Wednesday, September 24, 2014

ಗೆಳತೀ ಬೇಡೆನ್ನಬೇಡ ತುಸು ದೂರ ಜೊತೆ ನಡೆಯಬೇಕು.
     
         ಹೌದಲ್ವಾ ಒಂದು ಮುಗ್ಧ ಪ್ರೀತಿಯ ಸದ್ದಿಲ್ಲದೆ ಬಾಡಿಸಿ ಅವಳು ಹೊರಟುಹೋದ ಮೇಲೆ ನಾ ಅವಳೊಟ್ಟಿಗೆ ಮಾತೇ ಆಡಿಲ್ಲ. ಬೆಳಿಗ್ಗೆ ರೂಮ್ ಕ್ಲೀನ್ ಮಾಡೋವಾಗ ಅವ ನಮ್ಮಿಬ್ಬರಿಗೂ ಕೊಡಿಸಿದ್ದ ಒಂದೇ ತರಹದ  ear rings  ಕೈ ತಾಕಿ ಮತ್ತೆ ಅವಳನ್ನೊಮ್ಮೆ ಮಾತನಾಡಿಸಬೇಕು ಅನ್ನೋ ಭಾವವೊಂದ ರವಾನಿಸಿ ಮರೆಯಾಯ್ತು.
ನೆನಪುಗಳು ಉಕ್ಕುಕ್ಕಿ ಹರಿಯೋವಾಗ ಬದುಕು ತೀರಾ ಕಾಡುತ್ತೆನೋ.

         ಅವರಿಬ್ಬರೂ ಹಾಗೆಯೇ.ತೀರಾ ವಿರುದ್ಧ ಭಾವಗಳನ್ನಿಟ್ಟುಕೊಂಡೇ ಪರಿಚಿತರಾದವರು.ಅವಳಿಂದ ಅವನ ಪರಿಚಯವಾದ್ರೆ ಅವನಿಂದ ಅವಳು ಅರ್ಥವಾಗ ತೊಡಗಿದ್ದಳು.ಬೆಟ್ಟದಷ್ಟು ಪ್ರೀತಿ ಮಾಡೋ ಹುಡುಗ.ಆ ಭಾವವ ಮುಟ್ಟಿಯೂ ನೋಡದೇ ತನ್ನ ಪಾಡಿಗೆ ತಾನಿರೋ ಹುಡುಗಿ ಜೊತೆಗೆ ಪ್ರೀತಿಯ ಬಗ್ಗೆ ಅದರ ರೀತಿಯ ಬಗ್ಗೆ ತೀರಾ ಅನ್ನೋವಷ್ಟು ಮಧುರ ಭಾವಗಳನ್ನಿರಿಸಿಕೊಂಡಿರೋ ನಾ.ಅವನಿಗೆ ಬದುಕೇ ಅವಳಾದ್ರೆ ಅವಳ ಬದುಕೊಳಗೆ ಇನ್ಯಾರೋ ಆಮಂತ್ರಿತ ಆ ನಾಲ್ಕು ವರ್ಷದ ಪ್ರೀತಿಯ ಅವಶೇಷವೂ ಇಲ್ಲದ ತರಹ ಮಾಡಿರೋವಾಗ ಮೊದಲೇ ಆ ಭಾವದ ಬಗೆಗಿರೋ ನನ್ನ ಗೊಂದಲಗಳು ಇನ್ನಷ್ಟು ಗೋಜಲು.ನಾ ನಿನ್ನ ಪ್ರೀತಿಸ್ತೀನಿ ಅಂತ ಸುಮ್ಮ ಸುಮ್ಮನೇ ಹೇಳಬಹುದಾ?ಅಲ್ಲದಿದ್ರೆ ಅವಳಿಷ್ಟು ದಿನ ಮಾಡಿದ್ದು ಅದೆ ಅಲ್ಲವಾ.

ಯಾವುದೋ ಜಗಳಕ್ಕೆ ಅವ ಮಾತನಾಡಿಸಿಲ್ಲಿ ಅಂತ ಬಿಕ್ಕಿ ಬಿಕ್ಕಿ ಅತ್ತಿದ್ದ ಗೆಳತಿ ಇವತ್ತವನಿಗೆ ಇನ್ಯಾವತ್ತೂ ನೆನಪಾಗಿಯೂ ನಾ ನಿನ್ನ ನೋಡಲಾರೆ ಅಂತ ಹೇಳೋವಾಗ ದಿನ ದಿನಕ್ಕೂ ಬದಲಾಗೋ ನಮ್ಮದೇ ಭಾವಗಳ ಬಗೆಗೆ ನಂಗಿನಿತು ಆಶ್ಚರ್ಯ.

         ಪ್ರೀತಿ ಎಲ್ಲರನ್ನೂ ಮೃದುವಾಗಿಸಿಬಿಡುತ್ತಂತೆ.ಅದರಲ್ಲೂ  ತನಗಿಂತಲೂ ಜಾಸ್ತಿ ಪ್ರೀತಿಸೋ ಆ ಜೀವದ ಪ್ರೀತಿ ಸಿಕ್ಕಿದ್ದಕ್ಕೆ ಅವಳು ಬೆಣ್ಣೆಯಾಗಬೇಕಿತ್ತಲ್ವಾ.ದಿನ  ಕಳೆದಂತೆ ಒಗಟು ಅನ್ನಿಸ್ತಿದ್ದ ಹುಡುಗಿ ಈಗೀಗ ಒರಟು ಅನ್ನಿಸೋಕೆ ಶುರುವಾಗಿಬಿಟ್ಟಿದ್ದಾಳೆ.ಬದುಕ ಯಾವ ಭಾವುಕತೆಯನ್ನ ಯಾವತ್ತೂ ಅನುಭವಿಸಿದವಳಲ್ಲ ಬದಲು ನಾ ಬದುಕೋ ಬದುಕ ಬಗ್ಗೆ ತೀರಾ ಬೇಸರ ಆಗೋವಷ್ಟು ವ್ಯಂಗ್ಯ ಮಾಡಿ ನಕ್ಕಿದ್ದವಳು.ಬೇಸರವಿಲ್ಲ ಯಾಕಂದ್ರೆ ಅವಳೆನ್ನ ಗೆಳತಿ.

ಬದುಕ ಚಿತ್ರಕ್ಕೊಂದು ಚೌಕಟ್ಟು ಹಾಕಿ ಬದುಕೋದನ್ನ ಕಲಿತ ಮೇಲೆ ಅಥವಾ ನನ್ನನ್ನ ನಾನಾಗಿ ಪ್ರೀತಿಸೋ ಪ್ರೀತಿಯೊಂದನ್ನ ಕಳಕೊಂಡ ಮೇಲೆ ಏನೋ ಅವಳು ಧಿಕ್ಕರಿಸಿ ಎದ್ದು ಬಂದ ಆ ಪ್ರೀತಿಯ ಬಗ್ಗೆ ನಂಗೆ ಮರುಕ ಹುಟ್ಟಿರೋದು..
ನೀ ಕಳೆದುಕೊಂಡಿದ್ದು ಬರಿಯ ನಿನ್ನನ್ನಿಷ್ಟಪಡೋ ಗೆಳೆಯನನ್ನಲ್ಲ ಬದಲು ನಿನ್ನಿಷ್ಟದ ಬದುಕನ್ನ ಅಂತ ಹೇಳಬೇಕಂದುಕೊಳ್ತೀನಿ ಆದರೆ ಮಾತು ಸತ್ತ ಮೇಲಿನ ನೀರವ ಮೌನ ನನ್ನನ್ನ ಸುಮ್ಮನಾಗಿಸಿಬಿಡುತ್ತೆ.
ಎಲ್ಲವನ್ನೂ ಹೇಳಿ ಹಗುರಾಗಲೇಬೇಕಂತ ಫೋನಾಯಿಸ್ತೀನಿ ನನ್ನವನಿಗೆ ಅವ ಅಂತಾನೆ ’ನೀನೆಷ್ಟು ಸೆನ್ಸಿಟಿವ್’!! ಎದೆ ಭಾರವಾಗಿ ಮಾತೆಲ್ಲಾ ಖಾಲಿಯಾದಂತನಿಸಿ ನಾನೂ ಸುಮ್ಮನಾಗ್ತೀನಿ. ಅಸಲು ನನ್ನನ್ನಿಷ್ಟು sensitive ಮಾಡಿದ್ದು ಯಾರೆಂಬುದು ಅವನಿಗೂ ಗೊತ್ತು .ಬಹುಶಃ ನನ್ನ ಗೊಂದಲಗಳು ಅವನನ್ನ ತಾಕದಿರಲಿ ಅನ್ನೋ ಭಾವವಿದ್ದೀತು ನೀನೆಷ್ಟು expressive ಅನ್ನೋ ಮಾತುಗಳ ಹಿಂದಿನ ಭಾವ.

         ಅವನಿವತ್ತೂ ನನ್ನ ಅದೇ ಹಳೆಯ ಗೆಳೆಯ ಆದರೆ ಅವನ ಭಾವಗಳ ಜೊತೆ ತೀರಾ ಅನ್ನೋವಷ್ಟು ಆಟವಾಡಿ ಈಗ ತನಗೇನೂ ಸಂಬಂಧವೇ ಇಲ್ಲ ಅನ್ನೋ ತರಹ ತನ್ನ ರೂಮ್ ಅನ್ನೋ ಪ್ರಪಂಚದ ಆಚೆ ಬರದ ಅವಳ ಬಗ್ಗೆ ನಂಗಷ್ಟು ಬೇಸರ.
ಅವಳ ಕೈ ಹಿಡಿದುಕೊಂಡು ಕೂರೋಕೂ ನೂರು ಬಾರಿ ಯೋಚಿಸೋ ಗೆಳೆಯಂಗೆ ನಾ ಸಿಗಲಿಲ್ಲ ಅನ್ನೋ ಕಾರಣಕ್ಕೆ ,ಆ ಬೇಸರಕ್ಕೆ ನನ್ನ ಈ ಹಾದಿ ತಪ್ಪು ಅಂತ ಹೇಳ್ತೀಯ ಅಂತಲ್ಲಾ ಕಿರುಚಾಡೋ ಗೆಳತಿ.
ಯಾರೂ ಇಲ್ಲ ಅಂತೆಲ್ಲಾ ಬೇಸರಿಸ್ತಿದ್ದ ಅವಳಿಗೆ ಅವಳದೇ ಜಗತ್ತಲ್ಲಿ ಎಲ್ಲವನ್ನೂ ದಕ್ಕಿಸಿಕೊಟ್ಟಿದ್ದು ಅವ ನನ್ನದಿಷ್ಟು ನೋವನ್ನ ಆಸ್ಥೆಯಿಂದ ಕೇಳಿ ಅದೆಷ್ಟೋ ಕಣ್ಣ ಹನಿಗಳು ಜಾರದಂತೆ ತಡೆದಿದ್ದ.ಗೆಳತಿಯಾಗಿ ಅವ ನನ್ನ ಪ್ರೀತಿಸ್ತಾನೆ ಆದರೆ ಅವಳಿಗದು ತಪ್ಪಾಗಿ ಕಾಣುತ್ತೆ.ನಾವಿಬ್ಬರೂ ಒಂದೇ ತರವಲ್ಲ-ನಮ್ಮ ಮೇಲಿನ ಅವನ ಪ್ರೀತಿ ಕೂಡಾ.ವಿಪರ್ಯಾಸವೆಂದರೆ ಇಲ್ಲಿಯ ತನಕವೂ ಬರಿಯ ನಂಬಿಸಿಕೊಂಡು ಬಂದಿದ್ದು,ಮುಖವಾಡದ ಜೊತೆಗೇ ಬದುಕ್ತಿರೋ ಅವಳು ನಮ್ಮಗಳಿಗೆ fake ಅಂತ ಕರಿಯೋದು.

ಬೆಸೆದುಕೊಂಡಿರೋ ಭಾವವಾದರೂ ಎಂತದ್ದು.ಉಳಿಸಿಕೊಳ್ಳಲೇ ಬೇಕಾದಾಗ ಬೇಸರಗಳ ನಡುವೆಯೂ ನಕ್ಕು ಸುಮ್ಮನಾಗ್ತೀನಿ ಅಷ್ಟೇ.
ಮುರಿದುಕೊಳ್ಳ ಬೇಕಂದ್ರೆ ಅವಳಂತೆಯೇ ನನ್ನಲ್ಲೂ ನೂರು ಕಾರಣ.

                ಬದುಕು ಕವಲಾಗಿ ,ಸಂಬಂಧವೊಂದು ಬಣ್ಣ ಬದಲಿಸೋಕೂ ಮುನ್ನ ಅದರಿಂದ ದೂರಾಗಿ ನಾನೇನೋ ನಿರಾಳವಾಗಿದ್ದೀನಿ.ಆದರೆ ಮುಖವಾಡದ ದಾರಿಯಲ್ಲಿ ತನ್ನ ನಿಜ ಮುಖವ ಹುಡುಕ್ತಿರೋ ಗೆಳತಿ,ಅಲ್ಲೆಲ್ಲೋ ರಾತ್ರಿ ಹಗಲುಗಳ ಲೆಕ್ಕ ತಪ್ಪಿ ಕಂಗಾಲಾಗಿ ಕೂತಿರೋ ಗೆಳೆಯ ಇಬ್ಬರಲ್ಲೂ ಏನೋ ತಲ್ಲಣ.

ಇಲ್ಲವಳ ಭಾವ ಪಲ್ಲಟ  .... ಅಲ್ಲವನ ಪ್ರೇಮಮಯೀ ಅಸ್ತಿತ್ವ.

ಅವ ಕೊಡಿಸಿದ ಆ ಕಿವಿಯೋಲೆಯ ಮತ್ತೆ ಹಾಕೋ ಮನಸಾಗಿದೆ ನಂಗೆ.

ಸಂಜೆಯಾಗೋದನ್ನ ಕಾಯ್ತಿದೀನಿ ಅವರಿಬ್ಬರ ಜೊತೆಗೊಂದು ಪುಟ್ಟ ವಾಕ್ ಹೋಗೋಕೆ.11 comments:

 1. ಈ ಬಾಂಧವ್ಯಗಳು ಶರಧಿಯ ಅಲೆಗಳ ಹಾಗೆ ಬರುತ್ತವೆ ಬಡಿಯುತ್ತವೆ ತನ್ನೊಳಗೆ ಅಲ್ಲಿದ್ದವನ್ನು ಕರೆದೊಯ್ಯುತ್ತದೆ.. ಕೆಲವು ಕಡಲಿನ ಒಡಲಲ್ಲೇ ಉಳಿದರೆ ಕೆಲವನ್ನು ಮತ್ತೆ ದಡಕ್ಕೆ ಒಯ್ದು ಬಿಸಾಡುತ್ತದೆ.... ಹೀಗೆ ಸಾಗುತ್ತ ಹೊಸ ಭಾವ ಹಳೆ ಅಭಾವ ಹೊಸ ಅಭಾವ ಹಳೆ ಭಾವ ಹೋಗುತ್ತಿರುತ್ತದೆ ಬರುತ್ತಿರುತ್ತದೆ. ಇಲ್ಲಿ ಉದಾರವಾಗಿ ಉಳಿಯುವುದು ಗೆಳೆತನದಲ್ಲಿ ಸದಾ ಹಸಿರು ನವಿರು ಎನ್ನುವ ನಂಬಿಕೆ ವಿಶ್ವಾಸ.

  ಒಂದು ಗೆಳೆತನ ಅದಕ್ಕೆ ಯಾವುದೇ ಹೆಸರು ಕೊಟ್ಟಿರಲಿ.. ಅದು ಮುದುಡಿ ಹೋಗುತ್ತದೆಯೇ ಹೊರತು ಮುರಿದು ಹೋಗೋಲ್ಲ..

  ಕಥಾ ನಾಯಕಿಯ ಮನದಾಳವನ್ನು ಹೊರಗೆಳೆಯುತ್ತಾ ಭಾವ ಜಗತ್ತಿಗೆ ದಾಂಗುಡಿಯಿಡುವ ಬರಹ ಸುಂದರವಾಗಿದೆ ಮಗಳೇ.

  ಒಂದು ಸಣ್ಣ ಮಾತು ಧೀರ್ಘ ಗೆಳೆತನವನ್ನು ಮುಂದುವರೆಸಿಕೊಂಡು ಹೋಗಲು ಸಹಾಯ ಮಾಡುತ್ತದೆ. ಒಂದು ಪುಟ್ಟ ಹೆಜ್ಜೆ ಇಟ್ಟರೆ ಕೈಗೆ ನಿಳುಕೋಲ್ಲಾ ಎನ್ನುವ ಭಾವ ಸಂಗಮ ಕೂಡ ಗೆಳೆತನಕ್ಕೆ ಕಾಯುತ್ತಿರುತ್ತದೆ..

  ಸೂಪರ್ ಮಗಳೇ ಸೂಪರ್

  ReplyDelete
 2. ನಾಯಕನಿಗಿಂತಲೂ, ಗೆಳತಿಗಿಂತಲೂ "ಅವಳೇ" ಹೆಚ್ಚು ಕಾಡಿ ಬಿಟ್ಟಳು ನಂಗೆ..
  ಅವಳನೊಮ್ಮೆ ಪರಿಚಯಿಸು ನನಗೆ..
  ಅವಳ ಜಗ್ಗಿ ಕೂರಿಸಿ ಮಾತಾನಾಡಿಸಬೇಕು ನಾನು...!

  -ಚಂದದ ಬರಹ ಇಷ್ಟಾಯ್ತು

  ReplyDelete
 3. baraha chennagide...adare swalpa confusion madisiddira.....

  ReplyDelete
 4. ’ನಾವಿಬ್ಬರೂ ಒಂದೇ ತರವಲ್ಲ-ನಮ್ಮ ಮೇಲಿನ ಅವನ ಪ್ರೀತಿ ಕೂಡಾ’
  ಹೌದಲ್ಲವೇ ಮತ್ತೆ?
  ’ಮುರಿದುಕೊಳ್ಳ ಬೇಕಂದ್ರೆ ಅವಳಂತೆಯೇ ನನ್ನಲ್ಲೂ ನೂರು ಕಾರಣ’
  ಅಲ್ಲವೇ ಮತ್ತೆ?

  ReplyDelete
 5. ಬರಹ ಇಷ್ಟವಾಗುವುದರಲ್ಲಿ ಹಲವು ಹಂತಗಳು, ಪರವಾಗಿಲ್ಲ ಎನ್ನಿಸುವುದು, ಚೆನ್ನಾಗಿದೆ ಎನ್ನಿಸುವುದು, ತುಂಬಾ ಚೆನ್ನಾಗಿದೆ ಎನ್ನುವುದು, ಬಹು ಅದ್ಭುತವಾಗಿದೆ ಎನ್ನುವುದು ಹೀಗೆ ಹಲವು ಮಟ್ಟಗಳಿವೆ. ಎಲ್ಲಕ್ಕಿಂತ ಶ್ರೇಷ್ಟವಾದದ್ದು ಓದುಗನನ್ನು ಪಾತ್ರದ ಒಳಗೆ ಕೂರಿಸಿ ಪಾತ್ರದ ನೋವು-ನಲಿವುಗಳನ್ನು ಅವನ ಸ್ವಂತ ನೋವು-ನಲಿವುಗಳಾಗಿಸಿ ಓದಿಸುವುದು. ಮತ್ತೊಮ್ಮೆ ಆ ಭಾವ ಬಂದಿದೆ ಈ ಬರಹದಲ್ಲಿ. ಓದಿ ಮುಗಿಸುವ ಹೊತ್ತಿಗೆ ಮನಸ್ಸು ಭಾರ ಭಾರ.

  ನಿಸ್ವಾರ್ಥವಾಗಿ ಪ್ರೀತಿಯನ್ನು ಪ್ರೀತಿಗಾಗಿ ಪ್ರೀತಿಸಿದ ಹುಡುಗನಿಗೋ ದೌರ್ಭಾಗ್ಯಕ್ಕೋ, ಏನನ್ನೂ ಹೇಳದೇ ಅಂತಹ ಪ್ರೀತಿಯನ್ನು ತಿರಸ್ಕರಿಸಿದ ಹುಡುಗಿಯ ಮೂಢತನಕ್ಕೋ(ಅಥವಾ ಅದರ ಹಿಂದಡಗಿರಬಹುದಾದ ಚಾತುರ್ಯಕ್ಕೋ), ಅವನ ನೋವನ್ನು ತನ್ನ ನೋವೆಂದು ಭಾವಿಸುವ ನಿರೂಪಕಿಯ ಸೂಕ್ಷ್ಮತನಕ್ಕೋ, ಅವಳ ದುಃಖದ ಬಗ್ಗೆ ತಲೆಕೆಡಿಸಿಕೊಳ್ಳದ ಅವಳ ಹುಡುಗನ ನಿರ್ಭಾವುಕತನಕ್ಕೋ; ಓದುಗನ ಮನಸ್ಸು ಮರುಗುತ್ತದೆ.

  ಉತ್ತಮ ಬರಹ, ಬರೆಯುತ್ತಿರು. :)

  ReplyDelete
  Replies
  1. ಸುಬ್ಬಪ್ಪ.. ಎಂಥೋ ಇದು.. ನಿನ್ನೊಳಗಿನ ಈ ವಿಮರ್ಶಕ ಎಲ್ಲಿ ಅಡಗಿದ್ದ ಮಾರಾಯ ಇಲ್ಲಿಯವರೆಗೆ ? ಸಾಮಾನ್ಯ, ಶ್ರೀ ಸಾಮಾನ್ಯ, ಸರ್ವೇ ಸಾಮಾನ್ಯ ;-) !!!


   coming back to back to Bhagya: ಇದೆಂತ ನನ್ನ ಪೋಸ್ಟಿನಲ್ಲಿ ಸುಬ್ಬಪ್ಪನ ಗುಣಗಾನ ಅಂದ್ಕಂಡ್ಯ ? ಹಂಗೇನಿಲ್ಲ. ನಿನ್ನ ಪೋಸ್ಟಿಗೆ ಕಾಮೆಂಟಿಸೋ ಮನಸ್ಸಿದ್ದಾಗ್ಲೇ ಅದಕ್ಕೆ ಬರೆದ ಬೇರೆ ಪ್ರತಿಕ್ರಿಯೆ ಓದೋ ಮನಸ್ಸೂ ಆಗಿತ್ತು. ಹಂಗೇ ಓದ್ತಾ ಓದ್ತಾ ಸುಬ್ಬಪ್ಪನ ಪ್ರತಿಕ್ರಿಯೆ ಓದಿ ಒಂದರೆಕ್ಷಣ ಅಲ್ಲೇ ನಿಂತು ಬಿಟ್ಟಿ. ಹಾಗಾಗೇ ಸುಬ್ಬಪ್ಪನಿಗೊಂದು ಉತ್ರ !. ಅವನೂ ಅಲ್ಲದ ಅವಳೂ ಅಲ್ಲದ(ಮತ್ತೊಂತರ ಅಲ್ಲ ಮತ್ತೆ ಇದು ;-) ) ಮೂರನೆಯ ಆಯಾಮ ಕಟ್ಟಿಕೊಟ್ಟ ಬಗೆ ಇಷ್ಟ ಆಯ್ತು. ನಾಯಕನಿಂದ,ನಾಯಕಿಯಿಂದ ಕತೆಯನ್ನು ಹೇಳಿಸೋದು ಸಾಮಾನ್ಯ ತಂತ್ರ ಹಳೆಯ ನಾಟಕಗಳಲ್ಲಿದ್ದ ಪರಿಕಲ್ಪನೆಯಿದು. ಒಂದೇ ಕತೆಯನ್ನು ಇಬ್ಬರ ಬಳಿಯೂ ಬೇರೆ ಬೇರೆ ತರ ಹೇಳಿಸೋದು ಇತ್ತೀಚೆಗೆ ಮೂಡಿಬರ್ತಿರೋ ತಂತ್ರ. ನಾಟಕಗಳಲ್ಲಿದ್ದ ಮುಂದುವರಿದರೆ ಹಿಂದೆ ಸರಿಯಲಾಗದ ಕಾಲದ ಪರಿಕಲ್ಪನೆಯಿಂದ ಒಂದೇ ದೃಶ್ಯವನ್ನು ಎರಡು ಆಯಾಮಗಳಲ್ಲಿ ತೋರಿಸಲಾಗದ ಅಡಚಣೆಗಳಿತ್ತು. ಆದರೆ ಅದನ್ನು ಮೀರಿದ ಸಿನಿಮಾ ಮಾಧ್ಯಮದಿಂದ ಈ ಎರಡನೆಯ ತಂತ್ರದ ಹುಟ್ಟು ಅನಿಸುತ್ತೆ.ಇತ್ತೀಚೆಗಿನ "ಸಕ್ಕರೆ", "ಉಳಿದವರು ಕಂಡಂತೆ" ಸಿನಿಮಾಗಳಲ್ಲಿನ ತಂತ್ರದಂತೆ ಈ ಎರಡನೆಯ ತಂತ್ರ.ಅವರಿಬ್ಬರೂ ಅಲ್ಲದ ಮೂರನೆಯವರ ಮೂಲಕ ಅತ್ತಲಿತ್ತಣಗಳ ಭಾವವನ್ನು ಆ ಮೂರನೆಯ ವ್ಯಕ್ತಿಯ ಭಾವವನ್ನೂ ಸೇರಿಸಿ ಪ್ರಸ್ತುತ ಪಡಿಸೋ ತಂತ್ರ ಸ್ವಲ್ಪ ಹೊಸದೆನಿಸುತ್ತೆ. ಒಳ್ಳೆ ಪ್ರಯತ್ನ :-)

   Delete
 6. ನಿರುಪಾಯದಲ್ಲಿ ಮತ್ತೆ ಪ್ರೀತಿಯ ಮಳೆ. ಅವನು ಮತ್ತು ಅವಳ ಬದುಕಿನ ಒಂದು ಭಾಗವಾಗಿ ಗುರುತಿಸಿಕೊಳ್ಳುವ, ಆ ಪ್ರೀತಿಯ ಪ್ರತಿ ಹೆಜ್ಜೆಯಲ್ಲೂ ಜೊತೆ ನಡೆಯುವ, ಲೇಖಕಿಯ ಪಾತ್ರ, ಹೊಸ ಅಭಿವ್ಯಕ್ತಿ ನೀಡಿದೆ. "ಅವನು ಮತ್ತು ಶ್ರಾವಣಿ" ಅನ್ನೋ ಸೀರಿಯಲ್ ನೆನಪಾಗಿದ್ದಂತೂ ಹೌದು...ಒಂದು ರೀತಿ ಮೆಟಾಫೋರಿಕಲ್ ಬರಹವಾಗಿ, ಹೊಸ ರೀತಿಯಲ್ಲಿ ಮೂಡಿಬಂದಿದೆ ....ಭಾವಗಳ ಅಲೆಯಲ್ಲಿ ಮತ್ತೆ ಪಯಣ :) ಒಳ್ಳೆಯ ಬರಹ :)

  ReplyDelete
 7. ಭಾವವೊಂದು ಇಷ್ಟವಾಗಿದ್ದಕ್ಕೆ ಧನ್ಯವಾದಗಳು..
  ಮತ್ತೆ ಜೊತೆಯಾಗ್ತೀನಿ ಭಾವಗಳ ವಿನಿಮಯದಲ್ಲಿ

  ReplyDelete
 8. Churu sinimiyate samlagnatva nimma barahadallide...

  ReplyDelete
 9. ಕಾಲಕಾಲಕ್ಕೂ ಬದಲಾಗೋ ನಮ್ಮದೇ ಭಾವಗಳ ಕುರಿತು ನನಗೂ ಆಶ್ಚರ್ಯವಿದೆ, ಯಾವುದನ್ನು ಈ ಬದುಕಿನಲ್ಲಿ ಮಾಡೋದಿಲ್ಲ ಅಂತ ಅಂದುಕೊಂಡಿರ್ತಿವೋ ಅದನ್ನೇ ಮಾಡುವಂತಾಗುತ್ತದೆ, ಅದು ಸರಿ ಅಂತಲೂ ಹೇಳುವ ಹೊಸಭಾವ ಬೆಳೆಯುತ್ತದೆ, ಭಾವನೆ ಚೆನ್ನಾಗಿದೆ.

  ReplyDelete