Sunday, December 14, 2014

ಕಾತರಿಸುವ....ಕಣ್ಣು ತೋಯಿಸಿಕೊಳ್ಳುವ....

ಅರೆರೆ ಹೌದಲ್ವಾ ಮತ್ತೊಂದು ಡಿಸೆಂಬರ್ ಬಂದೇ ಬಿಟ್ಟಿದೆ.ಇಬ್ಬನಿ ತುಂಬಿದ ಬೆಳಗು, ಕನಸುಗಳನ್ನೂ ಹೆಪ್ಪುಗಟ್ಟಿಸೋವಷ್ಟು ಚಳಿ,ಸಾಲು ಸಾಲು ಪರೀಕ್ಷೆಗಳು,ಯಾವಾಗಲೂ surprise package ಅನ್ನಿಸೋ ಸಾಂತಾಕ್ಲಾಸ್, ಪಕ್ಕದ ಮನೆಯ ಮುದ್ದು ಮುದ್ದು ತಮ್ಮಂದಿರ ಜೊತೆ ನಿಂತು ಅಲಂಕರಿಸೋ ಕ್ರಿಸ್ ಮಸ್ ಗಿಡ,ಮನೆಯೆದುರಿನ ಹಳದಿ ಗುಲ್ಮೊಹರ್ ಗಿಡ ಮತ್ತು ತಣ್ಣನೆಯ ಗಾಳಿ ಮೈ ಸೋಕೋವಾಗ ನೆನಪಾಗೋ ಅವ!

ಸದ್ದಿಲ್ಲದೇ ಮುಗಿಯೋವಾಗಿನ ವರ್ಷದ ಮೆಲುಕು,ಒಂದಿಷ್ಟು ಅಳು ,ಜೊತೆಗಿಷ್ಟು ನಗು.... ಡಿಸೆಂಬರ್ ಅಂದ್ರೆ ಕಾಡೋದಿಷ್ಟು.



ಕನಸ ಮಣಿಗಳನ್ನೆಲ್ಲಾ ಭಾವಕ್ಕೆ ಪೋಣಿಸೋ ಭರದಲ್ಲಿ ನನ್ನೊಳಗಿರೋ ಪುಟ್ಟ ಹುಡುಗಿ ಎಲ್ಲಿ ಕಳೆದು ಹೋಗಿದ್ದಾಳೆ ಅಂತ ಹುಡುಕ್ತಿದೀನಿ...



ಕಾಡೋ ನೋವುಗಳು ಕೂಡ ಒಮ್ಮೊಮ್ಮೆ ಇನ್ನಿಲ್ಲದಂತೆ ಪ್ರೀತಿಸಿಬಿಡುತ್ತೆ. ಯಾವಾಗಲೂ ನನ್ನೀ ಪಕ್ಕದ ಮನೆಯ ತಮ್ಮಂದಿರನ್ನ ನೋಡಿದ್ರೆ ತುಸು ಜಾಸ್ತಿಯೇ ಸಂಕಟವಾಗುತ್ತೆ.ದೂರದ ಕಾಫಿ ಎಸ್ಟೇಟ್ ಗೋ ಅಥವಾ ಕೆಲಸಕ್ಕೆ ಹೋಗೋ ದೊಡ್ಡವರು ಈ ಪುಟ್ಟ ಪುಟ್ಟ ಕಂದಮ್ಮಗಳನ್ನ ರೆಸಿಡೆನ್ಷಿಯಲ್ ಸ್ಕೂಲ್ ಅನ್ನೋ ತಲೆಪಟ್ಟಿಗೆ ತಂದು ಸೇರಿಸಿ ಬಿಟ್ಟು ಹೋಗಿಬಿಡ್ತಾರಲ್ವಾ.ಆದರೆ ಅವರ ಬದುಕ ಅನಿವಾರ್ಯತೆಗಳು ಏನಿವೆಯೋ ಏನೋ..ಅದನ್ನ ಪ್ರಶ್ನಿಸೋದು ತಪ್ಪಾದೀತು. ಆಮೇಲೆ ಎರಡು ವಾರಕ್ಕೊಮ್ಮೆ ಬಂದು ನೋಡಿಕೊಂಡು ಹೋಗೋವಾಗ ಅವರು ಅಳೋದನ್ನ ನೋಡೋಕಾಗದೇ ನಾನೇ ಎಷ್ಟೋ ಸಲ ಹೋಗಿ ತಬ್ಬಿಕೊಂಡಿದ್ದಿದೆ. ಅಪ್ಪ ಅಮ್ಮಂಗಾಗಿ ಕಾತರಿಸುವ ಅವರನ್ನ ನೋಡೋವಾಗಲೆಲ್ಲ ನಂಗೂ ದೂರದಲ್ಲಿರೋ ಅವರ ನೆನಪಾಗಿಬಿಡುತ್ತೆ.ಹಹ್! ಮತ್ತೆ ನಾನೂ ಕಣ್ಣು ತೋಯಿಸಿಕೊಂಡುಬಿಡ್ತೀನಿ.

ಇವರುಗಳ ಜೊತೆ ಕೂತು ಆಟ ಆಡಿ,ನಕ್ಕು ಅವರದಿಷ್ಟು ಪ್ರಶ್ನೆಗಳಿಗೆ ಉತ್ತರಿಸೋಕೆ ತಡಕಾಗಿ ಕೊನೆಗೂ ಮನೆಗೆ ಬಂದ್ರೆ ಅವತ್ತಿಗೊಂದು ನಿರಾಳತೆ ನಂಗೆ.



ಒಂದು ಭಾನುವಾರವೂ ಮನೆಯಲ್ಲಿರದ ನನ್ನ ಈಗೀಗಿನ ಭಾನುವಾರಗಳೆಲ್ಲಾ ಮನೆಯಲ್ಲಿ ಕೂತು ಯಾವುದೋ ಕ್ರಾಫ್ಟ್ ಮಾಡೋದ್ರಲ್ಲೋ ,ಗಾಳಿಪಟ ಮಾಡೋದ್ರಲ್ಲೋ,ಜೊತೆ ಕೂತು ಆಟ ಆಡೋದ್ರಲ್ಲೋ ಸದ್ದಿಲ್ಲದೇ ಕಳೆದು ಹೋಗ್ತಿದೆ.ವರ್ಷದ ಹಿಂದಿನ ಇದೇ ದಿನಗಳಲ್ಲಿ ಅಲ್ವಾ ನಂಗೆ ಈ ಪುಟ್ಟ ಪುಟ್ಟ ಗೆಳೆಯರು ಜೊತೆ ಸಿಕ್ಕಿದ್ದು ,ಇವರುಗಳ ಮಾತುಗಳ ಜೊತೆ ನಾ ಕಳೆದೇ ಹೋಗಿದ್ದು...



ಇಲ್ಲೊಬ್ಬ ಪುಟ್ಟ ಗೆಳೆಯನಿದ್ದಾನೆ ನಂಗೆ.ಅವನೆದುರು ಎದ್ದು ನಿಂತು ಯಾವುದೋ ಆಟ ಆಡೋಕೆ ಅಥವಾ ಏನಾದರೂ ಮಾಡೋಕೆ ತುಸು ಯೋಚಿಸ್ತೀನಿ ನಾನು.ಯಾಕಂದ್ರೆ ಒಮ್ಮೆಯೂ ಎದ್ದುನಿಲ್ಲೋಕಾಗದ ಅಸಹಾಯಕೆ ಅವನದಾಗಿರೋವಾಗ ಸಂಕಟವಾಗುತ್ತೆ ನಂಗೆ.ಅವನೋ ತೀರಾ mature ಆಗಿ ’ನಂಗೇನೂ ಬೇಸರವಿಲ್ಲ ಅಕ್ಕಾ,ನೀವು ಅವರೆಲ್ಲರ ಜೊತೆ ಆಟ ಆಡಿದ್ರೆ ನಾ ನೋಡಿ ಖುಷಿಪಡ್ತೀನಿ,ನೀವು ಎದ್ದು ನಿಂತು ಆಟ ಆಡಿ’ ಅಂತಾನೆ! ನನ್ನೊಳಗಿರೋ ತಲ್ಲಣಗಳೆಲ್ಲಾ ಮತ್ತೆ ಕಣ್ಣಂಚ ಕೊನೆಯಲ್ಲಿ ಜಾರಿ ಬಿಡುತ್ತೆ. ಸುಮ್ಮನೆ ಕೂರಲೇಬೇಕಂದ್ರೆ ನನ್ನೊಳಗೂ ಎಷ್ಟು ಕಾರಣಗಳಿವೆ ಅಲ್ವಾ...

ಎಷ್ಟು ಪ್ರಬುದ್ಧತೆಯ ಮಾತಾಡ್ತಾನೆ ಅಲ್ವಾ.

ಬೇಕಿತ್ತು ನಂಗೂ ಇಂತಹುದ್ದೇ ಒಂದು ಸಾಂಗತ್ಯ.



ಬಿಡುವಿನ ಸಮಯದಲ್ಲಿ ಅವರಿಗೆ ಪಾಟ ಮಾಡೋಕೆ ಹೋಗಿ ಅವರಿಗಿಂತ ನಾ ಕಲಿತಿದ್ದೇ ಜಾಸ್ತಿಯಿದೆ ಒಂದು ವರ್ಷದಲ್ಲಿ.ಮತ್ತೆ ಮತ್ತೆ ಎದ್ದುನಿಲ್ಲಬೇಕನ್ನೋ ಭಾವವ ನನ್ನೆಡೆಗೆ ರವಾನಿಸಿಬಿಡ್ತಾನೆ ಅವ.ನೋವೇ ಇಲ್ಲದವಳಂತೆ ನಗೋದನ್ನ ಕಲಿತಿದ್ದೀನಿ.ರಾತ್ರಿಯಾಗಸಕ್ಕೆ ಮುಖ ಮಾಡಿದ್ರೆ ಇವರು ಕೇಳೋ ಅದೆಷ್ಟೋ ಪ್ರಶ್ನೆಗಳ ನೆನಪಿಸಿಕೊಂಡು ನನ್ನೊಳಗೆ ನಕ್ಕುಬಿಡ್ತೀನಿ.ತಾರೆಗಳ ಅಂಗಳದಲ್ಲಿ ಸುಮ್ಮ ಸುಮ್ಮನೆ ಅಲೆದಾಡೋ ಖುಷಿ ಸಿಕ್ಕಿದೆ.ಜೊತೆಗೆ ಅವರ ಪ್ರೀತಿಯ ’ಅಕ್ಕಾ’ ನನ್ನೆಲ್ಲಾ ಧಾವಂತಗಳ ಬದಿಗಿಟ್ಟು ನೆಮ್ಮದಿಯ ಸಂಜೆಯೊಂದನ್ನ ಕಳೆಯೋದನ್ನ ಹೇಳಿಕೊಟ್ಟಿದೆ.

ಖುಷಿಯಿದೆ ನಂಗೆ ಇವತ್ತಿನ ದಿನಗಳ ಬಗೆಗೆ.

ಮತ್ತೆ ಮನದಲ್ಲಿ ಕಂದನ ಕನವರಿಕೆ.



ಅಲ್ಯಾರೋ ಹುಡುಗ ಹೇಳದೇ ಕೇಳದೆ ಇಷ್ಟವಾಗ್ತಾನೆ.ಇನ್ಯಾರೋ ಆತ್ಮೀಯ ಕಾರಣವನ್ನೂ ಹೇಳದೆ ಎದ್ದು ಹೋಗಿಬಿಡ್ತಾನೆ.ಯಾಕೋ ತಿರುವುಗಳ ನೋಡಿದಾಗಲೆಲ್ಲಾ ಎಲ್ಲಿ ಬಿದ್ದುಬಿಡ್ತೀನೇನೋ ಅನ್ನೋ ಭಯ ಶುರುವಾಗುತ್ತೆ...ಆದರೂ ಹೊಸ ದಾರಿಯ ನೋಡ ಬೇಕಂದ್ರೆ ಆ ತಿರುವ ದಾಟಲೇಬೇಕಲ್ವಾ?

ಮತ್ತೆ ಮಳೆಯಾಗಿದೆ ನನ್ನೂರಲ್ಲಿ.ಇನ್ನೇನು ಕಳೆದುಹೋಗ್ತಿರೋ ವರ್ಷವೊಂದರ ನೆನಪು ಈ ಮಳೆಗೆ ಮತ್ತೆ ರಾಡಿಯಾಗಿದೆ..ಹರವಿಡೋಣ ಅಂದ್ರೆ ಎಲ್ಲವೂ ಒದ್ದೆ ಒದ್ದೆ.

ಸ್ವಲ್ಪ ಒಣಗಲಿ ಅವೆಲ್ಲಾ ಅಷ್ಟರೊಳಗೆ ನಾ ನನ್ನ ಪುಟ್ಟ ಗೆಳೆಯರ ಜೊತೆಗೊಂದು ಐಸ್ ಕ್ರೀಮ್ ತಿಂದು ಬರ್ತೀನಿ. ಉಳಿಸಿಕೊಳ್ಳಬೇಕಿದೆ ಮುಂದಿನ ಮಳೆಗೆ ಜೊತೆ ಕೂತು ಐಸ್ ಕ್ರೀಮ್ ತಿನ್ನೋಣ ಅನ್ನೋ ಮಾತನ್ನ!

ಬಣ್ಣ ಬಣ್ಣದ ಆಕಾಶ ಬುಟ್ಟಿಗಳನ್ನ ತಂದು ಮನೆಯೆದುರು ಅಲಂಕರಿಸಿ ಕತ್ತಲಲ್ಲಿನ ಆ ಬಣ್ಣಗಳ ನೋಡಿ ಸಂಭ್ರಮಿಸೋದಿನ್ನೂ ಬಾಕಿಯಿದೆ.



ಇನ್ನೇನಿದ್ದರೂ ಹೊಸ ಪುಟ... ಹೊಸ ಡೈರಿ... ಹೊಸ ಪೆನ್ನು!

11 comments:

  1. ‘ಕನಸುಗಳನ್ನೂ ಹೆಪ್ಪುಗಟ್ಟಿಸುವಷ್ಟು ಚಳಿ’...wonderful line!

    ReplyDelete
  2. ಬೆಟ್ಟದಷ್ಟು ನೋವನು ಹೊತ್ತ ಹುಡುಗನ ಬೊಗಸೆ ಕಣ್ಣಲ್ಲಿ ಜಗಕಾಗುವಷ್ಟು ಆಶಾಭಾವ. ಅವನು ಎದ್ದು ನಿಲ್ಲುವಂತಾಗಲಿ...
    ಕ್ರಿಸ್ಮಸ್ಸಿನ ನೆಪದಲಾದರೂ ಬ್ಲಾಗಿಗೆ ಬರಹವಿತ್ತ ತಮಗೆ ಸಂತಾನು ದೆಂಡಿಯಾಗಿ ಬಹುಮತಿ ತರಲಿ...

    ReplyDelete
  3. ahha....masth idde kooose :) :)...ishta atu :)

    ReplyDelete
  4. ಭಾಗ್ಯಾ -
    ಹೊಸ ಡೈರಿಯ ಪ್ರತಿ ಪುಟದಲ್ಲೂ ನಲಿವಿನ ಭಾವಗಳ ಚಿತ್ತಾರವೇ ಅಧಿಕವಾಗಿ ಮೂಡಲಿ...
    ಬದುಕಿಗೆ ಸ್ಫೂರ್ತಿ ಬದುಕಿನಿಂದಲೇ ಅಲ್ವಾ...
    ನೆನಪುಗಳಿಂದಾದ ರಾಡಿಯಲ್ಲೇ ಹೊಸ ಕನಸಿನ ಬೀಜ ಮೊಳಕೆಯೊಡೆದು ಹೆಪ್ಪಾದ ಕನಸುಗಳೆಲ್ಲ ನನಸಲ್ಲಿ ನಗಲಿ...
    ಚಂದದ ಭಾವ ಬರಹ ಕಣೇ..

    ReplyDelete
  5. "ಅಕ್ಕ, ಪರವಾಗಿಲ್ಲ, ನೀವು ಅವರೆಲ್ಲರ ಜೊತೆ ಆದಿದ್ರೆ"'''' """" ಅನ್ನೋ ಪ್ಯಾರಾ ನನಗೂ ತುಂಬಾ ಇಷ್ಟ ಆತು. ಒಟ್ಟಾರೆ ಚೆಂದದ ಬರಹ, ಕಾಲದ ಜೊತೆಗೆ ಭಾವಗಳು ಬದಲದೆ, ಮನಕೆ ಕಚಗುಳಿ ಇಡುವ ಸುಂದರ ಕಲ್ಪನೆ. ಮತ್ತೆ ನಿನ್ನ ಬರಹಗಳಿಗೆ ಕಾದು ತುದಿಗಾಲಲ್ಲಿ ನಿಲ್ಲುವಂತಾಗಿದೆ...:)

    ReplyDelete
  6. ಅರೆ ಪುಟ್ಟಿ ಅನ್ನೋ ಈ ಕಂದ ಬರವಣಿಯಲ್ಲಿ ತುಸು ದೊಡ್ಡವಳೆನಿಸುತ್ತಾಳೆ.. ನಿನ್ನೂರ ಅಕಾಲಿಕ ಮಳೆ ನಿನಗಿಲ್ಲಿ ಸಂತಸ ತಂದರೆ ನಮಗೊಂದು ಬರಹದ ಉಡುಗೊರೆ ಅಲ್ವಾ... ಚಂದ ಕಣೆ.. ಹೊಸ ಪೆನ್ನು.. ಹೊಸ ಹಾಳೆಯಲ್ಲಿನ ಹೊಸ ಬರಹಕ್ಕೆ ಕಾಯುತ್ತಾ.....

    ReplyDelete
  7. ಪುಸ್ತದಲ್ಲಿ ಓದಿದ ನೆನಪು.. ದೊಡ್ದವರಾಗಬೇಕಾದರೆ ಚಿಕ್ಕವರ ಜೊತೆ ಬೆರೆಯಿರಿ.. ಚಿಕ್ಕವರಾಗಬೇಕಾದರೆ ದೊಡ್ಡವರ ಜೊತೆಯಲ್ಲಿ ಬೆರೆಯಿರಿ.. ನಮ್ಮ ಬಾಲ್ಯವನ್ನು ಒಮ್ಮೆ ಹಾಗೆ ಕಣ್ಣ ಮುಂದೆ ತರಿಸುವ ನಿನ್ನ ಹಲವಾರು ಲೇಖನಗಳು ಯಾವತ್ತಿಗೂ ನವನವೀನ.. ಈ ಪರೀಕ್ಷೆಯ ಜಂಜಾಟದಲ್ಲೂ.. ಮನಸ್ಸಿನ ಕೆಲವು ಪ್ರಶ್ನೆಗಳಿಗೆ ಉತ್ತರ ದೊರಕಿಸುವ ಇಂಥಹ ಲೇಖನಮಾಲಿಕೆ ಸೂಪರ್..

    ಇಷ್ಟವಾಯಿತು ಬರಹಾ.. ಬಹಳ ಮುದ್ದಾಗಿದೆ..

    ReplyDelete
  8. >>
    ಮತ್ತೆ ಮಳೆಯಾಗಿದೆ ನನ್ನೂರಲ್ಲಿ.ಇನ್ನೇನು ಕಳೆದುಹೋಗ್ತಿರೋ ವರ್ಷವೊಂದರ ನೆನಪು ಈ ಮಳೆಗೆ ಮತ್ತೆ ರಾಡಿಯಾಗಿದೆ..ಹರವಿಡೋಣ ಅಂದ್ರೆ ಎಲ್ಲವೂ ಒದ್ದೆ ಒದ್ದೆ.
    <<
    >> ಇಲ್ಲೊಬ್ಬ ಪುಟ್ಟ ಗೆಳೆಯನಿದ್ದಾನೆ ನಂಗೆ.ಅವನೆದುರು ಎದ್ದು ನಿಂತು ಯಾವುದೋ ಆಟ ಆಡೋಕೆ ಅಥವಾ ಏನಾದರೂ ಮಾಡೋಕೆ ತುಸು ಯೋಚಿಸ್ತೀನಿ ನಾನು.ಯಾಕಂದ್ರೆ ಒಮ್ಮೆಯೂ ಎದ್ದುನಿಲ್ಲೋಕಾಗದ ಅಸಹಾಯಕೆ ಅವನದಾಗಿರೋವಾಗ ಸಂಕಟವಾಗುತ್ತೆ ನಂಗೆ.ಅವನೋ ತೀರಾ mature ಆಗಿ ’ನಂಗೇನೂ ಬೇಸರವಿಲ್ಲ ಅಕ್ಕಾ,ನೀವು ಅವರೆಲ್ಲರ ಜೊತೆ ಆಟ ಆಡಿದ್ರೆ ನಾ ನೋಡಿ ಖುಷಿಪಡ್ತೀನಿ,ನೀವು ಎದ್ದು ನಿಂತು ಆಟ ಆಡಿ’ ಅಂತಾನೆ! <<
    Nice putsಉ :-) ಚೆಂದ ಬರದ್ದೆ ಭಾಗ್ಯಮ್ಮ. ಹಬ್ಬದ ಖುಷಿಯ ನಮ್ಮಷ್ಟಕ್ಕೆ ಕಾಣೋ ಬದ್ಲು ಪರರ ಖುಷಿಗಳಲ್ಲಿ ಕಾಣೋ ಪರಿಯಿದ್ಯಲ್ಲ.. ಅದ್ಯಾಕೋ ಸಖತ್ ಇಷ್ಟ ಆಗ್ಬಿಡತ್ತೆ. ಅಂದಂಗೆ ಕಳೆದುಹೋಗ್ತಿರೋ ನೆನಪುಗಳು ರಾಡಿಗೆ ಮತ್ತೆ ಹಸಿಯಾಗಿರೋ ಖುಷಿಗೆ, ಅದು ಒಣಗೋ ತಂಕ ಐಸ್ ಕ್ರೀಂ ತಿನ್ನಕ್ಕೆ ಹೊರಟ್ಯ ? !! ಪಾನಿಪುರಿ ತಿನ್ನೇ ಬೆಚ್ಚಬೆಚ್ಚಗೆ ;-) ಗೋಬಿನೂ ಓಕೆನೇನಪ್ಪ :-)
    ಎಂಜಾಯ್..ಅದೇ ಐಸ್ ಕ್ರೀಂ ಹೆಸ್ರು ಅದು ;-)..

    ReplyDelete
  9. ನೆನಪುಗಳಿಲ್ಲಿ ಒದ್ದೊದ್ದೆ.. :)
    ಆಹಾ..!
    ಎಷ್ಟು ಚಂದ ಭಾವಗಳು..
    ಇಷ್ಟಾತು ಕೂಸೆ...

    ಬದುಕಿನ ಪ್ರತಿ ತಿರುವಲ್ಲಿ ಅನಿರೀಕ್ಷಿತ ನಗುವೊಂದು ಮತ್ತು ನಗುವೊಂದೇ ನಿನ್ನಪ್ಪಲಿ..
    ಹೊಸ ಡೈರಿಯ ಪುಟಗಳ ತುಂಬಾ ಖುಷಿಯ ತುಂತುರು ಚಿತ್ತಾರ ಮೂಡಿಸಲಿ...

    -ಅಕ್ಕಾ
    ಹೀಗಂತ ಅನ್ನಬೇಕನಿಸಿದೆ.. ಅಕ್ಕನಾಗುವ ಸಂಭ್ರಮ ನನ್ನಲ್ಲೂ ಮೊಳಗುತ್ತಿದೆ.

    ReplyDelete
  10. ಈ ಒಂದು ವರ್ಷದ ಬದುಕ cd ನಾ bacup ಮಾಡಿ ಚನ್ನಾಗಿ
    ಕಾಪಾಡಿಕೋ..... ಮುಂದೊಂದು ದಿನ ನೆನೆ ನೆನೆದು ಖುಷಿಯಾಗಲು
    ಬೇಕಾಗುತ್ತೆ.....

    ವರ್ಷವೊಂದರ ನೆನಪು ಈ ಮಳೆಗೆ ಮತ್ತೆ ರಾಡಿಯಾಗಿದೆ..ಹರವಿಡೋಣ ಅಂದ್ರೆ ಎಲ್ಲವೂ ಒದ್ದೆ ಒದ್ದೆ.
    ಸಮಯಕ್ಕೆ ಸಂದರ್ಭಕ್ಕೆ... ಮತ್ತೆ ಸಹಜವಾಗಿ ಈ ಸಾಲು ಇಷ್ಟವಾಗಿಹೋಯ್ತು....

    ಚಂದದ ಬರಹ.......

    ReplyDelete
  11. "ವರ್ಷವೊಂದರ ನೆನಪು ಈ ಮಳೆಗೆ ಮತ್ತೆ ರಾಡಿಯಾಗಿದೆ ... " ಎಂತಹ ಅದ್ಭುತ ಕಲ್ಪನೆ. ಭಾವನಾಸ್ಪರ್ಶ ನೀಡಿ ಪದಗಳಿಗೆ ಒಂದು ವಿಶೇಷ ಆಕರ್ಷಣೆ ಕೊಟ್ಟಿದ್ದೀರಿ. ಮನಸ್ಸಿಗೆ ಬಹಳ ಹತ್ತಿರವಾಗುವಂತಹ ಲೇಖನ ಇದು. ನೋಡದ, ಕೇಳದ ಬೇರೆಯೇ ಒಂದು ಪ್ರಪಂಚಕ್ಕೆ ನಮ್ಮನ್ನು ಕರೆದೊಯ್ದುಬಿಡುವಂತಹದ್ದು. ಬಹಳ ಇಷ್ಟವಾಯ್ತು. ಇಷ್ಟಕ್ಕಿಂತ ಹೆಚ್ಚಾಗಿ ನನ್ನೆಲ್ಲಾ ಉದುರಿ ಹೋದ ಹಳೆಯ ನೆನಪುಗಳ ಎಲೆಗಳನ್ನು ಮತ್ತೆ ಹೆಕ್ಕಿ ನೋಡಿದ ಅನುಭವ ಮುಖದ ಮೇಲಿನ ಮಂದಹಾಸಕ್ಕೂ, ಕಣ್ಣಂಚಿನ ಬಿಂದುವಿಗೂ ಕಾರಣವಾಯ್ತು.

    ReplyDelete