Sunday, June 2, 2013

ಮಳೆಯಲ್ಲಿ ತೋಯ್ದ ಮನದ ನೆನಪು...



 ಕಪ್ಪಾದ ನೀಲ ಬಾನು ....ಆಗಸವನ್ನೇ  ಮರೆ ಮಾಚ ಬರುತ್ತಿರೋ ಕಾರ್ಗತ್ತಲೆಯ ಕೂಪ ...ಮಟ ಮಟ ಮಧ್ಯಾಹ್ನ ಕವಿದ ಕಾರ್ಮೋಡ ..

ಸರಿಯದೇ ಹೋದ ಮೋಡ...ಮನಕ್ಕೂ ಹಿಡಿದ ಜಡ ....ಕಸಿವಿಸಿ ಮಾಡುತಿರೋ ಕಾರ್ಮೋಡ

ಅವಳೂರಲ್ಲೂ ಜಿಟಿ ಜಿಟಿ ಮಳೆ ..ಅವಳ ಮನಸ್ಥಿತಿಯೂ ಆ ಮಳೆಯೊಟ್ಟಿಗೆ ಸ್ಪರ್ಧೆಗೆ ನಿಂತಂತೆ ಭಾಸ ...
ಮಂಜು ಮಂಜಾದ ಎದುರಿಗಿರೋ ಸವೆಯದ ಹಾದಿಯ ಒಂಟಿ ಪಯಣಿಗಳಾಗಿ...
ದುಸ್ತರ ಹಾದಿಯಲ್ಲಿ ನಿರ್ಭೀತ ಗಾಂಭಿರ್ಯದೊಡಗೂಡಿ ...
ಒಂದಿಷ್ಟು ಅವಳದೇ ನೆನಪುಗಳ ಒಡತಿಯಾಗಿ ...

ನೆನಪಾದದ್ದು ಆವತ್ತಿನ ಇಂತದ್ದೇ ಮಳೆ ! ಅದೇ ಮಳೆಯಲ್ಲಿನ ಅವಳದೇ ಭಾವದಲ್ಲವಳು ಕಳೆದೇ ಹೋಗಿದ್ದಾಳೆ ..

ಮಳೆಯಲ್ಲಿ ತೋಯುತ್ತಾ ಮನೆ ಸೇರೋ ಧಾವಂತದಲ್ಲಿರೋ ಹುಡುಗಿಗೆ ಯಾರೋ ಕೊಡೆ ಹಿಡಿದಿದ್ದರು ..ಹಿಂತಿರುಗಿ ನೋಡೋಕೂ ಸಂಕೋಚವಾಗಿ ಬಿರ ಬಿರನೆ ಹೆಜ್ಜೆ ಕಿತ್ತಿದ್ದ ಹುಡುಗಿ ಅವಳು .
ಆಮೇಲೊಮ್ಮೆ ಎದುರು ಸಿಕ್ಕ ಹುಡುಗನ ಪರಿಚಯದ ನಗು ಮೂಡಿಸಿದ್ದ ಗೊಂದಲ.. ...ದಿನವೂ ಮನೆಯ ಹಾದಿಯಲ್ಲಿ ಸಾಥ್ ನೀಡೋ ಅದೇ ಗೆಳೆಯ ...ಪರಿಚಯ ಸ್ನೇಹವಾಗಿ ಪ್ರತಿ ದಿನದ ಸಂಜೆಗಾಗಿ ಕಾಯುತ್ತಾ ಕೂರೋ ದಿನಗಳು ..
ಹಂಚಿಕೊಂಡ ಅದೆಷ್ಟೋ ಬೇಸರಗಳು ,ಜೊತೆಯಾದ ಕೈ ಹಸ್ತ ,ನಡುಗುತ್ತಾ ಸಾಗೋ ದಾರಿಯಲ್ಲಿ ಅವ ನೀಡಿದ ಬೆಚ್ಚಗಿನ ಅಪ್ಪುಗೆ ಅವಳಲ್ಲೊಂದು ಭರವಸೆ ನೀಡಿತ್ತು ...ಅವನಾದರೂ ಜೊತೆಯಾದಾನು ಬಾಳ ದೋಣಿಯಲ್ಲಿ  ದಡ ತಲುಪೋ ಜೊತೆಗಾರನಾಗಿ ..ಇಂತದ್ದೇ ಕನಸುಗಳು ..
.
ನೆನಪಲ್ಲಿ ಮಾತ್ರ ಮಳೆ ಅಂದ್ರೆ ಭಯ ಹುಟ್ಟಿಸಿತ್ತು ....ಕತ್ತಲ ನೀರವತೆ ಅವಳಿಗೆ ಬೇಕಿರದ ಅವನ ನೆನಪಿಸುತ್ತಿತ್ತು.....
ಮಳೆಯ ದಿನಗಳು ಸಹ್ಯವಾಗದೇ ,ಸಹಿಸಲೇ ಬೇಕಾಗಿರೋ ಅನಿವಾರ್ಯತೆಯನ್ನು ನೆನೆದು ...ಒಂದಿಷ್ಟು ದುಗುಡವ ಹೊತ್ತ ಅನು ದಿನದ ಮಳೆಯ ದಾರಿಯ ಪಯಣ ಸಾಗಿತ್ತು

ಒಂದಿಷ್ಟು ಇಷ್ಟವಾಗದ ನೆನಪುಗಳ ತೇರಲ್ಲಿ ಅವಳೊಂಟಿ ಅನಿಸುತ್ತಿರುವಾಗಲೇ ಎದುರಾದ ಮನೆಯಿಂದಾಗಿ ನೆನಪುಗಳೂ ವಿರಮಿಸಿದ್ದವು ...
ಭಾರವಾದ ಉಸಿರ ಜೊತೆ ಮನೆಯೊಳ ಬಂದರೆ ಅಲ್ಲಿಯೂ ಅವಳನ್ನ ಆಮಂತ್ರಿಸಿದ್ದು ಕತ್ತಲು ...ಹಾಸಿಗೆ ಹಿಡಿದ ಅಮ್ಮ ,ಯಾವ ಗೋಳೂ ತನಗೆ ಸಂಭಂದಿಸಿದ್ದೇ ಅಲ್ಲಾ ಅಂತಿರೋ ಅಣ್ಣ ...ಆದರೂ ಬದುಕ ಬಗೆಗಿನ ಅವಳ ಅದೇ ವ್ಯಾಮೋಹ ಅವಳನ್ನ ಬದುಕಿಸಿದ್ದು ....ಯಜಮಾನನಿರದ ಮನೆಯ ಎಲ್ಲಾ ಜವಾಬ್ದಾರಿಗಳ ಒಡತಿಯಾಗಿ ಕತ್ತಲ ಆ ಒಂಟಿ ಪಯಣವನ್ನೂ ಖುಷಿಸೋ ಅಷ್ಟು ಪ್ರೀತಿ ಅವಳಿಗೆ ಆ ಬದುಕ ಮೇಲೇ !
ಆದರಲ್ಲಿ ಬದುಕ ಪ್ರೀತಿಯನ್ನ ಇಮ್ಮಡಿಸ ಬಂದ ಹುಡುಗ ಅದೇ ಪ್ರೀತಿಯನ್ನ ಕೊಂದು ಹೋದದ್ದು ಮಾತ್ರ ದುಸ್ತರ ... ಸಂಜೆಯ ಕೆಲಸವನ್ನ ಮುಗಿಸಿ ಪ್ರತಿದಿನವೂ ಕಣ್ಣೀರಾಗೋ ಅಮ್ಮನನ್ನ ಸಾಂತ್ವಾನಿಸಿ ಮುದ್ದಿಸಿ ತನ್ನ ರೂಮನ್ನ ಸೇರಿದರೇ ಅವತ್ತವಳು ತೃಪ್ತಳು ...


ಇವತ್ತಿನ ಮಳೆಯಲ್ಲಿ ಅವನ ಮುಖ ಮತ್ತೆ ಮತ್ತೆ ಕಾಡುತ್ತಿತ್ತು ...ತುಂಬಾ ದಿನದಿಂದ ಮೂಲೆಯಲ್ಲಿರಿಸಿರೋ ನೆನಪನ್ಯಾಕೋ ಅಪ್ಪಿ ಮುದ್ದಾಡಬೇಕನಿಸಿ ಬೇಗನೆ ರೂಮ್ ಸೇರಿದ್ದಳು ...ಕಣ್ಣಂಚಲ್ಲಿ ಜಾರದ ಹನಿಯನ್ನ ಜೋಪಾನ ಮಾಡಿ ಮತ್ತೆ ನೆನಪುಗಳಿಗೆ ಜಾರಿದ್ದಳು  ಹುಡುಗಿ .


 

ಹೌದು ಅವನವಳ ಒಲವ ಹುಡುಗ....ಪ್ರೀತಿಸಿ ,ಕಾಳಜಿಸಿ ,ಜೊತೆಯಾಗಿ ನಾನಿದ್ದೀನಿ ಅಂತ ಸಾಂತ್ವಾನಿಸಿದ ಹುಡುಗ ...
ಕನಸ ಹುಡುಗ ಎದುರು ಬಂದ ...ಈಗ ಬರಿಯ ನೆನಪಾಗಿ ಕಾಡ ಹತ್ತಿದ್ದಾನೆ !...ಅಷ್ಟು ಪ್ರೀತಿ ಮಾಡೋ ಅವ ಯಾಕೇ ಅದೇ ಒಂಟಿ ದಾರಿಯಲ್ಲಿ ಒಬ್ಬಂಟಿಯನ್ನಾಗಿಸಿ ಸರಿದು ಹೋದ..??.ಇದೆಷ್ಟನೇ ಬಾರಿಯೋ ಏನೋ ಇದೆ ಪ್ರಶ್ನೆಯನ್ನವಳು ಕೇಳಿಕೊಳ್ಳುತ್ತಿರುವುದು ...ಕಣ್ಣ ಮುಂದೆದೆ ಆ ಒಲವ ಪರಿ .ಪ್ರೀತಿಯ ಪರವಶೆ ,ಕಾಳಜಿಯ ಕೈ,ಬದುಕ ಸ್ಪೂರ್ತಿ ಕೊಡೋ ಅವನ ಒಂದೇ ನೋಟ ...ದುತ್ತನೇ ಎದುರಾದ ವಿರುದ್ದ ಭಾವ ..ಮನವನ್ನ ಕುಗ್ಗಿಸೋಕಂತಾನೇ ಬಂದಿದ್ದು ಅವನು ಅನ್ನೋ ಅವಳ ಮನ ....ಈಗ ಹೃದಯದ ಬಾಗಿಲಿಗೆ ನೆನಪಾಗಿ ಬರೋ ಹುಡುಗ ಅವನನ್ನ ನೋಡಿ ಯಾಕೆ ನೀ ಮಂಕಾಗಿ ಕೂತೆ ಅನ್ನೋ ಮನ..ಖುಷಿಸಲಾಗದ ಆ ಮಳೆಗಾಲದ ಸಂಜೆ



 

ಪರಿಸ್ಥಿತಿಯ ಅನಿವಾರ್ಯ ಅಂತ ಒಂದೇ ಕಾರಣ ಹೇಳಿ ,ಅವಳ ಜವಾಬ್ದಾರಿಗಳನ್ನ ತಾಕಿಸಿಕೊಳ್ಳೋ ಒಂದು ಸಣ್ಣ ಪ್ರಯತ್ನವನ್ನೂ ಮಾಡದೇ ಕತ್ತಲ ಸಂಜೆಯಲ್ಲಿ ಕತ್ತಲಾಗೇ ಉಳಿದು ಹೋದ ಅವನ ಬಗ್ಗೆ ಅಲ್ಲೊಂದು ನೋವಿತ್ತು ...
ಕಳೆದ ನೆನಪನ್ನೆಲ್ಲಾ ಜತನ ಮಾಡ್ತಾ ಮಾಡ್ತಾ ಅವಳಿಗೆ ಅರಿವಿಲ್ಲದೇ ಅವಳ ಕಣ್ಣಂಚು ಒದ್ದೆಯಾಗಿತ್ತು ....ಕಿಟಕಿಯಲ್ಲಿ ಆ ಕತ್ತಲ ಹಾದಿಯಲ್ಯಾರೋ ಬರುತ್ತಿರೋ ತರ ಅನಿಸಿ ...ಹೌದು ...ಅವನು ಅವನೇ... ಅದೇ ಹುಡುಗ .. ಹಾದಿಯಲ್ಲಿ ಜೊತೆಯಾಗೋ ಗೆಳೆಯ ..ಒದ್ದೆಯಾದ ಕಣ್ಣಂಚಲ್ಲೂ ಅವನ ಮುದ್ದು ಮುಖ ಸ್ಪಷ್ಟವಾಗಿತ್ತವಳಿಗೆ ....ಮಂಜಾದ ನೆನಪಿನ ಹಾದಿಯಲ್ಲಿ ಅವಳ ಅವನು ಮತ್ತೆ ಹಿಂತಿರುಗಿದ್ದ ಸೂಚನೆ ನೀಡಿತ್ತು ಮನ ...

ಭಾವಗಳೇ ಇಲ್ಲದ ,ಭಾವಗಳನ್ನ ದಿಕ್ಕರಿಸಿ ಎದ್ದು ಹೋದ ಅದೇ ಅವನು ಇವತ್ಯಾಕೋ ತೀರ ಭಾವುಕನಂತೆ ,ಒಲವ ಸಹ ಪಯಣಿಗನಂತೆ ನೆನಪಾಗಿದ್ದ..ಒಲವ ಗೆಳೆಯನಾಗಿ ಕಾಡ ಹತ್ತಿದ್ದ ..ಕ್ಷಣವೊಂದಕ್ಕೆ ಪರಿಸ್ಥಿತಿಯ ಅರಿವಾಗಿ ,ತನ್ನದೇ ಜವಾಬ್ದಾರಿಗಳು ಕರೆದಂತನಿಸಿ ನೆನಪನ್ನ ಕೊಡವಿ ಕಿಟಕಿ ಮುಚ್ಚಿದ್ದಳು ...(ಮನದ ಕಿಟಕಿ ಮುಚ್ಚೋಕೆ ಮರೆತಳೇನೋ )
 ಎಲ್ಲವನ್ನ ಬದಿಗೊತ್ತಿ ಕಣ್ಣ ಮುಚ್ಚಿದರೇ   ಪ್ರೀತಿಯಿಂದ ಅವಳದೇ ಹೆಸರ ಕರೆಯುತ್ತಾ ಬಾಗಿಲ ತಟ್ಟಿದ ಸದ್ದು ....!

ಅದವಳ ಭ್ರಮೆಯಾ ?

ಕನಸಾ?

ವಾಸ್ತವವಾ?

13 comments:

  1. ಮಳೆಗಾಲದ ಕಾರ್ಮೋಡಗಳು, ಮಳೆ ಹನಿ, ಛತ್ರಿ ಇವುಗಳನ್ನು ಬೆಸೆದು ಹುಡುಗಿಯ ಮನಸಿನ ತುಮುಲಗಳನ್ನು ಸೇರಿಸಿ ಒಳ್ಳೆಯ ರಸಧಾರೆ ಹರಿದಿದೆ . ಅದವಳ ಭ್ರಮೆಯಾ ?

    ಕನಸಾ?

    ವಾಸ್ತವವಾ?ಇಷ್ಟಾ ಆಯ್ತು ಮತ್ತಷ್ಟು ಬರಲಿ. ಇಲ್ಲಿ.

    ReplyDelete

  2. ಪ್ರತಿ ಮಳೆಯೂ ಒಂದು ಭಾವದ ಸಸಿಯನ್ನು ನೆಟ್ಟು ಹೋಗುತ್ತದೆ.. ಕೆಲವು ಹೂ ಅರಳಿಸಿ... ಫಲ ಕೊಟ್ಟರೆ.. ಕೆಲವು ಅತಿ ನೀರಿನಿಂದ ಕೊಳೆತು ಕರಗಿ ಹೋಗುತ್ತದೆ. ಇಂತಹ ಒಂದು ಅಭೂತ ಪೂರ್ವ ಕಿರು ಭಾವವನ್ನು ಹಿಗ್ಗಿಸಿ ಅರಳಿಸಿ ಹರಡಿದ ಪರಿ ಇಷ್ಟವಾಗುತ್ತದೆ. ಪ್ರತಿ ಹನಿಯು ಒಂದು ಹೇಳುವ ಹಾಗೆ ಬರೆಯುತ್ತ ಹೋಗಿರುವ ಸಾಲುಗಳನ್ನು ಓದುತ್ತಾ ಹೋದ ಹಾಗೆಲ್ಲ ಇನ್ನೊಂದು ಮಗ್ಗಳಿಗೆ ಕಥೆ ಹೊರಳುವ ಸಾಕಷ್ಟು ಸಾಧ್ಯತೆಗಳಿವೆ.. ಅಂತ್ಯದಲ್ಲಿ ಇಟ್ಟಿರುವ ಪ್ರಶ್ನೆ ಮುಂದಿನ ಸರಣಿಗೆ ಕಾಯಬೇಕೆನೋ ಅನ್ನುವ ಹಾಗೆ ನಿಲ್ಲಿಸುತ್ತದೆ. ಇಷ್ಟವಾಯಿತು ಬಿ ಪಿ

    ReplyDelete
  3. ಇಡೀ ಜಗತ್ತೇ ನಮಗೆ 'ಮನದ ಕಿಟಕಿ ಮುಚ್ಚಿ' ಬಿಟ್ಟಿರುತ್ತದೆ, ಯಾರು ಹಿತವರೋ ಯಾರು ಅನ್ಯಾರೋ ಅರಿವಾಗುವುದೇ ಇಲ್ಲ. ಇದೇ ಬದುಕಿನ ಆಟ. ಇಲ್ಲಿ ಮಳೆ ಎಂಬುದು ಪ್ರತಿಮೆ. ಜವಾಬ್ದಾರಿಗಳನ್ನು ಹೊತ್ತುಕೊಳ್ಳದ ಅವನು ಮತ್ತು ಕೂಪವಾದ ಮನೆಯ ಚಿತ್ರಣ. ಮನಸ್ಸಿಗೆ ತುಂಬಾ ನಾಟುವ ಬರಹ...

    ReplyDelete
  4. ಸೂಪರ್ ಸಿಸ್ಟರ್.. ಮಳೆಗೂ ಪ್ರೀತಿಗೂ ಅದೆಂತ ಸಂಬಂಧನೇನೋ :-)
    ಹೊರಗಡೆ ಜಿಟಿ ಜಿಟಿ ಮಳೆ ಜಿನುಗ್ತಾ ಇದ್ರೆ, ಒಳಗಡೆ ಬೆಚ್ಚನೆ ನೆನಪುಗಳು..
    ಇನ್ನೊಂದು ಮುಂಗಾರು ಮಳೆ ತರ ಅನುಸ್ತು.. ಸೂಪರ್ ಪುಟ್ಟಿ :-)

    ReplyDelete
  5. ನವಿರಾದ ಭಾವಗಳು ... ಕಣ್ಣ ಮುಂದೆ ದೃಶ್ಯಗಳು ಹಾಗೆಯೇ ಅಚ್ಚಾಗಿ ಹೋದವು ಗೆಳತಿ.... ಅತಿ ಸುಂದರ,ತಿಳಿ ಬೇಸರ :(

    ReplyDelete
  6. ಮಳೆಯ ಜೊತೆ ಜೊತೆಯಲ್ಲಿ
    ನೆನಪುಗಳು ಮೈತಾಗಿ
    ಹಳೆಯ ಬಾವಗಳ ಕುಸುರಿ
    ಕಣ್ಣಿರ ಹನಿಯಾಗಿ
    ಮಳೆ ಹನಿಯ ಜೊತೆ ಜೊತೆಗೆ
    ಕಣ್ಣೀರು ಸೇರಿ
    ಕಣ್ಣಿರು ಹರಿದದ್ದು ತಿಳಿಯಲೇ ಇಲ್ಲಾ...
    ಮನದೊಳಗಿನಾ ಉರಿಯು ತೀರಲೇ ಇಲ್ಲಾ....

    ಚಂದದ ಬರಹ........... ಮಳೆಯ ಹುಡುಗಿ....

    ReplyDelete
  7. ಮೋಡ ಕಟ್ಟುತ್ತದೆ .. ಮಳೆಯಾಗಿ ಹರಿಯುತ್ತದೆ.. ಪ್ರೀತಿ ಹುಟ್ಟುತ್ತದೆ.. ಭಾವಗಳಾಗಿ ಹರಿಯುತ್ತದೆ... ಮಳೆಯ ಜೊತೆಯಲ್ಲೇ ಸಾಗುವ ಭಾವಲಹರಿ ಚಂದವೇ ಪುಟ್ಟು ... ಮಳೆಯ ಜೊತೆಯಲ್ಲೇ ಈ ಭಾವ ಓದಿದರೆ ಕಣ್ಣಂಚ ನೀರ ಒರೆಸುವ ಕೈಗಳು ಬೇಕಾಗಬಹುದು.. !!!

    ReplyDelete
  8. ಅಬ್ಬಬ್ಬಾ...ಏನೇನು ಬರೆಯುತ್ತೀರಿ... ಫೆಸ್ಬೂಕಿನಲ್ಲಿ ನಿಮ್ಮ ನೀಳ್ಗವಿತೆ ಓದಿ
    ಇಲ್ಲೂ ಹಾಕಿರ್ತಿರೇನೋ ಅಂತ ಬಂದೆ..ಇಲ್ಲಿ ಇನ್ನೇನೋ ಹರವಿದ್ದಿರಿ.
    ಎಷ್ಟು ಪ್ರೇಮ ಕತೆಗಳಿವೆ ನಿಮ್ಮಲ್ಲಿ ?
    ನವಿರಾದ ಪ್ರೇಮ ಕತೆಗಳನ್ನು ಹೆಣೆವ ಹುಡುಗಿಗೊಂದು ಸಲಾಮು
    ಬರೆಯುತ್ತೀರಿ

    ReplyDelete
  9. ಮಳೆಗೂ ಪ್ರೀತಿಗೂ ಅವಿನಾಭಾವ ಸಂಬಂಧ. ಮಳೆಯಲ್ಲಿ ಜನಿಸುವ ಕನಸುಗಳೆಷ್ಟೋ, ಮಳೆಯಲ್ಲೇ ಕಾಡುವ ನೆನಪುಗಳೆಷ್ಟೋ. ಚೆನ್ನಾಗಿದೆ.
    ಭ್ರಮೆಗಿಂತ ವಾಸ್ತವವಾದರೆ ಸುಖಾಂತ್ಯ,
    ಇಲ್ಲದಿದ್ದರೆ ಮುಂಗಾರು ಮಳೆ ಪಾರ್ಟ್2.
    ;)

    ReplyDelete
  10. ಪುಟ್ಟಾ ..
    ಇದು ಪ್ರೇಮ ಪತ್ರವೇ.. ಸಂದೇಹ ಇಲ್ಲಾ..
    ಆದರೆ ಪತ್ರದ ಹಿಂದೆ ಒಂದು ನೋವಿದೆ , ಸಂಕಟ ಇದೆ ಬದುಕಿನ ಅನಿವಾರ್ಯತೆ ಇದೆ.. ಅದನ್ನು ನೀನು ಕಟ್ಟಿ ಕೊಡುವ ಬಗೆ ಇದೆಯಲ್ಲ ಅದು ಬರಹಕ್ಕೆ ತೂಕ ತಂದುಕೊಡುವುದು..

    ಅನಿವಾರ್ಯತೆಗಳನ್ನೇ ಬದುಕಾಗಿಸಿಕೊಂಡ ಅದೆಷ್ಟೋ ಜೀವಗಳಿರುತ್ತಾರೆ.. ಅವರ ಪ್ರೇಮ ಅವರಿಗೆ ದಕ್ಕಲಿ..

    ReplyDelete
  11. ಹಳೆ ನೆನಪುಗಳ ಕೆದಕಿ ಕಣ್ಣ ಹನಿಯಾಗಿಸಿದ ಇದೇ ಮಳೆ - ಹಳೆಯ ಕೊಳೆಯನೆಲ್ಲ ತೊಳೆದು ಮನದಿ ಹೊಸ ಕನಸುಗಳ ಚಿಗುರಿಸಲಿ...
    ಅಂದು ಕನಸು ಮುರಿದು ಕಳೆದು ಹೋದ ಅವನು ಇಂದು ಹೊಸ ಹೊಳಪಿನೊಂದಿಗೆ ನನಸಾಗಿ ಎದುರು ನಗಲಿ...
    ಎಂದಿನಂತೆ ಚಂದದ ಭಾವ ಬರಹ...

    ReplyDelete
  12. ಭಾಗ್ಯ ಚಂದ ಇದೆ ನಿಮ್ಮ ಆಳದ ಪ್ರೇಮ ಭಾವ.ಲೇಖನ ಚಿಕ್ಕದಾಗಿದ್ದರೆ ಇನ್ನೂ ಚಂದ

    ReplyDelete