Wednesday, November 19, 2014

’ಅವನ’ ತಿಳಿವಿಗೆ....


               ಅವರನ್ನ ನೋಡೋವಾಗಲೆಲ್ಲಾ ಹೊಟ್ಟೆಯೊಳಗೊಂದು ತಣ್ಣಗಿನ ಕಿಚ್ಚು .ಬೆಳಿಗ್ಗೆ ಹತ್ತಕ್ಕೆ ಹಾಸಿಗೆ ಬಿಟ್ರೂ ಯಾರೂ ಬೈಯದ,ಮಧ್ಯ ರಾತ್ರಿ ಒಂದಕ್ಕೆ ಮನೆಗೆ ಬಂದ್ರೂ ಏನನ್ನೂ ಪ್ರಶ್ನಿಸದ,ಇಡೀ ದಿನ ಮೊಬೈಲ್ ಹಿಡಿದುಕೊಂಡು ಕೂತ್ರೂ  ಒಂದು ಮಾತನ್ನೂ ಹೇಳದೆ ಅವರ ಪಾಡಿಗೆ ಅವರನ್ನ ಬಿಟ್ಟುಬಿಡೋ,ಸೋಂಬೇರಿ ಅಂತ ಬೈಸಿಕೊಳ್ಳದೆಯೂ ಎಲ್ಲವನ್ನೂ ಪಡೆಯೋ ಅವರ ಆ ಬದುಕ ಬಗೆಗೆ ತುಸು ಜಾಸ್ತಿಯೇ ಅಸೂಯೆ ನಂಗೆ.

ಇಲ್ಲಿಯ ತನಕದ ಬದುಕಲ್ಲಿ ಜೊತೆಯಾದವರೆಲ್ಲರಲ್ಲಿಯೂ ಬೈಸಿಕೊಂಡಾಗಿದೆ ಅವನೊಬ್ಬನನ್ನು ಬಿಟ್ಟು.ಏನೇ ತಪ್ಪು ಮಾಡಿದ್ರೂ ,ಎಷ್ಟೇ ರೇಗಾಡಿದ್ರೂ,ಸಹಿಸೋಕಾಗದಷ್ಟು ತರಲೆ ಮಾಡಿದ್ರೂ ಅವ ನನ್ನನ್ನೊಮ್ಮೆಯೂ ಬೈದಿಲ್ಲ,ಹೋಗಲಿ ಗದರಿಸಿದ್ದಾನ ಅಂದರೆ ಅದೂ ನೆನಪಾಗ್ತಿಲ್ಲ.ಬದುಕು ನಂಗಂತಾನೇ ಕೊಟ್ಟ ಮೊದಲ ಗೆಳೆಯ ಅವ.

ಚಿಕ್ಕವಳಿದ್ದಾಗ ಮುದ್ದು ಮಾಡ್ತಾ ,ದೊಡ್ಡವಳಾದ ಮೇಲೆ ಪ್ರತಿ ಹೆಜ್ಜೆಯಲ್ಲೂ ಜೋಪಾನ ಮಾಡ್ತಾ,ನನ್ನದೆಲ್ಲಾ ಬಜಾರಿತನಗಳಿಗೆ ಮುಖ ಊದಿಸ್ತಾ,ಇಡೀ ಮನೆಯ ಆಗು ಹೋಗುಗಳಿಗೆ ಕಾಳಜಿಸ್ತಾ,ಅದೆಷ್ಟೋ ಕನಸುಗಳಿಗೆ ಜೀವ ತುಂಬಿ ನಡೆಸ್ತಿರೋ ಅವನಿಗದೆಷ್ಟು ಜವಾಬ್ದಾರಿಗಳ ನಿಭಾಯಿಸೋ ಶಕ್ತಿಯಿದೆ ಅನಿಸಿಬಿಡುತ್ತೆ.
ಶಿಕ್ಷೆಯಿಂದ ಶಿಕ್ಷಣ ಅಂತಂದು  ಗದರಿಸಿ,ಹೊಡೆದು ಬೈದು ಮಾಡಿ ಅದೆಷ್ಟೋ ತಪ್ಪುಗಳ ತಿದ್ದಿರೋ  ಅಕ್ಷರ ಕಲಿಸಿದ ಅವರ ಮಾತುಗಳು ಅದೇನೋ ಮೋಡಿ ಮಾಡಿಬಿಡುತ್ತೆ.

ಸುಳ್ಳು ಸುಳ್ಳೇ ಮುನಿಸು,ಚಂದ ಚಂದದ ಕನಸು,ತುಂಟಾಟದ ಮನಸು,ತೀರಾ ಅನ್ನೋವಷ್ಟು ಜಗಳ,ಜೊತೆ ಜೊತೆಯ ಆಟ, ಆಮೇಲೊಂದು ದೊಡ್ದ ನಗುವ ಜೊತೆಗೆ ಬದುಕ ಖುಷಿಗಳ ಬಹುಪಾಲು ಅವನದೇ ಆಗಿರುತ್ತೆ.

 ಭಾವಗಳನ್ನೆಲ್ಲಾ ಬಿಡದೇ ಹೇಳಿಕೊಳ್ಳೋಕೆ,ಮಾರ್ಕ್ ಕಡಿಮೆ ಬಂದಾಗ ಅವನದು ನನಗಿಂತಲೂ ಕಡಿಮೆ ಬಂದಿರುತ್ತೆ ಅಂತ ಸಮಾಧಾನ ಮಾಡಿಕೊಳ್ಳೋಕೆ,ಸಣ್ಣದೊಂದು crush ಆಗೋಕೆ,ಅದೆಷ್ಟೋ ಕ್ರೇಜ್ ಗಳಿಗೆ ಕಂಪನಿ ಕೊಡೋಕೆ,ಪುಸ್ತಕದ ವಿಷಯವ ಬಿಟ್ಟು ಉಳಿದೆಲ್ಲದರಲ್ಲೂ  P.hD ಮಾಡಿರೋರ ತರಹ ಮಾತಾಡೋಕೆ  ಹತ್ತಿಪ್ಪತ್ತು ವರುಷದ ನಂತರವೂ ನೆನಪಲ್ಲಿ ನಗುವ ಮೂಡಿಸೋ ತಾಕತ್ತಿರೋದು ಅವರಿಗೆ ಮಾತ್ರ ಸಾಧ್ಯವೇನೋ.

ಜೋಡಿ ಹೆಜ್ಜೆ ಗುರುತುಗಳಿಗೆ,ಮಧುರ ಪ್ರೀತಿಗೆ,ಯಾವಾಗಲೂ ಜೊತೆಯಿರ್ತೀನಿ ಅನ್ನೋ ಭರವಸೆಗೆ,ಚಂದದ ಬದುಕು ಕಟ್ಟಿಕೊಳ್ಳಬೇಕೆಂಬ ಕನಸುಗಳಿಗೆ,ಪ್ರತಿ ನಿರ್ಧಾರಗಳ ಜೊತೆ ಅವನ ಕೈ ಬೆಸೆದಿರುತ್ತೆ ಅನ್ನೋ ಸಮಾಧಾನ ನಂದು.

ಜಗದೆಲ್ಲಾ ಕೌತುಕಗಳನ್ನೂ ತನ್ನ ಕಣ್ಣಲ್ಲೇ ತುಂಬಿಕೊಂಡಿರೋ ಅವನನ್ನ ಮುದ್ದು ಮಾಡಿ,ಅವನಿಗೊಂದು ಸುಂದರ ಬದುಕ ಕಟ್ಟಿಕೊಡಲೋಸುಗ ದುಡಿದು,ಬದುಕ ಗಮ್ಯಗಳೆಲ್ಲಾ ಅವನಿಂದಲೇ ದಕ್ಕಿದ್ದು ಅಂತನ್ನೋವಷ್ಟು ಬಂಧವ ಅವನೊಟ್ಟಿಗೆ ಬೆಸೆದುಕೊಳ್ಳೋಕೆ...ಅವನನ್ನೋ ಅವನ ಅಸ್ತಿತ್ವದ ಅರಿವು ಸ್ವಲ್ಪವೇ ಕೈ ಸೋಕಿದ್ರೂ ಬದುಕಿನೆಡೆಗೆ ತೀವ್ರ ಒಲವಾಗಿಬಿಡುತ್ತೆ.

ಬದುಕ ಪ್ರತೀ ತಿರುವಲ್ಲೂ ’ಅವನು’ ಅನ್ನೋ ಪ್ರೀತಿ ಜೊತೆಯಿದೆ. ’ಅವ’ ಅನ್ನೋ ಭಯ ದಾರಿ ತಪ್ಪದ ತರಹ ಮಾಡಿದೆ.’ಅವ’ ಅನ್ನೋ ಶಕ್ತಿ,ಒಲವು,ಸಾಮಿಪ್ಯ ,ಸಾಂಗತ್ಯ ಎಲ್ಲವೂ ಬದುಕ ಈ ಕ್ಷಣದ ಬೇಸರ,ಖುಷಿ,ನಲಿವು ,ಒಲವು,ಕಣ್ಣೀರು ಕೊನೆಗೆ ಸಮಾಧಾನವೂ ಆಗಿದ್ದಿದೆ!

ಅಜ್ಜಿ,ಅಮ್ಮ,ಅಕ್ಕ,ಗೆಳತಿ ಇಷ್ಟೇ ಚಂದದ ಭಾವಗಳನ್ನ ಅಜ್ಜ,ತಮ್ಮ,ಗೆಳೆಯರು,ನನ್ನವ ಎಲ್ಲರೂ ಬೆಸೆದುಬಿಟ್ಟಿದ್ದಾರೆ ನನ್ನೊಳಗೆ.
 ಯಾವುದೇ ಭಾವಗಳಿಲ್ಲದೇ ಸುಮ್ಮನೆ ಆ ಕ್ಷಣದ ಖುಷಿ ಮಾತ್ರ ನಮ್ಮದು ಅಂತನ್ನೋ ಹುಡುಗರ ತರಹ ಇರಬೇಕು ನೋಡು ಅಂತನ್ನೋ ಗೆಳತಿಯರ ಮಾತಿಗೆ ನಕ್ಕು ಬಿಡ್ತೀನಿ  ಯಾಕಂದ್ರೆ ಅವರಿಗಿಂತ ತೀರಾ ಭಾವೂಕ ಹುಡುಗರನ್ನ ನೋಡಿದ್ದೇನೆ.
ಸಣ್ಣ ಸಣ್ಣ ಆಘಾತಕ್ಕೂ ಬದುಕೇ ಕಳೆದುಹೋಯ್ತು ಅನ್ನೋ ಹುಡುಗಿಯರಿಗಿಂತ ಬದುಕು ಏನನ್ನ ಕಸಿದುಕೊಂಡ್ರೂ ಇನ್ನೇನನ್ನೋ ಕೊಡುತ್ತೆ ಅಂತ  ನಿರೀಕ್ಷಿಸೋ ಗೆಳೆಯ ತುಂಬಾ ಕಾಡ್ತಾನೆ.
 
    ಅವರ ಜವಾಬ್ದಾರಿಯುತ ಬದುಕು ಯಾವಾಗಲೂ ಅವರೆಡೆಗಿನ ಪ್ರೀತಿಯ ಹಾಗೆಯೇ ಉಳಿಸಿಬಿಡುತ್ತೆ ನನ್ನಲ್ಲಿ.
ನೇಯ್ದ ಕನಸುಗಳಿಗೆ ಬಣ್ಣ ಬಣ್ಣದ ಮಣಿಗಳ ಪೋಣಿಸಿ ಅದನ್ನಿಷ್ಟು ಚಂದ ಮಾಡಿದ್ದು ಅಜ್ಜ ,ಅಪ್ಪ ಅನ್ನೋ ಅದೇ ಪ್ರೀತಿಗಳು.ಸ್ನೇಹವೆಂದ ಹೆಗಲು ತಬ್ಬಿ ಮಧ್ಯ ರಾತ್ರಿಗೆ ಸಹಾಯ ಕೇಳಿದ್ರೂ ಬೇಸರಿಸದೇ ಮಾಡಿಕೊಡೋ,ಎಲ್ಲಾ ಭಾವಗಳ ಮುಲಾಜಿಲ್ಲದೇ ಹಂಚಿಕೊಳ್ಳೋ,ಸುಮ್ಮನೆ ಕೈ ಹಿಡಿದು ಗಂಟೆಗಟ್ಟಲೇ ಒಂದೂ ಮಾತಿಲ್ಲದೆಯೂ ಭಾವಗಳ ರವಾನಿಸಿಬಿಡೋ ಗೆಳೆಯರವರು.ನೀ ಜೊತೆಯಿದ್ರೆ ನಂಗೊಂದು ಧೈರ್ಯ ಕಣೇ ಅಂತಂದು ನನ್ನರಿವಿಗೆ ಬರದ ನನ್ನ ಅಸ್ತಿತ್ವವ ಪರಿಚಯಿಸಿಬಿಡೋ ,ನನ್ನೆಡೆಗೊಂದು ಆತ್ಮಸ್ಥೈರ್ಯವ ಹುಟ್ಟುಹಾಕೋ ಅಣ್ಣನಂತಿರೋ ತಮ್ಮ ಅವ.
ಒಂದಿಷ್ಟು ಇಳಿ ಸಂಜೆಯ ಬೇಸರಗಳಿಗೆ ಕಿವಿಯಾಗೋ,ಒಂದಿಷ್ಟು ನನ್ನದೇ ಕಣ್ಣ ಹನಿಗಳಿಗೆ ರುವಾರಿಯಾಗೋ,ಬಾನ ಮಾಳಿಗೆಯಲ್ಲಿ ಚಂದಿರನ ಜೊತೆ ಮಾತಿಗೆ ಕೂತ್ರೆ ಕನಸ ವಾಸ್ತವದಲ್ಲಿ ಬೆಚ್ಚಗೆ ಕೂತು ನಕ್ಕುಬಿಡೋ ಆಗಂತುಕ ಅವ.

ಕೇಳಿಯೋ ಕೇಳದೆಯೋ ಬದುಕ ಬಹುಪಾಲು ಪಾಠಗಳ ಹೇಳಿಕೊಟ್ಟಿದ್ದು ಇವರೇ...ದೊಡ್ದ ದೊಡ್ಡ ಖುಷಿಗಳು,ಸಣ್ಣ ಸಣ್ಣ ಬೇಸರಗಳು ದಕ್ಕಿದ್ದೂ ಇವರಿಂದಲೇ....ನಾ ಹುಡುಗಿ ಅನ್ನೋ ಭಾವ ನೆನಪಿಗೆ ಬರೋದೂ ಇವರುಗಳ presence ಇಂದಾನೇ
ನೀನೆಷ್ಟು ಪ್ರಾಕ್ಟಿಕಲ್ ಹುಡುಗಿ ಅಂತ ಅವರಂದ್ರೆ ಯಾಕಿಷ್ಟು ಭಾವುಕಳು ನೀನು ಅಂತ ಇವರಂತಾರೆ.
ಕ್ಷಣ ಕ್ಷಣದ ನನ್ನೆಲ್ಲಾ ಬದಲಾವಣೆಗಳು ನನ್ನ ತಾಕೋಕೂ ಮುಂಚೆಯೆ ಇವರನ್ನ ತಾಕಿ ಬಿಡುತ್ತೆ.ನನ್ನೆಲ್ಲಾ ಭಾವ ಪಲ್ಲಟಗಳು ಇವರಿಗೆ ತಿಳಿದುಬಿಡುತ್ತೆ.
ಅದು ಇದ್ದಂತೆಯೇ ಒಪ್ಪಿಕೊಳ್ಳೋ,ಇರುವಂತೆಯೇ ಅಪ್ಪಿಕೊಳ್ಳೋ ಬದುಕ ತಬ್ಬಿರೋ ಈ ಗಂಡು ಜೀವಗಳಿಗೆ,
ಪ್ರೀತಿಯಿಂದ.

10 comments:

 1. ಇಷ್ಟ ಆಯ್ತು ಭಾಗ್ಯಾ .....

  ReplyDelete
 2. ತುಂಬಾ ಇಷ್ಟಾ ಆಯ್ತು ಪುಟ್ಟಿ, ನಿನ್ನ ಬರಹದಲ್ಲಿ ಭಾವನೆಗಳು ರೆಕ್ಕೆ ಬಿಚ್ಚಿಕೊಂಡು ಹಾರಾಡಿ ಸುಂದರ ಕಾಮನ ಬಿಲ್ಲಿನಂತೆ ಹೊಸ ನೋಟ ಸೃಷ್ಟಿಸುತ್ತವೆ , ಇಂತಹ ಬರವಣಿಗೆಯಲ್ಲಿ ನಿನ್ನದೇ ಛಾಪು ಮೂಡಿಸುವಲ್ಲಿ ನೀನು ಅಸಮಾನ್ಯಳು. ಒಳ್ಳೆಯ ಬರಹ ಖುಷಿಕೊಟ್ಟಿತು, ಶುಭವಾಗಲಿ ಪುಟ್ಟ ತಂಗ್ಯವ್ವ .

  ReplyDelete
 3. ಪ್ರೀತಿಯ ಭಾವನೆಗಳಿಂದ ಪ್ರಿಯವಾದ ರೂಪ ಪಡೆದ ಲೇಖನ.

  ReplyDelete
 4. ವಾಹ್.. ನಮ್ಮ ಮೇಲೆ ಹೆಣ್ಣೊಬ್ಬಳು ಹೊಂದಬಲ್ಲ ಭಾವಗಳ, ತುಡಿತಗಳ ಸುಂದರ ಚಿತ್ರಣ ...
  ಅಗೈನ್, ಕಣ್ಣು ಮಿಟುಕಿಸದೆ ಓದಿಸಿಕೊಂಡು ಹೋಯ್ತು :)

  ReplyDelete
 5. ನೀವು ಹೇಳಿದ 'ಅವನ' ಸ್ಥಾನ ಪಡೆಯುವುದು ಎಷ್ಟು ಖುಷಿ ಕೊಡುತ್ತದೆ.. ಭಾವಗಳು ಅವರಿಗೆ ತಿಳಿವ ಮೊದಲೇ ಭಾವ ಪಲ್ಲಟ ಮಾಡಿಸಬಲ್ಲ ಗೆಳೆಯನಾಗಬೇಕೆನಿಸುತ್ತದೆ. . ಸುಂದರವಾಗಿದೆ.

  ReplyDelete
 6. ನನಗೆ ತಮ್ಮ ಬರಹ ಓದುವಾಗಲೆಲ್ಲ ಬರವಣಿಗೆಯಲ್ಲಿ ಹುರುಪಿನ ಹೊಸ ಸಾಧ್ಯತೆಗಳು ಕಂಡಂತಾಗುತ್ತದೆ.
  They are so fresh....

  ReplyDelete
 7. ನಾಣ್ಯಕ್ಕೆ ಎರಡು ಮುಖ ಒಂದು ರಾಜ ಒಂದು ರಾಣಿ..
  ಮುಖಕ್ಕೆ ರಾಜ ಭೂಷಣವಾದರೆ .. ಲಾವಣ್ಯಕ್ಕೆ ರಾಣಿ ಹೆಸರು
  ಇಂಥಹ ಒಂದು ನಾಣ್ಯ ಎರಡು ಮುಖ ಎನ್ನುವ ಈ ಬದುಕಿನಲ್ಲಿ ಅರಳುವ ರಾಜರು ರಾಣಿಯರು ಹಲವಾರು
  ಒಬ್ಬರು ಇನ್ನೊಬ್ಬರಿಗೆ ಸ್ಫೂರ್ತಿ.
  ನಿನ್ನ ಬರಹದ ಶರಧಿಗೆ ಇಳಿದು ಕಣ್ಣರಳಿಸಿ ನೋಡಿದಾಗ ಎಲ್ಲೆಡೆಯೂ ಅರಳಿ ಬಿರಿದ ತಾವರೆಗಳೇ ಕಾಣಿಸುತ್ತವೆ. ಎಷ್ಟು ಚೆಂದವಾಗಿ ಬರಹದ ಭಾವವನ್ನು ಹರಡಿದ್ದೀಯ..

  ಸೂಪರ್ ಮಗಳೇ

  ReplyDelete
 8. ಭಾಗ್ಯಾ,

  ಇಂತಾ ಒಂದು ಬರಹವನ್ನು ಉಡುಗೊರೆಯಾಗಿ ಪಡೆದ ನಾವು ಗಂಡು ಜೀವಗಳೇ ಪಾವನರು. ತುಂಬಾ ಖುಷಿ ಆಯ್ತು ಓದಿ. ಈ ಬರಹ ಯಾಕೋ ವಿಶಿಷ್ಟವಾಗಿದೆ ಎನ್ನಿಸಿದ್ದು ಹೌದು. ವಿಶಿಷ್ಟವಾಗಿ ಆತ್ಮೀಯವೆನಿಸುವುದೂ ಹೌದು. ಎಲ್ಲ ಗಂಡು ಜೀವಗಳ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.

  ಬ್ಲಾಗಿಗೆ ಬರುವುದು ಕಡಿಮೆಯಾಗಿದೆಯಲ್ಲಾ? ಹಾಗಾಗದಿರಲಿ. ಹೆಚ್ಚು ಹೆಚ್ಚು ಪೋಸ್ಟುಗಳು ಬರುತ್ತಿರಲಿ.

  ReplyDelete
 9. Nice again.. ಬ್ಲಾಗಷ್ಟೇ ಇಷ್ಟ ಆಗಿದ್ದು ಸಹ ಬ್ಲಾಗಿಗರ ಕಾಮೆಂಟುಗಳು :-)
  ಬದ್ರಿ ಭಾಯ್ ಅವ್ರ ಬೆನ್ನು ತಟ್ಟುವಿಕೆಯ "So fresh " --Agree with you badri bhai :-)
  ಇನ್ನು ನಮ್ಮ ಸುಬ್ಬಪ್ಪ ಬರ್ದಿದ್ದು ನೋಡಿ ನಗು ಬಂತು.. ಬ್ಲಾಗಿಗೆ ಬರೋದೇ ಕಮ್ಮಿ ಆಗಿದ್ಯಲ್ಲ... ಇವ ಬರೀದೆ ಬರೀದೆ ನಾವು ನೆನ್ಪು ಮಾಡಕ್ಕಿವಂಗೆ.. ಹೇಳದು ನೋಡು..;-)
  ಇನ್ನು ನಮ್ಮ ಶ್ರೀಕಾಂತಣ್ಣಂದು ಎಂದಿನಂತೆ ಲವಲವಿಕೆಯ ಬೆನ್ನು ತಟ್ಟುವಿಕೆ. ಬರೆದ ನಮಗೇ ಹೊಳೆಯದ ಹಲವು ಹೊಳವುಗಳು ಅವ್ರ ಕಾಮೆಂಟುಗಳಲ್ಲಿ ಕಂಡಿರತ್ವೆ ಎಷ್ಟೋ ಸಲ ಇಂತಹ ಕಾಮೆಂಟುಗಳ ಓದಿ ಮತ್ತೆ ಬ್ಲಾಗ್ ಪೋಸ್ಟು ಓದಿದ್ದೂ ಇದೆ !
  ವತ್ಸಣ್ಣ, ಬಾಲು ಭಾಯ್. ಸುಷ್ಮಕ್ಕ, ಆದಿ, ಸುನಾಥ್ ಕಾಕ, ಮನಸಿನ ಮನೆ.. ಹಿಂಗೆ ಬ್ಲಾಗ್ ಗೆಳೆಯರೆಲ್ಲಾ ಒಂದೆಡೆ(ಕಾಮೆಂಟ್ ರೂಪದಲ್ಲಾದ್ರೂ) ಸೇರೋದು ನೋಡೋದೂ ಒಂದು ಖುಷಿಯೇ..

  ಇನ್ನು ಪಾತ್ರಗಳ ಬಗ್ಗೆ, ಅವರ್ಯಾರು ಅಂತ ಹೇಳದೆಯೂ, ಅವರದ್ದೊಂದು ಫೋಟೋ ಹಾಕದೆಯೂ ಅವರ ಚಿತ್ರಣ ಕಟ್ಟಿಕೊಡೋ ಅಷ್ಟು ಚೆನ್ನಾಗಿ ಬರದ್ದೆ.. ಅಂದಂಗೆ ಸ್ಟಡಿ ಹಾಲಿಡೇಗಳಿಗೊಂದು , ಎಕ್ಸಾಮುಗಳಿಗೊಂದು ADB :-)

  ReplyDelete