Friday, March 14, 2014

ಗುಳಿಕೆನ್ನೆ ಹುಡುಗಂಗೆ

ಜಾತ್ರೆಯ ಜನ ಜಂಗುಳಿಯ ಮಧ್ಯ ಕೈ ತಾಕಿ ಹೋದ ಹುಡುಗ ನೀನು.ಮುಖ ನೋಡಿ ಗುರಾಯಿಸಬಂದ್ರೆ ನಾ ನಿಂಗೆ ಮೊದಲೇ ಪರಿಚಯವಿದ್ದೆ ಅನ್ನೋ ತರಹ ಸಾರಿ ಕಣೋ ಅಂತಂದು ಕಣ್ಣು ಮಿಟುಕಿಸಿ ಹೋಗಿಬಿಟ್ಟಿದ್ದೆ!ಯಾರಿವನು ಅಂದುಕೊಂಡು ಮಧ್ಯ ದಾರಿಯಲ್ಲಿ ನಿಂತೇ ಯೋಚಿಸುತ್ತಿದ್ದ ನನ್ನನ್ನ ತೀರಾ ಅನ್ನೋ ಅಷ್ಟು ಕಾಡಿಸಿದ್ದ ಗೆಳತಿಯರು ಪರಿಚಿತನಲ್ಲದ ನಿನ್ನನ್ನಾಗಲೇ ನನ್ನ ಹುಡುಗನ್ನಾಗಿಸಿಬಿಟ್ಟಿದ್ದರು!!
ನಾನವತ್ತು ನೋಡಿದ್ದು ನಿನ್ನ ಗುಳಿಕೆನ್ನೆ ಮಾತ್ರ. ನನ್ನ ಗೆಳತಿಯರೂ ನಿನ್ನ ಕರೆಯೋದು ಗುಳಿಕೆನ್ನೆ ಹುಡುಗ ಅಂತಲೇ.

ನಂತರದ ದಿನಗಳಲ್ಲಿ ನಾ ಪಾನಿಪುರಿ ತಿನ್ನೋವಾಗ,ಇಲ್ಲದ ತಲೆಹರಟೆ ಮಾಡಿಕೊಂಡು ರಸ್ತೆ ಮಧ್ಯದಲ್ಲೇ ಜಗಳ ಆಡುತ್ತಾ ನಿಲ್ಲೋವಾಗಲೆಲ್ಲಾ ದೂರದಿಂದಲೇ ನನ್ನ ನೋಡುತ್ತಾ ನಗುತ್ತಿದ್ದ ನಿನ್ನ ನಾ ಯಾವತ್ತೋ ಗುರುತಿಸಿದ್ದೆ ಬಿಡು.ಅವತ್ಯಾವತ್ತೋ ಸುರಿಯೋ ಮಳೆಯಲ್ಲಿ ರಸ್ತೆಬದಿಯಲ್ಲಿ ನಿಂತು ಜೋಳ ತಿನ್ನುತ್ತಿದ್ದ ನನ್ನ ಪಕ್ಕ ಬಂದು ಮಧ್ಯ ದಾರಿಯಲ್ಲಿ ಸ್ಕೂಟಿ ನಿಲ್ಲಿಸಿ ಬಂದಿದ್ದೀಯ ಅಂತ ಹೇಳಿದಾಗ ಇರಿ ತಿಂದು ಆಮೇಲೆ ನೋಡ್ತೀನಿ ಅಂತ ಕಣ್ಣು ಮಿಟುಕಿಸಿದ್ದ ನಂಗೆ ಕೋತಿ ಕೀ ಕೊಡು ಅಂತ ತೆಗೆದುಕೊಂಡು ಹೋಗಿದ್ದೆಯಲ್ಲಾ..
ಇವತ್ತೂ ಅಂತದ್ದೇ ಮಳೆ ಕಣೋ ಇಲ್ಲಿ..ಮಳೆಯಲ್ಲಿ ಜೋಳದ ಜೊತೆ ನಿನ್ನ ಮೊದಲ ಭೇಟಿಯ ಆ ದಿನ ನೆನಪಾಯ್ತು ಅಂತ ಮೇಸೇಜ್ ಮಾಡಿದ್ರೆ ನಿಂತಿರೇ ಹುಡುಗಿ ಇನ್ನೊಂದೈದು ತಾಸು ಹಾಗೆಯೇ ಮತ್ತೆ ನಿನ್ನ ಸ್ಕೂಟಿ ಬದಿಗಿರಿಸಿ ಹೋಗ್ತೀನಿ.ಯಾಕೋ ಮತ್ತದೇ ಬಜಾರಿ ಹುಡುಗಿಯನ್ನ ನೋಡೋ ಆಸೆಯಾಗಿದೆಅಂತ ರೀಪ್ಲೈ ಮಾಡ್ತೀಯಾ ಕೋತಿ.
ಪೂರ್ತಿಯಾಗಿ ನಾ ತೇಲಿಹೋದೆ ಆ ದಿನಗಳಲ್ಲಿ....
ಜಗಳದಿಂದಲೇ ಶುರುವಾಗಿತ್ತು ಅವತ್ತು ನನ್ನ ನಿನ್ನ ಗೆಳೆತನ...ಪಾರ್ಕ್ ಮಾಡಿದ್ದ ನನ್ನ ಸ್ಕೂಟಿಯ ಮೇಲೆ ಕುಳಿತುಕೊಂಡು ನೀನು ನಿನ್ನ ಗೆಳೆಯರು ಹರುಟುತ್ತಿದ್ದುದ್ದರ ನೋಡಿ ತಡೆಯಲಾರದ ಸಿಟ್ಟಲ್ಲಿ ಬೈದಿದ್ದೆ ನನ್ನ ಸ್ಕೂಟಿನೇ ಬೇಕಾ ನಿಮ್ಮಗಳಿಗೆ ಅಂತಂದು.ಜಗಳಕ್ಕೆ ನಿಂತಿದ್ದ ನಿನ್ನ ಸ್ನೇಹಿತರನ್ನ ನೀ ಸಮಾಧಾನಿಸಿ ಸಾರಿ ಅಂತಂದು ಎದ್ದು ಹೋದೆಯಲ್ವಾ,ಅಂದುಕೊಂಡೆ ಪಾಪ ಹುಡುಗ ಅಂತಂದು.

ಆಮೇಲಿನ ದಿನಗಳ ಮಾತೆಲ್ಲಾ ನಡೆದಿದ್ದು ಕ್ಯಾಂಟೀನ್ ನಲ್ಲಿ...ಆಮೇಲೂ ಎದುರು ಫೋನ್ ನಂಬರ್ ಕೇಳದೆ ನಿನ್ನ ನಂಬರ್ ಬರೆದು ನನ್ನ ಸ್ಕೂಟಿಯ ಮೇಲೆ ಆ ಚೀಟಿ ಇಟ್ಟು ಹೋಗಿದ್ದೆಯಲ್ಲಾ ..ನಾನಂದ್ರೆ ನಿಂಗೆ ನಿಜಕ್ಕೂ ಅಷ್ಟು ಭಯವಿತ್ತೇನೋ ಅಂತ ಕೇಳಿದ್ರೆ ಇವತ್ತಿಗೂ ಬರಿಯ ಭಯವಲ್ಲ ಕಣೇ ಅಲ್ಲೆ ಎಲ್ಲರೆದುರು ಜಗಳಕ್ಕೆ ನಿಂತುಬಿಡೋ ಬಜಾರಿ ನೀ ಅನ್ನೋ ಮುಜುಗರ ಅಷ್ಟೇ ಅಂತಂದು ಕಣ್ಣು ಮಿಟುಕಿಸಿ ಗುದ್ದಿಸಿಕೊಳ್ತೀಯಲ್ಲಾ..

ಯಾಕೋ ಆ ಸ್ಕೂಟಿ...ಆ ಮಳೆ ...ಆ ಜಗಳ, ಮುನಿಸುಗಳು ಮನದೊಳಗೇ ನಗುತ್ತಿವೆ ಇವತ್ತು.

ಪ್ರೀತಿ ಯಾವಾಗ ಹುಟ್ಟಿದ್ದೋ ಗೊತ್ತಿಲ್ಲ ನಂಗಿನ್ನೂ..ಆದ್ರೂ ಒಬ್ಬರಿಗೊಬ್ಬರು ಪ್ರೀತಿಯ ನಿವೇದನೆ ಮಾಡಿಕೊಳ್ಳದೇ ಇಬ್ಬರಿಗೂ ಪ್ರೀತಿ ಖಾತ್ರಿಯಾಗಿದ್ದ ದಿನ ಬದುಕ ತುಂಬಾ ಖುಷಿಗಳು ಮಾತ್ರ ಇರೋ ಭಾವ ಅವತ್ತಿಂದ ಇವತ್ತಿನ ತನಕ.

ನೀ ನಂಗೆ ಗೆಳತಿಯಾಗೋಕೂ ಮುಂಚೆ ನನ್ನ ಪ್ರೀತಿಯಾಗಿಬಿಟ್ಟಿದ್ದೆ ಅಂತ ನೀ ಭಾವುಕನಾಗಿ ಪ್ರತಿ ಬಾರಿ ಹೇಳೋವಾಗ ನಿನ್ನ ತಲೆ ಸವರಿ ಕಣ್ಣಂಚ ಒದ್ದೆಯಾಗಿಸೋದ ಬಿಟ್ಟು ನಂಗೇನೂ ಗೊತ್ತಿಲ್ಲ...

ಎಲ್ಲೇ ಹೋದ್ಲು ನನ್ನಾ ಜಗಳಗಂಟಿ ಗೆಳತಿ ಅಂತ ನೀ ಕೇಳೋವಾಗಲೆಲ್ಲಾ ನಾನೂ ಹುಡುಕ್ತೀನಿ ಆ ಹಳೆಯ ಹುಡುಗಿಯನ್ನ...
ಬಾರೋ ಲಾಂಗ್ ಡ್ರೈವ್ ಹೋಗೋಣ ಅಂದಿದ್ದ ಆ ದಿನ ನೀ ಬೇಸರಿಸಿದ್ದೆ ನೋಡು ಪಕ್ಕಾ ಹುಡುಗರ ತರಹ ಇರ್ತೀಯ ನೀ...ನಂಗೆ ನನ್ ಹುಡುಗಿ ಹುಡುಗಿಯ ತರಹ ಇರ್ಬೇಕು ಅಂತ...ಮರು ದಿನದಿಂದ ನಂಗೆ ಗೊತ್ತಿಲ್ಲದೇ ನನ್ನಲ್ಲಿಷ್ಟು ಬದಲಾವಣೆಗಳು..ಹಣೆಗೆ ಬೊಟ್ಟಿಡದ ಹುಡುಗಿ ಆಮೇಲೊಂದು ದಿನವೂ ಖಾಲಿ ಹಣೆಯಲ್ಲಿರಲಿಲ್ಲ..ನಿಂಗಾಗೆ ನಾ ಬಳೆ ತಗೊಂಡ ನೆನಪು! ನಿನ್ನ ಕಣ್ಣಲ್ಲಿನ ಅವತ್ತಿನ ಖುಷಿ ಇವತ್ತೂ ನನ್ನೆದೆಯಲ್ಲಿ ಜೋಪಾನವಾಗಿದೆ..

ಆಮೇಲೆ ನಾನ್ಯಾವತ್ತೂ ಲಾಂಗ್ ಡ್ರೈವ್ ,ವೋಡ್ಕಾ, ಅಂತೆಲ್ಲಾ ತರ್ಲೆ ಮಾಡಿದ್ದ ನೆನಪಿಲ್ಲ....ಆಮೇಲೆ ನಿನ್ನ ಮನಕ್ಕೆ ನಾ ’ಸ್ಪಟಿಕ’ಳಾಗಿ ಬಿಟ್ಟಿದ್ದೆ ಅಲ್ವಾ...
ಅವತ್ತಿಂದ ನಂಗೆ ನನ್ನ ನಿಜದ ಹೆಸರು ಮರೆತೇ ಹೋಗಿದೆ ಅಕ್ಷರಶಃ...

ಅವತ್ತು ನೀನಿತ್ತ ಕಾಲ್ಗೆಜ್ಜೆ ,ನವಿಲುಗರಿಯ ಮತ್ತೆ ಸವರಬೇಕನಿಸ್ತಿದೆ ನಂಗಿವತ್ತು...

ಇದೆಲ್ಲಾ ಕನಸೋ ನನಸೋ ಅನ್ನೋ ಗೊಂದಲ ನಂಗಿನ್ನು...ವರ್ಷಗಳ ಹಿಂದೆ ತರ್ಲೆ ಮಾಡ್ತಾನೆ ನನ್ನವನಾಗಿ ಹೋಗಿದ್ದ ಹುಡುಗ ಇವತ್ತು ಕನಸುಗಳಿಗೆಲ್ಲ ಜೊತೆಯಾಗಿ ,ತರ್ಲೆಗಳನ್ನೆಲ್ಲಾ ಸಹಿಸಿಕೊಂಡು, ನಂಗೆ ನೀನೇ ಬೇಕೆಂದು ಹಠ ಹಿಡಿದು ಕೂತು ಕೊನೆಗೆ ಈ ಬಜಾರಿ ಹುಡುಗಿಯ ನನಸ ರಾಜ್ಯದ ರಾಜನಾಗೋಕೆ ಸಿದ್ಧನಾಗಿರೋ ಮುದ್ದು ಗೆಳೆಯ ಇನ್ನೊಂದು ವಾರಕ್ಕೆ ನೀ ನನ್ನ ಬಾಳಸಂಗಾತಿಯಾಗ್ತೀಯಲ್ಲೊ...ಆತ್ಮ ಸಂಗಾತಿಯಾಗಿ

ಈ ಕನಸಿನೂರಿನ ಚಂದಮನ ಅಂಗಳದಲ್ಲಿ ಕೂತು ನಿನ್ನೊಟ್ಟಿಗೆ ಮಾತಾಡಬೇಕಿದೆ ತುಸು ಜಾಸ್ತಿಯೇ...

ಸಂಜೆ ಸಾಯೋ ಹೊತ್ತಲ್ಲಿ ಕಡಲ ಅಲೆಗಳಿಗೆ ಪಾದ ತೋಯಿಸುತ್ತಾ ನಿನ್ನ ಕಿರುಬೆರಳ ಹಿಡಿದು ನಡೆಯೋ ಆಸೆ ನಂಗೆ...ಮನ ಗರಿ ಬಿಚ್ಚಿ ನಲಿಯೋವಾಗ ಗೆಜ್ಜೆ ಕಟ್ಟಿ ಕುಣಿಯೋ ಆಸೆ...ತನ್ಮಯಳಾಗಿ ನಿನ್ನ ಕಣ್ತುಂಬಿಕೊಳ್ಳೋ ಬಯಕೆ..ಹೀಗೇ ಹತ್ತಾರು ಆಸೆ ನೂರೆಂಟು ಕನಸುಗಳ ನಿನ್ನಲ್ಲಿ ಜೋಪಾನ ಮಾಡೋ ಹಂಬಲ ನಂದು.

ಸಮುದ್ರದಂಚಿನ ನಮ್ಮದೇ ಪುಟ್ಟ ಅರಮನೆಯಲ್ಲಿ ನಿನ್ನೆಲ್ಲಾ ಕನಸುಗಳ ಜೊತೆ ನಿನ್ನ ಕೈ ಹಿಡಿದು ಬದುಕ ಪೂರ್ತಿ ನಲಿವ ನಿನ್ನದೇ ಹುದುಗಿಯ ಭಾವವಿದು ಗೆಳೆಯ.

ನಿನ್ನಾ ಗುಳಿಕೆನ್ನೆಯ ಸವರೋಕಂತಾನೇ ಕಾಯ್ತಿರೋ, ಮತ್ತದೇ ಮಳೆಯಲ್ಲಿ ನೆನಪುಗಳ ಜೊತೆ ಕನಸುಗಳ ಕೈ ಹಿಡಿದು ಹೆಜ್ಜೆ ಹಾಕೋಕೆ ನಿಂತಿರೋ ನಿನ್ನದೇ ಹುಡುಗಿ..

ಮತ್ತೆ ಮಳೆಯಾಗಿದೆ ನನ್ನೆದೆಯ ಬೀದಿಯಲ್ಲಿ..ಮಣ್ಣ ಘಮದಲ್ಲಿ ನಿನ್ನನರಸಿ..
ನಿನ್ನದೇ ಜಗಳಗಂಟಿ ಹುಡುಗಿ.
ಸ್ಪಟಿಕ

28 comments:

  1. ಚೆನ್ನಾಗಿ ಬರದ್ದೆ ಪುಟ್ಟಿ.
    ಒಂದೈದು ತಾಸು ನಿಂತಿರೋ ಮಳೇಲಿ. ನಿನ್ನ ಸ್ಕೂಟಿ ನಿಲ್ಲಿಸಿ ಬರ್ತೇನೆ ಬಜಾರಿ ಹುಡ್ಗಿ ಅಂದಿದ್ದು ನಿಂಗೇನಾ ಅಂತೊಂದು ಸಲ ಡೌಟು ಬಂತು ! ಲಾಂಗ್ ಡ್ರೈವು, ವೋಡ್ಕಾದಿಂದ ಬರಿ ಹಣೆಗೆ ಕುಂಕುಮವಿಲ್ದೇ ಇರೋ ಪರಿ ಬದಲಾಗಿದ್ದೊಂತರ ಆಶ್ಚರ್ಯ. ಪ್ರೀತಿಯಲ್ಲಿ ಏನೂ ಆಗಬಲ್ಲದು ,ಎಲ್ಲವೂ ಆಗಬಲ್ಲದು ಅನ್ನೋದಕ್ಕೊಂದು ಉದಾಹರಣೆ.

    ಸ್ಪಟಿಕ ಸಖತ್ತಾದ ಹೆಸ್ರು :-) ಅದೇ ಆ ಗುಳಿಕೆನ್ನೆ ಹುಡ್ಗಂಗೂ ಒಂದು ಹೆಸರಿಟ್ಟಿದ್ರೆ ಚೆನ್ನಾಗಿರ್ತೀತ್ತೇನೋ ;-)
    ಪಾರ್ಕಲ್ಲಿ ತನ್ನ ಸ್ಕೂಟಿ ಮೇಲೆ ಕೂತಿದ್ದ ಗೆಳೆಯರನ್ನೆಬ್ಬಿಸಿ ಸಾರಿ ಕೇಳಿದ ಮಾತ್ರಕ್ಕೆ ಅವ ಪಾಪದ ಹುಡ್ಗ ಅಂತಂದುಕೊಂಡ ಇವಳೂ ಏನು ಕಮ್ಮಿ ಪಾಪದ ಹುಡ್ಗಿ ಅಲ್ಲ ! ನವಿಲುಗೆರೆ, ಕಾಲುಗೆಜ್ಜೆಯ ಸ್ಪರ್ಶ, ಕಡಲತೀರದಲ್ಲಿ ಕಿರು ಬೆರಳ ಹಿಡಿದು ನಡೆಯೋ ಕಲ್ಪನೆ ಚೆನ್ನಾಗಿ ಬಯಂದು. ಗುಳ್ಳೆಯುಬಿಸೋ ಪುಟ್ಟಿಯ ಗುಳ್ಳೆಗಳಲ್ಲಿ ನೂರೆಂಟು ಪ್ರತಿಬಿಂಭಗಳ, ಕನಸುಗಳ ಕಂಡಂತ ಅನುಭವ ಓದ್ತಾ ಓದ್ತಾ. ಮುಂದುವರಿಲಿ..

    ReplyDelete
    Replies
    1. ಪ್ರಶಸ್ತಿ,
      ತುಂಬಾ ದಿನದ ನಂತರ ಭಾವವೊಂದ ಓದೋಕೆ ಬಂದ್ರಿ ನಿರುಪಾಯದಲ್ಲಿ(ಇಷ್ಟು ದಿನ ನಿರುಪಾಯ ಖಾಲಿ ಇತ್ತು ಅನ್ಬೇಡಿ ಮತ್ತೆ )ಖುಷಿ ಆಯ್ತು.
      ನಿಜ...ಜಾತ್ರೆಯಲ್ಲಿ ಪೀಪಿ ಕೊಡಿಸ್ತೀನಿ ಅಂದಾಗ್ಲೇ ಅಂದುಕೊಂಡೆ ನೀವು ನನ್ನ ತುಂಬಾ ಚಿಕ್ಕೋಳು ಅಂದುಕೊಂಡಿದೀರ ಅಂತಾ ;)
      ಸ್ಪಟಿಕಾಳ ಭಾವಲಹರಿಯ ನೀವಿಷ್ಟಪಟ್ಟಿದ್ದಕ್ಕೆ ಧನ್ಯವಾದ.
      ಅದು ನಾನೇನಾ ಅನ್ನೋ ಡೌಟು ಒಂದೇ ಸಲ ಬಂದಿದ್ದಕ್ಕೊಂದು ಧನ್ಯವಾದ :ಫ್

      ಭಾವಗಳ ತೇರಲ್ಲಿ ಮತ್ತೆ ಜೊತೆಯಾಗ್ತೀನಿ

      Delete
  2. ಭಾವದ ಮಳೆಯಲ್ಲಿ ನಾವೂ ಮಿಂದೆದ್ದೆವು...ಪ್ರೀತಿಯ ಜೋಳವನ್ನೂ ತಿಂದೆವು.....ವಂದನೆಗಳು ಈ ಸುಂದರ,ಮುಗ್ಧ ಪರಿಸರವನ್ನು ಕಟ್ಟಿಕೊಟ್ಟಿದ್ದಕ್ಕೆ...


    ನನಗೆ ತಿಳಿದಂತೆ ಇಲ್ಲಿ ವಾಚಕಿಯ ಸ್ಥಿತಿಯಲ್ಲಿ ಒಂದಿಷ್ಟು ಶೀಘ್ರ ಬದಲಾವಣೆ ಇದೆ. ಶುರುವಿನಿಂದ ಒಂದೇ ಹದದಲ್ಲಿ ಚಲಿಸಿ ಮಧ್ಯದಲ್ಲಿ ಬೇಗಬೇಗನೇ ಬದಲಾಗುತ್ತಾ ಸಾಗುತ್ತದೆ..ಅವಳ ವ್ಯಕ್ತಿತ್ವದ ಹೊಸ ಹೊಸ ಎಳೆಗಳನ್ನು ಹೇಳುತ್ತಾ ಹೋಗುತ್ತದೆ...ಈ ಥರಹದ Transition ಒಂದಿಷ್ಟು ಹೊಸದನ್ನು ಕಲ್ಪಿಸಲೂ ಬಹುದು,ಓಘವನ್ನು ಅಂದಗೆಡಿಸಲೂಬಹುದು..ಇವುಗಳ ಬಗ್ಗೆ ನಿಗಾ ಇರಲಿ...


    ಹಾಂ ಖಂಡಿತ ಇಲ್ಲಿನ ಈಗಷ್ಟೇ ಅರಳುತ್ತಿರುವ ಪ್ರೀತಿಯ ತಾಜಾತನ ನಮ್ಮನ್ನು ಮತ್ತೆ ಓದಿಸಿಕೊಳ್ಳುತ್ತದೆ...
    ಧನ್ಯವಾದಗಳು...ಬರೆಯುತ್ತಿರಿ...
    ನಮಸ್ತೆ :)

    ReplyDelete
    Replies
    1. ನಮಸ್ತೆ ಚಿನ್ಮಯಣ್ಣಾ,
      ಹಮ್ ನೀವಂದಂತೆಯೇ ಬದಲಾವಣೆ ಶೀಘ್ರವಾಯ್ತೇನೋ ಆದ್ರೆ ಭಾವಕ್ಕೆಲ್ಲೂ ಧಕ್ಕೆಯಿಲ್ಲ ಅಂದುಕೊಳ್ತೀನಿ ನಾನು :)

      ತಾಜಾ ಪ್ರೀತಿಯ ಭಾವವೊಂದ ಇಷ್ಟ ಪಟ್ಟು ತಪ್ಪು ಒಪ್ಪುಗಳ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು..
      ಜಾತ್ರೆಯಲ್ಲಂತೂ ಸಿಗೋಕೆ ಆಗಿಲ್ಲ..ಭಾವಗಳ ತೇರಲ್ಲಿ ಆಗಾಗ ಸಿಕ್ತಿರ್ತೀನಿ..

      Delete
  3. ಮನದ ಹಕ್ಕಿ ಗರಿ ಬಿಚ್ಚಿ ಹಾರಿದಾಗ ಅದರ ಸೀಮೆಗೆ ಎಣೆಯೇ ಇರೋಲ್ಲ.. ಗುರಿ ಸೇರುತ್ತಾ ಗರಿ ಗೆದರುತ್ತಾ ಹಾರುತ್ತಾ ಹೋದ ಹಕ್ಕಿಗೆ ತನ್ನ ಜೊತೆಯಲ್ಲಿ ಹಾರುತ್ತಿರುವ ಇನ್ನೊಂದು ಹಕ್ಕಿ ಸಿಕ್ಕಾಗ.. ಆಹಾ ಅದಕ್ಕಿಂತ ಮಧುರ ಭಾವನ ಲೋಕ ಇನ್ನೊಂದು ಇರಲು ಸಾಧ್ಯವೇ ಖಂಡಿತ ಇಲ್ಲಾ..

    ಚಿತ್ರದುರ್ಗವನ್ನು ಏಳು ಸುತ್ತಿನ ಕೋಟೆ ಎನ್ನುತ್ತಾರೆ.. ಒಳಗೊಳಗೇ ಹೋದ ಹಾಗೆಲ್ಲ ಇನ್ನೊಂದು ವಿಸ್ಮಯ ಲೋಕ ತೆರೆದು ಕೊಳ್ಳುತ್ತಾ ಹೋಗುತ್ತದೆ.. ನಿನ್ನ ಬರಹದ ಹೂರಣವೂ ಹಾಗೆಯೇ ಮೆಲ್ಲುತ್ತಾ ಹೋದ ಹಾಗೆಲ್ಲ ಇನ್ನೊಂದು ಸವಿರುಚಿಯ ಸವಿ ನಾಲಿಗೆಗೆ ಅಡರಿಕೊಳ್ಳುತ್ತಾ ಹೋಗುತ್ತದೆ.

    ನಿನ್ನ ಬರಹವನ್ನು ಓದುತ್ತಾ ಓದುತ್ತಾ ಹೋದ ಹಾಗೆ.. ಯಾಕೆ ನಮಗೆ ಈ ರೀತಿಯಲ್ಲಿ ಬರೆಯಲು ಆಗೋಲ್ಲ ಅಂತ ಕೂತಾಗಾ.. ಮನಸ್ಸು ಅದಕ್ಕೆ ಉತ್ತರ ನನ್ನಲ್ಲಿಲ್ಲ ಎಂದು ನಿರೂಪಾಯವಾಗಿಡುತ್ತದೆ.

    ಸೂಪರ್ ಮಗಳೇ ಇಷ್ಟವಾಯಿತು.. ಹುಡುಗಿಯ ಪ್ರೀತಿಯ ಝರಿ ಹುಡುಗನ ಮಮಕಾರದ.. ಮಮತೆಯ ಶರಧಿ ಸೇರಿದ ಬಗೆ.. ಸೂಪರ್ ಸೂಪರ್

    ReplyDelete
    Replies
    1. ಶ್ರೀಕಾಂತಣ್ಣಾ...
      ನಿರುಪಾಯಿಯಲ್ಲೊಂದು ಹೊಸ ಖುಷಿ ನೀವಿತ್ತ ಈ ಭಾವ ಬಂಧದ ಹೆಸರಿಗೆ :)
      ಥಾಂಕ್ಸ್ ಫಾರ್ ದಾಟ್ :)
      ಬರೆದ ಭಾವಗಳನ್ನೆಲ್ಲಾ ಪ್ರೀತಿಯಿಂದಲೇ ಓದಿ ಬೆನ್ನು ತಟ್ಟೋ ನಿಮ್ಮ ಭಾವ ಪ್ರೀತಿಗೆ ಮಾತಿಲ್ಲ ನನ್ನಲ್ಲಿ..
      ಖುಷಿಯಾಯ್ತು ತುಂಬಾ ದಿನಗಳ ನಂತರ ನಿರುಪಾಯದಲ್ಲಿ ನಿಮ್ಮ ನೋಡಿ.
      ಇನ್ನೊಂದು ಭಾವದ ಜೊತೆ ನಾ ಮತ್ತೆ ಜೊತೆಯಾಗ್ತೀನಿ

      Delete
  4. ಭಾವಗಳು ಉಕ್ಕೋ ಘಳಿಗೆ ಮನದ ಆಳದಲ್ಲಿ ಮೂಡೋ ಕೆಲವು
    ಸವಿನಯಗಳಿಗೆ ಎಂತಹ ಎಲ್ಲೆ ಕಟ್ಟಿಯೇವು....

    ಮುದ್ದು ಮುದ್ದು ಭಾವಗಳು ಎಲ್ಲಾ......
    ತುಂಬಾ ಚನ್ನಾಗಿದೆ......

    ReplyDelete
    Replies
    1. ರಾಘವಣ್ಣಾ..
      ಪ್ರೀತಿಯ ಎಲ್ಲಾ ಭಾವಗಳನ್ನೂ ಮುದ್ದು ಮುದ್ದು ಭಾವ ಅಂತಾನೇ ಕಾಲೆಳೀತಾ,ಹುಚ್ಚುಚ್ಚು ಭಾವಗಳಿವು ಅಂದ್ರೆ ಭಾವಗಳ್ಯಾವುದೂ ಹುಚ್ಚಲ್ವೇ ಡುಮ್ಮಕ್ಕ ಅಂತಂದು ಮತ್ತೊಂದಿಷ್ಟು ಮಧುರ ಭಾವಗಳು ಮನದೊಳಗೆ ಹಾದು ಹೋಗೋತರ ಮಾಡಿಬಿಡ್ತೀರ ನೀವು...

      ಗುಳಿಕೆನ್ನೆಯ ಹುಡುಗ ನಿಮಗಿಷ್ಟವಾಗಿದ್ದು ಆಪ್ತವಾಯ್ತು..
      ಭಾವಗಳ ವಿನಿಮಯಕ್ಕೆ ನೀವು ಬರದಿದ್ರೂ ಕರೆಸಿಕೊಳ್ತೀನಿ.
      ನಮಸ್ತೆ

      Delete
  5. Replies
    1. ಧನ್ಯವಾದ ಸುಲತಕ್ಕಾ :)
      ಇನ್ನೊಂದು ಭಾವದಲ್ಲಿ ಮತ್ತೆ ಜೊತೆಯಾಗ್ತೀನಿ

      Delete
  6. ತುಂಬ ಆಪ್ತ ಸೈಲಿಯ ಬರಹ.
    ಶ್ರೀಮಾನ್ ಅವರು ಡೀಟೈಲಾಗಿ ಅಭಿಪ್ರಾಯ ದಾಖಲಿಸಿದ್ದಾರೆ.
    ಜಮಾನದಲ್ಲಿ ನನಗೂ ಕೆನ್ನೆಗುಳಿ ಬೀಳುತ್ತಿದ್ದ ನೆನಪು ಕಣ್ರೀ!
    :)

    ReplyDelete
    Replies
    1. ಥಾಂಕ್ಸ್ ಬದರಿ ಸರ್
      ಬರೆದ ಭಾವವೊಂದಕ್ಕೆ ಪ್ರೀತಿಯಿಂದ ಪ್ರೋತ್ಸಾಹ ನೀಡೋ ನಿಮಗೊಂದು ನಮನ..
      ಭಾವ ಇಷ್ಟವಾಗಿ ಆ ದಿನಗಳು ನೆನಪಾದ್ರೆ ಬರೆದಿದ್ದೂ ಸಾರ್ಥಕ

      Delete
  7. ಇಷ್ಟು ಬೇಗ ಸಮುದ್ರ ಕಿನಾರೆಲಿ ಕೈ ಬೆರಳು ಹಿಡಿದು ಸುತ್ತುವಾಸೆನಾ?!:)
    ಲಹರಿ ಚೆನ್ನಾಗಿದ್ದು ಪುಟ್ಟಿ.....

    ReplyDelete
    Replies
    1. ಹಾ ಹಾ ..ಕಡಲ ತೀರದ ವ್ಯಾಮೋಹ ತುಸು ಜಾಸ್ತಿಯೇ ಇದೆ ಜೀತೆಂದ್ರಣ್ಣಾ ..
      ಹಾಗಾಗಿ ನಿರುಪಾಯದಲ್ಲಿ ತುಸು ಜಾಸ್ತಿ ಅನಿಸೋ ಅಷ್ಟು ಕಡಲ ಭಾವಗಳು ಕಾಣಸಿಗುತ್ತೇನೋ :ಫ್
      ನಿರುಪಾಯದ ಲಹರಿಯ ಇಷ್ಟಪಟ್ಟಿದ್ದಕ್ಕೆ ಧನ್ಯವಾದ

      Delete
  8. This comment has been removed by the author.

    ReplyDelete
    Replies
    1. ನಮಸ್ತೆ,
      ನಿರುಪಾಯಕ್ಕೆ ಸ್ವಾಗತ..
      ಒಂದಿಷ್ಟು ಭಾವಗಳು ಭಾವಗಳ ತೇರಲ್ಲಿ ಸಿಗೋ ತನಕವೂ ಭಾವ ಬರಹಕ್ಕೇನೂ ಧಕ್ಕೆಯಾಗಲಾರದು..

      ಎಲ್ಲಾ ಕೆಲಸಗಳ ಬಿಟ್ಟು(ಬ್ಯುಸಿಲೈಫ್) ನಿರುಪಾಯದ ಭಾವವ ಓದಬಂದಿದ್ದು ಖುಷಿಯಾಯ್ತು

      Delete
  9. ಭಾಗ್ಯಾ,

    ಚಂದದ ಕಥೆ, ಸುಂದರ ಬರಹ. ಎಲ್ಲ ಬರಹಗಳೂ ಸ್ವಂತದ್ದೇನೋ ಎಂಬಷ್ಟು ಸಂಶಯ ಬರುವಷ್ಟು ಚೆನ್ನಾಗಿ ಬರೆಯುವವರಿಗೆ ಇಷ್ಟ ಆಯ್ತು ಅಂತ ಬಿಡಿಸಿ ಹೇಳಬೇಕೆ. ಆದರೂ, ತುಂಬಾ ಇಷ್ಟ ಆದ ಬರಹ, ಉಳಿದೆಲ್ಲದ್ದಕಿಂತಲೂ. (ಹಾಗೆಂದು ಉಳಿದ ಭಾವಗಳು/ಬರಹಗಳು ಚೆನ್ನಾಗಿಲ್ಲ ಎಂದಲ್ಲ, ಇದು ಅತಿ ಆತ್ಮೀಯ ಅಷ್ಟೆ.)

    ಒಂದು ನವಿಲುಗರಿ, ಒಂದು ಗುಳಿಕೆನ್ನೆ, ಒಂದು ಗೋಳಗುಪ್ಪ, ಒಂದು ಸ್ಕೂಟಿಯನ್ನಿಟ್ಟುಕ್ಕೊಂಡು ಎಷ್ಟು ಚೆನ್ನಾಗಿ ಬರೆಯುತ್ತೀಯೇ ಭಾಗ್ಯಾ, ಪ್ರೀತಿಯಲ್ಲಿ ಬಿದ್ದ ಹುಡುಗಿಯ ಕಥೆಯನ್ನು. "ಸಂಜೆ ಸಾಯೋ ಹೊತ್ತಲ್ಲಿ", "ಮಣ್ಣ ಘಮದಲ್ಲಿ ನಿನ್ನನರಸಿ", "ನೀ ನಂಗೆ ಗೆಳತಿಯಾಗೋಕೂ ಮುಂಚೆ ನನ್ನ ಪ್ರೀತಿಯಾಗಿಬಿಟ್ಟಿದ್ದೆ" ಕಾನ್ಸೆಪ್ಟುಗಳು, ಪದಪುಂಜಗಳು, ಹಿಂದಿನ ಭಾವಗಳು ಇಷ್ಟವಾದವು, ಪ್ರೀತಿಗಾಗಿ ಬದಲಾದ ಹುಡುಗಿಯಷ್ಟೇ, ಫೋನ್ ನಂಬರ್ ಕೇಳಲು ದಾಕ್ಷಿಣ್ಯ ಪಟ್ಟುಕೊಂಡ ಹುಡುಗನಷ್ಟೇ. ಎಲ್ಲೋ ಕೆಲವೊಮ್ಮೆ ರವಿ ಬೆಳಗೆರೆಯ ಬರಹದ ಧಾಟಿಯನ್ನು ನೆನಪಿಸಿಬಿಡುತ್ತೀಯ, ಅಷ್ಟೇ ಇಷ್ಟವಾಗಿಬಿಡುತ್ತದೆ ಬರಹಗಳು. :)

    ಇಷ್ಟು ಚಂದದ ಭಾವದ ಸ್ಫಟಿಕಳ ಬರದೇ ಇರಬಲ್ಲನೇ ಗುಳಿಕೆನ್ನೆಯ ಹುಡುಗ? ಸಾಧ್ಯವೇ ಇಲ್ಲ. ಮಳೆಯ ಹಿಂದೆಯೇ ಇದ್ದಾನು.

    ಮತ್ತೊಮ್ಮೆ ಇಷ್ಟ ಆದಳು ಸ್ಫಟಿಕ ಮತ್ತು ಬರಹ. ಬರೀತಾ ಇರು. ಮತ್ತೆ ಸಿಗೋಣ. :)

    ReplyDelete
    Replies
    1. ನಮಸ್ತೆ,
      ಬರೆದ ಭಾವಕ್ಕಿಂತಲೂ ಜನ ನಿಮ್ಮ ಕಾಮೆಂಟನ್ನೇ ಇಷ್ಟಪಡ್ತಾರೇನೋ ಅನ್ನೋ ಹೊಟ್ಟೆಕಿಚ್ಚು ನಂಗಿಲ್ಲಿ..
      ತುಂಬಾ ದಿನದ ನಂತರ ನಿಮ್ಮನ್ನಿಲ್ಲಿ ನೋಡಿದ್ದು...ಬರೆದ ಭಾವವೊಂದನ್ನ ಪೂರ್ತಿಯಾಗಿ ಇಷ್ಟಪಟ್ಟಾಗ ಸಿಗೋ ಖುಷಿ ದಕ್ಕಿದ್ದು ಮಾತ್ರ ನಂಗೆ ಇಲ್ಲಿ..
      ಥಾಂಕ್ ಯು..ಸ್ಪಟಿಕಾಳ ಗುಳಿಕೆನ್ನೆ ಹುಡುಗನ ಜೊತೆಗೆ ಆ ಹುಡುಗಿಯೂ ನಿಮಗಿಷ್ಟವಾಗಿದ್ದು ಮತ್ತೂ ಖುಷಿ ಆಯ್ತು.
      ಅಂದಹಾಗೆ ಬರೆದ ಭಾವಗಳೆಲ್ಲಾ ಸ್ವಂತದ್ದಾಗಿದ್ದರೆ ಇಷ್ಟು ಹೊತ್ತಿಗೆ ೨೫ ಬ್ರೇಕ್ ಅಪ್ಸ್,೨೫ ಪ್ಯಾಚ್ ಅಪ್ಸ್ ಆಗಿರ್ತಿತ್ತು ಏನಂತೀರಾ ;)

      ಥಾಂಕ್ಸ್ ಅಗೈನ್...
      ಭಾವಗಳ ತೇರಲ್ಲಿ ಮತ್ತೆ ಮತ್ತೆ ಜೊತೆಯಾಗ್ತಿರ್ತೀನಿ

      Delete
  10. ಕೈ ಸೋಕಿದ್ದರಿಂದ ಆರಂಭವಾಗಿ ಕೈ ಹಿಡಿದು
    ನಡೆವವರೆಗೆ ನಿಂತ ಭಾವಗಳ ಧಾರೆ...:)

    ಗುಳಿಕೆನ್ನೆಯಿಂದ ಆರಂಭವಾಗಿ ಅಂತರಂಗದಲ್ಲಿ
    ಕುಳಿಯೊಂದನ್ನು ತೆರೆದ ಪ್ರೀತಿಯ ಧಾರೆ...:)

    ಮಳೆಯಿಂದ ಶುರುವಾಗಿ ಮನದಲ್ಲಿ
    ಪ್ರೀತಿ ಮಳೆ ಬಿತ್ತಿದ ಚೆಂದದ ಒಲವ ಧಾರೆ...:)

    ಸ್ಕೂಟಿಯಿಂದ ಶುರುವಾಗಿ ಹೃದಯ ಮೀಟಿ
    ಮೆರೆದು ನಿಂತ ಚೆಂದದ ಸ್ನೇಹದ ಧಾರೆ :)

    ReplyDelete
    Replies
    1. ಥಾಂಕ್ ಯು ಆದಿ..
      ನಾ ಹೇಳಿದ್ದ ಇಷ್ಟುದ್ದದ ಭಾವವ ನೀ ಇಷ್ಟೇ ಇಷ್ಟಾಗಿ ಚಂದದಿ ಹೇಳಿದ ಭಾವ...

      ನಿಜ ಮಳೆ,ಸ್ಕೂಟಿ,ಲಾಂಗ್ ಡ್ರೈವ್ ,ಪ್ರೀತಿ,ನೆನಪುಗಳೆಲ್ಲಾ ಸಾಮಾನ್ಯವೇನೋ ಅಲ್ವಾ ?

      ಭಾವಗಳ ತೇರಲ್ಲಿ ಮತ್ತೆ ಸಿಕ್ತೀನಿ

      Delete
  11. ಈ ಕನಸಿನೂರಿನ ಚಂದಮನ ಅಂಗಳದಲ್ಲಿ ಕೂತು ನಿನ್ನೊಟ್ಟಿಗೆ ಮಾತಾಡಬೇಕಿದೆ ತುಸು ಜಾಸ್ತಿಯೇ...ತುಂಬಾ ಇಷ್ಟ ಆತು ಸಾಲು...:) ಚಂದದ ಪ್ರಿತಿಯೊಳಗೊಮ್ಮೆ ಹೊಕ್ಕಿ ಹೊರಗೆ ಬಂದಂಗ್ ಆತು...

    ReplyDelete
    Replies
    1. ಪದ್ಮಾ...
      ಥಾಂಕ್ಸ್..
      ಭಾವವೊಂದು ಮನ ಹೊಕ್ಕಿ ಮನಸಲ್ಲಿಷ್ಟು ಖುಷಿಯ ತೂರಿ ಬಂತು ಅಂತಾದ್ರೆ ಬರಿದಿರೋ ಪೂರ್ತಿ ಖುಷಿ ದಕ್ಕಿದಂತಲ್ವಾ...
      ತುಂಬಾ ದಿನಗಳ ನಂತ್ರ ನಿನ್ನ ನೋಡ್ತಿರೋದು ನಿರುಪಾಯದಲ್ಲಿ..
      ಭಾವಗಳ ಊರಲ್ಲಿ ಮತ್ತೆ ಮತ್ತೆ ನಾ ಜೊತೆಯಾಗ್ತೀನಿ

      Delete
  12. ಒಂದೈದು ತಾಸು ಕಾಯೆ ಹುಡುಗಿ ಅಂದವನು ಜೀವನ ಪರ್ಯಂತ
    ಕಾಯುತ್ತಾನಾದರೆ ಅದಕ್ಕಿಂತಾ ಖುಷಿ ಬೇಕಾ..
    Super....

    ReplyDelete
    Replies
    1. ಥಾಂಕ್ ಯು ಮುದ್ದಕ್ಕಾ...
      ಒಂದೈದು ತಾಸು ಕಾಯ್ತಿರು ಜೊತೆ ಸಿಕ್ತೀನಿ ಅಂತಂದ ಹುಡುಗನ ಭಾವವ ಇಷ್ಟಪಟ್ಟಿದ್ದಕ್ಕೆ.

      ಭಾವಗಳ ತೇರಲ್ಲಿ ಮತ್ತೆ ಸಿಕ್ತೀನಿ

      Delete
  13. ಭಾಗ್ಯ ಪುಟ್ಟಿ, ಮನದಂಗಳದ ಭಾವನೆ ಯಾದುದೆ ಅದೇ ತಡೆ ಇಲ್ಲದೆ ಕಾನನದ ಸುಂದರ ಪರಿಸರದಲ್ಲಿ ಹರಿಯುವ ನದಿಯ ಯಂತೆ ಹರಿದಿದೆ, ನಿನ್ನ ಭಾವನೆಗಳ ನದಿಯ ಜುಳು ಜುಳು ನಾದಕ್ಕೆ ಪದಗಳ ಸಾಥ್ ಬಹಳ ಚೆನ್ನಾಗಿ ಒಪ್ಪಿದೆ. ಓದಿದರೆ ಮುದ ಕೊಡುವ ಲೇಖನ, ಜೈ ಹೊ ಪುಟ್ಟ

    ReplyDelete
    Replies
    1. ಬಾಲಣ್ಣಾ...
      ತುಂಬಾ ದಿನದ ನಂತರ ನಿರುಪಾಯದಲ್ಲಿ ನಿಮ್ಮ ನೋಡ್ತಿರೋ ಖುಷಿ ನಂಗೆ.
      ಭಾವವೊಂದ ನೀವೋದಿ ತಡೆಯಿಲ್ಲದೇ ಸ್ರವಿಸಿಬಿಡಲಿ ಭಾವವೆಲ್ಲವೂ ನದಿಯಾಗಿ ಅಂತಂದುದು ಖುಷಿಯಾಯ್ತು .
      ಭಾವಗಳ ತೇರಲ್ಲಿ ಮತ್ತೆ ಜೊತೆಯಾಗ್ತೀನಿ ನಾ

      Delete
  14. ಮನಕ್ಕೆ ಮುದ ನೀಡಿದ ಸಾಲುಗಳು... ಎಲ್ಲೊ ಪ್ರೀತಿಯ ದುನಿಯಾದಲ್ಲಿ ಕಳೆದುಹೋದ ಅನುಭವ. ಮುಂಗಾರು ಮಳೆಯಲ್ಲಿ ಮಿಂದ ಅನುಭವ.
    ಸಂಜೆ ಸಾಯೋ ಹೊತ್ತಲ್ಲಿ............ಹೆಜ್ಜೆ ಹಾಕೋಕೆ ನಿಂತಿರೋ ನಿನ್ನದೇ ಹುಡುಗಿ.. : ಎಂತಹ ಸುಂದರ ಭಾವ.
    ಮತ್ತೆ ಮನದಲ್ಲಿ ಪ್ರೇಮಾಂಕುರವ ಉಮಲಿಸಿಸಿದ ಬರಹ.
    ರಿಫ್ರೆಶ್ ಮೆಂಟ್ ಬರಹಕ್ಕೊಂದು ಪ್ರೀತಿಯ ಸಲಾಮ್.

    ಶುಭವಾಗಲಿ.

    ReplyDelete
    Replies
    1. ಧನ್ಯವಾದ..
      ತುಂಬಾ ದಿನಗಳ ನಂತರ ನಿರುಪಾಯಕ್ಕೆ ಬಂದಿದ್ದು ಖುಷಿ ಆಯ್ತು..
      ಬರಹದ ಭಾವಗಳ ಓದಿ,ಅನಿಸಿಕೆಗಳ ಹೇಳೋಕೆ ಬರ್ತೀರಿ.
      ಭಾವಗಳ ತೇರಲ್ಲಿ ಮತ್ತೆ ಸಿಗ್ತೀನಿ

      Delete