Friday, May 29, 2015

ಇಲ್ಲೇ ಇಲ್ಲೇ ಎಲ್ಲೋ ...


   ಇಡೀ ಬೀದಿಯವರನ್ನೆಲ್ಲಾ ಫ್ರೆಂಡ್ ಮಾಡಿಕೊಳ್ಳೊ ನಂಗೆ ಯಾಕಷ್ಟು ಹಚ್ಚಿಕೊಳ್ತೀಯ ಎಲ್ಲರನ್ನೂ ಅಂತೆಲ್ಲಾ ಗೆಳತಿ ಬೈದಿದ್ದಿದೆ.ಅದ್ಯಾಕೋ ಗೊತ್ತಿಲ್ಲ ಸುಮ್ಮನೆ ಕೂತಾಗಲೆಲ್ಲ ಬದುಕು ಯಾಕಿಷ್ಟು ಬೇಸರಗಳ ಬಿಟ್ಟು ಹೋಯ್ತು ನನ್ನೊಳಗೆ ಅಂತ ಯೋಚಿಸೋಕೆ ಶುರುವಿಡ್ತೀನಿ. ಕಣ್ಣಂಚು ಮುಷ್ಕರ ಹೂಡೋವಾಗಲೆಲ್ಲ ಮನ ಸಂಕಟಪಡುತ್ತೆ. ಹಾಗಾಗಿಯೇ ಏನೋ ಮಾತು ,ನಗುವಿನ ಜೊತೆ ಜಾಸ್ತಿಯಾಗಿ ಇದ್ದುಬಿಡ್ತೀನಿ ಈಗೀಗ.

ನಗು ಕಹಿ ಅನಿಸೋವಾಗ ಮಾತ್ರ ನೆನಪುಗಳ ಸಾಂಗತ್ಯ ನಂದು.

     ಅವರೊಬ್ಬರಿದ್ದಾರೆ,ನಂಗೇನೂ ಅಲ್ಲದ ಆದರೂ ಎಲ್ಲವೂ ಆಗಿಬಿಡೋ ಅಂತಹವರು. ಇಂತಹುದೇ ಅದೆಷ್ಟೋ ರಾತ್ರಿಗಳಲ್ಲಿ ಅರೆ ಬರೆ ನಿದ್ದೆ ಮಾಡ್ತಾ ತೂಕಡಿಸುತ್ತಾ ಪುಸ್ತಕದ ಮುಂದೆ ಕೂರುತ್ತಿದ್ದವಳನ್ನ ಅದೆಂತಹುದ್ದೋ ಒಂದು ತರಹದ ಬೆಲ್ ಮಾಡಿ ಎಬ್ಬಿಸಿ ಹೋಗ್ತಿದ್ದವರು.
ಇವತ್ಯಾಕೋ ಅಚಾನಕ್ಕಾಗಿ ನಂಗವರ ನೆನಪಾಗ್ತಿದೆ.

       ಮೊದ ಮೊದಲೆಲ್ಲ ಒಂದಿಷ್ಟು ಭಯವಾಗ್ತಿತ್ತು ಮಧ್ಯ ರಾತ್ರಿ ಅದೇನೋ ಶಬ್ದ ಮಾಡ್ತಾ ಗಸ್ತು ತಿರುಗೋ ಅವರನ್ನ ನೋಡೋವಾಗ.ನನ್ನ ರೂಮಿನ ಲೈಟ್ ಹಾಕಿರುತ್ತಿದ್ದ ಕಾರಣಕ್ಕೋ ಏನೋ ಗೊತ್ತಿಲ್ಲ ಆ ಮನೆಯೆದುರು ಬಂದಾಗ ಮಾತ್ರ ತುಂಬಾ ಸಲ ಬೆಲ್ ಮಾಡಿ ಹೋಗುತ್ತಿದ್ದ ಅವರನ್ನ ಅದ್ಯಾಕೋ ಒಂದು ದಿನ ಕುತೂಹಲ ತಡೆಯೋಕಾಗದೆ ನೋಡಲೇ ಬೇಕಂತ ನಿರ್ಧರಿಸಿ ರಸ್ತೆಗೆ ಮುಖ ಮಾಡಿಕೊಂಡಿದ್ದ ನನ್ನದೇ ರೂಮಿನ ಕರ್ಟನ್ ಸರಿಸಿದ್ದೆ.
ಅಲ್ಲಿಂದ ಶುರುವಾಯ್ತು ಅದೆಂತಹುದ್ದೋ ಒಂದು ಬಂಧ.

       ಮೊದಲೇ ನಾ ಪರೀಕ್ಷೆಗೆ ಓದೋಕೆ ಶುರು ಮಾಡೋದೇ ರಾತ್ರಿ ಆದ ಮೇಲೆ. ಅದರಲ್ಲೂ ಸರಿ ರಾತ್ರಿಗೆ ಅವರು ಬರ್ತಾರೆ ಸುಮ್ಮನೊಂದು ನಗು ಒಂದಿಡೀ ದಿನದ ಖುಷಿಯ ಅಡಗಿಸಿಟ್ಟುಕೊಂಡಿರುತ್ತೆ ಅನ್ನೋ ಕಾರಣಕ್ಕೆ ಮತ್ತೂ ತಡವಾಗಿ ಓದು ಶುರುವಿಟ್ಟುಕೊಂಡಿದ್ದೀನಿ. ದಿನವೂ ಬೀದಿಯಲ್ಲಿ ನಿಂತು ಒಂದು ಬೆಲ್,ಒಂದು ನಗು ಇಷ್ಟೇ ನಮ್ಮಿಬ್ಬರ ಗೆಳೆತನ. ಒಂದು ಟೋಪಿ ,ಒಂದು ಬೆಲ್,ಕೈಯಲ್ಲೊಂದು ಕೋಲು ಒಂದು ದಿನವೂ ಬಿಡದೆ ಚಳಿ ಮಳೆ ಅನ್ನದೆ ಗಸ್ತು ತಿರುಗೋ ಈ ಗೂರ್ಖಾ ಅದ್ಯಾವಾಗ 'ಗೂರ್ಖಾ ತಾತ' ಆದ್ರೊ ಗೊತ್ತಿಲ್ಲ!

      ಒಂದೊಂದು ಬಾರಿ ನಾ ಬೇಗ ಮಲಗಿದಾಗಲೆಲ್ಲ ತುಂಬಾ ಬಾರಿ ಬೆಲ್ ಮಾಡಿ ಆಮೇಲೂ ನಾ ಏಳದೇ ಹೋದರೆ ಮರು ದಿನ ಅದೇ ದಾರಿಯಲ್ಲಿ ಐದತ್ತು ಬಾರಿ ಓಡಾಡಿ ಕೊನೆಗೂ ನಾ ಮುಖ ತೋರಿಸಿದ ಮೇಲೆಯೇ ಹೊರಡೋ ಅವರಂದ್ರೆ ನಂಗಿನಿತು ಆಶ್ಚರ್ಯ. ಒಮ್ಮೊಮ್ಮೆ ಸುಮ್ಮನೆ ಕಿಚಾಯಿಸೋಕಂತಾನೆ ಲೈಟ್ ಆಫ್ ಮಾಡಿ ಅವರ ಮುಖದ ಬದಲಾವಣೆಗಳನ್ನ ಕತ್ತಲಲ್ಲಿ ಕೂತು ನೋಡಿದ್ದಿದೆ. ಆಮೇಲೆ ಪಾಪ ಅಂತನಿಸಿ ಲೈಟ್ ಆನ್ ಮಾಡಿ ಒಮ್ಮೆ ನಕ್ಕು ಅವರನ್ನ ಕಳುಹಿಸಿದ್ದಿದೆ.
ಬೀದಿಯವರಿಗೆಲ್ಲ ಅವರಂದ್ರೆ ಮಕ್ಕಳು ಮನೆ ಇಂದ ಹೊರ ಹಾಕಿದ ತಿರಸ್ಕೃತ,ತಲೆ ಸರಿ ಇಲ್ಲದ ವೃದ್ದ. ನಂಗೋ ಅವರಂದ್ರೆ ಅದೇನೋ ಮಾತಿಗೆ ಸಿಕ್ಕದ ಶಬ್ಧಗಳಿಗೆ ನಿಲುಕದ ಅವ್ಯಕ್ತ ಭಾವ. ನನ್ನ ನೋಡಿದ್ರೆ ಅವರಿಗೆ ಬಹುಶಃ ಮೊಮ್ಮಗಳ ನೆನಪಾಗುತ್ತೇನೋ.ನಂಗಂತೂ ಮಧ್ಯ ರಾತ್ರಿ ಆ ಬೀದಿಯಲ್ಲಿ ನಿಂತು ಸುಮ್ಮನೊಂದು ನಗುವಿಗಾಗಿ ಕಾಯೋ ಅವರನ್ನ ನೋಡೋವಾಗಲೆಲ್ಲ ನನ್ನಜ್ಜನ ದೊರೆಸಾನಿ ನೆನಪಾಗ್ತಾಳೆ.

         ಪ್ರತೀ ಬಾರಿಯ ರಿಸಲ್ಟ್ ಬಂದಾಗಲೂ ನಾ ಹಠ ಮಾಡಿ ಅವರಿಗಿಷ್ಟು ಹಣ್ಣು ಕೊಟ್ಟರೆ ತಲೆ ಸವರಿ ಮರು ದಿನ ನನಗೊಂದು ಪೆಪ್ಪರ್ಮೆಂಟ್ ಕೊಟ್ಟು ಹೋಗ್ತಾರೆ.ಆಗೆಲ್ಲ ಖುಷಿಯ ಹಕ್ಕಿಗೆ ರೆಕ್ಕೆ ಬಂದಂತಾಗುತ್ತೆ. ಮತ್ತೆ ಮುಂದಿನ ರಿಸಲ್ಟ್ ತನಕ ಅವರ ಜೊತೆಗೆ ಮಾತಿಲ್ಲ. ಅದಕ್ಕಾಗಿಯೇ ಏನೋ ಮೊದಲ ಸ್ಥಾನವನ್ನ ಬೇರೆಯವರಿಗೆ ಬಿಟ್ಟುಕೊಡೋ ಮನಸ್ಸಾಗಲ್ಲ.
ಕಳೆದ ಬಾರಿಯೂ ಅಷ್ಟೇ ಹಠ ಮಾಡಿ ಅವರಿಗೊಂದು ಸ್ವೆಟರ್ ಕೊಡಿಸಿ ಹಾಕಿಕೊಳ್ಳಲೇ ಬೇಕು ಅಂದಿದ್ದೆ. ಮರುದಿನ ಅವರನ್ನ ನೋಡಿದಾಗ ಆಗಿದ್ದ ಖುಷಿ ಇದೆಯಲ್ಲ ವಾಹ್! ಯಾವಾಗಲೂ ಗಲಾಟೆ ಮಾಡಿಯಾದ್ರೂ ಸರಿ ಬೇಕೆಂದಿದ್ದನ್ನ ಪಡೆದೇ ತೀರೋ ನಂಗೆ ಕೊಡೋದರಲ್ಲಿಷ್ಟು ಸಂಭ್ರಮವಿದೆ ಅನ್ನೋದು ತಿಳಿದಿದ್ದೆ ಅವತ್ತು.

        ಈಗೊಂದಿಷ್ಟು ದಿನದಿಂದ ಮನೆ ಬದಲಾಗಿದೆ. ಬೀದಿ ಬದಲಾಗಿದೆ.ಮನಸ್ಸುಗಳೂ ಬದಲಾಗಿವೆ.ಮತ್ತೊಂದು ಪರೀಕ್ಷೆಗಳ ಸಂತೆ ಎದುರಾಗಿದೆ. ಸರಿ ರಾತ್ರಿಯಲ್ಲಿ ತೂಕಡಿಸುತ್ತಾ ಕೂರೋ ಈ ದಿನಗಳಲ್ಲಿ ಗೂರ್ಖಾ ತಾತ ನೆನಪಾಗ್ತಿದಾರೆ.ಅವರ ಜೊತೆಗೊಮ್ಮೆ ಮಾತನಾಡಲೇ ಬೇಕನ್ನೋ ಹಪಾಹಪಿ ಜಾಸ್ತಿಯಾಗಿದೆ.

ಇದನ್ನೆಲ್ಲಾ ನಾ 'ಅವ 'ನಿಗೆ ಹೇಳಿದ್ರೆ 'ನಿನ್ನೊಳಗೊಂದು ಅದ್ಭುತ ಭಾವೂಕ ಮನಸ್ಸಿದೆ ಕಣೆ ಸಲುಹಿಬಿಡು  ಅದು ಇದ್ದಂತೆಯೇ' ಅಂದುಬಿಡ್ತಾನೆ.
ಮತ್ತೆ ನನ್ನೊಳಗೆ ಗೊಂದಲಕ್ಕೆ ಶುರುವಿಟ್ಟಿದೆ. ಭಾವೂಕತೆಯ ಲೇಶವೂ ಇಲ್ಲದಂತೆ ಇಲ್ಲೆಲ್ಲಿಂದಲೋ ಇದೇ ಮನಸ್ಸಲ್ಲವಾ ಅವನನ್ನ ದೂರ ಕಳುಹಿಸಿದ್ದು.

6 comments:

  1. ಅರಿತು ಬಲ್ಲವಳೆಂದುಕೊಂಡರೂ ನೀ ಬಹಳ ಎತ್ತರವೆನಿಸಿಬಿಡುತ್ತೀಯಾ ಇಂಥಹ ಬರಹಗಳನ್ನು ಓದಿದಾಗ ... ಮಗು ಮನಸಿನ ಬಹಳ ಮೆಚ್ಯೂರ್ಡ್ ಹುಡುಗಿಯ ಭಾವ ಬಹಳ ಇಷ್ಟವಾಯ್ತು....

    ReplyDelete
  2. Chennagidi.....pls do visit my aakshanagalu.blogspot.in in ur free time

    ReplyDelete
  3. ಭಾಗ್ಯಾ -
    ನಡೆವ ಹಾದಿಯ ದಣಿವ ಕಳೆಯುವ ತಂಪಿನೆಳಲಿನಂಥ ಭಾವ ಬಂಧಗಳು ಇನ್ನಷ್ಟು ಜೊತೆಯಾಗಲಿ - ನಿನ್ನ ಜತೆ ಅವೂ ನಲಿಯಲಿ...
    ಚಂದದ ಅನುಭವವನ್ನು ನಮ್ಮೊಳಗೂ ಒಂದು ಭಾವಾನುಭೂತಿ ಮೂಡುವಂತೆ ಕಟ್ಟಿ ಕೊಟ್ಟಿದ್ದೀಯಾ...
    ತುಂಬಾನೇ ಇಷ್ಟವಾಯಿತು...

    ReplyDelete
  4. ಭಾಗ್ಯಮ್ಮ ಅನ್ನೋದು ಇಂತಾ ಬರಹಗಳಿಗೇ !!
    ಸೂಪರ್ರ್ ಆಗಿ ಬರದ್ದು. ಆ ಗೂರ್ಖಾ ತಾತಾ ಸಿಕ್ಕಿದ್ರೆ ಇದನ್ನೊಂದ್ಸಲ ತೋರ್ಸು.. ಸಖತ್ ಖುಷಿ ಪಡ್ತ.. ಅಂದಂಗೆ "ಅವ" ಯಾರು ;-) ;-) ?

    ReplyDelete
  5. ಕಾಮಾಖ್ಯದ ಮನೆಯಲ್ಲಿದ್ದಾಗ ನಮ್ಮ ಬೀದಿಯಲ್ಲಿ ತಿರುಗುತ್ತಿದ್ದ ವೃದ್ಧ ಗೂರ್ಖಾನ ನೆನಪಾಯ್ತು. ಅವನನ್ನು ಅಪಾರ್ಥ ಮಾಡಿಕೊಂಡು, ಹೆದರಿ ಹೆದರಿಸಿ ಓಡಿಸಿದ್ದೂ ನೆನಪಾಯ್ತು. ಹೀಗೆ ಗೂರ್ಖಾ ಒಬ್ಬನನ್ನು ತಾತ ಮಾಡಿಕೊಂಡು ಇಷ್ಟು ಚೆನ್ನಾಗಿ ಬರೆಯಬಹುದೇ ಎನ್ನಿಸಿತು.(ಅತ್ ಪರಿಚಿತರ ಬಗ್ಗೆ, ಅತಿ ಹತ್ತರದವರ ಬಗ್ಗೆ, ಹುಟ್ಟಿದಂದಿನಿಂದಲೂ ಗೊತ್ತಿರುವವರ ಬಗ್ಗೆ ಬರೆಯುವಾಗಲೂ ಶಬ್ದಗಳಿಗೆ ತಿಣುಕಾಡುವ ನನಗೆ ಈ ಬರಹ ವಿಸ್ಮಯವಾಗಿ ಕಾಣುವುದು ಆಶ್ಚರ್ಯವಲ್ಲ)

    ಎಂದಿನಂತೆ ಚಂದದ ಬರಹ. ಬರೆಯುತ್ತಿರು.:) ಪ್ರಶಸ್ತಿಯದ್ದೇ ಪ್ರಶ್ನೆ ನನ್ನಲ್ಲೂ ಇದೆ ;) ಉತ್ತರ, ಸಿಹಿ ಎರಡೂ ಬರಲಿ.

    ReplyDelete
  6. "ಒಂಚೂರು ಸಿಟ್ಟು, ಒಂದಿಷ್ಟು ಬೇಸರ, ಬೊಗಸೆಯಷ್ಟು ಒಲವು, ಇನ್ನೊಂದಿಷ್ಟು ನಲಿವು, ಒಂದು ಕಂಬನಿ, ಒಂದು ಮುಗುಳ್ನಗು...."
    ಊಹುಂ..... ಖಂಡಿತಾ ಇಷ್ಟೇ ಅಲ್ಲಾ......

    ReplyDelete