Friday, September 13, 2013

ಮಾತು ಮುರಿದೇ.... ಮಾತಾಡಿದೆ ....

ಮತ್ತಷ್ಟು ಗೊಂದಲಗಳನ್ನೇ ಬಿಟ್ಟು ಹೋಗೋ ಅಂತರಂಗವ ಪ್ರತಿನಿಧಿಸೋ ಮನದ ಭಾವಗಳನಾಲಿಸು​ತ್ತಾ...


ಕ್ಯಾಂಪಸ್ಸಿಗೆ ಬರೋಕೂ ಮುಂಚೆ ಫ಼ೇಸ್ಬುಕ್ಕ್ಕಿನ ಸಾವಿರ ಸ್ನೇಹಿತರ ಮಧ್ಯ ನೀನೂ ಒಬ್ಬನಾಗಿದ್ದೆ ನಂಗೆ ಅಷ್ಟೇ ! ಯಾಕೋ ನನ್ನೂರ ಸೀನಿಯರ್ಸ್ ನಾ ಹುಡುಕೋವಾಗ ಸಿಕ್ಕಿದ್ದೆ ನೀ..ಆದರೂ ನಾನಾಗೀ ಯಾವತ್ತೂ ಮಾತಾಡಿಸಿರಲಿಲ್ಲ ನಿನ್ನ .ಅದ್ಯಾವತ್ತೋ  ಮಾತಾಡಿ ಆಮೇಲೆ ದಿನ ಪೂರ್ತಿ ಕಾಲೇಜಿನ ವಿಷಯಗಳ ಹೇಳಿ ,ಕಾಲೇಜಿಗೆ ಬರೋಕೂ ಮುಂಚೆ ಕಾಲೇಜಿನ ಸ್ಪಷ್ಟ ಅರಿವು ನೀಡಿದ್ದೆ...ಕಾಲೇಜಿನ ಜೊತೆಗೆ ನೀನೂ ಆತ್ಮೀಯನಾಗಿದ್ದೆ ಆವಾಗ್ಲೆ !

ಆದರೂ ಗೆಳೆಯ ಎಲ್ಲರೊಟ್ಟಿಗೆ ತೀರಾ ಕಾಲೆಳೆದು ಮಾತಾಡೋ ತರಾನೆ ನಾ ನಿನ್ನೊಟ್ಟಿಗೂ ಮಾತು ಶುರುವಿಡ್ತಿದ್ದಿದ್ದು .ತೀರಾ ಹರವದ ಮನದ ಭಾವಗಳ ಬಗೆಗೆ ಯಾವತ್ತೋ ಒತ್ತಾಯ ಮಾಡಿ ಕೇಳಿದ್ದೆ ನೀನು .ನಾ ನಿನ್ನೆದುರು ಕಣ್ಣಂಚ ಹನಿಯ ಜೊತೆ ಮಾತಾಡಿ ಅಮ್ಮ ಬೇಕೆಂದು ಆ ದಿನಗಳಲ್ಲಿ ಬಿಕ್ಕಿದ್ದು ,ನೀ ತೀರಾ ಆತ್ಮೀಯನಾಗಿ ಸಾಂತ್ವಾನಿಸಿದ್ದು ಎಲ್ಲಾ ಕಳೆದು ವರ್ಷವೊಂದಯ್ತಲ್ಲೋ ಹುಡುಗ .

ಚಂದದ ಗೆಳೆತನವಿತ್ತು ಅಲ್ಲಿ ....

ಸ್ವಲ್ಪವೇ ಆತ್ಮೀಯತೆ ತೋರಿದರೂ ಪೂರ್ತಿಯಾಗಿ ಹಚ್ಚಿಕೊಳೋ ನಾನು ನಿನ್ನ ತೀರಾ ಆತ್ಮೀಯತೆಗೆ,ಎಲ್ಲವನೂ ಅರ್ಥಮಾಡಿಕೊಳೋ ಮನಕ್ಕೆ ಅದ್ಯಾವತ್ತೋ ಸೋತಿದ್ದೆ ಅಲ್ಲಿ.ಎಲ್ಲದ್ದಕ್ಕೂ ರೇಗೋ ,ಸಿಡುಕೋ ಹೊಸ ಪ್ರಪಂಚದಲ್ಲಿ ನಿನ್ನೊಬ್ಬನೇ ಜೊತೆಯಲ್ಲಿದ್ದೆ ನಂಗವತ್ತಲ್ಲಿ...ಉಸಿರುಗಟ್ಟಿಸೋ ಊರಲ್ಲಿ, ಪ್ರೀತಿಯ ಮುಖವಾಡವನೂ ಧರಿಸದವರ ಮಧ್ಯ ನೀ ತೀರಾ ವಿಭಿನ್ನವಾಗಿ ಕಂಡಿದ್ದೆ .ಚಿಕ್ಕ ಚಿಕ್ಕ ಬೇಸರಗಳನೂ ಬಿಡದೇ ಸಾಂತ್ವಾನಿಸೋ ಸರಿ ಸುಮಾರು ನನ್ನದೆ ವಯಸ್ಸಿನ ಈ ಹುಡುಗನ ನೋಡಿ ಅದೆಷ್ಟೋ ಬಾರಿ ಅಂದುಕೊಂಡಿದ್ದೆ ನಂಗೂ ನಿನ್ನರ್ಧದಷ್ಟಾದ್ರೂ ಮ್ಯಾಚುರಿಟಿ ಇರ್ಬೇಕಿತ್ತು ಅಂತಾ .!!

ಅತ್ತರೆ ಸಮಾಧಾನಿಸಿ ,ಮನೆಯ ನೆನಪ ಪೂರ್ತಿಯಾಗಿ ಮರೆಸಿ , ಇಡಿ ದಿನ ಮಾತಾಡಿ,ಮುಖ ಊದಿಸಿಕೊಂಡಿದ್ರೂ ಕೊನೆಗೂ ನಗಿಸಿಯೇ ತೀರೋ ನೀನು ಬರಿಯ ಒಬ್ಬ ಫ಼ೇಸ್ಬುಕ್ ಗೆಳೆಯ ಆಗಿರಲಿಲ್ಲ ನಂಗೆ.ಅದಕ್ಕೂ ಮೀರಿದ ಸ್ನೇಹದ ಭಾವವೊಂದ  ನೀ ನಂಗೆ ನೀಡಿದ್ದೆ ಅನ್ನೋದ ನಾ ಪ್ರಾಮಾಣಿಕವಾಗಿ ಒಪ್ಪಿಕೊಳ್ತೀನಿ.

ಆದರೂ ನಿನ್ನ attitude,ego ಗಳ ಮೇಲೆ ನಾ ಅವತ್ತೂ ಬೈದಿದ್ದೆ ...ಯಾವತ್ತೂ ಬೈತೀನೇನೋ ಬಹುಶಃ.

ಮಾಡಿದ ತರಲೆ,ಕ್ಯಾಂಪಸ್ ನಲ್ಲಿ ತಮಾಷೆಗೆ ಮಾಡಿದ ರಾಗಿಂಗ್ ಗೆ ನಿನ್ನಮ್ಮ ನನ್ನ ಸಾರಿ ಕೇಳಿದ್ದು ,ಅಸೈನ್ಮೆಂಟ್ ,ರೆಕಾರ್ಡ್ ಬರ್ಯೋಕೆ ಸಹಾಯ ಮಾಡಿದ್ದು,ನೀ ಕೊಟ್ಟ ಸಿಲ್ಕ್ ನಾ ನಿರಾಕರಿಸಿ  ಎದ್ದು ಬಂದಿದ್ದು ,ಸ್ವಲ್ಪ ನಕ್ಕಿದ್ದು,ಜಾಸ್ತಿ ಅತ್ತಿದ್ದು.ಎಲ್ಲಾ ಹಳೆ ಕಥೆ ..ಯಾವುದೋ ಹೊಸ ಕಥೆ ಶುರುವಾಗೋದ್ರಲ್ಲಿತ್ತೇನೊ .ಮನವ ಕೇಳ ಬೇಕಂತ ಅಂದುಕೊಂಡಿದ್ದು ಸುಳ್ಳಲ್ಲ ..ಆದರೆ ನೀ ಅದಕ್ಕೂ ಅವಕಾಶವ ಕೊಡದ ರೀತಿ ಮಾಡಿಬಿಟ್ಟೆ ಕಣೋ ...

ಪ್ರೀತಿ ಪ್ರೇಮದ ಬಗೆಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದ ಹುಡುಗಿಗೂ ಒಂದು ಸಣ್ಣ ಒಲವಾಗಿತ್ತು ನಿನ್ನಲ್ಲಿ !ಆದರೆ ತೀರಾ ಕಟ್ಟಿಕೊಂಡಿರೋ ನನ್ನದೇ ಮನದ ಬದುಕಲ್ಲಿ ಅದಕ್ಕೂ ಮೀರಿದ ಬದುಕು ಸಾಧಿಸೋದೊಂದಿತ್ತು .ಹಾಗಾಗಿ ಪ್ರತಿ ಬಾರಿ ಬರೋ ವಯೋಸಹಜ ಯೋಚನೆಗಳ ಬದಿಗೊತ್ತಿ ಕೂರೋವಾಗ ಕಷ್ಟ ಅನ್ನಿಸೋದು ..ಆದರೂ ಮಾಡೋ ಅನಿವಾರ್ಯತೆ ನಂದಿತ್ತು(ಇದೆ ಕೂಡಾ).

ಪೂರ್ತಿಯಾಗಿ ದೂರಾಗಿಸಲಾಗದ ನೀನು ಒಂದಿಷ್ಟು ದಿನ ತೀರಾ ಅನಿಸೋ ಅಷ್ಟು ಕಾಡಿದ್ದೆ ಕೂಡಾ.. ತಲೆದಿಂಬ ಒದ್ದೆಯಾಗಿಸಿ ಅತ್ತಿದ್ದೆ  ಕೂಡಾ ....ತೀರಾ ಆತ್ಮೀಯ ಅನ್ನಿಸೋ ಗೆಳತಿಯ ಬಳಿ ಮನದ ದ್ವಂದ್ವಗಳ ಹೇಳಿಕೊಂಡು ಬಿಕ್ಕಿದ್ದೆ ನಾ ...ಆದ್ರೂ ಅವಳ್ಯಾಕೋ ಭಾವಗಳ ಹೊಡೆದಾಟ ನಿಲ್ಲಿಸೋವಲ್ಲಿ ಸೋತು ಹೋಗಿದ್ಲು... ಅವಳ ಭಾವಗಳನ್ನೇ ಎದುರಿಸಲಾರದೆ ಕಂಗಾಲಾಗಿದ್ದ ಅವಳಿಗೆ ನನ್ನ ದ್ವಂದ್ವಗಳ ಹರವಿ ಮತ್ತೆ ಬೇಸರಿಸಿದ್ದೆ ನಾ  .ಆದರೂ ಎದುರು ತೋರುಕೊಡದೇ ನನ್ನ ಪಾಡಿಗೆ ನಾನಿದ್ದೆ.

ಯಾವತ್ತೋ ಸೂಕ್ಷ್ಮವಾಗಿ ಹರವಿದ್ದ ನಾಜೂಕು ಭಾವಕ್ಕೆ ಇವತ್ತಿಷ್ಟರ ಮಟ್ಟಿನ ಪೆನಾಲ್ಟಿ ಕಟ್ಟಬೇಕೆಂಬ ಸಣ್ಣ ಕಲ್ಪನೆ ಕೂಡಾ ನಂದಿರಲಿಲ್ಲ.ಯಾವುದೋ ಬೇಸರದಲ್ಲಿ ನಿನ್ನ ತೋಳಲ್ಲಿ ಕಣ್ಣೀರಾಗಿದ್ದು ಬರಿಯ ಗೆಳತಿಯಾಗಿ ಮಾತ್ರಾ ಅಂದಾಗ "ಹುಚ್ಚಿ ನಿನ್ನಲ್ಲೂ ಒಲವಿದೆ ಅನ್ನೋದು ಗೊತ್ತು ಕಣೇ ,ಯಾಕೆ ಗೊಂದಲಗಳ ಜೊತೆ ದಿನ ದೂಡ್ತೀಯ"ಅಂತಾ ತೀರಾ ಭಾವುಕನಾಗಿ ಸ್ನೇಹಕ್ಕೊಂದು ನಾಮಕರಣ ಮಾಡಿಬಿಟ್ಟಿದ್ದೆ ನೀ..

ಅವತ್ತಿಂದ ಶುರುವಾದ ಗೊಂದಲಗಳು  ನನ್ನನ್ನಿವತ್ತೂ ಕಾಡ್ತಿವೆ ಕಣೋ ...ಯಾಕೋ ಗೆಳೆಯ ಪ್ರೀತಿಯ ವಿಷಯದಲ್ಲಿ ಇಷ್ಟು ದೊಡ್ದ ಗೋಜಲುಗಳು ಉಳಿದುಬಿಡ್ತು ನನ್ನಲ್ಲಿ .

ನನ್ನಲ್ಲೂ ಪ್ರೀತಿಯಿತ್ತ? ಸ್ನೇಹದ ಒಲವು ಪ್ರೀತಿಯ ಕಡಲಾಗಿ ಹರಿದಿತ್ತಾ ?ನಾನ್ಯಾವತ್ತಾದ್ರೂ ನಿನ್ನಲ್ಲಿ ಪ್ರೀತಿಯಿದೆ ಕಣೋ ಅನ್ನೊ ತರಾ ವರ್ತಿಸಿದ್ನಾ? ಅಥವಾ ನನ್ನರಿವಿಗೂ ಬಾರದೇ ನನ್ನ ಮನ ನಿನ್ನೆಡೆಗೆ ವಾಲಿತ್ತಾ ?
ಉತ್ತರವ ಹುಡುಕ ಹೊರಟೆ ನನ್ನಲ್ಲಿರೋ ನೀನು ಕತ್ತಲಾಗಬಾರದು ಅನ್ನೋ ಕಾರಣಕ್ಕೆ . ಸಿಕ್ಕಿದ್ದು ಮಾತ್ರಾ ನನ್ನನ್ನೇ ಧಿಕ್ಕರಿಸಿ ಎದ್ದು ಹೊರಡಲನುವಾಗಿರೊ ನನ್ನದೇ ಮನ !!.
ನಾ ಮನದ ಮಾತನ್ನ ಕೇಳೋಕೆ ಬೇಸರಿಸೋದೂ ಇದೆ ಕಾರಣಕ್ಕೆ .

ಬರಿಯ ಗೋಜಲುಗಳೇ ಕಣ್ಣ ಮುಂದೆ...

ಆದ್ರೂ ಹೇಳ್ತೀನಿ ಗೆಳೆಯ ,ಪ್ರೀತಿಗಿಂತ ನಂಗೆ ಮಧುರ ಭಾವ ನೀಡೋದು ಸ್ನೇಹವೇ ...ನೀ ನಂಗೆ ಒಳ್ಳೆಯ ಗೆಳೆಯನಾಗಿದ್ದೆ .ಅದಕ್ಕೂ ಮೀರಿದ ಭಾವವ ನಾ ಯಾವುದೋ ಸಂದಿಗ್ಧದಲ್ಲಿ,ನನ್ನರಿವಿಗೆ ಬಾರದ ಮನದ ತೊಳಲಾಟಗಳ ಜೊತೆ ತೋರಿಸಿದ್ದರೆ ಮಂಡಿಯೂರಿ ಕ್ಷಮೆ ಕೇಳ್ತೀನಿ ನಾ ನಿನ್ನ...ನಿನ್ನ ಭಾವಗಳ ಪ್ರೋತ್ಸಾಹಿಸೋಕೆ ನಾ ಇನ್ಯಾವತ್ತೂ ಬರಲ್ಲ .
ಪ್ರೀತಿಯ ಹೆಸರಿಗೆ ಮನ ನೋಯೋ ,ಮನ ನೋಯಿಸೋ ಭಾವವ ಎದುರು ನೋಡೋದು ನನಗ್ಯಾಕೋ ಸರಿ ಬೀಳಲ್ಲ .

ಪ್ರೀತಿ ಅಂದ್ರೆ ನನ್ನಲ್ಲಿ ಒಂದಿಷ್ಟು ಬೇರೆಯದೇ ಭಾವಗಳಿವೆ.ಪ್ರೀತಿ ಅಂದ್ರೆ ಬದುಕ ಪೂರ್ತಿ ಕಣ್ರೆಪ್ಪೆಯಲಿಟ್ಟು ಜೋಪಾನ ಮಾಡೋ ಹುಡುಗ,ನಾ ಹೇಳದ ಭಾವಗಳನ್ನೂ ಅರ್ಥೈಸಿಕೊಂಡು ಸಾಂತ್ವಾನಿಸೋ ಮುದ್ದಿಸೋ ಕನಸ ರಾಜಕುಮಾರನ ಬಗೆಗೆ ನಂದೊಂದಿಷ್ಟು ಕನಸುಗಳಿವೆ ....ನಿನ್ನಲ್ಲಿರೋ ಪ್ರೀತಿಯ ಬಗೆಗಿನ ಭಾವಗಳ ಕೇಳಿ ನಾ ದಂಗುಬಡೆದಿದ್ದೆ ...ಇವತ್ತೂ ನಂಗವುಗಳ ಅರಗಿಸಿಕೊಳ್ಳೋ ಶಕ್ತಿ ಇಲ್ಲ..ಆದ್ರೂ ಹಾಳು ಮನ ಯಾಕೇ ನನ್ನಲ್ಲೂ ಒಂದು ಸಣ್ಣ ಒಲವನ್ನ ಬಿತ್ತಿಹೋಯ್ತೊ ನಾ ಕಾಣೆ.

ನನ್ನ ಪ್ರೀತಿಯ ಬಗೆಗಿನ ಚಂದದ  ಭಾವಗಳ ಕೇಳಿ ನಕ್ಕುಬಿಟ್ಟಿದ್ದೆ ನೀ..ಆದರೂ   ಬೇರೆಯವರ ಭಾವಗಳಿಗೆ ಸ್ವಲ್ಪ ಆದ್ರೂ ಗೌರವಿಸೋ ಮನ ನಿನ್ನದಾಗಲಿ ಅಂತಷ್ಟೇ ನಾ ಹೇಳೋದು.ತಪ್ಪು ನಿಂದಲ್ಲ .ತಪ್ಪು ನನ್ನದೇ ಆದೀತು . ಗೆಳೆತನದ ಆ ದಿನಗಳಲ್ಲಿ ನನ್ನನ್ನಷ್ಟು ಇಷ್ಟ ಪಟ್ಟ ನಿನ್ನ ಮನವನ್ನ ತಪ್ಪು ಅಂತ ಹೇಳೋಕೆ ನಂಗೂ ಕಷ್ಟವಾದೀತು . 

ನಾ ಕಟ್ಟಿಕೊಂಡ ಬದುಕೇ ಹೀಗೆ..ನಿಂಗಾಗಿ ನಾ ಬದಲಾಗಲಾರೆ...ಅವತ್ತು ಬದಲಾಗೋಕೆ ನೀ ನನ್ನ ಗೆಳೆಯನಾಗಿ ಆದ್ರೂ ಉಳಿದಿದ್ದೆ ..ಆದರಿವತ್ತು ಪ್ರೀತಿಯ ಹೆಸರಲ್ಲಿ ಮನ ಹೊಕ್ಕು ಎಲ್ಲರೂ ಇಷ್ಟಪಡೋ ಗೆಳೆತನವನ್ನೂ ಕೊಂದು ಎದ್ದು ಹೋದೆ ಅನ್ನೋದೆ ನನ್ನ ಬೆಸರ.

ಎಲ್ಲಾ ಭಾವಗಳನೂ ಚಂದದಿ ಸಲುಹೊ ನಂಗೂ ನೀ ಎದ್ದು ಹೋದುದ್ದು ನೆಮ್ಮದಿ ಆಯ್ತೆಂದು ಅನ್ನಿಸೋವಾಗ ಅರಿವಿಗೆ ಬರುತ್ತೆ ನೀ ನನ್ನನ್ನೆಷ್ಟು ಬದಲಿಸಿಬಿಟ್ಟಿದ್ದೆ ಅಂತಾ...

ಆದ್ರೂ ಗೆಳೆಯ ....ಗೆಳೆಯನಾಗಿದ್ದಾಗ ಇದ್ದ ಆ ನಿನ್ನ ಮುದ್ದು ಮನವ ನಾ ಇವತ್ತೂ ಹುಡ್ಕ್ತಿದೀನಿ..


 
ನಿನ್ನೊಟ್ಟಿಗೆ ಮಾತಾಡಿದ್ದಕ್ಕಿಂತ ಮಾತು ಮುರಿದು ಎದ್ದು ಬಂದಿದ್ದೆ ಜಾಸ್ತಿ. ಇಲ್ಲಿ ನಾ ನಾನಾಗಿರಲೇ ಇಲ್ಲ..ಪೂರ್ತಿಯಾಗಿ ಮಾತಾಡೋ ನೀ ಮೌನಿಯಾಗಿ ಕೇಳುತ್ತಿದ್ದೆ...ಮೌನಿಯಾಗುಳಿಯಬೇಕಿದ್ದ ನಾ ಅದೇನೋ ಕಾಣದ ಕಾರಣಕ್ಕೆ ಮಾತಾಡಿ ಮನ ನೋಯಿಸಿದ್ದೆ...

ಯಾರೊಟ್ಟಿಗೂ ಜಗಳ ಮಾಡದ ನಾ ಅದ್ಯಾಕೇ ನಿನ್ನ ಪ್ರತಿ ಮಾತಿಗೂ ಕೆಂಡ ಕಾರ್ತಿದ್ನೋ ನಂಗಿವತ್ತೂ ಗೊತ್ತಿಲ್ಲ.

ನಿನ್ನಲ್ಲಿರೋ ಪ್ರೀತಿಯ ಮನವ ಮತ್ತೂ ನೋಯಿಸೋ ಇರಾದೆ ನಂಗಿಲ್ಲ ಕಣೋ .ಭಾವಗಳೇ ಇಲ್ಲದ ಗೆಳತಿಯೂ ನಿನ್ನ ಬಗೆಗೆ ಒಂದಿಷ್ಟು ಸಣ್ಣ ,ಸೂಕ್ಷ್ಮ ಭಾವಗಳ ಇಟ್ಟುಕೊಂಡುಬಿಟ್ಟಿದ್ಲು ನೋಡು.

ಎಲ್ಲರ ಜೊತೆ ಸಲಿಗೆಯಿಂದ ಮಾತಾಡೋ ನನ್ನದೇ ಸ್ವಭಾವಗಳ ಬಗೆಗೆ ಬೇಸರವಾಗೋ ಅಷ್ಟರ ಮಟ್ಟಿಗೆ ಮನ ಮುರಿದೆ ನೀ.ಪ್ರೀತಿ,ಸ್ನೇಹದ ಗೊಂದಲದಲ್ಲಿ ನಾನೂ ಸ್ವಲ್ಪ ನಲುಗಿದ್ದೆ ..ಆದರೂ ಇವತ್ತು ಹೇಳ್ತೀನಿ ..ತೀರಾ ತದ್ವಿರುದ್ದ ಇರೋ ನನ್ನ ನಿನ್ನ ಭಾವಗಳಲ್ಲಿ ಪ್ರೀತಿಯ ಕಲ್ಪನೆಯೂ ವಿಚಿತ್ರ ಅನ್ನಿಸ್ತಿದೆ ನಂಗೆ .ಆದರೂ ನೀ ನನ್ನ ಮೊದಲ ಒಲವು ಅನ್ನೋದು ನನ್ನ ಮನಕ್ಯಾಕೋ ಸಹ್ಯವಾಗ್ತಿಲ್ಲ ಇವತ್ತು.ಸಣ್ಣದಾಗಿದ್ದ ಒಲವ ಚಿವುಟಿ ನಂಗೆ ನಾ ನೋವು ಮಾಡಿಕೊಂಡ್ರೂ ಆ ನೋವ್ಯಾಕೋ ನನ್ನ ಕಾಡ್ತಿಲ್ಲ ಇವತ್ತು...ಮಾಸೋ ಗಾಯದ ತರಹ .

ಭಾವಗಳ ಜೊತೆ ಬದುಕು ಕಟ್ಟಿಕೊಂಡ ಭಾವಗಳೇ ಇಲ್ಲದ ತರಹ ನಿನ್ನ ಧಿಕ್ಕರಿಸಿ ಎದ್ದು ಬಂದ ಗೆಳತಿಯನ್ನೊಮ್ಮೆ ಕ್ಷಮಿಸಿ ಬಿಡು.

ಖುಷಿ ಪಟ್ಟೀತು ನನ್ನೀ ಮನ.

ತೀರಾ ಹರವಲಾಗದ ಖಾಸಗಿ ಭಾವಗಳ ನನ್ನಲ್ಲೇ ಇರಿಸಿಕೊಂಡು ,ನನಗೇ ಅರ್ಥವಾಗದಿರೋ ನನ್ನದೇ ಮನದ ತೊಳಲಾಟಗಳ ಆಶ್ಚರ್ಯದಿಂದ ದಿಟ್ಟಿಸಿ ನಿಟ್ಟುಸಿರಿನೊಂದಿಗೆ ವರ್ಷದ ಹಿಂದಿನ ಅದೇ ಹುಡುಗಿಯಾಗಿ ..... 
ಕಣ್ಣಂಚ ಹನಿಯಲ್ಲಿ ಬೀಳ್ಕೊಟ್ಟಿದ್ದು ವರ್ಷವೊಂದರ ಮಟ್ಟೀಗಾದ್ರೂ ತೀರಾ ಹಚ್ಚಿಕೊಂಡ ಗೆಳೆಯನಾಗಿದ್ದೆ..ಮಧುರ ಪ್ರೀತಿಯಾಚೆಗೂ ಗೆಳೆತನದ ಒಲವ ಹುಡುಗನಾಗಿದ್ದೆ ಅಂತ ಮಾತ್ರ .ಹುಶಾರಿಲ್ಲದಾಗ ಮಾತಾಡಿದ್ದೂ ಇದೇ ಕಾರಣಕ್ಕೆ .ಆದರೂ ತಪ್ಪು ನಂದೆ ,ನಾ ನಿನ್ನಲ್ಲಿ ಪ್ರೀತಿಯಾಗೋ ತರ ನಡಕೊಂಡೆ ಅಂತ ನನ್ನದೇ ಮನ ನನ್ನ ಬೆರಳು ಮಾಡಿ ತೋರೋವಾಗ ಬಿಕ್ಕಿ ಬಿಕ್ಕಿ ಅಳಬೇಕಂದುಕೊಳ್ತೇನೆ..ಆದ್ರೂ ಪಾಪಿ ಕಣ್ಣೀರಿಗೂ ನನ್ನ ಮೇಲೆ ಬೇಸರವಾದಂತಿದೆ..

ಸಲುಹಿಕೊಂಡಿದ್ದ ಗೆಳೆತನಕ್ಕೆ ನನ್ನದೊಂದು ಋಣದ ನಮನ ..

ನೆನಪಾಗಿಯೂ ನಾ ನಿನ್ನ ಪ್ರೀತಿಸಲಾರೆ ಇನ್ನು .


 
ಬದುಕ ಪೂರ್ತಿ ಗೆಳತಿಯಾಗಿ ಪ್ರೀತಿಯ ಮಧುರ ಭಾವಗಳ ಮಾತ್ರ ನಿನ್ನಿಷ್ಟದಂತೆ ಹೊತ್ತು ತರೋ ಹುಡುಗಿ ಸಿಗಲಿ ಅಂತಾ ಮನ ಪೂರ್ತಿ ಹಾರೈಸಿ ಕಣ್ಣಂಚ ಹನಿಗಳ ಜೊತೆ ಬೀಳ್ಕೊಡ್ತಾ...

ನಿಂಗೆ ಬೆನ್ನು ಮಾಡಿ ನಡೆದು ಬಂದಾಗಿದೆ..ಮತ್ಯಾವತ್ತೂ ಬದುಕಿಗೆ ಎದುರಾಗಿ ನಿಂತು ಮತ್ತೇ ಬೇಡದಿರು ನೀ ಎನ್ನ...ನನ್ನ ಬದುಕಲ್ಲೇ ಕೊನೆಯಾದೀತು ಅಥವಾ ನಿನ್ನಿರುವಿಕೆಯ ಪೂರ್ತಿಯಾಗಿ ಅಲಕ್ಷಿಸಿ ನೀ ಇಷ್ಟಪಡದ ಭಾವಗಳೇ ಇಲ್ಲದ ಗೆಳತಿ ಧಿಕ್ಕರಿಸಿ ಹೊರಟಾಳು .

10 comments:

 1. ಯಾಕೋ ಒಲುಮೆಯ ಗೋಜಲುಗಳು ಮನಸ್ಸನ್ನು ಎಲ್ಲಿಗೋ ಪಯಣಿಸಿ ನಿಲ್ಲಿಸಿತು. ಅದೇ ಸಜ್ಜನ್ ರಾವ್ ಸರ್ಕಲ್ಲಿನ ತಿರುವು - ಕೆಸೆಂಟ್ ಪಾರ್ಕಿನ ಆ ಕಲ್ಲು ಬೆಂಚು ಒಟ್ಟಿಗೇ ನೋಡಿದಂತಾಗಿ ಕಣ್ಣೀರಾದೆ.
  ಮತ್ಯಾವತ್ತೂ ಬೇಡದಿರು ಎನ್ನದಿದ್ದರೆ ಚೆಂದಿತ್ತು ಎನಿಸಿತು ಎನಗೆ! :(

  ReplyDelete
  Replies
  1. ಧನ್ಯವಾದ ಬದರಿ ಸರ್ ...
   ನೀವು ನೆನಪಿಸಿಕೊಂಡ ಕಲ್ಲು ಬೆಂಚು ನನ್ನನ್ನೂ ತೀರಾ ಕಾಡ್ತಿದೆ ..
   ಲೆಟ್ಸ್ ಸೀ ...ಅದರ ಬಗೆಗೆ ಯಾವ ಭಾವ ನಿರುಪಾಯದಲ್ಲಿ ಕಾಣ ಸಿಗುತ್ತೋ ..

   ನಿಜ ಇಷ್ಟವಾಗದ ಒಂದಿಷ್ಟು ಭಾವಗಳು ತೀರಾ ಬೇರೆಯಾಗಿ ಬದುಕಿಂದ ಕಾಣೆಯಾದ ಮೇಲೆ ಕೊನೆ ಇದಾಗಬಾರದಿತ್ತು ಅಂತನಿಸೋದು ಸಹಜವೇ ..

   ಭಾವವ ನೀವೋದ ಬಂದಿದ್ದು ನನ್ನ ಖುಷಿ.

   Delete
 2. ಮನಸು ಮಹಾ ಮಾಯಾವಿ... ಎಲ್ಲ ಗೋಜಲುಗಳ ಮೂಲವಾದ ಅದೇ ಮನಸಲ್ಲಿ ಇಣುಕಿ ನೋಡಿದರೆ ಆ ಎಲ್ಲ ಗೊಂದಲಗಳಿಗೆ ಅಷ್ಟಿಷ್ಟು ಉತ್ತರವೂ ಇದ್ದೀತು... ಸೂಸುವ ಮಧುರ ಭಾವಗಳೆಲ್ಲ ಪ್ರೇಮಭಾವಗಳಲ್ಲ - ಆದರೆ ಪ್ರೇಮ ನಗಲು ಒಂದಿಷ್ಟು ಮಧುರ ಭಾವಗಳು ಬೇಕೇ ಬೇಕು... ಆತ್ಮೀಕ ಸ್ನೇಹದ ಉತ್ತುಂಗ ಭಾವವೂ ಪ್ರೇಮ ಭಾವದಂತೆಯೇ ಗೋಚರಿಸಿಬಿಟ್ಟೀತು ಒಮ್ಮೊಮ್ಮೆ... ಸ್ನೇಹ - ಪ್ರೇಮ - ಆಕರ್ಷಣೆಗಳ ನಡುವಿನ ಅಂತರವನ್ನು ಗುರುತಿಸುವ ಅರಿವಿಲ್ಲದಾಗ ಅಥವಾ ಗುರುತಿಸಲಾರದ ಸೂಕ್ಷ್ಮ ಭಾವಗಳಲ್ಲಿ ನಾವು ಕೊಚ್ಚಿ ಹೋಗುತ್ತಿರುವಾಗ... ಒಮ್ಮೆ ಅರಿವು ಮೂಡಿದರೆ ಇಲ್ಲಾ ಭಾವ ಪ್ರವಾಹದಿಂದಾಚೆ ಬಂದು ನೋಡಿಬಿಟ್ಟರೆ ಕೊನೆಗೆ ಅಂದಿನ ನಮ್ಮ ಭಾವಗಳೆಡೆಗೇ ನಮಗೊಂದು ಹಗುರ ನಗು ಮೂಡೀತು... ಹಾಗಂತ ನಾನಿಲ್ಲಿ ಪ್ರೇಮ ಭಾವವನ್ನು ಲೇವಡಿ ಮಾಡುತ್ತಿಲ್ಲ... ಹೇಳೋದಿಷ್ಟೇ ಪ್ರೀತಿ ಪ್ರೇಮಗಳು ಹುಟ್ಟುವ ಮೊದಲೇ ಹುಟ್ಟುಹಾಕುವ ಗೊಂದಲದ ಭಾವಗಳು ಮನದ ಮಧುರ ಭಾವಗಳ ಕೊಲ್ಲದಿರಲಿ... ತೀವ್ರ ತರದ ಭಾವಗಳೇನಿದ್ದರೂ ಅರಿವಿನ ಬೆಳಕಲ್ಲಿ ಬೆಳಗಲಿ ಎಲ್ಲರಲೂ ಅಂತೀನಿ... ಅಗಲಿ ಹೋದ ಎರಡೂ ಜೀವಗಳನ್ನು "ಬದುಕ ಒಲವು" ಕೈ ಹಿಡಿದು ಮುನ್ನಡೆಸಲಿ...
  ಚಂದದ ಬರಹ ಭಾಗ್ಯ...

  ReplyDelete
  Replies
  1. ಧನ್ಯವಾದ ಶ್ರೀವತ್ಸಾ ..

   ನಿಜ..ಮನದ ಮಾತ ಕೇಳ ಹೋಗಿ ಆಗೋ ಗೊಂದಲಗಳು ಒಮ್ಮೆ ಗೋಜಲನಿಸಿದ್ರೂ ಆಮೇಲೊಮ್ಮೆ ಕತ್ತಲ ಭಾವಗಳ ಚಂದದಿ ಅನಾವರಣಗೊಳಿಸುತ್ತೆ.
   ಬದುಕ ಪೂರ್ತಿ ಗೊಂದಲವಾಗೇ ಉಳಿಯಬೇಕಿದ್ದ ಭಾವವೊಂದ ತೀರಾ ಸಲೀಸಾಗಿ ಬಗೆಹರಿಸಿ ಬಿಡುತ್ತೆ .

   ಅಂದ ಹಾಗೆ ಸ್ನೇಹ ,ಪ್ರೇಮದ ವ್ಯಾಖ್ಯಾನವ ಚಂದದಿ ಕಟ್ಟಿಕೊಟ್ಟಿದ್ದೀಯ .
   ಹತ್ತಿರವಾಯ್ತೀ ಪ್ರತಿಕ್ರಿಯೆ.

   ಭಾವಗಳ ಸಂತೆಯಲ್ಲಿ ಮನದ ಭಾವಗಳ ಜೊತೆ ಮತ್ತೆ ಸಿಕ್ತೀನಿ

   Delete
 3. ನಮ್ಮ ದುಃಖ.. ನಮ್ಮ ಬೇಸರಗಳಿಗೆ ಯಾವುದೋ ಒಂದು ಕ್ಷಣದಲ್ಲಿ
  ನಮಗೇ ಅರಿಯದೇ ಯಾವುದೋ ಹಸ್ತ ಸಾಂತ್ವನ ನೀಡಬಹುದು...
  ನಮ್ಮ ಯಾವ ದುಃಖಕ್ಕೆ ಯಾರು ಭಾಗಿಯಾಗುತ್ತಾರೋ.... ಆದರೆ..
  ನಾವು ಅದನ್ನು ಉಮ್ಮಳಿಸಿಕೊಂಡ ಕ್ಷಣದಲ್ಲಿ ನಮಗೆ ಸಿಗೋ ಒಂದು ಪುಟ್ಟ ಸಾಂತ್ವನ ಕೂಡಾ ನಮ್ಮನ್ನು
  ತುಂಬಾ ಹಾಯ್ ಸ್ಥಿತಿಗೆ.. ತುಂಬಾ ಆತ್ಮೀಯ ಸ್ಥಿತಿಗೆ ಒಯ್ದುಬಿಡುತ್ತದೆ.
  ಅಂಥ ಪರಿಸ್ಥಿತಿಯಲ್ಲಿ ಸಾಂತ್ವನ ನೀಡಿದವರ ಬಗ್ಗೆ ಮನಸ್ಸು ಮೃದುವಾಗುವುದು ಸಹಜ...
  ನಮ್ಮ ಮನಸ್ಸು ಇನ್ನೂ ಅದರ trance ನಲ್ಲಿರುವಾಗಲೇ ಭಾವಗಳ ತಾಕಲಾಟಗಳು ಮನಸ್ಸಿಗೆ ಸುತ್ತಿಕೊಳ್ಳೋದು.. ದಿನಕಳೆದಂತೆ ಮನಸ್ಸು ಗಾಳಿಸಿ ಗಾಳಿಸಿ ಗಾಳಿಸಿ ಕೊನೆಗೊಮ್ಮೆ ಉಳಿಯುವ
  ಭಾವದಲ್ಲಿನ ಸತ್ವ.. ಸಕಾರವಾಗಿದೆಯೋ ನಕಾರವಾಗಿದೆಯೋ ಅನ್ನುವುದು ಮುಂದಿನ ನಮ್ಮ ಪರಿಸ್ಥಿತಿಯಾಗಿರುತ್ತದೆ...
  ಅರ್ಥೈಸಿಕೊಳ್ಳುವಿಕೆಯಲ್ಲಿನ ವ್ಯತ್ಯಾಸಗಳೂ ಕೂಡಾ ಅವಲಂಬಿತವಾಗಿರಬಹುದು...
  ಆಗಿನ ಪರಿಸ್ಥಿತಿಗೆ ಈಗ ಪದೇ ಪದೇ sorry ಯಾಗುವುದರಲ್ಲಿ ಅರ್ಥವಿಲ್ಲ...
  ಬೆನ್ನು ಮಾಡಿ ನಡೆದಾಗಿದೆ.. ನಡೆವ ದಾರಿ ಹಸನಾಗಿರಲಿ.......

  ReplyDelete
  Replies
  1. ರಾಘವ್ ಜಿ ,
   ತುಂಬಾ ದಿನಗಳ ನಂತ್ರ ಮತ್ತೆ ನಿರುಪಾಯಕ್ಕೆ ಬಂದ್ರಿ ...
   ಸರಣಿ ಭಾವಗಳ ಓದೋದು ಬಾಕಿ ಇದೆ ನಿಮ್ಮದಿನ್ನೂ :)

   ತುಂಬಾ ಮನ ತಟ್ಟೋ ತರ ,ತೀರಾ ಆಪ್ತವಾಗೋ ಅಷ್ಟು ಭಾವಗಳ ಅರ್ಥ ಮಾಡಿಕೊಳ್ಳೋಕೆ ನಿಮ್ಮಿಂದ ಮಾತ್ರ ಸಾಧ್ಯವೇನೋ ಅಂತ ಮತ್ತೊಮ್ಮೆ ತೋರಿಸಿದ್ರಿ .

   ಹತ್ತಿರ ಅನ್ನಿಸ್ತು ನಿಮ್ಮೀ ಪ್ರತಿಕ್ರಿಯೆ .

   ಇನ್ನೊಂದು ಭಾವದಲ್ಲಿ ನಾ ಮತ್ತೆ ಜೊತೆಯಾಗ್ತೀನಿ.

   Delete
 4. Eshtu chanda baradyale tangi... It made me read the romantics..LOL

  ReplyDelete
 5. ಮಹಾಭಾರತದಲ್ಲಿ ಇಲ್ಲದ್ದು ಪ್ರಪಂಚದಲ್ಲಿ ಇಲ್ಲ ಎನ್ನುವ ಮಾತಿದೆ. ಹಾಗೆಯೇ ಪ್ರೇಮದ ನಿವೇದನೆ, ಪ್ರೀತಿಯ ಪರಿಭಾಷೆ ಅದಕ್ಕೆ ಸುತ್ತ ಸುತ್ತುವ ಮಾತುಗಳು, ಹರಿವ ಪ್ರೀತಿಯ ಮಮಕಾರ ಎಲ್ಲವು ಗಂಗೆ ತುಂಗೆಯರ ಹಾಗೆ ಸದಾ ಹರಿಯುತ್ತಲೇ ಇರುತ್ತದೆ. ನೀ ಬರೆಯುವ ಪದಗಳ ಜಾದೂಗಳನ್ನು ನೋಡಿದಾಗ ಅಬ್ಬಾ ಎಷ್ಟು ರೀತಿಯಲ್ಲಿ ಬರೆಯಬಹುದು ಅಂತ ನನಗೆ ನಾನೇ ಆಶ್ಚರ್ಯ ಪಡುವಂತೆ ಆಗುತ್ತದೆ. ಚಿಕ್ಕ ವಯಸ್ಸಿನಲ್ಲೇ ಅದ್ಭುತ ಬರಹಗಾರ್ತಿ ನಿನ್ನ ಮನದಾಳದಲ್ಲಿ ಕೂತಿದ್ದಾಳೆ ಪೋಷಿಸು ಸಲಹು. ಬೆಳೆಯುತ್ತಾಳೆ. ಸೂಪರ್ ಬಿಪಿ ಸಕತ್ ಲೇಖನ ಒನ್ಸ್ ಅಗೈನ್

  ReplyDelete
 6. ಶ್ರೀಕಾಂತಣ್ಣ ...
  ತುಂಬಾ ದಿನದ ನಂತರ ನಿರುಪಾಯಿಯ ಭಾವವ ನೀವೋದ ಬಂದಿದ್ದು ತುಂಬಾ ಖುಶಿ ಆಯ್ತು..
  ಈ ಪ್ರೀತಿ ಪ್ರೋತ್ಸಾಹವೇ ಏನೋ ಹೀಗೊಂದಿಷ್ಟು ಭಾವಗಳ ನಿಮ್ಮೆದುರು ಇಡೋಕೆ ಕಾರಣವಾಗಿದ್ದು :)
  ತಪ್ಪು ಒಪ್ಪುಗಳ ಹೀಗೇ ತಿಳಿಸಿಕೊಡ್ತೀರಂತ ಗೊತ್ತು ..ಆದ್ರೂ ಹೇಳ್ತೀನಿ ...ಕಿವಿ ಹಿಂಡಿ ಹೇಳಿಕೊಡ್ತಿರಿ.

  ಇನ್ನೊಂದು ಭಾವದಲ್ಲಿ ಮತ್ತೆ ಜೊತೆಯಾಗ್ತೀನಿ

  ReplyDelete