಾನೆ.ಇಡೀ ದಿನ ಪಟ ಪಟ ಮಾತಾಡ್ತಾ ಜಾಸ್ತಿ ತರ್ಲೆ ಮಾಡ್ತಿದ್ದ ಅವನೆಲ್ಲಿ ಕಳೆದು ಹೋದ ಅನ್ನೋದ ಹುಡುಕಿ ಹುಡುಕಿ ಸುಸ್ತಾಯ್ತು ಕಣೇ ..ನೀ ನಮ್ಮಗಳಿಗಿಂತ ಜಾಸ್ತಿಯಾಗಿ ಅವನ ಜೊತೆ ಮಾತಾಡಬಲ್ಲೆ ಕೇಳಿಬಿಡೇ ಅವನಿಗೇನಾಯ್ತೆಂದು ಅಂದಾಗ ಹುಬ್ಬೇರಿಸಿದ್ದೆ ನಾ.
ಅಂದರೆ ಅವ ನನ್ನ ಅವನ ಜಗಳ ,ಮನಸ್ತಾಪಗಳ ಯಾರೆದುರೂ ಹರವಿಲ್ಲ ಅನ್ನೋದರ ಅರಿವು ಸಿಕ್ಕಿ ನನ್ನಲ್ಲೇನೋ ಒಂದು ತರಹದ ಮುಜುಗರ.ನಂಗೊತ್ತು ಅವನ ಅತೀ ಆತ್ಮೀಯರು ಈ ಸ್ನೇಹಿತರೇ ಅನ್ನೋದು.ಆದರೆ ನಾ ಈ ಜಗಳಗಳ,ಅವನ ಪ್ರೀತಿಯ ನಿವೇದನೆಯ ಭಾವಗಳ ಎಲ್ಲಾ ಭಾವಗಳನ್ನೂ ಹಂಚಿಕೊಳ್ಳೋ ಗೆಳೆಯನಲ್ಲಿ ಹೇಳಿದ್ದೆ.ಇಲ್ಲಿ ನಂಗೀ ಗೆಳೆಯ ತೀರಾ ಭಿನ್ನವಾಗಿ ಕಂಡುಬಿಟ್ಟ.

ಯಾರ್ಯಾರದೋ ಎದುರು ನಾ ಸಣ್ಣವನಾಗೋಕೂ ಇಷ್ಟವಾಗಲ್ಲ...ಬೇರೆಯವರನ್ನ ಸಣ್ಣವರನ್ನಾಗಿ ಮಾಡೋಕೂ ಇಷ್ಟವಾಗಲ್ಲ ಅಂತ ಅವತ್ಯಾವತ್ತೋ ಆಡಿದ್ದ ಅವನದೇ ಮಾತುಗಳು ಮನ ಸವರಿ ಎದ್ದು ಹೋಯ್ತು ಕ್ಷಣಕ್ಕೆ!
ಹಾರಿಕೆಗೆ ಸರಿ ಕಣ್ರೋ ವಿಚಾರಿಸ್ತೀನಿ ನಾನು ಅಂತಂದ್ರೂ ನಂಗವನ ಮನದ ಅರಿವು ಸಿಕ್ಕಿ ಬಿಟ್ಟಿತ್ತಲ್ಲಿ!

ಮನದಲ್ಲಾಗುತ್ತಿದ್ದ ಗೊಂದಲಗಳ ಅರಿವು ಸಿಕ್ಕಿರೋ ತರಹ ಕೈ ಹಿಡಿದು ಕಣ್ಣಲ್ಲೇ ಸಮಾಧಾನಿಸಿದ್ದ ನನ್ನೀ ಗೆಳೆಯ.ಅಷ್ಟಾಗಿ ಕನ್ನಡ ಅರ್ಥವಾಗದಿದ್ದರೂ ಅವರುಗಳ ಪ್ರತಿ ಮಾತಿಗೂ ನನ್ನಲ್ಲಾಗುತ್ತಿದ್ದ ಭಾವಗಳ ಸಂಜೆ ಮನೆಗೆ ಬಂದು ಎದುರು ತೆರೆದಿಟ್ಟಿದ್ದ ಇವನ ನೋಡಿ ಆಶ್ಚರ್ಯವಾದುದ್ದಂತೂ ಸುಳ್ಳಲ್ಲ! ಕ್ಷಣವೊಂದಕ್ಕೆ ನಡುಗಿ ಹೋಗಿದ್ದೆ ಇವನೆಲ್ಲಿ ಇಂಚಿಂಚೂ ಬಿಡದೇ ನನ್ನ ಮನಸ್ಸ ಓದಿ ಬಿಡ್ತಾನೋ ಅಂತ.

ಆ ದಿನದ ಪಾರ್ಟಿ ಮುಗಿಸಿ ಒಂದಿಷ್ಟು ಖುಷಿಸಿ,ವರ್ಷಕ್ಕಾಗೋವಷ್ಟು ನಗುವ ತುಂಬಿಕೊಂಡು ,ಮತ್ತೆ ಅವರುಗಳಿಗೆ ಮಿಸ್ ಯು ಅಂದು ಬರೋವಾಗ ಮತ್ತೆ ಕಾಡಿದ್ದ ಬಿಟ್ಟು ಹೋದ (ಎದ್ದು ಹೋದ) ಆ ಗೆಳೆಯ.

ಬರೋವಾಗ ಅವರಂದಿದ್ದ " ಆ ಬ್ಯುಸಿ ಗೆಳೆಯ ಅದೇನೋ ಗಿಟಾರು ಕ್ಲಾಸ್ ಗೆ ಹೋಗ್ತಿದಾನೆ ಕಣೇ ..ನಿಂಗೂ ಗೊತ್ತೆನೋ ..ಸಧ್ಯದಲ್ಲೆ ಅವನಿಂದೊಂದು ಗಿಟಾರು ಪ್ರೋಗ್ರಾಮ್ ಮಾಡಿಸೋಣ " ಅಂತ ಆಗದ ಪ್ರೋಗ್ರಾಮ್ ಒಂದನ್ನ ತುಂಬಾ ಕಾನ್ಫಿಡೆಂಟ್ ಆಗಿ ಹೇಳಿ ತಲೆ ಸವರಿ ,ಕೆನ್ನೆ ಹಿಂಡಿ ಹೊರಟು ಹೋದ ಈ ಗೆಳೆಯ ಹೋದ ದಿಕ್ಕನ್ನೇ ನೋಡೋದ ಬಿಟ್ಟು ನಂಗೇನೂ ಉಳಿದಿರಲಿಲ್ಲ ಮತ್ತೆ ಅಲ್ಲಿ !!!!

ಆ ಗಿಟಾರು ಹುಡುಗ ...

ಮನದ ಅಲೆಯಲ್ಲಿ ಕೊಚ್ಚಿಹೋದ ಕಣ್ಣಂಚ ಹನಿಗಳು ನೆಲ ತಾಕೋಕೂ ಮುಂಚೆ ನನ್ನೀ ಗೆಳೆಯ ಕೈ ಹಿಡಿದು ಕರೆದುಕೊಂಡು ಹೊರಟಿದ್ದ ಅವನ ಮನೆಗೆ.
ಅಮ್ಮನ ಮಡಿಲಲ್ಲಿ ಒಂದು ಕ್ಷಣ ಬಿಕ್ಕ ಬೇಕನಿಸಿ ಕೂತಾಗ ಮತ್ತೆ ನೆನಪಾಗಿದ್ದು..

ಅದೇ ಗಿಟಾರು ಹುಡುಗ.... ಹೌದು ಅವನೇ...

16 comments:

 1. Chikka putta yeniso bhavagalalli doddadondu kushiya kaano hudugi, mattu avala guitar geleya... chandada bhaava baraha...

  ReplyDelete
 2. ಗೆಳೆತನದ ಸಂಗೀತಕ್ಕೆ ಗಿಟಾರ್ add ಆಗಿದೆ ಅನ್ನು. ಮುನಿಸು ಬಿಟ್ಟು ಮನಸು ಬದಲಾಯಿಸಿ ಮತ್ತೊಮ್ಮೆ ಗೆಳೆತನ ಹಾಡಾಗಲಿ ಮುದ್ದು .. --

  ReplyDelete
 3. Ekdam cholo baradde...felt like reading some experienced author's work...well done

  ReplyDelete
 4. ಅವಳ ಭಾವಗಳ ಮತ್ತೆ ಮತ್ತೆ ಕೆದಕೋ ಆ ಹುಡುಗನ ಬಗ್ಗೆ ನಂಗೊಂಚೂರು ಬೇಸರವಿದೆ... ಒಮ್ಮೊಮ್ಮೆ ಕಲ್ಲಾಗಿ ಬಿಡುವ ಅವಳೆಗೆಡೆಗೂ ಸಹ...!
  ತುಂಬಾ ಹತ್ತಿರವೆನಿಸಿದ ಬರಹ... ಇಷ್ಟವಾಯ್ತು...

  ReplyDelete
 5. ತುಂಬಾ ಇಷ್ಟವಾದ ಬರಹ..... ಪ್ರತೀ ಸಾಲೂ ಕೂಡ ಇಷ್ಟ ಆಯ್ತು.... ಬೇಗ ಗಿಟಾರು ಹುಡುಗನ ಮೊದಲ ಸ್ನೇಹ ಈ ಹುಡುಗಿಗೆ ಮತ್ತೆ ಸಿಗಲಿ .... ಕಾಡುವಿಕೆಯ ಕಾವು ತಗ್ಗಲಿ ... :)

  ReplyDelete
 6. ಗಿಟಾರಿನ ಚೆಂದದ ದನಿಯನ್ನೇ ಆಲಿಸಿದಂತಿದೆ. ಇಷ್ಟ ಆಯ್ತು ಭಾಗ್ಯ. ಭಾವ ನಿವೇದನೆ ಬಹಳವೇ ಖುಷಿ ತರಿಸುವಂಥದ್ದು.

  ReplyDelete
 7. ತುಂಬಾ ಭಾವಗಳನ್ನು ಅಪ್ಪಿಕೊಂಡ ಮತ್ತು ಒಪ್ಪಿಕೊಂಡ ಬರಹ..
  ಅವಳಿಗೆ ಗಿಟಾರಿನ ಹುಡುಗ ಮತ್ತೆ ಮತ್ತೆ ಕಾಡುತ್ತಾನೆ....

  ಎಷ್ಟೋ ಸಾಲುಗಳಿಗೆ ತೀರಾ ನೈಜತೆಯಿದೆ... ನಿರುಪಾಯಿಗೆ ಯಾವ ಉಪಾಯ ಹೇಳಲಿ....

  ಚಂದದ ಬರಹ....ಇಷ್ಟವಾಯ್ತು...

  ReplyDelete

 8. ಅಪ್ಪ ಅಮ್ಮನ ದುಡ್ಡಲ್ಲಿ ಬಿಂದಾಸ್ ಆಗಿ ಬದುಕಿಬಿಡುವ ನನ್ನ ಕಣ್ಣ ಮುಂದೆಯೇ ಓಡಾಡುವ ಕಾಲೇಜು ಹುಡುಗರು ನೆನಪಾದರು, ಒಮ್ಮೆಲೇ! ಯಾಕೋ ಅವರ ಮೌಢ್ಯತೆಗೆ ಅಯ್ಯೋ ಅನಿಸುತ್ತದೆ.
  ಹಲವು ಭಾವಗಳ ಸಮ್ಮಿಶ್ರಣ ಈ ನಿಮ್ಮ "ಆ ಗಿಟಾರು ಹುಡುಗ ..." ಬರಹ.

  ReplyDelete
 9. ಚಂದದ ಬರಹ....ಇಷ್ಟವಾಯ್ತು...

  ReplyDelete
 10. ಇಲ್ಲಿಯವರೆಗೆ ಬಂದ ಪೋಸ್ಟುಗಳಿಗಿಂತ ಇದು ಸ್ವಲ್ವ ಭಿನ್ನವಾಗಿ ಕಾಣ್ತಾ ಇದ್ದು. ಸಲ್ಪ ಗಂಭೀರವಾಗಿ ಬರೆಯೋ ಪ್ರಯತ್ನದಲ್ಲಿದ್ದಂತೆ ಕಾಣ್ತಾ ಇದ್ದು . ಹೌದು, ಕೆಲೋ ಸಲ ಸ್ನೇಹದ ಮಧ್ಯ ನಾವು ಸ್ವಲ್ಪ ಹೆಚ್ಚಾಗೇ ಕೇರ್ ಮಾಡೋಕೆ ಶುರು ಆಗೋದು ಆ ಕಡೆಯವರಿಗೆ ಕಸಿವಿಸಿಯಾಗ್ತಾ ಇರೋದೂ ಗೊತ್ತಾಗಲ್ಲ. ಸ್ನೇಹಿತ ಮನೆಯವರ ದುಡ್ಡು ಉಡಾಯಿಸ್ತಿರೋ ಬಗ್ಗೆ ಆಡಿದ ಮಾತೇ ಸ್ನೇಹ ಮುರಿಯೋ ಪರಿ, ಆಮೇಲೆ ಮರಳಿದ್ರೂ ಮೊದಲಿನ ಸ್ನೇಹ ಉಳಿಯದೇ ಹೋದ ರೀತಿ..ಎಲ್ಲಾ ಸಖತ್ತಾಗಿ ಮೂಡಿಬಂದಿದೆ..

  ಒಟ್ನಲ್ಲಿ ಕಾಲೇಜ್ ಕಹಾನಿ ಚೆನ್ನಾಗಿ ಮೂಡಿಬಂದಿದೆ.

  ReplyDelete
 11. ನಿಮ್ಮ ಬರಹ ಓದುವಾಗ ನನ್ನ ಕಾಲೇಜ್ ದಿನಗಳಲ್ಲಿ ಕ್ಲಾಸಿನಲ್ಲಿ ತಮಾಷೆಯಾಗಿ ಮಾತಾಡುತ್ತಾ ಅಧ್ಯಾಪಕರನ್ನೂ ನಗಿಸುತ್ತಿದ್ದ ನನ್ನ ಸಹಪಾಟಿಗಳ ನೆನಪಾಯ್ತು. ನಿಮ್ಮ ಲೇಖನದ ಗಿಟಾರ್ ಹುಡುಗನಂತೆ ಈ ಹುಡುಗರೂ ಮತ್ತೆ ಮತ್ತೆ ನೆನಪಾಗುತ್ತಿರುತ್ತಾರೆ.
  ನಿಮಗೆ ಸಮಯ ಸಿಕ್ಕಾಗ ನನ್ನ ಬ್ಲಾಗನ್ನೂ ಓದುತ್ತೀರಿ ತಾನೆ ? http://www.sarovaradallisuryabimba.blogspot.in/

  ReplyDelete
 12. ಬಹಳ ಅಂದ್ರೆ ಬಹಳ ಮನಸ್ಸಿಗೆ ಹತ್ತಿರವೆನಿಸಿದ ಬರಹ ಗಳತಿ..ಕೆಲವೊಮ್ಮೆ ಬದುಕು ಮರೆಯಲಾರದ ಪಾಠ ಕಳಿಸಿಬಿಡುತ್ತದೆ ಅಲ್ವಾ? ಎಲ್ಲ ಭಾವಗಳು ಬೆರೆತ ಅಧ್ಬುತ ಬರಹ..ನಮ್ಮೊಡನೆ ಈ ಅನುಭವ ಹಂಚಿಕೊಂಡ ನಿನಗೆ ಒಂದು ನಮನ...ಪದಗಳೇ ಸಿಗ್ತಾ ಇಲ್ಲ. ನಿನ್ನ ಬರಹಗಳ ಅಭಿಮಾನಿ ಆಗ್ತಿದ್ದಿ :)

  ReplyDelete
 13. ಕ ಕಾ ಕಿ ಕೀ ಕು ಕೂ ಕೆ ಕೇ ಕೈ ಕೊ ಕೋ ಕೌ ಕಂ ಕಃ
  ಕನ್ನಡ ವರ್ಣಮಾಲೆ ....... ನಿಮ್ಮ ಮಕ್ಕಳನ್ನ ಕನ್ನಡ ಶಾಲೆಗೇ ಕಳುಹಿಸಿ :D
  ಗಾಂಧೀ ಜಯಂತಿ, ಬಸವ ಜಯಂತಿ :d
  ಸಾಜಿತೆಮೋ ವಾಟಾರೆ, ಕಹೀಮು ಕಹೀಮು, ಜೋಟಾ ವಾಟಾ ಗಾಟಾ
  ಪಿಹೂ ಪಿಹೂ

  ReplyDelete
 14. ಚಂದದ ಬರಹ ಗಿಟಾರ್ ಹುಡುಗ...:)

  ReplyDelete
 15. ಕಥೆ ಸುಲಲಿತವಾಗಿದೆ.. ಮುಂದುವರೆಸಲು ಎಲ್ಲಾ ರೀತಿಯ ಪ್ರಯತ್ನ ಮಾಡಬಹುದು.. ಸ್ವಗತ ಕಥೆ ಬರು ಬರುತ್ತಾ ಗೊತ್ತಿಲ್ಲದೇ ಆಡಿದ ಒಂದು ಮಾತಿಗೆ ಪರಿತಾಪ ಪಡುತ್ತಾ ಒದ್ದಾಡುವ ಹಂತಕ್ಕೆ ಬಂದಿದೆ. ಗಿಟಾರ್ ಹುಡುಗ ಎಂದು ಹೆಸರಿತ್ತು ಅಲ್ಲಿಗೆ ತಂದು ನಿಲ್ಲಿಸುವುದ ಸರಿಯಾದರೂ ಈ ಕಥೆಗೆ ಒಂದು ಸುಂದರ ಅಂತ್ಯ ನೀನು ಕೊಡಬಲ್ಲೆ. ಗಿಟಾರಿನಲ್ಲಿರುವ ಒಂದು ಸಣ್ಣ ತಂತಿಗಳನ್ನೂ ಒಂದನ್ನು ಒತ್ತಿ ಇನ್ನೊಂದನ್ನು ಮಿಡಿದಾಗ ಬರುವ ಸಂಗೀತದಂತೆ ಒಂದು ಮಾತಿನಿಂದ ದೂರವಾದ ಗೆಳೆತನವನ್ನು ಮತ್ತೆ ಒತ್ತಿ ಭಿನ್ನರಾಗ ಮೂಡಿಸಬಲ್ಲದು ಈ ಬರಹ ಮುಂದುವರೆಸು

  ReplyDelete